ನನ್ನ ಮಗಳು ಪ್ರಥಮ ಪಿಯು ಹಂತಕ್ಕೆ ಬಂದೊಡನೆಯೆ “ಅಪ್ಪಾ ನನಗೆ ಒಂದು ಸ್ಕೂಟಿ ಕೊಡಿಸು. ಕಾಲೇಜು ಮನೆಯಿಂದ ದೂರ. ಕಾಲೇಜು ಬಿಟ್ಟಮೇಲೆ ಐಐಟಿ ಕೋಚಿಂಗ್‌ಗೆ ಹೋಗ್ಬೇಕಲ್ಲಾ. ನೀನು ಆ ಕಾರ್ಯಕ್ರಮ ಈ ಕಾರ್ಯಕ್ರಮ ಅಂತ ಊರೂರು ಸುತ್ತುತ್ತಾ ಇರ್ತೀಯಾ” ಅಂತ ವರಾತ ತೆಗೆದಳು. “ನಾನಿದ್ದೇನಲ್ಲ. ನಾನು ಇರುವಾಗ ನಿನ್ನನ್ನು ಕಾರಲ್ಲೇ ಕಾಲೇಜಿಗೆ ಬಿಡ್ತೇನಲ್ಲ. ಸಂಜೆ ಎಷ್ಟೇ ತಡವಾದರೂ ನಾನು ನಿನ್ನನ್ನು ಮನೆಗೆ ತಂದು ಬಿಡ್ತೇನಲ್ಲ. ಮತ್ತೇನು ತೊಂದರೆ?” ಎಂದು ಅವಳ ಆಸೆಗೆ ತಣ್ಣೀರೆರಚುತ್ತಿದ್ದೆ. “ಸ್ಕೂಟಿ ಕೊಡು, ಇಲ್ಲ ನಿನ್ನ ಕಾರ್ ಕೊಡು” ಅಂತ ಹಠ ಅವಳದ್ದು. ಎರಡು ವರ್ಷ ಹಾಗೂ ಹೀಗೂ ತಳ್ಳಿದೆ. ಈಗ ಮೈಸೂರಿನಲ್ಲಿ ಗೆಳತಿಯರ ಒತ್ತಾಯವನ್ನು ನಮ್ಮ ಮೇಲೆ ಹೇರಿ ಅಂತೂ ಸ್ಕೂಟಿ ಕೊಂಡುಕೊಂಡೇ ಬಿಟ್ಟಳು. ನಮಗೋ ಭಯ. ದೊಡ್ಡ ನಗರ. ಹೇಗೋ ಏನೋ ಎಂಬ ಅಂಜಿಕೆ. ಆದರೆ ಅವಳಿಗೆ ಅವಳ ಪ್ರಾಯದವರಿಗೆ ಏನೂ ಅಂಜಿಕೆಯಿಲ್ಲ. ಇದೆಲ್ಲ ನೀರುಕುಡಿದಷ್ಟು ಸುಲಭ.

ನಾವೆಲ್ಲ ಶಾಲೆ ಕಾಲೇಜುಗಳಿಗೆ ಹೋಗುವಾಗಿನ ಕತೆಯೇ ಬೇರೆ. ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ. ನಾನು ಐದನೆಯ ತರಗತಿಯಿಂದ ಏಳನೆಯ ತರಗತಿವರೆಗೆ ಬೈಕಾಡಿಯಿಂದ ಬ್ರಹ್ಮಾವರದ ಇಗರ್ಜಿ ಶಾಲೆಗೆ ಹೆಚ್ಚುಕಡಿಮೆ ೨-೩ ಮೈಲಿ ದೂರವನ್ನು ನಡೆದುಕೊಂಡೇ ಹೋಗುತ್ತಿದ್ದೆ. ಸೈಕಲ್‌ ಇತ್ಯಾದಿ ಕೊಡಿಸುವ ಪರಿಪಾಠ ಆಗ ಬಹಳ ಕಡಿಮೆ.  ನಾನು ಕಾಡಿನ ಮಧ್ಯ ಹೋಗಬೇಕಿತ್ತು. ಹಲವಾರು ರಂಜಕ ಕತೆಗಳನ್ನು ಆ ಕಾಡಿನ ಬಗ್ಗೆ ತೇಲಿಬಿಟ್ಟಿದ್ದರು. ನಡುಹಾಡಿಯಲ್ಲಿ ಸೋಮಯ್ಯ ಎಂಬ ಬ್ರಹ್ಮಚಾರಿ ಕುತ್ತಿಗೆಗೆ ಹಗ್ಗ ಹಾಕಿಕೊಂಡು ಸತ್ತುಹೋಗಿದ್ದಾನೆ. ಅವನ ಪ್ರೇತ ಬೆನ್ನುಹತ್ತುತ್ತದೆ ಎಂಬ ಒಂದು ಕತೆ ನಮ್ಮೆದಯೊಳಗೆ ನಡುಕ ಹುಟ್ಟಿಸುತ್ತಿತ್ತು. ಅವನು ಸತ್ತ ಜಾಗ ಸಮೀಪ ಬರುತ್ತಿದ್ದಂತೆ ನಾನು ಹಾಗೂ ಇತರ ಕೆಲವು ಹುಡುಗರು ಗಟ್ಟಿಯಾಗಿ ಹಾಡುಹೇಳುತ್ತ, ಗಾಯತ್ರಿಮಂತ್ರ ಪಠಿಸುತ್ತ ಓಡುತ್ತಿದ್ದೆವು! ಈಗ ಆ ಜಾಗದಲ್ಲಿ ಸಕ್ಕರೆ ಕಾರ್ಖಾನೆ ಭೂತದಂತಿದೆ! ಹಾಡಿ ಮಟಾಮಾಯ! ಭೂತಪ್ರೇತಗಳೆಲ್ಲ ದಂತಕತೆಗಳು!

ನ್ಯಾಮತಿಯಲ್ಲಿ ಎಂಟನೆಯ ತರಗತಿ ಓದುವ ಕಾಲಕ್ಕೆ ಸುಮಾರು ಎರಡು ಮೂರು ಕಿಲೋಮೀಟರ್ ದೂರ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೆ. ರಾಮನಗರದಲ್ಲಿ ಒಂಬತ್ತು ಹತ್ತನೆಯ ತರಗತಿ ಓದುವಾಗ ಈಗಿನ ‘ಜಾನಪದ ಗ್ರಾಮ’ (ಅರ್ಚಕರ ಹಳ್ಳಿ) ಕ್ಕಿಂತಲೂ ಆಚೆಗೆ ಇದ್ದ ತಂಬಾಕು ಕಾರ್ಖಾನೆ ಬಳಿಯಿಂದ ರಾಮನಗರದ ಸರ್ಕಾರಿ ಶಾಲೆಗೆ ೫-೬ ಮೈಲಿ ನಡೆದು ಹೋಗುತ್ತಿದ್ದೆ. ಹೋಟೆಲ್‌ ಕೆಲಸದ ಆಳಿನ ಜೊತೆ ರಾತ್ರಿ ನಡೆದುಕೊಂಡೇ ಹೋಟೆಲ್‌ ತಲುಪುತ್ತಿದ್ದೆ. ಕತ್ತಲು  ಟಾರ್ಚ್ ಇಲ್ಲ. ಹಾವು ಗೀವು ಕಚ್ಚಿದರೆ ಸಾವೇ ಗತಿ. ಚಳಿಗಾಲದಲ್ಲಂತೂ ನನ್ನ ಅಂಗಾಲುಗಳು ಒಡೆದು ರಕ್ತ ಸುರಿಯುತ್ತಿತ್ತು. ಕುಂಟುತ್ತ ಶಾಲೆಗೆ-ಹೋಟೆಲಿಗೆ ನಡೆದು ಹೋಗುತ್ತಿದ್ದೆ. ಸೈಕಲ್‌ ಕಲಿಯಲು ಹವಣಿಸಿ ಒಮ್ಮೆ ಬಿದ್ದು ದೊಡ್ಡ ಗಾಯಮಾಡಿಕೊಂಡು ಮತ್ತೆ ಅದರ ಸಂಗ ಬೆಳೆಸಲೇ ಇಲ್ಲ!

ಉಡುಪಿಯಲ್ಲಿ ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದಾಗ ರಥಬೀದಿಯಿಂದ ಎಂಜಿಎಂ ಕಾಲೇಜಿಗೆ ಗದ್ದೆ ಅಂಚಿನ ಮೇಲೆ ಅಥವಾ ರಸ್ತೆಬದಿಯಲ್ಲಿ ನಡೆದೇ ಹೋಗಬೇಕಾಗಿತ್ತು. ಈಗಿನಂತೆ ಹೆಚ್ಚು ಸಿಟಿ ಬಸ್‌ಗಳಿರಲಿಲ್ಲ; ಇದ್ದರೂ ಬಸ್‌ ಖರ್ಚಿಗೆ ದುಡ್ಡಿರಲಿಲ್ಲ. ಪಾಸ್‌ ವ್ಯವಸ್ಥೆಯಿರಲಿಲ್ಲ. ಮಧ್ಯಾಹ್ನವಂತೂ ಓಡುತ್ತೋಡುತ್ತ ಮಠದ ಕೊಠಡಿಗೆ ಬಂದು ಅಂಗಿ ಕಳಚಿ ಊಟದ ಪಾಸ್‌ ಹಿಡಿದು ಭೋಜನಶಾಲೆಗೆ ನುಗ್ಗಿ ಪಂಕ್ತಿಯಲ್ಲಿ ಹೇಗೋ ನುಸುಳಿಕೊಂಡು ಗಬಗಬ ಉಂಡು ಬೇಗನೆ ಕೈತೊಳೆದು ಕೋಣೆಗೆ ಬಂದು ಅಂಗಿ ಧರಿಸಿ ಮತ್ತೆ ಕಾಲೇಜಿಗೆ ಒಂದೇ ಸವನೆ ಬೆವರುಸುರಿಸುತ್ತಾ, ಏದುಸಿರುಬಿಡುತ್ತಾ ಓಟ. ಆದರೆ ‘ಭೋಜನಶಾಲೆಯ ಮಾಣಿ’ಗಳ ಬವಣೆ ಅರಿತ ಪ್ರಾಧ್ಯಾಪಕರು ನಾವು ತಡವಾಗಿ ತರಗತಿಗೆ ಹೋದರೂ ಹಾಜರಿ ಕೊಡುತ್ತಿದ್ದರು.

ಹೀಗೆ ‘ನಟರಾಜ ಸರ್ವಿಸ್‌’ಗೆ ನಮ್ಮ ತಲೆಮಾರು ಬೆಲೆಕೊಡುತ್ತಿತ್ತು. ಅದಕ್ಕೂ ಹಿಂದಿನ ತಲೆಮಾರಿಗೆ ಅದೇ ಗತಿಯಾಗಿತ್ತು. ನಾನು ಕಾರುಸವಾರಿ ಶುರು ಮಾಡಿದ್ದು ಹತ್ತುವರ್ಷಗಳಿಂದೀಚೆಗೆ. ಅಲ್ಲಿಯ ತನಕ ಪೇಟೆ ಸುತ್ತಾಟವೆಲ್ಲ ನಡಿಗೆಯಲ್ಲೆ. ಪ್ರಯಾಣ ಸಾರ್ವಜನಿಕ ಸಾರಿಗೆಯಲ್ಲಿ.  ಒಂದಿಷ್ಟು ಸ್ಥಿತಿ ಸುಧಾರಿಸಿದ ಮೇಲೆ ರಿಕ್ಷಾದಲ್ಲಿ ಸುತ್ತಾಟ. ಆದರೆ ಈ ಸೌಲಭ್ಯಗಳು ಹೆಚ್ಚಿವೆ. ಸ್ಕೂಟರ್, ಬೈಕ್‌, ಕಾರು ಬಹುಮಂದಿಗೆ ಅನಿವಾರ್ಯವೆನಿಸಿದೆ. ವಾಹನ ಪ್ರತಿಷ್ಠೆಯ ಸಂಕೇತವಾಗಿರುವಂತೆ ಅನಿವಾರ್ಯವೂ ಆಗಿದೆ. ಆದುದರಿಂದ  ಈ ಕಾಲದ ಮಕ್ಕಳಿಗೆ ವಾಹನ ಬೇಕೇಬೇಕು. ‘ಹೋಗಪ್ಪಾ, ಯಾರು ನಡೀತಾರೆ’ ಎಂಬುದು ಅವರ ಸಿದ್ಧ ಉತ್ತರ. ‘ನಿಮ್ಮ ಹಳೆಕಾಲದ ಸಂಗತಿ ಶುರುಮಾಡಿದರೆ “ಹರಿಕತೆ ಶುರುವಾಯ್ತು. ನೂರ ಒಂದನೆಯ ಸಲ ಈ ಕತೆ ಕೇಳುತ್ತಿರುವುದು” ಎಂಬ ಗೇಲಿಮಾತು.

ಮಹಾನಗರಗಳಲ್ಲಿ ಒಂದು  ಮೂಲೆಯಿಂದ ಇನ್ನೊಂದು ಮೂಲೆಗೆ ಸಂಚಾರ ಮಾಡಲು ಸಾರಿಗೆಸಂಪರ್ಕ ಇದ್ದರೂ ನೀವು ಅದನ್ನು ನಂಬುವಂತಿಲ್ಲ. ಕಾಲವಿಳಂಬ, ಕಾಲವ್ಯಯ ಸಾಕಷ್ಟು ಆಗುತ್ತದೆ. ನಿಮ್ಮ ನಿರೀಕ್ಷೆಯಂತೆ ಗಮ್ಯಸ್ಥಾನವನ್ನು ತಲುಪಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶಾಲೆ ಕಾಲೇಜುಗಳಿಗೆ ಹೋಗಲು, ಕಛೇರಿಗಳಿಗೆ ಹೋಗಲು ಸ್ವಂತ ವಾಹನ ಬೇಕೇಬೇಕು.

ಹೈಸ್ಕೂಲು ಮೆಟ್ಟಿಲು ಹತ್ತಿದೊಡನೆ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಹೊಸ ವಾಹನ ಬೇಕು. ‘ಬಾಲೆಯರಿಗೆ ಬೈಸಿಕಲಕ್‌’ ಪುರಾತನ ಯೋಜನೆಯಾಯಿತು. ಬಾಲೆಯರಿಗೆ ಸ್ಕೂಟಿ ಯಾಕೆ ಕೊಡಬಾರದು? ಎಂದು ಕೇಳುವವರಿದ್ದಾರೆ. ಇಂದು ಸೈಕಲ್‌ ತುಳಿಯುವುದೆಂದರೆ ಬಡತನದ ಸಂಕೇತವೆಂಬಂತಾಗಿದೆ. ಪರಿಸರಸ್ನೇಹಿ ದೃಷ್ಟಿಯಿಂದ ಸೈಕಲ್‌ ಮತ್ತೆ ಜನಪ್ರಿಯವಾಗಬೇಕಾಗಿದೆ. ಆದರೆ ಮಾಮೂಲಿ ಸೈಕಲ್‌ ಬೇಡ. ಅತ್ಯಾರ್ಷಕವಾದ ವೇಗವಾಗಿ ಓಡುವ ಸೈಕಲ್‌ ಬೇಕು ಮಕ್ಕಳಿಗೆ. ಲೈಸೆನ್ಸ್‌ ಇಲ್ಲದಿದ್ದರೂ ಪರವಾಗಿಲ್ಲ.  ಸ್ಕೂಟಿ, ಮೊಪೆಡ್‌, ಬೈಕ್‌ ಬೇಕೇಬೇಕು. ಈ ವಾಹನಗಳಿದ್ದರೆ ಒಂದಿಷ್ಟು ಪ್ರತಿಷ್ಠೆ , ಒಂದಿಷ್ಟು ಗೆಳೆಯರು! ಹೀಗಾಗಿ ಇಂದು ಹೆಚ್ಚಿನ ತಂದೆತಾಯಿಗಳು ಮಕ್ಕಳಿಗೆ ವಾಹನ ಕೊಡಿಸಲು ಮುಂದಾಗುತ್ತಿದ್ದಾರೆ. ಮೇಲ್ಮಧ್ಯಮವರ್ಗ ಹಾಗೂ ಸಿರಿವಂತ ಕುಟುಂಬಗಳಲ್ಲಿ ರ್ಮೂನಾಲ್ಕು ಕಾರುಗಳು. ಒಬ್ಬೊಬ್ಬರಿಗೆ ಒಂದೊಂದು; ಒಂದೊಂದು ಸಲಕ್ಕೆ ಒಂದೊಂದು ಕಾರು!

ಪ್ರಾಯಕ್ಕೆ ಬಂದ ಮಕ್ಕಳಿಗೆ ಅನಿವಾರ್ಯವೆನಿಸಿದರೆ ಸ್ವಂತ ವಾಹನ ಒದಗಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಇಂದಿನ ಯುವಜನತೆಯ ಸ್ಥಿತಿ ಹೇಗಿದೆಯೆಂಬುದಕ್ಕೆ ಬಹಳ ಹಿಂದೆ ನಿರ್ಮಾಣವಾದ ಅಂಬರೀಷ-ಲಕ್ಷ್ಮೀ ಜೋಡಿಯಾಗಿ ನಟಿಸಿದ ಕನ್ನಡ ಚಲನಚಿತ್ರವೊಂದರ ದೃಶ್ಯ ಸಂಕೇತವಾಗಿದೆ. ನಾಯಕ-ನಾಯಿಕೆ ಬೈಕ್‌ಮೇಲೆ ಸವಾರಿ ಹೊರಟಿದ್ದಾರೆ. ಹಿಂದೆ ಕುಳಿತ ಲಕ್ಷ್ಮೀ ಅಂಬರೀಷ್‌ಗೆ ‘ಫಾಸ್ಟ್‌ ಫಾಸ್ಟ್‌’ ಎಂದು ಹೇಳಿ ಹುಚ್ಚೆಬ್ಬಿಸುತ್ತಾಳೆ. ಇಂದಿನ ಯುವಜನತೆಗೆ ವೇಗವೇ ಪ್ರಧಾನವಾಗಿದೆ. ಬೈಕ್‌ ಏರಿದರೆ ಲೋಕ ಕಣ್ಣಿಗೆ ಕಾಣುವುದೇ ಇಲ್ಲ. ಸಂಚಾರಿ ನಿಯಮವನ್ನು ಗಾಳಿಗೆ ತೂರಿ ಅವರು ಅಡ್ಡಾದಿಡ್ಡಿಯಾಗಿ ವಾಹನ ಓಡಿಸಿ ಅಪಘಾತಕ್ಕೂ ಒಳಗಾಗುತ್ತಾರೆ. ತಮಗೂ ಇತರರಿಗೂ ಮನೆಯವರಿಗೂ ಗಾಬರಿ ಕಳವಳ ಉಂಟುಮಾಡುತ್ತಾರೆ.

ವಾಹನ ಚಲಾವಣೆ ಸಂಬಂಧ ನೀಢುವ ಪರವಾನಗಿಯ ಪರೀಕ್ಷೆಗಳು ಇಂದು ಕಾಟಾಚಾರಕ್ಕೆ ನಡೆಯುತ್ತಿವೆ. ಒಂದಿಷ್ಟು ದುಡ್ಡು ಬಿಸಾಡಿದರೆ ಸುಲಭದಲ್ಲಿ ಲೈಸೆನ್ಸ್‌ ಸಿಗುತ್ತದೆ. ಈ ಪರೀಕ್ಷೆಗಳನ್ನು ಹೆಚ್ಚು ಕಠಿಣಗೊಳಿಸಬೇಕು. ಒಮ್ಮೆ ಲೈಸೆನ್ಸ್‌ ಸಿಕ್ಕರೆ ಮತ್ತೇನೂ ಪರೀಕ್ಷೆಯಿಲ್ಲ. ಹೀಗಾಗುವ ಬದಲು ಪ್ರತಿ ಎರಡು ವರ್ಷಕ್ಕೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಈ ಪರೀಕ್ಷೆಗಳನ್ನು ತುಂಬ ಬಿಗಿಯಾಗಿ ನಡೆಸಬೇಕು. ಲಂಚ ಕೊಟ್ಟರೆ ಪರವಾನಗಿ ನವೀಕರಣ ಖಂಡಿತಕ್ಕೂ ಆಗಕೂಡದು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ದಂಡವಿಧಿಸುವ ಬದಲು ಲೈಸೆನ್ಸ್‌ ರದ್ದುಪಡಿಸಬೇಕು. ಚಿಕ್ಕಪ್ರಾಯದವರಿಗೆ ಪರವಾನಗಿ ಕೊಡಕೂಡದು; ಏಕೆಂದರೆ ಹುಚ್ಚು ಆವೇಶದಲ್ಲಿ, ಶರವೇಗದಲ್ಲಿ ಗಾಡಿ ಓಡಿಸಿ ಅಪಘಾತಗಳ ಸರಮಾಲೆ ಸೃಷ್ಟಿಸುತ್ತಾರೆ ಎಂಬ ಒಂದು ನಂಬಿಕೆ ಜನಮಾನಸದಲ್ಲಿದೆ. ಹಾಗೆ ನೋಡಿದರೆ ಚಿಕ್ಕ ಪ್ರಾಯದವರಿಗೆ ವಾಹನ ಚಲಾವಣೆ ವಿಷಯದಲ್ಲಿ ಧೈರ್ಯ-ವಿಶ್ವಾಸಗಳು ಅಧಿಕ. ಕರಕೌಶಲವೂ ಹೆಚ್ಚು. ವಯಸ್ಸಾದವರಿಗಿಂತ ಬೇಗನೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬಲ್ಲರು. ಅವರ ಕಣ್ಣಿನ ದೃಷ್ಟಿಯೂ ಹೆಚ್ಚು ಚುರುಕಾಗಿರುತ್ತದೆ. ವಯಸ್ಸಾದಂತೆ ವಾಹನ ಚಾಲನೆ ಸುಲಭವಲ್ಲ. ಅಪಘಾತವಾದೀತು ಎಂಬ ಭಯ. ಅಳುಕು, ಚಂಚಲ ಮನಸ್ಸು, ಮಂದ ದೃಷ್ಟಿ, ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ – ಇತ್ಯಾದಿಗಳಿಂದಾಗಿ ವಯಸ್ಸಾದವರಿಗೆ ವಾಹನ ಚಾಲನೆ ಕಲಿಯುವಾಗ ದುಃಸ್ವಪ್ನ ಕಂಡಂತಾಗುತ್ತದೆ. ವಾಹನ ಚಾಲನೆ ಖುಷಿಕೊಡುವ ಅನುಭವವಾಗದೆ ಏನಾಗುವುದೋ ಎಂಬ ಭಯ ಮನದ ಮೂಲೆಯಲ್ಲಿ ಕಿರುಗುಡುತ್ತಿರುತ್ತದೆ!

ಕಿರಿಯ ವಯಸ್ಸಿನವರು ಬೇಜವಾಬ್ದಾರಿಯಿಂದ ವಾಹನ ಚಲಾಯಿಸಿ ಅಧಿಕ ಅಪಘಾತಗಳಿಗೆ ಕಾರಣರಾಗುತ್ತಾರೆ ಎಂದು ಅನ್ನಿಸಿದರೆ ಈ ಮುಂದೆ ಹೇಳುವ ಕೆಲವು ಕ್ರಮಗಳನ್ನು ಕೈಗೊಳ್ಳಬಾರದೇಕೆ?

(ಅ) ವಾಹನ ಚಾಲನೆ ಪರೀಕ್ಷೆಗಳನ್ನು ಹೆಚ್ಚು ಬಿಗಿಗೊಳಿಸುವುದು.

(ಆ) ಮದ್ಯಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದು ಸಾಬೀತಾದರೆ ಗಂಭೀರ ಸ್ವರೂಪದ ಶಿಕ್ಷೆ ನೀಡಿಕೆ ಅಥವಾ ಲೈಸೆನ್ಸ್‌ ರದ್ಧತಿ.

(ಇ) ಉತ್ತಮ ನಿರ್ವಹಣೆ ಹಾಗೂ ಸುರಕ್ಷಿತ ಬ್ರೇಕ್‌ ವ್ಯವಸ್ಥೆ ಇರುವ ವಾಹನಗಳ ನಿರ್ಮಾಣಕ್ಕೆ ಒತ್ತು.

(ಈ) ಈ ಹೊತ್ತು ಫೈಬರ್ ಬಳಕೆ ವ್ಯಾಪಕವಾಗಿರುವುದರಿಂದ ವಾಹನಗಳು ಎದುರುಬದುರು ಡಿಕ್ಕಿಯಾದಾಗ ಪುಡಿ ಪುಡಿಯಾಗುವುದಲ್ಲದೆ ಅದರ ಒಳಗಿರುವ ವ್ಯಕ್ತಿಗಳು ಸಾವನ್ನಪ್ಪುತ್ತಾರೆ ಅಥವಾ ಭೀಕರ ಗಾಯಗಳಿಗೆ ತುತ್ತಾಗಿ ಶಾಶ್ವತ ವಿಕಲಾಂಗರಾಗ ಬಹುದು. ಹೀಗಾಗಿ ವಾಹನಗಳ ತಯಾರಿಯಲ್ಲಿ ಸುರಕ್ಷಿತತೆಗೆ ವಿಶೇಷ ಆದ್ಯತೆ ನೀಡಬೇಕು.

(ಉ) ತುಂಬ ವೇಗವಾಗಿ ಓಡುವ ವಾಹನಗಳ ತಯಾರಿ ನಿಷೇಧಿಸುವುದು; ೧೦೦ ಕಿ.ಮೀ. ವೇಗಕ್ಕಿಂತ ಹೆಚ್ಚು ವೇಗ ಸಾಧಿಸಕೂಡದು.

(ಊ) ವಾಹನಗಳ ಶೈಲಿ, ಸೌಕರ್ಯಗಳಿಗಿಂತ ಮುಖ್ಯವಾದುದು ಅವುಗಳ ಸುದೃಢತೆ ಹಾಗೂ ಸುರಕ್ಷಾ ನಿಯಮಗಳ ಪಾಲನೆ.

(ಋ) ರಸ್ತೆಯಲ್ಲಿ ಅಲ್ಲಲ್ಲಿ ಉಬ್ಬುತಗ್ಗುಗಳು, ವೇಗಮಿತಿ, ಏಕಮುಖ ಸಂಚಾರ ಇತ್ಯಾದಿಗಳನ್ನು ಅಳವಡಿಸಿ ಅಪಘಾತ ಪ್ರಮಾಣಗಳನ್ನು ತಗ್ಗಿಸಬಹುದು. ಸಂಚಾರಿ ನಿಯಮಗಳ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿಸುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕು.

(ಎ) ರಸ್ತೆಗಳಲ್ಲಿ ವೇಗವಾಗಿ ಹೋಗುವ ವಾಹನಗಳನ್ನು ಬೆನ್ನಟ್ಟಿ ಹಿಡಿದು ಸೂಕ್ತ ಶಿಕ್ಷೆ ನೀಡುವ ಕ್ರಮ ಜಾರಿಗೆ ಬರಬೇಕು. ಮೊಬೈಲ್‌ ಬಳಸುತ್ತಾ ಬೈಕ್‌, ಕಾರು ಚಾಲನೆ ಇತ್ಯಾದಿಗಳನ್ನು ನಿಷೇಧಿಸಿ ಅಂಥ ಪ್ರಕರಣ ಕಂಡುಬಂದರೆ ಅಲ್ಲೇ ದಂಡವಿಧಿಸುವ ಅಧಿಕಾರ ಪೋಲೀಸರಿಗಿರಬೇಕು.

(ಏ) ಕಳೆದ ಕೆಲವು ವರ್ಷಗಳಿಂದ ಯಾವುದೇ ಅಪಘಾತಕ್ಕೆ ಒಳಗಾಗದೆ ಸುರಕ್ಷಿತವಾಗಿ ವಾಹನ ಚಲಾಯಿಸಿದ ತರುಣ ಚಾಲಕರಿಗೆ ಸರಕಾರಿ ಗೌರವ ಪುರಸ್ಕಾರ ನೀಡಿಕೆ. ಸಾರ್ವಜನಿಕ ಸನ್ಮಾನ ಏರ್ಪಡಿಸಬಹುದು.

ಪ್ರಾಯಕ್ಕೆ ಬರುತ್ತಿರುವ, ಈಗತಾನೆ ಚಿಗುರುಮೀಸೆ ಬಂದಿರುವ ತರುಣರು ಅನನುಭವದ ಕಾರಣದಿಂದ ಅಥವಾ ಯೌವನದ ಆವೇಶದಲ್ಲಿ ಅಪಘಾತವನ್ನು ಮಾಡುವುದಲ್ಲ. ಬದಲಾಗಿ ಒಂದು ಬಗೆಯ ಹುಚ್ಚು ಸಾಹಸದ ಪ್ರವೃತ್ತಿಯಿಂದಾಗಿ ಅವರು ಹೀಗೆ ಮಾಡುತ್ತಾರೆ. ತಾವು ಮಾಡುತ್ತಿರುವುದು ಅಪಾಯಕಾರಿ ಎಂದು ತಿಳಿಯದಿದ್ದರೂ ಅವರಿಗೆ ಅದರಿಂದ ಒಂದು ‘ಮಜಾ’ , ‘ಥ್ರಿಲ್‌’ ಸಿಗಬೇಕೆಂದು ಹಾಗೆ ಮಾಡುತ್ತಾರೆ. ಅನುಭವ ಗಳಿಸಿದಂತೆ ಜವಾಬ್ದಾರಿ ಹೆಚ್ಚಿದಂತೆ ಹೆಚ್ಚು ಜಾಗರೂಕತೆ ವಹಿಸುತ್ತಾರೆ.

ಹಿರಿಯರು ತಮ್ಮ ಪಕ್ಕದಲ್ಲೋ ಹಿಂದುಗಡೆಯೋ ಕುಳಿತಿದ್ದರೆ ಸವಾರಿಮಾಡುವ ಕಿರಿಯರಿಗೆ ಕಿರಿಕಿರಿ. ಏಕೆಂದರೆ ಹಿರಿಯರು ಸುಮ್ಮನಿರಬೇಕಲ್ಲ. “ಏಯ್‌, ಗೋಡೆಗೆ ತಾಗಿಸಬೇಡ. ರಿವರ್ಸ್ ತೆಗೆಯುವಾಗ ಜಾಗ್ರತೆ. ಸ್ಲೋ ಸ್ಲೋ. ಏನು ಮಾರಾಯ, ನೂರಿಪ್ಪತ್ತು ಕಿ.ಮೀ. ವೇಗವೇ? ನೀನು ಯಾರನ್ನಾದರೂ ಇವತ್ತು ತೆಗೀತೀಯಾ” ಹೀಗೆಲ್ಲ ವೀಕ್ಷಕ ವಿವರಣೆ ಕೊಡುತ್ತಾ ಕಿರಿಯರನ್ನು ಅಧೀರರನ್ನಾಗಿ ಮಾಡಿ ನಿಜಕ್ಕೂ ಅಪಘಾತ ಆಗುವಂತೆ ಮಾಡಿಬಿಡುತ್ತಾರೆ. ಅದಕ್ಕೆ ಬದಲಾಗಿ ಕಿರಿಯರಲ್ಲಿ ವಿಶ್ವಾಸವಿಟ್ಟು , ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಗಾಡಿಯ ಕೀಕೊಟ್ಟು “ನಿನ್ನ ಮೇಲೆ ಭರವಸೆ ಇಟ್ಟಿದ್ದೇನೆ. ಅದಕ್ಕೆ ಗಾಡಿಯ ಬೀಗದಕೈ ನಿನ್ನ ಕೈಗೆ ಒಪ್ಪಿಸಿದ್ದು” ಎಂದುಬಿಟ್ಟರೆ ಮುಗಿಯಿತು. ಜವಾಬ್ದಾರಿ ಪ್ರಜ್ಞೆಯ ಬೆಂಬಲವುಳ್ಳ ಸ್ವಾಯತ್ತೆ ಖಂಡಿತಕ್ಕೂ ಇಂದಿನ ತರುಣರು ಅಪೇಕ್ಷಿಸುವ ಆದರ್ಶ.