ಮಕ್ಕಳು ಬೆಳೆಯುತ್ತ ಹೋದಂತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವೊಂದಲು ಸಂದರ್ಭಗಳಲ್ಲಿ ಮಕ್ಕಳು ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗದೆ ಒದ್ದಾಡುತ್ತಾರೆ. ಆಗ ಇದು ಹೆತ್ತವರಿಗೂ ಶಿಕ್ಷಕರಿಗೂ ಎದುರಿಸಬೇಕಾದ ಸಮಸ್ಯೆಯಾಗಿ ಪರಿಣಮಿಸುತ್ತದೆ. ಸಮಸ್ಯೆಗಳನ್ನು ನೋಡಿಕೊಂಡು ಸುಮ್ಮನಿರಲು ಬರುವುದಿಲ್ಲ. ಪರಿಹಾರದ ಮಾರ್ಗ ಕಂಡುಕೊಳ್ಳಲೇಬೇಕು.

ಯಾಕೆ ಸಮಸ್ಯೆಗಳು ಉದ್ಭವಿಸುತ್ತವೆ? ಇದಕ್ಕೆ ಕೆಲವೊಂದು ಅನುವಂಶೀಯ ಕಾರಣಗಳಿರಬಹುದು. ಉದಾಹರಣೆಗೆ, ಬುದ್ಧಿಶಕ್ತಿ ಅಲ್ಪವಾಗಿರುವುದು,ಇಂದ್ರಿಯಗಳಲ್ಲಿ ಊನ, ಮೆದುಳಿಗೆ ಅಲ್ಪಸ್ವಲ್ಪ ಹಾನಿ ಆಗಿರುವುದು. ಮತ್ತೆ ಕೆಲವೊಮ್ಮೆ ಸಾಕಷ್ಟು ಕಾಲ ಕಾಯಿಲೆಗೆ ತುತ್ತಾಗಿರುವುದರಿಂದಲೂ ಕೆಲವು ಅಂಗಾಂಗಗಳ ಮೇಲೆ ದುಷ್ಪರಿಣಾಮ ಆಗಿರಬಹುದು. ಮೇಲ್ನೋಟಕ್ಕೆ ಎದ್ದುಕಾಣುವ ನ್ಯೂನತೆ ಇಲ್ಲದಿರಬಹುದು. ಆದರೆ ತೊಂದರೆಗೆ ಒಳಗಾಗುವ ಸಾಧ್ಯತೆಯನ್ನು ಮಗು ಪಡೆದು ಬಂದಿರಬಹುದು. ಉದಾಹರಣೆಗೆ, ಮಗುವಿನ ನರಮಂಡಲ ಅದೇ ಪ್ರಾಯದ ಇತರ ಮಕ್ಕಳಲ್ಲಿ ಬೆಳವಣಿಗೆ ಆದಷ್ಟು ಈ ಮಗುವಿನಲ್ಲಿ ಆಗಿಲ್ಲದೇ ಇರಬಹುದು. ಮಗು ನಡೆಯುವಾಗ, ಬರೆಯುವಾಗ ಸರಿಯಾದ ಸಮನ್ವಯ ಸಾಧಿಸುವಲ್ಲಿ ಸೋಲುತ್ತದೆ. ಕೆಲವು ಸಲ ತನ್ನ ತರಗತಿಯ ಇತರರ ಜೊತೆ ಹೊಂದಿಕೊಳ್ಳಲು ಸಾಧ್ಯವಾಗದು. ಸ್ಪರ್ಧಿಸಲು ಮಗು ಹಿಂಜರಿಯುತ್ತದೆ. ಭಯ, ಆತಂಕಕ್ಕೆ ಒಳಗಾಗುತ್ತದೆ. ಹದಿಹರೆಯದ ಸಂದರ್ಭದಲ್ಲಿ ನಿರ್ದಿಷ್ಟವಾದ ಸಮಸ್ಯೆಗಳು ಗೋಚರಿಸಬಹುದು.

ಕುಟುಂಬ, ನೆರೆಹೊರೆ ಹಾಗೂ ಶಾಲೆ ಹೀಗೆ ಪರಿಸರದ ಕಾರಣದಿಂದಾಗಿ ಮಕ್ಕಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ತಂದೆತಾಯಿಗಳು ಜಗಳಗಂಟರಾಗಿರಬಹುದು. ತುಂಬ ಬಿಗಿ ಸ್ವಭಾವದವರಾಗಿದ್ದಿರಬಹುದು. ಸ್ವತಃ ತಂದೆ ತಾಯಿಗಳೇ ಬಹಳ ಆತಂಕಕ್ಕೆ ಒಳಗಾದವರಾಗಿದ್ದು ತುಂಬ ಮಹತ್ವಾಕಾಂಕ್ಷೆ ಹೊಂದಿರಬಹುದು. ತಮ್ಮ ಮಗು ಭಾರಿ ಸಾಧನೆ ಮಾಡಬೇಕೆಂದು ಮಗುವಿನ ಮೇಲೆ ವಿಪರೀತ ಭರವಸೆ ಇಟ್ಟಿರಬಹುದು. ಇದಕ್ಕೆ ವ್ಯತಿರಿಕ್ತವಾಗಿ ತಂದೆತಾಯಿಗಳಿಗೆ ಮಗುವಿನ ಮೇಲೆ ಯಾವುದೇ ಕಳಕಳಿ, ಕಾಳಜಿ ಇಲ್ಲದೆ ಇರುವುದು. ಮಕ್ಕಳನ್ನು ವಿಪರೀತವಾಗಿ ಹಿಂಸಿಸುವ ಶಿಕ್ಷಿಸುವ ತಂದೆತಾಯಿಗಳು, ಒಡಹುಟ್ಟಿದವರ ನಡುವೆ ಹೊಟ್ಟೆಕಿಚ್ಚು, ಜಗಳ ಅಥವಾ ಮನೆಯಲ್ಲಿ ಕಡುಬಡತನ-ಇದರಿಂದಾಗಿ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ತುತ್ತಾಗಬಹುದು.

ಮಗುವಿನ ನೆರೆಹೊರೆ ಮಗುವಿನ ಬೆಳವಣಿಗೆ ಹಾಗೂ ವಿಕಾಸಕ್ಕೆ ಸೂಕತವಾಗಿಲ್ಲದಿರುವುದು. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮಗುವಿನ ಮನೆಯ ವಾತಾವರಣಕ್ಕೂ ನೆರೆಹೊರೆಗೂ ಹೊಂದಾಣಿಕೆ ಆಗದಿರುವುದು. ಇದರಿಂದಾಗಿ ಮಗುವಿಗೆ ಸೂಕ್ತ ಸ್ನೇಹಿತರು, ಒಡನಾಡಿಗಳು ಸಿಗದೇ ಇರುವುದು ಕೂಡ ಸಮಸ್ಯೆಗೆ ಕಾರಣವಾಗಬಹುದು.

ಮನೆಯಲ್ಲಿನ ಹಿರಿಯರ ನಡವಳಿಕೆಯ ಹಾಗೆ ಶಾಲೆಯಲ್ಲಿ ಶಿಕ್ಷಕರ ವರ್ತನೆಯೂ ಮಗುವಿನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರಬಹುದು. ಶಿಕ್ಷಕರು ಮಕ್ಕಳನ್ನು ವಿಪರೀತ ಶಿಕ್ಷಿಸಬಹುದು. ಸದಾ ಟೀಕಿಸಬಹುದು. ದೂಷಿಸಬಹುದು. ಹೋಲಿಕೆಮಾಡಿ ನಿಂದಿಸಬಹುದು. ಮಕ್ಕಳ ಯೋಗ್ಯತೆ ಮೀರಿ ಅವರಿಂದ ಅಧಿಕ ಸಾಧನೆಯನ್ನು ನಿರೀಕ್ಷಿಸಬಹುದು ಅಥವಾ ಯಾವುದೋ ಒಬ್ಬ ವಿದ್ಯಾರ್ಥಿಯನ್ನೇ ಗುರಿಯಾಗಿಟ್ಟುಕೊಂಡು ದ್ವೇಷ ಸಾಧಿಸಬಹುದು ಅಥವಾ ಅತಿಯಾದ ಒತ್ತಡ ಹೇರಬಹುದು.

ಇತರ ಮಕ್ಕಳ ಜೊತೆಗಿನ ವ್ಯವಹಾರದಲ್ಲಿ ಮಗು ತೊಂದರೆಗೆ ಈಡಾಗಬಹುದು. ಒಬ್ಬರನ್ನೊಬ್ಬರು ಛೇಡಿಸುವುದು, ಗಾಳಿಗೆ ಹಿಡಿಯುವುದು, ಲೇವಡಿ ಮಾಡುವುದು, ಗೋಳು ಹೊಯ್ದುಕೊಳ್ಳುವುದು ಹಾಗೂ ಹೊಡೆದಾಡುವುದು ಶಾಲೆಗಳಲ್ಲಿ ಮಾಮೂಲಿ. ವಿಕಲಾಂಗ ವಿದ್ಯಾರ್ಥಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ, ಉಗ್ಗು ದೋಷವುಳ್ಳ ಹುಡುಗ ಅಥವಾ ಹುಡುಗಿ, ತುಂಬ ದಪ್ಪ ಅಥವಾ ತೆಳ್ಳಗಿರುವ ವಿದ್ಯಾರ್ಥಿ ಇಂಥವರನ್ನು ಸಹಪಾಠಿಗಳು ಗೇಲಿಮಾಡುತ್ತಾರೆ. ದುರ್ಬಲ ಶರೀರದ ಮಕ್ಕಳ ಮೇಲೆ ಸದೃಢಶರೀರದ ಹುಡುಗರು ಏರಿಹೋಗುತ್ತಾರೆ. ಕೆಲವು ಹುಡುಗರು ಹುಡುಗಿಯರನ್ನು ಚುಡಾಯಿಸುತ್ತಾರೆ. ಪೀಡಿಸುತ್ತಾರೆ, ಹಾದಿಗೆ ಅಡ್ಡನಿಂತು ‘ಪ್ರೀತ್ಸೇ’ ಎಂದು ಹಠಹಿಡಿಯುತ್ತಾರೆ. ಇವೆಲ್ಲ ಕೆಲವೊಮ್ಮೆ ಮಾನಸಿಕ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

ಸಮಸ್ಯಾತ್ಮಕ ನಡವಳಿಕೆಗೆ ಕೆಲವು ಕಾರಣಗಳು ಸೇರಿಕೊಳ್ಳುತ್ತವೆ. ಆರೋಗ್ಯವಂತ ಮಗು ಕಠಿಣ ಪರಿಸ್ಥಿತಿಗೆ ವಿಪರೀತವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಬೇರೆ ಬೇರೆ ಮಕ್ಕಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಯಾವುದೋ ಒಂದು ಬಗೆಯ ಚಿಹ್ನೆ ಅಥವಾ ಲಕ್ಷಣ ಕಾಣಿಸಿಕೊಳ್ಳುತ್ತದೆ. ಆದದರಿಂದ ಹದಗೆಟ್ಟ ವರ್ತನೆಗಳ ಮೂಲಬೇರು ಎಲ್ಲಿದೆ ಎಂಬುದನ್ನು ಹೆತ್ತವರು ಹಾಗೂ ಶಿಕ್ಷಕರು ಹುಡುಕಿ ತೆಗೆಯಬೇಕು. ಆಮೇಲೆ ಏನು ಮಾಡಬೇಕು? ಎಂಬುದನ್ನು ಚೆನ್ನಾಗಿ ಯೋಚಿಸಬೇಕು. ಮನೆಯಲ್ಲಿ ಅಥವಾ ಶಾಲೆಯಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕಿದರೆ ಸಂತೋಷ; ಇಲ್ಲವಾದರೆ ಮನೋವೈದ್ಯರನ್ನು ಅಥವಾ ಮನೋತಜ್ಞರನ್ನು ಭೇಟಿಯಾಗುವುದು ಸೂಕ್ತ.

ವರ್ತನೆಯ ದೋಷಗಳನ್ನು ಸಾಮಾನ್ಯವಾಗಿ ಭಾವನಾತ್ಮಕ ದೋಷಗಳು (ಆಂತರಿಕ) ಹಾಗೂ ನಡವಳಿಕೆಯ (ಬಾಹ್ಯ) ದೋಷಗಳು ಎಂದು ಎರಡು ಬಗೆಯಾಗಿ ವಿಂಗಡಿಸುತ್ತಾರೆ. ಮಕ್ಕಳಲ್ಲಿ ಇವೆರಡರಲ್ಲಿ ಒಂದು ಕಂಡುಬರಬಹುದು ಅಥವಾ ಎರಡರ ಸಮ್ಮಿಶ್ರಣವೂ ಇರಬಹುದು.

ಭಾವನಾತ್ಮಕ ದೋಷಗಳು
ಮಗುವಿನಲ್ಲಿ ಆತಂಕ, ವಿಪರೀತ ಭಯ, ಸೂಕ್ಷ್ಮ ಸಂವೇದನೆ, ನಾಚಿಕೆ, ಪುಕ್ಕಲುತನ, ಸಾಮಾಜಿಕ ಹಿಂದೆಗೆತ, ಚಿತ್ತಚಾಂಚಲ್ಯ, ಖಿನ್ನತೆ, ಹಗಲುಕನಸು ಕಾಣುವಿಕೆ, ಬೆರಳು ಚೀಪುವುದು, ಉಗುರು ಕಚ್ಚುವುದು, ಶಾಲೆಗೆ ಹೋಗದಿರಲು ಹಠಹಿಡಿಯುವುದು, ತಲೆನೋವು, ಹೊಟ್ಟೆನೋವು ಇತ್ಯಾದಿಯಾಗಿ ಕಾಣಿಸಿಕೊಳ್ಳುತ್ತದೆ.

ನಡವಳಿಕೆಯ ದೋಷಗಳು
ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಮೋಸಮಾಡುವುದು, ಹಠಹಿಡಿಯುವುದು, ಕಿರುಚುವುದು, ಹೊಡೆಯುವುದು, ಮುರಿದು ಬಿಸಾಡುವುದು, ಸಿಟ್ಟಿನಿಂದ ನೆಲದ ಮೇಲೆ ಹೊರಳಾಡುವುದು-ಇತ್ಯಾದಿ. ಆವೇಶಕ್ಕೆ ಒಳಗಾಗಿ ಇತರರಿಗೆ ಅಥವಾ ತನಗೆ ಗಾಸಿ ಮಾಡುವುದು. ಶಾಲೆಗೆ ಹೋಗುತ್ತೇನೆಂದು ಹೇಳಿ ಶಾಲೆಗೆ ಹೋಗದೆ ಚಕ್ಕರ್ ಹಾಕಿ ತಂದೆತಾಯಿಗಳಿಗೆ ಕಾಣದಂತೆ ಬೇರೆಲ್ಲೋ ಆಟವಾಡುವುದು, ಸಿನೆಮಾಕ್ಕೆ ಹೋಗುವುದು, ಬೆಳಗ್ಗಿನಿಂದ ಸಂಜೆ ತನಕ ಕಾಡಿನಲ್ಲಿ ಕೂತಿರುವುದು. ತನ್ನದೇ ವಯಸ್ಸಿನವರ ಗುಂಪು ಕಟ್ಟಿಕೊಂಡು ಮಾದಕವಸ್ತು ಸೇವನೆ ಮಾಡುವುದು, ದಾಂಧಲೆ ಎಬ್ಬಿಸುವುದು, ಹೊಡೆದಾಡುವುದು, ಮನೆಯಲ್ಲಿ ತಂದೆತಾಯಿಯರನ್ನು ಪೀಡಿಸುವುದು, ಕಳ್ಳತನ ಮಾಡುವುದು.

ಹದಿಹರೆಯದ ಮಕ್ಕಳಲ್ಲಿ ಕಂಡುಬರುವ ಕೆಲವು ಸಮಸ್ಯೆಗಳು
೧. ಅಭದ್ರತೆಯ ಭಾವನೆಗಳು ಕಾಡುತ್ತವೆ. ಸಣ್ಣ ಕಾರಣಕ್ಕೂ ವಿಪರೀತ ಅಳುತ್ತಾರೆ. ಚಿತ್ತಚಾಂಚಲ್ಯಕ್ಕೆ ಒಳಗಾಗುತ್ತಾರೆ. ಆತ್ಮಹತ್ಯೆಗೆ ಮನಮಾಡಬಹುದು.
೨. ಅನ್ಯಾಯದ ವಿರುದ್ಧ ಸೆಟೆದುನಿಲ್ಲುವ ಆವೇಶಕ್ಕೆ ಒಳಗಾಗುವ ಪ್ರವೃತ್ತಿ ಕಂಡುಬರುತ್ತದೆ.

೩. ನಿದ್ರೆಯಲ್ಲಿ ಮಾತನಾಡುವುದು, ನಿದ್ರಾನಡಿಗೆ, ಉಗುರು ಕಚ್ಚುವುದು ಇತ್ಯಾದಿ ಲಕ್ಷಣಗಳು ಕಂಡುಬರಬಹುದು. ಆತಂಕದಿಂದಾಗಿ ಈ ಲಕ್ಷಣಗಳು ಕಂಡುಬಂದರೂ ಮುಂದೆ ಬೆಳೆದು ದೊಡ್ಡವರಾಗುವಾಗ ಸರಿಹೋಗಬಹುದು.

೪. ಹದಿಹರೆಯದಲ್ಲಿ ಮದ್ಯಪಾನ, ಧೂಮಪಾನ, ಮಾಂಸಸೇವನೆ, ಮಾದಕದ್ರವ್ಯ ಸೇವನೆ ಹಾಗೂ ಲೈಂಗಿಕತೆ ಒಂದು ಪ್ರಬಲ ಆಕರ್ಷಣೆ. ‘ಏನಾಗುತ್ತದೆ ನೋಡೋಣ’ ಎನ್ನುವ ಪ್ರಯೋಗಪ್ರಿಯತೆ ಎದ್ದುಕಾಣುತ್ತದೆ. ಆದರೆ ಇದೆಲ್ಲ ಒಂದು ವ್ಯಸನವಾಗಿ ಪರಿಣಮಿಸಿದರೆ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಅಪಾಯಕ್ಕೆ ಕಾರಣವಾಗುತ್ತದೆ. ಮನೋವೈದ್ಯರ ನೆರವು ಮಾರ್ಗದರ್ಶನ ಬೇಕಾಗಬಹುದು.

೫. ಸಲಿಂಗಕಾಮ, ಮುಷ್ಟಿಮೈಥುನದಲ್ಲಿ ತೊಡಗಬಹುದು. ಅನ್ಯಲಿಂಗೀಯರ ಬಗ್ಗೆ ಅತಿಯಾದ ಆಸಕ್ತಿಮೂಡಿ ಪ್ರೀತಿಪ್ರೇಮದಲ್ಲಿ ತೊಡಗಿ ವ್ಯಾಸಂಗವನ್ನೇ ಮರೆಯಬಹುದು. ಜವಾಬ್ದಾರಿಗಳ ಪರಿವೆಯಿಲ್ಲದೆ, ಸಂಪಾದನೆಯ ಕೌಶಲ ಗಳಿಸದೆ ಆವೇಶದಲ್ಲಿ ಮದುವೆಯಾಗಿ ಪರಿತಪಿಸಬಹುದು.

ಅತೃಪ್ತಿಕರ ಶೈಕ್ಷಣಿಕ ಸಾಧನೆ
ಶಿಕ್ಷಕರಿಗೆ ಹಾಗೂ ಪಾಲಕರಿಗೆ ಇದೊಂದು ಗಂಭೀರ ಸಮಸ್ಯೆ. ಸಮಸ್ಯೆ ಏನು? ಯಾವಾಗ ಪ್ರಾರಂಭವಾಯಿತು? ಎಂಬುದನ್ನು ಮೊದಲು ಪತ್ತೆಮಾಡಬೇಕು. ಈ ಕೆಳಗೆ ನಮೂದಿಸಿದ ಕಾರಣಗಳಿಂದಾಗಿ ಶೈಕ್ಷಣಿಕ ಸಾಧನೆ ಕುಸಿಯಬಹುದು.

(ಅ) ಬುದ್ಧಿಶಕ್ತಿಯ ಕೊರತೆ (ಬುದ್ಧಿಸೂಚ್ಯಂಕ ಇರಬೇಕಾದುದಕ್ಕಿಂತ ಕಡಿಮೆ ಇರಬಹುದು).

(ಆ) ಇಂದ್ರಿಯಸಂಬಂಧಿ ಅಥವಾ ಚಾಲಕಸಂಬಂಧಿ ವಿಕಲತೆ – ಅಂದರೆ ದೃಷ್ಟಿದೋಷ, ಶ್ರವಣದೋಷ, ಕೈಕಾಲುಗಳ ಚಲನೆಯಲ್ಲಿ ಸಮನ್ವಯ ಇಲ್ಲದಿರುವುದು ಇತ್ಯಾದಿ.

(ಇ) ಬಿಗಿಯಾದ ಶಿಕ್ಷಣ ವ್ಯವಸ್ಥೆ, ಅದಕ್ಷ ಬೋಧನೆ, ಶಿಕ್ಷಣ ಮಾಧ್ಯಮದ ಸಮಸ್ಯೆ, ಮನೆಯಲ್ಲಿ ಕಲಿಕೆಗೆ ತಕ್ಕ ಆವರಣ ಇಲ್ಲದಿರುವುದು.

(ಈ) ಓದು ಬರೆಹ, ಲೆಕ್ಕ ಇತ್ಯಾದಿಗಳಲ್ಲಿ ನಿರ್ದಿಷ್ಟ ಸಮಸ್ಯೆಗಳು.

ಕೆಲವೊಮ್ಮೆ ಮಕ್ಕಳ ಶೈಕ್ಷಣಿಕ ಸಾಧನೆಯಲ್ಲಿ ಕುಸಿತ ತೀರ ಇತ್ತೀಚಿನ ವಿದ್ಯಮಾನವಾಗಿದ್ದಿರಬಹುದು. ಮನೆಯ ವಾತಾವರಣದಿಂದಾಗಿ ಮಗು ಭಾವನಾತ್ಮಕವಾಗಿ ನೊಂದಿರಬಹುದು; ಆರ್ಥಿಕ-ಸಾಮಾಜಿಕ ಕಾರಣಗಳು, ಶಾಲೆಯ-ಮಾಧ್ಯಮದ ಬದಲಾವಣೆ, ಶಿಕ್ಷಕರ ಅತಿಯಾದ ನಿರೀಕ್ಷೆ, ಪಠ್ಯಕ್ರಮ ಹೆಚ್ಚು ಬಿಗಿಯಾಗಿರುವುದು, ಶಿಕ್ಷಕರ ಬೋಧನೆ ಅಸಮಪರ್ಕಕವಾಗಿರುವುದು ಇತ್ಯಾದಿ ಕಾರಣಗಳಿಂದಾಗಿ ಒಮ್ಮೆಲೆ ಸಾಧನೆಯಲ್ಲಿ ಕುಸಿತ ಕಂಡುಬರಬಹುದು. ಪರಿಸರದಲ್ಲಿ ಸೂಕ್ತ ಮಾರ್ಪಾಡು ಮಾಡಿದರೆ ಪರಿಸ್ಥಿತಿ ಸುಧಾರಿಸುತ್ತದೆ.

ಏನು ಮಾಡಬಹುದು?

೧. ಶಿಕ್ಷಕರು ಹಾಗೂ ಹೆತ್ತವರು ತಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರಲು ಹೋಗದೆ ಅವರಿಗೆ ಆಯ್ಕೆಯ ಅವಕಾಶಗಳನ್ನು ಒದಗಿಸಬೇಕು.

೨. ಮಕ್ಕಳ ಸದ್ವರ್ತನೆಯನ್ನು ಮೆಚ್ಚಿ ಪ್ರೋತ್ಸಾಹಿಸಬೇಕು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕು. ಆದರೆ ಸಾರ್ವಜನಿಕವಾಗಿ ಟೀಕಿಸುವುದು, ಶಿಕ್ಷಿಸುವುದು ಖಂಡಿತ ಕೂಡದು. ಖಾಸಗಿಯಾಗಿ ಶಿಕ್ಷೆಕೊಡಿ; ತಪ್ಪಿಗೆ ಶಿಕ್ಷೆ ಹೊರತು ವ್ಯಕ್ತಿಗಲ್ಲ ಎಂದು ತಿಳಿಸಿ. ಸರಿಯಾದ ನಡವಳಿಕೆ ಯಾವುದು ಎಂಬುದನ್ನು ತಿಳಿಯಪಡಿಸಬೇಕು ಮತ್ತು ನಡೆದು ತೋರಬೇಕು.

೩. ಹೆತ್ತವರು ಶಾಲೆಗೆ ಹೋಗಿ ಶಿಕ್ಷಕರ ಜೊತೆ ಆಗಾಗ್ಗೆ ಸಂವಾದ ನಡೆಸುವುದು ಉತ್ತಮ.

೪. ಮಕ್ಕಳ ಮುಂದೆ ಜಗಳ ಸಲ್ಲದು. ಮಕ್ಕಳಿಗಾಗಿ ತಂದೆತಾಯಿ ಒಂದಾಗಬೇಕು. ತಮ್ಮ ಜಗಳಗಳ ನಡುವೆ ಮಕ್ಕಳನ್ನು ತಂದು ಅಪ್ಪಚ್ಚಿ ಮಾಡಬಾರದು. ಶಿಕ್ಷಕರಿಗೂ ಈ ಮಾತು ಅನ್ವಯಿಸುತ್ತದೆ.

೫. ಶಾಲೆಗಳವರು ಶಿಕ್ಷಕ-ರಕ್ಷಕ ಸಭೆಗಳಿಗೆ ಆಗಾಗ್ಗೆ ಮನೋವೈದ್ಯರನ್ನು ಕರೆಯಿಸಿ ಉಪನ್ಯಾಸಗಳನ್ನು ಏರ್ಪಡಿಸಿ ಅರಿವು ಮೂಡಿಸಬಹುದು.

೬. ಶಾಲೆಗಳವರು ಪರಿಹಾರ ಬೋಧನೆಯನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು.

೭. ಭಾವನಾತ್ಮಕ ಭದ್ರತೆಯ ವಾತಾವರಣವನ್ನು ರೂಢಿಸುವುದು ಬಹಳ ಮುಖ್ಯ.

೮. ಶಾಲಾಮಕ್ಕಳು ವಿಶ್ವ ಆರೋಗ್ಯ ಸಂಸ್ಥೆ ಪ್ರತಿಪಾದಿಸಿದ ಹತ್ತು ಜೀವನ ಕೌಶಲಗಳನ್ನು ಕರಗತಮಾಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು.

೯. ಗಂಭೀರವಾದ ಸಮಸ್ಯೆಗಳು ಕಂಡುಬಂದರೆ ಸಂಕೋಚವಿಲ್ಲದೆ ಮನೋವೈದ್ಯರನ್ನು ಅಥವಾ ಮನೋವಿಜ್ಞಾನಿಗಳನ್ನು, ಆಪ್ತ ಸಲಹಾಕಾರರನ್ನು ಭೇಟಿಯಾಗುವುದು ಉತ್ತಮ.

೧೦. ಶಿಕ್ಷಕರು ಆಪ್ತ ಸಮಾಲೋಚನೆಯ ಕೌಶಲಗಳನ್ನು ಕಲಿತು ಶಾಲೆಯಲ್ಲಿ ಮಕ್ಕಳ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬಹುದು.

ಇಲ್ಲಿ ತೀರ ಪ್ರಾಥಮಿಕವಾದ ಕೆಲವೊಮದು ಮಾನಸಿಕ ಸಮಸ್ಯೆಗಳನ್ನು ಸ್ಥೂಲವಾಗಿ ಚರ್ಚಿಸಿದೆ. ಡಾ|| ಮಾಲವಿಕ ಕಪೂರ್ ಹಾಗೂ ಡಾ|| ಸಿ.ಆರ್.  ಚಂದ್ರಶೇಖರ್ ಅವರ ಕೃತಿಗಳನ್ನು ಬಳಸಿಕೊಂಡಿರುವುದನ್ನು ಲೇಖಕ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾನೆ.