ಉತ್ತರ ಪ್ರದೇಶದ ಒಂದು ಹಳ್ಳಿ ಜಾಟ್‌ ಮನೆತನಕ್ಕೆ ಸೇರಿದ ಹುಡುಗ ಹುಡುಗಿ ಮನೆಯವರ ಇಚ್ಛೆಗೆ ವಿರುದ್ಧವಾಗಿ ಪರಸ್ಪರ ಪ್ರೀತಿಸಿದರು. ವಿವಾಹಕ್ಕೆ ಉಭಯ ಕುಟುಂಬಗಳ ವಿರೋಧ. ಪ್ರಣಯಿಗಳು ಮನೆಬಿಟ್ಟು  ಓಡಿಹೋಗಿ ಮದುವೆಯಾಗಲು ತೀರ್ಮಾನಿಸಿದರು. ಇದು ಗೊತ್ತಾದೊಡನೆಯೆ ಕೆಲವರು ಹುಡುಗ ಹುಡುಗಿಯರನ್ನು ಎಳೆದುತಂದು ಊರಿನ ಮಧ್ಯದಲ್ಲಿ ಹೊಡೆದು ಬಾರಿಸಿ ಕೊಂದೇಬಿಟ್ಟರು. ‘ಬಿಟ್ಟುಬಿಡಿ ಅವರನ್ನು’ ಎಂದು ಹುಡುಗನ ತಂದೆ ಗೋಗರೆದರೂ ಕಾಲು ಹಿಡಿದು ಬೇಡಿದರೂ ಪ್ರಯೋಜನವಾಗಲಿಲ್ಲ. ಊರಿನ ಜನ ಮೌನವಾಗಿ ಈ ಬರ್ಬರ ಘಟನೆಗೆ ಸಾಕ್ಷಿಯಾದರು. ತಮ್ಮ ಮಾತು ಕೇಳದೆ ಆದರೆ ಹಕ್ಕು ಸ್ಥಾಪಿಸಲು ಯತ್ನಿಸಿದ ಯುವಕ ಯುವತಿಯರ ‘ಮಾರಣಹೋಮ’ದ ಮೂಲಕ ‘ಕುಲಗೌರವ’ ಕಾಪಾಡಿದರು!

“ಹೋಯ್‌, ನಾವು ಮೊದ್ಲಿಗೆ ದೊಡ್ಡವರಿಗೆ ಎಷ್ಟು ಹೆದರ್ ತಿತ್ತ್ ಮಾರಾಯ್ರೆ ಮಾಷ್ಟ್ರಿಗೆ ಎದುರುತ್ತರ ಕೊಡ್ತಿರ್ ಲಿಲ್ಲೆ. ಅಪ್ಪ ಅಮ್ಮ ಹೊಡೆದ್ರೂ ಬಡಿದ್ರೂ ನಮ್ ಒಳ್ಳೇದಕ್ಕೆ ಅಮತ ತಿಳ್ಕಂತಿತ್ತು. ಈಗ ಮಕ್ಕಳಿಗೆ ಹೊಡೂಕಾಗ ಅಂತ ಕಾನೂನ್‌ ಆಯಿತ್ತ್‌. ಶಾಲೆಯಂಗೆ ಮಕ್ಳಿಗೆ ಹೊಡೆದ್ರೆ ಅಪ್ಪ ಅಮ್ಮ ಶಾಲಿಗ್‌ ಬಂದ್‌ ನಮ್ಗೆ ಜೋರು ಮಾಡ್ತ್ರು. ಮಕ್ಳಿಗೆ ಎಂತೆಂತದೋ ಹಕ್ಕುಗಳಿದ್ವಂಭ್ರಲೆ” ಶಾಲಾಶಿಕ್ಷಕರೊಬ್ಬರು ಮತ್ತೊಬ್ಬರೊಡನೆ ತೋಡಿಕೊಂಡ ಮಾತುಗಳಿವು.

ಒಂದು ಕಾಲಕ್ಕೆ ಮಕ್ಕಳ ಹಕ್ಕುಗಳ ಬಗ್ಗೆ ಯಾರೂ ಸಾರ್ವಜನಿಕವಾಗಿ ಮಾತಾಡುತ್ತಿರಲಿಲ್ಲ. ಮಕ್ಕಳಿಗೆ ಹಕ್ಕುಗಳಿವೆ ಎಂಬ ಯೋಚನೆಯೇ ಇದ್ದಿರಲಿಲ್ಲ.  ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು ಹಾಗೂ ಹೆಂಗಸರು ದಮನಿತರು: ದಲಿತರ ಹಾಗೆ. ಚಾವಡಿಯಲ್ಲಿ ಗಂಡಸರ ಕಾರುಬಾರು ನಡೆಯುವಾಗ ಮಕ್ಕಳು ಹಾಗೂ ಹೆಂಗಸರು ಉಸಿರೆತ್ತುವಂತಿರಲಿಲ್ಲ.  ಅವರು ಪಡಸಾ ಲೆಯಲ್ಲೋ. ಅಡುಗೆಮನೆಯ ಮೂಲೆಯಲ್ಲೋ ಅಥವಾ ಹಿತ್ತಿಲಲ್ಲೋ ಇರುತ್ತಿದ್ದರು. ಗಂಡಸರು ಮನೆಯಿಂದ ಹೊರಗೆ ಕಾಲಿಟ್ಟರೆಂದರೆ ಇವರಿಗೆ ಬಿಡುಗಡೆ. ಆಗ ಮನೆತುಂಬ ಗಲಗಲ, ಕಲಕಲ.

ನಾನು ನನ್ನ ಅಜ್ಜನ ಮನೆಯಲ್ಲಿ ಬೆಳೆಯುತ್ತಿದ್ದ ಕಾಲದಲ್ಲಿ  (ಅರುವತ್ತು ಎಪ್ಪತ್ತರ ದಶಕ) ನಮ್ಮಜ್ಜ ಮಧ್ಯಾಹ್ನ ಊಟಮಾಡಿ ಮಲಗಿದಾಗ ಇಡೀ ಮನೆಯ ಉಸಿರಾಟವೇ ಸ್ತಬ್ಧಗೊಳ್ಳುತ್ತಿತ್ತು! ಯಾರಾದರೂ ಗಟ್ಟಿಯಾಗಿ ಮಾತನಾಡಿ ಅಜ್ಜನ ನಿದ್ರಾಭಂಗವಾಯಿತೆಂದರೆ ಅವರು ಸಿಟ್ಟಿನಿಂದ ಅಬ್ಬರಿಸುತ್ತ ಇದ್ದರು. ನಮ್ಮ ಸೋದರಮಾವ ಬ್ಯಾಂಕ್‌ ಉದ್ಯೋಗಿಯಾಗಿದ್ದವರು. ಮಹಾ ಸಿಟ್ಟಿನ ಮನುಷ್ಯನಾಗಿದ್ದರು. ಅವರು ಮನೆಯಲ್ಲಿ ಇರುವಷ್ಟು ಕಾಲ ನಾವು ಯಾರೂ ಮಾತಾಡುತ್ತಿರಲಿಲ್ಲ! ಅವರು ಬ್ಯಾಂಕಿಗೆ ಹೋಗಿ ರಾತ್ರಿ ಹಿಂತಿರುವವರೆಗೂ ನಗು, ವಿನೋದ ನಿರಾತಂಕ; ಆದರೆ ರಾತ್ರಿ ದೂರದಲ್ಲಿ ಬ್ಯಾಟರಿ ಬೆಳಕು ಮಿನುಗುವುದು ಕಂಡೊಡನೆ ನಾವೆಲ್ಲ ಗಪ್‌ಚುಪ್‌! ಒಂದೊಮ್ಮೆ ಅವರು ಮನೆಗೆ ಮರಳುವ ವೇಳೆಯ ಪರಿವೆಯಿಲ್ಲದೆ ನಗುತ್ತಿದ್ದರೆ ಬಂದವರೇ ಅಬ್ಬರಿಸುತ್ತಿದ್ದರು – “ನಿಮ್ಮ ನಗು, ಗಲಾಟೆ ಅಷ್ಟು ದೂರಕ್ಕೆ ಕೇಳುತ್ತದೆ.”

ಆದರೆ ಕಳೆದ ಎರಡು ಮೂರು ದಶಕಗಳಲ್ಲಿ ಸಾಮಾಜಿಕ ಆರ್ಥಿಕ ಔದ್ಯೋಗಿಕ ಸಂಬಂಧಗಳು ಪಲ್ಲಟಗೊಂಡಿವೆ. ಮಾನವ ಹಕ್ಕುಗಳ ಘೋಷಣೆಯಾದ ಮೇಲಿನಿಂದ ಸ್ತ್ರೀಯರ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಜಗತ್ತಿನಾದ್ಯಂತ ಜಾಗೃತಿ ಮೂಡಿದೆ.

ಮಕ್ಕಳಿಗೂ ಹಕ್ಕುಗಳೇ? ಮಕ್ಕಳಿಗೇನು ಗೊತ್ತಾಗುತ್ತೆ ಮಣ್ಣು! ಅವುಗಳ ಜವಾಬ್ದಾರಿ ಹಿರಿಯರಾದ ನಮ್ಮ ಮೇಲಿದೆ. ನಾವು ಅವುಗಳ ಹಣೆಯ ಬರೆಹ ಬರೆಯುವವರು ಎಂಬ ಭಾವನೆಗಳು ಇಂದು ಸವಕಲಾಗುತ್ತಿವೆ; ಪ್ರತಿಗಾಮಿ ಎಂಬ ಹಣೆಪಟ್ಟಿಗೆ ಪಾತ್ರವಾಗುತ್ತವೆ.

ಮಕ್ಕಳು ಪ್ರಾಯದಲ್ಲಿ ಚಿಕ್ಕವರಾದರೇನಂತೆ? ಅವರೂ ನಮ್ಮಂತೆ ಮನುಷ್ಯರು ಅವರಿಗೂ ಆಸೆ-ಆಕಾಂಕ್ಷೆಗಳಿವೆ. ಭಾವನೆಗಳಿವೆ. ಕನಸುಗಳಿವೆ. ವಿಚಾರಗಳಿವೆ. ನಮ್ಮ ಭಾವನೆಗಳನ್ನು ಹೇಳಿಕೊಳ್ಳಬೇಕೆಂದು ಅವರಿಗೂ ಅನ್ನಿಸುತ್ತದೆ. ಆದುದರಿಂದ ಮಕ್ಕಳ ಹಕ್ಕುಗಳನ್ನು ಗುರುತಿಸಿ ಗೌರವಿಸಬೇಕು. ಅವರು ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಅವಕಾಶ ಕೊಡಬೇಕು ಎಂಬುದು ಆಧುನಿಕ ಪ್ರಗತಿಶೀಲ ಮನೋಧರ್ಮ.

‘ಹದಿನೆಂಟು ವರ್ಷ ಪ್ರಾಯದ ಒಳಗಿರುವ ಯಾವುದೇ ಗಂಡು ಹೆಣ್ಣು ಒಂದು ಮಗು. ಮಗು ಎಂದರೆ ಓರ್ವ ವ್ಯಕ್ತಿ. ಕಾನೂನು, ರಾಜಕೀಯ, ಧರ್ಮ ಹಾಗು ನೈತಿಕತೆಯ ಕ್ಷೇತ್ರಗಳನ್ನು ವ್ಯಾಪಿಸಿದಂತೆ ಮಕ್ಕಳ ಹಕ್ಕುಗಳಿವೆ. ಮಕ್ಕಳ ವಿಶೇಷತೆ ಬಗೆಗಿನ ಕಾಳಜಿ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆದ ಪ್ರಯತ್ನಗಳ ಫಲಸ್ವರೂಪವಾಗಿ ಮಕ್ಕಳ ಹಕ್ಕುಗಳ ಪರಿಕಲ್ಪನೆ ವಿಕಾಸಗೊಂಡಿದೆ. ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಬಾಲ್ಯಕಾಲದ ಅನುಭವಗಳು ಮಹತ್ತ್ವದ ಪಾತ್ರ ವಹಿಸುತ್ತವೆ; ದೀರ್ಘಕಾಲಿಕ ಶಾಶ್ವತ ಪರಿಣಾಮ ಬೀರುತ್ತವೆ. ಯಾವುದೇ ಒಂದು ರಾಷ್ಟ್ರದ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸ್ಥಿತಿಗತಿಗಳು ಬಾಲ್ಯದಲ್ಲಿ ಹೇಗೆ ರೂಪುಗೊಳ್ಳುತ್ತವೆ ಎಂಬುದು ಗಮನಿಸಬೇಕಾದ ಸಂಗತಿ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ . ಹೀಗಾಗಿ ಮಕ್ಕಳ ಹಕ್ಕುಗಳ ಮೂಲಕ ಬಾಲ್ಯದಿಂದಲೆ ಮಕ್ಕಳಿಗೆ ತಮ್ಮ ಬೆಳವಣಿಗೆ,  ವಿಕಾಸ ಹಾಗೂ ಪರಿಪೂರ್ಣ ವ್ಯಕ್ತಿತ್ವ ಸಂಪಾದನೆಯ ದೃಷ್ಟಿಯಿಂದ ಅನುಕೂಲಕರ ಸನ್ನಿವೇಶಗಳನ್ನು ನಿರ್ಮಾಣ ಮಾಡಿಕೊಡುವ ಹೊಣೆ ಸಮಾಜದ್ದಾಗಿದೆ.

೧೯೫೯ರಲ್ಲಿ ವಿಶ್ವಸಂಸ್ಥೆಯ ಜಾಗತಿಕ ಮಕ್ಕಳ ಹಕ್ಕುಗಳ ಘೋಷಣೆ ಮಾಡಿದೆ. ಸ್ಥಳೀಯ ಹಾಗೂ ರಾಷ್ಟ್ರೀಯ ಸರಕಾರಗಳು , ಪಾಲಕರು ಹಾಗೂ ಸ್ವಯಂಸೇವಾ ಸಂಸ್ಥೆಗಳು ಪಾಲಿಸಬೇಕಾದ ಹತ್ತು ಸೂತ್ರಗಳನ್ನು ಹೀಗೆ ನಿರೂಪಿಸಿದೆ:

೧. ಮಗು ಎಲ್ಲ ಹಕ್ಕುಗಳನ್ನು ಅನುಭವಿಸಬಹುದಾಗಿದೆ. ಯಾವುದೆ ತಾರತಮ್ಯವಿಲ್ಲದೆ ಪ್ರತಿ ಮಗುವಿಗೂ ಈ ಹಕ್ಕುಗಳಿವೆ.

೨. ಮಗುವಿಗೆ ವಿಶೇಷ ರಕ್ಷಣೆಯ ಹಕ್ಕಿದೆ. ಮಗು ದೈಹಿಕವಾಗಿ, ಮಾನಸಿಕವಾಗಿ ನೈತಿಕವಾಗಿ,  ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಆರೋಗ್ಯಕರ ವಾತಾವರಣದಲ್ಲಿ ಸ್ವಾತಂತ್ಯ್ರ ಮತ್ತು ಘನತೆಯೊಂದಿಗೆ ವಿಕಾಸ ಹೊಂದುವುದಕ್ಕೆ ಬೇಕಾದ ಅವಕಾಶಗಳನ್ನು ಹಾಗೂ ಸೌಲಭ್ಯಗಳನ್ನು ಕಾನೂನಿನ ಮೂಲಕ ಅಥವಾ ಇತರ ಕ್ರಮಗಳ ಮೂಲಕ ಒದಗಿಸಬೇಕು.

೩. ಹುಟ್ಟಿನಿಂದಲೇ ಪ್ರತಿಯೊಂದು ಮಗುವಿಗೂ ಒಂದು ಹೆಸರು ಮತ್ತು ರಾಷ್ಟ್ರೀಯತೆ ಇರಬೇಕು.

೪. ಮಗುವಿಗೆ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಒದಗಿಸಬೇಕು. ಮಗು ಹಾಗೂ ತಾಯಿಗೆ ವಿಶೇಷ ರಕ್ಷಣೆ ಹಾಗೂ ಸೌಕರ್ಯ ನೀಡಬೇಕು. ಜನನ, ಮರಣ ಹಾಗೂ ಜನನಾನಂತರದ ಸೇವೆ ಲಭಿಸಬೇಕು. ಮಗುವಿಗೆ ವಸತಿ, ಪೋಷಣೆ, ಮನೋರಂಜನೆ ಹಾಗೂ ವೈದ್ಯಕೀಯ ಸೇವೆಯ ಹಕ್ಕಿದೆ.

೫. ದೈಹಿಕವಾಗಿ, ಮಾನಸಿಕವಾಗಿ ಅಥವಾ ಸಾಮಾಜಿಕವಾಗಿ ವಿಕಲಾಂಗ ಮಗುವಿಗೆ ವಿಶೇಷ ರಕ್ಷಣೆ, ಶಿಕ್ಷಣ ಮತ್ತು ಗಮನ ನೀಡಬೇಕು.

೬. ಮಗುವಿನ ಪೂರ್ಣ ವಿಕಾಸಕ್ಕೆ ಪ್ರೇಮ ಹಾಗೂ ತಿಳಿವಳಿಕೆಯ ಅಗತ್ಯವಿದೆ. ತಂದೆತಾಯಿಗಳ ರಕ್ಷಣೆ ಹಾಗೂ ವಾತ್ಸಲ್ಯದಲ್ಲೇ ಮಗು ಬೆಳೆಯಬೇಕು. ಸಾಮಾನ್ಯವಾಗಿ ಶೈಶವದಲ್ಲಿ ಮಗುವನ್ನು ತಾಯಿಯಿಂದ ಬೇರ್ಪಡಿಸಬಾರದು. ಅನಾಥ, ನಿರ್ಗತಿಕ ಮಕ್ಕಳ ಜವಾಬ್ದಾರಿಯನ್ನು ಸರಕಾರಗಳು ವಹಿಸಿಕೊಳ್ಳಬೇಕು.

೭. ಪ್ರತಿ ಮಗುವಿಗೂ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಹಕ್ಕು ಇದೆ. ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಶಿಕ್ಷಣ ನೀಡಬೇಕು. ಮಗುವಿನ ಶಿಕ್ಷಣ ಒದಗಿಸುವ ಮೊದಲ ಜವಾಬ್ದಾರಿ ಹೆತ್ತವರದ್ದು. ಆಟ ಪಾಠ ಹಾಗೂ ವಿನೋದದ ಪೂರ್ಣ ಅವಕಾಶಗಳು ಮಗುವಿಗೆ ಇದೆ.  ಮಗು ಈ ಹಕ್ಕನ್ನು ಚೆನ್ನಾಗಿ ಬಳಸಿಕೊಳ್ಳಲು ಸರಕಾರಗಳು ಹಾಗೂ ಸಮಾಜ ಅವಕಾಶ ಕಲ್ಪಿಸಬೇಕು.

೮. ಎಲ್ಲ ಸಂದರ್ಭಗಳಲ್ಲಿ ಮೊತ್ತಮೊದಲಿಗೆ ಮಗುವಿಗೆ ರಕ್ಷಣೆ ಹಾಗೂ ಪರಿಹಾರ ದೊರೆಯಬೇಕು.

೯. ಮಗುವನ್ನು ಎಲ್ಲ ಬಗೆಯ ತಾತ್ಸಾರ, ಕ್ರೌರ್ಯ ಮತ್ತು ಶೋಷಣೆಯಿಂದ ಪಾರುಮಾಡಬೇಕು. ಯಾವುದೇ ಬಗೆಯ ಮಾನವ ಸಾಗಾಣಿಕೆಯಲ್ಲಿ ಮಗುವನ್ನು ಬಳಸಬಾರದು. ಒಂದು ಕನಿಷ್ಠ ವಯಸ್ಸಿಗೂ ಮೊದಲೇ ಮಗುವನ್ನು ಯಾವುದೇ ಬಗೆಯ ಕೆಲಸ, ದುಡಿಮೆಗೆ ಸೇರಿಸಬಾರದು. ಮಗುವಿನ ಆರೋಗ್ಯ, ಶಿಕ್ಷಣ ಹಾಗೂ ವಿಕಾಸಕ್ಕೆ ಅಡ್ಡಿಯಾಗುವಂಥ ಉದ್ಯೋಗದಲ್ಲಿ ತೊಡಗಿಸಕೂಡದು.

೧೦. ಅರಿವು, ಸಹನೆ , ಸಹಿಷ್ಣುತೆ, ಶಾಂತಿ, ಸ್ನೇಹ ಹಾಗೂ ವಿಶ್ವಭ್ರಾತೃತ್ವದ ವಾತಾವರಣದಲ್ಲಿ ಮಗುವನ್ನು ಬೆಳೆಸಬೇಕು. ಆತನ ಶಕ್ತಿ-ಸಾಮರ್ಥ್ಯಗಳು ತನ್ನ ಒಡನಾಡಿಗಳ ಏಳಿಗೆಗೆ ವಿನಿಯೋಗವಾಗುವಂತಿರಬೇಕು ಎಂಬ ಎಚ್ಚರದಲ್ಲಿ ಈ ಕೆಲಸ ನಡೆಯಬೇಕು.

ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ನಾಗರಿಕ, ರಾಜಕೀಯ ಹಕ್ಕುಗಳು ಎಂದು ಹಲವು ನೆಲೆಗಳಲ್ಲಿ ಮಕ್ಕಳ ಹಕ್ಕುಗಳನ್ನು ವಿವರಿಸಲಾಗಿದೆ. ಸಾಮಾನ್ಯವಾಗಿ ಮಕ್ಕಳ ಹಕ್ಕುಗಳಿಗೆ ಎರಡು ಆಯಾಮಗಳಿವೆ. ಒಂದು ಮಕ್ಕಳು ಕಾನೂನಿನ ಪ್ರಕಾರ ಸ್ವಾಯತ್ತ ವ್ಯಕ್ತಿಗಳು ಎಂಬ ನೆಲೆ; ಇನ್ನೊಂದು ಮಕ್ಕಳು ಅನೇಕ ವಿಷಯಗಳಲ್ಲಿ ಇತರರನ್ನು ಅವಲಂಬಿಸಬೇಕಾಗಿರುವುದರಿಂದ ಅವರಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿಯ ನೆಲೆ. ಈ ಬಗೆಯಲ್ಲಿ ಹಕ್ಕುಗಳನ್ನು ‘ಸಬಲೀಕರಣ’ದ ಹಕ್ಕುಗಳು ಮತ್ತು ‘ರಕ್ಷಣೆಯ ಹಕ್ಕು’ಗಳು ಎಂದು ವರ್ಗೀಕರಿಸಲಾಗಿದೆ.

ಮಕ್ಕಳು ಸ್ವತಂತ್ರರಾಗಿ, ಆರೋಗ್ಯವಂತರಾಗಿ ಬೆಳೆಯಬೇಕಾದರೆ ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ಯ್ರ, ಭಯದಿಂದ ಮುಕ್ತಿ-ಸ್ವಯಂ ನಿರ್ಧಾರ ಹಾಗೂ ಆಯ್ಕೆಯ ಸ್ವಾತಂತ್ಯ್ರ, ತನ್ನ ದೇಹದ ಮೇಲಿನ ಒಡೆತನ ಮೊದಲಾದ ವೈಯಕ್ತಿಕ ಹಕ್ಕುಗಳನ್ನು ಮಕ್ಕಳ ಹಕ್ಕುಗಳೆಂದು ಪರಿಣತರು ಪರಿಗಣಿಸುತ್ತಾರೆ. ಭಾರತವು ೧೯೯೨ ಡಿಸೆಂಬರ್ ತಿಂಗಳಿನಲ್ಲಿ ಈ ಹಕ್ಕುಗಳ ಪಾಲನೆಗೆ ಒಪ್ಪಿಗೆ ನೀಡಿದೆ.

* ಯಾವುದೇ ತಾರತಮ್ಯವಿಲ್ಲದೆ ರಕ್ಷಣೆಯ ಹಕ್ಕು.

* ಮಕ್ಕಳ ಹಿತದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು.

* ಮಕ್ಕಳಿಗೆ ಬದುಕುವ ಹಕ್ಕು ಇದೆ.

* ಮಕ್ಕಳಿಗೆ ತಮ್ಮ ಗುರುತು’ಅಸ್ಮಿತೆಯ ಹಕ್ಕುಗಳಿವೆ.

* ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಅವರನ್ನು ಪಾಲಕರಿಂದ ಬೇರ್ಪಡಿಸುವಂತಿಲ್ಲ.

* ಮಕ್ಕಳು ತಮ್ಮ ಅಭಿಪ್ರಾಯಗಳನ್ನು ತಾವೇ ರೂಪಿಸಿಕೊಳ್ಳಬಹುದು. ಅಭಿಪ್ರಾಯಗಳನ್ನು ಅಭಿ‌ವ್ಯಕ್ತಿಸುವ ಹಕ್ಕು ಅವರಿಗಿದೆ. ಮಕ್ಕಳ ಅಭಿಪ್ರಾಯಗಳನ್ನು ಹಿರಿಯರು ಆಲಿಸಬೇಕು. ಕೌಟುಂಬಿಕ ನಿರ್ಧಾರಗಳಲ್ಲಿ ಸಹಭಾಗಿತ್ವದ ಹಕ್ಕು ಹೊಂದಿರುತ್ತಾರೆ.

* ಅಭಿವ್ಯಕ್ತಿ ಹಾಗೂ ಮಾಹಿತಿಯ ಹಕ್ಕು ಇದೆ.

* ವಿಚಾರಮಾಡುವ, ಆತ್ಮಸಾಕ್ಷಿಯ ಹಾಗೂ ತಮಗಿಷ್ಟಬಂದ ಧರ್ಮವನ್ನು ಆಚರಿಸುವ ಹಕ್ಕು ಇದೆ.

* ಮಕ್ಕಳ ಲಾಲನೆ ಪಾಲನೆಯ ಹೊಣೆ ಹೆತ್ತವರ/ರಕ್ಷಕರ ಮೇಲಿದೆ.

* ತಾತ್ಸಾರ ಹಾಗೂ ಅತಿ ದೂಷಣೆ ವಿರುದ್ಧ ರಕ್ಷಣೆ ಪಡೆಯುವ ಹಕ್ಕು ಮಕ್ಕಳಿಗಿದೆ.

* ವಿಕಲಾಂಗ ಮಕ್ಕಳಿಗೆ ವಿಶೇಷ ಆರೈಕೆಯ ಹಕ್ಕು ಇದೆ.

* ತೃಪ್ತಿಕರವಾದ ಜೀವನಮಟ್ಟವನ್ನು ಹೊಂದುವ ಹಕ್ಕು ಮಕ್ಕಳಿಗಿದೆ.

* ಆರ್ಥಿಕ ಶೋಷಣೆಯಿಂದ ಮುಕ್ತಿ ಪಡೆಯುವ ಹಕ್ಕು ಇದೆ.

* ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ಇದೆ.

* ಅಪಹರಣ, ಮಾರಾಟ, ಸಾಗಣೆ ಅಥವಾ ಇನ್ನಿತರ ಶೋಷಣಾತ್ಮಕ ಕ್ರಮಗಳ ವಿರುದ್ಧ ರಕ್ಷಣೆ ಪಡೆವ ಹಕ್ಕು ಇದೆ.

* ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಮಕ್ಕಳನ್ನು ಸತಾಯಿಸುವಂತಿಲ್ಲ . ಹಿಂಸೆ, ದಬ್ಬಾಳಿಕೆ ಹಾಗೂ ಶರೀರದಂಡನೆ ಮಾಡುವ ಹಾಗಿಲ್ಲ.

* ಸಂದರ್ಭಾನುಸಾರ ಕಾನೂನಿನ ನೆರವು ಪಡೆಯುವ ಹಕ್ಕಿದೆ .

ಅನೇಕ ದೇಶಗಳಲ್ಲಿ ಮಕ್ಕಳಿಗೆ ಮತದಾನದ ಹಕ್ಕಿಲ್ಲ; ವಿವಾಹದ ಹಕ್ಕಿಲ್ಲ.  ಬೀಡಿ-ಸಿಗರೇಟು ಸೇದುವ, ಮದ್ಯಪಾನಮಾಡುವ ಹಕ್ಕಿಲ್ಲ. ಉದ್ದೀಪನಕಾರಿ ವಸ್ತುಗಳನ್ನು ಅವರಿಗೆ ಮಾರಾಟ ಮಾಡಕೂಡದು ಎಂಬ ನಿರ್ಬಂಧವಿದೆ. ವಿವಾಹಪೂರ್ವ ಲೈಂಗಿಕ ಸಂಪರ್ಕ ನಿಷಿದ್ಧ. ಅಂತೆಯೇ ಸಂಪಾದನೆ ತರುವ ಉದ್ಯೋಗವೂ ಕೂಡದು.

ಹೆತ್ತವರು ಮಕ್ಕಳ ಬದುಕಿನ ಮೇಲೆ ವಿಶಿಷ್ಟವಾದ ಪ್ರಭಾವ ಬೀರುತ್ತಾರೆ.  ಹೀಗಾಗಿ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಅವರ ಪಾತ್ರವನ್ನೂ ಪರಿಗಣಿಸಬೇಕು.  ಮುಖ್ಯವಾಗಿ ಮಗು ಪಾಲಕ ಸಂಬಂಧದಲ್ಲಿ ಮಗುವನ್ನು ತಾತ್ಸಾರದಿಂದ ನೋಡುವುದು, ಮಗುವಿನ ದೂಷಣೆ, ಆಯ್ಕೆಯ ಸ್ವಾತಂತ್ಯ್ರ ನಿರಾಕರಣೆ. ಶರೀರದಂಡನೆ ಹಾಗೂ ಮಗುವಿನ ರಕ್ಷಣೆ ಇತ್ಯಾದಿ ಸಮಸ್ಯೆಗಳು ಮುಖ್ಯವಾಗುತ್ತವೆ. ತಂದೆತಾಯಿ ಇಬ್ಬರ ಜೊತೆ ಮಕ್ಕಳು ಉತ್ತಮ ಸಂಬಂಧ ಹೊಂದಿರಬೇಕು. ಮಗುವಿಗೆ ಇಬ್ಬರೂ ಬೇಕು ಎಂಬುದೊಂದು ಹಕ್ಕು ವಿಚ್ಛೇದನ ಅಥವಾ ಮಗುವಿನ ಕಸ್ಟಡಿ ಇತ್ಯಾದಿ ವಿಷಯಗಳಲ್ಲಿ ಈ ಅಂಶಕ್ಕೆ ವಿಶೇಷ ಮಹತ್ತ್ವ ನೀಡಲಾಗಿದೆ. ಏಕೆಂದರೆ ಮಕ್ಕಳ ವಿಕಾಸದ ದೃಷ್ಟಿಯಿಂದ ಸಹಭಾಗಿತ್ವದ ಪಾಲನೆಗೆ ಎಲ್ಲಿಲ್ಲದ ಮಹತ್ವವಿದೆ.

ಮಕ್ಕಳ  ಹಕ್ಕುಗಳ ಬಗ್ಗೆ ಸಾಂಪ್ರದಾಯಿಕ ಸಮಾಜಗಳಲ್ಲಿ ಬಹಳ ಹಿಂದಿನಿಂದಲೂ ವಿರೋಧವಿದೆ . ಮಕ್ಕಳ ಪ್ರಪಂಚ ಬೇರೆ; ದೊಡ್ಡವರ ಪ್ರಪಂಚ ಬೇರೆ. ಮಕ್ಕಳು ದೊಡ್ಡವರಂತೆ ವ್ಯವಹರಿಸಬಾರದು. ಜವಾಬ್ದಾರಿ ಪ್ರಜ್ಞೆ ಹಾಗೂ ಬಾಧ್ಯತೆಗಳಿಲ್ಲದ, ಪರಾವಲಂಬಿಗಳಾದ ಅವರಿಗೆ ಹಕ್ಕುಗಳನ್ನು ನೀಡಕೂಡದು ಎಂಬುದೊಂದು ವಾದ. ಬಾಲ್ಯವೆಂಬುದು ಮುಗ್ಧತೆಯ ಪ್ರತೀಕ.  ಜವಾಬ್ದಾರಿರಹಿತವಾದ ಸ್ವತಂತ್ರ ಅವಧಿ. ಆಟಗಳಿಂದ ತುಂಬಿದ, ಸಂಘರ್ಷಗಳಿಲ್ಲದ ಬದುಕು ಎಂಬುದಾಗಿ ವಯಸ್ಕ ಪ್ರಾಬಲ್ಯದ ಸಮಾಜ ಭಾವಿಸುತ್ತದೆ. ಸರಕಾರಗಳೂ ೧೯೮೯ಕ್ಕೆ ಹಿಂದೆ ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿವೆ.  ಆದರೆ ೧೯೮೯ ರಲ್ಲಿ ಮಕ್ಕಳ ಹಕ್ಕುಗಳ ವಿಶ್ವಸಮಾವೇಶ ನೆರವೇರಿ ಅಲ್ಲಿ ಹೊರಡಿಸಿದ ಘೋಷಣೆಗೆ ವಿಶ್ವಸಂಸ್ಥೆಯ ೧೯೧ ಸದಸ್ಯ ರಾಷ್ಟ್ರಗಳು ಸಹಿಹಾಕಿದವು. ಆ ಬಳಿಕ ಈ ರಾಷ್ಟ್ರಗಳಲ್ಲಿ ಮಕ್ಕಳ ಹಕ್ಕುಗಳ ಸ್ಥಾಪನೆ-ಸಂರಕ್ಷಣೆ ಸರಕಾರಗಳ ಜವಾಬ್ದಾರಿಯಾಗಿ ಪರಿಣಮಿಸಿತು.

ಮಕ್ಕಳ ಹಕ್ಕುಗಳ ಸ್ಥಾಪನೆಯ ವಿಷಯದಲ್ಲಿ ಶಾಲೆಯ ಪಾತ್ರವೇನು?

* ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಗೌರವದಿಂದ ಕಾಣಬೇಕು. ಅವರನ್ನು ಹಿಂಸಿಸಬಾರದು. ಪೀಡಿಸಕೂಡದು. ಲೈಂಗಿಕ ಶೋಷಣೆ ಮಾಡಕೂಡದು. ಶಿಕ್ಷೆಯ ನೆಪದಲ್ಲಿ ಕೋಣೆಯಲ್ಲಿ ಕೂಡಿಹಾಕುವುದು, ತರಗತಿಯಿಂದ ಹೊರಗೆ ದಬ್ಬುವುದು , ಹುಡುಗರನ್ನು ಹುಡುಗಿಯರ ಕಾಲ ಬಳಲಿ ಕುಳ್ಳಿರಿಸುವುದು – ಇಂಥ ಅಮಾನುಷ ಕೃತ್ಯಗಳನ್ನು  ಮಾಡಬಾರದು.

* ಮಕ್ಕಳ ಅಭಿ‌ವ್ಯಕ್ತಿಗೆ ಮುಕ್ತ ಅವಕಾಶಗಳಿರಬೇಕು. ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಅವರನ್ನು ಪಾಲುದಾರರೆಂಬಂತೆ ಪರಿಗಣಿಸಬೇಕು. ಅವರ ಅಭಿಪ್ರಾಯಗಳನ್ನು ಸ್ವಾಗತಿಸಿ ಗೌರವಿಸಬೇಕು.

* ಯಾವುದೇ ಒಂದು ಜಾತಿ, ಮತ. ಭಾಷೆಯ ಮಕ್ಕಳ ಇಗೆ ವಿಶೇಷ ಪ್ರಾಶಸ್ತ್ಯ ನೀಡದೆ ಎಲ್ಲ ಮಕ್ಕಳನ್ನೂ ಸರ್ವಸಮಭಾವದಿಂದ ಶಿಕ್ಷಕರು ನೋಡಬೇಕು.

* ಕಲಿಕೆಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸರಕಾರಗಳು ಒದಗಿಸುವ ಸವಲತ್ತುಗಳು ಸಿಗುವಂತೆ ನೋಡಿಕೊಳ್ಳಬೇಕು..

* ಮಕ್ಕಳ ಘನತೆ-ಗೌರವಗಳನ್ನು ಶಾಲೆ ಕಾಪಾಡಬೇಕು. ಯಾವುದೇ ವಿದ್ಯಾರ್ಥಿಯನ್ನು ಆತನ ಜಾತಿಯ ಹೆಸರಿನಿಂದ, ಅಡ್ಡಹೆಸರಿನಿಂದ ಕರೆಯಕೂಡದು. ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಅಪಮಾನಿಸಬಾರದು.

* ಮಕ್ಕಳ ಅಹವಾಲು, ದೂರು, ಮನವಿ ಇತ್ಯಾದಿಗಳಿಗೆ ವಿಶೇಷ ಗಮನ ನೀಡಬೇಕು. ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳು ಹಾಗೂ ಹಕ್ಕುಗಳುಳ್ಳವರು ಎಂದು ತಿಳಿದು ಗೌರವ ನೀಡಬೇಕು.

* ೨೦೦೦ರ ಶಿಕ್ಷಣದ ಹಕ್ಕು ಮಸೂದೆ ಪ್ರಕಾರ ಮಕ್ಕಳನ್ನು ದೈಹಿಕವಾಗಿ ದಂಡಿಸಕೂಡದು. ಶಾಲೆಗಳಲ್ಲಿ ದೇಹದಂಡನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

* ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಕೊನೆಯದಾಗಿ, ಶಾಲಾ ವಾತಾವರಣ ಭಯಮುಕ್ತವಾಗಿರಬೇಕು. ಮಕ್ಕಳ ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸಡುವ, ಎಲ್ಲ ಮಕ್ಕಳಿಗೆ ಗೌರವ ನೀಡುವ ವಾತಾವರಣವನ್ನು ಪ್ರತಿ ಶಾಲೆಯಲ್ಲೂ  ರೂಢಿಸಬೇಕು.

`How Children Learn’, `How Children Fail’ ಮೊದಲಾದ ಕೃತಿಗಳ ಮೂಲಕ ಜನಪ್ರಿಯನಾದ ಚಿಂತಕ ಜಾನ್‌ ಹೋಲ್ಟ್‌ ‘ಎಸ್ಕೇಪ್‌ ಫ್ರಂ ಚೈಲ್ಡ್‌ಹುಡ್‌’ ಕೃತಿಯಲ್ಲಿ ಮಕ್ಕಳು ಹಾಗೂ ತರುಣರು ಅನುಭವಿಸಬೇಕಾದ ಕೆಲವೊಂದು ಹಕ್ಕುಗಳನ್ನು ಪಟ್ಟಿಮಾಡಿದ್ದಾರೆ. ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಇವುಗಳಲ್ಲಿ ಕೆಲವು ಅಗ್ರಾಹ್ಯವೆನಿಸಬಹುದಾದರೂ ಯೋಚಿಸಿ ನೋಡಲು ಅಡ್ಡಿಯಿಲ್ಲ.

೧. ಕಾನೂನಿನ ದೃಷ್ಟಿಯಲ್ಲಿ ವಯಸ್ಕರನ್ನು ನಡೆಸಿಕೊಂಡಷ್ಟೇ ಗೌರವದಿಂದ ಮಕ್ಕಳನ್ನು ನೋಡಿಕೊಳ್ಳುವ ಹಕ್ಕು.

೨. ಮತದಾನದ ಹಕ್ಕು ಹಾಗೂ ರಾಜಕೀಯ ಪ್ರಕ್ರಿಯೆಯಲ್ಲಿ ಪೂರಕವಾಗಿ ಪಾಲ್ಗೊಳ್ಳುವ ಹಕ್ಕು.

೩ . ತನ್ನ ಬದುಕು-ಕ್ರಿಯೆಗಳಿಗೆ ತಾನೇ ಜವಾಬ್ದಾರನಾಗುವ ಹಕ್ಕು.

೪. ದುಡಿದು ಸಂಪಾದಿಸುವ ಹಕ್ಕು.

೫. ಖಾಸಗಿತನದ ಹಕ್ಕು

೬. ಆರ್ಥಿಕ ಸ್ವಾತಂತ್ಯ್ರ ಹಾಗೂ ಜವಾಬ್ದಾರಿತ್ವದ ಹಕ್ಕು. ಸ್ವಂತ ಆಸ್ತಿ ಹೊಂದುವ, ಮಾರಾಟಮಾಡುವ, ಸಾಲ ಪಡೆಯುವ-ಕೊಡುವ ಹಕ್ಕು.

೭. ತನ್ನ ಶಿಕ್ಷಣವನ್ನು ತಾನೇ ಯೋಚಿಸಿ ನಿರ್ವಹಿಸುವ ಹಕ್ಕು.

೮. ಸ್ವಂತ ನೆಲೆಯಲ್ಲಿ ಪ್ರಯಾಣಮಾಡುವ, ಮನೆಯಿಂದ ದೂರ ಹೋಗಿ ತಂಗುವ ಹಕ್ಕು

೯.  ಕಾನೂನು ಪ್ರಕಾರ ವಯಸ್ಕರು ಏನು ಮಾಡುತ್ತಾರೋ ಅದನ್ನೆಲ್ಲ ಮಾಡುವ ಹಕ್ಕು.

೧೦. ತನ್ನ ತಂದೆತಾಯಿಗಳನ್ನು ಹೊರತುಪಡಿಸಿ ಇತರರನ್ನು ತನ್ನ ಪಾಲಕರನ್ನಾಗಿ ಆಯ್ದುಕೊಳ್ಳುವ ಹಾಗೂ ಕಾನೂನುಬದ್ಧವಾಗಿ ಅವಲಂಬಿಸುವ ಹಕ್ಕು.

ಹೋಲ್ಟ್‌ ಪ್ರತಿಪಾದಿಸುವ ಈ ಬಗೆಯ ಹಕ್ಕುಗಳು ವಿಘಟನೆಗೊಂಡ ಕುಟುಂಬ ವ್ಯವಸ್ಥೆಯ ಪಾಶ್ಚಾತ್ಯ ಜಗತ್ತಿಗೆ ಒಪ್ಪಿತವಾಗಬಹುದು. ಆದರೆ ನಮ್ಮ ದೇಶದ ಸಂದರ್ಭದಲ್ಲಿ ಅನುಷ್ಠಾನಕ್ಕೆ ಬರುವುದು ಸುಲಭವಲ್ಲ. ಏಕೆಂದರೆ ಈ ಬಗೆಯ ಹಕ್ಕುಗಳು ಕಾನೂನು, ಸಂಪ್ರದಾಯ ಹಾಗೂ ಮನೋಭಾವಗಳಿಗೆ ಸಂಬಂಧಪಟ್ಟ ಸಂಗತಿಗಳು. ನಮ್ಮ ದೇಶದಲ್ಲಿ ವ್ಯಾಪಕ ಬಡತನವಿದ್ದರೂ ಮಕ್ಕಳು ದುಡಿಯಬಾರದು ಅಥವಾ ಅವರನ್ನು ದುಡಿಸಬಾರದು ಎಂಬ ನೆಲೆಯಲ್ಲಿ ಬಾಲಕಾರ್ಮಿಕ ನಿಷೇದ ಕಾಯ್ದೆ ಜಾರಿಗೆ ತಂದಿದ್ದೇವೆ. ಬದಲಾವಣೆ ಆಗಬೇಕೆಂದರೆ ಒಂದು ಬಗೆಯ ಗಟ್ಟಿಯಾದ ರಾಜಕೀಯ ನಿರ್ಧಾರವೇ ಬೇಕಾದೀತು ಅಥವಾ ನ್ಯಾಯಾಲಯದ ತೀರ್ಪು ಹೊರಬೀಳಬೇಕಾದೀತು. ವಯಸ್ಕರ ಕೆಲವೊಂದು ಹಕ್ಕುಗಳು ನಿರಾಕರಿಸಲ್ಪಡುತ್ತಿರುವಾಗ ಮಕ್ಕಳಿಗೆ ಹಕ್ಕುಗಳನ್ನು ಒದಗಿಸುವ ಉತ್ಸಾಹ ಬಂದೀತು ಹೇಗೆ?

ಬದಲಾವಣೆಗಳು ಆಕಾಶದಿಂದ ಉದುರುವುದಿಲ್ಲ.  ಶೂನ್ಯದಲ್ಲಿ ರೂಪುಗೊಳ್ಳುವುದಿಲ್ಲ. ದಿಢೀರನೆ ಕಾಣಿಸಿಕೊಳ್ಳುವುದಿಲ್ಲ. ಅದೊಂದು ಪ್ರಕ್ರಿಯೆ . ಸಣ್ಣ ಸಣ್ಣ ಹೆಜ್ಜೆ-ಉಪಕ್ರಮಗಳ ಮೂಲಕ ಗುರಿಯತ್ತ ಸಾಗಬೇಕಾದ ಕ್ರಿಯೆ. ಬಾಲ್ಯವಿವಾಹ , ಸತಿಪದ್ಧತಿ ಮುಂತಾದ ಅನಾಗರಿಕ ಕ್ರಮಗಳನ್ನು ಹಂತಹಂತವಾಗಿ ಹೋರಾಟ          ದ ಮೂಲಲಕ ಹೋಗಲಾಡಿಸದಂತೆ ಮಕ್ಕಳ ಹಕ್ಕುಗಳ ಅನುಷ್ಠಾನ ಕೂಡ ಅಭಿಯಾನ ಹಾಗೂ ಸಂಘಟಿತ ಹೋರಾಟಗಳ ಮೂಲಕವೇ ಆಗಬೇಕು.

ಕಂದಾಚಾರಗಳನ್ನು ಬದಲಾಯಿಸುವುದು ಹಳೆ ಅಂಗಿ ಕಳಚಿ ಹೊಸ ಅಂಗಿ ಹಾಕಿಕೊಂಡಷ್ಟು ಸುಲಭವಲ್ಲ. ಜನ ಸಾಮಾನ್ಯವಾಗಿ ಎರಡು ಬಗೆಯಲ್ಲಿ ಬದಲಾವಣೆಗಳಿಗೆ ಪ್ರತಿಕ್ರಿಯೆ ಸೂಚಿಸುತ್ತಾರೆ: ೧) ಇದೆಲ್ಲ ಹುಚ್ಚು ಯೋಚನೆಗಳು. ‘ಆಪುದಲ್ಲ ಹೋಪುದಲ್ಲ’. ೨) ಇದು ನನಗೆ ಮೊದಲೇ ಗೊತ್ತಿತ್ತು. ಇದರಲ್ಲಿ ಹೊಸತೇನೂ ಇಲ್ಲ. ಹೊಸ ಬಾಟ್ಲಿಯಲ್ಲಿ ಹಳೆಯ ಮದ್ಯ. ನಮ್ಮ ಮನಃಸ್ಥಿತಿಗೆ, ಮಾನಸಿಕ ಸಂರಚನೆಗೆ ಒಗ್ಗದಿರುವುದನ್ನು ನಾವು ವಿಚಿತ್ರ, ಅಪಾಯಕಾರಿ , ಅಸಾಧ್ಯ ಎಂದು ತಿರಸ್ಕರಿಸುತ್ತೇವೆ.  ಬದಲಾವಣೆಗಳು ಹೀಗೆಯೇ ಆಗುತ್ತವೆ ಎಂದು ಹೇಳಲಾಗದು. ಆದರೆ ನಾವೊಂದು ಸಂತಸದ ಸಮಾಜ ನಿರ್ಮಾಣ ಮಾಡುವುದೇ ಆದ ಪಕ್ಷದಲ್ಲಿ, ಜನ ಜವಾಬ್ದಾರಿ ಹಾಗೂ ಆನಂದದಿಂದ ಬದುಕುವುದೇ ಆದ ಪಕ್ಷದಲ್ಲಿ ನಾವು ನಮ್ಮ ಆಲೋಚನೆಗಳನ್ನು, ಕ್ರಿಯೆಗಳನ್ನು ‘ಭಿನ್ನವಾದ’ ರೀತಿಯಲ್ಲಿ ಮಾಡಬೇಕಾಗುತ್ತದೆ. ಏನು ಸಾಧ್ಯ ಎಂಬುದರ ಬಗ್ಗೆ ಹೆಚ್ಚು ಚಿಂತಿಸದೆ ಮಾಡಬಹುದಾದುದನ್ನು ಕೂಡಲೆ ಮಾಡಿ ಮುಗಿಸಬೇಕು.