ಬಹಳ ವರ್ಷಗಳ ಹಿಂದೆ ನನ್ನ ಓರ್ವ ಪರಿಚಿತರು ಅಮೇರಿಕೆಯಿಂದ ನಮ್ಮ ಮನೆಗೆ ಬಂದರು. ತಮ್ಮ ಹುಟ್ಟೂರಿನ ಶಾಲೆಯ ಮಕ್ಕಳಿಗೆ ಯಾವುದಾದರೊಂದು ರೀತಿಯಲ್ಲಿ ತಾವು ನೆರವಾಗಬೇಕು ಎಂಬುದು ಅವರ ಇಚ್ಛೆ. ಇಲ್ಲಿನ ಮಕ್ಕಳ ಇಂಗ್ಲಿಷ್‌ ಕಲಿಕೆಯನ್ನು ಸುಧಾರಿಸಬೇಕು. ಅದಕ್ಕಾಗಿ ಒಂದು ಶಾಲೆಯನ್ನು ಆಯ್ದುಕೊಂಡು ಆ ಶಾಲೆಗೆ ಇಂಗ್ಲಿಷ್‌ ಪುಸ್ತಕಗಳನ್ನು ಒದಗಿಸಬೇಕು. ಪ್ರತಿನಿತ್ಯ ಶಾಲೆಯಲ್ಲಿ ಅನೌಪಚಾರಿಕವಾಗಿ ಇಂಗ್ಲಿಷ್‌ ಕಲಿಸುವ ವ್ಯವಸ್ಥೆಯಾಗಬೇಕು. ಇಂಗ್ಲಿಷ್‌ ಕಲಿಸುವ ಶಿಕ್ಷಕರಿಗೆ ಪ್ರತಿತಿಂಗಳು ಒಂದಿಷ್ಟು ಗೌರವಧನ ನೀಡಬೇಕು. ಎಂಬುದು ಅವರ ಯೋಚನೆ. ಅದಕ್ಕಾಗಿ ಇಲ್ಲಿನ ಕೆಲವರ ಜೊತೆ ಯಾವ ಬಗೆಯ ಶಿಕ್ಷಣ ಅಗತ್ಯ? ಕನ್ನಡ-ಆಂಗ್ಲಮಾಧ್ಯಮ ವಿವಾದ ಇತ್ಯಾದಿಗಳ ಕುರಿತು ಮಾತನಾಡಿ ಆ ಮಾತುಕತೆಯ ಧ್ವನಿಮುದ್ರಣ ಮಾಡಿಕೊಂಡು ಅಮೇರಿಕೆಯಲ್ಲಿ ಒಂದಿಷ್ಟು ನಿಧಿ ಸಂಗ್ರಹಿಸಿ ಅದರ ಮೂಲಕ ಶಾಲೆಯಲ್ಲಿ ಇಂಗ್ಲಿಷ್‌ ಶಿಕ್ಷಣ ಒದಗಿಸುವ ಯೋಜನೆ ಅವರದ್ದು.

ರಾಮ್‌ ಎಂಬುದು ಅವರ ಹೆಸರು. ಅವರು ನಮ್ಮ ಮನೆಗೆ ಬಂದು ನನ್ನೊಂದಿಗೆ, ನನ್ನ ಮಡದಿಯೊಂದಿಗೆ ಮಾತನಾಡಿ ನಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ನಾನೋ ಕನ್ನಡಮಾಧ್ಯಮ ಪರ. ನನ್ನ ಮಡದಿಯೋ ಆಂಗ್ಲಮಾಧ್ಯಮ ಪರ. ನಾವಿಬ್ಬರೂ ನಮ್ಮ ನಮ್ಮ ಸಮರ್ಥನೆಗಳನ್ನು ನೀಡಿದೆಗವು. ನಮ್ಮಿಬ್ಬರ ಮಾತುಗಳಲ್ಲೂ ನಿಜವಿದೆ. ಹೀಗಗಿ ನಿರ್ಣಯ ಹೀಗೇ ಎನ್ನುವುದು ಕೊಂಚ ಕಷ್ಟವೆನಿಸಿತು. ಆಗ ರಾಮ್‌ ದೃಷ್ಟಿ ನನ್ನ ಪುಟ್ಟ ಮಗಳ ಮೇಲೆ ಬಿತ್ತು. ಅವಳು ಆಗ ‘ಬಾಲವಾಡಿ’ಗೆ (ನರ್ಸರಿ, ಮೊಂಟೆಸಾರಿ ಇತ್ಯಾದಿ ಅಲ್ಲ) ಹೋಗುತ್ತಿದ್ದಳು. “ನಿನಗೆ ಯಾವ ಶಾಲೆ ಇಷ್ಟ? ಕನ್ನಡ ಮಾಧ್ಯಮವೋ? ಇಂಗ್ಲಿಷ್‌ ಮೀಡಿಯಮ್ಮೋ?” ಎಂದು ರಾಮ್‌ ಕೇಳಿದರು. ಮಗಳು ಪಟ್ಟನೆ “ನನಗೆ ಕನ್ನಡ ಶಾಲೆಯೇ ಇಷ್ಟ. ಒಂದನೇ ಕ್ಲಾಸಿಗೆ ನಾನು ಕಡಿಯಾಳಿ ಶಾಲೆಗೇ ಹೋಗುವುದು”  ಎಂದುಬಿಟ್ಟಳು. ಮುಂದೆ ಅವಳನ್ನು ನಾನು ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದೆ. ನನ್ನ ಮಡದಿಯೂ ಆಕ್ಷೇಪಿಸಲಿಲ್ಲ. ಆದರೆ ಐದನೆಯ ತರಗತಿಗೆ ಬರುವ ಹೊತ್ತಿಗೆ ನನ್ನ ಮಡದಿ ಆಂಗ್ಲಮಾಧ್ಯಮ ಶಿಕ್ಷಣದ ಬಗ್ಗೆ ಪ್ರಬಲ ಪ್ರತಿಪಾದನೆ ಶುರುಮಾಡಿದಳು: “ಮುಂದೆ ಕಷ್ಟ. ನಾನು ಅಪಮಾನ ಅನುಭವಿಸುತ್ತಿದ್ದುದು ಸಾಕು. ನನ್ನ ಮಗಳಿಗೆ ಅದು ಬೇಡ’ ಇತ್ಯಾದಿ . ನಾನು ಓರ್ವ ಶಿಕ್ಷಣಶಾಸ್ತ್ರಜ್ಞ, ಶಿಕ್ಷಣ ಪ್ರಾಧ್ಯಾಪಕ ಇತ್ಯಾದಿಗಳೆಲ್ಲ ಅವಳ ತರ್ಕದ ಮುಂದೆ ಕೊಚ್ಚಿಹೋದವು. ಇತ್ತ ಮಗಳ ಒಲವು ಕನ್ನಡಮಾಧ್ಯಮದಲ್ಲೇ ಮುಂದುವರಿಯಬೇಕೆಂದಿದ್ದರೂ ಒಂದೆಡೆಯಲ್ಲಿ  ತಾಯಿಯ ಮಾತು, ಮತ್ತೊಂದೆಡೆ ಅವಳ ಗೆಳತಿಯರ ಆಂಗ್ಲಮಾಧ್ಯಮದ ಒಲವು-ಕ್ರಮೇಣ ಅವಳು ‘ಪಕ್ಷಾಂತರ’ ಮಾಡುವುದಕ್ಕೂ ಸಹಕರಿಸಿತು.

ಏಳನೆಯ ತರಗತಿಯ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆ “ನಾನು ಇಂಗ್ಲಿಷ್‌ ಮೀಡಿಯಂ ಶಾಲೆಗೆ ಹೋಗ್ತೇನೆ. ನನ್ನ ಗೆಳತಿಯರೆಲ್ಲ ಹಾಗೆ ಮಾಡ್ತಿದ್ದಾರೆ” ಎಂದಳು. ಅವಳ ಮಾತನ್ನು ನಾನು ತೆಗೆದುಹಾಕುವಂತಿರಲಿಲ್ಲ. ಮೇಲಾಗಿ ಬುದ್ಧಿವಂತ ವಿದ್ಯಾರ್ಥಿನಿ. ಜಿಲ್ಲಾಮಟ್ಟದಲ್ಲಿ ಮೊದಲಸ್ಥಾನ ಗಳಿಸಿದಾಕೆ. ಕಲಿಯುವ ಶ್ರದ್ಧೆ, ಬುದ್ಧಿಶಕ್ತಿ, ಗ್ರಹಿಕೆಯ ಶಕ್ತಿಯಿದ್ದರೆ ಮಾಧ್ಯಮ ಖಂಡಿತಕ್ಕೂ ಸಮಸ್ಯೆಯಲ್ಲ. ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಾತ್ರಕ್ಕೆ ಕನ್ನಡ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮರೆಯಬೇಕೆಂದೇನೂ ಇಲ್ಲ. ಅಷ್ಟರೊಳಗಾಗಿ ಭದ್ರಬುನಾದಿ ಹಾಕಿಟ್ಟರೆ ಮುಂದೆ ಸಮಸ್ಯೆಯೇನಿಲ್ಲ ಎಂದು ಭಾವಿಸಿ ನಾನೂ ಒಪ್ಪಿಗೆ ನೀಡಿದ್ದಾಯಿತು. ಆಮೇಲೆ ಆಕೆ ಹಿಂತಿರುಗಿ ನೋಡಿದ್ದಿಲ್ಲ. ಇಂಗ್ಲಿಷ್‌ ಮಾಧ್ಯಮದಲ್ಲೂ ಚುರುಕಾದಳು. ಆಮೇಲೆ ಆಕೆ ಹಿಂತಿರುಗಿ ನೋಡಿದ್ದಿಲ್ಲ. ಇಂಗ್ಲಿಷ್‌ ಮಾಧ್ಯಮದಲ್ಲೂ ಚುರುಕಾದಳು. ಕನ್ನಡವನ್ನು ಬೆಳೆಸಿಕೊಂಡಳು. ಪದವಿಪೂರ್ವ ಹಂತದ ಪಬ್ಲಿಕ್‌ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದಳು! ಅವಳು ಎಸ್‌.ಎಸ್‌.ಎಲ್‌.ಸಿವರೆಗೆ ಕನ್ನಡಮಾಧ್ಯಮದಲ್ಲೇ ಓದಿದ್ದರೆ ಪದವಿಪೂರ್ವ ಹಂತದ ವಿಜ್ಞಾನ ಕಲಿಕೆಯ ವೇಳೆ ಸ್ವಲ್ಪ ಕಷ್ಟಪಡಬೇಕಾಗುತ್ತಿತ್ತು . ವಿಶೇಷ ಮನೆಪಾಠದ ಅಗತ್ಯವಿರುತ್ತಿತ್ತೇನೋ. ಆದರೆ ಎಂಟನೆಯ ತರಗತಿಯಿಂದ ಕನ್ನಡವನ್ನು ಕಡೆಗಣಿಸದೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಪಡೆದದ್ದು ಪದವಿಪೂರ್ವ ಹಂತದಲ್ಲಿ ವಿಜ್ಞಾನ ಕಲಿಕೆಗೆ ನೆರವಾಯಿತೆನ್ನಬೇಕು.

ಇಷ್ಟೆಲ್ಲ ಪೀಠಿಕೆ ಏಕೆಂದರೆ ಮಕ್ಕಳು ಹಾಗೂ ಹದಿಹರೆಯದವರಿಗೆ ತಮ್ಮ ಕಲಿಕೆ ಹಾಗೂ ವಿದ್ಯಾಭ್ಯಾಸವನ್ನು ರೂಪಿಸುವ, ನಿಯಂತ್ರಿಸುವ ಒಂದು ಹಕ್ಕು ಇರಬೇಕು. ತಾವು ಏನನ್ನು, ಯಾವಾಗ,  ಎಲ್ಲಿ, ಹೇಗೆ, ಎಷ್ಟು ಕಲಿಯಬೇಕು? ಎಷ್ಟು ವೇಗವಾಗಿ ಕಲಿಯಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಅವರಿಗಿರಬೇಕು. ಯಾವ ಶಾಲೆಯಲ್ಲಿ, ಎಂಥ ಶಿಕ್ಷಕರಿಂದ ಕಲಿಯಬೇಕು ಎಂದು ತೀರ್ಮಾನಿಸುವ ಹಕ್ಕು ಅವರಿಗೆ ಅವಶ್ಯವಾಗಿ ಬೇಕು.

ಇಂದು ಬಹಳಷ್ಟು ಕುಟುಂಬಗಳಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನು ನಿಯಂತ್ರಿಸುವವರು ಪಾಲಕರು. ಮಗುವಿನ ಆಸಕ್ತಿ ಅಭಿರುಚಿಗಳೇನು? ಶಕ್ತಿ ಸಾಮರ್ಥ್ಯಗಳೇನು? ಬುದ್ಧಿಶಕ್ತಿ, ಭಾಷಾಶಕ್ತಿ ಹೇಗಿದೆ? ಎಂಬುದರ ಪರಿವೆಯೇ ಇಲ್ಲದ ತಂದೆತಾಯಿಗಳು ತಮ್ಮ ಕನಸಗುಳನ್ನು ಮಕ್ಕಳ ಮೇಲೆ ಹೇರುತ್ತಾರೆ. “ನನಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಲಿಲ್ಲ. ನನ್ನ ಮಗನಾದರು ಚೆನ್ನಾಗಿ ಓದಲಿ. ಅವನು ನನ್ನ ಹಾಗೆ ಆಗುವುದು ಬೇಡ” ಎಂದು ಯೋಚಿಸಿ ಮಗುವಿನ ಇಷ್ಟಾನಿಷ್ಟಗಳನ್ನು ತಿಳಿಯದೆ ಬಲಾತ್ಕಾರವಾಗಿ ಆಂಗ್ಲಮಾಧ್ಯ ಶಾಲೆಗಳಿಗೆ ಸೇರಿಸಿಬಿಡುತ್ತಾರೆ. ಕನ್ನಡವೇ ಸರಿಯಾಗಿಬಾರದ ಮಗು ಇಂಗ್ಲಿಷ್‌ ಕಲಿಯಲು ಒದ್ದಾಡುತ್ತದೆ. ಶಾಲೆಗಳಲ್ಲಿ ಕೊಡುವ ಅಸಾಧ್ಯ ಹೋಂವರ್ಕ್ ಮಾಡಲಾಗದೆ ನಲುಗುತ್ತದೆ. ಆಟಕ್ಕೂ ಹೋಗಲು ಬಿಡದೆ ತಾಯಿ ಹೋಂವರ್ಕ್ ಮಾಡಿಸುತ್ತಾಳೆ. ಮತ್ತೆ ಬಲವಂತದ ಟ್ಯೂಶನ್‌. ಬೆಳಗ್ಗಿನಿಂದ ರಾತ್ರಿಯತನಕ ಈ ಆಂಗ್ಲಮಾಧ್ಯಮದ ಒತ್ತಡದಲ್ಲಿ ಸಿಲುಕಿ ಅನೇಕ ಮಕ್ಕಳು ಹತಾಶರಾಗುತ್ತಿದ್ದಾರೆ. ನಮ್ಮ ಆಸೆ ಆಕಾಂಕ್ಷೆಗಳಿಗಾಗಿ ನಾವು ಮಕ್ಕಳನ್ನು ಕೊಲ್ಲುತ್ತಿದ್ದೇವೆ.

ಆಂಗ್ಲಮಾಧ್ಯಮ ಒಂದು ತುದಿಯಾದರೆ ಇನ್ನೊಂದು ತುದಿ ಸಾಂಪ್ರದಾಯಿಕ ಸನಾತನ ವೈದಿಕ ಶಿಕ್ಷಣ.ಇಸ್ಲಾಮಿಕ್‌ ಶಿಕ್ಷಣ. ಇಂದು ಕೆಲವು ಗುರುಕುಲಗಳು ಹುಟ್ಟಿಕೊಂಡಿವೆ. ಇಂಗ್ಲಿಷ್‌ ಶಿಕ್ಷಣವನ್ನು ವಿರೋಧಿಸುವ ಸಂಸ್ಕೃತಾಭ್ಯಾಸದ ಧಾರ್ಮಿಕ ಹಿನ್ನೆಲೆಯ ಶಿಕ್ಷಣವನ್ನು ಗಂಡುಹೆಣ್ಣುಗಳಿಗೆ ನೀಡಲಾಗುತ್ತಿದೆ. ಕೆಲವು ಹೆತ್ತವರು ತಮ್ಮ ಮಕ್ಕಳು ಇದನ್ನು ನಿಜಕ್ಕೂ ಬಯಸುವರೋ ಇಲ್ಲವೋ ಎಂಬುದನ್ನು ತಿಳಿಯದೆ ತಮ್ಮ ‘ಸಂಸ್ಕೃತಿ ವ್ಯಾಮೋಹ’ದಿಂದ ಇಂಥ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸುತ್ತಿದ್ದಾರೆ. ಆಧುನಿಕ ಪ್ರಪಂಚದಲ್ಲಿ ಮೌಲ್ಯಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ‘ಸಂಕುಚಿತ ಪ್ರಜೆ’ಗಳನ್ನಾಗಿ ರೂಪಿಸುವ ಹುನ್ನಾರವಿದು. ಹಿಂದೂ ಕೋಮುವಾದ ಪ್ರಬಲವಾಗುತ್ತಿರುವಂತೆ ಅದಕ್ಕೆ ಪ್ರತಿಯಾಗಿ ಇಸ್ಲಾಂ ಕೋಮುವಾದ ಈ ದೇಶದಲ್ಲಿ ಬೆಳೆಯುತ್ತಿದೆ. ಅದರ ಸೂಚನೆಯೆಂಬಂತೆ ಮುಸ್ಲಿಂ ಹುಡುಗ-ಹುಡುಗಿಯರು ಈಗ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಬರುವುದನ್ನು ನಿಲ್ಲಿಸುತ್ತಿದ್ದಾರೆ. ಅವರಿಗಾಗಿ ಅವರ ಕೋಮಿನವರು, ಜಮಾತೆಯವರು ಆಂಗ್ಲಮಾಧ್ಯಮ ಶಿಕ್ಷಣವನ್ನು ಆರಂಭಿಸುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ಆರಂಭಿಸುತ್ತಿದ್ದಾರೆ. ಈ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ನೀಡಲಾಗುತ್ತಿದೆ. ಶಿಕ್ಷಕ-ಶಿಕ್ಷಕಿಯರೂ ಅವರದ್ದೇ ಕೋಮಿನವರಾಗಿರುತ್ತಾರೆ. ಇದಲ್ಲದೆ ಮುಸ್ಲಿಂ ಮೂಲಭೂತವಾದ ಪ್ರಬಲವಾಗುತ್ತಿರುವ ಕಾರಣದಿಂದ ನಮ್ಮ ಊರುಗಳಲ್ಲಿ ‘ಲವ್‌ಜೆಹಾದ್‌’ನ ಅಪಪ್ರಚಾರ ನಡೆಯುತ್ತಿರುವಂತೆಯೇ ಹೆಚ್ಚು ಹೆಚ್ಚು ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾಗಳಲ್ಲಿ ಅಡಗಿಕೊಳ್ಳುತ್ತಿದ್ದಾರೆ. ಅವರಿಗಾಗಿಯೇ ಪ್ರತ್ಯೇಕ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಸಮಾಜವನ್ನು ಒಡೆಯುವ ವ್ಯವಸ್ಥೆ ವ್ಯವಸ್ಥಿತವಾಗಿ ಶಿಕ್ಷಣರಂಗದಲ್ಲೂ ಜಾರಿಗೆ ಬರುತ್ತಿದೆ.

ಮುಖ್ಯ ವಿಷಯವೇನೆಂದರೆ ಏನನ್ನು ಕಲಿಯಬೇಕು? ಯಾವ ಶಾಲೆಗೆ ಹೋಗಬೇಕು? ಹೇಗೆ ಕಲಿಯಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದವರು ಮಕ್ಕಳು. ತಮ್ಮ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಅವರು ಶಿಕ್ಷಣ ಪಡೆಯಬೇಕು. ಆ ಬಗೆಯ ಶಿಕ್ಷಣವನ್ನು ಒದಗಿಸುವ ಹೊಣೆ ಹೆತ್ತವರದ್ದು. ಆದರೆ ಉದ್ದಕ್ಕೂ ಮಕ್ಕಳಿಗೆ ಯಾವುದು ಹಿತ? ಯಾವುದು ಉತ್ತಮ ಎಂಬುದನ್ನು ದೊಡ್ಡವರು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ನಿರ್ಧರಿಸಿ ಮಕ್ಕಳ ತಲೆಯಮೇಲೆ ಹೊರಿಸುತ್ತಾರೆ. ಮಕ್ಕಳು ಬಾಯ್ಮುಚ್ಚಿಕೊಂಡು ಅನುಸರಿಸಬೇಕು. “ಅವ್ವಾ, ನನಗೆ ಶಾಲೆ ಇಷ್ಟವಿಲ್ಲ; ಅಪ್ಪಾ, ನನಗೆ ಸೈನ್ಸ್‌ ಬೇಡ.” “ಅಪ್ಪಾ, ನನಗೆ ಅಂಗಡಿ ಹಾಕ್ಕೊಡಿ. ನನಗೆ ಉನ್ನತ ಶಿಕ್ಷಣ ಬೇಡ” ಎಂದರೆ ಕೇಳುವವರು ಯಾರು? ತಂದೆತಾಯಿ ಚೆನ್ನಾಗಿ ಮಕ್ಕಳನ್ನು ಹಿಡ್ಕೊಮಡು ತದಕುತ್ತಾರೆ.

ಆಂಗ್ಲಮಾಧ್ಯಮ ಶಿಕ್ಷಣದ ಪರವಾಗಿ ಸರಕಾರದ ವಿರುದ್ಧ ವಾದಿಸುವವರೆಲ್ಲ ಮತ್ತೆ ಮತ್ತೆ ಎಳೆದು ತರುವ ವಿಚಾಋವೆಂದರೆ ಯಾವ ಮಾಧ್ಯಮದಲ್ಲಿ ಓದಬೇಕು ಎಂಬುದು ಮಗುವಿನ ಆಯ್ಕೆ. ಅದರಲ್ಲಿ ಸರಕಾರ ಮೂಗು ತೂರಿಸುವಂತಿಲ್ಲ; ಅಧಿಕಾರ ಚಲಾಯಿಸುವಂತಿಲ್ಲ. ಸರಿ, ಈ ವಾದ ಒಪ್ಪತಕ್ಕದ್ದೇ. ಆದರೆ ಮಗುವಿನ ಸಹಜ ಅಭಿವ್ಯಕ್ತಿಗೆ ಎಲ್ಲಿದೆ ಅವಕಾಶ? ಅವಕಾಶ ಕೊಡುತ್ತಿದ್ದೀರಾ ನೀವು ಮಗುವಿನ ಪರವಾಗಿ ತಂದೆತಾಯಿ ಆಂಗ್ಲಮಾಧ್ಯಮವೇ ಉತ್ತಮವೆಂದು ನಿರ್ಧಾರಮಾಡಿಬಿಡುತ್ತಾರೆ ಮತ್ತು ಅದನ್ನು ಮಗುವಿನ ತಲೆಯಲ್ಲಿ ತುಂಬಿಬಿಡುತ್ತಾರೆ. ನಿಜಕ್ಕೂ ಇಲ್ಲಿ ಮಗು ಏನನ್ನೂ ಆಯ್ಕೆಮಾಡುತ್ತಿಲ್ಲ. ಸರಕಾರಗಳ ಬಾಯಿಮುಚ್ಚಿಸಲು ಪಾಲಕರು ಹಾಗೂ ಲಾಭಕೋರ ಶಿಕ್ಷಣ ಆಡಳಿತ ಮಂಡಳಿಗಳು ಮುಂದುಮಾಡುವ ವಾದವಿದು.

‘ನನಗೆ ಆಂಗ್ಲಮಾಧ್ಯಮವೇ ಬೇಕು’ ಎಂದು ನಿಜವಾಗಿಯೂ ಹೃದಯಾಂತರಾಳದಿಂದ ಹೇಳುವ ಮಗು ಖಂಡತಿ ಕಷ್ಟಪಟ್ಟು ಕಲಿಯುತ್ತದೆ. ಜವಾಬ್ದಾರಿ ಅರಿತು ಕಲಿಕೆಯಲ್ಲಿ ಮುಂದೆ ಸಾಗುತ್ತದೆ. ತನ್ನ ಆಯ್ಕೆಗೆ ತಕ್ಕಂತೆ ಸಂತಸದಿಂದ ಮುಂದುವರಿಯುತ್ತದೆ. ಒತ್ತಾಯ, ಒತ್ತಡದಲ್ಲಿ ಕಲಿಯುವ ಮಕ್ಕಳಿಗೆ ಆಯ್ಕೆಗಳೇ ಇಲ್ಲ ಎಂಬುದನ್ನು ಗಮನಿಸಬೇಕು.

ಶಾಲಾಶಿಕ್ಷಣದ ವಿಷಯಕ್ಕೆ ಬಂದರೆ ಇಂದು ನಾವು ಶಿಶುಕೇಂದ್ರಿತ, ಶಿಶು ನಿಯಂತ್ರಿತ ಶಿಕ್ಷಣ ಕ್ರಮವನ್ನು ಅಳವಡಿಸಿದ್ದೇವೆ. ಆದರೆ ಈ ಶಿಕ್ಷಣ ಪರೀಕ್ಷಾಕೇಂದ್ರಿತವೂ ಬಾಯಿಪಾಠ ಆಧಾರಿತವೂ ಜೀವನದೂರವೂ ಆಗಿದೆ. ಶಿಶುವೇ ಕೇಂದ್ರವಾಗಬೇಕು. ಶಿಶುವೇ ಕಲಿಕೆಯನ್ನು ನಿಯಂತ್ರಿಸಬೇಕು. ಆದರೆ ಎಲ್ಲವನ್ನೂ ಮೇಲಿನಿಂದ ಹೇರುವ ಪ್ರವೃತ್ತಿ ಇದೆ. ಮಗುವಿಗೆ ಈ ವ್ಯವಸ್ಥೆಯಲ್ಲಿ ಯಾವ ಸ್ವಾತಂತ್ಯ್ರವೂ ಇಲ್ಲ. ಹಾಗಿರುವಾಗ ಶಿಶುಕೇಂದ್ರಿತವಾಗುವುದು ಹೇಗೆ? ಏನನ್ನು ಕಲಿಯಬೇಕು? ಹೇಗೆ ಕಲಿಯಬೇಕು? ಯಾರಿಂದ ಕಲಿಯಬೇಕು? ಎಂಬುದನ್ನೆಲ್ಲ ಮಗುವಿನ ಮೇಲೆ ಹೇರಲಾಗುತ್ತದೆ. ಶಾಲಾಶಿಕ್ಷಣದಲ್ಲಿ ಎಲ್ಲಿಯೂ ಮಕ್ಕಳಿಗೆ ವಿಷಯಗಳ ಆಯ್ಕೆಗೆ ಅವಕಾಶವಿಲ್ಲ. ಎಲ್ಲವನ್ನೂ ಅವರು ಕಡ್ಡಾಯವಾಗಿ ಕಲಿಯಬೇಕು. ಕಲಿಯುವ ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೆ ‘ನಪಾಸು’- ನಿರುಪಯುಕ್ತ ಎಂಬ ಹಣೆಪಟ್ಟಿ ಹೊರಬೇಕು. ಬೈಗುಳ, ಪೆಟ್ಟು ಮತ್ತು ಅಪಮಾನಕ್ಕೆ ತುತ್ತಾಗಬೇಕು.

ಹಿಂದೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದಿ|| ಜೆ.ಎಚ್‌. ಪಟೇಲರು ಎಸ್‌.ಎಸ್‌.ಎಲ್‌.ಸಿ.ಪಾಸಾಗಲು ಇಂಗ್ಲಿಷ್‌ ವಿಷಯದಲ್ಲಿ ಉತ್ತೀರ್ಣತೆ ಅಥವಾ ಆ ವಿಷಯದಲ್ಲಿ ಪರೀಕ್ಷೆಗೆ ಕೂರುವುದು ಕಡ್ಡಾಯವಲ್ಲ ಎಂದು ಸಾರಿದ್ದರು. ಗ್ರಾಮೀಣ ಭಾಗದ ಅನೇಕ ಮಕ್ಕಳು ಶಾಲಾಹಂತದ ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷಿನಲ್ಲಿ ಅನುತ್ತೀರ್ಣರಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪರಿಸ್ಥಿತಿ ಎದುರಾಗುತ್ತಿರುವುದನ್ನು ಅವರು ಗಮನಿಸಿದ್ದರು. ಉನ್ನತ ಶಿಕ್ಷಣ ಬೇಕು ಎಂಬುವವರು ಇಂಗ್ಲಿಷಿನಲ್ಲಿ ಪಾಸಾಗುವುದು ಅಗತ್ಯ. ತಮ್ಮ ಹಳ್ಳಿಯಲ್ಲೇ ಏನೋ ಒಂದು ಕೆಲಸ ಮಾಡಿಕೊಂಡಿರುವ ಎಷ್ಟೋ ಮಂದಿಗೆ ಇಂಗ್ಲಿಷಿನ ಕೆಲವು ಶಬ್ದಗಳು ಗೊತ್ತಿದ್ದರೆ ಸಾಕು. ಆ ವಿಷಯದಲ್ಲಿ ಪಾಸಾಗಬೇಕು! ಪರೀಕ್ಷೆ ತಗೋಬೇಕಲು ಎಂದು ಬಲಾತ್ಕಾರ ಮಾಡುವುದು ಏಕೆ? ಪಟೇಲರ ತರ್ಕ ಹಲವರಿಗೆ ವಿಚಿತ್ರವೆನಿಸಿತು. ಸಮಾಜವಾದಿ ಪಟೇಲರ ಈ ಮಾತುಗಳು ‘ರಸಿಕತನದ ಅಮಲಿನ’ ಮಾತುಗಳಿರಬೇಕು ಎಂದು ಹಲವರು ಲೇವಡಿ ಮಾಡಿದರು. ಆದರೆ ಕಳೆದ ಒಂದೇ ಒಂದು ದಶಕದಲ್ಲಿ ನಮ್ಮ ಶಿಕ್ಷಣವ್ಯವಸ್ಥೆ ಎಂಥ ದೈನೇಸಿ ಸ್ಥಿತಿಗೆ ಬಂದಿದೆಯೆಂದರೆ ಒಂದನೆಯ ತರಗತಿಯಿಂದ ಕರ್ಣಾಟಕದಲ್ಲಿ ನಮಗೆ ಕನ್ನಡವನ್ನು ಕಡ್ಡಾಯಾಮಾಡುವ ಯೋಗ್ಯತೆ/ಧೈರ್ಯವಿಲ್ಲದಿದ್ದರೂ ಇಂಗ್ಲಿಷ್‌ ಕಲಿಕೆಯನ್ನು ಕಡ್ಡಾಯ ಮಾಡಿದ್ದೇವೆ -ಅದೂ ಗ್ರಾಮೀಣ ಜನತೆಯ ಉದ್ಧಾರದ ಹೆಸರಿನಲ್ಲಿ!

ಈ ಮಾತುಗಳನ್ನು ಬರೆಯುತ್ತಿರುವಾಗ ಒಂದೆರಡುಮೂರು ಘಟನೆಗಳು ನೆನಪಾಗುತ್ತವೆ. ಈ ಘಟನೆಗಳು ಮಕ್ಕಳಿಗೂ ದೊಡ್ಡವರಿಗೂ ಸಂಬಂಧಿಸಿವೆ. ದೊಡ್ಡವರ ವಿದ್ಯಾಭ್ಯಾಸದ ಆಯ್ಕೆಯ ಪ್ರಶ್ನೆಯೂ ಇಲ್ಲಿ ಅಡಕವಾಗಿದೆ. ಹೀಗಿರುವಾಗ ಮಕ್ಕಳ ಆಯ್ಕೆಯ ಕತೆಯೇನು-ನೀವೇ ಯೋಚಿಸಿ.

ಶಿವರಾಮ ಕಾರಂತರು ತಮ್ಮ ಮಕ್ಕಳನ್ನು ಐದನೆಯ ತರಗತಿಯ ತನಕ ಶಾಲೆಗೆ ಕಳುಹಿಸಲಿಲ್ಲವಂತೆ. ಅವರೇ ಪುತ್ತೂರಿನ ತಮ್ಮ ‘ಬಾಲವನ’ದಲ್ಲಿ ಕತೆ, ಹಾಡು, ಕುಣಿತ, ಕರಕುಶಲಕಲೆ, ಗಣಿತ ಇತ್ಯಾದಿಗಳನ್ನೆಲ್ಲ ಹೇಳಿಕೊಡುತ್ತ ಬಂದರು. ದಿನದಲ್ಲಿ ಒಂದಷ್ಟು ಹೊತ್ತು ಮಕ್ಕಳಿಗಾಗಿ ಪಾಠ ಹೇಳಿ, ಮಕ್ಕಳು ಸಾಕು ಎಂದಾಗ ನಿಲ್ಲಿಸುತ್ತಿದ್ದರು. ಒಂದು ಸಂದರ್ಭದಲ್ಲಿ ಮಾಲವಿಕಾ (ಈಗ ಪ್ರಖ್ಯಾತ ಮಕ್ಕಳ ಮನಃಶಾಸ್ತ್ರಜ್ಞೆ) ಗಣಿತ ಬೋರಾಯ್ತು ಎಂದಾಗ ಸುಮಾರು ಒಂದು ತಿಂಗಳು ಅದನ್ನು ಅವರು ಹೇಳಿಕೊಟ್ಟಿರಲಿಲ್ಲವಂತೆ

ನನ್ನ ಸೋದರಳಿಯ ಬಿ.ಎಸ್‌.ಸಿ. ಮುಗಿಸಿದ ಬಳಿಕ ವಿದ್ಯಾಭ್ಯಾಸ ಸಾಕು. ಊರು ಮನೆಯಲ್ಲಿ ಏನಾದರೂ ವ್ಯವಹಾರ ಮಾಡಬೇಕು. ಆಹಾರಪದಾರ್ಥಗಳ ಸಂಸ್ಕರಣ ಕಾರ್ಖಾನೆ ತೆರೆಯಬೇಕು ಎಂದೆಲ್ಲ ಯೋಚಿಸಿದ್ದ. ಪರಾವಲಂಬನೆಯ ಕೆಲಸಬೇಡ; ಮುಂದೆ ಓದುವ ಆಸಲ್ತಿಯಿಲ್ಲ ಎಂಬ ಸ್ಥಿತಿ ಆತನದ್ದು. ಈ ಬಗ್ಗೆ ಆಪ್ತವಲಯದಲ್ಲಿ ಭಾರಿಭಾರಿ ಚರ್ಚೆಗಳು ನಡೆದವು. “ಅವ ಆ ಲೈನಿಗೆ ಹೋಗಲಿ. ಈ ಕೋರ್ಸಿಗೆ ಸೇರಲಿ. ಇದರಲ್ಲಿ ‘ಬ್ರೈಟ್‌ ಫ್ಯೂಚರ್’ ಉಂಟು” ಎಂದು ಒಬ್ಬರಾದಮೇಲೊಬ್ಬರಂತೆ ಬುದ್ಧಿ ಹೇಳಿದರು. ತಂದೆತಾಯಿಗಳ ಕಿವಿ ಊದಿದರು. “ಆದರೆ ಪ್ರಾಯ ಚಿಕ್ಕದು. ಅನನುಭವಿ. ಕಾರ್ಖಾನೆ-ವ್ಯವಹಾರ ಇತ್ಯಾದಿ ಮಾಡಿ ಕೈಸುಟ್ಟುಕೊಂಡರೆ? ಅದೆಲ್ಲ ಇಷ್ಟು ಬೇಗ ಬೇಡ. ನಾವು ವ್ಯವಹಾರಮಾಡಿದ್ದು ಸಾಕು. ಮಗ ಇನ್ನೂ ಓದಿ ಗೌರವಾಹ್ ಉದ್ಯೋಗದಲ್ಲಿರಬೇಕು” ಎಂಬುದು ತಾಯ್ತಂದೆಯರ ಅಭಿಪ್ರಾಯ. ಅಳಿಯನೋ ಹಠಮಾರಿ. ಕೊನೆಗೆ ಈಗ ಅವನಿಗೆ ‘ವೈದ್ಯಕೀಯ ಪ್ರತಿನಿಧಿ’ ಕೆಲಸ ಸಿಕ್ಕಿ ಅದರಲ್ಲೇ ಅವನು ಯಶಸ್ಸು ಕಾಣುತ್ತಿದ್ದಾನೆನ್ನಿ!

ನಾಲ್ಕೈದು ವರ್ಷಗಳ ಹಿಂದಿನ ಮಾತು. ಒಬ್ಬಳು ಹುಡುಗಿ ನನ್ನಲ್ಲಿಗೆ ಬಂದು “ಸರ್, ಬಿ.ಎಡ್‌. ಪ್ರವೇಶಕ್ಕೆ ಆಡಳಿತ ಮಂಡಳಿ ಸ್ಥಾನಗಳಿಗಾಗಿ ಅರ್ಜಿ ಹಾಕಿದ್ದೇನೆ. ದಯವಿಟ್ಟು ನನ್ನನ್ನು ಸಂದರ್ಶನಕ್ಕೆ ಕರೆಯಬೇಡಿ” ಎಂದಳು!

ನನಗೋ ಆಶ್ಚರ್ಯದ ಮೇಲೆ ಆಶ್ಚರ್ಯ. “ಏನಾದರೂ ಮಾಡಿ ಒಂದು ಸೀಟು ಕೊಡಿ. ಬೇಕಾದರೆ ಡೊನೇಶನ್‌ ಕೊಡುತ್ತೇವೆ” ಎಂದು ದುಂಬಾಲು ಬೀಳುವವರು ಅನೇಕರು. ‘ಹಾಗೆಲ್ಲ ನಾವು ಮಾಡುವುದಿಲ್ಲ. ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯುತ್ತದೆ. ಡೊನೇಶನ್‌ ಇತ್ಯಾದಿ ಇಲ್ಲ” ಎಂದರೂ ಒತ್ತಡ ಹೇರುತ್ತಲೇ ಇರುತ್ತಾರೆ ಕೆಲವು ಪಾಲರು. ಆದರೆ ಈ ಹುಡುಗಿ “ಸಂದರ್ಶನಕ್ಕೇ ಕರೆಯಬೇಡಿ” ಎನ್ನುತ್ತಿದ್ದಾಳಲ್ಲ? ಏಕೆ? ಎಂದು ಕೇಳಿದೆ. “ನನಗೆ ಈ ಕೋರ್ಸ್ ಏನೇನೂ ಇಷ್ಟವಿಲ್ಲ. ನನ್ನ ಚಿಕ್ಕಪ್ಪನ ಮನೆಯಲ್ಲಿ ನಾನಿರುವುದು. ಅವರ ಒತ್ತಾಯಕ್ಕೆ ಅರ್ಜಿ ಹಾಕಿದ್ದು. ಸಂದರ್ಶನಕ್ಕೆ ಕರೆಬಂದರೆ ಖಂಡಿತ ಅವರು ನನ್ನನ್ನು ಸೇರಿಸುತ್ತಾರೆ. ಆದುದರಿಂದ ನನ್ನನ್ನು ಸಂದರ್ಶನಕ್ಕೆ ದಯವಿಟ್ಟು ಕರೆಯಬೇಡಿ. ನಾನು ತಮ್ಮಲ್ಲಿಗೆ ಬಂದದ್ದು ಅವರಿಗೆ ಗೊತ್ತಿಲ್ಲ. ದಯಮಾಡಿ ನಾನು ಬಂದ ವಿಚಾರ ಅವಿರಗೆ ತಿಳಿಸಬೇಡಿ” ಎಂದು ಗೋಗರೆದಳು. ಇದೊಂದು ವಿಚಿತ್ರ, ವಿಲಕ್ಷಣ ಪ್ರಪಂಚ! ತಮ್ಮ ಕಲಿಕೆಯನ್ನು ನಿಯಂತ್ರಿಸುವ, ಬೇಕಾದ ಕೋರ್ಸುಗಳನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ಯ್ರವಿಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಎಂಥ ಹಿಂಸೆಯಾಗುತ್ತದೆ ನೋಡಿ!

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕೆ ಹಾಗೂ ವ್ಯಾಸಂಗವನ್ನು ತಾವೇ ನಿಯಂತ್ರಿಸುವ ಹಕ್ಕಿನಿಂದ ನಿಜಕ್ಕೂ ವಂಚಿತರಾಗದ್ದಾರೆ. ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳು ಏನೇನು ವಿಷಯಗಳನ್ನು ಎಷ್ಟು ಕಾಲ ಕಲಿಯಬೇಕು ಎಂಬುದನ್ನು ತಥಾಕಥಿತ ಪರಿಣತರು ನಿರ್ಧರಿಸುತ್ತಾರೆ. ಯಾರೋ ಪಠ್ಯಕ್ರಮ ರೂಪಿಸುತ್ತಾರೆ. ಮತ್ತೆ ಕೆಲವರು ಪಠ್ಯಪುಸ್ತಕ ಸಿದ್ಧಪಡಿಸುತ್ತಾರೆ. ಇಷ್ಟವಿರಲಿ ಇಲ್ಲದಿರಲಿ,ವಿದ್ಯಾರ್ಥಿಗಳು ಆ ಪುಸ್ತಕಗಳನ್ನು ಓದಬೇಕು. ಪರೀಕ್ಷಾಕ್ರಮ, ಬೋಧನೆಯ ರೀತಿನೀತಿ ಯಾವುದೂ ತಮಗೆ ಪ್ರಿಯವಾಗದಿದ್ದರೂ ಪದವಿ ಪ್ರಮಾಣಪತ್ರ ಬೇಕೆಂದರೆ ಕಡ್ಡಾಯವಾಗಿ ನಿಯಮಗಳಿಗೆ ತಲೆ ಕೊಡಲೇಬೇಕು!

ಮಕ್ಕಳು ತಮಗೆ ಇಷ್ಟವಿಲ್ಲದ ವಿಷಯವನ್ನು ಶಾಲೆಯಲ್ಲಿ ಕಲಿಯಬೇಕು. ವಿಜ್ಞಾನ, ಗಣಿತ ಆಧುನಿಕ ಬದುಕಿಗೆ ಅಗತ್ಯ. ಸಮಾಜವಿಜ್ಞಾನ ಸಾಮಾಜಿಕ ಜೀವನ ನಡೆಸಲಿಕ್ಕೆ ಬೇಕು. ಮೂರು ಭಾಷೆಗಳ ಕಲಿಕೆ ಭಾರತದ ಸಂದರ್ಭಕ್ಕೆ ಹೇಳಿಮಾಡಿಸಿದ್ದು ಎಂದೆಲ್ಲ ಸಮರ್ಥನೆ ಕೊಡಲಾಗುತ್ತದೆ. ಆದರೆ ಕೆಲವು ವಿದ್ಯಾರ್ಥಿಗಳಿಗೆ ಬೀಜಗಣಿತ ಬೇಕಾಗಿಲ್ಲ. ಸಾವಯವ ರಸಾಯನಶಾಸ್ತ್ರದಲ್ಲಿ ಆಸಕ್ತಿಯಿಲ್ಲ. ಹಿಂದಿ ಕಲಿಕೆ ಅಗತ್ಯವೇ ಇಲ್ಲ ಎಂದಾದರೆ ಅದಕ್ಕಿಲ್ಲಿ ಯಾವ ವಿನಾಯಿತಿಯೂ ಇಲ್ಲ. ಎಸ್‌.ಎಸ್‌.ಎಲ್‌.ಸಿ. ಪ್ರಮಾಣಪತ್ರ ಬೇಕೋ ಈ ಎಲ್ಲ ವಿಷಯಗಳನ್ನು ಕಲಿಯಲೇಬೇಕು. ‘ಬಾಯ್ದೆರೆಯಾಗಿ ಎಲ್ಲ ಉತ್ತರ ಕೊಡಬಲ್ಲೆ; ಬರವಣಿಗೆ ಸಾಧ್ಯವಾಗದು’ ಎಂದರೆ ಅದಕ್ಕೆ ಅನುಮತಿಯಿಲ್ಲ. ಹೀಗೆ ಶಾಲಾಹಂತದಲ್ಲಿ ಕಂಡುಬರುವ ಸ್ವಾತಂತ್ಯ್ರ ದಮನದ ಕ್ರಮಗಳು ಕಾಲೇಜು ಹಂತದಲ್ಲೂ ಮುಂದುವರಿಯುತ್ತವೆ. ಕನ್ನಡ, ಭರತನಾಟ್ಯ, ಸಮಾಜಶಾಸ್ತ್ರ,ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ-ಹೀಗೆ ವಿಷಯಗಳ ಗುಂಪುಗಳಿರುತ್ತವೆ. ವಿಜ್ಞಾನ ವಿಷಯಗಳೇ ಬೇರೆ, ಕಲಾವಿಷಯಗಳೇ ಬೇರೆ. ಅವುಗಳ ನಡುವೆ ವರ್ಣಸಂಕರದ ಪ್ರಶ್ನೆಯಿಲ್ಲ. ಭಿನ್ನಭಿನ್ನ ಸ್ವರೂಪದ ವಿಷಯಗಳ ವ್ಯಾಪಕ ಆಯ್ಕೆಗಳಿಗೆ ಅವಕಾಶವಿಲ್ಲ. “ಕೊಟ್ಟದ್ದು ಹಳಸಲೋ ಪಳಸಲೋ, ಬೇಕಾದರೆ ತಿನ್ನಿ; ಬೇಡದಿದ್ದರೆ ಎದ್ದುಹೋಗಿ” ಎಂಬ ಧೋರಣೆ ಉನ್ನತ ಶಿಕ್ಷಣ ಹಂತದಲ್ಲಿದೆ. ಕೇವಲ ಭರತನಾಟ್ಯವೊಂದರ ಕಲಿಕೆ ಅಥವಾ ಕನ್ನಡವೊಂದು ವಿಷಯವನ್ನು ಮಾತ್ರ ಕಲಿತು ಇಲ್ಲವೆ ಕೇವಲ ಗಣಿತ ಮಾತ್ರ ಕಲಿತು ಪದವಿ ಪಡೆಯುವ ಅವಕಾಶವಿಲ್ಲ. ಈ ಕಾಂಬಿನೇಶನ್‌ನಗಳು ಕೆಲವೊಮ್ಮೆ ಅತಾರ್ಕಿಕವೂ ವಿಚಿತ್ರವೂ ಬಿಗಿಯೂ ಆಗಿದ್ದು ವಿದ್ಯಾರ್ಥಿಗಳ ಮುಕ್ತ ಆಯ್ಕೆಗೆ ಬಾಧಕಗಳಾಗಿ ಪರಿಣಮಿಸಿವೆ.

ಶಾಲಾಜೀವನವನ್ನು ಗಮನಿಸಿ. ಹತ್ತು ವರ್ಷ ವಿದ್ಯಾಭ್ಯಾಸ. ಯಾಕೆ? ಆರು ವರ್ಷದಲ್ಲಿ ಆಗದೆ? ಎಂಟು ವರ್ಷದಲ್ಲಿ ಆಗದೆ? ಅಥವಾ ಹನ್ನೆರಡು ವರ್ಷ ವಿಸ್ತರಿಸಿದರೆ ಆಗದೆ? ಈ ‘ಮಾಂತ್ರಿಕ ಸಂಖ್ಯೆ’ಗಳಿಗೆ ಏನು ಅರ್ಥ? ಈ ಹತ್ತು ವರ್ಷಗಳಲ್ಲಿ ಒಂದೆರಡು ವರ್ಷ ವಿದ್ಯಾರ್ಥಿ ಶಾಲೆಗೆ ಕಾರಣಾಂತರಗಳಿಂದ ಬರದಿದ್ದರೆ ‘ನಪಾಸು’, ‘ಶಾಲೆಯನ್ನು ಅರ್ಧದಲ್ಲಿ ಬಿಟ್ಟವನು’ ಎಂಬ ಬಿರುದು. ಪ್ರತಿನಿತ್ಯ ಶಾಲೆಯಲ್ಲಿ ಆರು ಗಂಟೆ ಕಾಲ ಇರತಕ್ಕದ್ದು ಎಂಬ ನಿಯಮವೇಕೆ? ಒಪ್ಪತ್ತಿನ ಶಾಲೆ ಆಗದೆ? ದಿನದಲ್ಲಿ ಒಂದೆರಡು ಗಂಟೆ ಶಾಲೆ ಸಾಕಾಗದೆ? ಹಿಂದೆ ರಾಜಾಜಿ ಇಂಥ ಪ್ರಯೋಗ ನಡೆಸಿದ್ದರು. ವಿನೋಬಾಭಾವೆಯವರೂ ಪ್ರಯತ್ನಿಸಿದ್ದರು. ಆದರೆ ಏಕೋ ಏನೋ ಈ ಪ್ರಯತ್ನಕ್ಕೆ ಜನಬೆಂಬಲ ದೊರೆಯಲಿಲ್ಲ. ಬೆಳಿಗ್ಗೆ ಬೇಗ ಶಾಲೆ ಆರಂಭವಾಗಿ ಮಧ್ಯಾಹ್ನ ೧ ಗಂಟೆಗೆ ಬಿಡುವ ಶಾಲೆಗಳ ಬಗ್ಗೆ ಆಕರ್ಷಣೆ ಹಾಗೂ ಆರೋಪಗಳಿವೆ. ಒಂದೂವರೆಗೆ ಶಾಲೆಬಿಟ್ಟರೆ ಮಕ್ಕಳು ಮನೆಯಲ್ಲಿ ಹಾಳಾಗ್ತವೆ ಎಂಬ ಭಯ ಕೆಲವರಿಗೆ. ಮಧ್ಯಾಹ್ನ ಮಕ್ಕಳು ಸ್ವಲ್ಪ ವಿಶ್ರಾಂತಿ ತಗೊಂಡು ಟ್ಯೂಶನ್‌ ಕ್ಲಾಸಿಗೆ ಹೋಗಲಿಕ್ಕೆ ಇದು ಅನುಕೂಲ ಎಂದು ಕೆಲವರು ಸ್ವಾಗತಿಸುತ್ತಾರೆ. ಆದರೆ ಇಡೀ ದಿನ ‘ಪುಸ್ತಕದ ಬದನೆಕಾಯಿ’ ಬಿಟ್ಟರೆ ಜೀವನದ ಮುಖ್ಯ ಕೌಶಲಗಳ ಕಲಿಕೆಗೆ ಶಾಲೆಗಳಲ್ಲಿ ಎಡೆಯಿಲ್ಲ. ಹೀಗಿರುವಾಗ ಶಾಲೆಗಳಲ್ಲಿ ಪುಸ್ತಕದ ವಿದ್ಯೆಗೆ ಯಾಕೆ ಅಷ್ಟು ಮಹತ್ವ? ಒಪ್ಪತ್ತು ಓದಿ ಒಪ್ಪತ್ತು ಕೆಲಸಮಾಡುವ, ತಂದೆತಾಯಿಗಳಿಗೆ ನೆರವಾಗುವ ಅಥವಾ ಉಳಿದ ಒಪ್ಪತ್ತಿನಲ್ಲಿ ಶಾಲೆಯಲ್ಲಿ ನಿಜವಾದ ಔದ್ಯೋಗಿಕ ಕೌಶಲಗಳ ತರಬೇತಿಗೆ ಎಡೆಯಿರುವ ಶಿಕ್ಷಣ ಲಭಿಸಬೇಕು. ಈಗಿರುವ ಶಿಕ್ಷಣ ಜೀವನ ನಿರ್ವಹಣೆ ದೃಷ್ಟಿಯಿಂದ ನಿಷ್ಟ್ರಯೋಜಕ.

ಮಕ್ಕಳು ತಮ್ಮ ಕಲಿಕೆಯನ್ನು ನಿಯಂತ್ರಿಸುವ ಹಕ್ಕು ಉಳ್ಳವರು ಎಂದಾಗ ಶಾಲೆ ಎಂಬುದು ಮಕ್ಕಳಿಗೆ ರಕ್ಷಣೆ ನೀಡುವ ನೆಲೆಮನೆ; ಹೊರಗಿನ ಸಮಾಜದ ಕೆಟ್ಟ ಪ್ರಭಾವಗಳ ವಿರುದ್ಧ ಅದು ಮಕ್ಕಳನ್ನು ರಕ್ಷಿಸಿ ಉತ್ತಮ ಬುದ್ಧಿಸಂಸ್ಕಾರ ನೀಡುತ್ತದೆ ಎಂದು ಹೇಳಲಾಗುತ್ತದೆ. ಜೀವನದ ಉದಾತ್ತ ಮೌಲ್ಯಗಳು, ಆದರ್ಶಗಳು, ಧ್ಯೇಯೋದ್ದೇಶಗಳ ಬಗ್ಗೆ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ತಿಳಿಯಹೇಳುತ್ತಾರೆ. “ಸಮಾಜ ಭ್ರಷ್ಟವಾಗಿದೆ. ಕೆಟ್ಟದಾಗಿದೆ. ಮೌಲ್ಯಗಳು ಕುಸಿಯುತ್ತಿವೆ. ಆದರೆ ನಮ್ಮ ಮಕ್ಕಳನ್ನು ಹೀಗೆಯೇ ಬಿಟ್ಟರೆ ಅವೂ ಹಾಳಾಗುತ್ತವೆ. ಆದುದರಿಂದ ಅವಕ್ಕೆ ಸರಿಯಾದ ಶಿಕ್ಷಣ ನೀಡುವ ಉದ್ದೇಶದಿಂದಲೇ ಶಾಲೆಗಳಿಗೆ ಮಕ್ಕಳನ್ನು ಸೇರಿಸಿಲಾಗಿದೆ” ಎಂದು ಜನ ಹೇಳುತ್ತಾರೆ.

ಇದೆಲ್ಲ ಸರಿ. ಆದರೆ ಈಗೀಗ ಪರಿಣತರು ಹಾಗೂ ಶಿಕ್ಷಕರು ಶಾಲೆಗಳಲ್ಲಿ ನಡೆಸುವ ಚಟುವಟಿಕೆಗಳ ಮೌಲಿಕತೆಯನ್ನು ಪ್ರಶ್ನಿಸುತ್ತಿದ್ದಾರೆ . “ಪರಿಸರ ಶಿಕ್ಷಣ, ಮೌಲ್ಯಶಿಕ್ಷಣ ಹಾಗೂ ಜನಸಂಖ್ಯಾ ಶಿಕ್ಷಣ ಇತ್ಯಾದಿಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತದೆ. ಆದರೆ ಇವುಗಳಿಂದೇನು ಪ್ರಯೋಜನ? ಹೊರಗಿನ ಸಮಾಜದ ದುಷ್ಟ್ರಭಾವ ಮಕ್ಕಳ ಮೇಲೆ ಹೆಚ್ಚಿದೆ. ಶಾಲೆಯಲ್ಲಿ ನಾವೇನೋ ಒಳ್ಳೆಯದನ್ನು ಹೇಳಿಕೊಡಬಹುದು.ಆದರೆ ಮಗು ಹೊರಗಿನ ಸಮಾಜದಲ್ಲಿ ಕೊಲೆ, ಹಿಂಸೆ, ಮಾನಭಂಗ, ಕಾಮುಕತೆ ಇವನ್ನೇ ನೋಡುತ್ತಿರುತ್ತದೆ. ಮನೆಯಲ್ಲಿ ಹೆತ್ತವರು ಸರಿಯಿಲ್ಲದಿದ್ದರೆ ಶಿಕ್ಷಕರೇನು ಮಾಡಬಹುದು?” ಈ ವಾದದಲ್ಲೂ ಹುರುಳಿದೆ. ಶಾಲೆಯೊಳಗಿನ ವಾಸ್ತವವೇ ಬೇರೆ; ಹೊರಗಿನ ವಾಸ್ತವವೇ ಬೇರೆ. ಹಾಗೆಂದು ಹೇಳಿ ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಕೊಡವಿಕೊಂಡು ಅನ್ಯಾಯಕ್ಕೆ ಪರವಾನಗಿ ನೀಡಬಾರದಲ್ಲವೆ? ಎಳೆಯ ಮನಸ್ಸುಗಳನ್ನು ಸರಿಯಾಗಿ ಹದಗೊಳಿಸಿದರೆ ಅವರು ದಾರಿತಪ್ಪುವುದಿಲ್ಲವಲ್ಲವೆ? ಈ ದೃಷ್ಟಿ ಶಿಕ್ಷಕರಿಗೆ ಬೇಕಲ್ಲವೆ?

ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ನಮ್ಮ ಕೆಲವು ಶಾಲೆಗಳು ಹೊರಗಿನ ಸಮಾಜವನ್ನು ಹೋಲುತ್ತಿವೆಯಲ್ಲ! ಅವು ‘ಮೌಲ್ಯಗಳ ಸಂಗ್ರಹಾಲಯ’ವಾಗಿ ಈಗ ಉಳಿದಿಲ್ಲ. ಹೊರಗಿನ ಸಮಾಜದಲ್ಲಿ ಕಲಂಡುಬರುವ ಎಲ್ಲ ಅನಿಷ್ಟಗಳನ್ನೂ ನಾವು ಶಾಲೆಗಳಲ್ಲಿ ಕಾಣಬಹುದು. ಹೊಟ್ಟೆಕಿಚ್ಚು, ಸಣ್ಣತನ, ಸ್ವಾರ್ಥ, ದ್ವೇಷ, ಅಸಹಕಾರ ಮುಂತಾದ ಎಲ್ಲ ಭಾವನೆಗಳೂ ಶಾಲೆಗಳಲ್ಲಿ ಮೆರೆಯುತ್ತಿವೆ. ಎಲ್ಲಕ್ಕಿಂತ ಮಿಗಿಲಾಗಿ ಇಂದಿನ ಬಹಳಷ್ಟು ಶಾಲೆಗಳಲ್ಲಿ ಅವನನ್ನು ಇವನು ಹಿಂದಿಕ್ಕಿ ಮುಂದೆ ಸಾಗುವ ಸ್ಪರ್ಧಾತ್ಮಕತೆ ಹೆಚ್ಚು ತೀವ್ರವಾಗಿದೆ. ಈ ಸ್ಪರ್ಧಾತ್ಮಕತೆಯಿಂದಾಗಿ ಮಕ್ಕಳಲ್ಲಿ ಪರಸ್ಪರ ತುಲನೆ, ಅಕ್ರಮ, ಸೋಲಿಸುವ ಜಿದ್ದು ಗೆಲ್ಲುವ ಹಠ, ಹಮ್ಮುಬಿಮ್ಮು, ಅಪಮಾನ, ಸೋಲಿನ ಭಯ ಹೆಚ್ಚಾಗಿದೆ. ಜಾನ್‌ ಹೋಲ್ಟ್‌ರ ಮಾತುಗಳು ಕಟುವಾಗಿ ಕಾಣಬಹುದಾದರೂ ಸತ್ಯವಾಗಿವೆ. “ಆಧುನಿಕ ಸಮಾಜದ ಅತ್ಯಂತ ಅಪಾಯಕಾರಿ, ವಿಧ್ವಂಸಕ, ನಿರಂಕುಶ ಮತ್ತು ಪ್ರಜಾಸತ್ತಾವಿರೋಧಿ ಸಂಸ್ಥೆಗಳಲ್ಲಿ ಶಾಲೆಯೂ ಒಂದು ಅನ್ನಿಸುತ್ತಿದೆ. ಜನರ ಕುತೂಹಲ, ಸ್ವಾತಂತ್ಯ್ರ, ವಿಶ್ವಾಸ, ಘನತೆ, ಮೌಲ್ಯ ಹಾಗೂ ಅಸ್ಮಿತೆಯನ್ನು ಬೇರಾವ ಸಂಸ್ಥೆಗಳಿಗಿಂತಲೂ ಹೆಚ್ಚಾಗಿ ಶಾಲೆ ಹಾಳುಮಾಡುತ್ತಿದೆ. ಕೆಲವೊಂದು ಉತ್ತಮ ಶಾಲೆಗಳು ಇತರರ ಮಚ್ಚುಗೆ, ಅನುಮೋಧನೆ ಹಾಗೂ ತೀರ್ಪಿಗಾಗಿ ಕಾರ್ಯನಿರ್ವಹಿಸುತ್ತವೆ. ಶಿಕ್ಷಕರಿಗಾಗಿ ಮಕ್ಕಳು, ಶಿಕ್ಷಕರು ಪಾಲಕರಿಗಾಗಿ, ಶಾಲಾ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗಾಗಿ” ಎಂಬ ಸ್ಥಿತಿ ಇದೆ!

ತಮ್ಮ ಕಲಿಕೆಯನ್ನು ನಿಯಂತ್ರಿಸುವ ಮಕ್ಕಳ ಹಕ್ಕು ಪಾಲಕರು ಒಡ್ಡುವ ಬೇಡಿಕೆಗಳಲ್ಲಿ, ಶಾಲೆಯ ಮೇಲೆ ಹೇರುವ ನಿರೀಕ್ಷೆಗಳಲ್ಲಿ ಕರಗಿಹೋಗುತ್ತದೆ.  ತಮ್ಮ ಮಗು ಹೇಗೆ ಕಲಿಯುತ್ತಿದೆ ಅಂದರೆ ಉಳಿದ ಮಕ್ಕಳಿಗಿಂತ ಎಷ್ಟು ಮುಂದಿದೆ ಎಂದು ಶಾಲೆಯಿಂದ ತಿಳಿಯಲು ಇವರು ಹೆಚ್ಚು ಕಾತರರಾಗಿರುತ್ತಾರೆ. ಆದಷ್ಟು ಮಟ್ಟಿಗೆ ತಮ್ಮ ಮಗುವನ್ನು ಉಳಿದವರಿಗಿಂತ ಹೇಗಾದರೂ ಮುಂದಿಡಿ ಎಂಬುದು ಅವರು ಶಾಲೆಯ ಮೇಲೆ ಹೇರುವ ಒತ್ತಡ. ಹೀಗಾಗಿ ಹೊರಗಿನ ಸಮಾಜಕ್ಕಿಂತ ಶಾಲೆ ಹೆಚ್ಚು ಸುರಕ್ಷಿತ ಸ್ಥಳವೇನಲ್ಲ. ಹೊರಗಿನ ಸಮಾಜದಲ್ಲಿ ನಡೆಯುವ ಅನ್ಯಾಯಗಳು, ದೌರ್ಜನ್ಯಗಳು, ಅಪಮಾನಗಳು ಇಲ್ಲೂ ಮಕ್ಕಳ ಮೇಲೆ ನಡೆಯುತ್ತವೆ. ಪೊಲೀಸ್‌ ಠಾಣೆಗಳಲ್ಲಿ ನಡೆಯುವ ಹಿಂಸೆ ಇಲ್ಲೂ ಶಿಕ್ಷಕರಿಂದ ಮಕ್ಕಳ ಮೇಲಾಗುತ್ತದೆ. ಲೈಂಗಿಕ ಕಿರುಕುಳವೂ ನಡೆದೀತು.ಓರ್ವ ಶಿಕ್ಷಕ ಇತರ ಅಧ್ಯಾಪಕರ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವುದೂ ನಡೆಯುತ್ತದೆ. ಎಲ್ಲ ಲೀಲಾನಾಟಕಗಳೂ ಶಾಲೆಯಲ್ಲಿ  ಅನಾವರಣಗೊಳ್ಳುತ್ತವೆ! “ಆಧುನಿಕ ಸಮಾಜದ ಹಲವು ಕಾಯಿಲೆಗಳು ಶಾಲೆ ಪಸರಿಸಿದ ಕಾಯಿಲೆಗಳೇ ಆಗಿವೆ. ಸಂಪೂರ್ಣ ನಿಯಂತ್ರಿತ ಸಮಾಜಕ್ಕೆ ಒಗ್ಗಿಕೊಳ್ಳುವ ಮತ್ತು ಅದನ್ನೇ ನಂಬಿಕೊಂಡು ಬದುಕುವ ಕ್ರಮವನ್ನು ಶಾಲೆಗಳು ನಮಗೆ ಕಲಿಸುತ್ತವೆ” (ಜಾನ್‌ ಹೋಲ್ಟ್‌, ೧೯೭೩).