ಜಗತ್ತಿನಲ್ಲಿ ಹದಿನೆಂಟು ವರ್ಷಕ್ಕಿಂತ ಕೆಳಗಿನ ವಯೋಮಾನದ ಸುಮಾರು ಎರಡು ಬಿಲಿಯ ಮಕ್ಕಳಿದ್ದಾರೆ. ಸಮಾಜದ ತೀರ ಸೂಕ್ಷ್ಮಸಂವೇದಿ ಸದಸ್ಯರಾಗಿರುವ ಮಕ್ಕಳು ಮಾನವಹಕ್ಕುಗಳ ಉಲ್ಲಂಘನೆಯಿಂದಾಗಿ ಸಂತ್ರಸ್ತರಾಗುತ್ತಿದ್ದಾರೆ. ನ್ಯೂನ ಪೋಷಣೆಯಿಂದ ಹಿಡಿದು ಮಿಲಿಟರಿ ದಾಖಲಾತಿವರೆಗೆ. ದುಡಿಮೆಯ ಕ್ಷೇತ್ರದಲ್ಲಿ ಶೋಷಣೆಯಿಂದ ಆರಂಭಿಸಿ ವಿದ್ಯಾಭ್ಯಾಸ ಅವಕಾಶ ವಂಚನೆಯವರೆಗೆ ಮಕ್ಕಳು ತೀವ್ರ ಶೋಷಿತರು.  ನ್ಯೂನ ಪೋಷಣೆ ಎಂಬುದು ಮಕ್ಕಳ ಬದುಕುವ ಹಕ್ಕು ಮತ್ತು ಸಂತೋಷಪಡುವ ಹಕ್ಕನ್ನೇ ಕಸಿದುಕೊಳ್ಳುವ ಮಾನವಹಕ್ಕುಗಳ ಉಲ್ಲಂಘಟನೆ. ಪ್ರತಿವರ್ಷ ಒಂದು ಅಂದಾಜಿನ ಪ್ರಕಾರ ಐದು ವರ್ಷದೊಳಗಿನ ೧೨ ಮಿಲಿಯ ಮಕ್ಕಳು ನ್ಯೂನ ಪೋಷಣೆಯಿಂದಾಗಿ ಸಾಯುತ್ತಿದ್ದಾರೆ. ೫ ರಿಂದ ೧೪ ವರ್ಷ ಪ್ರಾಯದ ೧೨೦ ಮಿಲಿಯ ಮಕ್ಕಳು ಪೂರ್ಣಕಾಲಿಕ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ೨೫೦ ಮಿಲಿಯ ಮಕ್ಕಳು ಅರೆಕಾಲಿಕ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬೀದಿಬದಿಯ ಮಕ್ಕಳ ಮಾರಾಟ.  ಅಕ್ರಮಸಾಗಣೆ, ಹತ್ಯೆ, ಅಂಗಾಂಗ ಮಾರಾಟ.  ಅಶ್ಲೀಲ ವ್ಯವಹಾರ, ವೇಶ್ಯಾವೃತ್ತಿ ಇತ್ಯಾದಿಯಾದ ಅಮಾನವೀಯ ಪಾಶವ ಈ ಕೃತ್ಯಗಳಿಗೆ ಮಕ್ಕಳು ಪ್ರಪಂಚದೆಲ್ಲೆಡೆ ಬಲಿಯಾಗುತ್ತಿದ್ದಾರೆ.  ಒಟ್ಟು ಎರಡು ಮಿಲಿಯ ಮಕ್ಕಳು ವೇಶ್ಯಾವಾಟಿಕೆಯ ವ್ಯವಹಾರದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ದೊಡ್ಡವರು ನಡೆಸುವ ಯುದ್ಧಗಳಿಗೆ ಬೆಲೆ ತೆರುವವರು ಅಮಾಯಕ ಮಕ್ಕಳು. ತಮ್ಮ ತಾಯ್ತಂದೆಗಳನ್ನು, ಮನೆಕುಟುಂಬಗಳನ್ನು, ಅಮೂಲ್ಯಬಾಲ್ಯ ಕಳೆದ ಒಂದು ದಶಕದಲ್ಲಿ ಎರಡು ಮಿಲಿಯ ಮಕ್ಕಳು ಯುದ್ಧಗಳ ದೆಸೆಯಿಂದಾಗಿ ಹತರಾದರೆ ಒಂದು ಮಿಲಿಯ ಮಕ್ಕಳು ಅನಾಥರಾಗಿದ್ದಾರೆ. ಶಸ್ತ್ರ ಸಮರದ ಪರಿಣಾಮಗಳು ಕರಾಳವಾಗಿವೆ. ಮಕ್ಕಳ ಮನಸ್ಸಿನ ಮೇಲೆ ಅವು ಬೀರುವ ಪರಿಣಾಮ ಅನೂಹ್ಯ.

ಆಧುನಿಕ ಯುದ್ಧ ಹಾಗೂ ಭಯೋತ್ಪಾದನ ಕೃತ್ಯಗಳಿಂದಾಗಿ ಮಕ್ಕಳ ಬಾಲ್ಯಜೀವನ ಕಮರಿಹೋಗುತ್ತದೆ. ಹೆತ್ತವರು ನೇರವಾಗಿ ಯುದ್ಧದಲ್ಲಿ ತೊಡಗುವುದರಿಂದ, ತಲೆತಪ್ಪಿಸಿ ಕೊಳ್ಳುವುದರಿಂದ ಅಥವಾ ಪಲಾಯನ ಮಾಡುವುದರಿಂದಾಗಿ ಮಕ್ಕಳು ತಬ್ಬಲಿಗಳಾಗುತ್ತಾರೆ . ಜಗತ್ತಿನಲ್ಲಿರುವ ಒಟ್ಟು ನಿರಾಶ್ರಿತರಲ್ಲಿ ಅರ್ಧಾಂಶದಷ್ಟು ಮಂದಿ ಮಕ್ಕಳೇ ಆಗಿದ್ದಾರೆ.  ಯುದ್ಧ ಸಂತ್ರಸ್ತ ಮಕ್ಕಳಿಗೆ ಭವಿಷ್ಯವೇ ಇಲ್ಲವೆಂಬಂತಾಗಿದೆ. ಭಯ, ಸಾವುನೋವು ಅವರ ನಿತ್ಯ ವಾಸ್ತವ.

ಮಕ್ಕಳ ಹಕ್ಕುಕಗಳ ಬಗ್ಗೆ ಮಾತನಾಡುವಾಗ ಈ ದೇಶದಲ್ಲಿ ಅದನ್ನು ‘ಬಾಲಕಾರ್ಮಿಕರು’, ‘ಬೀದಿಬದಿಯ ಮಕ್ಕಳು’.  ‘ಅಂಚಿಗೆ ಸರಿದ ಮಕ್ಕಳು’ ಎಂದೆಲ್ಲ  ವರ್ಗೀಕರಣದ ಕಣ್ಣಿನಿಂದ ನೋಡಲಾಗುತ್ತದೆ. ಹಾಗೆ ನೋಡಿದರೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಕೇವಲ ಬಡವರ್ಗಗಳಿಗೆ ಸೀಮಿತವಲ್ಲ. ಮಧ್ಯಮವರ್ಗ ಹಾಗೂ ಶ್ರೀಮಂತ ವರ್ಗಗಳ ಮಕ್ಕಳ ಮಾನವಹಕ್ಕುಗಳು ಸಾಕಷ್ಟು ಪ್ರಮಾಣದಲ್ಲಿ ಉಲ್ಲಂಘನೆಯಾಗುತ್ತಿವೆ. ವಿಭಿನ್ನ ರೂಪದಲ್ಲಿ ಆಗುತ್ತಿರುವ  ಈ ಉಲ್ಲಂಘನೆಯ ಪ್ರಕರಣಗಳು ನಿಗೂಢ ಮೌನದಲ್ಲಿ ಮುಳುಗಿಹೋಗುತ್ತಿವೆ.

ಮಕ್ಕಳಲು ಎಂದಾಗ ಒಂದು ಏಕರೂಪದ ಸಂರಚನೆ ಎಂದು ತಿಳಿಯುವುದು ತಪ್ಪು. ನಾವು ಬಹಳ ಸಲ ಹಾಗೆ ಭಾವಿಸುತ್ತೇವೆ.  ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು, ದೈಹಿಕ-ಮಾನಸಿಕ ಸ್ವಾಸ್ಥ್ಯ, ಭೌಗೋಳಿಕ ಪರಿಸರ ಇತ್ಯಾದಿಯಾಗಿ ಅವರಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ.

ಈ ವ್ಯತ್ಯಾಸಗಳಿಂದಾಗಿ ಅವರ ಹಕ್ಕುಕಗಳ ಉಲ್ಲಂಘನೆಯಲ್ಲೂ ಏರುಪೇರುಗಳು ಕಂಡುಬರುತ್ತವೆ.  ಭಾರತದಂಥ ದೇಶದಲ್ಲಿ ಎಲ್ಲ ವಿಷಯಗಳಲ್ಲೂ ಲಿಂಗತಾರತಮ್ಯ ಎದ್ದುಕಾಣುತ್ತದೆ.  ಬಡತನ, ಅಂಗವಿಕಲತೆ, ಸೂರಿಲ್ಲದಿರುವಿಕೆ ಮುಂತಾದ ಸ್ಥಿತಿಗಳಿಂದಾಗಿ ಹೆಣ್ಣುಮಕ್ಕಳು ತೊಂದರೆಗೆ ಈಡಾಗುತ್ತಾರೆ.  ಇದಲ್ಲದೆ ಹೆಣ್ಣು ಎಂಬ ಕಾರಣಕ್ಕಾಗಿ ಶೋಷಣೆಗೂ ಒಳಗಾಗುತ್ತಾರೆ.  ಹೀಗೆ ಅವರು ಅನುಭವಿಸುವ ಶೋಷಣೆ ಹಾಗೂ ಹಕ್ಕುಗಳ ಉಲ್ಲಂಘನೆಗಳ ಪರಿಣಾಮ ಇಮ್ಮಡಿಯಾಗುತ್ತದೆ.

ನಮ್ಮ ದೇಶದ ಕಾನೂನುಗಳು ಕೂಡ ‘ಬಾಲಸ್ನೇಹಿ’ಗಳಾಗಿ ಅಥವಾ ಮಕ್ಕಳ ಹಿತರಕ್ಷಣೆಯ ಪರಿವಾಗಿ ಇಲ್ಲ. ಅಕ್ರಮ ವಿವಾಹ ಅಥವಾ ವಿವಾಹೇತರ ಸಂಬಂಧದಿಂದಾಗಿ ಹುಟ್ಟಿದ ಮಗುವಿಗೆ ಕುಟುಂಬದಲ್ಲಿ ಯಾವ ಪಿತ್ರಾರ್ಜಿತ ಹಕ್ಕೂ ಇರುವುದಿಲ್ಲ. ‘ಅಕ್ರಮ ಸಂತಾನ’ ಎಂಬ ಅಪಖ್ಯಾತಿಗೆ ತುತ್ತಾಗುವ ಈ ಮಕ್ಕಳಿಗೆ ಯಾವ ಭದ್ರತೆಯೂ ಲಭಿಸದು.

ಭಾರತದಲ್ಲಿ ಮಕ್ಕಳಲು ನ್ಯೂನ ಪೋಷಣೆಗೆ ತುತ್ತಾಗುವುದು ಒಂದು ದೊಡ್ಡ ಸಮಸ್ಯೆ. ಹಸಿವು, ಬಡತನ ಹಾಗೂ ಸಾಂಕ್ರಾಮಿಕ ರೋಗಗಳಿಂದಾಗಿ ಹಿಂದುಳಿದ ಕುಟುಂಬಗಳಲ್ಲಿ  ಮಕ್ಕಳು ಸಾಯುತ್ತವೆ.  ಈಗೀಗಲಂತೂ ಎಚ್‌ಐವಿ/ಏಯ್ಡ್ಸ್ ಸೋಂಕಿಗೆ ಭಾರತದಲ್ಲಿ ೧,೭೦,೦೦೦ ಮಕ್ಕಳು ತುತ್ತಾಗಿದ್ದಾರೆ. ಸಮಾಜದ ಅಂಚಿನಲ್ಲಿ ಬದುಕುವ ಕುಟುಂಬಗಳಿಗೆ ಸೇರಿದ ಅಥವಾ ಮಾನವ ಕಳ್ಳಸಾಗಣೆಯಿಂದಾಗಿ ವೇಶ್ಯಾವಾಟಿಕೆ ಸೇರಿದ  ಈ ಮಕ್ಕಳಲು ಸೋಂಕಿಗೆ ತುತ್ತಾಗಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಾರೆ. ಪ್ರೀತಿ ಪ್ರೇಮಗಳಿಂದ ವಂಚಿತರಾಗುತ್ತಾರೆ. ಮಕ್ಕಳ ಆರೋಗ್ಯರಕ್ಷಣೆಗೆ ಸಂಬಂಧಿಸಿದಂತೆ ಸರಕಾರಗಳ ಪ್ರಯತ್ನ ಸಾಲದು.

ಶಿಕ್ಷಣ  ಈಗ ಮಕ್ಕಳ ಮೂಲಭೂತ ಹಕ್ಕು ಆಗಿ ಜಾರಿಗೆ ಬಂದಿದೆ. ಶಾಲೆಗೆ ದಾಖಲಾಗದೆ ಇರುವ ಸುಮಾರು ೯೨ ಲಕ್ಷ ಮಕ್ಕಳಿಗೆ ಇದರಿಂದ ಪ್ರಯೋಜನವಾಗಲಿದೆಯಂತೆ.  ಆದರೆ ಸರ್ವಶಿಕ್ಷಾ ಅಭಿಯಾನ ಹೆಚ್ಚುಕಡಿಮೆ ಮುಗಿದಿದೆಯಾದರೂ ಸರ್ವರಿಗೂ ಶಿಕ್ಷಣದ ಅವಕಾಶಗಳು ಇನ್ನೂ ಲಭಿಸಿಲ್ಲ. ಹಣದ ಹೊಳೆ ಹರಿದಿದೆ. ಸಮಾನಶಿಕ್ಷಣದ ಬಗ್ಗೆ ದಿನೇ ದಿನೇ ಬೇಡಿಕೆಗಳು ಹೆಚ್ಚುತ್ತಿವೆ. ಆದರೆ ‘ವಿಭೇದಕವಾದ ಶಿಕ್ಷಣನೀತಿ ಜಾರಿಯಲ್ಲಿದೆ.  ದೇಶದಲ್ಲಿ ಕೆಲವು ಪ್ರತಿಷ್ಠಿತರ ಮಕ್ಕಳಿಗೆ ದುಬಾರಿಯಾದ ಆಂಗ್ಲಮಾಧ್ಯಮ ಶಾಲೆಗಳು; ಉಳಿದವರಿಗೆ ಸ್ಥಳೀಯ ಭಾಷಾಮಾಧ್ಯಮದ ಸರಕಾರಿ ಅಥವಾ ಔಪಚಾರಿಕೇತರ ಶಾಲೆಗಳು. ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ.  ಹಲವು ವರ್ಷಗಳಿಂದ ಸರಿಯಾದ ನೇಮಕಾತಿ ಆಗಿಲ್ಲ. ಹೀಗಾಗಿ ಅರೆಕಾಲಿಕ ಶಿಕ್ಷಕರು/ಗೌರವ ಶಿಕ್ಷಕರು/ಹಂಗಾಮಿ ಶಿಕ್ಷಕರು/‘ಶಿಕ್ಷಾಕರ್ಮಿ’ಗಳಿಂದ ಪರಿಣಾಮಹೀನ ಬೋಧನೆ; ಇದೂ ಸಾಲದೆಂಬಂತೆ ಉತ್ತರ ಭಾರತದಲ್ಲಿ ಗೈರುಹಾಜರಿ ಶಿಕ್ಷಕರ ಸಮಸ್ಯೆ ಉಲ್ಬಣಿಸಿದೆ. ಖಾಸಗಿ ಶಾಲೆಗಳವರು ಸಮಾಜದ ವಂಚಿತ ವರ್ಗಗಳವರಿಗೆ ಶೇಕಡ ೨೫ ಸ್ಥಾನಗಳನ್ನು ಮೀಸಲಿಡಬೇಕು ಎಂದು ಶಿಕ್ಷಣ ಮೂಲಭೂತ ಹಕ್ಕು ಮಸೂದೆಯಲ್ಲಿ ಪೋಷಣೆ ಮಾಡಲಾಗಿದೆಯಾದರೂ ಅನುಷ್ಠಾನದಲ್ಲಿ ತೆರೆಯಮರೆಯ ನಾಟಕ ಚೆನ್ನಾಗಿ ನಡೆದೀತು! ಅಂತೂ ಮಕ್ಕಳ ಶಿಕ್ಷಣದ ಹಕ್ಕುಗಳ ಅನುಷ್ಠಾನ ಸುಲಭವಲ್ಲ!

ಶಿಕ್ಷಣದ ಹಕ್ಕು ಮಸೂದೆ ೦-೬ ಪ್ರಾಯದ ಮಕ್ಕಳ ಶಿಕ್ಷಣ ಲಾಲನೆ ಪಾಲನೆ ಇತ್ಯಾದಿಗಳನ್ನು ಪೂರ್ಣವಾಗಿ ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಇದಲ್ಲದೆ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಹಕ್ಕು ಕೇವಲ ೬-೧೪ ಪ್ರಾಯದ ಮಕ್ಕಳಿಗೆ ಸೀಮಿತವಾಗಿದೆ. ೧೮ ವರ್ಷದೊಳಗಿನವರೆಲ್ಲ ಮಕ್ಕಳೇ. ಹೀಗಾಗಿ ೧೪-೧೮ ಪ್ರಾಯದಲ್ಲಿರುವ ಮಕ್ಕಳ ಶಿಕ್ಷಣ, ಆರೋಗ್ಯ.  ಮನರಂಜನೆ ಬದುಕುವ ಹಕ್ಕು. ಉದ್ಯೋಗದ ಹಕ್ಕು ಇವೆಲ್ಲ ಅತ್ಯಂತ ಮಹತ್ವದ ಸಂಗತಿಗಳು. ಇದು ಹದಿಹರೆಯದ ಕಾಲವಾದುದರಿಂದ ಮಕ್ಕಳು ಸಾಕಷ್ಟು ಕ್ಷೋಭೆಗೆ ಒಳಗಾಗುವ ಆತಂಕಗಳಿರುತ್ತವೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮುಂದೆ ನಿರ್ದಿಷ್ಟವಾದ ಯೋಜನೆಗಳು-ಕಾರ್ಯಕ್ರಮಗಳು ಇಲ್ಲ. ಶಿಕ್ಷಣದ ಹಕ್ಕು ಕೂಡ ಇವರನ್ನು ಕಡೆಗಣಿಸಿದೆ.

ವಿದ್ಯಾರ್ಥಿಗಳು ಅರ್ಧದಲ್ಲೆ ಶಾಲೆಯನ್ನು ತೊರೆಯುತ್ತಾರೆ. ಇದಕ್ಕೆ ಬಹಳ ಮುಖ್ಯ ಕಾರಣವೆಂದರೆ ‘ಉಗ್ರನರಸಿಂಹ’ ಶಿಕ್ಷಕರು; ಹೊಡೆತ ಬಡಿತ, ನಿಂದನೆ, ಅಪಮಾನ, ದೈಹಿಕ ಹಾಗೂ ಮಾನಸಿಕ ಹಿಂಸೆಯ ಆರಾಧಕವಾಗಿರುವ ಅನೇಕ ‘ಭಯೋತ್ಪಾದಕ’ ಶಿಕ್ಷಕರು. ಶರೀರ ದಂಡನೆಯು ಮಕ್ಕಳ ಬೆಳವಣಿಗೆ ಹಾಗೂ ವಿಕಾಸಕ್ಕೆ ಮಾರಕ ಮಾತ್ರವಲ್ಲದೆ ಅವರ ಮೂಲಭೂತ ಹಕ್ಕುಕಗಳ ಉಲ್ಲಂಘನೆಯೂ ಹೌದು. ಶಿಕ್ಷಣದ ಹಕ್ಕು ಕಾಯ್ದೆ ಶಾಲೆಗಳಲ್ಲಿ ಶರೀರದಂಡನೆಯನ್ನು ನಿಷೇಧಿಸಿದೆ. ಆದರೆ ಅನುಷ್ಠಾನ ಮಾತ್ರ ಅಸಮರ್ಪಕ. “ಮಕ್ಕಳಿಗೆ ಹೊಡೆಯದಿದ್ದರೆ ಅವರು ಕಲಿಯುವುದೇ ಇಲ್ಲ” ಎಂಬುದನ್ನೇ ಸಿದ್ಧಾಂತ ಮಾಡಿಕೊಂಡ ಶಿಕ್ಷಕರ ಮನೋಭಾವಗಳಲ್ಲಿ ಬದಲಾವಣೆ ತರುವುದು ಹೇಗೆ? ಮಕ್ಕಳಿಗೆ ಶಿಕ್ಷೆ ಕೊಟ್ಟರೆ ಮಾತ್ರವೇ ಕಲಿಯುವುದು ಎಂದು ಯೋಚಿಸುವ ಪಾಲಕರ ಪೊರೆ ಕಳಚುವುದು ಯಾವಾಗ? ಹೇಗೆ?

ಇತ್ತೀಚೆಗೆ ನೆರವೇರಿದ ಮಕ್ಕಳ ಹಕ್ಕುಗಳ ಸಮಾವೇಶವೊಂದರಲ್ಲಿ ದಿವ್ಯ ಎಂಬ ಹುಡುಗಿ ಕೇಳಿದ ಪ್ರಶ್ನೆ ಎಲ್ಲರನ್ನೂ ಗಾಬರಿಗೊಳಿಸುವಂತೆ, ತಲೆತಗ್ಗಿಸುವಂತೆ ಮತ್ತು ಆಲೋಚನೆಗೆ ಹಚ್ಚುವಂತೆ ಮಾಡಿತು. “ನನ್ನ ಹೆಸರು ದಿವ್ಯಾ. ನನ್ನ ಹೆಸರಿನಿಂದ ನನ್ನನ್ನು ಇತರರು ಗುರುತಿಸಬೇಕೆಂಬ ಹಕ್ಕು ನನಗಿದೆ. ನನ್ನೆಲ್ಲ ಗೆಳತಿಯರನ್ನು ಹೆಸರು ಹಿಡಿದು ಕರೀತಾರೆ. ಆದರೆ ನನ್ನನ್ನು ಮಾತ್ರ ‘ಕುಂಟಿ’ ಅಂತ ಯಾಕೆ ಕರೀತಾರೆ? ನನ್ನ ಗೆಳತಿ ಸುಷ್ಮಾಳನ್ನು ‘ಅರೆ ಹುಚ್ಚಿ’ ಅಂತ ಯಾಕೆ ಕರೀಬೇಕು?”

ಮಕ್ಕಳ ಹಕ್ಕುಗಳ ಬಗ್ಗೆ ಚರ್ಚಿಸುವಾಗ ಭಿನ್ನ ಸಾಮರ್ಥ್ಯದ ಅಥವಾ ವಿಶೇಷ ಮಕ್ಕಳ ಹಕ್ಕುಗಳ ಬಗ್ಗೆ ಯಾರೂ ಯೋಚಿಸುವುದಿಲ್ಲ. ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆ ನಿತ್ಯವೂ  ಈ ದೇಶದಲ್ಲಿ ನಡೆಯುತ್ತಿದೆ. ಸಾಮಾಜಿಕ ಭದ್ರತೆ, ಆರ್ಥಿಕ ಸುರಕ್ಷಿತತೆ, ಒಂದು ಹಂತದವರೆಗಿನ ಕೌಶಲಗಳ ಶಿಕ್ಷಣ, ಆರೋಗ್ಯ ಸುರಕ್ಷೆ ಹಾಗೂ ಅವರ ಬೆಳವಣಿಗೆಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನೂ ಈ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ನಿರಾಕರಿಸಲಾಗುತ್ತಿದೆ. ವಿಕಲಾಂಗ ಮಕ್ಕಳ ಬಗೆಗೆ ಕರುಣೆ ಇದೆ. ಆದರೆ ಅವರಿಗೆ ಕರುಣೆ ಬೇಕಾಗಿಲ್ಲ.  ಅನುಭೂತಿ ನೀಡಬೇಕು. ತಮ್ಮ ಇತಿಮಿತಿಗಳೊಳಗೆ ಅವರು ಸ್ವಾಲವಂಬಿಗಳಾಗಲು ಸಮಾಜ ಸಹಕರಿಸಬೇಕು. ಆದರೆ ಬುದ್ಧಿಮಾಂದ್ಯತೆ, ಮಾನಸಿಕ ಮಾಂದ್ಯತೆಯುಳ್ಳ ಮಕ್ಕಳನ್ನು  ಈ ದೇಶದಲ್ಲಿ ತೀರ ನಿಕೃಷ್ಟವಾಗಿ ನೋಡಿಕೊಳ್ಳಲಾಗುತ್ತಿದೆ. ಅವರಿಗೇನೂ ತಿಳಿಯುವುದಿಲ್ಲವೆಂದು ಭಾವಿಸಿ ಅವರ ಮನೋವಿಕಲತೆಯನ್ನು ಬಳಸಿಕೊಂಡು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಸರಕಾರಗಳು ಈ ವಿಶೇಷ ಮಕ್ಕಳು ಹಾಗೂ ವಿಕಲಾಂಗ ವ್ಯಕ್ತಿಗಳ ಸಂಬಂಧದಲ್ಲಿ ಹೊರಡಿಸಿದ ಕಾನೂನುಗಳ ಅರಿವು ಸಾರ್ವಜನಿಕರಲ್ಲಿ ಮೂಡಬೇಕು ಮತ್ತು ಇವುಗಳ ಸದುಪಯೋಗ ಆಗುವಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆಯಿದೆ. ಈ ಕ್ಷೇತ್ರದಲ್ಲಿ ಹಲವು ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ಸಾಕಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ; ಆದರೂ ಮುಟ್ಟಿರುವ ಗುರಿ ಚಿಕ್ಕದು. ನಡೆಯಬೇಕಾದ ಗುರಿ ದೂರದ್ದು.

ನಮ್ಮ ದೇಶದ ಬಾಲಕಾರ್ಮಿಕ ಸಮಸ್ಯೆ ಅತ್ಯಂತ ಗಂಭೀರವಾದುದು. ಮಕ್ಕಳು ದೇಶದ ಸಂಪತ್ತು ಎಂದು ದಾಖಲೆಗಳು ಹೇಳುತ್ತಿವೆ. ಆದರೆ ೫-೧೪ ವರ್ಷಗಳ ಪ್ರಾಯದ ಒಂದು ಕೋಟಿ ಮೂವತ್ತು ಲಕ್ಷ ಹುಡುಗ ಹುಡುಗಿಯರು ಈ ದೇಶದಲ್ಲಿ ಬಾಲಕಾರ್ಮಿಕರಾಗಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ ಭಾರತದ ದುಡಿಯುವ ವರ್ಗದಲ್ಲಿ ಶೇಕಡ ೫೫ ರಷ್ಟು ಮಂದಿ ಬಾಲಕ ಬಾಲಿಕೆಯರು, ಸುಮರು  ಒಂದುಕೋಟಿ ಹತ್ತುಲಕ್ಷ ಮಕ್ಕಳು ಬೀದಿಬದಿಯಲ್ಲಿದ್ದಾರೆ. ಇವರಿಗೆ ರಕ್ಷಣೆಯಿಲ್ಲ. ನೆಲೆಯಿಲ್ಲ. ಆಸರೆಯಿಲ್ಲ. ಕೇಂದ್ರ ಸರಕಾರ ಶೇಕಡ ೫ ಕ್ಕೂ ಕಡಿಮೆ ಮೊತ್ತದ ಹಣವನ್ನು ಬಜೆಟ್‌ನಲ್ಲಿ ಮಕ್ಕಳಿಗಾಗಿ ಮೀಸಲಿರಿಸಿದೆ.

ಬಾಲಕಾರ್ಮಿಕರನ್ನು ಕೆಲಸದ ಆಧಾರದ ಮೇಲಿನಿಂದ ಗೃಹ ಬಾಲಕಾರ್ಮಿಕರು, ಬೀದಿ ಬಾಲಕಾರ್ಮಿಕರು, ಜೀತದ ಬಾಲಕಾರ್ಮಿಕರು ಹಾಗೂ ಕಾರ್ಖಾನೆ-ಹೋಟೆಲ್‌ ಇತ್ಯಾದಿಗಳಲ್ಲಿ ದುಡಿಯುವ ಕಾರ್ಮಿಕರು ಎಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಬಾಲಕಾರ್ಮಿಕ ನಿಷೇಧ ಕಾಯ್ದೆ ೧೯೮೬ ರಲ್ಲಿ ಜಾರಿಗೆ ಬಂದಿತು.ಇದರ ಪ್ರಕಾರ ೧೪ ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು ಪ್ರತಿಫಲಕಾರಿ ದುಡಿಮೆಯಲ್ಲಿ ತೊಡಗಿದರೆ ಅಂಥವರನ್ನು ಬಾಲಕಾರ್ಮಿಕರೆನ್ನುತ್ತಾರೆ. ಒಟ್ಟು  ೭೦ ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳು ದುಡಿಯುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ. ಆದರೆ ಮಕ್ಕಳನ್ನು ರಕ್ಷಿಸುವ ವಿಷಯದಲ್ಲಿ ಅಪಾಯಕಾರಿ ಹಾಗೂ ಅಪಾಯಕಾರಿಯಲ್ಲದ ದುಡಿಮೆ ಎಂಬ ವರ್ಗೀಕರಣವೇ ದೊಡ್ಡ ತೊಡರುಗಾಲು. ಕೆಲವು ಕೆಲಸಗಳನ್ನು ಮಾಡಬಹುದು ಮತ್ತು ಕೆಲವು ಕೆಲಸಗಳನ್ನು ಮಾಡಬಾರದು ಎಂಬ ಕಾಯ್ದೆಯೇ ಹಾಸ್ಯಾಸ್ಪದ.

ಭಾರತದ ಸಂವಿಧಾನದ ಪ್ರಕಾರ ೬-೧೪ ಪ್ರಾಯದ ಎಲ್ಲ ಮಕ್ಕಳೂ ಶಾಲೆಯಲ್ಲಿರಬೇಕು. ಅವರಿಗೆ ಸರಕಾರ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸಬೇಕು. ಹೆತ್ತವರು ಹಾಗೂ ಸರಕಾರಗಳು ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಹೊರಬೇಕು. ಇಲ್ಲವಾದರೆ ಅದು ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ಬೀದಿಯಲ್ಲಿ ಬದುಕುವ, ಚಿಂದಿ ಆಯುವ, ಪತ್ರಿಕೆ ಮಾರುವ, ಭಿಕ್ಷೆ ಬೇಡುವ ಮಕ್ಕಳು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಸಹ ಅವರನ್ನು ಈ ಕಾಯ್ದೆಯ ನೆರವಿನಿಂದ ರಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಸಾಮಾನ್ಯವಾಗಿ ಇವರನ್ನು ಯಾರೂ ಕೆಲಸಕ್ಕೆ ಇಟ್ಟುಕೊಂಡಿರುವುದಿಲ್ಲ. ಮಕ್ಕಳನ್ನು ಕೆಲಸಕ್ಕೆ ದೂಡುವ ಪ್ರಮುಖ ವಿಧಾನವೇ ‘ಜೀತ’. ‘ಜೀತಪದ್ಧತಿ ನಿರ್ಮೂಲನ’ವಾಗಿದೆ ಎಂದು ಘೋಷಣೆ ಮಾಡಿದರೂ ಕೃಷಿ, ಮನೆಗೆಲಸ, ಹೋಟೆಲ್‌ ಕೆಲಸ ಮುಂತಾದವುಗಳಿಗೆ ಮುಂಗಡ ನೀಡಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಅಪ್ಪ ಅಮ್ಮ ಮಾಡಿದ ಸಾಲ ತೀರದೆ ಈ ಮಕ್ಕಳು ಕೆಲಸಬಿಟ್ಟು ಬರುವಂತಿಲ್ಲ. ಮನೆಗೆಲಸ ಹಾಗೂ ಹೋಟೆಲ್‌ ಕೆಲಸದಲ್ಲಿ ಮಕ್ಕಳು ಸಾಕಷ್ಟು ಹಿಂಸೆ, ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಗೆ ತುತ್ತಾಗುತ್ತಾರೆ. ಕಾನೂನುಗಳು ಇದ್ದರೂ ಕೂಡ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ; ಸರಿಯಾಗಿ ನ್ಯಾಯ ದೊರೆಯುತ್ತಿಲ್ಲ ಮತ್ತು ಎಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ.

ಮಕ್ಕಳ ಅನೈತಿಕ ಕಳ್ಳಸಾಗಣೆ ಮಕ್ಕಳ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯಗಳಲ್ಲೇ ಅತ್ಯಂತ ಕ್ರೂರವಾದುದು. ಇದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನೆಲೆಯಲ್ಲಿ ಭೀಕರ ಸ್ವರೂಪದಲ್ಲಿ ನಡೆಯುತ್ತಿದೆ. ವೇಶ್ಯಾವಾಟಿಕೆ, ಕಾರ್ಖಾನೆ, ಅತಿಥಿಗೃಹ, ಡ್ಯಾನ್ಸ್‌ ಬಾರ್, ಶ್ರೀಮಂತರ ಮನೆಗಳು, ತೋಟದ ಮನೆಗಳಲ್ಲಿ ಬಲವಂತದ ದುಡಿಮೆಗೆ ಮಕ್ಕಳು ಬಳಕೆಯಾಗುತ್ತಾರೆ. ಇದಲ್ಲದೆ ಕಾನೂನುಬಾಹಿರವಾದ ದತ್ತುನೀಡಿಕೆ, ಅಂಗಾಂಗ ಕಸಿ ಹಾಗೂ ಮನೋರಂಜನಾ ಉದ್ಯಮಗಳಲ್ಲೂ ಇವರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ಅಕ್ರಮ ಸಾಗಣೆಗೆ ವಲಸೆ. ವೇಶ್ಯಾವೃತ್ತಿ ಮತ್ತು ವಿವಾಹದ ಮುಖವಾಡ ತೊಡಿಸಿ ಮರೆಮಾಡಲಾಗುತ್ತಿದೆ. ಜಗತ್ತಿನಲ್ಲಿ ಸದ್ಯ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ವೇಶ್ಯಾವಾಟಿಕೆಗಳಲ್ಲಿ ಕಾಣಬಹುದು; ಅದರಲ್ಲಿ ಅರ್ಧಾಂಶದಷ್ಟು ಮಕ್ಕಳು ಭಾರತದ ವೇಶ್ಯಾವಾಟಿಕೆಗಳಲ್ಲಿ ಕಂಡುಬರುತ್ತಾರೆ! ಭಾರತದ ಪ್ರಮುಖ ನಗರಗಳ ವೇಶ್ಯಾವಾಟಿಕೆಗೆ ಭೇಟಿ ನೀಡಿದರೆ ಬೀದಿಬದಿಯಿಂದ ಅಪಹರಣಕ್ಕೆ ಒಳಗಾದ, ಮಾದಕ ದ್ರವ್ಯ ತಿನ್ನಿಸಿ ಕರೆತಂದ, ಬಲಾತ್ಕರಿಸಿ ಶೀಲಭಂಗ ಮಾಡಿ ಕರೆತಂದ ಅಥವಾ ಒಳ್ಳೆಯ ಕೆಲಸ ಇಲ್ಲವೆ ಸಿನೆಮಾ ನಟನೆಯ ಆಮಿಷ ಒಡ್ಡಿ ಕರೆತಂದ ೧೪ ವರ್ಷ ಪ್ರಾಯದ ಹುಡುಗಿಯರನ್ನು ಕಾಣಬಹುದು. ಅನ್ಯಮಾರ್ಗವಿಲ್ಲದೆ ದಂಧೆಯಲ್ಲಿ ತೊಡಗುವ ಈ ಹುಡುಗಿಯರ ಬದುಕು ಬಹುತೇಕ ಕೊನೆಗೊಳ್ಳುವುದು ಗುಹ್ಯರೋಗಗಳ ಜಾಲದಲ್ಲಿ.

ಶಾಲೆಯಲ್ಲಿ ಕಲಿಯಬೇಕಾದ, ತಂದೆತಾಯಿಗಳ ರಕ್ಷಣೆಯಲ್ಲಿರಬೇಕಾದ ಮಕ್ಕಳನ್ನು ಸಾಗಣೆ ಮಾಡುವುದು ಕಾನೂನುಬಾಹಿರ ಶಿಕ್ಷಾರ್ಹ ಅಪರಾಧ. ಸಾಗಣೆಗೊಳಗಾದ ಮಕ್ಕಳು ಎಲ್ಲ ರೀತಿಯ ಹಕ್ಕುಗಳಿಂದ ವಂಚಿತರಾಗುತ್ತಾರೆ. ಇಂಥ ಮಕ್ಕಳಿಗೆ ಯಾವುದೇ ಬಗೆಯ ರಕ್ಷಣೆ ದೊರೆಯುವುದಿಲ್ಲ. ತಮ್ಮ ಯಾತನೆಯನ್ನು ಹೇಳಿಕೊಳ್ಳುವ ಅವಕಾಶಗಳೂ ಅವರಿಗೆ ಲಭಿಸುವುದಿಲ್ಲ. ಆದುದರಿಂದ ಇಂದು ತುರ್ತಾಗಿ ಮಕ್ಕಳ ಅಕ್ರಮ ಮಾರಾಟ ಮತ್ತು ಸಾಗಣೆಯನ್ನು ತಡೆಗಟ್ಟುವ ಶಾಸನದ ಅಗತ್ಯವಿದೆ. ಸದ್ಯ ದೇಶದಲ್ಲಿ ಅಕ್ರಮವಾಗಿ ಮಕ್ಕಳ ಸಾಗಣೆ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂಬುದು ಚಿಂತೆಯ ವಿಷಯವಾಗಿದೆ.

ಧರ್ಮ, ಮತೀಯತೆ ಹಾಗೂ ಜಾತಿ ಆಧಾರದಲ್ಲಿ ಸಮಾಜದ ಒಳಗಡೆ ಆಗಾಗ್ಗೆ ನಡೆಯುವ ಘರ್ಷಣೆಗಳಿಂದಾಗಿ ಮಕ್ಕಳ ಬಾಳು ನಿಜಕ್ಕೂ ಗೋಳಾಗುತ್ತಿದೆ. ಗುಜರಾತಿನ ಗೋದ್ರ ಪ್ರಕರಣವಿರಲಿ, ಕಳೆದ ಒಂದೆರಡು ದಶಕಗಳಲ್ಲಿ ಪಂಜಾಬ್‌ನಲ್ಲಿ ನಡೆದ ಗಲಭೆಗಳಿರಲಿ, ನಿತ್ಯವೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾರಣಹೋಮವಿರಲಿ ಅಥವಾ ಈಶಾನ್ಯ ಭಾರತದಲ್ಲಿ ಸಂಭವಿಸುತ್ತಿರುವ ಗದ್ದಲಗಳಿರಲಿ ಈ ಎಲ್ಲದರಲ್ಲೂ ಅನಾಥರಾಗುತ್ತಿರುವವರು ಮಕ್ಕಳು. ತಂದೆತಾಯಿಗಳನ್ನು ಮತ್ತು ಮನೆಗಳನ್ನು ಕಳೆದುಕೊಂಡು ಮಕ್ಕಳು ನಿರ್ಗತಿಕರಾಗುತ್ತಾರೆ. ಅಥವಾ ಪದೇ ಪದೇ ನಡೆಯುವ ಭಯೋತ್ಪಾದಕರ ದಾಳಿ, ಸೈನಿಕ ಕಾರ್ಯಾಚರಣೆ, ಕರ್ಫ್ಯೂ ಇತ್ಯಾದಿಗಳಿಂದಾಗಿ ವಿದ್ಯಾಭ್ಯಾಸದ ಅವಕಾಶಗಳಿಂದ ವಂಚಿತರಾಗುತ್ತಾರೆ. ಇನ್ನೊಂದೆಡೆ ಸುಲಭವಾಗಿ ಈ ಬಗೆಯ ಮಕ್ಕಳ ಮೇಲೆ ಮಂಕುಬೂದಿ ಎರಚಿ, ಅನ್ಯಮತ ನಿರಾಕರಣದ ವಿಚಾರಗಳನ್ನು ಉದ್ದೀಪಿಸಿ ಭಯೋತ್ಪಾದನ ಶಿಬಿರಗಳಿಗೆ ಎಳೆದೊಯ್ದು ಸಶಸ್ತ್ರ ತರಬೇತಿ ನೀಡಿ ಭಯೋತ್ಪಾದಕರ ತಯಾರಿಯೂ ಸಾಗುತ್ತಿದೆ. ದ್ವೇಷ, ಹಿಂಸೆ, ಧನದಾಸೆಗಳಿಂದಾಗಿ ಅವರು ವಿವೇಚನಾರಹಿತವಾಗಿ ತಮ್ಮ ಜೀವ ಕಳೆದುಕೊಳ್ಳುತ್ತಾರೆ ಇಲ್ಲವೆ ಸೆರೆಮನೆಗಳಲ್ಲಿ ಹತ್ತಾರು ವರ್ಷ ಕೊಳೆಯುತ್ತಾರೆ. ಒಟ್ಟಿನಲ್ಲಿ ದೋಷಪೂರಿತ ವಯಸ್ಕ ಲೋಕದೃಷ್ಟಿಗೆ ಮಕ್ಕಳು ಬಲಿಪಶುಗಳು!

ಈ ದೇಶದಲ್ಲಿ ೧೪೭ ದಶಲಕ್ಷ ಸುರಕ್ಷಿತ ಮನೆಗಳಿಲ್ಲದೆ ಕಚ್ಚಾಮನೆಗಳಲ್ಲಿ ವಾಸಿಸುತ್ತಿದ್ದಾರೆ. ೭೭ ದಶಲಕ್ಷ ಮಕ್ಕಳಿಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯವಿಲ್ಲ. ಪ್ರಗತಿ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿನಿತ್ಯ ಸಾವಿರಾರು ಮಕ್ಕಳು ತಮ್ಮದೆಲ್ಲವನ್ನೂ ಕಳೆದುಕೊಂಡು ಪಟ್ಟಣಗಳಿಗೆ ಅಥವಾ ಇನ್ನಾವುದೋ ಊರಿಗೆ ಅಥವಾ ರಾಜ್ಯಕ್ಕೆ ಗುಳೆ ಹೋಗುತ್ತಾರೆ. ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಅವರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಅದರ ಪ್ರತಿಫಲ ಉಣ್ಣುವವರು ಉಳ್ಳವರು. ಭೂಮಿಯನ್ನು ಬಿಟ್ಟುಕೊಟ್ಟವರು ಅನಾಥರು, ನಿರ್ಗತಿಕರು! ಪ್ರವಾಹ, ಬಿರುಗಾಳಿ, ಭೂಕಂಪ, ವಿಪರೀತ ಮಳೆ ಇತ್ಯಾದಿ ಕಾರಣಗಳಿಂದ ಇನ್ನಿತರರು ಮನೆಗಳನ್ನು ಕಳೆದುಕೊಳ್ಳುತ್ತಾರೆ. ಗಂಜಿ ಕೇಂದ್ರಗಳಲ್ಲಿ ಪರಿಹಾರಕ್ಕಾಗಿ ಅಂಗಲಾಚುವ ಇವರ ಮಕ್ಕಳ ಪಾಡು ಅವರ್ಣನೀಯ.

೧೯೯೯ ರಲ್ಲಿ ಬಂದ ಸುನಾಮಿಯಿಂದಾಗಿ ೩.೩ ಮಿಲಿಯ ಮಕ್ಕಳು ನೆಲೆ ಕಳೆದುಕೊಂಡರು. ಸುನಾಮಿ ಅಪ್ಪಳಿಸಿ ಐದು ದಿನಗಳು ಆದ ಬಳಿಕವೂ ಮಕ್ಕಳಿಗಾಗಿ ಯಾವುದೇ ಪರಿಹಾರ ಯೋಜನೆ ಜಾರಿಗೆ ಬರಲಿಲ್ಲ. ಈ ಮಕ್ಕಳು ಎಲ್ಲಿಗೆ ಹೋದರು? ಯಾರು ಅವರನ್ನು ಕರೆದೊಯ್ದರು? ಅವರು ನಿಜಕ್ಕೂ ಬದುಕಿರುವರೇ? ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಕ್ರಿ.ಶ. ೨೦೦೦ ದಲ್ಲಿ ಗುಜರಾತಿನಲ್ಲಿ ಸಂಭವಿಸಿದ ಭೂಕಂಪದಿಂದ ನಿಜಕ್ಕೂ ನೆಲೆ ಕಳೆದುಕೊಂಡ ಮಕ್ಕಳೆಷ್ಟು? ಯಾರಿಗೂ ಗೊತ್ತಿಲ್ಲ. ಪ್ರಾಕೃತಿಕ ವಿಕೋಪಗಳ ಸಂದರ್ಭ ನಮ್ಮಲ್ಲಿ ಇಂಥ ಗೊಂದಲದ ಸ್ಥಿತಿ ಕಂಡುಬರುತ್ತಿದೆ. ಶಿಶುಸ್ನೇಹಿಯಾದ ವಿಪತ್ತು ನಿರ್ವಹಣೆಯ ವ್ಯವಸ್ಥೆ-ನೀತಿ ನಮ್ಮಲ್ಲಿ ಇನ್ನೂ ಜಾರಿಗೆ ಬಂದಿಲ್ಲ.

ಮಕ್ಕಳ ಹಕ್ಕುಗಳ ವಿಷಯದಲ್ಲಿ ಸಂಘಟಿತ ಹೋರಾಟದ ಅಗತ್ಯವಿದೆ. ಸಮೂಹ ಮಾಧ್ಯಮಗಳ ಮೂಲಕ ಮಕ್ಕಳ ಮೂಲಭೂತ ಹಕ್ಕುಗಳ ಬಗ್ಗೆ ಸಾಮಾಜಿಕರಲ್ಲಿ ಅರಿವು ಮೂಡಿಸಬೇಕಾಗಿದೆ. ಫಲಿತಾಂಶ ಆಧಾರಿತ ಯೋಜನೆ ಮತ್ತು ನಿರ್ವಹಣೆಯ ಅಗತ್ಯವಿದ್ದು ಕಾರ್ಯಕ್ರಮಗಳ ಮೇಲುಸ್ತುವಾರಿ, ಸಂಪನ್ಮೂಲಗಳ ಒದಗಾವಣೇ, ಸೂಕ್ತ ಮಾರ್ಪಾಡುಗಳು ಬೇಕಾಗಿವೆ. ಮಕ್ಕಳ ಹಕ್ಕುಗಳ ಸ್ಥಾಪನೆ ಹಾಗೂ ಸಂರಕ್ಷಣೆ ಎಂಬುದು ಒಂದು ರಾಷ್ಟ್ರೀಯ ಆಂದೋಲನ ಅಥವಾ ಅಭಿಯಾನದ ಸ್ವರೂಪ ತಳೆಯಬೇಕಾಗಿದೆ. ಎಲ್ಲ ಸರಕಾರೇತ ಸಂಸ್ಥೆಗಳು ತಳಮಟ್ಟದಲ್ಲಿ ಶಿಕ್ಷಕರನ್ನು, ಶಾಲಾಕಾಲೇಜುಗಳನ್ನು ತಮ್ಮ ಕಾರ್ಯವ್ಯಾಪ್ತಿಗೆ ಅಳವಡಿಸಿಕೊಂಡು ಚೆನ್ನಾಗಿ ದುಡಿಯಬೇಕಾಗಿದೆ.