ಸಾಮಾನ್ಯವಾಗಿ ಮಕ್ಕಳು ಉಲ್ಲಾಸಭರಿತರಾಗುತ್ತಾರೆ. ಚಟುವಟಿಕೆಯಿಂದ ಕೂಡಿರುತ್ತಾರೆ. ಉತ್ಸಾಹದಿಂದ ಆ ಕಡೆ ಈ ಕಡೆ ಓಡಾಡುತ್ತಾರೆ. ಕಿಲಕಿಲ ನಗುತ್ತಾರೆ. ನೋವಾದರೆ ಜೋರಾಗಿ ಅಳುತ್ತಾರೆ. ರೇಗಿಸಿದರೆ ಕೋಪಿಸಿಕೊಳ್ಳುತ್ತಾರೆ. ಸಿಟ್ಟಿನಿಂದ ಪೆನ್ನು, ಬ್ಯಾಗ್‌ ಇತ್ಯಾದಿಗಳನ್ನು ಬಿಸಾಡುತ್ತಾರೆ. ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಾರೆ. ಬಿಟ್ಟ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಾರೆ. ಕೈಗೆ ಸಿಕ್ಕಿದ ವಸ್ತುಗಳನ್ನು ಒಡೆದು, ತೆರೆದು, ಬಿಚ್ಚಿ, ಪರಿಶೀಲಿಸಿ, ಮರಳಿ ಜೋಡಿಸಲು ಹೆಣಗುತ್ತಾರೆ. ಜಾಣತನದ ಮಾತಾಡುತ್ತಾರೆ.  ಕೋಪಿಸಿಕೊಂಡರೂ ರಚ್ಚೆ ಹಿಡಿದರೂ ಹಠಮಾಡಿದರೂ ಹಿರಿಯರಂತೆ ದ್ವೇಷ ಸಾಧಿಸುವುದಿಲ್ಲ. ಲೀಲಾವಿನೋದಗಳಲ್ಲಿ ಮಗ್ನರಾಗಿ ತಮ್ಮನ್ನು ತಾವು ಮರೆಯುತ್ತಾರೆ. ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಅವರು ‘ಭಾವವಿಪಿನ ಸಂಚಾರಿ’ಗಳೂ ಹೌದು; ಕರುಣೆಯ ಕಡಲಿನ ನಾವಿಕರೂ ಹೌದು.

ವಿಚಿತ್ರವೆಂದರೆ ಹಿರಿಯರು ಮಕ್ಕಳ ಈ ಸಹಜಗುಣಗಳನ್ನು ‘ಬಾಲಿಶ’ವೆಂದು ಪರಿಗಣಿಸುತ್ತಾರೆ.  ಇವು ಮಕ್ಕಳಿಗೇ ಸೀಮಿತ ಎಂದೂ ತಿಳಿಯುತ್ತಾರೆ. ದೊಡ್ಡವರು ನಕ್ಕನಲಿಯುವಂತಿಲ್ಲ; ಆಟ ಆಡುವಂತಿಲ್ಲ. ಹಠ ಹಿಡಿಯುವಂತಿಲ್ಲ-ಏಕೆಂದರೆ ಇವೆಲ್ಲ ಮಕ್ಕಳ ಆಸ್ತಿ; ದೊಡ್ಡವರ ‘ಹಿರಿತನ’ದ ಲಕ್ಷಣಗಳಲ್ಲ. ಅದಕ್ಕಾಗಿ ಕೆಲವೊಮ್ಮೆ ನಮ್ಮೂರ ಕಡೆ ಹೇಳುವುದುಂಟು ‘ಕತ್ತೆಗೆ ಆದಷ್ಟು ಪ್ರಾಯ ಆಯಿತು ನಿನಗೆ. ಇನ್ನೂ ಮಕ್ಕಳಾಟಿಕೆ ಬಿಟ್ಟಿಲ್ಲ’; ‘ಏನು ಮಾರಾಯ, ಮದುವೆ ಆದರೂ ಮಕ್ಕಳಾಟಿಕೆ ಬಿಟ್ಟಿಲ್ಲವಲ್ಲ ನೀನು? ಪ್ರಾಯವಾದ ಹಾಗೆ, ಸಂಸಾರದ ನೊಗ ಹೆಗಲೇರಿದ ಮೇಲೆ ಬಾಲ್ಯದ ಗುಣಗಳೆಲ್ಲ ಕರಗಿ ಹೋಗಿ ದೊಡ್ಡವರ ಲಕ್ಷಣಗಳು ವ್ಯಕ್ತಿತ್ವದಲ್ಲಿ ಕಂಡುಬರಬೇಕು. ಹೀಗೆ ಮಾಡದೆ ವ್ಯಕ್ತಿ ಇನ್ನೂ ಚಿಕ್ಕ ಮಕ್ಕಳ ಹಾಗೆಯೇ ವರ್ತಿಸುತ್ತಿದ್ದರೆ ಅದು ಒಂದು ಬಗೆಯ ‘ಹಿಮ್ಮರಳುವಿಕೆ’ ಎಂಬ ಅಹಂ ರಕ್ಷಣಾತಂತ್ರವೂ ಆಗಬಹುದು. ಇದು ಅತಿಯಾದರೆ ಮನೋವಿಕಲತೆಯೂ ಆಗಬಹುದು.

ನಿಜ ಹೇಳಬೇಕೆಂದರೆ ಉತ್ಸಾಹ, ಲವಲವಿಕೆ, ಮುಗ್ಧತೆ, ಕ್ರಿಯಾಶೀಲತೆ, ತನ್ಮಯತೆ, ಕುತೂಹಲ, ಪ್ರಶ್ನಿಸುವ ಮನೋಭಾವ, ಭಾವತೀವ್ರತೆ, ಆವಿಷ್ಕಾರಪ್ರಿಯತೆ ಇವೆಲ್ಲ ಮಾನವ ಸಹಜ ಗುಣಗಳು. ಎಲ್ಲ ವಯಸ್ಸಿನ ವ್ಯಕ್ತಿಗಳಲ್ಲಿ ವಿವಿಧ ಪ್ರಮಾಣದಲ್ಲಿ ಇರುವಂಥ ಗುಣಗಳು. ಆದರೆ ಈ ಗುಣಗಳನ್ನು ‘ಬಾಲಿಶ’, ‘ಮಕ್ಕಳಾಟಿಕೆಯ ಗುಣಗಳು’ ಎಂದು ಭಾವಿಸುವ ಮೂಲಕ ಮಕ್ಕಳು ಈ ಗುಣಗಳನ್ನು ಮೀರಿ ಬೆಳೆದು ದೊಡ್ಡವರಾಗಬೇಕು ಎಂದು ಹಿರಿಯರಾದ ನಾವು ಬಯಸುತ್ತೇವೆ. ಬೆಳೆದವರು ಶಾಂತರಾಗಿರಬೇಕು. ತುಂಬ ಸೂಕ್ಷ್ಮ ಪ್ರಕೃತಿಯವರಿರಬಾರದು , ಭಾವಾತಿರೇಕಕ್ಕೆ ಒಳಗಾಗಬಾರದು. ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಹೆಚ್ಚಿನ ಕಾಳಜಿ ಕಳಕಳಿ ವ್ಯಕ್ತಪಡಿಸಬಾರದು ಇತ್ಯಾದಿ ಪಾಠವನ್ನು ನಾವು ಮಕ್ಕಳಿಗೆ ಕಲಿಸುತ್ತೇವೆ.

ಆದುದರಿಂದಲೆ ದೊಡ್ಡ ಮಕ್ಕಳು ಏನಾದರೂ ಪ್ರಶ್ನೆ ಕೇಳಿದರೆ “ಇದೆಂಥ ಅಸಂಬದ್ಧ ಪ್ರಶ್ನೆ. ಅಷ್ಟೂ ಗೊತ್ತಿಲ್ವೆ ನಿನಗೆ? ಏನು ತಮಾಷೆ ಮಾಡ್ತೀಯ?” ಎಂದು ಶಿಕ್ಷಕರು ಅಥವಾ ಹೆತ್ತವರು ಗದರುತ್ತಾರೆ. ಒಂದೆರಡುಬಾರಿ ‘ಅಧಿಕ ಪ್ರಸಂಗಿ’ ಎಂದು ಗದರಿಸಿಕೊಂಡ ಮಕ್ಕಳು ಮುಂದೆಂದೂ ಪ್ರಶ್ನಿಸುವುದಿಲ್ಲ!

ಸಮಸ್ಯೆಗಳು, ಸುಖದುಃಖಗಳು ಹಿರಿಯರಿಗೆ ಮಾತ್ರವಲ್ಲ. ಮಕ್ಕಳಿಗೂ ಇವೆ. “ಊಟ, ತಿಂಡಿ, ಶಾಲೆ ಎಲ್ಲ ವೆಚ್ಚ ನಾವು ನೋಡಿಕೊಳ್ಳುತ್ತಿರುವಾಗ ಮಕ್ಕಳಿಗೆ ಸಮಸ್ಯೆ ಎಂತದ್ದು!  ಚಿಂತೆ ಏನು?” ಎಂದು ಹಿರಿಯರು ಉದ್ಗರಸಿಯರೇ ಹೊರತು ಅವರ ಸಮಸ್ಯೆಗಳೇನು ಎಂದು ತಿಳಿಯಲು ಹೋಗುವುದಿಲ್ಲ. ಸಮಸ್ಯೆಯು ಎದುರಾದಾಗ ಮಕ್ಕಳು ತಲೆಯ ಮೇಲೆ ಕೈಹೊತ್ತು ಮ್ಲಾನವದನರಾಗಿ ಮರದ ಕೆಳಗೆ ಕುಳಿತು ಗೊಳೋ ಎಂದು ಅಳುವುದಿಲ್ಲ. ಅವರು ಹಿರಿಯರ ಹಾಗೆ ಸಮಸ್ಯೆ ಬಗ್ಗೆ ಚಿಂತೆಮಾಡುತ್ತಾ ಕೂರುವುದಿಲ್ಲ. ಒಂದು ಗಳಿಗೆ ನೋವು, ಮರುಗಳಿಗೆ ನಗು. ಸುಲಭದಲ್ಲಿ ಸೋಲು, ನೋವುಗಳನ್ನು ಮರೆತುಬಿಡಬಹುದು. ಯಾವುದನ್ನು ಒಳ್ಳೆಯದು ಎಂದು ಭಾವಿಸುತ್ತಾರೋ ಅದು ಒಳ್ಳೆಯದು. ತಮ್ಮದೇ ಆದ ಆತ್ಮಕೇಂದ್ರಿತ ಪ್ರಪಂಚದಲ್ಲಿ ಬೆಳೆಯುತ್ತ ಹೋದಂತೆ ಅವರ ಬುದ್ಧಿಯೂ ವಿಕಾಸಶೀಲವಾಗುತ್ತದೆ. ಇದರಿಂದಾಗಿದ ಅವರು ಅಮೂರ್ತ ಚಿಂತನೆಯಲ್ಲಿ ತೊಡಗಲು ಮತ್ತು ಸುತ್ತಲಿನ ಜಗದ ಸಂಕೀರ್ಣತೆಗಳನ್ನು ಗ್ರಹಿಸಲು ಸಾಧ್ಯ.

ಬೆಳೆಯುವುದು, ಪ್ರಾಯವಾಗುವುದು ನಮ್ಮ ಸೋಲು ಮತ್ತು ಅವನತಿ ಎಂದು ಭಾವಿಸಲಾಗುತ್ತದೆ. ಹಾಗೇಕೆ ಭಾವಿಸಬೇಕು? “ನಾವು ದೊಡ್ಡವರಾಗಿ ಮೋಸಹೋದೆವು! ಮಕ್ಕಳಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಗತಕಾಲಂ ಲಯಮಾಯ್ತು” ಎಂದು ಬಹಳ ಮಂದಿ ಹೇಳುತ್ತಾರೆ. ಕವಿಗಳೂ ಕೂಡ ಮುಗ್ಧ ಬಾಲ್ಯವನ್ನು ಇನ್ನಿಲ್ಲ ಮುನ್ನಿಲ್ಲವೆಂಬಂತೆ ಬಣ್ಣಿಸಿದ್ದಾರೆ. “ಪ್ರಾಯ ಆಯಿತು ಮಾರಾಯರೆ. ಇನ್ನು ಸುಖವಿಲ್ಲ. ಬೇಗೆ ಸಾಯುವುದು ಒಳ್ಳೆಯದು” ಎಂದು ಅನೇಕರು ನಿರಾಶೆಯ ಉದ್ಗಾರ ಹೊಮ್ಮಿಸುತ್ತಾರೆ. ಆದರೆ ವ್ಯಕ್ತಿಗಳು ಬೆಳೆದಂತೆ, ಪ್ರಾಯವಾದಂತೆ ಮಾಗುತ್ತ ಪಕ್ವವಾಗುತ್ತ ವಿವೇಕಿಗಳಾಗುತ್ತಾರೆ. ಇದು ಮನುಷ್ಯನಿಗೆ ಪ್ರಾಯ ನೀಡುವ ಕೊಡುಗೆ. ಆದುದರಿಂದಲೇ ತಮ್ಮನ್ನು ಪ್ರೀತಿಗೌರವಗಳಿಂದ ಮಾತನಾಡಿಸಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಮತ್ತು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಗುರುಹಿರಿಯರ ಜೊತೆ ಮಕ್ಕಳು ಆತ್ಮೀಯತೆ ಸಾಧಿಸುತ್ತಾರೆ. ಅವರೆಡೆಗೆ ಆಕರ್ಷಿತರಾಗುತ್ತಾರೆ.

ಒಳಗೆ ಸಭೆ ನಡೆಯುತ್ತಿತ್ತು. ಭಾಷಣವೀರರ ಭಾಷಣ ಭೋರ್ಗರೆಯುತ್ತಿತ್ತು. ಸಭಾಭವನದ ಹೊರಗೆ ಒಂದು ಪುಟ್ಟ ಮಗು ಬೂಟುಗಾಲಿನ ಸದ್ದು ಮಾಡುತ್ತ ಓಡೋಡಿ ಬರುತ್ತ ‘ಅಮ್ಮಾ, ಅಮ್ಮಾ’ ಎಂದು ಗಟ್ಟಿಯಾಗಿ ಕರೆಯುತ್ತಿತ್ತು. ಅಮ್ಮ ಸುಮ್ಮನಿರು ಎಂದು ಸನ್ನೆಮಾಡುತ್ತಿದ್ದರೂ ಮಗು ಕೇಳುತ್ತಿಲ್ಲ. ಒಳಗೆ ಕುಳಿತ ಜನ ಹಿಂತಿರುಗಿ ನೋಡಿ ನಕ್ಕರು. ಮತ್ತೆ ಭಾಷಣ ವೀರನ ಕಡೆ ಮುಖ ಹೊರಳಿಸಿದರು. ಸಂಘಟಕದಲ್ಲಿ ಒಬ್ಬರು “ಮಗು ಯಾರದ್ದು? ಬೇಗ ಮಗುವನ್ನು ಆಚೆ ಕರ್ಕೊಂಡು ಹೋಗಿ. ನಾನ್‌ಸೆನ್ಸ್‌” ಎಂದು ಕಿರುಚಿದರು.

ಮಗು ಕೂಗಿದ್ದನ್ನು ಕೇಳಿ ಹಿಂತಿರುಗಿ ನೋಡಿ ನಕ್ಕ ಜನಕ್ಕೆ ಕಾರ್ಯಕ್ರಮದ ಶಾಂತಿಗೆ ಭಂಗಬಂದಿತೆಂದು ಅನ್ನಿಸಿದೆಯೇ ಹೊಲರತು ಮಗುವಿನ ಭಾವನೆ ನಿಜವಾದುದು. ತಾಯಿಯ ಹುಟುಕಾಟದಲ್ಲಿರುವ ಮಗುವಿನ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅನ್ನಿಸಿರಲಾರದು. ‘ಇದೆಲ್ಲ ಮಕ್ಕಳ ಸಹಜಗುಣ’, ‘ಮಕ್ಕಳಿರುವುದೇ ಹಾಗೆ’ ಎಂಬ ಯೋಚನೆಗಳು ಮನಸ್ಸನ್ನು ಮುತ್ತಿಕೊಳ್ಳುತ್ತವೆ. ಮಗು ಅಮ್ಮ ಎಂದು ಕೂಗುತ್ತಿದ್ದರೂ ತಾಯಿ ಆ ಕಡೆ ಹೋಗಲಿಲ್ಲ. ಹೋದರೆ ಭಾಷಣ ತಪ್ಪಿಹೋಗುತ್ತದೆ. ಮಗುವೇ ತನ್ನ ಬಳಿಗೆ ಬರಲಿ ಎಂಬ ಧೋರಣೆ ಆಕೆಯದ್ದು. ಮಗುವಿನ ಬದಲಿಗೆ ಗಂಡ ‘ಅಮ್ಮೀ’ ಅಂತ ಕೂಗುತ್ತಾ ಬಂದಿದ್ದರೆ ಅವಳು ಕೂಡಲೆ ಅತ್ತ ಓಡುತ್ತಿದ್ದಳು. ‘ಎಂತ, ಹೀಗೆ ಗಟ್ಟಿಯಾಗಿ ಹೇಳುವುದು’ ಎಂದು ಸಣ್ಣಗೆ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಳು. ಮಕ್ಕಳು ಸುಮ್ಮಸುಮ್ಮನೆ ಅಳುತ್ತಾಋಎ. ಅದನ್ನು ಕೇಳಿಯೂ ಕೇಳದಂತಿರಬೇಕು ಎಂಬ ಧೋರಣೆಗಳು ತೀರ ತಪ್ಪು. ತನಗೆ ನಿಜಕ್ಕೂ ನೋವಾದಾಗ, ದುಃಖವಾದಾಗ, ಭಯವಾದಾಗ ಮಕ್ಕಳು ಅಳುತ್ತಾರೆ. ತಮಗೆ ಯಾವುದೋ ಒಂದು ವಸ್ತು ನಿಜಕ್ಕೂ ಬೇಕು ಎಂದಾಗ ‘ಅದನ್ನು ಕೊಡಿಸಿ’ ಎಂದು ಹಠಹಿಡಿಯುತ್ತಾರೆ.

ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯುತ್ತಿತ್ತು. ಒಬ್ಬಳು ಹುಡುಗಿ ಕ್ಯಾಸೆಟ್‌ ಹಾಕಿಕೊಂಡು ಭರತನಾಟ್ಯ ಶುರುಮಾಡಿದಳು. ಒಂದೆರಡು ನಿಮಿಷದ ಬಳಿಕ ‘ಕ್ಯಾಸೆಟ್‌’ ಕೈಕೊಟ್ಟಿತು. ಆದರೆ ಹುಡುಗಿ ಧೃತಿಗೆಡಲಿಲ್ಲ. ಅಳಲಿಲ್ಲ. ಭರತನಾಟ್ಯ ತನಗೆ ಕರುಣಿಸಿದ ಲಾಸ್ಯದಲ್ಲೇ ಕಾರ್ಯಕ್ರಮ ಮುಂದುವರಿಸಿದಳು. ಅವಳೇ ಹಾಡುತ್ತ ಕಾರ್ಯಕ್ರಮವನ್ನು ಪೂರೈಸಿದಳು. ನೆರೆದ ವಿದ್ಯಾರ್ಥಿಮಿತ್ರರು, ಶಿಕ್ಷಕರು, ರಕ್ಷಕರು ದೀರ್ಘ ಕರತಾಡನ ಮಾಡಿದರು. “ಎಂಥ ಜಾಣೆ?” “ಹುಡುಗಿ ಬಾಳ ಚುರುಕು. ನೋಡಿ ಹೇಗೆ ಸಾವರಿಸಿಕೊಂಡು ಕಾರ್ಯಕ್ರಮ ಕೊಟ್ಟಳು. ಮಕ್ಕಳೆಂದರೆ ಹೀಗಿರಬೇಕು” ಎಂದೆಲ್ಲ ಮಾತಾಡಿಕೊಂಡರು. ಅದೇ ವೇದಿಕೆಯ ಮೇಲೆ ಭಾಷಣ ಮಾಡುತ್ತಿರುವ ಮಂತ್ರಿಯೊಬ್ಬರು ಭಾಷಣದ ನಡುವೆ ಕುಸಿದು ಮತ್ತೆ ಎದ್ದರೆ “ಎಷ್ಟು ಜಾಣ? ಚುರುಕು… ಎನ್ನುತ್ತಾರಾ?” ಖಂಡಿತಕ್ಕೂ ಇಲ್ಲ. “ಪಾಪ ನೋವಾಯಿತೋ ಏನೋ”, “ಛೆ, ಹೀಗಾಗಬಾರದಿತ್ತು” , “ಎಲ್ಲರೆದುರು ಮರ್ಯಾದೆ ಹೋಯಿತು. ಎಷ್ಟು ನೊಂದು ಕೊಂಡರೊ” ಎಂದು ಜನ ಯೋಚಿಸುತ್ತಾರೆ.

ಮಕ್ಕಳ ನಿಜವಾದ ಭಾವನೆಗಳು, ನೋವುಗಳು ಹಾಗೂ ಅಪಮಾನಗಳನ್ನು ನಾವು ಯಥಾರ್ಥವೆಂದು ಪರಿಗಣಿಸುವುದಿಲ್ಲ. ಅವನ್ನು ತಮಾಷೆಯಾಗಿ ಹಗುರವಾಗಿ ಸ್ವೀಕರಿಸುತ್ತೇವೆ. ‘ಮಕ್ಕಳಿಗೆಂತ ಚಿಂತೆ?’ ‘ಅವಕ್ಕೆಂತ ಟೆನ್ಯನ್‌?’ ‘ಅವಕ್ಕೇನು ಗೊತ್ತಾಗುತ್ತೆ?’ ಎಂಬುದೇ ಹಿರಿಯರ ಸಿದ್ಧ ಉತ್ತರ. ಹೀಗಾಗಿ ಹಿರಿಯರ ಅಗತ್ಯಗಳಲು, ಭಾವನೆಗಳು ನಿಜ; ಮಕ್ಕಳದ್ದಲ್ಲ ಎಂದು ಭಾವಿಸುತ್ತೇವೆ. ನಮಗೆ ಮಗುವನ್ನು ಮುದ್ದುಮಾಡಬೇಕು ಅನ್ನಿಸಿದಾಗ ಮುದ್ದುಮಾಡುತ್ತೇವೆ. ಏಕೆಂದರೆ ದೊಡ್ಡವರಾದ ನಮ್ಮ ಭಾವನೆಗಳು ನಿಜವಾದವು. ಅದೇ ಮಗುವಿಗೆ ಆ ಗಳಿಗೆಯಲ್ಲಿ ನಾವು ಮದ್ದು  ಮಾಡುವುದು ಬೇಕಿಲ್ಲ. ಆದರೆ ಮಗು ಅದನ್ನು ಸಹಿಸಿಕೊಳ್ಳಬೇಕು. ಇನ್ನಾವುದೋ ಸಂದರ್ಭದಲ್ಲಿ ಮಗುವಿಗೆ ಅಪ್ಪ ನ ಮುದ್ದುಬೇಕು. “ಅಪ್ಪಾ ಅಪ್ಪಾ ಈಗ ನನಗೊಂದು ಕಿಸ್‌ ಕೊಡಪ್ಪಾ” ಎಂದು ಗೋಗರೆದರೂ “ಹೋಗೇ, ನನಗೆ ಪುರುಸೊತ್ತಿಲ್ಲ. ಆಫೀಸಿಗೆ ಹೊರಟು ನಿಂತಿದ್ದೇನೆ. ಕಾರ್ ಸ್ಟಾರ್ಟ್ ಮಾಡಿದ್ದೀನಿ. ಅಮ್ಮನ ಹತ್ರ ಕೇಳು” ಎಂದು ಅಪ್ಪ ಹೇಳಿ ಭರ್ರ‍ಂತ ಹೋಗಿಬಿಡ್ತಾನೆ. ಮಗುವಿಗೆ ನಿಜಕ್ಕೂ ಪ್ರೀತಿ ಬೇಕು ಎಂದಾಗ ಇಲ್ಲ! ಬೇಡವೆನಿಸಿದಾಗ ಧಾರಾಳ ಪ್ರೀತಿ. ಹಿರಿಯರು ಋಷಿಯಲ್ಲಿದ್ದಾಗ ಮಕ್ಕಳನ್ನು ಜೀವಂತ ಬೊಂಬೆಗಳೆಂದು ತಿಳಿದು ಮುದ್ದುಮಾಡುತ್ತಾರೆ. ಪ್ರೀತಿ ತೋರುತ್ತಾರೆ. ಆದರೆ ಅವರ ಮನಸ್ಸು ಕೆಟ್ಟಿರುವಾಗ ಅದೇ ಮಕ್ಕಳನ್ನು ನಿರ್ಜೀವ ಬೊಂಬೆಗಳೆಂದು ಪರಿಗಣಿಸುತ್ತಾರೆ. ಬೊಂಬೆಯನ್ನು ಕಿಟಕಿ ಯಿಂದಾಚೆಗೆ ಎಸೆದಂತೆ, ಮಹಡಿಯಿಂದ ಕೆಳಗೆ ಬೀಳಿಸಿದಂತೆ, ಕಾಲಿನಿಂದ ಮೆಟ್ಟಿದಂತೆ ಮಕ್ಕಳ ಭಾವನೆಗಳನ್ನು ಕಡೆಗಣಿಸುತ್ತಾರೆ. ‘ಕಣ್ಮಣಿ’ಗಳು ‘ಕಣ್ಣಕಸ’ವಾಗುತ್ತಾರೆ!

ಮಕ್ಕಳು ಚೂಟಿಯಾಗಿದ್ದಾರೆ ಎಂದು ನಮಗನ್ನಿಸಲು ಕಾರಣ ಅವರ ‘ಮುಗ್ಧತೆ’. ಹಾಗಂದರೇನು? ಅವರು ಅನನುಭವಿಗಳೂ, ಅಜ್ಞಾನಿಗಳೂ ಆಗಿರುತ್ತಾಋಎ. ಆದರೆ ಅಜ್ಞಾನವೆಂಬುದು ವರವಲ್ಲ. ಅದೊಂದು ದುರದೃಷ್ಟ. ಮಕ್ಕಳು ಅಜ್ಞಾನದ ಬಲೆಯಿಂದ ಬಿಡಿಸಿಕೊಂಡು ತಮ್ಮ ಸುತ್ತಲಿನ ವಿದ್ಯಮಾನಗಳನ್ನು ಅರಿತುಕೊಳ್ಳಲು ಹಂಬಲಿಸುತ್ತಾರೆ. ಹಿರಿಯರಾದ ನಾವು ಅವರ ಬಿಡುಗಡೆಗಾಗಿ ನೆರವೀಯಬೇಕು. ಮುಗ್ಧತೆ ಅಂದಾಗ ಮಕ್ಕಳಲ್ಲಿ ಭರವಸೆಯಿದೆ, ವಿಶ್ವಾಸಾರ್ಹತೆಯಿದೆ, ವಿಶ್ವಾಸವಿದೆ. ಜಗತ್ತು ಅವರಿಗಾಗಿ ತೆರೆದುಕೊಂಡಿದೆ. ಬದುಕಿನಲ್ಲಿ ಹಲವು ಸಾಧ್ಯತೆಗಳಿವೆ. ತಮಗೆ ತಿಳಿಯದುದನ್ನು ತಿಳಿದುಕೊಳ್ಳಲು ಮುಕ್ತ ಅವಕಾಶಗಳಿವೆ. ಈಗ ತಮ್ಮಿಂದ ಮಾಡಲಿಕ್ಕಾಗದ ಕೆಲಸಗಳನ್ನು ಕಲಿಯವ ಚೈತನ್ಯವಿದೆ ಎಂದೂ ಅರ್ಥವಿಸಬಹುದು. ಈ ಗುಣಗಳು ಎಲ್ಲರಲ್ಲೂ ಇರಬೇಕಾದ ಗುಣಗಳು. ಆದರೆ ಇವು ಮಕ್ಕಳಿಗೇ ವಿಶಿಷ್ಟವಾದ ಲಕ್ಷಣಗಳು ಎಂದು ಅವನ್ನು ಬೇರ್ಪಡಿಸಿ ಮಕ್ಕಳ ಕುತ್ತಿಗೆಗೆ ಕಟ್ಟುವುದು ನಮ್ಮ ನೈರಾಶ್ಯದ ಸಂಕೇತ.

ಕಡಲತೀರದ ಮರಳ ದಂಡೆಯ ಮೇಲೆ ಆಡುತ್ತಿರುವ ಮಕ್ಕಳನ್ನು ಗಮನಿಸಿ. ಅವು ತಮ್ಮ ಕಾಲುಗಳನ್ನು ಹೊಯಿಗೆ ರಾಶಿಯ ಒಳಗೆ ಇಳಿಬಿಟ್ಟು ಮನೆಯಂಥ ಒಂದು ರಚನೆಯನ್ನು ಮಾಡುತ್ತವೆ. ಅಲ್ಲೆಲ್ಲಾದರೂ ಸಮೀಪದಲ್ಲಿ ತೆಂಗಿನ ಗರಟವಿದ್ದರೆ ಹೊಯಿಗೆಯನ್ನು ಅದರೊಳಕ್ಕೆ ಭದ್ರವಾಗಿ ತುಂಬಿ ಕವುಚಿಹಾಕಿ ಇಡ್ಲಿ ಮಾಡುತ್ತವೆ. ಗಂಡ-ಹೆಂಡತಿ ಆಟ ಆಡುತ್ತವೆ. “ಚೂಟಿಯಾಗಿರಬೇಕು, ಚುರುಕಾಗಿರಬೇಕು”  ಎಂದು ತೋರಿಸಿಕೊಳ್ಳಲಿಕ್ಕೆ ಅವು ಹಾಗೆ ಮಾಡುವುದಿಲ್ಲ. ತಾವು ಚುರುಕಾಗಿದ್ದೇವೆ ಎಂದೂ ಭಾವಿಸುವುದಿಲ್ಲ. ತಾವು ಮಾಡುವ ಯಾವುದೇ ಕೆಲಸದಲ್ಲಿ ಮಕ್ಕಳು ತನ್ಮಯರಾಗುತ್ತಾರೆ. ತಮ್ಮ ಸುತ್ತಲಿನ ಲೋಕವನ್ನೂ ಮರೆಯುತ್ತಾರೆ. ದೊಡ್ಡವರಷ್ಟೇ ಗಾಂಭೀರ್ಯದಿಂದ ತಮ್ಮ ಆಟಪಾಠಗಳಲ್ಲಿ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾವು ಅವರನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಯಸುತ್ತಾರೆ.

ಈಗತಾನೆ ನಡೆಯುವುದನ್ನು ಕಲಿತ ಮಗುವನ್ನು ಗಮನಿಸಿ. ಆ ಮಗು ತಾನಾಗಿ ಎದ್ದು ಬಿದ್ದು, ಪುಟ್ಟಪುಟ್ಟ ಹೆಜ್ಜೆಯಿಡುತ್ತಾ ನಡೆಯುತ್ತದೆ. ನಿಮ್ಮ ಶಹಭಾಶ್‌. ಅನುಮೋದನೆಯ ಬಯಕೆಗಾಗಿ ಅದು ನಡೆಯುತ್ತಿಲ್ಲ. ನಡಿಗೆಯ ಕ್ರಿಯೆಯಲ್ಲಿ ಅದು ಸಂಪೂರ್ಣ ತನ್ನನ್ನು ತೊಡಗಿಸಿಕೊಂಡಿದೆ. ಧೈರ್ಯ, ಸಾಹಸ ಹಾಗೂ ಆನಂದದಿಂದ ಅದು ನಡೆಯುತ್ತದೆ. ಬಿದ್ದರೆ ಎದ್ದು ನಿಲ್ಲುತ್ತದೆ. ಮತ್ತೆ ಹೆಜ್ಜೆ ಕಿತ್ತು ಮುಂದೆ ಸಾಗಲು ಯತ್ನಿಸುತ್ತದೆ. ಮಗು ಹೆತ್ತವರಿಗಾಗಿ, ನೋಡುವವರಿಗಾಗಿ ನಡೆಯುತ್ತಿಲ್ಲ. ತನಗಾಗಿ ನಡೆಯುತ್ತಿದೆ.  ಮಗುವನ್ನು ಅದರ ಪಾಡಿಗೆ ಬಿಟ್ಟುಬಿಡಿ. ಅದು ತನ್ನ ಪಾಡಿಗೆ ಏಳಲಿ ಬೀಳಲಿ, ಎದ್ದು ನಡೆಯಲಿ. ಪದೇ ಪದೇ ನಿಮ್ಮ ಸಹಾಯಹಸ್ತ ಮುಂದೆಬಂದು ಅದಕ್ಕೆ ತೊಂದರೆ ಕೊಡದಿರಲಿ. ಮಕ್ಕಳು ಮಾಡುವ ಕೆಲಸದ ಬಗ್ಗೆ ಹಿರಿಯರ ತೀರ್ಪು ಹೇಗಿರುತ್ತದೆ ನೋಡಿ: “ನೀನು ಮಾಡುತ್ತಿರುವ ಕೆಲಸ (ಮಣ್ಣಿನಲ್ಲಿ ಆಟ) ಬಹಳ ಮುಖ್ಯವಾದುದೆಂದು ಭಾವಿಸಿ ಅದರಲ್ಲಿ ಮಗ್ನನಾಗಿರುವೆ. ಆದರೆ ನಿನಗೆ ಗೊತ್ತಿಲ್ಲ. ಅದು ಅಷ್ಟು ಮುಖ್ಯವಲ್ಲವೆಂದು. ಹಿರಿಯರಾದ ನಮಗೆ ಗೊತ್ತಿದೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲವೆಂದು. ನೀನು ಮಾಡುವ ಅನೇಕ ಕೆಲಸಗಳು ಮುಂದಕ್ಕೆ ಉಪಯೋಗಬಾರದ ಕ್ಷುಲ್ಲಕ ಕೆಲಸಗಳು.” ಚಿತ್ರಕ್ಕೆ ಬಣ್ಣ ತುಂಬಿದ ಮಗುವಿನ ಬೆನ್ನು ತಟ್ಟುತ್ತ “ಇದೆಲ್ಲ ನಾಳೆ ಹೊಟ್ಟೆ ತುಂಬಿಸಿಕೊಳ್ಳಲಿಕ್ಕೆ ನೆರವಿಗೆ ಬಾರದ ಕೆಲಸಗಳು” ಎಂದುಕೊಳ್ಳುತ್ತ ಮುಸಿಮುಸಿ ನಗುತ್ತೇವೆ. ಆ ಮಗು ದೊಡ್ಡದಾದ ಹಾಗೆ “ಇಂಥ ಕೆಲಸಗಳನ್ನೆಲ್ಲ ಬಿಟ್ಟುಬಿಡು. ಪದ್ಯ ಬರೆಯೋದ್ರಿಂದ, ಚಿತ್ರ ಬಿಡಿಸೋದ್ರಿಂದ, ಹಾಡೋದ್ರಿಂದ ಹೊಟ್ಟೆ ತುಂಬೋದಿಲ್ಲ. ಓದು ಓದು ಓದು, ರ‍್ಯಾಂಕ್‌ ಗಳಿಸು” ಎಂದು ಮೆದುಳು ಕೊರೆಯುತ್ತೇವೆ. ಆದರೆ ಮಗು ತಾನು ಮಾಡುವ  ಕೆಲಸವನ್ನು ಉಪಯುಕ್ತ ನಿರುಪಯುಕ್ತ ಎಂದು ಯೋಚಿಸದೆ ಗಂಭೀರವಾಗಿಯೇ ಸ್ವೀಕರಿಸುತ್ತದೆ.

ಅಸಹಾಯಕರೂ ಪರಾವಲಂಬಿಗಳೂ ಅಧ್ಯಕ್ಷರೂ ಅಜ್ಞಾನಿಗಳೂ ಆದ ಮಕ್ಕಳೇ ನಮಗೆ ಬೇಕು. ಏಕೆಂದರೆ ಅವರು ನಮ್ಮನ್ನು ಅವಲಂಬಿಸುತ್ತಾರೆ. ನೋಡಿ! ಅವರಿಗೆ ನಮ್ಮ ಸಹಾಯ ಬೇಕು. ನಾವು ಅವರನ್ನು ಪ್ರೇಮದ ಗೊಂಬೆಗಳೆಂದು ಪರಿಭಾವಿಸುತ್ತೇವೆ. ಜಾಣ್ಮೆಯಿಂದ ಸ್ವತಂತ್ರವಾಗಿ ವ್ಯವಹರಿಸುವ ಮಕ್ಕಳು ನಮಗೆ ಇಷ್ಟವಾಗುವುದಿಲ್ಲ. ಏಕೆಂದರೆ ಅವರು ಚಿತ್ರವಿಚಿತ್ರ ಪ್ರಶ್ನೆಗಳ ಮೂಲಕ ನಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಾರೆ. “ನಾವು ಕುಡಿದ ನೀರು ಮೂತ್ರವಾಗುವುದು ಹೇಗೆ? ತಿಂದ ಆಹಾರ ರಕ್ತವಾಗುವುದು ಹೇಗೆ? ಹಸಿರುಹುಲ್ಲು ತಿನ್ನುವ ದನ ಬಿಳಿಯಬಣ್ಣದ ಹಾಲು ಕೊಡುವುದು ಹೇಗೆ?” ಎಂದು ಜಾಣತನದ ಸವಾಲೆಸೆದು ನಮ್ಮ ಬುದ್ಧಿಯನ್ನು ಪರೀಕ್ಷಿಸುತ್ತಾರೆ. ನಮ್ಮ ಸಹಾಯ ಬಯಸದ ಸಾಕಷ್ಟು ಬುದ್ಧಿಶಾಲಿಯಾದ ಮಗುವನ್ನು ನಾವು ಬಾಯುಪಚಾರಕ್ಕೆ ‘ಜಾಣ’ ಎನ್ನುತ್ತೇವೆ. ಕೆಲ ಸಮಯದ ಬಳಿಕ ‘ಅವನು ಅಧಿಕಪ್ರಸಂಗಿ’ ಎಂದೂ ಜರೆಯುತ್ತೇವೆ. ಏಕೆಂದರೆ ಆತ ನಮಗೊಂದು ಸವಾಲು. ಇಂಥ ಪ್ರಕರಣಗಳು ಶಾಲೆಯಲ್ಲಿ ಮಾಮೂಲು.

ನೋಡಿ, ಶಾಲೆಗಳಲ್ಲಿ ಕೆಲವು ಮಕ್ಕಳು ಎಂಥೆಂಥ ಪ್ರಶ್ನೆಗಳನ್ನು ಕೇಳಿ ಶಿಕ್ಷಕರನ್ನು ಕಂಗಾಲು ಮಾಡಿಬಿಡುತ್ತಾರೆ. ‘ಏನು? ಏಕೆ? ಹೇಗೆ? ಯಾರು? ಎಲ್ಲಿ? ಯಾವಾಗ?’ ರುಡ್‌ಯಾರ್ಡ್ ಕಿಪ್ಲಿಂಗ್‌ನ ಈ ಆರು ಸೇವಕರು ಮಕ್ಕಳ ಸೇವಕರೂ ಹೌದು. ಹಾಗಾಗಿ ಮಕ್ಕಳು ಶಾಲೆಯಲ್ಲಿ ಈ ಸೇವಕರನ್ನು ಬಳಸಿಕೊಂಡಾಗ ಮೇಷ್ಟ್ರು ಕಕ್ಕಾಬಿಕ್ಕಿಯಾಗಿ ಬೈದು ತಲೆ ಮೊಟಕುತ್ತಾರೆ. “ಪ್ರಶ್ನೆ ಕೇಳುವುದು ನಿನ್ನ ಹಕ್ಕಲ್ಲ. ಶಿಕ್ಷಕನಾಗಿ ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡುವುದು ವಿದ್ಯಾರ್ಥಿಯಾದ ನಿನ್ನ ಕರ್ತವ್ಯ” ಎಂದು ಲೂಯಿ ಪ್ಯಾಶ್ಚರನಿಗೆ ಅವನ ಗುರುಗಳು ಹೇಳಿದಂತೆ ಇಂದಿನ ಕಂಗಾಲಾದ ಶಿಕ್ಷಕರು ಮಕ್ಕಳಿಗೆ ಹೇಳುತ್ತಾರೆ.

‘ವಯಸ್ಕರ ಹಾಗೆ’ ವರ್ತಿಸುವ ಮಕ್ಕಳನ್ನು ಕಂಡರೆ ಹಿರಿಯರಿಗೆ ಅಸಹನೆ. ‘ಬುದ್ಧಿ ಹೆಚ್ಚಾಗಿದೆ ಅವನಿಗೆ’, ‘ದೊಡ್ಡವರ ಬುದ್ಧಿ’ ಎಂದು ಹಂಗಿಸುತ್ತಾರೆ. ಆದರೆ ಮಕ್ಕಳು ತಾವು ನಿಷ್ಪ್ರಯೋಜಕರು, ಅಧ್ಯಕ್ಷರು ಎಂದು ಹೇಳಿಸಿಕೊಳ್ಳಲು ತಯಾರಿರುವುದಿಲ್ಲ. ಅಜ್ಞಾನಿಗಳು ಎಂದು ಕರೆದರೂ ಒಪ್ಪಿಯಾರು. ತಮ್ಮ ಸುತ್ತಲಿರುವ ದೊಡ್ಡವರು ಎಷ್ಟು ಚೆನ್ನಾಗಿ ಕೆಲವೊಂದು ಕೆಲಸಗಳನ್ನು ಮಾಡುತ್ತಾರೋ ಅವರಷ್ಟೇ ಚೆನ್ನಾಗಿ ಆ ಕೆಲಸಗಳನ್ನು ತಾವೂ ಮಾಡಬೇಕೆಂದು ಹಂಬಲಿಸುತ್ತಾರೆ. ಕೆಲಸ ಮಾಡುವುದನ್ನು ಚೆನ್ನಾಗಿ ಕಲಿಯುತ್ತಾರೆ. ಆದರೆ ಶಾಲೆಯಲ್ಲಿ ಕೆಲವೊಮ್ಮೆ ಪ್ರೋತ್ಸಾಹಕ್ಕೆ ಬದಲಾಗಿ ತಿರಸ್ಕಾರವೇ ಅಂಗೈಯಲ್ಲಿ ಬಂದು ಕೂರುವುದರಿಂದ ಅವರಿಗೆ ಶಾಲೆಯನ್ನು ಕಂಡರೆ ಬೇಸರ.

ಅನೇಕ ಹಿರಿಯರಿಗೆ ಮಕ್ಕಳು ಮಕ್ಕಳಾಗಿಯೇ ಇರಬೇಕು. ದೊಡ್ಡವರ ಹಾಗಿರಕೂಡದು. ಅವರು ಎಲ್ಲದಕ್ಕೂ ಹಿರಿಯರನ್ನು ಅವಲಂಬಿಸಬೇಕು ಎಂಬ ಸ್ಥಾಪಿತ ಹಿತಾಸಕ್ತಿ. ಪ್ರಾಯದ ದೃಷ್ಟಿಯಿಂದ ಮಗು ಮಗುವಾಗಿರಲಿ. ಆದರೆ ತಿಳಿವಳಿಕೆ, ಕಲಿಕೆ, ಲೋಕಜ್ಞಾನದ ದೃಷ್ಟಿಯಿಂದ ಮಗು ಬೆಳೆಯಲಾರದೆ? ಮಗು ನಮ್ಮಂತೆಯೇ ಯೋಚಿಸುವ, ಸ್ಪಂದಿಸುವ ವ್ಯಕ್ತಿಯಲ್ಲವೆ? ಮನುಷ್ಯ ನಲ್ಲವೆ?