ಇಂದು ಆಧುನಿಕ ಸಮಾಜದಲ್ಲಿ ಹೈಸ್ಕೂಲು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ನಡುವೆ ಮಾದಕದ್ರವ್ಯ ವ್ಯಸನ ಪ್ರಬಲವಾಗುತ್ತಿದೆ. ಒಬ್ಬರನ್ನೊಬ್ಬರು ನೋಡಿ ಚಟಗಳನ್ನು ಹುಡುಗ ಹುಡುಗಿಯರು ಕಲಿಯುತ್ತಿದ್ದಾರೆ. ಹೈಸ್ಕೂಲಿನ ಹತ್ತನೆಯ ತರಗತಿಯ ಹುಡುಗರು ಕ್ರೀಡಾಕೂಟ, ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ತಾವೀಗ ಹುಡುಗರಲ್ಲ, ಗಂಡಸರು ಎಂದು ತೋರಿಸಿಕೊಳ್ಳಲು ಕಣ್ಣುಮುಚ್ಚಿ ಸಿಗರೇಟು ಸೇದುತ್ತಾರೆ. ಕಾಲೇಜುಗಳಿಗೆ ಹೋಗುವ ಹುಡುಗರು ಕ್ಯಾಂಟೀನುಗಳಲ್ಲಿ, ಹೋಟೆಲುಗಳಲ್ಲಿ ಒಂದೊಂದು ‘ದಂ’ ಎಳೆದುಕೊಂಡು ತರಗತಿಗಳಿಗೆ ಹೋಗುತ್ತಾರೆ. ಕ್ರೀಡಾಕೂಟಗಳಲ್ಲಿ ಪದಕಗಳಿಸಿದ್ದಕ್ಕೆ, ಹುಟ್ಟುಹಬ್ಬಕ್ಕೆ, ಚುನಾವಣೆಗಳಲ್ಲಿ ಗೆದ್ದದ್ದಕ್ಕೆ ಪಾರ್ಟಿಗಳನ್ನು ಮಾಡಿ ಬೀರ್ ಹಾಗೂ ಇತರ ಮಾದಕದ್ರವ್ಯ ಸೇವನೆ ಮಾಡುತ್ತಾರೆ. ಶಾಲೆ ಕಾಲೇಜುಗಳ ಸಮೀಪದಲ್ಲಿ ಗಾಂಜಾ, ಅಫೀಮು, ಉದ್ದೀಪನ ದ್ರವ್ಯಗಳ ಕಳ್ಳ ಮಾರಾಟದ ಜಾಲವಿದ್ದರೆ ಆ ಜಾಲದಲ್ಲಿ ಸಿಲುಕಿಕೊಳ್ಳುತ್ತಾರೆ. ಗೂಡಂಗಡಿಗಳ ಮರೆಯಲ್ಲಿ ಸೇವನೆಮಾಡಿ ಪಾರ್ಕುಗಳಲ್ಲಿ, ಆಟದ ಬಯಲಿನಲ್ಲಿ ಹಾಯಾಗಿ ಬಿದ್ದುಕೊಳ್ಳುತ್ತಾರೆ. ಹಾದಿಬೀದಿಯಲ್ಲಿ ಹೋಗುವ ಹುಡುಗಿಯರನ್ನು ಚುಡಾಯಿಸುತ್ತಾರೆ. ಕೈಯಲ್ಲಿನ ದುಡ್ಡೆಲ್ಲ ಖಾಲಿಯಾದರೆ ಮಾದಕ ದ್ರವ್ಯಗಳ ದಾಸರಾಗಿ ಮಾರ್ಪಟ್ಟಿರುವ ಇವರು ಒಂಟಿಯಾಗಿ ತಿರುಗುವವರ ಮೇಲೆರಗಿ ಹಣ ದೋಚುತ್ತಾರೆ. ಹೆಂಗಸರ ಕರಿಮಣಿಸರ, ಬಂಗಾರ ಅಥವಾ ಮೊಬೈಲ್‌ ಇತ್ಯಾದಿ ಅಪಹರಿಸುತ್ತಾರೆ. ಉಡುಪಿಯ ಸುತ್ತಮುತ್ತ ಒಂದು ಆರು ತಿಂಗಳು ಸರಗಳ್ಳರ ಹಾವಳಿ ವಿಪರೀತವಾಯಿತು. ಬೈಕಿನಲ್ಲಿ ಬಂದು ಮಾಂಗಲ್ಯಸರ ಕಿತ್ತುಕೊಂಡು ಯಾರ ಕೈಗೂ ಸಿಗದೆ ಹಾರಿಹೋಗುತ್ತಿದ್ದ ಕಳ್ಳರ ಸಂಖ್ಯೆ ಹೆಚ್ಚಿತು. ಒಂದೇ ಒಂದು ಪ್ರಕರಣವನ್ನು ಭೇದಿಸುವುದೂ ಪೋಲೀಸರಿಂದಾಗಲಿಲ್ಲ. ಇದೆಲ್ಲ ಮುಖ್ಯವಾಗಿ ಮಾದಕದ್ರವ್ಯ ಸೇವನೆಗಾಗಿ ಎಂಬುದನ್ನು ಗಮನಿಸಬೇಕು.

೧೪ ವರ್ಷದೊಳಗಿನ ಮಕ್ಕಳಿಗೆ ಬೀಡಿ ಸಿಗರೇಟು ಹಾಗೂ ಇನ್ನಿತರ ಮಾದಕದ್ರವ್ಯ ಮಾರಾಟ ನಿಷಿದ್ಧ; ಕಾನೂನಿನ ಪ್ರಕಾರ ಅಪರಾಧ ಎಮಬ ಕಾನೂನಿದೆ. ಕಾನೂನು ಮಾಡುವುದು ಬೇರೆ, ಅದರ ಅನುಷ್ಠಾನ ಬೇರೆ. ನಮ್ಮಲ್ಲಿ ದಿನಕ್ಕೊಂದು ಕಾನೂನು ರೂಪಿಸುತ್ತೇವೆ. ಆದರೆ ಬಿಗಿಯಾದ ಕಟ್ಟುನಿಟ್ಟಿನ ಅನುಷ್ಠಾನ, ಪಾಲನೆಯಿಲ್ಲ. ತಮ್ಮ ಮಕ್ಕಳು ಹೊಗೆಬತ್ತಿ ಸೇದಬಾರದು, ಕುಡಿಯಬಾರದು ಎಂದಿದ್ದರೆ ಅದನ್ನು ತಂದೆತಾಯಿಗಳೇ ಮಕ್ಕಳ ಮೇಲೆ ಹೇರಬೇಕು.ಮೊದಲು ಅವರೇ ಮನೆಯಲ್ಲಿ ಪಾಲಿಸಬೇಕು. ಹಿರಿಯರು ಹಾಗೂ ಶಿಕ್ಷಕರು ಮಕ್ಕಳ ಎದುರೇ ಬೀಡಿ, ಸಿಗರೇಟು ಸೇದುತ್ತ “ಮಕ್ಳೇ, ನೀವು ಸೇದಬೇಡಿ, ಕುಡಿಯಬೇಡಿ” ಎಂದು ಉಪದೇಶಿಸುವುದು ಅರ್ಥಹೀನ. ಹಿರಿಯರು ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿದರೆ ಮಕ್ಕಳೂ ಅದನ್ನು ಪಾಲಿಸಬಲ್ಲರು.

ಬೀಡಿ ಸಿಗರೇಟು, ಹೆಂಡ ಶರಾಬು ಹಾಗೂ ಇತರ ಉದ್ದೀಪಕ ದ್ರವ್ಯಗಳನ್ನು ಮಾರಾಟ ಮಾಡುವವರು ಅವುಗಳಲ್ಲಿರುವ ರಾಸಾಯನಿಕಗಳು ಯಾವುವು? ಅವು ಮೆದುಳು, ಶ್ವಾಸಕೋಶ ಹಾಗೂ ಹೃದಯದ ಮೇಲೆ ಏನು ಮಾರಕ ಪರಿಣಾಮ ಬೀರುತ್ತವೆ ಎಂಬುದನ್ನು ಮಕ್ಕಳಿಗೆ ಚೆನ್ನಾಗಿ ಪ್ರಚುರಪಡಿಸಬೇಕು. ತಂಬಾಕು ಸೇವನೆಯಿಂದ ಏನೇನು ಕಾಯಿಲೆಗಳು ಬರುತ್ತವೆ ಎಂಬುದನ್ನು ಚೆನ್ನಾಗಿ ತಿಳಿಸಬೇಕು.

ಕೆಲವು ವರ್ತಕರಿದ್ದಾರೆ. ತಮ್ಮ ಮಕ್ಕಳ ಮೇಲೆ ವಿಶೇಷ ನಿರ್ಬಂಧ ಹೇರುತ್ತಾರೆ. ಆದರೆ ಇಂಥ ಅಪಾಯಕಾರಿ ವಸ್ತುಗಳನ್ನು ಲಾಭಕ್ಕಾಗಿ ಮಾರಾಟಮಾಡಿ “ಇವತ್ತಿನ ಮಕ್ಕಳು ಕೆಟ್ಟುಹೋಗಿದ್ದಾರೆ” ಎಂದು ಹೇಳುತ್ತಾರೆ. “ನಾವು ವ್ಯಾಪಾರಸ್ಥರು ಸ್ವಾಮಿ. ಎಲ್ಲ ವಸ್ತುಗಳನ್ನೂ ಮಾರಾಟಮಾಡುತ್ತೇವೆ” ಎನ್ನುತ್ತಾರೆ. ನಿಮಗೆ ನಿಮ್ಮ ಮಕ್ಕಳ ಬಗ್ಗೆ ಕಾಳಜಿಯಿದ್ದರೆ ಬೇರೆಯವರ ಮಕ್ಕಳ ಮೇಲೂ ಇರಬೇಕಲ್ಲವೆ? ನಿಮ್ಮ ಮಕ್ಕಳು ಹಾಳಾಗಬಾರದು. ಬೇರೆಯವರ ಮಕ್ಕಳು ಹಾಳಾಗಲಿ ಬಿಡಿ ಎಂಬ ಧೋರಣೆ ಒಳ್ಳೆಯದಲ್ಲ. ಅದಕ್ಕಾಗಿ ಕೆಲವೊಂದು ಅಂಗಡಿಗಳವರು ಬೀಡಿ, ಸಿಗರೇಟು, ಬಿಯರ್ ಇತ್ಯಾದಿ ಯಾವುದನ್ನೂ ಮಾರುವುದಿಲ್ಲ.

ವೃತ್ತಿಪರ ಕಾಲೇಜುಗಳಲ್ಲಿಯ ಹುಡುಗ ಹುಡುಗಿಯರ ಸವಾಲುಗಳು ಇನ್ನೊಂದೇ ತೆರನಾದುದು. ಓದಿ ತಿಳಿದುಕೊಳ್ಳಲಾರಾದ ವಿಷಯಗಳು ಸಾಕಷ್ಟು. ಮೇಲಾಗಿ ಅವರು ಎಲ್ಲವನ್ನೂ ಸಾಧಿಸಿ ಯಶಸ್ಸು ಗಳಿಸಬೇಕಾಗಿದೆ. ತಂದೆತಾಯಿಗಳಿಂದ ದೂರದ ಒಂದು ವಾತಾವರಣದಲ್ಲಿ ಬದುಕುವ ಅವರಿಗೆ ಹೆಚ್ಚಿನ ಸ್ವಾತಂತ್ಯ್ರವಿದೆ.ಪರಿಚಿತರಿಲ್ಲದ ಊರಿನಲ್ಲಿ ಅವರು ಏನು ಮಾಡಿದರೂ ಪ್ರಶ್ನಿಸುವವರಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳು ಮಾದಕ ದ್ರವ್ಯಸೇವನೆಯ ಚಟಕ್ಕೆ ಬಲಿಬಿದ್ದು ತಮ್ಮ ವ್ಯಾಸಂಗವನ್ನು ಆರೋಗ್ಯವನ್ನು ಸಾಮಾಜಿಕ ಗೌರವವನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ ತಂದೆತಾಯಿಗಳಿಗೆ ವ್ಯಥೆ, ದುಃಖ ಹಾಗೂ ಖಿನ್ನತೆಯನ್ನು ಕರುಣಿಸುತ್ತಾರೆ. ಹೀಗಾಗಿ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಅದರಲ್ಲೂ ಗಂಡುಮಕ್ಕಳನ್ನು ದೂರದ ಊರುಗಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲು ಹಿಂದೇಟು ಹಾಕುತ್ತಾರೆ. ‘ಮಗ ಕೆಟ್ಟುಹೋದಾನು’ ಎಂಬ ಭಯ. ಹೆಣ್ಣುಮಕ್ಕಳನ್ನು ಹಾಸ್ಟೆಲ್‌ಗಳಲ್ಲಿರಿಸಿ ಓದಿಸಲು ಇವರು ಸುತರಾಂ ತಯಾರಿಲ್ಲ. ಬೇಕಿದ್ದರೆ ತಾವೇ ಅಲ್ಲಿಗೆ ಹೋಗಿ ಬಾಡಿಗೆಮನೆ ಮಾಡಿಕೊಂಡು ಅವರ ಚಲನವಲನ ಪರಿಶೀಲಿಸುತ್ತಾರೆ.

ಆದರೆ ಇವೆಲ್ಲ ಏಕೆ ಹೀಗಾಯಿತು? ‘ಸಹವಾಸದೋಷ’ಎಂದು ಸುಲಭ ಉತ್ತರ ಕೊಡಬಹುದು. ಪರಿಸರ ಕೇವಲ ಒಂದು ಕಾರಣ ಮಾತ್ರ. ಅದಕ್ಕಿಂತ ಮಿಗಿಲಾಗಿ ಕುಟುಂಬದ ದಮನಕಾರಿ ವಾತಾವರಣದಲ್ಲಿ ಮಗ-ಮಗಳು ವಿಧೇಯರಾಗಿ ವರ್ತಿಸುತ್ತಾರೆ. ಉಸಿರೆತ್ತದೆ ಬದುಕುತ್ತಾಋಎ. ಆದರೆ ಹೊಸಗಾಳಿ, ಸ್ವಚ್ಛಂದ ಗಾಳಿ ಬೀಸಿದಾಗ ಸೋಡ ಬಾಟಲಿ ಸ್ಫೋಟಗೊಳ್ಳುವಂತೆ ಸ್ಫೋಟಿಸುತ್ತಾರೆ. ‘ಎಲ್ಲೆ ಕಟ್ಟನೆಲ್ಲ ಮೆಟ್ಟಿ’ ಉಚ್ಛೃಂಖಲ ಪ್ರವೃತ್ತಿಯನ್ನು ಮೆರೆಯುತ್ತಾಋಎ. ತಪ್ಪು ತಂದೆತಾಯಿಗಳದ್ದೇ ಅಲ್ಲವೆ? ಜವಾಬ್ದಾರಿಯುತ ಸ್ವಾತಂತ್ಯ್ರದ ಪಾಠ ಮನೆಯಲ್ಲಿ ಆಗಿದ್ದರೆ ಹೀಗಾಗುತ್ತಿರಲಿಲ್ಲವಲ್ಲವೆ? ಏನೇ ಇರಲಿ, ಕೈಮೀರಿದ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚಕರ ಅಗತ್ಯವಿದೆ. ‘ವ್ಯಸನ ವಿಸರ್ಜನ ಕೇಂದ್ರ’ಗಳ ಅಗತ್ಯವಿದೆ. ಮಾದಕದ್ರವ್ಯ ಮುಕ್ತ ಪರಿಸರ ನಿರ್ಮಾಣದ ಅಗತ್ಯವಿದೆ. ಕಾನೂನುಗಳು ಹಾಗೂ ನೀತಿನಿಯಮಗಳಿಗಿಂತ ಮಿಗಿಲಾದ ಪರಸ್ಪರ ತಿಳಿವಳಿಕೆಯ, ಕಾಳಜಿಯ ವಾತಾವರಣ ರೂಪಿಸುವ ಅಗತ್ಯವಿದೆ.

ಕೆಲವೊಂದು ಕಡೆಗಳಲ್ಲಿ ದುರದೃಷ್ಟವಶಾತ್‌ ವಿದ್ಯಾಲಯಗಳೇ ಮಾದಕದ್ರವ್ಯ ಸರಬರಾಜಿನ ಕೇಂದ್ರಗಳೂ ಆಗಿ ಪರಿಣಮಿಸುತ್ತವೆ. ವಿದ್ಯಾಲಯಗಳ ಸಮೀಪದಲ್ಲಿ ಬೀಡ ಬೀಡಿ ಅಂಗಡಿಗಳಿರುತ್ತವೆ. ಮದ್ಯದಂಗಡಿಗಳಿರುತ್ತವೆ. ಶಾಲಾ ಪರಿಸರದ ಆಸುಪಾಸಿನಲ್ಲಿ ಇಂಥ ಅಂಗಡಿಗಳಿರಬಾರದು. ಅಲ್ಲಿ ಮಾದಕದ್ರವ್ಯ ಮಾರಾಟ ಸಲ್ಲದು ಎಂಬ ಕಾನೂನಿದೆ. ಕಾನೂನು ಪಾಲಕರೇ ಕಾನೂನು ಭಂಜಕರಾಗಿರುವಾಗ ಅದಕ್ಕೆ ಬೆಲೆ ಕೊಡುವವರು ಯಾರು? ಈ ಅಂಗಡಿಗಳಿಂದ ಕೆಲವೊಂದು ಮಾದಕವಸ್ತುಗಳು ಗುಪ್ತವಾಗಿ ವಿದ್ಯಾರ್ಥಿಗಳ ಕೈಸೇರುತ್ತವೆ. ವಿದ್ಯಾರ್ಥಿಗಳಲ್ಲಿ ಕೆಲವರು ಪ್ರಯೋಗಶೀಲರಾಗುತ್ತಾರೆ. ಒಂದೆರಡು ಬಾರಿ ಅಹಿತವೆನಿಸಿದರೂ ಮುಂದೆ ಗುಂಪಿನಲ್ಲಿ ‘ದೊಡ್ಡಣ್ಣ’ ನಾಗುವ ಭರದಲ್ಲಿ ಅಭ್ಯಾಸವಾಗುತ್ತದೆ. ವಿದ್ಯಾಲಯದ ಬೋರ್ ಡಮ್‌, ಸ್ಪರ್ಧಾತ್ಮಕತೆ, ಅಪಮಾನ, ಪ್ರೇಮಭಂಗ ಇತ್ಯಾದಿಗಳಿಂದ ಹೊರಬರಲು ಮಾದಕದ್ರವ್ಯ ಸೇವನೆ ವಿದ್ಯಾಲಯದ ವಠಾರದಲ್ಲಿ ಪ್ರಾರಂಭವಾದದ್ದು ಮುಂದೆ ಬಿಡಲಾರದ ಚಟವಾಗಿ ಪರಿಣಮಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಮಾದಕದ್ರವ್ಯಗಳು ಮಾರುಕಟ್ಟೆಯಲ್ಲಿ ಸಿಗದಿದ್ದರೆ ಉಪಶಮನಕಾರಕಗಳು (ಟ್ರಾಂಕ್ವಿಲೈಸರ್), ಆಸ್ಪಿರಿನ್‌, ಕೆಮ್ಮು ನಿವಾರಕ ಔಷಧಗಳು ಇತ್ಯಾದಿಗಳನ್ನು ಸೇವಿಸಿ ಅಮಲುಸ್ಥಿತಿಯನ್ನು ಆವಾಹಿಸಿಕೊಳ್ಳುತ್ತಾರೆ. ಜರ್ದಾ, ಗುಟ್ಕಾಗಳು ಕೂಡ ಈ ದಿಸೆಯಲ್ಲಿ ಸಾಕಷ್ಟು ಆತಂಕಕಾರಿಯಾಗಿವೆ.

ಮಕ್ಕಳ ವಿಷಯದಲ್ಲಿ ನಾವು ಐದು ಅಂಶಗಳನ್ನು ಪಾಲಿಸುವುದು ಒಳ್ಳೆಯದು

೧. ಮಾಧಕದ್ರವ್ಯ ಅಂದರೇನು? ಅದರಿಂದಾಗಿ ದೇಹದ ವಿವಿಧ ಅಂಗಾಂಗಗಳ ಮೇಲೆ ಆಗುವ ದುಷ್ಪರಿಣಾಮಗಳೇನು? ಮಾದಕದ್ರವ್ಯ ವ್ಯಸನ ಅಂಟಿಕೊಂಡರೆ ಅದರಿಂದ ಸಾಮಾಜಿಕವಾಗಿ, ಕೌಟುಂಬಿಕವಾಗಿ ಮತ್ತು ವೈಯಕ್ತಿಕವಾಗಿ ಏನೇನು ತೊಂದರೆಗಳಾಗುತ್ತವೆ? ಈ ವ್ಯಸನಗಳಿಂದ ಮುಕ್ತರಾಗುವ ಬಗೆ ಹೇಗೆ ಎಂಬುದನ್ನು ಎಳವೆಯಲ್ಲೇ ತಿಳಿಸಿಕೊಡಬೇಕು.

೨. ಮಾದಕದ್ರವ್ಯ ಸೇವನೆಯಿಂದ ಆತ್ಮಸಂತೋಷ, ಶಕ್ತಿ, ಸಾಹಸಪ್ರವೃತ್ತಿ, ಧೈರ್ಯ, ಸಾಧನೆಯ ಹಂಬಲ ಹೆಚ್ಚುತ್ತದೆ ಎಂದು ತಪ್ಪು ಪ್ರಚಾರಗಳು ನಡೆಯುತ್ತಿರುತ್ತವೆ. ಆದರೆ ಆ ಯಾವ ಮಾದಕದ್ರವ್ಯಗಳನ್ನೂ ಸೇವಿಸದೆ ಜೀವನದಲ್ಲಿ ಸಾಧನೆಮಾಡಿದ ಮಿಲಿಯಗಟ್ಟಲೆ ವ್ಯಕ್ತಿಗಳಿದ್ದಾರೆ. ಅವರು ಹೇಗೆ ಸಾಧನೆ ಮಾಡಿದರು ಮತ್ತು ಅವರ ಆತ್ಮಸ್ಥೈರ್ಯ-ಧೈರ್ಯಗಳೇನು ಎಂಬುದನ್ನು ತಿಳಿಸಿಕೊಡಬೇಕು.

೩. ಮಾದಕದ್ರವ್ಯ ಬಳಕೆಯ ಮೂಲಕವೇ ಮಕ್ಕಳು ‘ದೊಡ್ಡವರು’ ಆಗಬೇಕಾಗಿಲ್ಲ. ಗುರುತಿಸಲ್ಪಡಬೇಕಾಗಿಲ್ಲ. ಅದಿಲ್ಲದೆಯೂ ಒಂದು ಸಮಾಜದಲ್ಲಿ ಸ್ವಂತ ಸಾಧನೆಯ ಮೂಲಕ ಮಾನ್ಯತೆ ಗಳಿಸಬಹುದು. ಮಾನ್ಯತೆ ,ಹೆಸರು, ಕೀರ್ತಿ ಇಲ್ಲದೆಯೂ ಸರಳ ಸಂತೃಪ್ತ ಜೀವನ ನಡೆಸುವ ಸಾವಿರಾರು ಮಂದಿಯ ನಿದರ್ಶನಗಳನ್ನು ಮುಂದೊಡ್ಡಬೇಕು.

೪. ಮಾದಕದ್ರವ್ಯ ಸೇವನೆ ಮೂಲಕ ತನ್ನ ಹಾಗೂ ತಾನು ನಂಬಿದ ಕುಟುಂಬ ವರ್ಗದ ಬಾಳು ಹಾಳುಮಾಡಿಕೊಂಡವರ ‘ನೋವಿನ ಕತೆ’ಗಳಲನ್ನು ಮಕ್ಕಳ ಮುಂದಿಡಬೇಕು;ಅಂತೆಯೇ ಮಾದಕದ್ರವ್ಯ ಸೇವನೆಯನ್ನು ಮೀರಿನಿಂತ, ವ್ಯಸನಕ್ಕೆ ಬಲಿಯಾಗಿ ಅದರಿಂದ ಬಿಡಿಸಿಕೊಂಡು ‘ನವಜೀವನ’ವನ್ನು ಕಂಡುಕೊಂಡವರ ಕತೆಯನ್ನು ಪ್ರಸ್ತುಪಡಿಸಬೇಕು.

೫. ಜೀವನದ ನೋವುಗಳಿಂದ , ಹತಾಶೆ, ಅಪಮಾನಗಳಿಂದ ಪಾರಾಗಲು ಚಟಗಳ ದಾಸರಾದೆವು ಎಂದು ಹೇಳುವವರುಂಟು. ಆದರೆ ಬದುಕು ಈ ಮಂದಿ ಹೇಳುವಷ್ಟು ಕೆಟ್ಟದಾಗಿಲ್ಲ, ಕ್ರೂರವಾಗಿಲ್ಲ, ನಿರಾಶಾದಾಯಕವೂ ಭಯಾನಕವೂ ಆಗಿಲ್ಲ ಎಂಬುದನ್ನು ಮಕ್ಕಳ ಗಮನಕ್ಕೆ ಪದೇ ಪದೇ ತರಬೇಕು. ನೋವಿನ ಜೊತೆ ನಲಿವೂ ಇದೆ. ದುಃಖದ ಬಳಿಕ ಸುಖ ಸಿಗುತ್ತದೆ. ಸೋಲೇ ಗೆಲುವಿನ ಸೋಪಾನ ಎಂಬುದನ್ನು ಅವರಿಗೆ ಮನವರಿಕೆ ಕೊಡಬೇಕು.

ಈ ಸಮಾಜದಲ್ಲಿ ದೊಡ್ಡವರು ಬೀಡಿ ಸಿಗರೇಟು ಸೇದಬಹುದು. ಕುಡಿಯಬಹುದು ಅಥವಾ ಇನ್ನಿತರ ಮಾದಕದ್ರವ್ಯ ಸೇವಿಸಬಹುದು. ಏಕೆಂದರೆ ‘ಪಾಪ, ಅವರಿಗೆ ತಲೆಬಿಸಿ’, ‘ಏನೋ ವಿರಹವೇದನೆ’, ‘ವ್ಯಾಪಾರದಲ್ಲಿ ಸೋಲು’, ‘ಉದ್ಯೋಗದಲ್ಲಿ ಹತಾಶೆ’, ‘ಪ್ರೇಮಭಂಗ’ ಎಂಬ ಸಬೂಬುಗಳನ್ನು ಕೊಟ್ಟು ಈ ಕ್ರಿಯೆಗಳನ್ನು ಸಮರ್ಥಿಸಲಾಗುತ್ತದೆ. ಆದರೆ ಮಕ್ಕಳು ಇದನ್ನೆಲ್ಲ ಮಾಡಬಾರದು. ಏಕೆಂದರೆ ಅವರು ಚಿಕ್ಕವರು. ದೊಡ್ಡವರ ಕೆಟ್ಟ ಚಾಳಿ ಅವರಿಗೆ ಅಂಟಿಕೊಳ್ಳಬಾರದು. ಅಪ್ಪ ಬೀಡಿ ಸೇದುವುದನ್ನು ಕಂಡ ಮಗ ಅಪ್ಪನಿಲ್ಲದ ವೇಳೆ ಬೀಡಿಕಟ್ಟಿನಿಂದ ಮೆಲ್ಲಗೆ ಒಂದು ಬೀಡಿ ಜಾರಿಸಿ ಕದ್ದು ಸೇದುವಾಗ ಸಿಕ್ಕಿಬಿದ್ದರೆ “ಚೋಟುದ್ದ ಇಲ್ಲ, ಆಗಲೆ ಬೀಡಿ ಸೇದ್ತೀಯೇನು ಬಡವಾ, ನಿನಗೇನೋ ಬಂತು ದಾಡಿ” ಎಂದು ಬೈಯಲಾಗುತ್ತದೆ. ಇದಲ್ಲವೇ ವೈರುಧ್ಯ?

ಮಾದಕದ್ರವ್ಯಗಳು ಹಾನಿಕಾರಕವೆಂದಾದರೆ ಎಲ್ಲರಿಗೂ ಹಾನಿಕಾರಕವೇ; ಸಮಾಜಕ್ಕೇ ಕಂಟಕಪ್ರಾಯ. ಹಾಗಿರುವಾಗ ಅವುಗಳ ಉತ್ಪಾದನೆಗೆ ಪರವಾನಗಿ ನೀಡುವುದೇಕೆ? ಈ ಹೊತ್ತು ಸರಕಾರಗಳು ಅಬ್ಕಾರಿ ಗುತ್ತಿಗೆ ಹರಾಜಿನ ಮೂಲಕವೇ ಕೋಟಿಗಟ್ಟಲೆ ಧನಸಂಚಯನ ಮಾಡುತ್ತವೆ. ಸಿಗರೇಟು ಹಾಗೂ ಮಾದಕಪೇಯಗಳ ಮಾಲಿಕರೇ ಜಾಹಿರಾತು ಕ್ಷೇತ್ರವನ್ನು ತಮ್ಮ ಬಿಗಿಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಇವರೇ ಚುನಾವಣೆಗೆ ಪಾರ್ಟಿ ಫಂಡು ಕೊಡುವವರು. ಹೀಗಾಗಿ ಯಾವ ಸರಕಾರ ಬಂದರೂ ಇವರ ತಂಟೆಗೆ ಹೋಗುವುದಿಲ್ಲ. ಒಂದು ಕಡೆಯಿಂದ ನಿಷೇಧ ಹೇರಿ, ಇನ್ನೊಂದು ಕಡೆಯಿಂದ ಇವುಗಳ ಮಾರಾಟಕ್ಕೆ ಮುಕ್ತ ಮಾರುಕಟ್ಟೆ ಒದಗಿಸಿಕೊಡುವುದು ಸರಕಾರಗಳ ದ್ವಂದ್ವನೀತಿಯಲ್ಲವೇ? ಗುಟ್ಕಾ, ಜರ್ದಾ, ಬೀಡಿಸಿಗರೇಟು, ಬೀರ್, ಬ್ರಾಂಡಿ, ರಮ್‌, ಜಿನ್‌, ಅಫೀಮು, ಗಾಂಜಾ ಇತ್ಯಾದಿಗಳ ಉತ್ಪಾದನೆಯ ಬುಡಕ್ಕೆ ಯಾಕೆ ಸರಕಾರಗಳು ಕೊಡಲಿ ಏಟು ಹಾಕಬಾರದು? ಈ ಯಾವ ವಸ್ತುಗಳೂ ಸಿಗದಂತೆ ಮಾಡಿದರೆ ಪರಿಸ್ಥಿತಿ ಸುಧಾರಿಸೀತು.

ಪ್ರಜಾಪ್ರಭುತ್ವದಲ್ಲಿ ನಮ್ಮ ಸರಕಾರಗಳ ಪಾಡು ಹೇಳತೀರದು. ಗುಟ್ಕಾ ನಿಷೇಧಿಸಿದರೆ ಅಡಿಕೆ ಬೆಳೆಗಾರರು ಚಳವಳ ಹೂಡುತ್ತಾರೆ.  ಇತರ ಮಾದಕದ್ರವ್ಯಗಳನ್ನು ನಿಷೇಧಿಸಿದರೆ ಖೋಡೆಗಳು, ಮಲ್ಯಗಳು ಅಬ್ಬರಿಸುತ್ತಾರೆ! ಬೀಡಿ ನಿಷೇಧಿಸಿದರೆ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಬಂದ್‌ ಆಚರಿಸುತ್ತವೆ. ಎಲ್ಲ ಲಾಬಿಗಳನ್ನು ಸಂಪ್ರೀತಗೊಳಿಸುವ ತಕ್ಕಡಿ ತೂಗುವ ಕ್ರಿಯೆಯಲ್ಲಿ ಸಾಮಾನ್ಯ ಜನರ ಆರೋಗ್ಯ ನಶಿಶಿಹೋಗಿರುತ್ತದೆ! ಮಾದಕ ದ್ರವ್ಯಗಳ ಅವಲಂಬನವಿಲ್ಲದ ಬದುಕು ಹೆಚ್ಚು ಅರ್ಥಪೂರ್ಣ, ಆರೋಗ್ಯದಾಯಕ ಎಂಬ ಸಂದೇಶ ಸಮಾಜದಲ್ಲಿ ಪಸರಿಸಬೇಕು. ಪ್ರಶಾಂತವಾದ ಪರಿಸರ, ಒಳ್ಳೆಯ ದುಡಿಮೆ, ನೆಮ್ಮದಿ, ಆರೋಗ್ಯ ಇವನ್ನು ಕರುಣಿಸುವ ಒಂದು ಸಮಾಜ ನಿರ್ಮಾಣವಾದರೆ ಪ್ರಾಯಃ ಮಾದಕದ್ರವ್ಯಗಳಿಗೆ ಮಹತ್ವ ಕಡಿಮೆಯಾದೀತು.

ವಿಚಿತ್ರವೆಂಧರೆ ಆದಿಕಾಲದಿಂದಲೂ ಮನುಷ್ಯ ಒಂದಲ್ಲ ಒಂದು ಮಾದಕವಸ್ತು ವ್ಯಸನಕ್ಕೆ ತುತ್ತಾಗಿರುವುದಕ್ಕೆ ಇತಿಹಾಸ ಸಾಕ್ಷಿ ನುಡಿಯುತ್ತಿದೆ. ಮನುಷ್ಯ ಕತ್ತಿ, ಕುಡುಗೋಲು,ಪೆನ್‌, ಸ್ಟ್ಯಾನರ್, ಪೆನ್‌ಡ್ರೈವ್‌ ಇತ್ಯಾದಿ ಸಲಕರಣೆಗಳು ಬಳಸುತ್ತಾ ಬಂದಿದ್ದಾನೆ. ಇನ್ನೂ ಹೊಸ ಹೊಸ ಸಲಕರಣೆಗಳನ್ನು ಆವಿಷ್ಕಾರಮಾಡಿ ಮುಂದೆಯೂ ಬಳಸಲಿದ್ದಾನೆ. ಅಂತೆಯೇ ಮಾದಕದ್ರವ್ಯ ಸೇವನೆಯೂ ಮುಂದುವರಿದಿದೆ. ಅನಾಹುತಗಳ ಬಗೆಗೆ ಮೂಡಿಸಬಹುದಾದ ಜಾಗೃತಿಯಿಂದ ಆಗೊಮ್ಮೆ ಈಗೊಮ್ಮೆ ಬಳಸುವವರ ಪ್ರಮಾಣ ಕಡಿಮೆಯಾಗಬಹುದಷ್ಟೆ; ಸಮುದ್ರದಲ್ಲಿ ಏರಿಳಿತಗಳಿರುವಂತೆ.