ಈ ದೇಶದಲ್ಲಿ ಏಕರೂಪದ ಶಾಲಾಶಿಕ್ಷಣವನ್ನು ಜಾರಿಗೆ ತಂದು ಬಹಳ ವರ್ಷಗಳೇ ಕಳೆದಿವೆ. ಹಾಗಿದ್ದರೂ ಶಿಕ್ಷಣ ತನ್ನ ಏಕರೂಪತೆಯನ್ನು ಕಾಯ್ದುಕೊಂಡಿಲ್ಲ. ನಿಜಕ್ಕೂ ನಾವು ಮಕ್ಕಳಿಗೆ ಒದಗಿಸುವ ಶಿಕ್ಷಣ ಏಕರೂಪವಾಗಿರಬೇಕೇ ಬೇಡವೆ ಎಂಬುದು ಚರ್ಚಾಸ್ಪದ ವಿಚಾರ. ಆದರೆ ತೋರಿಕೆಯ ಈ ಏಕರೂಪದ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದಲ್ಲಿರುವ ಲಕ್ಷಾಂತರ ಶಾಲೆಗಳಲ್ಲಿ ಏಕರೂಪತೆಯಿಲ್ಲ. ನಮ್ಮಲ್ಲಿ ಸರಕಾರಿ, ಅರೆಸರಕಾರಿ, ಖಾಸಗಿ, ಅನುದಾನಿತ, ಕೇಂದ್ರಸರಕಾರಿ, ಕೇಂದ್ರೀಯ ಪಠ್ಯಕ್ರಮ, ರಾಜ್ಯ ಪಠ್ಯಕ್ರಮ,  ಅಂತಾರಾಷ್ಟ್ರೀಯ ಪಠ್ಯಕ್ರಮ, ತಾಯ್ನುಡಿಮಾಧ್ಯಮ, ಆಂಗ್ಲಮಾಧ್ಯಮ, ನಗರ, ಅರೆನಗರ, ಗ್ರಾಮೀಣ – ಹೀಗೆ ಬಹುಪದರಗಳ ಶಾಲಾವ್ಯವಸ್ಥೆ ಜಾರಿಯಲ್ಲಿದೆ. ಈ ವಿವಿಧ ವರ್ಗೀಕರಣಗಳಿಗೆ ಒಳಪಟ್ಟಿರುವ ಶಾಲೆಗಳೂ ಒಂದೇ ರೀತಿಯಾಗಿಲ್ಲ. ಆಂಗ್ಲಮಾಧ್ಯಮ ಅಂದರೆ ಅದರಲ್ಲಿ ಏರುಪೇರು , ತಾರತಮ್ಯ ಇದ್ದೇ ಇದೆ.

ಹಣೆಪಟ್ಟಿ ಏನೇ ಇರಲಿ, ಕೆಲವೊಂದು ಶಾಲೆಗಳು ಸರ್ವಾಂಗಸುಂದರವೂ ಮೌಲಿಕವೂ ಆಗಿವೆ. ಕೆಲವು ಶಾಲೆಗಳು ತಕ್ಕಮಟ್ಟಿಗೆ ಉತ್ತಮವಾಗಿವೆ. ಕೆಲವು ಶಾಲೆಗಳು ಅದರಲ್ಲೂ ಸರಕಾರಿ ಶಾಲೆಗಳು ಸರಕಾರದ ಬೆಂಬಲದಿಂದ ಭೌತಿಕವಾಗಿ ಸುಧಾರಿಸುತ್ತಿವೆ. ಇಷ್ಟಾದರೂ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ನಮ್ಮ ಬಹಳಷ್ಟು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಅತೃಪ್ತಿಕರವಾಗಿವೆ. ನಮ್ಮ ಮಕ್ಕಳು ಶಾಲೆಗೆ ಬಂದು ಅಲ್ಲಿ ಕುಳಿತು ಪಾಠ ಕೇಳಲು, ಕಲಿಯಲು ಉತ್ತಮವಾದ ವಾತಾವರಣ ಇಂದು ಅನೇಕ ಶಾಲೆಗಳಲ್ಲಿಲ್ಲ. ಉದಾಹರಣಗೆ, ನಾನೊಮ್ಮೆ ಒಂದು ಪ್ರೌಢಶಾಲೆಯಲ್ಲಿ ಅಧ್ಯಾಪಕರ ಕೊಠಡಿಯಲ್ಲಿದ್ದಾಗ ಇಬ್ಬರು ಮೂವರು ಶಿಕ್ಷಕರ ನಡುವೆ ಶಿಕ್ಷೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಯುತ್ತಿತ್ತು. ಸಾಧುಸ್ವಭಾವದ ಅನುಭವಿ ಶಿಕ್ಷಕರು “ಮಕ್ಕಳಿಗೆ ಹೊಡೀಲಿಕ್ಕೆ ನನ್ಗೆ ಮನಸ್ಸಾಗುವುದಿಲ್ಲ. ಅವರಿಗೆ ನಾವು ಪ್ರೀತಿಯಿಂದ ಹೇಳಿದ್ರೆ ತಿದ್ದಿಕೊಳ್ತಾರೆ.” ಆಗ ಉಳಿದ ಇಬ್ಬರು ಮೂವರು ಶಿಕ್ಷಕರು “ಭಟ್ರೆ, ನಿಮ್ಮ ಗಾಂಧಿವಾದ ಇಲ್ಲಿ ನಡೆಯುವುದಿಲ್ಲ . ‘ದಂಡಂ ದಶಗುಣಂ ಭವೇತ್‌’ ಹೊಡೆದ್ರೇನೇ ಅವರಿಗೆ ಬುದ್ಧಿ ಬರುವುದು. ನೀವು ಹೊಡೆಯದೆ ‘ಪಾಪದ ಮಾಸ್ಟ್ರು’ ಅಂತ ಹೆಸ್ರು ತಕ್ಕೊಳ್ಳುವುದು ಬೇಡ ಆಯಿತಾ” ಎಂದು ಆಕ್ರಮಣ ಮಾಡಿದರು. ಶಾಂತಿಯ ಮೌಲ್ಯವನ್ನು ಪಠ್ಯದಲ್ಲಿ ಅಳವಡಿಸಿದರೂ ಶಾಲೆಗಳಲ್ಲಿ ಹಿಂಸೆಗೆ, ಕ್ರೌರ್ಯಕ್ಕೆ ಸಾಕಷ್ಟು ಅವಕಾಶ ಕೊಡಲಾಗಿದೆ!

ಈಗೀಗ ಯಾರೂ ಸಾರ್ವಜನಿಕವಾಗಿ ಶಾಲೆಗಳಲ್ಲಿ ಮಕ್ಕಳನ್ನು ಶಿಕ್ಷಿಸಬೇಕು ಎಂದು ಹೇಳುವುದಿಲ್ಲ. ಅದೂ ಅಲ್ಲದೆ ಮಕ್ಕಳ ಹಕ್ಕುಗಳು ಹಾಗೂ ಶಿಕ್ಷಣ ಮೂಲಭೂತಹಕ್ಕು ಮಸೂದೆ ಜಾರಿಯಾಗಿರುವುದರಿಂದ ದೇಹದಂಡನೆಯ ಪರವಾಗಿ ಗಟ್ಟಿಯಾಗಿ ಮಾತನಾಡುವುದೂ ಅಪರಾಧವೆನಿಸೀತು. ತಮ್ಮ ಮೇಲೆ ಯಾರಾದರೂ ನೇರವಾಗಿ ಆಕ್ರಮಣ ಮಾಡಿದರೆ, ಹಿಂಸಿಸಿದರೆ ಮಕ್ಕಳು ಪ್ರತಿಭಟಿಸಿಯಾರು; ವಿರೋಧಿಸಿಯಾರು. ತಮಗೆ ಯಾವ ಬಗೆಯ ಹಿಂಸೆ ಕೊಡಲಾಗುತ್ತಿದೆ ಎಂಬುದನ್ನೂ ಮಕ್ಕಳು ಗುರುತಿಸಿ ಯಾರು. ಆದರೆ ಶಾಲೆಗಳಲ್ಲಿ ನಡೆಯುವ ಕೆಲವೊಂದು ಹಿಂಸೆಗಳು ಏಕೆ? ಯಾರು? ಎಂಬ ವಿವೇಚನೆಯಿಲ್ಲದೆ ನಡೆಯುತ್ತವೆ. ಮಕ್ಕಳು ಹೀಗಾಗಿ ಪ್ರತಿಭಟಿಸಲಾಗದೆ ಸುಮ್ಮನಾಗುತ್ತಾರೆ. ಕೆಲವೊಮ್ಮೆ ಈ ಹಿರಿಯರು ಮಾಡುವುದೆಲ್ಲ ತಮ್ಮ ಒಳ್ಳೆಯದಕ್ಕಾಗಿ ಎಂದು ತಮ್ಮನ್ನು ತಾವು ನಂಬಿಸಿಕೊಳ್ಳುತ್ತಾರೆ.

‘ಶಾಲಾ ಭಯ’ವುಳ್ಳ ಕೆಲವು ಮಕ್ಕಳನ್ನು ಹೊರತುಪಡಿಸಿ ಉಳಿದ ಮಕ್ಕಳನ್ನು ಗಮನಿಸಿ. ಶಾಲಾರಂಭದ ಮೊದಲ ದಿನ ಅವರಿಗೆ ಎಲ್ಲಿಲ್ಲದ ಉತ್ಸಾಹ. ಶಾಲೆ ಶುರುವಾಗಲು ಒಂದು ವಾರ ಇದೆ ಎನ್ನುವಾಗಲೆ ಎಲ್ಲಿಯದೋ ಉತ್ಸಾಹ. ಪುಸ್ತಕ, ಪೆನ್ನು, ಬಟ್ಟೆ, ಚೀಲ ಎಲ್ಲ ರೆಡಿ. ಪಾಠಪುಸ್ತಕದ ಕೆಲವು ಪಾಠಗಳನ್ನು ಓದಿಕೊಂಡಾಗದೆ. ಕುತೂಹಲ, ಆಸಕ್ತಿ, ಜಿಜ್ಞಾಸೆ, ತಿಳಿವ ಹಂಬಲ, ಕಲಿವ ಬಯಕೆಯಿಂದ ಮಕ್ಕಳು ಶಾಲೆಗಳಲ್ಲಿ ಕಾಲಿಡುತ್ತಾರೆ. ಶಾಲೆಗೆ ಸೇರುವ ಮೊದಲು ಮಕ್ಕಳು ತಮ್ಮ ಮನೆಯವರು ಹಾಗೂ ಪರಿಸರದ ಇತರರ ಜೊತೆ ಬೆರೆತು ಹೆಚ್ಚು ಸಂಇಕೀರ್ಣವಾದ, ಜಿಡುಕಿನ ಕೆಲಸಗಳನ್ನು ಮಾಡುತ್ತಾರೆ. ಭಾಷೆಯ ನಿಗೂಢತೆಯನ್ನು ಗ್ರಹಿಸಲು ಯತ್ನಿಸುತ್ತಾರೆ. ಭಾಷೆಯ ಜೊತೆ ಆಟವಾಡುತ್ತಾರೆ. ಶೋಧನೆ, ಪ್ರಯೋಗಶೀಲತೆ ಹಾಗೂ ಆವಿಷ್ಕಾರ ಪ್ರವೃತ್ತಿಯಂದ ಬದುಕಿನ ಅನೇಕ ಸಂಗತಿಗಳನ್ನು ಅವರು ಕಲಿತಿರುತ್ತಾರೆ. ಶಾಲೆಗಳು ತಾವು ಕಲಿಸುತ್ತಿದ್ದೇವೆ ಎಂದು ಭ್ರಮಿಸಿದ ಹಲವು ಪರಿಕಲ್ಪನೆಗಳನ್ನು ಮಕ್ಕಳು ಶಾಲೆಗೆ ಸೇರುವ ಮೊದಲೆ ಕಲಿತುಕೊಳ್ಳುತ್ತಾರೆ.

ಇಂಥ ಕುತೂಹಲಿ, ಉತ್ಸಾಹಿ, ಕ್ರಿಯಾಶೀಲ ವಿದ್ಯಾರ್ಥಿ ಶಾಲೆಗೆ ಸೇರಿದರೆ ನಾವೇನು ಮಾಡುತ್ತೇವೆ? “ಇಲ್ಲೇ ಈ ಬೆಂಚಿನಲ್ಲೇ ಕುಳಿತುಕೊ. ಇನ್ನುಮೇಲೆ ಇದೇ ನಿನ್ನ ಜಾಗ” ಎಂದು ಕೂರಿಸಿ ವಿಷಯಗಳನ್ನು ಒತ್ತಾಯಪೂರ್ವಕ ಕಲಿಸುತ್ತೇವೆ.

ಜೀವನಕ್ಕೂ ಕಲಿಕೆಗೂ ಸಂಬಂಧವಿಲ್ಲವೆಂಬುದನ್ನು ಮೊದಲಿಗೇ ನಾವು ಮಕ್ಕಳಿಗೆ ಶಾಲೆಗಳಲ್ಲಿ ತಿಳಿಸಿಕೊಡುತ್ತೇವೆ. ಶಾಲೆಯಲ್ಲಿ ಮಗು ಏನಾದರೂ ತಂಟೆ ಮಾಡಿದರೆ ಶಿಕ್ಷಕರು ಏನು ಹೇಳುತ್ತಾರೆ? “ನೀನು ಶಾಲೆಗೆ ಬರುವುದು ಕಲಿಯುವುದಕ್ಕಾ? ಅಥವಾ ಮಂಗಾಟ ಮಾಡಲಿಕ್ಕಾ?” ಅಂದರೆ ಮಗು ಇದುವರೆಗೆ ಏನೂ ಕಲಿಯಲಿಲ್ಲವೆ? ಶಾಲೆಯ ಒಳಗೆ ಕಲಿಕೆ ಹಾಗೂ ಹೊರಗೆ ಜೀವನ ಮತ್ತು ಇವೆರಡರ ನಡುವೆಡ ಯಾವ ಸಂಬಂಧವೂ ಇಲ್ಲ ಎಂದಲ್ಲವೆ ನಮ್ಮ ಆಚರಣೆಗಳು ಸಾರುತ್ತಿರುವುದು? ಎರಡನೆಯ ವಿಷಯ ನಾವು ಶಿಕ್ಷಕರು ಮಕ್ಕಳಿಗೆ ಕಲಿಸುವುದೇನೆಂದರೆ ಕಲಿಯುವ ವಿಷಯದಲ್ಲಿ ಮಕ್ಕಳನ್ನು ನಂಬುವಹಾಗಿಲ್ಲ. ಮಕ್ಕಳು ಕಲಿಯಲಾರರು. ಅವರಿಗೆ ಕಲಿಯುವ ಶಕ್ತಿಯಿಲ್ಲ. ಅವರೇನೂ ಪ್ರಯೋಜನವಿಲ್ಲ! “ಮಕ್ಕಳೆ, ನೀವು ಇದನ್ನು ಇಲ್ಲೇ ಕಲಿಯಬೇಕು. ಕಲಿಯದಿದ್ದರೆ ಮುಂದೆ ನಿಮಗೆ ಇದನ್ನು ಯಾರೂ ಕಲಿಸುವುದಿಲ್ಲ.  ನಿಮ್ಮಿಂದ ಕಲಿಯಲು ಸಾಧ್ಯವಿಲ್ಲ” ಎಂದು ಶಿಕ್ಷಕರು ಮಕ್ಕಳಿಗೆ ಹೇಳುತ್ತಿರುತ್ತಾರೆ. ಹಾಗಾದರೆ ಕಲಿಕೆ ಎಂಬುದು ಬೇರೆ ಯಾರೋ ನಮಗೋಸ್ಕರ ಸಿದ್ಧಪಡಿಸುವ ನೀರಸ ಕಾರ್ಯಕ್ರಮ ಎಂದು ಮಕ್ಕಳು ಭಾವಿಸುತ್ತಾರೆ. ನಿಜಕ್ಕಾದರೂ ಕಲಿಕೆ ಎಂಬುದು ನಮಗಾಗಿ ನಾವು ನಾವೇ ರೂಪಿಸಿಕೊಳ್ಳಬೇಕಾದ, ತೊಡಗಿಕೊಳ್ಳಬೇಕಾದ ಅರ್ಥಪೂರ್ಣ-ಸೃಜನಶೀಲ ಕ್ರಿಯೆ.

ಶಾಲೆಗಳು ಹೇಗಿರಬೇಕು? ಶಿಕ್ಷಕರು ಹೇಗೆ ನಡೆದುಕೊಳ್ಳಬೇಕು? ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು? ಎಂದು ಎಷ್ಟೆಲ್ಲ ಬಗೆಗಳಲ್ಲಿ ನಿರೂಪಿಸುವ ಪ್ರಯತ್ನಗಳನ್ನು ಮಾಡಲಾಗಿದ್ದರೂ ಶಾಲೆಗಳು ಹಾಗೂ ಶಿಕ್ಷಕರು ನಮ್ಮ ಮಕ್ಕಳಲ್ಲಿ ಬಿಂಬಿಸುವ ಭಾವವೇನು?ನೀವೇನೂ ಪ್ರಯೋಜನವಿಲ್ಲ; ನಿರುಪಯುಕ್ತ ಜೀವಿಗಳು; ವಿಶ್ವಸನೀಯರಲ್ಲ; ;ಉತ್ಸಾಹದಿಂದ ಮುನ್ನುಗ್ಗುವವರಲ್ಲ, ಬದಲಾಗಿ ಪರರ ಆಜ್ಞಾವರ್ತಿಗಳು; ಬೇರೆಯವರು ಬರೆಯಬಹುದಾದ ಖಾಲಿ ಹಾಳೆ; ಬೇರೆಯವರು ರೂಪಿಸಬಹುದಾದ ಒದ್ದೆಮಣ್ಣು ಇತ್ಯಾದಿ. ಮಕ್ಕಳ ಹಕ್ಕುಗಳು, ಮಕ್ಕಳ ಆತ್ಮಸಂಮಾನ, ವ್ಯಕ್ತಿಭಿನ್ನತೆ ಇತ್ಯಾದಿಗಳ ಬಗ್ಗೆ ನಾವು ಶಾಲೆಗಳಲ್ಲಿ ತಾಸುಗಟ್ಟಲೆ ಭಾಷಣ ಬಿಗಿಯುತ್ತೇವೆ. ಆದರೆ ನಮ್ಮ ಕ್ರಿಯೆಗಳು ನಾವಾಡುವ, ಬರೆಯುವ ಮಾತುಗಳಿಗೆ ತದ್ವಿರುದ್ಧವಾಗಿವೆ. ನಿಮ್ಮ ಅನುಭವ, ಚಿಂತನೆ, ಕ್ರಿಯಾಶೀಲತೆ, ಸಾಮರ್ಥ್ಯ ಯಾವುದೂ ಅಷ್ಟು ಮುಖ್ಯವಲ್ಲ. ಆದರೆ ನಾವಾಡುವ ಮಾತುಗಳು, ನಮ್ಮ ಯೋಚನೆಗಳಲು ನಾವೇನು ಮಾಡಬೇಕೆಂದು ಹೇಳುತ್ತೇವೋ ಅದು ನೀವು ಹೇಗೆ ಯೋಚಿಸಬೇಕೆಂದು ನಾವು ಹೇಳುತ್ತೇವೋ ಅದು ಮುಖ್ಯ ಎಂಬ ಸಂದೇಶವನ್ನು ಮಕ್ಕಳಿಗೆ ನೀಡುತ್ತೇವೆ. ಇದರ ಪರಿಣಾಮವೇನೆಂದರೆ ಶಿಕ್ಷಕರು ಮಕ್ಕಳ ಕುತೂಹಲ ತಣಿಸುವ ಪ್ರಯತ್ನ ಮಾಡುವುದಿಲ್ಲವಾದುದರಿಂದ ಮಕ್ಕಳು ಪ್ರಶ್ನೆ ಕೇಳಲು ಹೋಗುವುದಿಲ್ಲ. ಹೀಗಾಗಿ ಮಕ್ಕಳು ತಮ್ಮ ಕುತೂಹಲವನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಮುಂದೆ ಆ ಬಗ್ಗೆ ಸಂಕೋಚಪಡುತ್ತಾರೆ . ಮಗುವಿಗೆ ತಾನು ಏನು? ತನ್ನಿಂದ ಏನು ಸಾಧ್ಯ? ತಾನೇನು ಮಾಡಬಲ್ಲೆ? ಎಂದು ಕಂಡುಕೊಂಡು ಆ ದಿಸೆಯಲ್ಲಿ ತನ್ನ ವ್ಯಕ್ತಿತ್ರವವನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶವಿಲ್ಲದಿರುವುದರಿಂದ ಹಿರಿಯರು ತನ್ನ ಬಗ್ಗೆ ಮಾಡುವ ಮೌಲ್ಯಮಾಪನವನ್ನು ಒಪ್ಪಿಕೊಂಡುಬಿಡುತ್ತದೆ. ದೊಡ್ಡವರು ಹಾಗೂ ಶಿಕ್ಷಕರು ನಾನು ನಿಷ್ಪ್ರಯೋಜಕ ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಹಾಗೆ ಆಗುವುದೇ ಸೂಕ್ತ; ಮತ್ತೆ ನಾನೇಕೆ ಉಪಯುಕ್ತ ವ್ಯಕ್ತಿಯಾಗಬೇಕು ಎಂದು ಮಕ್ಕಳು ಭಾವಿಸಿಕೊಳ್ಳುತ್ತಾರೆ. ಸೃಜನಶೀಲತೆ ಹಾಗೂ ಸಾಮರ್ಥ್ಯವಿರುವ ವ್ಯಕ್ತಿಗಳನ್ನು ಶಾಲೆಗಳು ಹೊಯಿಗೆ ತುಂಬಿದ ಮೂಟೆಗಳಾಗಿಸುತ್ತವೆ.

ಮಕ್ಕಳು ಶಾಲೆಗಳಲ್ಲಿ ಇನ್ನೂ ಕೆಲ ಸಂಗತಿಗಳನ್ನು ಕಲಿಯುತ್ತಾರೆ. ಗೊಂದಲಕ್ಕೆ ಒಳಗಾಗುವುದು, ತಪ್ಪು ಮಾಡುವುದು, ಖಚಿತವಾದ ನಿರ್ಧಾರ ಮಾಡದಿರುವುದು ಒಂದು ಅಪರಾಧ. ಶಿಕ್ಷಕರು ಯಾವಾಗಲೂ ವಿದ್ಯಾರ್ಥಿಗಳಿಂದ ಬಯಸುವುದು ಸರಿ ಉತ್ತರವನ್ನು. ಸರಿ ಉತ್ತರ ನೀಡಲು ವಿದ್ಯಾರ್ಥಿಗಳು ಎಷ್ಟೆಲ್ಲ ಹೆಣಗುತ್ತಾರೆ? ಸುಳ್ಳು ಹೇಳುತ್ತಾರೆ. ಬುರುಡೆ ಬಿಡುತ್ತಾರೆ. ಸರಿ ಉತ್ತರ ಗೊತ್ತಿಲ್ಲದಿದ್ದರೆ ತಲೆತಪ್ಪಿಸಿಕೊಳ್ಳುತ್ತಾರೆ ಅಥವಾ ಕಣ್ಣುಮುಚ್ಚಿ ಸರಿ ಉತ್ತರ ಬರೆಯಲು ಯತ್ನಿಸುತ್ತಾರೆ. ಅನೇಕಸಲ ಮಕ್ಕಳು ಮೋಸಮಾಡುವುದನ್ನು ಕಲಿಯುವುದು ಶಿಕ್ಷಕರಿಂದಲೇ. ಉದಾಹರಣೆಗೆ: ಶಿಕ್ಷಕರು ಅತ್ಯಂತ ಕಠಿಣವಾದ ದೀರ್ಘವಾದ ಮನೆಗೆಲಸ ಕೊಟ್ಟು ನಾಳೆಯೇ ಬರೆದು ತೋರಿಸಬೇಕು ಎಂದು ಆಜ್ಞಾಪಿಸುತ್ತಾರೆ. ಆದರೆ ವಿದ್ಯಾರ್ಥಿಗೆ ಮನೆಗೆಲಸ ಮಾಡುವುದು ಕಷ್ಟ. ಕೊಟ್ಟಿರುವ ಎಲ್ಲ ಪ್ರಶ್ನೆಗಳಿಗೂ ಬರೆಯಲು ಉತ್ತರ ಗೊತ್ತಿಲ್ಲ. ಹೀಗಾದಾಗ ಹುಡುಗ ಮರುದಿನ ಅಧ್ಯಾಪಕರಿಂದ ಪೆಟ್ಟುತಿನ್ನುವುದನ್ನು ತಪ್ಪಿಸಿಕೊಳ್ಳಲು ಶಾಲೆಗೆ ಬರುವುದ’ಇಲ್ಲ. ಒಂದು ದಿನ ರಜೆ ಮಾಡಿ ಮತ್ತೆ ಶಾಲೆಗೆ ಹಾಜರಾದಾಗ ‘ನಿನ್ನೆ ಹೊಟ್ಟೆನೋವು’ ಎಂದು ಕುಂಟುನೆಪ ಹೇಳುತ್ತಾನೆ. ಮನೆಗೆಲಸದ ವಿಚಾರಣೆ ಮೊನ್ನೆಯೇ ಮುಗಿದಿದೆ. ಹುಡುಗ ಸುಳ್ಳುಹೇಳಿ ರಜೆಮಾಡಿ ಬಚಾವಾದ. ಇನ್ನೊಂದು ವಂಚನೆಯೆ ಪ್ರಸಂಗ ಗಮನಿಸಿ: ಮನೆಗೆಲಸ ಹೇಗೆ ಮಾಡುವುದು ಎಂದು ತಿಳಿಯದ ಒಬ್ಬ ಹುಡುಗ ಮರುದಿನ ಶಾಲೆಗೆ ಬೇಗ ಬಂದು ಇನ್ನೊಬ್ಬ ಬುದ್ಧಿವಂತ ಹುಡುಗ ಮಾಡಿರುವ ಮನೆಗೆಲಸವನ್ನು ಯಥಾವತ್ತಾಗಿ ನಕಲು ಮಾಡುತ್ತಾನೆ. ‘ಯಾರೆಲ್ಲ ಮನೆಗೆಲಸ ಮಾಡಿದ್ದೀರಿ?’ ಎಂದು ಶಿಕ್ಷಕರು ಕೇಳಿದಾಗ ಕೈಮೇಲೆತ್ತುತ್ತಾನೆ ಅಥವಾ ಹಲವರೊಂದಿಗೆ ತಾನೂ ಎದ್ದು ನಿಲ್ಲುತ್ತಾನೆ. ಆದರೆ ಮನೆಗೆಲಸ ಆತ ಸ್ವಂತವಾಗಿ ಮಾಡಿದ್ದಲ್ಲ. ನಕಲು ತೆಗೆದದ್ದು. ನಕಲು ತೆಗೆಯುವುದಕ್ಕೆ ಶಿಕ್ಷಕರೇ ಕಾರಣರಲ್ಲವೇ? ಇಲ್ಲಿ ನಿಜವಾದ ಕಲಿಕೆಯ ಬದಲಿಗೆ ಸುಳ್ಳು-ಮೋಸ-ವಂಚನೆಯನ್ನು ಶಾಲೆ-ಶಿಕ್ಷಕರು ಕಲಿಸಿದ್ದಲ್ಲವೆ?

ಶಾಲೆ ಮಕ್ಕಳಿಗೆ ಮೈಗಳ್ಳರಾಗುವುದನ್ನು ಕಲಿಸುತ್ತದೆ. ಮನೆಯಲ್ಲಿ ಅಪ್ಪ ಅಮ್ಮ ಹೇಳಿದ ಕೆಲಸ ಮಾಡಿಕೊಂಡು ಸಹಕರಿಸುವ ಮಕ್ಕಳು ಶಾಲೆಗೆ ಸೇರಿ ಓದಲು, ಬರೆಯಲು ಕಲಿತ ಹಾಗೆ ಶ್ರಮ ದುಡಿಮೆಯಿಂದ ದೂರಸರಿಯುತ್ತಾರೆ. “ತೋಟಕ್ಕೆ ಹೋಗಿ ತೆಂಗಿನಕಾಯಿ ಬಿದ್ದಿದೆಯಾ ನೋಡಿಕೊಂಡು ಬಾರೋ” ಅಂತ ತಂದೆ ಹೇಳಿದರೆ “ಈ ಸಾರಿನ ಪಾತ್ರೆ ಆಚೆ ತಗೊಂಡು ಹೋಗೋ” ಅಂತ ತಾಯಿ ಹೇಳಿದರೆ “ನನಗೆ ಓದೋಕುಂಟು. ನಾಳೆ ಪರೀಕ್ಷೆ” ಅಂತ ಮಕ್ಕಳಿಂದ ಉತ್ತರ ಬರುತ್ತದೆ. ತಂದೆತಾಯಿ ಏನೇ ಕೆಲ್ಸ ಹೇಳಿದರೂ ಅದರಿಂದ ತಪ್ಪಿಸಿಕೊಳ್ಳಲಿಕ್ಕೆ ಪರೀಕ್ಷೆ, ಸ್ಪರ್ಧೆ ಇತ್ಯಾದಿ ಏನಾದರೊಂದು ನೆಪ ಮಕ್ಕಳಿಗೆ ಹೊಳೆಯುತ್ತದೆ. ಅಂದರೆ ಕಲಿಯುವುದು ಬೇರೆ, ಕೆಲಸಮಾಡುವುದು ಬೇರೆ. ಕೆಲಸಗಳಿಗೂ ವಿದ್ಯೆಗೂ ಸಂಬಂಧವಿಲ್ಲ. ಕಲಿಯುವಾಗ ಕೆಲಸಮಾಡಬಾರದು. ಕೆಲಸದಿಂದ ಕಲಿಕೆ ಆಗುವುದಿಲ್ಲ ಎಂಬಂಥ ಸಂದೇಶಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆ ಹೊರಹೊಮ್ಮಿಸಿದೆ. ಹೀಗಾಗಿ ಇಂದಿನ ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದಾಗಿ ಸೋಂಭೇರಿಗಳಾಗಿದ್ದಾರೆ ಎಂದರೆ ತಪ್ಪಲ್ಲ.

ಶಾಲೆ ಎಂಬುದು ಪ್ರಜಾಪ್ರಭುತ್ವದ ಕಾರ್ಯಾಗಾರ ಎನ್ನಬಹುದಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಬೇಕು ಎಂದು ಉಪದೇಶಿಸಲಾಗುತ್ತದೆ. ನಮ್ಮ ಪಠ್ಯಕ್ರಮಗಳಲ್ಲಿ ಈ ಮೌಲ್ಯಗಳ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಿಜಕ್ಕೂ ಶಾಲೆಯಲ್ಲಿ ಮಕ್ಕಳು ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವೆನಿಸಿದ ಗುಲಾಮಿ ಸಂಸ್ಕೃತಿಯ ಮೌಲ್ಯಗಳನ್ನು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರೂ ಇಂದು ಹಲವು ಸಂಸ್ಥೆಗಳಲ್ಲಿ ಗುಲಾಮರಂತೆ ದುಡಿಯುತ್ತಿದ್ದಾರೆ. ಮೇಲಾಗಿ ನಮ್ಮ ಶಾಲೆಗಳು ಬದುಕಿಗೆ ಅನಿವಾರ್ಯವೋ ಎಂಬಂತೆ ಮಕ್ಕಳ ನಡುವೆ ಅನಾರೋಗ್ಯಕರ ಸ್ಪರ್ಧಾತ್ಮಕತೆಯನ್ನು ಮೂಡಿಸುತ್ತವೆ. ಮಕ್ಕಿಳು ಪರಸ್ಪರ ಸಹಾಯ-ಸಹಕಾರದಿಂದ ಕಲಿಯುವ ಬದಲಿಗೆ ಒಬ್ಬನ ವಿರುದ್ಧ ಮತ್ತೊಬ್ಬನು ಸ್ಪರ್ಧಿಸುವುದು, ಒಬ್ಬ ಇನ್ನೊಬ್ಬನನ್ನು ತನ್ನ ಪ್ರತಿಸ್ಪರ್ಧಿ ಹಾಗೂ ವೈರಿಯೆಂದು ಭಾವಿಸುವುದು ಇತ್ಯಾದಿ ಭಾವನೆಗಳನ್ನು ಶಾಲೆಗಳು ಪೋಷಿಸುತ್ತಿವೆ. ಬದುಕಿನಲ್ಲಿ ಅದೂ ಆಧುನಿಕ ಬದುಕಿನಲ್ಲಿ ಕತ್ತುಕೊಯ್ಯುವ ತೀವ್ರ ಸ್ವರೂಪದ ಸ್ಪರ್ಧೆ ಅನಿವಾರ್ಯವಾಗಿದೆ. ಈ ಸ್ಪರ್ಧೆಯಲ್ಲಿ ಒಬ್ಬರು ಗೆಲ್ಲಲೇಬೇಕು. ಒಬ್ಬರು ಗೆದ್ದರೆ ಹಲವರು ಸೋಲಲೇಬೇಕು. ಒಬ್ಬನು ಗೆಲ್ಲಲು ಸೋಲುವವರು ಹಲವರಿರಬೇಕು ಎಂಬುದು ಈ ಸ್ಪರ್ಧೆಯೆಂಬ ಆಟದ ನಿಯಮ. ಇಂದು ಎಲ್ಲ ಶಾಲೆಗಳವರೂ ಭಾವಿ ಬದುಕಿನ ದೃಷ್ಟಿಯಿಂದ ಸ್ಪರ್ಧೆಗಳು ಅಗತ್ಯವೆಂಬುದನ್ನು ಮಕ್ಕಳ ತಲೆಯಲ್ಲಿ ತುಂಬುತ್ತಾ ಅವರನ್ನು ಸ್ಪರ್ಧೆಗಳಲ್ಲಿ ಗೆಲ್ಲುವ ಕುದುರೆಗಳನ್ನಾಗಿ ಮಾರ್ಪಡಿಸುವ ತರಾತುರಿಯಲ್ಲಿದ್ದಾರೆ. ಸರಕಾರವೂ ಕೂಡ ಹೊಸ ಪ್ರಯೋಗದ ಹೆಸರಿನಲ್ಲಿ ಕಣ್ಮುಚ್ಚಿ ಸ್ಪರ್ಧೆಗಳನ್ನು ಸಾಂಸ್ಥೀಕರಿಸಿ ಬೆಂಬಲಿಸುತ್ತಿದೆ! ಯಾವಾಗ ಶಿಕ್ಷಣದಲ್ಲಿ ಸ್ಪರ್ಧಾತ್ಮಕತೆ ಒಳನುಗ್ಗಿತೋ ಆಗಲೇ ಸಹಾಯ-ಸಹಕಾರ ಕೊನೆಯುಸಿರೆಳೆಯಿತು. ಪ್ರಾಮಾಣಿಕತೆ ನಶಿಸಿ ಮೋಸ-ವಂಚನೆ ತಲೆ ಎತ್ತಿತು. ‘ಏನಕೇನ ಪ್ರಕಾರೇಣ ಗೆಲ್ಲುವುದೇ ಮುಖ್ಯ’. ಏಕೆಂದರೆ ಗೆದ್ದವರಿಗೆ ತಾನೆ ಹಾರ-ತುರಾಯಿ, ಪದಕ, ಪ್ರಶಂಸೆ! ಗೆಲವು ಪಡೆಯಲು ಅನುಸರಿಸುವ ವಿಧಾನ ಈಗೀತ ಗೌಣವಾಗುತ್ತಿದೆಯಲ್ಲವೆ? ಹೀಗಾಗಿ ಮೋಸಗಾರಿಕೆ ಎಂಬುದು ದಿನನಿತ್ಯದ ನ್ಯಾಯಯುತ ವ್ಯವಹಾರ ಎಂದು ಆಬಾಲವೃದ್ಧರಿಗೂ ಗೊತ್ತು. ಆದುದರಿಂದ ಯಾರೂ ನಯವಂಚನೆ,ಕಾಪಟ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರೇಮ ಹಾಗೂ ಯುದ್ಧದಲ್ಲಿ ನಿಯಮಗಳನ್ನು ಗಾಳಿಗೆ ತೂರಬಹುದು; ಹಾಗೆಯೇ ಸ್ಪರ್ಧೆಗಳಲ್ಲಿ ಗೆಲ್ಲಲು ನಿಯಮಗಳನ್ನು ಭಂಗಿಸಬಹುದು ಎಂಬುದು ಈಗ ಸಿದ್ಧವಾಗಿದೆ.

ಸ್ಪರ್ಧಾತ್ಮಕತೆಯಿಂದಾಗಿ ಮಕ್ಕಳು ಬೆಳೆಬೆಳೆಯುತ್ತ ಬೇರೆಯವರ ಬಗ್ಗೆ ಕಾಳಜಿ ವಹಿಸದಿರುವುದನ್ನು ಶಾಲೆಗಳು ಬೆಳೆಸುತ್ತಿವೆ ಎಂದೆನಿಸುತ್ತದೆ. ಇತರ ಮಕ್ಕಳಿಗೂ ತನಗೂ ಏನೂ ಸಂಬಂಧವೇ ಇಲ್ಲವೋ ಏನೋ ಎಂಬಂಥ ವರ್ತನೆಯನ್ನು ನಾವಿಂದು ಮಕ್ಕಳಲ್ಲಿ ಕಾಣಬಹುದು. ಭಾರತದ ಕೆಲವು ಶಾಲೆಗಳಲ್ಲಿ ಹಣ, ಅಂತಸ್ತು, ವರ್ಗ, ಲಿಂಗ, ಮೈಬಣ್ಣ, ಭಾಷೆ, ಆಹಾರಕ್ರಮ, ಪ್ರಾದೇಶಿಕ ಭಿನ್ನತೆ ಇತ್ಯಾದಿಗಳೆಲ್ಲ ಮಕ್ಕಳ ನಡುವಿನ ಸಂಬಂಧ-ಸಂಪರ್ಕ ಹಾಗೂ ಸಂವಹನಕ್ಕೆ ದೊಡ್ಡ ತೊಡಕುಗಳು. ಹೀಗಾಗಿ ‘ಹಿಂದೂ ನಾವೆಲ್ಲ ಒಂದು’, ‘ಭಾರತೀಯರು ನಾವು ಎಂದೆಂದು ಭಾವೈಕ್ಯದಲಿ ನಡೆಯುವೆವು ಒಂದಾಗಿ’ ಎಂಬಿತ್ಯಾದಿ ಮಾತುಗಳೆಲ್ಲ ಸುಂದರ ಘೋಷಣೆಗಳು ಮಾತ್ರ. ಬೇಕಿದ್ದರೆ ನೀವು ಶಾಲೆಗೆ ಹೋಗುವ ಯಾವುದೇ ಹುಡುಗ-ಹುಡುಗಿಯನ್ನು ನಿಲ್ಲಿಸಿ ತನ್ನ ಬೆಂಚು ಹಾಗೂ ಅದರ ಹಿಂದುಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಹೆಸರು ಹೇಳಲು ತಿಳಿಸಿ. ಬಹಳಷ್ಟು ಮಂದಿಗೆ ನಾಲ್ಕೈದು ಮಂದಿಯ ಹೆಸರು ಮಾತ್ರ ಗೊತ್ತಿರುತ್ತದೆ. ಇಡಿ ತರಗತಿಯ ವಿದ್ಯಾರ್ಥಿಗಳ ಹೆಸರು ಬಹಳಷ್ಟು ಮಕ್ಕಳಿಗೂ ಮಾಸ್ಟ್ರಿಗೂ ಗೊತ್ತಿರುವುದಿಲ್ಲ!

ಶಾಲೆಯ ಕಟ್ಟಡಗಳು ಹಾಗೂ ಶಾಲೆಯ ಒಳಗಿನ ಪರಿಸರ ನೋಡಲು ತೀರ ಅಸಹ್ಯವಾಗಿರುವುದಿಲ್ಲವೆ! ಶಾಲಾಕಟ್ಟಡ ನೋಡಿದೊಡನೆ ಮಗುವಿಗೆ ‘ಇದು ನನ್ನ ಶಾಳೆ. ಅಂದದ ಚಂದದ ಶಾಲೆ’ ಎಂಬ ಭಾವನೆ ಮೂಡಬೇಡವೆ? ಆದರೆ ನಮ್ಮ ದೇಶದಲ್ಲಿ ಸರಕಾರಗಳು ‘ಕರಿಹಲಗೆ ಕಾರ್ಯಾಚರಣೆ’ ‘ಪಂಚ ಸೌಲಭ್ಯಗಳು’ ಇತ್ಯಾದಿಗಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಶಾಲೆಗಳ ಸ್ಥಿತಿಗತಿ ಪೂರ್ತಿ ಸುಧಾರಿಸಿಲ್ಲ. ಕೆಲವೊಂದು ಪ್ರತಿಷ್ಠಿತ ಶಾಲೆಗಳ ಕಟ್ಟಡಗಳು ಹೊರನೋಟಕ್ಕೆ ಆಕರ್ಷಕವಾಗಿರುತ್ತವೆ. ಆದರೆ ತರಗತಿಯ ಗೋಡೆಗಳು, ಸಭಾಭವನದ ಭಿತ್ತಿಗಳು ಬೋಳುಬೋಳಾಗಿರುತ್ತವೆ. ನಾನು ಹಲವಾರು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಕೆಲವೇ ಕೆಲವು ಶಾಲೆಗಳಲ್ಲಿ ಸಭಾಭವನಗಳು ಚಿತ್ರಗಳು, ಛಾಯಾಚಿತ್ರಗಳು, ಕಲಾಕೃತಿಗಳಲು, ಮಕ್ಕಳು ಬಿಡಿಸಿದ ಚಿತ್ರಗಳು ಇತ್ಯಾದಿಗಳಿಂದ ಅಲಂಕೃತಗೊಂಡಿದೆ. ಬಹುಸಂಖ್ಯೆಯ ಶಾಲೆಗಳಲ್ಲಿ ಅಧ್ಯಾಪಕರ ಕೊಠಡಿ ಅಥವಾ ಮುಖ್ಯ ಶಿಕ್ಷಕರ ಕೊಠಡಿ ಅಲ್ಲದೆ ಗ್ರಂಥಾಲಯದಲ್ಲಿ ಗಾಂಧಿ, ನೆಹರೂ, ಇಂದಿರಾ ಗಾಂಧಿ, ಶಾಸ್ತ್ರಿ ಇಂಥ ನಾಲ್ಕೈದು ಮಂದಿ ಪ್ರಧಾನಮಂತ್ರಿಗಳ ಚಿತ್ರಗಳಿರುತ್ತವೆ. ಈ ಚಿತ್ರಗಳನ್ನು ಬಿಟ್ಟರೆ ತರಗತಿಯ ಗೋಡೆಗಳ ಮೇಲೆ ‘ದೇವರ ಭಯವೇ ಜ್ಞಾನದ ಮೂಲ.’ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಮುಂತಾದ ಒಂದೆರಡು ಹೇಳಿಕೆಗಳಿರುತ್ತವೆ. ಇದನ್ನು ಬಿಟ್ಟರೆ ತರಗತಿಯ ಗೋಡೆಗಳು, ಸಭಾಭವನದ ಗೋಡೆಗಳು ಸುಣ್ಣಬಣ್ಣ ಕಾಣದೆ ಬೋಳಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಸರ್ವಶಿಕ್ಷಣ ಅಭಿಯಾನ ಜಾರಿಗೆ ಬಂದಮೇಲೆ ಶಾಲೆಗಳ ಸುಂದರೀಕರಣದ ಕಾರ್ಯ ಹಲವು ಕಡೆಗಳಲ್ಲಿ ಜೋರಾಗಿ ನಡೆದಿದೆ. ‘ನಲಿ-ಕಲಿ’ ಕಾರ್ಯಕ್ರಮದಲ್ಲಿ ತರಗತಿಗಳನ್ನು ಮಕ್ಕಳು ಬರೆದ ಚಿತ್ರಗಳಿಂದ ಅಲಂಕರಿಸುವ ವ್ಯವಸ್ಥೆ ಆಗಿದೆ. ಆದರೂ ನಮ್ಮ ಶಾಲೆಗಳು ಮನೆಯಿಂದ ದೂರವಿರುವ ಮನೆ (Home away from Home) ಎಂಬ ಕಲ್ಪನೆಗೆ ಇನ್ನೂ ಇಂಬುನೀಡಿಲ್ಲ.

ನಮ್ಮೆಲ್ಲ ಶಾಲೆಗಳೂ ಶಿಸ್ತಿನ ಹೆಸರಿನಲ್ಲಿ ಪಠಿಸುವ ಮಂತ್ರ ಯಾವುದು ಗೊತ್ತೇ? ‘ನೆಟ್ಟಗೆ ಕುಳಿತುಕೋ! ದೇವರ ಹಾಗೆ ಮೌನವಾಗಿ ಕುಳಿತಿರು’. ಈ ಬಗೆಯ ಶಿಸ್ತು ಶಿಕ್ಷಣದ ಎಲ್ಲ ಹಂತಗಳಲ್ಲೂ ನಮ್ಮಲ್ಲಿ ಕಂಡುಬರುತ್ತದೆ.  ತರಗತಿಗಳಲ್ಲಿ ‘ಶ್ಮಶಾನಮೌನ’ ನೆಲೆಸಿದ್ದರೆ ಅದು ಒಳ್ಳೆಯ ತರಗತಿ. ಶಿಕ್ಷಕರು ಸರ್ವಶ್ರೇಷ್ಠರು! ಮಕ್ಕಳು ಬೆಳಗ್ಗಿನಿಂದ ಸಂಜೆತನಕ ಹೀಗೆ ಚಿತ್ರದ ಬೊಂಬೆಗಳಂತೆ ಮಿಸುಕಾಡದೆ, ‘ಅನಿಮಿಷನೇತ್ರ’ರಂತೆ ಇರಬೇಕು! ಮಕ್ಕಳನ್ನು ನಿಷ್ಕ್ರಿಯರನ್ನಾಗಿ ಮಾಡುವ ಅತ್ಯುತ್ತಮ ವಿಧಾನವಿದು! ಇಡೀ ದಿನ ಪಾಠ ಪಾಠ ಪಾಠ… ದೈಹಿಕ ಶ್ರಮದ ಚಟುವಟಿಕೆಗಳಿಗೆ ಒಂದಿಷ್ಟೂ ಎಡೆಯಿಲ್ಲದ ಅಥವಾ ಅಲ್ಪ ಸ್ವಲ್ಪ ಮಾತ್ರ ಅವಕಾಶವಿರುವ ಬಿಗಿಯಾದ ವೇಳಾಪಟ್ಟಿ, ಮಕ್ಕಳ ಕರ್ತೃತ್ವ ಶಕ್ತಿಯನ್ನು ನುಂಗಿ ನೀರು ಕುಡಿಯುತ್ತದೆ! ನಾಳಿನ ‘ಭವ್ಯ ಭವಿಷ್ಯತ್ತಿ’ಗಾಗಿ ಅವರು ಇಷ್ಟೆಲ್ಲ ಬಿಗಿಯಾಗಿ ಇಂದು ಕುಳಿತಿರಬೇಕೆ! ತಮ್ಮ ಸಹಜ ಕುತೂಹಲ ಹಾಗೂ ಪ್ರವೃತ್ತಿಯನ್ನು ಶುಷ್ಕ ಬೋಧನೆಗೆ ಬಲಿಕೊಡಬೇಕೇ? ತಮ್ಮ ಸಹಜ ಕುತೂಹಲ ಹಾಗೂ ಪ್ರವೃತ್ತಿಯನ್ನು ಶುಷ್ಕ ಬೋಧನೆಗೆ ಬಲಿಕೊಡಬೇಕೇ? ಎಂದು ಎಂದೂ ನಮ್ಮನ್ನು ನಾವು ಪ್ರಶ್ನಿಸಿಕೊಂಡಿಲ್ಲ! ‘ಆಟದ ಬಯಲಲಿ ಆಂಜನೇಯರೇ ನಾವು’ ಎಂದು ಕೆಎಸ್‌ನ ‘ಹಿಂದಿನ ಸಾಲಿನ ಹುಡುಗರು’ ಕವನದಲ್ಲಿ ಹೇಳಿದ್ದನ್ನು ಶಿಕ್ಷಕರು ಕೇಳಿಸಿಕೊಂಡಿಲ್ಲ. ಆಟದ ಬಯಲಿನಲ್ಲಿ. ಹೂದೋಟದಲ್ಲಿ ಮಕ್ಕಳು ನಗ್ತಾ,  ಆಡ್ತಾ, ಓಡ್ತಾ, ಸಂಭ್ರಮಿಸುತ್ತಾ ಅವರ ಬುದ್ಧಿಶಕ್ತಿ-ಜಾಣ್ಮೆ-ಕೌಶಲಗಳು ಅಲ್ಲಿ ವಿವಿಧ ರೂಪಗಳಲ್ಲಿ ಪ್ರಕಟಗೊಳ್ಳುವುದನ್ನು ನಿಶ್ಚಲವೂ ಮೌನವೂ ಆಗಿರುವ ತರಗತಿಗಳಲ್ಲಿರುವ ಶಿಕ್ಷಕರು ಗುರುತಿಸುವ ಗೋಜಿಗೇ ಹೋಗುವುದಿಲ್ಲ!

ಹಲವು ವರ್ಷಗಳ ಹಿಂದೆ ನಾನೊಂದು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಉದ್ದೇಶಿಸಿ ಭಾಷಣಮಾಡುವ ಸಂದರ್ಭ ಒದಗಿತ್ತು. ಕಾರ್ಯಕ್ರಮ ಆರಂಭವಾಯಿತು. ಸ್ವಾಗತ, ಸಂದೇಶವಾಚನ ಇತ್ಯಾದಿಯಾಗಿ ಸುದೀರ್ಘ ಕಾರ್ಯಕ್ರಮ ‘ಸಹಜವಾಗಿ ಪುಟಾಣಿಗಳಿಗೆ ಹಿರಿಯರ ಈ ಚಟುವಟಿಕೆ ಅದೂ ಮಾತೇ ಪ್ರಧಾನವಾದ ಚಟುವಟಿಕೆಯಲ್ಲಿ ಆಸಕ್ತಿಯಿಲ್ಲ; ಆದರೆ ವೇದಿಕೆಯ ಮುಂಭಾಗಕ್ಕೆ ಆಗಾಗ್ಗೆ ಒಬ್ಬರು ಶಿಕ್ಷಕರು ಬಂದು ನಿಂತು ‘ಕೈಕಟ್ಟಿ, ಬಾಯ್ಮುಚ್ಚಿ’ ಎಂದು ಆದೇಶ ನೀಡುತ್ತಿದ್ದರು. ಅಧ್ಯಾಪಕರ ಆಣತಿಯ ಮೇರೆಗೆ ಮಕ್ಕಳು ಸ್ವಲ್ಪ ಹೊತ್ತು ಕೈಕಟ್ಟಿಕೊಂಡು ಮೌನವಾಗಿರುತ್ತಿದ್ದರು. ಸ್ವಲ್ಪ ಸಮಯದ ಮೇಲೆ ಕೈ ಸಡಿಲವಾಗುತ್ತದೆ. ಪರಸ್ಪರ ಮಾತುಕತೆ ಶುರುವಾಗುತ್ತದೆ. ಅಂದರೆ ಬಾಹ್ಯ ಪ್ರೇರಿತವಾದ ಈ ಬಗೆಯ ಶಿಸ್ತು ತತ್ಕಾಲೀನ ಎಂಬುದು ಶಿಕ್ಷಕರಾದ ನಮಗೆ ಮನವರಿಕೆ ಆಗುವುದೇ ಇಲ್ಲ! ನಾವು ಬೈಗುಳ, ಬೆತ್ತ, ಮೂದಲಿಕೆಯ ಮೂಲಕ ಶಿಸ್ತನ್ನು ಕೊಂಡು ಕೊಂಡು ಮಕ್ಕಳಿಗೆ ನಿಜವಾದ ಶಿಸ್ತನ್ನು ಕಲಿಸಿದ್ದೇವೆ ಎಂದು ಭ್ರಮಿಸಿದ್ದೇವೆ. ಸ್ವಯಂಪ್ರೇರಿತ ಶಿಸ್ತು ಮೂಡಿಸಲು ಏನನ್ನೂ ಮಾಡಲು ಹೋಗುವುದಿಲ್ಲ!

ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅವಕಾಶವೇ ಇಲ್ಲದ ಶಿಕ್ಷಣ ವ್ಯವಸ್ಥೆ ನಮ್ಮದು. ಇಡೀ ದಿನ ಮಕ್ಕಳು ಪಾಠ ಕೇಳಬೇಕು. ತರಗತಿಗಳಲ್ಲಿ ಕೇಳುವುದು ಹಾಗೂ ಬರೆದುಕೊಳ್ಳುವುದು ಬಿಟ್ಟರೆ ಬೇರೆ ಚಟುವಟಿಕೆಗಳಿಲ್ಲ. ಎಂಥ ಬೇಸರದ ಚಟುವಟಿಕೆಯಿದು. ಗಿಡಗಳಿಗೆ ನೀರುಣಿಸುವುದು, ಗುಂಡಿ ತೋಡುವುದು, ಕಸ ಗುಡಿಸುವುದು, ಆಟವಾಡುವುದು, ಕತ್ತರಿಸುವುದು, ಹೊಲಿಯುವುದು, ಕುಣಿಯುವುದು, ಹಾಡುವುದು-ಇತ್ಯಾದಿಯಾದ ಯಾವ ಚಟುವಟಿಕೆಗಳಿಗೂ ನಮ್ಮ ವೇಳಾಪಟ್ಟಿಯಲ್ಲಿ ಸ್ಥಾನವೇ ಇಲ್ಲ. ಹಾಗಂತ ವೇಳಾಪಟ್ಟಿಯಲ್ಲಿ ವಾರದಲ್ಲಿ ಒಂದೆರಡು ಅವಧಿ ಆಟಗಳು, ಗೆಯ್ಮೆ, ನೈತಿಕಶಿಕ್ಷಣ ಇತ್ಯಾದಿ ತರಗತಿಗಳಿರುತ್ತವೆ. ಆದರೆ ಗಂಭೀರವಾದುದೇನೂ ಈ ಅವಧಿಯಲ್ಲಿ ನಡೆಯುವುದಿಲ್ಲ. ಆಟದ ಅವಧಿಯಲ್ಲಿ ಮಕ್ಕಳು ಕ್ರೀಡಾಂಗಣ ಇದ್ದರೆ ಅಲ್ಲಿಗೆ ಹೋಗಿ ಕ್ರಿಕೆಟ್‌ ಆಡುತ್ತಾಋಎ. ಟೆನಿಕಾಯ್ಟ್‌ ಆಡುತ್ತಾರೆ. ಬೇರೆ ಆಟಗಳನ್ನು ಕಲಿಸುವ, ಆಟಗಳ ನಿಯಮಗಳನ್ನು ಪ್ರಾಯೋಗಿಕವಾಗಿ ಕಲಿಸುವ ವ್ಯವಧಾನ ದೈಹಿಕ ಶಿಕ್ಷಕರಿಗಿಲ್ಲ. ಅನೇಕರಿಗೆ ಇದೊಂದು ಉಪವೃತ್ತಿ. “ಹೋಗ್ರೋ, ಆಡ್ಕೊಳ್ರೊ! ಸಾಲಾಗಿ ಬನ್ನಿ” ಎಂದು ಜಬರ್ ದಸ್ತು ಮಾಡುವುದಷ್ಟೇ ಅನೇಕ ಶಾಲೆಗಳಲ್ಲಿ ಕಂಡುಬರುತ್ತಿದೆ. ಗೆಯ್ಮೆ, ನೈತಿ , ಶಿಕ್ಷಣದ ಕತೆಯೂ ಇಷ್ಟೇ. ವರ್ಷದ ಕೊನೆಕೊನೆ ಬರುವಾಗ ಈ ಚಟುವಟಿಕೆಯ ಅವಧಿಗಳು ವಿಷಯಬೋಧಕರಿಗೆ ಆಹಾರ! ಏಕೆಂದರೆ ಹೇಗಾದರೂ ಮಾಡಿ ಪಾಠ ಮುಗಿಸಬೇಕಲ್ಲ! ನಿಜಕ್ಕಾದರೂ ನಮ್ಮ ಶಾಲಾ ವ್ಯವಸ್ಥೆಯಲ್ಲಿ ಹೇಗಾದರೂ ಮಾಡಿ ಪಾಠ ಮುಗಿಸಬೇಕಲ್ಲ? ನಿಜಕ್ಕಾದರೂ ನಮ್ಮ ಶಾಲಾ ವ್ಯವಸ್ಥೆಯಲ್ಲಿ ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಇನ್ನಷ್ಟು ಅವಧಿ ಮೀಸಲಿಡಬೇಕು ಮತ್ತು ಕಲಿಸುವುದನ್ನು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಕಲಿಸಬೇಕು. ಕಲಿಸುವುದು ಕಾಟಾಚಾರವಾಗಬಾರದು. ನಿಜಜೀವನ, ನಿಜವಾದ ವಸ್ತಗಳು ಹಾಗೂ ನಿಜವಾದ ವ್ಯಕ್ತಿಗಳೊಂದಿಗೆ ಅಧಿಕಾಧಿಕ ಸಂಪರ್ಕವನ್ನು ಏರ್ಪಡಿಸಬೇಕು.

ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗಳಲ್ಲಿ ಹಾಜರಾಗಿ ದಿನವಿಡೀ ಅಲ್ಲೇ ಕೊಳೆಯಬೇಕು, ಬೆಂಚು ಬಿಸಿಮಾಡಬೇಕು ಎಂಬ ನಿಯಮವನ್ನು ಇನ್ನಾದರೂ ಕಿತ್ತೆಸೆಯುವ ನಿಟ್ಟಿನಲ್ಲಿ ಗಂಭೀಋವಾಗಿ ಯೋಚಿಸಬೇಕು. ಶಿಕ್ಷಣದ ಹಕ್ಕು ಮಸೂದೆ ಜಾರಿಗೆ ಬಂದಿರುವ ಸಂದರ್ಭದಲ್ಲಿ ಹೀಗೆ ವಾದಿಸುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಆದರೆ ಯೋಚಿಸಿ-ಸ್ವಂತ ಆಸಕ್ತಿ-ಕಾಳಜಿಯಿಲ್ಲದೆ, ಯಾರದೋ ಒತ್ತಾಯಕ್ಕೆ, ಯಾವುದೋ ಆಸೆಗೆ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ಏನನ್ನು ಕಲಿತಾರು? ತಾವು ಕಲಿಯದಿದ್ದರೆ ಹೋಗಲಿ, ಬೇರೆಯವರಿಗೆ ಕಲಿಯಲು ಬಿಡದೇ ಇರುವ ಪ್ರಸಂಗಗಳೂ ಇವೆಯಲ್ಲಧ? ಇಷ್ಟಕ್ಕೂ ಶಾಲೆಗಳಲ್ಲಿ ನಾವು ಕಲಿಸುವ ಸಂಗತಿಗಳು ಅವರ ಸದ್ಯದ ಬದುಕನ್ನು ಎಷ್ಟರಮಟ್ಟಿಗೆ ‘ಅರ್ಥಪೂರ್ಣ’ವಾಗಿಸುತ್ತವೆ? ಯಾವ ಸಂಪಾದನೆಯ, ಸ್ವಾವಲಂಬಿತ್ವದ ಕೌಶಲಗಳನ್ನು ನಾವು ಶಾಲೆಗಳಲ್ಲಿ ಅವರಿಗೆ ಕಲಿಸುತ್ತೇವೆ? ‘ಶಾಲೆಗಳು ಶೋಷಣೆಯ ವ್ಯರ್ಥ ಕಾಲಹರಣದ ಕೇಂದ್ರಗಳಾಗಿವೆ!” -ಜಾನ್‌ ಹೋಲ್ಟ್‌ ಅವರ ಈ ಅಭಿಪ್ರಾಯ ಪೂರ್ತಿ ನಿರಾಕರಣ ಯೋಗ್ಯವೇನಲ್ಲ.

ಇಂದು ದೂರಶಿಕ್ಷಣ ಹಾಗೂ ಮುಕ್ತಶಿಕ್ಷಣ ಕಲ್ಪನೆ ದಿನೇ ದಿನೇ ಪ್ರಬಲವಾಗುತ್ತಿದೆ. ನಮ್ಮ ದೇಶದ ಸಂದರ್ಭದಲ್ಲಿ  ರಾಷ್ಟ್ರೀಯ ಮುಕ್ತ ಕಲಿಕೆಯ ಶಾಲೆಯ ಕೇಂದ್ರಗಳು ಸಾಕಷ್ಟು ಚೆನ್ನಾಗಿ ಕೆಲಸಮಾಡುತ್ತಿವೆ. ಸಂಸ್ಥಾಬದ್ಧ ಔಪಚಾರಿಕ ಶಿಕ್ಷಣದ ಬಿಗಿಯನ್ನು ಸಡಿಲಿಸಿ ಅದಕ್ಕೆ ಮುಕ್ತ ಶಿಕ್ಷಣವನ್ನು ಕಸಿಕಟ್ಟುವುದರ ಮೂಲಕ ಎಲ್ಲ ಮಕ್ಕಳು ಶಾಲೆಗಳಲ್ಲಿ ಇಡೀ ದಿನ ತಪ್ಪದೆ ಇರಬೇಕು ಎಂಬ ಕಡ್ಡಾಯ ಹಾಜರಿಯ ನಿಯಮವನ್ನು ಬದಲಾಯಿಸಬಹುದು. ಇದರಿಂದ ಮಕ್ಕಳು ಇನ್ನಿತರ ಕೆಲಸಗಳನ್ನೂ ಮಾಡಬಹುದು. ಕಲಾಪ್ರಕಾರಗಳಲ್ಲಿ ತರಬೇತಿ ಪಡೆಯಬಹುದು.

ನಮ್ಮ ಶಿಕ್ಷಣವೆಂಬುದು ತರಗತಿ ಕೋಣೆಗಳಿಗಷ್ಟೇ ಸೀಮಿತ. ಜಗತ್ತಿನ ಜ್ಞಾನರಾಶಿಯನ್ನು ನಾವು ಶಿಕ್ಷಕರು ಪುಸ್ತಕಗಳಿಂದ ಸಂಗ್ರಹಿಸಿ ತರಗತಿಯ ಕೃತಕ ವಾತಾವರಣದಲ್ಲಿ ಮಕ್ಕಳ ತಲೆಯ ಮೇಲೆ ಹೇರುತ್ತೇವೆ. ಮಕ್ಕಳಿಗೆ ಅರ್ಥವಾಗುವುದೋ ಇಲ್ಲವೋ, ಅವರು ಅದರಿಂದ ಪ್ರಯೋಜನ ಪಡೆಯುವರೋ ಇಲ್ಲವೋ ಎಂಬುದು ನಮಗೆ ಗೌಣ. ನಮಗೆ ನಿಗದಿತ ಸಮಯದೊಳಗೆ ಪಾಠಮಾಡಿ ಮುಗಿಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದೇ ಮುಖ್ಯ. ತರಗತಿಯ ಹೊರಗೆ ಮಿಡಿಯುತ್ತಿರುವ ಜೀವನವನ್ನು ಜೀವಿಸುವುದಕ್ಕೆ ತಕ್ಕುದಾದ ಸಾಮರ್ಥ್ಯ, ಕೌಶಲ, ತಿಳಿವಳಿಕೆ ಅವರಲ್ಲಿ ಮೂಡಿದೆಯೇ ಇಲ್ಲವೆ ಎಂಬುದು ನಮಗೆ ಅಷ್ಟು ಮಹತ್ವದ ಸಂಗತಿಯಲ್ಲ. ಹೀಗಾಗಿ ಇಂದಿನ ಬಹಳಷ್ಟು ಮಕ್ಕಳಿಗೆ ಸಾಮಾಜಿಕ ಬದುಕು, ರೀತಿನೀತಿ, ಶಿಷ್ಟಾಚಾರ, ಸಂಪ್ರದಾಯಗಳು, ಉತ್ಸವಗಳು, ಹಬ್ಬಹರಿದಿನಗಳು, ಕಸುಬುಗಳು, ಜೀವನಶೈಲಿ, ಬದುಕಿನ ಕಷ್ಟಕಾರ್ಪಣ್ಯಗಳು ಅಷ್ಟಾಗಿ ತಿಳಿದಿಲ್ಲ. ಏಕೆಂದರೆ ಬದುಕನ್ನು ನಿಬ್ಬೆರಗಾಗಿ ನೋಡುವ, ಅರಿಯುವ, ಆಸ್ವಾದಿಸುವ, ವಿಶ್ಲೇಷಿಸುವ ಅವಕಾಶಗಳನ್ನು ನಾವು ಮಾಡಿಕೊಟ್ಟಿಲ್ಲ. ಮಕ್ಕಳನ್ನು ಈಜುಕೊಳದ ಬಳಿಗೆ ಎಂದೂ ಕರೆದೊಯ್ಯದೆ ನೀರಿಲ್ಲದ ತರಗತಿಯಲ್ಲಿ ಈಜುಗಾರಿಕೆ ಬಗ್ಗೆ ಪಾಠಹೇಳಿ ಪರೀಕ್ಷೆ ಮಾಡಿ ಮಾರ್ಕುಕೊಟ್ಟು ಪಾಸುಮಾಡಿಸಿದ್ದೇವೆ. ಆದರೆ ಈಜುವುದು ಹೇಗೆಂಬುದೇ ತಿಳಿದಿಲ್ಲ!

ಮಕ್ಕಳನ್ನು ತರಗತಿಯ ಚೌಕಟ್ಟುಗಳಿಂದಾಚೆಗೆ, ಹೊರಗಿನ ಬಯಲಿಗೆ, ಸಾಮಾಜಿಕ ಜೀವನರಂಗಕ್ಕೆ ಕರೆದೊಯ್ಯುವುದು ಅತಿ ಅಗತ್ಯ. ಹೀಗೆ ಮಾಡಿ ಅವರಿಗೆ ಜೀವನದ ದರ್ಶನ ಮಾಡಿಸುವುದು, ಬದುಕಿನ ಪ್ರಥಮಾನುಭವಗಳನ್ನು ಒದಗಿಸುವುದು ಅತಿ ಅಗತ್ಯ. ಬಿ.ವಿ. ಕಾರಂತರು ‘ರಂಗಾಯಣ’ದಲ್ಲಿ ಮಾಡಿದ ಪ್ರಯೋಗಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಮೂಡಿಬರಬೇಕು. ಅವರು ತಮ್ಮ ನಟರಿಗೆ ಮೈಸೂರಿನ ಬೀದಿಗಳಲ್ಲಿ ಬೆಳಗಿನ ಹೊತ್ತು ಸಂಚರಿಸಿ, ಜನ ಮಾತನಾಡುವ ರೀತಿಯನ್ನು ಅವರ ಪದ ಪ್ರಯೋಗವನ್ನು, ಸ್ವರಭಾರ, ಕಾಕು, ಹಾವಭಾವ ಇತ್ಯಾದಿಗಳನ್ನು ಗಮನಿಸಲು ತಿಳಿಸುತ್ತಿದ್ದರಂತೆ. ದೇವರಾಜ ಮಾರುಕಟ್ಟೆಯಲ್ಲಿ ನಡೆಯುವ ಕ್ರಯವಿಕ್ರಯದ ಸಾಮಾಜಿಕ ಭಾಷಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಗಮನಿಸಲು ಹೇಳುತ್ತಿದ್ದರಂತೆ. ಶವಯಾತ್ರೆಯನ್ನು ಸೂಕ್ಷ್ಮವಾಗಿ ಗಮನಿಸಲು ಸೂಚಿಸುತ್ತಿದ್ದರಂತೆ. ಅವಲೋಕನದ ಬಳಿಕ ನಟರು ರಂಗಾಯಣಕ್ಕೆ ಮರಳಿ ಬಂದು ಆವಿಷ್ಕಾರಸಹಿತ ಅದನ್ನು ಅಭಿನಯಿಸಿ ತೋರಿಸಲು ಹೇಳುತ್ತಿದ್ದರಂತೆ. ಅಂದರೆ ಯಾವುದೇ ಕಲಿಕೆ ನಿರ್ವಾತದಲ್ಲಿ ಆಗುವಂಥದ್ದಲ್ಲ. ಅದಕ್ಕೊಂದು ಸಾಮಾಜಿಕ ಸಂದರ್ಭ ಬೇಕು. ಆ ಸಂದರ್ಭದಿಂದ ಕಲಿಕೆಯನ್ನು ಹೊರತೆಗೆದು ತರಗತಿ ಕೋಣೆಗಳೆಂಬ ಗೂಡುಗಳಲ್ಲಿ ಬಂಧಿಸುವುದು ನೀರಿನಿಂದ ಮೀನನ್ನು ಹೊರತೆಗೆದಂತೆ.

ಇಷ್ಟಕ್ಕೂ ನಿಜವಾದ ಭಾಷೆ, ವ್ಯಾಕರಣ, ವ್ಯವಹಾರ, ಅರ್ಥಶಾಸ್ತ್ರ, ವಿಜ್ಞಾನ, ಸಮಾಜ ಅಧ್ಯಯನ ತರಗತಿಯ ನಾಲ್ಕು ಗೋಡೆಗಳೊಳಗೆ ಇಲ್ಲ; ಪಠ್ಯಪುಸ್ತಕಗಳಲ್ಲಿಲ್ಲ. ಅದಿರುವುದು ಜೀವಂತ ಸಾಮಾಜಿಕ ಸನ್ನಿವೇಶದಲ್ಲಿ. ಸಮಾಜವೇ ನಿಜವಾದ ಭಾಷಾ ಪ್ರಯೋಗಶಾಲೆ. ಆದುದರಿಂದ ಮಕ್ಕಳನ್ನು ವಾರದಲ್ಲಿ ಒಂದೆರಡು ಬಾರಿ ಶಾಲೆಯಿಂದ ಹೊರಗೆ ಕರೆತಂದು ಮಾರುಕಟ್ಟೆ, ಬಸ್‌ಸ್ಟ್ಯಾಂಡ್‌, ಬ್ಯಾಂಕು, ಅಂಚೆ ಕಛೇರಿ, ಸಮುದ್ರತೀರ, ನದೀತೀರ-ಮುಂತಾದ ಕಡೆಗಳಲ್ಲಿ ಸಂಚರಿಸಲು ಬಿಟ್ಟು ಜನರ ಜೊತೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸಿ ಬಳಿಕ ಅಲ್ಲೇ ಒಂದೆಡೆ ಕುಳಿತು ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಇವುಗಳ ಬಗ್ಗೆ ಮುಕ್ತ ವಿಚಾರವಿನಿಮಯ -ಚರ್ಚೆ ನಡೆಸುವ ವ್ಯವಸ್ಥೆ ಜಾರಿಗೆ ಬರಬೇಕು. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ೨೦೦೫ ಈ ನಿಟ್ಟಿನಲ್ಲಿ ಗಮನಹರಿಸಿದ್ದು ಸ್ಥಳೀಯ ಸಾಮುದಾಯಿಕ ಸಂಪನ್ಮೂಲಗಳ ಬಳಕೆ ಹಾಗೂ ಸ್ಥಳೀಯ ಕಲಾವಿದರ, ಕರಕುಶಲಿಗರ, ವೃತ್ತಿಪರರ ಭೇಟಿ-ಸಂವಾದದಂಥ ಚಟುವಟಿಕೆಗಳಿಗೆ ಮಹತ್ತ್ವ ನೀಡಿದೆ.

ಮಕ್ಕಳು ಹೊರಜಗತ್ತಿಗೆ ತೆರೆದುಕೊಂಡ ಹಾಗೆಲ್ಲ, ಹೊರಜಗತ್ತಿನ ಅನುಭವಗಳು ನೀರಸ ತರಗತಿಯನ್ನು ಪ್ರವೇಶಿಸಿ ಮಿಂಚಿನ ಸಂಚಾರ ಉಂಟುಮಾಡುತ್ತವೆ. ಮಕ್ಕಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟರೆ ಸಮುದಾಯದ ಇತರ ವ್ಯಕ್ತಿಗಳ ಜೊತೆ ಸಂಪರ್ಕವಿರುವುದಿಲ್ಲ. ಇದರಿಂದಾಗಿ ಸಾಮಾಜಿಕ ಕೌಶಲಗಳನ್ನು ಕರಗತಮಾಡಿಕೊಳ್ಳುವಲ್ಲಿ ಅವರು ಸೋಲುತ್ತಾರೆ. ಆದುದರಿಂದ ನಾವು ನಮ್ಮ ಸಮುದಾಯದಲ್ಲಿರುವ ವಿವಿಧ ಬಗೆಯ ಜನರನ್ನು (ಅವರು ಶಿಕ್ಷಕರಲ್ಲದಿದ್ದರೂ ಕೂಡ) ಶಾಲಾ ತರಗತಿಗಳಿಗೆ ಕರೆದೊಯ್ದು ಪರಸ್ಪರ ಕ್ರಿಯೆಯನ್ನು ಏರ್ಪಡಿಸಬೇಕು. ದುರ್ದೈವ ಏನೆಂದರೆ ನಮ್ಮ ಬಹಳಷ್ಟು ಶಾಲೆಗಳು ತಮ್ಮ ಸಮುದಾಯದಲ್ಲಿರುವ ಕಲಾವಿದರನ್ನು, ಸಾಹಿತಿಗಳನ್ನು, ವಿಜ್ಞಾನಿಗಳನ್ನು, ಪತ್ರಕರ್ತರನ್ನು, ಕರಕುಶಲಿಗರನ್ನು ಆಹ್ವಾನಿಸಿ ಮಕ್ಕಳ ಜೊತೆ ಆತ್ಮೀಯ ಸಂವಾದ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ. ಏನೇನೋ ಕುಂಟುನೆಪಗಳು! ಇಂಥ ಅನುಭವ ನಿಜಕ್ಕೂ ಮಕ್ಕಳ ಭಾವಕೋಶವನ್ನು, ಬುದ್ಧಿಪ್ರಪಂಚವನ್ನು ಹಾಗೂ ಭಾಷಿಕ ಲೋಕವನ್ನು ಬೆಳಗುತ್ತದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಯಿತ್ರಿ ವೈದೇಹಿ ಅವರ ಜೊತೆ ನಾನೊಮ್ಮೆ ಕುಂದಾಪುರದ ಬಿ.ಆರ್. ರಾಯರ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಾವಿಬ್ಬರೂ ಸಾಕಷ್ಟು ಮುಂಚಿತವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿದ್ದೆವು. ಸಮಯವಿದೆ ಎಂದು ತಿಳಿದು ಅಲ್ಲೇ ಸಮೀಪದ ಒಂದು ಪುಟ್ಟ ದೇಗುಲಕ್ಕೆ ಹೋಗಿ ಹೊರಗೆ ಬರುವಾಗ ಒಬ್ಬ ಹುಡುಗ ವೈದೇಹಿ ಅವರನ್ನು ಗಮನಿಸಿ “ನೀವು ವೈದೇಹಿ ಅಲ್ದಾ?” ಎಂದು ಪ್ರಶ್ನಿಸಿ ಬೇರೆ ಮಕ್ಕಳನ್ನು ಅಲ್ಲಿಗೆ ಕರೆದ. ಆಶ್ಚರ್ಯಚಕಿತರಾದ ವೈದೇಹಿ “ಹೌದು. ನಿಂಗೆ ಹ್ಯಾಂಗೆ ಗೊತ್ತಾಯ್ತು ನಾ ವೈದೇಹಿ ಅನ್ಕಂಡು” ಅಂತ ಪ್ರಶ್ನಿಸಿದರು. “ನಿಮ್‌ ಪದ್ಯ ನಮ್‌ ಪಾಠ ಪುಸ್ತಕದಂಗಿತ್ತು. ಅದರಂಗೆ ನಿಮ್‌ ಚಿತ್ರ ಕೊಟ್ಟಿದ್ರು” ಅಂತ ಹುಡುಗ ಹೇಳಿದ.  ನಿರ್ಜೀವಾಕ್ಷರಗಳಿಂದ ತುಂಬಿದ ಪುಸ್ತಕಗಳಲ್ಲಿ ಬರುವ ವ್ಯಕ್ತಿಗಳು ಜೀವಂತವಾಗಿ ಕಣ್ಣೆದುರೇ ಬಂದಾಗ ಮಕ್ಕಳಿಗೆ ಎಷ್ಟು ಖಷಿಯಾಗುತ್ತದೆ ಎಂಬುದು ನನಗೆ ಈ ಪ್ರಸಂಗದಲ್ಲಿ ಅರಿವಿಗೆ ಬಂತು ಮತ್ತು ನಮ್ಮ ಶಾಲೆಗಳು ಸಮುದಾಯದಲ್ಲಿರುವ ಅಮೂಲ್ಯ ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳದಿರುವ ಬಗ್ಗೆ ವ್ಯಥೆಯೂ ಆಯಿತು.

ಮಕ್ಕಳು ಜೊತೆಗೂಡಿ ಕೆಲಸ ಮಾಡಲಿ; ಸ್ಪರ್ಧಿಸುವ ಬದಲು ಪರಸ್ಪರ ಸಹಕರಿಸಲಿ; ಸಹಾಯಹಸ್ತ ಚಾಚಲಿ; ಒಬ್ಬರು ಇನ್ನೊಬ್ಬರಿಗೆ ಕಲಿಸಲಿ-ಒಬ್ಬರಿಂದೊಬ್ಬರು ಕಲಿಯಲಿ. ಇನ್ನೊಬ್ಬರು ಮಾಡುವ ತಪ್ಪುಗಳನ್ನು ಕಂಡು ಆ ತಪ್ಪುಗಳಿಂದ ಪಾಠ ಕಲಿಯಲಿ. ತನ್ನ ತಪ್ಪುಗಳೇನು ಎಂದು ತಿಳಿದು ನಿವಾರಣೆಗೆ ಯತ್ನಿಸಲಿ. ನಮಗೆ ಈಗಾಗಲೆ ಗೊತ್ತಿರುವಂತೆ ಪ್ರತಿಭಾವಂತ ಮಕ್ಕಳನೇಕರು ತಮ್ಮ ಸ್ನೇಹಿತರಿಗೆ ಕಲಿಸುವ ವಿಚಾರದಲ್ಲಿ ಶಿಕ್ಷಕರಿಗಿಂತ ಮಿಗಿಲು. ಶಿಕ್ಷಕರಲ್ಲಿ ಸಹನೆ ಕಡಿಮೆ. ಗದರಿಕೆ ಹೆಚ್ಚು. ಮೇಲಾಗಿ ಆತ್ಮೀಯತೆ ಸಾಲದು. ಆದರೆ ಮಕ್ಕಳು ಜೊತೆಗೂಡಿ ಕಲಿಯುವಾಗ ಒಂದೇ ತರಗತಿಯ ಅಥವಾ ಹಿರಿಯ ತರಗತಿಯ ವಿದ್ಯಾರ್ಥಿಗಳು ಆತ್ಮೀಯತೆ, ಸಲುಗೆಯಿಂದ, ತಾಳ್ಮೆಯಿಂದ ಚೆನ್ನಾಗಿ ಪಾಠ ಹೇಳುತ್ತಾರೆ. ಈ ಒಂದು ಅದ್ಭುತ ಅವಕಾಶವನ್ನು ನಮ್ಮ ಶಾಲೆಗಳು ಚೆನ್ನಾಗಿ ಬಳಸಿಕೊಳ್ಳುತ್ತಿಲ್ಲ. ‘ನಲಿ ಕಲಿ’ ಕಾರ್ಯಕ್ರಮದಲ್ಲಿ ಸ್ವಲ್ಪಮಟ್ಟಿಗೆ ಈಗ ಇದನ್ನೂ ಸರಕಾರ ಅಳವಡಿಸಿದೆ. ಕೆಲವು ಶಿಕ್ಷಕರು ಈ ಕ್ರಮವನ್ನು ಉತ್ತೇಜಿಸುತ್ತಾರೆ. ಆದರೆ ನಿಜಕ್ಕೂ ಇದೊಂದು ಸಾರ್ವತ್ರಿಕ ಕಲಿಕೆಯ ಪರಸ್ಪರ ಕಲಿಕೆ ಸಹಕಾರದ ಕಾರ್ಯಕ್ರಮವಾಗಿ ರೂಪುಗೊಂಡರೆ ಮಕ್ಕಳ ಸಾಧನೆಯ ಮಟ್ಟವನ್ನು ಹೆಚ್ಚಿಸಬಹುದು . ಆದರೆ ನಾವು ಕಲಿಕೆಯ ಸಂದರ್ಭದಲ್ಲಿ ಅನಾರೋಗ್ಯಕರ ಸ್ಪರ್ಧಾತ್ಮಕತೆಯ ವಿಷಬೀಜ ಬಿತ್ತುವುದರಿಂದ ‘ಸಹಕಾರಿ ಕಲಿಕೆ’ ಇಲ್ಲಿ ಅರಳುತ್ತಿಲ್ಲ. ಇನ್ನಾದರೂ ಇಂಥ ಪ್ರಯತ್ನಗಳು ಹೆಚ್ಚಬೇಕು.

ಮಕ್ಕಳು ತಮ್ಮ ತಪ್ಪುಗಳನ್ನು ತಾವೇ ಕಂಡು ಸುಧಾರಿಸುವ ಅವಕಾಶಗಳನ್ನು ನಾವು ಶಾಲೆಗಳಲ್ಲಿ ಹೆಚ್ಚಿಸುವ ಅಗತ್ಯವಿದೆ. ಮಕ್ಕಳ ಪ್ರತಿಯೊಂದು ಕ್ರಿಯೆಯನ್ನು ಭೂತಕನ್ನಡಿಯಲ್ಲಿಟ್ಟು ‘ಇದು ತಪ್ಪು ಇದು ತಪ್ಪು’ ಎಂದು ನಿಂದಿಸುತ್ತಿದ್ದರೆ, ಬರೆಹ ಪುಸ್ತಕದಲ್ಲೆಲ್ಲ ಶಿಕ್ಷಕರ ಕೆಂಪುಶಾಯಿ ರಾರಾಜಿಸುತ್ತಿದ್ದರೆ ಮಕ್ಕಳು ಹತಾಶರಾಗುತ್ತಾರೆ. ಆದರೆ ಮಕ್ಕಳು ತಾವು ಮಾಡುವ ಚಟುವಟಿಕೆಯನ್ನು ಇತರ ಮಕ್ಕಳು ಮಾಡುವ ಚಟುವಟಿಕೆಯೊಂದಿಗೆ ಹೋಲಿಸಿ ನೋಡಿ ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ. ತಿಳಿಯದಿದ್ದರೆ “ಏ, ನೀನು ಅದನ್ನು ಹೇಗೆ ಮಾಡಿದಿ? ನನಗೂ ಸ್ವಲ್ಪ ಹೇಳಿಕೊಡೋ” ಎಂದು ಗೋಗರೆದು ಕಲಿಯುತ್ತಾರೆ. ಆದರೆ ನಾವು ಶಾಲೆಗಳಲ್ಲಿ ಮಕ್ಕಳು ತಮ್ಮ ತಪ್ಪುಗಳನ್ನು ತಾವೇ ಗುರುತಿಸಲು ಅವಕಾಶ ಕಲ್ಪಿಸುವುದಿಲ್ಲ. ಮಕ್ಕಳಿಗೆ ಏನೂ ತಿಳಿಯುವುದಿಲ್ಲವೆಂದು ಭಾವಿಸಿ ನಾವೇ ಎಲ್ಲ ಸಿದ್ಧಮಾಡಿ ಕೊಡುತ್ತೇವೆ. ನಾವೇ ತಪ್ಪುಗಳನ್ನು ಗುರುತಿಸಿ ಹೇಳುತ್ತೇವೆ.ನಾವೇ ತಿದ್ದಿ ಹೇಳುತ್ತೇವೆ. ಇದರಿಂದಾಗಿ ಮಕ್ಕಳು ಪ್ರತಿಯೊಂದು ವಿಷಯದಲ್ಲೂ ಶಿಕ್ಷಕರನ್ನು ಅವಲಂಬಿಸುತ್ತರೆ: “ಸರ್, ನಾ ಮಾಡಿದ್ದು ಸರಿಯಿದೆಯಾ? ತಪ್ಪಿದೆಯಾ, ನೋಡಿ ಸರ್” ಎಂದು ದೊಡ್ಡವರಾದ ಮೇಲೂ ಹೇಳುತ್ತಿರುತ್ತಾರೆ. ಸ್ವಾವಲಂಬಿತ್ವ ಬೆಳೆಯುವುದೇ ಇಲ್ಲ! ಕಲಿಯುವವನೇ ಮಾಡಲಿ.  ಅವನಿಗೆ ಅದು ಬೇಕಾಗಿದ್ದರೆ ಅವನೇ ಇತರ ಮಕ್ಕಳನ್ನು ನೋಡಿ ಅವರ ಜೊತೆ ಕುಳಿತು ಕಲಿಯುತ್ತಾನೆ.

ನಾವು ಪರೀಕ್ಷೆಗಳನ್ನು ಮಾಡಿ ಅಂಕಗಳನ್ನು ಕೊಡುತ್ತೇವೆ. ಸರಿತಪ್ಪು ಹೇಳುತ್ತೇವೆ. ಬದಲಾಗಿ ಮಕ್ಕಳೇ ಇದರ ನೇತೃತ್ವ ವಹಿಸಬಹುದಲ್ಲ! ಕೆಲವರಾದರೂ ಬುದ್ಧಿವಂತ ಹುಡುಗರಿಗೆ ಸರಿ ಉತ್ತರಗಳೇನು, ಯಾವುದು ಎಂಬುದು ಗೊತ್ತಿರುತ್ತದೆ. ಅವರ ಬೆಂಬಲವನ್ನು ನಾವೇಕೆ ಪಡೆಯಬಾರದು? ಕೆಲವೊಂದು ಶಾಲೆಗಳಲ್ಲಿ ತರಗತಿ ಪರೀಕ್ಷೆಗಳಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ. ಇದನ್ನು ವ್ಯಾಪಕ ಪ್ರಮಾಣದಲ್ಲಿ ಯಾಕೆ ಜಾರಿಗೆ ತರಬಾರದು? ಮಕ್ಕಳು ಮೌಲ್ಯಮಾಪನ ಮಾಡುವಾಗ ಮೋಸ ಮಾಡಬಹುದು; ತಪ್ಪು ಉತ್ತರವನ್ನು ತಿದ್ದಿ ಸರಿಪಡಿಸಿ ಅಂಕಗಳಿಸಬಹುದು; ಉತ್ತರ ತಪ್ಪಿದ್ದರೂ ಸರಿ ಗೆರೆ ಎಳೆದು ಅಂಕಕೊಡಬಹುದು ಎಂಬ ಅಪನಂಬಿಕೆ ಮಕ್ಕಳ ಬಗ್ಗೆ ಇರಬಹುದು . ಮೌಲ್ಯಮಾಪನ ಶಿಕ್ಷಕರು ಎಷ್ಟರಮಟ್ಟಿಗೆ ವಿಶ್ವಾಸಾರ್ಹರು? ಪ್ರತಿಯೊಂದು ಮುಖ್ಯ ಪರೀಕ್ಷೆಯಲ್ಲೂ ಶಿಕ್ಷಕರು ನಡೆಸುವ ಮೌಲ್ಯಮಾಪನ ಅಕ್ರಮಗಳೇನು ಕಡಿಮೆಯೇ? ದಿನಹೋದಂತೆ ಈ ಅಕ್ರಮಗಳು ಹೆಚ್ಚುತ್ತಾ ಹೋಗಿ ನಮ್ಮ ಪರೀಕ್ಷೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿಲ್ಲವೆ?

ಇನ್ನೊಬ್ಬನಿಗೆ ಏನು ಗೊತ್ತಿದೆ ಎಂಬುದನ್ನು ಸರಿಯಾಗಿ ಅಳೆಯುವುದು ದುಸ್ತರ. ಅವನ ತಿಳಿವಳಿಕೆಯ ಆಳ-ಅಗಲಗಳನ್ನು ನಾವು ಸರಿಯಾಗಿ, ಪ್ರಾಮಾಣಿಕವಾಗಿ ಬೆಲೆ ಕಟ್ಟಲಾರೆವು. ನಮ್ಮ ಪರೀಕ್ಷಾ ವ್ಯವಸ್ಥೆಯ ಮೂಲಕವಂತೂ ಇದು ಸಾಧ್ಯವಿಲ್ಲ. ಈ ವ್ಯವಸ್ಥೆಯಲ್ಲಿ ನಾವು ಮಾಡುತ್ತಿರುವುದೇನು? ವಿದ್ಯಾರ್ಥಿಗಳಿಗೆ ಏನು ಗೊತ್ತಿದೆ? ಎಂಬುದನ್ನು ಬಯಲಿಗೆ ತರುವುದಲ್ಲ; ಬದಲಾಗಿ ಅವರಿಗೇನು ತಿಳಿದಿಲ್ಲ. ಅವರೆಷ್ಟು ಮೂರ್ಖರು? ಎಂಬುದನ್ನು ಪ್ರಕಟಿಸುವುದು. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಗ್ರಹಿಕೆ,  ಸಾಮರ್ಥ್ಯ ಇತ್ಯಾದಿಗಳನ್ನು ಒರೆಗೆ ಹಚ್ಚುವಂಥ ಪರಿಶೀಲನ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಾರ್ವತ್ರಿಕ ಪರೀಕ್ಷೆಗಳನ್ನು ಪೂರ್ತಿಯಾಗಿ ಕೈಬಿಡಲು ಆಗದಿರಬಹುದು. ಆದರೆ ಹೆಚ್ಚು ಹೆಚ್ಚು ಆಂತರಿಕ ಮೌಲ್ಯಮಾಪನವನ್ನು ಅಳವಡಿಸುತ್ತಾ ಈ ಬಗೆಯ ಮೌಲ್ಯಮಾಪನವು ಸ್ವಯಂ ವಿದ್ಯಾರ್ಥಿಯಿಂದಲೇ ಆಗುವಂತೆ ಪ್ರಯತ್ನಿಸಬಹುದು.

ನಮ್ಮ ಶಾಲಾ ಶಿಕ್ಷಣಕ್ಕಾಗಿ ಏಕರೂಪದ ಪಠ್ಯಕ್ರಮವೊಂದನ್ನು ರಾಷ್ಟ್ರಮಟ್ಟದಲ್ಲಿ ರೂಪಿಸಿ ರಾಜ್ಯಗಳ ಮೇಲೆ ಹೇರುವ ಕ್ರಮ ಒಂದು ಸಂಪ್ರದಾಯವೇ ಆಗಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಿರಿಬಹುದು. ಆದರೆ ಪಠ್ಯಕ್ರಮ , ಪಠ್ಯಪುಸ್ತಕ ಏಕೆ ಬೇಕು? ಸುಗಮ ಶೈಕ್ಷಣಿಕ ಆಡಳಿತ ಹಾಗೂ ನಿರ್ದಿಷ್ಟ ಮಾನದಂಡಗಳ ದೃಷ್ಟಿಯಿಂದ ಇದು ಅಗತ್ಯವೆನಿಸಿದರೆ ತೀರ ಸಡಿಲವಾದ ಒಂದು ಚೌಕಟ್ಟು ಒದಗಿಸಿದರೆ ಸಾಕು. ಮತ್ತೆ ಆಯಾ ಶಾಲೆ ಹಾಗೂ ಶಿಕ್ಷಕರು ತಂತಮ್ಮ ಶಾಲಾಮಕ್ಕಳನ್ನು ಲಕ್ಷ್ಯದಲ್ಲಿರಿಸಿಕೊಂಡು ಕಲಿಸುವ ವ್ಯವಸ್ಥೆ ಮಾಡುತ್ತಾರೆ . ಸರಕಾರ ಬೇಕಿದ್ದರೆ ಪ್ರತಿಯೊಂದು ವಿಷಯದಲ್ಲೂ ‘ಅವಶ್ಯಕ ಅಂಶ’ಗಳೇನು ಎಂಬುದನ್ನು ತಿಳಿಸಲಿ. ಇವುಗಳನ್ನು ಮಾರ್ಗದರ್ಶಿ ಸೂತ್ರಗಳನ್ನಾಗಿ ಇಟ್ಟುಕೊಂಡು ಶಾಲೆಗಳವರು ತಮ್ಮ ವಿದ್ಯಾರ್ಥಿಗಳಿಗೆ ತಕ್ಕುದಾದ ಪಠ್ಯಕ್ರಮ ರೂಪಿಸಿಕೊಂಡು ಕಲಿಕೆಯ ಅನುಭವ ಒದಗಿಸಬಹುದು. ಇದು ಶಿಕ್ಷಕರಿಗೆ ಹೆಚ್ಚಿನ ಪ್ರಯೋಗಪ್ರಿಯ ಅವಕಾಶವನ್ನು ಕಲ್ಪಿಸುತ್ತದೆ. ಯಾವುದೇ ವಿಷಯದಲ್ಲಿ ಒಣ ಮಾಹಿತಿಗಿಂತ ಬಾಳಿನ ಹೋರಾಟದಲ್ಲಿ ಎದುರಾಗುವ ನಮ್ಮ ಕಾಲದ ಸಮಸ್ಯೆಗಳು, ಪ್ರಶ್ನೆಗಳು ಪಠ್ಯಕ್ರಮದಲ್ಲಿ ಪ್ರತಿಫಲನಗೊಳ್ಳಬೇಕು.

ಮಕ್ಕಳು ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣದ ಮೂಲಕ ಬಯಸುವುದು ಬದುಕನ್ನು ಅರ್ಥಮಾಡಿಕೊಳ್ಳುವ ಕಲೆಯನ್ನು ಜನರನ್ನು ಮತ್ತು ಬದುಕನ್ನು ಅವರು ತಮ್ಮ ಕಣ್ಣುಗಳಿಂದಲೇ ನೋಡಿ ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅಂಥ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ಮುಂದೆಂದೋ ಒಂದು ದಿನ ಬೇಕಾಗಬಹುದಾದುದನ್ನು, ನಿಜಕ್ಕೂ ಅದು ಬೇಕೋ-ಬೇಡವೋ ಈಗಲೆ ಹೇಳುವುದು ಹೇಗೆ? ಮತ್ತು ಅದು ಎಲ್ಲರಿಗೂ ಬೇಕಾಗಬಹುದೇ? ಈಗಲೆ ಹೇಳುವುದು ಕಷ್ಟ. ಅದನ್ನೆಲ್ಲ ಈಗ ಏಕೆ ಮಕ್ಕಳ ತಲೆಯಲ್ಲಿ ತುರುಕಬೇಕು? ಅವರಿಗೇನು ಬೇಕೋ ಅದನ್ನು ಅವರು ಇಂದಲ್ಲ ನಾಳೆ ಕಲಿತೇ ಕಲಿಯುತ್ತಾರೆ; ಇಲ್ಲದಿದ್ದರೆ ಅವರ ಭವಿಷ್ಯವೇ ಮಸುಕಾಗುತ್ತದೆ. ಸದ್ಯದ ಬದುಕಿನ ಬುನಾದಿ ಭದ್ರವಾದರೆ ಮಾತ್ರವೇ ನಾಳಿನ ಬದುಕು. ಇಂದಿನ ಅಗತ್ಯಗಳನ್ನು ಪೂರೈಸಿದ ಮೇಲೆಯೇ ನಾಳಿನ ಅಗತ್ಯಗಳ ಚಿಂತೆ. ನಾವು ವರ್ತಮಾನವನ್ನು ಕಡೆಗಣಿಸಿ ಭವಿಷ್ಯ ಚಿಂತನ ನಡೆಸುತ್ತಿದ್ದೇವೆ!! ಇಂಥ ಚಿಂತನ ನಿಷ್ಪ್ರಯೋಜಕ ಹಾಗೂ ಆತ್ಮಹನನಕಾರಿ!

“ಮಕ್ಕಳಿಗೆ ಆಯ್ಕೆಯ ಅವಕಾಶ ಕೊಟ್ಟುಬಿಟ್ಟರೆ, ಸ್ವಾತಂತ್ಯ್ರ ಕೊಟ್ಟರೆ ಅವರು ಹಾಳಾಗುತ್ತಾರೆ” ಎಂದು ಹಿರಿಯರು ಉದ್ಗರಿಸುತ್ತಾರೆ. ನಿಜ, ಕೆಲವೊಮ್ಮೆ ಅವರ ಆಯ್ಕೆಗಳು ಬಾಲಿಶವಾಗಬಹುದು. ಆದರೆ ಆಯ್ಕೆಯ ಅವಕಾಶಗಳನ್ನು ಕೊಡದಿದ್ದರೆ ಒಳ್ಳೆಯದು, ಕೆಟ್ಟದ್ದು ಎಂದು ಗೊತ್ತಾಗುವುದು ಹೇಗೆ? ತಪ್ಪು ಎಂದು ಗೊತ್ತಾದರೆ ತಾನೆ ತಿದ್ದಿಕೊಳ್ಳಲು ಮನಮಾಡುವುದು? ಕೆಟ್ಟ ಆಯ್ಕೆ ಎಂದು ತಿಳಿದಾಗ ತಾನೆ ಒಳ್ಳೆಯದು ಯಾವುದು ಎಂದು ತಿಳಿಯುವುದು? ಇಷ್ಟಕ್ಕೂ ಮಕ್ಕಳ ಪರವಾಗಿ ಹಿರಿಯರು ಮಾಡುವ ಎಲ್ಲ ಆಯ್ಕೆಗಳೂ ಒಳ್ಳೆಯ ಆಯ್ಕೆಗಳಾಗಿರುತ್ತಾವಾ? “ನೀನು ಈ ಕೋರ್ಸು ಆಯ್ದುಕೊ” ಎಂದು ತಂದೆ ಹೇಳಿದ್ದಕ್ಕೆ ಸಮ್ಮತಿ ಸೂಚಿಸಿದ ಹುಡುಗ ನಾಲ್ಕು ವರ್ಷಗಳ ಬಳಿಕ ಉದ್ಯೋಗಬೇಟೆ ಆರಂಭಿಸಿದಾಗಲೆ ತಿಳಿಯುವುದು ತನ್ನ ಪರವಾಗಿ ತಂದೆ ಮಾಡಿದ ಆಯ್ಕೆ ಒಳಿತೋ…ಕೆಡುಕೋ… ಎಂದು. “ನೀನು ಇವನನ್ನು ಮದುವೆಯಾಗು” ಎಂದು ಹೆತ್ತವರು ಹೇಳಿದ ಮಾತು ಕೇಳಿ ಮದುವೆಯಾದ ಹುಡುಗಿಗೆ ಪತಿರಾಯ ಎಂಥವನೆಂಬುದು ಸಂಸಾರಜೀವನ ತೊಡಗಿದ ಮೇಲೆ ತಾನೆ ತಿಳಿಯುವುದು? ಆದುದರಿಂದ ಮಕ್ಕಳನ್ನು ಆತ್ಮಸಂಮಾನವಿರುವ, ತಿಳಿವಳಿಕೆಯುಳ್ಳ ವ್ಯಕ್ತಿಗಳೆಂದು ತಿಳಿದು ತಮ್ಮ ಆಯ್ಕೆಯನ್ನು ತಾವೇ ಮಾಡಿಕೊಳ್ಳಲು ಅವಕಾಶ ನೀಡುವುದರಲ್ಲಿ ಹಿರಿಯರ ಹಿರಿತನವಿದೆ.

ಶಾಲೆಗಳಲ್ಲಿ ಮಕ್ಕಳು ಕಲಿಯಲು ನಿಜಕ್ಕೂ ನಾವು ಅವಕಾಶ ಕಲ್ಪಿಸುತ್ತಿದ್ದೇವಾ? ಅಥವಾ ಕುರಿಗಳು ಸಾರ್ ನಾವು ಕುರಿಗಳು, ಸಾಗಿದ್ದೇ ಗುರಿಗಳು, ಅದರ ಬಾಲ ಇದು ಮೂಸುತ್ತಾ, ಇದರ ಬಾಲ ಅದು ಮೂಸುತ್ತಾ ಮಂದೆಯಲ್ಲಿ ಒಂದಾಗಿ ಸ್ವಂತಿಕೆಯೇ ಬಂದಾಗಿಸುವ ಕುರಿಮಂದೆಯನ್ನು ಸಿದ್ಧಗೊಳಿಸುತ್ತಿದ್ದೇವಾ? ಸರ್ಕಸ್‌ನ ಪ್ರಾಣಿಗಳನ್ನು ಅಥವಾ ಕುರಿಮಂದೆಯನ್ನು ಪೋಷಿಸುವುದು ಶಾಲೆಗಳ ಉದ್ದೇಶವೆಂದಾದರೆ ಈಗಿನ ವ್ಯವಸ್ಥೆ ಸರಿಯಾಗಿಯೇ ಇದೆ. ಹದಿನೈದು ವರ್ಷಗಳ ವಿದ್ಯಾಭ್ಯಾಸದ ಬಳಿಕ ಪದವೀಧರರಾಗುವ, ಜೀವನಾನುಭವವಿಲ್ಲದ ನಮ್ಮ ಯುವಜನಾಂಗವನ್ನು ನೋಡುವಾಗ ನಮ್ಮ ಶಿಕ್ಷಣ ವ್ಯವಸ್ಥೆಯ ಭೀಕರ ಪರಿಣಾಮ ಏನೆಂಬುದು ವೇದ್ಯವಾಗುತ್ತದೆ . ‘ಎಲ್ಲಿ ಮನಕಳುಕಿರದೊ? ಎಲ್ಲಿ ತಲೆಬಾಗಿರದೊ? ಎಲ್ಲಿ ತಿಳಿವಿಗೆ ತೊಡಕು ತೋರದಿಹುದೊ?’ ಎಂಬ ಕವಿ ರವೀಂದ್ರರ ಕವನದ ಸಾಲುಗಳ ಆಶಯದಂತೆ ಬಂಧನರಹಿತ ಮುಕ್ತಮನದ ಸ್ವತಂತ್ರ ವ್ಯಕ್ತಿಗಳ ನಿರ್ಮಾಣವೇ ನಮ್ಮ ಶಾಲೆಗಳ ಘನವಾದ ಉದ್ದೇಶವೆಂದಾದರೆ ನಾವು ನಡೆದುಬಂದ ದಾರಿಯ ಕಡೆಗೆ ಕಣ್ಣ ಹೊರಳಿಸದೆ ಹೊಸ ಹಾದಿಯ ಹಿಡಿದು ನಡೆಯಲು ಇನ್ನಾದರೂ ಮನಮಾಡಬೇಕು.