ಒಂದು ಕಾಲಕ್ಕೆ “ಮಕ್ಕಳ ಹಕ್ಕುಗಳೇ, ಹಾಗೆಂದರೆ ಏನು? ಮಕ್ಕಳಿಗೆ ಹಕ್ಕುಗಳೇ? ನಿಮಗೆ ಬೇರೆ ಕೆಲ್ಸವಿಲ್ಲ. ಸುಮ್ಮನೆ ಕೂರಿ” ಎಂದು ಜನ ಅನ್ನುತ್ತಿದ್ದರು. ಆದರೆ ಈಗ ಮಕ್ಕಳ ಹಕ್ಕುಗಳ ಬಗ್ಗೆ ವಿಶ್ವವ್ಯಾಪಕ ನೆಲೆಯಲ್ಲಿ ಚರ್ಚೆಗಳು ನಡೆದಿವೆ. ಅಂತಾರಾಷ್ಟ್ರೀಯ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ. ಮಕ್ಕಳ ಹಕ್ಕುಗಳ ಬಗ್ಗೆ ಜಾಗತಿಕವಾಗಿ ಒಂದು ಪ್ರಜ್ಞೆ ಮೂಡಿದೆ.

ಆದರೆ ಮಕ್ಕಳ ಹಕ್ಕುಗಳನ್ನು ಮಕ್ಕಳು ಚಲಾಯಿಸುವ ಬಗೆ ಹೇಗೆ? ಹಕ್ಕುಗಳನ್ನು ಕೊಡುವವರಾರು? ಪಡೆಯುವ ಬಗೆ ಹೇಗೆ?
ಒಂದು ಮಗುವಿಗೆ ಒಳ್ಳೆಯ ಬಾಲ್ಯ, ಗೌರವ, ತಂದೆತಾಯಿಗಳ ಪ್ರೀತಿ, ಶಿಕ್ಷಣ ಪಡೆಯುವ ಹಕ್ಕಿದೆ. ಮಗುವಿಗೆ ಅಪ್ಪ ಅಮ್ಮ ಶಿಕ್ಷಣ ಕೊಡದೇ ಹೋದಲ್ಲಿ ತಮ್ಮ ಜೊತೆ ದುಡಿಯುವಂತೆ ಮಾಡುತ್ತಾರೆ. ಮಗು ಪ್ರತಿಭಟಿಸಲಾದೀತೇ? ಪ್ರತಿಭಟಿಸುವ ಮುನ್ನ ಮಗುವಿಗೆ ಇಂಥ ಹಕ್ಕು ಒಂದಿದೆ ಎಂಬುದು ತಿಳಿದಿರುತ್ತದೆಯೇ? ತಂದೆತಾಯಿಗಳು ಮಗುವಿಗೆ ಪ್ರೀತಿ ತೋರದಿದ್ದರೆ, ಮಗುವನ್ನು ಕಡೆಗಣಿಸಿದರೆ, ನಿಕೃಷ್ಟವಾಗಿ ನೋಡಿಕೊಂಡರೆ ಮಗು ಯಾರಲ್ಲಿ ದೂರಿಕೊಳ್ಳುವುದು? ಯಾರಲ್ಲಾದರೂ ದೂರಿಕೊಂಡರೂ “ಮಗುವಿನ ಮಾತೇನು ಕೇಳುತ್ತೀರಿ? ಅದಕ್ಕೇನು ಗೊತ್ತಾಗುತ್ತೆ” ಎಂದು ತಂದೆತಾಯಿ ದಬಾಯಿಸುತ್ತಾರೆ. ಮಗುವಿಗೆ ಯಾರು ನ್ಯಾಯಕೊಡಬಲ್ಲರು? ‘ಸಹಾಯವಾಣಿ’ಯಿಂದ ಯಾವ ಸಹಾಯ ಸಿಕ್ಕೀಊತು? ಸಹಾಯ ಸಿಕ್ಕಿದರೂ ಅದು ಶಾಶ್ವತವೇ? ಮಗುವನ್ನು ಕೂಡಿಹಾಕಿ ಉಪವಾಸ ಕೆಡಹುವ, ಹೆಣ್ಣುಮಗ ಉವನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡುವ ತಂದೆತಾಯಿಗಳ ವಿರುದ್ಧ ಮಕ್ಕಳು ಹೇಗೆ ತಮ್ಮ ಹಕ್ಕುಗಳನ್ನು ಚಲಾಯಿಸಬಲ್ಲರು?
ಇತ್ತ ಶಾಲೆಯಲ್ಲೂ ಅದೇ ಸಮಸ್ಯೆ. ಶಿಕ್ಷಕರು ಮಕ್ಕಳನ್ನು ವಿಪರೀತ ದಂಡಿಸಿ, ಅವಮಾನಿಸಿದರೆ, ಬೈದು ಭಂಗಿಸಿದರೆ ಬಹಳಷ್ಟು ವಿದ್ಯಾರ್ಥಿಗಳು ಮೌನವಾಗಿ ಸಹಿಸಿಕೊಳ್ಳುತ್ತಾರೆ. ಯಾರಲ್ಲಾದರೂ ದೂರುಕೊಟ್ಟರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ಹೀಗಾಗಿ ಮಕ್ಕಳು ತಮ್ಮ ಹಕ್ಕುಗಳನ್ನು ಚಲಾಯಿಸುವುದು ಎಲ್ಲಿ? ಹೇಗೆ? ಕೆಲವೊಂದು ಸರಕಾರೇತರ ಸಂಸ್ಥೆಗಳು ಮಕ್ಕಳ ಹಕ್ಕುಗಳ ಅನುಷ್ಠಾನದ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆಯಾದರೂ ಇದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಾಗಿದೆ.

ಮಕ್ಕಳ ಹಕ್ಕುಗಳ ಪಾಲನೆ ಬಗ್ಗೆ ಕಾನೂನಿದೆ. ವಿವಿಧ ರಾಷ್ಟ್ರಗಳು ಅಂತಾರಾಷ್ಟ್ರೀಯವಾಗಿ ಈ ಹಕ್ಕುಗಳ ಅನುಷ್ಠಾನದ ವಿಷಯದಲ್ಲಿ ಒಡಂಬಡಿಕೆ ಮಾಡಿಕೊಂಡಿವೆ. ಇದೆಲ್ಲ ಸರಿ. ಆದರೆ ಕಾನೂನಿದ್ದಮಾತ್ರಕ್ಕೆ ಎಲ್ಲವೂ ಆಗಬೇಕೆಂದೇನಿಲ್ಲವಲ್ಲ. ಮತದಾನದ ಹಕ್ಕು ನನಗಿದೆ ಎಂದಮಾತ್ರಕ್ಕೆ ನಾನು ಮತದಾನ ಮಾಡಬೇಕೆಂದೇನೂ ಇಲ್ಲವಲ್ಲ. ಮತದಾನದ ದಿನ ಮತಗಟ್ಟೆಗೆ ಹೋಗದೆ ಆರಾಮವಾಗಿ ಟಿ.ವಿ. ನೋಡುತ್ತಿರಬಹುದಲ್ಲ. ಕಾನೂನು, ಸಂವಿಧಾನ ನಮಗೆ ಹಕ್ಕುಗಳನ್ನು ಕೊಟ್ಟಿದೆಯಾದರೂ ಅದು ನಾನೇನು ಮಾಡಬೇಕು? ಎಂಬುದನ್ನು ಹೇಳಿಕೊಡುವುದಿಲ್ಲ. ಹಕ್ಕುಗಳ ಬಗ್ಗೆ ಅರಿವು ಇರದೇ ಇರಬಹುದು. ಯಾರೂ ಅರಿವು ಮೂಡಿಸದೇ ಇರಬಹುದು. ಹಕ್ಕುಗಳನ್ನು ಚಲಾಯಿಸದೇ ಇರಬಹುದು. ಅಥವಾ ಬೇರೆಯವರು ಅದನ್ನು ಗೌರವಿಸದೇ ಇರಬಹುದು.

ಮಕ್ಕಳಿಗೆ ಒಳ್ಳೆಯ ಪರಿಸರ, ಒಳ್ಳೆಯ ಮನೆ, ಒಳ್ಳೆಯ ತಂದೆತಾಯಿ, ಉತ್ತಮ ಶಿಕ್ಷಣ ಪಡೆಯುವ ಹಕ್ಕುಗಳಿವೆ. ಸರಕಾರದ ಬಳಿ ಹಣವಿದೆ. ಹೀಗಾಗಿ ತಿಂಗಳಲ್ಲಿ ಲ೦ ರಷ್ಟು ಹಾಜರಾತಿ ಉಳ್ಳ ಮಕ್ಕಳಿಗೆ ಸರಕಾರ ಕಿಂಚಿತ್‌ ಸಹಾಯಧನ ಕೊಡಬಹುದು ಅಥವಾ ಅಕ್ಷರ ದಾಸೋಹ ಕಾರ್ಯಕ್ರಮದ ಮೂಲಕ ಮಧ್ಯಾಹ್ನ ಉಚಿತ ಭೋಜನ ನೀಡಬಹುದು. ಮಕ್ಕಳು ಶಾಲೆಗೆ ಬರಲೆಂದು ಉಚಿತ ಪಠ್ಯಪುಸ್ತಕ, ಬರೆಯುವ ಪುಸ್ತಕ, ಸಮವಸ್ತ್ರ ಇತ್ಯಾದಿಗಳನ್ನು ಒದಗಿಸಬಹುದು. ಆದರೆ ಸರಕಾರ ಪ್ರತಿಯೊಂದು ಮಗುವಿಗೂ ಒಳ್ಳೆಯ ಮನೆ ಕೊಡಲಾರದು. ಒಳ್ಳೆಯ ತಂದೆತಾಯಿ ಅಥವಾ ಕುಟುಂಬ ಜೀವನವನ್ನು ಕೊಡಲಾರದು. ಮಗುವಿಗಾಗಿ ಒಳ್ಳೆಯ ಮನೆ ಇರಲಿ ಎಂದು ಸರಕಾರ ಹೇಳಬಹುದು. ಆದರೆ ಅದರ ಮುಂದೆ ಏನು ಆಯ್ಕೆಗಳಿವೆ? ಮನೆ ಒಳ್ಳೆಯದಿರಬೇಕು ಎಂದು ನಿರ್ಧರಿಸುವವರು ಯಾರು? ಒಳ್ಳೆಯದು ಅಂದರೆ ಏನು? ಅದನ್ನು ನಿರ್ಧರಿಸುವವರು ಯಾರು?

ಸಕಲ ಸೌಕರ್ಯಗಳಿಂದ ಸುಸಜ್ಜಿತವಾದ ಮನೆಯನ್ನು ಒಳ್ಳೆಯ ಮನೆ ಅನ್ನುವಿರಾ? ಸೌಲಭ್ಯಗಳ ಕೊರತೆಯಿದ್ದರೂ ಉತ್ತಮ ಭಾವನಾತ್ಮಕ ಪರಿಸರವಿರುವ ಮನೆಯನ್ನು ಒಳ್ಳೆಯ ಮನೆ ಅನ್ನುವಿರಾ? ಈ ಬಗ್ಗೆ ಯಾರು ತೀರ್ಮಾನಿಸುವವರು? ಸರಕಾರವೆ? ವಿಶ್ವ ಆರೋಗ್ಯ ಸಂಸ್ಥೆಯೇ? ಮಕ್ಕಳ ಮನೋತಜ್ಞರೇ? ಉದಾಹರಣೆಗೆ, ಗಂಡಹೆಂಡತಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ. ಒಂದೇ ಒಂದು ಮಗುವಿದೆ. ಆ ಮಗು ಯಾರ ಬಳಿ ಇರಬೇಕು? ತಂದೆಗೂ ಮಗು ಬೇಕು. ತಾಯಿಗೂ ಮಗು ಬೇಕು. ತಾಯಿಯ ರೀತಿ ನೀತಿ ಸರಿಯಿಲ್ಲ. ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡುವ ಚೈತನ್ಯ ಆಕೆಗಿಲ್ಲ. ಆದ್ದರಿಂದ ಮಗು ತನ್ನ ಬಳಿಯೇ ಇರಬೇಕು ಎಂಬುದು ತಂದೆಯ ವಾದ. ಮಗು ತನಗೆ ಹೆಚ್ಚು ಹತ್ತಿರ. ತಾನು ಮಗುವನ್ನು ಹೆತ್ತವಳು ಎಂಬುದು ತಾಯಿಯ ವಾದ. ಎರಡೂ ವಾದಗಳಲ್ಲಿ ಹುರುಳಿದೆಯಾದರೂ ನ್ಯಾಯಾಲಯ ತಾಯಿಯ ಕಡೆ ವಾಲುತ್ತದೆ. ಏಕೆಂದರೆ ‘ಉತ್ತಮ ಶಿಕ್ಷಣ’ ಕೊಡುವ ಚೈತನ್ಯ ತಾಯಿಗೆ ಇಲ್ಲದೇ ಇರಬಹುದಾದರೂ ಮಗುವಿನ ವ್ಯಕ್ತಿತ್ವ ವಿಕಾಸದಲ್ಲಿ ತಾಯಿಯ ಮಮತೆ ಎಳವೆಯಲ್ಲಿ ಅತಿ ಮಹತ್ವದ ಪಾತ್ರ ವಹಿಸುತ್ತದೆ. ಆದುದರಿಂದ ಮಗು ತಾಯಿಯ ಜೊತೆಗಿರಲಿ. ತಂದೆ ಆಗಾಗ್ಗೆ ಬಂದು ಮಗುವನ್ನು ನೋಢಿ ಹೋಗಲಿ; ತಂದೆ ಬಯಸಿದ ಶಾಲೆಗೆ ಮಗುವನ್ನು ಸೇರಿಸಲಿ. ವಿದ್ಯಾಭ್ಯಾಸದ ವೆಚ್ಚವನ್ನು ತಂದೆ ಭರಿಸಲಿ ಎಂದು ನ್ಯಾಯಾಲಯ ಆಜ್ಞೆ ಮಾಡಬಹುದು.

ನಮ್ಮ ದೇಶದಲ್ಲಿ ಶಿಕ್ಷಣ ಮೂಲಭೂತ ಹಕ್ಕು ಮಸೂದೆ ಅಂಗೀಕೃತವಾಗಿದೆ. ಹೆತ್ತವರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ  ಸೇರಿಸಬೇಕು. ಶಾಲೆಗೆ ಸೇರಿಸದಿದ್ದರೆ ಮಗು ಏನು ಮಾಡಬೇಕು? ತಂದೆತಾಯಿಗಳ ಮೇಲೆ ದಾವೆಹೂಡಲು ಸಾಧ್ಯವೆ? ಸರಕಾರ ಜುಲ್ಮಾನೆ ವಿಧಿಸಬಹುದು. ಆದರೆ ಜುಲ್ಮಾನೆ ಕಟ್ಟುವುದಕ್ಕೂ ಆಗದ ತಂದೆತಾಯಿಗಳ ಮೇಲೆ ಸರಕಾರ ಏನು ಕ್ರಮಕೈಗೊಳ್ಳಲು ಸಾಧ್ಯ? ಸರಕಾರ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಬೇಕು. ಉತ್ತಮ ಶಿಕ್ಷಕರನ್ನು ನೇಮಕಮಾಡಿಕೊಳ್ಳಬೇಕು. ಸೌಲಭ್ಯಸಹಿತ ಶಾಲೆಯನ್ನು ಸ್ಥಾಪಿಸಬೇಕು. ಹಣಕಾಸಿನ ಕೊರತೆಯಿಂದ ಸರಕಾರ ಶಾಲೆಗಳನ್ನು ತೆರೆಯದಿದ್ದರೆ? ಶಿಕ್ಷಕರ ನೇಮಕಾತಿಯನ್ನು ವಿಳಂಬಿಸಿದರೆ? ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಬಹುದಾದರೂ ಪೂರ್ಣ ನ್ಯಾಯ ದೊರಕುವ ಭರವಸೆಯಿಲ್ಲ. ಮಿಲಿಯಗಟ್ಟಲೆ ಬಾಲಕಾರ್ಮಿಕರು ಶಾಲೆಗಳಿಂದ ಹೊರಗೇ ಉಳಿದಿದ್ದಾರೆ. ಬಾಲಶ್ರಮ ಅಪರಾಧ. ಆದರೆ ಸರಕಾರ ಯಾರ ಮೇಲೆ ಇದುವರೆಗೆ ಕ್ರಮ ಕೈಗೊಂಡಿದೆ? ಬಾಲಕಾರ್ಮಿಕ ಪದ್ಧತಿಯನ್ನು ನಿವಾರಣೆ ಮಾಡಲು ಶಾಸನಗಳನ್ನು ಮಾಡಿದರೆ ಸಾಲದು. ಅದು ನಿವಾರಣೆ ಆಗಬೇಡವೇ? ಅದಿನ್ನೂ ಆಗಿಲ್ಲ. ಹೀಗಿರುವಾಗ ಮಕ್ಕಳ ಹಕ್ಕುಗಳ ಅನುಷ್ಠಾನ ಹೇಗೆ ಎಂಬುದೇ ಸಮಸ್ಯೆ. ಅಲ್ಲೊಂದು ಇಲ್ಲೊಂದು ಪ್ರಕರಣದಲ್ಲಿ ಮಕ್ಕಳಿಗೆ ನ್ಯಾಯ ಸಿಕ್ಕಿರಬಹುದು. ಆದರೆ ಒಟ್ಟಾರೆಯಾಗಿ ಹಕ್ಕುಗಳಿದ್ದರೂ ಅವುಗಳ ಪಾಲನೆಯಾಗದೆ ಮಕ್ಕಳ ಸ್ಥಿತಿ ಶೋಚನೀಯವಾಗಿಯೆ ಉಳಿದಿದೆ.

ಮಕ್ಕಳಿಗೆ ದುಡಿಮೆಯ ಹಕ್ಕು ಲಭ್ಯವಾಗಬೇಕು ಅಂದರೆ ಅವರೂ ತಮ್ಮ ಬಿಡುವಿನ ವೇಳೆಯಲ್ಲಿ ಒಂದಿಷ್ಟು ಸಂಪಾದನೆ ಮಾಡಿ ತಮ್ಮ ಖರ್ಚುವೆಚ್ಚಗಳಿಗಾಗಿ ತಮ್ಮ ತಾಯ್ತಂದೆಗಳನ್ನು ಆಶ್ರಯಿಸದಂತಿರಬೇಕು. ಹೀಗೆ ಅಂದರೆ ಬಾಲಕಾರ್ಮಿಕ ಶಾಸನ ಅಡ್ಡಬರುತ್ತದೆ. ೧೪ ವರ್ಷದೊಳಗಿನ ಮಕ್ಕಳು ದುಡಿಯಬಾರದು. ಅವರ ಶೋಷಣೆ ಕೂಡದು ಎಂಬ ಕಾನೂನಿದೆ. ನಿಜ. ನಾನು ಆ ಬಗೆಯ ದುಡಿಮೆ ಬಗ್ಗೆ ಹೇಳುತ್ತಿಲ್ಲ. ದಿನದಲ್ಲಿ ಅರ್ಧ-ಒಂದು ಗಂಟೆ ಎಲ್ಲಾದರೂ ಒಂದು ಕಡೆ ಪೇಪರ್ ಮಾರುವವನಾಗಿ, ಹಾಲು-ಹೂ-ಹಣ್ಣು ಮಾರುವವನಾಗಿ ಕೆಲಸಮಾಡಲು ಅವಕಾಶವಿರಬೇಕು. ಇದು  ಮಕ್ಕಳಲ್ಲಿ ಆರ್ಥಿಕ ಸ್ವಾವಲಂಬನೆ ಹಾಗೂ ಆತ್ಮಾಭಿಮಾನವನ್ನು ಬೆಳೆಸಲು ಸಹಕಾರಿ.

ಕೆಳಜಾತಿ, ಕೆಳವರ್ಗಗಳಲ್ಲಿ ಈಗಲೂ ಅಲ್ಲಲ್ಲಿ ಮಕ್ಕಳು ದುಡಿದು ತಂದೆತಾಯಿಗಳಿಗೆ ನೆರವಾಗುತ್ತಾರೆ. ಆದರೆ ಶ್ರೀಮಂತರ ಕುಟುಂಬಗಳಲ್ಲಿ, ಮಧ್ಯಮ ಹಾಗೂ ಮೇಲು ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಕ್ಕಳಿಗೆ ದುಡಿಮೆಯ ಸಂಸ್ಕೃತಿಯ ಪರಿಚಯವಿಲ್ಲ. ಮನೆಯಲ್ಲಿ ಎಲ್ಲ ಕೆಲಸಗಳಿಗೆ ಆಳುಕಾಳುಗಳಿರುತ್ತಾರೆ. ಹೀಗಾಗಿ ಮಕ್ಕಳಿಗೆ ಯಾವ ಕೆಲಸವೂ ಇರುವುದಿಲ್ಲ. ದುಡಿಮೆ, ಸಂಪಾದನೆಯ ಪರಿಚಯವೇ ಇರುವುದಿಲ್ಲ; ಎಲ್ಲಿಯವರೆಗೆಂದರೆ ಕಸಗುಡಿಸಿ ಗೊತ್ತಿಲ್ಲ, ಕಸಬರಿಕೆ ಹಿಡಿದು ಗೊತ್ತಿಲ್ಲ; ಕಾಫಿ ಕುಡಿದ ಲೋಟ ತೆಗೆದಿಡುವುದು ಗೊತ್ತಿಲ್ಲ – ಲೋಟ ಬಟ್ಟಲು ತೊಳೆದೇ ಗೊತ್ತಿಲ್ಲ. ಗಿಡಗಳನ್ನು ನೆಡುವುದು, ಗಿಡಗಳಿಗೆ ನೀರುಣಿಸುವುದು ಬಲದೂರದ ಮಾತು. ಏಕೆಂದರೆ ಮಕ್ಕಳು ಮೈಕೈ ಮಣ್ಣು ಮಾಡಿಕೊಳ್ಳುವುದೆಂದೆರೇನು? ಆದಷ್ಟು ಮಟ್ಟಿಗೆ ಮಣ್ಣಿನಿಂದ ದೂರವಿದ್ದೇ ಬದುಕುವ ವಿಚಿತ್ರ ರೀತಿ. ಹೀಗಾಗಿ ಕೆಲವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಕಸಗುಡಿಸಬಹುದೇ? ಎಂಬ ತೀರ ಸಾಮಾನ್ಯ ವಿಷಯದ ಬಗ್ಗೆ ಭಾರಿಭಾರಿ ಚರ್ಚೆ ನಡೆಯಿತು.

ನಿಜಕ್ಕಾದರೋ ನಮ್ಮ ಇಂದಿನ ಮಕ್ಕಳಿಗೆ ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ದೈಹಿಕ ದುಡಿಮೆಗೆ ಸಾಕಷ್ಟು ಅವಕಾಶವಿದೆಯೇ? ಇದರರ್ಥ ಮಕ್ಕಳನ್ನು ದುಡಿಮೆಗೆ ಹಚ್ಚಿ ಶೋಷಿಸಬೇಕೆಂದಲ್ಲ. ದುಡಿಮೆಯ ಮೂಲಕ ಜೀವನಮೌಲ್ಯಗಳನ್ನು ಕಂಡುಕೊಳ್ಳುವ ಅವಕಾಶಗಳಿರಬೇಕು. ಹಾಗೆಯೇ ಶಾಲಾಶಿಕ್ಷಣದಲ್ಲಿ ಮುಖ್ಯವಾಗಿ ಗಾಂಧೀಜಿ ಪ್ರಣೀತ ಮೂಲಶಿಕ್ಷಣದಲ್ಲಿ ನೂಲು ತೆಗೆಯುವುದು , ಕೃಷಿ ಮೊದಲಾದ ವಿಷಯಗಳಿಗೆ ಆದ್ಯತೆ ನೀಡಲಾಗಿತ್ತು. ಗಾಂಧೀಜಿಯನ್ನು ಮರೆಯುತ್ತಾ ಬಂದಹಾಗೆ ಕೈಕಸುಬು ಆಧಾರಿತ ಶಿಕ್ಷಣ ಹಿನ್ನೆಲೆಗೆ ಸರಿಯಿತು. ಆದರೂ ಗಾಂಧೀಜಿಯ ಮಾತುಗಳು ಯಾರನ್ನೊ ಕಾಡಿದ್ದರಿಂದ  ‘ಕಾರ್ಯಾನುಭವ’, ‘ಸಮಾಜೋಪಯೋಗಿ ಉತ್ಪಾದಕ ಚಟುವಟಿಕೆ’ ಇತ್ಯಾದಿಗಳೆಲ್ಲ ಪಠ್ಯಕ್ರಮದಲ್ಲಿ ಅಳವಡಿಕೆಯಾದವು. ಇದೆಲ್ಲ ಈಗ ಒಂದು ದೊಡ್ಡ ನಗೆಪಾಟಲಿನ ಸಂಗತಿಗಳು. ಕೈಬೆರಳಿಣಿಕೆಯ ಸಂಸ್ಥೆಗಳನ್ನು ಬಿಟ್ಟರೆ ದೈಹಿಕ ದುಡಿಮೆಯ ಯಾವ ಚಟುವಟಿಕೆಗಳಿಗೂ ಶಾಲೆಗಳಲ್ಲಿ ಬೆಲೆಯಿಲ್ಲ. ಪಠ್ಯಕ್ರಮದಲ್ಲಿ ಕೊಟ್ಟಿರುವ ಅವಕಾಶಗಳನ್ನು ಇತರ ವಿಷಯಗಳು ನುಂಗಿ ನೀರುಕುಡಿದಿವೆ. ಹೀಗಾಗಿ ಅನೇಕ ಮಕ್ಕಳಿಗೆ ಪ್ರಾಣಿಗಳ ಬಗ್ಗೆ ಒಲವಿಲ್ಲ. ಗಿಡಮರಗಳ ಬಗ್ಗೆ ಪ್ರೀತಿಯಿಲ್ಲ. ಮರ ಹತ್ತಿ ಧರೆ ಹಾರಿ, ಸೈಕಲ್‌ ತುಳಿದು, ನದಿಯಲ್ಲಿ ಈಜಾಡಿ ಗೊತ್ತಿಲ್ಲ. ಬುದ್ಧಿ ಬಲವಾಗಿರುವಾಗ ದೇಹಶ್ರಮವೇಕೆ? ಮೈಕೈ ಕೆಸರು ಮಾಡಿಕೊಂಡು ಬೆವರು ಸುರಿಸಿ ದುಡಿಯುವ ಕಾಯಕಯೋಗಿಗಳ ಬಗ್ಗೆ ಗೌರವವಿಲ್ಲ. ಬಿಟಿ ಬದನೆ ತಿನ್ನುವವರಿಗೆ ನೆಲಗುಲಾಬಿಯೇಕೆ? ಆದುದರಿಂದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸಿ ಶರೀರ ಶ್ರಮಕ್ಕೆ ವಿಶೇಷ ಬೆಲೆ ನೀಡಬೇಕಾದ ಕಾಲ ಈಗ ಒದಗಿಬಂದಿದೆ.

ಕೆಲಸವೆನ್ನುವುದು ವಿನೂತನ, ಸಾಹಸಮಯ. ಅದು ಜಗತ್ತನ್ನು ಶೋಧಿಸುವ ಒಂದು ಚಟುವಟಿಕೆ. ಶಾಲೆಗಳಲ್ಲಿ ತುಂಟರಾದ , ಉಡಾಳರಾದ ಮಕ್ಕಳು ದೈಹಿಕ ದುಡಿಮೆಯಲ್ಲಿ ಮುಂದಿರುತ್ತಾರೆ . ಕಲಿಕೆಯಲ್ಲಿ ಹಿಂದಿದ್ದರೂ ಚೆನ್ನಾಗಿ ದುಡಿಯುತ್ತಾರೆ . ನಿಜವಾದ ದುಡಿಮೆ ವ್ಯಕ್ತಿಗಳನ್ನು ಉಪಯುಕ್ತರನ್ನಾಗಿ ಮಾಡುತ್ತದೆ. ವಯಸ್ಕರ ಲೋಕದ ಆಶ್ಚರ್ಯಗಳನ್ನು ಕಿರಿಯರಿಗೆ ತೆರೆದಿಡುತ್ತದೆ. ಮಕ್ಕಳು ದೊಡ್ಡವರ ಜೊತೆ ಕೆಲಸ ಮಾಡುವಾಗ ಅವರ ವ್ಯಕ್ತಿತ್ವದ ಇನ್ನೊಂದು ಮಗ್ಗುಲು ಮಕ್ಕಳಿಗೆ ಗೋಚರವಾಗುತ್ತದೆ ಮತ್ತು ತಾವು ಕೂಡ ಅವರ ಲೋಕದ ಒಂದು ಭಾಗ ಎಂಬ ಅರಿವು ಮೂಡುತ್ತದೆ. ಅಂತೆಯೇ ಇಂಥ ಕೆಲಸಗಳಲ್ಲಿ ತೊಡಗಿಕೊಂಡಾಗ ತಮ್ಮ ಭವಿಷ್ಯ ಹೇಗಿರಬಹುದು ಎಂಬ ಕಲ್ಪನೆಯೂ ಮೂಡುತ್ತದೆ. ಒಂದಾನೊಂದು ದಿವಸ ಈ ಮಕ್ಕಳೂ ದೊಡ್ಡವರಾಗಿ ಹಿರಿಯರ ಹಾಗೆ ದುಡಿದು ಗಳಿಸಬಹುದು; ಗೌರವ ಸಂಪಾದಿಸಬಹುದು. ಅದರ ಅರಿವು ಮಕ್ಕಳು ಕೆಲಸದಲ್ಲಿ ತೊಡಗಿದಾಗ ಅರಳುತ್ತದೆ.

ಇಂದಿನ ಮಕ್ಕಳು ತಮ್ಮ ಸ್ವಂತ ಮನೆಯ ಕೆಲಸಮಾಡಲು ಹಿಂಜರಿಯುತ್ತಾರೆ ಎಂದೆ ನಾನು. ಈ ವಿಷಯದಲ್ಲಿ ತಂದೆತಾಯಿಗಳನ್ನು ನಾವು ದೂಷಿಸಬೇಕು. ಎಲ್ಲದಕ್ಕೂ ಬೇರೆಯವರನ್ನು ಆಶ್ರಯಿಸುವ ಪ್ರವೃತ್ತಿ ಮತ್ತು ತಾವು ಕಷ್ಟದಲ್ಲಿ ಬೆಳೆದೆವು. ತಮ್ಮ ಮಕ್ಕಳು ಸುಖವಾಗಿರಬೇಕು ಎಂಬ ಧೋರಣೆ ಕಾರಣ. ಹೆತ್ತವರು ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕ ಕೆಲವೊಂದು ಕೆಲಸಗಳನ್ನು ಅವರಿಂದ ಮಾಡಿಸಬೇಕು. ಅವರ ಜೊತೆ ತಾವೂ ಸೇರಿ ಕೆಲಸಮಾಡಬೇಕು. ಆಗ ತಾನಾಗಿ ಮಕ್ಕಳೂ ಕೂಡ ಕೆಲಸ ಕಲಿಯುತ್ತಾರೆ. ಕೆಲಸದ ಋಷಿ ಏನು ಎಂದು ತಿಳಿಯುತ್ತದೆ. ಹೀಗೆ ಮಾಡುವಗ ಯಾವ ಕೆಲಸವೂ ಮೇಲಲ್ಲ ಯಾವ ಕೆಲಸವೂ ಕೀಳಲ್ಲ ಎಂಬ ಸಂದೇಶ ಮಕ್ಕಳ ಮನಸ್ಸನ್ನು ನಾಟುವಂತೆ ನೋಡಿಕೊಳ್ಳಬೇಕು. ಗಾಂಧೀಜಿ ತಮ್ಮ ಫೀನಿಕ್ಸ್‌ ಆಶ್ರಮದಲ್ಲಿ ಪ್ರತಿಯೊಬ್ಬರೂ ತಂತಮ್ಮ ಕೆಲಸವನ್ನು ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಿದಂತೆ, ಕಸ್ತೂರ್ಬಾ ಅವರಿಂದ ಕೆಲಸ ಮಾಡಿಸಿದರಂತೆ ಮಾಡಬೇಕು. ಮೇಲ್ನೋಟಕ್ಕೆ ಇದು ಕ್ರೌರ್ಯವೆಂದು ಕಾಣಬಹುದು. ಆದರೆ ನಾವು ದೈಹಿಕ ಶ್ರಮದಲ್ಲಿ ತೊಡಗಿಕೊಂಡಾಗ, ಕಸಗುಡಿಸುವ, ಪಾತ್ರೆ ತೊಳೆಯುವ, ಪಾಯಿಖಾನೆ ತೊಳೆಯುವ ಕೆಲಸ ಮಾಡಿದಾಗ ಅಂಥ ಕೆಲಸಗಳನ್ನು ಪರರಿಗಾಗಿ, ಹೊಟ್ಟೆಪಾಡಿಗಾಗಿ ಮಾಡುವವರ ಬಗ್ಗೆ ನಮ್ಮಲ್ಲಿ ಅನುಭೂತಿ ಹುಟ್ಟುತ್ತದೆ. ಮನಸ್ಸು ಕರಗುತ್ತದೆ . ನಿಜವಾದ ದುಡಿಮೆ ಈ ಬಗೆಯ ಕಕ್ಕುಲಾತಿಯನ್ನು ಉಂಟುಮಾಡುತ್ತದೆ.

ನಮ್ಮ ಜೊತೆ ನಮ್ಮ ಮಕ್ಕಳನ್ನೂ ಕೆಲವು ಸರಳ ಕೆಲಸಗಳನ್ನು ಮಾಡಲು ಹಚ್ಚಿದಾಗ ಒದಗುವ ಲಾಭಗಳು ವಿಶಿಷ್ಟವಾಗಿರುತ್ತವೆ. ಉದ್ಯಾನವನವನ್ನು ಬೆಳೆಸುವ, ಹೂಗಿಡಗಳ ಜೊತೆ ಸಮಯ ಕಳೆಯುವ ತಾಯಿಯ ಜೊತೆ ಮಗುವೂ ಕೆಲಸ ಮಾಡಿದರೆ ಮಗುವಿನಲ್ಲಿ ಹೂಗಿಡಗಳ ಬಗ್ಗೆ, ಹಣ್ಣುಗಳ ಬಗ್ಗೆ, ಹಕ್ಕಿಗಳ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಮಗು ಮುಂದೊಂದು ದಿನ ಆಹಾರ ತಂತ್ರಜ್ಞಾನ, ಸಸ್ಯಶಾಸ್ತ್ರ, ಪಕ್ಷಿವೀಕ್ಷಣೆ, ಛಾಯಾ ಚಿತ್ರೀಕರಣ, ಸಾಹಿತಿ – ಹೀಗೆ ಹಲವು ಮಗ್ಗುಲುಗಳಲ್ಲಿ ಬೆಳೆಯಬಹುದು.  ಸಾಹಿತಿಯಾದರಂತೂ ಬಾಲ್ಯದ ಈ ಬಗೆಯ ಅನುಭವಗಳೆಲ್ಲ ಕೃತಿಗಳಲ್ಲಿ ‘ಮಣ್ಣಿನ ವಾಸನೆ’ಯಾಗಿ ಹೊರಹೊಮ್ಮುತ್ತವೆ.

ಕೆಲವು ಮಕ್ಕಳಿಗೆ ಅಡುಗೆಮಾಡಲು ಆಸೆ. ಆದರೆ ಮನೆಯಲ್ಲಿ ಮಕ್ಕಳಿಗೆ ಅಡುಗೆ ಕಲಿಸಲು ತಂದೆತಾಯಿಗಳು ತಯಾರಿಲ್ಲ. ಮಕ್ಕಳು ಗ್ಯಾಸ್‌ಸ್ಟವ್‌ ಹೊತ್ತಿಸಲು ಹೋಗಿ ಕೈಸುಟ್ಟುಕೊಂಡರೆ? ಪಾತ್ರೆ ಇಳಿಸಲು ಹೋಗಿ ಮೈಮೇಲೆ ಬಿಸಿನೀರು ಬಿದ್ದರೆ? ಈ ಭಯಗಳು ತಂದೆತಾಯಿಯರನ್ನು  ಕಾಡುತ್ತವೆ. ಹೀಗಾಗಿ ದೊಡ್ಡವರಾದಮೇಲೂ ಅನೇಕ ಹುಡುಗಹುಡುಗಿಯರಿಗೆ ಅಡುಗೆಮಾಡಲು ಬರುವುದಿಲ್ಲ. ಅಡುಗೆಮಾಡಲು ಕಲಿಸಿದರೆ ಬದುಕು ಸ್ವಾವಲಂಬಿಯಾಗುತ್ತದೆ ಎಂದು ಯಾಕೆ ತಂದೆತಾಯಿಗಳು ಗಮನಿಸುವುದಿಲ್ಲ!?

ನಮ್ಮ ಸಮಾಜ ಮಕ್ಕಳಿಗೆ ಕೆಲಸ ಕಲಿಸಬೇಕು. ಮಕ್ಕಳು ದುಡಿಯುತ್ತ ಕಲಿಯುವಂತಾಗಬೇಕು. `Earn while you learn’ ಎಂಬ ಮಾತು ಒಂದು ಕಾಲಕ್ಕೆ ಪ್ರಚಲಿತದಲ್ಲಿತ್ತು. ಕೆಲವೇ ಸಮಯದಲ್ಲಿ ಈ ಮಾತು ಮೂಲೆಪಾಲಾಯಿತು. ನಾವು ಕೈತುಂಬ ಸಂಬಳ ತರುವಾಗ ಮಕ್ಕಳೇಕೆ ದುಡಿಯಬೇಕು? ನಮಗೆ ಅವರ ದುಡ್ಡೇಕೆ? ಅವರನ್ನು ದುಡಿಸಿ ನಾವು ಯಾವ ಲೋಕಕ್ಕೆ ಹೋಗಬೇಕು? ಎಂಬ ಮಾತುಗಳು ಕೇಳಿಬರುತ್ತವೆ. ದುಡ್ಡಿಗಾಗಿ ಎಲ್ಲ ಮಕ್ಕಳು ದುಡಿಯಬೇಕೆಂದಿಲ್ಲ. ದುಡಿಮೆಯ ಆನಂದಕ್ಕಾಗಿ ಕೆಲವರು ದುಡಿಯಲಿ.  ಹಣದ ಅಗತ್ಯವಿರುವ ಮಕ್ಕಳು ಕಲಿಯುತ್ತ ದುಡಿಯಲಿ. ಅವರು ಗಳಿಸಿದ ಹಣವನ್ನು ಭವಿಷ್ಯಕ್ಕಾಗಿ ಉಳಿಸಲು ತಂದೆತಾಯಿ ಹೇಳಿಕೊಡಲಿ; ಬದಲಾಗಿ ಆ ಹಣವನ್ನು ಕಸಿದುಕೊಳ್ಳದಿರಲಿ. ಹೀಗೆ ಮಾಡಿದರೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಮಕ್ಕಳಿಗೆ ದತ್ತವಾಗಿರುವ ಕೆಲವೊಂದು ಹಕ್ಕುಗಳನ್ನು ಕಾಪಾಡುವುದು ಹೇಗೆ? ಅವರು ಅದನ್ನು ಬೆಳೆಸಿಕೊಳ್ಳುವಂತೆ ಮಾಡುವುದು ಹೇಗೆ? ಅವುಗಳ ಉಲ್ಲಂಘನೆಯಾದಾಗ ಅದರ ವಿರುದ್ಧ ಹೋರಾಟದ ಕಿಡಿ ಹೊತ್ತಿಸುವುದು ಹೇಗೆ? ತಂದೆತಾಯಿಗಳು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದರೆ ಏನು ಮಾಡುವುದು? ಹರ ಕೊಲ್ಲಲ್‌ ಪರ ಕಾಯ್ವನೆ? ಈ ಎಲ್ಲ ಪ್ರಶ್ನೆಗಳಿಗೆ ಆರೋಗ್ಯವಂತ ಸಮಾಜ ಸರಿಯಾದ ಉತ್ತರವನ್ನು ಈಗಲಾದರೂ ಕಂಡುಕೊಳ್ಳಬೇಕಾಗಿದೆ.