ನಾವೆಂಥ ವಿಚಿತ್ರಮಂದಿ ಎಂದರೆ ಓರ್ವ ಸಾಮಾನ್ಯ ನಟಿ ಖುಷ್ಬುಗಾಗಿ ಒಂದು ಮಂದಿರವನ್ನು ಕಟ್ಟಲಾಗಿದೆ. ಅದೇ ಖುಷ್ಬು ಲೈಂಗಿಕತೆಗೆ ಸಂಬಂಧಿಸಿದಂತೆ ನೀಡಿದ ಒಂದು ಹೇಳಿಕೆ ಜೇನುಗೂಡಿಗೆ ಕಲ್ಲೆಸೆದಂತಾಯಿತು. ಆಕೆಯ ಮೇಲೆ ಇಪ್ಪತ್ತಮೂರಕ್ಕೂ ಹೆಚ್ಚು ಸಾಮಾನ್ಯ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ ಕೊನೆಗೆ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಲೇರಿತು. ಸುಪ್ರೀಂ ಕೋರ್ಟು ಖುಷ್ಬು ಮೇಲಿನ ಕ್ರಿಮಿನಲ್‌ ಮೊಕದ್ದಮೆಗಳನ್ನು ತಳ್ಳಿಹಾಕಿ ಆಕೆಯ ಅಭಿವ್ಯಕ್ತಿಸ್ವಾತಂತ್ಯ್ರ, ವಿಚಾರಸ್ವಾತಂತ್ಯ್ರ, ಅಭಿಮತ ಸ್ವಾತಂತ್ಯ್ರವನ್ನೂ ಅಭಿಪ್ರಾಯ ಪ್ರಸಾರದ ಸ್ವಾತಂತ್ಯ್ರವನ್ನೂ ಮುಖ್ಯವಾಹಿನಿಗೆ ವಿರುದ್ಧವಾದ ಧೋರಣಾ ಸ್ವಾತಂತ್ಯ್ರವನ್ನೂ ಎತ್ತಿಹಿಡಿಯಿತು.

ಖುಷ್ಬು ೨೦೦೫ ರಲ್ಲಿ ಪತ್ರಿಕೆಗೆ ನೀಡಿದ ಹೇಳಿಕೆಗಳನ್ನು ಆಧರಿಸಿ ಅವಳ ಮೇಲೆ ತಮಿಳುನಾಡಿನಲ್ಲಿ ಕ್ರಿಮಿನಲ್‌ ಕೇಸುಗಳನ್ನು ಜಡಿಯಲಾಯಿತು. ವಿವಾಹಪೂರ್ವ ಲೈಂಗಿಕತೆ ಹೆಚ್ಚುತ್ತಿರುವುದನ್ನು ಗಮನಿಸಿ ಖುಷ್ಬು ಹೆಣ್ಣುಮಕ್ಕಳಿಗೆ ಸೂಕ್ತ ಎಚ್ಚರಿಕೆ ನೀಡಿದಳು. ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹಬ್ಬುವ ಗುಹ್ಯರೋಗಗಳ ಬಗ್ಗೆ ಜಾಗರೂಕರಾಗಿರುವಂತೆ ಆಕೆ ಹುಡುಗಿಯರಿಗೆ ಎಚ್ಚರಿಕೆ ನೀಡಿದಳು. ಹಾಗಂತ ಆಕೆ ವಿವಾಹಪೂರ್ವ ಲೈಂಗಿಕತೆಯನ್ನಾಗಲಿ, ವಿವಾಹ ಮಾಡಿಕೊಳ್ಳದೆ ಜತೆಗೂಡಿ (live-in) ಸಂಸಾರ ನಡೆಸುವುದನ್ನಗಲಿ ಪ್ರತಿಪಾದಿಸಿರಲಿಲ್ಲ. ಸಮಾಜ ಲೈಂಗಿಕ ವಿಚಾರಗಳ ಬಗ್ಗೆ ನಯವಂಚಕತನದಿಂದ ವರ್ತಿಸಬಾರದು ಮತ್ತು ವಿವಾಹಪೂರ್ವ ಲೈಂಗಿಕತೆ ನಮ್ಮ ಸಮಾಜದಲ್ಲಿ ನಡೆಯೋಲ್ಲ ಎಂದೆಲ್ಲ ಕಣ್ಮುಚ್ಚಿಕೊಂಡಿರಬಾರದು. ವಿವಾಹಪೂರ್ವ ಲೈಂಗಿಕತೆಯಲ್ಲಿ ಯಾರದರೂ ತೊಡಗಿಕೊಂಡರೆ ಅಂಥವರು ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು ಎಂದು ಹೇಳಿದ್ದಳು.

ದುರಂತದ ಸಂಗತಿಯೆಂದರೆ ನಮ್ಮ ಸಮಾಜ ಇನ್ನೂ ಕೂಡ ‘ಮುಚ್ಚು ಮಾದರಿ’ಯ ಸಮಾಜವೇ ಆಗಿದೆ. ಕಾಮ,  ಲೈಂಗಿಕತೆ ಎಂಬ ಶಬ್ದ ಕೇಳಿದರೆ ಸಾಕು ಬೆಚ್ಚಿಬಿದ್ದವರಂತೆ. ಹಾವು ಮೈಮೇಲೆ ಬಿದ್ದವರಂತೆ ಮಾಡುವವರೇ ಇಲ್ಲಿ ಅಧಿಕ. ಹಾಗಂತ ಒಳಗಿಂದೊಳಗೇ ಕಾಮದ ಮಂಡಿಗೆ ಮೆಲ್ಲುವವರಿಗೇನೂ ಕಡಿಮೆಯಿಲ್ಲ. ಯಾರೂ ನೋಡದಿದ್ದರೆ, ಕಾನೂನಿನ ಭಯವಿಲ್ಲದಿದ್ದರೆ ಎಂಥ ಹೀನ ಲೈಂಗಿಕಕೃತ್ಯ ನಡೆಸಲೂ ಸಿದ್ಧ.

ಕಾಮ ಎಂದರೆ ಹೊಲಸು. ಅದೇನೋ ದುಷ್ಕೃತ್ಯ. ಮಾಡಬಾರದ ತಪ್ಪು ಕೆಲಸ ಎಂಬ ಭಾವನೆ ಇಂದಿಗೂ ಬಹುಜನರಲ್ಲಿದೆ. ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ನಮ್ಮ ಕಾನೂನುಗಳು ಬದಲಾಗಿವೆ. ಸಲಿಂಗಕಾಮಕ್ಕೆ ಈ ದೇಶದಲ್ಲಿ ಅವಕಾಶವಿದೆ. ಸಲಿಂಗಿಗಳು ಜೊತೆಗೆ ಇರುವುದಕ್ಕೂ ಅವಕಾಶವಿದೆ. ಪ್ರಾಯಕ್ಕೆ ಬಂದ ಹೆಣ್ಣು ಗಂಡು ತಮ್ಮಿಚ್ಛೆಯಂತೆ ವಿವಾಹಜೀವನ ನಡೆಸುವ ಅವಕಾಶವಿದೆ. ಹೆಣ್ಣು ಮದುವೆಯಾಗದೇನೇ ಮಕ್ಕಳನ್ನು ಪಡೆಯುವ ಅರ್ಥಾತ್‌ ತಾಯ್ತನದ ಹಕ್ಕು ಹೊಂದಿದ್ದಾಳೆ ಎಂದು ಕೋರ್ಟ್ ತೀರ್ಪಿತ್ತಿದೆ. ಆದರೂ ಕಾಮ, ಲೈಂಗಿಕತೆ ಬಗ್ಗೆ ಒಂದೆಡೆ ಜನ ಬಹಿರಂಗವಾಗಿ ಮಾತನಾಡಲು ನಾಚಿಕೊಂಡರೆ ಮತ್ತೊಂದೆಡೆ ಅಶ್ಲೀಲ ಸಾಹಿತ್ಯ, ಅಶ್ಲೀಲ ಸಿನೆಮಾ,  ಶೌಚಾಲಯ ಸಾಹಿತ್ಯ ಧಾರಾಳವಾಗಿ ಬೆಳೆಯುತ್ತಿದೆ. ವಿಕೃತ ಲೈಂಗಿಕ ಸುದ್ದಿಗಳನ್ನು ದಪ್ಪ ಅಕ್ಷರಗಳಲ್ಲಿ ಪ್ರಕಟಿಸುವ ಸಂಜೆಪತ್ರಿಕೆಗಳಿಗೆ ಭಾರಿ ಬೇಡಿಕೆಯೂ ಇದೆ! ಈಗಂತೂ ಮೊಬೈಲ್‌ ಕ್ಯಾಮರಾಗಳು ಬಂದಮೇಲಂತೂ ಸ್ವಾಮೀಜಿ ಆಶ್ರಮಗಳಲ್ಲಿ, ಅಲ್ಲಿ ಇಲ್ಲಿ ನಡೆಯುವ ರಾಸಕೇಳಿಗಳ ದೃಶ್ಯಗಳನ್ನು, ಸ್ನಾನದ ಮನೆ, ಶೌಚಾಲಯಗಳಲ್ಲಿ ಹೆಂಗಸರು ಅರೆಬತ್ತಲೆ ಅಥವಾ ಪೂರ್ಣಬತ್ತಲೆ ಆಗಿರುವ ದೃಶ್ಯಗಳನ್ನು ಸೆರೆಹಿಡಿದು ಪ್ರಚಾರಗೊಳಿಸುವ ಕೆಲಸಗಳೂ ಧಾರಾಳವಗಿ ನಡೆಯುತ್ತಿವೆ. ಎಂಥ ವಿಕ್ಷಿಪ್ತಸಮಾಜ ನಮ್ಮದು!?

ಮಕ್ಕಳ ಲೈಂಗಿಕ ವಿಕಾಸದ ಬಗ್ಗೆ ಹಿರಿಯರಿಗೆ ಇನ್ನೂ ಸ್ಪಷ್ಟ ಕಲ್ಪನೆ ಮೂಡಿಲ್ಲವೆನ್ನಬೇಕು. ಮಕ್ಕಳು ‘ಮುಗ್ಧರು’, ಪರಿಶುದ್ಧರು. ಅವರಿಗೆ ಕಾಮದ ಬಗ್ಗೆ ಏನೂ ಗೊತ್ತಿಲ್ಲ ಮತ್ತು ಕಾಮುಕ ಬಯಕೆಗಳು ಅವರಲ್ಲಿ ಇಲ್ಲ ಎಂಬ ಭಾವನೆ ಹಿರಿಯರಲ್ಲಿದೆ. ಆದರೆ ಹತ್ತು ಹನ್ನೊಂದು ಪ್ರಾಯ ದಾಟಿದ ಮಕ್ಕಳ ವಿಷಯದಲ್ಲಿ ಇದು ನಿಜವಲ್ಲ. ಸುಮಾರಾಗಿ ಐದನೆಯ ತರಗತಿಯಿಂದ ಮೊದಲ್ಗೊಂಡು ಗಂಡು-ಹೆಣ್ಣು ಎಂಬ ಲೈಂಗಿಕಪ್ರಜ್ಞೆ ಜಾಗೃತವಾಗುತ್ತ ಹೋಗುತ್ತದೆ. ಅದರಲ್ಲೂ ಇಂದಿನ ದಿನಮಾನಗಳಲ್ಲಿ ವಿವಿಧ ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದಾಗಿ ಮಕ್ಕಳು ಬೇಗನೆ ಲೈಂಗಿಕ ಪಕ್ವತೆಯ ಹಂತ ತಲುಪುತ್ತಿದ್ದಾರೆ.

ನಟಿ ಖುಷ್ಬು ಹೇಳಿದಂತೆ ಇಂದು ನಮ್ಮ ಸಮಾಜದಲ್ಲಿ ಸಿನೆಮಾ, ಧಾರಾವಾಹಿಗಳು ಹಾಗೂ ಮುಕ್ತತೆಯ ದೆಸೆಯಿಂದಾಗಿ ಅನೇಕ ನಗರಗಳಲ್ಲಿ ಹದಿಹರೆಯದ ಹುಡುಗ ಹುಡುಗಿ ಒಂದಾಗುವ, ವಿವಾಹಪೂರ್ವದಲ್ಲೇ ಲೈಂಗಿಕ ಕ್ರಿಯೆಗಳಲ್ಲಿ ತೊಡಗುವ ಅಥವಾ ಜೊತೆಗೂಡಿ ಬದುಕುವ ಸಂಬಂಧಗಳು ಹೆಚ್ಚುತ್ತಿವೆ. ಇದರ ಪರಿಣಾಮವನ್ನು ಎದುರಿಸಬೇಕಾದವಳು ಹೆಣ್ಣು. ‘ಹೂವಿಂದ ಹೂವಿಗೆ ಹಾರುವ ದುಂಬಿ’ಯಂತೆ ಗಂಡು ಮಜಾ ಉಡಾಯಿಸಿ ಜವಾಬ್ದಾರಿಯ ತೊಟ್ಟು ಕಳಚಿಕೊಳ್ಳುತ್ತಾನೆ. ಆದರೆ ಹೆಣ್ಣು ವಿವೇಕದ ಕೊರತೆಯಿಂದಾಗಿ , ಅತಿಯಾದ ವಿಶ್ವಾಸದಿಂದಾಗಿ ಮೋಸಹೋಗುತ್ತಾಳೆ. ಮುಂದಿನ ಎಲ್ಲ ಅಪಮಾನಗಳನ್ನು ಅನುಭವಿಸುತ್ತಾಳೆ. ಇಷ್ಟವಿಲ್ಲದ ಸಂತಾನಕ್ಕೂ ಜನ್ಮಕೊಟ್ಟು ಬಾಳನ್ನು ಗೋಳುಮಾಡಿಕೊಳ್ಳುತ್ತಾಳೆ. ಈಗಂತೂ ಎಚ್‌.ಐ.ವಿ. ಏಯ್ಡ್ಸ್ ಹೆಮ್ಮಾರಿಯಂತೆ ಹರಡುತ್ತಿದ್ದು ಚಿಕ್ಕ ಪ್ರಾಯದಲ್ಲೆ ಆಕೆ ಅದಕ್ಕೆ ತುತ್ತಾಗಬಹುದು.

ಇಂಥ ದುರಂತಗಳನ್ನು ತಪ್ಪಿಸಲು ಸಾಧ್ಯವಿಲ್ಲವೆ? ಖಂಡಿತ ಸಾಧ್ಯವಿದೆ. ಆದರೆ ನಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ ನಾವು ಈ ಬಗ್ಗೆ ಎಲ್ಲಿ ಮಾತನಾಡುತ್ತೇವೆ? ಎಲ್ಲವನ್ನೂ ಗುಟ್ಟಾಗಿಡುತ್ತೇವೆ. ಇಂಥ ವಿಷಯಗಳ ಬಗ್ಗೆ ಮಾತನಾಡುವುದು ಹೇಸಿಗೆಯ ಸಂಗತಿ. ನಾಚಿಕೆಟ್ಟವರು ಮಾತ್ರವೇ ಈ ವಿಷಯಗಳ ಬಗ್ಗೆ ಮಾತನಾಡಬಲ್ಲರು. ಹೀಗಾಗಿ ಮುಟ್ಟಾಗುವುದು, ವೀರ್ಯಸ್ಖಲನ, ಗರ್ಭಧಾರಣೆ, ಮಗು ಹುಟ್ಟುವುದು, ಗರ್ಭನಿರೋಧ ಇತ್ಯಾದಿ ವಿಚಾರಗಳ ಬಗ್ಗೆ ಮಕ್ಕಳಿಗೆ ಅರೆಬರೆ ಜ್ಞಾನ ಅಥವಾ ವಿಕೃತಜ್ಞಾನ ಅಥವಾ ಯಾವ ತಿಳಿವಳಿಕೆಯೂ ಇರುವುದಿಲ್ಲ. ಗಂಡು ಹೆಣ್ಣು ಮದುವೆಯಾಗಿ ಮೊದಲ ರಾತ್ರಿ ಸಮಾಗಮ ಹೊಂದುವಾಗಲೆ ಹಲವು ದುರಂತಗಳು ಅನಾವರಣಗೊಳ್ಳುತ್ತವೆ.

ಹದಿಹರೆಯದ ಹಂತಕ್ಕೆ ಕಾಲಿಡುವ ಹೊತ್ತಿಗೆ ಲೈಂಗಿಕ ಅಂಗಾಂಗಳು, ಋತುಮತಿಯಾಗುವಿಕೆ, ಗರ್ಭಧಾರಣೆ, ಗರ್ಭನಿರೋಧ, ಲೈಂಗಿಕಕ್ರಿಯೆ, ವೀರ್ಯಸ್ಖಲನ, ಮುಷ್ಟಿ ಮೈಥುನ ಇತ್ಯಾದಿ ವಿಚಾರಗಳ ಬಗ್ಗೆ ಹುಡುಗ ಹುಡುಗಿಯರಿಗೆ ಖಚಿತವಾದ ವೈಜ್ಞಾನಿಕ ಮಾಹಿತಿ ಒದಗಿಸುವುದು ಅಗತ್ಯ. ಶಾಲೆಗಳಲ್ಲಿ ಹದಿಹರೆಯದ ಶಿಕ್ಷಣವನ್ನು ವ್ಯವಸ್ಥೆ ಮಾಡುವುದು ಉತ್ತಮ. ಈ ಬಗ್ಗೆ ಈಗಾಗಲೆ ನಮ್ಮ ದೇಶದಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ. ಜೀವನಕೌಶಲಗಳ ಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರೌಢಶಾಲಾ ಆವರಣದಲ್ಲಿ ‘ಕಾಂಡೋಮ್‌’ ವೆಂಡಿಂಗ್‌ ಬಾಕ್ಸ್‌ಗಳನ್ನು ಸ್ಥಾಪಿಸಿದರೆ ಹೇಗೆ ಎಂಬಲ್ಲಿಯವರೆಗೂ ಚಿಂತನೆ ನಡೆದಿದೆ. ಗರ್ಭನಿರೋಧಕ ಸಾಮಗ್ರಿಗಳು ಪ್ರೌಢಶಾಲಾ, ಪದವಿಪೂರ್ವ ಹಂತದ ಹಡುಗ ಹುಡುಗಿಯರಿಗೆ ಸುಲಭದಲ್ಲಿ ಸಿಕ್ಕಿಬಿಟ್ಟರೆ ಪ್ರಳಯವೇ ಆದೀತು ಎಂಬ ತೀವ್ರ ಸ್ವರೂಪದ ಆಲೋಚನೆಗಳು ನಮ್ಮ ಸಮಾಜದಲ್ಲಿ ಹುಟ್ಟಿಕೊಂಡಿವೆ. ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಧಾರಾಳ ಮಾಹಿತಿ ಸಿಗುತ್ತಿದೆ. ಅಂಗಡಿಗಳಲ್ಲಿ ಸುಲಭವಾಗಿ ಇವು ಲಭ್ಯ.

ಹಾಗಂತ ಸಮಾಜ ಅಧೋಗತಿಗೆ ಇಳಿದಿಲ್ಲ. ಎಲ್ಲವೂ ಎಲ್ಲರಿಗೂ ಸುಲಭದಲ್ಲಿ ಕೈಗೆಟಕುವುದರಿಂದ ಸಾಮಾಜಿಕ ಸ್ಥಿತಿಗತಿ ಹಾಳಾಗಬಹುದು ಎಂಬ ನಂಬಿಕೆ ಪೂರ್ತಿ ನಿರಾಧಾರವಾದುದೇನಲ್ಲವಾದರೂ ನೈತಿಕಪ್ರಜ್ಞೆ ಈ ಸಮಾಜದಲ್ಲಿ ಪೂರ್ತಿ ನಶಿಸಿಲ್ಲ ಮತ್ತು ಅದು ಅಷ್ಟು ಸುಲಭವಾಗಿ ನಶಿಸಲಾರದು. ಲೈಂಗಿಕತೆ ಬಗ್ಗೆ ಪ್ರತಿಯೊಬ್ಬರೂ ‘ಶೌಚ’ವನ್ನು ಕಾಪಾಡಿಕೊಂಡುಬಂದರೆ ಅರ್ಥಾತ್‌ ಇಂದ್ರಿಯನಿಗ್ರಹವನ್ನು ಸಾಧಿಸಿದರೆ ಪರಿಸ್ಥಿತಿ ಸಾಕಷ್ಟು ಸುಧಾರಿಸೀತು. ಈ ನಿಟ್ಟಿನಲ್ಲಿ ‘ಏಕಪತ್ನೀವ್ರತ’, ‘ಮಕ್ಕಳನ್ನು ಪಡೆಯಲಿಕ್ಕಾಗಿ ಸಂಭೋಗ’, ‘ಒಂದು ವಯಸ್ಸು ದಾಟಿದ ಬಳಿಕ ಸಂಭೋಗದಿಂದ ದೂರ’ ಮುಂತಾದ ಭಾರತೀಯ ಲೈಂಗಿಕ ಸೂತ್ರಗಳನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ. ವಿದೇಶಗಳಲ್ಲಿ ಕಂಡುಬರುವ ಲೈಂಗಿಕ ಗುಹ್ಯ ರೋಗಗಳ ಪ್ರಮಾಣಕ್ಕೆ ಹೋಲಿಸಿದರೆ ಭಾರತದಲ್ಲಿ ಅದಿನ್ನೂ ಅಷ್ಟು ತೀವ್ರವಾಗಿಲ್ಲ. ಅದಕ್ಕೆ ಮುಖ್ಯ ಕಾರಣ ನಮ್ಮ ವಿವಾಹ ವ್ಯವಸ್ಥೆ ಹಾಗೂ ‘ಲೈಂಗಿಕಶೌಚ’ದ ಪರಿಕಲ್ಪನೆ ಎಂಬುದು ಸುಸ್ಪಷ್ಟ. ಆದರೆ ‘ಮುಕ್ತ ಲೈಂಗಿಕತೆ’ ದೆಸೆಯಿಂದಾಗಿ ಪರಿಸ್ಥಿತಿ ಬದಲಾಗುತ್ತಿದೆ. ನಟಿ ಖುಷ್ಬು ಸೂಚಿಸಿದ ನಿಯಮಗಳನ್ನು ಪಾಲಿಸಿದರೆ ಸಾಕಷ್ಟು ಅನಾಹುತಗಳನ್ನು ತಪ್ಪಿಸಬಹುದು.

ಲೈಂಗಿಕ ಸಂಬಂಧವೆಂಬುದು ಒಂದು ಯಾಂತ್ರಿಕ ಸಂಬಂಧ ಎಂಬ ಭಾವನೆ ಕಿರಿಯರಲ್ಲಿ ಬೆಳೆಯದಂತೆ ಎಚ್ಚರವಹಿಸಬೇಕು. ಈ ಬಗೆಯ ಪ್ರಜ್ಞೆಯನ್ನು ಕುಟುಂಬ, ಸಾರ್ವಜನಿಕ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಎಳೆಯರಲ್ಲಿ ರೂಪಿಸಬೇಕು. ಏಕೆಂದರೆ ಗಂಡು ಹೆಣ್ಣು ಸಂಭೋಗದಲ್ಲಿ ನಿರತವಾಗಿ ಬಳಿಕ ಒಬ್ಬರನ್ನೊಬ್ಬರು ಅಗಲುವ ಅಥವಾ ಇನ್ನೂ ಹಲವರ ಜೊತೆ ಸಂಬಂಧ ಸಾಧಿಸುವ ಕ್ರಿಯೆ ಲೈಂಗಿಕ ಸ್ವೈರ, ಸ್ವೇಚ್ಛಾಚಾರ, ಮುಕ್ತ ಕಾಮಕೇಳಿ ಅಥವಾ ವ್ಯಭಿಚಾರಕ್ಕೆ ಎಡೆಮಾಡಿಕೊಡುತ್ತದೆ. ಲೈಂಗಿಕ ಸಂಬಂಧವೆಂಬುದು ಪರಸ್ಪರ ಜವಾಬ್ದಾರಿಯುತವಾದ, ಪರಸ್ಪರ ಗೌರವದ ಸಂಬಂಧವೆಂಬುದು ಸಂಗಾತಿಗಳಿಗೆ ಮನವರಿಕೆಯಾಗಬೇಕು. ಹೀಗೆ ಆಗದೆ ಹೋದರೆ ಅದು ಲೈಂಗಿಕಶೋಷಣೆ ಮತ್ತು ಭಾವನಾತ್ಮಕ ಆಘಾತಗಳಿಗೆ ಹಾದಿಮಾಡಿಕೊಡಬಹುದು.

ಭಾರತೀಯ ಸಮಾಜದಲ್ಲಿ ಇಂದಿಗೂ ಬಹಳಷ್ಟು ಕುಟುಂಬಗಳಲ್ಲಿ ಯುವಕ ಯುವತಿಯರ ಲೈಂಗಿಕ ಸಂಬಂಧ ಪ್ರಾರಂಭವಾಗುವುದು ವಿವಾಹದ ಬಳಿಕ. ಅದಕ್ಕೂ ಮೊದಲು ಪ್ರೀತಿ ಪ್ರೇಮದಲ್ಲಿ ತೊಡಗಿ ಮೈಕೈ ಮುಟ್ಟಿದ್ದರೂ ಸಂಭೋಗ ಕ್ರಿಯೆಯಲ್ಲಿ ತೊಡಗದವರು ಹಲವರು. ವಿವಾಹದ ವಿಷಯಕ್ಕೆ ಬಂದಾಗ ನಮ್ಮ ಹುಡುಗ ಹುಡುಗಿಯರಿಗೆ ಇಂದಿಗೂ ಸ್ವಾತಂತ್ಯ್ರ ಇಲ್ಲವಾಗಿದೆ. ಜಾತಕ ಕೂಡಿಬರಬೇಕು, ಮೇಳಾಮೇಳಿ ಆಗಬೇಕು, ಹುಡುಗ ಹುಡುಗಿಯ ತಂದೆತಾಯಿ ಒಪ್ಪಬೇಕು, ಒಂದೇ ಜಾತಿಯವರಾಗಬೇಕು, ಸಗೋತ್ರ ಆಗಬಾರದು ಇತ್ಯಾದಿಯಾಗಿ ಹಲವಾರು ಪರಿಗಣನೆಗಳಿವೆ. ಇದರಿಂದಾಗಿ ಎಷ್ಟೋ ಮದುವೆಗಳಲ್ಲಿ ನಿಜಕ್ಕೂ ಹುಡುಗ-ಹುಡುಗಿ ಪರಸ್ಪರ ಇಷ್ಟಪಡದೆ ಹಿರಿಯರ ಒತ್ತಾಯಕ್ಕೆ ಮದುವೆಯಾಗಿ ಜೀವನಪೂರ್ತಿ ಮೂಗುಬ್ಬಸಪಡುತ್ತಾ ದಾಂಪತ್ಯಜೀವನ ನಡೆಸುತ್ತಾರೆ ಅಥವಾ ಮದುವೆಯಾದ ತಿಂಗಳೊಪ್ಪತ್ತಿನಲ್ಲಿ ವಿಚ್ಛೇದಿತರಾಗುತ್ತಾರೆ. ಪ್ರೇಮವಿವಾಹ, ಅಂತರ್ಮತೀಯ, ಅಂತರ್ಜಾತೀಯ ವಿವಾಹ ಈ ಆಧುನಿಕ ವಿದ್ಯಾಭ್ಯಾಸದ ಕಾಲದಲ್ಲೂ ನಿಷಿದ್ಧವೆನಿಸಿದೆ. ಈ ಬಗೆಯ ವಿವಾಹಗಳ ಬಗ್ಗೆ ಸಾಮಾಜಿಕ ರಂಗದಲ್ಲಿ ಇಂದಿಗೂ ಒಂದು ಬಗೆಯ ತಾತ್ಸಾರದ, ಅಸಹನೆಯ ಭಾವನೆಗಳಿವೆ.

ಜೀವನ ನಡೆಸಬೇಕಾದ ಗಂಡುಹೆಣ್ಣು ಪರಸ್ಪರ ಒಪ್ಪಿ ಮೆಚ್ಚಿ ಮದುವೆಯಾಗಲು ಸ್ವಾತಂತ್ಯ್ರ ಕೊಡದಿದ್ದರೆ ಅದೆಂಥ ಸಮಾಜ ನಮ್ಮದು? ಇದು ಮಾನವ ಘನತೆ ಹಾಗೂ ವೈಚಾರಿಕ ಸ್ವಾತಂತ್ಯ್ರಕ್ಕೆ ಧಕ್ಕೆ ತರುವ ಸಂಗತಿ. ಕುಲಗೌರವದ ನೆಪಮಾಡಿಕೊಂಡು ವಧೂವರರನ್ನು ಶಿಕ್ಷಿಸುವ, ದಹಿಸುವ ಕ್ರೂರ ವ್ಯವಸ್ಥೆ ಉತ್ತರ ಭಾರತದಲ್ಲಿ ಜೀವಂತವಾಗಿದೆ ಎಂಬುದು ಅಪಮಾನದ ನಾಚಿಕೆಗೇಡಿನ ಸಂಗತಿ. ಈ ಸಮಾದಲ್ಲಿ ಪ್ರೇಮವಿವಾಹ, ಅಂತರ್ಜಾತೀಯ ವಿವಾಹ ಹಾಗೂ ಅಂತರ್ಮತೀಯ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ, ಸರಕಾರಿ ಮಾನ್ಯತೆ ಲಭಿಸಬೇಕು. ಇಂಥ ಮದುವೆಯನ್ನು ವಿರೋಧಿಸುವವರಿಗೆ- ಯಾರೇ ಆಗಲಿ ಶಿಕ್ಷೆಯಾಗಬೇಕು. ಆಗ ಹುಡುಗಹುಡುಗಿ ಧೈರ್ಯವಹಿಸುತ್ತಾರೆ. ಇಲ್ಲವಾದರೆ ದೇಹ ಬೆಳೆದರೂ ಬುದ್ಧಿ ಬೆಳೆಯದೆ ಅಪ್ಪ ಅಮ್ಮನ ಮಡಿಲಿನ ಕೂಸಾಗಿಯೇ ಉಳಿಯುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ವಿವಿಧ ಪಠ್ಯಗಳಲ್ಲಿ ಇಂಥ ವಿವಾಹಗಳನ್ನು ಪ್ರೋತ್ಸಾಹಿಸುವಂಥ ಪಾಠವಿಚಾರಗಳಿರಬೇಕು.

ಅಂತರ್ಮತೀಯ ಅದರಲ್ಲೂ ಮುಖ್ಯವಾಗಿ ಹಿಂದೂ-ಮುಸ್ಲಿಂ ವಿವಾಹದ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಕೋಮುವಾದಿ ಶಕ್ತಿಗಳ ಪ್ರಾಬಲ್ಯದ ದೆಸೆಯಿಂದಾಗಿ ವಿಪರೀತ ವಿರೋಧ ವ್ಯಕ್ತವಾಗುತ್ತಿದೆ. ಮುಸ್ಲಿಂ ಹುಡುಗ-ಹಿಂದೂ ಹುಡುಗಿ ಒಟ್ಟಿಗೆ ಕಲೆತು ಮಾತಾಡುವುದು, ಒಟ್ಟಿಗೆ ಎಲ್ಲಿಗಾದರೂ ಹೋಗುವುದು ಈ ಸಮಾಜದ ಸಂಶಯಗಳಿಗೆ ಕಾರಣವಾಗುತ್ತದೆ. ಮುಸಲ್ಮಾನ ಹುಡುಗರು ಹಿಂದೂ ಹುಡುಗಿಯರನ್ನು ಮದುವೆಯಾಗಿ ಅವರನ್ನು ಮತಾಂತರಗೊಳಿಸಿ ಹಿಂದೂಸಮಾಜದಲ್ಲಿ ಮುಸಲ್ಮಾನ ಸಂತತಿಯನ್ನು ಹೆಚ್ಚಿಸುತ್ತಿದ್ದಾರೆ ಎಂಬ ಆರೋಪಗಳು ಅಪಪ್ರಚಾರಗಳು ಕೇಳಿಬರುತ್ತಿವೆ. ಹುಡುಗ ಹುಡುಗಿ ಯಾರೇ ಇರಲಿ, ಸ್ವತಂತ್ರ ಭಾರತದಲ್ಲಿ ಒಟ್ಟಿಗೆ ಕಲೆಯುವ ಬೆರೆಯುವ ಅವಕಾಶಗಳಿಲ್ಲವೆ? ಮತ ಬೇರೆಯಾದ ಮಾತ್ರಕ್ಕೆ ಯಾಕೆ ಅದು ಕೂಡದು? ಒಂದೆರಡು ಪ್ರಕರಣಗಳಲ್ಲಿ ಮೋಸ ನಡೆದಿರಬಹುದು. ಆದರೆ ‘ಲವ್‌ಜೇಹಾದ್‌’ ವಿದ್ಯಮಾನ ನಿರಾಧಾರವೆಂದು ನ್ಯಾಯಾಲಯಗಳು ತೀರ್ಪು ನೀಡಿವೆ. ಹೀಗಿರುವಾಗ ಹಿಂದೂ ಓಟುಗಳ ಮೇಲೆ ಕಣ್ಣು ನೆಟ್ಟ ಪಕ್ಷಗಳು ವಿಪರೀತ ಅಪಪ್ರಚಾರ ನಡೆಸಿ ಸಮಾಜವನ್ನು ಒಡೆಯುವುದು, ಅಪನಂಬಿಕೆಯ ಬೀಜ ಬಿತ್ತುವುದು ಖಂಡನೀಯ. ಅಂತೆಯೇ ಮುಸಲ್ಮಾನ ಸಮಾಜಗಳಲ್ಲೂ ಧಾರ್ಮಿಕ ಮತಾಂಧರ, ಮುಲ್ಲಾಗಳ ಪ್ರಭಾವ ಹೆಚ್ಚುತ್ತಿದೆ. ಉನ್ನತ ಶಿಕ್ಷಣ ನಿಜಕ್ಕೂ ಅವರನ್ನು ಬಿಡುಗಡೆಗೊಳಿಸುತ್ತಿಲ್ಲ. ‘ಬುರ್ಖಾ ಧಾರಣೆ’ ಇಂದು ವಿವಾದದ ಸಂಗತಿಯಾಗಿದೆ. ಬುರ್ಖಾ ಧರಿಸಬೇಕೇ ಬೇಡವೇ ಎಂಬುದು ಹೆಣ್ಣಿನ ಹಕ್ಕು. ವಸ್ತ್ರಸಂಹಿತೆಯ ಹೆಸರಿನಲ್ಲಿ ಅದನ್ನು ಬಲಾತ್ಕಾರವಾಗಿ ತೆಗೆಯುವುದು ಎಷ್ಟು ತಪ್ಪೋ ಅಷ್ಟೇ ದೊಡ್ಡ ತಪ್ಪು ಮರ್ಯಾದೆಯ ಹೆಸರಿನಲ್ಲಿ ಅದನ್ನು ಕಡ್ಡಾಯಗೊಳಿಸುವುದು.ಮುಸಲ್ಮಾನ ಹುಡುಗರು ಹಿಂದೂ ಹುಡುಗಿಯರನ್ನು ಪ್ರೀತಿಸಬಹುದು. ಅವರ ಜೊತೆ ಓಡಿಹೋಗಿ ಮದುವೆಯಾಗಬಹುದು. ಹಿಂದೂ ಹುಡುಗಿಯನ್ನು ಮತಾಂತರ ಮಾಡಬಹುದು. ಆದರೆ ಹಿಂದೂಗಳು ಮುಸ್ಲಿಂ ಹುಡುಗಿಯರ ಚೆಲುವನ್ನು ತಮ್ಮ ಕಣ್ಣುಗಳಿಂದ ನೋಡಿ ಖುಷಿಪಡಬಾರದು. ಅವರ ಜೊತೆ ಸಂಪರ್ಕ ಬೆಳೆಸಬಾರದು ಎಂಬ ಕಾರಣಕ್ಕೆ ಬುರ್ಖಾ ಧಾರಣವನ್ನು ಕಡ್ಡಾಯ ಮಾಡುವುದು ತಪ್ಪಲ್ಲವೇ? ಪ್ರಜಾಪ್ರಭುತ್ವದ ಒಂದು ರಾಷ್ಟ್ರದಲ್ಲಿ ಗಂಡುಹೆಣ್ಣಿನ ಪ್ರೀತಿ ಪ್ರೇಮವಿವಾಹಕ್ಕೆ ಜಾತಿ, ಕುಲಗೋತ್ರ ಹಾಗೂ ಧರ್ಮಗಳು ಖಂಡಿತಕ್ಕೂ ತಡೆಗೋಡೆ ಯಾಗಕೂಡದು. ನಾವು ಕರಾಳ ಮಧ್ಯಯುಗೀನ ಸಂಸ್ಕೃತಿಯಿಂದ ಬಿಡಿಸಿಕೊಂಡು ಬಯಲಗಾಳಿಯ ಕಡೆ ಸಾಗಬೇಕಾಗಿದೆ.

ಮಠಮಾನ್ಯಗಳು ನಡೆಸುವ ವಸತಿಗೃಹಗಳಲ್ಲಿ, ವೃತ್ತಿಶಿಕ್ಷಣ ಸಂಸ್ಥೆಗಳ ಹಾಗೂ ಇತರ ಸಾರ್ವಜನಿಕ ವಿದ್ಯಾಲಯಗಳ ಹಾಸ್ಟೆಲುಗಳಲ್ಲಿ ಹುಡುಗ ಹುಡುಗಿಯರು ‘ಸಲಿಂಗಕಾಮ’ದಲ್ಲಿ ತೊಡಗುವ ವಿದ್ಯಮಾನಗಳು ಕೇಳಿಬರುತ್ತವೆ. ‘ಸಲಿಂಗಕಾಮ’ ಕಾನೂನಿನ ಪ್ರಕಾರ ಅಪರಾಧವಲ್ಲ. ‘ಸಲಿಂಗವಿವಾಹ’ಗಳಿಗೂ, ಸಲಿಂಗಿಗಳು ಜೊತೆಯಾಗಿ ಬದುಕುವುದಕ್ಕೂ ಈಗಿನ ನ್ಯಾಯಾಲಯಗಳು ಸಮ್ಮತಿ ನೀಡಿವೆ. ಆದರೆ ‘ಸಲಿಂಗಕಾಮ’ ಬಲಾತ್ಕಾರದ, ಶೋಷಣೆಯ ಕ್ರಿಯೆಯಾದಾಗ ಅಪರಾಧವಾಗಿ ಪರಿಣಮಿಸುತ್ತದೆ. ಸಲಿಂಗಕಾಮ ವಿಪರೀತವಾದಾಗ ಗುಹ್ಯರೋಗಗಳು ಬರಬಹುದಾದ ಸಾಧ್ಯತೆಯೂ ಇದೆ. ಈ ಬಗ್ಗೆ ಎಚ್ಚರವಾಗಿರುವುದು ಅಗತ್ಯ. ಅಂತೆಯೇ ಸಲಿಂಗಕಾಮದ ಬಗ್ಗೆ ಹುಡುಗ ಹುಡುಗಿಯರು ಅಪರಾಧಿ ಪ್ರಜ್ಞೆ ಬೆಳೆಸಿಕೊಳ್ಳಬೇಕಾದ ಅಗತ್ಯ ಇಲ್ಲ. ಭಿನ್ನಲಿಂಗಕಾಮ ಹೆಚ್ಚು ಸಹಜ, ಆರೋಗ್ಯಕರವೆಂಬುದನ್ನು ಬಿಂಬಿಸುವುದು ಮುಖ್ಯ. ಹೆಣ್ಣಾದವಳು ಮದುವೆಯಾಗದೆ ಮಗುವನ್ನು ಪಡೆಯಬಹುದು. ತಾಯ್ತನ ಹೆಣ್ಣಿಗೆ ಪ್ರಾಪ್ತವಾದ ಒಂದು ಸಹಜ ಸ್ಥಿತಿ ಎಂದೂ ನ್ಯಾಯಾಲಯವು ತೀರ್ಪು ನೀಡಿದೆ. ವಿದೇಶಗಳಲ್ಲಿ ವಿವಾಹಪೂರ್ವ ತಾಯಿಯಾಗುವ ಅನೇಕ ಹೆಣ್ಣುಮಕ್ಕಳಿದ್ದಾರೆ. ನಮ್ಮಲ್ಲಿ ‘ಕುಂತಿ ಸಮಸ್ಯೆ’ ಇನ್ನೂ ಅಷ್ಟಾಗಿ ಬೆಳೆದಿಲ್ಲ.  ಮುಂದೊಂದು ದಿನ ಆ ಸ್ಥಿತಿ ಬಂದರೂ ಬರಬಹುದು.

ವಿವಿಧ ಪತ್ರಿಕೆಗಳ ವಿವಿಧ ಅಂಕಣಗಳನ್ನು ಗಮನಿಸಿದರೆ ಸಾಮಾನ್ಯತಃ ಕಂಡುಬರುವ ಒಂದು ಪ್ರಶ್ನೆ ‘ಮುಷ್ಟಿಮೈಥುನ’ಕ್ಕೆ ಸಂಬಂಧಿಸಿದ್ದು. ಹುಡುಗರು ಮುಷ್ಟಿಮೈಥುನದ ಮೂಲಕ ಲೈಂಗಿಕ ಸಂತೋಷ ಕಂಡುಕೊಂಡು ಆ ಬಳಿಕ ಪರಿತಪಿಸುತ್ತಾರೆ. ತಾವು ಮದುವೆಯಾದರೆ ತಮ್ಮ ಜೀವನಸಂಗಾತಿಗೆ ಸುಖಕೊಡಲು ಆಗುವುದೋ ಇಲ್ಲವೋ. ವೀರ್ಯನಾಶದಿಂದ ಬ್ರಹ್ಮಚರ್ಯ ನಾಶವಾಯಿತು. ವೀರ್ಯನಾಶದಿಂದ ಜೀವನನಾಶ ಎಂದು ಭಯಪಡುತ್ತಾರೆ. ಆದರೆ ತಿಳಿದಿರಬೇಕಾದ ಸಂಗತಿಯೆಂದರೆ ವೀರ್ಯವನ್ನು ಶಿರದವರೆಗೆ ಸಾಗಿಸಿ ‘ಊರ್ಧ್ವರೇತಸ್ಕ’ರಾಗಲು ಸಾಧ್ಯವಿಲ್ಲ. ದೇಹದೊಳಗಿನ ಬೇರೆ ಬೇರೆ ದ್ರವಗಳು ಸ್ರವಿಸಿ ಹೋಗಬಹುದು. ಅಂತೆಯೇ ವೀರ್ಯವೂ ಒಂದು ದ್ರವ. ಅದನ್ನು ಬಹುಕಾಲದವರೆಗೆ ಸಂಗ್ರಹಿಸಿಟ್ಟು ಅಧಿಕ ಶಕ್ತಿಸಂಚಯನ ಮಾಡಲು ಬರುವುದಿಲ್ಲ. ಕಾಮೋದ್ರೇಕವಾದಾಗ ಅದು ಸ್ಖಲನವಾಗಲೇಬೇಕು. ವೀರ್ಯಸ್ಖಲನವಾದುದರಿಂದ ನಿಶ್ಯಕ್ತಿ, ಅನಾರೋಗ್ಯ ಉಂಟಾಯಿತೆಂದು ಕೊರಗಬೇಕಿಲ್ಲ. ಅಂತೆಯೇ ಹೆಣ್ಣಿನ ಕನ್ಯಾಪೊರೆ ಹರಿಯುವುದರ ಬಗ್ಗೆ ವಿಚಿತ್ರ ಕಲ್ಪನೆಗಳಿವೆ. ಮೊದಲ ಸಂಭೋಗದಲ್ಲೇ ಕನ್ಯಾಪೊರೆ ಹರಿಯಬೇಕು. ಇಲ್ಲವಾದರೆ ಹುಡುಗಿಯ ಚಾರಿತ್ಯ್ರ ಸರಿಯಿಲ್ಲ.  ಆಕೆ ಈ ಹಿಂದೆ ಯಾರ ಜೊತೆಗೋ ಲೈಂಗಿಕಕ್ರಿಯೆ ನಡೆಸಿರಬೇಕು ಎಂಬ ತಪ್ಪು ಕಲ್ಪನೆಗಳು ಹಲವು ಗಂಡಸರಲ್ಲಿ ಇನ್ನೂ ಮನಮಾಡಿಕೊಂಡಿವೆ. ನಿಜ ಹೇಳಬೇಕೆಂದರೆ ಇಂದಿನ ಜೀವನಶೈಲಿಯಿಂದಾಗಿ ಹೆಣ್ಣಿನ ಕನ್ಯಾಪೊರೆ ಬೇಗನೆ ಸಡಿಲಗೊಂಡು ವಿವಾಹಪೂರ್ವದಲ್ಲೆ ಅದು ಒಡೆಯಬಹುದು. ಈ ವಿಷಯದಲ್ಲಿ ಗಂಡಸರು ಅಷ್ಟೊಂದು ಚಿಂತಿತರಾಗಬಾರದು. ಹೆಣ್ಣಿನ ಚಾರಿತ್ಯ್ರವನ್ನು ಸಂಶಯದಿಂದ ನೋಡಬೇಕಾದ ಅಗತ್ಯವಿಲ್ಲ.

ನಮ್ಮ ಸಮಾಜ ಮುಚ್ಚುಮಾದರಿಯ ಸಮಾಜವಾಗಿರುವುದರಿಂದ ಲೈಂಗಿಕತೆ ಬಗೆಗೆ ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು. ಇದರಿಂದಾಗಿ ಬೆಳೆಯುವ ಮಕ್ಕಳಲ್ಲಿ ಕಾಮ, ಲೈಂಗಿಕತೆ, ಹೆಣ್ಣುಗಂಡಿನ ಶಕ್ತಿ ಸಾಮರ್ಥ್ಯಗಳ ಬಗ್ಗೆ ಚಿತ್ರವಿಚಿತ್ರ ವಿಕೃತ ಕಲ್ಪನೆಗಳು ಭೂತಾಕಾರವಾಗಿ ಬೆಳೆದಿವೆ. ಲೈಂಗಿಕಮೌಢ್ಯದ ಅಂಧಕಾರ ಕವಿದಿದೆ. ಇದನ್ನು ಮೊದಲು ಹೊಡೆದೋಡಿಸಬೇಕಿದೆ. ಶಾಲಾಕಾಲೇಜು ಹಂತದಲ್ಲಿ ವೈಜ್ಞಾನಿಕವಾದ ಲೈಂಗಿಕ ಶಿಕ್ಷಣವನ್ನು ನಾವು ಅವಶ್ಯವಾಗಿ ನೀಡಲೇಬೇಕಾಗಿದೆ. ಜನನಾಂಗಗಳು, ಜನನಾಂಗಗಳ ಸ್ವಚ್ಛತೆ, ಒಳ ಉಡುಪುಗಳ ಸ್ವಚ್ಛತೆ, ಋತುಮತಿಯಾಗುವುದು, ಋತುಚಕ್ರ, ಗರ್ಭಧಾರಣೆ, ಗರ್ಭನಿರೋಧ, ಸಂತಾನಶಸ್ತ್ರಚಿಕಿತ್ಸೆ, ವೀರ್ಯಾಣು ಉತ್ಪತ್ತಿ, ವೀರ್ಯಸ್ಖಲನ, ಮುಷ್ಟಿಮೈಥುನ, ಸಲಿಂಗಕಾಮ, ಸಂಭೋಗಕ್ರಿಯೆ,ಇಂದ್ರಿಯನಿಗ್ರಹ, ಲೈಂಗಿಕ ಸ್ವಚ್ಛತೆ, ಲೈಂಗಿಕ ನಿಷ್ಠೆ, ದಾಂಪತ್ಯಜೀವನ, ಗಂಡುಹೆಣ್ಣಿನ ನಡುವಿನ ಪ್ರೇಮ, ನಿಷ್ಠೆ ಇತ್ಯಾದಿಗಳ ಬಗ್ಗೆ ಹಂತಹಂತವಾಗಿ ಶಿಕ್ಷಣ ನೀಡಬೇಕು. ಶಿಕ್ಷಕರಿಗೆ, ಪಾಲಕರಿಗೆ ಮೊದಲು ಈ ಬಗೆಯ ಶಿಕ್ಷಣ ನೀಡಬೇಕು. ಒಟ್ಟು ವಿಷಯವನ್ನು ಭಾವವಿಕಾರಕ್ಕೆ ಒಳಗಾಗದೆ ತಿಳಿಸುವ ಕಲೆಗಾರಿಕೆಯನ್ನು ರೂಢಿಸಬೇಕು. ಆಗ ಈ ಸಮಾಜದ ಸ್ವಾಸ್ಥ್ಯ ಸುಧಾರಿಸೀತು. ನಮ್ಮ ಹುಡುಗ ಹುಡುಗಿಯರು ಹೆಚ್ಚಿನ ಆತ್ಮವಿಶ್ವಾಸದಿಂದ ಬದುಕನ್ನು ಎದುರಸಿಯಾರು. ಗಂಡುಹೆಣ್ಣು ಪರಸ್ಪರ ಗೌರವದಿಂದ, ಒಬ್ಬರನ್ನೊಬ್ಬರು ಶೋಷಿಸದೆ ಬದುಕಿಯಾರು.

ಹುಡುಗ ಹುಡುಗಿ ಪರಸ್ಪರ ಪ್ರೀತಿಸುವುದು, ಬಾಯ್‌ಫ್ರೆಂಡ್‌, ಗರ್ಲ್‌ಫ್ರೇಂಡ್‌ ಹೊಂದಿರುವುದು, ಪ್ರೀತಿಸಿ ಒಂದಿಷ್ಟು ಸಮಯದ ಮೇಲೆ ಮದುವೆಯಾಗುವುದು, ಒಟ್ಟೊಟ್ಟಿಗೆ ಪಾರ್ಕ್, ಸಿನೆಮಾ ಥಿಯೇಟರ್ ಅಲ್ಲಿ ಇಲ್ಲಿ ಜೋಡಿಹಕ್ಕಿಗಳಂತೆ ಓಡಾಡುವುದು, ವಿವಾಹಪೂರ್ವ ಲೈಂಗಿಕ ಸಂಬಂಧ ಇತ್ಯಾದಿಗಳ ಬಗ್ಗೆ ಮನೆಯವರು ಮಕ್ಕಳಿಗೆ ಸ್ವಾತಂತ್ಯ್ರ ಕೊಟ್ಟಿದ್ದರೆ, ಅವರ ಇಚ್ಛೆಗೆ ಅಡ್ಡಬರದಿದ್ದರೆ ಸಮಸ್ಯೆಗಳಿಲ್ಲ. ತಮತಮಗೆ ಸರಿಕಂಡ ಜೀವನಸಂಗಾತಿಯನ್ನು ಹುಡುಕಿಕೊಂಡು ಮದುವೆಯಾಗುವುದರಲ್ಲಿ ತಪ್ಪೇನೂ ಇಲ್ಲ. ಕೆಲವು ತಂದೆತಾಯಿಗಳಿಗೆ ಈ ವ್ಯವಸ್ಥೆ ದಿವ್ಯವಾದುದು. ಏಕೆಂದರೆ ಗಂಡು ಹುಡುಕುವ ಅಥವಾ ಹೆಣ್ಣು ಹುಡುಕುವ ಕೆಲಸ ತಪ್ಪುತ್ತದೆ. ನಾಳೆ ದಾಂಪತ್ಯದಲ್ಲಿ ಏನಾದರೂ ತೊಂದರೆಯಾದರೆ ತಮ್ಮನ್ನು ಜವಾಬ್ದಾರರನ್ನಾಗಿ ಮಾಡುವುದಿಲ್ಲವಲ್ಲವೆಂಬ ಭಾವ. ಆದರೆ ಈ ಸ್ವಾತಂಥ್ಯ್ರವಿಲ್ಲದಿದ್ದರೆ ತಂದೆತಾಯಿಗಳು ತಮ್ಮ ಮಕ್ಕಳಿಗೆ ಲೈಂಗಿಕ ವಿಚಾರಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಡಬೇಕಾಗಿದೆ. ಸಾಮಾಜಿಕ ಶಿಷ್ಟಾಚಾರಗಳ ಬಗ್ಗೆ ತಿಳಿಯ ಹೇಳಬೇಕಾಗುತ್ತದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರಾಯಕ್ಕೆ ಬರುತ್ತಿರುವ ಹುಡುಗ ಹುಡುಗಿಯರು ಹಾಗೂ ಲೈಂಗಿಕ ಸಂಬಂಧದ ಬಗ್ಗೆ ಹೆಚ್ಚು ಮುಕ್ತವಾದ, ಪೂರ್ವಾಗ್ರಹರಹಿತವಾದ ಒಂದು ಹೊಸ ದೃಷ್ಟಿಕೋನ ಸದ್ಯದ ಸಂದರ್ಭದಲ್ಲಿ ಮೂಡಿಬರಬೇಕಾದ ಅವಶ್ಯಕತೆಯಿದೆ.