“ಅಪ್ಪ ಅಮ್ಮ ಕೇಳಿದಷ್ಟು ಪಾಕೆಟ್‌ ಮನಿ ಕೊಟ್ಟು ಹಾಳು ಮಾಡ್ತಿದ್ದಾರೆ. ನೋಡಿ ಈ ಮಕ್ಕಳು ಎಷ್ಟು ದುಡ್ಡು ಖರ್ಚು ಮಾಡ್ತಾರೆ! ಕೇರೇ ಇಲ್ಲ ಅವಕ್ಕೆ. ಅವನು ಎಷ್ಟು ಹೊತ್ತಿಂದ ಮೊಬೈಲ್‌ನಲ್ಲಿ ಯಾರ ಜೊತೆಗೋ ಮಾತಾಡ್ತಿದ್ದಾನೆ. ದುಡ್ಡು ಎಷ್ಟು ಖರ್ಚಾಗಬಹುದು”- ಇದು ಸದ್ಯ ಎಲ್ಲೆಲ್ಲೂ ಕೇಳಿಬರುವ ಮಾತು. “ಮಕ್ಕಳ ಕೈಗೆ ದುಡ್ಡು ಕೊಡ್ತಾರೆ. ಬೇಕಾಬಿಟ್ಟಿ ಖರ್ಚುಮಾಡ್ತವೆ. ದುಡ್ಡು ಕೈಯಲ್ಲಿರಬಾರದು. ಈ ಹೊತ್ತಿನ ತಂದತಾಯಿಗಳು ಮಕ್ಕಳು ಕೇಳಿದ ಬೈಕ್‌, ಸ್ಕೂಟರ್, ಸೈಕಲ್‌ ಎಲ್ಲ ತೆಗೆಸಿಕೊಡ್ತಾರೆ.  ಅದೇ ಮಕ್ಕಳು ಹಾಳಾಗೋಕೆ ಕಾರಣ” – ಹೀಗೆ ವಾದಸರಣಿ ಮುಂದುವರಿಯುತ್ತದೆ. ಹಾಗಾದ್ರೆ ಮಕ್ಕಳಿಗೆ ದುಡ್ಡೇ ಕೊಡಬಾರದಾ? ಮತ್ತೆ ಅವರಿಗೆ ಯಾವುದಕ್ಕೆ ಖರ್ಚು ಮಾಡ್ಬೇಕು? ಹೇಗೆ ಖರ್ಚುಮಾಡ್ಬೇಕು? ಅಂತ ಗೊತ್ತಾಗೋದು ಹೇಗೆ?

ನಮ್ಮ ಬಾಲ್ಯದಲ್ಲಿ ದುಡ್ಡಿನ ಮುಖವನ್ನು ಕಂಡವರಲ್ಲ ನಾವು.  ನನಗಂತೂ ನನ್ನ ಬಾಲ್ಯದಲ್ಲಿ ನನ್ನ ಕೈಯಲ್ಲಿ ದುಡ್ಡು ಓಡಾಡಿದ್ದು ನೆನಪಿಲ್ಲ. ಐದರಿಂದ ಎಂಟನೇ ತರಗತಿವರೆಗೆ ನನ್ನ ಕೈಯಲ್ಲಿ ದುಡ್ಡಿರಲಿಲ್ಲ. ಯಾರೂ ನನಗೆ ದುಡ್ಡು ಕೊಡುತ್ತಿರಲಿಲ್ಲ. ನಾನು ಏಳನೇ ತರಗತಿಯಲ್ಲಿದ್ದಾಗ ಒಂದು ನಡೆಯದ ನಾಲ್ಕಾಣೆ ಪಾವಲಿ ನಡೆಸಿ ಬ್ರಹ್ಮಾವರದ ಸಿನೆಮಾ ಟಾಕೀಸಿನಲ್ಲಿ ‘ಭಕ್ತ ಕನಕದಾಸ’ ಸಿನೆಮಾ ನೋಡಿದ್ದೆ!
ಮುಂದೆ ಎಂಟನೇ ಕ್ಲಾಸಿನಲ್ಲಿ ಒಂದಿಷ್ಟು ದುಡ್ಡು ಗೋಲಕದಲ್ಲಿ ಕೂಡಿಹಾಕಿದ್ದೆ. ಆಮೇಲೆ ಆ ದುಡ್ಡು ಏನಾಯಿತು? ನನಗೆ ತಿಳಿಯದು. ಪದವಿಪೂರ್ವ ಹಂತದಿಂದ ಪದವಿವರೆಗಿನ ವ್ಯಾಸಂಗದ ನಾಲ್ಕು ವರ್ಷ ಉಡುಪಿಯಲ್ಲಿ ವಾಸ. ಮಠದಲ್ಲಿ ಊಟ. ಒಂದೊಂದು ಸಲ ಬೆಳಿಗ್ಗೆ ಮತ್ತು ಸಂಜೆ ರಥಬೀದಿಯ ಮಿತ್ರಸಮಾಜದಲ್ಲಿ ಕಾಫಿತಿಂಡಿಗೆ ತಲಾ ೧೨ ಪೈಸೆ ಖರ್ಚು ಮಾಡುತ್ತಿದ್ದೆ. ಆಗಾಗ್ಗೆ ಸಿನೆಮಾಕ್ಕೂ ಹೋಗುತ್ತಿದ್ದೆ. ಪಿ.ಯು.ಸಿ.ಗೆ ಸೇರಿಸುವಾಗ ತಂದೆಯವರು ಎರಡು ಟರ್ಲಿನ್‌ ಶರಟು, ಎರಡು ಪೈಜಾಮ ಹೊಲಿಸಿಕೊಟ್ಟಿದ್ದರು. ವಾಚ್‌ ಇರಲಿಲ್ಲ. ಪ್ಯಾಂಟು ಇರಲಿಲ್ಲ. ಖರ್ಚಿಗೆಂದು ತಿಂಗಳಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡುತ್ತಿದ್ದರು. ಆದರೆ ಅದರಲ್ಲಿ ಕ್ಲಪತೆ ಇರುತ್ತಿರಲಿಲ್ಲ. ಹೀಗಾಗಿ ಮಠದಲ್ಲಿ ಪುಟ್ಟಣ್ಣ ಮತ್ತು ಎಚ್ಚಣ್ಣ ಅಂತ ಅವರಲ್ಲಿ ಕೈಕಡ ತೆಗೆದುಕೊಳ್ಳುತ್ತಿದ್ದೆ. ತಂದೆಯವರ ಮನಿಯಾರ್ಡರ್ ಹಣ ಸಾಲತೀರಿಸಲಿಕ್ಕೆ ಸರಿಹೋಗುತ್ತಿತ್ತು. ಮತ್ತೆ ಕೈಯಲ್ಲಿ ಹಣವಿಲ್ಲ. ಪುನಃ ಅವರಿವರಲ್ಲಿ ಸಾಲ. ಹೀಗೆ ಸಾಲದಲ್ಲೇ ಬದುಕು!

ಬಾಟನಿಲ್‌ ಟೂರ್ ಹೋದಾಗ, ಪ್ಯಾಂಟ್‌ ಸಾಲ, ಸ್ವೆಟರ್ ಸಾಲ! ಉದ್ಯೋಗಕ್ಕೆ ಸೇರಿದ ಮೇಲೆ ಮೊದಲ ತಿಂಗಳ ಸಂಬಳದಲ್ಲಿ ವಾಚು ಕೊಂಡುಕೊಂಡೆ. ಪ್ಯಾಂಟು ಶರ್ಟು ಹೊಲಿಸಿದೆ! ಮಾನವತಾವಾದಿ ಮನೋವಿಜ್ಞಾನಿ ಅಬ್ರಹಾಂ ಮ್ಯಸ್ಲೊ ಅಗತ್ಯಗಳ ಬಗ್ಗೆ ಮಾತನಾಡುತ್ತಾ ಕೊರತೆ ಅಗತ್ಯಗಳು ಎನ್ನುತ್ತಾನೆ. ಬಾಲ್ಯ ಹಾಗೂ ತಾರುಣ್ಯದ ಕೊರತೆ ಅಗತ್ಯಗಳನ್ನು ಈಗಲೂ ನಾನು ಬೇರೆ ಬೇರೆ ರೂಪಗಳಲ್ಲಿ ಪೂರೈಸಿಕೊಳ್ಳಲು ಯತ್ನಿಸುತ್ತಿರುತ್ತೇನೆ. ಹತ್ತಾರು ಚಪ್ಪಲಿಗಳು, ಹತ್ತಾರು ಪ್ಯಾಂಟು ಶರ್ಟ್‌ಗಳು, ಹತ್ತೈವತ್ತು ತರಹೆವಾರಿ ಪೆನ್ನುಗಳು – ಇತ್ಯಾದಿಗಳನ್ನು ಅನಗತ್ಯವಾಗಿ ಕೊಂಡುಕೊಳ್ಳುವ ಮೂಲಕ! ನಾನು ಓದುತ್ತಿದ್ದಾಗ ಚಿಕ್ಕಪ್ಪನೋ ದೊಡ್ಡ ಮಾವನೋ ಯಾರಾದರೂ ಉಡುಪಿಯಲ್ಲಿ ನನ್ನನ್ನು ಭೆಟ್ಟಿಯಾದಾಗ ಹತ್ತೋ ಇಪ್ಪತ್ತೋ ರೂಪಾಯಿ ನನ್ನ ಕೈಗಿಡುತ್ತಿದ್ದರು. ಅದನ್ನು ಕಂಡಾಗ ನನಗೆಷ್ಟು ಖುಷಿಯಾಗುತ್ತಿತ್ತು! ಒಂದೆರಡು ದಿನಗಳಲ್ಲಿ ಅದು ಹುಡಿಯಾಗುತ್ತಿತ್ತು. ಆದರೂ ಅವರು ನನಗೆ ದುಡ್ಡು ಕೊಟ್ಟರಲ್ಲ ಎಂಬ ಸಂತೋಷ ಮತ್ತು ಅಪಾರ ಕೃತಜ್ಞತಾಭಾವ. ನಾನು ಬಹುಶಃ ಪದವಿಪೂರ್ವ ಹಂತದಲ್ಲಿ ಇರುವಾಗಲೋ ಅಥವಾ ಪ್ರಥಮ ಬಿ.ಎಸ್‌ಸಿ. ಓದುವಾಗಲೋ ಒಮ್ಮೆ ಭೋಜನಶಾಲೆಯಲ್ಲಿ ಏಕಾದಶಿ ದಿವಸ ಊಟವಿಲ್ಲದಿದ್ದರಿಂದ ನನ್ನ ದೊಡ್ಡಮ್ಮನ (ತಾಯಿಯ ಅಕ್ಕ) ಮನೆಗೆ ಊಟಕ್ಕೆ ಹೋಗಿದ್ದಾಗ ದೊಡ್ಡಮ್ಮನ ಮಗ (ಅಣ್ಣ) ಈಗ ಖ್ಯಾತ ವಿಮರ್ಶಕ ಶ್ರೀ ಜಿ. ರಾಜಶೇಖರ ನನಗೆ ರೂ.  ನೂರು ಕೊಟ್ಟಿದ್ದ. ದ್ವಾದಶಿ ಊಟ ಮುಗಿಸಿ ಮರಳಿ ಮಠಕ್ಕೆ ಬಂದೆ. ಎರಡು ಮೂರು ದಿನಗಳಲ್ಲಿ ಆ ದುಡ್ಡನ್ನು ಮಠದಲ್ಲಿ ಯಾರೋ ಕದ್ದರು. ಇನ್ನೊಂದು ಸಲ ರಾಜಶೇಖರ ಸಿಕ್ಕಿದಾಗ ‘ದುಡ್ಡು ಏನು ಮಾಡಿದೆ?’ ಎಂದು ಕೇಳಿದ. ನಾನು ಕಳವಾದ ವಿಷಯ ತಿಳಿಸಿದೆ. ಅವನು ಮತ್ತೆ ನೂರು ರೂ. ಕೊಟ್ಟ. ಜಾಗ್ರತೆ ಮಾಡು ಎಂದ!

ಇಂದಿನ ಪ್ರಪಂಚದಲ್ಲಿ ಹಣ ಕಂಡರೆ ಹೆಣವೂ ಬಾಯಿಬಿಡುತ್ತದಂತೆ.  ಇಂದು ಎಲ್ಲವನ್ನೂ ಹಣದಿಂದಲೆ ಅಳೆಯಲಾಗುತ್ತದೆ. ಹೀಗಿರುವಾಗ ಹಣಸಂಪಾದನೆ ಮಾಡುವುದು ಹೇಗೆ? ಮಿತವಾಗಿ ಖರ್ಚುಮಾಡುವುದು ಹೇಗೆ? ಕೊಂಡುಕೊಳ್ಳುವಾಗ ಯಾವುದಕ್ಕೆ ಆದ್ಯತೆ ನೀಡಬೇಕು? ದುಡ್ಡಿದೆ ಎಂದು ದರ್ಬಾರು ಮಾಡಬೇಕೆ? ನಾಳೆಗಾಗಿ ಹಣ ಉಳಿಸಬೇಡವೆ? ಉಳಿಸುವ ಬಗೆ ಹೇಗೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಕ್ಕಳು ಯೋಚಿಸುವ ಹಾಗೆ ಆಗಬೇಕು. ಅವರಿಗೂ ಹಣಕಾಸಿನ ಸ್ಥಿತಿಗತಿಗಳ ಅರಿವಿರಬೇಕು. ತಮ್ಮ ತಂದೆ ಎಲ್ಲಿ ಕೆಲಸ ಮಾಡ್ತಾರೆ? ಏನು ಕೆಲಸ ಮಾಡ್ತಾರೆ? ಎಷ್ಟು ಸಂಬಳ ಬರಬಹುದು? ಎಂಬುದರ ಅರಿವು ಮಕ್ಕಳಿಗಿರುವುದಿಲ್ಲ. ತಮ್ಮ ತಂದೆ ಬಹಳ ಕಷ್ಟಪಟ್ಟು ಕೂಲಿನಾಲಿ ಮಾಡಿಸಿ ತಮ್ಮನ್ನು ಓದಿಸುತ್ತಿದ್ದಾರೆ ಎಂಬ ಅರಿವು ಅನೇಕರಿಗಿಲ್ಲ. ಒಂದೊಮ್ಮೆ ಆ ಅರಿವು ಮೂಡಿದರೆ ಅವರ ಅಧ್ಯಯನವು ಹೆಚ್ಚು ಗುರಿನಿರ್ದೇಶಿತವಾಗಿರುತ್ತದೆ.

ಮಕ್ಕಳಿಗೆ ತಮಗೆ ಬೇಕಾದ ಬಟ್ಟೆಬರೆ, ಸೋಪು, ಸುಗಂಧದ್ರವ್ಯ ಇತ್ಯಾದಿ ಕೊಂಡುಕೊಳ್ಳಲು ಅವರಿಗೇ ಒಂದಿಷ್ಟು ಹಣಕೊಟ್ಟು ಅವರಲ್ಲಿ ಜವಾಬ್ದಾರಿ ಪ್ರಜ್ಞೆ ಮೂಡಿಸಬಹುದು. ಕೆಲವು ಮಕ್ಕಳು ತಿಂಗಳು ಅಪ್ಪ ಅಮ್ಮ ಕೊಟ್ಟ ಹಣವನ್ನು ನೀರಿನಂತೆ ಪೋಲುಮಾಡುವ ಅಪಾಯ ಇಲ್ಲದಿಲ್ಲ. ಆದರೆ ಅನೇಕ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಹಣದ ಖರ್ಚಿನ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತಾರೆ. ಅವರಿಗೇ ಜವಾಬ್ದಾರಿ ವಹಿಸಿಕೊಟ್ಟಾಗ ಆದ್ಯತೆಗಳನ್ನು ಅರಿತುಕೊಳ್ಳುತ್ತಾರೆ. ಯಾವುದನ್ನು ಸದ್ಯ ಕೊಂಡುಕೊಳ್ಳಬೇಕು? ಯಾವುದು ಸದ್ಯಕ್ಕೆ ಅಗತ್ಯವಿಲ್ಲ? ಎಷ್ಟು ಖರ್ಚು ಮಾಡಬೇಕು? ಎಷ್ಟು ಮಾಡಬಾರದು? ಎಂಬುದನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತಾರೆ. ಅನಗತ್ಯವಾಗಿ ಹಣ ವೆಚ್ಚಮಾಡಿದರೆ ಅಥವಾ ಯಾವುದಾದರು ಒಂದು ವಸ್ತುವಿಗೆ ದುಬಾರಿ ಬೆಲೆ ತೆತ್ತರೆ ನೊಂದುಕೊಳ್ಳುತ್ತಾರೆ.

ನನ್ನ ಮಗಳ ವಿಷಯದಲ್ಲೇ ನಾವು ಆಗೊಮ್ಮೆ ಈಗೊಮ್ಮೆ ಕೊಡುತ್ತಿದ್ದ ‘ಭಕ್ಷೀಸು’, ನೆಂಟರಿಷ್ಟರು ಕೈಗೆ ಇಡುತ್ತಿದ್ದ ಹಣ ಎಲ್ಲ ಒಟ್ಟುಮಾಡಿ ನಾನು ಅವಳ ಹೆಸರಿನಲ್ಲ ಅಂಚೆ ಕಛೇರಿಯಲ್ಲಿ ಒಂದು ಉಳಿತಾಯ ಖಾತೆ ಪ್ರಾರಂಭಿಸಿದೆ. ಅದರಲ್ಲಿ ಸಾಕಷ್ಟು ನಿಧಿ ಕ್ರೋಡೀಕರಿಸಿದ ಮೇಲೆ ಕುತ್ತಿಗೆಗೊಂದು ಸರ ಮಾಡಿಸಿದೆ. ಅವಳಿಗೆ ಇದು ತನ್ನ ಹಣ; ತನಗೆ ಒದಗಿಬಂದ ಹಣ ಎಂಬ ಭಾವನೆ ಬೆಳೆಯಿತು. ಹಣವನ್ನು ಹಾಗೆಲ್ಲ ದುಂದುವೆಚ್ಚ ಮಾಡಬಾರದು’ ಎಂಬ ಭಾವನೆ ಬೆಳೆಯಿತು. ಶಾಲೆಗೆ ಹೋಗುವಾಗ ತನಗೆ ಬೇಕಾದಷ್ಟೇ ಹಣ ಕೇಳಿ ಪಡೆಯುತ್ತಿದ್ದಳು. ತನ್ನಲ್ಲಿರುವ ಹಣವನ್ನು ಅನಗತ್ಯವಾಗಿ ವೆಚ್ಚಮಾಡುತ್ತಿರಲಿಲ್ಲ. ಮುಂದೆ ಅವಳು ಎಂಜಿನಿಯರಿಂಗ್‌ ಓದಲು ಮೈಸೂರಿಗೆ ಹೋದಾಗ ಬ್ಯಾಂಕು ವ್ಯವಹಾರ ಎಲ್ಲ ಅವಳು ಮಾಡಲು ಕಲಿತಳು. ಖಾತೆಯಲ್ಲಿ ಸಾವಿರಾರು ರೂಪಾಯಿ ಇದ್ದರೂ ಖರ್ಚಿಗೆ ಎಷ್ಟು ಬೇಕೋ ಅಷ್ಟೇ ಹಣ ತೆಗೆಯುತ್ತಿದ್ದಳು. ‘ಸ್ವಲ್ಪ ಜಾಸ್ತಿ ಹಣ ಕೈಲಿರಲಿ ಕಣೇ’ ಅಂತ ಅವಳ ಅಮ್ಮ ತಾಕೀತು ಮಾಡಿದರೂ ಕೇಳುವುದಿಲ್ಲ.  ಬ್ಯಾಂಕಿನಿಂದ ಹಣ ತೆಗೆಯುವ ಮೊದಲು ಅಥವಾ ಆಮೇಲೆ ‘ಇಷ್ಟು ಹಣ ತೆಗೆದೆ’ ಅಂತ ಹೇಳುವುದು ಅವಳ ಕ್ರಮ. ‘ನಿನಗೆ ಎಷ್ಟು ಬೇಕೋ ಅಷ್ಟು ತೆಗಿ. ಅದಕ್ಯಾಕೆ ನನ್ನ ಅನುಮತಿ?’ ಅಂತ ಹೇಳಿದರೆ ‘ಅಲ್ಲ, ನಿಮಗೆ ಗೊತ್ತಗಬೇಕು’ ಅಂತ ಅವಳ ಉತ್ತರ. ಹೀಗೆ ಹಣಕಾಸಿನ ವಿಷಯದಲ್ಲಿ ಅವಳು ಒಂದು ಪ್ರಜ್ಞೆಯನ್ನು ರೂಢಿಸಿಕೊಂಡಿರುವುದು ಸಂತಸದ ವಿಷಯ.

*

ಮಕ್ಕಳು, ಮಕ್ಕಳ ಹಕ್ಕುಗಳು, ಅವರ ಸ್ವಾಯತ್ತೆ ಕುರಿತಾಗಿ ಅನೇಕ ಸಂಗತಿಗಳನ್ನು ನಾವು ಚರ್ಚಿಸಿದೆವು. ಇವೆಲ್ಲ ಅವರ ಬದುಕಿಗೆ ಅಗತ್ಯವಾದ ಪಾಠಗಳು. ಸುಂದರ ಬದುಕು ನಡೆಸಲು ಬೇಕಾದ ಜೀವನಕೌಶಲಗಳು. ಇಂದು ಕರ್ನಾಟಕದಲ್ಲಿ ಶಾಲಾ ಹಂತದಲ್ಲಿ ಪಠ್ಯಕ್ರಮದಲ್ಲಿ ‘ಬಿ’ ವಿಭಾಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಪಾದಿಸಿದ ಹತ್ತು ಜೀವನ ಕೌಶಲಗಳ ಪ್ರಾಯೋಗಿಕ ಕಲಿಕೆಗೆ ಆಸ್ಪದ ಮಾಡಿಕೊಡಲಾಗಿದೆ. ಸೃಜನಾತ್ಮಕ ಚಿಂತನ, ವಿಮರ್ಶಾತ್ಮಕ ಚಿಂತನ, ಆತ್ಮಜಾಗೃತಿ,ಅನುಭೂತಿ, ಸಂವಹನ ಕೌಶಲಗಳು, ಸಮಸ್ಯಾ ಪರಿಹಾರ ಕೌಶಲಗಳು, ಸ್ವಯಂ ನಿರ್ಧಾರ ಕೌಶಲ, ಭಾವನಿಯಂತ್ರಣ,  ಬಿಕ್ಕಟ್ಟು ನಿರ್ವಹಣೆ, ಪರಸ್ಪರ ಸಂಬಂಧಗಳ ಕೌಶಲ-ಮುಂತಾದ ಕೌಶಲಗಳ ಪ್ರಸ್ತಾಪ ಮಾತ್ರವಿದೆ. ಆದರೆ ಅವುಗಳ ಪ್ರಾಯೋಗಿಕ ಕಲಿಕೆ-ಗಳಿಕೆ-ಪ್ರಾತ್ಯಕ್ಷಿಕತೆಗೆ ಒಂದಿಷ್ಟೂ ಎಡೆಯಿಲ್ಲವಾಗಿದೆ. ಶಿಕ್ಷಕರು ಕೂಡ ಈ ಕೌಶಲಗಳನ್ನು ಪೂರ್ತಿಯಾಗಿ ಕಡೆಗಣಿಸಿದ್ದಾರೆ. ಪಾಲಕರಿಗೆ ಇಂಥ ಕೌಶಲಗಳಿವೆ ಎಂಬ ಅರಿವೇ ಇಲ್ಲ! ಇವೆಲ್ಲ ಪರೀಕ್ಷೆಗೆ ಇಲ್ಲದ, ಫಲಿತಾಂಶದ ಮೇಲೆ ಪ್ರಭಾವ ಬೀರದ ಸಂಗತಿಗಳಾದ್ದರಿಂದ ಶಿಕ್ಷಣ ಇಲಾಖೆ, ಶಾಲೆಗಳವರು ಹಾಗೂ ಸಾರ್ವಜನಿಕರು ಯಾರೂ ಈ ಕೌಶಲಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಪ್ರತಿನಿತ್ಯ ದೇವರಪೂಜೆ ವೇಳೆ ಬಿಸುಡುವ ನಿರ್ಮಾಲ್ಯದಂತೆ. ಪೂಜೆಯ ವೇಳೆ ಅರ್ಚಕರಾದರೊ ಬಾಡಿದ ಹೂವುಗಳನ್ನು ಮರುದಿನ ಕಸದ ಬುಟ್ಟಿಗೆ ಎಸೆಯುತ್ತಾರಾದರೂ ಇಂದು ಭಕ್ತಿಯಿಂದ ಹೂಗಳನ್ನು ದೇವರ ಮುಡಿಗೇರಿಸುತ್ತಾರೆ! ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಈ ಕೌಶಲಗಳು ಯಾರಿಗೂ ಬೇಡದ ವಸ್ತುಗಳಾಗಿವೆ!

ನಮ್ಮ ಶಾಲೆಗಳು ಮಕ್ಕಳಲ್ಲಿ ಬಿಂಬಿಸುತ್ತಿರುವ ಮೌಲ್ಯಗಳು ಹಾಗೂ ಮನೋಭಾವಗಳು ಸುಲಭದಲ್ಲಿ ಬದಲಾಗುತ್ತಿಲ್ಲ. ಈ ಬಗ್ಗೆ ನಾವು ದಶಕಗಳಿಂದಲೂ ಮಾತಾಡುತ್ತಲೇ ಇದ್ದೇವೆ. ನಮ್ಮ ಸಾಮಾಜಿಕ ಜೀವನದಲ್ಲಿ, ಖಾಸಗಿ ಬದುಕಿನಲ್ಲಿ, ಶಾಲಾಜೀವನದಲ್ಲಿ ಮಕ್ಕಳಿಗೆ ಹೆಚ್ಚಿನ ಸ್ವಾತಂತ್ಯ್ರ ನೀಡಬೇಕಾದ ಬಗ್ಗೆ ನಾವು ಹೊಸ ಅರಿವಿನೊಂದಿಗೆ ಈಗ ಮಾತಾಡಬೇಕಾಗಿದೆ; ಕಾರ್ಯಪ್ರವೃತ್ತರಾಗಬೇಕಾಗಿದೆ.

ದುರದೃಷ್ಟದ ಸಂಗತಿಯೆಂದರೆ ನಮ್ಮ ಮಕ್ಕಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು, ಸಾಮಾಜಿಕ ರಂಗದ ಬಗ್ಗೆ ಆಸಕ್ತಿ ತಳೆಯಲು ಬೇಕಾದ ಅವಕಾಶಗಳನ್ನು ಕಲ್ಪಿಸುವಲ್ಲಿ ವಿಫಲರಾಗುತ್ತಿದ್ದೇವೆ. ಇತರರ ಜೊತೆ ಹೇಗೆ ನಡೆದುಕೊಳ್ಳಬೇಕು, ಹೇಗೆ ದುಡಿಯಬೇಕು ಎಂಬುದನ್ನು ಶಾಲೆಗಳು ಹೇಳಿಕೊಡುತ್ತಿಲ್ಲ. ದಿನದ ಬಹುಹೊತ್ತು ಶುಷ್ಕ ಬೋಧನೆ, ಪಾಠಪುಸ್ತಕ ಕೇಂದ್ರಿತ ಬೋಧನೆಗೆ ಶಾಲೆ ತನ್ನನ್ನು ತಾನು ಸೀಮಿತ ಗೊಳಿಸಿರುವುದು ಮಕ್ಕಳು ಸಮಾಜಮುಖಿಯಾಗದಂತೆ ಜೀವನಮುಖಿಯಾಗದಂತೆ ನಿರ್ಬಂಧಿಸುತ್ತಿದೆ. ನಿಜವಾದ ಜೀವನಕೌಶಲಗಳನ್ನು ಅವು ದಾಟಿಸುತ್ತ ಇಲ್ಲ. ಪ್ರಾಯಃ ಈ ಸಂದರ್ಭದಲ್ಲಿ ಸಮಾಜ ವಿಜ್ಞಾನಿ ಜೇಮ್ಸ್‌ ಕೋಲ್‌ಮನ್‌ ಸೂಚಿಸುವ ಅತ್ಯುತ್ತಮ ಪರಿಹಾರ ಹೀಗಿದೆ: ಶಾಲಾ ಅವಧಿಯನ್ನು ಕಡಿತಗೊಳಿಸಿ ದುಡಿಮೆಯ ಜೊತೆಗೆ ವ್ಯಾಸಂಗ ಮಾಡುವ ಅವಕಾಶವನ್ನು ಹೆಚ್ಚಿಸುವುದು. ವಿವಧ ಹಿನ್ನೆಲೆ ಹಾಗೂ ವಯೋಮಾನಗಳ ಜನರ ಜೊತೆ ಸೇರಿಕೊಂಡು ಗಂಭೀರವೂ ಜವಾಬ್ದಾರಿಯುತವೂ ಆದ ಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿ ಅವರಲ್ಲಿ ಪ್ರಬುದ್ಧತೆಯನ್ನು ಬೆಳೆಸುವುದು. ಇದರಿಂದ ಶಾಲೆ  ಮಕ್ಕಳಲ್ಲಿ ತುಂಬುತ್ತಿರುವ ನಿಷ್ಕ್ರಿಯತೆ ಹಾಗೂ ಪ್ರತ್ಯೇಕತೆಯನ್ನು ಹೊಡೆದೋಡಿಸಲು ಸಾಧ್ಯವಾಗುತ್ತದೆ. ಹೀಗೆ ಮಾಡಿದಾಗ ಮಕ್ಕಳು ಹಾಗೂ ಹದಿಹರೆಯದವರು ಒಂದಷ್ಟು ಹೊತ್ತು ಕೆಲಸಮಾಡಿ ಒಂದಿಷ್ಟು ಸಂಪಾದಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಹಣಕಾಸನ್ನು ಕೂಡಿಡಬಹುದು. ತಂದೆ ತಾಯಿಗಳು ಕೂಡ ಹೆಚ್ಚು ಚಿಂತಿಸಬೇಕಾದ್ದಿಲ್ಲ. ಮೇಲಾಗಿ ದುಡಿಯುವುದರ ಜೊತೆಗೆ ವ್ಯಾಸಂಗ ಮುಂದುವರಿಸುವ ಪ್ರಕ್ರಿಯೆಯಿಂದಾಗಿ ಶಾಲಾಪಾಠ ವಿಷಯಗಳನ್ನು ಲೋಕಜ್ಞಾನದ ಬೆಳಕಿನಲ್ಲಿ ಹೆಚ್ಚು ಚೆನ್ನಾಗಿ ಅರ್ಥೈಸಿಕೊಳ್ಳಬಹುದು. ಮಕ್ಕಳು ಕೆಲಸ ಮಾಡುವುದನ್ನು ‘ಬಾಲದುಡಿಮೆ’ ಹಿರಿಯರಿಂದ ಶೋಷಣೆ ಎಂದು ಪರಿಗಣಿಸಬೇಕಾಗಿಲ್ಲ. ಏನನ್ನೂ ಓದಲು ಅವಕಾಶಕೊಡದೆ ಬೆಳಗ್ಗಿನಿಂದ ಸಂಜೆತನಕ ಒಂದೇಸವನೆ ದುಡಿಸುವುದು ‘ಬಾಲದುಡಿಮೆ’ ಶೋಷಣೆಯೇ ಹೊರತು ‘ಕಲಿಕೆ-ಗಳಿಕೆ’ ಯೋಜನೆ ಖಂಡಿತ ಶೋಷಣೆಯಲ್ಲ. ಬದಲಾಗಿ ಅದು ವ್ಯಕ್ತಿಗೌರವವನ್ನು ಪೋಷಿಸುವ ಒಂದು ವಿಶಿಷ್ಟ ಯೋಜನೆ. ಈ ಯೋಜನೆಗೆ ಸರಕಾರ, ಸ್ವಯಂಸೇವಾ ಸಂಸ್ಥೆಗಳು, ಖಾಸಗಿ ಸಂಸ್ಥೆಗಳಲು, ತಂದತಾಯಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು.

ಮಕ್ಕಳು ಹೆಚ್ಚು ಹೆಚ್ಚು ಸ್ವತಂತ್ರರಾಗಿ ವ್ಯವಹರಿಸಲು, ತಮ್ಮ ಆರ್ಥಿಕ ವ್ಯವಹಾರವನ್ನು ತಾವೇ ನಿಭಾಯಿಸಲು , ತಮ್ಮ ಇಷ್ಟದ ವ್ಯಾಸಂಗಕ್ರಮವನ್ನು ತಾವೇ ಆಯ್ಕೆಮಾಡಿಕೊಳ್ಳಲು, ತಮ್ಮ ಬಟ್ಟೆಬರೆ, ಆಹಾರವಿಹಾರ , ಗೆಳೆಯರು, ಆಸಕ್ತಿಗಳು ಇತ್ಯಾದಿಗಳನ್ನು ತಾವೇ ಆಯ್ದುಕೊಳ್ಳಲು ಹಿರಿಯರು ಅವರಿಗೆ ಅಧಿಕ ಸ್ವಾಯತ್ತೆ ನೀಡಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಅಧಿಕವಾಗಿದೆ. ಸ್ವಾಯತ್ತೆ ಎಂಬುದು ಸ್ವಚ್ಛಂದತೆ ಆಗದಂತೆ, ತಿಳಿವಳಿಕೆಯುತ ಆಯ್ಕೆಯಾಗುವಂತೆ, ಜವಾಬ್ದಾರಿಯುತ ಬಿಡುಗಡೆ ಆಗುವಂತೆ ನೋಡಿ ಕೊಳ್ಳಬೇಕಾದ ಹೊಣೆಗಾರಿಕೆ ಹಿರಿಯರು ಹಾಗೂ ಕಿರಿಯರು ಇಬ್ಬರ ಮೇಲೂ ಇದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಆಧುನಿಕ ಕಾಲದ ಬಾಲ್ಯ ಕಿರಿಯರಿಗೂ ಹಿರಿಯರಿಗೂ ತ್ರಾಸದಾಯಕವೇ ಸರಿ. ಆಧುನಿಕ ಮಾಧ್ಯಮಗಳ ಸ್ಫೋಟದ ಈ ಕಾಲದಲ್ಲಿ ಆಧುನಿಕ ವಿದ್ಯಮಾನಗಳನ್ನು, ಜವಾಬ್ದಾರಿಗಳನ್ನು, ಒತ್ತಡಗಳನ್ನು ಸರಿಯಾದ ಪರಿಪ್ರೇಕ್ಷ್ಯದಲ್ಲಿ ಗ್ರಹಿಸಿದರೆ ನಮ್ಮ ಮಕ್ಕಳ ಬಾಲ್ಯ ಹೊಸ ಅರ್ಥದ ಹೊಗರಿನೊಂದಿಗೆ ಬೆಳಗಲಿದೆ.