ಬಾರದಿರು ಉಲ್ಕೆಯಂತೆ
ನೀನು ನನ್ನ ಬಾನಿಗೆ-
ಧೂಳೆಬ್ಬಿಸಬೇಡ ಇನ್ನು
ತಾರಾಪಥ ಮೌನಕೆ.

ಮೋಡವಿರದ ಬಾನ ತುಂಬ
ಹುಣ್ಣಿಮೆಯೇ ಹರಿದಿದೆ
ಬೆಳುದಿಂಗಳ ಹಾಲಿನಲ್ಲಿ
ಕರಗಿ ಚಿಕ್ಕೆ ಸಕ್ಕರೆ
ತುಂಬಿ ತುಳುಕಿ ಸೂಸುತಲಿದೆ
ಸಿಹಿಯಾಗಿರುವಕ್ಕರೆ.

ಬಾರದಿರು ಉಲ್ಕೆಯಾಗಿ
ನೀನು ನನ್ನ ಬಾನಿಗೆ-
ಬೆಂಕಿ ಪೊರಕೆಯಿಂದ ಗುಡಿಸಬೇಡ ನೀನು ನನ್ನ
ನೀಲ ಪಥದ ಮೌನವ
ಇಲ್ಲಿ ಎಲ್ಲ ನಡೆಯುತಲಿವೆ
ಹಿಡಿದು ಮಿಡಿದು ಯಾವುದೋ ಒಂದು ರಾಗ ತಾಳವ.

ಬಾರದಿರು ಉಲ್ಕೆಯಂತೆ
ನೀನು ನನ್ನ ಬಾನಿಗೆ-
ಚಿಕ್ಕೆಯಾಗು, ಹಕ್ಕಿಯಾಗು
ಮಿನುಗು, ಹಾಡು ತಣ್ಣಗೆ
ಹೊಗೆ ಕಾರುವ ಗುಡುಗಾಡುವ
ಕಿಡಿ ಸೂಸುವ ರಭಸಕೆ
ಇಲ್ಲ ಇಲ್ಲಿ ನಿಲುಗಡೆ
ಅದರ ದಾರಿ ಕೆಳಗಡೆ !