‘ಬಾರಯ್ಯ ಬೆಳುದಿಂಗಳೇ
ನಮ್ಮೂರ ಹಾಲಿನಂಥ ಬೆಳುದಿಂಗಳೇ’-

ಎಂದೋ ಯಾವನೋ ಹಳ್ಳಿಯ ಮುಕ್ಕ
ಕಟ್ಟಿದ್ದ ಕಗ್ಗ.
ನಮ್ಮೂರ ಹಾಲನ್ನು ಅವನು ಕಂಡಿರಲಿಲ್ಲ.
ಕಂಡಿದ್ದರೀರೀತಿ ಹಾಡುತ್ತಲೇ ಇರಲಿಲ್ಲ.
ಪಾಪ, ಆ ಅವನು ಕಂಡದ್ದು ಕುಡಿದದ್ದು
ನಿಜವಾದ ಹಾಲು!
ಆ ಅದೇ ಹಾಡ ಹಾಡಿರುವವನ ಮರಿಮಗನೊ ಗಿರಿಮಗನೊ
ನಮಗೀಗ ಹಾಲು ಕರೆಯುತ್ತಿದ್ದಾನೆ; ಅದರ ಸವಿ ನಮಗೆ ಗೊತ್ತು:
ಬೆಳಗಾಗ ನಲ್ಲಿನೀರಿನ ಸಹಾನುಭೂತಿಯನು ಹೊತ್ತು
ತುಂಬಿ ತುಳುಕುವುದು ಹಾಲಿನ ಪಾತ್ರೆ.
ಹಂಸ-ಕ್ಷೀರನ್ಯಾಯಕ್ಕೆ ಇಂದಿಗೂ ಉಂಟು ಅವಕಾಶ:
ನೋಡಿ, ಶಕ್ತಿಯಿದ್ದರೆ ಕುಡಿದು ತೀರ್ಮಾನಿಸಿ
ಇದರಲ್ಲಿ ಹಾಲೆಷ್ಟು? ನೀರೆಷ್ಟು?
ಅದ್ವೈತ ಸಿದ್ಧಾಂತದಲಿ ಹೇಳಿದೆ:
‘ಸರ್ವಂ ಖಲ್ವಿದಂ ಬ್ರಹ್ಮಾ’
ಹಾಲೇನು ನೀರೇನು- ಎರಡೂ ಒಂದೆ ಭ್ರಮಾ!

ಈಗಲೂ ನಮ್ಮೂರ ಹಾಲು ನಮ್ಮೂರ ಬೆಳ್ದಿಂಗಳಿಗೆ
ಉಪಮಾನವಾಗದೆಯೆ ಹೋಗುವುದಿಲ್ಲ.
ಬೆಳ್ದಿಂಗಳೂ ಕೂಡ ನೀರಾಗಿ ಹೋಗಿದೆಯಯ್ಯ ಇತ್ತೀಚೆಗೆ.
ಅವತ್ತಿನ ಹಾಲೂ ಇಲ್ಲ, ಅವತ್ತಿನ ಬೆಳ್ದಿಂಗಳೂ ಇಲ್ಲ,
ಉಪಮಾನ ಉಪಮೇಯವೆರಡಕ್ಕೂ ಏನೆಂಥ ದುಃಸ್ಥಿತಿ!
ಈಗಲೋ ವಿದ್ಯುದ್ದೀಪಗಳ ನೀರು ಬೆರೆತ ಬೆಳ್ದಿಂಗಳು
ನಮ್ಮೂರಿನ ಮೇಲೆ!
ಇಂಥ ಈ ಬೆಳ್ದಿಂಗಳಿರುಳಿನಲಿ ಮೊಳಗುತಿದೆ
ಧ್ವನಿಮುದ್ರಿಕೆಯ ಕೊರಳಿಂದ ಜನಪದಗೀತೆ:
‘ಬಾರಯ್ಯ ಬೆಳುದಿಂಗಳೇ- ನಮ್ಮೂರ
ಹಾಲಿನಂಥ ಬೆಳುದಿಂಗಳೇ.’