ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವರು ಅದೆಷ್ಟೋ ಮಂದಿ. ಲಕ್ಷಾವಧಿ ಜನ ತಮ್ಮ ತನು – ಮನ – ಧನಗಳನ್ನು ಧಾರೆಯೆರೆದು, ಭಾರತವನ್ನು ದಾಸ್ಯಮುಕ್ತವನ್ನಾಗಿ ಮಾಡಲು ಹೋರಾಟ ನಡೆಸಿದ್ದಾರೆ. ಅಂತಹವರಲ್ಲಿ ಅಗ್ರಗಣ್ಯರು ಡಾಕ್ಟರ್ ಬಾಲಕೃಷ್ಣ ಶಿವರಾಮ ಮೂಂಜೆ.

ಜನನ ಬಾಲ್ಯ

ಬಾಲಕೃಷ್ಣ ೧೭೯೫ನೆಯ ಶಕ ವರ್ಷದ ಮಾರ್ಗಶಿರ ಮಾಸ ಶುದ್ಧ ಅಷ್ಟಮಿಯ ದಿನ ಅಂದರೆ ೧೮೭೨ನೆಯ ಇಸವಿ ಡಿಸೆಂಬರ್ ೧೨ರಂದು ಮಧ್ಯಪ್ರದೇಶದ ಬಿಲಾಸಪುರದಲ್ಲಿ ಹುಟ್ಟಿದರು.

ಬಾಲಕೃಷ್ಣ ಹುಟ್ಟುವುದಕ್ಕೆ ಕೆಲವು ವರ್ಷಗಳ ಹಿಂದೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಿತ್ತು. ಆ ಹೋರಾಟದ ಪ್ರಮುಖ ಸೇನಾನಿ ತಾತ್ಯಾಟೋಪಿ ದೇಶಾದ್ಯಂತ ಸಂಚರಿಸಿದ್ದ. ಬಿಲಾಸಪುರಕ್ಕೂ ಹೋಗಿದ್ದ. ಆಗ ಬಾಲಕೃಷ್ಣನ ತಂದೆ ಶಿವರಾಮಪಂತನು ತಾತ್ಯಾ ಟೋಪಿಯನ್ನು ತನ್ನ ಮನೆಗೆ ಆಹ್ವಾನಿಸಿದ. ಮುಂದೆ ತನ್ನ ಮಗ ಬಾಲಕೃಷ್ಣನನ್ನು “ತಾತ್ಯಾ” ಎಂದೇ ಕರೆಯಲಾರಂಭಿಸಿದ.

ಬಾಲಕೃಷ್ಣನ ಪ್ರಾಥಮಿಕ ವಿದ್ಯಾಭ್ಯಾಸ ಬಿಲಾಸಪುರದಲ್ಲೇ ನಡೆಯಿತು. ಮಾಧ್ಯಮಿಕ ಶಿಕ್ಷಣಕ್ಕೆ ರಾಯಪುರಕ್ಕೆ ಹೋಗಬೇಕಾಯಿತು. ರಾಯಪುರಕ್ಕೆ ಎತ್ತಿನ ಗಾಡಿಯಲ್ಲಿ ನಾಲ್ಕು ದಿನದ ಪ್ರವಾಸ. ದಾರಿಯಲ್ಲಿ ಭೀಕರವಾದ ಕಾಡು. ಅಲ್ಲಿ ಹಗಲಿನಲ್ಲಿಯೂ ಕಾರ್ಗತ್ತಲು. ಬಾಲಕೃಷ್ಣನಿಗೆ ರಾಯಪುರಕ್ಕೆ ಬಂದ ಮೇಲೂ ಈ ಪ್ರಯಾಣದ ನೆನಪೇ ಇತ್ತು.

ಚಿತ್ರಗಾರ ಮೂಂಜೆ

ಆಗ ತರಗತಿಯಲ್ಲಿ ಚಿತ್ರಕಲೆಯನ್ನೂ ಕಲಿಸುತ್ತಿದ್ದರು. ಚಿತ್ರಕಲೆಯ ಉಪಾಧ್ಯಾಯರು ಒಮ್ಮೆ ಬಾಲಕೃಷ್ಣನ ತರಗತಿಯಲ್ಲಿ ಯಾವುದೋ ಚಿತ್ರವನ್ನು ಬರೆಯಲು ತಿಳಿಸಿದರು. ಬಾಲಕೃಷ್ಣನಿಗೆ ಕಾಡಿನ ನೆನಪಾಯಿತು. ಬೇರೆ ಚಿತ್ರ ಮರೆತುಹೋಯಿತು. ತನಗೇ ತಿಳಿಯದಂತೆ ಕಾಡಿನ ಚಿತ್ರವನ್ನು ಬರೆಯಲು ಆರಂಭಿಸಿದ. ಉಪಾಧ್ಯಾಯರು ಆ ಚಿತ್ರವನ್ನು ನೋಡಿ ಆಶ್ಚರ್ಯಪಟ್ಟರು. ಕಾಡಿನ ಚಿತ್ರವು ಬಹಳ ಸುಂದರವಾಗಿ ಬಂದಿತ್ತು. ಅದನ್ನು ಕಂಡು ಮುಖ್ಯೋಪಾಧ್ಯಾಯರೂ ತಲೆದೂಗಿದರು. ಆ ವರ್ಷದ ಸ್ನೇಹ ಸಮ್ಮೇಳನದಲ್ಲಿ ಬಾಲಕೃಷ್ಣ ಬರೆದ ಕಾಡಿನ ಚಿತ್ರವನ್ನು ಪ್ರದರ್ಶಿಸಿದರು. ಕಿರಿಯ ಬಾಲಕ ಬರೆದ ಚಿತ್ರವನ್ನು ಕಂಡು ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಆ ಚಿತ್ರ ವರ್ಷದ ಅತ್ಯುತ್ತಮ ಚಿತ್ರವೆಂದು ಪುರಸ್ಕಾರ ಪಡೆಯಿತು.

ಭಯವರಿಯದ ಬಲಶಾಲಿ

ಬಾಲಕೃಷ್ಣನು ಚಿಕ್ಕಂದಿನಿಂದಲೂ ಬಲವಾದ ಮೈಕಟ್ಟನ್ನು ಹೊಂದಿದ್ದನು. ಹಾಗೆಯೇ ಶಕ್ತಿವಂತನೂ ಆಗಿದ್ದನು.

ಬಾಲಕೃಷ್ಣನಿಗೆ ತನ್ನ ದೇಹಬಲವನ್ನು ಬೆಳೆಸಿಕೊಳ್ಳಬೇಕೆಂಬ ಹಂಬಲ. ಅದಕ್ಕಾಗಿ ಪ್ರತಿದಿನ ನದಿಯ ದಂಡೆಯಲ್ಲಿ ಸಾಮು ಮಾಡುತ್ತಿದ್ದ. ಗೆಳೆಯರನ್ನು ಕೂಡಿಕೊಂಡು ನದಿಯಲ್ಲಿ ಮನಸಾರೆ ಈಜುತ್ತಿದ್ದ. ನದಿಯ ಪಕ್ಕದ ತೋಟದಲ್ಲಿ ಹುಲ್ಲು ಮೇಯುತ್ತಿದ್ದ ಕುದುರೆಗಳ ಮೇಲೆ ಸವಾರಿ ಮಾಡುತ್ತಿದ್ದ. ಒಬ್ಬ ಶ್ರೇಷ್ಠ ಮಟ್ಟದ ಕುದುರೆ ಸವಾರನಾಗಿಬಿಟ್ಟ.

ಬಾಲಕೃಷ್ಣನ ಧೈರ್ಯಸಾಹಸಗಳಿಗೆ ಇನ್ನೊಂದು ಉದಾಹರಣೆ: ಒಮ್ಮೆ ಅವನೂ ಅವನ ಸಂಗಡಿಗರೂ ನದಿಯ ದಂಡೆಯಲ್ಲಿ ಆಡುತ್ತಿದ್ದರು. ಇದ್ದಕ್ಕಿದ್ದಂತೆ ಅವರಿಗೆ ನದಿಯಲ್ಲಿ ಯಾವುದೋ ಪ್ರಾಣಿ ಕಾಣಿಸಿದಂತಾಯಿತು. ಕಣ್ಣುಗಳಂತಹ ಎರಡು ವಸ್ತುಗಳು ಥಳ ಥಳ ಹೊಳೆಯುತ್ತಿದ್ದವು. ಆದರೆ ದೇಹವಾಗಲೀ ಕೈಕಾಲಾಗಲೀ ಕಾಣಿಸಲಿಲ್ಲ. ಹುಡುಗರು ಗಾಬರಿಗೊಂಡರು. ಅದು ಪ್ರಾಣಿಯೋ ಭೂತವೋ ಎಂದು ತಿಳಿಯದೆ ಹೆದರಿದರು. ಆದರೆ ಬಾಲಕೃಷ್ಣ ಹೆದರಲಿಲ್ಲ. ಬಟ್ಟೆಯನ್ನು ಬಿಚ್ಚಿ ನದಿಗೆ ಹಾರಿದ. ಹೊಳೆಯುತ್ತಿದ್ದ ವಸ್ತುಗಳ ಬಳಿ ಈಜಿಕೊಂಡು ಹೋದ. ಹತ್ತಿರ ಹೋಗಿ ನೋಡಿದರೆ ಅವರು ಎರಡು ನುಣುಪಾದ ಕಲ್ಲುಗಳು. ಬಿಸಿಲಿನ ಪ್ರಕಾಶಕ್ಕೆ ಹೊಳೆಯುತ್ತಿದ್ದವು. ಆ ಕಲ್ಲುಗಳನ್ನು ತೆಗೆದುಕೊಂಡು ಗೆಳೆಯರ ಬಳಿ ಹೋದ. “ನಾವು ಹೇಡಿಗಳಾದರೆ ಕಲ್ಲುಗಳೂ ಭೂತಗಳಂತೆ ಕಾಣುತ್ತವೆ. ಆದರೆ ಧೈರ್ಯದಿಂದ ವರ್ತಿಸಿದರೆ, ನಮ್ಮನ್ನು ನೋಡಿ ಭೂತಗಳೂ ಓಡಿಹೋಗುತ್ತವೆ” ಎಂದ.

ಚಿತ್ರಕಲೆಯಲ್ಲಿ, ಧೈರ್ಯಸಾಹಸಗಳಲ್ಲಿ ಮುಂದಾಗಿದ್ದ ಬಾಲಕೃಷ್ಣ ಓದಿನಲ್ಲೂ ಬಲು ಚುರುಕು. ೧೮೮೯ನೆಯ ಇಸವಿಯಲ್ಲಿ ಮೆಟ್ರಿಕ್‌ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ.

ಕಾಲೇಜಿನಲ್ಲಿ

ಈ ವೇಳೆಗೆ ಬಾಲಕೃಷ್ಣನಿಗೆ ಮದುವೆಯಾಗಿತ್ತು. ಆಗ ಕಾಲೇಜಿನಲ್ಲಿ ಕಲಿಯಲು ನಾಗಪುರಕ್ಕೆ ಹೋಗಬೇಕಾಗಿತ್ತು. ಬಾಲಕೃಷ್ಣನು ತನ್ನ ತಾಯಿ, ತಮ್ಮ ಮತ್ತು ಹೆಂಡತಿಯನ್ನು ಕರೆದುಕೊಂಡು ನಾಗಪುರಕ್ಕೆ ಹೊರಟ.

ನಾಗಪುರಕ್ಕೆ ಬಂದ ನಂತರ ಹಣದ ಅಡಚಣೆ ಎದುರಾಯಿತು. ಶಿವರಾಮಪಂತರಿಗೆ ಆಗತಾನೇ ನಿವೃತ್ತಿಯಾಗಿತ್ತು. ಅವರು ಬಿಲಾಸಪುರದಲ್ಲೇ ಇದ್ದರು. ಅವರನ್ನು ಹಣ ಕೇಳುವಂತಿರಲಿಲ್ಲ. ಬಾಲಕೃಷ್ಣನಿಗೆ ಕಾಲೇಜಿನಲ್ಲಿ ಹದಿನೈದು ರೂಪಾಯಿಗಳ ವಿದ್ಯಾರ್ಥಿವೇತನ ದೊರಕುತ್ತಿತ್ತು. ಆದರೆ ನಾಲ್ಕು ಜನರ ಸಂಸಾರಕ್ಕೆ ಈ ಹಣ ಎಲ್ಲಿ ಸಾಕು? ಅದಕ್ಕಾಗಿ ಬಾಲಕೃಷ್ಣ ಸಂಜೆಯ ಹೊತ್ತು ಇತರ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪಾಠ ಹೇಳಿಕೊಡಲು ಪ್ರಾರಂಭಿಸಿದ. ಇದರಿಂದ ಇಪ್ಪತ್ತು ರೂಪಾಯಿ ಸಿಕ್ಕುತ್ತಿತ್ತು. ಹಾಗೂ ಹೀಗೂ ಸಂಸಾರ ಸಾಗುತ್ತಿತ್ತು. ಬಾಲಕೃಷ್ಣ ಬಲು ಸರಳವಾದ ಜೀವನವನ್ನು ನಡೆಸುತ್ತಿದ್ದ. ಒಂದು ರಾಮಮಂದಿರದಲ್ಲಿ ಖಾಲಿ ಇದ್ದ ಒಂದು ಕೋಣೆಯನ್ನೇ ಬಾಲಕೃಷ್ಣ ಬಾಡಿಗೆಗೆ ತೆಗೆದುಕೊಂಡಿದ್ದ. ಮನೆಗೆ ಬೇಕಾದ ಪದಾರ್ಥಗಳನ್ನು ತಾನೇ ದೂರದ ಅಂಗಡಿಯಿಂದ ಹೊತ್ತು ತರುತ್ತಿದ್ದ. ದೊಡ್ಡ ದೊಡ್ಡ ಮೂಟೆಗಳನ್ನು ಲೀಲಾಜಾಲವಾಗಿ ತಲೆಯ ಮೇಲೆ ಹೊತ್ತುಕೊಂಡು ಬರುತ್ತಿದ್ದ. ಬೀದಿಯಲ್ಲಿ ಮೂಟೆಗಳನ್ನು ಹೊತ್ತು ತರುವುದು ತನಗೆ ಅವಮಾನ ಎಂಬ ಭಾವನೆ ಅವನಿಗೆ ಬರುತ್ತಲೇ ಇರಲಿಲ್ಲ.

ಹಲವು ಧರ್ಮಗಳ ಪರಿಚಯ

ದೇಹಾಡರಾಯ್‌ ಎಂಬುವರು ಸಂಸ್ಕೃತದ ಅಧ್ಯಾಪಕರು. ಅವರು ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ಹಿರಿಮೆಯನ್ನು ತಿಳಿಯಹೇಳುತ್ತಿದ್ದರು. ಜೊತೆಗೆ ಇತರ ಧರ್ಮ ಗ್ರಂಥಗಳನ್ನೂ ಓದಬೇಕೆಂದು ತಿಳಿಸುತ್ತಿದ್ದರು. “ಇದರಿಂದ ನಾವು ಇತರ ಮತಗಳಲ್ಲಿರುವ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳಬಹುದು” ಎನ್ನುತ್ತಿದ್ದರು. ಬಾಲಕೃಷ್ಣನು ಇದರಿಂದ ತುಂಬಾ ಪ್ರಭಾವಿತನಾದ. ಮಹಮ್ಮದೀಯರ ಪವಿತ್ರ ಗ್ರಂಥವಾದ ಖುರಾನನ್ನೂ, ಕ್ರೈಸ್ತರ ಧರ್ಮಗ್ರಂಥ ಬೈಬಲನ್ನೂ ಸಂಪೂರ್ಣವಾಗಿ ಓದಿದ. ಆ ಗ್ರಂಥಗಳಲ್ಲಿ ತಿಳಿಸಿದ ಅನೇಕ ವಿಷಯಗಳನ್ನು ಅವನು ತುಂಬ ಮೆಚ್ಚಿದನು.

ಇತರ ಮತಗ್ರಂಥಗಳನ್ನು ಬಾಲಕೃಷ್ಣ ಕೇವಲ ಜ್ಞಾನಾರ್ಜನೆಗಾಗಿ ಓದುತ್ತಿದ್ದ. ಅವನ ಹೃದಯಲ್ಲಿ ಹಿಂದೂ ಧರ್ಮದ ಅಭಿಮಾನ ಸದಾ ಜಾಗೃತವಾಗಿತ್ತು. ಹಿಂದೂಧರ್ಮದ ಉದಾತ್ತ ತತ್ವಗಳನ್ನೂ ಹಿರಿಮೆಯನ್ನೂ ಅವನು ತುಂಬ ಅಭಿಮಾನದಿಂದ ಕಾಣುತ್ತಿದ್ದ.

ಶ್ರೇಷ್ಠ ವಿದ್ಯಾರ್ಥಿ

ಬಾಲಕೃಷ್ಣನು ಸಂಸ್ಕೃತದಲ್ಲಿಯೂ ಪಾರಂಗತನಾದನು. ಸಂಸ್ಕೃತದ ಹಲವಾರು ಕಾವ್ಯಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದನು. ವ್ಯಾಕರಣ, ಕಾವ್ಯ, ಛಂದಸ್ಸು ಮೊದಲಾದವುಗಳಲ್ಲಿ ಪಂಡಿತರೂ ತಲೆದೂಗುವಷ್ಟು ಪಾಂಡಿತ್ಯವನ್ನೂ ಪಡೆದನು.

ಭೌತ ಮತ್ತು ರಸಾಯನ ಶಾಸ್ತ್ರಗಳನ್ನು ಬೋಧಿಸುತ್ತಿದ್ದ ರಾಬರ್ಟ್‌‌ಸನ್‌ ವಿದ್ಯಾರ್ಥಿಗಳನ್ನು ಮನೆಗೂ ಕರೆದುಕೊಂಡು ಹೋಗಿ ಪಠ್ಯ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಬಾಲಕೃಷ್ಣನು ಇದರ ಸಂಪೂರ್ಣ ಉಪಯೋಗ ಪಡೆದುಕೊಂಡ. ವಿಜ್ಞಾನ ವಿಷಯಗಳಲ್ಲೂ ತನ್ನ ತರಗತಿಯಲ್ಲಿ ಅದ್ವಿತೀಯನೆನಿಸಿಕೊಂಡ.

೧೮೯೩ನೆಯ ಇಸವಿಯಲ್ಲಿ ಬಾಲಕೃಷ್ಣ ಇಂಟರ್ ಮೀಡಿಯೆಟ್‌ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ. ಹಿಲ್‌ಸಾಫ್‌ ಕಾಲೇಜಿನಲ್ಲಿ ಪ್ರಪ್ರಥಮ ಸ್ಥಾನ ಗಳಿಸಿದ. ಅವನ ಮನೆಯಲ್ಲಿ ಕ್ರೂರ ಬಡತನ. ಅಂಗಡಿಗೆ ಹೋಗಿಬರುವುದು, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದು ಇವುಗಳಲ್ಲೇ ಬಹುಕಾಲ ಕಳೆದುಹೋಗುತ್ತಿತ್ತು. ಹೀಗಿದ್ದೂ ಬಾಲಕೃಷ್ಣ ಓದಿನಲ್ಲಿ ಹಿಂದೆ ಬೀಳದೆ ಅತ್ಯುತ್ತಮ ಸ್ಥಾನ ಗಳಿಸಿದ.

ಧ್ಯೇಯ ಸಾಧನೆ

ಇಂಟರ್‌ಮೀಡಿಯೇಟ್‌ ಪರೀಕ್ಷೆಯಾದ ನಂತರ ಮುಂದೇನು ಎಂಬ ಪ್ರಶ್ನೆ ಬಾಲಕೃಷ್ಣನನ್ನು ಕಾಡತೊಡಗಿತು. ಚಿಕ್ಕಂದಿನಿಂದ ಬಾಲಕೃಷ್ಣನಿಗೆ ವೈದ್ಯನಾಗಬೇಕೆಂಬ ಆಸೆ. ಅದಕ್ಕೆ ಕಾರಣವೂ ಇತ್ತು. ಅವನ ತಂದೆಗೆ ಎಂಟು ಮಕ್ಕಳಾಗಿದ್ದರೂ ಬದುಕಿ ಉಳಿದದ್ದು ಕೇವಲ ಮೂರು ಮಕ್ಕಳು ಮಾತ್ರ. ಉಳಿದ ಐದು ಜನ ಒಂದಲ್ಲ ಒಂದು ಕಾಯಿಲೆಯಿಂದ ನರಳಿ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದಿದ್ದರು. ಇದು ಬಾಲಕೃಷ್ಣನ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ತಾನು ವೈದ್ಯನಾಗಬೇಕು, ಜನರು ಕಾಯಿಲೆಯಿಂದ ನರಳುವುದನ್ನು ತಪ್ಪಿಸಬೇಕು ಎಂದು ಹಂಬಲಿಸಿದ. ಆದರೆ ವೈದ್ಯಕೀಯ ಪರೀಕ್ಷೆಗೆ ಓದುವುದು ಸುಲಭವೇ? ಅದೂ ದೂರದ ಮುಂಬಯಿಗೆ ಹೋಗಿ ಓದಬೇಕು. ಹೇಗಾದರಾಗಲಿ ಎಂದು ತನ್ನ ತಂದೆಗೆ ಒಂದು ಪತ್ರ ಬರೆದ. ತಂದೆಗೆ ತಮ್ಮ ಮಗ ವಕೀಲನಾಗಲಿ ಎಂದು ಆಸೆ. ವಕೀಲನಾದರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂದು ಅವರ ಎಣಿಕೆ. ಅಲ್ಲದೆ ತಮ್ಮ ಮಗ ಹೆಣ ಕೊಯ್ಯುವ ವೈದ್ಯನಾಗಬೇಕೆ? ಛೇ, ಛೇ, ಖಂಡಿತ ಕೂಡದು ಎಂದು ಮಗನಿಗೆ ಪತ್ರ ಬರೆದರು. ತಂದೆಯ ಪತ್ರವನ್ನು ನೋಡಿ ಬಾಲಕೃಷ್ಣನಿಗೆ ತೀವ್ರ ನಿರಾಶೆಯಾಯಿತು. ಆದರೆ ತಂದೆಯವರ ಮಾತನ್ನು ಮೀರುವುದು ಹೇಗೆ? ಸರಿ, ವಿಧಿಯೇ ಇಲ್ಲದೆ ಬಿ.ಎ.ಗೆ ಸೇರಿದ. ಆದರೆ ಒಂದು ವಾರ ಕಳೆಯುವುದರೊಳಗೆ ಹುಚ್ಚು ಹಿಡಿದಂತಾಯಿತು. ಉಪಾಧ್ಯಾಯರು ಹೇಳುತ್ತಿದ್ದುದರ ಕಡೆ ಗಮನ ಕೊಡಲು ಸಾಧ್ಯವೇ ಆಗಲಿಲ್ಲ. ತಾನು ಓದಬೇಕಾದುದು ವೈದ್ಯಕೀಯ ಪರೀಕ್ಷೆಗೆ, ವಕೀಲವೃತ್ತಿ ತನಗೆ ಸರಿಯಾಗದು ಎಂಬ ನಿರ್ಣಯಕ್ಕೆ ಬಂದ. ತನಗೆ ಸೀಟು ಸಿಕ್ಕುವುದೇ ಎಂದು ಮುಂಬಯಿನ ಗ್ರಾಂಟ್‌ ಮೆಡಿಕಲ್‌ ಕಾಲೇಜಿಗೆ ಪತ್ರ ಬರೆದ. ಒಂದು ವಾರದೊಳಗೆ ಅವರಿಂದ ಉತ್ತರ ಬಂತು. ಆ ಕಾಲೇಜಿನಲ್ಲಿ ಅವನಿಗೆ ಸೀಟು ಸಿಕ್ಕಿತ್ತು. ಜೊತೆಗೆ ತಿಂಗಳಿಗೆ ಮೂವತ್ತು ರೂಪಾಯಿಯ ವಿದ್ಯಾರ್ಥಿವೇತನವೂ ದೊರಕಿತ್ತು. ಆ ಪತ್ರವನ್ನು ನೋಡಿ ಬಾಲಕೃಷ್ಣ ಕುಣಿದಾಡಿದ. ಯಾರಿಗೂ ತಿಳಿಸದೆ ಮುಂಬಯಿಗೆ ಹೋಗಿ ಮೆಡಿಕಲ್‌ ಕಾಲೇಜಿಗೆ ಸೇರಿಬಿಟ್ಟ.

ಇತ್ತ ನಾಗಪುರದಲ್ಲಿ ಅವನ ಮನೆಯವರಿಗೂ ಸಹ ವಿದ್ಯಾರ್ಥಿಗಳಿಗೂ ಗಾಬರಿಯೋ ಗಾಬರಿ. ಒಂದು ವಾರದ ನಂತರ ಅವರಿಗೆ ಬಾಲಕೃಷ್ಣನಿಂದ ಪತ್ರ ಬಂತು. ತಾನು ಮುಂಬಯಿಯಲಲ್ಲಿದ್ದರೂ ತನ್ನ ಸಂಸಾರವನ್ನು ಸಲಹುವುದಾಗಿ ಭರವಸೆ ನೀಡಿದ್ದನು.

ಮೆಡಿಕಲ್‌ ಕಾಲೇಜಿನಲ್ಲಿ ಬಾಲಕೃಷ್ಣನು ತನ್ನ ಉತ್ತಮ ಗುಣಗಳಿಂದ ಇತರ ವಿದ್ಯಾರ್ಥಿಗಳ ಹಾಗೂ ಉಪಾಧ್ಯಾಯರ ಪ್ರೀತಿ ಆದರಗಳಿಗೆ ಪಾತ್ರನಾದನು. ಇತರ ವಿದ್ಯಾರ್ಥಿಗಳೊಡನೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಪ್ರತಿದಿನ ವ್ಯಾಯಾಮ ಮಾಡುತ್ತಿದ್ದನು. ಅವನ ಅಂಗಸೌಷ್ಠವನ್ನು ಕಂಡು ಕಾಲೇಜಿನ ಅಧ್ಯಾಪಕರಿಗೂ ಆಶ್ಚರ್ಯ. ಎಲ್ಲರೂ ಅವನನ್ನು “ಉಸ್ತಾದ್‌” ಎಂದು ಕರೆಯುತ್ತಿದ್ದರು. ಕಾಲೇಜಿನ ಅಧಿಕಾರಿಗಳು ಕಾಲೇಜಿನಲ್ಲಿ ಒಂದು ಅಖಾಡವನ್ನು ನಿರ್ಮಿಸಿದರು. ಬಾಲಕೃಷ್ಣನನ್ನು ಅದಕ್ಕೆ ಮುಖಂಡನನ್ನಾಗಿ ನಿಯಮಿಸಿದರು.

ಜನಸೇವೆ

ಬಾಲಕೃಷ್ಣನು ಮೆಡಿಕಲ್‌ ಕಾಲೇಜಿನಲ್ಲಿ ಮೊದಲನೇ ವರ್ಷದ ತರಗತಿಯಲ್ಲಿ ಓದುತ್ತಿದ್ದಾಗ ಮುಂಬಯಿ ನಗರವನ್ನು ಪ್ಲೇಗ್‌ ರೋಗ ಮುತ್ತಿತ್ತು. ಎಲ್ಲಿ ನೋಡಿದರೂ ಪ್ಲೇಗ್‌. ಎಲ್ಲರ ಮನೆಯಲ್ಲೂ ಪ್ಲೇಗ್‌ ಹಾವಳಿಯೇ ಹಾವಳಿ. ಜನರು ಹೆದರಿ ಕಂಗೆಟ್ಟರು.

ಪ್ಲೇಗ್‌ ನಿವಾರಣೆಗಾಗಿ ಮುಂಬಯಿ ನಗರದ ಕಾರ್ಪೋರೇಷನ್‌ ಅನೇಕ ಕ್ರಮಗಳನ್ನು ಕೈಗೊಂಡಿತು. ಅದರಲ್ಲಿ ಪ್ಲೇಗ್‌ ನಿರ್ಮೂಲನಾ ಸಮಿತಿಯ ರಚನೆಯೂ ಒಂದು ಈ ಸಮಿತಿಯಲ್ಲಿ ಅನೇಕ ವೈದ್ಯರೂ ಮೆಡಿಕಲ್‌ ವಿದ್ಯಾರ್ಥಿಗಳೂ ಇದ್ದರು. ಅದರಲ್ಲಿ ಬಾಲಕೃಷ್ಣನೂ ಒಬ್ಬ ಮನೆ-ಮನೆಗೆ ಹೋಗಿ ರೋಗಿಗಳನ್ನು ಪರೀಕ್ಷಿಸುವುದು, ಉಲ್ಬಣಾವಸ್ಥೆಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವುದು, ಜನಸಾಮಾನ್ಯರಿಗೆ ಪ್ಲೇಗ್‌ ನಿವಾರಣೆಯ ಕ್ರಮಗಳನ್ನು ತಿಳಿಸುವುದು ಮೊದಲಾದ ಕಾರ್ಯಗಳನ್ನು ಒಂದಿಷ್ಟೂ ಬೇಸರವಿಲ್ಲದೆ ನಗು-ನಗುತ್ತಾ ಮಾಡಿ ಎಲ್ಲರ ವಿಶ್ವಾಸಕ್ಕೆ ಪಾತ್ರನಾದನು.

೧೮೯೮ರಲ್ಲಿ ಕೊನೆಯ ವರ್ಷದ ಮೆಡಿಕಲ್‌ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾದ; ಡಾಕ್ಟರ್ ಬಾಲಕೃಷ್ಣ ಶಿವರಾಮ ಮೂಂಜೆ ಆದ.

ಬಾಲಕೃಷ್ಣ ಮೂಂಜೆ ಮನೆಮನೆಗೆ ಹೋಗಿ ಪ್ಲೇಗಿನ ರೋಗಿಗಿಗಳನ್ನು ಪರೀಕ್ಷಿಸಿದರು.

ಡಾಕ್ಟರ್ ಮೂಂಜೆ

ಡಾ. ಮೂಂಜೆಯವರಿಗೆ ಮುಂದೆ ವಿದೇಶಕ್ಕೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಇತ್ತು. ಆದರೆ ವಿದೇಶಕ್ಕೆ ಹೋಗಬೇಕಾದರೆ ಅಪಾರ ಹಣ ಬೇಕು. ಅಲ್ಲದೆ ಅವರ ಸಂಸಾರವೂ ದೊಡ್ಡದಾಗಿ ಬೆಳೆದಿತ್ತು. ಆದ್ದರಿಂದ ವಿದೇಶಕ್ಕೆ ಹೋಗುವ ಹಂಬಲವನ್ನು ಬಿಟ್ಟರು. ಮುಂಬಯಿಯಲ್ಲೇ ಉಳಿದುಕೊಂಡು ದೇಶಸೇವೆ, ಜನಸೇವೆ ಮಾಡಬೇಕೆಂದು ನಿಶ್ಚಯಿಸಿದರು. ಈ ಹಿಂದೆ ಡಾಕ್ಟರ್ ಮೂಂಜೆಯವರು ಪ್ಲೇಗ್‌ ನಿವಾರಣ ಸಮಿತಿಯಲ್ಲಿ ಕೆಲಸ ಮಾಡಿದರಷ್ಟೆ? ಕಾರ್ಪೋರೇಷನ್ನಿನವರು ಅವರ ಸೇವೆಯಿಂದ ಸಂತೋಷಗೊಂಡಿದ್ದರು. ಮೂಂಜೆಯವರಿಗೆ ಕಾರ್ಪೋರೇಷನ್ನಿನಲ್ಲಿ ವೈದ್ಯಕೀಯ ವಿಭಾಗದಲ್ಲಿ ಉದ್ಯೋಗ ಸಿಕ್ಕಿತು. ತಿಂಗಳಿಗೆ ಐದುನೂರು ರೂಪಾಯಿ ಸಂಬಳ.

ಬಾಲಗಂಗಾಧರ ತಿಲಕರು

ಜನತೆಯನ್ನು ಪ್ಲೇಗ್ ಮಾರಿ ಆಹುತಿ ತೆಗೆದು ಕೊಳ್ಳುತ್ತಿದ್ದಾಗ ಬ್ರಿಟಿಷ್‌ ಸರ್ಕಾರ ತನ್ನ ಕ್ರೂರ ದಬ್ಬಾಳಿಕೆಯಿಂದ ಅವರನ್ನು ಮತ್ತಷ್ಟು ಕಂಗೆಡಿಸಿತು. ಜನರ ಮೇಲೆ ಕಂದಾಯಗಳನ್ನು ಹೇರಿತು. ಜನ ಅಗತ್ಯವಾಗಿ ಬಳಸುವ ವಸ್ತುಗಳ ಮೇಲೆ ನಿರ್ಬಂಧ ಬಂತು. ಸರ್ಕಾರವನ್ನು ಟೀಕೆ ಮಾಡಿದವರಿಗೆ ಉಗ್ರ ದಂಡನೆ. ಹೀಗೆ ಜನರು ಜೀವನ ನಡೆಸುವುದೇ ಕಷ್ಟವಾಯಿತು. ಜನರಲ್ಲಿ ಅಶಾಂತಿ ಹಬ್ಬಿತು. ದಂಗೆಯೇಳಬೇಕೆಂಬ ಮನೋಭಾವ ಮೊಳೆಯಿತು. ಆಗ ಲೋಕಮಾನ್ಯ ತಿಲಕರು ಈ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಬಂಡಾಯವೇಳಬೇಕು; ಬ್ರಿಟಿಷ್‌ ಸರ್ಕಾರ ಭಾರತವನ್ನು ಬಿಟ್ಟು ತೊಗಲುವಂತೆ ಮಾಡಬೇಕೆಂದು ನಿಶ್ಚಯಿಸಿದರು. ಜನಸಂಘಟನೆಗಾಗಿ ಗಣೇಶೋತ್ಸವವನ್ನೂ ಶಿವಾಜಿ ಉತ್ಸವವನ್ನೂ ಊರಿನವರೆಲ್ಲ ಸೇರಿ ನಡೆಸುವಂತೆ ಮಾಡಿದರು.

ರಾಯಗಡದಲ್ಲಿ ಶಿವಾಜಿಯ ಸಮಾಧಿಯ ಬಳಿ ಬಹುದೊಡ್ಡ ಉತ್ಸವ ನಡೆಯುತ್ತಿತ್ತು. ತಿಲಕರ ಕೀರ್ತಿಯನ್ನು ಕೇಳಿದ್ದ ಮೂಂಜೆಯವರಿಗೆ ಅವರ ದರ್ಶನ ಮಾಡಬೇಕೆಂಬ ಆಸೆ. ತಮ್ಮ ಕೆಲವು ಮಿತ್ರನ್ನು ಕರೆದುಕೊಂಡು ರಾಯಗಡಕ್ಕೆ ಹೊರಟರು. ಮೊಹರ್ ಎಂಬ ಊರನ್ನು ತಲುಪಿದರು. ಮೊಹರ‍್ನಿಂದ ರಾಯಗಡ ಸಾಕಷ್ಟು ದೂರದಲ್ಲಿದೆ. ಅಲ್ಲದೆ ರಾಯಗಡ ಒಂದು ದುರ್ಗ. ಅದರ ದಾರಿ ಬಹಳ ಕಡಿದು. ಮೂಂಜೆ ಮತ್ತು ಅವರ ಸಂಗಡಿಗರು ಬೆಳಗ್ಗೆ ಬೇಗ ಎದ್ದರು. ಮೊಹರ್‌ನಿಂದ ನಡೆದುಕೊಂಡು ಹೊರಟರು. ಅವರೆಲ್ಲ ಆ ಸ್ಥಳಕ್ಕೆ ಹೊಸಬರು. ರಾಯಗಡ ಯಾವ ದಿಕ್ಕಿನಲ್ಲಿದೆ ಎಂದೂ ತಿಳಿಯದು. ಎತ್ತ ನೋಡಿದರೂ ಬೆಟ್ಟಗಳೇ. ಸಂಜೆಯವರೆಗೆ ಯಾವುಯಾವುದೋ ಬೆಟ್ಟಗಳನ್ನು ಹತ್ತಿ ನಿರಾಶರಾದರೂ ಪ್ರಯತ್ನ ಮಾತ್ರ ಬಿಡಲಿಲ್ಲ. ತಿಲಕರನ್ನು ನೋಡಬೇಕೆಂಬ ಹಂಬಲದಿಂದ ಹಾಗೂ ಹೀಗೂ ಬಹಳ ಕಷ್ಟಪಟ್ಟು ಮಧ್ಯರಾತ್ರಿಯ ವೇಳೆಗೆ ರಾಯಗಡವನ್ನು ತಲುಪಿದರು. ಸಮಾರಂಭ ನಡೆಯುತ್ತಿದ್ದ ಸ್ಥಳಕ್ಕೆ ಹೋದರು. ಆಯಾಸದಿಂದ ಅಲ್ಲಿಯೇ ಮಲಗಿಬಿಟ್ಟರು. ಮೂರನೆಯ ಬೆಳಗ್ಗೆ ಎದ್ದು ನೋಡಿದರೆ ಅವರ ಬಟ್ಟೆಯ ಗಂಟೇ ಇಲ್ಲ. ಗಾಬರಿಯಿಂದ ತಡಕಾಡಿದರು. ಎದುರಿಗಿದ್ದ ಕೊಠಡಿಗೆ ಹೋದರು. ಆ ಕೊಠಡಿಯಲ್ಲಿದ್ದ ವ್ಯಕ್ತಿ ಅವರನ್ನು ನಗುಮುಖದಿಂದ ಬರಮಾಡಿಕೊಂಡರು. ಅವರೇ ಲೋಕಮಾನ್ಯ ತಿಲಕರು.

ತಿಲಕರು ಮೂಂಜೆಯವರ ಬಟ್ಟೆಯ ಗಂಟನ್ನು ಜೋಪಾನವಾಗಿ ತೆಗೆದಿಟ್ಟಿದ್ದರು!

ತಿಲಕರ ಸರಳತೆಯನ್ನು ಕಂಡು ಮೂಂಜೆಯವರಿಗೂ ಅವರ ಸಂಗಡಿಗರಿಗೂ ತುಂಬಾ ಆಶ್ಚರ್ಯವಾಯಿತು. ತಿಲಕರು ಅವರೊಡನೆ ನಗು-ನಗುತ್ತಾ ಮಾತನಾಡಿದರು. ಅವರನ್ನು ಸ್ನಾನಕ್ಕಾಗಿ ನದಿಯ ಬಳಿಗೆ ಕರೆದುಕೊಂಡು ಹೋದರು. ತಿಲಕರೊಡನೆ ಮೂಂಜೆಯವರೂ ಅವರ ಗೆಳೆಯರೂ ನೀರಿನಲ್ಲಿ ಮನಸಾರೆ ಈಜಾಡಿದರು.

ಈ ಭೇಟಿಯಿಂದ ಮೂಂಜೆಯವರಿಗೆ ತಿಲಕರ ಬಗ್ಗೆ ಗುರುಭಾವನೆ ಬೆಳೆಯಿತು. ಕೊನೆಯವರೆಗೂ ಅವರಿಬ್ಬರೂ ಗುರು-ಶಿಷ್ಯರಂತೆಯೇ ಇದ್ದರು.

ಸತ್ಯನಿಷ್ಠ

ಪ್ಲೇಗ್‌ನ ಹಾವಳಿ ಮತ್ತೊಮ್ಮೆ ಮುಂಬಯಿಯಲ್ಲಿ ಪ್ರಾರಂಭವಾಯಿತು. ಒಂದು ಪ್ರದೇಶದಲ್ಲಿ ಪ್ಲೇಗ್‌ ಬೇನೆ ಕಾಣಿಸಿಕೊಂಡಿತು. ಮೂಂಜೆಯವರು ಅಲ್ಲಿ ಪ್ಲೇಗ್‌ ನಿರ್ಮೂಲನಾ ಸಮಿತಿಯನ್ನು ರಚಿಸಿದರು. ಒಂದು ದಿನ, ಆ ವಸತಿಯಲ್ಲಿದ್ದ ಒಂದು ಮನೆಯಲ್ಲಿ ಇಲಿ ಬಿತ್ತು. ಪ್ಲೇಗ್ ಇಲಿ ಬಿದ್ದ ಕೂಡಲೇ ಮನೆ ಖಾಲಿ ಮಾಡಬೇಕು, ಇಲ್ಲದಿದ್ದರೆ ಪ್ಲೇಗ್ ರೋಗ ತಪ್ಪಿದ್ದಲ್ಲ. ಮೂಂಜೆ ಆ ಮನೆಯ ಯಜಮಾನನನ್ನು ಕಂಡು ಸ್ವಲ್ಪ ದಿನದ ಮಟ್ಟಿಗೆ ಮನೆಯನ್ನು ಖಾಲಿ ಮಾಡಬೇಕೆಂದು ತಿಳಿಸಿದರು. ಆದರೆ ಅವನು ಅದಕ್ಕೆ ಒಪ್ಪಲಿಲ್ಲ. “ಇದು ನಮ್ಮ ಮನೆ. ಇಲ್ಲಿ ಇಲಿ ಬಿದ್ದರೆ ನಿಮಗೇನು?” ಎಂದು ದಬಾಯಿಸಿದ. ಆಗ ಮೂಂಜೆಯವರು, “ಇದು ನಿಮ್ಮೊಬ್ಬರ ಪ್ರಶ್ನೆ ಅಲ್ಲ. ನಿಮ್ಮ ಮನೆಯಲ್ಲಿ ಯಾರಿಗಾದರೂ ಪ್ಲೇಗ್‌ ರೋಗ ಬಂದರೆ, ಆ ರೋಗ ಇತರರಿಗೂ ಹಬ್ಬುತ್ತದೆ. ಅದನ್ನು ತಡೆಗಟ್ಟುವುದು ನಮ್ಮ ಕರ್ತವ್ಯ. ಆದ್ದರಿಂದ ಕೂಡಲೇ ಮನೆಯನ್ನು ಖಾಲಿ ಮಾಡಿ” ಎಂದರು. ಆಗ ಮನೆಯ ಒಳಗೆ ಒಬ್ಬ ಹೆಂಗಸು ಮಲಗಿಕೊಂಡಿದ್ದಳು. ಮನೆಯ ಯಜಮಾನ ಹಾಗೆಯೇ ಬಾಗಿಲಿಗೆ ಬೀಗ ಹಾಕಿಕೊಂಡು ಹೋದ. ಅವಳನ್ನು ಬಲವಂತದಿಂದ ವೈದ್ಯರು ಕೂಡಿಹಾಕಿದ್ದಾರೆ ಎಂದು ಆರೋಪ ಹೊರಿಸಬೇಕೆಂದು ಅವನು ಯೋಚಿಸಿದ್ದ. ಮೂಂಜೆಯವರಿಗೆ ಈ ವಿಷಯ ತಿಳಿಯದು. ಅವರು ತಮ್ಮ ಜೊತೆಯಲ್ಲಿ ಬಂದಿದ್ದ ಫಿರೋಜ್‌ ಎಂಬುವನಿಗೆ ಮನೆಗೆ ಇನ್ನೊಂದು ಬೀಗ ಹಾಕುವಂತೆ ತಿಳಿಸಿದರು. ಅವರು ಬೀಗ ಹಾಕಿಕೊಂಡು ಅತ್ತ ಹೋಗುತ್ತಿದ್ದರಂತೆ ಇತ್ತ ಅವರ ಮೇಲೆ ಜನ ಆರೋಪ ಹೊರಿಸಲಾರಂಭಿಸಿದರು. ಫೀರೋಜನರು ಬೇಕೆಂದೇ ಮನೆಯಲ್ಲಿದ್ದ ಹೆಂಗಸನ್ನು ಕೂಡಿ ಬೀಗ ಹಾಕಿದನೆಂದು ಆಪಾದಿಸಿದರು. ಆಗ ಮೂಂಜೆಯವರು “ಇದರಲ್ಲಿ ಫಿರೋಜನದೇನೂ ತಪ್ಪಿಲ್ಲ. ಅವನು ನನ್ನ ಆಜ್ಞೆಯಂತೆ ನಡೆದುಕೊಂಡಿದ್ದಾನೆ. ಪ್ಲೇಗ್‌ ಹಾವಳಿಯನ್ನು ತಡೆಗಟ್ಟಲು ಸಹಾಯವಾಗಲಿ ಎಂಬ ಉದ್ದೇಶದಿಂದ ಆ ಮನೆಗೆ ಬೀಗ ಹಾಕಿದೆವು. ಇದು ತಪ್ಪು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟರೆ ಶಿಕ್ಷೆ ನನಗೆ ಸಲ್ಲಬೇಕು. ಫಿರೋಜನಿಗಲ್ಲ” ಎಂದರು. ವಿಚಾರಣೆ ನಡೆದು ಮೂಂಜೆಯವರದಾಗಲೀ, ಫಿರೋಜನದಾಗಲೀ ತಪ್ಪಿಲ್ಲವೆಂದು ತೀರ್ಮಾನವಾಯಿತು. ತಮ್ಮ ನಿರ್ಧಾರದ ಹೊಣೆಯನ್ನು ಪ್ರಾಮಾಣಿಕತೆಯಿಂದ ಸ್ವೀಕರಿಸಿದ ಮೂಂಜೆಯವರ ಉದಾತ್ತ ಗುಣವನ್ನು ಎಲ್ಲರೂ ಕೊಂಡಾಡಿದರು. ಫಿರೋಜನಂತೂ ಅವರ ಅಂತರಂಗದ ಗೆಳೆಯನಾಗಿಬಿಟ್ಟ.

 

ಮೂಂಜೆಯವರು ಸ್ಥಾಪಿಸಿದ ಭೋನ್‌ಸ್ಲ ಸೈನಿಕ ಶಾಲೆಯ ಪ್ರಾರಂಭೋತ್ಸವವನ್ನು ಗ್ವಾಲಿಯರ್‌ ಮಹಾರಾಜರು ನಡೆಸಿಕೊಟ್ಟರು.

ಯುದ್ಧಭೂಮಿಗೋ, ತಮ್ಮನ ಮದುವೆಗೋ?

ಅದೇ ಸಮಯದಲ್ಲಿ ದಕ್ಷಿಣ ಆಫ್ರಿಕದಲ್ಲಿ ಆಂಗ್ಲರ ದಬ್ಬಾಳಿಕೆಯನ್ನು ಎದುರಿಸಿ ಬೋಯರ್‌ ಜನರು ಕದನವನ್ನಾರಂಭಿಸಿದರು. ಆ ಯುದ್ಧದಿಂದ ಸಾವಿರಾರು ಜನರು ಸಾಯುತ್ತಿದ್ದರು. ಗಾಯಗೊಂಡವರ ಸಂಖ್ಯೆಯಂತೂ ಲೆಖ್ಖವೇ ಇಲ್ಲ. ಅವರ ಸೇವೆಗಾಗಿ ದೊಡ್ಡ ದೊಡ್ಡ ವೈದ್ಯಕೀಯ ತಂಡಗಳು ಬೇಕಾಗಿದ್ದವು. ಮೂಂಜೆಯವರಿಗೆ ಯುದ್ಧದಲ್ಲಿ ಗಾಯಗೊಂಡವರ ಸೇವೆ ಮಾಡಬೇಕೆಂಬ ಹಂಬಲ. ಜೊತೆಗೆ ಯುದ್ಧವನ್ನು ಹತ್ತಿರದಿಂದ ನೋಡಬೇಕೆಂಬ ಆಸೆ. ಅಲ್ಲದೆ ಆ ದಿನಗಳಲ್ಲಿ ಹಿಂದೂ ವೈದ್ಯರು ವಿದೇಶಗಳಿಗೆ ಹೋಗುತ್ತಲೇ ಇರಲಿಲ್ಲ. ಎಲ್ಲಿ ನೋಡಿದರೂ ಕ್ರೈಸ್ತಮತೀಯರೇ. ಸೇವಾ ಕಾರ್ಯಗಳಲ್ಲಿ ಹಿಂದೂಗಳು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಬೇಕೆಂದು ಮೂಂಜೆ ನಿಶ್ಚಯಿಸಿದರು. ಪತ್ನಿಯನ್ನು ತವರುಮನೆಗೆ ಕಳುಹಿಸಿದರು. ದಕ್ಷಿಣ ಆಫ್ರಿಕಕ್ಕೆ ಹೊರಡಲು ಸಿದ್ಧರಾದರು.

ಅದೇ ಸಮಯಕ್ಕೆ ತಂದೆಯವರಿಂದ ಒಂದು ಕಾಗದ ಬಂತು. “ನಿನ್ನ ತಮ್ಮ ಹರಿಯ ಲಗ್ನ ನಿಶ್ಚಯವಾಗಿದೆ. ಕೂಡಲೇ ಹೊರಟು ಬಾ”. ಮೂಂಜೆಯವರು ಒಂದು ಕ್ಷಣ ಯೋಚಿಸಿದರು. “ಯುದ್ಧವೋ? ಮುದುವೆಯೋ?” ಎಂದು. ಮರುಕ್ಷಣವೇ ಯುದ್ಧರಂಗಕ್ಕೆ ಹೋಗುತ್ತೇನೆ. ನನ್ನ ತಮ್ಮನಿಗೆ ನನ್ನ ಆಶೀರ್ವಾದ ಇದ್ದೇ ಇದೆ ಎಂದು ಕೊಂಡರು.

ಡಾ.ಮೂಂಜೆ ತಂದೆಯವರಿಗೆ ಎಲ್ಲ ವಿಷಯಗಳನ್ನೂ ತಿಳಿಸಿ ಮದುವೆಗೆ ಬರಲಾಗದಿದ್ದುದಕ್ಕಾಗಿ ಕ್ಷಮೆಕೋರಿ ಪತ್ರ ಬರೆದರು. ನಿಶ್ಚಿತವಾದ ದಿನ ಮುಂಬಯಿನ ಬಂದರಿನಲ್ಲಿ ಹಡಗು ಹತ್ತಿದರು. ಆ ದಿನವೇ ಊರಿನಲ್ಲಿ ತಮ್ಮನ ಮದುವೆ. ತಮ್ಮನ ವಿವಾಹ ಜೀವನ ಸುಖಮಯವಾಗಲಿ ಎಂದು ಮನಸ್ಸಿನಲ್ಲೇ ಆಶೀರ್ವದಿಸಿದರು.

ಕರ್ತವ್ಯ ಮತ್ತು ವೈಯಕ್ತಿಕ ಕಾರ್ಯ ಒಂದಕ್ಕೊಂದು ಅಡ್ಡವಾದಾಗ ಮೂಂಜೆಯವರು ಎಂದೂ ಕರ್ತವ್ಯವನ್ನೇ ಆಯ್ದುಕೊಂಡವರು.

ಗಾಯಾಳುಗಳ ಸೇವೆ

ಆಗ ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿ ವಕೀಲಿ ಮಾಡುತ್ತಿದ್ದರು. ಮೂಂಜೆಯವರು ನಾಲ್ಕಾರು ದಿನ ಗಾಂಧೀಜಿಯವರ ಜೊತೆಯಲ್ಲೇ ಇದ್ದರು. ಆಗ ಗಾಂಧೀಜಿಯವರ ಜೊತೆಯಲ್ಲೇ ಇದ್ದರು. ಆಗ ಗಾಂಧೀಜಿಯವರು ಕಪ್ಪು ಜನರ ಮೇಲೆ ಬ್ರಿಟಿಷರು ಮಾಡುತ್ತಿದ್ದ ಅತ್ಯಾಚಾರವನ್ನು ತಿಳಿಸಿದರು. ಮೂಂಜೆಯವರಿಗೆ ಬ್ರಿಟಿಷರ ಮೇಲಿದ್ದ ಕೋಪ ಮತ್ತಷ್ಟು ಹೆಚ್ಚಿತು. ಬೋಹರ್ ಯುದ್ಧದಲ್ಲಿ ಗಾಯಗೊಂಡವರಿಗೆ ಮೂಂಜೆ ಮತ್ತು ಅವರ ಸಂಗಡಿಗರು ಅಪಾರವಾದ ಸೇವೆ ಸಲ್ಲಿಸಿ ಅಲ್ಲಿನ ಜನರ ಪ್ರೀತಿಗೆ ಪಾತ್ರರಾದರು. ೧೯೦೦ರಲ್ಲಿ ಯುದ್ಧ ಮುಗಿದ ನಂತರ ಭಾರತಕ್ಕೆ ಹಿಂದಿರುಗಿದರು. ಸಂಪೂರ್ಣ ಭಾರತ ದರ್ಶನ ಮಾಡಬೇಕೆಂಬ ಆಸೆಯಿಂದ ದೇಶದ ಮೂಲೆ ಮೂಲೆಯನ್ನೂ ಸಂದರ್ಶಿಸಿದರು. ನಮ್ಮ ಪುಣ್ಯಕ್ಷೇತ್ರಗಳಿಗೆ ಭೇಟಿಕೊಟ್ಟರು. ಐತಿಹಾಸಿಕ ಸ್ಥಳಗಳನ್ನು ಕಂಡರು. ಇಷ್ಟೊಂದು ವಿಶಾಲವಾದ ಭೂ ಭಾಗವನ್ನು ಕೇವಲ ಹಿಡಿಯಷ್ಟು ಜನ ಹೇಗೆ ಆಕ್ರಮಿಸಿದರು ಎಂದು ಆಶ್ಚರ್ಯಗೊಂಡರು.

ಕಣ್ಣಿನ ತಜ್ಞ

ಮೂಂಜೆಯವರು ಕಣ್ಣಿನ ತಜ್ಞರು. ಅತ್ಯುತ್ತಮ ವೈದ್ಯರೆಂದು ನಾಗಪುರದಲ್ಲೆಲ್ಲಾ ಹೆಸರುವಾಸಿಯಾದರು. ಅಂಗಗಳಲ್ಲಿ ಅತಿಸೂಕ್ಷ್ಮವಾದುದು ಕಣ್ಣು. ಕಣ್ಣಿನ ಪರೀಕ್ಷೆ ಅಥವಾ ಶಸ್ತ್ರ ಚಿಕಿತ್ಸೆ ಬಹಳ ಕಷ್ಟಕರವಾದುದು. ಆದ್ದರಿಂದ ಕಣ್ಣಿನ ಸಂಪೂರ್ಣ ಅಧ್ಯಯನ ಮಾಡಬೇಕೆಂದು ಮೂಂಜೆ ನಿರ್ಧರಿಸಿದರು. ಅದಕ್ಕಾಗಿ ಆಗ ತಾನೇ ಸತ್ತ ಪ್ರಾಣಿಗಳ ಕಣ್ಣನ್ನು ತೆಗೆದುಕೊಂಡು ಪರೀಕ್ಷಿಸುತ್ತಿದ್ದರು. ಕಣ್ಣು ಹಾಗೂ ಅದಕ್ಕೆ ಸಂಬಂಧಪಟ್ಟ ನರಗಳು ಮುಂತಾದವುಗಳ ಬಗ್ಗೆ ಪೂರ್ಣವಾದ ಜ್ಞಾನವನ್ನು ಸಂಪಾದಿಸಿದರು. ಅದುವರೆಗೆ ಸರಿಯಾದ ವೈದ್ಯರಿಲ್ಲದೆ ಕಣ್ಣಿನ ಬಾಧೆಯಿಂದ ತೊಂದರೆಪಡುತ್ತಿದ್ದ ನೂರಾರು ಜನರಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ನೇತ್ರದಾನ ಮಾಡಿದರು. ನೇತ್ರದಾನಿಯೆಂದು ಹೆಸರು ಪಡೆದರು.

ಪ್ರಾರಂಭದಲ್ಲಿ ಸತ್ತ ಪ್ರಾಣಿಗಳ ಮೇಲೆ ಪ್ರಯೋಗ ನಡೆಸುತ್ತಿದ್ದ ಮೂಂಜೆಯವರನ್ನು ಹಲವರು ಅಪಹಾಸ್ಯ ಮಾಡುತ್ತಿದ್ದರು. ಅವರಿಗೆ ಅನೇಕ ರೀತಿ ತೊಂದರೆ ಕೊಡುತ್ತಿದ್ದರು. ಆದರೆ ಮೂಂಜೆಯವರು ಉತ್ತಮ ನೇತ್ರ ಚಿಕಿತ್ಸಕರೆಂದು ಪ್ರಸಿದ್ಧಿ ಪಡೆದ ನಂತರ ಅವರಿಗೆಲ್ಲಾ ತಮ್ಮ ಮುಂಚಿನ ವರ್ತನೆಯಿಂದ ಪಶ್ಚಾತ್ತಾಪವಾಯಿತು. ತಾವೇ ಹೋಗಿ ಮೂಂಜೆಯವರ ಗೆಳೆತನ ಸಂಪಾದಿಸಿದರು.

ಮೂಂಜೆಯವರು ನೇತ್ರ ಚಿಕಿತ್ಸೆಯ ಬಗ್ಗೆ ಸಂಸ್ಕೃತದಲ್ಲಿ “ನೇತ್ರ ಚಿಕಿತ್ಸ” ಎಂಬ ಪುಸ್ತಕವನ್ನು ಬರೆದರು. ಸಂಸ್ಕೃತದಲ್ಲಿ ಪರಿಣತಿಯನ್ನು ಪಡೆದಿದ್ದ ಅವರು ಸಂಸ್ಕೃತ ವ್ಯಾಕರಣದ ಬಗ್ಗೆ ಅನೇಕ ಲೇಖನಗಳನ್ನು ಬರೆದರು.

ಕಾಂಗ್ರೆಸ್‌ ಸಂಸ್ಥೆಯಲ್ಲಿ

೧೯೦೪ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನವು ಮುಂಬಯಿಯಲ್ಲಿ ಜರುಗಿತು. ಆ ದಿನಗಳಲ್ಲಿ ಕಾಂಗ್ರೆಸ್‌ ಒಂದು ರಾಜಕೀಯ ಪಕ್ಷವಾಗಿರಲಿಲ್ಲ. ದೇಶಕ್ಕೆ ಸ್ವಾತಂತ್ರ‍್ಯವನ್ನು ಗಳಿಸಿ ಕೊಡುವ ಉದ್ದೇಶದಿಂದ ಪ್ರಾರಂಭವಾದ ಚಳವಳಿ ಅದು. ಕಾಂಗ್ರೆಸ್ಸಿನಲ್ಲಿ ಸೌಮ್ಯಪಕ್ಷದವರಿದ್ದರು. ಉಗ್ರಗಾಮಿಗಳೂ ಇದ್ದರು. ಕ್ರಾಂತಿಕಾರಿಗಳೂ ಸೇರಿದ್ದರು.

ಇಪ್ಪತ್ತನೆಯ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನದಲ್ಲಿ ಡಾ. ಮೂಂಜೆಯವರು ಭಾಗವಹಿಸಿದ್ದರು. ಅಲ್ಲಿ ತಿಲಕರ ಮಾರ್ಗದರ್ಶನದಿಂದ ಪ್ರಭಾವಿತರಾದರು. ತಾವೂ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ನಿಶ್ಚಯಿಸಿದರು. ವೈದ್ಯಕೀಯ ಕಾರ್ಯಗಳನ್ನು ನಿಲ್ಲಿಸಿದರು. ಚಿಕಿತ್ಸಾಲಯವನ್ನು ಮುಚ್ಚಿದರು. ತಮ್ಮ ತನು-ಮನ-ಧನಗಳನ್ನು ದೇಶಕ್ಕೆ ಮುಡಿಪು ಮಾಡಿ ರಾಜಕಾರಣದಲ್ಲಿ ಧುಮುಕಿದರು.

ಕಾಂಗ್ರೆಸ್‌ ಸಂಸ್ಥೆಯನ್ನು ಸೇರಿದ ಮೂಂಜೆ ನಾಗಪುರದಲ್ಲಿ ಅನೇಕ ಚಳವಳಿಗಳನ್ನು ಯಶಸ್ವಿಯಾಗಿ ನಡೆಸಿದರು. ಬ್ರಿಟಿಷ್‌ ಸರ್ಕಾರವು ನಡೆಸುತ್ತಿದ್ದ ಅತ್ಯಾಚಾರಗಳನ್ನು ಜನರಿಗೆ ತಿಳಿಸಿ ಹೇಳಿದರು. ವಿದೇಶೀ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಜನರಿಗೆ ಕರೆಕೊಟ್ಟರು, ಇದರಿಂದ ಬ್ರಿಟಿಷ್‌ ಸರ್ಕಾರದ ಶತ್ರು ಎನಿಸಿಕೊಂಡರು.

೧೯೧೪ರಲ್ಲಿ ಮೂಂಜೆ “ಮಹಾರಾಷ್ಟ್ರ”. ಎಂಬ ಮರಾಠಿ ಪತ್ರಿಕೆಯನ್ನು ಸ್ಥಾಪಿಸಿದರು. ಲೋಕಮಾನ್ಯ ತಿಲಕರು ಸ್ಥಾಪಿಸಿದ “ಹೋಂ ರೂಲ್ ಲೀಗ್‌” ಸಂಸ್ಥೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ಕೊಟ್ಟರು. ಅದೇ ಸಮಯದಲ್ಲಿ ಪ್ರಥಮ ಮಹಾಯುದ್ಧ ಆರಂಭವಾಯಿತು. ಇಂಗ್ಲೆಂಡ್ ಯುದ್ಧದಲ್ಲಿ ಭಾರತದ ಸಹಾಯವನ್ನು ಅಪೇಕ್ಷಿಸಿತು. ಅದಕ್ಕಾಗಿ ಭಾರತದ ವೈಸರಾಯ್‌, ಎಲ್ಲ ಪಕ್ಷಗಳ ಮುಖಂಡರ ಸಭೆಯನ್ನು ಕರೆದ. ಅದರಲ್ಲಿ ಮೂಂಜೆಯವರೂ ಭಾಗವಹಿಸಿದ್ದರು. ಯುದ್ಧದಲ್ಲಿ ಇಂಗ್ಲೆಂಡಿಗೆ ಭಾರತದ ಜನತೆ ಸಹಾಯ ಮಾಡಬೇಕೆಂದು ವೈಸರಾಯ್‌ ಪ್ರಾರ್ಥಿಸಿದನು. ಮೂಂಜೆಯವರು, “ಭಾರತದ ಯುವಕರಿಗೆ ಸೇನಾ ತರಬೇತಿಯನ್ನು ಕೊಡಬೇಕು. ಭಾರತಕ್ಕೆ ಸ್ವಾತಂತ್ರ‍್ಯ ಕೊಡಬೇಕು. ಆಗ ಮಾತ್ರ ಭಾರತದ ಜನತೆ ಯುದ್ಧದಲ್ಲಿ ಇಂಗ್ಲೆಂಡಿಗೆ ಸಹಕಾರ ನೀಡುವುದು” ಎಂದು ತಿಳಿಸಿದರು. ಆದರೆ ಬ್ರಿಟಿಷ್‌ ಸರ್ಕಾರ ಅದಕ್ಕೆ ಒಪ್ಪಲಿಲ್ಲ.

ಹಿಂದೂಗಳ ಸಂಘಟನೆ

೧೯೨೦ರಲ್ಲಿ ತಿಲಕರ ಮರಣದ ನಂತರ ಮಹಾತ್ಮಾಗಾಂಧಿಯವರು ಕಾಂಗ್ರೆಸ್ಸಿನ ನಾಯಕತ್ವವನ್ನು ವಹಿಸಿಕೊಂಡರು. ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡಬೇಕೆಂದು ಅವರ ಆಕಾಂಕ್ಷೆ. ಜೊತೆಗೆ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಬೇಕೆಂದು ಅವರು ಆಶಿಸಿದರು. ಮುಸ್ಲಿಮರಿಗೋಸ್ಕರ ಹಿಂದೂಗಳು ಸರ್ವರೀತಿಯ ತ್ಯಾಗವನ್ನೂ ಮಾಡಬೇಕೆಂದು ಅವರು ಕರೆಕೊಟ್ಟರು.

ಆದರೆ ಅಂದಿನ ಹಲವು ಮುಸ್ಲಿಂ ನಾಯಕರಿಗೆ ಹಿಂದೂ-ಮುಸ್ಲಿಂ ಐಕ್ಯತೆ ಬೇಡವಾಗಿತ್ತು.

ಮೂಂಜೆಯವರು ಇದನ್ನು ಗಮನಿಸಿದರು. ಅವರಿಗೆ ಯಾವ ಮತದವರ ಮೇಲೂ ದ್ವೇಷವಿರಲಿಲ್ಲ. ಪ್ಲೇಗನ್ನು ತಡೆಗಟ್ಟುವ ಕೆಲಸವನ್ನು ಕೈಗೊಂಡಾಗ ಅವರು ಏರ್ಪಡಿಸಿದ ಸಮಿತಿಯ ಅಧ್ಯಕ್ಷರೂ ಕಾರ್ಯದರ್ಶಿಗಳೂ ಮುಸ್ಲಿಮರೇ. ಹಿಂದೂ-ಮುಸ್ಲಿಂ ಐಕ್ಯತೆಯ ಹೆಸರಿನಲ್ಲಿ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರಿಗೆ ತುಂಬ ದುಃಖವಾಯಿತು. ಹಿಂದೂಗಳನ್ನು ಸಂಘಟಿಸಬೇಕು. ಹಿಂದೂಗಳು ಒಗ್ಗಟ್ಟಾದರೆ ಮಾತ್ರ ಹಿಂದೂ ಸಮಾಜದ ಉನ್ನತಿಯಾಗುತ್ತದೆ. ಹಾಗೆಯೇ ಭಾರತಕ್ಕೆ ಸ್ವಾತಂತ್ರ್ಯವೂ ದೊರಕುತ್ತದೆ ಎಂಬುದನ್ನು ಅವರು ಮನಗಂಡರು.

ಹಿಂದೂಸಮಾಜದ ಸಂಘಟನೆಗಾಗಿ ಅವರು ಅನೇಕ ಕ್ರಾಂತಿಕಾರರ ಚಟುವಟಿಕೆಗಳನ್ನು ನಡೆಸಿದರು. ಅದುವರೆಗೆ ಬೇರೆ ಮತಗಳವರು ಹಿಂದೂಗಳಿಗೆ ಹಲವು ಆಸೆಗಳನ್ನು ತೋರಿಸಿ ಮತಾಂತರಗೊಳಿಸುತ್ತಿದ್ದರು. ಹಾಗೆ ಮತಾಂತರ ಹೊಂದಿದವರು ಮತ್ತೆ ಹಿಂದೂ ಧರ್ಮಕ್ಕೆ ಬರಲು ಆಶಿಸಿದರೆ ಅದಕ್ಕೆ ಅವಕಾಶವಿರಲಿಲ್ಲ. ಇದು ತಪ್ಪು ಎನ್ನಿಸಿತು ಮೂಂಜೆಯವರಿಗೆ. ಮತವನ್ನು ಬದಲಾಯಿಸುವಂತೆ ಬಲಾತ್ಕಾರವಾಗಲಿ, ಆಸೆ ತೋರಿಸುವುದಾಗಲಿ ಯಾವ ಮತದವರು ಮಾಡಿದರೂ ತಪ್ಪು. ಆದರೆ ಬೇರೆ ಮತಗಳವರು ಸ್ವಂತ ಇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಲು ಇಚ್ಛಿಸಿದರೆ ಅದಕ್ಕೆ ಹಿಂದುಗಳು ಅವಕಾಶ ಮಾಡಿಕೊಡಬೇಕೆಂದು ನಿಶ್ಚಯಿಸಿದರು. ಶಾಸ್ತ್ರಗಳ ಆಧಾರದಿಂದ “ಶುದ್ಧಿ” ಎಂಬ ಸಂಸ್ಕಾರವನ್ನು ಆಚರಣೆಗೆ ತಂದರು. ಇದರಿಂದ ಹಿಂದೂ ಧರ್ಮಕ್ಕೆ ಸೇರಲು ಬಯಸಿದ ಸಹಸ್ರಾರು ಮಂದಿಯ ಆಸೆ ಈಡೇರಲು ಸಾಧ್ಯವಾಯಿತು. ಅಂದು ಮೂಂಜೆಯವರು ಆರಂಭಿಸಿದ ಈ ಶುದ್ಧಿ ಸಂಸ್ಕಾರ ವಿಧಿಯು ಇಂದು ದೇಶದಾದ್ಯಂತ ವ್ಯಾಪಕ ರೀತಿಯಲ್ಲಿ ನಡೆಯುತ್ತಿದೆ.

ಅಸ್ಪೃಶ್ಯತಾ ನಿವಾರಣೆ

ಸಮಾಜದಲ್ಲಿ ಉಚ್ಚ, ನೀಚ, ಸ್ಪೃಶ್ಯ, ಅಸ್ಪೃಶ್ಯ ಎಂಬ ಭೇದಗಳನ್ನು ಅವರು ಕಟುವಾಗಿ ವಿರೋಧಿಸುತ್ತಿದ್ದರು. ತಾವು ಆಡಿದಂತೆ ಮಾಡಿ ತೋರಿಸುತ್ತಿದ್ದರು. ಅವರ ಆಪ್ತ ಗೆಳೆಯರಲ್ಲಿ ಎಲ್ಲ ಜಾತಿಯವರೂ ಇದ್ದರು. ಗವಾಯಿ ಎಂಬ ತಮ್ಮ ಹರಿಜನ ಮಿತ್ರನ ಮನೆಯಲ್ಲಿ ಅನೇಕ ಬಾರಿ ಊಟ ಮಾಡುತ್ತಿದ್ದರು. ಇದರಿಂದ ಅಸ್ಪೃಶ್ಯರೆನಿಸಿ ಕೊಂಡವರಿಗೆಲ್ಲಾ ತುಂಬ ಸಂತೋಷವಾಯಿತು. ಅವರು ಮೂಂಜೆಯವರ ಸಮೀಪಕ್ಕೆ ಬರಲಾರಂಭಿಸಿದರು. ಆಗ ಅವರ ಪರಿಚಯ ಮಾಡಿಕೊಂಡು ಸಮೀಪವರ್ತಿ ಗಳಾದವರಲ್ಲಿ ಈಗಿನ ಕೇಂದ್ರದ ಮಂತ್ರಿ ಜಗಜೀವನರಾಂರವೂ ಒಬ್ಬರು.

ಹಿಂದೂಗಳು ಒಗ್ಗಟ್ಟಾಗಬೇಕು ಎಂಬ ಉದ್ದೇಶದಿಂದ ಹಿಂದೂ ಮಹಾಸಭೆ ಎಂಬ ರಾಜಕೀಯ ಪಕ್ಷದ ಉದಯವಾಯಿತು. ಈ ಸಂಸ್ಥೆಯನ್ನು ಪ್ರಾರಂಭಿಸಿದವರಲ್ಲಿ ಮೂಂಜೆಯವರೂ ಒಬ್ಬರು. ೧೯೨೭ರಲ್ಲಿ ಮೂಂಜೆಯವರು ಅಖಿಲ ಭಾರತ ಹಿಂದೂ ಮಹಾಸಭೆಯ ಅಧ್ಯಕ್ಷರೂ ಆದರು.

ಶಾಸನ ಸಭೆಯಲ್ಲಿ

ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡಬೇಕಾದರೆ, ಕೇವಲ ಹೊರಗಡೆ ಭಾಷಣಗಳನ್ನು ಮಾಡಿದರೆ ಸಾಲದು. ಶಾಸನ ಸಭೆಗಳನ್ನೂ ಪ್ರವೇಶಿಸಬೇಕು, ಅಲ್ಲೂ ನಾವು ಹೋರಾಟ ನಡೆಸಬೇಕು ಎಂದು ಅವರ ಅಭಿಪ್ರಾಯಪಟ್ಟರು. ೧೯೨೬ರಲ್ಲಿ ಕೇಂದ್ರ ಶಾಸನ ಸಭೆಯ ಸದಸ್ಯರಾಗಿ ಚುನಾಯಿತರಾದರು. ಈ ಸಭೆಯಲ್ಲಿ ನಾಲ್ಕು ವರ್ಷ ಸದಸ್ಯರಾಗಿದ್ದ ಡಾ. ಮೂಂಜೆ ದೇಶಕ್ಕೆ ಸಲ್ಲಿಸಿದ ಸೇವೆ ಅಪಾರ. ಭಾರತ ತನ್ನ ಬಲವನ್ನು ಹೆಚ್ಚಿಸಿಕೊಳ್ಳಬೇಕು, ಶಕ್ತ ಸುಸಜ್ಜಿತ ಸೈನ್ಯ ದೇಶದ ರಕ್ಷಾ ಕವಚ ಎಂದು ಅವರು ಮನಗಂಡಿದ್ದರು. ಕೇಂದ್ರ ಶಾಸನ ಸಭೆಯಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯ ಬಗ್ಗೆ ಅತ್ಯಂತ ಕಳಕಳಿಯನ್ನೂ ಆಸಕ್ತಿಯನ್ನೂ ವ್ಯಕ್ತಪಡಿಸುತ್ತಿದ್ದ ಕೆಲವೇ ಸದಸ್ಯರಲ್ಲಿ ಅವರೂ ಒಬ್ಬರು. ಭಾರತದ ರಕ್ಷಣಾ ವ್ಯವಸ್ಥೆಯ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದರು. ಮೂಂಜೆಯವರು ಪುಸ್ತಕ ಜ್ಞಾನವನ್ನು ಮಾತ್ರ ಹೊಂದಿರಲಿಲ್ಲ. ಸ್ವಂತ ಅನುಭವವನ್ನೂ ಅವರು ಗಳಿಸಿಕೊಂಡಿದ್ದರು. ತಮಗಾಗಿಯೇ ಒಂದು ವಿಮಾನವನ್ನು ಅವರು ಕೊಂಡುಕೊಂಡಿದ್ದರು. ಸ್ವಂತ ವಿಮಾನವನ್ನು ಪಡೆದಿದ್ದ ಭಾರತದ ಪ್ರಪ್ರಥಮ ರಾಜಕಾರಣಿ ಮೂಂಜೆ.

ಈ ಅವಧಿಯಲ್ಲಿ ಶಾಸನ ಸಭೆಯ ಹೊರಗೂ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಿದರು. ಹಿಂದೂ ಯುವಕರಿಗೆ ಶಾರೀರಿಕ ಹಾಗೂ ಸೈನ್ಯ ಶಿಕ್ಷಣ ಕೊಡಿಸಬೇಕೆಂದು ಅವರು ಬಹಳ ಶ್ರಮಪಟ್ಟರು. ೧೯೨೯ರಲ್ಲಿ ನಾಗಪುರದಲ್ಲಿ ಪ್ರಾಂತೀಯ ಬಂದೂಕು ಸಂಸ್ಥೆಯನ್ನು ಪ್ರಾರಂಭಿಸಿದರು. ಸ್ಯಾಂಡ್‌ಹರ್ಸ್ಟ್‌, ಉಲ್‌ವಿಚ್‌ ಮತ್ತು ಕ್ರೌನ್‌ವೆಲ್‌ ಸೈನಿಕ ಶಾಲೆಗಳಲ್ಲಿ ತರಬೇತಿ ಪಡೆದವರನ್ನು ಸರ್ಕಾರವು ಭಾರತದ ಸೇನೆಯಲ್ಲಿ ಅಧಿಕಾರಿಗಳನ್ನಾಗಿ ನಿಯಮಿಸುತ್ತಿತ್ತು. ಈ ಶಾಲೆಗಳಲ್ಲಿ ತರಬೇತಿಗಾಗಿ ತರುಣರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಡಾ.ಮೂಂಜೆಯವರು ಒಬ್ಬ ಪ್ರಮುಖ ಸದಸ್ಯರಾದರು.

೧೯೩೦ರಲ್ಲಿ ಮಹಾತ್ಮಾಜಿಯವರು ಅಸಹಕಾರ ಚಳವಳಿಯನ್ನು ಆರಂಭಿಸಿದರು. “ಎಲ್ಲರೂ ನಿಮ್ಮ ನಿಮ್ಮ ಉದ್ಯೋಗ ಬಿಟ್ಟು ಬನ್ನಿ” ಎಂದು ಕರೆಕೊಟ್ಟರು. ಮೂಂಜೆಯವರೂ ಆ ಕರೆಯನ್ನು ಮನ್ನಿಸಿ ಶಾಸನ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಇತ್ತರು. ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಸರ್ಕಾರ ಅವರನ್ನು ಸ್ವಲ್ಪಕಾಲ ಬಂಧಿಸಿತು.

ಮೂಂಜೆಯವರು ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದರು.

ದುಂಡುಮೇಜಿನ ಪರಿಷತ್ತು

೧೯೩೧ರಲ್ಲಿ ಲಂಡನ್ನಿನಲ್ಲಿ ನಡೆದ ಪ್ರಥಮ ದುಂಡು ಮೇಜಿನ ಪರಿಷತ್ತಿನಲ್ಲಿ ಅವರು ಭಾಗವಹಿಸಿದರು. ಅಲ್ಲಿ ಅವರು ಹಿಂದೂ-ಮುಸ್ಲಿಮರ ಸಮಸ್ಯೆಯನ್ನು ವಿವರಿಸಿದರು. ಹರಿಜನ ಸಮಸ್ಯೆಯ ಬಗ್ಗೆಯೂ ತುಂಬ ಕಳಕಳಿಯನ್ನು ವ್ಯಕ್ತಪಡಿಸಿದರು. ಹರಿಜನ ನಾಯಕ ಡಾಕ್ಟರ್ ಅಂಬೇಡ್ಕರ‍್ರವರಂತೆಯೇ ಮೂಂಜೆಯವರೂ ಹರಿಜನೋದ್ಧಾರದ ಅಗತ್ಯವನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಸರ್ಕಾರವು ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳನ್ನು ತಿಳಿಸಿದರು. ೧೯೩೩ರಲ್ಲಿ ಲಂಡನ್ನಿನಲ್ಲಿ ಇನ್ನೊಂದು ದುಂಡು ಮೇಜಿನ ಪರಿಷತ್ತು ನಡೆಯಿತು. ಅದಕ್ಕೂ ಮೂಂಜೆಯವರು ಹೋಗಿದ್ದರು. ಮಹಾತ್ಮಾ ಗಾಂಧಿಯವರೂ ಪರಿಷತ್ತಿನಲ್ಲಿ ದೇಶದ ಸೇನಾ ವ್ಯವಸ್ಥೆಯ ಬಗ್ಗೆ ತಮ್ಮ ಅಮೂಲ್ಯವಾದ ಸಲಹೆಗಳನ್ನಿತ್ತರು. ಭಾರತದ ಸೈನ್ಯ ಬಿಳಿಯ ಅಧಿಕಾರಿಗಳಿಂದ ತುಂಬಿಹೋಗಿತ್ತು. ಅದನ್ನು ಮೂಂಜೆ ಉಗ್ರವಾಗಿ ವಿರೋಧಿಸಿದರು. ಭಾರತೀಯರು ಬುದ್ಧಿಯಲ್ಲಿ, ಶಕ್ತಿಯಲ್ಲಿ, ಪರಾಕ್ರಮದಲ್ಲಿ, ಇಂಗ್ಲಿಷರಿಗಿಂತ ಯಾವ ರೀತಿಯೂ ಕಡಿಮೆ ಇಲ್ಲ, ಆದ್ದರಿಂದ ಸೈನ್ಯದಲ್ಲಿ ಭಾರತೀಯ ಅಧಿಕಾರಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕೆಂದು ಅವರು ಅಗ್ರಹ ಪಡಿಸಿದರು. ದುಂಡು ಮೇಜಿನ ಪರಿಷತ್ತಿನ ನಂತರ ಅವರು ಯೂರೋಪಿನಲ್ಲಿ ಪ್ರವಾಸ ಮಾಡಿದರು. ಜರ್ಮನಿ, ಫ್ರಾನ್ಸ್‌ ಮುಂತಾದ ದೇಶಗಳಿಗೆ ಭೇಟಿಕೊಟ್ಟರು. ದ್ವಿತೀಯ ಮಹಾಯುದ್ಧಕ್ಕಾಗಿ ಆ ದೇಶಗಳ ಸೈನ್ಯ ಸಜ್ಜಾಗುತ್ತಿದ್ದುದನ್ನು ಅವರು ನೋಡಿದರು. ಭಾರತದ ಸೇನೆ ಹೇಗಿರಬೇಕು ಎಂಬ ಭವ್ಯ ಕಲ್ಪನೆಯನ್ನು ಕಂಡರು.

ಸ್ವತಂತ್ರ ಭಾರತದ ಕಲ್ಪನೆ

ನಮ್ಮ ನಾಡು ಸ್ವತಂತ್ರವಾಗುವ ಮೊದಲೇ ಸ್ವತಂತ್ರ ಭಾರತದ ಕಲ್ಪನೆಯನ್ನು ಮೂಂಜೆ ಹೊಂದಿದ್ದರು. ಬಂಗಾಳ, ಪಂಜಾಬ್‌ ಮೊದಲಾದುವನ್ನು ಮುಸ್ಲಿಂ ಬಹುಸಂಖ್ಯಾತ ಪ್ರಾಂತವೆಂದು ಘೋಷಿಸಬೇಕೆಂದು ಮುಸ್ಲಿಂ ಲೀಗ್‌ ಸಂಸ್ಥೆಯ ನಾಯಕರು ಒತ್ತಾಯ ಪಡಿಸುತ್ತಿದ್ದರು. ಆದರೆ ಮೂಂಜೆಯವರು ಇದನ್ನು ಕಟುವಾಗಿ ವಿರೋಧಿಸಿದರು. ಈ ರೀತಿ ಮುಸ್ಲಿಂ ಬಹುಸಂಖ್ಯಾತ ಪ್ರಾಂತವೆಂದು ಘೋಷಿಸಿದರೆ, ಇಂದಲ್ಲ ನಾಳೆ ಅದು ಮುಸ್ಲಿಂ ರಾಷ್ಟ್ರವಾಗುತ್ತದೆ ಎಂದು ಅವರಿಗೆ ತಿಳಿದಿತ್ತು. ಆದರೆ ದುರ್ದೈವ, ಅಂದಿನ ನಾಯಕರು ಅವರ ಮಾತಿಗೆ ಕಿವಿಗೊಡಲಿಲ್ಲ. ಮುಂದೆ ಭಾರತ ಎರಡು ಹೋಳಾಯಿತು. ಪಂಜಾಬ್‌ ಮತ್ತು ಬಂಗಾಳ ಪ್ರಾಂತಗಳ ಭಾಗಗಳು ಮತ್ತು ಕೆಲವು ಪ್ರದೇಶಗಳು ಸೇರಿ ಪಾಕಿಸ್ತಾನವಾಯಿತು.

ಭೋನ್‌ಸ್ಲೆ ಸೈನಿಕ ಶಾಲೆ

ಕೇಂದ್ರ ಶಾಸನ ಸಭೆಯಲ್ಲಿ ಮೂಂಜೆಯವರು ಭಾರತದಲ್ಲಿ ಒಂದು ಸೈನಿಕ ಶಿಕ್ಷಣ ಶಾಲೆಯನ್ನು ತೆರೆಯಬೇಕೆಂದು ವಾದಿಸಿದಾಗ ಕರ್ನಲ್‌ ಕ್ರಾಫರ್ಡ್‌ ಎಂಬಾತ, “ನಿಮ್ಮ ಹಣವನ್ನೇ ಖರ್ಚು ಮಾಡಿ ನಿಮ್ಮದೇ ಸೈನಿಕ ಶಿಕ್ಷಣ ಶಾಲೆ ತೆರೆಯಬಾರದೇಕೆ?” ಎಂದು ಹಂಗಿಸಿದ ಮೂಂಜೆಯವರು ಉತ್ತರ ಕೊಟ್ಟರು. “ಭಾರತದಲ್ಲಿ ಬ್ರಿಟಿಷ್‌ ಸರ್ಕಾರಕ್ಕಿರುವ ಹಣ ಇಂಗ್ಲೆಂಡಿನಿಂದ ತಂದದ್ದಲ್ಲ, ನಾವು ಕಷ್ಟಪಟ್ಟು ಸಂಪಾದಿಸಿದದು. ನಮ್ಮ ಕಿಸೆಯಿಂದ ಕಿತ್ತುಕೊಂಡದ್ದು. ಆದ್ದರಿಂದ ನಮ್ಮ ದೇಶದ ವರಮಾನವನ್ನು ನಮ್ಮ ದೇಶವನ್ನು ಬಲಗೊಳಿಸುವುದಕ್ಕೆ, ಉತ್ತಮಗೊಳಿಸುವುದಕ್ಕೆ ಬಳಸಬೇಕು ಎಂದು ಕೇಳಲು ನನಗೆ ಸಂಪೂರ್ಣ ಹಕ್ಕಿದೆ.”

ಭಾರತ ಸ್ವತಂತ್ರ ಆಗಿಯೇ ಆಗುತ್ತದೆ. ಸ್ವತಂತ್ರ ಭಾರತಕ್ಕೆ ಶಕ್ತವಾದ ಸೈನ್ಯ ಇರಲೇಬೇಕು, ಇದಕ್ಕಾಗಿ ನಮ್ಮ ತರುಣರಿಗೆ ಯುದ್ಧ ಶಿಕ್ಷಣ ಕೊಡಲೇಬೇಕು ಎಂದು ಸ್ವಾತಂತ್ರ‍್ಯ ಬರುವುದಕ್ಕೆ ಇಪ್ಪತ್ತೈದು ವರ್ಷ ಮೊದಲೇ ಕಂಡಿದ್ದ ದೂರದೃಷ್ಟಿ ಮೂಂಜೆಯವರದು. ಅಹಿಂಸೆಯ ತತ್ವಕ್ಕೆ ಗೌರವವಿದ್ದ ಆ ಕಾಲದಲ್ಲಿ ಇಂತಹ ವಿವೇಚನೆ ಇದ್ದ ನಾಯಕರು ಬಹು ಸ್ವಲ್ಪ ಮಂದಿ.

ಭಾರತದ ಸೈನ್ಯದಲ್ಲಿಯೇ ಭಾರತೀಯರಿಗೆ ಎಷ್ಟು ಅನ್ಯಾಯವಾಗುತ್ತಿದೆ ಎಂದು ಅವರು ತೋರಿಸಿಕೊಟ್ಟರು. ಶಾಸನ ಸಭೆಯಲ್ಲಿ ಮಾತನಾಡುತ್ತಾ ಅವರು ಈ ಅಂಕಿ ಅಂಶಗಳನ್ನು ಕೊಟ್ಟರು. ಹೋರಾಡುವ ಸೈನ್ಯದಲ್ಲಿ ಮೇಲಿನ ಸ್ಥಾನಗಳು ಭಾರತೀಯರಿಗೆ ಸಿಕ್ಕುವುದು ಹಾಗಿರಲಿ; ಸೈನ್ಯಕ್ಕೆ ಸೇರಿದ ಹುಲ್ಲುಗಾವಲುಗಳ ನಿರ್ವಹಣೆಗೆ ಹತ್ತೊಂಬತ್ತು ಮಂದಿ ಮೇಲ್ದರ್ಜೆಯ ಬ್ರಿಟಿಷ್ ಅಧಿಕಾರಿಗಳು; ಭಾರತೀಯರು? ಒಬ್ಬರೂ ಇಲ್ಲ! ೪೦,೦೦೦ ಬ್ರಿಟಿಷ್‌ ಸೈನಿಕರಿಗೆ ಖರ್ಚು ೧೬ ಲಕ್ಷ ರೂಪಾಯಿ; ೯೭,೦೦೦ ಭಾರತೀಯ ಸೈನಿಕರಿಗೆ – ೬ ಲಕ್ಷ ! ಭಾರತದಲ್ಲಿ ಬ್ರಿಟಿಷ್‌ ಸೈನಿಕರ ಆಸ್ಪತ್ರೆಗಳಲ್ಲಿ ೬೦,೦೦೦ ರೋಗಿಗಳಿಗಾಗಿ ಖರ್ಚು ೭೦ ಲಕ್ಷ ರೂಪಾಯಿ; ೨ ಲಕ್ಷ ಭಾರತೀಯ ರೋಗಿಗಳಿಗೆ- ೫೦ ಲಕ್ಷ ರೂಪಾಯಿ!

ಭಾರತೀಯರು ವೀರ ಯೋಧರಾದರೆ ಮಾತ್ರ ಭಾರತದ ಉಳಿವು ಸಾಧ್ಯ ಎಂದು ನಂಬಿದ್ದರು ಮೂಂಜೆಯವರು.

೧೯೩೭ರಲ್ಲಿ ಮೂಂಜೆಯವರು ಕೇಂದ್ರೀಯ ಹಿಂದೂ ಸೈನಿಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಅಂಗವಾಗಿ ನಾಸಿಕದಲ್ಲಿ ೧೯೩೮ರಲ್ಲಿ ಭೋನ್‌ಸ್ಲೆ ಸೈನಿಕ ಶಾಲೆ ಪ್ರಾರಂಭವಾಯಿತು. ಗ್ವಾಲಿಯರ‍್ನ ಮಹಾರಾಜರು ಇದನ್ನು ಪ್ರಾರಂಭಿಸಿದರು. ಕಾಶೀ ವಿದ್ಯಾಲಯದಷ್ಟೇ ದೊಡ್ಡದಾಗಿ ಈ ಶಾಲೆಯು ಬೆಳೆಯಬೇಕೆಂದು ಮೂಂಜೆಯವರು ಆಶಿಸಿದರು. ಕಾಶೀ ವಿದ್ಯಾಲಯ ಬೌದ್ಧಿಕ ಶಿಕ್ಷಣ ಕೊಡುವಂತೆ ಭೋನ್‌ಸ್ಲೆ ಶಾಲೆ ಶಾರೀರಿಕ ಶಿಕ್ಷಣ ನೀಡುತ್ತಿತ್ತು. ಭಾರತೀಯರಿಗೆ ಮೂಂಜೆಯವರ ಅತ್ಯಮೂಲ್ಯ ಕೊಡುಗೆ ಭೋನ್‌ಸ್ಲೆ ಸೈನಿಕ ಶಾಲೆ.

ಸ್ವತಂತ್ರ ಭಾರತ ಪಾಕಿಸ್ತಾನದೊಂದಿಗೆ ಯುದ್ಧ ಮಾಡಿದಾಗ ಈ ಶಾಲೆಯಲ್ಲಿ ಶಿಕ್ಷಣ ಪಡೆದ ಮನೋಹರ ಲಾಲ್‌ ಚಿಟರ್ ಅವರು ಅತಿ ವಿಶಿಷ್ಟ ಸೇನಾಪದಕವನ್ನೂ ಪಿ.ಜಿ.ಕಿಟ್‌ಕುಲೆ ಅವರು ವೀರಚಕ್ರವನ್ನೂ ಎಸ್‌.ಎಂ. ಘಟಾಟೆಯವರು ವಾಯುಸೇನಾ ಪದಕವನ್ನೂ ಗಳಿಸಿದರು.

ಡಾಕ್ಟರ್ ಹೆಡಗೆವಾರ್

ಡಾ.ಮೂಂಜೆಯವರ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಿಗೆ ಅನೇಕ ಜನ ಬೆಂಬಲವನ್ನು ನೀಡಿದರು. ಅವರಲ್ಲಿ ಪ್ರಮುಖರು ಡಾಕ್ಟರ್ ಕೇಶವ ಬಲಿರಾಮಪಂತ ಹೆಡಗೆವಾರ್. ಡಾ.ಹೆಗಡೆವಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರು. ಅವರು ಚಿಕ್ಕದಿನಿಂದಲೂ ಮೂಂಜೆಯವರ ಮನೆಯಲ್ಲೇ ಇದ್ದರು. ಹೀಗಾಗಿ ಮೂಂಜೆಯವರಿಗೆ ಹೆಡಗೆವಾರರಲ್ಲಿ ಶಿಷ್ಯವಾತ್ಸಲ್ಯ.

೧೯೨೦ರ ನಾಗಪುರ ಕಾಂಗ್ರೆಸ್‌ ಅಧಿವೇಶನಕ್ಕಾಗಿ ಮೂಂಜೆಯವರೂ ಡಾ. ಹೆಡಗೆವಾರರೂ ಒಟ್ಟಿಗೆ ಕೆಲಸ ಮಾಡಿದರು. ಹಿಂದೂ ಮಹಾಸಭೆಯ ಸ್ಥಾಪನೆಯಾದಾಗಲೂ ಮೂಂಜೆ ಉಪಾಧ್ಯಕ್ಷರಾಗಿಯೂ ಹೆಡಗೆವಾರರು ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು. ಮೂಂಜೆಯವರು ಸ್ಥಾಪಿಸಿದ ಭೋನ್‌ಸ್ಲೆ ಸೈನಿಕ ಶಾಲೆಯ ಸಂಚಾಲಕ ಸಮಿತಿಯಲ್ಲಿ ಹೆಡಗೆವಾರರೂ ಇದ್ದರು. ಹೀಗೆ ಮೂಂಜೆಯವರಿಗೆ ಹೆಡಗೆವಾರರಿಂದ ವಿಶಿಷ್ಟವಾದ ರೀತಿಯಲ್ಲಿ ಸಹಕಾರ ದೊರಕಿತು.

ಧರ್ಮವೀರ ಡಾಕ್ಟ್‌ ಮೂಂಜೆ

ಮೂಂಜೆಯವರು ಸತ್ಯನಿಷ್ಠರೂ ಸಚ್ಚಾರಿತ್ರ್ಯ ಸಂಪನ್ನರೂ ಆಗಿದ್ದರು. ತಮ್ಮ ಗುರಿಯತ್ತ ಅವರ ದೃಷ್ಟಿ ಸದಾ ಜಾಗೃತವಾಗಿತ್ತು. ತಮಗೆ ಸರಿಯೆನಿಸಿದುದನ್ನು, ಇತರರಿಗೆ ಒಪ್ಪಿಗೆಯಾಗಲಿ, ಬಿಡಲಿ ಸ್ಪಷ್ಟವಾಗಿ ಹೇಳುತ್ತಿದ್ದರು. ವಿರೋಧಿಗಳನ್ನೂ ತಮ್ಮ ಸಮೀಪಕ್ಕೆ ಹೇಳುತ್ತಿದ್ದರು. ವಿರೋಧಿಗಳನ್ನು ತಮ್ಮ ಸಮೀಪಕ್ಕೆ ಆಕರ್ಷಿಸುವ ಮಹಾನ್‌ ವ್ಯಕ್ತಿತ್ವ ಅವರದು. ಅವರದು ಬಹುಮುಖ ಪ್ರತಿಭೆ. ಒಳ್ಳೆಯ ಭಾಷಣಕಾರರಾಗಿದ್ದರು. ಉತ್ತಮ ಲೇಖಕರೂ ಸಮಾಜ ಹಿತಚಿಂತಕರೂ ಶ್ರೇಷ್ಠ ಕ್ರಿಡಾಪಟುವೂ ಆಗಿದ್ದರು. ಕಣ್ಣಿನ ತಜ್ಞರಾಗಿದ್ದರು. ಹಿಂದೂಧರ್ಮದ ಪ್ರಸಾರಕರೂ ಆಗಿದ್ದರು. ಭೋನ್‌ಸ್ಲೆ ಸೈನಿಕ ಶಾಲೆಯನ್ನು ತೆರೆದರು; ಹಾಗೆಯೇ ಗಾಂಧರ್ವ ಮಹಾವಿದ್ಯಾಲಯದ ಎಂಬ ಸಂಗೀತ ಸಂಸ್ಥೆಯನ್ನೂ ಪ್ರಾರಂಭಿಸಿದರು. ಬೋಹರ್‌ ಯುದ್ಧದಲ್ಲಿ ಭಾಗವಹಿಸಿದರು; ಸ್ವದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ವಿದೇಶಗಳಲ್ಲಿ ಪ್ರವಾಸ ಮಾಡಿದರು. ಅಲ್ಲೂ ಶುದ್ಧಿ ಕಾಯಕ್ರಮಗಳನ್ನು ನಡೆಸಿದರು.

೧೯೪೭ರ ಆಗಸ್ಟ್‌ ೧೫ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ತಮ್ಮ ತಾಯ್ನಾಡು ಬಂಧ ಮುಕ್ತವಾಯಿತೆಂದು ಮೂಂಜೆ ತೃಪ್ತಿಗೊಂಡರು. ಅದೇ ತೃಪ್ತಿಯಲ್ಲಿ ೧೯೪೮ರ ಮಾರ್ಚ್‌ ೪ ರಂದು ತಮ್ಮ ಜೀವನದ ಕೊನೆಯುಸಿರನ್ನೆಳದರು.

ಹಲವು ರೀತಿಯಲ್ಲಿ ಸೇವೆ

೧೯೭೨, ಮೂಂಜೆಯವರು ನೂರನೆಯ ಹುಟ್ಟು ಹಬ್ಬದ ಸಮಾರಂಭ ಭಾರತದಲ್ಲೆಲ್ಲ ನಡೆಯಿತು. ಆ ಸಂದರ್ಭದಲ್ಲಿ ರಾಷ್ಟ್ರಪತಿಗಳಾಗಿದ್ದ ವಿ.ವಿ.ಗಿರಿಯವರು, “ಡಾಕ್ಟರ್ ಮೂಂಜೆಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಲ್ಲಿ ಒಬ್ಬರು, ಸ್ವಾತಂತ್ರ‍್ಯ ಬರುವ ಮುನ್ನ ಪ್ರಮುಖ ಪಾತ್ರ ವಹಿಸಿದ ರಾಜಕೀಯ ನಾಯಕರಲ್ಲಿ ಒಬ್ಬರು” ಎಂದರು. ಪ್ರಧಾನಿ ಇಂದಿರಾ ಗಾಂಧಿಯವರು, “ಡಾಕ್ಟರ್ ಮೂಂಜೆಯವರು ನಾಡಿಗೆ ಹಲವು ರೀತಿಗಳಲ್ಲಿ ಸೇವೆ ಸಲ್ಲಿಸಿದರು. ಅವರು ಸ್ಥಾಪಿಸಿದ ಸೈನಿಕ ಶಾಲೆ, ಶಿಸ್ತಿನ ಪ್ರಜ್ಞೆ ಬೆಳೆಸಿಕೊಂಡ ಅನೇಕ ಮಂದಿಯನ್ನು ಕೊಟ್ಟಿದೆ” ಎಂದರು. ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಆಲಿ ಯವಾರ್‌ ಜಂಗರು, ಡಾ.ಮೂಂಜೆಯವರನ್ನು “ಸರ್ವಾರ್ಪಣೆ ಮಾಡಿದ ಕಾರ್ಯನಿಷ್ಠ”ರೆಂದು ವರ್ಣಿಸಿ, “ಅವರ ಕೆಲಸ ಜನತೆಗೆ ಎಂದೂ ಸ್ಪೂರ್ತಿ ನೀಡುತ್ತಿರಲಿ” ಎಂದು ಹಾರೈಸಿದರು.