“೫ ಕುರಿಗಳು ಒಂದು ಹುಲ್ಲುಗಾವಲನ್ನು  ೨೮ ದಿನಗಳಲ್ಲಿ ಮೇಯಬಲ್ಲವು. ೨೦ ದಿನಗಳಲ್ಲಿ ಅದೇ ಹುಲ್ಲುಗಾವಲನ್ನು ಮೇಯಲು ಎಷ್ಟು ಕುರಿಗಳು ಬೇಕು?”

ಗುರುಗಳು ಲೆಕ್ಕವನ್ನು ಹೇಳಿ ಮುಗಿಸುವಷ್ಟರಲ್ಲಿಯೇ ಥಟ್ಟನೆ ಉತ್ತರ ಬಂದಿತ್ತು: “ಯಾರದು ಲೆಕ್ಕ ಮಾಡದೆ ಹೇಳ್ತಾ ಇರೋದು?” ಗುರುಗಳು ಗುಡುಗಿದರು.

“ಬಾಲ ಸಾರ್”- ಎರಡು ಮೂರು ಕಂಠಗಳು ಒಟ್ಟಿಗೆ.

ಗುರುಗಳು ಬಾಲನ ಬಳಿಗೆ ಬಂದರು. ಅವನ ಟಿಪ್ಪಣಿ ಪುಸ್ತಕ ಕೈಗೆ ತೆಗೆದುಕೊಂಡು ನೋಡಿದರು. ಲೆಕ್ಕ ಮಾಡದಿದ್ದರೆ ಹೋಗಲಿ, ಹೇಳಿದ ಲೆಕ್ಕವನ್ನು ಬರೆದುಕೊಳ್ಳುವುದಾದರೂ ಬೇಡವೆ?

“ಎಲ್ಲಿ ಲೆಕ್ಕ ಮಾಡಿರೋದು?”

ಬಾಲ ತೋರುಬೆರಳಿನಿಂದ ತನ್ನ ತಲೆಯನ್ನು ತೋರಿಸಿ ತುಂಟ ನಗೆ ನಕ್ಕ. “ಲೆಕ್ಕ ಬರೆದುಕೊಂಡೇ ಮಾಡಬೇಕು” ಎಂದು ಗುರುಗಳು ಹೇಳಿದಾಗ, “ಏಕೆ? ನಾನು ಬಾಯಲ್ಲೇ ಮಾಡುತ್ತೇನೆ” ಎಂದ ಹುಡುಗ.

ಬುದ್ಧಿವಂತ  – ತುಂಟ

ಬಾಲನ ತಂದೆ ಗಂಗಾಧರ ರಾಮಚಂದ್ರ ತಿಲಕರು ಸಂಸ್ಕೃತ ವಿದ್ವಾಂಸರು.  ಹೆಸರಾಂತ ಶಾಲಾಮಾಸ್ತರರು, ಪಾಂಡಿತ್ಯದಂದಾಗಿ ಅವರು ಎಲ್ಲರ ನೆಚ್ಚಿನ ’ಗಂಗಾಧರ ಶಾಸ್ತ್ರಿ’ಗಳಾಗಿದ್ದರು. ಮನೆಯಲ್ಲೇ ಎಲ್ಲ ಪಾಠ ಕಲಿತುಬಿಡುತ್ತಿದ್ದ ಬಾಲನಿಗೆ ಶಾಲೆಯಲ್ಲಿ ಕಲಿಯುವುದೇನೂ ಉಳಿದಿರುತ್ತಿರಲಿಲ್ಲ.

ಬಾಲ ಅಷ್ಟು ಬುದ್ಧಿವಂತನಾಗಿದ್ದರೂ ತುಂಟತನದಿಂದಾಗಿ ಗುರುಗಳ ಪ್ರೀತಿಗೆ ಪಾತ್ರನಾಗುತ್ತಿರಲಿಲ್ಲ. ಚಿಕ್ಕಂದಿನಿಂದಲೂ ಸ್ವಂತ ನಿಲುವು. ಸ್ವತಂತ್ರ ಪ್ರವೃತ್ತಿ. ತನ್ನ ವಯಸ್ಸಿನ ಬೇ‌ರೆ ಹುಡುಗರಿಂದ ಬಾಲ ತುಂಬಾ ಬೇರೆಯಾಗಿದ್ದ.

ರತ್ನಾಗಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು.

ಒಂದು ಮಧ್ಯಹ್ನ ವಿರಾಮದ  ಆನಂತರ ಗುರುಗಳು ಬರುವ ವೇಳೆಗೆ ವರ್ಗದ ತುಂಬಾ ಕಳ್ಳಕಾಯಿ ಸಿಪ್ಪೆ ಬಿದ್ದಿದೆ. ಗುರುಗಳು ಸಿಟ್ಟಾಗಿದ್ದು ಸಹಜ. ಅವರ ಕೈಗೆ ಬೆತ್ತ ಬಂದಿತು.

“ಕಳ್ಳೆಕಾಯಿ ಸಿಪ್ಪೆ ಹೀಗೆ ಎರಚಾಡಿದವರು ಯಾರು?”

ಎಲ್ಲೆಲ್ಲೂ ನಿಶ್ಯಬ್ದ. ಗುರುಗಳ ಕೋಪ ಮತ್ತಷ್ಟು ಹೆಚ್ಚಿತು.

“ಹೇಳಿ, ಯಾರು ಕಳ್ಳೆಕಾಯಿ ತಿಂದಿದ್ದು?”

ಯಾರು ಒಪ್ಪಿಕೊಳ್ಳಲಿಲ್ಲ. ಗುರುಗಳಿಗೆ ತಾಳ್ಮೆ ಕದಡಿತು. ಸಾಮೂಹಿಕ ಶಿಕ್ಷೆ ಕೊಡಲು ತೀರ್ಮಾನಿಸಿದರು. ಬೆತ್ತ ಹಿಡಿದು ಪ್ರತಿಯೊಬ್ಬರಿಗೂ ಎರಡೆರಡು ಬಿಗಿಯುತ್ತ ಬಂದರು. ಬಾಲನ ಸರದಿ ಬಂತು. ಆದರೆ ಬಾಲ ಕೈ ಚಾಚಲಿಲ್ಲ.

“ನಾನು ಕಳ್ಳೆಕಾಯಿ ತಿನ್ನಲಿಲ್ಲ. ಆದ್ದರಿಂದ ಏಟೂ ತಿನ್ನುವುದಿಲ್ಲ” ಎಂದ.

“ಹಾಗಾದರೆ ತಿಂದವರು ಯಾರು?”

“ಚಾಡಿ ಹೇಳುವುದು ಕೆಟ್ಟದ್ದಂತೆ. ನಾನು ಹೇಳೋಲ್ಲ” ಎಂದ ಹುಡುಗ!

ಅವನ ಧೈರ್ಯ ಮತ್ತು ಸತ್ಯಪ್ರಿಯತೆ ಕಂಡು ಗುರುಗಳ ಮನಸ್ಸೇ ಅಳುಕಿತು. ಕೋಪವೂ ಬಂದಿತು. ಬಾಲನನ್ನು ಶಾಲೆಯಿಂದ ಹೊರಗೆ ಕಳುಹಿಸಿದರು. ಗಂಗಾಧರಶಾಸ್ತ್ರಿಗಳಿಗೆ ದೂರು ಹೋಯಿತು.

ಮಾರನೆಯ ದಿನ ತಂದೆ ಬಾಲನನ್ನು ಶಾಲೆಗೆ ಕರೆದುಕೊಂಡು ಬಂದರು. ತಮ್ಮ ಮಗ ಹೇಳಿದ್ದು ನಿಜ. ಮನೆಯ ಹೊರಗೆ ಏನನ್ನೂ ತಿನ್ನುವುದಿಲ್ಲ ಅವನು. ಅಂಗಡಿಗಳಲ್ಲಿ ತಿನಿಸುಗಳನ್ನು ಕೊಳ್ಳಲು ತಾವೂ ಕಾಸು ಕೊಡುವುದಿಲ್ಲ ಎಂದು ತಿಳಿಸಿಹೋದರು.

ಅನ್ಯಾಯವನ್ನು ಪ್ರತಿಭಟಿಸುವ ಸ್ವಭಾವ ಆ ಪುಟ್ಟ ವಯಸ್ಸಿನಲ್ಲೇ ಅವನಲ್ಲಿ ಬೇರೂರಿತ್ತು.

"ನಾನು ಕಳ್ಳೆಕಾಯಿ ತಿನ್ನಲಿಲ್ಲ. ಆದ್ದರಿಂದ ಏಟೂ ತಿನ್ನುವುದಿಲ್ಲ" ಎಂದ.

ಬಾಲ್ಯ

ಬಾಲನಿಗೆ ಕತೆಗಳೆಂದರೆ ಪ್ರಾಣ. ಓದುಬರಹ ಮುಗಿಸಿದ ಕೂಡಲೇ ತಾತನ ಬಳಿಗೆ ಬರುತ್ತಿದ್ದ. ಆಗ ತಾತ ಕತೆ ಹೇಳಬೇಕು. ೧೮೫೭ರ ಕ್ರಾಂತಿದಿನಗಳಲ್ಲಿ ಕಾಶಿಯಲ್ಲಿದ್ದ ತಾತ ಅವರು. ಕ್ರಾಂತಿವೀರರಾದ ನಾನಾಸಾಹೇಬ, ತಾತ್ಯಾಟೋಪಿ, ಝಾನ್ಸಿರಾಣಿ ಮೊದಲಾದವರ ಕತೆಗಳನ್ನು ಕೇಳುವಾಗ ಬಾಲನ ಮೈ ಪುಳುಕಿತವಾಗುತ್ತಿತ್ತು. ಅಬ್ಬಾ, ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಜನ ಅವರು! ದೊಡ್ಡವನಾದ ಮೇಲೆ ತಾನೂ ಅವರಂತೆಯೇ ದೇಶಕ್ಕಾಗಿ ದುಡಿಯಬೇಕು; ತಾಯಿ ಭಾರತಿಯನ್ನು ದಾಸ್ಯಮುಕ್ತಳನ್ನಾಗಿಸಬೇಕು ಎಂಬ ಹಂಬಲ.

ಗಂಗಾಧರಶಾಸ್ತ್ರಿಗಳಿಗೆ ಪುಣೆಗೆ ವರ್ಗವಾದಾಗ ಬಾಲನಿಗೆ ೧೦ ವರ್ಷ. ರತ್ನಾಗಿರಿಯಿಂದ ಪುಣೆಗೆ ಬಂದಿದ್ದು ಬಾಲ ತಿಲಕನ ಜೀವನದಲ್ಲಿ ಒಂದು ಮೈಲಿಗಲ್ಲು.

ಹೊಸ ಸ್ಥಳ. ಹೊಸ ಜನ. ಪ್ರಸಿದ್ಧ ಗುರುಗಳಿಂದ ವಿದ್ಯೆ ಪಡೆಯಲು ಪುಣೆಯಲ್ಲಿ ಸಾಧ್ಯವಾಯಿತು. ಬಾಲ ತಿಲಕ್ ಸೇರಿದ್ದು ಪುಣೆಯ ಆಂಗ್ಲೋವರ್ನಾಕ್ಯುಲರ್ ಶಾಲೆಗೆ.

ಪುಣೆಗೆ ಬಂದ ಕೆಲವೇ ತಿಂಗಳಲ್ಲಿ ಬಾಲನ ತಾಯಿ ಪಾರ್ವತೀಬಾಯಿ ತೀರಿಕೊಂಡರು. ವ್ರತ, ಉಪವಾಸಗಳಿಂದ ಬಡಕಲಾಗಿದ್ದ ಶರೀ‌‌‌ರ ಆಕೆಯದು. ಗಂಡು ಸಂತಾನವಿಲ್ಲವೆಂದು ಹದಿನೆಂಟು ತಿಂಗಳ ಕಾಲ ಉಗ್ರವಾದ ಸೂರ್ಯೋಪಾಸನೆಯನ್ನು ನಡೆಸಿ ಪುತ್ರನನ್ನು ಪಡೆದಿದ್ದಳು ಆಕೆ. ಸೂರ್ಯದೇವನ ಅನುಗ್ರಹದಿಂದ ಜನಿಸಿದ ಆ ಬಾಲಕ ಬ್ರಿಟಿಷ್ ಸಾಮ್ರಾಜ್ಯದ ಮೇಲಿನ ಸೂರ್ಯನನ್ನೇ ಮುಳುಗಿಸಿಬಿಟ್ಟ!

ತಾಯಿಯನ್ನು ಕಳೆದುಕೊಂಡ ೬ ವರ್ಷಗಳಲ್ಲೇ ಬಾಲನು ತಂದೆಯನ್ನೂ ಕಳೆದುಕೊಂಡ. ಆಗ ಅವನ ವಯಸ್ಸು ೧೬ ವರ್ಷ. ಮೆಟ್ರಿಕ್ಯುಲೇಷನ್ ಓದುತ್ತಿದ್ದ. ಹತ್ತು ವರ್ಷದ ಸತ್ಯಭಾಮ ಎಂಬ ಹುಡುಗಿಯೊಡನೆ ಮದುವೆಯಾಗಿತ್ತು.

ಕಾಲೇಜಿನಲ್ಲಿ

ವಿವಾಹದ ಅನಂತರ ಜವಾಬ್ದಾರಿ ಹೆಚ್ಚಾಗಲೇಬೇಕು ಬಾಲ ತಿಲಕ ಈಗ ’ಬಾಲಗಂಗಾಧರ ತಿಲಕರು’.

ಮೆಟ್ರಿಕ್ಯುಲೇಷನ್ ಮುಗಿಸಿದ ತಿಲಕರು ಡೆಕ್ಕನ್ ಕಾಲೇಜಿಗೆ ಸೇರಿದರು. ತಿಲಕರ ದೇಹಸ್ಥತಿ ತನ್ನ ತಾಯಿಯಂತೆ ದುರ್ಬಲ. ದೇಶಕ್ಕಾಗಿ ದೇಹ ಸಮರ್ಪಿಸಿಕೊಳ್ಳಬೇಕೆಂದಿರುವಾಗ ದೇಹವೇ ಬಡಕಲಾದರೆ? ಕಾಲೇಜಿಗೆ ಸೇರಿದ ಮೊದಲ ವರ್ಷ ಅಭ್ಯಾಸವನ್ನು ಕಡೆಗಣಿಸಿಯಾದರೂ ದೇಹಸಂಪತ್ತನ್ನು ಬೆಳೆಸಿಕೊಳ್ಳಲು ಮನಸ್ಸು ಮಾಡಿದರು.

ಪ್ರತಿನಿತ್ಯ ವ್ಯಾಯಾಮ. ಯೋಗ್ಯ ನಿಯಮಿತ ಪೌಷ್ಟಿಕ ಆಹಾರ ಸೇವನೆ.

ಒಂದೇ ವರ್ಷದಲ್ಲಿ ತಿಲಕರು ಕಾಲೇಜಿನ ಎಲ್ಲ ಆಟಗಳಲ್ಲೂ ಮುಂದು. ಕುಸ್ತಿ ಮತ್ತು ಈಜುವುದರಲ್ಲಿ ನಿಜಕ್ಕೂ ನಿಸ್ಸೀಮರು. ಎಲ್ಲರನ್ನೂ ಬೆರಗುಗೊಳಿಸುವ ಶಾರೀರಕ ಕಾಂತಿ!

೧೮೭೭ರಲ್ಲಿ ತಿಲಕರು ಬಿ.ಎ.ಪದವೀಧರರಾದರು. ಗಣಿತದಲ್ಲಿ ಪ್ರಥಮಶ್ರೇಣಿಯ ಅಂಕಗಳನ್ನು ಪಡೆದಿದ್ದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆಯೇ ವ್ಯಾಸಂಗ ಮುಂದುವರೆಸಿ ಎಲ್.ಎಲ್.ಬಿ. ಪದವಿಯನ್ನೂ ಪಡೆದುಕೊಂಡರು.

ದೇಶಕ್ಕೆ ಮುಡಿಪು

ಎರಡು ಪದವಿಗಳನ್ನು ಗಳಿಸಿದ್ದ ತಿಲಕರು ಎಲ್ಲರಂತೆ ಬ್ರಿಟಿಷರ ಅಧೀನದಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಹಿಡಿದು ಕೈತುಂಬಾ ಸಂಬಳ ಪಡೆಯಬಹುದಿತ್ತು. ಆದರೆ ಅವರು ಚಿಕ್ಕವಯಸ್ಸಿನಲ್ಲೇ ನಿರ್ಧರಿಸಿದ್ದಂತೆ ದೇಶಸೇವಾವ್ರತವನ್ನು ಕೈಗೊಂಡರು.

ಜನರಲ್ಲಿ ಸ್ವರಾಜ್ಯದ ಕಲ್ಪನೆಯನ್ನು ಅರಳಿಸಬೇಕು. ಸ್ವಾತಂತ್ರ್ಯದಾಹವನ್ನು ಕೆರಳಿಸಬೇಕು. ದೇಶಾಭಿಮಾನವನ್ನು ಬೆಳೆಸಬೇಕು. ಇದಕ್ಕೆ ಬಲವಾದ ಬುನಾದಿ ಹಾಕಬೇಕಾದರೆ ಭಾರತೀಯತೆಯನ್ನು ಪ್ರತಿಬಿಂಬಿಸುವ ನಮ್ಮದೇ ಆದ ಒಂದು ವಿದ್ಯಾಸಂಸ್ಥೆ ಆರಂಭಿಸಬೇಕು. ಭಾರತದ ಸಂಸ್ಕೃತಿ, ಆದರ್ಶಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ತಿಳಿಸಬೇಕು. ಉತ್ತಮ ಶಿಕ್ಷಣದಿಂದ ಮಾತ್ರವೇ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ.

ಸಹಪಾಠಿ ಅಗರಕರರಿಂದ ಪೂರ್ಣ ಬೆಂಬಲ ಸಿಕ್ಕಿತ್ತು. ತಿಲಕರು ಮತ್ತು ಅಗರಕರರು ಮನಸ್ಸಿನಲ್ಲಿ ರಾಷ್ಟ್ರೀಯ ವಿದ್ಯಾಭ್ಯಾಸದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಂತೆಯೇ ಮತ್ತೊಬ್ಬ ಮಹಾನ್ ವ್ಯಕ್ತಿ, ವಿಷ್ಣುಶಾಸ್ತ್ರಿ ಚಿಪಳೂಣಕರ್ ಅವರೊಡನೆ ಬಂದು ಸೇರಿಕೊಂಡರು.

ಹೊಸ ಶಾಲೆ – ಮಹಾವೃಕ್ಷ

ಮುಂದಿನ ಪೀಳಿಗೆಯವರಿಗಾದರೂ ಸರಿಯಾದ ವಿದ್ಯಾಭ್ಯಾಸ ನೀಡಬೇಕು. ಜನರಲ್ಲಿರುವ ’ಬ್ರಿಟಿಷರ ಆಡಳಿತ ಭಾರತದ ಪುಣ್ಯಫಲ’ ಎಂಬ ಕುರುಡು ನಂಬಿಕೆಯನ್ನು ಅಳಿಸಿಹಾಕಬೇಕು. ಇದು ಶಾಲಾಮಾಸ್ತರರಾಗಿದ್ದ ಚಿಪಳೂಣಕರರ ಆಸೆ.

ತಿಲಕ್, ಅಗರಕರ್ ಮತ್ತು ಚಿಪಳೂಣಕರ್.

ಒಂದೇ ಧ್ಯೇಯದ ಮೂರು ವ್ಯಕ್ತಿಗಳ ಮಿಲನ-ನೈತಿಕ ಶಕ್ತಿ ಉತ್ತೇಜಿಸುವ ವಿದ್ಯಾಸಂಸ್ಥೆಯೊಂದರ ಜನನ.

ತಿಲಕರು ಯೋಚಿಸಿ ನಿರ್ಮಿಸಿದ ಈ ವಿದ್ಯಾಸಂಸ್ಥೆ ಒಂದು ಆಲದ ಮರದಂತೆ. ಅವರು ನೆಟ್ಟಿ ಸಣ್ಣ ಸಸಿ ಬೃಹದಾಕಾರಕ್ಕೆ ಬೆಳೆಯುತ್ತಾ ಹೋಗಿ, ಬಿಳಲುಗಳನ್ನು ತೂಗಾಡಿಸಿತು; ಬಿಳಲು ನೆಲ ಮುಟ್ಟಿದಲೆಲ್ಲಾ ಹೊಸ ಜೀವ, ಹೊಸ ವಿದ್ಯಾಸಂಸ್ಥೆ.

’ನ್ಯೂ ಇಂಗ್ಲಿಷ್ ಸ್ಕೂಲ್’ ಬೆಳೆದು ಇಂದು ’ಡೆಕ್ಕನ್ ವಿದ್ಯಾಸಂಸ್ಥೆ’ಯಾಗಿದೆ, ಪುಣೆಯ ಫರ್ಗ್ಯುಸನ್ ಕಾಲೇಜು, ಬೃಹನ್ಮಹಾರಾಷ್ಟ್ರ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು, ಸಾಂಗ್ಲಿಯ ವಿಲಿಂಗ್ಡನ್ ಕಾಲೇಜು, ಮುಂಬಯಿಯ ಮುಂಬಯಿ ಕಾಲೇಜು, ಅಲ್ಲದೆ ಅನೇಕ ಪ್ರೌಢಶಾಲೆಗಳನ್ನು ಇಂದು ’ಡೆಕ್ಕನ್ ವಿದ್ಯಾಸಂಸ್ಥೆ’ ನಡೆಸುತ್ತಿದೆ.

೧೮೮೦ರಲ್ಲಿ ಪ್ರಾರಂಭವಾದ ’ನ್ಯೂ ಇಂಗ್ಲಿಷ್ ಸ್ಕೂಲ್’ ಪ್ರಗತಿ ಪಡೆದಂತೆಲ್ಲಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ನಮ್ಮ ಸಂಸ್ಕೃತಿ, ಜೀವನಾದರ್ಶಗಳನ್ನು ಪ್ರತಿಬಿಂಬಿಸುತ್ತಿದ್ದ, ನಮ್ಮದೇ ಆಗಿದ್ದ ಈ ಶಾಲೆ ಅತ್ಯುತ್ತಮ ಫಲಿತಾಂಶವನ್ನೂ ಪಡೆಯುತ್ತಿತ್ತು. ವಿದ್ಯಾರ್ಥಿವೇತನಗಳನ್ನು ತಮ್ಮ ಶಾಲೆಗೇ ಗಿಟ್ಟಿಸುವಂತೆ ಹುಡುಗರನ್ನು ತಯಾರು ಮಾಡುತ್ತಿದ್ದರು ಶಿಕ್ಷಕರು. ತಿಲಕರೂ ಅವರ ಜೊತೆಯ ಕೆಲಸಗಾರರೂ ಶಾಲೆಯ ಅಭಿವೃದ್ಧಿಗಾಗಿ ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಮೊದಲ ವರ್ಷ ಇಡೀ ತಿಲಕರಾಗಲಿ ಚಿಪಳೂಣಕರರಾಗಲಿ ಒಂದು ರೂಪಾಯಿಯ ಸಂಬಳವನ್ನೂ ಪಡೆಯಲಿಲ್ಲ.

ಪತ್ರಕಾರಂಗಕ್ಕೆ ಪ್ರವೇಶ

ಈಗ ತಮ್ಮ ರಾಷ್ಟ್ರೀಯ ಶಿಕ್ಷಣ ಕ್ಷೇತ್ರ ವಿಸ್ತರಿಸಬೇಕೆಂಬ ಯೋಚನೆ. ಶಾಲೆ ಮಾತ್ರವೇ ನಡೆಸುವುದಾದರೆ ಶಿಕ್ಷಣ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗುತ್ತದೆ. ಪ್ರತಿಯೊಬ್ಬ ಭಾರತೀಯನ ಮನಸ್ಸಿಗೂ ನಮ್ಮ ಗುಲಾಮಗಿರಿಯ ವಿಚಾರ ತಟ್ಟುವಂತೆ ಮಾಡಬೇಕು. ಜನ‌ರನ್ನು ಸಂಘಟಿಸಬೇಕು ಜನಜಾಗೃತಿ ಮಾಡಬೇಕು. ಇವಕ್ಕೆಲ್ಲಾ ಪತ್ರಿಕೆಗಳೇ ಸುಲಭ ಮಾಧ್ಯಮ ಎಂಬ ಯೋಚನೆ ತಿಲಕರದು.

ಶಾಲೆ ಪ್ರಾರಂಭವಾದ ಮರುವರ್ಷವೇ ಎರಡು ವಾರಪತ್ರಿಕೆಗಳನ್ನು ಆರಂಭಿಸಿದರು. ’ಕೇಸರಿ’ ಮರಾಠಿ ಪತ್ರಕೆಯದರೆ ’ಮರಾಠಾ’ ಇಂಗ್ಲಿಷ್ ಪತ್ರಕೆ.

ಪತ್ರಿಕೆಗಳು ಜನರನ್ನು ಆಕರ್ಷಿಸಿದವು. ಎರಡೇ ವರ್ಷಗಳಲ್ಲಿ ’ಕೇಸರಿ’ ಭಾರತೀಯ ಭಾಷೆಯ ಇನ್ನಾವ ಪತ್ರಿಕೆಗೂ ಇಲ್ಲದಷ್ಟು ಓದುಗರನ್ನು ಪಡೆಯಿತು. ಸಂಪಾದಕೀಯ ಲೇಖಗಳಲ್ಲಿ ಜನತೆಯ ಕಷ್ಟಗಳ, ವಾಸ್ತವ ಘಟನೆಗಳ, ಚಿತ್ರಣ. ತಮ್ಮ ಹಕ್ಕುಗಳಿಗಾಗಿ ಹೋರಾಡಲು ಪ್ರತಿಯೊಬ್ಬ ಭಾರತೀಯನಿಗೂ ಕರೆ. ಹೇಡಿಯಲ್ಲೂ ಸ್ವಾತಂತ್ರ್ಯದಾಹವನ್ನು ಕೆರಳಿಸುವಂಥ ಮೊನಚಾದ ಮಾತುಗಳು. ಪತ್ರಿಕೆಳಲ್ಲಿ ತಮ್ಮೊಡನೆ ಕೆಲಸ ಮಾಡುತ್ತಿದ್ದವರಿಗೆ ಅವರು ಹೇಳುತ್ತಿದ್ದ ಮಾತುಗಳು: “ನೀವು ವಿಶ್ವವಿದ್ಯಾನಿಲಯದಲ್ಲಿ ಓದುವವರಿಗಾಗಿ ಬರೆಯುತ್ತಿಲ್ಲ, ಹಳ್ಳಿಯವನೊಬ್ಬನೊಡನೆ ಮಾತನಾಡುತ್ತದ್ದೀರಿ ಎಂದು ಭಾವಿಸಿಕೊಳ್ಳಿ….. ನಿಮ್ಮ ವಿಷಯಗಳನ್ನು ಖಚಿತಪಡಿಸಿಕೊಳ್ಳಿ. ನೀವು ಹೇಳುವುದರ ಅರ್ಥ ಬೆಳಕಿನಂತೆ ಸ್ಪಷ್ಟವಾಗಿರಲಿ.”

ಸೆರೆಮನೆ

ಕೊಲ್ಲಾಪುರ ಸಂಸ್ಥಾನದ ಮಹಾರಾಜ ರಾಜಾರಾಮ್ ಸಂತಾನವಿಲ್ಲದೆ ತೀರಿಕೊಂಡಮೇಲೆ ದತ್ತುಪುತ್ರ ಶಿವಾಜಿರಾಮ್ ಸಂತಾನವಿಲ್ಲದೆ ತೀರಿಕೊಂಡಮೇಲೆ ದತ್ತುಪುತ್ರ ಶಿವಾಜಿರಾವ್ ದೊರೆಯಾದ. ಆತನ ಮೇಲೆ ಬ್ರಿಟಿಷರು ನಡೆಸಿದ ಅತ್ಯಾಚಾರಗಳನ್ನು ಖಂಡಿಸಿ ಉಗ್ರವಾದ ಲೇಖನಗಳನ್ನು ’ಕೇಸರಿ’ ಪ್ರಕಟಿಸಿತು. ಬ್ರಿಟಿಷರ ದಬ್ಬಾಳಿಕೆಯ ಬಗ್ಗೆ ಜನತೆ ತಿಳಿಯುತ್ತಿದ್ದಂತೆಯೇ ಪುಣೆ ಮತ್ತು ಕೊಲ್ಲಾಪುರಗಳಲ್ಲಿ ಅಶಾಂತಿ ತಾಂಡವವಾಡಿತು. ’ಕೇಸರಿ’ ಪತ್ರಿಕೆಯ ಮೇಲೆ ಮೊಕದ್ದಮೆ ಹೂಡಿತು ಸರ್ಕಾರ. (ಸತ್ಯ ಸಂಗತಿಯನ್ನು ಪ್ರಕಟಿಸಿದ್ದಕ್ಕೆ!) ತರುಣ ಸಂಪಾದಕರಾಗಿದ್ದ ಅಗರಕರ್ ಮತ್ತು ತಿಲಕರಿಗೆ ನಾಲ್ಕು ತಿಂಗಳ ಕಠಿಣ ಶಿಕ್ಷೆ. ತಿಲಕರು ತಮ್ಮ ಮಿತ್ರನೊಡನೆ ಕಾರಾಗೃಹ ಸೇರಿದರು.

ತಮ್ಮ ಸಂಸ್ಥೆಯಿಂದಲೇ ದೂರ

’ನ್ಯೂ ಇಂಗ್ಲಿಷ್ ಸ್ಕೂಲ್’ ಉತ್ತಮ ಪ್ರಗತಿ ಸಾಧಿಸುತ್ತಿದ್ದಂತಯೇ ’ಫರ್ಗ್ಯುಸನ್ ಕಾಲೇಜ್’ ಮತ್ತು ’ಡೆಕ್ಕನ್ ಎಜುಕೇಷನ್ ಸೊಸೈಟಿ’ ಸ್ಥಾಪಿತವಾದವು. ಯಾವ ಪ್ರಯೋಜನಕ್ಕೂ ಆಸೆ ಪಡದೆ ಸಂಸ್ಥೆಗೆ ಸೇವೆ ಸಲ್ಲಿಸಬೇಕೆಂಬ ತಿಲಕರ ನಿಯಮದ ಬಗ್ಗೆ ಸಂಚಾಲಕ ವರ್ಗದ ಉಳಿದ ಮಂದಿ ಅಸಮಾಧಾನ ವ್ಯಕ್ತಪಡಿಸಲು ಪ್ರಾರಂಭಿಸಿದರು. ಯಾವ ಕಾರ್ಯಕರ್ತನೂ ತಿಂಗಳಿಗೆ ೭೫ರೂ. ಗಳಿಗಿಂತ ಹೆಚ್ಚಿನ ವೇತನ ಅಪೇಕ್ಷಿಸಬಾರದೆಂಬ ತಿಲಕರ ಮಾತನ್ನು ಉಳಿದವರು ವಿರೋಧಿಸಲಾರಂಭಿಸಿದರು. ಕೊನೆಯೇ ಇಲ್ಲದೆ ಅಭಿಪ್ರಾಯಭೇದಗಳು ಬೆಳೆಯುತ್ತಾ ಹೋದಾಗ ತಿಲಕರು ತಾವು ಸ್ಥಾಪಿಸಿದ ವಿದ್ಯಾಸಂಸ್ಥೆಯನ್ನು ಇತರರಿಗೆ ತ್ಯಾಗ ಮಾಡಿದರು.

ಹತ್ತು ವರ್ಷಗಳ ಕಾಲ ಹಗಲಿರುಳೂ ದುಡಿದ ತಮ್ಮ ಸಂಸ್ಥೆಗೆ ತಾವೇ ರಾಜೀನಾಮೆ ಕೊಡಬೇಕಾದಾ‌ಗ ಅಪಾರವಾದ ದುಃಖವಾಯಿತು.

’ಕೇಸರಿ’ ಮತ್ತು ’ಮರಾಠಾ’ ಪತ್ರಕೆಗಳಿಂದ ಲಾಭವಿರಲಿಲ್ಲ. ಸಂಸಾರ ತೂಗಿಸಲು ಉಪ ಉದ್ಯೋಗವೊಂದನ್ನು ಹುಡುಕಬೇಕಾಗಿ ಬಂತು. ಬ್ರಿಟಿಷರ ಅಧೀನದಲ್ಲಿ ಕೆಲಸ ಮಾಡುವುದಂತೂ ಸುಳ್ಳು. ಪ್ರೇಡರ್ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ವಕೀಲಿ ತರಗತಿಗಳನ್ನು ಸ್ವತಂತ್ರವಾಗಿ ಪ್ರಾರಂಭಿಸಿದರು.

ಮಹತ್ವದ ಏಳು ವರ್ಷಗಳು

೧೮೯೦ರಲ್ಲಿ ಶಿಕ್ಷಣ ಕ್ಷೇತ್ರ ಬಿಟ್ಟಾಗಿನಿಂದ ೧೮೯೭ರಲ್ಲಿ ಮತ್ತೆ ಕಾರಾಗೃಹ ಸೇರುವವರೆಗಿನ ಏಳು ವರ್ಷಗಳು ತಿಲಕರ ಜೀವನದಲ್ಲಿ ಮಹತ್ವಪೂರ್ಣ. ಶಿಕ್ಷಕರಾಗಿದ್ದ ಅವರು  ರಾಜಕಾರಣಿಯಾದದ್ದು, ಸಂಸ್ಥೆಯೊಂದರ ಮೇಲ್ವಿಚಾರಕರಾಗಿದ್ದ ಅವರು ರಾಷ್ಟ್ರೀಯ ನಾಯಕರಾಗಿ ಬದಲಾವಣೆಗೊಂಡಿದ್ದು ಈ ಏಳು ವರ್ಷಗಳಲ್ಲೆ.

ಅವರಲ್ಲಿ ಸುಪ್ತವಾಗಿದ್ದ ವಿಶೇಷ ಶಕ್ತಿಯೆಲ್ಲಾ ಒಮ್ಮೆಗೇ ಹತ್ತಾರು ದಿಕ್ಕುಗಳಲ್ಲಿ ನುಗ್ಗಿತ್ತು. ಈ ಏಳು ವರ್ಷಗಳ ಅಲ್ಪ ಕಾಲದಲ್ಲಿ ಎಪ್ಪತ್ತು ವರ್ಷಗಳ ಅನುಭವ ಸಿಕ್ಕಿತ್ತು.

ಎರಡು ವಾರಪತ್ರಿಕೆಗಳ ಜೊತೆಗೆ ವಕೀಲಿ ತರಗತಿಗಳನ್ನು ನಡೆಸಿದ್ದರು. ಸಮಾಜ ಸುಧಾರಣೆಯ ಬಗ್ಗೆ ಸರ್ಕಾರದ ವಿರುದ್ಧ ಒಂದು ಸಮರವನ್ನೇ ಹೂಡಿದ್ದರು. ಬಾಲ್ಯವಿವಾಹ ನಿಷೇಧಿಸಲು ಕರೆ ನೀಡಿ ವಿಧವಾ ವಿವಾಹವನ್ನು ಸ್ವಾಗತಿಸಿದ್ದರು. ಗಣಪತಿ-ಶಿವಾಜಿ ಉತ್ಸವಗಳ ಮೂಲಕ ಜನರನ್ನು ಸಂಘಟಿಸಿದ್ದರು. ಇವಲ್ಲದೆ ಪುಣೆಯ ಪುರಸಭೆಯ ಸದಸ್ಯ, ಮುಂಬಯಿಯ ಶಾಸನಸಭೆಯ ಸದಸ್ಯ, ಮುಂಬಯಿ ವಿಶ್ವವಿದ್ಯಾನಿಲಯದ ಚುನಾಯಿತ ’ಫೆಲೋ’ ಆಗಿದ್ದು, ಕಾಂಗ್ರೆಸ್ ಅಧಿವೇಶನಗಳಲ್ಲಿ ಮುಖ್ಯ ಪಾತ್ರ ವಹಿಸಿದ್ದು, ಇಷ್ಟೆಲ್ಲ ಸಾಲದು ಎಂಬಂತೆ ತಮ್ಮ ಮೊದಲ ಕೃತಿಯಾದ ’ಓರಿಯಾನ್’ ಬರೆದು ಪ್ರಕಟಿಸಿದರು.

ಏಳು ವರ್ಷಗಳ ಕಾಲಾವಕಾಶದಲ್ಲಿ ತಿಲಕರ ಸಾಧನೆಗಳು ಇವು.

ಗಣಪತಿ ಮತ್ತು ಶಿವಾಜಿ ಉತ್ಸವಗಳನ್ನು ರಾಷ್ಟ್ರೀಯ ಉತ್ಸವಗಳನ್ನಾಗಿ ಮಾಡಿದುದು ತಿಲಕರ ಸೂಕ್ಷ್ಮ ಬುದ್ಧಿಗೆ ಮತ್ತು ವ್ಯವಸ್ಥೆ ಮಾಡುವ ಸಾಮರ್ಥ್ಯಕ್ಕೆ ಸಾಕ್ಷಿ. ತಾವೆಲ್ಲ ಒಂದು ಎಂಬುದು ಜನರ ಹೃದಯಕ್ಕೆ ಮುಟ್ಟಬೇಕಾದರೆ ಅವರು ಆಗಾಗ ಒಟ್ಟಿಗೆ ಸೇರಬೇಕು, ಒಂದೇ ಆದರ್ಶಗಳನ್ನು ಕಣ್ಮಮುಂದೆ ಇರಿಸಿಕೊಳ್ಳಬೇಕು, ತಮ್ಮ ಇತರ ಭೇದಗಳನ್ನು ಮರೆತು ಸಂತೋಷದಿಂದ, ಸಂಭ್ರಮದಿಂದ ಸೇರಲು ಅವಕಾಶಗಳಿರಬೇಕು ತಿಲಕರ ಯೋಜನೆಯಿಂದ ಕೆಲವೇ ವರ್ಷಗಳಲ್ಲಿ ಈ ಉತ್ಸವಗಳು ಮಹಾರಾಷ್ಟ್ರದ ಮೂಲೆಮೂಲೆಗೂ ಹಬ್ಬಿದವು.

ಹೆಣಗಳ ಮಧ್ಯೆ ಸರ್ಕಾರದ ಉತ್ಸವ

೧೮೯೬ರಲ್ಲಿ ಕ್ಷಾಮ ತಲೆದೋರಿತು. ಜನರ ಕಷ್ಟಗಳನ್ನು ಕೂಡಲೇ ಪರಿಹರಿಸುವಂತೆ ತಿಲಕರು ಸರ್ಕಾರಕ್ಕೆ ಒತ್ತಾಯ ಮಾಡಿದರು. ಬರಗಾಲಪೀಡಿತ ಪ್ರದೇಶಗಳ ರೈತಬಾಂಧವರಿಗೆ ನೆರವಾದರು. ಪ್ರತಿ ಜಿಲ್ಲೆಯ ಜನರ ಸ್ಥಿತಿಗತಿಗಳನ್ನು ತಿಳಿದುಕೊಂಡು ’ಮರಾಠಾ’ಮತ್ತು ’ಕೇಸರಿ’ಯಲ್ಲಿ ಪ್ರಕಟಿಸುತ್ತಿದ್ದರು.

ಜನ ಕ್ಷಾಮದ ಬೇಗೆಯಲ್ಲಿ ಬಿದ್ದಿರುವಾಗಲೇ ಪ್ಲೇಗ್ ಬೇನೆ ಕಾಣಿಸಿಕೊಂಡಿತು. ತಿಲಕರು ಕೆಲವು ಆಸ್ಪತ್ರೆಗಳನ್ನು ತೆರೆದು ಸ್ವಯಂಸೇವಕರ ಸಹಾಯದಿಂದ ರೋಗಿಗಳನ್ನು ಪೋಷಿಸಿದರು.

ಬರಗಾಲ ಮತ್ತು ಪ್ಲೇಗಿನಿಂದ ಜನ ತತ್ತರಿಸುತ್ತಿದ್ದರೂ ಸರ್ಕಾರ ಆ ಬಗ್ಗೆ ಅಸಡ್ಡೆ ತೋರಿಸಿತ್ತು. ಚಿಂತೆಗೆ ಕಾರಣವಿಲ್ಲ ಎಂದು ವೈಸರಾಯನೇ ಹೇಳಿದ.  ಕ್ಷಾಮಪರಿಹಾರ ನಿಧಿಯನ್ನು ಪ್ರಾರಂಭಿಸುವುದೂ ಅಗತ್ಯವಿಲ್ಲ ಎಂದ! ಕಂದಾಯದ ವಸೂಲಿ ಎಂದಿನಂತೆ ಸಾಗಿತು. ಸರ್ಕಾರದ ಉದಾಸೀನತೆಯನ್ನು ಉಗ್ರಾವಾಗಿ ಟೀಕಿಸಿದ ಲೇಖನಗಳು ತಿಲಕರ ಪತ್ರಿಕೆಗಳಲ್ಲಿ! ಕ್ಷಾಮ ಮತ್ತು ಪ್ಲೇಗಿನ ಭೀಕರ ಹಾವಳಿಯ ವರದಿಗಳನ್ನೂ ಅವು ನಿರ್ಭಯವಾಗಿ ಪ್ರಕಟಿಸಿದವು. ಸಂಪಾದಕೀಯದಲ್ಲಿ ಜನರಿಗೆ ಮನವಿಗಳು, ಬುದ್ಧಿವಾದಗಳು, ಕ್ಷಾಮಪರಿಹಾರ ಶಾಸನವನ್ನು ತಿಲಕರು ಜನರಿಗೆ ವಿವರಿಸಿದರು; ’ಅದರಂತೆ ಸರ್ಕಾರದಿಂದ ಪರಿಹಾರ ಪಡೆಯಿರಿ, ಅದು ನಿಮ್ಮ ಹಕ್ಕು’ ಎಂದು ಉಪದೇಶಿಸಿದರು. ’ಸಾಯುವಾಗಲೂ ನೀವು ಹೇಡಿಗಳೇ? ಧೈರ್ಯ ತಂದುಕೊಳ್ಳಲಾರಿರಾ?’ ಎಂದು ಪ್ರಶ್ನಿಸಿದರು. ರೋಗ ತಡೆಯಲು ಸರ್ಕಾರಕ್ಕೆ ಕ್ರಿಯಾತ್ಮಕ ಸೂಚನೆಗಳನ್ನು ಕೊಟ್ಟರು.

ವಿಕ್ಟೋರಿಯಾ ರಾಣಿಯವರ ಆಡಳಿತದ ಬಜ್ರಮಹೋತ್ಸವಕ್ಕೆ ಸಿದ್ಧತೆಗಳನ್ನು ನಡೆಸಿತು ಸರ್ಕಾರ.

ಒಂದು ಕಡೆ ಪ್ಲೇಗಿಗೆ ಆಹುತಿಯಾದವರಿಗೆ ಸಂಸ್ಕಾರ ನಡೆಸಲು ಸ್ಮಶಾನದಲ್ಲಿ ಬಿಡುವಿಲ್ಲದ ಕೆಲಸ, ಮತ್ತೊಂದು ಕಡೆ ವಜ್ರಮಹೋತ್ಸವ ಆಚರಿಸಲು ಸಂತೋಷ ಸಮಾರಂಭಕ್ಕೆ ಸರ್ಕಾರದ ಸಿದ್ಧತೆ.

’ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕು’

ಪ್ಲೇಗ್ ಹರಡದಂತೆ ಕ್ರಮ ಕೈಗೊಳ್ಳಲು ಒಬ್ಬ ವಿಶೇಷ ಪ್ರೇಗ್ ಅಧಿಕಾರಿಯನ್ನು ಸರ್ಕಾರ ನಿಯಮಿಸಿತು. ಆತನೇ ಪ್ರೇಗಿಗಿಂತ ಭಯಂಕನಾದ ಪುಣ್ಯಾತ್ಮ ರ್ಯಾಂಡ್! ಅವನು ಸಶಸ್ತ್ರ ಸೈನಿಕರನ್ನು ಕಳಿಸಿ ಪ್ಲೇಗ್ ಸೋಂಕಿರುವ ಮನೆಗಳನ್ನು ಖಾಲಿ ಮಾಡಿಸತೊಡಗಿದ.

ಸೈನಿಕರು ಮನೆಗಳಿಗೆ ನುಗ್ಗುತ್ತಾರೆ.   ಬಂದೂಕು ತೋರಿಸಿ ಹೆದರಿಸುತ್ತಾರೆ. ಕೈಗೆ ಸಿಕ್ಕಿದವನನ್ನು ಆಸ್ಪತ್ರೆಗೆ ಸೇರಲೇಬೇಕು. ಆತನ ಮನೆಯ ಉಳಿದ ಮಂದಿಯನ್ನೂ ದೂರದ ಶಿಬಿರಕ್ಕೆ ಕೊಂಡುಯ್ಯತ್ತಾರೆ. ಮನೆಯಲ್ಲಿನ ಎಲ್ಲ ಪದಾರ್ಥಗಳನ್ನು ಪ್ಲೇಗ್ ಸೋಂಕಿದೆಯೆಂದು ಸುಟ್ಟು ಭಸ್ಮಮಾಡುತ್ತಾರೆ.

ಪ್ಲೇಗ್ ರೋಗಕ್ಕಿಂತ ದೊಡ್ಡ ಪ್ಲೇಗ್ ಆದ ರ್ಯಾಂಡ ಸಾಹೇಬ!

ತಿಲಕರು ಮಾತ್ರ ತಮ್ಮದೇ ಆದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಜೀವದಾನ ಮಾಡಲು ಹಗಲಿರುಳೂ ಶ್ರಮಿಸುತ್ತಿದ್ದರು.

’ಸರ್ಕಾರಕ್ಕೆ ತಲೆ ಕೆಟ್ಟಿದೆಯೆ?

ಸರ್ಕಾರದ ಪ್ಲೇಗ್ ನಿರೋಧಕ ಕ್ರಮಗಳನ್ನು ಕಂಡು ರೋಸಿಹೋದ ಯುವಕನೊಬ್ಬ ಪ್ಲೇಗಿನ ಸ್ಪೆಷಲ್ ಆಫೀಸರ್ ಆಗಿದ್ದ ರ್ಯಾಂಡ್‌ನನ್ನು ಗುಂಡಿಕ್ಕಿ ಕೊಂದ. ಈ ಘಟನೆಗೆ ಪ್ರತೀಕಾರವಾಗಿ ಪುಣೆಯಲ್ಲಿ ಪೋಲಿಸರ ದಬ್ಬಾಳಿಕೆ, ಅತ್ಯಾಚಾರಗಳು ಆರಂಭವಾದವು.

ತಿಲಕರ ರಕ್ತ ಕುದಿಯಿತು.

ಸರ್ಕಾರಕ್ಕೆ ತಲೆ ಕೆಟ್ಟಿದೆಯೆ?’ಎಂಬ ತಲೆ ಬರಹದ ಅಡಿ ಒಂದು ಲೇಖನ ’ಕೇಸರಿ’ಯಲ್ಲಿ! ಅದರಲ್ಲಿ ಸರ್ಕಾರದ ನೀತಿಗೆಟ್ಟ ಕ್ರಮಗಳನ್ನು ಖಂಡಿಸಿದ್ದರು.

ತಿಲಕರ ಲೇಖನಗಳ ಕಾವು ತಟ್ಟುತ್ತಿದ್ದಂತೆಯೆ ನಡುಗಿತು ಸರ್ಕಾರ. ತಿಲಕರನ್ನು ಹಾಗೆಯೇ ಬಿಟ್ಟರೆ ತಮಗೆ ಉಳಿಗಾಲವಿಲ್ಲ. ಏನಾದರೂ ಮಾಡಿ ತಿಲಕರನ್ನು ಸೆರೆಮನೆಯಲ್ಲಿಡಬೇಕು.

ರ್ಯಾಂಡ ಸಾಹೇಬನ ಕೊಲೆಯಲ್ಲ ತಿಲಕರ ಕೈವಾಡ ಇರಬಹುದೋ ಏನೋ ಎಂಬ ಅನುಮಾನ ಸರ್ಕಾರಕ್ಕೆ! ’ಕೇಸರಿ’ಯಲ್ಲಿ  ಪ್ರಕಟವಾಗಿದ್ದ ಒಂದು ಪದ್ಯ ಮತ್ತು ಶಿವಾಜಿಯ ಬಗ್ಗೆ ಇದ್ದ ಒಂದು ಲೇಖನವನ್ನು ಆಕ್ಷೇಪಿಸಿ ತಿಲಕರನ್ನು ೧೯೯೭ರಲ್ಲಿ ಬಂಧಿಸಲಾಯಿತು.

ಜನರನ್ನು ಸರ್ಕಾರದ ವಿರುದ್ಧ ಪ್ರಚೋದಿಸುವ ಮತ್ತು ಕಾನೂನು, ಶಾಂತಿಗಳನ್ನು ಮುರಿಯುವ ಲೇಖನಗಳನ್ನು ಬರೆದರೆಂಬ ಆಪಾದನೆ ಹೊರಿಸಿದ ಸರ್ಕಾರ, ತಿಲದರಿಗೆ ಒಂದೂವರೆ ವರ್ಷಗಳ ಉಗ್ರ ಶಿಕ್ಷೆಯನ್ನು ವಿಧಿಸಿತು. ಪಂಜರದಲ್ಲಿಯೂ ಸಿಂಹ ಸಿಂಹವೇ

ಆಗಿನ ಜೈಸುಕೋಣೆಗಳೆಂದರೆ ಸಾಕ್ಷಾತ್ ಯಮಸದನಗಳು.

ಮಲಗಿದರೆ ಪಕ್ಕಕ್ಕೆ ಹೊರಳಲೂ ಆಗದ ಹದಿಮೂರು ಚದರಡಿಯ ಕತ್ತಲು ಕೋಣೆ. ಹೊದೆಯುವ ಕಂಬಳಿಯಲ್ಲಿ ಹುಳುಗಳು. ದಿನವಿಡೀ ಗುಂಯ್‌ಗುಡುವ ಸೊಳ್ಳೆಗಳ ಸಂಖ್ಯೆ ವ್ಯಕ್ತಿಯನ್ನೇ ಹಾರಿಸಿಕೊಂಡು ಹೋಗದಿರಲಿ ಎಂದು ವ್ಯಕ್ತಿಯನ್ನು ಹಾಸಿಗೆಗೆ ಕಚ್ಚಿಹಿಡಿಯುತ್ತವೆ ತಿಗಣೆಗಳು! ಮರಳು ಬೆರೆತ ರೊಟ್ಟಿ, ಒರಟು ಬಟ್ಟೆ, ಮೈ ಮರಿಯ ಥಳಿಸಿ ಅಮಾನುಷವಾಗಿ ಕೆಲಸ ಮಾಡಿಸುವ ಅಧಿಕಾರಿಗಳು.ತೆಂಗಿನ ನಾರುಗಳಿಂದ ಹಗ್ಗ, ಚಾಪೆಗಳನ್ನು ಮಾಡಿದಾಗ ತಿಲಕರ ಕೈಬೆರಳುಗಳಲ್ಲಿ ಬೊಬ್ಬೆಗಳು. ಮ್ಯಾಕ್ಸ್‌ಮುಲ್ಲರ್ ಮೊದಲಾದ ಲೋಕಪ್ರಸಿದ್ಧ ವಿದ್ವಾಂಸರು ಮೆಚ್ಚುವಂಥ ’ಓರಿಯಾನ್’ ಕೃತಿ ರಚಿಸಿದ ತಿಲಕರ ಕೈ ಬೆರಳುಗಳಲ್ಲಿ ರಕ್ತ ಜಿನುಗುವಂಥ ಘೋರ ಕೆಲಸ ಮಾಡಿಸಲಾಯಿತು. ಕೇವಲ ನಾಲ್ಕು ತಿಂಗಳಲ್ಲಿ ಮೂವತ್ತು ಪೌಂಡುಗಳು ಇಳಿದುಹೋದರು ತಿಲಕರು.

ದೊರೆಯುತ್ತಿದ್ದ ಅಲ್ಪ ವಿರಾಮದಲ್ಲಿ ಓದು-ಬರೆಹ ನಡೆದಿತ್ತು. ಜೈಲಿನಲ್ಲಿ ಬರೆದು ಪೂರೈಸಿದ ’ವೇದಕಾಲ ನಿರ್ಣಯ’ದ ಬಗೆಗಿನ ಪುಸ್ತಕ ಒಂದು ಅಮೂಲ್ಯ ಆಸ್ತಿ.

ತೆಂಗಿನ ನಾರುಗಳಿಂದ ಹಗ್ಗ, ಚಾಪೆಗಳನ್ನು ಮಾಡಿದಾಗ ತಿಲಕರ ಕೈ ಬೆರಳುಗಳಲ್ಲಿ ಬೊಬ್ಬೆಗಳು.

ತಿಲಕರ ಬಿಡುಗಡೆಗಾಗಿ ಪ್ರಪಂಚದ ಬೇರೆಬೇರೆ ಮೂಲೆಗಳಲ್ಲಿದ್ದ ವಿದ್ವಾಂಸರು, ರಾಜಕಾರಣಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಸರ್ಕಾರ ಅವರನ್ನು ಬಿಡುಗಡೆ ಮಾಡಲು ಎರಡು ಷರತ್ತುಗಳನ್ನು ವಿಧಿಸಿತು-ಅವರಿಗಾಗಿ ಏರ್ಪಡಿಸುವ ಯಾವ ಸ್ವಾಗತ ಅಥವಾ ಸತ್ಕಾರದ ಕಾರ್ಯಕ್ರಮಗಳಿಗೂ ಹೋಗಲಾಗದು ಮತ್ತು ಸರ್ಕಾರನ್ನು ಟೀಕಿಸುವುದಿಲ್ಲ ಎಂದು ಮಾತು ಕೊಡಬೇಕು. ತಮಗಾಗಿ ಏನನ್ನೂ ಬಯಸದ ತಿಲಕರು ಮೊದಲನೆಯ ಷರತ್ತನ್ನು ಒಪ್ಪಲು ಸಿದ್ಧರಾಗಿದ್ದರು; ಆದರೆ, ’ತಪ್ಪು ಮಾಡದೆ ನಾನು ತಪ್ಪು ಮಾಡಿದೆ ಎಂದು ಒಪ್ಪಿ ಹೇಡಿಯಾಗಿ ಮಹಾರಾಷ್ಟ್ರದಲ್ಲಿ ಬದುಕುವುದಕ್ಕಿಂತ ಅಂಡಮಾನಿನಲ್ಲಿ ದೇಶಭ್ರಷ್ಟ್ರನಾಗಿ ಸೆರೆಯಲ್ಲಿ ಬದುಕುವುದು ಉತ್ತಮ’ ಎಂದು ಎರಡನೆಯ ಷರತ್ತನ್ನು ತಳ್ಳಿಹಾಕಿದರು. ಕಡೆಗೆ ಸರ್ಕಾರ ಶಿಕ್ಷೆಯನ್ನು ಒಂದೂವರೆ ವರ್ಷದಿಂದ ಒಂದು ವರ್ಷಕ್ಕೆ ಇಳಿಸಿತು.

ರಾಷ್ಟ್ರನಾಯಕ

೧೮೯೮ರ ದೀಪಾವಳಿ. ಅಂದೇ ತಿಲಕರ ಬಿಡುಗಡೆ. ಜನರ ಸಂತೋಷ ಹೇಳತೀರದು. ಎಲ್ಲೆಲ್ಲೂ ದೀಪೋತ್ಸವ. ಬಾಣ ಬಿರುಸುಗಳು. ತಿಲಕರ ದರ್ಶನಕ್ಕೆ ನೂಕುನುಗ್ಗಲು. ಮುಖ್ಯ ಬೀದಿಗಳಲ್ಲಿ ತಿಲಕರ ಮೆರವಣಿಗೆ.

ಜನರ ಕಣ್ಣಲ್ಲಿ ಆನಂದಬಾಷ್ಪಗಳುದುರಿದವು. ಮಾತೆಯರು, ಮಕ್ಕಳು ಮನೆಮನೆಗಳಲ್ಲಿ ತಿಲಕರ ಭಾವಚಿತ್ರಕ್ಕೆ ಆರತಿ ಎತ್ತಿದರು.

ಮುಂದಾಳುವಾಗಿದ್ದ ತಿಲಕರು ರಾಷ್ಟ್ರೀಯ ನಾಯಕರಾದರು. ಪ್ರತಿಯೊಬ್ಬ ಭಾರತೀಯ ಹೃದಯದಲ್ಲೂ ತಿಲಕರ ಬಗ್ಗೆ ಶ್ರದ್ಧಾಭಕ್ತಿಗಳು ಮೂಡಿದವು.

ಜೈಲಿನಲ್ಲಿ ಪಟ್ಟ ಯಾತನೆಯಿಂದ ಅವರು ಸೊರಗಿದ್ದರು. ಕಣ್ಣುಗಳು ಒಳಗೆ ಸೇರಿದ್ದವು. ಕೆನ್ನೆಯ ಮೇಲೆ ಮೂಳೆ ಕಾಣಿಸುತ್ತಿತ್ತು. ಕೆಲವು ದಿನಗಳಲ್ಲಿ ಅವರ ಆರೋಗ್ಯ ಸುಧಾರಿಸಿತು.

’ಸ್ವದೇಶಿ’ ಮಂತ್ರ

ಇದೇ ಸಮಯದಲ್ಲಿ ಸ್ವದೇಶಿ ಚಳುವಳಿ ತೀವ್ರವಾಯಿತು. ಗೋಖಲೆ, ರಾನಡೆ, ಪರಾಂಜಪೆ ಮೊದಲಾದವರು ’ಸ್ವದೇಶಿ ತತ್ವ’ದ ಮಹತ್ವ ತೋರಿಸಿಕೊಟ್ಟಿದ್ದರು. ಪತ್ರಿಕೆ ಮತ್ತು ವೇದಿಕೆಗಳ ಮುಖಾಂತರ ತಿಲಕರು ಮಹಾರಾಷ್ಟ್ರದ ಹಳ್ಳಿಹಳ್ಳಿಗೂ ’ಸ್ವದೇಶಿ’ ಸಂದೇಶ ಕಳಿಸಿದರು. ತಿಲಕರ ಮನೆಯ ಮುಂದೆ ಒಂದು ದೊಡ್ಡ ಸ್ವದೇಶಿ ಮಾರುಕಟ್ಟೆ ತೆರೆಯಲ್ಪಟ್ಟಿತು. ಅಲ್ಲಿದ್ದ ಸುಮಾರು ಐವತ್ತಕ್ಕೂ ಹೆಚ್ವಿನ ಅಂಗಡಿಗಳಲ್ಲಿ ಸ್ವದೇಶಿ ಪದಾರ್ಥಗಳನ್ನಿಟ್ಟು ಮಾರಾಟ ಮಾಡಿದರು.

ಎಲ್ಲೆಲ್ಲೂ ’ಸ್ವದೇಶಿ’ ಕೂಗಿನ ಕೋಲಾಹಲ. ವಿದೇಶಿ ಬಟ್ಟೆಗಳು ಭಸ್ಮ. ವಿದೇಶಿ ಸಕ್ಕರೆ ಬಿಸಾಡಿ ಸ್ವದೇಶಿ ಬೆಲ್ಲದ ಬಳಕೆ. ನಮ್ಮದೇ ಆದ ಬಟ್ಟೆಯ ಗಿರಣಿಗಳು, ಕಾಗದದ ಕಾರ್ಖಾನೆಗಳು, ಬೆಂಕಿಪೆಟ್ಟಿಗೆ ಕೈಗಾರಿಕೆಗಳು ಸ್ಥಾಪಿತವಾದವು.

ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಪರೀಕ್ಷೆ. ವಿದೇಶಿ ಕಾಗದದಿಂದ ತಯಾರಾದ ಉತ್ತರ ಪತ್ರಿಕೆಗಳನ್ನು ಕೊಟ್ಟಾಗ, ವಿದೇಶಿ ಕಾಗದದ ಮೇಲೆ ಬರೆಯುವುದಿಲ್ಲವೆಂದು ಹೇಳಿ ಪತ್ರಿಕೆಗಳನ್ನು ಹರಿದು ಬಿಸಾಡಿದ ವಿದ್ಯಾರ್ಥಿಗಳಿಗೆ ತಲಾ ಆರು ಛಡಿಏಟುಗಳ ಶಿಕ್ಷೆ. ತಮ್ಮನ್ನು ಸ್ವದೇಶಿ ಛಡಿಯಲ್ಲೆ ಹೊಡೆಯಬೇಕೆಂಬ ಮನವಿ ಹುಡುಗರದು!

“ಸ್ವದೇಶಿ, ಸ್ವರಾಜ್ಯ, ಬಹಿಷ್ಕಾರ ಮತ್ತು ರಾಷ್ಟ್ರೀಯ ಶಿಕ್ಷಣ”

ಇವು ತಿಲಕರು ಉಪದೇಶಿಸಿದ ಮಂತ್ರಗಳು. ಈ ಮಂತ್ರಗಳನ್ನೇ ಅಸ್ತ್ರಗಳನ್ನಾಗಿ ಮಾಡಿಕೊಂಡರು ಜನ. ಗುಲಾಮಗಿರಿಯನ್ನು ಧಿಕ್ಕರಿಸಿ ನಿಲ್ಲುವ ಪ್ರವೃತ್ತಿ ಭಾರತೀಯರಲ್ಲಿ ಬೆಳೆಯಿತು. ತಿಲಕರು ಹೇಗೆ ಕೆರಳಿಸಿದ ದೇಶಾಭಿಮಾನ ಒಂದು ಕ್ರಾಂತಿ.

ಭಂಡ ಸರ್ಕಾರ

ಹದಿನಾಲ್ಕು ವರ್ಷಗಳ ನಂತರ ಗಾಂಧೀಜಿ ಬ್ರಿಟಿಷ್ ಸರ್ಕಾರದೊಡನೆ ಸಹಕರಿಸುವುದು ಬೇಡ ಎಂಬ ಚಳುವಳಿಯನ್ನು ಪ್ರಾರಂಭಿಸಿದರು. ಅವರು ಜನರ ಮುಂದಿಟ್ಟ ವಿಧಾನಗಳನ್ನೆಲ್ಲ ೧೯೦೬ರಲ್ಲೆ ತಿಲಕರು ನಿರೂಪಿಸಿದ್ದರು!

ಈ ಮಧ್ಯೆ ಭಾರತದ ಸರ್ಕಾರವೂ ಬ್ರಟನ್ನಿನ ಪತ್ರಿಕೆಗಳೂ ತಿಲಕರಿಗೆ ಹಲವು ರೀತಿಯಲ್ಲಿ ಹಿಂಸೆ ಕೊಟ್ಟವು. ಬಾಬಾ ಮಹಾರಾಜ್ ಎಂಬುವರು ಸಾಯುವಾಗ ಮಾಡಿದ ಬೇಡಿಕೆಯಂತೆ ತಿಲಕರು ಅವರ ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳುವ ಹೊಣೆ ಹೊತ್ತರು. ಬಾಬಾ ಮಹಾರಾಜರ ಹೆಂಡತಿ ಸ್ವಾರ್ಥಿಗಳ ಮಾತು ಕೇಳಿ ಸರ್ಕಾರಕ್ಕೆ ದೂರಿತ್ತಳು. ಸರ್ಕಾರದ ವಿರುದ್ಧ ಹೋರಾಡುವ ನಾಯಕನನ್ನು ಬಲಿ ತೆಗೆದುಕೊಳ್ಳಲು ಸರ್ಕಾರ ವಿಶೇಷ ಅಧಿಕಾರಿಗಳನ್ನು ನೇಮಿಸಿ ವಿಚಾರಣೆಯ ಆಟ ಆಡಿ, ತಿಲಕರು ಸುಳ್ಳು ಸಾಕ್ಷ್ಯ ಹೇಳಿದರು, ’ಫೋರ್ಜರಿ’ ಮಾಡಿದರು ಎಂದೆಲ್ಲ ತೀರ್ಮಾನಿಸಿತು. ಅವರ ಕೈಗೆ ಬೇಡಿ ತೊಡಿಸಿ ಕಳ್ಳರಂತೆ, ಕೊಲೆಗಡುಕರಂತೆ ಸೆರೆಗೆ ಕಳಿಸಿತು.  ಜಾಮೀನಿನ ಮೇಲೆ ಹೊರಕ್ಕೆ ಬಂದ ತಿಲಕರು ಹದಿನಾಲ್ಕು ವರ್ಷ ನ್ಯಾಯಾಲಯಗಳಲ್ಲಿ ಹೋರಾಡಿ, ಇಂಗ್ಲೆಂಡಿನ ” ಪ್ರೀವಿ ಕೌನ್ಸಿಲ್” ನಿಂದ ನ್ಯಾಯ ದಕ್ಕಿಸಿಕೊಂಡರು. ಭಾರತದಲ್ಲಿ ವಿಚಾರಣೆ ನಡೆಸಿದ ರೀತಿಗಾಗಿ ಪ್ರೀವಿ ಕೌನ್ಸಿಲ್ ಆ  ನ್ಯಾಯಾಲಯಗಳಿಗೆ ಛೀಮಾರಿ ಹಾಕಿತು.

ಕೊಲೆಗಳನ್ನು ಮಾಡಿಸಲು ತಿಲಕರು ಪ್ರೇರಕ ಶಕ್ತಿ ಎಂದು ಲಂಡನ್ನಿನ ’ಗ್ಲೋಬ್’ ಮತ್ತು ಭಾರತದ ’ಟೈಮ್ಸ್ ಆಫ್ ಇಂಡಿಯಾ’ಪತ್ರಿಕೆಗಳು ಬರೆದವು. ಎರಡು ಪತ್ರಿಕೆಗಳೂ ಕ್ಷಮಾಪಣೆ ಕೇಳಿಕೊಳ್ಳುವವರೆಗೆ ತಿಲಕರು ಅವನ್ನು ಬಿಡಲಿಲ್ಲ.

ದೇಶದ ದೌರ್ಭಾಗ್ಯ’

ಬ್ರಿಟಿಷರು ಬಂಗಾಳವನ್ನು ಒಡೆದರು. ಆಗ ಅಲ್ಲಿನ ಪ್ರಜೆಗಳು ’ಬಹಿಷ್ಕಾರ’ವನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡರು. ಬಂಗಾಳದ ವಿಭಜನೆಯನ್ನು ವಿರೋಧಿಸಿ ಒಂದು ಚಳುವಳಿ ಭುಗಿಲೆದ್ದಿತು. ಖುದೀರಾಮ್ ಬೋಸ್ ಎಂಬುವನು ಅನ್ಯಾಯದ ಪ್ರತಿರೂಪವಾಗಿದ್ದ ಜಲ್ಲಾ ನ್ಯಾಯಮೂರ್ತಿಗಳ ಮೇಲೆ ಬಾಂಬ್ ಎಸೆದನು.

ಪೋಲಿಸರ ಕೈಗೆ ಬಾಂಬ್ ಎಸೆದ ಅಪರಾಧಿ ಸಿಕ್ಕಲಿಲ್ಲ. ಇನ್ನಾರೋ ಸಿಕ್ಕರು. ಅವರೇ ಸಾಕು, ಶಿಕ್ಷೆ ಅನುಭವಿಸಲು ಯಾರಾದರೇನಂತೆ? ನಿರಪರಾಧಿಯಾಗಿದ್ದ ಅವರನ್ನೇ ನ್ಯಾಯಾಲಯಕ್ಕೆ ಎಳೆದುಕೊಂಡು ಹೋದರು. ನ್ಯಾಯಮೂರ್ತಿಗಳ ಕೈಯಲ್ಲಿ ಹತ್ತು ವರ್ಷಗಳ ಉಗ್ರ ಶಿಕ್ಷೆಯನ್ನು ಮಂಜೂರು ಮಾಡಿಸಿಕೊಟ್ಟು ಅಂಡಮಾನ್ ದರ್ಶನ ಮಾಡಿಸಿದರು!

ಈ ಅನಾಚಾರಗಳನ್ನು ನೋಡಿದ ಜನತೆ ಸರ್ಕಾರದ ವಿರುದ್ಧ ತಿರುಗಿಬಿದ್ದಿತು. ತಿಲಕರ ರಕ್ತ ಕುದಿಯಿತು. ’ಕೇಸರಿ’ ಪತ್ರಕೆಯಲ್ಲಿ ’ದೇಶದ ದೌರ್ಭಾಗ್ಯ’ ಎಂಬ ಲೇಖನ ಬರೆದು ಸರ್ಕಾರಕ್ಕೆ ಛೀಮಾರಿ ಹಾಕಿದರು.

’ದೇಶದಲ್ಲಿ ಬಾಂಬುಗಳು ತಯಾರಾಗುತ್ತಿರುವುದು ದೇಶದ ದುರ್ದೈವವಾಗಿದೆ. ಆದರೆ ಬಾಂಬ್ ಒಗೆಯುವಂಥ ಪರಿಸ್ಥಿತಿ ಉಂಟುಮಾಡಿದ ಪೂರ್ಣ ಹೊಣೆ ಸರ್ಕಾರದ ಅನ್ಯಾಯದ ಆಡಳಿತವೇ ಇದಕ್ಕೆ ಕಾರಣ.’

ಬ್ರಿಟಿಷರು ಭೂಮಿಗೆ ಇಳಿದುಹೋದರು. ತಿಲಕರನ್ನು ಹೀಗೆಯೇ ಬಿಟ್ಟರೆ ತಮ್ಮ ಸರ್ಕಾರಕ್ಕೇ ಕುತ್ತು ಒದಗುವುದೆಂಬುದನ್ನು ನಿಶ್ಚಯ ಮಾಡಿಕೊಂಡರು.

ದೇಶದಾಚೆಗೆ ನೂಕಿದರು

’ದೇಶದ ದೌರ್ಭಾಗ್ಯ’ ಲೇಖನವನ್ನೇ ನೆಪಮಾಡಿ ತಿಲಕರ ವಿರುದ್ಧ ರಾಜದ್ರೋಹದ ಮೊಕದ್ದಮೆ ಹೂಡಿತು ಸರ್ಕಾರ. ೧೯೦೮ರ ಜೂನ್ ೨೪ರಂದು ತಿಲಕರನ್ನು ಮುಂಬಯಿಯಲ್ಲಿ ಬಂಧಿಸಿದರು. ತಿಲಕರಿಗೆ ಆರು ವರ್ಷಗಳ ಕರಿನೀರಿನ ಶಿಕ್ಷೆ ವಿಧಿಸಲಾಯಿತು.

ಆಗ ತಿಲಕರಿಗೆ ೫೨ ವರ್ಷಗಳು. ಆರೋಗ್ಯವನ್ನೇ ಕಡಿಗಣಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿದ್ದ ಅವರು ದುರ್ಬಲರಾಗಿದ್ದರು. ಮಧುಮೇಹ ಅವರನ್ನು ಮತ್ತಷ್ಟು ಗಾಸಿ ಮಾಡಿತ್ತು. ಇಂಥ ಅವಸ್ಥೆಯಲ್ಲಿ ಆರು ವರ್ಷಗಳ ಕರಿನೀರಿನ ಶಿಕ್ಷೆಯನ್ನು ಅವರು ಹೇಗೆ ತಾಳಿಯಾರು?

ದೇಶ ಶೋಕಸಾಗರದಲ್ಲಿ ಮುಳುಗಿತು. ವಿದ್ವಾಂಸರೂ ಪೂಜ್ಯರೂ ಲೋಕಾನ್ಯರೂ ಆಗಿದ್ದ ತಿಲಕರಿಗೆ ಕರನೀರಿನ ಶಿಕ್ಷೆ ವಿಧಿಸಿದ್ದನ್ನು ವಿದೇಶಗಳಲ್ಲಿದ್ದ ಬುದ್ಧಿ ಜೀವಿಗಳು ಕೂಡ ಟೀಕಿಸಿದರು.

ಸೆರೆಯಲ್ಲಿಯೂ ವಿದ್ವಾಂಸ -ಧೀರ

ಬರ್ಮಾದ ಮಾಂಡಲೆಯ ಸೆರೆಮನೆ. ಮರದ ಹಲಗೆಗಳಿಂದ ಮಾಡಿದ ಪುಟ್ಟ ಕೊಠಡಿ. ಇತರ ಮನುಷ್ಯರೊಂದಿಗೆ ಸಂಪರ್ಕವೇ ಇಲ್ಲ. ಚಳಿಗಾಳಿಗಳು ತಡೆಯಲು ಅಸಾಧ್ಯ. ಕೊಠಡಿಯಲ್ಲಿ ಒಂದು ಮಂಚ, ಒಂದು ಮೇಜು ಮತ್ತು ಒಂದು ಕುರ್ಚಿ; ಪುಸ್ತಕಗಳಿಡುವ ಕಪಾಟು. ಇದೇ ತಿಲಕರ ಕೊಠಡಿ.

ತಿಲಕರು ಈ ಸೆರೆಮನೆಯಲ್ಲಿ ಒಂದು ವರ್ಷ ಕಳೆಯುವ ಹೊತ್ತಿಗೆ ಅವರ ಸ್ನೇಹಿತರೊಬ್ಬರ ಮೂಲಕ ಸೂಚನೆ ಬಂದಿತು. ಅವರು ಕೆಲವು ಷರತ್ತುಗಳನ್ನು ಒಪ್ಪಿಕೊಂಡರೆ ಬಿಡುಗಡೆಯಾಗಬಹುದು. ತಿಲಕರು ಅವರಿಗೆ ಬರೆದರು: ’ನನಗೀಗ ಐವತ್ತಮೂರು ವರ್ಷ. ಇನ್ನು ಹತ್ತು ವರ್ಷ ಬದುಕಿದ್ದೇನು, ಎಂದರೆ ಈ ಸೆರೆಮನೆ ಬಿಟ್ಟಮೇಲೆ ಐದು ವರ್ಷ. ಈ ಐದು ವರ್ಷಗಳನ್ನಾದರೂ ಜನರ ಸೇವೆಯಲ್ಲಿ ಕಳೆಯಬಹುದಲ್ಲ? ಸರ್ಕಾರದ ಷರತ್ತುಗಳನ್ನು ಒಪ್ಪಕೊಂಡರೆ ನಾನು ಸತ್ತಹಾಗೆಯೇ!”

ಕಠಿಣ ಶಿ‌ಕ್ಷೆಯನ್ನು ಸಾದಾ ಶಿಕ್ಷೆ ಮಾಡಲಾಗಿತ್ತು. ಆದ್ದರಿಂದಲೇ ಅವರಿಗೆ ಓದಿ ಬರೆಯಲು ಅವಕಾಶವಿತ್ತು. ಇಲ್ಲೇ ಅವರು ’ಗೀತಾ ರಹಸ್ಯ’ ಪುಸ್ತಕ ಬರೆದುದು. ಅದೊಂದು ಮಹೋನ್ನತ ಕೃತಿ.

ಓದು-ಬರೆಹದಲ್ಲೇ ಮಗ್ನರಾಗಿರುತ್ತಿದ್ದರು. ಆರು ವರ್ಷಗಳ ಶಿಕ್ಷೆ ಮುಗಿಯುವ ವೇಳೆಗೆ ಸುಮಾರು ನಾಲ್ಕು ನೂರು ಪುಸ್ತಕಗಳನ್ನು ಶೇಖರಿಸಿಟ್ಟುಕೊಂಡಿದ್ದರು. ಸ್ವಯಂಬೋಧಿನಿ ಪುಸ್ತಕಗಳ ಸಹಾಯದಿಂದ ತಿಲಕರು ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಕಲಿತಿದ್ದು ಈ ಸೆರೆಮನೆಯಲ್ಲೆ.

ಬಿಡುವಿಲ್ಲದೆ ಬಿಟ್ಟುಹೋಗಿದ್ದ ಜೀವನಕ್ರಮಗಳನ್ನು ಮತ್ತೆ ರೂಢಿಸಿಕೊಂಡರು. ಬೆಳಗ್ಗೆ ಸಂಧ್ಯಾವಂದನೆ, ಸೂರ್ಯೋಪಾಸನೆ, ಗಾಯತ್ರಿ ಜಪ, ದೇವರ ಧ್ಯಾನ. ಅನಂತರ ಓದು-ಬರೆಹ.

ತಿಲಕರು ದೂರದ ಮಾಂಡಲೆಯಲ್ಲಿದ್ದಾಗಲೆ ಅವರ ಹೆಂಡತಿ ಭಾರತದಲ್ಲಿ ತೀರಿಕೊಂಡರು.

ಭಾರತದಲ್ಲಿ

೧೯೧೪ರ ಜೂನ್ ೮ ರಂದು ತಿಲಕರ ಬಿಡುಗಡೆ ಆಯಿತು. ೧೬ರಂದು ಅವರನ್ನು ಪುಣೆಗೆ ಕರೆತಂದು ಬಿಡಲಾಯಿತು. ಪುಣೆಯ ಹಲವಾರು ಸಂಸ್ಥೆಗಳ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ತಿಲಕರಿಗೆ ಗೌರವ ಸೂಚಿಸಿದವು. ತಿಲಕರು ಹೇಳಿದರು:

“ಆರು ವರ್ಷಗಳ ದೀರ್ಘ ಅಗಲಿಕೆಯಿಂದ ನನಗೆ ನಿಮ್ಮ ಮೇಲಿನ ಪ್ರೇಮ ಕಡಿಮೆಯಾಗಿಲ್ಲ. ಸ್ವರಾಜ್ಯದ ಕಲ್ಪನೆಯನ್ನು ನಾನು ಮರೆತಿಲ್ಲ. ಹಿಂದೆ ನಾನು ನಿರ್ಧರಿಸಿದ್ಧ ಕಾರ್ಯಕ್ರಮಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಅವು ಹಾಗೇ ಮುಂದುವರೆಯುತ್ತವೆ”.

ತಿಲಕರು ಮಾಂಡಲೆಯಿಂದ ಮರುಳುವ ವೇಳೆಗೆ ಕಾಂಗ್ರೆಸಿನ ಎರಡು ಬಣಗಳಲ್ಲಿ ತುಂಬಾ ಒಡಕು ಉಂಟಾಗಿತ್ತು. ಅವರಲ್ಲಿ ಒಗ್ಗಟ್ಟು ಮೂಡಿಸಲು ಪ್ರಯತ್ನ ಪಟ್ಟರೂ ಆಗಲಿಲ್ಲ. ಪ್ರಬಲವಾದ ಬೇರೊಂದು ಸಂಸ್ಥೆ ಕಟ್ಟುವುದೇ ಸರಿಯೆಂದು ತೀರ್ಮಾನಿಸಿದರು. ’ಹೋಮ್ ರೂಲ್ ಲೀಗ್’ ಸಂಸ್ಥೆಯನ್ನು ಸ್ಥಾಪಿಸಿದರು. ಜನರ ಬೆಂಬಲವೂ ದೊರೆಯಿತು. ಸ್ವರಾಜ್ಯ ಗಳಿಸುವುದೇ ಸಂಸ್ಥೆಯ ಧ್ಯೇಯವಾಯಿತು.

ಹಳ್ಳಿ ಹಳ್ಳಿಗೆ ಹೋಗಿ ರೈತಬಂಧುಗಳಿಗೆ ಸಂಸ್ಥೆಯ ಉ‌ದ್ದೇಶ ವಿವರಿಸಿ ತಿಲಕರು ಎಲ್ಲರ ಮನ ಒಲಿಸಿಕೊಂಡರು.

“ಹೋಮ್‌ರೂಲ್ ಎಂದರೆ ನಮ್ಮ ಮನೆಯನ್ನು ನಾವೇ ನೋಡಿಕೊಳ್ಳುವುದು. ನಮ್ಮ ಮನೆಗೆ ಪಕ್ಕದ ಮನೆಯವ ಯಜಮಾನನಾಗಲು ಸಾಧ್ಯವೇ? ಇಂಗ್ಲಿಷಿನವನು ಇಂಗ್ಲೆಂಡಿನಲ್ಲಿ ಇರುವಷ್ಟೆ ಸ್ವತಂತ್ರವಾಗಿ ಭಾರತೀಯನು ಭಾರತದಲ್ಲಿರಬೇಕು. ಇದು ಹೋಮ್‌ರೂಲಿನ ಅರ್ಥ” ಎಂದು ಹೇಳುತ್ತಿದ್ದರು.

ಜನರನ್ನು ಸಂಘಟಿಸಲು ಸತತವಾಗಿ ಪ್ರವಾಸಗಳನ್ನು ಕೈಗೊಂಡರು. ನೂರಾರು ವೇದಿಕೆಗಳ ಮೇಲೆ ಈ ಕುರಿತು ಭಾಷಣಗಳು. ಅವರು ಹೋದಕಡೆಯಲ್ಲೆಲ್ಲಾ ಜನರಿಂದ ಅಭೂತಪೂರ್ವ ಸ್ವಾಗತ.

ಲಕ್ನೋದಲ್ಲಿ ಪ್ರವಾಸ ಮುಗಿಸಿ ಕಾನ್ಪುರಕ್ಕೆ ಬಂದರು.

’ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’

“ನಮಗೆ ಸಮಾನತೆ ಬೇಕು. ಪರಕೀಯರ ಆಳ್ವಿಕೆಯಲ್ಲಿ ನಾವು ಗುಲಾಮರಾಗಿ ಇದಲಾರೆವು. ಎಷ್ಟೋ ಕಾಲದಿಂದ ಹೊತ್ತಿರು ದಾಸ್ಯದ ನೊಗ ಇನ್ನೊಂದು ಕ್ಷಣವೂ ಹೊರಲಾರೆವು. ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು. ಅದು ನಮಗೆ ದೊರೆಯಲೇಬೇಕು. ನಮ್ಮಂತೆಯೇ ಏಷ್ಯಾದವರಾಗಿರುವ ಜಪಾನಿಗಳು ಸ್ವತಂತ್ರರಾಗಿರುವಾಗ ನಮಗೇಕೆ ಈ ಪಾರತಂತ್ರ್ಯ? ನಮ್ಮ ತಾಯಿಯ ಕೈಗಳಿಗೇಕೆ ಕೋಳಗಳು?”

’ಸ್ವರಾಜ್ಯ’ದ ಅಗ್ನಿಕುಂಡ ಪ್ರಜ್ವಲಿಸಿತು. ಸರ್ಕಾರಕ್ಕೆ ಮತ್ತೆ ಚಿಂತೆ ಮತ್ತು ಹೆದರಿಕೆಗಳಾದವು.

ದಿನಗಳೆದಂತೆ ಪ್ರತಿಯೊಬ್ಬ ಭಾರತೀಯನ ಮನದಲ್ಲೂ ’ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂಬುದನ್ನು ಅಚ್ಚೊತ್ತುತ್ತಾ ಹೋದರು. ಲೋಕಮಾನ್ಯರ ಲೋಕಪ್ರಿಯತೆ ಲೋಕೋತ್ತರವಾಗಿ ಹರಡಿತು.

ಅರವತ್ತರ ಬೆಳಕು

೧೯೧೬ ಬಂದಿತು. ತಿಲಕರು ತಮ್ಮ ಜೀವಮಾನದ ಯಶಸ್ವೀ ಅರವತ್ತು ವರ್ಷಗಳನ್ನು ಪೂರೈಸಿದ್ದಾರೆ. ವಿದ್ವಾಂಸರು, ಮುಂದಾಳುಗಳು, ಗೆಳೆಯರು ಅವರ ಮನೆಯನ್ನು ಮುತ್ತಿದ್ದಾರೆ. ಲೋಕಮಾನ್ಯರ ಷಷ್ಟ್ಯಬ್ಧಿಪೂರ್ತಿಯ ಸಮಾರಂಭ.

ತಿಲಕರಿಗೆ ಅಭಿನಂದನೆಯ ಮಾನಪತ್ರ ಅರ್ಪಿಸಿದರು. ಒಂದು ಲಕ್ಷ ರೂಪಾಯಿಗಳ ನಿಧಿಯನ್ನು ಸಲ್ಲಿಸಿದರು. ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಲೋಕಮಾನ್ಯರು ಹಣವನ್ನು ರಾಷ್ಟ್ರೀಯ ಕಾರ್ಯಗಳಿಗೆ ವಿನಿಯೋಗಿಸಲು ಹೇಳಿದರು.

ತಿಲಕರ ಅರವತ್ತನೆಯ ಹುಟ್ಟಿದ ಹಬ್ಬಕ್ಕೆ ಸರ್ಕಾರವೂ ಉಡುಗೊರೆ ಕೊಟ್ಟಿತು. ಹುಟ್ಟಿದ ಹಬ್ಬದ ಹಿಂದಿನ ದಿನ ಅವರಿಗೊಂದು ಎಚ್ಚರಿಕೆ ಪತ್ತ ಕಳಿಸಿತು – ಒಂದು ವರ್ಷ ಕಾಲ ನೀವು ಸರಿಯಾಗಿ ನಡೆದುಕೊಳ್ಳುತ್ತೀರಿ ಎಂಬ ಭರವಸೆಗೆ ಇಪ್ಪತ್ತು ಸಾವಿರ ರೂಪಾಯಿಗಳ ಜಾಮೀನುಪತ್ರ ಬರೆದುಕೊಡಿ ಎಂದು!

ದೇಹದಲ್ಲಿ ಶಕ್ತಿ ಕುಂದುತ್ತಾ ಬಂದಿತು. ಹಾಗೆಯೇ ತಿಲಕರ ಮಾತುಗಳಲ್ಲಿ, ಲೇಖನಗಳಲ್ಲಿದ್ದ ಕಾವು ಸ್ವಲ್ಪಮಟ್ಟಿಗೆ ನಂದಿತು. ಒಡೆದುಹೋಗಿದ್ದ ಕಾಂಗ್ರೆಸ್ಸನ್ನು ಮತ್ತೆ ಒಂದುಗೂಡಿಸಲು ಯಶಸ್ವೀ ಪ್ರಯತ್ನ ನಡೆಸಿದರು.

ಇಂಗ್ಲೆಂಡಿನಲ್ಲಿ

ಇಂಗ್ಲೆಂಡಿನ ಚಿರೋಲ್ ಎಂಬ ಪತ್ರಿಕಾಕರ್ತರೊಬ್ಬರು ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ತಿಲಕರು ನಡೆಸುತ್ತಿದ್ದ ಚಳುವಳಿ ಗಮನಿಸಿ ಅವರ ಬಗ್ಗೆ ಇಲ್ಲದ ಆರೋಪ ಹೊರಿಸಿದ್ದರು. ’ಭಾರತದಲ್ಲಿ ಹಿಂಸಾತ್ಮದ ಕ್ರಾಂತಿಯ ನಾಯಕ ತಿಲಕರೇ ಆಗಿದ್ದಾರೆ.’ ಎಂದು ಅವರ ಮೇಲೆ ಮಾನಹಾನಿಯ ಮೊಕದ್ದಮೆಯನ್ನು ಹೂಡಿದರು ತಿಲಕರು. ಚಿರೋಲ್ ಪ್ರಕರಣಕ್ಕಾಗಿ ಇಂಗ್ಲೆಂಡಿಗೆ ಹೋಗಬೇಕಾಯಿತು. ಹದಿಮೂರು ತಿಂಗಳು ವಿದೇಶದಲ್ಲಿರಬೇಕಾಯಿತು. ಇದರಿಂದಾಗಿ ತಮ್ಮ ಅಮೂಲ್ಯ ಸಮಯವನ್ನೂ ಅಪಾರ ಧನವನ್ನೂ ಖರ್ಚು ಮಾಡಬೇಕಾಯಿತು.

ತಿಲಕರು ಇಂಗ್ಲೆಂಡಿಗೆ ಹೋಗಿದ್ದು ಈ ಮೊಕದ್ದಮೆಗಾಗಿಯೇ ಎನ್ನಲಾಗುವುದಿಲ್ಲ. ಅವರ ಉದ್ದೇಶ ಅಲ್ಲಿನ ಬ್ರಟಿಷ್ ಸರ್ಕಾರಕ್ಕೆ ನಮ್ಮ ಗುಲಾವಗಿರಿಯ ಬಗ್ಗೆ ತಿಳಿಸಬೇಕಿತ್ತು ಎಂಬುದೂ ಹೌದು. ಆಗ ಅವರು ನೂರಾರು ಸಭೆಗಳಲ್ಲಿ ಮಾತನಾಡಿ ಹೋಮ್‌ರೂಲ್ ಚಳುವಳಿಯನ್ನು ತೀವ್ರಗೊಳಿಸಿದ್ದರು. ಅಲ್ಲಿದ್ದ ಕಾರ್ಮಿಕ ಪಕ್ಷದೊಡನೆ ಮೈತ್ರಿ ಬೆಳೆಸಿದರು.

ಭಾರತದ ಕೇಸರಿ ಕಣ್ಮರೆಯಾಯಿತು

ಮಹಾಯುದ್ಧದಲ್ಲಿ ಬ್ರಟಿಷರು ಭಾರತೀಯರ ಸಹಾಯಕ್ಕೆ ಕೈಯೊಡ್ಡಿದರು. ಜಯ ಸಂಪದಿಸಿದ್ದ ಬ್ರಟಿಷರ ಮದ ಎಲ್ಲೆ ಮೀರಿ ದಬ್ಬಾಳಿಕೆ ಆರಂಭವಾಯಿತು. ’ರೌಲಟ್ ಯಾಕ್ಟ್’ ಬಗ್ಗೆ ವಿರೋಧ ಸೂಚಿಸಿದಾಗ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಕಾಣಿಸಿಕೊಂಡಿತು. ಹೃದಯಹೀನ ಸರ್ಕಾರ ನಿಶ್ಯಸ್ತ್ರ ಪ್ರಜೆಗಳನ್ನು ಅಮಾನುಷ ರೀತಿಯಲ್ಲಿ ಕೊಂದಿತು.

ಇವುಗಳನ್ನು ಕೇಳಿದ ತಿಲಕರು ಇಂಗ್ಲೆಂಡಿನಿಂದ ಭಾರತಕ್ಕೆ ತಕ್ಷಣ ಧಾವಿಸಿದರು. ಎಂಥ ವಿಪತ್ತೇ ಬಂದರೂ ಬೇಡಿಕೆಗಳು ಈಡೇರುವವರೆಗೆ ಚಳುವಳಿ ನಿಲ್ಲಿಸಬಾರದೆಂದು ಭಾರತೀಯರಿಗೆ ಕರೆ ನೀಡಿದರು.

ಲೋಕಮಾನ್ಯರು ಈ ವೇಳೆಗೆ ತುಂಬಾ ಬಲಹೀನರಾಗಿದ್ದರು. ಸೋತ ಶರೀರದಿಂದಲೇ ಜನಜಾಗೃತಿಗಾಗಿ ಪ್ರವಾಸಗಳನ್ನು ಕೈಗೊಳ್ಳುತ್ತದ್ದರು. ಸಾಂಗಲಿ, ಹೈದರಾಬಾದ್, ಕರಾಚಿ, ಸೊಲ್ಲಾಪುರ, ಕಾಶಿ- ಹೀಗೆ ಭಾರತವಡೀ ಸುತ್ತಡಿ ಭಾಷಣಗಳನ್ನು ಮಾಡಿದರು. ಅನಂತರ ಮುಂಬಯಿಗೆ ಬಂದರು.

೧೯೨೦ರ ಜುಲೈ ತಿಂಗಳಲ್ಲಿ ಅವರ ಆರೋಗ್ಯ ಪೂರ್ಣ ಕೆಟ್ಟಿತು. ಆಗಸ್ಟ್ ೧ರ ಮುಂಜಾನೆ ಲೋಕಮಾನ್ಯರ ಪ್ರಾಣಜ್ಯೋತಿ ನಂದಿತು.

ಈ ದುಃಖವಾರ್ತೆ ಹರಡುತ್ತಿದ್ದಂತೆಯೇ ತಮ್ಮ ಪ್ರೀತಿಯ ನಾಯಕನ ಅಂತಿಮ ದರ್ಶನಕ್ಕೆ ಜನ ಸಮುದ್ರವೇ ಬಂದಿತು. ಅಂತಿಮ ಯಾತ್ರೆಯಲ್ಲಿ ಎರಡು  ಲಕ್ಷ ಮಂದಿ ಭಾಗವಹಿಸಿದ್ದರು. ಮಹಾತ್ಮ ಗಾಂಧಿ, ಲಾಲಾ ಲಜಪತರಾಯ್, ಶೌಕತ್ ಆಲಿ ಮತ್ತಿತರರು ಸರದಿಯಂತೆ ಪಲ್ಲಕ್ಕಿಗೆ ಹೆಗಲು ಕೊಡುತ್ತಿದ್ದರು.

ಸಾರ್ವನಿದರ ಮನ್ನಣೆಗೆ ತಕ್ಕವರಾಗಿ ಬಂಗಾರದಂಥ ಬದುಕನ್ನು ನಡೆಸಿದರು ತಿಲಕರು. ಸರಳವಾದ ಜೀವನ ನಡೆಸಿ ದೇಶಸೇವೆಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡರು. ತಿಲಕರ ಬಳಿ ಸ್ವಂತದ್ದೆಂದು ಹೇಳಿಕೊಳ್ಳುವ ಯಾವ ಆಸ್ತಿಯೂ ಇರಲಿಲ್ಲ. ಉಡುಗೆಯೂ ಅಷ್ಟೇ ಸರಳ. ಧೋತರ, ಅಂಗಿ, ಹೆಗಲ ಮೇಲೆ ಒಂದು ಶಾಲು, ತಲೆಯ ಮೇಲೆ ಮಹಾರಾಷ್ಟ್ರೀಯರ ಕೆಂಪು ಪಗಡಿ – ಇಷ್ಟೇ.

ಲೊಕಮಾನ್ಯರ ಮಡದಿ ಸತ್ಯಭಾಮೆಯೂ ಹಾಗೆಯೆ. ಅವರೆಂದೂ ಬೆಲೆಬಾಳುವ ಉಡಿಗೆ ತೊಡಲಿಲ್ಲ. ಜೀವನವಿಡೀ ಗೃಹಕೃತ್ಯಗಳಲ್ಲಿ, ಅತಿಥಿ ಅಭ್ಯಾಗತರನ್ನು ಸತ್ಕರಿಸುವುದರಲ್ಲೇ ಕಳೆದುಬಿಟ್ಟರು. ಕೊನೆಯ ಉಸಿರೆಳೆಯುವ ಮುನ್ನ ಪತಿಯ ದರ್ಶನಕ್ಕೆ ಹಾತೊರೆದರೂ ಅದು ಸಾಧ್ಯವಾಗಿರಲಿಲ್ಲ. ಆಗ ತಿಲಕರು ಕರಿನೀರಿನ ಶಿಕ್ಷೆಗೊಳಗಾಗಿದ್ದರು.

ಭವ್ಯ ಬಾಳು – ಭವ್ಯ ವ್ಯಕ್ತಿತ್ವ

ತಿಲಕರು ರತ್ನಾಗಿರಿಯಲ್ಲಿ ಜನಿಸಿದ್ದು ೧೮೫೬ರ ಜುಲೈ ೨೩ರಂದು. ಅವರು ಬದುಕೆ ಬಾಳಿದ್ದು ಅ೬೪ ವರ್ಷಗಳು. ಪ್ರತಿವರ್ಷವೂ ಅವರ ಜೀವನದಲ್ಲಿ ಸಾಧನೆಯ ಒಂದೊಂದು ಮೈಲಿಗಲ್ಲು.

ತಿಲಕರನ್ನು ಕಂಡರೆ ಬ್ರಟಿಷರಿಗೆ ಎಷ್ಟು ಭಯವಿತ್ತು ಎನ್ನುವುದು ಮುಂಬಯಿಯ ಗವರ್ನರನು ಬ್ರಿಟನ್ನಿನಲ್ಲಿ ಭಾರತದ ವ್ಯವಹಾರಗಳ ಮಂತ್ರಿಗೆ ೧೯೦೮ರಲ್ಲಿ ಬರೆದ ಕಾಗದದಿಂದ ತಿಳಿಯುತ್ತದೆ:” ಭಾರತದಲ್ಲಿ ಬ್ರಿಟಿಷ್ ಸರ್ಕಾರ ಉಳಿಯುವುದರ ವಿರುದ್ಧ ಮುಖ್ಯ ಪಿತೂರಿಗಾರನೂ ಆಗಿರಬಹುದು. ಗಣಪತಿ ಉತ್ಸವ, ಶಿವಾಜಿ ಉತ್ಸವ, ಪೈಸಾನಧಿ, ರಾಷ್ಟ್ರೀಯ ಶಾಲೆಗಳು ಎಲ್ಲವನ್ನೂ ಆತ ಯೋಚಿಸಿದ್ದು ಒಂದೇ ಗುರಿಗಾಗೆ – ಬ್ರಿಟಿಷರನ್ನು ಉರುಳಿಸುವುದು.”

ತಿಲಕರು ತೀರಿಕೊಂಡಾಗ ಮಹಾತ್ಮ ಗಾಂಧೀಜಿಯವರು ಅಂದ ಮಾತುಗಳಿವು:

“…ಉಕ್ಕಿನಂತಹ ಮನಶ್ಯಕ್ತಿಯನ್ನು ಅವರು ದೇಶಕ್ಕಾಗಿ ವಿನಿಯೋಗಿಸಿದರು. ಅವರ ಬದುಕು ಒಂದು ತೆರೆದಿಟ್ಟ ಪುಸ್ತಕ. ಲೋಕಮಾನ್ಯರು ನವಭಾರತ ನಿರ್ಮಾಪಕರು. ನಮಗಾಗಿ ಬದುಕಿ ನಮಗಾಗಿ ಪ್ರಾಣವಿತ್ತರೆಂದು ನಾಳಿನ ಪೀಳಿಗೆಯವರು ತಿಲಕರನ್ನು ಭಕ್ತಿಯಿಂದ ನೆನೆಯುವರು.”