ಜನನ : ೧೮-೭-೧೯೨೭ ರಂದು ಚಿಕ್ಕಮಳ್ಳೂರಿನಲ್ಲಿ ರೋಣ, ತಾಲೂಕು

ಮನೆತನ : ಸುಸಂಸ್ಕೃತ ಕಲಾವಿದರ ಮನೆತನ.

ಶಿಕ್ಷಣ : ಅತಿ ಚಿಕ್ಕ ವಯಸ್ಸಿನಲ್ಲಿಯೇ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಸೇರಿ ಅಲ್ಲಿ ಡಾ|| ಶಿವಯೋಗಿ ಕವಿ ಗವಾಯಿಗಳ ಶಿಷ್ಯರಾಗಿ ಸಂಗೀತ, ಸಾಹಿತ್ಯ, ಕೀರ್ತನ ಕಲೆಗಳಲ್ಲಿ ಶಿಕ್ಷಣ ಪಡೆದಿರುವುದಲ್ಲದೇ ಶಾಸ್ತ್ರಾಧ್ಯಯನವನ್ನು ಮಾಡಿರುತ್ತಾರೆ. ನಾಟಕ ರಂಗದಲ್ಲೂ ಕೃಷಿ ಮಾಡಿದ್ದಾರೆ.

ಡಾ|| ಪಂಚಾಕ್ಷರೀ ಗವಾಯಿಗಳ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ನಾಟ್ಯ ಸಂಘವನ್ನು ಸೇರಿ ಸೇವಕನಿಂದ ರಾಜನ ಪಾತ್ರದವರೆಗೂ ನಟಿಸಿ ಜನಮನಗೆದ್ದವರು. ಇದೇ ಸಂಘದ ದಾಖಲೆ ಪ್ರದರ್ಶನವನ್ನು ಕಂಡ ’ಹೇಮರೆಡ್ಡಿ ಮಲ್ಲಮ್ಮ’ ನಾಟಕದಲ್ಲಿನ ಇವರ ಪದ್ಮವ್ವನ ಪಾತ್ರವನ್ನು ಮನಮುಟ್ಟುವಂತೆ ಅಭಿನಯಿಸಿ ಸ್ತ್ರೀ ಸಮೂಹದ ಪ್ರಶಂಸೆಯನ್ನೂ ಗಳಿಸಿದ್ದಾರೆ.

’ಚಿಕ್ಕ ಮಣ್ಣೂರೇಶ’ ಎಂಬ ಕಾವ್ಯ ನಾಮದಲ್ಲಿ ಅನೇಕ ಭಕ್ತಿಗೀತೆಗಳು. ಜನಪದ ಗೀತೆ, ಸುಪ್ರಭಾತಗಳನ್ನು ರಚಿಸಿ ಕವಿ ಮತ್ತು ಸಾಹಿತಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಪ್ರಶಸ್ತಿ – ಪುರಸ್ಕಾರ : ಅನೇಕ ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಮಠ-ಮಾನ್ಯಗಳು ಇವರ ಪಾಂಡಿತ್ಯವನ್ನು ಗುರುತಿಸಿ ಸನ್ಮಾನಿಸಿವೆ. ಹೇಮರೆಡ್ಡಿ ಮಲ್ಲಮ್ಮನ ನಾಟಕದ ಸ್ತ್ರೀ ಪಾತ್ರ ನಿರ್ವಹಣೆಗಾಗಿ ನಾಟ್ಯ ಕಲಾ ಕೋವಿದ, ಕೀರ್ತನ ಪುರಾಣ ಪ್ರವಚನ ಪ್ರವೀಣ, ಕಾವ್ಯಕಾಶ ಕವಿ ಚಂದ್ರ, ಕೀರ್ತನ ಕಂಠೀರವ, ಶಿವಕಥಾ ವಿಶಾರದ ಮುಂತಾದ ಬಿರುದು ಬಾವಲಿಗಳು ಇವರನ್ನರಸಿ ಬಂದಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೪-೯೫ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.