ಪ್ರಾಣಿ, ಪಕ್ಷಿಗಳಿಗೆ ಬಾಲ ಅಥವಾ ಬಾಲದ ರೀತಿಯ ಪುಕ್ಕಗಳಿರುವುದು ಅಚ್ಚರಿಯಲ್ಲವೇ? ಬಾಲದಿಂದೇನು ಪ್ರಯೋಜನ? ಬಾಲವೊಂದು ವ್ಯರ್ಥ ಅಂಗವೇ? ನಮಗೇಕೆ ಬಾಲವಿಲ್ಲ. ಬಾಲವಿದ್ದರೆ ಏನಾಗುತ್ತಿತ್ತು? ಬಾಲ, ಬಾಲದ ರೀತಿ, ವಿನ್ಯಾಸ, ವೈವಿಧ್ಯಗಳೆಲ್ಲಾ ಸದಾ ವಿಸ್ಮಯವನ್ನುಂಟುಮಾಡುತ್ತದೆ.

ಬಾಲದ ಕುರಿತು ನೂರಾರು ಕಥೆಗಳು, ನಂಬಿಕೆಗಳು, ಮೂಢನಂಬಿಕೆಗಳು ವಿಚಾರಗಳು ಹೀಗೆ ಎನೆಲ್ಲಾ ಇವೆ.

ಪ್ರತಿಯೊಂದು ಪ್ರಾಣಿ-ಪಕ್ಷಿಗಳಿಗೂ ಬಾಲ ಅತ್ಯವಶ್ಯಕ ಅಂಗ. ಬಾಲವನ್ನು ತಮ್ಮೆಲ್ಲಾ ಚಟುವಟಿಕೆಗಳಲ್ಲೂ ಬಳಸಿಕೊಳ್ಳುತ್ತವೆ ಅಥವಾ ಅವುಗಳ ಜೀವನಶೈಲಿ ಆಧರಿಸಿ ಅದಕ್ಕೆ ಬೇಕಾದ ಬಾಲಗಳಿವೆ.

ಮೊದಲಿಗೆ ಮಂಗಗಳನ್ನೇ ತೆಗೆದುಕೊಳ್ಳೋಣ. ಉದ್ದನೆಯ, ದಪ್ಪ ಬಾವಿಹಗ್ಗದಂತಹ ಬಾಲ. ಹನುಮಂತ ನೆನಪಾಗುತ್ತಾನಲ್ಲವೆ? ರಾವಣನ ಎದುರು ಅವನಿಗಿಂತ ಎತ್ತರಕ್ಕೆ ಕುಳಿತುಕೊಳ್ಳಲು ಮೀಟರ್‌ಗಟ್ಟಳೆ ಬಾಲ ಬೆಳೆಸಿದ ಕಥೆ ನಮಗೆ ಗೊತ್ತು. ಬಾಲ ಬಳಸಿ ಲಂಕೆಯನ್ನು ಸುಟ್ಟ ಕಥೆಯೂ ಗೊತ್ತು.

ಕೊಂಬೆಯಿಂದ ಕೊಂಬೆಗೆ ಹಾರಲು ಮಂಗಗಳಿಗೆ ಬಾಲ ಬಹಳ ಉಪಯುಕ್ತ. ಮರದ ಕೊಂಬೆಗ ಸುತ್ತಿಕೊಂಡು ಕೈಕಾಲುಗಳನ್ನೆಲ್ಲ ಬಿಟ್ಟು ಮತ್ತೊಂದು ಕೊಂಬೆಯನ್ನು ಹಿಡಿದುಕೊಳ್ಳುತ್ತವೆ. ನಂತರ ಸುತ್ತಿದ ಬಾಲವನ್ನು ಬಿಚ್ಚಿಕೊಳ್ಳುತ್ತದೆ. ಇವೆಲ್ಲಾ ಕ್ಷಣದಲ್ಲಿ ನಡೆಯುವ ಕ್ರಿಯೆಗಳು. ಮರದಿಂದ ಮರಕ್ಕೆ ಹಾರುವಾಗ ಹಿಡಿತಕ್ಕಾಗಿ ಒಟ್ಟು ಕೈಕಾಲುಗಳೊಂದಿಗೆ ಬಾಲವೂ ಸಹಕಾರಿ. ಬಾಲದಲ್ಲೇ ಜೋತಾಡುತ್ತಾ ಮರದ ತುದಿಯ ಹಣ್ಣನ್ನು ಕೀಳಬಲ್ಲದು. ಮೊಸಳೆ ತನ್ನ ಶತ್ರುಗಳೊಡನೆ ಹೋರಾಟ ಮಾಡಲು ಬಾಲವನ್ನು ಬಳಸುತ್ತದೆ. ಕೆಲವೊಮ್ಮೆ ಆಹಾರಜೀವಿಯನ್ನು ಬಾಲದಲ್ಲಿ ಹೊಡೆದು ಎಚ್ಚರ ತಪ್ಪಿಸಿ ತಿನ್ನುತ್ತದೆ.

ನರಿಯ ಬಾಲ ನರಿಗಿಂತಲೂ ದೊಡ್ಡದು. ಚಳಿಗಾಲದಲ್ಲಿ ಮಲಗುವಾಗ ಇಡೀ ದೇಹಕ್ಕೆ ಬಾಲವೇ ಬೆಚ್ಚನೆಯ ಕಂಬಳಿ.

ಹಕ್ಕಿಗಳು ಹಾರಲು ಬಾಲವನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತವೆ. ಗಾಳಿಯ ಒತ್ತಡ, ದಿಕ್ಕು, ಶಾಖದ ತೀವ್ರತೆ ಹೀಗೆ. ವಿವಿಧ ಸಂದರ್ಭಗಳಲ್ಲಿ ಹಕ್ಕಿಗಳ ಬಾಲವು ವಿವಿಧ ರೀತಿಯ ಕಾರ್ಯ ನಿರ್ವಹಿಸುತ್ತದೆ. ಅಷ್ಟೇ ಅಲ್ಲ, ನೆಲದ ಮೇಲೆ ಕುಪ್ಪಳಿಸುವಾಗಲೂ ಬಾಲ ಬಳಸಿಕೊಂಡು ಕಡಿಮೆ ಶಕ್ತಿ ವ್ಯಯಿಸಿ ಕುಪ್ಪಳಿಸಬಲ್ಲದು.

ಕಾಂಗರೂ ಮುಂದಿನ ಕಾಲು ಅಂದರೆ ಕೈಗಳನ್ನು ಮೇಲೆತ್ತಿಯೇ ಇಟ್ಟುಕೊಂಡಿರುವುದನ್ನು ನೋಡಿರುತ್ತೀರಿ. ಇವೂ ಸಹ ಕುಪ್ಪಳಿಸುತ್ತಾ ಓಡುವುದು ಗೊತ್ತಿದೆ. ಈ ಕುಪ್ಪಳಿಸುವಿಕೆಗೆ ಶಕ್ತಿ ಕೊಡುವುದು ಇದರ ದಪ್ಪನೆಯ ಶಕ್ತಿಯುತ ಬಾಲ! ಬಾಲವನ್ನು ನೆಲಕ್ಕೆ ಒತ್ತಿ ಮಾರುದ್ದ ಕುಪ್ಪಳಿಸುವ ಕಾಂಗರೂಗೆ ಬಾಲವಿಲ್ಲದಿದ್ದರೆ ಗೇಣು ದೂರ ಸಹ ಕುಪ್ಪಳಿಸಲು ಸಾಧ್ಯವಿಲ್ಲ.

ದನಕ್ಕೆ ಬಾಲವೇಕಿದೆ ಗೊತ್ತೇ? ಮೈಮೇಲೆ ಕೂರುವ ನೊಣಗಳನ್ನು ಹೊಡೆದು ಓಡಿಸಲು!!

ಪಾಪ ಮೊಲಕ್ಕೆ ಮೋಟುಬಾಲ. ಆದರೆ ಶತ್ರುಗಳ ಸೂಚನೆ ಬೇಗ ತಿಳಿಯುವುದು ಇದರ ಬಾಲಕ್ಕೆ. ಮೊಲದ ಬಾಲ ಸುತ್ತಲಿನ ವಾತಾವರಣಕ್ಕೆ ಅನುಸರಿಸಿ ಕಂಪಿಸುತ್ತಿರುತ್ತದೆ. ಒಂದೊಮ್ಮೆ ವಾತಾವರಣದಲ್ಲಿ ಏರುಪೇರಾದ ತಕ್ಷಣ ಕಂಪನದ ರೀತಿ ತಕ್ಷಣ ಬದಲಾಗುತ್ತದೆ. ಕೂಡಲೇ ಕಿವಿ ಹಾಗೂ ಮೂಗನ್ನು ಬಳಸಿ ಏರುಪೇರಿಗೆ ಕಾರಣವೇನೆಂದು ತಿಳಿದುಕೊಂಡು ಕಾಲಿಗೆ ಬುದ್ಧಿ ಹೇಳುತ್ತದೆ.

ಅಳಿಲುಗಳ ಬಾಲ ಉದ್ದವಾಗಿದ್ದು ವಿಪರೀತ ರೋಮಗಳಿಂದ ತುಂಬಿರುತ್ತದೆ. ಬೇಕೆಂದಾಗ ಬೇಕಾದಷ್ಟು ಪ್ರಮಾಣದಲ್ಲಿ ಬಾಲದ ಕೂದಲುಗಳನ್ನು ಅರಳಿಸುತ್ತದೆ. ಮರದಿಂದ ಮರಕ್ಕೆ ನೆಗೆಯಲು ಈ ಬಾಲವೇ ಆಸರೆ. ಒಂದೊಮ್ಮೆ ನೆಗೆಯುವಾಗ ನೆಲಕ್ಕೆ ಬಿದ್ದರೆ ಬಾಲವು ಪ್ಯಾರಾಚೂಟ್‌ನಂತೆ ಪೂರ್ತಿ ಅರಳಿ ವೇಗವನ್ನು ನಿಯಂತ್ರಿಸುತ್ತದೆ. ನಿಧಾನ ನೆಲಕ್ಕಿಳಿಯಲು ಸಹಕಾರಿ. ಬೆಕ್ಕೂ ಸಹ ಮರದಿಂದ ಹಾರುವಾಗ ಬಾಲವನ್ನು ಸಂಪೂರ್ಣ ಅರಳಿಸಿಕೊಂಡಿರುತ್ತದೆ.

ರಾಮಾಯಣದಲ್ಲಿ ಲಂಕೆಗೆ ಸೇತುವೆ ಕಟ್ಟಲು ರಾಮನಿಗೆ ಅಳಿಲುಗಳು ಸಹಾಯ ಮಾಡಿದ್ದು ಪುರಾಣಪ್ರಸಿದ್ಧ. ಮರಳಿನಲ್ಲಿ ಬಾಲವನ್ನು ಹೊರಳಿಸಿ, ಬಾಲದ ತುಂಬಾ ಮರಳು ಮೆತ್ತಿಕೊಂಡು ಬಂದು ಸೇತುವೆ ಕಟ್ಟಲು ನೆರವಾಗುತ್ತಿದ್ದವಂತೆ.

ಬೀವರ್ ತನ್ನ ಬಾಲವನ್ನು ಅನೇಕ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತದೆ. ಪಟಪಟನೆ ಬಾಲ ಬಡಿದು ಎಚ್ಚರಿಕೆ ನೀಡುತ್ತದೆ. ಈಜುವಾಗ ಬಾಲವನ್ನು ನೀರಿಗೆ ಬಡಿಯುತ್ತಾ ಮುನ್ನುಗ್ಗುತ್ತದೆ. ಮನೆಗೆ ಕೆಸರನ್ನು ಮೆತ್ತುವಿಕೆಗೆ ಬಾಲದ ಬಳಕೆ. ಅಷ್ಟೇ ಅಲ್ಲ, ಮನೆಯ ಗೋಡೆಗೆ ಬಾಲದಿಂದಲೇ ಪೆಟ್ನೆ (ಗಟ್ಟಿಗೊಳಿಸುವಿಕೆ) ಹೊಡೆದು ಆಕಾರ ಕೊಡುತ್ತದೆ. ನುಣುಪಾಗಿ ಮಾಡಿಕೊಳ್ಳುತ್ತದೆ.

ಪ್ರಾಣಿಗಳು ಬಾಲದಲ್ಲೇ ತಮ್ಮ ಸಹವರ್ತಿಗಳಿಗೆ ಅನೇಕ ಸೂಚನೆಗಳನ್ನು ಕೊಡುತ್ತವೆ. ಹಸುವೊಂದು ಬಾಲವನ್ನು ಮೇಲೆತ್ತಿಕೊಂಡು ಓಡುತ್ತಿದೆ ಎಂದರೆ ಅದು ಭಯಭೀತವಾಗಿದೆ ಎಂದರ್ಥ. ಬೆಕ್ಕುಗಳು ಯುದ್ಧಕ್ಕೆ ಸಿದ್ಧವಾದಾಗ ಬಾಲವನ್ನು ಅರಳಿಸಿ ಮೇಲೆ ಕೆಳಗೆ ಆಡಿಸುತ್ತಿರುತ್ತದೆ. ನಾಯಿಗಳು ಪರಿಚಯ ಸೂಚಿಸಲು ಬಾಲವಾಡಿಸುವುದು, ಸೋತಾಗ ಕಾಲುಗಳ ಸಂಧಿಯಲ್ಲಿ ಬಾಲವಿಟ್ಟುಕೊಳ್ಳುವುದು ನಮಗೆಲ್ಲಾ ಗೊತ್ತು.

ಮನುಷ್ಯನಿಗೇಕೆ ಬಾಲವಿಲ್ಲ?

ಜೀವವಿಕಾಸದ ಹಂತದಲ್ಲಿ ಮಾನವನು ಎದ್ದುನಿಂತು ಎರಡು ಕಾಲುಗಳನ್ನು ಮಾತ್ರ ಬಳಸಿ ನಡೆದಾಡಲು ತೊಡಗಿದೆ. ಇದರಿಂದ ಬಾಲ ಉಪಯೋಗವಿಲ್ಲದಂತಾಯಿತು. ಹೀಗೆ ಬಾಲ ಕ್ರಮೇಣ ಮಾನವನ ದೇಹದಿಂದ ಮರೆಯಾಯಿತು. ಆದರೆ ಅದರ ಪಳೆಯುಳಿಕೆಯಂತೆ ಕರುಳಿನ ತುದಿಯಲ್ಲಿ ಅಪೆಂಡಿಕ್ಸ್ ಎಂದು ಕರೆಯಲಾಗುವ ಸಶೇಷವೊಂದು ಇದೆ ಎಂಬುದು ಜೀವಿತಜ್ಞರ ಊಹೆ. ಅಂದರೆ ದೇಹವನ್ನು ಸಮತೋಲನಗೊಳಿಸುವ ಉದ್ದೇಶಕ್ಕಾಗಿ ಸಹ ಬಾಲ ಪ್ರಾಣಿಗೆ ಅವಶ್ಯಕವೆಂದಾಯಿತು.

ಹಲ್ಲಿಯ ಬಾಲದ ಕಥೆ ಹೇಳದಿದ್ದರೆ ಈ ಲೇಖನ ಪೂರ್ಣವಾಗದು ಎನ್ನಿಸುತ್ತದೆ. ಹಲ್ಲಿ ಬಾಲ ಬೀಳಿಸುವುದು ಇಂದಿಗೂ ಜೀವವಿಜ್ಞಾನಕ್ಕೆ ಸವಾಲು. ಅದರ ದೇಹ ಹಾಗೂ ಬಾಲದ ಬುಡದ ಬೆಸುಗೆ ಬಹಳ ದುರ್ಬಲವಾಗಿದೆ. ಅದು ಜೋರಾಗಿ ಅಲುಗಿಸಿ ತನ್ನ ಬಾಲವನ್ನು ಬೀಳಿಸಬಹುದಾಗಿದೆ. ಅದಕ್ಕಾಗಿಯೇ ಶತ್ರುಗಳನ್ನು ವಂಚಿಸಲು ಬಾಲವನ್ನು ಬೀಳಿಸಿ ಓಡುತ್ತದೆ. ಪಟಪಟನೆ ಸಿಡಿಯುವ ಬಾಲವನ್ನು ನೋಡುತ್ತಾ ಪೆದ್ದ ಬೆಕ್ಕು ಹಲ್ಲಿ ಓಡಿದ್ದನ್ನು ಗಮನಿಸುವುದೇ ಇಲ್ಲ.

ಹಲ್ಲಿಗೆ ಬಾಲ ಮತ್ತೆ ಬೆಳೆಯುವಂತೆ ಮಾಡುವ ಜೈವಿಕ ಕ್ರಿಯೆ ಯಾವುದು?

ಬಾಲ ಬೆಳೆಯುವಿಕೆಯು ಕೇವಲ ಹಲ್ಲಿಗೊಂದೇ ಅಲ್ಲ. ಕೆಲವು ಹಾವುಗಳಿಗೂ ಸಹ ಬಿದ್ದುಹೋದ ಅಥವಾ ಕತ್ತರಿಸಿಹೋದ ಬಾಲ ಬೆಳೆಯುತ್ತದೆ. ಇದಕ್ಕೆ ಕಾರಣ ದೇಹದೊಳಗಿನ ರಾಸಾಯನಿಕ ಪ್ರಕ್ರಿಯೆ. ಈ ಕುರಿತಾಗಿ ವಿಜ್ಞಾನಿಗಳು ಸಂಶೋಧನೆಯನ್ನು ಮಾಡಿದ್ದಾರೆ. ಮನುಷ್ಯನಲ್ಲೂ ಸಹ ಬೆರಳುಗಳು ಬೆಳೆಯುವಂತೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಹ್ಞಾ… ಬೆರಳು ಬೆಳೆದರೂ ಉಗುರು ಬೆಳೆಯಲಾರದು. ಬಹುಶಃ ಅದರ ರಾಸಾಯನಿಕ ಕ್ರಿಯೆಗಳೇ ಬೇರೆ ಇರಬಹುದೇನೋ!