ಹಸ್ತ ಪ್ರತಿಗಳು:

ಅಂದವಲ್ಲದ ಅಕ್ಷರ, ಶುದ್ಧವಲ್ಲದ ಭಾಷೆ ಶ್ರದ್ಧಾವಂತನಲ್ಲದ ಲಿಪಿಕಾರ – ಈ ಮೂರು ಅಸಮರ್ಪಕತೆಗಳಲ್ಲಿ ಆಕಾರ ಪಡೆದ ಏಕೈಕ (ಒಂದೂವರೆ) ಕಾಗದ ಪ್ರತಿಯನ್ನು ಆಧರಿಸಿ, ಹಂಪೆಯ ಮಹಾಲಿಂಗಸ್ವಾಮಿಯ ‘ಬಾಲರಾಮನ ಸಾಂಗತ್ಯ’ ಕೃತಿಯನ್ನು ಇಲ್ಲಿ ಪರಿಷ್ಕರಿಸಲಾಗಿದೆ. ರಾಜ್ಯದ ಎಲ್ಲ ಹಸ್ತಪ್ರತಿ ಭಾಂಡಾರಗಳನ್ನು ಜಾಲಾಡಿದರೂ, ಎಲ್ಲ ಪ್ರಮುಖವ್ಯಕ್ತಿಗಳನ್ನು ವಿಚಾರಿಸಿದರೂ, ಈ ಕೃತಿಯ ಇನ್ನೊಂದು ಪ್ರತಿ ಲಭ್ಯವಾಗಲಿಲ್ಲ. ಹೀಗಾಗಿ ಈಗಾಗಲೇ ಖಿಲವಾಗುತ್ತಿರುವ ಇದ್ದೊಂದು ಆಧುನಿಕ ಕಾಗದ ಪ್ರತಿಯೂ ಹಾಳಾಗಿ ಹೋದರೆ, ಈ ಕೃತಿಯನ್ನು ಶಾಶ್ವತ ಕಳೆದುಕೊಳ್ಳುತ್ತೇವೆ – ಎಂಬ ಭೀತಿ ನನ್ನಿಂದ ಈ ಕಾರ್ಯ ಮಾಡಿಸಿದ್ದು, ವಿದ್ವಾಂಸರು ನನ್ನ ಅಸಹಾಯಕತೆಯನ್ನು, ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳಬೇಕೆಂದು ಬಿನ್ನವಿಸಿಕೊಳ್ಳುತ್ತ, ಉತ್ತಮ ಪ್ರತಿ ಸಿಕ್ಕರೆ ಇದನ್ನು ಪರಿಷ್ಕರಿಸಲು ವಿಪುಲ ಅವಕಾಶಗಳಿವೆಯೆಂದು ಸೂಚಿಸಬಯಸುತ್ತೇನೆ.

‘ಬಾಲರಾಮನ ಸಾಂಗತ್ಯ’ ಕೃತಿನಾಮವಾಗಲೀ, ಕರ್ತೃ ಮಹಾಲಿಂಸ್ವಾಮಿಯ ಹೆಸರಾಗಲೀ ಕವಿಚರಿತೆಕಾರರ ಗಮನಕ್ಕೆ ಬಂದಿಲ್ಲ. ಈ ಕೃತಿಯ ಕಾಗದ ಪ್ರತಿಯನ್ನು ಶೋಧಿಸಿದರು (೧೯೪೪) ಹುಲ್ಲೂರು ಶ್ರೀನಿವಾಸ ಜೋಯಿಸರು.

[1] ಕಣ್ಮುಚ್ಚಿ ಓದಿ, ಇದನ್ನು ಡಾ| ಜಿ. ವರದರಾಜರಾವ್ ಅವರು, ತಮ್ಮ ಪ್ರಕಟಿತ ಪಿಎಚ್.ಡಿ ಪ್ರಬಂಧದಲ್ಲಿ (ಕ್ರಿ.ಶ.೧೯೬೬) ಉದ್ದಕ್ಕೂ ಬಳಸಿಕೊಂಡಿದ್ದಾರೆ. ಒಂದು ಪುಟದ ಭಾವಚಿತ್ರವನ್ನೂ ಪ್ರಕಟಿಸಿದ್ದಾರೆ.

“ಈ ಪ್ರತಿಯನ್ನು ಉಪಯೋಗಿಸಿಕೊಂಡು ಶ್ರೀ ಹುಲ್ಲೂರು ಅವರಿಗೆ ಹಿಂದಿರುಗಿಸಿದ್ದೇನೆ” ಎಂದು ಡಾ| ವರದರಾಜರಾವ್ ಅವರು ಸುಮಾರು ೧೯೬೮ರಲ್ಲಿ ನನಗೆ ಹೇಳಿದ್ದರು. ಅಂದಿನಿಂದ ಇದರ ಶೋಧಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಯತ್ನಿಸಿ ವಿಫಲನಾದ ಸಂದರ್ಭದಲ್ಲಿ, ಶ್ರೀ ಎಸ್. ಶಿವಣ್ಣನವರು ಇದರ ನಕಲು ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿದೆಯೆಂದು ಸೂಚಿಸಿ, ಕಮರಿದ ನನ್ನ ಆಸೆಯನ್ನು ಕುದುರಿಸಿದರು. ಈ ನಕಲು ಪ್ರತಿಯ ಸ್ವರೂಪ ಹೀಗಿದೆ:

ಶ್ರೀ ವರದರಾಜರಾವ್ ಅವರು ಈ ಹಸ್ತಪ್ರತಿಯನ್ನು ಆರಂಭದಿಂದ ೩ನೆಯ ಸಂಧಿ ೧೫೮ನೆಯ ಪದ್ಯದ ವರೆಗೆ ಬೇರೊಬ್ಬರಿಂದ ಒಂದು ನೋಟಬುಕ್ಕಿನಲ್ಲಿ ನಕಲು ಮಾಡಿಸಿದ್ದಾರೆ. (KB 811). ಬಳಿಕ ಅವರೇ ನಕಲು ಕಾರ್ಯ ಮುಂದುವರಿಸಿ ೧೩ನೆಯ ಸಂಧಿ ೧೨೦ನೆಯ ಪದ್ಯದ ವರೆಗೆ ಮಾತ್ರ ಬರೆದು ನಿಲ್ಲಿಸಿದ್ದಾರೆ. ಅಪೂರ್ಣಸ್ಥಿತಿಯಲ್ಲಿ ನಿಂತ ಇವರ ಬರವಣಿಗೆ ಎರಡು ನೋಟಬುಕ್ (KB 812, KB 813) ವ್ಯಾಪಿಸಿದೆ. ಈ ಮೂರೂ ನೋಟಬುಕ್‌ಗಳು (=ಅ ಪ್ರತಿ) ತುಂಬ ಅಶುದ್ಧ ಪ್ರತಿಗಳಾಗಿವೆ. ಹೀಗೆ ಶ್ರೀ ಹುಲ್ಲೂರ ಅವರ ಹಸ್ತಪ್ರತಿಯ ನಕಲು ಸಿಕ್ಕರೂ ಅದರ ಅಪೂರ್ಣಸ್ಥಿತಿ (ಸಂಧಿ ೧೩-ಪದ್ದಯ ೧೨೦) ನನ್ನನ್ನು ಬಾಧಿಸುತ್ತಿರುವಾಗ, ಶ್ರೀ ಎಸ್.ಶಿವಣ್ಣ ಅವರು ಶ್ರೀ ಹುಲ್ಲೂರ ಅವರ ಪ್ರತಿಯ ಪೂರ್ಣ ನಕಲಿನ ಬೇರೊಂದು (=ಬ)ಪ್ರತಿ (KB 808, KB 809, KB 810) ಅದೇ ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವುದೆಂದು ತಿಳಿಸಿದರು. ಚಿತ್ರದುರ್ಗದ ಪಾತಾಳೇಶ್ವರ ಸಂಘದ ಸದಸ್ಯನಾದ ಮಂಜುನಾಥನೆಂಬವನು ಡಾ|| ವರದಾರಾಜರಾವ್ ಅವರ ಹೇಳಿಕೆಯ ಮೇರೆಗೆ ಈ ನಕಲು ಕಾರ್ಯವನ್ನು ಇಡಿಯಾಗಿ ಪೂರೈಸಿದ್ದಾರೆ. ಮೇಲೆ ಹೇಳಿದ KB811, KB812, KB813 ನಂಬರಿನ ಪ್ರತಿಗಳಿಗಿಂತ ಇದು ಇನ್ನೂ ಅಶದ್ಧಪ್ರತಿಯಾಗಿದೆ.

ಹೀಗೆ ಡಾ|| ವರದರಾಜರಾವ್ ಅವರ ಪ್ರಯತ್ನದಿಂದಾಗಿ ಶ್ರೀ ಹುಲ್ಲೂರ ಅವರ ಹಸ್ತಪ್ರತಿಯಿಂದ ಒಂದೂವರೆ ಪ್ರತಿ ಹುಟ್ಟಿದ್ದು, ಇವುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.

ಕುಮಾರರಾಮನನ್ನು ಕುರಿತ ಕೃತಿಗಳ ಸಂಖ್ಯೆ:

ಕುಮಾರ ರಾಮನನ್ನು ಕುರಿತು ಕನ್ನಡದಲ್ಲಿ ಹುಟ್ಟಿಕೊಂಡಿರುವ ಕೃತಿಗಳು ಅನೇಕ. ನಂಜುಂಡ ಮಹಾಲಿಂಗಸ್ವಾಮಿಗಳ ಕೃತಿಗಳನ್ನು ಹೊರತು ಪಡಿಸಿದರೆ, ಉಳಿದ ಮೂರು ಪಾಂಚಾಳಗಂಗನ ಕೃತಿಯ ಪಾಠಾಂತರಗಳಾಗಿರುವದರಿಂದ, ಇವೆಲ್ಲವನ್ನೂ ಒಂದೇ ಕೃತಿಯಾಗಿ ಇಟ್ಟುಕೊಳ್ಳಬೇಕೆಂದು ಡಾ|| ವರದರಾಜರಾವ್ ಹೇಳುತ್ತಾರೆ. ಆದರೆ ಇವುಗಳಲ್ಲಿಯ ಸ್ವತಂತ್ರ ಪದ್ಯ, ಸ್ವತಂತ್ರ ಘಟನೆ, ಘಟನೆಗಳಿಂದ ಆಕಾರಗೊಂಡ ಭಿನ್ನ ಕೃತಿಶಿಲ್ಪಗಳನ್ನು ನೋಡಿದರೆ, ಇವುಗಳನ್ನು ಪಾಠಾಂತರ (Veriation) ಗಳೆನ್ನದೆ, ರೂಪಾಂತರ (Version) ಎಂದು ಕರೆದು, ಇವುಗಳಿಗೆ ಶೂನ್ಯಸಂಪಾದನೆಗಳಂತೆ ಸ್ವತಂತ್ರಸ್ಥಾನ ಕೊಡುವುದೇ ಸೂಕ್ತವೆನಿಸುತ್ತದೆ. ಹೀಗಾಗಿ ನಾನು ಪಾಂಚಾಳಗಂಗ ಪರಿವಾರದ ಈ ಮೂರು ಕೃತಿಗಳನ್ನು ಶೋಧಿಸಿ, ಈಗಾಗಲೇ ಹೊಸ ಕುಮಾರರಾಮನಸಾಂಗತ್ಯ (೨೦೦೦), ಕೂಮಾರ ರಾಮಯ್ಯನ ಚರಿತೆ (೨೦೦೧)ಗಳನ್ನು ಪರಿಷ್ಕರಿಸಿ ಪ್ರಕಟಿಸಿದ್ದೇನೆ. ಮೂರನೆಯದಾದ “ಹಳೆಯ ಕುಮಾರರಾಮನ ಸಾಂಗತ್ಯ” ಹಸ್ತಪ್ರತಿ ನನ್ನಲ್ಲಿದ್ದು, ಪರಷ್ಕರಿಸಿ ಇಷ್ಟರಲ್ಲಿಯೇ ಪ್ರಕಟಿಸಲಿದ್ದೇನೆ. ಈ ಮೂರು ಕೃತಿಗಳ ಸಂಬಂಧ ಹೀಗಿದೆ:

ಹಳೆಯ ಕುಮಾರ ರಾಮನ ಸಾಂಗತ್ಯ (ಪದ್ಯ ಸಂಖ್ಯೆ ೧೮೦೦) ಹೊಸ ಕುಮಾರ ರಾಮನ ಸಾಂಗತ್ಯ
(ಪದ್ಯ ಸಂಖ್ಯೆ ೧೮೦೦)
ಕೊಮಾರ ರಾಮನ ಚರಿತೆ
(ಪದ್ಯ ಸಂಖ್ಯೆ ೨೭೯೬)

೧. ಹಳೆಯ ಕುಮಾರ ರಾಮನ ಸಾಂಗತ್ಯದಿಂದ ೧೭೭ ಪದ್ಯ ಸ್ವೀಕರಿಸಲಾಗಿದೆ.

೨. ಹೊಸ ಕುಮಾರರಾಮನ ಸಾಂಗತ್ಯ (ದೊಡ್ಡನ ಗೌಡರ ಪ್ರತಿ)ಯಿಂದ ೬೦೦ ಪದ್ಯ ಸ್ವೀಕರಿಸಲಾಗಿದೆ.

ಸೋಮೇಶ್ವರ ದೇವಾಲಯ ಪ್ರತಿ
(ಪದ್ಯ ಸಂಖ್ಯೆ ೧೯೮೬)
ದೊಡ್ಡನ ಗೌಡರ ಪ್ರತಿ
(ಪ್ರತಿ ಸಂಖ್ಯೆ ೧೪೮೯)

೧. ಹಳೆಯ ಕುಮಾರರಾಮನ ಸಾಂಗಯ್ಯದಿಂದ ೩೦೦ ಪದ್ಯ ಸ್ವೀಕರಿಸಲಾಗಿದೆ

೨. ಸೋಮೇಶ್ವರ ದೇವಲಯ ಪ್ರತಿಗಿಂತ ೫೦೦ ಪದ್ಯ ಹೆಚ್ಚಿಗಿವೆ.

 

ಈ ಮೂರು ಒಂದರೊಳಗೊಂದು ಬೆರೆತು ಹಲವು ಶಾಖೆಗಳಾಗಿ ಬೆಳೆದರೆ, ನಂಜುಂಡನ ಮತ್ತು ಮಹಾಲಿಂಗಸ್ವಾಮಿಯ ಕೃತಿಗಳು ಮಾತ್ರ ಬಹುಮಟ್ಟಿಗೆ ತಮ್ಮ ಮೂಲ ಸ್ವರೂಪ ಉಳಿಸಿಕೊಂಡಿವೆ. ಇವುಗಳಲ್ಲಿ ನಂಜುಂಡನ ‘ರಾಮನಾಥಚರಿತೆ’ ಈಗಾಗಲೇ ಮೈಸೂರು ಪ್ರಾಚ್ಯವಿದ್ಯಾಲಯದಿಂದ ಪ್ರಕಟವಾಗಿದೆ (ಸಂ.ಎಚ್.ದೇವೀರಪ್ಪ). ಸದ್ಯ ಮಹಾಲಿಂಗಸ್ವಾಮಿ “ಬಾಲರಾಮನ ಸಾಂಗತ್ಯ ಪ್ರಕಟವಾಗುತ್ತಿದೆ.

ಕರ್ನಾಟಕದಲ್ಲಿ ಸಿಗುವ ಕುಮಾರರಾಮನನ್ನು ಕುರಿತ ಎಲ್ಲ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪರಸ್ಪರ ಹೋಲಿಸಿ ನೋಡಿದರೆ ಈ ಕೃತಿ ಸಂಖ್ಯೆ ಐದರಿಂದ ಇನ್ನೂ ವರ್ಧಿಸುವ ಸಾಧ್ಯತೆಯಿದೆ. ಹೀಗೆ ಸಿಗುವ ಕೃತಿಗಳ ಸಂಖ್ಯೆ ೬ ಎಂದು ಶ್ರೀ ಹುಲ್ಲೂರ ಅವರು ಹೇಳುವ ಮಾತನ್ನು ಇಲ್ಲಿ ನೆನೆಯಬಹುದು.[2]

ಮಹಾಲಿಂಗಸ್ವಾಮಿಬಾಲರಾಮನ ಸಾಂಗತ್ಯ“:

ಕನ್ನಡಸಾಹಿತ್ಯದಲ್ಲಿ ಕವಿಗಳು ತಮ್ಮ ಚರಿತ್ರೆಯ ಬಗ್ಗೆ ತುಂಬ ಉದಾಸೀನ ಭಾವ ತಾಳುತ್ತ ಬಂದಿದ್ದಾರೆ. ಇದರಿಂದಾಗಿ ಕವಿ-ಕೃತಿಗಳ ವಿವರ, ಸೃಷ್ಟಿಸಂದರ್ಭ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಈ ಶ್ರೇಣಿಯಲ್ಲಿ ಪರಿಗಣಿತನಾಗುತ್ತಾನೆ, ಮಹಾಲಿಂಗಸ್ವಾಮಿ. ಈ ವರೆಗೆ ತಿಳಿದು ಬಂದಂತೆ, ಈತನ ಏಕೈಕ ಕೃತಿ ಬಾಲರಾಮನ ಸಾಂಗತ್ಯ. ಇದಕ್ಕೆ ‘ಬಾಲ ಕುಮಾರರಾಮನ ಸಾಂಗತ್ಯ’ವೆಂಬ ಪರ್ಯಾಯ ನಾಮವೂ ಕಂಡುಬರುತ್ತದೆ. ಈ ಕೃತಿಯನ್ನಾಧರಿಸಿ ಕವಿ ಪರಿಚಯವನ್ನು ಹೀಗೆ ಸಂಗ್ರಹಿಸಬಹುದು:

ಮಹಾಲಿಂಗಸ್ವಾಮಿ ಹಂಪೆಯವನು. ಚರಪತಿಯೆಂದು ಕರೆದುಕೊಂಡಿರುವುದರಿಂದ ಲಿಂಗಾಯತ ಜಂಗಮನೆಂಬುದು ಸ್ಪಷ್ಟ. ಶಿವಗಂಗೆಯನ್ನು ಸ್ಮರಿಸುವದರಿಂದ ಇವನು ಅಲ್ಲಿಯ ಮೇಲಣಗವಿ ಸಂಪ್ರದಾಯದವನಿರಬೇಕೆಂದು ಹುಲ್ಲೂರ ಶ್ರೀನಿವಾಸರಾಯರು ಉಹಿಸುತ್ತಾರೆ. ಪೀಠಿಕಾ ಭಾಗದಲ್ಲಿ ರೇವಣಾಚಾರ್ಯರನ್ನು ನೆನೆದಿರುವುದೂ ಈ ಹೇಳಿಕೆಯನ್ನು ಬೆಂಬಲಿಸುತ್ತದೆ. ಪ್ರಾಚೀನ ಕವಿಗಳಲ್ಲಿ ಹರಿಹರ, ರಾಘವಾಂಕ, ಕೆರೆಯ ಪದ್ಮರಸ, ಕವಿಲಿಂಗರನ್ನೂ, ಪುರಂದರದಾಸ, ಕನಕದಾಸ, ತಾಳಪಾದ ಚೆನ್ನರನ್ನೂ ನೆನೆದಿದ್ದಾನೆ. ಪರಮೇಶ್ವರ,ಪಾರ್ವತಿ, ಗಣಪ, ಶಾರದೆ, ಶರಭೇಂದ್ರ ಮೊಲದಾದ ಪೌರಾಣಿಕ ದೇವತೆಗಳನ್ನು, ತಗಡೂರು ಬೆನವವೆಂಬ ಸ್ಥಳೀಯ ದೇವತೆಯನ್ನು, ಶಿವಭಕ್ತರಲ್ಲಿ ಕಲ್ಯಾಣದ ಬಸವರಾಜನನ್ನು,ಬೇರೆಡೆಗಳಲ್ಲಿ ಅಲ್ಲಮನನ್ನು ಹೊಗಳಿದ್ದಾನೆ. ಪಾಂಚಾಳ ಗಂಗನನ್ನು ಸ್ಮರಿಸದಿದ್ದರೂ ಎರಡು ಕಡೆಗಳಲ್ಲಿ ಎರಡು ಕಡೆಗಳಲ್ಲಿ ಆ ಹೆಸರನ್ನು ಬಳಸಿರುವುದರಿಂದ, ಅವನಿಂದ ಪ್ರಭಾವಿತನಾಗಿರುವುದು ಸ್ಪಷ್ಟ. ತನ್ನ ಕೃತಿಯ ಕಥೆ ಜೈಮಿನಿಭಾರತಕ್ಕಿಂತ ಶ್ರೇಷ್ಠನೆನ್ನುವಲ್ಲಿ ಕನ್ನಡ ಜೈಮಿನಿಭಾರತವನ್ನೇ ಕುರಿತು ಹೇಳಿದಂತಿದೆ. ಹೀಗಾಗಿ ಇವನು ಲಕ್ಷ್ಮೀಶನಿಗಿಂತ ಈಚೆಯವನೆಂಬುದು ಖಚಿತ. ಅಲ್ಲಲ್ಲಿ ಉರ್ದು ಮಿಶ್ರಿತ ಭಾಷೆ ಕಂಡುಬರುವುದೂ ಈ ಹೇಳಿಕೆಯನ್ನು ಸಮರ್ಥಿಸುತ್ತದೆ. ಶ್ರೀ ಹುಲ್ಲೂರ ಅವರಿಗೆ ಲಭ್ಯವಿರುವ ಪ್ರತಿ ‘ರುಧಿರೋದ್ಗಾರಿ ಸಂವತ್ಸರದ ಮಾರ್ಗಶಿರ’ ಮಾಸವನ್ನು ಸೂಚಿಸುತ್ತಿದ್ದರೂ, ಕೃತಿರಚನೆಯ ನಿರ್ದಿಷ್ಟ ಕಾಲನಿರ್ಣಯಕ್ಕೆ ಇದು ನೆರವಾಗುವುದಿಲ್ಲ. ಒಟ್ಟಾರೆ, ಡಾ || ವರದರಾಜರಾವ್ ಹೇಳುವಂತೆ ಇದು ೧೮ನೆಯ ಶತಮಾನದಲ್ಲಿ ರಚನೆಗೊಂಡಿರಬೇಕು.

ಈ ಕೃತಿಯನ್ನು ಶೋಧಿಸಿದ ಹುಲ್ಲೂರ ಶ್ರೀನಿವಾಸರಾಯರು ಇದರ ಸಂಧಿ ಸಂಖ್ಯೆ ೧೯ ಎಂದು ದಾಖಲಿಸಿದ್ದಾರೆ. ಡಾ || ವರದರಾಜರಾಯರೂ ಇದನ್ನು ಅನುಮೋದಿಸಿದ್ದಾರೆ. ಆದರೆ ೧೯ ಎಂಬ ಅಸಮ (ಅಶುಭ) ಸಂಖ್ಯೆಗೆ ಕೃತಿಪೂರ್ಣಗೊಳಿಸಿದುದು ಸರಿಯೆನಿಸುವುದಿಲ್ಲ. ಬಹುಶಃ ಲಿಪಿಕಾರ ೬ ಮತ್ತು ೭ ಸಂಧಿಗಳನ್ನು ಸೇರಿಸಿದಂತಿದೆ. ಇವುಗಳನ್ನು ಬಿಡಿಸಿಕೊಂಡು ಸಂಧಿ ಸಂಖ್ಯೆ ೨೦ ಎಂದು ನಾವು ಪರಿಗಣಿಸಿದ್ದೇವೆ.

* * *

ಕೃತಿ ಮಹತ್ವ:

ಜೀವಿತಕಾಲದಲ್ಲಿ ವೀರನಾಗಿ ಬಾಳಿ, ಮರಣೋತ್ತರ ಕಾಲದಲ್ಲಿ ಸಾಂಸ್ಕೃತಿಕ ವೀರನಾಗಿ, ಕೊನೆಗೆ ಪುರಾಣ ವೀರನಾಗಿ, ದೇವರಾಗಿ ಬೆಳಗಿದವ, ಕುಮಾರರಾಮ. ಬಹುಶಃ ರಣಾಂಗಣದಲ್ಲಿ ವೀರಸ್ವರ್ಗವೇರುತ್ತಲೇ (೧೩೨೭) ಇವನನ್ನು ಕುರಿತು ಜನಪದ, ಶಿಷ್ಟಪದ ಸಾಹಿತ್ಯ ಹುಟ್ಟಲು ಆರಂಭಿಸಬೇಕು. ಹೀಗೆ ಹುಟ್ಟಿದ ಮೊದಲ ಕಾವ್ಯ ಬಹುಶಃ ಪಾಂಚಾಳಗಂಗನ ಕುಮಾರರಾಮನ ಸಾಂಗತ್ಯ, ತೀರ ಪ್ರಾಚೀನ ಕಾವ್ಯವಾಗಿರುವ ಕಾರಣ ಜನ ಇದನ್ನು “ಹಳೆಯ ಕುಮಾರರಾಮನ ಸಾಂಗತ್ಯ” ವೆಂದು ಕರೆದಂತಿದೆ. ಈ ಶೀರ್ಷಿಕೆಯಿಂದ ಸಿಗುವ ಹಸ್ತಪ್ರತಿಯೇ ಇದ್ಕಕೆ ನಿದರ್ಶನ. ಮುಂದೆ ಕೆಲವೇ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಘಟನೆಗಳು ಸೇರಿಕೊಂಡು “ಹೊಸ ಕುಮಾರ ರಾಮನ ಸಾಂಗತ್ಯ” ಶೀರ್ಷಿಕೆಯ ಕೃತಿ ಹುಟ್ಟಿದೆ. ಆಮೇಲೆ ಕುಮಾರರಾಮ-ರತ್ನಾಜಿ ಇವರನ್ನು ಅರ್ಜುನ-ಊರ್ವಶಿಯರೊಂದಿಗೆ ಸಮೀಕರಿಸಿ ‘ಕುಮಾರರಾಮಯ್ಯನ ಚರಿತ್ರೆ’ ರೂಪ ಗೊಂಡಿರಬೇಕು. ಇದರ ವಸ್ತುವನ್ನೇ ಇನ್ನಷ್ಟು ಪರಿಷ್ಕರಿಸಿ ನಂಜುಂಡ ‘ರಾಮನಾಥ ಚರಿತೆ’ ಬರೆದಂತಿದೆ. ಕೊನೆಗೆ ಜಮದಗ್ನಿಯು ಕಂಪಿಲವಾಗಿ, ಪರಶುರಾಮನು ಕುಮಾರರಾಮನಾಗಿ, ರೇಣುಕೆಯು ರತ್ನಾಜಿಯಾಗಿ ಹುಟ್ಟಿದರೆಂಬ ಅವತಾರ ಕಲ್ಪನೆಯ ನೆಲೆಯಲ್ಲಿ[3] ಮಹಾಲಿಂಗಸ್ವಾಮಿ ತನ್ನ ಕೃತಿ ರಚಿಸಿದ್ದಾನೆ. ಈ ಅವತಾರವನ್ನು ಹೊರತು ಪಡಿಸಿದರೆ, ಉಳಿದಂತೆ ಇಲ್ಲಿಯ ಪರಶುರಾಮ – ಕುಮಾರರಾಮನ ಹೋಲಿಕೆಯು ಅರ್ಜುನ – ಅರಿದೆಸರಿಗಳ ತಗುಳ್ಚಿ ಹೇಳಿದ ಕಥಾತಂತ್ರವನ್ನು ನೆನಪಿಸುತ್ತದೆ. ಕೃತಿಯ ವೈಶಿಷ್ಟ್ಯವೆಂದರೆ ನಡುನಡುವೆ ತ್ರಿಶಂಕು, ರೇಣುಕೆ, ಇಂದ್ರಕುಮಾರಿ, ಸೂರ್ಯಾಂಗಮುನಿ, ಜಯಸೇನ, ವರರುಚಿ, ಡೊಂಬರ ಚೆನ್ನಿ, ಮಚ್ಛೇಂದ್ರನ ಉಪಕಥೆಗಳನ್ನು ಹೆಣೆದುದು ಮತ್ತು ಆರಂಭದಲ್ಲಿ ನಾರದನು ಹೊಸಮಲೆಗೆ ಬಂದು ಅಲ್ಲಿಯ ಋಷಿಗಳಿಗೆ “ಈ ಪ್ರಶಾಂತ ಪ್ರದೇಶವು ಇಷ್ಟರಲ್ಲಿ ಪ್ರಕ್ಷುಬ್ಧ ಪ್ರದೇಶವಾಗುವುದು” ಎಂದು ಪೀಠಿಕೆ ಹಾಕಿರುವುದು. ಇದಲ್ಲದೆ ಆಸ್ಥಾನದಲ್ಲಿ ವಿರಾಜಮಾನನಾದ ಕುಮಾರರಾಂನ ಮಗ ಜಟ್ಟಂಗಿರಾಮ ದೊರೆಗೆ ಗುರುವು “ತನುಜನೆ ಕೇಳ್ ನಿಮ್ಮ ಜನಕ ಮಾಡಿದ ಕಾರ್ಯ” ಎಂದು ನುಡಿದು, ಕುಮಾರರಾಮನ ಕಥೆ ವಿವರಿಸುತ್ತ ಹೋಗುವುದು, ಕುಮಾರವ್ಯಾಸನ “ಕೇಳು ಜನಮೇಜಯ ಧರಿತ್ರೀಪಾ” ಎಂಬ ಕಥಾತಂತ್ರವನ್ನು ನೆನಪಿಸುತ್ತದೆ.

ಇದು ಕನ್ನಡ ದೇಶೀ ಪರಂಪರೆಯ ಕಾವ್ಯ. ಧಾರ್ಮಿಕ ಮಹಾಪುರುಷರನ್ನು ಕಥಾನಾಯಕರನ್ನಾಗಿಸುವ ಒಂದು ದೊಡ್ಡ ಪರಂಪರೆಯೇ ನಮ್ಮಲ್ಲಿ ಬೆಳೆದು ಬಂದಿದ್ದು, ಇದರ ಮಗ್ಗುಲಲ್ಲಿಯೇ ರಾಜಕೀಯ ಗಣ್ಯರನ್ನೂ ಕಥಾನಾಯಕರನ್ನಾಗಿಸುವ ಪರಂಪರೆಯೊಂದು ತಲೆಯೆತ್ತಿದೆ. ಕಥಾನಾಯಕ ಜೀವಂತವಾಗಿರುವಾಗ ಇಲ್ಲವೆ ಗತಿಸಿದ ಬಳಿಕ ಈ ಕೃತಿಗಳು ಹುಟ್ಟಿತ್ತ ಬಂದಿದ್ದು, ಕುಮಾರರಾಮನನ್ನು ಕುರಿತುವು ಬಹುಶಃ ಅವನ ಮರಣದ ಕ್ಷಣದಿಂದಲೇ ಕಣ್ಣು ತೆರೆಯಲಾರಂಭಿಸಿವೆ. ಕನ್ನಡದ ಯಾವುದೇ ಚಾರಿತ್ರಿಕ ವೀರನನ್ನು ಕುರಿತು ಇಷ್ಟು ಸಂಖ್ಯೆಯಲ್ಲಿ ಕೃತಿಗಳು ಹುಟ್ಟಿಲ್ಲ. ಚಿಕ್ಕದೇವರಾಯನನ್ನು ಕುರಿತು ೨-೩ ಕೃತಿ ಹುಟ್ಟಿದ್ದರೂ ಇವು ನಿರಪೇಕ್ಷಧೋರಣೆಯವು ಅಲ್ಲ. ಇಂಥ ಧೋರಣೆಯು ಸಿರುಮನನ್ನು ಕುರಿತ ಕೃತಿಗಳಲ್ಲಿ ಕಂಡುಬಂದರೂ, ಕುಮಾರರಾಮನ್ನು ಕುರಿತ ಕೃತಿಗಳ್ಳ ವಿಸ್ತಾರ, ವೈವಿಧ್ಯ ಅಲ್ಲಿಲ್ಲ.

ಕುಮಾರರಾಮನನ್ನು ಕುರಿತು ಕಾವ್ಯ ರಚಿಸಿದವರು ಅನ್ನದ ಋಣಕ್ಕಾಗಿ ಬರೆದವರಲ್ಲ. ಸಂಸ್ಕೃತಿ ಬಗೆಗಿನ ಹೆಮ್ಮೆಗಾಗಿ, ಅದ್ನನು ಗೌರವಿಸುದಕ್ಕಾಗಿ ಬರೆದವರು. ಇವರಲ್ಲಿ ಮಹಾಲಿಂಗಸ್ವಾಮಿ ಕುಮ್ಮಟದುರ್ಗ ಸಮೀಪದ ಹಂಪೆಯವನಾಗಿರುವುದು ವಿಶೇಷವೆನಿಸಿದೆ. ಈತನಿಗಿಂತ ಮೊದಲು ಪಾಂಚಾಳಗಂಗ ಮತ್ತು ಅವನ ಪರಿವಾರದ ಕೃತಿ, ನಂಜುಂಡನ ಕೃತಿ ಹುಟ್ಟಿದ್ದರೂ, ಈತನ ಕೃತಿರಚನೆಯ ಹಿಂದೆ, ಈ ಮೊದಲಿನವುಗಳಲ್ಲಿ ಕಾಣದ ಯಾವುದೋ ಒಂದು ವಿಶೇಷ ಉದ್ದೇಶವಿರಬಹುದು. ಸಾಹಿತ್ಯಿಕವಂತೂ ಸರಿಯೇ, ಜಮದಗ್ನಿ – ಪರಶುರಾಮ – ರೇಣುಕೆಯರ ಅವತಾರ ಇತ್ಯಾದಿ ಸಾಹಿತ್ಯೇತರ ಉದ್ದೇಶವೂ ಇಲ್ಲಿದೆ.

“ಕುಮಾರ ರಾಮನ ಸಾಂಗತ್ಯಗಳು” ವಿಷಯವನ್ನು ಕುರಿತು ಪಿಎಚ್.ಡಿ.ಅಭ್ಯಾಸ ಪೂರೈಸಿದ ಡಾ || ವರದರಾಜರಾವ್ ಅವರು ಈ ಕೃತಿಯ ಸಾಹಿತ್ಯಿಕ ಗುಣವನ್ನು ಹೀಗೆ ವಿವರಿಸಿದ್ದಾರೆ.

“ಮಹಾಲಿಂಗಸ್ವಾಮಿ ಬರೆವಣಿಗೆಯಲ್ಲಿ ಉಪಮಾನಗಳಿಗಾಗಲೀ, ಗಾದೆಗಳಿಗಾಗಲೀ ಪೂರ್ವಕಥೆಗಳಿಗಾಗಲೀ ಅಭಾವವಿಲ್ಲ. ನಂಜುಂಡನಂತೆ ಪಂಡಿತಮಾನ್ಯನಲ್ಲದಿದ್ದರೂ ಪಾಂಚಾಳಗಂಗನ ಜಾಡಿನಲ್ಲಿಯೇ ಬಹುದೂರ ನಡೆದಿದ್ದಾನೆ ಎನ್ನಬಹುದು. ಪ್ರಾಚೀನ ಕಾವ್ಯಗಳ ಶ್ರವಣದ ಪರಿಣಾಮವನ್ನೂ ನೋಡಬಹುದು” (ಪು ೩೪೬).

“ಪರಾವಲಂಬಿಯಾದ ನಿದರ್ಶನಗಳಲ್ಲಿಯೇ ಕವಿಯ ಶಕ್ತಿ ಮುಗಿಯುವುದಿಲ್ಲ. ಅವನಿಗೆ ಜೀವನದ ಗಾಢವಾದ ಪರಿಚಯ ವಿದೆಯೆನ್ನಲು ಅವನು ಬಳಸಿರುವ ಇತರ ಉಪಮೆಗಳೇ ಸಾಕ್ಷಿ. ರಾಶಿರಾಶಿಯಾಗಿ ಹೊಸಹೊಸ ಹೋಲಿಕೆಗಳನ್ನು ಕೊಟ್ಟಿರುತ್ತಾರೆ. ಅದರಲ್ಲಿಯೂ ಸಾಮಾನ್ಯವರ್ಗದವರ ಜೀವನದ ಕಡೆಗೆ ಅವನ ಗಮನ ಹೆಚ್ಚಾಗಿದೆ” (ಪು ೩೪೭).

“ಮಹಾಲಿಂಗಸ್ವಾಮಿಯ ರಚನೆಯಲ್ಲಿ ಇನ್ನೊಂದು ವಿಶೇಷ ಕಂಡು ಬರುವುದುಂಟು. ಈತನು ಆಡುಮಾತಿನ ಸರಣಿಯನ್ನು ಬಹುಮಟ್ಟಿಗೆ ಅನುಸರಿಸಿರುವುದಿರಿಂದ, ತಾನು ಕೇಳಿರಬಹುದಾದ ಕೆಲವು ನುಡಿಗಟ್ಟುಗಳನ್ನು, ದ್ವಿರುಕ್ತಿಗಳನ್ನೂ ಪಾಮರಪ್ರಿಯವಾಗುವ ರೀತಿಯಲ್ಲಿ ಬಳಸಿರುತ್ತಾರೆ.” (ಪು ೩೪೯).

ಈ ನಿರ್ಣಾಯಕ ಮಾತುಗಳ ಸಮರ್ಥನೆಗಾಗಿ ಡಾ || ವರದರಾಜರಾವ್ ಅವರ ಪಿಎಚ್.ಡಿ.ಪ್ರಬಂಧದ “ಸಾಹಿತ್ಯ ವಿಮರ್ಶೆ” ಪ್ರಕರಣವನ್ನು ನೋಡಬಹುದು.

ಮಿಕ್ಕ ಕಾವ್ಯಗಳಲ್ಲಿ ಸಿಗದ ಸಾಹಿತ್ಯೇತರ ಅನೇಕ ಅಂಶಗಳನ್ನು ಒದಗಿಸುವ ಇದು, ಸಮಕಾಲೀನ ಚಾರಿತ್ರೆ ಮತ್ತು ಸಂಸ್ಕೃತಿ ಬಗೆಗಿನ ತಮ್ಮ ತಿಳುವಳಿಕೆಯನ್ನು ವಿಸ್ತರಿಸುತ್ತದೆ.

ಶೌರ್ಯ, ಶೌಚ, ಶರಣಾಗತರಕ್ಷಣೆ – ಇವು ಮೂರು ಪ್ರಾಚೀನ ಯುದ್ಧವೀರನ ಜೀವನ ಮೌಲ್ಯಗಳೆನಿಸಿದ್ದವು. “ಈಯಲ್ ಇರಿಯಲ್ ಶರಣ್ಬುಗೆ ಕಾಯಲ್ ಕ್ಷತ್ರಿಯರೇ ಬಲ್ಲರ್” ಎಂದು ಮುಂತಾಗಿ ಈ ಮೌಲ್ಯಗಳನ್ನು ಗದಾಯುದ್ಧ ಘೋಷಿಸುತ್ತದೆ. ಇವುಗಳಲ್ಲಿ ಶೌರ್ಯವನ್ನು ಕುರಿತು ಹೇಳುವುದಾದರೆ ಕುಮಾರರಾಮ ಜೀವನದುದ್ದಕ್ಕೂ ಯುದ್ಧೋತ್ಸಾಹವನ್ನು ಮೆರೆದ ವ್ಯಕ್ತಿಯಾಗಿದ್ದಾನೆ. ಮಿಕ್ಕ ಕಾವ್ಯಗಳಿಗಿಂತ ಇಲ್ಲಿ ಯುದ್ಧಘಟನೆಗಳು ಹೆಚ್ಚು ವಿಸ್ತಾರವಾಗಿ ತೋರಿಬರುತ್ತವೆ. ಗುತ್ತಿಯ ಜಗದಪ್ಪನ ಯುದ್ಧ (೬ನೆಯ ಸಂಧಿ), ಹೊಯ್ಸಳ ಬಲ್ಲಾಳನ ಯುದ್ಧ (೪,೫ನೆಯ ಸಂಧಿ), ಓದುಗಲ್ಲ ಪ್ರತಾರುದ್ರನ ಯುದ್ಧ (೭,೮,೯, ನೆಯ ಸಂಧಿ)ಗಳು ಇಲ್ಲಿ ತುಂಬ ವಿವರವಾಗಿ ವರ್ಣಿಸಲ್ಪಟ್ಟಿವೆ. ನೇಮಿಯೊಂದಿಗಿನ ಎರಡು ಕಾಳಗ, ಮಾತಂಗಿಯೊಂದಿಗಿನ ಒಂದು ಕಾಳಗ ಸಹವಾಗಿಯೇ ಈ ಕೃತಿಯ ಬಹು ಭಾಗವನ್ನು ವ್ಯಾಪಿಸಿವೆ.

ಶೌರ್ಯಕ್ಕೆ ಮೆರುಗು ಪ್ರಾಸ್ತವಾಗುವುದು ಸ್ತ್ರೀವಿಷಯದ ಶೌಚಗುಣದಿಂದ. ಕುಮಾರರಾಮ ಇಂದಿಗೂ ಮಾನ್ಯವಾಗಿರುವುದು ಈ ಮೌಲ್ಯ ಕಾರಣವಾಗಿ. ಇವನ ಜೀವನದಲ್ಲಿ ಮೂರು ಜನ ಸ್ತ್ರೀಯರು ಪಾತ್ರಮಾಡಿದ್ದಾರೆ. ಒಬ್ಬಳು ರತ್ನಾಜಿ, ಇನ್ನೊಬ್ಬಳು ಮಾತಂಗಿ, ಮತ್ತೊಬ್ಬಳು ಬಾಬಮ್ಮ. ಇವರಲ್ಲಿ ರತ್ನಾಜಿ ಕುಮಾರರಾಯನ ಶೌಚಕ್ಕೆ ಬರೆಗಲ್ಲಾಗಿ, ಮಾತಂಗಿ ಹಿಂದಿನ ಜನ್ಮದ ಸೇಡುತ್ತಿರಿಸಿಕೊ‌ಳ್ಳುವ ಹಂತಕಿಯಾಗಿ, ಬಾಬಮ್ಮ ವಿಫಲಪ್ರೇಮಿಯಾಗಿ ಚಿತ್ರಿತರಾಗಿದ್ದಾರೆ. ಅಂಬೆಯನ್ನು ಒಲ್ಲದಿರುವ ಮತ್ತು ಪುರುಷಸ್ತ್ರೀ ಶಿಖಂಡಿಯನ್ನು ಕೊಲ್ಲದಿರುವ ಭೀಷ್ಮನಂತೆ ಕುಮಾರರಾಮನು ರತ್ನಾಜಿಯನ್ನು ಒಲ್ಲದವನಾಗಿದ್ದಾನೆ. ಮಾತಂಗಿಯನ್ನು ಕೊಲ್ಲದವನಾಗಿದ್ದಾನೆ. ರತ್ನಾಜಿ ಸತ್ತು ಮಾತಂಗಿಯಾಗಿ ಹುಟ್ಟಿ ಕುಮಾರರಾಮನನ್ನು ಕೊಂದಳೆಂಬ ಇಲ್ಲಿಯ ತಿರುವು, ಅಂಬೆ ಸತ್ತು ಶಿಖಂಡಿಯಾಗಿ ಹುಟ್ಟಿ ಭೀಷ್ಮನ ಹರಣಮಾಡಿದನ್ನು ನೆನಪಿಸುತ್ತದೆ.

ಶರಣಾಗತ ರಕ್ಷಣೆ ಈ ಕೃತಿಯ ಕೇಂದ್ರ ಮೌಲ್ಯ. ದಿಲ್ಲಿ ಸುಲ್ತಾನನ ವಿರೋಧವನ್ನು ಲೆಕ್ಕಿಸದೆ ಮೊರೆಹೊಕ್ಕ ಬಹಾದ್ದೂರ (ಬಹಾವುದ್ದೀನ) ನನ್ನು ರಕ್ಷಿಸಿದುದೇ ಕುಮಾರರಾಮ ಮತ್ತು ದಿಲ್ಲಿ ಸುಲ್ತಾನರ ನಡುವಿನ ಕಾಳಗಕ್ಕೆ ಕಾರಣವಾಯಿತು. ಅದು ಕುಮಾರರಾಮನ ಮರಣದಲ್ಲಿ ಪರ್ಯವಸಾನಗೊಂಡಿತು. ಮುಂದೆ ಒದಗಬಹುದಾದ ಆಪತ್ತನ್ನೂ, ತನ್ನ ಸಾಮರ್ಥ್ಯವನ್ನೂ ಪರಿಗಣಿಸದೆ, ಶರಣಾಗತ ರಕ್ಷಣೆ ಮೌಲ್ಯಕ್ಕಾಗಿ ತೆತ್ತ ಬಲಿದಾನವಾಗಿದೆ.

ಈ ಮೂರು ಮೌಲ್ಯಗಳು ಮಿಕ್ಕ ಕೃತಿಗಳಂತೆ ಈ ಕೃತಿಯ ತುಂಬವೂ ವಿಜ್ರಂಭಿಸುತ್ತಿವೆ. ಚಾರಿತ್ರಿಕ ಅಂಶಗಳನ್ನು ಕುರಿತು ಹೇಳುವುದಾದರೆ ಇಲ್ಲಿ ರತ್ನಾ ಡೊಂಬರ ಹೆಣ್ಣು, ಕುಮಾರರಾಮ ಬೈಚಪ್ಪನ ಅಳಿಯ, ಕುಮಾರ ರಾಮನ ಹೆಂಡತಿ ಸುಭದ್ರೆಯ ಮಗ ಜಟ್ಟಂಗಿರಾಮ, ಈತನು ತಂದೆಯ ಬಳಿಕ ರಾಜ್ಯವಾಳಿದ, ರತ್ನಾಜಿಗೆ ಯಲ್ಲರಸನೆಂಬ ಮಗನಿದ್ದು ತೆಲುಗನಾದ ಈತ ಮಾತಂಗಿಯೊಂದಿಗೆ ಪಿತೂರಿ ನಡೆಸಿ, ಕುಮಾರರಾಮನ ಮರಣಕ್ಕೆ ಕಾರಣನಾದ, ಕುಮಾರ ರಾಮನ ಕುದುರೆ ಬೊಲ್ಲ ಕೊನೆಯಲ್ಲಿ ಶಿಲೆಯಾಗಿ ಮಾರ್ಪಾಡು ಹೊಂದಿತು, ಕುಮಾರರಾಮ ಹುಟ್ಟಿದ್ದು “ಶ್ರಾವಣ ಮಾಸ ಸ್ಥಿತಿ (ಸಿತ?) ಪಂಚ ಗುರುವಾರ ಜಾವ ಎರಡನೆಯ ಏಳು ಗಳಿಗೆ ಪವುರ್ನೋಮಿ ಚಂದ್ರಮ ಪೂರ್ವದೊಳಿಪ್ಪಂತೆ.” ಈತನು ಬಾಳಿದ್ದು ಮೂವತ್ತು ವರ್ಷ. ಇತ್ಯಾದಿ ವಿವರಗಳು ಈ ಕೃತಿ ನೀಡುವ ಹೊಸ ಚಾರಿತ್ರಿಕ ಸಂಗತಿಗಳಾಗಿವೆ.

ಹೀಗೆ ಮಧ್ಯಕಾಲೀನ ಕರ್ನಾಟಕದ ಪಾಳೆಯಗಾರ ಪರಿವಾರ ಮತ್ತು ಪರಿಸರದ ಸಂಸ್ಕೃತಿ- ಚರಿತ್ರೆ ಇಲ್ಲಿ ದಟ್ಟವಾಗಿ ಹರಡಿದೆ. ನಿತ್ಯಜೀವನ ವ್ಯವಹಾರಗಳು, ವಿಶಿಷ್ಟ ಆಚರಣೆಗಳು, ಘಟನೆಗಳು ಇತ್ಯಾದಿಗಳೆಲ್ಲಲ್ಲ ಅಂದಿನ ಜನರ ಮಾತು, ಕೃತಿ-ಇವುಗಳ ಹಿಂದಿರುವ ಮನಸ್ಸುಗಳು ಎದ್ದು ಕಾಣುತ್ತವೆ. ಈ ಸಾಂಗತ್ಯಕೃತಿಯ ನಡುವೆ ಅಲಲ್ಲಿ ಸಂದರ್ಭೋಚಿತವಾಗಿ ಬಳಸಿದ ಧವಳ, ಯಾಲಪದ, ಜೋಗುಳಪದ, ಒರಳಕ್ಕಿಪದಗಳೆಂಬ ದೇಶೀಮುಟ್ಟುಗಳು ಈ ಕೃತಿಯ ಜಾನಪದೀಯತೆಗೆ ಸಾಕ್ಷಿಯಾಗಿವೆ. ಇವುಗಳಲ್ಲದೆ ಪರಕೀಯ ಮುಸಲ್ಮಾನ ಸಂಸ್ಕೃತಿಯ ಸಮನ್ವಯ – ಸಂಘರ್ಷಗಳಿಂದುಂಟಾದ ವಿಶಿಷ್ಟ ಸಂದರ್ಭವನ್ನು ಈ ಕೃತಿಯನ್ನು ಕಾಣುತ್ತೇವೆ. ಒಟ್ಟಾರೆ, ಸಾಹಿತ್ಯಿಕ ಅಭ್ಯಾಸಕ್ಕಿಂತ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಭ್ಯಾಸಕ್ಕೆ ಈ ಕೃತಿ ಒಂದು ದೊಡ್ಡ ಗಣಿಯೆಂದೇ ಹೇಳಬೇಕು. ಈ ಗಣಿಯನ್ನು ಇತಿಹಾಸದೊಂದಿಗೆ, ಅಲ್ಲಲ್ಲಿ ಉಳಿದಿರುವ ಅವಶೇಷ-ಆಚರಣೆಗಳೊಂದಿಗೆ ಹೋಲಿಸಿ ನೋಡುವುದು ಅವಶ್ಯವಿದೆ.

ಕೊರಳಿಗೆ ಕೊರಳು:

ಕುಮ್ಮಟದುರ್ಗದ ಕಾಳಗದಲ್ಲಿ ಸೋತು ಹಿಂದಿರುಗುತ್ತಲ್ಲಿದ್ದ ಮಾತಂಗಿಯ ಮುಸಲ್ಮಾನ ಸೈನ್ಯಕ್ಕೆ ಪತ್ರಕಳುಹಿಸಿ, ಮತ್ತೆ ಏರಿಬರಬೇಕೆಂದೂ, ತಾವು ಕುಮ್ಮಟವರ್ಗದ ಕೋಟೆ ಬಾಗಿಲು ತೆರೆದು ನೆರೆವಾಗುವೆವೆಂದೂ ತಿಳಿಸಿದವರು, ಕುಮಾರ ರಾಮನ ಸೈನ್ಯದಲ್ಲಿದ್ದ ತೆಲುಗರು. ನೆರೆಮನೆಯವರೇ ಅಂತರಂಗದ ವೈರಿಗಳೆಂಬಂತೆ ಇವರು ನಡೆದುಕೊಂಡರು. ಇವರ ಆಮಂತ್ರಣದ ಪ್ರಕಾರ ಮಾತಂಗಿ ಸೈನ್ಯದೊಂದಿಗೆ ಮರಳಿದಳು. ತೆಲುಗರು ಕೋಟೆಬಾಗಿಲ ತೆರೆದರು. ಮುಸಲ್ಮಾನಸೈನ್ಯ ಒಳನುಗ್ಗಿತು. ವಿಜಯದ ಸಂತೋಷದಲ್ಲಿ ಮಗ್ನರಾಗಿದ್ದ ಕುಮಾರರಾಮ ಮತ್ತು ಅವನ ಸೈನಿಕರಿಗೆ ಅಸಹಾಯಕ ಸ್ಥಿತಿ ನಿರ್ಮಾಣವಾಯಿತು. ಏರಿಬಂದ ಮಾತಂಗಿ ರಾಮನ ರುಂಡ ಕತ್ತರಿಸಿದಳು. ಒಂದರ್ಥದಲ್ಲಿ ಮುಸಲ್ಮಾನರ ಸಹಾಯದಿಂದ ತೆಲುಗರು ಕನ್ನಡಿಗ ರಾಮನ ಕೊರಳು ಕತ್ತರಿಸಿದ ಈ ಘಟನೆ, ಕನ್ನಡಿಗರ ಮನಸ್ಸನ್ನು ಗಾಸಿಗೊಳಿಸಿತು. ತೆಲುಗರು ಈ ವಿದ್ರೋಹ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿ ಉಳಿಯಿತು.

ಈ ಘಟನೆ ಜರುಗಿದುದು ೧೩೨೭ರಲ್ಲಿ. ಮುಂದೆ ಒಂದು ದಶಕ ಕಳೆಯುವುದರೊಳಗಾಗಿ ಅಳಿದುಳಿದ ಕುಮ್ಮಟದುರ್ಗದ ಕನ್ನಡ ವೀರರು ನೆರೆಯ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಮೊದಲು ಸಂಗಮ (೧೩೩೬-೧೪೮೫), ತರುವಾಯ ಸಾಳುವ (೧೪೮೫-೧೫೦೫)ರೆಂಬ ಕನ್ನಡಿಗರು ಈ ರಾಜ್ಯವನ್ನು ಆಳಿದರು. ಆ ಮೇಲೆ ಕನ್ನಡಿಗನೇ ಆದ ತುಳುವ ನರಸನಾಯಕ (೧೪೯೧-೧೫೦೩),ಬಳಿಕ ಆಳಿದ ಆತನ ಮಗ ವೀರಸಿಂಹ (೧೫೦೩-೬)ನ ಆಳಿಕೆಯನ್ನು ಕೊನೆಗೊಳಿಸಿ, ತೆಲುಗಪಕ್ಷಪಾತಿ ಇನ್ನೊಬ್ಬ ಮಗ ಕೃಷ್ಣದೇವರಾಯ (೧೫೦೯-೧೫೨೯)ಪಟ್ಟವೇರಿದ. ಈತನ ಕಾಲದಲ್ಲಿ ಕನ್ನಡರಾಜ್ಯ ತೆಲುಗರ ಪ್ರಭಾವಕ್ಕೆ ಒಳಗಾಯಿತು. ಬಳಿಕ ಕನ್ನಡಿನಾದ ಅಚ್ಯುತ (೧೫೨೯-೪೨) ಅಧಿಕಾರಕ್ಕೆ ಬಂದರೂ, ಕೃಷ್ಣದೇವರಾಯನ ಅಳಿಯ ತೆಲುಗ ರಾಮರಾಯನೇ ಆಡಳಿತ ಸೂತ್ರಹಿಡಿದ. ಅಚ್ಯುತನ ತರುವಾಯ ಮಗ ವೆಂಕಟ (೧೫೪೨), ತಮ್ಮನ ಮಗ ಸದಾಶಿವ (೧೫೪೨-) ಆಳಿದರೂ ತೆಲುಗ ರಾಮರಾಯನೇ (೧೫೪೨-೬೫) ತನ್ನ ಆಡಳಿತ ಮುಂದುವರಿಸಿದ.

ಹೀಗೆ ಕೃಷ್ಣದೇವರಾಯನ ಕಾಲದಿಂದಲೂ ಕನ್ನಡ ಸಿಂಹಾಸನದ ಪ್ರತ್ಯಕ್ಷ -ಪರೋಕ್ಷವಾಗಿ ತೆಲುಗರ ಪಾಲಾದುದು, ಹಂಪಿ ವಿರೂಪಾಕ್ಷನ ಶೈವ ಪರಿಸರದಲ್ಲಿ ತಿರುಪತಿ ತಿಮ್ಮಪ್ಪನ ವೈಷ್ಣವ ವಾತಾವರಣ ನಿರ್ಮಾಣವಾದುದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿತು. ತೆಲುಗರು ಕುಮಾರರಾಮನ ಕೊರಳು ಕತ್ತರಿಸಿದ ನೊವು ೩೦೦ ವರ್ಷ ಕಳೆದರೂ ಕನ್ನಡಿಗರಲ್ಲಿ ಶಮನವಾಗಿರಲಿಲ್ಲ. ಇಂಥ ನೋವಿನ ಪ್ರಸಂಗದಲ್ಲಿ ಮತ್ತೆ ತೆಲುಗರೇ ಆಡಳಿತ ನಡೆಸಿದುದು, ಆ ನೋವನ್ನು ಇಮ್ಮಡಿಸಿತು. ಕೊರಳು ಕತ್ತರಿಸಿದುದಕ್ಕೆ ಕೊರಳು ಕತ್ತರಿಸುವುದೇ ಉತ್ತರವೆಂದು ನಿರ್ಧರಿಸಿದಂತೆ ತೋರುತ್ತದೆ. ಹೀಗಾಗಿ, ಮುಸಲ್ಮಾನರ ನೆರವಿನಿಂದ ತೆಲುಗರು ಕನ್ನಡಿಗ ಕುಮಾರರಾಮನ ಕೊರಳು ಕತ್ತರಿಸಿದುದಕ್ಕೆ ಪ್ರತಿಯಾಗಿ, ತಾವೂ ಮುಸಲ್ಮಾನರ ನೆರವಿನಿಂದ ತೆಲುಗ ರಾಮರಾಯನ ಕೊರಳು ಕತ್ತರಿಸಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರೆನಿಸುತ್ತದೆ. ಅದಕ್ಕಾಗಿಯೇ ಕುಮಾರ “ರಾಮ”ನ ಕೊರಳಿಗೆ ಪ್ರತಿಯಾಗಿ “ರಾಮ” ರಾಯನ ಕೊರಳು ಕತ್ತರಿಸಿ, ತೆಲುಗರ ಹಿಡಿತದಿಂದ ವಿಜಯನಗರ ಸಾಮ್ರಾಜ್ಯವನ್ನು ಮುಕ್ತಗೊಳಿಸಿದರು.

ಕುಮಾರ(ಸ್ವಾಮಿ)ರಾಮ:

ಜಟ್ಟಂಗಿರಾಮ ದೈವತದ ವರದಿಂದ ಹುಟ್ಟಿದ ಕಾರಣ ಕಂಪಿಲರಾಯ ತನ್ನ ಮಗನಿಗೆ ರಾಮ, ರಾಮನಾಥ ಅಥವಾ ರಾಮಯ್ಯನೆಂದು ಹೆಸರಿಟ್ಟಿರುವುದು ಸಹಜ. ಆದರೆ ಈ ಹೆಸರು ಕುಮಾರ ವಿಶೇಷಣದೊಂದಿಗೆ ಪ್ರಸಾರಗೊಂಡುದಕ್ಕೆ ಕಾರಣವೇನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಇತಿಹಾಸದಲ್ಲಿ (ರಾಜನ) ಮಗ ಅರ್ಥದಲ್ಲಿ ‘ಕುಮಾರ’ ಎಂಬ ವಿಶೇಷಣವನ್ನು ಹೆಸರಿನೊಂದಿಗೆ ಬಳಸಿದ ಉದಾಹರಣೆಗಳಿಲ್ಲವಾಗಿ, ಇದು ಬೇರೆ ಅರ್ಥವನ್ನು ಸೂಚಿಸುತ್ತಿರಬಹುದು.

ಷಣ್ಮುಖನ ಇನ್ನೊಂದು ಹೆಸರು ಕುಮಾರ. ಕಂಪಿಲನ ರಾಜಧಾನಿ ಹೊಸಮಲೆದುರ್ಗದ ಸಮೀಪದಲ್ಲಿರುವ ಸಂಡೂರಿನ ಕುಮಾರಸ್ವಾಮಿ ಆ ಪ್ರದೇಶದ ಬಹುದೊಡ್ಡ ದೈವತ. ಈ ಕುಮಾರಸ್ವಾಮಿ ಶೌರ್ಯ ಮತ್ತು ಶೌಚಗಳ ಪ್ರತೀಕ. ಹುಟ್ಟಿದ ಏಳನೆಯ ದಿನಕ್ಕೆ ದೇವಸೇನಾನಿಯಾಗಿ ತಾರಕಾಸುರನನ್ನು ವಧೆಮಾಡಿದ ಈತನ ಶೌರ್ಯ ಪುರಾಣಪ್ರಸಿದ್ಧ. ಆಜನ್ಮಬ್ರಹ್ಮಚಾರಿಯಾಗಿದ್ದ ಕಾರಣ ಈತನ ಶೌಚವೂ ಪುರಾಣಪ್ರಸಿದ್ಧ. ಶೌರ್ಯ ಮತ್ತು ಶೌಚದಲ್ಲಿ ಈ ಷಣ್ಮುಖವನ್ನು ಹೋಲುವನೆಂಬ ಅರ್ಥದಲ್ಲಿ ಕಂಪಿಲನ ಮಗ ರಾಮನಿಗೆ ಕುಮಾರ+ರಾಮ ಎಂಬ ಹೆಸರು ಪ್ರಚಾರಗೊಂಡಂತಿದೆ. ಬಹುಶಃ ಕರ್ನಾಟಕದಲ್ಲಿ ಕುಮಾರರಾಮನಿಂದ ಆರಂಭವಾದ ಶೌರ್ಯ-ಶೌಚಗಳ ಸಮನ್ವಯನಾದ ವ್ಯಕ್ತಿಗೆ ‘ಕುಮಾರ’ ಅಂಟಿಸುವ ಪರಿಕಲ್ಪನೆ ಬೇರೆ ಅರಸು ಮಕ್ಕಳ ವಿಷಯದಲ್ಲಿಯೂ ಮುಂದುವರಿದಂತಿದೆ. ಇಮ್ಮಡಿ ಚಿಕ್ಕಭೂಪಾಲನ ಮಗ ತೋಂಟದಾರಯ, ಸಿರುಮನ ಮಗ ಮಲ್ಲ, ಕ್ರಮವಾಗಿ ಕುಮಾರ ತೋಂಟದರಾಯ, ಕುಮಾರ ಮಲ್ಲರೆಂದು ಕಾವ್ಯದಲ್ಲಿ ಕೀರ್ತಿತರಾದುದು ಇದಕ್ಕೆ ಉದಾಹರಣೆಯೆನಿಸಿದೆ.

ಕೃತಜ್ಞತೆ:

ಹಂಪೆಯ ಮಹಾಲಿಂಗಸ್ವಾಮಿಯ “ಬಾಲರಾಮನ ಸಾಂಗತ್ಯ”ದ ಹಸ್ತಪ್ರಿ ಹುಡುಕ ಹೊರಟ ನನಗೆ ಕೆಂಚಸೆಟ್ಟಿಸುತರಾಮನ ‘ಸಿರುಮನ ಚರಿತೆ’ಯ ಹಸ್ತಪ್ರತಿ ಸಿಕ್ಕಿತು. ಅದನ್ನು ಪ್ರಕಟಿಸಿದೆ (೧೯೯೧). ಮುಂದುವರಿದ ನನ್ನ ಪ್ರಯತ್ನದ ಫಲವಾಗಿ ಬಾಲರಾಮನ ಸಾಂಗತ್ಯವೂ ಸಿಕ್ಕು,ದ ಈಗ ಪ್ರಕಟವಾಗುತ್ತಲಿದೆ. ಈ ಎರಡೂ ಕೃತಿಗಳನ್ನು ಮೂಲತಃ ಬೆಳಕಿಗೆ ತಂದವರು ಶ್ರೀ ಹುಲ್ಲೂರು ಅವರು. ತಾವು ಪ್ರಕಟಿಸಬೇಕೆಂದು ಇವೆರಡನ್ನೂ ಕಷ್ಟಪಟ್ಟು ಪ್ರತಿ ಮಾಡಿಕೊಂಡಿದ್ದವರು, ಪ್ರತಿ ಮಾಡಿಸಿದ್ದವರು ಡಾ || ವರದರಾಜರಾವ್ ಅವರು. ಇವುಗಳಲ್ಲಿ ೧೯೪೪ರಷ್ಟು ಪೂರ್ವದಲ್ಲಿಯೇ ಬೆಳಕಿಗೆ ಬಂದಿದ್ದ ಬಾಲರಾಮನ ಸಾಂಗತ್ಯ ೬೦ ವರ್ಷಗಳ ಬಳಿಕ ಪರಿಷ್ಕರಣಗೊಂಡು ಪ್ರಕಟವಾಗುತ್ತಲ್ಲಿರುವುದು, ನನ್ನಿಂದ. ಇದೆಲ್ಲ ಯೋಗಾಯೋಗ. ಈ ಇಬ್ಬರೂ ವಿದ್ವಾಂಸರಿಗೆ ಕೃತಜ್ಞ.

ಗ್ರಂಥ ಸಂಪಾದನೆಗೆ ಮೂಲಸಾಮಗ್ರಿ ಹಸ್ತಪ್ರತಿ. ಜಿ.ವರದರಾಜರಾವ್ ಅವರು ಪ್ರತಿಮಾಡಿದ್ದ ಅರ್ಧಪ್ರತಿ, (=ಅ) ಪ್ರತಿಮಾಡಿಸಿದ್ದ ಪೂರ್ಣ ಪ್ರತಿ (=ಬ) – ಹೀಗೆ ಒಂದೂವರೆ (ಕಾಗದ) ನಕಲು ಪ್ರತಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿದ್ದವು. ಇವುಗಳನ್ನು ಬಳಸಿಕೊಳ್ಳಲು ಸಮ್ಮತಿಸಿದವರು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮೈಲಹಳ್ಳಿ ರೇವಣ್ಣ ಅವರು. ಈ ನಕಲು ಪ್ರತಿಗಳು ಕನ್ನಡ ಅಧ್ಯಯನ ಸಂಸ್ಥೆಯಲ್ಲಿವೆಯೆಂದು ಸೂಚಿಸಿದವರು, ಶ್ರೀ ಎಸ್. ಶಿವಣ್ಣನವರು ಮತ್ತು ಇವುಗಳನ್ನು ದೊರಕಿಸಿಕೊಳ್ಳುವಲ್ಲಿ ನೆರವಾದವರು ಶ್ರೀಮತಿ ವೈ.ಸಿ. ಭಾನುಮತಿ ಅವರು. ಇವರೆಲ್ಲರಿಗೂ ನಾನು ಕೃತಜ್ಞ.

ನನ್ನ ಪ್ರಕಾರ ಕುಮಾರರಾಮನನ್ನು ಕುರಿತು ಹುಟ್ಟಿದ ಮುಖ್ಯಕೃತಿಗಳು ಐದು. ಇವುಗಳಲ್ಲಿ ನಂಜುಂಡನದು ಈಗಾಗಲೇ ಪ್ರಕಟವಾಗಿದೆ. ಮಿಕ್ಕ ನಾಲ್ಕನ್ನು ಪ್ರಕಟಿಸುವ ನನ್ನ ದೊಡ್ಡ ಯೋಜನೆಯ ಅಂಗವಾಗಿ ಎರಡು ಕೃತಿಗಳನ್ನು ಈಗಾಗಲೇ ನಾನು ಪ್ರಕಟಿಸಿದ್ದು, ಮೂರನೆಯ ಕೃತಿಯನ್ನು ಸದ್ಯೆ ಪ್ರಕಟಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹಳೆಯ ಕುಮಾರರಾಮನ ಸಾಂಗತ್ಯವೊಂದನ್ನು ಪ್ರಕಟಿಸಿದರೆ ಈ ಯೋಜನೆ ಪೂರ್ಣಗೊಳ್ಳುತ್ತದೆ. ಈ ಮೂರನೆಯ ಕೃತಿಯು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗಲು ಅವಕಾಶಮಾಡಿಕೊಟ್ಟ ಮಾನ್ಯಮಿತ್ರರೂ ಕುಲಪತಿಗಳೂ ಆಗಿರುವ ಡಾ. ಬಿ.ಎ. ವಿವೇಕ ರೈ ಅವರಿಗೆ, ಪ್ರಸಾರಾಂಗದ ನಿರ್ದೇಶಕರೂ ಆತ್ಮೀಯರೂ ಆಗಿರುವ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ವಂದನೆಗಳು. ಡಿ.ಟಿ.ಪಿ. ಕೆಲಸವನ್ನು ಪೂರೈಸಿದ ಧಾರವಾಡ ವಚನ ಗ್ರಾಫಿಕ್ಸ್ ಒಡೆಯರಾದ ಶ್ರೀ ದೇವರಾಜ ನಾಡಿಗ ಅವರಿಗೂ, ಮುಖಪುಟವನ್ನು ವಿನ್ಯಾಸಗೊಳಿಸಿದ ಶ್ರೀ ಕೆ.ಕೆ. ಮಕಾಳಿ ಅವರಿಗೂ ಧನ್ಯವಾದಗಳು.

ಎಂ.ಎಂ.ಕಲಬುರ್ಗಿ

[1] ಬಾಲಕುಮಾರ ರಾಮನ ಸಾಂಗತ್ಯ (ಶರಣಸಾಹಿತ್ಯ ೭-೨).

[2] ಕುಮಾರರಾಮನ ಸಾಂಗತ್ಯಗಳು (ಪು.೮)- ಜಿ.ವರದರಾಜರಾವ್.

[3] ರತ್ನಾಜಿ ಸತ್ತು ದಿಲ್ಲಿ ಸುಲ್ತಾನನ ಮಗಳಾಗಿ ಹುಟ್ಟಿದಳೆಂದೂ ಇಲ್ಲಿ ಅವತಾರ ಕಲ್ಪನೆಯನ್ನು ವಿಸ್ತರಿಸಲಾಗಿದೆ.