[1]ಉರಗನ ವೈರಿಯ ವಾಹನವೇರಿದ | ಮಗನ ಪುತ್ರನ ಮಾವನಾದ |
ಜಗವರಿಯಲು ಪೋಗಿ ದ್ವಾರಪಾಲಕನಾದ | ಮೃಗಧರನೆ ನೀನು ಸಲಹೆನ್ನ || ೧ ||
ಖಗರಾಜ ವೈರಿಯ ಧರಿಸಿದೆ ಕುಕ್ಷಿಗೆ | ನಿಗಮ ಶಾಸ್ತ್ರದಲಿ ಬಲ್ಲಿದನೆ |
ಗಜಶಿರದ ಮುಖದವನೆ ಗಣನಾಥ ನೀ ಎನ್ನ | ಕೃತಿಗೆ ಸಮವಾಗಿ ಪಾಲಿಪುದು || ೨ ||
ಕಾಶಿ ರಾಮೇಶ್ವರಕರ ಈಸು ವೆಗ್ಗಳ[ವಾದ] | ಕೈಲಾಸವೆನಿಸುವ ಹಂಪೆ |
ಕ್ಷೇತ್ರದಿ ನೆಲೆಸಿದೆ ಕರುಣಿಸು ವಿರುಪಾಕ್ಷ | ಸೂಸುವೀ ರಾಮನ ಕೃತಿ[ಗೆ] || ೩ ||
ಶ್ರೀ ಗಿರಿಜೇಶ ಶಂಭೂ ಭಾಗೀರಥೀಶನೆ | [ನಗಜಾಪತಿ] ನಂದೀಶ |
ಮಲ್ಲಿಕಾರ್ಜುನ ಸಲಹು ಮೂಜಗವನು | ಭಾನುಕೋಟಿಗಳ ಪ್ರಕಾಶ || ೪ ||
ನಡೆಸುವೆ ರಾಮನ ಕಥೆಸಾರ ಮುಂದಣ | ನುಡಿಯ ಪಾಲಿಸು ಸರಸ್ವತಿಯೆ |
ಬಡವನ ಕಥೆಯೆಂದು ಜರೆಯದೆ ಬಲ್ಲಂಥ | ಹಿರಿಯರು ಒಲಿದು ಲಾಲಿಪುದು || ೫ ||
ಪ್ರಾಣ [ದಾ]ಸೆಯ ಮಾಡ್ವ ಪರದಾರ ವಂಚಕ | ಕೇಳಬೇಡ್ನಿಮ್ಮ ಕರ್ಣದಲಿ |
ಖೂಳ ಕಾರ್ತಿಕನ ಪೂರ್ಣ ವೈರಕೆ ಜನಿಸಿ | ಹಾಳು ಮಾಡುವ ಕೋಟಿ ಜನ್ಮ || ೬ ||
ಸತ್ಯವುಳ್ಳವನೆಂಬ ಸಹಜ ಕಾಣಲು ನಿಮ್ಮ | ಚಿತ್ತದಲಿ ಒಲಿದು ಕೇಳುವುದು |
ಹೊತ್ತು ಬಂದದ್ದು ಹಾಗೆ ಪ್ರಾನಕೋಸ್ಕರ ಹೊರತು | ಮಿಕ್ಕ ಕಳವಿರಲು ಜರಿದಾಡಿ || ೭ ||
ತಿಳಿದು ಲಾಲಿಸಿ ಬಲ್ಲ ಚರಣ ಚಿತ್ತದಿ ನಿಮ್ಮ | [ಒರೆವೆನು] ಕರ್ಣ [ತಂ]ಪಾಗೆ |
ಪರಧ್ಯಾನದೊಳು ಕೇಳೆ ನರಕ ತಪ್ಪದು ಮುಂದೆ | ವರಾಹ ಜನ್ಮದಲಿ ಜನಿಸುವುದು || ೮ ||
ಓದಿಯೆನ್ನಲು ಗರ್ವ[ವಾ]ಡಲವಗೆ ಕರ್ಣ | ಕೇಳದೆ ಕರ್ಣಶುದ್ಧದಲಿ |
ಹಾಳು ಮಾತುಗಳಾಡಿ ಪರಧ್ಯಾನವಾಗೆ ಗಿಳಿ | ಓದಿ ಮಲವನು ತಿಂದಂತೆ | || ೯ ||
ಚಿತ್ತದೊಳತಿ ಪ್ರೀತಿ ಪುಟ್ಟಲು ಮತ್ಸರದ | ಅಕ್ಷರಗಳನು ನುಡಿಯೆನೀ |
ತುತ್ತಿನ ಮದ ನಿದ್ರೆ ತೂಕಡಿಕೆ ಬರೆ ವಾವೆ ತಪ್ಪೆಂದು ಮನೆಗೆ ಸಾಗುವುದು || ೧೦ ||
ಡಂಬಾಚಾರವ ಮಾಡಿ ಕವಿತೆ ನಡೆಸುವನಲ್ಲ | ಮುಂದವನು ನಡೆದ ಸ್ಥಿತಿಗತಿಯ |
ಬಂದಂತೆಯುಸುರುವೆ ಬಲು ಸುಳ್ಳು ನಡೆಸದೆ | ಕಂಡುಗಕೆ ಜೊಳ್ಳು [ಬೆರೆಸದೆ] || ೧೧ ||
[ಕೌತುಕೆ] ವನುಸುರಲು ಕಾಲನ ಭಯ ಅವಗೆ | ನಿಜವನೊರೆಯಲು ನಿರ್ಜನನು |
ಅದರಿಂದಾಹವ ಬೇಳದ ಹರನೊಲುಮೆ ಹೆಚ್ಚಲು | ಅತಿ ಬಲ್ಲ ಕವಿತೆ ನಾನೊರೆವೆ || ೧೨ ||
ಇನ್ನು ಲಾಲಿಸಿ ಕೇಳಿ ಇಪ್ಪನ್ನರುಗಳು ಬಂದ | [ಮುನ್ನ] ಮಾರ್ಬಲದಂಡ ಸಿರಿಯ |
ಪನ್ನಗಧರ ಬಲ್ಲ ಮುನ್ನ ಜನರಿಗೆ ಅಳವೆ | ಪುಣ್ಯ ಒದಗಲು [ಯಾವನಿಗೆ] || ೧೩ ||
ಮೂರು ಲಕ್ಷದ ಪೌಜು ಹದಿನಾರು ಸಾವಿರ ಘಟೆಯು | ಭೇರಿಗಳು ಭೂಮಿ ಜಜ್ಝರಿಸೆ |
ತೂ [ಗಲಿತಲೆಯೆಂ]ಟು ಕರಿಯು ಕೂರ್ಮನು ನಡುಗಿ | ಆದಿಶೇಷನ ಪೆಡೆ ಕುಸಿಯೆ || ೧೪ ||
ತುರು ಕುಂಜರದಿಂದ ಮರೆಯ ಲಕ್ಷದ ಮೇಲೆ | ಬಿರಿದಿನ ಬಲ ಲಕ್ಷ ವರೆಯು |
[ತ]ಡೆಯಲಾಪವೆ ಲೋಕ ತಾವರೆಯೆಲೆ ಉದಕ | ನಡುಗುವಂದದಿ ನಾಲ್ಕು ಮೂಲೆ || ೧೫ ||
ಇತ್ತ ಚೆನ್ನಿಗ ರಾಮ ಪೃಥ್ವಿಯ ದೊರೆಗ[ಳ] | ನಕ್ಷತ್ರ ನವ ಕಳೆಯಂತೆ |
ಒತ್ತಿನೊಳ್ ಪೌರ್ಣಮಿ ಚಂದ್ರನಂದದಿ ರಾಮ | ಗುತ್ತಿ ಮೂಲೆಗೆ ದಂಡು ನಡೆಯೆ || ೧೬ ||
ಹಳೆಯಬೀಡನು ಬಿಟ್ಟು ನಡೆಯಲು ದಂಡೆತ್ತಿ | ಒಳಗೆ ಇಳಿದು ಯಗಟಿಪುರಕೆ |
ನಳಿನ ಸಖನು ಪೋಗಿ ತಾಯೊಡಲು ಸೇರಲು | ರಾತ್ರಿ ಕಳೆದು ದಂಡು ನಡೆಯೆ || ೧೭ ||
ನಡೆದ ದಂಡಿಗೆ ಭೂಮಿ ಪಿ[ಳಿ]ದು ಕುಂಕುಮವಾಗಿ | ಗಿಡವು ಚೂರೆದ್ದು ಹಾಳಾಗೆ |
ಕಿಡಿಕಿಡಿ ಹಾರುತ್ತ ಹಿಡಿಗಲ್ಲು ನುಗ್ಗೊಡೆದು | ಕೆರೆ ಭಾವಿ ಜಲಬತ್ತಿ ಕ್ಷಣದಿ || ೧೮ ||
ಮೂರು ಪಯಣಕೆ ದಂಡು ತೇರ [ಮಲ್ಲನ] ಊರ | ಮೇಗಣ ಬೊಬ್ಬರಿಗಿಳಿದು |
ಹೋಗಿ ಗುತ್ತಿಯ ಮುತ್ತಿ ಹೊಡೆಯದನಕ ನಮ್ಮ | ತಾಯಿ ತಂದೆಯ ಪುತ್ರರಲ್ಲ || ೧೯ ||
ತುರಗ ವಜೀರರ ಕರೆಸಿ ಕಂಪಿಲನಾತ್ಮಜ | ಅರುಹಿತ ಉರಿವ ಕೋಪದಲಿ |
ಬೆಳಗಿನ ಮುಂಜಾವ ನಾಳಿನ ಒಳಗಾಗಿ | ಹಿಡಿಯೆನಲು ಗುತ್ತಿಯ ಕೋಳಾ || ೨೦ ||
ಭಾವ ಸಂಗಯ್ಯಗೆ ನೇಮಿಸಿ ತುರಗವ | ಹದಿನಾರು ಸಾವಿರದ ಪವುಜ |
ರಾಯ ರಾಮನು ದಂಡನದು ನಡೆಸಲು ಪೋ | ಗಿಳಿದರು ಪೆನಗುಂಡಿ ಬಳಿಗೆ || ೨೧ ||
ವೀರ ಸಂಗಯ್ಯ ಹದಿನಾರು ಸಾವಿರದೊಡನೆ | ಏರಿದ ರಾತ್ರಿ ಪೋಗಲಾಗಿ |
ಓರಂತೆ ಗುತ್ತಿಯ ಭೂಮಿಯೆಲ್ಲವ ಸುಟ್ಟು | ಆರು ಲಕ್ಷದ ಕೋಳ ತರಲು || ೨೨ ||
ಗುತ್ತಿಯ ಸೀಮೆಲ್ಲ ಹತ್ತಲು ಕೋಳಾಹಳ | ಕುಟ್ಟಿಕೊಳ್ಳಲು ಎದೆ ಬಾಯ |
ಹಟ್ಟಿ ತುಂಬಿದ ದನವು ಹಾಳಾಗಿ ಹಣತಿಗೆ | ಇಕ್ಕಲು ಸಗಣಿಲ್ಲ ಎನುತ || ೨೩ ||
ಸಾಗಿರೊ ಇನ್ನೇಕೆ ನೀಗಿದೆವು ಕಾಲ್ದೊಡರ | ಕಾಳು ಬೇಳೆಂಬ ತುರುಮರಿಯ |
ನಾಳಿಂದೊ ನಾ ಕಾಣೆ ಹಾಳಾಗೋದೀ ಗುತ್ತಿ | ನಾಡೆಲ್ಲ ಧೂಳಿಪಟವಾಗಿ || ೨೪ ||
ಒಡೆಯಲು ದೊಡ್ಡ ಗ್ರಾಮಗಳ ಮುಂತಾಗಿ | ಕಡಲುಕ್ಕಿ ಒಡೆದಿರುವಂತೆ |
ಮಡಗುವುದಿನ್ನೇನು ಬುಡಕೊದಗಿ ಬಂದಾಗ ಉರು | ಕೊಂಡೆ ಗ್ರಾಮಕ್ಕೆ ದಂಡ ಬರಲು || ೨೫ ||
ಒಕ್ಕಲು ಪ್ರಜೆಗಳು ಒಳ್ಳೆಯ ಗೌಡರು | ಬತ್ತ ಭಾಗ್ಯಗಳನು ಬಿಟ್ಟು |
ಹತ್ತಲು ಕಡಪೆ ಕಲ್ಲೂರು ರಾಜ್ಯಕೆ ಪೋಗಿ | ಹೊರೆವರು ಕೂಲಿಯ ಮಾಡಿ || ೨೬ ||
ಕೊಂಕಣರು ಕುಂಬಾರ ಪಂಚಮರು ಪಂಚಾಳ | [ಲೊಂಬಾಣೆರು] ಬೇಡ ನಾಯಕರು |
ಕಂಚುಗಾರರು ಕಾಡಗೊಲ್ಲರು ಕುರುಬರು | ಕುಂಚಿಗರು ಕುಲಜಾತಿ ಓಡೆ || ೨೭ ||
ಬದ್ಧ್ಯುಳ್ಳ ವೈಶ್ಯರು ಎದ್ದರು ಮುಂಗಡೆಯ | ಆಗಿ ಪೊಡಿ ಪೋನಿ ಬಾಯಕ |
ಸಿಗ್ಗು ಸೀಡಲು ಉಳಿಸಿ ವಾಜಿರ್ಚಿನಲು ಬಡಿನಾ ಬಡು | ಗದ್ಯಾಣಮುಂಟೇನಾ ಹೆಚ್ಚು || ೨೮ ||
ಹರದರು ಹಳ್ಳಿ ಶಾನಭೋಗರು ಗೂಳ್ಯ | ನಡೆಯಿರೆ ರಂಡೆಯರೆಂದೆನುತ |
[ಹ]ಡೆಯಬೇಕೆಂದರೆ ಹನ್ನೆರಡು ಕೂಸನೆ ಹಡೆದು | ಹೊರುವ ಪ್ರಾಪ್ತಿಯು ಬಂತು ಎನಗೆ || ೨೯ ||
ನಾಡ [ವೇ] ಸಿಯರೆಲ್ಲ ಕೇಳಿ ಸುದ್ದಿಯ ಹಾಸ್ಯ | ವಾಡುತ್ತ ತಾವು ವಿಟರೊಡನೆ
ಯಾವತ್ತ ಈ ಗುತ್ತಿ ನಾಡ ದೃಷ್ಟಿಸಿ ನೋಡಿ | ಹೋಗಿ ಸೇರುವ [ನಮ್ಮ] ಮನೆಯ || ೩೦ ||
ಸಾಕು ಹೇಳೆಲೆ ರಂಡೆ ಹೋಕೆ ನಡೆಸುವ ಮಿಂಡ | ಭೂಪ ರಾಮನು [ಒ]ದಗಿ ಬಂದ |
ಲೋಕ ತಲ್ಲಣಿಸೆ ನಡುಗಿಸಿ ಗುತ್ತಿಯ ರಾಮ | ಹಾಕುವ ಕಾಣೆ ಕತ್ತಿಯನು || ೩೧ ||
ಕೆಟ್ಟೆ ಬೆಂದೆನು ಎಂದು ಕಟ್ಟಿದರು ಗೂಳ್ಯಯನ | ಮಟ್ಟೆ ಹೊರುವರು ಯಾರು ನಮಗೆ |
ಗಟ್ಟಿಗಿ ಇರುವಾಗ ಹತ್ತೆಂಟು ಹಗಲಿರುಳು | ಸುತ್ತಿ ಸುಳಿವರು ಯಾರು ಎಲ್ಲಿ || ೩೨ ||
ನಾನಾ ಜಾತಿಯ ಗೂಳ್ಯ ಕೂಡಿ ಮಾತಾಡುವ | ಏನು ಹೇಳಲಿ ಎಮ್ಮ ಬದುಕ |
ಜೋಳ ಗೋದಿಯು ಕಡಲೆ ಮೂರು ಹಗೆಯ ಬಿಟ್ಟು | ರಾಗಿ ನವಣೆಯ ಸಾವೆಲ್ಲ || ೩೩ ||
ಬಿಡು ನಿನ್ನ ರಾಗಿಯ ಸಿರಿ ಸುಡಲಿ ಅಕ್ಕಯ್ಯ | ತಾ ಪಡೆದ ಒಡವೆಯ ಕೇಳೆ |
ಪಡಿ ಮೂರು ಹಿಡಿವಂಥ ಹಳೆಯ ನಾಣ್ಯವ ಬಿಟ್ಟೆ | ಮಡಕೆ ಸಾಲೊಳು [ಇ]ಟ್ಟು ಬಂದೆ || ೩೪ ||
ಮತ್ತೊಬ್ಬಳೆಂದಳು ಅಕ್ಕಯ್ಯ ನೀ ಕೇಳೆ | ಚಿತ್ತದೊಲ್ಲಭ ಕಾಣದಂತೆ |
ಅಕ್ಕಿ ಬೇಳೆಯ ಮಾರಿ ಮೂರು ಮಾನದ ಸೇರು | ಇಕ್ಕೇರಿ ನಾಣ್ಯವ ಬಿಟ್ಟೆ || ೩೫ ||
ಜೀನತನದೊಳು ದುಡ್ಡಿಗೆ ಪಾಲು ಬೆಣ್ಣೆಯ ಮಾರಿ | ಬಾಲರಿಗೆ ಬಿಡದೆ ಒಂದಿವಸ |
ಬರುವ [ಮಗ]ನು ಉಣಲು ಮೂರು ದಡೆಯ ಚಿನ್ನ | ವಾಡೆಯೊಳಿಟ್ಟು ನಾ ಬಂದೆ || ೩೬ ||
ಕೋಣ ಗೆಯ್ಯಲು ಗೂಳೆ ಹೀಗೆ ಹಲುಬುತ ಮುಂದೆ | ಓಡಲು ಗಿಡು ಮೆಳೆ ಬಿದ್ದು |
ಏರಿದ ಬದಲಾಗಿ ವೀರಸಂಗಮ ದವುಡ | ಹೋಗಿ ಸುಲಿಯಲು ಲಕ್ಷ ಗೂಳೆ || ೩೮ ||
ಕರೆಸಿದ ಕಾಟಯ್ಯನ ರಾಯ ರಾಮನು ದಂಡು | ಸಾಗಲು ಗುತ್ತಿಗೆ ಹೋಗಿ |
ಮೂರು ಯೋಜನೆ ಹೋಗು ಕಾಟ ಎಂಬತ್ತು ಸಾವಿರದೊಳು | ಜೇರಿಸಿ ಗುತ್ತಿಯ ಮುತ್ತಿ || ೩೯ ||
ಮುತ್ತಬಹುದು ಭೂಪ[ಪ]ತ್ತರ ಬರೆವೆವು ಒಮ್ಮೆ | ಶಕ್ತಿದೋರುವನೊ ಬರುವನೊ |
ಇತ್ತ ಕಾಟನು ಮಂತ್ರಿಯು ರಾಯ ಮಾನ್ಯರು ಪೇಳೆ | ಸಿಟ್ಟಿನೊಳ್ ರಾಮ ಬಿಡಿಸುವ || ೪೦ ||
ಜಾಣ ಬಲ್ಲನು ವೀಣೆಯ ಸ್ವರಗೀತ | [ಕೋ]ಣ ಬಲ್ಲುದೆ ಕಾಯಿ ರುಚಿಯ |
ಮಾಣಿಕ್ಯ ಮರ್ಕಟನು ಭೇದ ಬಲ್ಲುದೆ ನಿಮ್ಮ | ಜಾಣತನಗಳನೇನೆಂಬೆ || ೪೧ ||
ಮದ ಮೆಚ್ಚಿದವ ಮುನ್ನ ಮಣಿವನೆ ನೀವೇಕೆ | ಹೊಡೆಯಲು ನಾಲ್ಕು ಕೊರಡಿಯ |
ಹದಗುವುದು ಕಲಿಯುಗದ ನಿಜದ ಮಾತಿನ ಮಹಿಮೆ | ಒದಗುವುದೆ ಲೇಸು ಮೊದಲಾಗಿ || ೪೨ ||
ಇಂದೀಗ ಬಲ್ಲಾಳಗೆ ಹೀಗೆಂದು ಎಲ್ಲರು ಪೇಳೆ | ಕುಂದುಮಾಡಿದ ಸಭೆಯೊಳಗೆ |
ದಂಡೆಲ್ಲ ಲಯವಾಗೆ ದೈನ್ಯನೀತಿಗೆ ಬಂದು | ಬೇಡಿಕೊಂಡಂಥ ಬಗೆಯರಿಯಾ || ೪೩ ||
ಬಡವನಾದರೆ ಬಂದು ಇವರೊಡನೆ ಕಾಣಿಸಿಕೊಂಬ | ಹೊಡೆವ ತ್ರಾಣವು ತನಗಿರಲು |
ತಡೆಯಬಲ್ಲರೆ ತಮ್ಮ ರಾಜ್ಯದ ಭೂಮಿಯ | ನುಳುಹಿ ಕೊಡೆವೆನು ಹೊನ್ನಯೆಂ [ದ] || ೪೪ ||
ಹೊಡೆಯಲು ನವಭೇರಿ ಗುಡುಗಿನಾರ್ಭಟದೊಳು | ನಡುಗುವಂದದಿ ಗುತ್ತಿ ಮಾರ್ಗ |
ಕಡಿಕಡಿ ಎನುತಲಿ ಕಾಕ್ಹೊಡೆದು ತೊಡೆ ಬಡಿದು | ಅಡರಲು ಕೋಳಾಹಳ ಮಾಡಿ || ೪೬ ||
ಬತ್ತಿ ಬಾಣವು ಮೂರು ಲಕ್ಷಕ್ಕೆ ಸರಿಮಾಡಿ | ಕೋವಿಯು [ತೋಟಿ]ಗೆ ಸುರಿಯೆ |
ಎತ್ತಗೊಡದೆ ತಲೆಯ ಸವಲಕ್ಷ ಕೋವಿಗಳಂಬು | ಹುಚ್ಚು ಮಳೆಯಂ[ತೆ] ಸುರಿಸಲು || ೪೬ ||
ಅಲ್ಲಲ್ಲಿ ಕಲ್ಲಿನ ಅಟ್ಟ ಹಿಡಿದು ಕಾಟ | ಭಲ್ಲೆ ಕತ್ತಿಗಳನು ಹಿಡಿದು |
ಕುಲಲಿಲಿ ಕೋ ಎಂದು ಕೋಟಿ ಸಿಡಿಲಿನ ಭರದಿ | ಹೊಡೆಯಲು [ಅ] ವ ಕೋಟಿ ಹಲ್ಲೆ || ೪೭ ||
ಸೂರೆ ಸುಲಿಗೆಯ ಮಾಡಿ ಕೋಟೆ ಪೇಟೆಯ ಕೂಡ | ಬಲಿದು ಏರುವನು ದುರ್ಗವನು |
ಕೋಟೆಯೊಳಗಣ ಆರ್ಭಟವ ಶಿವ ಬಲ್ಲನು | ಪ್ರಜೆ ತಳಮಳ [ದಿ] ತಲ್ಲಣಿಸೆ || ೪೮ ||
ಹೊಡೆಯಲು ಪಿರಂಗಿ ಪುಡಿಕೋವಿ ಬಾಣಗಳು | ಕಡೆ ಮೊದಲಿಲ್ಲ ಅಂಬುಗಳು |
ಕೆಡಬೇಡಿ ಈ ಕಲ್ಲ ಬುಡಮೇಲು ಮಾಡುವ ರಾಮ | ಬರುವನೆನ್ನುತ ಕಹಳೆ ಸಾರೆ || ೫೦ ||
ಭೂಮಿ ಹಿಡಿಯದ ತೆರದಿ ದಂಡು ಬಂದಿಳಿಯಲು | ಕಲಿಯುಗದ ಪಾರ್ಥ ರಣರಾಮ |
ಎಡಬಲದಿ ಬರುವಂಥ ಇಬ್ಬರು ರಾಯರ ದಂಡು | ಇಳಿಯಲು ಸುತ್ತ ಗೌಡರು || ೫೧ ||
ಕಡೆಮೊದಲಿಲ್ಲದೆ ಕಡಲುಕ್ಕು ಬರುವಂತೆ | ಹೊಡೆಯಲು ಡೇರೆ ಅಲ್ಲಲ್ಲಿ |
ಪೊಡವಿಗುನ್ನುತವಾದ ರಾಯ ರಾಮನ ಡೇರೆ | ಹೊಡೆಯಲು ಬಯಲಹಳ್ಳಿ ಕೊನೆಗೆ || ೫೨ ||
ಹಸಿರು ಪಟ್ಟೆಯ ಹಳದಿ ದಸರಿ ತೋಪಿನ [ಕ]ಪ್ಪು | ಎಸೆವ ನೀಲವು ಜ್ಯೋತಿ ಬಿಳಿದು |
ಶಕುನಿ ವರ್ಣದ ಡೇರ್ಯ ರಚಿಸಿ ಮೇಲಕೆ ಹೊನ್ನ | ಕಲಶ ಒಪ್ಪಿದವು ಮುನ್ನೂರು || ೫೩ ||
ಎಡ ಬಲಕೆ ಎಪ್ಪತ್ತು ದೊರೆಗಳ ಡೇರ್ಯವು | ಹೊಳೆಯಲು ಸೂರ್ಯ ಪ್ರಭೆಯಂತೆ |
ಹೊಡೆಯಲು ನವಗಾಜ ಎರಡು ಸಾಲಿನ ಮೇಲೆ | ಸೊಗಸ ವಿಸ್ತರ ನೋಡುವರಳವಲ್ಲ || ೫೪ ||
ಗುತ್ತಿಯನಾಳುವ ಕಸ್ತೂರಿ ಚಾಮಯ್ಯ | ಹತ್ತಿ ನೋಡಿದನು ದುರ್ಗವನು |
ದೃಷ್ಟಿ ತಳ ಕೆಳಗಾಗಿ ಸುತ್ತ ದಂಡನು ನೋಡಿ | ಕೊಟ್ಟ ಶಿವ ಎನಗೆ ಸ್ವರ್ಗವನು || ೫೫ ||
ದಂಡಲ್ಲ ಇದು ತಮಗೆ ಬಂತು ಪ್ರಳಯ ಭೂ | ಮಂಡಲ ಎಂತು ತಾಳುವುದೊ |
ಮುಂದೆನ್ನ ಛಲಪಂಥ ಹೋಗಲೆಂದು ದುರ್ಗವನಿಳಿದು | ಸಂಧಾನ ಮಾಡುವುದೆ ಲೇಸೆಂದ || ೫೬ ||
ಬಾಣಾಸುರನ ಮೇಲೆ ನವಕ್ಷೋಣಿ ದಂಡನು | ಕೂಡಿಹೋದನೆಂಬುದು ಮಾಧವನು |
ವೇದ ಶಾಸ್ತ್ರದ ಮಾತ ಕಣ್ಣಾರೆ ಕಂಡೆನು ಇಂದು | ತೀರಿತು ಎಮ್ಮಯ ಲಿಖಿತ || ೫೭ ||
ಗುಂಡಿಡುವುದೇತಕೆ ಪಡಿ ತೀರಿ ಬಂದಾಗ | ತಡೆವರಿನ್ನಾರು ಈ ದಂಡ |
ಒ[ಡನೆ] ಜನಕೊಂದು ಕಲ್ಲಿಡಲು ಊರೆಲ್ಲ | ಮುಳುಗದೆ ತೆನೆಗಾಣದಂತೆ || ೫೮ ||
ಎಲ್ಲಿ ನೋಡಲು ದಂಡು ಇಲ್ಲದ ನೆಲೆಗಾಣೆ | ಕೊಲ್ಲಲಳವೆ ಈ ದಂಡು |
ಎಲ್ಲರು ಅಡಿಗೆಯ ಒಲೆಗುಂಡಿನ ಕಲ್ಲಿಗೆ ಈ ದುರ್ಗ | ಸಲ್ಲಯ ಮಾಡದೆ ಪ್ರಾಣ ಮಿಗದು || ೫೯ ||
ರಾಯ ಚಾಮಯ್ಯನು ಕರೆಸಿದಾಗಲೆ ಮಂತ್ರಿ | ಕರ ಮುಗಿ [ದ] ಪಾದಕ್ಕೆ ಎರಗಿ |
ಒದಗಿತು ಕಾಲೆಮಗೆ ಚದುರ ಮಂತ್ರಿಯೆ ಕೇಳು | ಇದಕೇನು ಹದ ಮುಂದೆ ಪೇಳೊ || ೬೦ ||
ರಾಯನೆ ನಾನೊಂದು ಪೇಳುವೆನು ಪಾದಕ್ಕೆ | ಹೇಗೆ ತೊರುವುದು ನಾ ಕಾಣೆ |
ಕೂಗಿ ಮಾರಿಯ ಕರೆದ ಕೊಣಬಗೊಂಡ[ನಂತೆ] | ನಾದರೆ ಕಾರ್ಯ ಕೆಡುತಿಹುದು || ೬೧ ||
ಅದಕೆ ಅಲ್ಲವೆ ಮಂತ್ರಿ ಹೆದರ್ಯಾತಕೆ ಪೇಳೊ | ಕಡಿವ ಛಲವನೆ ಕಡೆಗೆ ಮಡಗು |
ಉಳುಹಿಕೊಳ್ಳಲು ಊರ ಹೇಳು ಸಾಧನೆ ಮಾಡಿ | ಮಿಗುಸಯ್ಯ ಎನ್ನ ಮಾದವನು || ೬೨ ||
ಬಲ್ಲಾಳನೆಂದರೆ ಬಲ್ಲಿದ ಜಗದೊಳಗೆ | ಎಲ್ಲ ದೊರೆಗಳಿಗೆ ನವ ಘಂಟೆಯು |
ನೆಲ್ಲಿಯ ಕಾಯಂತೆ ಚೆಲ್ಲಿ ಹೋದವು ಬುರುಡೆ | ಉರುಳಿತ್ತು ರಣಮಯವು ಭೂಪ || ೬೩ ||
ರಾಯ ರಾಜೇಂದ್ರನೆ ಲಾಲಿಸು ಬಲ್ಲಾಳ | ಭೂಮಿಗೆ [ಗೆ]ಲ್ಲಾಗಿ ಇರ್ದ |
ಕಾಲ ಗಳಿಗೆಯಲಿ ಕೆಟ್ಟ ಮೂಳ ಮಂತ್ರಿಯ ಮಾತ | ಕೇ [ಳನ್ಯ] ಫಲಕೆ [ಈಡಾದ] || ೬೪ ||
ಹಿಂದಲ ಛಲಕಾಗೆ ತಿಂಬುವನು ಅಂತೆ | ಕೊಂದು ಕೊಲ್ಲದೆ ನಮ್ಮ ಬಲವ |
ಒಂದು ಸಿಟ್ಟು ಇದರೊಳು ಬಂದ ಒಳಗೆ ಕಂಡು | ಕುಂದು ಮಾಡದೆ ಕಂಡು ಬಾಳ್ವೆ || ೬೫ ||
ಲೋಕರೂಢನಾಗೆ ಹಾಕಬಹುದು ಕತ್ತಿ | ಭೂತನಾಗಿ ಹುಟ್ಟಿದ ಜಗಕೆ |
ಈ ಕಾಯ ಸ್ಥಿರವಲ್ಲ ಇವನು [ಇ] ರುವ ತನಕ | ನೂಕಬೇಕಯ್ಯ ರೊಕ್ಕದಲಿ || ೬೬ ||
ರಾಯ ರಾಯರು ಬಂದು ಕಾದಲೋಲೈಸುವರು | ಕಾಲಗತಿಗಳು ದೈವಕೃಪೆಯು |
ಆಳರೆ ಇವನಂತನೇಕರು ಕುಮ್ಮಟದಿ ಇವನ | ಏಳಿಗೆ ಅವರಿಗೆ ಇತ್ತೆ || ೬೭ ||
ಮುಂಗಯ್ಯ ಹುಣ್ಣಿಗೆ ಕನ್ನಡಿಯ ಬೆಳಗ್ಯಾಕೆ | ನಮಗೆ ಬಲಗಾರ ಮುರಿ[ವ] |
ಸುಮ್ಮನೆ ಪವುದಿಯ ಕೊಟ್ಟು ನೂಕಲಿ ಬೇಕು | ನಿಮ್ಮ ಪಾದಕೆ ಹೇಗೊ ಕಾಣೆ || ೬೮ ||
ಜಾಣಮಂತ್ರಿಯ ಮಾತ ಲಾಲಿಸಿ ರಾಜೇಂದ್ರ | ಪ್ರವೀಣನಹುದು ತಂತ್ರದೊಳಗೆ |
ನೀ ಕಂಡ ಬುದ್ಧಿಯು ಎನಗೆ ಸನ್ಮತ ಮಂತ್ರಿ | ಈ ಕ್ಷಣದೊಳು ಸಲ್ಲಾ ಮಾಡು || ೬೯ ||
ಅನಿತರೊಳ್ ಪಂಕಜಸಖನು ಅರುಣಾಬ್ದಿಯ | ಕಡಲ ಸ್ಥಾನಕೆ ಬಿಜಯಗೆಯ್ಯೆ |
ತಿಮಿರ ಮಿಗಲು ಅಂಗ ಅರೆ [ಯಾ]ದವನು ಬಂದು | ಪ್ರಭೆಸೂಸೆ ಪೂರ್ವಭಾಗದಲಿ || ೭೦ ||
ಗಗನಕೆ ನವಕೋಟಿ ನಯನವೊಪ್ಪುವ ತೆರದಿ | ಕಿರಣ ಸೂಸುತ ಪುಷ್ಟಮಾಲೆ |
ಹಿರಿದು ಕಿರಿದಿನ ಮೇಲೆ ಎಡಬಿಡದೆ [ಹೊಳೆವುತ] | ಸೊಗಸು ತಾರಕಿ ತೋರುತಿರಲು || ೭೧ ||
ಅಳಿದವನು ಅಹಿಲೋಕ ಬೆಳಗಿಸಿ ಹೇಮಾದ್ರಿ | ಪ್ರದಕ್ಷಿಣೆ ಮುಖವಾಗಿ ಪೂರ್ವ |
ನಡೆಯಲು ನಯನೊಂದು ಪಡೆದ ಶುಕ್ರನು ಮೂಡೆ | ಕಲಹ ಕುಕ್ಕುಟ ತೋರುತಿರಲು || ೭೨ ||
ದಿನಕರನ ಪ್ರಭೆ ಮುನ್ನ ಗಗನಕ್ಕೆ ಎಸೆಯಲು | ನಲಿಯಲು ಖಗಮೃಗ ಸ್ವರವು |
ಜಗದೊಡೆಯನು ಏರಿ ಮುಖದೋರೆ ಕಮಲ[ಗಳು] | ನಗುವಂತೆ ಎಸಳು ಬಿಚ್ಚಿಹವು || ೭೩ ||
ಉದಯ ಕಾಲದೊಳೆದ್ದು ಕದನಕೋಳಾದಳ ರಾಮ | ಹದುಳದೊಳಗೆ ಸ್ನಾನಮಾಡಿ |
ಸದರ ಡೇರ್ಯ ಬಂದು ಮೂರ್ತಮಾಡಲು ಮಂತ್ರಿ | ಪೃಥ್ವಿದೊರೆಗಳು ಬಂದರಾಗ || ೭೪ ||
ಚರರು ತಾ ಛತ್ರ ಚಾಮರ ಗಿಂಡಿ ಕಾಳಂಜಿ | ಪಿಡಿದು ವಾಲೈಸುವರ್ಕಡೆಯಲಿ |
ಮಿಗಿಲೆನಿಸಿ ದೇವೇಂದ್ರ ಪದವಿಭೋಗದಿ ರಾಮ | ಅರುಹಿದ ಎಲ್ಲ ದೊರೆಗಳಿಗೆ || ೭೫ ||
ಹೊಡೆಯಲು ಭೇರಿಯ ದಳವೆಲ್ಲ ಶೃಂಗರಿಸೆ | ಕುಣಿವುತ ತೇಜಿ ಕಾಲಿಂದಿ |
ಅಣ್ಣಾಜಿ ಕಾಟಣ್ಣ ದೊಣ್ಣೆ ಮುದ್ದನು ತಮ್ಮ | ಬಲ್ಮೆಯುಳ್ಳವನು ಸಂಗಯ್ಯ || ೭೬ ||
ಹಲ್ಲೆ ಗುತ್ತಿಯಲ್ಲಿ ಹಾರಿಸುವೆ ಕಲ್ಲೆಂದು | ಎಲ್ಲ ಬಲದೊಳಗೆ ಸಾರಿಸಲು |
ಹೊಡೆಯಲು ಗಜಭೇರಿ ದಳವೆಲ್ಲ ಶೃಂಗರಿಸಿ | ಕುಣಿಯುತ ತೇಜಿಯಿದಿರಿನಲಿ || ೭೭ ||
ಬರಿವ ಸಡಗರ ಕಂಡು ಎದೆಯೊಡೆದು ಚಾಮಯ್ಯ | ಕರೆಸಿದ ಒಡನೆ ಮಂತ್ರಯನು |
ಬಂದ ಭರದೊಳು ಪೇಟೆ ಹೋಯಿತು ನಿನ್ನೆ | ಬಂದು ಏರಿದರು ಲೆಗ್ಗೆಯನು || ೭೮ ||
ಮಂದಬುದ್ಧಿಯ ಬಿಟ್ಟು ಶೀಘ್ರದಿ ಹೋಗಯ್ಯ | ಹಲ್ಲಾ ಮಾಡಲು ಮಾಡಲೇನು |
ಕಟ್ಟೆಲೊ ಉಡುಗೊರೆ ಪಟ್ಟೆ ಪೀತಾಂಬರ | ಮುತ್ತು ಮಾಣಿಕ ನವರತ್ನ || ೭೯ ||
ಹೆಚ್ಚಿನ ದ್ವೀಪಾಂತ್ರ ಉತ್ತತ್ತಿ ದ್ರಾಕ್ಷಿಯ | ಕುಂಕುಮ ಕಸ್ತೂರಿ ದ್ರವ್ಯ |
ರಾಯ ರಾಯರಿಗೆಲ್ಲ ಬೇರೆ ಉಡುಗೊರೆ ಕಟ್ಟಿ | ಸಂಬಂಧಿಕರು ಮನ್ನೆಯರ್ಗೆ || ೮೦ ||
ಸಾಗಿಸಿ ನೂರಾರು ಪರಿಚಾರರೊಳು ಮಂತ್ರಿ | ಸಾಗಿದ ಪಲ್ಲಕ್ಕಿಯೊಳಗೆ |
ನಿಲ್ಲಿ ಹಲ್ಲೆಯನೆಂದು ಅಲ್ಲಿ ಬೀಸುತ ಕರವ | ಸಲ್ಲ ಮುರಿಯಲು ಮಾಡಬಹುದು || ೮೧ ||
ನಿಲ್ಲಬಹುದು ನಿಮಿಷ ರಣವಿಜಯ[ನೊ]ಳ್ಮಾತಾಡಿ | ಹೋಹ ತನಕ ಗಳಿಗೆ ನಿಲ್ಲಿ |
ರಂಗರಸನು ಬಂದು ದಂಡ ಪೋಗಲು ಕಾಟ | ಮಂದಿಯ ಕೈಜಗಳ ನಿಲಿಸಿ || ೮೨ ||
ಬಂದಾಗ ಪ್ರಧಾನಿ ಭುವನದ ದೊರೆಗಳ | ಹದನವರಿತು ಕಟ್ಟಿ [ತಂದ] |
ಉಡುಗೊರೆ ಉತ್ಸವ ಒಡನೆ ಎಲ್ಲರು ಮಾಡಿ | ನಡೆ ನುಡಿವ ಮಂತ್ರಿ ಮನ್ನೆಯರ || ೮೩ ||
ಎಲ್ಲ ಹೊಂದಿತು ನಿಲ್ಲಿ ಪರಬಲಾಂತಕನಿರುವ | ಸದರಿಗೆ ಮಂತ್ರಿ ನಡೆತರಲು |
ರತ್ನಪೀಠದ ಮೇಲೆ ಒಪ್ಪಿರುವ ರಾಮನ ಕಂಡು | ಇಟ್ಟು ಕಾಣಿಕೆಯ ಕೈಮುಗಿದು || ೮೪ ||
ಒಪ್ಪಿಕೋ ಭೂಪಾಲ ತಪ್ಪು ನೋಡದೆ ಎಮ್ಮ | ರಕ್ಷಣೆ ಮಾಡೆನುತ ಕೊಂಡಾಡಿ |
ರಾಯ ರಾಯರಿಗೆ ರಣವಿಜಯ ಕಲಿಪಾರ್ಥ | ಭೂಮಿಗೆ ದೊಡ್ಡವರ ಗಂಡ || ೮೫ ||
ಸಾಗರ ಗುಣರನ್ನ ಚಂದ್ರಕಾಂತಿಯ ರೂಪ | ಪಾಲಿಸಬಹುದು ಭೂಕಾಂತ |
ಭೂಪನೆ ವಂಶಾಬ್ಧಿ ಜ್ಯೋತಿ ತಿಲಕರತ್ನ | ಈ ಕಲಿಗೆ ಭೀಮ ಪ್ರಚಂಡ || ೮೬ ||
ಅನೇಕ ಕಾಲದಿ ನಿಂದ ಪವುದಿ ರೊಕ್ಕವ ಕೊಡುವೆ | ಪ್ರೀತಿಯಿಂದಲಿ ನಮ್ಮ ಸಲಹು |
ಬಂದೆಯಾತಕೆ ಮಂತ್ರಿ ಅಂಬಲಿಗೆ ತೆಳುವಾಗಿ | [ಹಿಂ]ದಣ ಪಂಥವೇನಾಯ್ತು || ೮೭ ||
ಒಂದೋಲೆಯಲ್ಲದೆ ಹನ್ನೊಂದು ಓಲೆಯ ಬರೆಯೆ | ಕುಂಡಿ ಬುಡಕೆ ಹಾಕಿ ಗರ್ವ |
ಹೇಳಬಹುದು ಭೂಪ ಬಾಲರ ಅಪರಾಧ | ತಾಯಿ ನೋಡಲು ಹುರುಡೇನು || ೮೮ ||
ಬಾಯ ಮೇಲ್ಹೊಡೆದೊಮ್ಮೆ ಬುದ್ಧಿ ತೋರಿದ ಬಳಿಕ | ಮೀ [ರೆವು] ನಿಮ್ಮಾಜ್ಞೆಯನು |
ಶಕ್ತಿಯೊಳು ಶರಭೇಂದ್ರ ಒಪ್ಪಿಕೊಳ್ಳಲುಬಹುದು | ಮಿಕ್ಕಲು ಉಳಿವಿಲ್ಲ ಮುಂದೆ || ೮೯ ||
ಭೇರಿಯ ನಾದಕ್ಕೆ ಗಾಲುಗೆಡುವರೆ ಮಂತ್ರಿ | ಮಾಡಿಲ್ಲ ಜಗಳ ಒಂದೆರಡು |
ಬೇಡಯ್ಯ ಕಪ್ಪವು ಚೆಂಡುಗಾರನ ತೆರದಿ | ಮಾಡಿದ ಮೇಲೆ ರೊಕ್ಕಿಡುವಂತೆ || ೯೦ ||
[ಕಡು ಬಡವ]ನಾಗೆ ಸತಿಯು ಹೆಗ್ಗಡತಿ ಶಬರ | ಬಡವನಾಗಲು ಮೊಲ ಕು[ಕ್ಕ] |
ಬಡವ ಕಂಪಿಲರಾಯನೊಡನೆ ಸೆಣಸಿದ ಗರ್ವ | ಭುಜಬಲವು ತೊರೆಯೆಂದ ರಾಮ || ೯೧ ||
[ಹೋಗಯ್ಯ] ಎಲೆ ಮಂತ್ರಿ ಹೇಳಿಕೊಳ್ಳಲಿ ಬೇಡ | ಕೀಳುವ ಧೈರ್ಯುಂಟು ಕಲ್ಲ |
ನಾಳಿನ ಒಳಗಾಗಿ ಹೊಳ್ಳದಿರವು ದುರ್ಗ | ಚಾಳು ರಾಮನೆ ಹೋಗು ಎನ್ನೊ || ೯೨ ||
[ರಾಯ]ನವರು ರುದ್ರರಾಯರೆಲ್ಲರು ಕಂಡು | ಕಾಯಬೇಕೆಂದು ಕರಮುಗಿದು |
ತ್ರಾಹಿಯೆನ್ನಲು ಭೂಪ ನೂರೆಂಟು ತಪ್ಪಿರಲು | ಪಾಲಿಸಬಹುದು ಭೇರುಂಡ || ೯೩ ||
ಒಪ್ಪಬಹುದು ಸ್ವಾಮಿ ಲಕ್ಷ ತಪ್ಪುಗಳಿರಲು | ಕುಕ್ಷಿಯೊಳಗೆ ಕ್ಷೀರವೆರೆದು |
ಮತ್ತೆ ಕಾಟನು ಮಂತ್ರಿ ಸರ್ವಮಾನ್ಯರು ಪೇಳೆ | ಒಪ್ಪಿದ ರಾಮ ಪ್ರೀತಿಯಲಿ || ೯೪ ||
ಉಡುಗೊರೆ ಉತ್ಸಾಹವ ಒಡನೆ ನೋಡುತ ರಾಮ | ದೃಢದಿ ಮೆಚ್ಚಿದ ಮಂತ್ರಿಯನು |
ಸಲುವುದು ರಂಗರಸ ಪ್ರಧಾನಿ ಪಟ್ಟವು ನಿನಗೆ | ಹೆಣಗಿದೆ ಎನ್ನೊಡನೆ ದಿಟ್ಟ || ೯೫ ||
ಮಂತ್ರಿ ರಂಗರಸನ ಮನ್ನಿಸಿ ರಾಮನು | ಇಮ್ಮಿಗಿಲಾದ ಉಡುಗೊರೆಯ ಕೊಡಿಸಿ |
ಹಳೆಯಬೀಡಿನ ಮಂತ್ರಿ ಯಲ್ಲರಸಗಿಂ ಜಾಣ | ಹದನರಿತು ಕಾರ್ಯ ತಿದ್ದಿದನು || ೯೬ ||
ಹೋಗಯ್ಯ ಎಲೆ ಮಂತ್ರಿ ಕಪ್ಪ ಕಾಣಿಕೆ ಹೊನ್ನ | ವೆಚ್ಚ ಮಂದಿಯ ಕೊಟ್ಟು ಬೇಗ |
ಹೊತ್ತುಂಡೆ ಸರಿಮಾಡು ತಪ್ಪಲು ಬೆಳಗಾಗೆ | ಮುತ್ತುವೆ ಮನ್ನಣೆಯನ ಕೇಳೊ || ೯೭ ||
ಮುತ್ತಿಗೆಯನು ತೆಗೆಸಿ ಹೊಕ್ಕನು ರಂಗರಸು | ಪಟ್ಟಣಕೆ ಧೈರ್ಯವ ಕೊಟ್ಟು
ಆದ ವೃತ್ತಾಂತವ ಚಾಮಯ್ಯ ರಾಯಗೆ ಪೇಳಿ | ಮತ್ತವರು ಸುಖದೊಳಿರಲಿತ್ತ || ೯೮ ||
ಗುತ್ತಿಯ ಕಾರ್ಯವು ಸತ್ತು ಹೋಯಿತೆಂದು | ಪೃಥ್ವಿಪಾಲಕ ರಾಮನಿರಲು |
ಚಿತ್ತದೊಳಾಲಿಸಿ ಪರಚಿತ್ತವಾಗದೆ ಎಲ್ಲ | ಮತ್ತೊಂದು ಕಥೆ ಕಾರ್ಯ ಬಂತು || ೯೯ ||
ಲಾಲಿಸಿ ಬಲ್ಲಂಥ ಜ್ಞಾನವುಳ್ಳವರೆಲ್ಲ | ಆಡದೆ ಅಡ್ಡ ವಾಕ್ಯವನು |
ರೂಢಿಗುನ್ನತವಾದ ಸುರಿತಾಳನ ಬಲ ಭುಜದ | ವಜೀರಗಾದಂಥ ಪಡಿಪಾಟ || ೧೦೦ ||
ಗುತ್ತಿಯ ಚಾಮಯ್ಯ ಕಪ್ಪ ಉಡುಗೊರೆ ಹೇರಿ | ಹತ್ತೆಂಟು ಸಾವಿರ ಬಲದಿ |
ಹೊಕ್ಕನು ತಾ ಬಂದು ರಾಯ ರಾಮನ ಕಂಡ | ಒಪ್ಪಿತು ಭೆಟ್ಟಿ ಇರ್ವರಲಿ[2] || ೧೦೧ ||
[1] + ಶ್ರೀ ಗುತ್ತಿದುರ್ಗ ಮುತ್ತಿದ್ದು, ಶ್ರೀ ಶಾರದಾಂಬಾಯ ನಮಃ, ಶ್ರೀ ಪದನು | (ಮೂ)
[2] KB 812ರಲ್ಲಿ “೯೩ ಮತ್ತು ೯೪ನೆಯ ಪುಟಗಳು ಲೋಪವಾಗಿವೆ” ಎಂದು ಬರೆಯಲಾಗಿದೆ. ಕಳೆದು ಹೊದ ಪುಟಗಳಲ್ಲಿ ಈ ಸಂಧಿಯ ಮುಕ್ತಾಯ ಪ್ರಶಸ್ತಿ ವಾಕ್ಯ, ಮುಂದಿನ ಸಂಧಿಯ ಪ್ರಾರ್ಥನಾ ಪದ್ಯ ಇತ್ಯಾದಿ ಇದ್ದಿರಬಹುದು. ಆದರೆ ಲಿಪಿಕಾರನು ಈ ಎರಡೂ ಸಂಧಿಗಳ ಸಂಖ್ಯೆಯನ್ನು ಕೂಡಿಸಿಯೇ ಕ್ರಮವಾಗಿ ಮುಂದುವರಿಸಿ, ಮುಂದಿನ ೭ನೆಯ ಸಂಧಿಯನ್ನು ೬ ಎಂದು ತಿದ್ದಿಕೊಂಡಂತಿದೆ. ಇದೇ ರೀತಿ ಮುಂದಿನ ಸಂಧಿ ಸಂಖ್ಯೆಗಳನ್ನು ತಿದ್ದಿಕೊಳ್ಳುತ್ತ ಹೋಗಿರುವುದರಿಂದ, ನ್ಯಾಯವಾಗಿ ಇರಬೇಕಾಗಿದ್ದ ಕೊನೆಯ ಸಂಧಿ ಸಂಖ್ಯೆ ೨೦ಕ್ಕೆ ಬದಲು ೧೯ ಆಗಿದೆ. ನಾವು ಮಾತ್ರ ೭ನೆಯ ಸಂಧಿಯನ್ನು ಪರಿಗಣಿಸಿಕೊಂಡ ಕಾರಣ, ಒಟ್ಟು ಸಂಧಿ ೨೦ ಆಗಿದೆ. ೧೯ ಶುಭ ಸಂಖ್ಯೆ ಅಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಇದೇ ಸ್ಥಳದಲ್ಲಿ ‘ದಿಳ್ಳಿಯಿಂದ ಬಾದೂರ ಖಾನ ಬಂದ ಸಂಧಿ’, ಎಂಬ ಬರವಣಿಗೆ ಇರುವುದೂ ನಮಗೆ ಬೆಂಬಲವಾಗಿದೆ. ಇಲ್ಲಿಯ ೧೦೧ನೆಯ ಪದ್ಯ ಸಂಧಿ ೭ರ ಪದ್ಯ ೧೭೭ರಲ್ಲಿ ಮತ್ತೆ ಕಾಣಿಸಿಕೊಂಡಿದೆ. (ಸಂ)
Leave A Comment