ಸೋದರದ ಬಾಲೆಯರು ಶೋಕಮಾಡಲು ಎನಗೆ | ಬಾಧೆ ಬಿಡದು ಯಮನೊಳಗೆ |
ಹೋಗೆನುತ ಎಲ್ಲರನು ಸಾಗಿಸಿ ಕಳುಹಲು | ಮೇಘದಿ ಸುರರು ನೋಡಿದರು         || ೧೨೧ ||

ಅಳಿವ ಕಾಲಕ ತನ್ನ ಮರೆಯ ಬಿದ್ದರೆ ಕೊಡದೆ | ಕಳುಹುದೆ ನಿಜ ನಿಷ್ಠೆಯಹುದು |
ಹರಿಹರ ಬ್ರಹ್ಮರು ತಲೆಯ ನಲಿದಾಡುತ್ತ | ನರಕಲಿಗೆ ಸತ್ಯ ಹರಿಶ್ಚಂದ್ರ               || ೧೨೨ ||

ಕರೆಸಿದಾಗಲೆ ರಾಮ ಮಾರ್ಬಲವ ಮನ್ನೆಯರ ಕೂಡ | ನುಡಿವೆ ಧರ್ಮದ ಕಾಶವನು |
ಮಡದಿ ಮಕ್ಕಳು ಆಸೆ ತೊರೆದ ಬಂಟರು ಎನ್ನ | ಒಡನೆ ಮದತು ಇರಲೆಂದ         || ೧೨೩ ||

ಅಂಜಿ ಭಯ ಬಡಬೇಡಿ ಸಂಬಳವನುಂಡು | ಹೊಂದುವೆ ಸದ್ಗತಿಯ ನಾನು |
ಮುಂದೆನಗೆ ದೋಷಿಲ್ಲ ಸಂದನೆಂಬರು ಬನ್ನಿ | ಬಡ ಆಸೆಯುಳ್ಳವರು ನಡೆಯೆನಲು   || ೧೨೫ ||

ನೂರೊರುಷ ಬಾಳಲು ಸಾವ ಕಾಲವು ಬಿಡದು | ಕಾಯವಳಿಯಲು ಕೀತಿಯುಂಟು |
ಆಸೆಯೆಂದೂ ರಾಯ ಎಳ್ಳಿನಷ್ಟು ತಮಗಿಲ್ಲ | ಮೂರು ಸಾವಿರ ಮಂದಿ ಎರಗೆ         || ೧೨೫ ||

ಮೇಲಾದ ಮಂದಿಯ ಊರಿಗೆ ಕಳುಹಿದ | ರಾಮಭೂಪಾಲ ಏಕಾಂಗಿ |
ಊರು ಎಚ್ಚರು ಎಂದು ವೀರ ಸಂಗಗೆ ಪೇಳಿ | ನೀಲಕಂಠಗೆ ಬಾದುರಗೆ              || ೧೨೬ ||

ಬಾರಯ್ಯ ಕಾಟಣ್ಣ ತೀರಿಸಿದೆ ಜಡರನು | ರಾಣಿಯರ ತೊಡಕೊಂಡು ಇಹುದು |
ನಾಲ್ವರ ತಲೆಹೊಡೆಯೆ ಕುಮಾರನ ಪಡೆದಂಥ | ಬಾಲೆಯೊರ್ವಳ ಕಾಯೆನಲು      || ೧೨೭ ||

ಹಗಲಲ್ಲ ಹೇಳುವರೆ ಸೊಗಸು ಬರುವುದು ಎನಗೆ | ನಡೆ ಮುನ್ನ ಬೇಗ ಕುಮ್ಮಟಕೆ |
ಸಾಗದೆ ಇದ್ದರೆ ತಾಯಾಣೆ ನಿನಗೆಂದು | ಹೋಗೆನುತ ಕರಗಳ ಮುಗಿದು             || ೧೨೮ ||

ಸಾಸಿವೆ ಹಿಟ್ಟನು ತನುವಿಗೆ ಮೆ[ತ್ತಂ]ತೆ | ನಯನಕ್ಕೆ ದಸಿಯ ಬಲಿದಂತೆ |
ಹಲವು ದುಃಖದಿ ಕಾಟ ಭೋರ್ಗರೆವುತ ಮನದೊಳು | ಎರಗಿದ ಪಾದದ ಅಡಿಗೆ      || ೧೨೯ ||

ಎದ್ದನು ಕಾಟಣ್ಣ ಎರಗಿ ಕರಗಳ ಪಿಡಿದು | ರಾಹು ತುಡುಕಿದ ಶಶಿಯಂತೆ |
ವೀರ ಮಾನ್ಯರಿಗೆಲ್ಲ ಹುಶಾರು ಎನ್ನುತ ಪೇಳಿ ವಾಯುಗಮನದಿ ಹೋಗಿ ಬರುವೆ     || ೧೩೦ ||

ವೀರಸಂಗಯ ಬಂದು ಏರಲು ದುರ್ಗವ | ಬಾದುರಖಾನ ಮಂತ್ರಿ ಕರಮುಗಿದು |
ಸಾವಿಗಂಜಿನ ಬಂದಿ ಲಾವಣ್ಯ ಕಳೆದಂತೆ | ಊರ ಹೊಕ್ಕರು ಕುಮ್ಮಟವ             || ೧೩೧ ||

ತುರಗ ಗಮನದಿ ಬಂದು ದುರ್ಗ ಏರಲು ಕಾಟ | ತರಳೆಯರು ಬಂದು ಅಡಿಗಡಿಗೆ |
ರಣವಿಜಯಕಲಿಪಾರ್ಥ ರಾಮ ಏನಾದನು ಎಂದು ದೊರೆ ರಾಣಿ ಮಂತ್ರಿ ಕೇಳಿದ[ರು]         || ೧೩೨ ||

ಅಂಬಿನ ಮಳೆಯಲ್ಲಿ ಓಕುಳಿಯನಾಡಿದ | ತುಂಬಲು ಸರ್ವಾಂಗವೆಲ್ಲ |
ಬಂದುದು ಕಡುತಾಪ ಮೂರ್ಛೆ ಕೈವಲ್ಯವ | ನಂಬುವ ಸಮಯವಾಗಿಹುದು          || ೧೩೩ ||

ಬಿರಿದು ಬಾವುಲಿ ಕೊಳ್ಳಿ ಹಡೆದ ರಾಜೇಂದ್ರನೆ | ಉಡಿದಾರ ಮುದ್ರೆ ಉಂಗುರವ |
ಮಡಗಿದ ಕಾಟಣ್ಣ ಎರಗಿದ ರಾಮಯ್ಯ | ಶುಭದಿಂದ ರಾಜ್ಯವಾಳೆನಲು               || ೧೩೪ ||

ಅಳಿದನೆಂಬುದ ನುಡಿಯ ಪಡೆದಮ್ಮ ಕೇಳುತಲಾಗ | ಹರನ ಪಾದವ ಕೂಡಲೆಂದು
ಮರಳೇಳು ಜನ್ಮದಿ ಬರಲೆಮ್ಮ ಗರ್ಭದಿ | ಗಿರಿಜಾವಲ್ಲಭನೆ ಕೊಡು ಕಂಡ್ಯಾ          || ೧೩೫ ||

ರಾಯ ದುಃಖವ ಮಾಡೆ ಪ್ರಧಾನಿ ಬೈಚಪ್ಪನು | ಮಾಯ[ಮ್ಮ] ಲಿಂಗ[ಮ್ಮ]ಕೇಳಿ |
ರೂಢಿಗೀಶ್ವರ ಮೆಚ್ಚಿ ಕಡೆಗಾಲ ಸ್ವರ್ಗಕೆ | ಸಲ್ಲಬೇ[ಕೆ]ನುತ ಹರಿಯ ನಿಲಿಸಿ           || ೧೩೬ ||

ಗೋಳೆನುತ ಊರೆಲ್ಲ ಆರ್ಭಟಿಸಿ ಶೋಕದಲಿ | ತಾಯಳಿದ ಬಾಲನ ತೆರದಿ |
ಬಾಯ ಬಿಡುತಿರೆ ಪಟ್ಟ ಬಂದು ಕಾಟಣ್ಣನು | ರಾಯ ರಾಮನ ಅರಮನೆಗೆ            || ೧೩೭ ||

ಬಾಲೆಯರ ಕೇಳಿದ ನೀವು ಎನ್ನುವುದೇನು | ಸೇರಿದ ರಾಮಣ್ಣ ಕೈವಲ್ಯ |
ಆಡೋದು ಆಗೊಂದು ಒಡಲೇ ಖಾಜೆ | ಹಾರಿಸು ತಲೆಯೆಂದು ಕುಳಿತು              || ೧೩೮ ||

ಹೊಯ್ಯಲು ನಾಲ್ವರ ನಿಮಿಷ ಮಾತ್ರದಿ ಕಾಟ | ಇರು ತಾಯಿ ಸುಭದ್ರೆ ಸುಖದಿ |
ಮಗನು ಜಟ್ಟಂಗಿಯ ರಾಮನ ಮುಂದಿಟ್ಟು | ನಡೆಸಮ್ಮ ರಾಜ್ಯಭಾರವನು            || ೧೩೯ ||

ಪುತ್ರನ ಸುಡು ನನ್ನ ಪುರುಷನೊಡನೆ ಪೋಗೆ | ಪ್ರಾಪ್ತಿ ಕೊಡಲಿಲ್ಲವೆ ಶಿವ ನನಗೆ |
ಜತಿಯರು ನಾಲ್ವರು ಏಕಾರ್ಥವಾದರು ತೊರೆದು | ಬಿಟ್ಟೇನೆ ಮನ್ಮಥನ ರೂಪ       || ೧೪೦ ||

ತವಕದೊಳಗೆ ಕಾಟ ತನ್ನ ಮನೆಗೆ ಬಂದು ನಿಮ್ಮ ಮಾತೇನು ಹೇಳೆಂದ |
ತಮ್ಮನ ರಾಣಿಯರ ಯಮಧರ್ಮನ ಕಾಣಿಸಿದೆ | ನಿಲ್ಲಲು ತನಗ್ಯಾಳ್ಯವಿಲ್ಲ            || ೧೪೧ ||

ಯಾಕರಸೆ ನಿಲ್ಲುವುದು ಇದ್ದೆನೆಂಬುವರ್ಯಾರು | ಹೊಡೆದ್ಹಾಕಯ್ಯ ಈ ಕ್ಷಣವೆ ನೀನು |
ಜಡಿದೆತ್ತಿ ಖಡ್ಗವ ಹೊಡೆದು ಈರ್ವರ ಮೇಲೆ | ಹೊರಳಿದ ಬಿದ್ದು ದುಃಖದಲಿ           || ೧೪೨ ||

ಬಾಲೆಯರ ಲಯಮಾಡಿ ಬೇಗ ಹೊರಡಲು ಕಾಟ | ಕಾಲ ತೊಡರಿಲ್ಲ ನಮಗೆನಲು
ಭೇರುಂಡ ರಣರಾಮ ಏನಾದನೋ ಎನುತಲಿ | ವಾಯುಗಮನದಿ ಓಡಿಬಂದ        || ೧೪೩ ||

ರಾಯ ಕಾಟನು ಬಂದು ಕುಮಾರಗೆ ಕೈಮುಗಿದು ತೀರಿಸಿದೆ ನಾಲ್ವರ ಸ್ಥಿತಿಯ |
ಜೋಡಿಗೆ ತನ್ನಯ ಮಾರಿ ನಾರಿ ಈರ್ವರ ಹೊಡೆದು | ಸಾಗಿಸಿದೆ ಕಾಲನ ಪುರಕೆ     || ೧೪೪ ||

ಕಡಿದಾಡಿ ಕಾಟಣ್ಣ ಬಲದೊಳಗೆ ಅರ್ಧವ | ಲಯವಾಗಿ ಮಾನ್ಯರು ಬಿದ್ದು |
ಇವರಿ[ಗೆ] ಅಳಿವಾಗ ಮೂವತ್ತು ಸಾವಿರ ಪೌಜು | ಯಮನ ಕಾಣಿಸಿ ಒರಗಿದನು     || ೧೪೫ ||

ಗಾಯ ತಾಪದಿನೊರಗಿ ತೀರಲು ಕಲಿಯುಗದ | ಭೀಮ ರಾಮಗೆ ಹುಷಾರಾಗಿ
ಮೇಘವು ಕವಿದಂತೆ ಮುತ್ತಿರುವ ಖಾನರ ನೋಡಿ | ಏರಿಸಿದ ಬೊಲ್ಲನ ಚಬಕ         || ೧೪೬ ||

ತುರುಕರ ರೋಷವು ಬರಸಿಡಿಲು ಬರುವಂತೆ | ಕಿಡಿ ಸೂಸುತ್ತೆ ನಯನದಲಿ |
ಕಡಿವುದು ಕಡೆಯಿಲ್ಲ ತುಳಿವುದು ಗಡಿಯಿಲ್ಲವು | ದುರುಗುಟ್ಟಲು ನಾಲ್ಕು ಬೀದಿ        || ೧೪೭ ||

ರಾಮನ ಕೋಪಾಗ್ನಿ ಹೇಳುವರಳವಲ್ಲ | ಭೀಮನಂದದಿ ಕೋಪ ತಾಳಿ |
ತಾರುಮಾರಿನ ಮೇಲೆ ಕಡಿಯೆ ತುರುಗ ರಾಹುತ | ಬೀಳುವರು ನಾಲ್ಕು ಪಾಲಾಗಿ   || ೧೪೮ ||

ಕದಳಿಯ ವನದೊಳು ಮದಕರಿಯು ಹೊಕ್ಕಂತೆ | ಕಡಿವರು ಎರಡು ಭಾಗದಲಿ |
ಕಡಿವನು ಕಾಟಣ್ಣ ಕೊಡಲಿ ಹನುಮನು ಹಂಪ | ಕೊರೆವ ರೀತಿಲಿ ಕಣಿಕೆಯನು        || ೧೪೯ ||

ದೇವಿಸೆಟ್ಟಿಯ ಲಿಂಗ ಬಿದ್ದ ಲೆಂಕಿಯ ಹನುಮ | ಬಾಣಿ ಮುದ್ದನು ಮರಜೆಟ್ಟಿ |
ಮೀರಿದ ತುರುಕರ ಹಾರಿಸಿ ತಲೆ ಹೊಡೆದು | ಏರಿಸಿ ಕಲ್ಲಕಟ್ಟೆಯನು                  || ೧೫೦ ||

ಖಾನಖಾನರ ಮೇಲೆ ಏರಲು ರಣರಾಮ | ಬಾಜಿಖಾನನ ತಲೆ ಹೊಡೆದು |
ವಾರೀಲಿ ಇದ್ದಂತೆ ಮಲ್ಲೋಜಿಖಾನನ ಹೊಡೆಯೆ | ಮಾರಿಗೆ ಕೋಣನ ಹೊಡೆದಂತೆ  || ೧೫೧ ||

ಖಾನ ವಜೀರರ ತೀರಿಸಿದ ಸ್ಥಿತಿಪುಣ್ಯ | ನೂರೆಂಟು ಮಂದಿ ಗಟ್ಟಿಯರನು |
ನೇಮಿ ಮಾತಂಗಿಯ ತಾವರಿದು ಕಡೆಯೊಳು | ನಿಂತು ನೋಡಲು ಬೇರೆ ಪೌಜು    || ೧೫೨ ||

ಕಡಿದು ಖಾನರ ತಲೆಯ ನಿಲ ಬೇಳೆ ಕಾಯವು | ಕರವು ಬಳಲುತ ಬಂದು ಒಂದೆಸೆಯ |
ನೆಳಲೊಳು ನಿಲ್ಲಲು ಕಡು ಬಿಸಿಲ ತವಕಕೆ ಮೋರೆ | ಸೊಗಸುತ್ತಿರಲು ಪ್ರಾಣತ್ವ       || ೧೫೩ ||

ಗಾಯ ಸಂಕಟವಾಗೆ ರಾಮ ನಿಂದನು ಎಂದು | ನೇಮಿ ಮಾತಂಗಿ ಮಾತಾಡಿ |
ಮೀರಿದ ವಜೀರ ಖಾನರೆಲ್ಲರ ಕೊಂದು | ಸೇರಿಸಿದ ದಂಡ ಯಮಪುರವ             || ೧೫೪ ||

ಸವಲಕ್ಷ ಪವುಜನು ಬಲಿಯಿಕ್ಕಿ ಈ ಬಳಿಯ | ಉಳಿದಿಹುದು ಎಷ್ಟೊತ್ತು ಇಲ್ಲಿ |
ಐವತ್ತು ಸಾವಿರದ ಕೆಳಗಲ್ಲದೆ ಮೇಲಿಲ್ಲ | ಇದಕೇನು ಗತಿಯು ಹೇಳಮ್ಮ              || ೧೫೫ ||

ಗಾಯ ಸೊಕ್ಕಲು ರಾಮ ಹೋಗಿ ನಿಂದನು ಕಂಡ್ಯಾ | ಕಾಲಾಳು ಉಂಟು ಸಾವಿರವು |
ರಾಮನ ಕರ ನಿಲ್ಲೆ ಆ ಮೂಳರಿಗೆ ಹೆದರೆನು | ಹೋಗಿ ಮುತ್ತು[ವೆ]ನು ಮರಳೊಮ್ಮೆ  || ೧೫೬ ||

ಆಗಲೆ ಹೋಗೊಮ್ಮೆ ಹೋಗಿ ನಿಂದ ರಂಡೆ | ಉರುವ ಸಿಡಿಲೆರಗಿದಂತೆ |
ರಾಮನ ಬಂಟರು ಸಾಗಲು ಒಬ್ಬೊಬ್ಬ | ಸಾವಿರವಾ[ಗಿ] ನಡೆ ಹಾಯುವರೆ           || ೧೫೭ ||

ಹಿಂದಕ್ಕೆ ನಡೆವನೆ ರಾಮೇಂದ್ರ ಕರಮುಗಿದು | ಬಂದ ತಪ್ಪಿಗೆ ಪಾಲಿಸೆನುತ |
ದಂಡೆಲ್ಲ ಲಯವೆಂದು ಸುರಿತಾಳ ಕೇಳಲು ನೇಮಿ | ಕಂಡ ಸ್ಥಿತಿಯನು ನಾನೊರೆವೆ  || ೧೫೮ ||

ರಾಮನ ಹೊಡೆದೆನು ಅರೆಗಾಯವಡೆದು ಮೂರ್ಛೆ | ಯಾಗಿ ನಿಂದಂಥ ಸಮಯದಲಿ
ಏರಲಮ್ಮದೆ ನೇಮಿ ಓಡಿಬಂದನು ಎಂದು | ಆಡುವೆ ನಡೆಯೆನಲು ಮೂಳಿ           || ೧೫೯ ||

ಸಂಗಿ ಸಂಗದ ಮೇಲೆ ಗಂಗಾಳ ಚೆಂಬೊದ್ದಂತೆ | ಹಿಂದಣ ಗಾದೆ ತನಗಾಯ್ತು |
ಮುಂದೆ ಹೋಗಲು ಮರಣ ಹಿಂದೆ ಹೋಗಲು ಹೇಡಿ | ಎಂದೆನುತ ಮನದಿ ಧ್ಯಾನಿಸುತ       || ೧೬೦ ||

ಹೆದರಬೋಡವೊ ನೇಮಿ ಎರಡು ಗಳಿಗೆಲಿ ಅವನ | ತಲೆಯ ಕೊಡುವೆನು ನಿನ್ನ ಕರದಿ |
ಲಯಮಾಡಿ ದಂಡನು ಊರಿಗೆ ಹೋಗಲು | ಹೊಡೆಸನೆ ತುಂಡೇಳೆ ಪಾಶ್ಚಾ         || ೧೬೧ ||

ನೇಮಿಯ ಬಲಕೆಲ್ಲ ವಿಧಿಯಾಗಿ ಬಂದವಳು | ನೇಮಿಯ ನಾ ಬೇರೆ ಬಿಡುವಾ |
ಮೂಗನರಿವೆನು ಲವುಡಿ ಈ ಸಾರಿ ರಾಮನ ತಲೆಯ | ತಾರದಿರಲು ಎಂದು ನಡೆದ  || ೧೬೨ ||

ಜಾಳು ಜಗ್ಗನು ಎಲ್ಲ ಕೂಡಿ ಮೂವತ್ತೈದು | ಸಾವಿರ ಕುದುರೆ ಪೌಜಿನೊಳಗೆ |
ಏರಿಸಿ ಸಿಂಗಾಡಿ ಬಾಣ ಬತ್ತಿಯ ಕರೆದು | ಜೋರಿಸಿ ಸುತ್ತಲು ಮುತ್ತೆ                  || ೧೬೩ ||

ನೋಡಲು ಕಿರಿನೋಟ ರಾಯ ರಾಮನು ನಗುತ | ನೇಮಿಯು ಹರುಷದಿ ಬರಲು |
ಮುತ್ತಿ ಆರ್ಭಟಿಸುತ್ತ ಹೊಕ್ಕರು ತುರುಕರು | ಕತ್ತಿ ಭಲ್ಲೆಗಳ ಚಿಮ್ಮುತಲಿ               || ೧೬೪ ||

ಸತ್ತ ರಾಮನು ಲವುಡಿ ಮತ್ತೇಕೆ ಹೆಣಗಿರಿಯೆಂದು | ಹೊಕ್ಕರು ನಾಕು ಮುಖದಿ ತುಳಿಸಿ |
ಎದೆಗೆಡದೆ ನುಗ್ಗಿನ್ನು ಬರುವ ತುರುಕರ ನೋಡಿ | ಹೊಡೆದಾನು ಲಿಂಗಣ್ಣ ಕಾಕ       || ೧೬೫ ||

ಕಡಿಕಡಿ ಎನುತಲಿ ಕಡಿದು ಸಾವಿರ ತಲೆಯ | ಎರಡು ಕೋಟೆಯನು ಹಾಕಿದರು |
ಮರಳುವ ಕಾಲಕ್ಕೆ ಮತ್ತೊಬ್ಬ ಅಲ್ಲಿಯಖಾನ | ಹೊಡೆದನು ಎದೆಯ ಗುಂಡಿಗೆ        || ೧೬೬ ||

ಸೊರಗುತ ಸೊಕ್ಕುತ ಬಂದು ತಮ್ಮೊಡೆಯಗೆ | ಕರ ಮುಗಿದು ನಡೆದ ಯಮಪುರಕೆ  || ೧೬೭ ||

ರಾಮಭೂಪಾಲನ ಮದದಾನೆ ಬಿದ್ದತುಯೆಂದು | ಏರಿದನು ಬಾಣಿಯ ಮುದ್ದ |
ಮೂರು ಸಾವಿರ ಬಡಿದ ನೀರ ಕೇಳದಿ ತೆರದಿ ಮೀರಖಾನನ ಎತ್ತಿ ಹೊಡೆದ          || ೧೬೮ ||

ಕುಣಬಿ ಮೋರೆನುತಲಿ ರಣದೂಲಖಾನನು ಬಂದು | ಸೇದಿಡಲಾಗ ಹಣೆ ಕಣ್ಣು ಒಡೆಯೆ |
ಅರೆಜೀವದೊಳು ಪೋಗಿ ರಣದೂಲನಪ್ಪಳಿಸಿ | ಒಡನೆ ನಡೆದ ಯಮನಪುರಕೆ        || ೧೬೯ ||

ನೇಮಿಖಾನರಿಗೆಲ್ಲ ಗಂಡನೆನಿಸಿಕೊಂಬ | ರಣಭೂಪಾಲನ ಬಂಟ |
ನಾ ಬಂದೆ ನೋಡೆಂದು ಎಡಗೈಯ ಹಂಪನು ಹೊಕ್ಕು | ಮೂರುಸಾವಿರ ಸದೆ ಬಡೆದ         || ೧೭೦ ||

ಮಾರಿ ಕೋಣನ ತೆರದಿ [ಜಯಭೇರಿ] ಹೊಡೆವೆನು | ಎಂದು ಎದ್ದ ಪಂಡಿತಖಾನ |
ಮೂರಂಬ ಸೇದಲು ತೋರಿ ಬೆನ್ನೊಳೆ ಮೊನೆ | ಸೇರಲು ಯಮನಪಟ್ಟಣವ         || ೧೭೧ ||

ರಾಮನ ಬಂಟರು ಈ ಬಗೆಯಲು ಎಲ್ಲರು | ಲಯವಾದವರು ಕಾದಿ ದೊಟ್ಟಿ |
ಸೂರ್ಯನ ಮಗನೂರು ತಾವಿಲ್ಲ ದೊರೆಗೆಲ್ಲ | ಹೋಗಿ ನಿಲ್ಲಲು ನರಗುರಿಯ          || ೧೭೨ ||

ನೋಡಿದ ಯಮರಾಜ ಭೂಮಿಯು ಗಜ ಪ್ರಜೆಯು | ಮಾಡಿದನೆ ಮಹಾದೇವ ಮುನಿದು |
ರಾಮನ ರಣಜಗಳ ಪ್ರಧಾನಿ ಗುಪ್ತನು ಪೇಳೆ | ಏನಿವರ ಆದಾಯ ತನಗೆ             || ೧೭೩ ||

ಗುಡುಗುಡಿಸುತಲಾಗ ಯಮನು ಕೋಪದಿ ಎದ್ದು | ಶೃಂಗರಿಸಿದ ತನ್ನ ವಾಹನವ |
ಹರುಷವಿಲ್ಲದೆ ಏರಿ ಬೀಗಮುದ್ರೆಯ ಹೊರಿಸಿ | ಹರನ ವಾಲಗಕೆ ಬರಲಾಗ           || ೧೭೪ ||

ಬಂದನು ಭೂತನ ಇಂಬಿಟ್ಟು ಮುಖದೊಳು ಬ್ರಹ್ಮ | ವೊಂದು ವಾಡಿವನ ವಾಲಗಕೆ |
ಮುಂದಿಟ್ಟು ಮುದ್ರೆಯ ದಿಗ್ ಪ್ರಣಿತನಾಗಿ | ಮುಂದೆನಗೆ ಸಾಗದು ಮಣಿಹ           || ೧೭೫ ||

ಮಡಗಿದ್ಯಾತಕೆ ಉಂಗುರ ಎಡರೇನು ನೀ ಬಂದ | ನುಡಿಯೆಂದು ಶ್ರೀ ಗುರು ಕೇಳೆ |
ಬರುವುದು ಕಡೆಯಿಲ್ಲ ಧರೆಯೆಲ್ಲ ಓರಂತೆ | ನಗರೆಲ್ಲ ತುಂಬಿ ಹೊರಗಿಹುದು           || ೧೭೬ ||

ನರನಿಗೆ ಈ ಬಗೆಯ ಜಯಪ್ರದವನಿತ್ತರೆ ನೀವು | ಹರಿಯದೆ ಬಿಡು[ವ]ನೆ ಜಗವ |
ಸರಿ ಅವನ ಆಳ್ವಿಕೆ ಸಂಪೂರ್ಣ ಕಾಲನು | ಕಲಿಪಾರ್ಥನೆನಬಹುದು ಅವನ           || ೧೭೮ ||

ಕಾಲನೊ ಕೊಲುವೊಡೆ ಭೀಮನೊ ಬಲುಮೆಯಲಿ | ಕಾಲಭೈರವನೊ ಕಾಳಗದಿ |
ವಾಲ್ಮೀಕಿ ತನುಜೆಯ ಕುಮಾರನೊ ಲವಕುಶ | ಶಾಲಿವಾಹನನೊ ಶರಭವನೊ      || ೧೭೯ ||

ಹೀಗೆಂದು ಹರನೊಳು ಕೊಂಡಾಡುತ್ತ ಯಮರಾಜ | ಮೂಲವೆ ನಿಮ್ಮ ಸೂತ್ರಗಳು |
ಮೀರಿದ ವೈರಿಗಳ ತಾನಲ್ಲದೆ ಕೊಲಿಸುವೆ | ಏಳಲು ಕರಮುಗಿದು ಕಾಲ              || ೧೮೦ ||

ಯಮನಾಗ ನಡೆಯಲು ಮೊದಲಿನ ಮಣಿಹಕ್ಕೆ | ಎಡಬಲನ ನೋಡಿ ರಾಮ |
ಮಡಿದರೆ ತಮ್ಮಯ ಹಮ್ಮೀರ ಬಂಟರು ಎಂದು | ಒಡನೆ ನೂಕಿದನು ತುರಗವನು    || ೧೮೧ ||

ಸಿಡಿಲಿನಾರ್ಭಟೆ ಮಾಡಿ ತುರಗೆ ಬೊಲ್ಲನ ನೂಕೆ | ಕಿಡಿಗರೆದು ಪೌಜಿಗೆ ಹೊಗಲು |
ಸದೆ ಬಡಿದ ದಂಡನು ಸೊಪ್ಪೆಯನರಿದಂತೆ | ಒರಗಲು ನೆಲ ಬಿಡೆ ತೆರದಿ            || ೧೮೨ ||

ಇಚ್ಚಾರಿ ಪಚ್ಚಾರಿ ಒಕ್ಕಲು ಕಳಲೆಯ | ಉಪ್ಪಿಗೆ ಕೊರೆದಿಡುವ ತೆರದಿ |
ರಕ್ತದ ಹಳ್ಳಗಳು ನಡೆವುತ್ತ ಅಲ್ಲಲ್ಲಿ | [ಕೆ]ಚ್ಚನಾಗಲು ರಣಭೂಮಿ                      || ೧೮೩ ||

ಕಣಕೊಂಡು ಬರುವಂಥ ಭರದೊಳು ನೇಮಿಯ | ಬಂದು ಇದಿರಿಗೆ ಸಿಕ್ಕಲು ರಾಮುಗನ |
ಮೊದಲೆರಡು ಕಾರ್ಯದಲಿ ಕೈ ತಡೆದು ಪಾಲಿಸಿದೆ | ಪಡಿಯ ತೀರಿಸುವೆ ಇಂದಿವನ  || ೧೮೪ ||

ಗಂಡನು ಅಳಿವಾಗ ಹೆಂಡಿರು ಇರಸಲ್ಲ | ತುಂಡೇಳೆ ಹೊಡೆದ ನೇಮಿಯನು |
ಕಂಡಳು ಮಾತಂಗಿ ಕೆಟ್ಟೆ ಬೆಂದೆ ನೇಮಿ | ಕಂಡರು ವೈಕುಂಠವೆನುತ                || ೧೮೫ ||

ಜೀವರಾಶಿಯ ಕೊರೆದು ಎದ್ದಳು ಮಾತಂಗಿ | ಸೀಳಿಸುವ ಎನ್ನ ಸುರಿತಾಳ |
ನೇಮಿ ಕೊಂದವ ಎನ್ನ ಕಂಡರೆ ಬದುಕೆನು | ಬಾಗಿದೆ ಶಿರವ ರಾಮನಿಗೆ               || ೧೮೬ ||

ಛೀ ರಂಡೆ ಹಗಲೆಲ್ಲ ಹೇಳಬೇಡೆಲೆ ಹೆಣ್ಣ | ನಾ ಬೇರೆ ಕಡಿಯೆ ಶಿವನಾಣೆ |
ವಾರ್ಯಾಗಿ ನಡೆಯಲು ಮಾದಿಗಿತ್ತಿಯು ಹೊಡೆಯೆ | ನೂರಾರು ಸರಳು ನಡುವಂತೆ || ೧೮೭ ||

ಗಾಯ ಮಾರಕವಾಗೆ ರಾಮ ತೇಜಿಯ ಮೇಲೆ | ಕುಮಾರನಾಗ ಮೂರ್ಛೆಯಲಿ
ರಾಯ ಕಾಟನು ಕಂಡು ಹೊಗಲೇರಿ ಖಾನರನು | ಬಾರಿ ಬಾರಿಯಲಿ ಹೊಡೆಯುವನು         || ೧೮೮ ||

ಕಡಿಕಡಿ ಎನುತಲಿ ಕಾಕೊಡೆದು ಖಾನರ ತಲೆಯ | ಹಾಕಿದನು ಜಗಲಿ ಮುನ್ನೂರು |
ಏಕಾಂಗಿ ಎನ್ನೊಡೆಯ ನೀ ನೋಡು ನಿನ್ನಯ | ಋಣವ ಸಾಕಿದ ಸುಖವ ದಕ್ಕಿಸುವೆ   || ೧೮೯ ||

ಕಡಿಯಲು ಖಾನರ ಪಡೆಯ ದಂಡನು ಕಾಲ | ಹೊಡೆದ ನಾಗಯ ಸರಳೊಳಗೆ |
ಎಳೆಯುತ ಮುಂಗಾಲ ದೊರಗಸುಕ್ಕಿಲಿ ಬಂದು ಒರಗಿತು ತಮ್ಮನ ತುರಗ          || ೧೯೦ ||

ಬೀಳುತೇಳುತ ಬಂದು ಸೇರಿ ಬೊಲ್ಲನು ಕರವ | ನೀಡಿದ ತಮ್ಮನ ಮುಖಕೆ |
ಊರಿಗೆ ಕಳುಹಿದೆ ಉಳಿಯಲೆನ್ನುತ ನಾನು | ಓಡಿ ಬಂದೆಯೆ ಎನ್ನ ಮೇಲೆ            || ೧೯೧ ||

ರಾಮಗೆ ಅತಿ ದುಃಖವೇರಿ ಮೈಯನು ತಡಹಿ | ನೀರ ತರಿಸಿ ಹೃದಯ ಕೊರಗೆ |
ಏಳೇಳು ಜನ್ಮಕ್ಕೆ ಎನ್ನಗಲದೆ ಬಾರೆಂದು ಸೇರೆನಲು ವೈಕುಂಠ ಸ್ಥಳವ               || ೧೯೨ ||

ಗೊಲ್ಲರ ಮಗನೆಂದು ಊರೆಲ್ಲ ಆಡಲು ಭೇದ | ವಿಲ್ಲದೆ ನಾವು ಬಾಳಿದೆವೊ |
ನೋಡಣ್ಣ ನಿನ್ನಯ ಬೆನ್ನೊಡನೆ ನಿನ್ನೊಡನೆ ಬರುವೆ | ಬೀಡಾರ ಮಾಡಿಸು ಈರ್ವರಿಗೆ         || ೧೯೩ ||

ತಾನಿರುವ ಪರಿಯಂತ್ರ ತಲೆಯ ಖಾನರ ಕರಕೆ | ಹೀನಬಾರದೆ ಕೊಟ್ಟರೆನುತ |
ಹಾರಿಸಿ ಅಂತರದಿ ಎದ್ದರೆ ಕರದೊಳು ಹಿಡಿದು | ಮತ್ತೇರಿದ ತುರುಕರ ಮೇಲೆ        || ೧೯೪ ||

ಏರಿದ ಮುಖದೊಳು ಸಾವಿರ ತಲೆ ಹೊಡೆದು | ಬೀಜಕೆ ಏಳ್ನೂರ ಬಿಡಲು |
ಮೀರಲು ಗತಿಸಾರ ಜ್ಞಾನ ತಪ್ಪುತ ಬರಲು | ಸಾಗಲು ಗೂಗಿಕಲ್ಲಿಗೆ                   || ೧೯೫ ||

ಎಡಬಲದಿ ಕಾದಿರ್ದ ಬಡವ ಬಲ್ಲರನೆಲ್ಲ | ಒಡನೆ ಸಾಗಿಸು ಕುಮ್ಮಟಕೆ |
ಇಳಿದು ತನ್ನಯ ತುರಗ ವೀರಮಂಡಿಯ ಹೂಡಿ | ಹರಕ್ಷತಿಗಳನು ಮಾಡುವರು      || ೧೯೬ ||

ಏರಿದ ತುರಗವನಿಳಿದು ನಿತ್ರಾಣದಲಿ | ಕಾರ್ಯಕೆ ನಡೆವಂತೆ ಕುಳಿತು |
ಮೂರು ರಾಯರ ಗಂಡ ತನಗೇರಿ ನೋಡೆ ಯಾರು | ಆಡಲು ಬೊಲ್ಲ ದೈನ್ಯದಲಿ     || ೧೯೭ ||

ಕೊಡಬೇಡ ನಿನ್ನಯ ವೈರಿ ಸುರಿತಾಳಗೆ | ಬಿಡದಯ್ಯ ಹೀನಾಯ ನಿಮಗೆ |
ಹೊಡೆ ನಿನ್ನ ಬಳಿಯೊಳು ಬಿಡುವೆ ಪ್ರಾಣವನೆಂದು ಇಡಲಾಗ ಮೊರೆಯನು ತುರಗ   || ೧೯೮ ||

ತುರುಗವ ಕೊಲ್ವರೆ ಬರವೆನಗೆ ಕರಗಳು | ಹರನ ಕೃಪೆಯಿಂದ ಶಿಲೆಯಾಗು |
ಗುರುತಿರಲಿ ಕುಮ್ಮಟದಿ ಎಪ್ಪತ್ತುರಾಯರ ಬೊಲ್ಲ | ನರಪಡೆಯು ಇರುವ ಕಾಲದಲಿ  || ೧೯೯ ||

ರಾಮನ ಕದಲ[ದೆ]ತುರಗ ಕಲ್ಲಾಗೆ | ಮೇಲವನು ಪಂಚತ್ವನೆಯ್ದ |
ಕಾಮನ ಕೊಂದವನ ಧ್ಯಾನಮಾಡಲು ಬಂದು ಮೇಘದಿ ನಿಂದು ನೋಡುವರು       || ೨೦೦ ||

ದುಃಖವೆಂಬುವುದಿಲ್ಲ ನೇತ್ರಲೋಚನ ಪೂಜೆ | ಹೆಚ್ಚಾಗಿ ಮಾಡಿರಲು ಈ ಮರಣ |
ಕೊಟ್ಟನಲ್ಲದೆ ಗುರುವು ವ್ರತಭ್ರಷ್ಟಗೆ ಬರದೆಂದು | ನಕ್ಕನು ರಾಮ ನಲಿನಲಿದು        || ೨೦೧ ||

ದ್ವಾರಾನುವತಿಯಾಗಿ ಶ್ರೋಣಿತ ಸುರಿಯಲು | ನೋಡಿ ರಾಮಗೆ ಊರೆ ಜಟ್ಟಂಗಿ |
ಯೋಗಿಯಾಗುವೆನು ಸತ್ಯ ನೀಯಾಗೊ | ಮತ್ಯಾಕೆ ಅ[ನ್ಯ]ದ್ವಾರವನು              || ೨೦೨ ||

ಕಾಲಭೈರವನಾದ ರಣದೊಳು ತಾನಳಿದು | ಬೇಡಿದ ಮರಣ ತನಗಾಯ್ತು |
ಪನ್ನಂಗಧರನೊಲುಮೆ ಪರಿಪೂರ್ಣ ಇರಲು ತನಗೆ | ಮುನ್ನವೆ ಬಂತು ಈ ಮರಣ    || ೨೦೩ ||

ರಾಮಗೆ ಪರಮಾತ್ಮ ಸೇರಿ ಸನ್ನಿಧಿಯಾಗೆ | ಶ್ರೀ ಗೌರಿಕಾಂತನ ನೆನೆದು |
ಪಾಲಿಪುದು ಸರ್ವತ್ರ ದ್ರೋಹಿ ತಪ್ಪನು ಕಾದು | ಹಾದು ಸದ್ಗತಿಯ ತೋರುವುದು     || ೨೦೪ ||

ಗುರುದೇವ ಮನೆದೇವ ಜಟ್ಟಂಗಿ ರಾಮನ ನೆನೆದು | ಕಳುಹಿದ ಪರಮಾತ್ಮ ರಾಮ |
ಹರನಡಿಗಳ ಸೇರಿ ಪದ್ಮ ತಾನಾಗಲು | ಸುರರು ಹೂಮಳೆಯನು ಕರೆದು            || ೨೦೫ ||

ಕಂಡರು ಮಾತಂಗಿ ಗೂಗಿಕಲ್ಲನು ಹತ್ತಿ | ನೋಡಲು ನಂತರ ಬರುವನೆನುತ |
ಮಾರುತನ ಸುಳುಹಿಗೆ ಹಾರ್ಯಾಡೆ ಸರಗಳು | ಓಡುವರು ರಾಮ ಬಂದನೆನುತ    || ೨೦೬ ||

ಕಳೆಯುಗುಂದದ ಕಾಂತಿ ಧೈರ್ಯಗುಂದದ ಎದೆಯು | ಹೊಳೆಯುಗುಂದದ ಮೈಬಣ್ಣ |
ತಳತಳಿಸುವ ಮನ್ಮಥನ ರೂಪನು ಕಂಡು | ಗಿಡ ಮರೆಯಗೊಂಡು ಓಡುವರು       || ೨೦೭ ||

ಸುತ್ತಿ ಖಾನರು ಕವಿದು ಜ್ಯೋತಿಗೆ ಕರವಿಡಿದು | ಎತ್ತೆತ್ತಿ ನೋಡುವರು ಶಿರವ |
ಉಟ್ಟ ದಟ್ಟಿ ಪಟ್ಟಿ ಚುಂಗ ಹಾರಲು ನೋಡಿ | ದುತ್ತೇರಿ ಛಾಯೆಂದು ಓಡೆ              || ೨೦೮ ||

ಬೆದಬೆದರಿ ಬೀಳುತ ಎದೆ [ಜೀ]ವ ಬಡಕೊಂಡು | ಇರುವರು ಖಾನರಿಗೊಂದು ಕಾಗೆ |
ತಲೆಯೊಳು ಕುಳಿತರೆ ಮರ[ಗಯಾ] ಎನುತಲಿ | ಒದಗಿ ಬಂದಳು ಮಾತಂಗಿ        || ೨೦೯ ||

ಇದಿರಾಗಿ ನಿಲ್ಲಲು ಎದೆ ಧೈರ್ಯ ಸಾಲದೆ | ದೂರದೊಳು ನಿಂದು ನೋಡುವರು |
ಬಿಟ್ಟೇನೆ ಎಲೆ ರಾಮ ಕೊಟ್ಟ ಛಲಪದನೆಂದು | ಕುತ್ತಿಗೆ ಕೊರೆಸಿದಳು ರಂಡೆ           || ೨೧೦ ||

ಶಿರವೆನಲು ಕಳೆದು ಧೂಮಕೇತುವು ಬಂದು ಶಿರದೊಳು ಪೊಗಲು ಕಳೆ ಸೂಸೆ |
ಮನವೇಗವಾದಂತೆ ತುರಗದ ಮೇಲಿಟ್ಟು | ದಿನ ಎಂಟರೊಳಗೆ ಮುಟ್ಟೆನಲು         || ೨೧೧ ||

ರಾಯ ರಾಮನ ಡಿಂಬ ಮಾದಿಗಿತ್ತಿಯು ಆಗ | ಕಾಣಿಸಲು ಅಗ್ನಿಪ್ರಯೋಗ |
ರಾಯ ಸುರಿತಾಳನಿಗೆ ಸುದ್ದಿ ತಟ್ಟಿದ ಮೇಲೆ | ಹೋಗುವನೆಂದಲ್ಲಿ ಬೀಡ              || ೨೧೨ ||

ಹತ್ತೆಂಟು ದಿವಸದಿ ತಟ್ಟಲು ತಲೆ ಡಿಳ್ಳಿ | ಪಟ್ಟಣದ ಸದರಿಗೆ ಮಡಗಿ |
ಕೊಟ್ಟರು ಸುದ್ದಿಯ ಸುರಿತಾಳ ಕಮ್ಮಟದ | ಪಟ್ಟಕರನ ತಲೆ ಬಂತು                  || ೨೧೩ ||

ಚತುರಂಗ ಬಲ ಸಾರಿ ಲಖಯ ತಳುಹೋಪ | ಸುತನೂರ ಸೂರ್ಯನ ಮಗನ ಗತವಾಗೆ |
ಸಮಯದಿ ಬಿಜಿ ಮದಲಿಗೆ ಬಟ್ಟ | ಗತಿಗೆಟ್ಟು ಕತ್ತೆ ಏಳ್ನೂರು                           || ೨೧೪ ||

ವಜೀರಾನಾರು………………ಇದ್ದರು ಬೇಡ | ಎದ್ದರು ನೇಮಿ ಮಂತ್ರಿಗಿ |
ಸ್ವರ್ಗಕೊಪ್ಪದ ಮೂಳಿ ಮಾತಂಗಿ ಒಬ್ಬಳು ಉಳಿದು | ಚಿತ್ರಮಾಡಿ ದಂಡ ನೆಲಕೆ     || ೨೧೫ ||

ರಾಮನ ಕುತ್ತಿಗೆ ಭೂಮಿ ನಡುಗೋದು ಪಾಶ್ಚ | ಮಾನವರ ಮಾತು ಇರಲತ್ತ |
ಈ ಪರಿಯೊಳು ಕಡೆಗೆ ಲಯವಾದವೆನ್ನುತ ಕಹಳೆ | ರಾಯ ಸುರಿತಾಳ ಕಲಿ ಬೀರ    || ೨೧೬ ||

ದಂಡೆಲ್ಲ ಮೃತವಾಗೆ ಮುಂಡೆ ಮಾತಂಗಿ ನಮ | ಗಂಜಿ ನುಗ್ಗಿದಳು ಇದಿರಾಗಿ
ಕಂಡೆಯವ ಜಾಡಿಸಿ ತೆಗೆದು ಒಡೆಯುತಿರ್ದನು ಅವಳ | ಭಂಡ ಮೂಳಿಯು ಮಲೆಯ ತೋರೆ || ೨೧೭ ||

ರಣವಿಜಯನಾದವನು ರಂಡೆಯ ಕಡಿಯುವನೆ | ಚಂದ್ರ ಸೂರ್ಯರಿರಲು ಅಪಕೀರ್ತಿ |
ಬಂದವಗೆ ಸುಜ್ಞಾನ ಬಿಟ್ಟು ಇಮ್ಮತವಾಗೆ | ಅಂಬ ಸೇದಿದಳು ಮುನ್ನೂರ             || ೨೧೮ ||

ಪಡೆದ ಲಿಖಿತವು ಮೀರಿ ಅಳಿದನಲ್ಲದೆ ರಾಯ | ಮಡಿಕೆ ಮೂಳಿಗೆ ಬೇರೆ ಸಾಯ |
ತಿಳಿಯಬಾರದೆ ಸ್ತ್ರೀಯ ಕಡಿಯದೆ ತಲೆಗೊಟ್ಟ | ಕಡಿಯೆ ಮಾತಂಗಿ ದೊ[ಡ್ಡಿ]ತಲ್ಲ     || ೨೧೯ ||

ಬಾದುರನೇನಾದ ರಾಮನ ಮಾತಿರಲಿ | ಊರೇನಾಯಿತು ಕುಮ್ಮಟವು |
ರಾವಣನ ಲೆಂಕಿಗೆ ಮಿಗಿಲಾಗಿ ರಾಜಿಸುವುದು | ಗೋರಿ ಬೀಡುವದೊಕಾರಪವು       || ೨೨೦

ಬಾದುರನ ತರುವುದಕೆ ನೀವೆ ನಡೆಯಲು ಕಾಣೆ | ನಿಮ್ಮಂಥರು ಮುಳುಗಿದ ಬಳಿಕ |
ಆರೆರಡು ಲಕ್ಷಗಳ ಗೋರಿ ಸಾಲದು ಎಂದು | ವೀರ ಕುಮ್ಮಟವು ಕುಣಿಯುವುದು      || ೨೨೧ ||

ಬೆನ್ನ ಬಿದ್ದಿವಗಾಗಿ ತನ್ನ ಪ್ರಾಣವನಿತ್ತ | ಧರ್ಮಾತ್ಮ ಅವನು ಹರಿಶ್ಚಂದ್ರ |
ತಾ ಸಾಯೆ ಘನವಲ್ಲ ಅಭಿಮಾನ ಕೊಂದುದು | ನೀವು ತಿಳಿಯದೆ ಅವನು [ಅಡ]ಗಿದನು      || ೨೨೨ ||

ಮಗಳು ಬಿಬ್ಬಿಯ ಸಹ ಒಡಗೊಂಡು ಸುರಿತಾಳ | ಸದರಿನೊಳಗೆ ಬಂದು ಕುಳಿತು |
ಕಳೆ ಕಾಂತಿಯಿಂದೆಸೆವ ತಲೆಯನು ಕಂಡು ಸುರಿತಾಳ | ಕೊಲಬಹುದೆ ಇಂಥ ಚೆಲುವನ     || ೨೨೩ ||

ತಲೆಯ ಕಾಣುತ ಬಿಬ್ಬಿ ಜಲವೊರತು ನಯನದಿ | ಪಿಡಿದಳು ಗಲ್ಲ ಬಮ್ಮವನು |
ಉಳಿದೊಮ್ಮೆ ಬಂದಿರಲು ಕುಲಗೆಡಲು ಮುಡಿಪಾಗಿ | ಅರಸ ಮಾಡಿಸುವೆ ಡಿಳ್ಳಿಗೆ     || ೨೨೪ ||

ಕೈಸೆರೆಯ ಪಿಡಿ ತರದೆ ಕೊಂದರೆ ಪಾಪಿಗಳು | ಹಿಂದಣ ಹಗೆಯೆ ಮಹವಾಗಿ |
ಕಂದರ್ಪ ಬಾಣನ ಕಲೆ ಹೆಚ್ಚೆ ಬಿಬ್ಬಿಗೆ | ಮಂಡೆಯ ಬಿಗಿಯಪ್ಪುವಳು                   || ೨೨೫ ||

ಬಿಡು ಮಗಳೆ ಅಪಕೀರ್ತಿ ಮೂರು ಕಾಲ ಮಾನವರಲ್ಲಿ | ಕಡೆಗಂಡನುವಂತೆ ಎಡಲ |
ಒಡಗೊಂಡು ಬರುವಾಗ ನುಡಿಯೆ ಚರರಿಗೆ ರಾಯ | ತಲೆಯ ಅಗ್ನಿಯ ಕಾಣಿಸೆಂದ   || ೨೨೬ ||

ಕಿಚ್ಚಿಗೆ ಹೊಯ್ವರೆ ಹತ್ತೆಂಟು ಚರರ ಬಂದು ಕಿತ್ತರೆ ಮಲಕದೆ ಬರಲು |
ಸಿಟ್ಟೆಲ್ಲ ಬರಲಾಗ ಮತ್ತೆ ಸಾವಿರ ಮಂದಿ | ಕಿತ್ತರೆ ನಗುತ ಗರ್ಜಿಸಲು                 || ೨೨೭ ||

ರಣಭೂತ ಬಂದಿಹುದು ಬೆದರಿ ಓಡುತ ಬಿದ್ದು | ಅಳಿದರು ಹಲ ಕೆಲ ಜನರು |
ಅಗ್ನಿ ಕೂಡಲು ನಿಮ್ಮ ಬಿಬ್ಬಿ ಹಾದರ ಉಂಟೆ | ಬೊಬ್ಬೆಲಿ ಕೊಲುವೆ ಡಿಳ್ಳಿಯನು        || ೨೨೮ ||

ಗದ್ದಲಿಸಿ ಕಾಕೊಡೆಯೆ ಬೆದರಿ ಓಡ್ವರು ಬಿದ್ದು ಎದ್ದರು ಹಲ ಕೆಲವು ಅಳಿದು |
ಹೋಯೆಂದು ಕೂಗಲು ಕೋಟಿ ಸಿಡಿಲಿನ ಭರದಿ | ಕೇಳುತಲೆ ಮೃತವನೈದಿದರು     || ೨೨೯ ||

ಸಾಲದೆ ಕುಮ್ಮಟದಿ ಕೋಟಿ ಖಾನರ ತಿಂದು ಹಾಳೊಡಲು ತುಂಬದೆ ಬಂತು |
ಒಂದಿರುಳು ರಾತ್ರಿಗೆ ಹನ್ನೆರಡು ಸಾವಿರ ತಿಂದು | ಮತ್ತೊಂದು ರಾತ್ರಿಗೆ ಡಿಳ್ಳಿಯನು  || ೨೩೦ ||

ಪಟ್ಟವ ತಿಂಬುವದು ಪಾಪಿ ತರುವರೆಯೆಂದು | ಕೊಟ್ಟ ರಾ[ಯ]ಗೆ ಸುದ್ಧಿ |
ಕರಿಘಟಿಗಳಿಂದಲಿ ತುಳಿಸಿ ಹಾಕು[ವೆ]ನೆಂದು | ಸುರಿತಾಳ ಉರಿದೆದ್ದು ಪೇಳೆ        || ೨೩೧ ||

ಏಳುಕೋಟಿ ಆನೆಗಳ ಒತ್ತಿಕೊಳುತಲಿ ಬರಲು | ರಾಮ ನಗುತ್ತಿರಲು ಪಕಪಕನೆ |
ಕುಂಜರಕೆ ವೈರ್ಯಾದ ಭೇರುಂಡನೈದಾನೆ ಬನ್ನಿ | ತುಂಬುವುದು ವಿಧಿವಾಸ ನಿಮಗೆ         || ೨೩೨ ||

ಮುಂಗಾರ ಸಿಡಿಲಂತೆ ಆರ್ಭಟಿಸಿ ಬೊಬ್ಬೆಯ ಕೊಡಲು | ಒಂದು ಯೋಜನೆ ಓಡಿದವೊ |
ರಾಮನು ಕಂಡನು ಓಡಿದ ಮದಕರಿಯ | ಸಾವ ಕಾಲವು ಬಂತು ನಮಗೆ             || ೨೩೩ ||

ಮಾರಿಯ ತಂದು ಮನೆ ಹೊಗಿಸಿದ ಬಗೆಯೊಳು | ಬೊಬ್ಬಿಟ್ಟು ಕೊಲ್ಲುವ ಪಾಪಿ |
ಹಸ್ತಿಕಾಯದ ಇದಿರೆ ಹುಚ್ಚಾಗ ಬೇಡಯ್ಯ | ಸುರಿತಾಳನೋಲೆಯ ಬರೆದು ಅವನ ಬಂಟನ ಕರದೊಳು ಕಳುಹೆ   || ೨೩೪ ||[1]

ವಾಲೆ ಕಾಗದ ಬರೆದು ಸೇರಲು ದಿನ ಎಂಟ | ರೊಳಗೆ ರಾಜೇಂದ್ರ ಕಂಪಿಲಗೆ |
ಕೂಡುವಲಾಸವನ ಶೀಘ್ರದಿ ಬಂಟನ ಕಳುಹಿ |                                                  || ೨೩೫ ||

ಬಾಲನ ತಲೆಯನು ಸಾಗಿಸಿಕೊಡುವೆನು | ಮುಖನೋಡಿ ಪಡೆದವರು ಗತಿಮಾಡಿ    || ೨೩೬ ||

ಬಂಟರ [ಮ]ಲ್ಲಗೆ ಕೊಟ್ಟು ಉಡುಗೊರೆಯನು | ಪುತ್ರನ ತಲೆಯ ತಾರೆನಲು
ಹತ್ತೆಂಟು ದಿವಸಕ್ಕೆ ಹೊಕ್ಕು ಡಿಳ್ಳಿಯ ಪುರವ | ಸೃಷ್ಟಿಪತಿಗೆ ಕರವ ಮುಗಿದು          || ೨೩೭ ||

ಕಾಣುತ ಬಂಟನ ಸುರಿತಾಳ ಪಾಶ್ಚ | ಶಾಲು ಸಕಲಾತಿಯು ಕೊಟ್ಟ |
ನಾಳಿನ ಮುಂಜಾನೆ ನಿಮ್ಮ ರಾಯನ ತಲೆಯ | ಸಾಗಿಸಿ ಒಯ್ಯೆ ಕೊಡುವುದು        || ೨೩೮ ||

ಬುದ್ಧಿ ಎನ್ನುತಲಿ ಬಂಟ ಎದ್ದು [ತಾ] ನೋಡಿ | ಮಬ್ಬಿಗೆ ಸೂರ್ಯನು ತಾಯ |
ಗರ್ಭವ ಪೋಗಲು………………………. | ನಿದ್ರೆ ಮಾಡುವ ಬಂಟನನು               || ೨೩೯ ||

ತಲೆ ಬಂದು ಸ್ವಪ್ನದಿ ಎ[ಡೆ]ಯೊಳು ಕುಳಿತಂತೆ | ಸಕಲಾತಿದೊಟ್ಟು ಭಯದೊಳಗೆ |
ತಪ್ಪು [ತಡಿ] ಹೊಗಳಲು ಬಡಿದು ಹಾಕುವೆ ನಿನ್ನ | [ಶಕ್ತಿ] ಯಿಲ್ಲದಿರಲು ನಡೆಯೆನಲು || ೨೪೦ ||

ರಾಯ ಸುರಿತಾಳನ ಚಾವಡಿಗೆ ಕರೆತರಿಸಿ | ಪೇಳಲು ಬಿರಿದೆತ್ತೆ ಬರುವೆ |
ತೋರಲು ಭಯ ಪೋಗು ಹಾಳು ಮಾಡುವೆ ನಾನು | ಮೂರಾರು ದಿನದೊಳು ಡಿಳ್ಳಿ || ೨೪೧ ||

ಎದೆಗೆಟ್ಟು ಎಚ್ಚತ್ತು ಪರಿದೋಡಿ ಬಂಟನು | ವಿವರವ ಪೇಳೆ ಸುರಿತಾಳಗೆ |
ಕಿರಿಮುಖ ಮನಸಾಗಿ ಹಳವಾಗಿ ಹೋದರೆ ಸಾಕು ಬರುವೆನೆನುತ ಸದರ ಅಡರೆ     || ೨೪೨ ||

ಆರು ರಾಯರ ಗಂಡ ಮೂರು ರಾಯರ ಮಿಂಡ | ಪಾಳ್ಯೆಗಾರರಿಗೆ ಎದೆಶೂಲ |
ಧುರಧೀರ ಮಾರ್ತಂಡ ಭಲರೆ ಚಾಂಗುಲ ರಾಮ | ಎನಲಾಗ ಕಿಲಿಕಿಲಿ ನಗಲು       || ೨೪೩ ||

ಕಾಯವಿರಲು ಡಿಳ್ಳಿ ಆ[ಳ]ಬೇಕೆನುತಿರ್ದೆ | ಮೀರಿತು ಮುಂಚಲು ಮರಣ |
ಅಳಿದರೆ ಬಿಡಲಿಲ್ಲ ಲಯವಾದರು ದಿನ ಎಂಟು | ಭೂಮಿ ಆರ್ಭಟಿಸೆದ್ದು ಬರಲು       || ೨೪೪ ||

ಡಿಳ್ಳಿಯ ಹೊರಟನು ಮತ್ತಲ್ಲಿ ಬಂಟರ ಮಲ್ಲ | ನಿಲ್ಲದೆ ನಡೆವ ದಾರಿಯಲಿ |
ಅಲ್ಲೊಂದು ವಿಶಾಲ ಸ್ಥಳಕೆ ಹೋಗಲು ತಲೆಯ | ನೆಲದಲ್ಲಿಡಲು [ಎ]ಡೆಯ ಬಿಟ್ಟ     || ೨೪೫ ||

ಮರನೇರಿಕೊಂಡಿರಲು ಮರಳಿ ಬಂಟನು ಬಂದು | ಕರೆಯಲು ಮದೊಳ್ಳೆ ಎನಲು |
ಅಡಗಲಿಲ್ಲವೆ [ಜಿ]ದ್ದ ಎನಲು ವಾಕ್ಯವ ನಿಂತು | ನಡೆದಾನ ಕಳೆದು ತಾನತ್ತ           || ೨೪೬ ||

ಬಂಟನ ಶಾಪದಲಿ ವಚನ ವಾಕ್ಯವು ಅಡಗಿ | ಹೊಕ್ಕನು ತಲೆಗೊಂಡು ಗುಡಿಯ |
ಇಟ್ಟು ಜಟ್ಟಂಗಿಯ ರಾಮನ [ದೇ]ವಾಲ್ಯದಲಿ | ಅಷ್ಟವಿಧಾರ್ಚನೆ ಮಾಡಿದನು        || ೨೪೭ ||

ಖಾನರೆಲ್ಲರು ಬಂದು ಕರಮುಗಿದು ಜಟ್ಟಂಗಿ | ಪೂಜೆಯ ಮಾಡಿ ಶೋಕದಲಿ |
ಏನಮ್ಮ ಮಾತಂಗಿ ಹೋಗುವ ಡಿಳ್ಳಿಗೆ | ವಾಲೆ ಬಂದಿತ್ತೀಗೆನಲು                     || ೨೪೮ ||

ಕೃತಯುಗದಿ ರೇಣುಕಿ ತ್ರೇತಾರದೊಳು ಬಂದು | ರಘುನಾಥನ ಕಡಿ ತಾಟಕಿಯು |
ದ್ವಾಪರದೊಳು ದ್ರೌಪತಿಯಾಗಿ ಜನಿಸಿದೆ | ಈ ಕಲಿಗೆ ರತ್ನಾಜಿಯಾಗೆ                || ೨೪೯ ||

ಮಾಡಿದ ಕರ್ಮಕ್ಕೆ ಮಂಡೆ ಹೊಡೆದನು ಎನ್ನ | ರಾಮ ಬಿಡಲಿಲ್ಲ ಸತ್ಯವನು |
ಪ್ರಾಣ ಉಳಿಯಲು ಬಿಡದೆ ತಾಯೆಂದು [ಭಾ]ವಿಸಿದ | ನಾನವನ ಕೊಂದು ಇರಸಲ್ಲ  || ೨೫೦ ||

ಬಾಲನ ಒತ್ತಿಲಿ ನಾನಿರುವೆ ಮಾತಂಗಿ | ದೇವಿ ಎಂದೆನಿಸಿ ಹೊರಕುಲದಿ |
ಖಾನರಿಗೆ ಕರಮುಗಿದು ಕೊಂಡದೊಳಗೆ ಮುಳುಗಿ | ಕಾಯ…….ಳಿಗೆ ನಡೆವೆ         || ೨೫೧ ||

ತಾಯಿ ತಂದೆಗಳೆಲ್ಲ ಊರವರು ಸಹ ಭೇರಿ | ಕಹಳೆಯ ವಾದ್ಯದಲಿ ಆರತಿಯ
ಪರಿಯ ಕಾಯಿ ಕದಳಿ ಫಲದಿ………… | ಹೀರಾ…………. ಬರಲು                    || ೨೫೨ ||

ಹರಿಹರದೇವಿಯ ತರಳನ ಮುಖ ನೋಡಿ | [ಕು]ಲಕೆಲ್ಲ ದೇವರಾಗೆಂದು |
ಕರ ಮುಗಿದು ದೊರೆಯು ಕಂಪಿಲ ಮಂತ್ರಿ | ಧುರಧೀರ ರ…….ಯರರ               || ೨೫೩ ||

ಹುಟ್ಟು ಬಂಜೆರಿಗೆಲ್ಲ ಮಕ್ಕಳಿತ್ತು ದೃಷ್ಟದೊಳಗೆ | ಪೂಜೆ ಕೊಳ್ಳೆ ಸತ್ಯದಿ |
ನಡದಾನೆ ಮಾತಾಡುತ್ತ ಹೆತ್ತ ಮಕ್ಕಳ ಹೆಸರು | …………………………                || ೨೫೪ ||

ನಾಡೊಳಗಿರುವಂಥ ಬೇಡರ ಕುಲ ಬಂದು | ………..ರೆ ಜಾತ್ರೆ ನಡೆಸಿ |
ಬೇಡಿದ ವರಗಳನು ಕೊಡುವ ರಾಮನು | ತಾನು ಎನಿಸಿ ಮೆರೆವ                     || ೨೫೫ ||

ರಾಮಯ್ಯ ತಾ ದೇವರೆನ್ನಿಸಿಕೊಂಡು | ಪೂಜೆಗೊಳ್ಳುತ ನಿರುತದಿ |
ರಾಯ ಕಂಪಿಲ ತನ್ನ ಮೊಮ್ಮಗನ………. | ……….ಳುವ ರಾಜ್ಯ ಸುಖದೊಳಗೆ      || ೨೫೬ ||

ರಾಮನ [ಕಥೆಯನ್ನು] ಕೇಳಿದ ಜನಕೆಲ್ಲ | ಭೂಮಿದಾನವನಿತ್ತ…….ನೆಂದ
ಪರಿಪೂರ್ಣ ಹರನ ಕೃಪೆಯೊಳು | [ಭೃಂ]ಗಿ ಒಲುಮೆಯಲಿ                            || ೧೫೭ ||

ಹರ ಹರ ಶಿ[ವ ಹರಿ] ಬ್ರಹ್ಮರಿಗೆಲ್ಲ ಜಯ | ಜಯವೆ ಹರಿಸೂದೆ ಭವರೋಗ |
ಉಪಯೋಗ ವಸ್ತುಕವ ಧರಿಸುವೆ | ………………. ನಡೆಸಿ ಕೈಲಾಸಕ್ಕೆ               || ೨೫೮ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನು ಈ ಡಿಳ್ಳಿಯಿಂದಲಿ ಬಂದು | ಸತ್ಯದಿ ಕೈವಲ್ಯಕೆ ನಡೆಯೆ             || ೨೫೯ ||[2]

[1] ೨೩೪, ೨೩೫, ೨೩೬ ಈ ಮೂರು ಪದ್ಯಗಳು ಸೇರಿಕೊಂಡಂತಿದೆ (ಸಂ)

[2] + ಅಂತು ಸಂಧಿ ೧೯ಕ್ಕಂ [>೨೦ಕ್ಕಂ] ಪದನು ೪೨೮೩ಕ್ಕಂ ಮಂಗಳ ಮಹಾಶ್ರೀ. [ತ]ಪ್ಪಂ ಬರೆದಾತನೆಂದು ಬೈಯಲು ಬೇಡ ತಪ್ಪಕ್ಕು ಶುದ್ಧಮಕ್ಕಂ | ತಪ್ಪುಳ್ಳೊಡೆ ತಿದ್ದಿಕೊಂಬುದು ಉತ್ತಮ ಪುರುಷರು || ೨೬೦ || ಬಾಲಕೊಮಾ[ರ] ರಾಮನ ಸಾಂಗತ್ಯ ಶುಕ್ರೋರ ಅಮೃತಗಳಿಗೆ ಮಧ್ಯಾಹ್ನ ಮುಹೂರ್ತ ಮಂಗಳವು | ಲೀಲೆಯಿಂದಲಿ ಬರೆದ ಚೀಲನಹಳ್ಳಿಯ ಮರುಳಸಿದ್ದಪ್ಪನ ಮಗನು || ೨೬೧ || ರುಧಿರೋದ್ಗಾರಿ ಸಂವತ್ಸರದಲ್ಲಿ ಮಾರ್ಗಶಿರ ಬಹುಳ ಐದರಲು | ಬುದ್ಧಿ ಮರಿದೇವರು ಪ್ರಿಯೋಕ್ತಿಯಿಂದಲಿ ದೊಡ್ಡ ತಿಮ್ಮಣ್ಣಗೆ ಬರಕೊಟ್ಟನು || ೨೬೨ || (ಮೂ).