ಶ್ರೀ ಗುರುವೆ ವರಶಂಭು ಭಾಗೀರಥೀಶನೆ | ಭೋಗಿಭೂಷಣ ಭಾಳನೇತ್ರ |
ಆಗಮದೊಡೆಯನೆ ಮೂಜಗವ ರಕ್ಷಿಪನೆ | ನಾಗಭೂಷಣ ನಂದಿಕೇಶ                || ೧ ||

ನಂದಿವಾಹನ ಜಯ ಭೃಂಗಿನಾಥನೆ ಜಯತು | ಕಂದರ್ಪಮರ್ದನ ಜಯತು |
ಚಂದ್ರಶೇಖರ ಜಯತು ಮುಕುಂದಪ್ರಿಯನೆ ಜಯತು ವಾರ | ಣೇಂದ್ರನ ಪಿತನೆ ಜಯ ಜಯತು        || ೨ ||

ಕಾಯವೆ ಮೂರು ಕಾಲಾರು ಮಸ್ತಕ ನವ | ಬಾಯಿ ಒಂಬತ್ತು ಬಾಲವೆರಡು |
ಕರಗಳು ನಾಲ್ಕು ಕಂಗಳು ರವೆ ಹದಿನೆಂಟಕ್ಕೆ | ಮೈಯಿಕ್ಕಿ ಮುನ್ನ ಎರಗುವೆನು      || ೩ ||

ರಾಮನ ಆಳಿಕೆ ತಾರಿಕೆ ಫಲಸಾರ | ಲಾಲಿಸಿ ಲಲಿತ ಯೋಗಿಗಳು |
ಶ್ರೀ ಗುರುವಿನ ಕಲ್ಪನೆ ತೀರಬರ ಗಳಿಗೆ | ನೀರ ಕುಡಿಯಲು ಅವಕಾಶ                || ೪ ||

ಭೇದಗಾಣದೆ ಜನರು ಆಡುವರು ಲೋಕದಿ | ಹೋದನು ಹೆಣ್ಣಿಂದ ಅಳಿದು |
ಆದಿಯಲಿ ಅವಳ[ಇ]ವನು ಹೊಡೆದಿರಲು ಮಾತಂಗಿ | ರಾಮನ ತಲೆಯ [ಕೊ]ಯಿಸುವಳು   || ೫ ||

ಕೊಂದಲ್ಲದೆ ಕೊಲೆಗಳು ಎಂದಿಗೆ ತಪ್ಪದು | ಬಂದರೇಳೇಳು ಜನ್ಮದಲಿ |
ಅಂದಿಗೆ ರೇಣುಕಿಯ ಪರಶುರಾಮನು ಕೊಂದ | ಇಂದಿಗೆ ರಾಮನ ಕೊಲಿಸುವಳು    || ೬ ||

ಖಾನರ ಕೋಳಾಹಳ ನೋಡುವರಳವಲ್ಲ | ಭೂಮಿ ಆರ್ಭಟಿಸುತ್ತಲಿಹರು |
ನೋಡಿದ ರಣರಾಮ ಹೊರಕೋಟೆ [ಒ]ಳಹೊಕ್ಕು | ಜೇನಿನಂದದಲಿ ಕವಿದಿರಲು     || ೭ ||

ನಡೆಯಲು ಸಿಡಿಲಂತೆ ನುಡಿಯಲು ಪಲ್ಲಿಯು | ಬಲಕೆ ಹಾರಲು ಕ್ಷೇಮಕಾರಿ |
ಒಡನೆ ಕಾಣುತ ರಾಮ ಹೊಡೆದು ನಗುತಲಿರೆ | ತಿಳಿದು ಹೋಗುವೆ ಮರಣ ಸ್ಥಿತಿಯ || ೮ ||

ತೆಗೆಯೆನಲು ಬಾಗಿಲ ಹಿಡಿಯೆ ಬಿರಿದ ಕಹಳೆಯ | ರಣವಿಜಯ ಬರುವನೆಂದೊದರೆ |
ಕಡಿಕಡಿ ತುರಕರ ಪಡೆಯೆಂದು ಹೊರಡಲು | ಕುರಿಹಿಂಡು ಬೆದರಿದಂತಾಗೆ           || ೯ ||

ಯಾತಕೆ ಹೋ[ಗುವಿರಿ] ರಣಭೂತ ಬರುವುದೆಂದು | ಕೈಬೀಸಿ ಖಾನರು ಕರೆವುತಲಿ |
ಭೀತಿಗೊಳ್ಳುತ ಅವರು ಬಿಟ್ಟು ಮುತ್ತಿಗೆಯನು | ಏಕ ಬಯಲಾಗಿ ಓಡುವರು           || ೧೦ ||

ಬರುವನು ಬಾಯಾರಿ ಹಿಡಿಂಬ ರಾಕ್ಷಸನಂತೆ | ಬಿಡು ನಿಮ್ಮ ಕೋಟೆಯನು ಸುಡಲು |
ಕಡಿವನು ಕದಳಿಯ ಕುರಿಗೆ ತೋಳು ಬಂದಂತೆ | ಇದಿರಿಗೆ ನಿಲಬೇಡ ಖಲಭಾಯಿ    || ೧೧ ||

ಊರಿನ ಎಡ ಬ[ಲಗ]ಳಿಗೆ ನಿಲ್ಲದೆ ಪೌಜು | ಕೂಡಿತು ಮುಂದೆ ಜಮೆಯಾಗಿ |
ಬಾರಮ್ಮ ಮಾತಂಗಿ ಬಂದ ನಿನ್ನಯ ವೈರಿ | ತೋರಳೆ ರಂಡೆ ಛಲಪದವ            || ೧೨ ||

ವೀರ ಕಂಕಣ ಕಟ್ಟಿ ಹಮ್ಮೀರ ಮಾನ್ಯರು ಹೊರದೆ | ಸಾವಿರ ತಲೆ ನಿನಗೊ ನನಗೊ |
ಹಾರಿ ಪವುಜಗಳು ಹಗಲ ಪಂಜಿನ ಮಂದಿ | ಮೂರೈದು ಸಾವಿರ ಕೂಡಿ              || ೧೩ ||

ನಾಳೆ ಸಾವರ ಮಿಂಡ ಉಳದೆನೆಂಬರ ಮಿಂಡ | ಸಾರಿ ಹೊಗಳುತ ಭಟರು ಅಲ್ಲಿ |
ಮಾರಿಕೋಣಗಳಂತೆ ಮುದ್ದ ಹಂಪನು ಹೊಕ್ಕ | ರಾಯ ರಾಮನ ಅಡಿಗೆರಗಿ         || ೧೪ ||

ಹಾಕಿದ ಮುತ್ತಿಗೆಯ ತೆಗೆದು ಓಡ್ವನ ಮಿಂಡ | ಹೊಡೆಯವಳ ಮೇಲೊಂದು ಕಾಕ |
ಬಡವ ರಂಗನು ಲಿಂಗ ಬಸವ ಜಂಗಮ ಹೊರಟು | ಒಡೆಯ ರಾಮಯಗೆ ಕೈಮುಗಿದು        || ೧೫ ||

ಮುಂಡೆ ಮಾತಂಗಿಯ ಮರೆಮಾಡಿ ಜಗಳಕೆ ಬಂದ | ಹೆಂಬೇಡಿ ಖಾನರ ಗಂಡ |
ಗಂಡಿನೊಳಭಯ ಎಮಗೆ ಪಾಲಿಸು ಭೂಪ | ಸಂಗಯ್ಯ ಬಾದುರ ಎರಗೆ              || ೧೬ ||

ಜೀವ್ಗಳ್ಳರಂತೆ ಬಾಳ್ವೆನೆಂಬರ ಮಿಂಡ | ವೀರ ರಾಮಯ್ಯ ಉಪ್ಪುಂಡ |
ಆರು ಸಾವಿರ ತುರಗ ಇನ್ನೊಬ್ಬಗೆ ಬಿಡುಯೆಂದು | ವೀರ ಬಂದನು ಲೆಂಕ ಹನುಮ   || ೧೭ ||

ಮನೆಯ ಹಂಬಲ ಮಾಡಿ ಮಡದೇರ ನೆನೆಕೊಂಡು | ಹಿಂದಿರುಗಿ ನೋಡುವರ ಮಿಂಡ |
ಕೊಡಲಿ ಭರ್ಚಿಯ ಕಡಿಯೆ ಹನುಮ ನಾಯ್ಕರು ಬಂದು | ದೊರೆ ರಾಮನಡಿಗೆರಗಿದರು        || ೧೮ ||

ಕರೆಯದೆ ಬರಲಾಗ ಕಾಯ್ಕದ ಚೆನ್ನಮಲ್ಲ | ಸುರಿತಾಳನ ತಲೆ ಮೇಲೆ ಕತ್ತಿ |
ಬಿಡು ಮೂಳ ಖಾನರನು ಮಾತಂಗಿಯೆಂಬಳ ತೋರಿ | ಹೊಡೆವೆನು ಕೊಚ್ಚಿ ತಲೆಬುಡಕೆ      || ೧೯ ||

ಬಡಬದ ಹಣ್ಣಿಗೆ ಕಡೆಯೆ ಬಾಳೆಯಹಣ್ಣಿನ ಸಿಪ್ಪೆ | ಕಡಿಯದಿರಲು ತಂತ್ರದೊಳಗೆ |
ಸುಡುವೆನು ದಂಡನು ಶಕ್ತಿ ಯುಕ್ತಿಯ ಮಾಡಿ | ನಡೆಯಲು ಪಂಚಾನ ಗಂಗ          || ೨೦ ||

ಕತ್ತಿ ಖಂಡ್ಯಕೆ ಮುನ್ನ ಸೃಷ್ಟಿಕರ್ತನು ನಾನು ಕತ್ತಿ ಹಿಡಿವವನು ಕುಮಾರ |
ಬಕ್ಷಗೋಲಲಿ ಹೊಡವ ಲಕ್ಷ ದಂಡನು ಎಂದು | ಮತ್ತೆ ಚಿಕ್ಕಣ್ಣನು ಬರಲು              || ೨೧ ||

ಪೂರಾ ಎಲ್ಲರ ಒಗೆವೆ ಖಾನರಿಗೆ ಬೆದರುವೆನೆ | ಮಾಣಿಕ ಜಟ್ಟಿ ಬಡಿದಂತೆ |
ಗ್ಯಾರೆ ಹಿಡಿದು ಒಗೆವೆ ಮುನ್ನೂರು ಖಾನರನೆಂದ | ಮೀರಿದ ಮಡಿವಾಳ ಮಾಚ      || ೨೨ ||

ಮಂದರಗಿರಿಯಂತೆ ಮೋಸ ಕೂರ್ಮನ ತೆಗೆವೆ | ಬಂಧಿಸಿ ಬಲೆಗಳ ಬಿಡಿಸಿ |
ಹೆಂಬೇಡಿ ಖಾನರಿಗೆ ಹೆದರಬಲ್ಲೆನೆ ಎಂದು | ಗಂಗೆಯ ಮಗ ನಾಗ ಬರಲು           || ೨೩ ||

ಅಂಬು ಸಿಂಗಾಡಿಯ ಹೆಂಬೇಡಿ ಪಡಿಯಲು ಬೇಕು | ಕೈ ಅಂಬಲಿ ಅರಿವೆ ನೂರೆಂಟು |
ಮುಂಗಾರ ಸಿಡಿಲಂತೆ ಮರಜೆಟ್ಟಿ ಬಂದಾಗ | ರಾಮೇಂದ್ರಗೆ ಕರಗಳ ಮುಗಿಯೆ      || ೨೪ ||

ಕಂಡೇನೆ ಮಾತಂಗಿ ಕಲಿಪಾರ್ಥ ಭೀಮನ ತೆರದಿ | ಬಂದು ನಿಂದರು ಕುಮಾರಕರು |
ಹೊಂದಿ ಎಡಬಲದೊಳು ಏಳ್ನೂರು ಇಪ್ಪತ್ತು | ನಿಂದ ಮಾನ್ಯರ ನೋಡು ಬಿಡುವೆ    || ೨೫ ||

ಹಳದಿ ಹಸಿರು ಪಟ್ಟಿ ಬಿಳಿದು ಕೆಂಪಿನ ಮೇಲೆ | ಎಳೆಗಾವಿ ಚಂದ್ರ ಸೂರ್ಯ ಪಟವ |
ಹಿಂದೆ ಸತ್ತಿಗೆ ನೋಡೆ ಹಿರಿದು ದೇವೇಂದ್ರನ | ಸಭೆಯೊಳಗುಂಟೆ ಈ ದಸ್ತು           || ೨೬ ||

ರಾಯ ರಾಮನ ಪವುಜು ಮಹರ್ನವಮಿ ಬಯಲೊಳು ನಿಲ್ಲೆ | ಖಾನಖಾನರು ಶಿರದೂಗೆ |
ಏನಂತೆ ಶಿವಬಲ್ಲ ತ್ರಾಣವಾಡಿದೆ ರಂಡೆ | ರಾಮನಲ್ಲವನು ಘಟಪುತ್ರ                 || ೨೭ ||

ಆನೆ ಮಸಗಲು ಅಶ್ವ ನಿಲುವ ಸ[ಲ್ಲ]ದೆ ಇರಿತ | ಜಾಳು ಮತ್ಯಾಕೆಂದು ಕನಲಿ |
ಗಾಲಿಖಾನರು ಘಟೆಯ ಇಬ್ರಸಾಬರು ಮಿಕ್ಕು | ವಿಲಾಲಮೀಯಗೆ ಕೋಪ ಅಡರಿ     || ೨೮ ||

ಮರಗಯಾ ತಾಡಕ್ಕು ಜಾ ಅರೆ ತುಮೆ ಜಾವು | ಮುರಿದೋಡೆ ಪಾಶ್ಚಯಗೆ ಹಿಂದೂ |
ತುಳಿಸುತ ಬರಲಾಗ ಎಂಬತ್ತು ಸಾವಿರ ಕುದುರೆ | ಸುರಿವುತ್ತ ಸೋನೆ ಮಳೆ ಅಂಬ   || ೨೯ ||

ಮುಂಗಾರು ಮಳೆ ಮೇಘ ಕಾರ್ಗುಡಿಸಿ ಬರುವಂಥ | ಲಂಭೋಜಿಖಾನರು ಮುತ್ತಿ |
ಮುಂಗೈಯ ಕಡಿಯುತ್ತ ಮೀಸೆಗಳ ಮುರಿಯುತ್ತ | ತುಂಬುರನ ಕೊಂದನು ಅಲ್ಲಿ     || ೩೦ ||

ಕೊಂದವನು ನಾನೀಗ ಮಿಂಡ ಗಾಲಿಯಖಾನ | ತುಂಡು ದೊಣ್ಣೆಯ ಮುದ್ದನರಿಯಾ |
ಚೆಂಡಿಗೆ ತೊಲಗಿಸುವೆ ಮುಂದಕ್ಕೆ ಇಡು ಹೆಜ್ಜೆ | ಹೊಂದಿಸುವೆ ತುಂಬುರನ ಬಳಿಗೆ   || ೩೧ ||

ಮರೆಮಾತ ಕುಣುಬಯ ಇಬ್ರಖಾನನು ಕಳಿಸೆ | ಏರಲು ಹಂಪ ಬಾದುರನ |
ಮಾರ್ಯಾರು ಮರೆಯಾಗೆ ಕೊಡೆ ಬಿಬ್ಬಿಯನೆಂದು | ಗೋರಿಲ್ಲಿ ಆಗುವುದು ನಾಳೆ     || ೩೨ ||

ಕಡಿಯೆನುತ ಚೆಂಡಾತಿ ತುಡುಕಿ ಲಾಲನಯೆಂದು | ಕುಡಿಸುವೆ ನೀರ ಕಾಲ್ಗೆಡಗಿ |
ಮುಳುಗಿದರೆನುತಾಗ ಮಲ್ಲಾರಂದದ ಲಿಂಗ | ಕಡಿದುಕೊಂಡ್ಹೋಗಲು ಸಾವಿರವ     || ೩೩ ||

ಮುತ್ತರು ಆರ್ಭಟಿಸಿ ಎಂಬತ್ತು ಸಾವಿರವ ತುರಗ | ಕತ್ತಿಯ ಬೆಳಕ ಮಿಂಚೆಂದು |
ಸಿಕ್ಕಿ ಹೋದರು ಸ್ವಾಮಿ ಮೊನೆಗಾರ ಬಂಟರುಯೆಂದು | ಮತ್ತೆ ಕಾಟಯ್ಯ ಕರ ಮುಗಿಯೆ      || ೩೪ ||

ಎದ್ದನು ವ್ಯಾಘ್ರನಂತೆಲ್ಲೆಂದು ರಣರಾಮ | ರುದ್ರನವತಾರದಲಿ ಎದ್ದು |
ಇಬ್ಬರು ಸವರುತ ಎಡಕೊಬ್ಬ ಬಲಕೊಬ್ಬ | ಕಬ್ಬ ಮುರಿದಂತೆ ಹೊಕ್ಕರು              || ೩೫ ||

ಕಡಿಕಡಿಯೆನುತಲಿ ಕಾಕ್ಹೊಡೆದು ಸಿಡಿಲಿನ ಭರದಿ ಸವರುತ ಸಪ್ಪೆನರಿದಂತೆ |
ಕದಳಿಯ ಉರುಳಿಸಿದಂತೆ ಹದಿನಾರು ಸಾವಿರ ಕಡಿಯೆ | ಬೆದರಿದರು ಮುತ್ತಿದ ಪೌಜು        || ೩೬ ||

ಹೊಕ್ಕರು ಆಮೇಲೆ ದಿಟ ಸಾಹಸವುಳ್ಳ | ಕೊಚ್ಚಿ ಕೊರೆಯುತಲಿ ಮನ್ನೆಯರು |
ಕಿಚ್ಚಿಡಿಯ ಒಂದಾಡಿ ಇಕ್ಕಿದರು ಬೆರಸಿ | ಕುಟ್ಟಿ ಎಳೆಯುತಲಿ ಖಾನರನು              || ೩೭ ||

ಸಿಕ್ಕಿದ ಬಾದುರ ಸಂದು ಬೀಳಲು ನೋಡಿ | ಕೊಚ್ಚುವ ಕಳಲೆಯಂದದಲಿ |
ಒಕ್ಕಲಿಗರ ಮುದ್ದ ಲಿಂಗ ಹಂಪನು ಹೊರಟು | ಕೆತ್ತಿ ಕಡಿದರು ಮುಖ ಮೋರೆ         || ೩೮ ||

ಕುದುರೆ ಹಲ್ಲಣವನು ಹಿಡಿದು ಬೇಡರ ನಾಯ್ಕ | ನೆಗೆನೆಗೆದು ಹರಿಗಡಿವವ[ನು] |
ಇವಳಲವೆ ಕೋಟೆಯ ಕೊಡುಯೆಂದು ಬಂದವಳು ಒಡಲಿಗೆ ನರಕೊಂದು ಕಡಿಯೆ   || ೩೯ ||

ತಿರುಹುತ್ತ ಬರಲಾಗ ತುರಗವ ರಣರಾಮ | ಇದುರಾದ ಬಾಲಿಯಖಾನ |
ಎದೆಯ ಅಂಬನು ಕಿತ್ತು ಹೊಡೆಯಲು ನೂರೆಂಟು | ಕಡುಗೋ[ಪಿ] ಚೆನ್ನಿಗರಾಮ ಅಡರಿ       || ೪೦ ||

ಹಚ್ಚಿಸಿ ತೇಜಿಯ ಒತ್ತಲು ಆರ್ಭಟಿಸಿ | ಮೆಟ್ಟಲು ತಯ ಪಡೆವಂತೆ |
ಒತ್ತಿನೊಳಗೆ ಇದ್ದು ಲಾಲಮೀಯನ ಹೊಡೆಯೆ | ಬಿಚ್ಚಲು ಉರಗ ಸಹವಾಗಿ          || ೪೧ ||

ಬೆದರಲು ಪೌಜೆಲ್ಲ ಮುರಿದು ಇಬ್ರಮಖಾನ | ತೆಗೆಯಲು ಉಳಿದಂಥ ತುರಗ |
ದೊರೆ ರಾಮ ಕಾಟಯ್ಯ ಮರದ ನೆರಳಿಗೆ ನಿಂದು | ಅಳಿದ ಬಂಟರನು ಕೇಳಿದನು    || ೪೨ ||

ನಲ್ಲೆ ಸಂಗಯ ಬಿದ್ದ ಬಿಲ್ಲ ರಂಗನು ಬಿದ್ದ | ಬಲ್ಲನಾಯ್ಕಗೆ ಹಸಿಗಾಯ |
ಕಲ್ಲಿಕೋಟೆಯ ಚಿಕ್ಕ ಕಡಪೆ ರಂಗನು ಸತ್ತ | ಬಳ್ಳಾರಿ ಹನುಮನು ಬದುಕೆ             || ೪೩ ||

ಮಾದಿಗರ ಹಂಪಗೆ ಮೂರು ಅಂಬಿನ ಗಾಯ | ವೀರ ಬಿದ್ದನು ಕಾಳೆ ಹೊಲೆಯ |
ಆದೀತು ಐನೂರು ಗಾಯ ಸಾ[ವೀ]ಕಡಿ | ರಾಮಭೂಪ ಲಾಲಿಪುದು                  || ೪೪ ||

ಗಾಯೊಡೆದ ಮಂದಿಯ ಊರಿಗೆ ಸಾಗಿಸಿ | ಕಾಲ ರೋಷವ ಮಾಡಿ |
ಕಾಳಿಯವನು ಬೀಳೆ ಲಯಗಾಲವಲ್ಲದೆ | ಮುಂದೆ ಏಳಿಗೆ ಕಾಣದು ಎನಗೆ            || ೪೫ ||

ನೆನೆದ ಮನದೊಳು ಹರ ಶಂಭು ಜಟ್ಟಂಗಿ | ಕಿಡಿಗಣ್ಣ ಪಡೆದ ಪರಶಿವ[ನ]
ಪಡೆದ ತರಳನು ಮಾಳ್ಪ ಕಾಳಗವನಿಂದೊಮ್ಮೆ | ದಯಕರಿಸಿ ನೋಡು ಸಾಹಸವ   || ೪೬ ||

ಭೂಮಿ ಬ್ರಹ್ಮಾಂಡದ ಆಧಾರ ಕರ್ತನೆ | ಮಾಡಿದಾತನು ನೀನು ಎನ್ನ |
ನೋಡಯ್ಯ ವಿನಯದಲಿ ಕುಮಾರ ಮಾಡುವ ಕಾರ್ಯ | ಸಾಯಲು ಮುಕ್ತಿ ಪಾಲಿಪುದು       || ೪೭ ||

ರಾಮನ ಮೃತಿಯೋಗ ಮಹದೇವಗೆ ಅರುಹಾಗೆ | ಏರಲು ಧವಳ ನಂದಿಯ |
ವಾರಿಜೋದ್ಭವ ಹರಿಯು ನಾರದನು ಭೃಂಗಿಯು | ದೇವೇಂದ್ರ ದಿಕ್ಪಾಲರೆಲ್ಲ          || ೪೮ ||

ರಾಮನು ಕೈವಲ್ಯ ಕೇರೋನಿಂದಿನ ದಿವಸ | ನೋಡುತ್ತ ಸೂರ್ಯ ಚರಿಸುವನು |
ಚಂದ್ರಧರನು ಬಂದು ಮಂಡೆಯ ಮಧ್ಯದಿ ನಿಲ್ಲೆ | ಅಂಬಿನ ಸರಳಾಗೆ ರೋಮ        || ೪೯ ||

ಗಾಲಿಖಾನನು ಮರಗಯಾ ಎಂಬುದ ಕೇಳಿ | ಖಾನರೆಲ್ಲರು ಶಿರದೂಗಿ |
ಎಲ್ಲವಳ ಹಿಡಿತನ್ನಿ ಕಳ್ಳ ಕತ್ತೆಯ ಸೂಳೆ | ಹಲ್ಲು ಕಾಣಲು ಮೂಗನರಿಯಾ            || ೫೦ ||

ಆಡಿದ ಮಾತೆಲ್ಲೆ ನಾಡ ಮಿಂಡರ ಸೂಳಿ | ಹಮ್ಮೀರನಳಿದನು ಗಾಲಿಖಾನ |
ಲಾಲಮೀಯನು ಹೋದ ನಲವತ್ತು ಸಾವಿರ ದಂಡ | ಕೂಡಿದೆವು ಯಮನ ಪಟ್ಟಣವ || ೫೧ ||

ಸಪ್ಪೆ ಮೋರೆಯ ನೇಮಿ ಹುಟ್ಟಬಹುದೆ ನೀನು | ಕತ್ತೆ ಸೂಳೆಯೆ ನೋಡು ನಮಗೆ |
ಕುಟ್ಟೇವು ತಲೆಯನು ಕೊಟ್ಟು ರಾಮಗೆ ಹೋಗಿ | ಇವರಪ್ಪನೊಡನೆ ಹೇಳಿಕೊಂಬ    || ೫೨ ||

ನೋಡುವ ಸೈರಿಸಿ ಮಾಡುವದೆಷ್ಟೊತ್ತು | ಬಾಳ ಹಗೆಯುಂಟು ಅವ ತನಗೆ |
ಮಾಡಿಸುವ ಕಾರ್ಯವ ಇವಳ ಮುಂದಕೆ ಬಿಟ್ಟೆ | ತೀರಿಸಿ ನಮಗಿಂದಲವನೆ          || ೫೩ ||

ಯುಕ್ತಿಯಲಿ ಕೊಂದ್ಹೋಗೆ ಪಾಶ್ಚಯಗೆ ಸಿಟ್ಟಿಲ್ಲ | ಸತ್ಯವೇ ನಾವು ಮಾಡುವುದು |
ತೋಟಿಗಾತಿಯು ಅಹುದು ಓಡಿ ಬಂದೆವು ಎಂಬ | ಅರ್ಥ ತೀರುವುದು ಕುಶದೊಳಗೆ  || ೫೪ ||

ಮರೆದೇಳ್ವ ಖಾನರಿಗೆ ಸೆರಗ ಉದ್ದಕೆ ಹಾಸಿ | ಕೆಡೆದಳು ಸಾಷ್ಟಾಂಗ ಅಡಿಗೆ |
ಗೆಲಿಸುವೆ ಛಲಪದವ ಹೊಗಲೇರಿ ಇನ್ನೊಮ್ಮೆ | ಅರೆ ಶಕ್ತಿಗವನ ನಿಲ್ಲಿಸುವೆ            || ೫೫ ||

ಖಾನರ ಕಲಿಮಾಡಿ ಮಾದಿಗಿತ್ತಿ ಇನ್ನಾ | ಲೀಲೆ ತೇಜಿಯನೇರಿದಳು |
ಜೋಡು ಸಿಂಗಾಡಿಯ ಸಾವಿರದ ಎದೆ ಅಂಬು | ಏರಿದೊ ರಣಕೆ ಕಲಿಯಾಗಿ          || ೫೬ ||

ಬಡ ಮನಸ ಮಾಡದೆ ಎನ್ನೊಡನೆ ದಳವ ನೂಕಿ | ಬಿಡುವೆ ರಾಮನ ಮೇಲೆ ಪ್ರಾಣ |
ಧರಣಿಗಳು ಮುನಿದಂತೆ ಕವಿಯಲು ಲಕ್ಷವು | ತುರಗ ಆರ್ಭಟಿಸಿ ಹೊಗಲೇರಿ         || ೫೭ ||

ಖಾನರ ಭೂಮಿಗೆ ಭೂಮಿಗಳು ತಲ್ಲಣಿಸಿ | ಸವೆದು ಕುಂಕುಮವಾಗೆ ಧರಣಿ |
ಅಡರಲು ಧೂಮವು ನಭದೊಳು ದಿನಕರನ | ಪ್ರಭೆ ಮುಚ್ಚೆ ತಿಮಿರವಾದಂತೆ         || ೫೮ ||

ರಾಮನ ದಂಡಿಗೆ ಜೀವ ಉಬ್ಬಸವಾಗಿ | ಸೋರುವ ಅಂಬಿನ ಮಳೆಯ |
ಮೂರು ಕಣ್ಣಯ್ಯನ ಮಗನ ಅವತಾರ ಬಂದು | ರಾಮ ಮೀಟಿದ ತೇಜಿಯನ್ನಾ       || ೫೯ ||

ಹೆಣ ತಿಂಬುವ ತೇಜಿ ಸಿಡಿಲಿನಾರ್ಭಟದೊಳು | ಕಡಿದ್ಹೋಗುತ ತುಳಿಕೊಂಡು ಬರಲು |
ಸೆಳೆಯುತಲಿ ರಾಮನು ಕದಳಿಯ ಕೊರೆದಂತೆ | ತರಗಡಿಯೆ ಮೂವತ್ತು ಬೀದಿ       || ೬೦ ||

ಕಾಟಣ್ಣ ಸಂಗಯ್ಯ ಅವರೊಂದು ಮೂತಿಯ | ಹಾಕುವರು ದನವ ಬಡಿದಂತೆ |
ಭೀಕರ ಮಡದಂತೆ ಮೊನೆಗಾರ ಲಿಂಗನು ಹಂಪ | ಹಾಕುವರು ತಲೆಹೊಡೆದಕ್ಕಟ    || ೬೧ ||

ಮಲ್ಲರಡ್ಡಿಯ ಹನುಮ ಮತ್ತಲ್ಲಿ ಬಾದುರಖಾನ | ಚೆಲ್ಲಾಡುವಂತೆ ಹಲ್ಲುಗಳು |
ಮಲ್ಲರಡ್ಡಿಯ ಹನುಮ ಮಾರಿಕೋಣನ ತೆರದಿ | ಪುಳ್ಳೆಖಾನರನು ನೂರಾರ          || ೬೨ ||

ಲೆಂಕ ಹನುಮನು ಕಪಿಯಂತೆ ಹಾರುತ ಬಂದು | ಜುಲುಪ ನೆಗೆನೆಗೆದು ಹಿಡಿಕೊಂಡು |
ವಂಕಿ ಚೂರಿಗಳಿಂದ ಒಡಲನು ಸೀಳಿದರು | ಹಲಕಾಲಾದಂತೆ ಆಗುತಲಿ             || ೬೩ ||

ರಾಮನ ಭಟರು ಈ ಬಗೆಯಲಿ ಕೊಲುತಿರೆ | ಗಾಯೊಡೆದು ಸಾಯುವರು ಸುತ್ತ |
ಸದಮದದೊಳು ಕಲಸೆ ಗುಡುಗಾಡುವಂದದಿ | ಹೊಡೆದಾಡುತಿರಲುಪಚರಿಸಿ        || ೬೪ ||

ಅಮರಂಗಿಖಾನನ ಮಗನು ಮಲ್ಲಿಕಸಾಬು | ತಗುಲಿದ ಮಲ್ಲರಡ್ಡಿಗೆ |
ಕಡಿದಾಡಿ ಲವುಡಿಯ ಎನುತಾಗ ತುಡಕಲು | ಏಳ್ನೂರು ಇಪ್ಪತ್ತು ತುರಗ             || ೬೫ ||

ರಾಮನ ಮನ್ನೆಯರ ಬರವಿಗೆ ನಿಲಲಾರದೆ | ಕೊಡಾಳಿ ನಾಯಕರು ಎದೆಗೆಡದೆ |
ನಿಲ್ಲೊ ನೇಮವಾದೆ ನೀಮಲ್ಲು ಗ್ರಾಮನಕ | ಚಲ್ಲ ಬಡಿವಂತ್ಹೊಡೆವೆ ಹಲ್ಲ              || ೬೬ ||

ಖಾನರ ಕುದುರೆಯ ಬಾಲವನು ತಿರುವಿಡುತ | ಮೇಗಳ ರಾಹುತರನೆಳೆದು |
ನೂರಾರು ಸದೆಬಡೆದು ಸಾಬುಮಲ್ಲುಖಾನನು | ಭೂಮಿಗಿಳಿವಂತೆ ಗುದ್ದಿದನು        || ೬೭ ||

ಬೆರಳು ಐದಕೆ ಸರಳ ತೆಗೆದು ಒಗೆವನು ಹತ್ತಿ | ಬಗೆಗುಂದೆ ಗಾಯದಲಿ ರಡ್ಡಿ |
ಮರಣ ತಪ್ಪದು ಎಂದು ಅರೆಗಾಯದೊಳು ಹೊಕ್ಕು | ತರಿಗಡಿದ ಮುನ್ನೂರು ತಲೆಯ         || ೬೮ ||

ಗಾಯ ಸಂಚಲವಾಗೆ ಭೀಮ ರಾಮನ ನೆನೆದು | ಸೇರಿದ ವೈಕುಂಠ ಸರಳ |
ಎಲ್ಲನಾಯ್ಕನು ತಿಮ್ಮ ಎಂಬತ್ತು ತಲೆಗಳ ಹೊಡೆದು | ಅಲ್ಲೆ ಗಾಯೊಡೆದು ಒರಗಿದನು        || ೬೯ ||

ರಡ್ಡಿ ಅಳಿದನು ಎಂಬ ಸುದ್ದಿ ಹಂಪನು ಕೇಳಿ | ನುಗ್ಗಲು ವ್ಯಾಘ್ರನ ತೆರದಿ |
ಮುದ್ದಣ್ಣ ಬಾದುರ ಲಿಂಗರಸ[ರು]ಹೊಕ್ಕು | ಕಬ್ಬು ಮುರಿವಂತೆ ತರಿಗಡಿಯೆ          || ೭೦ ||

ಬು[ಲ್ಲಹ]ಸಾಬನು ಹಿಂದಡಿಸಿ ಅವರಾಗ | ಹನ್ನೆರಡು ಸಾವಿರ ಹೊಡೆದು |
ಒಳ್ಳೆ ರಡ್ಡಿಯ ಕೊಂದ [ಆ ಸಾಬ] ನಿಲ್ಲೆನುತಲಿ | ದೊಣ್ಣಿಡಲ ಕಡಿಯಲು ಹಂಪ        || ೭೧ ||

ಯಮನ ಪಟ್ಟಣ ತುಂಬಿ ಎಂಬತ್ತು ಸಾವಿರ ಪೌಜು | ರಣರಾಮ ಮುಖವಾಗೆ ಮೂಢ |
ಇದಿರಾಗಿ ಮಾತಂಗಿ ಹದಿನಾರು ಸಾವಿರದೊಳು | ತಗಲಿದೊ ಪ್ರಾಣವ ಮೆರದೊ    || ೭೨ ||

ಮುಂಚಿಸಿ ತುರಗವ ಹದಿನೆಂಟು ಬೀದಿಯ ಕಡಿಯೆ | ತೊತ್ತು ಬಂದಳು ಇದಿರಾಗಿ |
ಎತ್ತಿದ ಖಡ್ಗವ ಇಳುಹುವ ಸಮಯದಿ | ಇತ್ತ ಕಂಡನು ಮೂಗುತಿಯ                  || ೭೩ ||

ಕಡಿಯದೆ ಬಿಡನೆಂದು ಎದೆಯ ಸೆರಗನು ತೆಗೆದು | ಕಳಸಕುಚಗಳನು ತೋರಿದಳು |
ರಣಧೀರ ನಿನ್ನಂಥ ರಾಣಿ ಕಡಿಯಲು ಮತ್ತೆ | ಬಹುದೂರ ಉಂಟು ನೋಡೆಂದು      || ೭೪ ||

ಅಂತರಿಸಿ ಆಯುಧವ ಹರಹರ ತನ್ನಯ | ಪಂಥ ಬಿರುದಿಗೆ ಹೀನ ಬಂತು |
ಭೂಕಾಂತೆ ಉಳ್ಳನಕ ಕ್ಯಾಕ್ಹೊಡೆದು ಬಾಳುವ | ಕಾಯ ಮಾತು ನಿಲ್ಲುವುದು ಮಧ್ಯದಲಿ        || ೭೫ ||

ಮಾಡಿದ ಕಾರ್ಯ ಕಲಿಯುಗಕೆ ಇದು ಹೆಚ್ಚು | ಮೂರು ಕೋಟಿಯ ಬಲವ ಕೊಂದೆ |
ತೀರುವ ಸಮಯದಿ ಸ್ತ್ರೀಯ ಕಡಿದನು ಎಂದು | ಸೂರ್ಯರುಳ್ಳನಕ ಮಾಜುವುದೆ     || ೭೬ ||

ಮದಿವ್ಯಾದಿ ಸತಿಯಳು ಮಾರ್ಗದಿ [ತಪ್ಪಿ] ನಡೆಯೆ | [ಮಾ]ಡಿದನೆ ಆಜ್ಞೆ ಮಚ್ಛೇಂದ್ರ |
ಹೋಗುತವ ಹೊಲತಿ ಕಾಶಿಯಾತ್ರೆಗೆ ಹೋದ | ಯೋಗಿಯಾದನು ಮಚ್ಛೇಂದ್ರ       || ೭೭ ||

ಭೂಮಿ ಶಕ್ತಿಯು ಬಂದು ಕುಮಾರನಿದಿರಿಲಿ ನಿಂದು | ಕೇಳಲು ಮಹಲಕ್ಷ್ಮಿಯಾಗಿ |
ಮಾಡಿದ ಆದರವ ಮನಹಾರ ಪುರುಷರು | ಕಂಡು ಪಾಲಿಪುದುಂಟೆ ಸತ್ಯೇಂದ್ರ       || ೭೮ ||

ಲಾಲಿಸುಜ್ಜನಿ ಪೊಳ[ಲ]ಲಿ ರಾಯ ರಾಮಚಂದ್ರ | ಆಳುತಿರಲು ಸಂಭ್ರಮದಿ |
ದಾರಿದ್ರನಾಗಿರಲು ಅಮರಾದಿ ಓರ್ವನು ವಿಪ್ರ | ಆಣಿಕ್ಕುವನು ದಿನಚರಿಯ           || ೭೯ ||

ರಾಯರನು ಮೆಚ್ಚಿಸುವ ತ್ರಾಣವು ಎನಗಿಲ್ಲ | ದೇವತಾ ಸ್ತುತಿಯ ಮಾಡೆ |
ಈ ವ್ಯಾಳ್ಯೆ ಹೋಗೆನಲು ಭೂಸುರನು ಶುಚಿಯಾಗಿ | ಮಹಂಕಾಳಿಯ ಸ್ತುತಿಯ ಮಾಡಿದನು  || ೮೦ ||

ಆದಿಶಕ್ತಿಯು ಮೆಚ್ಚಿ ಚೂತಫಲಗಳ ಕೊಡಲು | ಆದೀತು ಹೋಗು ಅಮರತ್ವ |
ಸ್ತ್ರೀಯಳ ಕರಕಿಡಲು ಆರು ತಿಂಗಳು ಹೋಗಿ | ಮಾವಿನೋಟೆಯನು ಸುಡಲೆಂದು   || ೮೧ ||

ಮಾವಿನ ದೃಷ್ಟವ ಪೇಳಲು ರಾಜೇಂದ್ರ | ಬ್ರಹ್ಮರು ಹೊರುವಂತೆ ಹೊನ್ನ |
ವೀಯಲು ಮ[ತ್ತವ] ಸ್ತ್ರೀಯ [ಳ] ಮಧ್ಯ | [ನೀಲಲೋಚನೆಗಿತ್ತನು]                   || ೮೨ ||

ಈ ಹಣ್ಣ ತಾ ಮೆಲ್ಲೆ ಕಾಯ ಸಿದ್ಧಿಗಳಹುದು | ರಾಣಿ ಆಳಿವಳು ತಾನು ಉಳಿಯೆ |
ಈ ಎಲ್ಲಕ್ಕೆಯೆ ಒಬ್ಬ ಸಾ[ಹ]ಣಿನ ಸ್ನೇಹವ | ಮಾಡಿ ಇರುವಳು ಮಹತಾಯಿ          || ೮೩ ||

ತಾನುಳಿಯೆ ತನ್ನಯ ಸ್ನೇಹಿ ಅಳಿವನು ಎಂದು | ಗೋವಿಗೆ ಕೊಡಲಾಗ ಅವಳು |
ಮೇವನು ಮತ್ತೋರ್ವ ಗವುಡಿ ಅವನಿಗೆ ಉಂಟು | ದಾಸಿಗಿತ್ತನು ಆ ಹಣ್ಣ             || ೮೪ ||

ಸವಿಯಲು ಸಮಯದಿ ದೊರೆಯದೆ ಮತ್ತವಳು | ಸಗಣಿಯ ಪಿಡಿವ ಸಡಗರದಿ |
ಮಡಗಿಹತಗೆಯ ಮೇಲೆ ಬರುವ ರಾಯನ ದಾರಿ | ಬರುತ ಕಂಡನು ತುರುವಿನ ಹಣ್ಣ || ೮೫ ||

ದಾಸಿಯ ಪ್ರಾರ್ಥಿಸಲು ಗೋವಿನ ತೋರಿದಳು | ಗೋವನು ಪಿಡಿದು ಬಾಧಿಸಲು |
ದೇವರಾಣೆಯು ಪ್ರಜಾಪತಿಗೆ ಎನಗೆ ಸ್ನೇಹ | ವಾಗಲು ಕೊಟ್ಟಳೀ ಹಣ್ಣ                || ೮೬ ||

ಸತಿಯರ ನಂಬುವನು ಮತಿ ಹೆಡ್ಡನೆನುತಲಿ | ಸುಖ ಫಲವ ನೀನುಣ್ಣು ಎಂದು |
ಕ್ಷಿತಿಯೊಳು ಚರಿಸೆಂದು ಕಾಶಿಯಾತ್ರೆಯವಡೆದು | ಮಚ್ಛೇಂದ್ರ ಮುನಿಯಾದನಮ್ಮಾ || ೮೭ ||

ಮೆಚ್ಚಲು ಭೂಕಾಂತೆ ಸತ್ಯೇಂದ್ರ ರಾಮನ ನುಡಿಗೆ | ಕೀರ್ತಿಯ ಪಡೆವೆ ಲೋಕದಲಿ |
ಕತ್ತಿ ಮಾಡಲು ಬೇಡ ಸಂತೆ ರಂಡೆಯ ಮೇಲೆ | ಸೃಷ್ಟಿಗೀಶನಿಂದು ನೋಳ್ಪ          || ೮೮ ||

ಭೂಮಿಶಕ್ತಿ[ಯು] ತೊಲಗಿ ಮಾಯವಾಗಲು ರಾಮ | ನಾಯ ಕಡಿವನೆ ರಣಧೀರ |
ಛೀ ಎನುತ ಹಿಂದಕ್ಕೆ ತಿರುಗುವ ಸಮಯದಿ | ಮೂಳಿ ಮಾತಂಗಿ ನುಡಿಸಿದಳು       || ೮೯ ||

ಹಿಂದೊಮ್ಮೆ ಕರೆದರೆ ಒಲ್ಲೆಂದೆ ರತಿ[ಕ]ಲೆಗೆ | ಇಂದಿನ್ನು ಮನಸು ಒಪ್ಪದೆ |
ಕೊಂದೆನೆಂಬುವ ಕೈಯ ನಿಲಿಸಿ ನೇಮಿಯ ಕಳುಹಿ ಆ | ನಂದದಿ ಸುಖದೊಳು ಬಾಳ್ವಾ        || ೯೦ ||

ಮೂಳಿಯ ಮಾತನು ಆಡಬೇಡೆಲೆ ಮೂಗ | ಮಾದಿಗನಿಂದ ಕೊರೆಸುವೆನು |
ಏಣಾಂಕಧರನೊಲುಮೆ ಆಗಿ ಇರುವುದು ಕಾಣೆ | ಪರಸ್ತ್ರೀಯರು ತಾಯಿ ಹೋಗಮ್ಮ  || ೯೧ ||

ಪಾಪಿ ಹೋಗೆನುತಲಿ ಭೂಪ ರಾಮನು ತಿರುಗೆ | ಚಾಪ ಏರಿಸಿ ಸರಳುಗಳ |
ಮಾತು ಮಾತಿದ್ದಂತೆ ಮುನ್ನೂರು ಸರಳನು ಕರೆಯೆ | ತಾತ ತೂತಾಗಿ ವಜ್ರಾಂಗಿ   || ೯೨ ||

ಮೂರಾರು ಸರಳೊಳಗೆ ಹನ್ನೆರಡು ಅಂಬಿನ ಗಾಯ | ಉನ್ನಂತವಾಗೆ ರಾಮನಿಗೆ |
ಬ್ರಹ್ಮಲಿಖಿ ಇರುವನಕ ಕಲ್ಲು ಮಾನ್ಯರ ದೇಹ | ಪಣೆಯಲ್ಲಿ ತೀರಲು ಗಾಯವಡೆಯೆ   || ೯೩ ||

ಗಾಯ ಮೂಲೆಗಳಾಗೆ ರಾಮನ ಕರ ನಿಂದು | ಸೇರಲು….ತರಳಂಗೆ |
ಖಾನರು ತಲೆದೂಗಿ ತ್ರಾಣಹುದು ಮಾತಂಗಿ | ರಾಮನ ಕರವ ನಿಲ್ಲಿಸಿದೆ             || ೯೪ ||

ಈ ಮೇಲೆ ನೋಡುವ ಭೀಮಗೆ ಹೆ[ದ]ರಿದ್ದು | ಖಾನರು ಏರಿ ಬರುತಿಹರು |
ವೀರ ರಾಮನ ಮಂದಿ ಅಡ್ಡಾಡಗೊಡದೆ ಕೆಡಹಿ | ಮೋಜು ಲಾಲಿಸಿ ಬಲ್ಲವರು         || ೯೫ ||

ಮಿಕ್ಕು ಬಂದವರನು ಅಪ್ಪಳಿಸಿ ಹೊಡೆವನು ಮುದ್ದ | ನೆತ್ತಿ ಚಿಪ್ಪುಗಳ ಕಳೆವಂತೆ
ಕತ್ತಿ ಗುರಾಣಿಯ ತಲೆಯ ಮುಚ್ಚಿ ಖಾನರು ಬಂದು | ಕುಕ್ಕಿ ಹೋದವರು ಬೆದಬೆದರಿ  || ೯೬ ||

ಬರುವ ಖಾನರ ನೋಡಿ ಎದೆಗೆಡದೆ ಬಾದುರಖಾನ | ಕದಳಿಗೆ ಕರಿಯು ಬರುವಂತೆ |
ಎಡಬಲನ ನೋಡದೆ ತರಿಗಡಿಯೆ ಮುನ್ನೂರು ತಲೆಯ | ಬೆದರಿ ಓಡುವರು ಚೆನ್ನಾಗಿ || ೯೭ ||

ಕಾಟಣ್ಣ ತಾನೊಂದು ತಲೆ ಪೌಜಿನ ಮೇಲೆ | ಹೊಡೆದಾಡುತಿರ್ದ ಅನುಜಾಣ |
ಸುಳುಹು ಕಾಣದು ಎಂದು ಮುರಿಗಡಿಯ ಮುತ್ತಿದ | ಹರಿದು ಬಂದನು ತಮ್ಮನೆಡೆಗೆ  || ೯೮ ||

ಗಾಯೊಡೆದು ಮೂರ್ಚಾದ ಕುಮಾರ ಚೆನ್ನಿಗನ ಕಂಡು | ಭೋರಿಡುತ ಬಿಗಿಯಪ್ಪಿದನು |
ಊರಿಗೆ ನಡೆ ಭೂಪ ಮೂಗು ಮೊಲೆಯನು ಕೊಯಿದು | ಓಡಿಸುವೆ ಮಾದಿಗಿತ್ತಿಯನು || ೯೯ ||

ಬಾರಯ್ಯ ಅಣ್ಣಾಜಿ ಆಡಬಹುದೆ ನೀನು | ಹೀನಾಯವಾಗದೆ ಸ್ವರ್ಗದೊಳಗೆ |
ಓಡೋ ರಾಯರಗಂಡ ಸಾ[ವಿ] ಗಂಜೊರ ಮಿಂಡ | ಕಾಲಪೆಂಡೆವು ಹೋಯಿತೇನು  || ೧೦೦ ||

ಮುರಿದು ಮನೆಗೆ ಓಡೆ ಬಿರಿದನಿಟ್ಟೆನೆ ಅಣ್ಣ | ಸ್ಥಿರವೇನೊ ನರಕಾಯವಿಲ್ಲ |
ಮಡಗಲು ಇರದಣ್ಣ ಮುಂದೆ ಬರಹತ್ತಿರೆ | ಪಡೆದವರು ಕೊಡಲಾಪರೆ ಹುಚ್ಚಾ         || ೧೦೧ ||

ಬಾರಯ್ಯ ಕಾಟಣ್ಣ ಪೋಗಿ ನಗರಕ್ಕೆ | ತಾಯಿ ತಂದೆಗೆ ಸುದ್ಧಿ ಪೇಳೊ |
ದೇವೇಂದ್ರನಾತ್ಮಜನೆ ನಿನ್ನಗಲಿ ಪೋಗುವನಲ್ಲ | ಸಾಗಿಸು ಮತ್ಯಾರ ನೀನು         || ೧೦೨ ||

ಇಟ್ಟೆಡೆಯ ಬಂದಾಗ ಒಡಹುಟ್ಟಿದವನ ಬಿಟ್ಟು | ಪಟ್ಟಣಕೆ ನಾ ಹೋಗೋನಲ್ಲ |
ಕುಟ್ಟಿ ಖಾನರ ತಲೆಯ ಕಡಿದು ಪ್ರಾಣವ ಬಿಡುವೆ | ಹೊಟ್ಟೆ ಹೊರೆವೆನೆ ಊರ ಹೊಕ್ಕು || ೧೦೩ ||

ಬಿರುದಿನ ಪೆಂಡೆಯು ತುರುಕರಿಗೆ ಸೇರೋದು | ಪಡೆದ ರಾಜೇಂದ್ರಂಗೆ ಕುಂದು |
[ನ]ಡೆಯಣ್ಣ ತಲೆಯನು ಛಳಿಸಿ ನುಡಿಯಲು ಬೇಡ | ಪಿಡಿದನು ಗಲ್ಲವ ರಾಮ         || ೧೦೪ ||

ಕಡೆಯವ ಕೊಂಡ್ಹೋಗಿ ಒಡಲ ಹೊರೆಯಲೆ ನಾನು | ಸುಡು ನಮ್ಮ ಜನ್ಮ ಇನ್ನ್ಯಾಕೆ |
ಅಡವಿ ಗೊಲ್ಲವ ತಂದು ಅಣ್ಣಾಜಿ ಎನಿಸಿದ ಋಣವ | ಕಡಿದಾಡಿ ಅಳಿವೆ ನಿನ್ನೆಡೆಯ     || ೧೦೫ ||

ಅಳಿಯಬಲ್ಲೆನೆ ಪೋಗಿ ಬೆದರು ಗಾಯಕೆ ದಂಡ | ಮುಗಿಯದೆ ಖಾನರ ತಲೆಯ |
ಕಡಲಂತೆ ರಕ್ತವ ಹರಿಸದೆ ಯೋಜನವ | ಮಾಡುವನೆಂಬುದು ನೀನರಿಯಾ          || ೧೦೬ ||

ಕಲಿಯುಗದ ಪಾರ್ಥನೆ ದಯಮಾಡಿ ಪೇಳುವ | ವಿವರವೆಲ್ಲವನು ಅರುಹುವೆನು |
ಬರುವೆನು ಬೆನ್ನೊಡನೆ ನೆನಹು ಮಾತ್ರಕೆಯೆಂದು | ಮನದೊಳು ಗ್ರಹಿಸಿ ಪೇಳೆನಲು || ೧೦೭ ||

ಹಡೆದ ಹರಿಯೆಲದೇವಿಗೆ ಪೇಳಯ್ಯ | ಕೊಡುವಂತೆ ಹರಕೆ ದೃಢವಾಗಿ
ಒಡನೆ ಚೆನ್ನಿಗರಾಮ ಚರಣಕೆರಗಿದನೆನ್ನೊ | ಮೊಲೆವಾಲ ಸವಿದ ಮಗ ರಾಮ       || ೧೦೮ ||

ಎಡದ ಪಾದದಿ ಇದ್ದ ಕಡೆಯವನು ಕಳೆದನು | ಉಡುದಾರ ಮುದ್ರೆ ಉಂಗುರವ |
ಪೊಡವಿ ರಾಯರ ಗಂಡನೆಂಬ ಬಿರಿದನು ತೆಗೆದು | ದೊರೆ ಕಿತ್ತು ಎರಗಿದನೆನ್ನೊ      || ೧೦೯ ||

ಪಟ್ಟಶೇಖರನಾದ ಜಟ್ಟಂಗಿರಾಯಗೆ [ಸು]ತನು | ಸಾಷ್ಟಾಂಗ ಎರಗಿದನೆನ್ನೊ |
ಮುಪ್ಪಿನ ಕಂಪಿಲ ಹರಿಯಮ್ಮ ಬೈಚಪ್ಪ | ಉತ್ರವೀಗಲೆ ಬಾಳೆನುತ                  || ೧೧೦ ||

ಚಾಡಿ ಕ್ಷುದ್ರರ ಮೇಲೆ ಪ್ರಧಾನಿ ಬೈಚಪ್ಪನು | ಜೀವ ಉಳ್ಳನಕ ದಣಿಸದೆ |
ಏರಿದವೆಲ್ಲಕ್ಕೆ ಇಳಿಸದೆ ನಡೆಸಲು | ಸೀಮೆ ರಾಜ್ಯವು ತಣ್ಣಗಿಹುದು                    || ೧೧೧ ||

ಊರು ಒಕ್ಕಲು ಪ್ರಜೆಯ ಸೀಮೆ ರಾಜ್ಯವನೆಲ್ಲ | ತಾನಿತ್ತ ಒಕ್ಕಲು ತೆಗೆಯದೆ |
ಆಳಿದರೆ ಅವರೆಲ್ಲ ಕೊಂಡಾಡುವರು ರಾಮಗೆ | ಭೂಮಿಯುಳ್ಳನಕ ಘನವುಂಟು       || ೧೧೨ ||

ಬಾರಯ್ಯ ಮಂತ್ರಿಯ ಮಗ ನೀಲಕಂಠರಸೆ | ಹೋಗಯ್ಯ ನೀನು ಕುಮ್ಮಟಕೆ |
ರಾಯ ಜಟ್ಟಂಗಿಯು ಜಲತೃ ಹಸುಮಗನು | ನಾನಾ ಭಾಗ್ಯವು ನಿನ್ನದೆಂದು          || ೧೧೩ ||

ಆಳಿದೊಡೆಯನ ಬಿಟ್ಟು ಓಡಿದ ಪ್ರಧಾನಿ | ಮೂರು ಶಂಕೊರುಷ ಬಾಳುವನೆ |
ಬಹಳ ಕಟಕಟಿಯನು ಆಡುವ ಹೊತ್ತಲ್ಲ | ಸಾಗೆನಲು ಸುದ್ದಿಯೆನಬೇಕು               || ೧೧೪ ||

ಹೋಗು ಬಾದುರಖಾನ ಮೇಲು ದುರ್ಗಕೆ ನೀನು | ಪ್ರಾಣ ಕೊಡುವೆನು ನಿನಗಾಗಿ |
ತಾನಳಿದ ಗಳಿಗೆಲಿ ಖಾನರೊಯ್ವರು ನಿನ್ನ | ಕಾಲನ ಬಾಧೆ ಬಿಡದೆನಗೆ               || ೧೧೫ ||

ಮರೆಯ ಬಿದ್ದನ ಕೊಡದೆ ಏರಿದರು ಆಗಲೆ | ಗುಂಡಯ್ಯ ಶರನ ಯಾವ ಕಾಲ |
ಧಾತು ಭೂಮಿ ಇರಲು ಬಿಡದು | ತಾನಳಿದು ಪರರುಳಿಸಿದರೆ                         || ೧೧೬ ||

ಅಳಿದ ಕಾಯವ ಭೂಪಾಲನುಳುಹಿದೆ ಪ್ರತಿಯಾಗಿ ಯಮನಿಂದ ಬಿಡಿಸಿ ತಂದಂತೆ |
ಹೊಡೆದಾಡಿ ನಿಮ್ಮೆಡೆಯೆ ತರಿಗಡಿದು ದಂಡನು ಅರ್ಧ | ಕೊಡುವೆ ಪ್ರಾಣವ ಪರರಡಿಯೆ       || ೧೧೭ ||

ಬೇಡ ಬಾದುರಖಾನ ರಣಧೀರನೆಂಬುದ ಬಲ್ಲೆ | ನೀನಳಿದು ತಲೆ ಡಿಳ್ಳಿ ಸೇರೆ |
ಭೂನಾಥ ಸುರಿತಾಳನ ಛಲಪಂಥ ಏಳದೆ ತನಗೆ | ತಡವಾಗದೆ ಕೈವಲ್ಯ ಪದವಿ     || ೧೧೮ ||

ಭಾವಾಜಿ ಸಂಗಯ್ಯ ಬಾರೆಂದು ಕರಗಳ ಪಿಡಿದು | ಹೋಗೆನುತ ಗಲ್ಲವ ಪಿಡಿದು |
ಏಳು ಜನ್ಮದಿ ನಿಮ್ಮಂಥ ಭಾವ ದೊರೆಯನು ಸ್ವಾಮಿ | ಕಡಿದಾಡಿ ಮಡಿವೆ ನಿಮ್ಮೆಡೆಯ        || ೧೧೯ ||

ಅಣ್ಣ ತಮ್ಮನು ಅಳಿಯೆ ಮರೆದೆನ್ನ ದುಃಖವ ಮಾತು | ಕನ್ಯೆ ಪ್ರಾಯದಲಿ ಬಳತೊಲಗೆ |
ಜನ್ಮ ಇರಲು ದುಃಖ ಮನದೊಳಗೆ ಸರವಾಗೆ | ಪಡೆದಮ್ಮಗೆ ದುಃಖ ಎಣೆ ಪ್ರತಿಯೂ || ೧೨೦ ||