ವೈನವುಳ್ಳವನೆಂದು ಶರಣನು ತಾ ಮೆಚ್ಚಿ | ಒಲಿವೊದು ತೇಜಿಯು ನಿನಗೆ | ಸ
ಮಾಡು ರಣವ ಗೆಲ್ಲುವೆಯೆಂದು ಶರಣನು ಬಯಲಾಗೆ | ರವಿ ಮೂಡಗಡಿಯಲಿ ಜನಿಸೆ || ೧೩೧ ||
ವರವನು ಕರುಣಿಸಿ ಶರಣರು ಬಯಲಾಗೆ | ದಿನಕರನು ಪೂರ್ವದೊಳೇರೆ |
ದೊರೆ ರುದ್ರಭೂಪಾಲ ಬಳಿಕ ಸ್ನಾನವ ಮಾಡಿ | ಮದನಾರಿ ಪೂಜೆ ಮಜ್ಜನವ || ೧೩೨ ||
ರಾಯ ರುದ್ರನ ಭಕ್ತಿ ದೇವಗಣಂಗಳು | ಲಾಲಿಸಬಲ್ಲ ಸದ್ಭಕ್ತಿ |
ನಾನಾ ಪ್ರ[ಪಂಚ] ಕಾಣದೆ ನಯನದಿ | ದೇವ ಜಂಗಮ ಒಪ್ಪುತಿಹರು || ೧೩೩ ||
ಪಟ್ಟೆ [ಕಂತಿ]ಯು ಸುತ್ತ ಮುತ್ತು ರತ್ನವ ಬಿಗಿದು | ಖಟ್ಟಾಂಗಧರನ ಜಂಗಮವು |
ಕಟ್ಟಳೆಯಿಲ್ಲದ ಕೌಪು ಕಾವಿಯ ದೋತ್ರ | ದೃಷ್ಟ ಜಂಗಮ ಒಪ್ಪುತಿಹರು || ೧೩೪ ||
ಇಂತಪ್ಪ ಜಂಗಮಕೆ ಸಂತೋಷದಲಿ ರಾಯ | ಸಂತೈಸಿ ಕರಗಳ ಮುಗಿದು |
ಕಂತು ಜಂಗಮಪ್ರೇಮಿ ವಾಲಗಕೆ ಬರುವಂಥ | ಪಂಥವನಾರು ಬಣ್ಣಿಪರು || ೧೩೫ ||
ಹತ್ತುವ ಹಾಜಾರ ಮುತ್ತಿನ ಮೇಲ್ಕಟ್ಟು | ತೆತ್ತಿಯ ಮೇಲ್ ಹೊನ್ನ ಕಳಸ |
ರತ್ನ ವೈಢೂರ್ಯ [ವ] ತೆತ್ತಿಸಿದ ಪೀಠ [ದ] | ವಿಸ್ತರವ ನೋಡುವರಳವೆ || ೧೩೬ ||
ರಾಯ ರುದ್ರನು ಹೊರಡೆ ಏರಿ ಪಲ್ಲಕ್ಕಿಯ | ಭೇರಿ ಪಾಠಕರು ಉಗ್ಘಡಿಸೆ |
ಸಾಗಲು ಸಂಭ್ರಮದ ಭೋಗದೊಳಗೆ ರಾಯ | ಏರಿದ ಸದರ ವಾಲಗವ || ೧೩೭ ||
ಕರಿ ತುರಗ ಕಾಲಾಳು ಮೆರೆಯುತ್ತ ರಣಗಹಳೆ | ಪರಿವಾರ ಮಂತ್ರಿ ಮನ್ನೆಯರು |
ದೊರೆ ಎಡಬಲದಿ ಕಿರೀಟವರ್ಧನರೆಲ್ಲ | ಎಡಬಲದಿ ಕುಳಿತು ರಾಯನಿಗೆ || ೧೩೮ ||
ನಾಲಗೆಯ ಪಿಡಿಕೊಂಡು ಮೂಗಿನೊಳ್ ನುಡಿಯುವ | ನಾನಾ ಪ್ರಬಂಧ ಗೀತವರು |
ತೂಗೇನೆಂಬರು ಗಿರಿಯ ತುದಿ ಬೆರಳ ಕೊನೆಯೊಳಗೆ | ಸಾಧಕ ಶಕ್ತಿ ವಿದ್ಯದವರು || ೧೩೯ ||
ಭುಜಬಲದ ಶಕ್ತಿಯಲಿ ಮದಗಜವ ನೂಕುವರು | ನುಡಿಸುವರು ಬಂದ ಚಿತ್ರವನು |
ಕಡಲನು ಧರಣಿಗೆ ಹರಿಸೇನು ಎಂಬಂಥ | ನೆರೆ ಜಾಣರು ಹರಸಿ ವಾಲಗದಿ || ೧೪೦ ||
ದೇವೇಂದ್ರನಿಗೆರಡನೆಯ ಭೋಗದೊಳಿರುತಲಿ | ಓರುಗಲ್ಲರಸು ರಾಜೇಂದ್ರ |
ಆಗಲೆ ಅರುವಾಗಿ ಅರಸು ಕಂಪಿಲನಾತ್ಮ | ಬಾಲರಾಮನ ಕರೆಸುವರೆ || ೧೪೧ ||
ಹೋಗಿ ಬಾರೆಲೊ ನೀನು ದೇವಿಶೆಟ್ಟಿಯ ಲಿಂಗ | ಸಾವಿರ ಕುದುರೆ ಮಂದೆಯಲಿ |
ಶೋಧಿಸಿ ರಾಮನ ಠಕ್ಕು ಟೌಳಿಯ ನಿಜವ | ಭೇದಾಭೇದವನು ತಿಳಿಯೋ || ೧೪೨ ||
ತಂದೆಯೊಳ್ ಕದನಾಡಿ ಬಂದನೆಂಬರು ಲಿಂಗ | ಸಂದೇಹವಾಗಿದೆ ಮನಕೆ |
ಮಂದಿ ಕುದುರೆಯ ಕಟ್ಟಿ ಬಂದ ಮನುಜನ ನಂಬಿ | ಇಂಬುಕೊಡುವುದು ಮಹಾಕಷ್ಟ || ೧೪೩ ||
ಪಾದದಪ್ಪಣೆಯಾಗೆ ಹೋಗಿ ಬರುವೆನು ಭೂಪ | ಶೋಧಿಸುವೆ ರೋಮ ರೋಮಗಳ |
ಸಾವಿರ ಕುದುರೆಯ ಬಲಗೂಡಿ ನಡೆದನು | ರಾಯ ರಾಮನ ಪಾಳ್ಯಕಾಗಿ || ೧೪೪ ||
ಹತ್ತಿದ ಲಿಂಗಣ್ಣ ಮುತ್ತಿನ ಅಹುದೆಯ | ಎತ್ತಿ ಸಾರುವ ರಣಗಾಳೆ |
ಬೆ[ಕ್ಕಿ]ನ ಬಳಿಗೆ ಬೆನವ ವಾಹನ ಬರುವ ವಿ | ಚಿತ್ರದಿ ಲಿಂಗಣ್ಣ ಪೊಗಲು || ೧೪೫ ||
ಬರುವ ಲಿಂಗನ ಸುದ್ಧಿ ಬಿರುದ ಬಾಲೇಂದ್ರರು ಕೇಳಿ | ಸದರಿನೊಳ್ ಕುಳಿತು ಧೈರ್ಯದಲಿ |
ಕ್ಷೇಮವೆ ಲಿಂಗಣ್ಣ ರಾಯ ರುದ್ರನು ನಿಮ್ಮ | ಸ್ವಾಮಿ ಕೇಳಿದರು ಪ್ರೀತಿಯಲಿ || ೧೪೬ ||
ಬಿರಿದಿನೆಕ್ಕಟಿಗರು ಕರಿ ತುರಗ ಕಾಲಾಳು | ಸದರ ವಾಲಗ ಕೊಟ್ಟು ನಿಲ್ಲೆ |
ಸಾಗಿ ಬಂ[ದನು] ಬೇಗ ದೇವಿಶೆಟ್ಟಿಯ ಲಿಂಗ | ಭೇರುಂಡ ರಾಮಯ್ಯಗೆರ[ಗಿ] || ೧೪೭ ||
ಪರಿಣಾಮ ಸ್ಥಿತಿಗಳನು ಹರುಷದಿ ಕೇ[ಳುತ್ತ] | ಪರಬಲ ವೈರಿದಲ್ಲಣನೆ |
ಮುರಿಯಲಿರಿದು ಮತ್ತೆ ಓರುಗಲ್ಲಿಗೆ ಬಂದ | ಪರಿಯ ಪೇಳೆಂದು ಕೇಳಿದನು || ೧೪೮ ||
ಕೆರೆ ಬತ್ತಿ ಭಾವಿಯ ಒರತೆಗೆ ಬಂದಂತೆ | ತೆರನಾಯಿತಲ್ಲೊ ಲಿಂಗಣ್ಣ |
ಊರ ಗೌಡನು ನೆರೆ ಗ್ರಾಮವ ಸೇರಲು | ತುರು ಕಾಯ್ವ ತರಳನಂತಾಯ್ತು || ೧೪೯ ||
ಖಗರಾಜ ಮರಿ ಬಂದು ಗುಡುಕರಿ ಇರುವಾಗ | ಉರಗನು ನಲಿದಾಡಿದಂತೆ |
ಬಡವನ ಬಿನ್ನಪವು ಬಲ್ಲವನ ಕಿವಿ ಹೊಗಲು | ಹರಿಯಿತ್ತು ರಾಯಗೆ ದೃಷ್ಟಿ || ೧೫೦ ||
ಬಂದು ಮೂರನೆ ದಿವಸ ತುಂಬಿ ಹೋಯಿತು ಲಿಂಗ | ಹರಿಯಿತ್ತೆ ರಾಯಗೆ ಚಿತ್ತ |
ಶೂರ ಕಂದಿಕೆ ಪಾಲ ಭ್ರಮಿಸಿ ದ್ವಾರಕಿಗೆ ಹೋಗೆ | ಚರರು ನಿಲ್ಲೆಂದ ತೆರಬಂತು || ೧೫೧ ||
ಬಡತನವೆಂಬುದು ಹೊಲೆತನ ಧರೆಯೊಳಗೆ | ಬಲುಮೆಗಳೆ ಲೇಸು ಧರೆಯೊಳಗೆ |
ವೈರಕ್ಕೆ ಬಂದಿರಲು ಹರುಷಗಾಣುವೆ ಲಿಂಗ ನಿ | ಮ್ಮರಸರ ಕಾಣೆವ ಘಳಿಗೆಯಲಿ || ೧೫೨ ||
ರಾಮನಾಡಿದ ಮಾತ ಕೇಳಿ ಲಿಂಗಣ್ಣನು | ಭೂಮಿ ಪಾತಾಳಕ್ಕೆ ಇಳಿದು |
ಸ್ವಾಮಿ [ನಿ]ಮ್ಮಯ ಶಕ್ತಿ ಕೇಳಿ ಬಲ್ಲೆವು ನಾವು | ಮಾಡಬಹುದು ಬಂದ ಕಾರ್ಯ || ೧೫೩ ||
ಹೇಳ್ವೆನು ಲಿಂಗಣ್ಣ ಲಾಲಿಸು ಕರ್ಣದಿ | ಕಾಣದ ನಿಮಗೆ ನಿಜವಾಗಿ |
ಏಳಿಗೆ ಅರ್ಥವನು ಬಡತನವ ಪೇಳಲು | ಲೋಕಮಯವೆಂಬರು ಮನದೊಳಗೆ || ೧೫೪ ||
ಏನ ಹೇಳಲೊ ಲಿಂಗ ಭೂಮಿ ರಾಯರ ಗೆದ್ದೆ | ಕಾಲಗತಿಗಳ ಮೀರಲಳವೆ |
ರಾಯ ಕಂಪಿಲ ಒಬ್ಬ ರಾಣಿ ರತ್ನಿಯ ತಂದ | ಮೂಲದಲಿ ಜಗಳ ಬಂತೆಮಗೆ || ೧೫೫ ||
ಮೂಲವ ತಿಳಿದೆನೊ ಕುಲಗೇಡಿಯೆಂಬವಳ | ಬೇಡವೆನ್ನಲು ಕಷ್ಟ ಬಂತು |
ಓಡಿ ಬಾರದೆ ಹೆದರಿ ಎತ್ತಿ ಬಡಿವೆನೆ ಪಿತನ | ರೂಢಿಯೊಳಪಕೀರ್ತಿ ಬಹುದು || ೧೫೬ ||
ಬಾಳಿವೋದುವದ್ಯಾಕೆ ಒಂದೇ ಚಿಂತಕ | ನೂರೆಂಟು ಶಿಖರಿಯ ಕಾದು |
ನೋಡುವೆ ನಿಮ್ಮ ರಾಯ ರುದ್ರನ ಬಳಿಯ | ಸಾಲದಿದ್ದರೆ ಸಂಬಳ ನಡೆವೆ || ೧೫೭ ||
ಕಡಿದೆನು ಎಂಬಂಥ ಎದೆಯಿರಲು ಇರ ಹೇಳು | ಬಡ ಧೈರ್ಯವಾದರೆ ನಡೆಯೆ |
ಕಡೆ ಲೋಕದ ಮೇಲೆ ಆಳಾಗದಿರಲೆನ್ನ | ನಡೆವೆನು ಸುರಿತಾಳನ ಬಳಿಗೆ || ೧೫೮ ||
ಮತ್ತೆ ಕೇಳೆಲೊ ಲಿಂಗ ಇಟ್ಟಂಥ ಬಿರಿದನು | ಬಿಟ್ಟು ಬಾಳುವರೇನೊ ಹೆದರಿ |
ಉಪ್ಪುಂಡ ರಾಯನಿಗೆ ಮೇಘ ಕವಿಯಲು ಕಡೆಗೆ | ಕೊಚ್ಚುವೆ ನೋಡೆನ್ನ ಛಲವ || ೧೫೯ ||
ಮಾರುತನ ಸುತನಂತೆ ಬಲಗಾರನಹುದೆಂದು | ಹೋಗಿ ಬರುವೆನು ರಾಯನೆಡೆಗೆ |
ಶೀಘ್ರದೊಳಗೆ ಬಂದು ಏನೆಂಬ ಪತಿ ಬಿನ್ನಹ | ಪಾದಕ್ಕೆ ಬಂದು ಅರುಹುವೆನು || ೧೬೦ ||
ಬಂದನು ಲಿಂಗಣ್ಣ ಒಂದೆ ಭರವಸದೊಳು | ರಾಜೇಂದ್ರಗೆ ಕರಗಳ ಮುಗಿದು |
ಬಂದ ಬಾಲನ ಮಾತ ಬುಡದಿಂದ ನೋಡಿದೆ | ನಿಜವೆಂಬ ರೀತಿಗೆ ತೋರುವುದು || ೧೬೧ ||
ರತ್ನಿ ಕಾಲಲಿ ಜಗಳ ಹುಟ್ಟಿ ಬಂದುದು ನಿಜವು | ಕುಟ್ಟುವನಿಬ್ಬರನು ಎತ್ತಿ |
ಸೃಷ್ಟಿಯೊಳಪಕೀರ್ತಿಯೆಂಬ ಭೇದವ ತಿಳಿದು | ಕಟ್ಟಿ ಕಾಯಲು ಬಂದ ನಿಮ್ಮ || ೧೬೨ ||
ಅಂತಪ್ಪ ಧೀರ ಎಮ್ಮೆಡೆಗೆ ನಿಲ್ಲಲು ರಾಯ | ಭೂಕಾಂತರು ಇದಿರುಂಟೆ |
ಸುಟ್ಟು ಬೂದಿಯ ಮಾಡಿ ಸುರಿತಾಳನ ಬೇರನು | ಪಟ್ಟಕ್ಕೆ ನೀವೆ ಸ್ಥಿರಕರವು || ೧೬೩ ||
ಬಹಳ ಹೇಳುವುದೇನು ನೋಡಯ್ಯ ರಾಜೇಂದ್ರ | ತಾಯಿ ತಂದೆಗಳೊಳು ಮುನಿದು ಬಂದ |
ಕಾಣುವುದು ನಿಜವಾಗಿ ಯಾವ ತೆರದೊಳು ನೋಡೆ | ನೀಮೊಮ್ಮೆ ಕರೆಸಿ ಕೇಳುವುದು || ೧೬೪ ||
ಹಾದಿ ಸೂಳೆಯ ನೆಚ್ಚಿ ಮನೆಯ ಹೆಂಡಿರ ಬಿಟ್ಟ | ಗಾದೆ ಬಂದಿತು ರತ್ನಿ ಕಾಲಿಂದ |
ಶೋಧಿಸಿದ ಅಪರಂಜಿ ಕುಮಾರನ ಬಿಡಲವಗೆ | ಮೂದೇವಿ ಹೆಗಲೇರಿ ಬಂದೊ || ೧೬೫ ||
ಮೋಸ ಕಾಣವುದಿಲ್ಲ ಅವನಾಡುವ ಮಾತೀಲಿ | ಸೋಸಿದ ದಧಿವಂತೇನೊ |
ಲೇಸು ಕಂಡರೆ ನಿಮಗೆ ಇರಿಸಿಕೊಂಬುದು ಅವನ | ಎಮ್ಮಯ ಮಾತಿರದಲ್ಲ || ೧೬೬ ||
ಮತ್ತೆ ಕೇಳೈ ಭೂಪ ಮಡಗಬರದು ಮಾತ | ಸತ್ಯದಿ ಹರಿಶ್ಚಂದ್ರ ರಾಮ |
ಇಟ್ಟಂಥ ಬಿರಿದೀಗ ಬಿಟ್ಟು ಬಾಳುವನಲ್ಲ | ಪೃಥ್ವಿ ಮುನಿಯಲು ನಿಮ್ಮ ಕೊಡನು || ೧೬೭ ||
ಧರಣಿ ಮೇಘವು ನಿಮಗೆ ಕವಿದು ಬಂದರೆ ಕೊಡನು | ದೃಢವುಂಟು ಅವನ ಮನದೊಳಗೆ |
ಸರಿನೋಡಿ ನಿಮ್ಮಲ್ಲಿ ಇರುವ ರಾಯರು ಮಂತ್ರಿ | ಹರುಷದಾದರೆ ಕರೆಸಿಕೊಳ್ಳಿ || ೧೬೮ ||
ರಾಯ ಕೇಳಿದ ತನ್ನ ಪ್ರಧಾನಿ ದೊರೆಗಳನೆಲ್ಲ | ಕೇಳಿದಿರಾ ನಿಮಗೆ ಸಮ್ಮತವೆ |
ಧೀರನಾದವ ಬಂದು ವಾಲೈಸಿ ನಿಂದಲ್ಲಿ | ನಾವು ಬಿಡುವುದು ಘನವಹುದೆ || ೧೬೯ ||
ಹಲವು ಯೋಚನೆ ಯಾಕೆ ಕಲಹ ಬಂದರೆ ನಮ್ಮ | ಹೊಲಬ ದಾಂಟಿಸುವ ಗಳಿಗೆಯಲಿ |
ಮಲೆತು ನಿಂತರೆ ನಮ್ಮ ಬಲಕೇಸು ಕಡೆಯುಂಟು | ತಲೆಯ ತರುವರು ಪಾದದೆಡೆಗೆ || ೧೭೦ ||
ಸಹಜವಹುದು ಪ್ರಧಾನಿ ದೊರೆಗಳ ಮಾತು | ತೀರುವುದೇನು ಅವನಿಂದ |
ಸೀಗೆಯಲಿ ಬಾಳೆಯು ಹೊಕ್ಕಡದು ಬಾಳುವುದೆ | ಗೀಜಗ ಗಿಡುಗ ನೀಗಿದಂತೆ || ೧೭೧ ||
ಆಗಲಿ ಲಿಂಗಣ್ಣ ಹೋಗಿ ರಾಮನ ಕರೆಯೊ | ನೋಡುವೆನು ಎದೆ ಧೈರ್ಯವನು |
ರೂಢಿಂದ್ರ ಮತ್ತಾರ ಕಳುಹಿನ್ನು ಕರೆಸುವುದು | ಚಾಡಿಗರು ಕಡೆಗೆನ್ನ ದೂರುವರು || ೧೭೨ ||
ಸಂದೇಹ ನಿನಗೇಕೊ ಲಿಂಗಣ್ಣ ನಾನಾಗಿ | ನಂಬುಗೆ ನಾನಾಗಿ ಕೊಡುವೆನು |
ಕೊಂದವನು ಇರುತಿರಲು ಕೋಲೇನ ಮಾಡುವುದು | ತಂದೆ ಇರಲು ಮಗಗೇನೋ || ೧೭೩ ||
ದೊರೆಗಳಾಡುವ ಮಾತು ತಿರುಹಿದ ಕಡೆಗುಂಟು | ಉರಗನ ತೆರ ಗಾದೆಯಂತೆ |
ಬಡಿದವರ ಬಿಡುವುದು [ಬಡಿಯದರ] ಪಿಡಿದು | ಕಡೆಗೆ [ನಗೆ] ಕೋಪ ಮಾಡುವಿರಿ || ೧೭೪ ||
ಮೂರು ಅಪ್ಪಣೆ ಕೊಡಲು ದೇವಿಶೆಟ್ಟಿಯ ಲಿಂಗ | ಸಾಗಿದನು ಮನ ಹರುಷನಾಗಿ |
ಸಾ[ವಿರಾ]ರು ವಾರಣಗಳ ನೂರಾರು ತುರಗದಿ | ರಾಮನ ಡೇರ್ಯನ ಪೊಗಲು || ೧೭೫ ||
ರಾಜೇಂದ್ರ ಕಂಪಿಲ ರಜತಾದ್ರಿ ಶ್ರೀ ಮಲ್ಲಿ | ಕಾರ್ಜುನ ಕೃಪೆಯೊಳು ಪಡೆದ |
ಭೀಮನ ಸಮಗಾತ್ರ ಭೇರುಂಡನಹುದೆಂದು | ರಾಮಗೆ ಕರವೆತ್ತಿ ಮುಗಿದ || ೧೭೬ ||
ಅರುಹಿದೆ ಅವನಿಯ ದೊರೆಗಳು ಮಂತ್ರಿಗಳು | ಕಿವಿ ಜೋಲುವಂತೆ ರಾಯನಿಗೆ |
ಬಿರಿದನು ಬಿಡ[ನ]ವ[ನು] ಹರುಷವಾಗಲು ನಿಮಗೆ | ಕರೆಸಿಕೊಳ್ಳೆಂದು ಪೇಳಿ [ದೆ]ನು || ೧೭೭ ||
ಹರುಷವಾದನು ರಾಯ ದೊರೆಗಳೆಲ್ಲರು ಮಂತ್ರಿ | ಕರೆಯಲ್ಕೆ ಎನ್ನ ಕಳುಹಿದರು |
ಹರನೊಲುಮೆ ನಿಮಗುಂಟು ಹನ್ನೆರಡ ಪೇಳುವುದೇನು | ಬಿಜಮಾಡಿ ಪುರಕೆ ಕಳುಹಿದನುಬಿ || ೧೭೮ ||
ಚೆಂದವಾಯಿತು ಕೇಳು ಲಿಂಗಣ್ಣ ರಾಯನಿಗೆ | ತಂದೆ ಕಂಪಿಲನ ಹಗೆಯುಂಟು |
ನಂಬಿ ನಿನ್ನೊಳು ಬರಲು ಮತ್ತೊಂದನೆಣಿಸಲು ಹೇಗೆ | ರಾಜೇಂದ್ರನ ಮನಸ ನೀ ಬಲ್ಲೆ || ೧೭೯ ||
ರಾಮ ಭೂಪನೆ ಕೇಳು ಆಡಿ ತಪ್ಪುವನಲ್ಲ | ಮೂರು ಅಭಯವ ಎನಗೆ ಕೊಟ್ಟು |
ಮಾಡಿದರೆ ಮತ್ತೊಂದು ದ್ರೋಹಗಳ ನಾ ಮುನ್ನ | ಪದದೊಳಗೆ ಪ್ರಾಣಗೊಡುವೆನು || ೧೮೦ ||
ಮೊದಲು ನಂಬಿಗೆ ಕೊಟ್ಟು ಕಡೆಗೊಂದನೆಣಿಸಲು | ಒಡೆಯನೆಂಬೆನ ಮರುಳವನ |
ಸುಡುವೆ ನೋಳ್ಪುರವನು ನಡೆವಂತೆ ಕೀರ್ತಿಗಳು | ಹಿಡಿಯೆನ್ನ ದೃಢ ನಂಬಿಗೆಯ || ೧೮೧ ||
ಆಡಿ ತಪ್ಪುವನಲ್ಲ ಚಾಡಿ ಕೇಳಿದರೆ ಕಾಣೆ | ಹಳೆಬೀಡ ಬಲ್ಲಾಳ ಕೆಟ್ಟಂತೆ |
ಭೋರಿಡುತ ಇವನೊಳು ತೀರಿಸುವೆ ಲಿಖಿತವನು | ಪಾಲಿಸುವೆ [ನಯ್ಯ] ಕ್ಷಣದೊಳಗೆ || ೧೮೨ ||
ಬಹಳ ಕಾಲದಿ ಉಂಟು ಬಂದು ನಿಮ್ಮೊಳು ಬಾಳ್ವ | ಪಾದ ದರುಶನದ ಊಳಿಗಕೆ |
ನಾಳಿನ್ನು ಎನುತಿರ್ಪ ಕಾಲಕ್ಕೆ ಜಟ್ಟಂಗಿ | ರಾಮ ಕೂಡಿಸಿದ ನಿಮ್ಮೊಡನೆ || ೧೮೩ ||
ಬಾಯ ಮನ್ನಣೆಗಳನಾಡುವನಲ್ಲ ನಾ | ಭೂಪ ಇದಕೆ ಸಾಕ್ಷಿ ಫಿರಂಗಿ |
ಧೀರನ ಎಡಬಲದಿ ಇದ್ದ ಬಂಟರ ಮುಂದೆ | ಜೋರದೆ ಕೈಯ ಪಿಡಿದು || ೧೮೪ ||
ಸತ್ಯದೊಳ್ ಹರಿಶ್ಚಂದ್ರ ಮುಕ್ಕಣ್ಣ ನರಪಿಂಡ | ನಿತ್ಯವೆ ಈ ಕಾಯ ಲೋಕದಲಿ |
ಸತ್ತರೆ ನಿನ್ನೊಳು ಸಾವೆನು ಫಿರಂಗಿ | ಕತ್ತಿ ಸಾಕ್ಷಿಗಳಾಗಿ ನೋಡು || ೧೮೫ ||
ಲಿಂಗನ ನೀತಿಯ ಕಂಡರು ಇರ್ವರು | ಚೆಂದವಾಯಿತೆಂದು ಮನದೊಳಗೆ |
ಇಂದು ನಾವು ಬಂದ ಭೇದವನೊರೆವೆವು ಕೇಳು | ತುಂಬಿರಲು ಸಲ್ಲ ಮನದೊಳಗೆ || ೧೮೬ ||
ತಂದೆ ಮಕ್ಕಳಿಗಿನ್ನು ಹೊಂದುವುದೆ ಕದನಗಳು | ಬಂದಿತು ಛಲ ಪಂಥದೊಳಗೆ |
ಒಂದಿವಸ ಅಣ್ಣಾಜಿ ಬೇಂಟೆಯ ತರಹೋದ | ಸಂಗಡ ನಾ ಹೋಗಲಿಲ್ಲ || ೧೮೭ ||
ಏಕೆ ಎನ್ನುತಲೆಮ್ಮ ಭೂಕಾಂತ ಕೇಳಿದ | ಹೋದ ಬೇಂಟೆಯ ನಾನು ಜರೆದೆ |
ಲೋಕದೊಳಗೆ ರಾಮ ಬಂಟನಂದದಿ ನುಡಿದೆ | ನೀ ತರುವುದು ತೇಜಿಯೆನಲು || ೧೮೮ ||
ರಾಯ ರುದ್ರನ ಗೆಲಿದು ರಣಧೀರ ತೇಜಿಯ | ತರುವೆ ಹಮ್ಮಿಲಿ ಏನೊ ಎಂದ |
ಏರಲು ರವ ರುದ್ರ ಯಮನ ರೋಮಗಳಾಗೆ | ಆಡಿದ ಪಂಥಕೆ ನಾನು ಬಂದೆ || ೧೮೯ ||
ಓರುಗಲ್ಲಿಗೆ ನನ್ನ ರೋಮ ಬೆದರದು ಲಿಂಗ | ಬೇರ ಕೀಳುವ ಶಕ್ತಿಯುಂಟು |
ಭೂಮಿ ಗಾತ್ರವ ಮಾಡಿ ರಾಯ ಪೇಳಲು ನಮ್ಮ | ಮಾಡಿದೆ ಕೇಳೊ ಈ ತಂತ್ರ || ೧೯೦ ||
ಮುತ್ತಿಗೆಯನು ಮಾಡಿ ಮುರಿವೆನು ನಿಮಿಷದಿ | ಮತ್ತೊಂದು ಉಂಟು ಮನದೊಳಗೆ |
ಹೊಕ್ಕು ರುದ್ರನ ನೋಡಿ ಶಕ್ತಿ ಸಾರವ ತಿಳಿದು | ಇಕ್ಕೋದು ಬಿರುದು ಬೆಂಕಿಯನು || ೧೯೧ ||
ಬಿರಿದಿನ ಮೂಲಗಳನರುಹಲು ಯಾಕೆಂದೆ | ಇರುವುದು ಜಗಳಕ್ಕೆ ಸೆರಗು |
ತಿರುಗುವ ಕಾಲದಲಿ ಹೊಗಳಿಸುವೆ ಛಲವೇರಿ | ಬರದೇನು ಲಿಂಗಣ್ಣ ಜಗಳ || ೧೯೨ ||
ಕದನ ಬಂದರೆ ಲಿಂಗ ಹೆದರಿ ಬಂದೆ[ನೆ] ಕೇಳೊ | ವಿಧಿಯ ತೊಡೆವೆ ಓರುಗಲ್ಲ |
ಎದೆಯೊಳು ಭಯವಿರಲು ಯಮನ ನಗರಕೆ ಒಟ್ಟಿ | ಬರು [ವೆ]ನೆಂಬುದ ನೀನು ಅರಿಯಾ || ೧೯೩ ||
ಹೇಳುವ ನುಡಿಗಳನು ಕೇಳಿದ ಲಿಂಗಣ್ಣ | ರೋಗಿ ಬಯಸುವ ಕ್ಷೀರವನ್ನು |
ಹಾಲನ್ನ ಪಥ್ಯವ ಮಾಡೆಂದ ಪಂಡಿತನು | ಜೋಡಾಯಿತೆನಲು ಲಿಂಗಣ್ಣ || ೧೯೪ ||
ಬಾರಪ್ಪ ಲಿಂಗಣ್ಣ ಬೇರೊಂದನೆಣಿಸದೆ | ಜೋಡಿನ ಗಿಳಿಯಾಗಿ ಇರುವ |
ರೂಢೀಶ ಕಂಪಿಲಗೆ ಬಾಲರಿರ್ವರು ನಾವು | ಮೋಹದ ಮಗನಾಗಿ ಇರುವ || ೧೯೫ ||
ಲಿಂಗ ರಾಮನ ಮನಸು ಒಂದಾಗಿ ದೇಹವು | ಗಂಡಭೇರುಂಡನ ತೆರದಿ |
ಡಿಂಬ ಪ್ರಾಣಗಳೊಂದು ಮಂಡೆಗಳು ಎರಡೆಂಬ | ಕಂಡ ಜನರಿಗೆ ಭೇದವೆನಿಸಿ || ೧೯೬ ||
ಅಣ್ಣಾಜಿ ಕಾಟಯ್ಯ ಇನ್ನೇಕೆ ತಡವೆಮಗೆ | ಪುಣ್ಯಕಾಲಕ್ಕೆ ಲಿಂಗ ದೊರೆತ |
ಕ[ಣ್ಣಿ]ಲೆ ರುದ್ರಗೆ ಕತ್ತಿಯೊಳ್ ತಪ್ಪಿಲ್ಲ | ಒಮ್ಮೆ ಶೃಂಗರ ಮಾಡು ಬಲವ || ೧೯೬ ||
ಆಡಿದ ಛಲಪಂಥ ಕೈಗೂಡಿ ಬಂದಿತು ಅಣ್ಣ | ದೇವನ ಮಹಿಮೆ ಬೆರೆದಿಹುದು |
ಸಾರೆನಲು ತಳವಾರ ಓರಂತೆ ಪೇಳಲು | ಬೇಗ ಶೃಂಗರವಾಗಿ ಬರಲು || ೧೯೭ ||
ಮಂದಿ ಮಾರ್ಬಲವೆಲ್ಲ ನಿಂದು ಸದರಿಗೆ ಕ[ರೆ]ವ | ವಂದಿಸಿ ರಾಮ ರಾಜೇಂದ್ರಗೆ |
ಮುಂದೆಮಗೆ ದಯಮಾಡು ಮುತ್ತೇವು ಓರಗಲ್ಲ | ತಿಂದೇವು ಮೂರು ದಿವಸಕ್ಕೆ || ೧೯೮ ||
ಚಿನ್ನ ಬೆಳ್ಳಿಯ ಕಟ್ಟು ಚೆಲುವ ನೇಜದ ಮಂದಿ | ಬಿಲ್ಲು ಬಾಣದ ಅಂಬಿನವರು |
ಕೆನ್ನೆ [ಮೀ]ಸೆ ಕೆಂಗರಿಗಣ್ಣು ಕೇಸರಿ ಮುಖದ | ಉರಿಮುಖ ಬಂಟರು ಬಂದು ನಿಲ್ಲೆ || ೨೦೦ ||
ಕರಿತುರಗ ಮಾರ್ಬಲದ ಉರವಣೆಯ ಲಿಂಗನು | ಕಂಡು ತಲೆದೂಗಿ ಮನದೊಳಗೆ |
ಗೆಲುವರೆ ಈ ಬಲವು ಓರುಗಲ್ಲೊಳು ಮುನ್ನ | ಇಲಿಯು ಮಾರ್ಜಾಲನರಿತಿಹುದು || ೨೦೧ ||
ರಾಯ ಕಂಪಿಲನ ಕುಮಾರರಿರ್ವರು ಏಳೆ | ಭೇರಿ ಕಹಳೆಯ ಆರ್ಭಟದಿ |
ಆರುತ ಹರಿಣಗಮನದೊಳಗೆ ಮಂದಿ | ಏರಲು ಪೂರ್ವಾನ ತೆರದಿ || ೨೦೨ ||
ಪರಬಲಾಂತಕ ರಾಮ ಬರುವ ದಿಗಿಲಿಗೆ ಪಟ್ಟಣ | ನಡುಗುವಂದದಿ ರಣಗಾಲೆ |
ದಿಗಿಲಿನ ಸ್ವರಕೇಳಿ ಪುರದೊಳು ಜನಜಾತ್ರೆ | ನೆರೆಯಲು ಶೃಂಗಾರವಾಗಿ || ೨೦೩ ||
ನಳಿನಮುಖಿಯರು ಪಲ ಬಗೆಯ ಶೃಂಗಾರವಾಗಿ | ತಳಿರೊಡೆದು ನಗುವ ಲಾವಣ್ಯ
ಮೃಗಮದಗಂಧಿಯರು ಮುತ್ತುರತ್ನಗಳಿಂದ | ಮಿಗಿಲಾಗಿ ಮನ್ಮಥನ ಸತಿಗೆ || ೨೦೪ ||
ಬಾಲೆಯರ ಬಂಧತ್ವ ಲಾವಣ್ಯಗಳ ಕೇಳಿ | ತಾವರೆ ಬಿರಿ ಮೊಗ್ಗೆ ಕುಚವು |
ಗೋವಿಂದನರಸಿಯ ಲಾವಣ್ಯಮುಖಿಯರು | ಏರಿರೆ ಕರುಮಾಡವನು || ೨೦೫ ||
ಇಂತಪ್ಪ ಲಾವಣ್ಯದ ಕಾಂತೆಯರು ಹೊರಟು | ಚಿತ್ತ ಬೆರೆದು ನೋಡುವರು |
ಮತ್ತೆಲ್ಲಿ ಠಾವಿಲ್ಲ ಕೋಟೆ ಕೊತ್ತಳ ಬೀದಿ | ನೆಟ್ಟ ನೇತ್ರಗಳ ಮುಚ್ಚದಲೆ || ೨೦೬ ||
ಪುರವೆಲ್ಲ ಈ ತೆರದಿ ಮರುಳಾಗಿ ಇರುವಾಗ | ಬರುವ ರಾಮನ ಬೆಡಗ ಕೇಳಿ |
ಕಡೆಯ ಬಾಗಿಲ ಹೊರಗೆ ದಂಡು ಪಾಳ್ಯವನಿಳುಹಿ | ಅರುಹಿದ ಕಾಟಣ್ಣನೊಡನೆ || ೨೦೭ ||
ಹೊಕ್ಕು ಬರುವೆನು ನಾನು ದೃಷ್ಟಿಯೆಮ್ಮೊಳಗಿರಲಿ | ಕಸ್ತಿ ಬಂದರೆ ಎನಗೆ ರುದ್ರ |
ಚಿತ್ತದೊಳ್ ಅರಿವಿರಲಿ ಕೊಚ್ಚುವೆ ಊರೊಳಗೆ | ಹಚ್ಚಣ್ಣ ಹೊರಗೆ ಲೆಗ್ಗೆಯನು || ೨೦೮ ||
ಹೊಗಬಾರದು ಈರ್ವರು ಇರು ನೀನು ಪಾಳ್ಯದಿ | ಭಯ ಬೇಡ ಎನಗೆ ನೀ ಮುನ್ನ |
ಕಳಲೆಯನರಿವಂತೆ ಕೊಂದು ರಕ್ತವ ಹರಿಸಿ | ಬರುವೆನು ಹನುಮನ ತೆರದಿ || ೨೦೯ ||
ಬುದ್ಧಿಯೆನ್ನುತ ಕಾಟ ಮದ್ದು ಬಾಣವು ಬತ್ತಿ | ಹೋದನು ತನ್ನ ಪಾಳೆಯದಿ |
ಎದ್ದನು ರಣರಾಮ ಎರಡು ಸಾವಿರ ಬಲದಿ | ಎದ್ದ ಮನ್ನೆಯರೊಡಗೊಂಡು || ೨೧೦ ||
ಬಾದೂರ ಬಲವಂತ ವೀರಸಂಗಮ ರಾಯ | ಬಾಣಿಯ ಮುದ್ದ ಎಡಗೈಯ |
ಮಾದಿಗ ಹಂಪನು ನಾಗರಸು ಮಂತ್ರಿಗಳು | ಪ್ರವೀಣರೊಡಗೊಂಡು ನಡೆಯೆ || ೨೧೧ ||
ಮುತ್ತಿನ ಪಲ್ಲಕ್ಕಿ ಹತ್ತಿ ಚೆನ್ನಿಗ ರಾಮ | ಪಕ್ಷಿವಾಹನ ಸುತನಂತೆ |
ಎತ್ತಿಸಾರುವ ಕಹಳೆ ಎಡಬಲದಿ ಮಂತ್ರಿಗಳು ಆ | ದಿತ್ಯನ ಪ್ರಭೆಯಂತೆ ನಡೆಯೆ || ೨೧೨ ||
ಬರುತಿರಲು ಭಾಗ್ಯದ ಜಯಲಕ್ಷ್ಮಿ ಸೊಬಗಿಂಗೆ | ಕಡಲಂತೆ ಆತನ ಕಳೆಯೊಳಗೆ |
ನಡೆಯಲು ಆ ಪುರದ ಜನಕೆಲ್ಲ ರತ್ನದ | ಕಿರಣ ಪ್ರಕಾಶದಿ ತೋರೆ || ೨೧೩ ||
ರಾಯ ರಾಮಗೆ ಲಿಂಗ ತೋರುತ ಆ ಪುರದ | ಆಯ ವರ್ಣದ ಬೀದಿಗಳನು |
ಧರಣಿಯೊಳಗೆ ಇದು ಗುರುತರ ಸ್ಥಳವಿಹುದು | ಹರಿಹರ ಬ್ರಹ್ಮಗೆ ಮೊದಲು || ೨೧೪ ||
ಮೂರು ಮೂರ್ತಿಗಳೆಲ್ಲ ಸುಳಿಯಲಮ್ಮರು ಮಿಕ್ಕ | ನರರಿಗೆ ಮುಂದೆ ಸಾಧನವೆ |
ಅದು ಹೇಗೆ ಲಿಂಗಣ್ಣ ಇದು ಚೋದ್ಯವೆನಿಸುವುದು | ರಜತಾದ್ರಿ ಒಡೆಯನ ಗೆದ್ದ || ೨೧೫ ||
ಸುರಮುನಿ ದೈತ್ಯರು ಒಳಗಾಗಿ ನಾ ಕಾಣೆ | ನರರೊಳಗಿಹುದೆ ಈ ತ್ರಾಣ || ೨೧೬ ||
ಕುರುಹುಂಟು ರಣರಾಮ ಹರನು ನಾರದ ಕದ್ದು | ಕೊರೆದರು ಕನ್ನ ಈ ಬಳಿಯ
ದೊರೆಗಳ ಒಡೆವೆಯ ಕದ್ದು ಗುಂಡಯ್ಯಗಳ | ಮೊರೆ ಹೊಗಲು ಶೂಲವೇರಿದನು || ೨೧೭ ||
ಇದು ಹೇಳೊ ಇನ್ನೊಮ್ಮೆ ಶರಣರ ನುಡಿಗಳನು | ಸುಡು ನಿನ್ನ ಊರಿನ ಬಲವ |
ಗಿರಿಜಾವಲ್ಲಭ ಮೆಚ್ಚಿ ಗುಂಡಯ್ಯ ಒಯ್ಯಲ್ಕೆ | ಧರಣಿಯೊಳ್ ಚೋರನೆನಿಸಿದನು || ೨೧೮ ||
ಕಳವು ಮಾಡಿದ ಸುದ್ದಿ ಕಲಿಯು ದ್ವಾಪರದೊಳು ತಿಳಿದಲ್ಲಿ ನೀ ಪೇಳೊ ಲಿಂಗ |
ನಲಿದು ಲಾಲಿಸು ಭೂಪ ತಲೆಯೆರೆಡು ಇಲ್ಲಿಗೆ | ಕಳೆಯಲು ರುದ್ರನಿಗೆ ಮೂರು || ೨೧೯ ||
ನಗರದ ಬಲವೇನೊ ತೆಗೆದೊಗೆವ ಅಗಣಿತರುಂಟು | ಪಡೆದ ಲಿಖಿತವು ತೀರಿ ಬರಲು |
ಕಡಲೊಳು ಕೂರ್ಮನ ನಡು ಬೆನ್ನಿನೊಳಗಿರ್ದ | ಮುಳುಗದೆ ದ್ವಾರಕಪುರವು || ೨೨೦ ||
ಊರಿನ ಘನ ಪಾತ್ರ ಹೇಳಬೇಡಯ್ಯಾ ಲಿಂಗ | ರೋಮದೊಳಗೆ ಇದು ಎನ್ನ |
ಆಡಬಾರದು ಮುಂದೆ ನೋಡುವಾ ನಡೆಯಣ್ಣ | ರೂಢೀಶನೊಲುಮೆ ಹೋಗಿಹುದೊ || ೨೨೧ ||
ಬರುತಿರ್ಪ ರಾಮನ ತರಳೆ ಸ್ತ್ರೀಯರು ನೋಡಿ | ನಯನ ಮುಚ್ಚದೆ ಬಾಯಿ ತೆರೆದು |
ಭುವನದೊಳಗೆ ಉಂಟೆ ಇವನ ಪೋಲುವ ಯುವಕ | ನಯನ ಸಾಲದು ನೋಡುವುದಕೆ || ೨೨೨ ||
ಕಣ್ಣೆರಡು ಸಾಲವು ಇನ್ನೊಂದು ತಮಗಿಲ್ಲ | ಹುಣ್ಣಿವೆ ಚಂದ್ರನಂತಿರುವ |
ನಮ್ಮಂಥ ಪಾಪಿಗಳ ಕಣ್ಣೆತ್ತಿ ನೋಡುವನೆ | ಧರ್ಮಿ ತಾನಾಗಿ ತೋರುವನು || ೨೨೩ ||
ನೋಡಿ ಕಂಡವರೆಲ್ಲ ಓಡಿ ತಮ್ಮಯ ಬಳಗ | ಊರ ಮನೆಗೆಲ್ಲ ಪೇಳಿದರು |
ಕೇಳಿರೆ ಅಕ್ಕಯ್ಯ ನಮ್ಮಯ ಪುರಕೊಬ್ಬ | ಗೋವಿಂದ ಸುತನು ಬಂದಿಹನು || ೨೨೪ ||
ನೋಡುವ ಬನ್ನಿರೇ ತಾಯಿ ಕೂಡಿದ ಸುಖ ಉಂಟು | ನೋಡನೆ ಎಮ್ಮ ದೃಷ್ಟಿಯಲಿ |
ಬೇಡ ಹೇಳಿರೆ ಮುಂದೆ ಪುರುಷಯೋಗದ ಪಾಡು | ಮಾತಾಡಿದರೆ ಸಾಕು ಪ್ರೀತಿಯಲಿ || ೨೨೫ ||
ಮುಕುಂದನ ಮಗನು ಸತ್ತನೆಂಬರು ಬರಿದೆ | ಹುಟ್ಟಿ ಬೆಳೆದನು ಈ ಪುರಕೆ |
ಚಿತ್ತದೊಳ್ತರಳೆಯರು ಮನಮುಟ್ಟಿ ನೆನೆಯಲು ಪುತ್ರ ಹುಟ್ಟವೇನವನ ತದ್ರೂಪ || ೨೨೬ ||
ಪಡೆದಾನು ಹರನೊಳು ಹಡೆದಾಕೆ ಎಂತುಂಟು ಕೈ | ವಿಡಿದ ಕಾಂತೆಯ ಭೋಗಕೆಣೆಯೆ |
ಸುಡು ನಮ್ಮ ನಾರಿತ್ವ ಒಂದಿರುಳು ಇವನೊಳು ಬಾಳಿ | ಅಳಿದರೆ ಗತಿಯುಂಟು ಮುಂದೆ || ೨೨೭ ||
ಕಾಶಿ ರಾಮೇಶ್ವರ ಶ್ರೀಶೈಲ ಪರುವತ ಗೋ | ಕರ್ಣ ಉಡುಪಿ [ಬ]ನವಾಸಿ |
ಲೋಕತೀರ್ಥವನೆಂದು ಉಪವಾಸ ನಡೆಸಲು ಇಂಥ | ಜ್ಯೋತಿರೂಪನ ಪಡೆಯಲರಿದು || ೨೨೮ ||
ಕಾಮಿಸಿ ಬಾಲೆಯ ರಾಮಗೆ ಮರುಳಾಗೆ | ಮಾನಾಭಿಮಾನವ ತೊರೆದು |
ಆಲಯವ ಬಿಡುವು ಸ್ತ್ರೀಯರ ನೋಡಿ ರಾಮಯ್ಯ | ತಾಯಿ ತಂಗಿಯರಿಗೆ ಸಮವೆಂದ || ೨೨೯ ||
ರೂಪ ಪಡೆಯಲು ಪುಷ್ಪ ಕುರುಡಿ ಕುರೂಪಿಯಾಗಲು ಹೀನ | ರೀತಿಗೆಡಲು ಹಾಸ್ಯ ಜನಕೆ |
ಪಾಪಿಯಾಗಲು ಪುಣ್ಯ ಹೀನನೆಂಬರು ಲಿಂಗ | ಲೋಕ ನೆಚ್ಚಿಸಲು ಹರಗಳವೆ || ೨೩೦ ||
ಪರನಾರಿಯರ ಸಹೋದರ ಹರಿಶ್ಚಂದ್ರ ಭಲರೆಂದು | ಬಿರಿದಿನ ಕಹಳೆ ಸಾರುತಿರಲು |
ದೊರೆ ರುದ್ರರಾಯನ ಅರಮನೆಯ ಕಾಣುತ ಲಿಂಗ | ಒರೆದನು ರಾಮ ಭೂಪಾಲಗೆ || ೨೩೧ ||
ರುದ್ರನ ಅರಮನೆಗೆ ವಜ್ರದ ತೊಲೆಕಂಬ | ಇದ್ದ ಕೆಲಸಗಳು ಅಪರಂಜಿ | ಸ
ಅರ್ಧನಾರಿಯ ಪೂಜೆ ಆವಲ್ಲಿ ಶಿವಮಯವು | ಹೊದ್ದಲಮ್ಮವು ಪೇತು ಭೂಪ || ೨೩೨ ||
ಕಾಸಿ ಕೆಲಸದ ಕಲ್ಲು ಸೀಸವೆರಕದ ಕೋಟೆ | ರಣಭೂತಕಾಗಲು ಎಂಟು ಮುಖದಿ |
ರಾತ್ರಿಯೆ ಹಗಲಾಗಿ ರಾಯ ರುದ್ರನ ಮನೆಯು | ಈ ಕಲಿಗೆ ಹೇಮದ ಗಿರಿಯು || ೨೩೩ ||
ಮದಗಜದ ಲಾಯಗಳು ಮಣಿವ ನಾಟಕಶಾಲೆ | ಚದುರಂಗ ಬೀದಿ ಚಾವಡಿಯು |
ಹಡಗಿನೊಳ್ ಬಂದಂಥ ನಡೆ ಘನ ಲಾಯಗಳು | ಹಿಡಿ ಬೇಡಿ ಮೂರು ಸಾವಿರವು || ೨೩೪ ||
ವಾಣಿ ವೈಶ್ಯರ ಬೀದಿ ಮೇಲೆ ಒಂಟೆಯ ಲಾಯ | ಇದು ಪಾಳೆಗಾರರ ಗೃಹವು
ಮೂರು ರಾಯರು ರುದ್ರನ ಕಾದು ಕೊಂಡಿರುವುದು | ಊಳಿಗಕೆ ಕಡೆಯಾಗಿ ಭೂಪ || ೨೩೫ ||
ನಗರದ ನಡುಮಧ್ಯೆ ಅಘಹರನ ಆಲಯವು | ಶರಭೇಂದ್ರ ಮೂರ್ತಿಯ ನೆಲೆಯು |
ಪರಿಣಾಮದೊಳು ಪೇಳಿ ದೊರೆ ರುದ್ರನಿರುವಂಥ | ಸದರಿನೆಡೆಗೆ ಬಂದರಾಗ || ೨೩೬ ||
ಕಾಯ್ದು ವಾಲೈಸುವ ಕರಿ ತುರಗ ಕಾಲಾಳು | ಕಾಣುತ್ತ ರಾಮನಾಶ್ಚರಿಯ |
ಆನೆಯ ಮೊತ್ತಕ್ಕೆ ಭೇರುಂಡನು ಇಳಿದಂತೆ | ಹಾರಿತ್ತು ಎಲ್ಲರ ಎದೆಯು || ೨೩೭ ||
ರಾಯ ರಾಮ[ನು ನಿಲೆ] ನೋಡಿ ರುದ್ರನ ಮಂದಿ | ಸೂರ್ಯನೆದುರು ತಾರೆಗಳು |
ತೋರಲಮ್ಮದೆ ಕಳೆಯು ಅಡಗುವಂದದಿ ಇವನು | ದೇವ ಪಿಂಡವು ನರನಲ್ಲ || ೨೩೮ ||
ವಾಲಗಗೊಡುತಿರ್ಪ ಪರಿವಾರ ಎಲ್ಲವು ಎದ್ದು | ದಾರಿಯ ಬಿಟ್ಟರಾ ಕ್ಷಣಕೆ |
ಮಾರಿಯ ಕರಕೊಂಡ ಕೊಣಬಿಗನ ತೆರನಂತೆ | ಓರಂತೆ ಕರ [ಗಳ] ಮುಗಿದು || ೨೩೯ ||
ಏರಿದ ಪಲ್ಲಕ್ಕಿ ಇಳಿದು ಚೆನ್ನಿಗರಾಮ | ಮೇಲೆ ಲಿಂಗನ ಕರವಿಡಿದು |
ಸಾಗಲು ಕಿರಣವು ಏರು ವಂದದಿ ಸದರ | ಲಾಗವ ಹಸ್ತದೊಳ್ ನಡೆಯೆ || ೨೪೦ ||
ಮುತ್ತಿನ ಸತ್ತಿಗೆ ಇತ್ತರದೊಳು ಪಿಡಿದು | ಎತ್ತಿ [ಹಾ]ರಿಸುವ ಚಾಮರವು |
ಒತ್ತಿನೊಳಗೆ ಬರುವ ಮಂತ್ರಿ ಮನ್ನೆಯರೊಳಗೆ | ಶುಕ್ರನಂದದಿ ರಾಮ ಬರಲು || ೨೪೧ ||
ರುದ್ರನ ಎಡಬಲದಿ ಇದ್ದ ದೊರೆಗಳು ಮಂತ್ರಿ | ಎದ್ದರು ಎದೆಯು ಜಜ್ಜರಿಸೆ |
ಬಂದಹುದು ಬಹುಕಾರ್ಯ ಗೆದ್ದ ಭೀಮನ ಪೋಲ್ವ | ವಜ್ರಕಾಯದ ಹನುಮಂತ || ೨೪೨ ||
ಇದಿರೆದ್ದು ಬಂದರು ದೊರೆಗಳು ತಲ್ಲಣಿಸಿ | ಹರುಷವೆ ರಣರಂಗ ರಾಮ |
ಕರಗಳೆಲ್ಲವ ಪಿಡಿದು ಕಾಂತ ರುದ್ರನು ಇರುವ | ಸದರು ಸಿಂಹಾಸನಕೆ ನಡೆಯೆ || ೨೪೩ ||
ಬರುವ ರಾಮನ ದಿಗಿಲ ದೊರೆಯು ರುದ್ರನು ನೋಡಿ | ಪಡೆದಳು ಪಾರ್ಥವ ತೆರದಿ |
ಹಡೆದೇನು ನೂರೆಂಟು ಸಗಣಿಯ ಹುಳದಂತೆ ಗ | ರುಡನಂದದಿ ಸುತನೊಬ್ಬ ಸಾಕು || ೨೪೪ ||
ಗರುಡನ ಕಂಡಂಥ ಫಣಿರಾಜನಂದದಿ ರುದ್ರ | ಶಿರವ ತೂಗುತ್ತ ಮನದೊಳಗೆ |
ದೊರೆ ಕಂಪಿಲಾತ್ಮಜನೆ ಹರುಷವೆ ಮನಪ್ರೀತಿ ನಿ | ಮ್ಮರಸು ರಾಜೇಂದ್ರ ಪರಿಣಾಮವೆ || ೨೪೫ ||
ಪರಿಣಾಮ ಧರಣೀಶ ಗಣ ರುದ್ರ ನಿಮ್ಮಯ ದಿನ | ಚರಿಯ ಕೇಳುವರು ಪ್ರೀತಿಯಲಿ |
ಹರೆಯ ಹೋಗಲು ಹಣ್ಣು ಉದುರು ಎಲೆಗೆ ಊರು | ದೂರವಾದವರ ಮಾತೇನು || ೨೪೬ ||
ಕರವ ಮುಗಿಯದೆ ರಾಮ ಕೈಯ ಪಿಡಿದು ಬೇರೆ | ಸದರ ಮಾಡಿಸಿ ಬೇರೆ ಕುಳಿತು |
ಪರಿವಾರ ಮಂತ್ರಿಗಳು ಎಡಬಲದೊಳು ನಿಂದು | ಸಮರಸದ ಮಾತಾಡುತಿರಲು || ೨೪೭ ||
ತರಳ ಪುತ್ರನೆ ಕೇಳು ಹಿರಿಯ ಕಂಪಿಲ ನಿಮ್ಮ | ಗಣಪತಿರಾಯನ ಕಿರಿಯ ತರಳ |
ಮಲೆತವರಿಗೆ ಗಂಡ ಹರಿಮೀಸೆಗ [ಳ]ವಗೆ ಎಮ್ಮ | ನಗರ ಮುತ್ತಿದ ಕಾಲದೊಳಗೆ || ೨೪೮ ||
ಧರೆಗಧಿಕ ಹಂಪೆಯ ವರಪುಣ್ಯಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ದೊರೆ ರಾಮನೋರ್ಗಲ್ಲ ಅರಸು ರುದ್ರನ ಕಂಡು | ಇರುವ ರಾವಿಗೆ ಸಂಧಿ ಏಳು [> ಎಂಟು] || ೨೪೯ ||[1]
[1] + ಅಂತು ಸಂಧಿ ೭ (>೮)ಕ್ಕೆ ಪದನು ೧೫೯೧ಕ್ಕಂ ಮಂಗಳ ಮಹಾಶ್ರೀ (ಮೂ).
Leave A Comment