[1]ಶ್ರೀ ಗಿರಿಜೇ[ಶನೆ] ಭಾಗೀರಥೀಶನೆ | ಭೋಗಿಭೂಷಣ ಭಾಳನೇತ್ರ |
ಆಗಮಕೊಡೆಯನೆ ಜಗವ ರಕ್ಷಿಸುವಂಥ | ನಾಗಭೂಷಣ [ವ್ಯೋಮ]ಕೇಶ            || ೧ ||

ಮಾಧವನ ಮೊಮ್ಮಗನ ಧ್ರುವನ ಭಕ್ತಿಗೆ ಮೆಚ್ಚಿ | ಆರೆಯ ದ್ವಾರಪಾಲಕನು |
ವೇದಕ್ಕೆ ನಿಲುಕದ ಏಕೋ ನಿರಂಜನ | ಬೋಧಿಸು ಮುಂದೆನಗೆ ಮತಿಯ             || ೨ ||

ಹರನೊಳು ಕಾದಿದ ನರನ ಅಣ್ಣನ ಪಿತನ | ಪಡೆದ ಸೂರ್ಯನ ಸಖನ ವೈರಿಯ |
ಪೆಸರ ತನುಜನ [ನು]ಜನ ಕೊಂದವನೆ | ಹರನೆ ಕೊಡೆನಗೆ ಸನ್ಮತಿಯ              || ೩ ||

ಕಾಶಿ ಪರಮೇಶ್ವರಕೆ ಈಸು ವೆಗ್ಗಳವಾದ | ಶ್ರೀ ಕೈಲಾಸವೆನಿಸುವ ಹಂಪೆ |
ವಾಸದಿ ನೆಲಸಿರ್ಪ ಈಶನೆ ವಿರೂಪಾಕ್ಷ | ಗೋಚರಿಸು ಮುಂದಣ ಕೃತಿಯ           || ೪ ||

[ಮಾ]ಡುವೆ ಹರಸ್ತುತಿಯ ಬೇಡುವೆ ಶಿವ [ನಿ]ಮ್ಮ | ನಾಡದೈವಗಳ ನಯನದಲಿ |
ನೋಡೆನು ಎಂಬ[ಂಥ] ಪಾದ ಪೆಂಡೆಯನಿಟ್ಟು | ರಾಮನ ಕೃತಿ ನಡೆಸುವೆನು      || ೫ ||

ಕಳವು ಹುಸಿ ಪರದ್ವಾರಕೆಳಸದೆ ಎಳ್ಳನಿತು | ಕಲಹಕ್ಕೆ ರಣವಿಜಯನಾದ |
ತರಳನ ಸತ್ಕೃತಿಯ ನಡೆಸುವೆ ಬಲ್ಲವರು | ಪದ ತಪ್ಪು ಇರಲು ತಿದ್ದುವುದು           || ೬ ||

ಆಡಬೇ [ಡ]ಡ್ಡ ವಚನವ ಮೂಢರಾಗಿರಬೇಡಿ | ಪೇಳಿರೆ ಅರ್ಥ ತಿಳಿದವರು |
ಕಾಣದ ಕುರುಡರನು ಕೊಂ[ಡು] ಪೋದಂತೆ | ಸ್ವಾದವಪ್ಪುವದೆ ಅ‌ಯ್ಯರಿಗೆ           || ೭ ||

ಹಲವು ಲೇಖಗಳರಿದು ಮನವೊಲಿಸು ಲಾಲಿಸಿ | ಸನುಮತದೊಳಗೆ ಕೇಳುವುದು |
ಕನಸ ರಾತ್ರಿಲಿ ಕಂಡು ಬೆಳಗಾಗಿ ಮುಂದಿರ್ಪ | ಮನುಜರಿಗೆ ಅರ್ಥ ತಿಳಿಪುವುದು     || ೮ ||

ಎತ್ತುವೆ ರಾಮನ ಕೃತಿಯ ಚರಿಸುವೆ ಮುಂದೆ | ಸತ್ಯಸಾಗರರು ಲಾಲಿಪುದು |
ಹುಚ್ಹರಟೆಯ ಬಿಟ್ಟು ಉತ್ತಮರು ಕೇಳುವುದು | ಸಕಲರಿಗೆ ರುಚಿಯಾಗಿ ಇಹುದು      || ೯ ||

[ಹೊಳೆದಂತೆ] ಪೂರ್ವದಿ ಕಳೆಯ ತೋರಲು ಲೋಕ | ಬೆಳಗೆಂದು ಸಕಲ ಜೀವನಕೆ |
ಬಲುವಾಗಿ ಖಗಮೃಗವು ಜಲಜಾಕ್ಷ ಮುಖದಿರುವೆ | ಕಳೆಗೆಡ[ಲ] ರೆಯಂಗದವರು   || ೧೦ ||

ದೈತ್ಯರ ಸಂಹರಿಸಿ [ಆದಿ]ತ್ಯನು ರಥವೇರಿ | ಹತ್ತಿ [ಅರುಣಾದ್ರಿ] ವೇಗದಲಿ |
ಮರ್ತ್ಯದ ಜನಸ್ತೋಮ ಕೃತ್ಯನೇಮಗಳಾಗೆ | ಅರ್ತಿಯಲಿ ಕಂಪಿಲರಾಯ            || ೧೧ ||

ಭುವನಾಥ ಕಂಪಿಲರಾಯ ಶೃಂಗರವಾಗಿ | ವಾಲಗ ಸದರ ಚಾವಡಿಗೆ |
ಭೋರೆಂದು ನಡೆಯಲು ಭೇರಿ ಕಾಳೆಯ ಸ್ವರದಿ | ಕಾಲಾಳು ತುರಗ ಘೋಷದಲಿ    || ೧೨ ||

ಮಂತ್ರಿ ಮನ್ನೆಯರು ಭೂಕಾಂತನೆಡಬಲದೊಳು | ಅಂತರಂತರದಿ ಚಾಮರವು |
ಇಂತಪ್ಪ ಸಕಲ ಸರ್ವಭೋಗದಿ ಬಂದು | ಕುಳಿತನು ಸೂರ್ಯಪೀಠದಲಿ              || ೧೩ ||

ಎಡದೊಳು ಬೈಚಪ್ಪ ಬಲದೊಳು ಕಾಟಣ್ಣ | ನಡುವೆ ರಾಜೇಂದ್ರಶೇಖರನು |
ಪಿಡಿವ ಸಂ[ಚಿ]ಯ ಕುಂಚ ಹಡಪಿಗರು ಹಾಸ್ಯವ | ನುಡಿವ ವಿಲಾಸಿಕರೊಡನೆ         || ೧೪ ||

ಸುರಪನ ಸಭೆಗಿಂತ ಇಮ್ಮಡಿ ಐಶ್ವರ್ಯದೊಳು | ಇರುವಾಗ ಗ್ರಹಿಸಿ ಮನದೊಳಗೆ |
ತರಳೇಂದ್ರ ಕಾಟಯ್ಯ ಈವೊತ್ತು ಬೇಂಟೆಯ | ತರಹೋಗು ಬೇಕಾದ ಮೃಗವ       || ೧೫ ||

ಬುದ್ಧಿಯೆನುತಲಿ ಕಾಟ ಎದ್ದು ಕರಗಳ ಮುಗಿದು | ಅಲ್ಲಿರ್ದ ಮನ್ನೆಯರ ಒಡಗೊಂಡು |
ಶೀಘ್ರದೊಳಗೆ ಬಂದು ರಾಯ ರಾಮನ ಬಳಿಗೆ | ಉದ್ದಕ್ಕೆ ಕರಮುಗಿದು ಪೇಳೆ        || ೧೬ ||

ಬಾರಯ್ಯ ಬಿರಿದಾಂಕ ಮೂರು ರಾಯರ ಗಂಡ | ರಾಯ ಬೇಂಟೆಗೆ ಹೋಗಿ ಎಂದ |
ಮೂರೆರಡು ಸಾವಿರ ಬಲ[ದೊಡನೆ] ಬೇಂಟೆಯ | ಪೋಗಿ ಬರಲೆಂದು ಅರುಹಿದ[ನು]         || ೧೭ ||

ಯಾತಕ್ಕೆ ಬರಲಣ್ಣ ಪ್ರೀತಿಯ ಮಗನಿಗೆ ಪೇಳ್ದ | ನಿನ್ನ ಭೀತಿಗೆ ಬರಲೇನೊ ಅಣ್ಣ |
ಬೇಕಾದ ಮಗನಾದರೆ ನನಗೆ ಹೇಳುವ ರಾಯ | ಸಾಕಣ್ಣ ನೀ ಪೋಗಿ ಬಾರೊ        || ೧೮ ||

ಬೇಸರವೇಕಪ್ಪ ರಣಭೂಪ ಚೆನ್ನಿಗರಾಮ | ಬೇಕಾಗಿ ಎನ್ನ ಕರೆಸಿದನು |
ಆತನ ಸಮ್ಮುಖದಿ ನಿಂದಲ್ಲಿ ಹೇಳಿದ | ಮಾತಿಲಿ ಬಾಣವನು ಎಳೆದೆ                  || ೧೯ ||

ಬಾಣ ಬತ್ತಿಗಳ[ಲ್ಲ] ಹೋಗಣ್ಣ ನೀನಿಂದು | ನೋಡುವೆ ನಾಳೆ ಮನ ಬರಲು |
ಕೇಳಯ್ಯ ಕಾಟಣ್ಣ ವಿರೋಧ ನಿನ್ನೊಳಗಿಲ್ಲ | ರಾಯ ಕಂಪಿಲ ಎಂದ ಮಾತ           || ೨೦ ||

ಬಂದರೆ ಬರುವೆನು ತಂದೆಯೊಳ್ ಕಲಹವೆ | ಕೇಳಿಂಬವಾಗದೆ ಚಿತ್ತದೊಳಗೆ |
ಮುಂದೆನ್ನ ಲಾವಣ್ಯ ಕರೆದು ಪೇ[ಳೆ] ಬರುವೆ | ಪರರ ಮಾತಿಗೆ ಬ[ರೆ]ನರಿಯಾ      || ೨೧ ||

ಅಶ್ವಳೆಯ ಅದರರು ಮತ್ತೆ ಪೋಗಲು ಲೇಸು | ಮೆಚ್ಚುವುದು ತಂದ್ಯಾರೆ ಕರೆಸಿರಲು |
ಇಚ್ಛೆಲಿ ನಾ ಬಂದು ಸಿಕ್ಕದಿರಲು ಮೃಗವು | ಮುಖ ಮುರಿದಂತೆ ರಾಯಗೆ ಮನ ಕರಗುವುದು  || ೨೨ ||

ಬರುವೆನು ನಡೆಯಣ್ಣ ಹೊರಕೆ……. | ………ಬೇಂಟೆಗಳು ಸುಖವೆ |
ಹಿರಿಯ ತಾನೀ ಪೇಳಿ……ವನನು | ಸೇರಿದಲಗು ಕಾಣುವುದಿಲ್ಲ                      || ೨೩ ||

ಆಡಿ ತೋರಿದ ರಾಮ ತನ್ನೊಳಗಿರ್ದ ಬೇಸರ | ಎರಡು ಚೋಟ್ಯಾಗಿ ಇರುಯೆಂದು ಕಾಟ |
ಜೋಡಿಸಿ ಕರ ಮುಗಿದು ಶೃಂಗಾರವಾಗಿ ನಡೆಯಲು | ಮೂರಾರು ಸಾವಿರ ಬಲದಿ   || ೨೪ ||

ಮೂರು ಸಾವಿರ ತುರಗ ಆರು ಸಾವಿರ ಮಂದಿ | ಠಾವ ತೋರುವ ಅಡವಿಗಳ |
[ಬೇಹಿ]ನವರು ಹೆಜ್ಜೆ ಸುಳುಹದೆಗೆದು ಕೊಲ್ವ | ಭೂಮಿ ಮುಸುಕರು ಮೃಗವಿರುವ     || ೨೫ ||

ಕೊಂಬು ಕೊಳಲು ಹಲಗೆ ಮುಂದೆ ಬಿರುದಿನ ಕಹಳೆ | ಕುಂಭಿನಿ ಭೋರಿಡುವಂತೆ |
ಕೆಂಧೂಳಿ ಮುಸುಕಲು ಒಂದೆ ಗಮನದಿ ಬಂದು | ಕಾಳಂದರವದಂತೆ ಮಲೆಯ      || ೨೬ ||

ಸರವರದೊಳು ಪೊಕ್ಕು ಹೊಳಕೆ ಬಂಟರು ಬೇಗ | ಬಿಡಿಸಿಕೊಂಡರು ತಮತಮಗೆ |
ಎಸೆದು ಕೊಲ್ವರು ಎದ್ದ ಹುಲಿ ಕರಡಿ ಹುಲ್ಲೆಯ | ಮಸಗು ತೋಡುವ ವರಾಹನ       || ೨೭ ||

ಮೊರೆವ ವ್ಯಾಘ್ರನು ಕರಡಿ ಕಾಡೆಮ್ಮೆ ನರಿ ಬೆಕ್ಕು | ಕುರಂಗಿ ಸಾರಂಗಗಳ |
ಶರ [ರವ]ದೊಳು ಸುತ್ತಿ ಮುತ್ತಿ ಆರ್ಭಟಿಸಲು | ಮೃಗರಾಶಿಯೆಲ್ಲ ಕಂಗೆಡುತ         || ೨೮ ||

ಕೊಂದರು ಕೊನೆ ಮೂಗವೆಲ್ಲ ಮೃಗವನು | ಚಂದ ಚಂದದ ಪಕ್ಷಿಗಳನು |
ಮಂದಿಯ ಬೆದರಿಸಿ ಕಾಡಾನೆ ಓಡಲು ಕಂಡು | ಇರುಬಿನ ಮೇಲಿದ ಕೆಡಹಿ            || ೨೯ ||

ಕಪ್ಪಿನೊಳಗೆ ಸಿಕ್ಕಿ ಬೀಳದೆ ಓಡುವ | ತಪ್ಪಿದನೆಲ್ಲವ ಪಿಡಿದು |
ಪೃಥ್ವಿಪಾಲಕ ಕಾಟ ಪುರಕೆ ತಿರುಗಿದ ಮೃಗವ | ಲೆಕ್ಕವಿಲ್ಲದೆ ಹೊಂದಿಸಿಕೊಂಡು       || ೩೦ ||

ಮೃಗವನು ಸಂಹರಿಸಿ………….ರಿ | ಕಿರಣದ ಕಳೆಕಾಂತಿ ಮನದಿ |
…………ಬಂದು ಕುಮ್ಮಟವನು ಹೊಕ್ಕು | ಪಡೆದ ರಾಜೇಂದ್ರಗೆ ಎರಗೆ                || ೩೧ ||

ಕುಂಡನು ರಾಜೇಂದ್ರ ಕೊಲ್ಲಬಹುದು ಮೃಗವ | ಬಲ್ಲಿದ ಮದಗಜವ ಪಿಡಿಯೆ |
ಅಲ್ಲಿ ಭೀಮಗೆ ಇವ ಹೆಚ್ಚು ಕಾಣಲಿಬಹುದು | ಗಲ್ಲವ ಪಿಡಿದು ಮುದ್ದಿಸಿದ               || ೩೨ ||

ಬಲವಂತಗಲ್ಲದೆ ಸಲುವುದೆ ಈ ಬೇಂಟೆ | ತಲೆದೂಗಿ ಬೆರಳಿ ನಾಸಿಕದಿ |
ಕುಲಶಾಬ್ದಿ ನವುದೀಶ ಕುಂಜರಕೆ ಭೇರುಂಡ | ನಲಿದಾಡಿ ನಗುತ ಮೈಯುಬ್ಬಿ        || ೩೩ ||

ರಾಯ ರಾಮನು ಉಳಿದು ಹೋಗದೆ ಮನೆಯೊಳು | ಏನ ಪಡೆದನೊ ಲಕ್ಷಂತ್ರ |
ಭೀಮನಂದದಿ ಹೋಗಿ ಆನೆ ಸಹಿತ ತಂದ | ಧೀರ ಕಾಟನ ನೋಡೊ ರಾಮ         || ೩೪ ||

ತಾತ ಕೇಳೋ ಮುನ್ನ ತರಳನ ಬಿನ್ನಪವ | ಈ ಮಾತ ನೀವಾಡೆ ಸೈರಿಸಿದೆ |
ಈಶ್ವರ ಹರಿ ಬ್ರಹ್ಮ ಅವರಲ್ಲದೆ ಮಿಕ್ಕ ಭೂನಾಥ | ರಾಡಲು ಎತ್ತಿ ಬಡಿವೆ              || ೩೫ ||

ಸಾಕಯ್ಯ ನಿಮ್ಮಾತು ಬೇಂಟೆ ಅರ್ತಿಯು ಸುಡಲಿ | ಘನ ಘಾತ್ರ ಮಾಡದೆ ಸಭೆಯೊಳಗೆ |
ಪಾಪಿ ಮೃಗವ ಕೊಂದು ತಿನಹಾಕೆ ಆತನ [ಜಯಕೆ] | ಹೆಂಬೇಡಿ ಮಾಡಬಹುದೆ ಎನ್ನ         || ೩೬ ||

ಅಡವಿಯ ಮೃಗಕೆಲ್ಲ ಮಡಲ ಕಟ್ಟಿದ ಕರ್ಮ | ಬಿಡಲರಿದು ಜನ್ಮ ಏಳರಲಿ |
ಒಡನೆ ಬೇಂಟೆಯ ಹೋಗಿ ಹರಿಚಂದ್ರರಾಯ ಕೆಟ್ಟ | ಸುಡುಗಾಡ ಕಾಯ್ದು ಹೊಲೆಯಗಾಳಾದ || ೩೭ ||

ಹಿಂದೊಬ್ಬ ಬೇಂಟೆಯಾಡಿ ಉಂಡನು ಕಮಲಾಕ್ಷ | ಕಾಳಿಂಗರಾಯನ ಕುಮಾರ |
ಒಂದು ಹರಿಣನ ಕೊಲ್ಲೆ ಮುನಿಯ ಶಾಪಕೆ ಬಂದು | ಹೊಂದನೆ ಸಿಂಹದಾತ್ಮದಲಿ    || ೩೮ ||

ಜಾಣನಾಗಿ ಅವನು ಮರಳಿ ಕೇಳಲು ಶಾಪ | ಯಾವಾಗ ಪರಿಹಾರವೆನಲು |
ಸೋಮಶೇಖರನೆಂಬ ತರಳನ ಕೈಯಿಂದ | ಲಯ ಹೋಗೆನಲು ತನ್ನ ಪುರಕೆ        || ೩೯ ||

ಧರ್ಮವಲ್ಲವು ಬೇಂಟೆ ದಶರಥನು ತೊಟ್ಟನೆ | ಕಾಯ್ದು ಎಸೆಯಲಳಿಯೆ ಗುರುಭಕ್ತ |
ಹುಸಿಯಲಿಲ್ಲವೊ ಬೇಡು ಮಾಡು ಬಾಲಯ್ಯನ ಶಾಪ | ಗಿ[ಡು]ವನು ಚರಿಸೆ ಶ್ರೀರಾಮ         || ೪೦ ||

ತಪ್ಪದು ಮೃಗಶಾಪ ಕೊಟ್ಟರೆ ರಾಜೇಂದ್ರ | ಕೆಟ್ಟ ಕೇಡಿರಿಯಾ ಪಾಂಡುವಿನ |
ಜತ್ತುಗೂಡಿರೆ ಹರಿಣ ರತಿಕ್ರೀಡೆ ಕೆಡಿಸಲು | ಶಾಪವಿತ್ತರೆ ವನವಾಸ ತಿರುಗಿ           || ೪೧ ||

ಅರಣ್ಯದೊಳು ನಿಂ[ತ] ರಾಣಿ ಕುಂತಿಯ ದುಃಖ | ಕೇಳೀ ವೇದವ್ಯಾಸ ಬಂದು |
ಆರು ಮಂತ್ರಗಳರುಹಿ ಪೋಗಲು ಪಾಂಡವ | ಕುಮಾರರ ಪಿತರಾರು ಮಂದಿ        || ೪೨ ||

ದೂರಲಾ ಮಾತೇಕೆ ರಾಯ ಕೇಳೈ ನಿಮ್ಮ | ರಾಯ ಮುಮ್ಮಡಿಯ ಪಡಿಪಾಟ |
ಹೋಗಿ ಬೇಂಟೆಗೆ ಒಂದು ಪಕ್ಷಿ ಮರಿಯನು ತುಳಿಯೆ | ಹೋಗನೆ ನಯನ ಮುನಿಯಿಂದ      || ೪೩ ||

ಬಲವಿರಲು ಬಂದಂಥ ವೈರಿಯ ಗೆಲಬೇಕು | ಪ್ರಾಣಿಗಳ ಕೊಂದೇನು ಫಲವು |
ಕಡಿಯಲಾರದ ಹೇಡಿ ಕಳ್ಳಗೆ ಬೇಂಟೆ | ಬಿಡು ರಾಯ ನಿಮ್ಮಯ ಮಾತ               || ೪೪ ||

ಕಂಡನು ಕಂಪಿಲನು ರಾಜೇಂದ್ರ ರಾಮನ ಮಾತ | ಸಂಜೀವ ಬೇಕೆನಲು ರಾಘವೇಂದ್ರ |
ಬಂದಾಗ ಹನುಮಂತ ಮಂದರಗಿರಿ ಒಯ್ದು | ತಂದಿಟ್ಟ ರಾಮರ ಬಳಿಎ              || ೪೫ ||

ಕಮ್ಮಾರ ಕೇರಿಯಲಿ ಕದಿರು ಮಾರಿಪ ಗಾದೆ | ನಮ್ಮ ಉತ್ರಗಳ ನಿಲ್ಲಿಸಿದ |
ಬ್ರಹ್ಮಾಂಡ ಮಗಚುಚ ಬಲ್ಮೆ ಯಾಡುವ ರಾಮ | ಓರುಗ [ಲ್ಲಿನ] ಬೊಲ್ಲನ ತಾರೋ   || ೪೬ ||

ಕರಿಸಿಂಹ ಶಾರ್ದೂಲ ಒಟ್ಟ್ಹಿಡಿದು ತಂದವ ನಾನು | ನರಿಗಿಂತ ಕಡೆಮಾಡಿ ಆಡಿ |
ಕಡು ಸಾಮರ್ಥಿಕೆ ನುಡಿವೆ ರುದ್ರನ ಬಳಿಯ | ಬೊಲ್ಲನ ನೀ ತರುವುದುಂಟೆ           || ೪೭ ||

ತೃಣವ ನುಡಿಯಲು ನಾವು ಭುವನವನು ತಂದಿಟ್ಟೆ | ಗಣಪತಿಯ ಮಗನಂತೆ ನೀನು |
ಗಗನದಿ ಚರಿಸುವ ತುರಗವ ತರುವೆನು | ಅರುಹುದೆ ಧರ್ಮ ನೀತಿಗಳ               || ೪೮ ||

ಎಳೆಯಲಾರದ ಎತ್ತು ಎಡೆಗೋಲ [ಜ]ರೆವಂತೆ | ಕಳೆವೋರೆ ಕಂದ ಧೀರರನು |
ಬಿಡು ರಾಯ ಅಪ್ಪಣೆಯ ನುಡಿದ ಬಾಣಕೆ ಪ್ರತಿಯ | ಹೊಡೆದಂತೆ ಆಯಿತು ಎದೆಗೆ   || ೪೯ ||

ಉತ್ತಮದ ತೇಜಿಗಳು ಪೆಟ್ಟ ಕೊಂಬುವೆ ರಾಯ | ಕಟ್ಟಿನ್ನು ಕೊಳಲೇಕೆ ಇದಕೆ |
ಎಪ್ಪತ್ತು ರಾಯನ ತೇಜಿಯ ತರದಿರಲು | ಇಟ್ಟ ಬಿರುದಿಗೆ ಹೀನ ಬಂತು              || ೫೦ ||

ರೂಢಿಸಲು ಅತಿಕೋಪ ರುದ್ರನ [ತೆ]ರದೊಳು | ರೋಮವಾಗಲು ಸರಳಿನಂತೆ |
ಪ್ರೇಮದಿ ಕೇಳರಸೆ ತೇಜಿಯ ತರದಿರಲು | ಸ್ತ್ರೀಯರಿಗೆ ಸರಿಯೆಂದು ಕಾಣಾ          || ೫೧ ||

ತಂದೆ ನೀನಾಡಲು ಈ ನುಡಿ ಕುಂದೆ ದೇ | ವೇಂದ್ರನಾಡಲು ಎತ್ತಿ ಹಣಿವೆ |
ಇಂದಿಗೆ ತಿಂಗಳಿಗೆ ತಂದರೆ ಮಗನೆನ್ನು | ಹಿಂದಾಗೆ ಮನಹಾಳ್ಹೆಂಗೂಸು             || ೫೨ ||

ರಾಮನು ಅತಿಕೋಪ ತೋರಲು ಎಲ್ಲರಿಗೆ | ಕೋಡಗ ಕಪಿಚೇಷ್ಟೆ ಮುದಿಯ |
ಮಾಡಿದ ಛಲವಾನೆಗೆ ಇರುವೆ [ಯು]ಕರೆ [ದು] | ಓಡಿ ಬಾರನೆ ಹಿಂದೆ ತಾ ಮುತ್ತಿ    || ೫೩ ||

ಬೇಡವೆನ್ನುತ ಮಂತ್ರಿ ಭೇರುಂಡನ ಮನೆಗೆ | ಹೋಗಿ ಸಾಷ್ಟಾಂಗವ ಎರಗಿ |
ಜಾಣತನವೆ ಮಂತ್ರಿ ಜೀವದೊಳಗೆ ಕುಸ್ತಿ | ನಾನ್ಯಾತಕಾಡಲಿ ಪಿತರೊಡನೆ           || ೫೪ ||

ತಪ್ಪಲ್ಲೊ ಎಲೆ ಮಂತ್ರಿ ಅಪ್ಪಾಜಿಯೆಂದುದು ಉತ್ರ | ಸಿಟ್ಟಿಲ್ಲ ಎನ್ನ ಮನದೊಳಗೆ |
ಕಟ್ಟಳೆ ಇದ್ದಷ್ಟು ಮೃತ್ಯುಂಜಯಗೆ ಬಿಡದು | ಸಿಟ್ಟು ಪುಟ್ಟಿಸದೆ ಬಿಡು ಮಂತ್ರಿ           || ೫೫ ||

ಕೇಳಿರೈ ಬಲವಂತ ಜಾಣಕೋವಿದರೊಮ್ಮೆ | ಕಾಲಗತಿಗಳು [ತ]ರುವ ಕೇಡ |
ಯಾವ ದೇಶದ ತೇಜಿ ಯಾವಲ್ಲಿ ಕುಮ್ಮಟ | ಯಾರು ಮಾಡಿದರು ವಿಧಿಬರೆಹ         || ೫೬ ||

ಮದವೆದ್ದ ಗಜದಂತೆ ದಿಗಿಲನೆ[ದ್ದನು] ರಾಮ | ಪಡೆದ ಪಿತನಿಗೆ ಕರ ಮುಗಿದು |
ಸದರನಿಳಿದು ಬೇಗ ದೊರೆ ಕಾಟ ತಾನೆದ್ದು | ನಡೆಯಲು ರಾಮ [ಯ್ಯನೊ]ಡನೆ      || ೫೭ ||

ರಾಯ ರಾಮನ ಮಂತ್ರಿ ನೀಲಕಂಠನು ನಡೆಯೆ | ಬಾಹೂರ ಬಾಣಿಯ ಮುದ್ದ |
ವೀರಸಂಗಯ್ಯನು ಧೀರ ಜಂಗಮ ಬಸವ | ರಾವುತರು ರಾಣುವೆ ಎದ್ದು               || ೫೮ ||

ಬಂದನು ಬಲದೊಡನೆ ಪ್ರಚಂಡ ಚೆನ್ನಿಗ ರಾಮ | ಚಂದ್ರಗೆರಗುವ ರವಿಯಂತೆ |
ಇಂದು ವದನೆ ಹರಿಯಮ್ಮನ ಚರಣಕ್ಕೆ | ಬಂದು ಎರಗಿದ ಬೆಂಕಿ ವರದಿ               || ೫೯ ||

ಶರಣೆಂದ ಪುತ್ರನ ಹರಸಿದಳ್ ಜನನಿಯು | ಶಿರವಿಡಿದು ತಕ್ಕೈಸಿ ಮುಂಡಾಡಿ |
ಉರಗನು ಪರೆಗವಿದ ತೆರದಿ ಕಾ[ಣುತ] ಮನಸು | ತರಳನೆ ಮತ್ತೇನು ದುಗುಡ      || ೬೦ ||

ಕಮಲಲೋಚನೆ ಕೇಳು ತಳೆಯಿಕ್ಕಿ ಕಾಟಣ್ಣ | ಮೃಗವ ತಂದನು ಬೇಟೆಯಾಡಿ |
ತಣಿದ ರಾಯನು ಭ್ರಾಂತು ಪರಿಹರಿವಂತೆ | ಜರೆದ [ನು]ಎನ್ನ ಸಭೆಯೊಳಗೆ          || ೬೧ ||

ತಾಯೆ ಕೇಳ್ ಪಿತನೆನ್ನ ಹೇಡಿ ಹೋಗೆನುತಲಿ | ಕೂಡಿದ ಸಭೆಯೊಳು ನುಡಿದ |
ಓರುಗಲ್ಲಿ[ನ] ಎಪ್ಪತುರಾಯನ ತೇಕು ತರದೆ | ನೀರ ಕೊಳ್ಳೆನು ನಿಮ್ಮ ಕರದಿ        || ೬೨ ||

ತಾಯೆ ನಿಮ್ಮ ಹೃದಯದೊಳ್ಧೀರತನದಲಿ ಜನಿಸಿ | ಹೇಡಿಯಾಗಲು ಹೀನ ನಿಮಗೆ |
ಮೂರು ರಾಯರ ಗಂಡನೆಂಬ ಬಿರುದುಗಳೇಕೆ | ಪಾಲಿಸಬಹುದಮ್ಮ ಅಭಯ        || ೬೩ ||

ಅಪ್ಪಣೆಯ ಕೊಡು ತಾಯೆ ಸತ್ಯಸಾಗರನಿಧಿಯೆ | ಮತ್ತೊಂದ ತಡ ಮಾಡಬೇಡ |
ತೊ[ಡರ]ನ್ನು ನಾ ಬೇರೆ ಸತ್ತರೆ ಬಿಡಲರಿಯೆ | ಲೋಕಾರ್ಥಕೆ ನಿಮ್ಮ ಕೇಳುವೆನು     || ೬೪ ||

ಕಡೆಯ ವಚನವ ಕೇಳು ನುಡಿಯದೆ ತಾ ಒಡಲ | ಬಿಡುವೆನಲ್ಲವೊ [ಬಿಡೆನು] ಛಲವ |
ಹಡದಾಕೆಯಲ್ಲವೆ ಒಡಲುರಿಗೆ ಒಂದನ್ನೆ | ನಡೆವ ಕಾರ್ಯವು ಜಯ ಬರದು           || ೬೫ ||

ಕಂದನಾಡಿದ ನುಡಿಗೆ ನೊಂದುಕೊಳ್ಳುತ ಜನನಿ | ಡಿಂಬದೊಳಗೆ ಕುದಿದುಕೊಂಡು |
ಹಿಂದೆ ಹೇಳಿದ ಮಕ್ಕಳಾದರೆ ದುಃಖ | ಎಂದ ಮಾತಿಗೆ ಸರಿಯಾಯಿತ್ತು              || ೬೬ ||

ಕದನವೇತಕೊ ಹಣ್ಣು ಮುದಿಜೀವನ ಕೂಡೆ | ಪಡೆದ ಪಾಡನೆ ಶಿವ ಬಲ್ಲ |
ಸುಡುಗಾಡ ಸನ್ನಿಧಿಗೆ ಹೊರಹೊರಟು ಹೋಗುವ | ಕೆಡುವ ಪ್ರಾಣಿಯ ಕೂಡೆ ಛಲವೆ  || ೬೭ ||

ಸತ್ಯವೆ ನಿನಗಿದು ಹೆತ್ತವರ ನಯನದಿ | ಉಕ್ಕಿಸಿ ಜಲವ ಹೋಗುವುದು |
ಪುತ್ರರಾಗಲಿಯೆಂದು ನೇತ್ರ ಮೂರುಳ್ಳನ | ಸ್ತೋತ್ರವ ಮಾಡಿದ ಫಲಪ್ರಾಪ್ತಿ          || ೬೮ ||

ಹಲವು ದೈವಕೆ ನಾವು ಹರಸಿ ಪಡೆಯಲು ರಾಮ | ಅಲಗಾಗಬಹುದೆ ರಾಯನಿಗೆ |
ಅಳಿದ ಯುಗದೊಳಗುಂಟೆ ನಡೆವ ಸ್ಥಿತಿಯೊಳು ಇನ್ನು | ಪೊಡವಿಯೊಳುಂಟೆ ಈ ಕರ್ಮ      || ೬೯ ||

ಮಾತೆ ಪಿತರಿರುವುದು ಪುಣ್ಯಾತ್ಮ ಜೀವವೊ ರಾಮ | ಏಕೋದರನು ಪರಂಜ್ಯೋತಿ |
ಲೋಕಬಲ್ಲುದು ಕೇಳೊ ಸಿಂಧು ಬಲ್ಲಾಳನಿಗೆ | ಪ್ರತಿಯಾಗಿ ಮಗನಾದುದರಿಯಾ     || ೭೦ ||

ಅಮ್ಮಾಜಿ ಅಪರಂಜಿ ಚಿನ್ನವೆ ಲಾಲಿಸು | ಬಿನ್ನಪವ ನಿಮ್ಮ ಸೇವಕನ |
ಎನ್ನೊಳಗೆ ತಪ್ಪಿರಲು ಏಕಾಂತ ಸ್ಥಾನದಿ ಬಾಯ | ಒಮ್ಮೆ ಬಡಿಯಲು ಸುಮ್ಮನಿರುವೆ || ೭೧ ||

ಸಭೆಯೊಳಗೆ ಹಿಂದೊಬ್ಬ ಮಗನ [ಹ]ಳಿಯಲು ಪಾರ್ಥ | ಕದನವಾದುದ ಕೇಳಿ ಅರಿಯಾ |
ಬಿಡುಬಾಯಿ ಈ ನೀತಿ ನುಡಿಯ ಕೇಳವು ಕರ್ಣ | ಕೊಡು ತಾಯಿ ಹೊರಪಯಣವಿಂದು        || ೭೨ ||

ಮಂತ್ರಿಗಳು ಮನ್ನೆಯರು ಬಲವಂತ ಧೀರರು | ಭೂಕಾಂತ ರಾಮನಿಗೆ ಬಿನ್ನವಿಸೆ |
ಕಾಂತ ಮುಪ್ಪಿನ ಕಾಲ ಕದನ ಸೈರಿಸಬಹುದೆ ಬಲ | ವಂತವೆಂಬರು ಓರುಗಲ್ಲ       || ೭೩ ||

ಲಾಲಿಸಿ ಮನ್ನೆಯರು ಆಳು ತುರಗವು ಸಹ | ಸಾವಿಗಂಜದ ಮಂದಿ ಬನ್ನಿ |
ಜೀವದಾಸೆಗಳಿದ್ದ ಬಂಟರಿಲ್ಲಿರಿಯಿಂದು | ನಾ ಹೋಗಿ ತರುವೆ ತೇಜಿಯನು           || ೭೪ ||

ಕ್ಲೇಶದ ನುಡಿಯೆಂದು ಕದನ ಶೂರರು ಬೇಗ | ಭೂಷಣಂಗಳನಳವಡಿಸಿ |
ಸೂಸಲು ರಣಭೇರಿ ಶೃಂಗರವಾಗಿ ಕರಿತುರಗ | ಹಾಕಲು ಜಾಂಡೇವ ಹೊರಗೆ       || ೭೫ ||

ಭೇರಿಯ ಧ್ವನಿಯನು ಕೇಳಿ ಹರಿಯಮ್ಮನು | ಹೋಗದೆ ಅವ ಬೇರೆ ಬಿಡನು |
ಕ್ಷೀರವು ಉಕ್ಕಿದ ನಾರಿಯಂದದಿ ಕುದಿದು | ಭಯಂಕರ ತೋರಿ ಪೇಳಿದಳು           || ೭೬ ||

ಓರುಗಲ್ಲೆಂಬೋದು ಊರೇನೋ ಎಲೆ ರಾಮ | ಬೇರೊಂದು ಲೆಂಕೆಗೆ ಪ್ರತಿಯು
ಯಾರು ಮುತ್ತಲು ಮರಳಿ ಊರ ಸೇರಲು [ಇಲ್ಲಿ] | ಸೂರ್ಯನ ಮಗನೂರೆ ಗತಿಯು || ೭೭ ||

ಗಂಡಸು ನಿಮ್ಮಯ್ಯ ದಂಡನೆ ಕೊರೆಹಾಕಿ | ಕಂಡಿಯ ಮುರಿದೋಡಿ ಬರನೆ |
ಮಂಡೆ ಮಸ್ತಕವಿಟ್ಟು ಮಲಗನು ಮೂಲೆಗೆ | ದಂಡುಂಟು ಕೋಟಿ ಬ[ರ]ವಗೆ          || ೭೮ ||

ಹೆಸರನು ತಿಳಿ[ಯ] ಬಲ್ಲ [ಡೆ]ದೆಸೆಕಲ್ಲೆಂಬ | ಅಸಮಾಕ್ಷನಿಟ್ಟಂಥ ನಾಮ |
ಉಸುರುವರಳವಲ್ಲ ಊರಿನಚ್ಚರಿಯನು | ಹಸಿಯ ಸೀಸದ ಕೋಟೆ ಕೊತ್ತಳವು       || ೭೯ ||

ನಗರವೆಂದರೆ ಮಗನೆ ಎದೆಶೂಲ ವೈರಿಗಳ | ಮೊಗಲ ಪಾಚ್ಛಾಡಿಳ್ಳಿಯಲಿ |
ತೆಗೆಯಲಮ್ಮರು ಕೋಟಿ ಕದ[ವನು] ದಿಕ್ಕಿನಲಿ | ಬೆದರಿ ಬೀಳ್ವರು ದಿನಕೆಂಟು ಬಾರಿ  || ೮೦ ||

ಅಂಥವನಾಗಲು ನಿಂತಿರುವುದು ತೇಜಿ | ಭ್ರಾಂತೇನೋ ನೀ ತಿಳಿದು ನೋಡು |
ಪಂಥ ಪಾಡಿನ ಮೇಲೆ ನೀ[ನೆತ್ತಿ] ಹಿಂದಕೆ | ಪೋಗಿ ಕಾಲಾಂತ್ರ ಹೋಗಲಳವೆ        || ೮೧ ||

ಸುಡು ತಾಯಿ ನಿಮ್ಮಾತ ನುಡಿ ಕಿವಿಗೆ ಬೀಳಲು | ಹೊಡೆಯಬೇಕಾತನ ಮೇಲೆ |
ಕೊಡಲಿ ಒಳ್ಳೆದರಲ್ಲಿ ಗಿಡವ ಕಡಿದರೆ ತಾಯಿ | ಒಡೆಯದೆ ಕೆಚ್ಚಾದ ಮರನ            || ೮೨ ||

ಮಲೆತವ ಮರ್ದಿಸಲು ಬಡವನು ಜರ್ಝರಿಸಿ | ಕಡೆಯ ಬಾಗಿಲ ಕಾಯ್ದು ಇರುವ |
ಹಡೆದರೆ ಹಣೆಯೊಳು ಬರೆದಾಕೆ ನೀನಹುದೆ | ತಾ ಪಡೆದಿರುವ ಫಲಪ್ರಾಪ್ತಿ ಬಲ್ಲ್ಯಾ    || ೮೩ ||

ಹಡೆಯಲ್ಕೆ ನೀ ಕರ್ತು ಪಡೆಯಲ್ಕೆ ನೀ ಕರ್ತು | ಸೂತ್ರವಿಡಿದು ಆಡಿಸುವನು ಬೇರಿಹನು |
ಕರಿಯ [ಘಟೆಯನು] ಒಯ್ವ ಭೇರುಂಡನೆದೆಯೊಳು | ನಾರಿಯ ಸಾಹಸವೇಕೆ ಪೇಳಿ || ೮೪ ||

ಕಡೆಯ ಬಿನ್ನಹ ಕೇಳು ಪಡೆದಂಥ ಜನನಿಯೆ | ಕೊಡಲೇಸು ಪ್ರೀತಿಲಿ ಅಪ್ಪಣೆಯ | ಸ
ಬರುತಿದೆ ಕಾಲಾಗ್ನಿರುದ್ರ ಕೋಪವು ಬರಲು | ನಡೆವೆನು ನಿಮ್ಮಾಜ್ಞೆಮೀರಿ            || ೮೫ ||

ಮಗನ ಮಾತಿಗೆ ಜನನಿ ಹದಮೀರಿತೀ ಕಾರ್ಯ | ಮಿಗೆ ವ್ರತದ ಪುತ್ರನ ನೋಡಿ |
ತೆಗೆದಪ್ಪಿ ಮುಂಡಾಡಿ ಹರಸಿ ಸೇಸೆಯನಿಟ್ಟು | ಪವಳದಾರತಿಗಳ ಬೆಳಗಿ             || ೮೬ ||

ತಾಯ ಹರಕೆಯ ಕೊಂಡು ರಾಯ ರಾಮನು ಕಾಟ | ಓಲಗ ಸಾಲೆಗೆ ಕುಳಿತು |
ರಾಯ ಕಂಪಿಲ ಒಳ್ಳೆ ಸಂಬಂಧಿಕರ ಕರೆಸಿ | ನಿಯೋಗಿ ಪ್ರೌಢರನು ಸಾಗಿಸಿದ        || ೮೭ ||

ಹತ್ತು ಸಾವಿರ ಕುದುರೆ ಮೂವತ್ತು ಸಾವಿರ ಮಂದಿ | ಸೊಕ್ಕಿದ ಕರಿಗಳೇಳೆಂಟು |
ದಿಕ್ಕು ದೇಶದ ಬಲ್ಲ ಆಪ್ತ ಜನರನು ಕೊಟ್ಟು | ಎಚ್ಚರವೆನೆ ಗಲ್ಲವ ಪಿಡಿದು              || ೮೮ ||

ತರಳರಿರ್ವರು ತಮ್ಮ ಪಡೆದ ಪಿತನಿಗೆ ಎರಗೆ | ಶಿರವಿಡಿದು ತರ್ಕೈಸಿಕೊಂಡು |
ಮೊದಲಾಗಿ ನಾ ಮುತ್ತಿ ನಗೆಗೇಡಿಗೊಳಗಾದೆ | ಹದನರಿತು ನೋಡಿ ಹವಣೆಯ       || ೮೯ ||

ಆದರೊಳ್ಳಿತು ರಾಯ ಅ[ಳಿ]ವು [ಬೆಳೆಯ]ನೆ ತಿಳೀದು | ಮುನಿಸಾಗಿ ಬಂದೆನೆಂದು ಪೋಗುವೆನು |
ಮೇಲವನ ಶಕ್ತಿ ಸಾರವನೆಲ್ಲ ತಿಳಿದು ವಶವಾಗ | ದಿರಲು ಶಕ್ತಿಯಲಿ ಬರುವೆವು       || ೯೦ ||

ರಾಜೇಂದ್ರ ಕಂಪಿಲಗೆ ಸಮಾಧಾನ ಶಾಂತಿಯ | ಪೇಳಿ ತೇಜಿಗಳನೇರಿ |
ಇರ್ವರು ಸಾರುವ ರಣಗಾಳೆ ಸಂಭ್ರಮದೊಳು | ಸಾಗಲು ಜಟ್ಟಂಗೀಶನ ಗುಡಿಗೆ     || ೯೧ ||

ಮುಂಗಾರ ಸಿಡಿಲಂತೆ ಬಂದು ಪಾದಕೆ ಎರಗಿ | ಕೊಂಡಾಡಿ ಶಿವಮಹಿಮೆಯ ಸ್ತುತಿಯ |
ಕಂದನ ಅಪರಾಧ ಮುಂದೆ ನಿಮ್ಮದು ಎಂದು | ಚಂದ್ರಧರನೆ ದೃಷ್ಟಿ ಇರಲಿ           || ೯೨ ||

ಛಲಕೆ ಪೋಗುವೆ ಸ್ವಾಮಿ ದಯವಿರಲಿ ಪಾದವ | ತೊಳೆವ ಸೇವಕರೊಳಗೆ ಕೃಪೆಯ |
ಛಲದಂಕನಹುದೆಂದು ನಿಗಮಲೋಚನ ಪುಷ್ಪ | ಒಗೆಯಲು ಬಲದಿಂದ ತೆಗೆದು      || ೯೩ ||

ಅಭಯವಾಗಲು ರಾಮ ನಲಿದು ಹಿಗ್ಗುತ ಬಂದು | ತ ತುರಗವೇರಿದನು ಗೆಲವಿನಲಿ |
ಹೊಡೆಯಲು ರಣಭೇರಿ ನಡೆಯಲು ದಂಡೆದ್ದು | ಗುಡುಗುಡಿಸಿ ಈಶಾನ್ಯದೆಸೆಗೆ       || ೯೪ ||

ಮೂರಾರು ಪಯಣಕ್ಕೆ ಹೋಗಿ ಗುತ್ತಿಗೆ ಇಳಿದು | ರಾಯ ಚಾಮಯ್ಯನ ಕರೆಸಿ |
ಸಾಗುವ ಕಾರ್ಯ [ದ] ಸುಳುಹು ಸೂಚನೆ ಪೇಳಿ | ಮೀರಿದರೆ ಬಲ ತುರುಗ ಕಳುಹೋ        || ೯೫ ||

ಒಳ್ಳೆಯದು ಎನಲವ[ನು] ಬೆಳ [ಗಿನಲಿ] ದಂಡೆದ್ದು | ಕಲ್ಲತೋಟಕೆ ಹೋಗಿ ಬಿಡಲು |
ನಿಲ್ಲದೆ ನಿಂತಲ್ಲಿ ಮೆಲ್ಲನೆ ನಡೆಯದೆ | ಮತ್ತೆಲ್ಲಿ ದಾಂಟಲು ಕೃಷ್ಣವೇಣಿ                  || ೯೬ ||

ಮೂರು ತಿಂಗಳ ದಾರಿ ಮೂವತ್ತು ದಿವಸಕೆ ನಡೆದು | ಭಾರಂಗಿ ಬಳ್ಳಾರಿಗಿಳಿಯೆ |
ತೋರಿತು ಇದಿರಾಗಿ ಓರುಗಲ್ಲನೆ ಕಂಡು | ಹಾರಲು ರಾಮನ ಎದೆಯು              || ೯೭ ||

ನೋಡಯ್ಯ ಕಾಟಣ್ಣ ಜೋಡುಂಟೆ ಈ ಪುರಕೆ | ರಾವಣನ ಲೆಂಕೆಗೆ ಪೋಲುವುದು |
ಹೇಳಬಹುದು ನಮ್ಮ ರಾಯ ಕಂಪಿಲ ಭೂಪ | ಓಡಿಬಂದುದು ನಿಜವುಂಟು           || ೯೮ ||

ಮಣಿಯಬಲ್ಲನೆ ಇವ ಮೊಗಲ ಪಾಚ್ಛಾಯಗೆ | ಅದರಿಂದ ತೇಜಿ ನಿಂತಿಹುದು |
ಕಡಿಮೆಯ ದೊರೆಗಳು ಇವನ ದೃಷ್ಟಿಗೆ ಉಂಟೆ | ಬಡವ ಕಂಪಿಲಗೆ ಬೆದರುವನೇ      || ೯೯ ||

ನೋಡುವ ಮುಂದಣ ಯೋಗ ಹೋಗಿಹುದೆಂದು | ಹೋಗಿ ಬ್ರಹ್ಮಯ್ಯನ ಗುಡಿಗೆ |
ಬೇಗದಿ ಬಲವಂತ ನಿಯೋಗಿ ಜಾಣರ ಕರೆಸಿ | ಹೇಳಿರೊ ರುದ್ರಗೆ ಬಂದ ಸ್ಥಿತಿಯ     || ೧೦೦ ||

ಮಾತಾ ಪಿತಿರೊಳು ಮುನಿದು ಮಗನು ಬಂದನು ಎಂಬ | ಮಾತಿಗೆ ಮೊದಲಕ್ಷರವು |
ಭೂಪ ನಿಮ್ಮಯ ಬಳಿಯ ಚಾಕರಿಯ ಧರ್ಮಕ್ಕೆ | ಬೇಕಾಗಿ ತಾನಿರುವನಿಲ್ಲಿ           || ೧೦೧ ||

ಮಾತಿಲಿ ಒಳಪೊಗುವ ಮರಳುವ ಕಾಲಕ್ಕೆ | ಹಾಕುವ ಬಿರಿದು ಬೆಂಕಿಯನು |
ಪಾಪಕೊಗ್ಗುವನಲ್ಲ ಛಲಕೆ [ಬಂ]ದರೆ ಹೊರಟು | ಹಾಕುವೆ ಕತ್ತಿ ಹೋಗೆನಲು         || ೧೦೨ ||

ರುದ್ರಭೂಪಾಲಕನಿರ್ದನು ತನ್ನಯ | ಒಡ್ಡೋಲಗದ ಸಂಭ್ರಮದಿ |
ಇದ್ದಂಥ ಸಮಯದಿ ಈ ರಾಮನ ಹೆಜೀಬರು | ಬರಲು ಬಾಗಿಲವರು ತಡೆಯೆ         || ೧೦೩ ||

ತಡೆ[ದಿ]ರೆ ಲೇಸೆಂದು ನುಡಿಯಿರೆ ನಿಮ್ಮಯ | ಒಡೆಯ ರಾಜೇಂದ್ರನ ಕೂಡೆ |
ಪಡೆದ ಕಂಪಿಲನೊಳು ದುಗುಡದಿ ರಣರಾಮ | ನಿಮ್ಮೆಡೆಗೆ ಬಂದನು ಎಂಬ ವಿವರ   || ೧೦೪ ||

ಬಾಗಿಲ ಚರ ಬಂದು ರಾಯನಿಗುಸುರಿದ | ದಾಯಾದಿ ಕಂಪಿಲನ ಮಗನು |
ಸ್ವಾಮಿ ನಿಮ್ಮಯ ಬಳಿ ಓಲೈಸ ಬಂದವನೆ | ಯಾವ ಹದನೋ ಕಾಣಲರಿದು         || ೧೦೫ ||

ನುಡಿಯ ಕೇಳುತ ರುದ್ರ ಒಡನೆ ತಾ ಮರನಾದ | ಇದುಯೇನು ಚೋದ್ಯದ ಹೊಳವೊ |
ಧರಣಿಯೊಳವ ಮಾಳ್ಪ ಕಾರ್ಯ ಪೇಳಲು ಮೂರು | ನಯನವುಳ್ಳವಗಸದಳವು      || ೧೦೬ ||

ಆಗಲಿ ಅದಕೇನು ರಾಯನ ಸುತನಾಸೆ | ನಾವು ತಿಳಿವ ಜಾಣರಿಂದ |
ಮುನಿದು ಬಂದಿರಲವಗೆ ಮನ್ನಣೆ ಪೇಳಿ ಕಳುಹುವಾ | ಹಿರಿಯತನವು ನಮಗಹುದು  || ೧೦೭ ||

ಹಗೆಯವನು ಬಂದಲ್ಲಿ ಹಾಲು ಅನ್ನವ ನೀಡಿ | ಹೋಗು ಎಂದರೆ ಶಿವಗೆ ಮೆಚ್ಚು |
ಏನಿರೈ ಮಂತ್ರಿಗಳು ಸನುಮತವೆ ನಿಮಗೆನಲು | ಆಡು [ವರ]ವರು ತಿಳಿದಂತೆ       || ೧೦೮ ||

ಒಳ್ಳಿತಾಗಲು ಭೂಪ ಸುಳ್ಳಿಗೆ ಸುಳ್ಳಾಡಿ | ಕಳ್ಳನಾಗಲುವೆಂಬ ಗಾದೆ |
ಇನ್ನು ಲಾಲಿಸು ರಾಯ ಶ್ರೀರಾಮನ ಮಕ್ಕಳಿಗೆ | ಹೊಲ್ಲಬಾರದೆ ರಾಗದ್ವೇಷ          || ೧೦೯ ||

ಮಂತ್ರಿ ಮನ್ನೆಯರೆಲ್ಲ ಸಂತಸದಿ ಒಪ್ಪಲು | ತಂತ್ರಿ ಲಿಂಗಣ್ಣನ ಕರೆದು |
ಅಂತರಂಗದಿ ಆಡೊ ವಚನಭೇದವ ತಿಳಿದು | ಮುಂಚೆ [ತಾ]ರಯ್ಯ ಹೇಜಿಬರ       || ೧೧೦ ||

ಸಾಗಿ ಬಂದನು ಲಿಂಗ ಬಾಗಿಲ ಬಳಿಯಿರುವ | ಹೇಜೀಬರ ಒಡನೆ ಕರೆದು |
ಏನಿರೈ ಬಂದಂಥ ಕಾರ್ಯಸ್ಥಿತಿಗಳ ಪೇಳಿ | ರಾಯ ಕಳುಹಿದ ರುದ್ರಭೂಪ            || ೧೧೧ ||

ಬಾಗಿಲ ಬಳಿಯ ಕೇಳಯ್ಯ ಲಿಂಗಣ್ಣ ಹೇಳಲು | ಹುಸಿಯೆಂದು ತೋರುವುದು ನಿಮಗೆ |
ರಾಯ ರಾಯರ ಗೆದ್ದ ರಾಮಯ್ಯ ಕಂಪಿಲಗೆ | ನ್ಯಾಯ ಬಂದುದು ಒಂದು ಕಥೆಗೆ      || ೧೧೨ ||

ಹೇಳ್ವೆವು ಠವುಳೆಂದು ತೋರುವುದು ಕೆಲಬರಿಗೆ | ಜಾಣ ಬಲ್ಲನು ಅದರ ಸುಳುಹ |
ಸೂಳೆ ರತ್ನಿಯ ತಂದ ಮುಲ ಬಲ್ಲಿರಿ ನೀವು | ಹೇಳಿದ ಕಥೆಗಿದು ಬಂತು              || ೧೧೩ ||

ಮಾತಿಲಿ ಹೊಳಹನು ಕಾಣನು ಲಿಂಗಣ್ಣ | ಭೂಪರುದ್ರಗೆ ಪೇಳ್ವೆನೆನುತ |
ಲೋಕನಾಯಕನೆಡೆಗೆ ಬಂದು ಕರಗಳ ಮುಗಿದು | ವಾಕ್ಯದೊಳಗೆ ಹೊಳವಿಲ್ಲ       || ೧೧೪ ||

ಸಹಜವೆಂಬುವದಾಗಿ ತೋರುತಿರ್ಪುದು ರಾಯ | ಪಾದದೊಳೊಮ್ಮೆ ಲಾಲಿಪುದು |
ಭೇದವ ಪೇಳ್ವರು ಸೂಳೆ ರತ್ನಿಯ ಕಾಲ | ಆದರೂ ನಿಜವೆನ್ನಬಹುದು                 || ೧೧೫ ||

ಅಪ್ಪಾಜಿಯೊಳು ಕ್ರೋಧಬಟ್ಟು ಬಂದನು ಎಂದು | ಕಟ್ಟುತ್ರದೊಳಗೆ ಪೇಳುವರು |
ಮತ್ತಾರು ಬಲ್ಲರು ಅಂತರಂಗದ ಮನವ | ನಿಶ್ಚಯಿಸಿ ನೀವೊಮ್ಮೆ ಕರೆಸಿ             || ೧೧೬ ||

ಬರಹೇಳು ಹೇಜಿಬರ ತಿಳಿದು ನೋಡುವ ಸುಳುಹ | ಕರೆಯೆನಲು ಚರರೋಡಿ ಬಂದು |
ದೊರೆಯ ಅಪ್ಪಣೆಯಾಯ್ತು ಬಿಡಿಯೆನಲು ಬಂದಾಗ | ಕರಮುಗಿಯೆ ರುದ್ರನಿಗೆ ಬೇಗ || ೧೧೭ ||

ಮಂಡಲೀಶ್ವರನೆ ಮಾರ್ತಂಡ ಭೂಪಾಲನೆ | ಖಂಡೆಯ ಕದನ ಪ್ರಚಂಡ |
ಬಂದೀತು ತೃಣದೊಳು ತಂದೆ ಮಗನಿಗೆ ಜಗಳ | ಕಂಡು ಬಳಲಿ ನಿಮ್ಮೆಡೆಗೆ          || ೧೧೮ ||

ರಾಯರ ಮಗಬಂದು ಪರರಾಯರ ಕಾಯಲ್ಕೆ | ಬೇರೊಂದು ಗಡಿ ಹುಟ್ಟದಿಹನೆ |
ಭೀಮನೆ ಸಮಶಕ್ತಿ ಪೇಳುವರು ಈ ಮಾತು | ತೋರುವುದು ಹೊಳವಾಗಿ ನಮಗೆ    || ೧೧೯ ||

ಉಂಟಹುದು ಪ್ರತಿಭೀಮ ಇಲ್ಲೆನಲು ಕಳ್ಳರು | [ದಂ]ಡಿಸಿದ ವೈರಿಗಳ ಮಿಂಡ |
ಕಂಡಕದಿ ದಿವ್ಯಶಾಂತರಿಗೆ ಬಿಡುವಾದೆ | ಬಂದಿತ್ತು ರತ್ನಿ ಮೂಲದಲಿ                 || ೧೨೦ ||

ಬೇಡವಳು ಕುಲಗೇಡಿ ರಾಯರಿಗೆ ವರಹೀನ | ನೋಡೆಂದ ಕುಲದೊಳಗಿಂಟ |
ಕೇಳದೆ ಅವರನ್ನ ಮೂಳ ಹಮ್ಮಿನ ಮೇಲೆ | ಕೀಳು ಮೇಲಾಗಿ ಆಡಿದನು              || ೧೨೧ ||

ರತ್ನಾಜಿ ಕುಲವಂಶ ಚಿತ್ತಕ್ಕೆ ತಿಳಿದುಂಟು | ಬಿಚ್ಚಿ ಆಡಲು ಏನು ಹುರುಳು |
ಪುತ್ರ ರಾಮನು ನೀವು ಈ ಕರ್ತರು ಮಾತಾಡಿ | ಸತ್ಯ ಕಾಬುದು ನಿಮ್ಮ ಮನಕೆ      || ೧೨೨ ||

ಆದಡೆ ಆದೀತು ಸಹಜವಾಗಿದೆ ಮಾತು | ಕೇಳಿದಿರೆ ಮಂತ್ರಿ ಮನ್ನೆಯರು |
ಸೂಳೆಯಾದರೆ ಏನು ಶುದ್ಧ ಕುಲದ ಒಳಗೆ | ಮೂಗಾಳ ಸುರೆ ಕುಡಿವ ಜಾತಿ          || ೧೨೩ ||

ದೊರೆಯಬಹುದು ಅದಕೇನು ತರಬಹುದು ಹನ್ನೆರಡು | ಕುಲ ಸಂಗ ಶುದ್ಧವಾದವನು |
ಕುಲದೀಪವಾಗಲು ಮುನಿದೆದ್ದು ತಾ ಬಂದು | ತಲೆ ಹೊಡೆವ ಮತ್ತೊಬ್ಬನಾಗೆ        || ೧೨೪ ||

ಕವಡಿಲ್ಲ ಮಾತಿಲಿ ನಿಜಮಾಡಿತೆಂದೆನುತ | ಕೊಡಿಸಿ ಬಂದವರಿಗುಡುಗೊರೆಯ |
ಕರೆಸುವೆ ನಾಳಿನ್ನು ದಿವಸ ಒಳ್ಳಿದು ಹೋಗಿ | ನಿಮ್ಮರಸಗೆ ಉಸಿರಿ ಹೀಗೆಂದು        || ೧೨೫ ||

ಸ್ಥಾನಪತಿಗಳು ಬಂದು ಹೇಳಿದರು ಕರಮುಗಿದು | ಆದುದು ಮನದೊಳಿದ್ದಂತೆ |
ನಾಳಿನ ಒಳಗಾಗಿ ಕರೆಸುವೆನೆಂದೆಂಬ | ಬಹಳ ಮನ್ನಿಸಿದ ರಣಭೂಪ                || ೧೨೬ ||

ಚಂದವಾಯಿತು ಎಂದು ಬಿರಿದಾಂಕ ರಾಮನು ಕಾಟ | ಬಂದು ಗುಂಡಬ್ರಹ್ಮಯ್ಯನ ಗುಡಿಗೆ |
ಹರುಷದಿ ಪೂಜೆ ಪುಷ್ಪವ ಮಾಡಿ ಶರಣೆಂದು | ಆನಂದದಿ ಡೇರ್ಯಕ್ಕೆ ಬರಲು        || ೧೨೭ ||

ಅನಿತರೊಳಗೆ ಸೂರ್ಯ ಜನನಿ ಗರ್ಭವ ಸೇರೆ | ಪರಮಾನ್ನ ಸವಿದು ನಿದ್ರೆಯಲಿ |
ಮಲಗಿರಲು ಸ್ವಪ್ನಕ್ಕೆ ಸುಳಿದನು ಬ್ರಹ್ಮಯ್ಯ | ಅಗಣಿತ ರೂಪವನು ಧರಿಸಿ            || ೧೨೮ ||

ಕಾವಿ ಕಮಂಡಲ ಕರದೊಳು ತ್ರಿಶೂಲ | ಮಾಯದ ಮರುಳ ತಂಡಗಳು |
ಕಾಮನ ಉರಿಪಿದ ಬೂದಿ ಮೈಯೊಳು ಪೂಸಿ | ಬಾಲ ರಾಮಗೆ ಬಂದು ಸುಳಿಯೆ     || ೧೨೯ ||

ಹರ ರೂಪವನೆ ಕಂಡು ಬೆದರದೆ ಮನದೊಳು | ಕರಮುಗಿದನು ಕನಸಿನೊಳಗೆ |
ತರಳಗೆ ಕೃಪೆಯಾಗಿ ಕರುಣಿಸಿದೆ ಪಾದವ | ಎರಗುವೆ ಸಾಷ್ಟಾಂಗ ಬಿನ್ನ              || ೧೩೦ ||

[1] + ಶ್ರೀ ಗುರುಬೇಂನ್ನಮ್ಮ ಶ್ರೀ ವಿರೂಪಾಕ್ಷಲಿಂಗಾಯ ನಮಃ (ಮೂ)