ಕಾರ್ತಿಕರಾಯನಿಗೆ ನೆಟ್ಟಿತು ಮನದೊಳು | ದೃಷ್ಟವೊ ಮುನಿಯ ಗಾರುಡವೊ |
ಹೊತ್ತದೆ ಬೆಂಕಿಯ ಹೊಗೆಯ ಕಾಣದೆ ಪರಮ | ಮೃಷ್ಟಾನ್ನ ಉಂಡ ಪರಿ ಹೇಗೆ       || ೧೨೧ ||

ಕೇಳಿ ಪೋಗುವೆನಿದರ ಮೂಲತಂತ್ರದ ಬಗೆಯ | ಭಾವ ದೃಷ್ಟವೊ ಯೋಗ ಬಲವೋ |
ದೇವರ ದೇವನೆ ಪಾವನ ಪರಿಶಿವನೆ | ಮಾಯ ತಂತ್ರವ ಪೇಳು ಗುರುವೆ            || ೧೨೨ |

ನೃಪನು ಕೇಳಲು ಮಗನೆ ಉಸುರುವನು ಮುನಿವರನು | ಹತಕಾಲ ಮರೆದು ಕೆಡುವನು |
ವಿಪರೀತ ಕಾಲಕ್ಕೆ ವಿನಾಶ ಬುದ್ಧಿಗಳೆಂಬ | ತೆರಬಂತು ಮುನಿವರಗೆ ಮಗನೆ         || ೧೨೩ ||

ದೇವರತ್ನದ ನೆಲೆಯ ಕಾಳದೈತ್ಯನ ಮಥನ | ಮೋಹಿನಿಯೊಡನೆ ಪೇಳ್ವಂತೆ |
ಹೋಗುವ ಮಾರಿಯ ಊರಿಗೆ ಕರೆಕೊಂಡ | ತೆರನಾಯಿತಲ್ಲ ಕೊಣಬನಂತೆ          || ೧೨೪ ||

ಪಶುವಿನ ಮೂಲದಿ ತೃಷೆಯು ಅಡಗದೆ ಅರಸೆ | ಋಷಿಗಳಿಗೆಲ್ಲ ಅನ್ನಗಳು |
ಶಶಿಧರನು ಕಳುಹಲು ಕಾಮಧೇನೆಲೆ ರಾಯ | ಬಿಸಿಯನ್ನ ಸವಿದಿರಿ ಎಲ್ಲ             || ೧೨೫ ||

ಹರಹರ ಎನುತಲಿ ಕರಮುಗಿಯೆ ಕಾರ್ತಿಕನು | ಅರುಹುವರು ಚಾಡಿ ಮಂತ್ರಿಗಳು |
ಧರಣಿ ಪಾಲಕರೊಳಗೆ ಇರಬೇಕು ಈ ಪಶುವು | ಮುನಿಗೇಕೆ ಕಾಡ ವಾಸರಿಗೆ         || ೧೨೬ ||

ಒಂದರ ಬದಲು ನೂರೊಂದ ಕೊಡುವೆನು ಮುನಿಎ | ಸಂದೇಹ ಬೇಡ ಮನದೊಳಗೆ |
ಮುಂದಾಗಿ ಪಿಡಿಕೊಳ್ಳು ಮುನ್ನೂರನಾದರು ಕಡೆಗೆ | ಹಿಂದಾಗಿ ಕೊಡಿ ನಿಮ್ಮ ಒಡವೆ || ೧೨೭ ||

ಚೆಂದವಾಯಿತು ಇತ್ತ ಬಾರೆಂದರೆ ಮನೆಯನು | ಇಂಬುಗೊಂಡರು ಎಂಬ ಗಾದೆ |
ಕೊಂದೆನೆಂಬಾತಗೆ ಕೋಲನು ಕರಕಿತ್ತ | ಎನ್ನಿಂದವೆ ತನಗಾಯಿತೆಂಬ               || ೧೨೮ ||

ಮಾಡುವುದೇನು ಕಲಿಕಾಲದ ಮಹಿಮೆಯ | ಮಾಡಿದುಪಕಾರಕಪಕಾರ |
ರೂಢಿಯೊಳರಸಂಗೆ ಆದಾರ ತೋರುವವ | ಮೂಢನಲ್ಲದೆ ಜಾಣನಲ್ಲ               || ೧೨೯ ||

ನಾನಾ ಜೀವಂಗಳಿಗೆ ಮಾಡಬಹುದುಪಕಾರ | ಮಾನವಜನ್ಮಕೆ ಮಾಡಸಲ್ಲ |
ಶ್ವಾನಗೆ ಕ್ಷೀರಾನ್ನ ಹಾಕಿ ಸಾಕಲು ಬಿಡದು | ತಾ ಬಿಡದು ಮಲವ ತಿಂಬುದನು        || ೧೩೦ ||

ನೂರವ ಕೊಡಲೆಂದು ಆಡಲು ನೃಪವರನೆ | ಜೋಡಹುದೆ ರತ್ನಕ್ಕೆ ಮುತ್ತು |
ಬೇಡಿದ ಬಯಕೆಯ ನೀಡುವ ಕಾಮಧೇನುಗೆ | ನಾಡಾಡಿ ಪಶುಗಳು ಎಣೆಯೆ         || ೧೩೧ ||

ನಮ್ಮದಲ್ಲವೊ ಗೋವು ಆಜ್ಞೆಮಾಡಿ ಕೆಡಲೇಕೆ | ನಿಮ್ಮಿಚ್ಛೆ ಬರುವುದಕೆ ಮರುಳೇ |
ಬ್ರಹ್ಮಾದಿ ವಿಷ್ಣುಗಳಿಗೆ ಅಳವಡದು ಲೋಕದ | ಹುಲ್ಲುಗೋವೇನೊ ಎಲೆ ರಾಯ       || ೧೩೨ ||

ಬೇಡವೊ ಮುನಿರಾಯ ಕೇಳುವೆನು ಕರ ಮುಗಿದು | ಕಾಡುವ ಭಯಗಳನು ತೋರೆ |
ಬೇಡುವೆನು ಕರೆದೆನ್ನ ನೀಡಿದುಪಚಾರಕ್ಕೆ | ರೂಢಿಸಲು ಕೋಪ ಪಿಡಿಸುವೆನು         || ೧೩೩ ||

ಕೊಡುವರೆ ನಮ್ಮಿಚ್ಛೆ ಒಡವೆ ಬಾಧ್ಯರು ಬೇರೆ | ಹಿಡಿಯಲು ಬಲವ ತಿಂಬುವುದು |
ಸಿಡಿಲಿನ ಮರಿಯೊಳು ಸರಸವಾಡಲು ಉರಗ | ಕೆಡದೇನು ರಾಜೇಂದ್ರ ಕೇಳು       || ೧೩೪ ||

ಪ್ರೀತಿಯೊಳ್ ಕೊಡು ಮುನಿಯೆ ಭೀತಿಗಂಜೆನು ನಿಮ್ಮ | ಮಾತಿಗೋಸ್ಕರ ಪೇಳುವೆನು |
ಹಾಕಿ ಹಿಡಿಸುವೆ ಹಗ್ಗ ಹಗಲೆಲ್ಲ ನಿಮ್ಮೊಳಗೆ | ಮಾತೇನು ಎಂದು ಬಲಕುಸುರೆ        || ೧೩೫ ||

ಹಿಡಿಯಲು ಬಾರದರಸೆ ಜಡಮತಿಯ ಸುಡು ನಿನ್ನ | ಪಡೆಯ ನೀಗದೆ ನಿಮಿಷದೊಳಗೆ |
ಸಿಡಿಲೆರಗಿ ಹೊಡೆಯಲು ಕೊಡೆ ಕಾಯ್ವುದೆಲೆ ಮರುಳೆ | ಮಾತೇನು ಎಂದು ಬಲಕುಸುರೆ     || ೧೩೫ ||

ಹಿಡಿಯಲು ಬಾರದರಸೆ ಜಡಮತಿಯ ಸುಡು ನಿನ್ನ | ಪಡೆಯ ನೀಗದೆ ನಿಮಿಷದೊಳಗೆ |
ಸಿಡಿಲೆರಗಿ ಹೊಡೆಯಲು ಕೊಡೆ ಕಾಯ್ವುದೆಲೆ ಮರುಳೆ | ಬಲಕೆ ಬೆದರುವುದೆ ಕಾಮಧೇನು    || ೧೩೬ ||

ಆದರಾಗಲಿ ಮುನಿಯೆ ಪಾದದ ದಯವಿರಲಿ | ನಾನಾ ತೆರದೊಳಗೆ ಪಿಡಿಸುವೆನು |
ವಾದಿ ಮನುಜನ ಕೂಡೆ ಮಾತಾಡಿ ಫಲವೇನು | ನೀ ಕಂಡ ತೆರನ ಮಾಡೆನಲು      || ೧೩೭ ||

ಹರುಷದಿಂ ಪೇಳಿದ ನೃಪ ತನ್ನ ಮಂತ್ರಿಗೆ | ಚತುರಂಗ ಬಲಕೆ ಪಿಡಿಯೆನಲು |
ಹತ್ಯೆ ಕಾಲವು ತಿಳಿಯದೆ ಬಲ ಭೋರನೆ ಮುತ್ತೆ | ಮತಿಗೇಡಿ ರಾಯನಾಜ್ಞೆಯಲಿ     || ೧೩೮ ||

ಬಲವೆಲ್ಲ ಒತ್ತುತ ಬಳಸಿ ಮುತ್ತಲು ಕಂಡು | ಯಮನ ರೂಪಾಗಲಾ ಗೋವು |
ಕಿಡಿಸೂಸಿ ನಯನದಿ ಸಿಡಿಲು ಗರ್ಜನೆಯಾಗೆ | ನಡುಗಲು ಧರಣಿ ಜಜ್ಜರಿಸಿ           || ೧೩೯ ||

ಮುತ್ತುವರು ಜೇನು ನೊಣದ ಮೊತ್ತ ಕವಿದಂತೆ | ಒತ್ತಿ ಬರಲು ನಾಲ್ಕು ಮುಖದಿ |
ಕೆಕ್ಕರಿಸಿ ನೋಡುತಲಿ ಎತ್ತಿ ಬಾಲದ ತುದಿಯ | ಹೊಕ್ಕಿತ್ತು ಬಲಕೆ ಹೊಮ್ಮಿರಿದು      || ೧೪೦ ||

ಸೀ[ಗು]ತಲಿ ಕೋಡೆರಡು ತುದಿಗೆಂಟು ಹೆಣಗಳ | ಒಗೆವುತ ಗಗನ ಮಾರ್ಗಕ್ಕೆ |
ಮೊಗಚಿ ಏರಲು ಬಂದು ಮರಳಿ ಪಾದಗಳಿಂದ | ಒರೆಸಲು ಎಂಟು ಸಾವಿರವ        || ೧೪೧ ||

ಸಿಟ್ಟು ರೋಷಗಳಾಗಿ ಸಿಡಿಲ ಆರ್ಭಟದೊಳು | ಕುಕ್ಕಿರಿ ಹೆಣದ ಮೇಲ್ಹೆಣನ |
ಚಿಪ್ಪಾಗಿ ಬಲವೆಲ್ಲ ಬೆದರಿ ಓಡಲು ರಾಯ | ದುಃಖ ಶೋಕಾರ್ತನಾಗಿರಲು            || ೧೪೨ ||

ಮುನಿಯ ಮಾತನು ಮೀರಿ ಶುನಿಗಿಂದ ಕಡೆಯಾದೆ | ಗಿಣಿಗೋದಿದಂತೆ ಪೇಳಿದರು |
ಬಲವೆಲ್ಲ ಲಯವಾಗೆ ತನಗೇನು ಗತಿ ಮುಂದೆ | ಮುನಿಗೆ ಎರಗಲು ಕರುಣಿಸನೇ || ೧೪೩ ||

ಕೆಂಡ ಕರದೊಳು ಪಿಡಿದು ಮಂಡೆ ತುರುಸಿದ ತೆರನು | ಎಂಬ ಗಾದೆಯು ತನಗಾಯ್ತು |
ಕಂಡೇನೊ ಎಲೆ ಮಗನೆ ಕಾರ್ತಿಕವೀರನ ಪಾಡ | ಸಂದನೆನಬೇಡ ಉಳಿವವನು || ೧೪೪ ||

ಋಷಿಯಿಂದ ತಪ್ಪಿಲ್ಲ ಮತಿವಾದಿ ಬಿಜ್ಜಳಗೆ | ಬಸವದಂಡೇಶ ಪೇಳುತ್ತೆ |
ಬೆಸೆಯಲು ಮಂಚಣನ ತೆರದೊಳು ಎನಗರುಹಿ | ಹತಗಾಲ ತನಗೀಗ ಬಂತು || ೧೪೫ ||

ಕರಗಲು ಕಾರ್ತಿಕ ಉರಿಗೊಂಡ ತಳಿರಂತೆ | ತೆರದೊಳು ಕಂದಿ ಕುಂದಿದನು |
ಪರ್ಣಗೃಹದ ನೆಲೆಯೊಳು ರೇಣುಕೆ ಇರ್ದು | ಕರೆದಳು ನೃಪನ ಸನ್ನೆಯಲಿ            || ೧೪೬ ||

ಮರುಳ ರಾಯನೆ ನೀನು ತಾಯೊಡಲು ಪೊಕ್ಕರೆ ಬಿಡದು | ಹುಡುಗಾಟವಾದೆ ಧರೆಯೊಳಗೆ |
ಸುಳಿವ ತೋರುವೆ ಎನ್ನ ಕರೆದು ಕೇಳ್ದರೆ ಮೊದಲೆ | ಬಲವೆಲ್ಲ ಲಯವಾಯ್ತು ಅರಸೆ   || ೧೪೭ ||

ಹುಚ್ಚು ರಾಯನೆ ಕೇಳು ಅನರ್ಥ ಸಾಯಲು ಬೇಡ | ಶಕ್ತಿಗೆ ಬರದು ನಿಮ್ಮೊಡನೆ |
ಮತ್ತೆ ತೋರುವೆ ನಿಮಗೆ ಭೆದ ವರ್ಮವ ಮುನಿಯ | ಕುತ್ತಿಗೆನರಿವ ತ್ರಾಣಹುದೊ     || ೧೪೮ ||

ಕಂಡನಾ ಕಾರ್ತಿಕ ರಂಭೆ ಉರ್ವಶಿ ಸ್ತ್ರೀಯ | ಮುಂಜೋರೆ ನೋಡೆ ನಯನಗಳು |
ಕಂದರ್ಪ ಬಾಣಗಳು ಎದೆಯೊಳು ಮೂಡಿದಂತೆ | ಮುಂಬರಿಯೆ ಮೂರ್ಛೆ ಕಳವಳಿಸಿ         || ೧೪೯ ||

ಕಳವಳವ ಬಿಡು ರಾಯ ಬೇಕೆನಲು ನಾ ಬರುವೆ | ಪಾಪಿ ಮುನಿಯನು ಹತಮಾಡು |
ಈ ಕ್ಷಣ ಮುನಿಯ ಶಿರವರಿದು ಪಶುವಿಗೆ ಕಟ್ಟೆ | ಬರುವುದು ಕುರಿಯಂತೆ ಹಿಂದೆ      || ೧೫೦ ||

ಭೇದ ವರ್ಮವ ಪೇಳೆ ರಾಯ ಹಿಗ್ಗಲು ಮನದಿ | ಯಾರ ಭಯವು ಎನಗೆ ಕೊಲ್ಲುವರೆ |
ಕಾಲನ ಭಯವಷ್ಟೆ ಕಳೆಯಬಹುದು ಬಹಳ | ದಾನಧರ್ಮಗಳನು ಮಾಡಿ             || ೧೫೧ ||

ಕಾಮಧೇನುವು ಸುಡಲಿ ಬಾಲೆ ಬರುವಳು ಚೊಕ್ಕ | ನೀಗದಿರಲು ಮುನಿಯು ಕೊಡನು |
ಪೇಳಲು ಚರರೊಡನೆ ಶಿರವರಿದು ಋಷಿಯನು | ಗೋವಿನ ಶಿರಕೆ ಧರಿಸೆನಲು        || ೧೫೨ ||

ಅರಸ ಪೇಳಲು ಒಡನೆ ಚರರು ಮುಂಡೆಯನರಿದು | ಎದುರಾಗಿ ತರಲು ತೋರುತಲಿ |
ಬಲವ ಕೊಲ್ಲುವ ಗೋವು ಶಿರಗೊಂಡು ಭಕ್ತಿಯಲಿ | ಕೊರಳ [ನೊಡ್ಡ]ಪ್ರೀತಿಯಲ್ಲಿ      || ೧೫೩ ||

ಹರಿಣನೇತ್ರೆಯ ಮಾತು ಪರಿಹಾಸ್ಯವಲ್ಲೆಂದು | ತರಿಸುತ ಶಿರವ ಧರಿಸಿದರು |
[ತೊರೆ]ದುದು ಪಶುವಿಗೆ ಜಮದಗ್ನಿ ಶಿರ ತನ್ನ | ಕೊರಳಿಗೆ ಬರಲೆಂಬ ಶಾಪ          || ೧೫೪ ||

ಕಂಡಿರೆ ಮುನಿಗಳೆ ಗಂಡನ ಕೊಲಿಸಿದ | ರಂಡೆ ಪಾತಕಿ ಮೂಳಿಯರನು |
ನಂತರದಿ ಬೆರಳಿಟ್ಟು ನಗುತಲಿ ನಾರದರು | ಮುಂದೇನಾದಳು ರೇಣುಕೆಯು         || ೧೫೫ ||

ಲಾಲಿಸಿ ಅವಳಾದ ಕಾಲದಾಶವನೊರೆವೆ | ಕೂಡಿದ ಪತಿಕೊಂದ ಕರ್ಮ |
ಹೋಗಲೀಸದು ಕೇಳಿ ಬಾಲಕನ ಕರದೊಳಗೆ | ನೀಗುವಳು ರಂಡೆ ಪ್ರಾಣವನು       || ೧೫೬ ||

ಶಿರ ಬಂದು ಗೋವಿನ ಶಿರದೊಳು ಬೀಳಲು | [ಮೊ] ರೆಯಲು ಬರಸಿಡಿಲ ತೆರದಿ |
ಬೆದರಿ ಓಡಲು ಬಲವು ಗಿಡು ಮೆಳೆಯನು ಬಿದ್ದು | ನಡೆಯಲು ಗೋವು ಹರನೆಡೆಗೆ    || ೧೫೭ ||

ಹರನ ವಾಲಗದಿಂದ ಬರುತಾಗ ಮುನಿವರನ | ತನುಜ ಕಂಡನು ಪರಶುರಾಮ |
ಶಿರವ ಕಾಣುತ ಪರಶು ನಯನದಿ ಜಲಸೂಸಿ | ನಿಲಿಸಿ ಕೇಳ್ಯಾನು ಆ ಪಶುವ         || ೧೫೮ ||

ಬಲ್ಲಿದ ಪರಶುನು ಅಂತು ಕೇಳಲು ಧೇನು | ಎಲ್ಲ ವೃತ್ತಾಂತಗಳ ಪೇಳೆ |
ಕೊಲ್ಲಿಸಿ ನಡೆದಳು ತಾಯಿ ರೇಣುಕೆ ನಿಮ್ಮ | ಖುಲ್ಲ ಕಾರ್ತಿಕನ ಮೆಚ್ಚಿ                 || ೧೫೯ ||

ಹೇಳೇನೆಂದರೆ ಬಹಳುಂಟು ಈ ಮೂಲ | ವೇಳೆಯಾಯಿತ್ತು ತನಗೀಗ |
ಭಾಳಲೋಚನ ಹರನ ವಾಲಗವಿರ್ದಂತೆ | ನಾ ಹೋಗಿ ಇಡಬೇಕು ಶಿರವ            || ೧೬೦ ||

ನಡೆಯಲು ಪಶು ಅತ್ತ ಸಿಡಿಲಿನ ಮರಿಯಂತೆ | ಕಿಡಿಸೂಸಿ ಪಶುವ ರಾಮುಗನು |
ಹರಲೋಕ ಪೋಗಲ್ಕೆ ಬಿಡೆನು ಎನುತಲಿ ಬಂದು | ಹೊಡೆದನು ರೇಣುಕೆ ತಲೆಯ    || ೧೬೧ ||

ಜಡದ್ರೋಹಿ ಕಾರ್ತಿಕನ ಸದೆಬಡೆ [ದ ರಾಮುಗ] | ಗಿಡಕೊಬ್ಬರಾಗಿ ಓಡಿದರು |
ತೊಡರಿ ಆಯುಧ ಪಿಡಿದು ನಡೆಯಲು ಕಾರ್ತಿಕ | ಒಡನೆ ಹಾರಿಸಿದ ತುರುಗವನು    || ೧೬೨ ||

ಶಿರಬರಲು ಜಮದಗ್ನಿ ಹರನ ವಾಲಗದಡೆಗೆ | ಇಡಲಾಗ ಈಶ್ವರ ಮುಂದೆ |
ಗುರುರಾಯ ಶಾಪೆನ್ನ ಕಳೆದು ಹೋಯಿತುಯೆಂದು | ನಡೆಯಲು ಪಶು ಹೇಮಗಿರಿಗೆ || ೧೬೩ ||

ಹರನೋಡಿ ಜಮದಗ್ನಿ ಮುನಿಯ ಮಂಡೆಯ ಮೇಲೆ | ಕರವಿಟ್ಟು ನಿನಗಿಂತು ಬಂತೆ |
ವನಿತೆಯರ ಕಾಲೊಳು ಲಯವಾಗಲೆಂದೆಂಬ | ಹಣೆಯ ಬರಹವು ಹೀಗೆ ಬಂತೆ      || ೧೬೪ ||

ಕಳೆದು ಹೋಯಿತು ಕರ್ಮ ಉಳಿದುದು ನಿಜ ಎಮ್ಮ | ಬಳಿಯ ಸೇರಲು ಭಯವೇನು ? |
ಪುನರ್ಜೀವ ಮಾಡಿ ಕಳುಹಿಕೊಡುವೆವು ನಿಮ್ಮ | ಮೊದಲ ಯೋಗಕೆ ಹೋಗಿ ಎನಲು || ೧೬೫ ||

ಶ್ರೀ ಶಂಭೋ ಧವಳಾಂಗ ಏಕೋದೇವನೆ ಭುವನ | ಲೋಕ ಬ್ರಹ್ಮಾಂಡ ರಕ್ಷಪನೆ |
ಓಂಕಾರ ಪ್ರಣಮತ್ವ ಬಿನ್ನಹ ಲಾಲಿಪುದೆನ್ನ | [ಒರೆವ] ಕಾರ್ತಿಕನ ಧರ್ಮ             || ೧೬೬ ||

ಕರೆದನ್ನ ನೀಡಲು ಹರಣಕ್ಕೆ ಮುನಿಯಲು | ಚರಣಾಗ್ರದೊಳಗೆ ಒಪ್ಪದೆ |
ಮರುಳು ವೇದವಲಿತ್ತ ಪೂರ್ವ ಭಂಗವೆಂದು | ಎರಗಿದ ಮುನಿಹರನಡಿಗೆ             || ೧೬೭ ||

ಉಪಕಾರ ಮಾಡಲ್ಕೆ ಅಪಕಾರ ಮಾಡಿದ | ತ್ರಿಪುರಸಂಹಾರಿ ಲಾಲಿಪುದು |
ಕೃಪೆಮಾಡಿ ಕಾರ್ತಿಕನ ಡಿಳ್ಳಿಯೊಳಗೆ ಜನಿಸಿ | ಹತ ಮಾಳ್ಪ ತ್ರಾಣ ನಿನಗಿಹುದು     || ೧೬೮ ||

ಇನ್ನೊಲ್ಲೆ ಗುರುರಾಯ ಮುನಿಯ ಮಾರ್ಗವು ಸುಡಲಿ | ದಯಮಾಡಿ ಈರ್ವರ ಧರೆಗೆ |
ಹಗೆಯನ ಕೊಲ್ಲುವ ತನುಜನ ಎನಗಿತ್ತು | ಕಳುಹಲು ಕೀರ್ತಿಯ ಪಡೆವೆ              || ೧೬೯ ||

ಗಿರಿಜೆಯ ರಮಣನು ಹರುಷದಿಂದಲಿ ಮೆಚ್ಚಿ | ಛಲಪಂಥ ಸರಿಯೆನಲು ನಗುತ |
ಕರುಣದಿ ಹರಶಂಭು ಕುಮ್ಮಟದ ಮುಮ್ಮಡಿಯ | ಉರರದಿ ಜನಿಸು ನೀ ಎನಲು      || ೧೭೦ ||

ಹರನಾಗ ಮುನಿವರಗೆ ನಿರ್ಣಯಿಸಿ ಶಾಪಗಳ | ಕಳುಹಿದ ಬಗೆಗೇಳಿ ಮುನಿಗಳಿರಾ |
ಧರಣಿಪಾಲಕನಾದ ಮುನಿಯು ಕಂಪಿಲರಾಯ | ಮಗ ಬಂದು ಜನಿಸಿದ ಈಗ        || ೧೭೧ ||

ಮಾತೆಯನು ಕೊಂದಾತ ಮಗನಾದ ಕಂಪಿಲಗೆ | ಜೋಕೆಯಾಯ್ತೀ ಋಷಿಗಳಿಗೆ |
ಕಾರ್ತಿಕವೀರನು ಡಿಳ್ಳಿಯೊಳ್ ನೇಮ್ಯಾದ | ಶಾಪಕ್ಕೆ ಬಂದು ಜನಿಸಿದರು            || ೧೭೨ ||

ಕೊಂದ ರಾಮಗೆ ಕೊಲೆಯು ಮುಂದೆ ತಪ್ಪದು ಋಷಿಯೆ | ಡೊಂಬಿತಿಯಾಗಿ ರೇಣುಕೆಯು |
ಬಂದಳು ಕಂಪಿಲಗೆ ಮೆಚ್ಚಿನ ವೇಶ್ಯಾಗಿ | ತಿಂಬಳು ಮಗನ ಛಲಪದಕೆ                || ೧೭೩ ||

ಬಂದವರ ಸ್ಥಿತಿ ಹೀಗೆ ಹಿಂದಲು ಹಗೆಗಾಗಿ | ಚಂದ್ರಶೇಖರನ ಅಭಯದಲಿ |
ಮುಂದಿಲ್ಲಿ ಕಡಿದಾಡಿ ರಣಭೂಮಿ ಕೆಸರೇಳೆ | ಸಂದು ಪೋಪರು ಮುನಿಗಳಿರಾ       || ೧೭೪ ||

ಪರಶುರಾಮನು ಬಂದು ಈ ತೆರ ಜನಿಸಿದ | ತಿಳಿದೀರೆ ಮುನಿಯ ಭೇದಗಳ |
ಹರನಿತ್ತು ಕಳುಹನೆ ನರಪಡೆಯ ತಿಂಬುವರೆ | ಪರಮಶಕ್ತಿಗಳು ರಾಮನಿಗೆ           || ೧೭೫ ||

ಚಂದವಾದುದು ನಾರಂದರೆ ಮುನಿರಾಯ | ಇಂದಿಗೆ ಬಿಟ್ಟೆ ಈ ಸ್ಥಳವ |
ನಂಬಬಹುದೆ ಹೆಣ್ಣೆಂಬೊ ಮಾಯೆಯನು | ಮುಂದೇಳೆ ಋಷಿ ಮೂಲ ಕಿತ್ತು           || ೧೭೬ ||

ಕೇಳುತಲಿ ಮುನಿಗಳು ಝಾಡಿಸಿ ನಡೆದರು | ನಾರಂದ ಮುನಿಯರೊಗ್ಗಿನಲಿ |
ಹೇಮಾದ್ರಿ ಗಿರಿಮಾರ್ಗ ದಾರಿಯೊಳ್ ಬರುತಾಗ | ಮಾಡುತಲಿಹ ಪ್ರಸಂಗ          || ೧೭೭ ||

ಮಡದಿಯ ನಂಬುವುದು ಮರುಳಾಟ ನಾರದರೆ | ಇದ ಕೇಳಿ ನಾನೊಂದನೊರೆವೆ |
ಬಿಡದೆರಡು ಕರದೊಳು ಪಿಡಿದಿರಲು ಸತಿಯರು | ಮುಡುಬ [ಮೋ]ಟಗೆ ಮನವಿಡರೆ || ೧೭೮ ||

ಅದು ಹೇಗೆ ಮುನಿನಾಥ ನಗುತ ನಾರದ ಕೇಳೆ | ಒರೆವೆನಲ್ಲೊರ್ವ ಯೋಗೇಂದ್ರ |
ಪರಧ್ಯಾನವಿಲ್ಲದೆ ಮುನಿಗಳೆಲ್ಲರು ಕೇಳಿ | ಇದಕೆ ಘನವಾದ ಪ್ರಸಂಗ                 || ೧೭೯ ||

ರೇಣುಕೆ ಪರರೊಳು ಪೇಳಿ ಪುರುಷನ ಕೊಂದಳು | ಕಿಡಿಯೇಳು ಸುಡುವ ಹಗೆಗಾಗಿ |
ರಾಯನ ಇಂದ್ರಕುಮಾರಿ ಗಂಡನ ಕೈಯ | ಹಾರ ಕೊಂದುದ ಕೇಳಿ ಪೇಳ್ವೆ           || ೧೮೦ ||

ಮಾಳವದೇಶದ ಭೂಮಿಯೊಳಗಿಹುದೊಂದು | ಕಾಳವತಿಯೆಂಬ ಪಟ್ಟಣವು |
ಆಳುವ ಅತ್ಯಂತ ಭೋಗದಿ ರವಿಕುಲದ | ರಾಯ ವಿಜಯೇಂದ್ರ ಸುಖದೊಳಗೆ        || ೧೮೧ ||

ಹಾಗಿರುತಿರುಲಾಗ ಪ್ರಧಾನಿಯ ಮಗನೊಪ್ಪಿ | ಸಾಗಲು ಕುಳೀಂದ್ರಪುರಕೆ |
ರಾಯ ವಿಜಯನು ಕೇಳಿ ರಣಭೇರಿ ಹೊಡೆಯಲು | ಭೋರನೆ ಹೊರಟು ಮಾರ್ಬಲದಿ || ೧೮೨ ||

ಪೇಳುವರಳವಲ್ಲ ರಾಯ ವಿಜಯೇಂದ್ರನ | ಕುಮಾರಿಯ ಲಾವಣ್ಯ ರೂಪ |
ದೇವೇಂದ್ರ ಸತಿಗಿಂತ ಮೂರು ಇಮ್ಮಡಿಯಾಗಿ | ಬೀರುವಳು ಮನ್ಮಥನ ಮೋಡಿ    || ೧೮೩ ||

ವರ ಚೆಲ್ವ ತನುಜೆಯ ನೆರೆ ಪಡೆದು ನೃಪವರನು | ಇರುವನು ಪರಮಸುಖದೊಳಗೆ |
ಪರವೊಂದು ರಾಜ್ಯದ ದೊರೆ ಮಗನು ಆ ಸತಿಯ | ತರುವನು ಕೇಳು ನಾರದರೇ    || ೧೮೪ ||

ಚೋಳೇಂದ್ರದೇಶದ ಪಾಂಚಾಲರಾಯನ | ಮಗನು ಫಾಲೇಂದ್ರ ಕುಮಾರ |
ಆದನು ಮದುವೆಯ ಅನೇಕ ಸಂಭ್ರಮದೊಳು | ಮೂರು ವರುಷ ಬಿಡಲು ತವರೊಳಗೆ        || ೧೮೫ ||

ಫಾಲೇಂದ್ರಕುಮಾರ ಪ್ರಧಾನಿ ಮಗ ಸಹ | ಸ್ನೇಹಿತರಾಗಿ ಎರವಿಲ್ಲದೆ |
ಒಂದು ದಿವಸದೊಳು ಸ್ವಾರಿ ಮುಖದೊಳು ಬಂದು | ಆರಣ್ಯದೊಳಗೆ ಪರುಗ್ರಹಿ      || ೧೮೬ ||

ಪಡೆದವರ ಮನೆಯೊಳಗೆ ಮಡದಿ ಬಿಡುವುದು ಸಲ್ಲ | ದೃಢದೊಳಗವರು ಇರುತಿಹರೇ ? |
ಸು [ಳಿ]ವಾ ಮಂತ್ರಿಯೆ ನಡೆಯೆನಲು | ಇವರು ನಡೆಯಲು ಅಲ್ಲಿಂದತ್ತ               || ೧೮೭ ||

ಭೇರಿ ಕಾಳೆಯ ರವದಿ ಮೇಳ ಪಾತ್ರಗಳೊಳಗೆ | ರಾಯನಿದಿರ್ಗೊಂಡ ಅಳಿಯರನು |
ಏನು ಮಾಯವು ಕಾಣೆ ಇರ್ವರು ಬಂದರರ್ಥ | ನಾಳೆ ಕೇಳುವನು ಇದಕೇನು        || ೧೮೮ ||

ಅಷ್ಟಭೋಗದಿ [ಸಾಗಿ] ಅರಮನೆಯನೊಳು ಹೊಗಲು | ಮೃಷ್ಟಾನ್ನ ಭೋಜನ ಸವಿದು |
ಮತ್ತೊಂದು ಬಿಡದಿಯ ಏಕಾಂತ ಸ್ಥಳಮಾಡಿ | [ಕೊ]ಟ್ಟರು ರಾಯಪುತ್ರನಿಗೆ          || ೧೮೯ ||

ಪ್ರಾಣಸ್ನೇಹಿತನಾದ ಪ್ರಧಾನಿಯ ಮಗನಿಗೆ | ಬಾಗಿಲಂ[ಗಳದಿ] ಸಡಗರಿಸಿ |
ಒಡನೆ ಮನೆಯ ಮಾಡಿ ಮಂತ್ರಿ [ಮಗನಿ]ಗೆ ಕೊಡಲು | ಆಗ ಮಲಗಿರಲು ಜಾಗ್ರದಲಿ || ೧೯೦ ||

ರಾಯ ಫಾಲೇಂದ್ರನು ತಾ ಬಳಲಿ ನಿದ್ರೆಯ ಮಾಡೆ | ಹೋದ ಮೇಲಣ ಸ್ಮರಣೆ ಮರೆದು |
ಲಾಲಿಸಿ ಮುನಿಗಳೆ ವಿಜಯರಾಯನ ಮಗಳು | [ಮೋಟ]ನ ಮೆಚ್ಚಿಕೊಂಡಿಹಳು      || ೧೯೧ ||

ಷಡುರಸಾನ್ನದ ಬುತ್ತಿ ಹದಮಾಡಿ ಕಟ್ಟಿದಳು | ನಡೆದಳು ಕಾಂತನಿದ್ದೆಡೆಗೆ |
[ಒ]ರಗು ನಿದ್ರೆಯ ಮಾಳ್ಪ ರಮಣನೆಚ್ಚರವರಿದು | ಹೆಳವನ ನೆನೆದು ಮನದೊಳಗೆ  || ೧೯೨ ||

ನಾಳೆ ಎನ್ನಯ ರಮಣ ಕರೆದು ಒಯ್ಯದೆ ಬಿಡನು | ಹೇಳಲು ಸಮಯ ಹೆಳವನಿಗೆ |
ಕೂಡಿದ ವಿಶ್ವಾಸ ಬಾಲರಾಭ್ಯದಿ ಮೊದಲು | ಹಾಗೆ ಹೋಗಲು ಬಹಳ ಕರ್ಮ         || ೧೯೩ ||

ಚಂದ್ರವದನೆ ಹೊಕ್ಕು ಹಿಂದಕ್ಕೆ ತಿರುಗಲು | ಕಂಡನು ಮಂತ್ರಿಯ ಮಗನು |
ಬಂದಾಕೆ ಒದಗಿಲಿ ಹಿಂದಕ್ಕೆ ತಿರುಗಿದಳು | ಬೆಂಬಳಿವಿಡಿದ ಪ್ರಧಾನಿ                  || ೧೯೪ ||

ಸಾಗಿದಳು ನಗರದ ಮೂಲೆ ಮುಡುಕನೆ ಹಿಡಿದು | ಜಾರಿ ಬೀಳುತ ಏಳುತಲಿ |
ಬೇರೊಂದು ಹಾಳೂರ ಮೂಲೆಯೊಳಿರುವನು | ಕಾಲೆರಡಿಲ್ಲದ ಮೋಟ              || ೧೯೫ ||

ಬಂದು ಗುಡಿಲನೆ ಪೊಗಲು ಹಿಂದೆ ಮಂತ್ರಿಯು ಕುಳಿತ | ಛಂದವಾಯಿತು ಫಲಪ್ರಾಪ್ತಿ |
ಹಿಂದಲ ಜಲ್ಮದ ಸ್ನೇಹದ ಫಲವಿದು | ಅಂಗಹೀನನ ಬೆರೆಯುವುದು                  || ೧೯೬ ||

ಅರಿಯದೆ ನುಡಿವರು ಮರುಳು ಮಾನವರು | ವಿಧಿಯ ಬರಹದ ಫಲಗಳೆಂದೆನದೆ |
ಕಡಿಮೆಯಾರ ಮಾತೇನು ದೊರೆರಾಯ ವಲ್ಲಭೆಯು | ಮುಡಬಗೆ ಮನವಿಟ್ಟು ಬಳಿಕ  || ೧೯೭ ||

ತಡವೇಕೆ ಇಷ್ಟೊತ್ತು ಎ[ದೆ]ಗರ್ವ ಮದವೆಂದು | ಹೊಡೆದನು ಬಿದಿರ ದಬ್ಬೆಯಲಿ |
ತಡಬಡಿಸಿಕೊಳುತೆದ್ದು ಗುಡಿಲ ಗಳುವನೆ ಪಿಡಿದು | ಒದೆವನು ಮೋಟ ಮಂಡಿಯಲಿ || ೧೯೮ ||

ದೂರಮಾಡದೆ ಆಕೆ ಕಾಲೆರಡು ಪಿಡಿಕೊಂಡು | ಲಾಲಿಸಿ ತಪ್ಪ ಪೇಳುವೆನು |
ಧಾರೆರೆದ [ಮೊದಲಾ]ಗಿ ಮೋರೆ ನೋಡದ ಕಾಂತ | ಬರಲು ತಡವಾಯ್ತು ಪಾಲಿಪುದು       || ೧೯೯ ||

ಎನ್ನಯ ಪ್ರಿಯ ಕರಕೊಂಡು ಹೋಗದೆ ಬಿಡನು | ನಿಮ್ಮಯ ಋಣ ತೀರಿತೆನಗೆ |
ಹೆಣ್ಣು ಜನ್ಮವು ಸುಡಲಿ ಇನ್ನೆಂತು ನಾ ಮರೆದು | ಕಣ್ಣು ಪೋದಂತೆ ನಾನಿರೆ           || ೨೦೦ ||

ಕೂಡಿದ ಮೊದಲಾಗಿ ಹಾಲ್ಹಣ್ಣು ಬೆರೆದೊಂದು | ಗೂಡಿನ ಗಿಣಿಯಂತೆ ಇರ್ದು |
ಹೋಗಲು ಮನವಿಲ್ಲ ಒಲ್ಲೆನೆಂದರೆ ಜನರು | ಹಾದರಗಿತ್ತಿ ಎನ್ನುವರು                 || ೨೦೧ ||

ಹಾಳ ಚಿಂತೆಗಳೇಕೆ ಹೇಳುವೆನಿದಕೊಂದು | ಮೇದಗತ್ತಿಯನು ನೀ ಒಯ್ದು |
ಮೇಳೆ ಕುತ್ತಿಗೆ [ಯ]ನರಿಯೆ ಜೋಡುಗಾರನ | ಮೇಲೆ ದೂರುವದು ಜನರೆಲ್ಲ         || ೨೦೨ ||

ನಿಶ್ಚಯದ ಮಾತೆಂದು ಒಪ್ಪಿದಳಾ ನಾರಿ | ಕತ್ತಿಯ ಹದಮಾಡು ಎನುತ |
ಮತ್ಯಾವ ತೊಡರಿಲ್ಲ ಮುಂಡೆಯೆಂಬರು ಲೋಕ | ನಿಶ್ಚಿಂತೆಯಲಿ ಬಾಳಬಹುದು     || ೨೦೩ ||

ಕೇಳಿದ ಮಂತ್ರಿಯ ಮಗನು ಆಡಿದ ನುಡಿಯ | ಗಹಗಹಿಸಿ ನಗುತ ಮನದೊಳಗೆ |
ಮಾಡ್ಯಾಳ ಹ[ದ]ವನು ಆಡಿದ ವಿಷಯಕ್ಕೆ | ಕೂಡಿಂದು ಪ್ರಿಯನ ಹತವ              || ೨೦೪ ||

ನೋಡುವ ಅದಕೇನು ಅವಳಿಗೆ ಮುಂದರಿದು | ಸ್ಥಾನದಿ ನಾ ಹೋಗಿ ಇರುವ |
ಜಾಗ್ರದೊಳಿರು [ತಾ]ಗ ವ್ಯಾಘ್ರನಂದದಿ ಬಂದು | ಮಗ್ಗುಲೊಳ್ ನಿಂದು ನೋಡಿದಳು         || ೨೦೫ ||

ಬಂದಳು ಭವಗೇಡಿ ಗಂಡನ ಸನ್ನಿಧಿಗೆ | ತುಂಡೇಳನರಿದಳು ಶಿರಮುಂಡ |
ಕಂಡಳಲ್ಲದ ರೀತಿ ಕಾಂತನ ತಡವರಿಸಿ | ಮುಂಡೆಯಾದೆನು ಎಂದು ಹೊಡಕೊಳ್ಳೆ   || ೨೦೬ ||

ಬೊಬ್ಬೆ ಹೊಡೆಯಲು ಮನೆಯೆದ್ದು ಹಾರುವ ತೆರದಿ | ಗುದ್ದಿಕೊಂಬಳು ಎದೆ ಬಾಯ |
ಸದ್ದ ಲಾಲಿಸಿ ಕೇಳಿ ಹೊರಗಿರ್ದ ಪರಿಜನರು | ನುಗ್ಗಿ ಬರಲು ನೂರಾರು ಜನರು       || ೨೦೭ ||

ಏನೆಂದು ಗರ್ಜಿಸುತ ಕುಮಾರಿ ಕೇಳಲವರು | ಪ್ರಾಣಕಾಂತನು ಜೀವವಳಿದ |
ಏನು ಹೇಳಲಿ ಪ್ರಿಯನ ಭೋಗ ನೋಡಲು ಬಂದೆ | ಖೋಡಿರಂಡೆಗೆ ಫಲವಿಲ್ಲ        || ೨೦೮ ||

ಎಂದು ಬಾರವ ಪ್ರಿಯ ಬಂದನೆನ್ನುತ ಹಿಗ್ಗಿ | ಒಂದಾರು ಭುಜದಿ ನಾ ಬರಲು |
ತುಂಡಾಗಿ ತಲೆ ಮುಂಡ ಇರುವ ಬಗೆಯನು ನೋಡಿ | ಕೊಂಡ ಬೀಳ್ವೆನು ಪ್ರಿಯನೊಡನೆ      || ೨೦೯ ||

ಮತ್ತಾರು ಇರಲಿಲ್ಲ ಜೊತ್ತುಗಾರನ ಹೊರತು | ಇತ್ತೇನೋ ಹಿಂದಲಿ ಹಗೆಯು |
ಕೊಚ್ಚಿ ಕೊರೆದನು ಎಂದು ಹೆಚ್ಚಾಗಿ ಕೂಗುತ್ತ | ಬೆಚ್ಚಿ ಬೀಳುವ ಶವದ ಮೇಲೆ         || ೨೧೦ ||

ನೋಡುವುದೇನಿವನ ನಾಡರಿದಿತು ಹಿಂದೆ | ಮಾಡಿದ ಹಗೆಯ ತೀರಿಸಿದ |
ಜೋಡಿಸಿ ಕರವೆರಡ ತೆಗೆದು ಹಿಂಗಡೆ ಕಟ್ಟಿ | ಬೆಚ್ಚಿ ಬೀಳುವ ಶವದ ಮೇಲೆ           || ೨೧೦ ||

ನೋಡುವುದೇನಿವನ ನಾಡರಿದಿತು ಹಿಂದೆ | ಮಾಡಿದ ಹಗೆಯ ತೀರಿಸಿದ |
ಜೋಡಿಸಿ ಕರವೆರಡ ತೆಗೆದು ಹಿಂಗಡೆ ಕಟ್ಟಿ | ಆಳೊಂದು ಗುದ್ದನು ಹೊಡೆಯೆ        || ೨೧೧ ||

ಹಿಡಿದಾಗ ಮಂತ್ರಿಯನು ಹೊಡೆಯಲು ನೂರಾರು | ನುಡಿಯೆಡೆಗೊಡದೆ ನಾಲಗೆಯ |
ಹಿಡಿತಂದು ಪಟ್ಟ ವಿಜಯರಾಯಗೆ ಪೇಳೆ | ಅಳಿಯನ ಕೊಂದೆ ನೀನೆಂದು            || ೨೧೨ ||

ವಿವರ ಕಾಣದೆ ಅರಸು ಕರೆಸಿ ಮಂತ್ರಿ [ಗೆ] ಎನಲು | ತೆಗೆಸಿವನ ಶೂಲದ ಮರಕೆ |
ಒಡಗೊಂಡು ಆ ಮಂತ್ರಿ ಕರೆದೊಯ್ದು ತನ್ನಯ | ಅರಮನೆಯೊಳಗೆ ಉಪಚರಿಸೆ     || ೨೧೩ ||

ಷಡುರಸಾನ್ನವ ಎಡೆಬಡಿಸಿ ಮಂತ್ರಿಯು | ಚದುರತ್ವದೊಳಗೆ ಕೇಳುವನು |
ಇದು ಹೇಗೆ ದೊರೆ ಮಗನ ಹಗೆಯಿಂದಲಿ ಕೊಂದ್ಯಾ | ಬಗೆಯಾವುದೆಂದು ಪ್ರಧಾನಿ   || ೨೧೪ ||

ವಿವರ ಕಾಣದೆ ಹೊಡೆ ಗದ್ದೆ ಕೊಯ್ದ ತೆರನಂತೆ | ಹುಡುಗ ನಿಮ್ಮ ನೃಪನೊಳನು |
ಕಡಲೊಳಗೆ ಬಿದ್ದವನ ಹೊರದೆ ಮೂರು ವೇಳೆ | ಒಳಕೊಳ್ವುದೆ ಭಾಗೀರಥಿ ಮಡುವು || ೨೧೫ ||

ಎತ್ತು ಕರುವನು ಈಯೆ ಹಿತ್ತಲಿಗೆ ಹೊಡೆಯೆಂಬ | ಅರ್ಥ ನಿಮ್ಮರಸಿನೊಳಿಹುದು |
ಪೃಥ್ವೀಶನಾಡನೆ ಮೂರುತ್ತರವ ಲಾಲಿಸಿ | ಸತ್ಯಧರ್ಮಗಳ ಶೋಧಿಸದೆ              || ೨೧೬ ||

ಸರ್ಪನ ಗ್ರಾಸದಿ ಕಪ್ಪೆ ಸಿಲ್ಕಿರುವಾಗ | ಮೋಕ್ಷಕನ ಪಿಡಿಕೊಂಬ ತೆರದಿ |
ಪೃಥ್ವಿಪಾಲಕನಳಿದ ತೊತ್ತ ಕೆಡಿಸಲು ಏನು | ಜೊತ್ತಿಗೆ ಕಳುಹು ಸ್ನೇಹಿತನ            || ೨೧೭ ||

ಹಲವು ಟವುಳಿಯ ಮಾಡಿ ಉಳಿದರೆ ಫಲವೇನು | ಗೆಣೆಕಾರನಳಿದ ಇನ್ನೇಕೆ |
ಕಳ್ಳ ಸೂಳೆಯು ಮೇದಮೋಟ ಬದುಕಲಿ ಪ್ರೀತಿ | ನಡೆಸಯ್ಯ ಶೂಲಕ್ಕೆ ಮಂತ್ರಿ || ೨೧೮ ||

ಅಣ್ಣ ಜೀವಳಿದಿರಲು ಆವ ಕಥೆಯನು ಪೇಳ್ವೆ | ಮೇಲೆ ಮೂಗ ಕೊಯ್ಸಿ ರಂಡೆಯನು |
ಕುಲಶುದ್ಧ ಮಾಳ್ಪುದಕೆ ಹೆಳವ ಮೋಟನ ಕರೆಸಿ | [ಕೇ]ಳಿಸಯ್ಯ ಎನ್ನ ಇದಿರಿನಲಿ     || ೨೧೯ ||

ಮೇದನ ಪಿಡಿತರಿಸಿ ಬೆದರಿಸಿ ಕೇಳಲು | ಆದ ನಿಜಕರವ ಪೇಳುವನು |
ರಾಯಗರುಹಲು ಮಂತ್ರಿ ಕುಮಾರಿಯ ಪಡಿತರಿಸಿ | ಸೀಳಿ ತೋರಣವ ಕಟ್ಟಿಸಿದ     || ೨೨೦ ||

ರೇಣುಕಿ ಮಾಡಿದ್ದು ಹೀನಾಯ ಎನಬೇಡಿ | ರಾಜಶೇಖರಗೆ ತಾ ಒಲಿದಳು |
ನೋಡಿರೈ ಈ ಕರ್ಮ ಮುಡುಬ ಮೋಟಗೆ ಒಲಿದ | ಶ್ವಾನ ಮುಂಡೇರ ಫಲಪ್ರಾಪ್ತಿ   || ೨೨೧ ||

ಹರಹರ ಇದು ದೊಡ್ಡ ಅಗಣಿತದ ಕರ್ಮಗಳು | ನಗುತ ಮುನಿಗಳು ಶಿರದೂಗೆ |
ನೆರೆ ಪಾಪಿ ರೇಣುಕಿ ಎನುತಲಿದ್ದೆವು ನಾವು | ಅದಕಿದು ಬಹಳ ಅನ್ಯಾಯ             || ೨೨೨ ||

ಲಯವಾದ ನೃಪತನುಜ ಕಡಿಗೇನಾದನು ಎಂದು | ಮುನಿಯ ಕೇಳಿದನು ನಾರದನು |
ವಿನಯದಿ ಲಾಲಿಸಿ ಈಶ್ವರನ ಕೃಪೆಯೊಳಗೆ | ತಾನು ಪಡೆದಂಥ ಪತಿವ್ರತೆಯ        || ೨೨೩ ||

ರಾಯ ವಿಜಯೀಂದ್ರನು ಬಹಳ ಚಿಂತಿತನಾಗಿ | ಮಗಳಿಂದ [ಪಾಪಕೆ] ಗುರಿಯಾದೆ |
ಪಡೆದವರ ಒಳಗೆ ನಾ ಹೇಗೆ ಕಳುಹಲಿ ಸುದ್ಧಿ | ಇಳಿಯಲು ಉದಕ ನಯನದಲಿ      || ೨೨೪ ||

ತಾಯಿ ತಂದೆಯ ಬಳಿಗೆ ಹೇಗೆ ಬರೆಯಲಿ [ಪತ್ರ] | ಗೋಳಿಡುತದೆ ಆ ಪುರವು |
ಬಾರೆಂದು ಅಳಿಯನ ಪ್ರಧಾನಿಯ ಸತ್ಕರಿಸಿ | ಆಭರಣ ಭೂಷಣವ ಕೊಡಿಸಿ          || ೨೨೫ ||

ಮೇದನ ಸುಳ್ಳಿಂದ ಪ್ರಾಣಕ್ಕೆ ಮುನಿದಿರ್ದೆ | ನಾ ಬೇರೆ ಯಮಗೆ ಗುರಿಯಾಗಿ |
ಆದಂಥ ಸ್ಥಿತಿಗತಿಯ ಪಾಂಚಾಲರಾಯಗೆ ಪೇಳೀ | ಕಾಯನೊಯ್ದು ಮುಖ[ದೋರು]         || ೨೨೬ ||

ಒಳಿತಯ್ಯ ರಾಜೇಂದ್ರ ಬೆಳ್ಳಿ [ಪೆಟ್ಟಿಗೆ] ತುಂಬಿ | ಸುಮ್ಮನೆ ಕಳುಹು ಎಮ್ಮೊಡನೆ |
ಗಮ್ಮನೆ ಬರುವಾಗ [ಅನ್ಯೆಯ] ಸತಿ ಹೀಗೆ | ಎನ್ನುತ ನಡೆಯಲಾ ಪುರಕೆ             || ೨೨೭ ||

ಬರಲಾಗ ಚಂಪಕಪುರದ ಮಂತ್ರಿಗೆ ಸುದ್ದಿ | ಕೊಡಲಾಗ ಪೋಗಿ ಕಂಡವರು |
ತನುಜೆಯ ರಮಣನ ಬರವ ಪೇಳಲು ಹೊರಟು | ಇದಿರ್ಗೊಂಡು ಕರೆದೊಯ್ಯೆ ಮನೆಗೆ        || ೨೨೮ ||

ಷಡುರಸಾನ್ನವನೀಗ ಸಲಿಸಿ ಭುಕ್ತಿಯ ಮೇಲೆ | ಮಲಗುವ ಮನೆಯ ಶೃಂಗರಿಸಿ |
ಪೆಟ್ಟಿಗೆ ಸಹವಾಗಿ ಹೊತ್ತು ಮಂಚದ ಮೇಲೆ | ಇಟ್ಟು ಶವವನ್ನು ಮಲಗಿಸಲು          || ೨೨೯ ||

ಬಂದಳು ಸತಿ ಬೇಗ ಬಿಡದಿ ಏಕಾಂತಕ್ಕೆ | ಅಂಜಿ ಅಳುಕುತಲಿ ಭಕ್ತಿಯಲಿ |
ಬಿಂಬ ಅರಳಲು ಮರಿದುಂಬಿ ಎರಗುವ ಬೀದಿ | ಪಾದಂಗಳಿಗೆರಗಿ ವಲ್ಲಭನ           || ೨೩೦ ||

ಧಾವಂತದೊಳು ಬಹಳ ಬಳಲಿ ನಿದ್ರೆಯ ಮಾಳ್ಪರ | ಏಳಿಸ ಸಲ್ಲೆಂದು ಮನದಿ |
ಮೇಲಣ ಮುಸುಕನು ಜಾರಿಸಿ ಕರವಿಡಲು | ತೋರಲು ಸೀತಾಗ್ನಿಯಾಗಿ             || ೨೩೧ ||

ಹರಹರ ಗುರುರಾಯ ಇದು ಏನು ಮಾಯಗಳು | ಸ[ತಿ] ಜೀವ [ಪತಿಯೊ]ಡನೆ ಮಲಗಾಗೆ ||
ಲಯಕಾಲಲ್ಲೈದರು ಇದು [ಏನು]ಫಲಪ್ರಾಪ್ತಿ | ಶಿವದ್ರೋಹಿ ರಂಡೇರಿನ್ನುಂಟೆ         || ೨೩೨ ||

ಆಸೆಯಿಲ್ಲದ ಪತಿಗೆ ಐದೆತನವಿಲ್ಲದ ಸತಿಯ | ಯಾಕೆ ನಿರ್ಮಿಸಿದನಾ ಬ್ರಹ್ಮ |
ಲೋಕದಿ ಬಾಳ್ವರಿಗೆ ರತಿಗಲೆಯ ಕೆಡಿಸಿದ ಫಲವು | ಈ ಪ್ರಾಪ್ತಿ ಎನಗಾಯಿತೆನಲು   || ೨೩೩ ||

ಪತಿ ಅಳಿದು ನಾನಿರ್ದು ಗತಿಯೇನು ಧರೆಯೊಳಗೆ | ಜೊತೆಗೂಡಿ ನಡೆಯೆ ಪತಿಯೊಡನೆ |
ಸಿತಕಂಠ ವರಪುತ್ರ ವಂದಿಸಿ | ಹತ [ಮಾ]ಡಿಕೊಂಬೆ ಪ್ರಾಣವನು                    || ೨೩೪ ||

ಭದ್ರಕಾಳಿಯ ರಮಣ ಚಿದ್ರೂಪನಣುಗನೆ | ನಿರ್ಧರಿಸು ಎಲ್ಲ ಪ್ರಾಣಗಳ |
ನಿದ್ರೆಯ ಮಾಡುತಲಿ ಮರಣವಾದರೂ ರಮಣ | ನಿದ್ರೋಹಿ ಎನ್ನನು ಕೊಡಿ          || ೨೩೫ ||

ಕೊಂಡಾಡಿ ಕಿಡಿಗಣ್ಣ ರುಂಡಮಾಲನೆ ಎನ್ನ | ಗಂಡನ ಅಸುವ ಕೊಡದಿರಲು |
ಗಂಡಗತ್ತರಿ ಹಾಯ್ದು ಕೊಡುವೆ ಪ್ರಾಣವ ಗುರುವೆ | ಬಂಧಿಸಿ ಶಿರವ ಹೂಡಿದಳು      || ೨೩೬ ||

ಅಳಿಯಲೇತಕೆ ಮಗಳೆ ಪರಹಿತದ ಪತಿವ್ರತೆಯೆ | ತಾಯೆ ಮೆಚ್ಚಿದೆ ಬೇಡು ಎನಲು |
ನೀ ಹೋಗಿ ಪತಿಯನು ಏಳು ಎನ್ನಲು ಮತ್ತೆ | ಕಾಯವ ಮರೆದೇಳ್ವನಮ್ಮ            || ೨೩೭ ||

ಹರಿಣಲೋಚನೆ ಬೇಗ ಎರಗಿ ಈಶ್ವರನಡೆಗೆ | ತಿರುಗಿದಳು ತನ್ನ ಗೃಹಕಾಗಿ |
ಪುರುಷನೆ ಏಳೆಂದು ಮುಖದೆರೆನು ನೋಡಲು | ಹರಹರ ಎನುತ ಕುಳ್ಳಿರಲು         || ೨೩೮ ||

ಸತ್ಯದ ಸತಿಯೆಂದು ಮೆಚ್ಚೆ ಮಂತ್ರಿಯ ಮಗನು | ಮಂಚದ ಕೆಳಗಿಂದಲೇಳೆ |
ವೃತ್ತಾಂತ ಎಲ್ಲವನು ರಾಯಪುತ್ರಗೆ ಪೇಳೆ | ಸತ್ಯ ಪಾರ್ವತಿ [ಗವರೆ]ರಗೆ            || ೨೩೯ ||

ರಾಯ ಫಾಲೀಂದ್ರನು ಪ್ರಧಾನನು ಸತಿಯೊಳು | ಸಾಗಿದರವರು ಪುರಕಾಗಿ |
ಹೇಳಿದ ಮುನಿವರನು ಕೇಳಿದ ನಾರಂದ | ಭೂದೇವಿ ಎನಬಹುದು ಕಾಯ            || ೨೪೦ ||

ಎಲ್ಲಾರು ಕಂಡೀರೇ ಕಳ್ಳರಂಡೆರ ಮಾತ | ಅಲ್ಲಿ ಪಡೆದಂಥ ಪತಿವ್ರತೆಯ |
ನಿಲ್ಲದೆ ಧರೆಯೊಳು ಕೋಟಿಗೊರ್ವರು ಧರಣಿ | ಅಲ್ಲಿ ಹುದುಗದೆ ನಿಮಿಷದಲಿ          || ೨೪೧ ||

ಗುರುವಾಕ್ಯವಾದುದು ಈ ಒರೆದ ಪ್ರಸಂಗವು | ಮಡದಿಯರ ನಂಬಲು ಮರುಳೆ |
ಸುಡು ಹೆಣ್ಣು ಜನ್ಮವ ಸಾಕೆಂದು ಮುನಿಗಳು | ಅಡರಲು ರಜತಾದ್ರಿಗಳಿಗೆ            || ೨೪೨ ||

ರಾಮಭೂಪಾಲ ಕುಮಾರ[ನು]ಜಟ್ಟಂಗಿ | ರಾಯ ಲಾಲಿಸಿದ ಮೇಲ್ಕಥೆಯ |
ದೇವ ನಿಮ್ಮಯ ಪಾದ ಬಳಲಿಸಿದಿರಿ ರವಿ | ಕಡಲ ಪಾಲಿಸಬೇಕು                     || ೨೪೩ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರ[ದ] | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನ ಜನನ ಬೆಳೆವಾಸರವ ಮುನಿಯು | ನಡೆದ ಬಳಿಗೆ ದ್ವಯ ಸಂಧಿ     || ೨೪೪ ||[1]

[1] ಅಂತು ಸಂಧಿ ೨ಕ್ಕಂ ಪದನು ೪೮೪ಕ್ಕಂ ಮಂಗಳಮಹಾಶ್ರೀ