[1]ಕಂದ:
ಹರನಿತ್ತ ಪುಷ್ಪ ಪಲದೊಳು |
ತರಳೆ ಹರಿಯಮ್ಮನೊಳಗೆ ಕುರುಹಂದೋರಲು |
ಹರಿಣಾಂಕನುಬ್ಬುವಂತೆ ತಾಯ ಹೃದಯದಿ |
ಬಿರುದಾಂಕ ರಾಮೇಂದ್ರ ಜನಿಪ ವಾರ್ತೆಯ ಲಾಲಿಸಿ ||
ಪದನು :
ಶ್ರೀ ಗುರುವರ ಶಂಭು ಭಾಗೀರಥೀಶನೆ | ನಾಗಭೂಷಣನೆ ನಂದೀಶ |
ಭೋಗಿಭೂಷ ಗರ್ಭ ಭಾಳಾಕ್ಷಿ ಸಹಿತನೆ | ಶ್ರೀಗಿರಿ ಮಲ್ಲೇಶ ಕೊಡು ಮತಿಯ || ೧ ||
ಗಜಮುಖನೆ ಗಣನಾಥ ಜಗವೆಲ್ಲ ಪೂಜಿ [ತ]ನೆ | ಅಗಜೆಯ ರಮಣನ ಪ್ರಿಯ |
ನಿಜದೋರಿ ತಗಡೂರ ಕಟ್ಟೆಯೊಳ್ ನೆಲಸಿದ | ಭುಜಗಧರನೆ ವಿಘ್ನರಾಜ || ೨ ||
ದಿವರಾತ್ರಿ [ಪರಿ]ಯಲು ದಿನಕರನು ರಥವೇ [ರೆ] ಸ್ವರವುದೋರಲು ಕಕ್ಕುಟನು |
ಹರನ ನೆನೆವುತಲೇಳ್ವ ನೃಪವರನು ಜಟ್ಟಂಗಿ | ಧರಿಸಲು ಕಾಮಭಸಿತವನು || ೩ ||
ಸತ್ಯರಾಮೇಂದ್ರನ ಪುತ್ರನು ಜಟ್ಟಂಗಿ ಭೂ | ಪೋತ್ತಮ ಪರಮಾನ್ನ ಸವಿದು |
ಇತ್ತರ ಗಜ ತುರಗ ಬಲದೊಡೆ… | ಹತ್ತಲು ಸದರ ಚಾವಡಿಯ || ೪ ||
ವಾಲಗ ನೆರೆಯಲು ಕೇಳು[ತ] ಗುರುವರ್ಯ | ಏರಿದ ಪಲ್ಲಕ್ಕಿ ನೆರೆಯೆ |
ಕಾಣುತ್ತ ರಾಜೇಂದ್ರ ದೀರ್ಘ ಪ್ರಣತನಾಗಿ | ಬೇರೊಂದು ಸದರ ಬಿಜಗೊಳಿಸಿ || ೫ ||
ಗುರುರಾಯ ಕರುಣಿಸಿ ದಯಮಾಡಿ ಅಜ್ಜಗೆ | ಮಗನಾದ ಸುಪ್ರಸಂಗ [ವನು]
ಉರಗಭೂಷಣನೊಲಿದು ಪೂರ್ವಿತ್ತ ಫಲದೊಳಗೆ | ಜನನತ್ವವಾ [ದುದನೊರೆಯಿ] || ೬ ||
ಲಾಲಿಸೊ ಗುರುಪುತ್ರ ಲೀಲೆ ನಿಮ್ಮಯ್ಯನ | ಮೂಲ ಪ್ರಾರಂಭ ಕೃತಿಯೊಳಗೆ |
ಸ್ವಾಮಿಯ ವರದೊಳು ಪ್ರಸಾದವದು ನಿಮಗೆ | ಶೋಭಿತ ವಾರ್ತೆ ಕರ್ಣದಲಿ || ೭ ||
ರಾಮೇಶಲಿಂಗಕ್ಕೆ ಮಾಡಿಸಿ ಪರುಪಾಡ್ಯ | ದಾನಧರ್ಮಗಳು ಕೊಡಿಸಿ |
ಸಾಮರಾಧನೆ ಸಕಲದೇವ ಬ್ರಾಹ್ಮರಿಗೆಲ್ಲ | ದಾನ ಮಾನ್ಯಗಳನು ಬಿಡಿಸಿ || ೮ ||
ನಂದಿವಾಹನಗೆ ತ್ರಾಹೆಂದು ಕಂಪಿಲರಾಯ | ವಂದಿಸಿ ಕರಮುಗಿದು ಪುರಕೆ |
ಮಂದಿ ಮಾರ್ಬಲ ಕೂಡಿ ನಡೆಯಲು ನಿಮ್ಮಜ್ಜ | ಕುಂಭಿನಿ ಒದರ್ವ ರವದೊಳಗೆ || ೯ ||
ಕರಿ ತುರಗ ಪೊಡೆವ ಭೇರಿಯ ನಾದ | ಬಿರಿದಿನೆಕ್ಕಟಿಗ ಮಾನ್ಯೆಯರು |
ವರುಣಾದ್ರಿ ಸ್ಥಾನಕ್ಕೆ ರವಿ ಬಂದು ಇಳಿವಂತೆ | ನಗರವನು ಪೊಗಲು ರಾಜೇಂದ್ರ || ೧೦ ||
ಬಂದು ಹಜಾರದ ಮುಂದಿಳಿದು ಕರಿಘಟೆಯ | ಮಂದಿ ಮಾರ್ಬಲವನು ನೋಡಿ |
ನಮ್ಮ ಸ್ವಾಮಿಯ ಪೂಜೆ ಚೆಂದವಾದುದು ಮಂತ್ರಿ | ಮಂದಿಗೆಲ್ಲ ಪೋಗೆನಲು || ೧೧ ||
ರಾಯ ಭೂಪಾಲನೆ ಪೋಗುವೆನು ಬಿಜಮಾಡಿ | ಕೂಡೆ ಕರಮುಗಿದು ಬಲವೆಲ್ಲ |
ರಾಮೇಶ ಗತಿಯೆಂದು ರಾಯನರಮನೆ ಪೊಗಲು | ತಾವರೆ ಸಖನಸ್ತಕಿಳಿದ || ೧೨ ||
ರವಿಶಶಿ ತಾಯೊಡಲ ಕಡಲಿಗೆ ಇಳಿಯಲು | ಪರಮಾನ್ನ ಸವಿದು ನೃಪವರನು |
ಪರಮ ಸಂತೋಷದಿ ಒರಗಿ ನಿದ್ರೆಯ ಮಾಡೆ | ಹರ ಬಂದು ಸುಳಿಯೆ ಸ್ವಪ್ನದಲಿ || ೧೩ ||
ಚಕ್ರಧರನ ಸುತನ ಶಿಕ್ಷಿಸಿ ಭಸಿತವನು | ಇಟ್ಟವ ಸುವರ್ಣ ತೊಟ್ಟಿಹನು |
ಭಿಕ್ಷಾಪಾವನ ಮೂರ್ತಿ ಬಂದಾಗ ನೃಪವರನ | ಅಕ್ಷಿಗೆ ಸುಳಿದ ಆ ವೇಳೆ || ೧೪ ||
ಬರುವಾಗ ಭವರೋಗ ಭಯರೂಪವೇ ಧರಿಸಿ | ಕುಂಜರದೈತ್ಯನ ಕೊಂದ ತೆರದಿ |
ದ್ವಂದ್ವದಿ ನೂರೆಂಟು ಮರುಳ ತಂಡ | ಅಂದು ಸುಳಿಯಲು ಅಜ್ಜಯಗೆ || ೧೫ ||
ಜಡೆಗಳು ಜಡಿಯತ್ತ ಪಿಡಿದ ತ್ರಿಶೂಲಗಳು | ತೊಡಗಿದ ಮೈಯೆಲ್ಲ ಉರಗ |
ಹೊದೆದು ಭಸ್ಮಾಂಗ ರುದ್ರಾಕ್ಷಿ ಕಾವಿಯ ಕಂತೆ | ದಿಗಿಲನೆ ರಾಯ ಕಂಗೆಡಲು || ೧೬ ||
ಕಣ್ಣ ತೆರೆಯಲು ಸರ್ಪ ತನ್ನ ಕಡಿಯವೆಯೆಂದು | ಬಿಮ್ಮನೆ ಬಿಗಿದು ಮುಚ್ಚುವನು |
ನಮ್ಮಯ್ಯ ಬರಬೇಡಿ ಬೆದರುವೆ ಮುಂದಕ್ಕೆ | ಕೊಡುವೆ ನೀವೇನ ಕೇಳಿದರು || ೧೭ ||
ಒಡೆಯರೆ ಹಿಂದಕ್ಕೆ ನಿಲಲಾಗದೆ ಸ್ವಾಮಿ | ಕಡಿಯವೆ ನಿಮ್ಮ ಹಾವುಗಳು |
ಕೊಡುವೆನು ನಿಮ್ಮ ಮನದಣಿಯ ವಸ್ತುವ ನಾನು | ಉಳುಹಯ್ಯ ಎನ್ನ ಪ್ರಾಣವನು || ೧೮ ||
ಯಾರು ಬಿಟ್ಟರು ಇತ್ತ ಗಾರುಡಿಗ ಮಹಿಮನ | ಬಾಗಿಲ ಜನರು ಏನಾಯ್ತು |
ದೂರಮಾಡುವೆನೆನಲು ಬಾಯಿ ಬಾರದೊ ಶಿವನೆ | ತೀರಿತೆ ಫವಿಂದು ಎನಗೆ || ೧೯ ||
ಹೆದರಬೇಡವೊ ಮಗನೆ ಹೃದಯದೊಳೊರ್ವನು | ಚದುರ ಪ್ರತಾಪ ಜನಿಸುವನು |
ಇದಿರಿಲ್ಲ ಅವನಿಗ ಭುವನ ನವಖಂಡಗಳು | ವಿಧಿವಾಸ ಸ್ವಲ್ಪ ಕಿಂಚಿತವು || ೨೦ ||
ಛಪ್ಪನ್ನ ರಾಯರೊಳ್ ಕಪ್ಪವ ತೆಗೆವನು | ಸತ್ಯದೊಳು ಹರಿಚಂದ್ರನೆ [ನಿ] ಸುವನು |
ಪರಸ್ತ್ರೀಯ ಒಪ್ಪಕೆ ಸಿಲುಕನು ಒಂದು ಕಂಟಕವುಂಟು | ತಪ್ಪದಾಳ್ವನು ಮೂವತ್ತೊರುಷ || ೨೧ ||
ಸ್ವಪ್ನದಿ ಹರಬಂದು ಕೃಪೆಯ ಪಾಲಿಸಿ ಹೋಗೆ | ನೃಪವರನು ಬೆದರಿ ಹೆಮ್ಮೈಸಿ |
ಈ ಪರಿ ತಿಳಿದೆದ್ದು ಎಡಬಲದ ಸತಿಯರನು | ತಡವರಿಸಿ ಹೆದರಿಯಬ್ಬರಿ [ಸೆ] || ೨೨ ||
ಕಾಂತನ ಕೈಸನ್ನೆ ಕಂಡು ಸತಿಯರು ಹೆದರಿ | ಬಿಮ್ಮನೆ [ಬಿ]ಗಿದು ತಬ್ಬುವರು |
ಎದೆಹಾರಗಳ ಬಿಡಿಸಿ ಏನೆಂದು ಕೇಳಲು | ಮೃದು ಬಾಲನಂತೆ ತೊದಲಿಪನು || ೨೩ ||
ಮಡದಿ ಕೇಳೆಲೆ ಇರುಳು ತಿಳಿದ ಸ್ವಪ್ನದ ಬಗೆ | ಎದೆ ಧೈರ್ಯನಾಗಲು ಊಳಿದೆ |
ನಡುಗುವುದು ಜೀವಾತ್ಮ ಅಡಗಿ ಇರುವನು ದೀಪ | ವಿಡಿದು ನೋಡಿದರೆಡಬಲನ || ೨೪ ||
ನಾರಿ ಕೇಳಲೆ ರಣಧೀರನಾಗಲು ಉಳಿದೆ | ಸೇರಿಲ್ಲ ಪ್ರಾಣ ಡಿಂಬದಲಿ |
ಸ್ವಾಮಿ ಜಟ್ಟಂಗಿಯ ಪೂಜೆ ಫಲದೊಳು ಮಿಕ್ಕ | ಜೀವಿಯಾಗಲು ಯಮನ ಕಾಣ್ವ || ೨೫ ||
ಮಡದಿ ಕೇಳೆಲೆ ಓರ್ವ ಒಡೆಯರ ರೂಪಿಂಗೆ | ಸುಳಿದನು ಮುನಿಯ ವೇಷದಲಿ |
ಜಡೆದಲೆ ಕರದೊಳು ನರನ ಕಪಾಲವು | ತೊಡರಿದ ಹಾವು ಮೈಯೆಲ್ಲ || ೨೬ ||
ಅತ್ತತ್ತ ಹೋಗೆನಲು ಇತ್ತಿತ್ತ ಬರುವನು | ಒತ್ತಿಗೆ ಇಬ್ಬೆರಳು ಸುಳಿದು |
ನೆತ್ತಿಯೊಳುರಿಗಣ್ಣು ಸುತ್ತ ಮರುಳ ತಂಡ | ಪೃಥ್ವಿಯೊಳಿಲ್ಲದಂಥ ರೂಪ || ೨೭ ||
ಪಿಡಿದ ಡಮರುಗ ಶೂಲ ತೊಡೆದ ಭಸ್ಮಾಂಗವು | ಸಿಡಿಲಂತೆ ಬರುವ ರವ ರುದ್ರ |
ಹೃದಯ ಬೆಚ್ಚುತ ಹದಿನಾರು ಮೂಲೆಯ ಹೊಗಲು | ಎಡಬಲದಿ ಬಂದು ನಿಂದಿಹರು || ೨೮ ||
ಸಾವಿರ ಹಾವುಗಳ ಯಾವಲ್ಲಿ ಪಿಡಿದಿಹನೊ | ಆಹಾರಕೇನ ಮಾಡುವನೊ |
ಬೇಡಯ್ಯ ಬೇಕಾದ ಸುವರ್ಣ ಸಾವಿರವೆನಲು | ಬಾಲ ಸಂತತಿಯ ಪೇಳಿದನು || ೨೯ ||
[ಬಾಳ]ಲೋಚನ ಬಂದು ನಿಜರೂಪ ತೋರಿದಡೆ | ಹುಚ್ಚಾಗಬಹುದೆನ್ನ ಪ್ರಿಯ |
ಹುಟ್ಟು ದರಿದ್ರನಿಗೆ ಹೊಂದಿಡಲು ಕಣ್ಣೆರಡು | ತೋರದೆ ಅಣಕಿಸಿ ನಡೆದ || ೩೦ ||
ಹರಿವ ಹಾವನು ದೋರಿ ಆಭರಣ ಮಾಡಿದ ದೇವ | ಸುಳಿಯಲು ಸ್ವಪ್ನದಿ ಬಂದು |
ಮರುಳಾಗಬಹುದೆ [ನಾ] ತಾನು ಚರಣಕ್ಕೆರಗಿ | ಕೈವಲ್ಯ ಗತಿಗೇಳದಿಹರೆ || ೩೧ ||
ಪತಿ[ಗೆರಗಿ] ಪಾವಕನ ಧರಿಸಿದ ಭವನನೈಯ | [ನ ಸರ್ವ] ಸುಖದೊಳಗಿರಲು |
ಸಿತಕಂಠನೊಲುಮೆಯಲಿ ಮನ್ಮಥ ಕೀ… | ಪತಿ ಬಿಂದು ಸತಿಯೊಳು ನೆಲಸೆ || ೩೨ ||
ಹರಿಹರದೇವಿಗೆ ಘನಸ್ಥಾನವು ನಿಲ್ಲೆ | ಮೃಗಧರನ ವರದೃಷ್ಟಿಯೊಳಗೆ |
ಮುಗುಳುದೋರ್ವುದು ಮೊಲೆಯು ತುದಿಗೆಂಪು ಕಪ್ಪಡರಿ | [ಮೃಗಮದ]ವಾಗೆ ಮೈಬಣ್ಣ || ೩೩ ||
ಒಂದೆರಡು ಮೂರಾಗೆ ಚಂದ್ರವದನೆ ದೇಹ | ಕಂಡನು ನೃಪ ತನ್ನ ಸತಿಯ |
ಚಂದ್ರನು ದಿನದಿನಕೆ ಪೆಚ್ಚುವ ತೆರದಿ ತ್ರಿ | ಮಾಸಗಳ ಒಸಗೆ ಮಾಡಿಸುವ || ೩೪ ||
ಮೂರು ತಿಂಗಳ ಒಸಗೆ ಊರ ತೋರಣ ಹಾರ | ಮಾರ್ಗ ಮಾರ್ಗದಿ ಅನ್ನಛತ್ರ |
ನೀರ ಮಜ್ಜಿಗೆ ಕ್ಷೀರ ಬೆಣ್ಣೆ ಬಸವನ ಗ್ರಾಸ | ಸಾರಿಸಿ ಸಕಲ ಜಾತಿಗಳ || ೩೫ ||
ಕಾಡದೇವರಿಗೆಲ್ಲ ಕಡಲೆ ಕಬ್ಬಿನಕೋಲು | ನಾಡದೈವಕೆ ನಿತ್ಯಪೂಜೆ |
ಮಾಡುವನು ನೃಪವರನು ಮನ [ದಣಿ] ಸತಿಯಳಿ | ಗಾಗಿಹುದು ಜನನದ ಕಾಲ || ೩೬ ||
ಬ್ರಾಹ್ಮಣ ಜಾತಿಗೆ ಸಮರಾಧನೆ ಮಾಡಿ | ಗ್ರಾಮ ಅಗ್ರಹಾರವ ಬಿಡಿಸಿ |
ಆದಿತ್ಯ ಜಪಮಾಡಿ ಶೂನ್ಯವಾಗಲು ದೋಷ | ರಾಮೇಶ ಮೂರ್ತಿಗಭಿಷೇಕ || ೩೭ ||
ತುಂಬಿದ ಬಸುರಿಗೆ ತುಟಿ ಬಾಯಿ ಒಣಗುತ್ತ | ಹಂಬಲಿಸುತ್ತ ಪಲ ಬಗೆಯ |
ಒಂಬತ್ತರೊಳವಿಗೆ ಮುಂದುವರಿಯಲು ಮಾಸ | ನೊಂದುಕೊಂಡನು ಚಿಂತಿಪನು || ೩೮ ||
ಪಟ್ಟದ ರಾಣಿಗೆ ಹುಟ್ಟಲು ಕಿರಿಬೇನೆ | ಕಟ್ಟನೆ ಕರೆಸಿ ಸೂಲಿಗರ |
ಕೊಟ್ಟು ಉಡುಗೊರೆ ತೊಡ ಬಣ್ಣ ಸತಿಯಳ | ಕಷ್ಟ ಕೋಟಲೆ ನಿಮ್ಮದೆಂದ || ೩೯ ||
ಸುತನ ಜನನತ್ವ ನೋಡಲ್ಕೆ ರವಿ ಪೂರ್ವ | ರಥವೇ [ರಿ] ಬಂದನು ತನುಜ |
ಸಿತಕಂಠ ಹರಿಬ್ರಹ್ಮ ನಂದಿ ಗರುಡವನೇರಿ | ಮೇರು ಮಂಡಲದಿ ನೋಡುತಲಿ || ೪೦ ||
ತುಂಬುರ ನಾರದರು ಭೃಂಗಿ ನಾಟ್ಯಗಳಿಂದ | ಚಂದ್ರಶೇಖರ ಸನ್ನಿಧಿಯ |
ಇಂದ್ರನು ಸುರ ಕೋಟಿ ಗಣಗಳು ಸುರಸಭೆ | ನಿಂದು ಖೇಚರದಿ ನೋಡುತಲಿ || ೪೧ ||
ಶ್ರಾವಣ ಮಾಸದೊಳು ತಿಥಿ ಪಂಚ ಗುರುವಾರ | ಜಾವ ಎರಡನೆ ಏಳು ಘಳಿಗೆ |
ಪೌರ್ಣಮಿ ಚಂದ್ರಾಮ ಪೂರ್ವದೊಳಿಪ್ಪಂತೆ | ಬಾಲಕ ತೋರೆ ಸೂಲಿಗರ || ೪೨ ||
ಕಿರಣದ ಪ್ರಭೆಯಂತೆ ಉರಿವ ಬಾಲನ ಕಂಡು | ಮನ ಮೆಚ್ಚಿಯಾಗಿ ಸೂಲಿಗರು |
ತಿಳಿದೆದ್ದು ನೋಡುವ ಸಮಯದೊಳಪರಂಜಿ | ಕರುವಿಟ್ಟು ಗೊಂಬೆ ಗಾರಿಡಲು || ೪೩ ||
ಫುಲ್ಲಶರನ ಪೋಲ್ವ ಪುರುಷ ಶಿಶುವಿನ ತೊಳೆ | ದಲ್ಲಿ ಶಾಸ್ತ್ರಗಳ ಮಾಡುವರು |
ನಿಲ್ಲದೆ ಪಲಬಗೆಯ ದೃಷ್ಟಿ ಆರತಿ ಬೆಳಗಿ | ಚೆಲ್ವ ಬಾಲನಿಗೆ ಮೊಲೆಯೂಡಿ || ೪೪ ||
ಪರಿದೋಡಿ ಬರುತಿರೆ ತರಳೆಯೋರ್ವಳು ದಾಸಿ | ಅರಸರಿಗೆ ವಾರ್ತೆ ಪೇಳಲ್ಕೆ |
ಎಡಹುತ ಮುಗ್ಗರಿಸುತ ಬರುವ ದಾಸಿಯ ಕಂಡು | ಎದೆ ಹಾರಿ ನೃಪನು ಕೇಳುವನು || ೪೫ ||
ಹಿಂಗಿತ್ತು ಜನನತ್ವ ಅಂಗನೆಗೆ ನೃಪವರನೆ | ರಂಗನಾಯಕ ನಮಗೆ ಭೂಪ |
ಕುಂಜರವೈರಿ ಭೇರುಂಡನ ಮರಿ [ಹೋಲ್ವ] | ಕಂ [ದ] ಬಾಲಕನ ಪಡೆದಳು || ೪೬ ||
ಧೃತರಾಷ್ಟ್ರ ಕೌರವರ ಹತಮಾಡಿಕೊಂದಾತ | ಪ್ರತಿಭೀಮ ಬಂದು ಜನಿಸಿದ |
ರತಿದೇವಿಪತಿ ಭೂಪ ಹತನಾದನೆನಬೇಡ | ಸುತನಾದ ಬಂದಿಲ್ಲಿ ನಿಮಗೆ || ೪೭ ||
ಬಾಲನೆಂಬುವ ನುಡಿಯು ಬಂದು ಕರ್ಣಕೆ ಬೀಳೆ | ಬಾಯೊಳು ಹೊನ್ನ ತುಂಬಿಸಿದ |
ಸಾರಿ ನಾಣ್ಯದ ಬಣ್ಣ ಆಭರಣವ ಕೊಟ್ಟು | ಪ್ರಾಣಕಾಂತೆಗೆ ಪರಿಣಾಮವೇನೆ ? || ೪೮ ||
ಗುರುವಿನ ಕೃಪೆಯೊಳು ಪರಿಣಾಮ ರಾಜೇಂದ್ರ | ಧರೆಯೊಳಗುಂಟೆ ಈ ಜನನ |
ಮರವೆ ಮೂರ್ಛೆಗಳಾಗಿ ಸ್ಮರಣೆದಪ್ಪಲು ನಾವು | ಅರಿವಾಗೆ ಶಿಶುವು ಭೋರಿಡಲು || ೪೯ ||
ಮಂತ್ರಿ ಕೇಳ್ ಬೈಚಪ್ಪ ಚಿಂತೆ ಇಂಗಿತು ಇಂದು | ಮುಂತೆ ಸಮನಾದೆ ಧರಣಿಯಲಿ |
ಅಂತಿಂತು ಆಗಲು ರವಿಚಂದ್ರ ಇರುತಿರ್ಪ | ಮುಂಚೆ ತಪ್ಪದೆ ಅಪಕೀರ್ತಿ || ೫೦ ||
ಹರನು ಕರುಣಿಸಿದಂತೆ ವರದ ಬಾಲಗೆ ಮಂತ್ರಿ | ಜನನ ದಾನವ ಮಾಡಿಸಯ್ಯ |
ಅರಸನಪ್ಪಣೆಗೆ ಆಗೆ ಕರೆಸೆ ಭೂಸುರರು ಬಂದು | ನೆರೆಯಲು ಸದರ ಚಾವಡಿಯ || ೫೧ ||
ಮದಕರಿಯ ಶೃಂಗರಿಸಿ ಹುರಿಗಡಲೆ ಸಕ್ಕರೆವೆರಸಿ | ಪರಿಮಳ ದ್ರವ್ಯ ಗಂಧಗಳು |
ಧರಣಿಯನೊತ್ತ್ಯಾಳ್ವ ಬಾಲ ಜನಿಸಿದನೆಂದು | ಬಿರುದಿನ ಕಾಳೆ ಸಾರುತಲಿ || ೫೨ ||
ಆರುಸಾವಿರ ಹೊನ್ನ ದಾನಧಾರ್ಮಿಕೆ ಕೊಡಿಸಿ | ದಾನ ಮಾನ್ಯಗಳನು ಬಿಡಿಸಿ |
ಸಾರುವ ರಣಗಾಳೆ ಭೇರಿ ನಾದಗಳಿಂದ | ರಾಜಬೀದಿಯಲಿ ಕೊಡುಕೊಡುತ || ೫೩ ||
ಬ್ರಾಹ್ಮಜಾತಿಗೆ ನಿತ್ಯ ಸಮರಾಧನೆ ಭೂಮಿ | ಧಾರೆಯೆರೆದು ಅಗ್ರಹಾರ |
ದೇವರ ಸಮಾರಾಧನೆ ಮಠ ಮಹಂತಿಗೆ | ಗ್ರಾಮಕ್ಕೆ ಲಿಂಗ ಮುದ್ರೆಗಳು || ೫೪ ||
ಆರು ದರುಶನಕೆಲ್ಲ ಮನಹಾರವ ಕೊಟ್ಟು | ನಾಮಕರ [ಣಂ]ಗಳಿಡುವೆಡೆಯ |
ಸಾಗಿ ಬರಲು ಮತ್ತೆ ರಾಯಗೆ ಗುರುವಾದ | ಯೋಗೀಂದ್ರ ಸಾರಂಗಮುನಿಯು || ೫೫ ||
ಗುರುಪಾದ ದೊರೆತದ್ದು ಪರಮ ಪಾವನ ಪುಣ್ಯ | ಎರಗಿದ ನೃಪನು ಸಾಷ್ಟಾಂಗ |
ಪರಿಣಾಮ ಸ್ಥಿತಿ ಮಗನೆ ಸ್ಥಿರಪಟ್ಟವಾಳೆಂದು | ಹರಸುತ ಶಿರವನು ಪಿಡಿಯೆ || ೫೬ ||
ವರರತ್ನ ಖಚಿತದ ಸದರ ಮಾಡಿಸಿ ನೃಪನು | ಒರಗು ಲೋಡುಗಳಿಕ್ಕೆಲದಿ |
ಕರಹಸ್ತಲಾದೊಳ್ ಬಿಜಗೊಳಿಸಿ ಮುನಿಯನು | ವರರತ್ನಪೀಠದೊಳ್ ಕುಳ್ಳಿ[ರಿ]ಸಿ || ೫೭ ||
ಪಟ್ಟೆ ಪೀತಾಂಬರದ ನೇತ್ರಾವಳಿಯ ಹೊನ್ನ | ತಟ್ಟೆಯೊಳ್ ತಂದು ತಾಯಿರಿಸಿ |
ಒಪ್ಪಿಕೊಳಲಿಬೇಕು ನಿಮ್ಮಯ ತನುಜನ | ಉತ್ಪತ್ಯವಾದ ಉಡುಗೊರೆಯ || ೫೮ ||
ಗುರುರಾಯ ಫಲದೋರಿ ಬೆಳೆಸಿಕೊಂಡಿರಿ ಮನೆಯ | ನೆರೆ ಬಂಜೆತನ ಹಿಂಗಿತೆನಗೆ |
ಕರುಣದಿ ನಿಮ್ಮಯ ಮಗನ ನೋಡುವುದೆಂದು | ಕರದೊಳಗಿಡಲವ ಶಿಶುವ || ೫೯ ||
ನೋಡಲು ಮುನಿರಾಯ ಬಾಲನ ನಿಜರೂಪ | ತಾವರೆಗೆಣೆಯೇ ಎನ್ನಯ್ಯ |
ಜೋಡಿಲ್ಲ ಧರೆಯೊಳು ಧರ್ಮಜನನುಜನ | ರೀತಿಗೆ ಸಮನೆನ್ನಬಹುದು || ೬೦ ||
ಅರಸ ಕೇಳೆಲೆ ಭೂಪ ನರನಲ್ಲ ಈ ಬಾಲ | ಹರಿಣಾಂಕ ಸಮನು ಎನಬಹುದೇ |
ಬಿಡು ಮುನ್ನ ಮೂರ್ಲೋಕವಡೆದು ಕಪ್ಪವ ತಂದು | ಬಹುಕಾರ್ಯ ಫಲ ಸ್ಥಿತಿಗತಿಗೆ || ೬೧ ||
ಮೊದಲು ಕಂಟಕ ರಾಯ ಮಾಡದೆ ಕಳಹಾದರ | ಕಳೆದಳಿದ ಮೂವತ್ತರೊಳಗೆ |
[ಕಿ] ರಿಯ ಜನನಿಯಿಂದ ಮರಣ ತಪ್ಪದು ರಾಯ | ಮರಣವನು ತಿಳಿದಿರೋ ಮಂತ್ರಿ || ೬೨ ||
ನಾಮ ಕರಣಂಗಳ ಮಾಡಿದ ಮುನಿಗುರು | ರಾಮ ಕುಮಾರಯ್ಯನೆನುತೆ |
ಭೂಮಿ ಚಂದ್ರುಳ್ಳನಕ ಪೆಸರಾಗಿ ಬಾಳ್ವನೆನುತ | ಸಾಗಲು ಗುರುಮುನಿ ಹರಸಿ || ೬೩ ||
ಸತ್ಕರಿ[ಸೆ] ಮುನಿವರ [ನ] ಚಿತ್ತೈಸಲವರತ್ತ | ಮತ್ತೆ ಸುಖದೊಳು ರಾಯನಿರಲು |
ಪುತ್ರ ಜಟ್ಟಂಗಿನೃಪೋತ್ತಮ ಕೇಳೆ ಪಿತನ | ಅತ್ತ ಜನ್ಮಾಂತರ ಕಥೆಯ || ೬೪ ||
ಅರಸು ಕೇಳೈ ನಿಮ್ಮ ಜನಕನ ಕಾಲಿಂದ | ಬರುವನು ನಾರದಮುನಿಯು |
ಪರಿಚಿತ್ತವಾಗದೆ ಒರೆದು ಕೇಳಲು ಜನರು | ಮಧುರುಚಿಯಾಗಿ ತೋರುವುದು || ೬೫ ||
ಈರೇಳು ಭುವನದ ಬೇರು ಬಲ್ಲ ತಾನು | ನಾರದಮುನಿ ಬರುವ ಕೇಳೊ |
ಪರ್ವಜನ್ಮದೊಳಿರ್ದ ಪಿತನ ಪ್ರಸಂಗವ | ತೋರಲ್ಕೆ ಬರುವನೆಲ್ಲರಿಗೆ || ೬೬ ||
ಚಾಡಿಗ ಮುನಿಯೆಂದು ಆಡಿಕೊಂಬರು ಲೋಕ | ಕೇಡನು ಬಲ್ಲ ಮುಂದಾಗೋ |
ಆಡದಿದ್ದರೆ ಮುನಿಗೆ ರೋಗ ಎಂಬುದರಿಂದ | ಸಾಗಿದ ರಜತಾದ್ರಿ ಬಿಟ್ಟು || ೬೭ ||
ರಾಯ ರಾಮನ ಜನನ ಕಾಲ ಗತಿಗಳೆಲ್ಲ | ಹೇಳಲ್ಕೆ ತಮ್ಮ ಮುನಿಜನಕೆ |
ಸುರಲೋಕ ಹರಲೋಕ ಕಳೆದಾಗ ಹೊಸಮಲೆಯ | ಗಿರಿಯ ಸಮೀಪಕೆ ಬರಲು || ೬೮ ||
ಹೊಸಮಲೆ ಗಿರಿಯ ಈಶಾನ್ಯ ದಿಕ್ಕಿಲಿ ಒಂದು | ಬಸವನ ಕಲ್ಲೆಂಬ ಗಿರಿಯು |
ಅಸಮಾನವಾದಂಥ ಗವಿಯ ಸ್ಥಾನದಿ ಇರುವ | ಋಷಿಗಳ ಪೇಳಲೆನ್ನಳವೆ || ೬೯ ||
ಧರಣಿಗೆ ಶಿರವಿಟ್ಟು ಚರಣಗಳ ಮೇಲ್ಮಾಡಿ | ತವೆ ಮಿಸುಕದೆ ನೇತ್ರಗಳ |
ಮರಿಮಾಡಿ ಗೀಜಗ ರೋಮರೋಮಾದಿ ಉರಗ | ಜಡೆಯು ಕರ್ಣದಲಿ ಸೇರಿಹವು || ೭೦ ||
ಬತ್ತಿದ ಕೈಕಾಲು ಹತ್ತಿದ ಬೆನ್ನೊಡಲು | ಬಿಟ್ಟ ಕೆಂಜೆಡೆಯು ಬೇರಿಳಿದು |
ಹತ್ತು ಹನ್ನೆರಡೊರುಷ ತುತ್ತಾಹಾರವ ತೊರೆದ | ದೃಷ್ಟ ಋಷಿಗಳನೇನೆಂಬೆ || ೭೧ ||
ಅಷ್ಟಮದಗಳನೆಲ್ಲ ಸುಟ್ಟು ಬೂದಿಯ ಮಾಡಿ | ಅಟ್ಟುರುಹಿ ಕಾಮನೆಗಳನು |
ನೆಟ್ಟು ಕೂರಲಗನು ಕುಳಿತು ಮಾಡುವ ತಪಸ | ಶೇಷಗಳವೆ ಶಿವ ಬಲ್ಲ || ೭೨ ||
ಕಾದ ಕಲ್ಲಿನ ಮೇಲೆ ಪಾದ ಜೋಡಿಸಿ ನಿಂತು | ಮೇಲೆ ಖಗರಾಜ ಜಡೆಯೊಳಗೆ |
ಗೂಡಿಟ್ಟು ಮರಿಮಾಡಿ [ಇರ್ಪ] ಮುನಿಗಳನೆಲ್ಲ | ನೋಡುತಲಿ ನಾರದ ಬರಲು || ೭೩ ||
ಅನ್ನಾಹರಂಗಳ ಮುನ್ನ ಎಲ್ಲವ ತೊರೆದು | ಪನ್ನಂಗಧರನ ಧ್ಯಾನದಲಿ |
ಮುನ್ನೂರು ಮುನಿಗಳು ಇರುವರಾ ಗಿರಿಯೊಳು | ಇನ್ನು ನೋಡಲ್ಕೆ ಹರಗಳವೆ || ೭೪ ||
ಅಂತವರು ಮಾಡುವನಂತ ತಪಸನು ನೋಡಿ | ಸಂತಸದೊಳು ನಗುತ ನಾರದನು |
ಜಂತ್ರ ನಾಟಕ ಬಲ್ಲ ಯೋಗದ ಬಲವನು | ಮುಂಚೆಮಗೆ ಸಾಧನವಹುದೆ || ೭೫ ||
ಹರಿಹರ ಬ್ರಹ್ಮಂಗೆ ಅಳವಡದು ಈ ತಪಸ | ಗುರುವೆ ತಾ ಬಲ್ಲ ಪ್ರಭುರಾಯ |
ಶಿರಮಂಡೆಯೊಲೆಯುತಲಿ ಪರಮ ನಾರದಮುನಿಯು | ಇಳಿಯಲು ಅವರ ಸನ್ನಿಧಿಗೆ || ೭೬ ||
ಕಂಡರು ನಾರದರು ಬಂದ ಕಾರಣವೇನು | ಕೊಂಡಿಗ ಮುನಿಯಂತು ಅಹುದು |
ಕಂದ [ರು] ನಮಗಿನ್ನು [ಹೇ]ಳೆಂಬ ಕಾಲ್ಗತಿಯ | [ಅಂ]ದಾರೆ ಮುನಿಗಳಾದವರು || ೭೭ ||
ಸುಮ್ಮನೆ ಬರನೀತ ಸುಳುಹುಗಾಣದೆ [ನಾವು] | ಬಿಮ್ಮನಾಡಲಿ ಬೇಡ ಕೇಳುವೆ [ವು] |
ಬ್ರಹ್ಮಾಂಡ ಗೋಚರದ ತೆರದೆ ಭೇದದ ಬಲ್ಲ | ಮನ್ನಣೆಯ ಮಾಡಿ [ಹೇ]ಳುವನು || ೭೮ ||
ಬಂದಿರೆ ನಾರದಮುನಿ ಮಹಿಮನೆ ಕ್ಷೇಮ | ಚೆಂದವೆ ಪರಿಣಾಮ [ಸಿದ್ಧತೆಯು] |
ಬಂದು ದೇವರ ದೃಷ್ಟಿ ಬಡ ಮುನಿಗಳ ನೋಡಲು | ಶರಣೆಂಬುತಲಿವರ ಕರವಿಡಿದು || ೭೯ ||
ಹರಹರ ಫಾಲಾಕ್ಷ ಇಳಿದುದೇ ಸರಿ | ಧರೆ ನಮಗೀ ಚೋದ್ಯವಹುದು |
ಮುನಿಗಳೆಲ್ಲರು ಘನಮುನಿಯ ಕೇಳಲು ಪೇಳ್ವೆ | ವಿಯನದಿ ಕೇಳಿ ಋಷಿಗಳಿರಾ || ೮೦ ||
ಸಂತಾನಗಳು ತೊಲಗುವ ವೇಳೆ ಒದಗಿತು ನಿಮಗೆ | ಯೋಗ ಬಂದಿತ್ತು ಎಡೆ ವಿದ್ಯೆ |
ಕಾಳಗ ಹಣ್ಣುವುದು ಜೀವನವಳಿದು ರಣ | ಭೂಮಿಯಾಗುವುದು ಈ ಬಳಿಯ || ೮೧ ||
ಪೇಳಬಹುದೆ ಮುನಿಯು ಯಾರಯ್ಯ ಹತಮಾಳ್ಪ | ಭೀಮನೋ ದೇವೇಂದ್ರಸುತನೊ |
ಮೂರು ಯುಗದೊಳಗವರ ಕಾರ್ಯಗಳು ಸಾಗಿದವು | ಯಾರಯ್ಯ ಕಲಿಯೊಳು ಜಗಳ || ೮೨ ||
ಮುನಿರಾಯ ನಿಮ್ಮಾತು ಪರಿಹಾಸ್ಯವಾಗಿದೆ | ಅಳಿದವರು ಮರಳಿ ಜನಿಸುವರೆ |
ಬಳಿಯೆಲ್ಲ ಮನುಜರು ನೆಗಳಲು ತಿಳಿಯದು | ನಿಜವಾಗಿ ಪೇಳಿ ನಮ್ಮೊಡನೆ || ೮೩ ||
ಮುಂದಾಗೊ ಸ್ಥಿತಿ ಪೇಳ್ವೆ ಚೆಂಡೇಂದ್ರನೆಂಬರು ಲೋಕ | ನಂಬೀಗ ಕೇಳಿ ಪೇಳುವೆನು |
ಹಿಂದಾದ ಕಾರ್ಯಗಳು ಹವಣಿಲ್ಲ ಶ್ರೋಣಿತ | ಅಂಬುಧಿಯಾಗಿ ಹರಿವುದು || ೮೪ ||
ಕುಮ್ಮಟದೊಳು ರಾಮ ಮುನ್ನ ಜನಿಸಿದ ಭೇದ | ನಿಮ್ಮ ಆತ್ಮದಲಿ ತಿಳಿದಿಲ್ಲವೆ |
ಚಿನ್ಮಯ ಹರರೊಳು ಪಡಕೊಂಡು ವರಶಕ್ತಿ | ನಿರ್ವಾಣದಿ ಬಂದಿಲ್ಲಿ || ೮೫ ||
ಗೆಲ್ಲುವ ಸಾಹಸತೆ ಪಡಕೊಂಡು ಹರನೊಳು | ಇಲ್ಲೀಗ ಜನಿಸಿದ ಕೇಳು |
ಮುನ್ನವನ ಮೂಲಗಳ ನೆವ ಬೇರೆ ಮುನಿಗಣವೆ | ಸೊಮ್ಮಿನ ಪುರುಷನು ಕೇಳಿ || ೮೬ ||
ವೈರಿಗಳಿಲ್ಲದೆ ಜಗಳಕ್ಕೆ ಯಾರಯ್ಯ | ಟೌಳಿಯಾಗಿದೆ ನಿಮ್ಮಾತು |
ತಿಳಿಕೊಳ್ಳಿ ತಲೆಯೊಳು ಸುರಿತಾಳನೆಂಬಾತ | [ಹಗೆ ಕದನ] ಗೈವ ಇವನೊಳಗೆ || ೮೭ ||
ಡಿಳ್ಳಿಯ ಸುರಿತಾಳ ಜಗಕೆಲ್ಲ ಬಲಗಾರ | ಹುಲ್ಲು ರಾಮನಿಗೆ ಮಣಿವವನೆ |
ಚೆಲ್ವ ನಾರದ ಮುನಿಯೆ ಎಲ್ಲ ಭೇದವ ಬಲ್ಲೆ | ಎಲ್ಲಿಯದು ರಾಮನಿಗೆ ಶಕ್ತಿ || ೮೮ ||
ಶೂಲಧರನ ತಪ ಸಕಲ [ರಮ್ಯ]ದಿ ಮಾಡಿ | ಬೇಡಿಕೊಂಡಳಿದ ಕಂಪಿಲನು |
ಬಾಲನ ಕರದೊಳು ಪೂರ್ವ ಹಗೆಯನು ಕಳೆದು | ಪೋಗಲ್ಕೆ ಬಂದ ಛಲ ಪದವು || ೮೯ ||
ಹರ ಮೆಚ್ಚಿ ಕೊಡುವುದಕೆ ಸೆರೆಮನೆಯ ಕೈಲಾಸ | ಬಲವಂತ ತಪಸೇನು ಮಾಡ |
ಶರಿರವ ಕೊರೆದಿತ್ತ ಚಿಲ್ಲಾಳ ಚೆಂಗಳೆ ಮಗನೇ | ದೃಢವೇನು ಪೂರ್ವಜನ್ಮದಲಿ || ೯೦ ||
ನೂರಾರು ಕಾಲದಿಂ ಮಾಡುತಿರ್ಪೆವು ತಪಸ | ಕಾಣನು ಹರನು ಸ್ವಪ್ನದಲಿ |
ಹಾಗಲ್ಲ ಋಷಿಗಳಿರ ಭೈರವನ ಮೂಲಾಗ್ರ | ಕೇಳ್ವೆನೆಂದರೆ ಬಿಚ್ಚಿ ಒರೆವೆ || ೯೧ ||
ಪೂರ್ವದ ನೆಲೆಗಳ ಬೇರಿಂದ ಕೊನೆತನಕ | ಒರೆವೆನು ಅವರ ಸಾಹಸವ || ೯೨ ||
ಕೇಳಿ ಬಲ್ಲಿರಾ ಹಿಂದೆ ಋಷಿಮೂಲದೊಳ್ ಜಮದಗ್ನಿ | ರೇಣುಕೆ ಸತಿಯೆಂಬ ನುಡಿಯ |
ಋಷಿಮೂಲದೊಳಗೆಲ್ಲ ಪೆಸರೊಡೆದು ಜಮದಗ್ನಿ | ಸತಿ ಮಾಡಿದಂಥ ಕಥೆ ಕರ್ಮ || ೯೩ ||
ಹತಮಾಡಿ ಸತಿಯಳನು ಸುಟ್ಟು ಬೂದಿಯ ಬಿಟ್ಟು | ಸಿತಕಂಠನೆಡೆಗೆ ಪೋಗುವನು |
ರೇಣುಕೆಯ ಬಸಿರೊಳು ಕುಮಾರನೊರ್ವನು ಇರನೆ | ಭೂಮಿ ಸಾಹಸ ಪರಶುರಾಮ || ೯೪ ||
ತ್ರಾಣಗಾರನು ಕೇಳಿ ಧನುರ್ವೇದ ಶಾಸ್ತ್ರದೊಳಗೆ | ಏಳು ಸಾಗರವನೊತ್ತಿದನು |
ಹಡೆದ ಜನನಿಯ [ಹತ್ಯೆ] ಸುಡುವ ಕರ್ಮವ ಕಂಡು | ಪಡೆದ ಮುನಿವರಗೆ ಪೇಳಿದನು || ೯೫ ||
ಬಿಡಬೇಕು ಎನಲಾಗಿ ಈ ಸುಡುವ ಸ್ತ್ರೀಹತ್ಯೆಗಳ | ಕೊಡುವೆ ಪಾದಕೆ ತಾಯಿ ಶಿರವ |
ಬೇಡವೊ ತನುಜವಳು ನಾಡಾಡಿ ಸತಿಯಲ್ಲ | ಬೇ [ಡ]ವಳು ಕಥೆಯ ಹೆಣ್ಣಲ್ಲ || ೯೬ ||
ರೂಢಿಗೀಶನು ಸಕಲ ಪಾಪವ ಕಳೆದು ಸ್ತ್ರೀ ಮಾಡೆ | ಕೂಡಿದ ಪತಿ[ಗೆ] ಕೊಟ್ಟ [ಳು]ಶಾಪ |
ಪುತ್ರರಾಮ [ನ] ಹರ [ಣ]ಶಕ್ತಿಯಾದಳು ಈಕೆ | ಮುಕ್ಕಣ್ಣಗಳವಲ್ಲ ಇವಳು || ೯೭ ||
ಸುಟ್ಟರೆ ಪಡಕೊಂಬ ಶಕ್ತಿ ಎಮ್ಮೊಳಗುಂಟು | ಬಿಟ್ಟುಕೊ ತನುಜನ ಮಾತ |
ತಂದೆ ಮುನಿವರೆ ನಿಮಗೆ ಅಂಜಿ ಬಿನ್ನಹ ಮಾಳ್ಪೆ | ಇಂದೊಮ್ಮೆ ದಯಕರಿಸಿ ಪೋಗಿ || ೯೮ ||
ಕಂಡರೆ ಕಳತ್ರೆಯ ಮುಂದಾಗಿ ನಿಮಗಿಂದ | ಚಂಡಿಕೆಯ ಹೊಡೆದು ಹಾಕುವೆನು |
ಸತಿಯೊಳಗಳಿಯೆಂಬ ಲಿಖಿತ ಪಣೆಯೊಳಗಿರಲು | ಸಿತಕಂಠಗೊಮ್ಮೆ ತಪ್ಪುವುದೆ || ೯೯ ||
ಸತಿಯಳ ರೋದನಕೆ ಚತುರ್ಮುಖನ ಶಿರಹರಿದು | ಕ್ಷಿತಿಯೊಳು ತಿರಿದುಣ್ಣನೆ ಹರನು |
ಹತಕಾಲ ಬರುವಾಗ ಹರಿಗಿನ್ನು ಮೊರೆವೆಗಳು | ಲಿಳಿತವು ಬರೆದಂತೆ ವಿಧಿಯ || ೧೦೦ ||
ಗುಪಿತವನು ತಿಳಿಯದೆ ಮೊರಸಾವತೆಗೆ ಹೊರೆಯು | ಹತವಾಗಲಿಲ್ಲವೆ ದ್ವಾರಕಿಯು |
ಸರ್ವ ಜೀವನರಾಶಿ ನಿರ್ಮಾಣ ಮಾಳ್ವಾತಂಗೆ | ತಿಳಿಯಲಿಲ್ಲವೆ ತಲೆಯು ಪೋಪುದು || ೧೦೧ ||
ಉಳಿದವರ ಮಾತೇನು ಸುತನ ವಚನವ ಬಿಟ್ಟು | ನಡೆಯಲು ಋಷಿಯು ಹರನೆಡೆಗೆ |
ಹಲಕಾಲ ಹೀಗೆ ನಡೆದು ಬರಲು ಮಗನೆ | ಒದಗಿತು ಕಡೆಗಾಲ ಮನೆಗೆ || ೧೦೨ ||
ಧರಣಿಪಾಲಕನೆಂಬ ಕಾರ್ತಿಕ ವೀರನು | ಬರಲಾಗ ವನಕೆ ಬೇಟೆಯನು |
ಲಕ್ಷೋಪ ಬಲದೊಳಗೆ ಹೊಕ್ಕನಾ ವನಸ್ಥಲವ | ಪಕ್ಷಿ ಖಗಮೃಗ ನೋಡುತಲಿ || ೧೦೩ ||
ತಕ್ಷ [ಣ]ದೊಳು ತಮ್ಮ ವೈರವರ್ಗಬಿಟ್ಟು | ಹೊಕ್ಕು ತೆಕ್ಕೆಯಲ್ಲಿ ಕೂಗಾಡಿ |
ಹುಲ್ಲೆ ಹುಲಿಗಳು ಕ [ರ]ಡಿ ಜಲ್ಲ ಮೃಗ ಸಾರಂಗ | ಎಲ್ಲ ಒಂದಾಗಿ ಚರಿಸುತಲಿ || ೧೦೪ ||
ಚೆಲ್ಲಾಡಿ ಮೇಯಲು ಕರಿ ಸಿಂಹ ಭೇರುಂಡ | ಅಲ್ಲಿ ನೃಪ ಕಂಡು ಬೆರಗಾದ |
ಗಿಡುಗ ಗೀಜುಗ ಲನಡು ಗರುಡ ಲ್ಯಾವಿಗೆ ಒಂದು | ಒಡನಾಡಿ ಹಾಸ್ಯ ಲಾಸ್ಯದಲಿ || ೧೦೫ ||
ಅಗಜೆಯ ರಮಣಗಿಮ್ಮಿಗಿಲಾದ ಮುನಿಯಾಗೆ | ಜಗದೊಳಗಿದು ಪುಣ್ಯಸ್ಥಳವು |
ಗಿರಿಜೆಯ ರಮಣಗೆ ಮಿಗಿಲಾದ ಋಷಿಯಿರದೆ | ಬಿಸಲರಿಯರು ತಮ್ಮ ವೈರಿಗಳ || ೧೦೬ ||
ಅಡಿಗಳನು ಕಂಡಡೆ ಜಗದೀಶ ದೊರೆತಂತೆ | ನಡೆಯಲು ನೃಪನು ಉಲ್ಲಸದಿ |
ಪರಮಯೋಗೀಂದ್ರನ ಪರ್ಣಶಾಲೆಯ ಕಂಡು | ಎರಗಲು ನೃಪನು ಮುನಿವರಗೆ || ೧೦೭ ||
ಕರಗಳನು ವಂದಿಸಲು ಚತುರಂಗ ಬಲವೆಲ್ಲ | ಪರಸಲಾ ಮುನಿ ಎಲ್ಲರನು |
ಮಣಿದಿರ್ದ ನೃಪವರನ ಮಂಡೆಯನು ಪಿಡಿದೆತ್ತಿ | ಸ್ಥಿರರಾಜ್ಯ ಪದವನಾಳೆಂದು || ೧೦೮ ||
ಹರಿನಯನ ಪೂಜಿತ ನರದೃಷ್ಟಿ ನಿಮಗಾಗಿ | ದೊರೆ ರಾಯ ಏಳು ಏಳೆನಲು |
ಏನು ಕಾರಣ ನೃಪನೆ ಧ್ಯಾನ ಹರಿದಿತ್ತು ಬಡ | ಜೀವಿ ಮುನಿಗಳನು ನೋಡಲ್ಕೆ || ೧೦೯ ||
ಕಾಡಾಶ್ರಯ ಮಾಳ್ಪರಲ್ಲೇನುಂಟು ಸುಖಸಾರ | ಬಾಳ್ವೆನು ವನಚರ ತೆರದಿ |
ಮನೆಯಿಲ್ಲ ಮಠವಿಲ್ಲ ಉಣಲಿಕ್ಕೆ ರಾಜೇಂದ್ರ | ಕೊನೆಯೊಳಗಿನ ಕದದಂತೆ || ೧೧೦ ||
ಹನಿಮಳೆ ಚಳಿಯೊಳು ತನುಮ ದಂಡಿಸುವರು | ಮುನಿಗಳ ಸುಖ ಸುಡಲಿ ಭೂಪ |
ಉರಗನ ಧರಿಸಿದ ಪರಶಿವನ ಕಂಡಂತೆ | ವರಸಿದ್ಧಿಯಾದುದು ಕಾಯ || ೧೧೧ ||
ಪರಮ ಕೈಲಾಸಗಳು ನಿಮ್ಮೊಳಗೆ ಇರುವುದು ಗುರುವೆ | ಹೊರಿಸುವಾ ಎನಗೆ ಭಾರಗಳ |
ದಯಮಾಡಿ ಅಪ್ಪಣೆಯ ಪುರಕೆ ಪೋಗುವೆ ಗುರುವೆ | ಎರಗಲು ನೃಪನು ಮುನಿವರಗೆ || ೧೧೨ ||
ರವಿಕುಲೋತ್ತಮ ಕೇಳು ಬಳಲಿ ಬಂದಿರಿ ತೃಷೆಯ | ಕಳೆದು ಪೋಗರಸ ಕ್ಷಣ ನಿಂತು |
ಮುನಿಯಾಶ್ರಮನ ಪೊಕ್ಕು ಬಳಲಿ ಬಂದೆನು ಎಂಬ | ಜನ ನಿಂದೆ ಎಮಗೆ ಹೊರಿಸದೆ || ೧೧೩ ||
ನಿಲ್ಲಬಹುದು ನಿಮಿಷದಿ ಬಲ ಸಹಿತರೆ ಬಳಿಗೆ | ಸವಿದು ಪೋಗುವ ಘನ [ತೆ] ನಮಗೆ |
ಬಲವೆಲ್ಲ ಉಣಲೆಂಬ ನುಡಿಯ ಕೇಳುತ ರಾಯ | ತಲೆದೂಗಿ ಗಹಗಹಿಸಿ ನಗಲು || ೧೧೪ ||
ಮನೆಯಿಲ್ಲ ಮಠವಿಲ್ಲ ಮಾಡಲ್ಕೆ ಪರರಿಲ್ಲ | ನಗೆಗೇಡಾಗಿದೆ ಋಷಿಯ ಮಾತು |
ಲಕ್ಷಾಂತ್ರ ಬಲಕನ್ನವಿಕ್ಕಬೇಕಾದರೆ | ಎಷ್ಟಾಗಬೇಕು ಸೌರಣೆಯು || ೧೧೫ ||
ನಿಂತು ನೋಳ್ಪೆನು ನಿಮಿಷ ಮುನಿ ತ್ರಾಣವನೆಂದು | ಕುಳಿತನು ರಾಯ ವನದೊಳಗೆ |
ಲಕ್ಷಾಂತ್ರ ಬಲ ನೀವು ಪಂಕ್ತಿ ಸಾಲಲಿ ಕುಳಿತು | ವಟಪತ್ರದೆಲೆಯ ಹಾಸೆನಲು || ೧೧೬ ||
ಭವರೋಗ ಅಭ[ಯ] ಕುಳಿತು ಕೃಪೆಯನೆ ಮಾಡೆ | ಧರಣಿಗಿಳಿಯೆ ಕಾಮಧೇನು |
ಆರಾರ ಮನದೊಳು ಉಂಟಾದ ಭ್ರಮೆಯಿರಲು | ಪಾಯಸ ಪರಮಾನ್ನ ಭಕ್ಷ || ೧೧೭ ||
ಗಾರಿಗೆ ಕಜ್ಜಾಯ ಕಡಬು ಪರಡಿಗೆಯಿಂದ | ಕಾರನ್ನ ಕಲ್ಪರುಚಿಯಿಂದ |
ದಣಿಯಲು ಬಲವೆಲ್ಲ ಸವಿದು ಡರ್ರನೆ ತೇಗೆ | ಪೊಗಳುತ ಮುನಿಯ ಕೊಂಡಾಡೆ || ೧೧೮ ||
ಧರೆಗಧಿಕ ಕಲ್ಯಾಣಪುರದೊಳು ಬಸವೇಂದ್ರ | ಉಣಿಸಿದಂತಾಯ್ತು ಜಂಗಮಕೆ |
ಸಾರುವ ಶ್ರುತಿವಾಕ್ಯ ಕೇಳಿ ಬಲ್ಲೆವು ನಾವು | ನಾವಂತು ಕಂಡುದುದಿಲ್ಲ || ೧೧೯ ||
ನೋಡಿದೆವು ನಯನದಿ ಅದಕಿದು ಮಿಗಿಲೆಂದು | ಕೂಡೆ ಕೊಂಡಾಡೆ ಬಲವೆಲ್ಲ || ೧೨೦ ||
[1] + ರಾಮ ಬಲ್ಲಾಳನ ಮೇಲೆ ದಂಡ ನಡೆದ ಸಂಧಿ. ಹಂಪೆ ವಿರೂಪಾಕ್ಷಲಿಂಗಾಯೆ ನಮಃ (ಮೂ)
Leave A Comment