[1]ಡಿಳ್ಳಿಯೊಳಗೆ ಒಬ್ಬ ದಿಟ್ಟ ಬಾದುರಖಾನ | ಎಲ್ಲ ವಜೀರರೊಳು ಬಲ್ಲಿದನು |
[ಬಲಬದಿಯ] ಕಿವಿ ಪಾಚ್ಛಾ ಕೊಟ್ಟು ಮತ್ತಲ್ಲಿ | ಸುಖದೊಳಗಾಳುತಿರಲು              || ೧ ||

ಮುಂದೆ ಕೇಳವನಿಗೆ ಬಂದಂಥ ವಿಧಿವಾಸ ಅವನ | ತಂದರು [ಚಾಡಿಗರು] ತವೆ ತಲೆಗೆ |
ಬಂದ ಕಂಟಕವದು ಭಯವಾಗಿ ರಾಮನ | ಕಂಡು ಬದುಕುವ ಕಾಲ್ಗತಿಯ             || ೨ ||

ಬಲ್ಲಾಳರಾ[ಯನ] ಭಂಗ ಬಾದೂರ ಕೇಳಿ | [ತಲೆ] ತೂಗುತ ತನ್ನಲ್ಲಿರುವ |
ಡಿಳ್ಳಿ [ಗೂ] ಹೆಸರಾದ ಬಲ್ಲಾಳನ ಗೆಲಿದವಗೆ | ಪಾಚ್ಛಾಯ ಗಣನೆಯೇ ಅವಗೆ         || ೩ ||

ಹರಗೊಮ್ಮೆ ಅಳವಲ್ಲ ನರರ ಮಾತುಗಳಿರಲಿ | ಮುರಿವನು ಎದೆ ಗರ್ವ ರಾಮ |
ನರನಲ್ಲ ಈ ತರಳ ಮರೆಮಾಡಿ [ಮಾದೇವ] | ಕಳುಹಿದ ಭೀಮನ ಧರೆಗೆ             || ೪ ||

ಹಿಂದಕ್ಕೆ ಆ ಪುರಕೆ [ನೇ]ಮಿಯೆಂಬವ ಪೋಗಿ | ಬಂದ ಕಷ್ಟವನು ಶಿವ ಬಲ್ಲ |
ಎರಡು ಲಕ್ಷದ [ಮೇಲೆ] ಬಲವುಂಟು ಲೆಂಕೆಗೆ | ಮಿಗಿಲೆಂದು ಪೇಳ್ವರಾ ಪುರವ        || ೫ ||

ಅಲ್ಲಾ [ತಂ]ದನು ಆ ಬಲನ ಶಕ್ತಿಯ | [ಮೂಲ] ಬಲ್ಲಾ ಮಹಿಮನ ಪದವ |
ಜನ್ಮವಿರಲು ಪೋಗಿ ಅವನಲ್ಲಿ ಬಾಳುವೆನೆಂದು | ತೂಗಿದನು ಮನದೊಳ್ ಶಿರವ    || ೬ ||

ಅಚ್ಚನು ಅಹುದೆಂದು ಮೆಚ್ಚಿ ಬಾದುರಖಾನ | ಕಟ್ಟಿದ ಉಡುಗೊರೆ ಉಲುಪೆ |
ಕೊಟ್ಟು ಕಳುಹಲು [ಒಡನೆ] ಮಿ [ಕ್ಕ] ವಜೀ [ರ]ರು | ತೊಟ್ಟರು ಮನದೊಳು ವಿಷವ  || ೭ ||

ಎಲ್ಲ ಖಾನರು ಕುಳಿತು ಏಕಾಂತದೊಳು ಗ್ರಹಿಸಿ | ಕೊಲ್ಲುವರೆ ಇದು ಸಮಯ ಇವನ |
ಡಿಳ್ಳಿಯ ಸುರಿತಾಳನ ಗಂಡನೆನಿಸಿಕೊಂಬ | ಪುಂಡ ರಾಮನ ಜಗಳಕೆ ಮೆಚ್ಚೆ         || ೮ ||

ರಾಮನ ಎದೆ ಕೆಚ್ಚ ತೆಗೆಯಲ್ಕೆ ಸುರಿತಾಳ | ಸಾಧಿಸುವ ಸರ್ಪನ ತೆರದಿ |
ಎಗ್ಗುವಡೆಯದೆ ಪರ [ವೈರಿ] ಮೂಳಗೆ | ಇವ ಸಾಗಿಸಬಹುದೆ ಉಡುಗೊರೆಯ       || ೯ ||

ಹಗೆಯವನ ಕೊಲಲಿಕ್ಕೆ ಇದು ಒಳ್ಳೆ ಸಮಯವು | ಮದಗಜವು ಇರುಬ ಬಿದ್ದಂತೆ |
ಬೆಳೆಯಗೊಡನೆಮ್ಮ [ಪಾಗುಡದ] ಈ ಸುಳುಹ | ಒರೆಯಲು ಪಾಚ್ಛನ ಬಳಿಗೆ         || ೧೦ ||

ಒಂದಕ್ಕೆ ನೂರಾರು ಕುಲಸಂಖ್ಯೆ ಗೇಣೆಂಬ | ಮೊಳದುದ್ದ ಕಾಗದವನ್ನು |
ತಂದರು ಜೋಡೆಯರು ತವಕದಿ ರಾಯನ ಬಳಿಗೆ | ಮುಂದಿಟ್ಟು ಕರಗಳ ಮುಗಿದು   || ೧೧ ||

ನೋಡಿದ ಕಾಗದವ ರಾಯನು ಮನದೊಳು | ರೂಢಿಸಿ ಕಾಲಾಗ್ನಿ ಕಿಚ್ಚು |
ಸೂರ್ಯನ ಮಗ ಯಮರಾಜನಾಗ್ರತೆಯೊಲು | ಬೇಗ ನೇಮಿಯ ಕರೆಯೆಂದ        || ೧೨ ||

ಎಡಹುತ್ತ ಮುಗ್ಗುತ್ತ ಚರರು ಕೊಡಲು ನೇಮಿಗೆ ಸುದ್ದಿ | ಪರಿದೋಡಿ ಬಂದ ಕರ ಮುಗಿದು |
ಇದ ಓದು ಎಲೆ ಮಂತ್ರಿ ಕೆಡುವ ಕಾಲಕೆ ಜನರು | ವಿಚಿತ್ರದ ಕೇಡನು ಬೆಳಸಿ          || ೧೩ ||

ಓದಿಕೊಳ್ಳುತ ಮಂತ್ರಿ ಮೂಗಿನೊಳ್ ಬೆರಳಿಟ್ಟು | ಹೋದಳು ಜಯಲಕ್ಷ್ಮಿ ಬಾದುರನೆಂಬಂತೆ |
ಆಡಲಂಜುವೆ ಭೂಪ ಬದಲಾಗಿ ಉತ್ತರವ | ಪಾದಕ್ಕೆ ತಿಳಿದಂತೆ ಮಾಡುವುದು       || ೧೪ ||

ನೀ ಪೇಳು ಎಲೆ ಮಂತ್ರಿ ಜಾಣ್ವಿಕೆಯ ನಡೆಸುವೆ | ಭೂಮಿ ರಾಯರ ಗಂಡನೆಂಬ |
ಹಾಳಾಗಿ ಹೋಗಲಿ ಎನಗೆ ಮಿಂಡನು ಎಂಬ | ಮೂಳಗುಡುಗೊರೆ ಕೊಡಬಹುದೇ    || ೧೫ ||

ಎಲ್ಲ ಖಾನರಿಗಿಂತ ಬಲ್ಲಿದನೆಂದು ಮಾಡಿದ್ದೆ | ಎಲ್ಲವನು ನೀನರಿವೆ ಮಂತ್ರಿ |
ಖುಲ್ಲ ಕರ್ಮಿಯ ಮುಖವ ಇನ್ನು ನೊಡುವನಲ್ಲ | ಕೊಲ್ಲು ರಾಮನೆಡೆಯೊಳಿವನ      || ೧೬ ||

ಗುತ್ತಿ ಸೀಮೆಯ ಬಳಿಯ ತೊತ್ತಿನ ಮಗ ಬಂದು | ಬಿಟ್ಟಿರುವನಂತೆ ಆ ಖೂಳ |
ಮತ್ತಿವನ ಪಿಡಿದೆಯ್ದೆ [ಒನಕೆಯಿಂದಲಿ] ತಲೆಯ | ಕುಟ್ಟಿ ಕಳುಹಯ್ಯ ನಮ್ಮೆಡೆಗೆ      || ೧೭ ||

ಅಭಯ ಅಪ್ಪಣೆಗೊಂಡು ಚದುರ ಮಂತ್ರಿಯು ಬೇಗ | ಎರಗಿ ಕೇಳಿದ ಮೂರು ಅಭಯ |
ಬದಲು ಮಾತುಗಳೇಕೆ ನಡೆಯೆನಲು ತರಿಸಿದ | ಮೂವತ್ತು ಸಾವಿರ ಕುದುರೆ         || ೧೮ ||

ಅಸುರ ಬಾದೂರ ಪಿಡಿದು ದೆಸೆಗೆ ಹಾರುವ ತೇಜಿ | [ಪಹರೆಯೊ]ಳಗೆಯ್ತರಲು |
……………………………………… | ಬಿಸಿಗಲ್ಲು ಬೆಳಸದೆಡೆಗೆ                         || ೧೯ ||

ಅತಿ ಜಾಗ್ರದೊಳು ಬರಲು ಆರೆಂಟು ದಿವಸಕ್ಕೆ | ಕದನ ಸಾಗರ ನಿಧಿಯೊಡನೆ |
ಅತಿ ಬೇಗ ದಾಂಟುವ ಸಮಯದೊಳಗೆ [ಪಹರೆ] | ಎತ್ತಿ ಸರದೊಳಗೆ ಬರುತಿರಲು   || ೨೦ ||

ಶರಧಿ ದಾಂಟುತ [ಪಹರೆ] ಶಬುದವಾಗ [ಲಾಕ್ಷಣ] | ಇದು ವೇಳೆ ತನಗೆಂದು ಗ್ರಹಿಸಿ |
[ತಡಿ]ಗೆ ದಾಂಟುತ ಮುನ್ನ ನಡೆವಾಗ ಮನಕೆ ಪಲ್ಲಿ | ನುಡಿಯಲು ಬಲದ ಭಾಗದಲಿ  || ೨೧ ||

[ಸಾವು]ದಲ್ಲವೆ ಪ್ರಾಣ ಉಳಿವುದಾತ್ಮವುಯೆಂದು | ನಿಶ್ಚೈಸಿ ಮನದೊಳು ದೃಢವ |
ಎಚ್ಚಿದ ತುರಗ ಚಬುಕ ಹನ್ನೆರಡನು | ಪಕ್ಷಿಗರುಡನಂತೆ ನಡೆಯೆ                      || ೨೨ ||

ಕೌನ ಜಾ ಅರೆಯೆಂದು ಹದಿನಾರು ಸಾವಿರ ತುರಗ | ವಿರಲು ಅವನ ಬೆನ್ನೊಡನೆ |
ಮೂರು ರಾಯರ ಗಂಡನೆಂದು ಪೊಗಳಿಸಿಕೊಂಬ | ರಾಮನಲ್ಲದೆ ಕಾಯ್ವರಿಲ್ಲ        || ೨೩ ||

ಹತ್ತಾರು ಸಾವಿರ ಬೆನ್ನಂಟಿ ಬರಲು ತುರಗ | ಸತ್ತು ಬಳಲುತ ಖಾನ ಬರಲು |
ಉಕ್ಕಡನ ಕಾಯ್ವಂಥ ಹುಲ್ಲು[ಗಾ]ರರು ಸುದ್ಧಿ | ಕೊಟ್ಟರು ರಾಮಭೂಪನಿಗೆ           || ೨೪ ||

ಓಡಿ ಬರುವನು ಒಬ್ಬ ಬೆನ್ನ [ಟ್ಟಿ] ಬರುವುದು ಪೌಜು | ಯಾವ ಹದನೊ ಕಾಣಲರಿಯೆ |
ಏರಿದಾಕ್ಷಣ ತನ್ನ ವಾಹನ ರಣರಾಮ | [ನೋಡಿದ] ಬರುತಿಪ್ಪ ಸುಳುಹ              || ೨೫ ||

ಅಂಜಬೇಡಲೊ ಕರುವೆ ಬಂದು ಸ್ಥಿತಿಯನು ಪೇಳು | ಖಂಡೆಯಕೆ ಆಹುತಿಯ ಕೊಡುವೆ |
ಹಿಂದಟ್ಟಿ ಬರುತಿರ್ಪ ಪೌಜ ನಿಲ್ಲಿಸಿದರೆ | ಬಂದ ಸ್ಥಿತಿಯನು ಪೇಳುವೆನು              || ೨೬ ||

ಭೂನಾಥ ಕಂಡುದ ಪೇ[ಳ್ವೆ] [ಕೇ]ಳಲು ನೀನು | ಎಲ್ಲವ ಉಸು[ರ್ವೆ] ಭೂಕಾಂತ    || ೨೮ ||

……….ಜೀವ ಚೇತನಗೊಂಡು ನಿಮಿಷ | ಭುವನೇಂದ್ರ ಲಾಲಿಸು ನೀನು |
ಮಾಳ್ಪ ಕಾರ್ಯಕೆ ಮೆಚ್ಚಿ ಉಡುಗೊರೆ ಕಳುಹಿದ | ಮೂಲದಿ ಬಂತು ಪ್ರಾಣಕ್ಕೆ        || ೨೯ ||

ಒಳಗು ನಿಮ್ಮೊಡನೆಂದು ಹಗೆಯವರು ಚಾಡಿಯ ಪೇಳೆ | ವಿವರಗಾಣದೆ ಸುರಿತಾಳನಿಗೆ |
ತಿಳಿಯರಿಯದ ಮೂಳ ಹೊಳವ ಕಾಣದೆ ಎನ್ನ | ಕಡಿಯೆಂದು ನೇಮಿಗಭಯ ಕೊಟ್ಟ  || ೩೦ ||

ಕೊಡಬೇಡ ವೈರಿಗೆ ಕಡಿ ನೀನು ಈ ಕ್ಷಣವೆ | ಪಡೆವೆನು ಮುಂದೆ ಕೀರ್ತಿಯನು |
ಪೊಡವಿರಾಯರ ಗಂಡನೆಂದೆಂಬ ಬಿರು[ದು] ನಿಮ್ಮ | ಒಡಲ ಸೇರಿದ ಸಲಹಬೇಕು  || ೩೧ ||

ಕಡೆಗೆ ಪೇಳುವೆ ಸ್ವಾಮಿ ಒಡಲ ದುಃಖವನೆಲ್ಲ | ಬಡ ಬಂಟನ ಮಾಡಿಕೋ ನಿಮ್ಮ |
ನುಡಿಯೊಳು ಹೊಳವಿಲ್ಲ ನಾ ನಡೆದ ಅಪರಾಧವಿದು | ಪಾವುಳಿ ಕಂಡರೆ ಹೊಡೆ ನೀನು        || ೩೨ ||

ಹೆದರ ಬೇಡವೊ ಖಾನ ಕೊಡುವೆ ಎನ್ನಯ ಪ್ರಾಣ | ನೀ ಬೆದರದೆ ನಿಲ್ಲೊ ಬೆನ್ನೊಡನೆ |
ತಿರುಹಿದ ಕಲಿರಾಮ ತುರುಗ ಅವರ ಕಡೆಗೆ | ನಡೆದಪರಾಧವೇನೆನಲು              || ೩೩ ||

ವಿವರ ಕೇಳಲು ಮರುಳೆ ದಣಿಯೇನು ನೀ ನಮಗೆ | ಕೊಡು ಬಾದುರಖಾನನ ಕಳುಹೊ |
ಕೆಡಬೇಡ ಎಲೊ ಹುಚ್ಚ ಬಡ ಕಂಪಿಲನ ಬುಡಕೆ | ಹಾಕುವೆ ಕೊಡಲಿಯ ನೀನು        || ೩೪ ||

ಕೊಡು ಕೊಡು ಎನುತಲಿ ನುಡಿಯುತ ಖಾನರು | [ಕೇ] ಳಿಸುತ ನಾಲ್ಕು ಮುಖದೊಳಗೆ |
ಬಲು ಭಂಡ ಕಾದುವಾ ಬಡವನೆ ಪಾಚ್ಛಯ | ಹಿಡಿದು ಕೀಳಿಸನೆ ನಿನ್ಹಲ್ಲ               || ೩೫ ||

ಬೆನ್ನ ಬಿದ್ದವರನು ಮುನ್ನ ಕೊಡುವರೆ ಮೂಳ | ಹಲ್ಲ ಕೀಳಿಸುವರಿಗೆ ತಾ ಗಂಡ |
ನಮ್ಮಯ್ಯ ಹರಿತಂದೊಮ್ಮೆ ಮರೆಬೀಳೆ ಗುಂಡ | ಬ್ರಹ್ಮಯ್ಯ ಕೊಟ್ಟನೆ ಗಣಪತಿಗೆ     || ೩೬ ||

ಬಡವ ಬಲ್ಲಾಳನ ಕಡಿದೆನು ಎಂದೆಂಬ | ಗರ್ವ ಬೇಡವೊ ಎಮ್ಮ ಕೂಡೆ |
ಹಿಡಿ ಮುನ್ನ ಕಡ್ಡಿಯ ಹುಡುಗ ಎನುತ ಕೈಯ | ತಡೆದೆವು ಬಿಡು ಕೆಡಬೇಡ             || ೩೭ ||

ಕೊಡುವೆನು ಕತ್ತಿಯ ಹಿಡಿಸುವೆ ನಿಮಗೆ ಗುರಿಯ | ಬಿಡಬಹುದೆ ಬೆನ್ನ ಬಿದ್ದವನ |
ಸುಡು ಸುರಿತಾಳನ ಲವುಡಯೆಂದರಿಯೆನು | ಕೆಡಬೇಡ ಕಾಲನೊಳ್ ಸೆಣಸಿ         || ೩೮ ||

ಸುರಿತಾಳ ಬಲವಾಗೆ ತಾನಿರುವ ರಾಜ್ಯಕೆ ಕರ್ತ | ನಡೆಯೊ ಮೂಳನ ಭಯವೆ ಮೇಘನಿಗೆ |
ಹಿರಿಯ ತನದೊಳು ಪೋಗಿ ಹರಣ ಉಳಿದರೆ ನಿಮ್ಮರಸು | ಸುರಿತಾಳನಿಗೆ ಪೇಳೆನಲು       || ೩೯ ||

ನಾಯ ಹಿಡಿವನ ಮಾತ ಹೋಗಿ ಹೇಳಲು ಹೆಣ್ಣು | ಬಾಲೆಗೀ ಕ[ಡೆ] ಯಾ[ದೆ]ವಲ್ಲ |
ಕೂಗಿ ಬೊಬ್ಬೆಯ ಹೊಡೆದು ಕತ್ತಿಗಳು ಥಳಥಳಿಸೆ | ಝೇರಿಸಿ ಮುತ್ತೆ ನಾಕು ಮುಖದಿ || ೪೦ ||

ಸರಳಿನ ಮಳೆಯನು ಕರೆಸುತ ತುರುಕರು | ಕವಿದು ಏರಲು ಕಾಗೆ ತೆರದಿ |
ಗರುಡನಂದದಿ ರಾಮನಿರುವ ಮೋಡಿಗೆ ಬೆದರಿ | ಮುರಿದು ಓಡಲು ಬಾಣದೆಸೆಗೆ     || ೪೧ ||

ಕೆಡಬೇಡ ಹೊಡೆವೆನು ಪಡೆದವರ ನೆನೆಕೊಳ್ಳಿ | ಮಡದಿ ಮಕ್ಕಳು ಮುಲ್ಲಾನನ್ನು |
ಕಿಡಿಗಣ್ಣ ಶರಭನ ಆರ್ಭಟದಿ ಚೆನ್ನಿಗರಾಮ | ನಡೆದನಾಹವಕೆ ಮರಿಸಿಂಹನಂತೆ      || ೪೨ ||

ಹೊಕ್ಕನು ಅತಿ ಬೇಗ ರಾಕ್ಷ ಸಿಂಹನ ತೆರದಿ | ಇಕ್ಕೆಲದೊಳು ಸವರುತಲಿ |
ಬಿಚ್ಚುತ್ತ ಕಳಲೆಯ ಉಪ್ಪಿಗೆ ಕೊರೆದಂತೆ | ಕೊಚ್ಚಿದನು ನಾಲ್ಕು ಸಾವಿರವ            || ೪೩ ||

ಹಿಂದುಳಿದ ನೇಮಿಯು ಬಂದು ಕೂಡಿದ ಬೇಗ | ಕೋಯೆಂದು ಆರ್ಭಟೆಯಲಿ ಮುತ್ತಿದನು |
ತುಂಬಿತು ಸರಳಂಬು ಸೋನೆಯ ಮಳೆಯಂತೆ | ಗಂಭೀರ ರಾಮನೆಡಬಲದಿ        || ೪೩ ||

ಕಂಡರು ಕದನ ಪ್ರಚಂಡ ರಾಯರು ಕಾಟ | ಸಂಗಯ್ಯ ಸಮರದ ಮುದ್ದ |
ಮುಂಗಡೆಯೇರಲು ಮೂವತ್ತು ಸಾವಿರದೊಳು | ಹಿಂದೆ ಕವಿಯಲು ಲಕ್ಷ ಪೌಜ       || ೪೪ ||

ಜರಿಮಲೆಯ ಮುಮ್ಮಯ್ಯ ಕನಕಗಿರಿ ನಾಯಕ | ಪೆನುಗೊಂಡೆ ರಂಗರಸು ಪೊಕ್ಕು |
ಹೊಡೆಯಲು ಹತ್ತೆಂಟು ಬೀದಿ ದಾರಿಯ ಮಾಡಿ | ಕುರಿಗಿಂತ ಕಡೆಯಾಗೆ ತಲೆಯು   || ೪೬ ||

ಲಯವಾದ ಡಿಳ್ಳಿಯ ಪೌಜ ಬಾದುರ ಕಂಡು | ಗೆಲವೇರಿ ತನ್ನ ಮನದೊಳಗೆ |
[ಕ]ಡಿದಾಡಿ ತುರಗವ ಜೀಯೆಂದು ಹೊಡೆದನು | ಸುಲಭ ಪೌಜಿನ ಮೇಲೆ ಬಿದ್ದು      || ೪೭ ||

ಮಾರು ಮಾರೆನುತಲಿ ಹೊಗಲೇರಿ ಬಾದುರಖಾನುಗ | ರೆದ್ದು ಹೊಡೆಯೆ ಖಾನರನು |
ರಾಮಗೆ ಒಳಗೆಂದು ಸುರಿತಾಳನಿಗೆ ವಾಲೆಯ ಬರೆದ | ವಜೀರನ ರಾಮುಗ ಕೊಚ್ಚಿದನು      || ೪೮ ||

ಸುತ್ತ ಗಾವುದ ದಾರಿ ಕಟ್ಟಿ ರಾಮನ ಮಂದಿ | ಬೆಟ್ಟ ಬೇಲಿಯನು ಬಿದ್ದವರ |
ಕುಟ್ಟಿ ತಲೆಗಳನರಿದು ಕೊನೆಗೆ ಕಟ್ಟಿದರೊಂದು | ಸುತ್ತ ಯೋಜನದ ಮಧ್ಯದಲಿ       || ೪೯ ||

ಹತ್ತೆಂಟ ಸಾವಿರ ತುರುಗವ ಪಾಳ್ಯಕೆ ಹೊಡೆದು | ಕತ್ತೆ ಹೊಡೆವಂತೆ ಮಡಿವಾಳ |
ಮತ್ತೆ ನೇಮಿಯು ನೋಡಿ ಮರಣಬಂದಿತು ಎಂದು | ಹೊಕ್ಕನು ಪಾಣಿಯ ಜಲವ     || ೫೦ ||

ಪಾಚ್ಛಯನ ಪೌಜೆಲ್ಲ ಹತ್ತಿತು ಯಮನೂರ | ಕತ್ತಿಯೊಳ್ ಪಾರ್ಥ ಕಲಿಭೀಮ |
ಮೃತ್ಯುನಿಗೋಸ್ಕರ ಕೀರ್ತಿ ಮಾಡಿದೆ ಭೂಪ | ಅತ್ತ ಬಾದುರಖಾನ ಕೈಮುಗಿದು      || ೫೧ ||

ತೀರಿತು ಕಾದಾಟ ನೇಮಿ ಉಳಿದನು ಭೂಪ | ಪಾಣಿ ಪೊಕ್ಕನು ಜೀವ ಭಯಕೆ |
ಸಾಧಿಸಬಹುದವನ ಸುರಿತಾಳಗೆ ಸುದ್ದಿಯ | ಹೇಳಿಕೋ ಮೂಳ ಹೋಗೆನುತ        || ೫೨ ||

ಕೇಳಿದಾಕ್ಷಣದೊಳು ರಾ[ಮ]ನಲ್ಲಿಗೆ ಬಂದ | ಪ್ರಾಣ ನಂಬಿಗೆಯನು ಕೊಟ್ಟು |
ಮೇಲವನ ಮನ್ನಿಸಿ ಕರವಿಡಿದು ಪಾಳ್ಯಕ್ಕೆ ಬಂದು | ಬೇರೊಂದು ಡೇರ್ಯವನು ಕೊಡಿಸಿ       || ೫೩ ||

ಸಮಗ್ರವನು ಕೊಟ್ಟು ಸಕಲ ಉಪಚಾರ ಮಾಡಿ | ಪಾರಾವ ಹಾಕೆ ಡೇರ್ಯಕ್ಕೆ |
ಸೂರ್ಯನು ತಾಯೊಡಲ ಸೇರಲು ತಿಮಿರವು | ಮೂಜಗನ ಮುತ್ತಿ ಮುಸುಕಿಹುದು  || ೫೪ ||

ರಾಯ ಕಂಪಿಲನಾತ್ಮಜ ತಾನೊಂದು ಗ್ರಹಿಸಲು | ನೇಮಿ ಕೊಲ್ಲಲು ಕಾರ್ಯ ಮುಗಿಯೆ |
ಯಾರೊಂದು ತನಗರಿಯಾಗಿ ಬರುವರು ಮುಂದೆ | ಕಾರ್ಯ ಸಾಧ್ಯಗಳು ತನಗುಂಟು        || ೫೫ ||

ಬರಹೇಳಿ ಕರೆಸಿದ ಹಿರಿಯ ಕಾಟಣ್ಣನ | ಬಿರಿದಾಂಕ ವೀರ ಸಂಗಯ್ಯನ |
ನೆರೆ ಜಾಣ ಮಂತ್ರಿಯ ಮಗ ನೀಲಕಂಠನ | ಕರಮುಗಿದು ಎಲ್ಲರು ನೆರೆಯೆ           || ೫೬ ||

ಲಾಲಿಸಿ ಎಲ್ಲರು ಭಾವಾಜಿ ಬಲವಂತ | ಧೀರ ಕಾಟಯ್ಯ ವರಮಂತ್ರಿ |
ನೇಮಿಯ ಬಿಡುವೆನು ನ್ಯಾಯ ಮುಂದಿವನ | ಮಾತಿಗೋಸ್ಕರ ಕಥೆ ಸಾಗಬೇಕು     || ೫೭ ||

ಬಿಡಬಹುದು ರಾಜೇಂದ್ರ ಬೇಡ ಎಂಬವರಲ್ಲ | ವೆಂಬ ಮಾತು ಕೇಳಿ ರಾಮಯ್ಯ |
ಸುಳುಹುಂಟು [ಒಂ]ದು ಮನದಿ ಲಾಲಿಸು ಅಣ್ಣ | ಇವನ ಮೂಲದಲಿ ಬಾದುರನು    || ೫೮ ||

ಬರಬೇಕು ಸತಿಸುತರು ಸದರವಾಗಿ ಎಮ್ಮ | ಹೃದಯಕ್ಕೆ ನಿಮಗೆಂತು ಕಾಣೆ |
ನಿಜವೆಂದು ಈ ಮಾತು ಚೆದುರ ಚೆನ್ನಿಗ ರಾಮ | ಅರುಹಲು ನೇಮಿಯ ಕರೆದು       || ೧೫೯ ||

ಆ[ವೊ]ತ್ತು ಅವ ಬಂದು ಪಾದಾಕ್ರಾಂತನು ಆದ | ಅವನ ರಾಣಿಯಿಂದೆನಗೇನು |
ಬೇಗದಿಂದಲಿ ಬರದು ತನಗಾದ ಸ್ಥಿತಿಯನು ಮುಂದೆ | ರಾಯ ಸುರಿತಾಳನ ಎಡೆಗೆ  || ೬೦ ||

ಬಾದುರಖಾನನ ಪ್ರಾಣಕಾಂತೆಯ ಸುತರ | ಸಾಗಿಸಲು ಎನ್ನ ಕಳುಹುವರು |
ದೇವರ ಪಾದಕ್ಕೆ ಪೋಗಿವೆಂಬುದು ತಿಳಿದರೆ ಹೇಗೆ ಕಾಯುವುದು | ಭೂಮಿಪಾಲಕರಿಗೆ ಬಿನ್ನಹ || ೬೧ ||

ನೇಮಿ ಮುಳುಗಲು ಎನ್ನ ನಾಮ ಲಿಖಿತವು ತೀರೆ | ಭೂಮಿಯೊಳಪಕೀರ್ತಿ ಪಡೆವೆ |
ನೇಮಿ ಬರಲು ನಮ್ಮ ಮಾನ ಉಳಿವುದು ಅವನ | ರಾಣಿಂದ ನಮಗೇನು ಕಳುಹೆ    || ೬೨ ||

ಬಾದುರನ ಸತಿ ಸುತರು ಏರಲು ದಂಡಿಗೆ | ನೇಮಿಗೆ ಉಡುಗೊರೆಯ ಮಾಡಿ |
ಸಾವಿರ ತುರಗವ ಸಂಗಡವಿತ್ತು ಪಾಚ್ಛಯಗೆ | ಏಳಯ್ಯ [ದಂಡಿ]ನ ಕಾರ್ಯ          || ೬೩ ||

ಕೇಳಿದಾಕ್ಷಣ ದಂಡ ಕೂಡಿ ಬಂದರೆ ಲೇಸು | ನಾ ಬೇರೆ ಅಂಜಿ ಓಡುವನಲ್ಲ ರಾಮಾ |
ನೋಡುವೆ ಭರವನು ಮೂರೆರಡು ದಿವಸದ | ಮೇಲೆ ದಂಡೆದ್ದು ಸಾಗುವೆನು          || ೬೪ ||

ರಾಮಭೂಪಾಲಗೆ ನೇಮಿ ಕರಗಳ ಮುಗಿದು | ಸಾಗಿದ ಡಿಳ್ಳಿಯ ಪುರಕೆ |
ತೀರಿತ್ತು ಇದು ಕಾಲಗತಿಯ ಕಂಟಕವೆಂದು | ಪ್ರಾಣ ಗಂಡಾಂತರವನುಳಿದೆ         || ೬೫ ||

ಸಾಗಿ ಬರಲು ನೇಮಿ ಮೂರಾರು ದಿನ ಕಳೆದು | ಬರೆ ಹನ್ನೆರಡಕ್ಕೆ ಡಿಳ್ಳಿ |
ಸೇರಿ ಸದರಿಗೆ ಬಂದು ಸುರಿತಾಳಗೆ ಎರಗಲು | ಕೋಣನಾಗುವರೆ ಎಲೆ ಮಂತ್ರಿ      || ೬೬ ||

ಏನು ಹೇಳಲಿ ಭೂಪ ಮೀರಿತು ಮನ್ಮಥನ | ತಾಯವಲ್ಲಭ ಸಾಹಸದಿ |
ಹಾರಲು ಹರಿಣನ ಮೀರಿ ಮಾರುತನಂತೆ | ಏರಿದೆವು ಬೆನ್ನೊಡನೆ ನೆಗೆದು           || ೬೭ ||

ಮಿಕ್ಕು ದಾಟಿದ ಖಾನ ಹೊಕ್ಕನು ಅವನೊಳು | ಮುತ್ತಿದೆವು ಬೆನ್ನಡಿ ನಾವು |
ಲಕ್ಷ ದಂಡಿಗೆ ರಾಮ ಹೊಕ್ಕು ಕಡಿಯಲು ನಾವು | ಸಿಕ್ಕಿದೆವು ಕುರಿಗಳಂದದಲಿ        || ೬೮ ||

ಮನುಜನಲ್ಲವು ಭೂಪ ದುನಜನ ಸ[ಮ]ಶಕ್ತಿ | ಲವ ಕುಶರಿಗೆ ಮಿಗಿಲು ಭೂಪ |
ಬಲವಿಲ್ಲ ತೋಳೆಡೆಯ ಬಲವೆ ಶಕ್ತಿಗಳಾಗೆ | ಪೊಡವಿಯ ಮಗುಚದೆ ಬಿಡನು         || ೬೯ ||

ಕತ್ತೆಗಳ ಕೋಣಗಳ ಮರಿಗಿಂತ ಕಡೆಯಾಗಿ | ಹೊಡೆಯಲು ಅರ್ಧಭಾಗ |
ತುರಗ ರಾವುತರು ಜನರು ಮುನ್ನವೆಯೆಲ್ಲ | ನೊರಜುಗಳಂತೆ ಬಡಿದನು             || ೭೦ ||

ಹೇಳುವ ಶಕ್ತಿಯ ಕೇಳುತ್ತ ಸುರಿತಾಳ | ಭೂಮಿಯ ಹೊಡೆದದ್ದು ನಿಂದು |
ಕೀಳುವೆ ಹಲ್ಲನು ಬೇಡ ಮೂಳನ ದಂಡ | ಕೂಡೆಂದು ಭೇರಿಯ ಹೊಡೆಸೆ            || ೭೧ ||

ಸ್ವಾಮಿ ಸೈರಿಪುದೆಂದು ನೇಮಿ ಎರಗಲು ಮತ್ತೆ | ಕಾಣಲಾಗದು ಕಾರ್ಯಸ್ಥಿತಿಯ |
ಶ್ವಾನ ಮನುಜನ ಮೇಲೆ ಭೂನಾಥ ನೀ ನಡೆಯಲು | ಹಾನಿ ತೋರಲು ಆ ಕೀರ್ತಿ   || ೭೨ ||

ಹಗೆ ಹತ್ತು ವರುಷವು ಮನದೊಳಗೆ ಇಡಬೇಕು | ಅವನ ಜಯಲಕ್ಷ್ಮಿ ತೊಲಗುವ ತನಕ |
ಬಿದಿಗೆ ಚಂದ್ರನ ಬೆಳಕು ಕಡೆಗೊಂದೆ ಸಮನಿಹುದೆ | ಹದಿನೈದು ಕತ್ತಲೆ ಬೆಳಕು       || ೭೩ ||

ವಸವಂತ ಕಾಲದೊಳೆಡಹಿದ ಕಲ್ಲನು | ಬಿಸಲು ಮಾಡಿರ್ದ ಮಳೆ ಬರಲು |
ಕೆಸರಾದ ಕಾಲದಿ ಕಾಲಲಿ ನಡೆಯಲು | ಅಸಮನದಿ ಬಿಡದೀಗ ಪೋಗೆ               || ೭೪ ||

ಶ್ವಾನ ಕಚ್ಚಿತುಯೆಂದು ಮರಳಿ ಕಡಿಯಲು ಮತ್ತೆ | ಹೀನಾಯ ಬಾರದೆ ಕುಂದು |
ತಾವರೆ ಸಖನಿಗೆ ಮೋಡ ಕವಿಯಲು ಪರಿದು | ಪೋಗದೆ ಇವಗೇನು ನೆಲೆಯೆ        || ೭೫ ||

ಹುಡುಗ ಮೂಳನ ಮಾತು ಎಷ್ಟುಗ್ರತನು ನಿಮಗೆ | ಹೊತ್ತೇರಿದಂತೆ ಬಂದಿಹುದು |
ಶತ್ರುನಾಲಯ ಬಗೆ ವಿಳಂಬವಲ್ಲದೆ ಕ್ರೂರ | ಪುಟ್ಟಲು ಆಗವನ ಕೀಳ್ವೆ                 || ೭೬ ||

ಜಾಣ ಮಂತ್ರಿಯನು ಮಾತು ಸಹಜವು ಎನುತಲಿ | ಬಾಳೋದು ಬಾದೂರಗಳವೆ |
ಕೀಳು ಕುಲದ ಸಣ್ಣ ಮೂಳ ರಾಮನ ತಲೆಯ | ಪೂಜೆ ಮಾಡಿಸುವೆ ಡಿಳ್ಳಿಯಲಿ       || ೭೭ ||

ರಾಜೇಂದ್ರ ಸುರಿತಾಳ ಈ ಬಗೆಯ ಪೌರುಷವಾಡಿ | ಹೋಗಲು ತನ್ನರಮನೆಗೆ |
ಮೂರಾರು ದಿವಸವ ನೋಡಿ ಚೆನ್ನಿಗ ರಾಮ | ಭೇರಿಯ ಹೊಡೆಯೆ ನಲುಗೆ ಮನ     || ೭೮ ||

ಗುತ್ತಿಯ ಚಾಮಯ್ಯ ಕಪ್ಪ ಉಡುಗೊರೆ ಹೇರಿ | ಹತ್ತೆಂಟು ಸಾವಿರ ಬಲದಿ |
ಹೊಕ್ಕನು ತಾ ಬಂದು ರಾಯ ರಾಮನ ದಂಡು | ಒಪ್ಪಿತ್ತು ಭೆಟ್ಟಿ ಇರ್ವರಿಗೆ            || ೭೯ ||[2]

ಕ್ಷೇಮವೆ ಮಾರ್ತಂಡ ಭೀಮ ಚೆನ್ನಿಗ ರಾಮ | ಕ್ಷೇಮವೆ ಕಾಟಣ್ಣ ನೀವು |
ಕ್ಷೇಮವೆ ಬಂದಿರೆ ಭೂಮಿ ರಾಯರು ಎಲ್ಲ | ಪ್ರೇಮವೆ ಎನಲು ಚಾಮಯ್ಯ             || ೮೦ ||

ಇವರವರು ಕ್ಷೇಮವ ಪರಿಣಮಿಸಿ ಕೇಳ್ಯಾಡಿ | ಕರವಿಡಿದು ತಮ ತಮಗೆಲ್ಲ |
ನಡೆವೆವು ಪುರಕೆ [ನೆ]ಇರಿ ನೀವು ಸುಖದೊಳಗೆ | ನಡೆಸದೆ ಗರ್ವ ಎಮ್ಮೊಡನೆ       || ೮೧ ||

ರೊಕ್ಕ ಪಾಕಿಗಳೆಂದು ಪಾಚ್ಛಯ ಕೇ[ಳಿದರೆ] | ಕತ್ಹಿಡಿದು ನೂಕಿ ಬಂದವರ |
ಶಕ್ತಿ ಸಾಹಸ ನಡೆಸೆ ಉತ್ತರ ಬರೆಯೆನೆ [ಗೆ] | ತಿಟ್ಟಿ ಹಾಕಿಸುವೆ ಯಮನೂರ         || ೮೨ ||

ಗಟ್ಟ್ಯಾಗಿ ನಂಬುಗೆಯ ಕೊಟ್ಟು ಚೆನ್ನಿಗರಾಯ | ಪಟ್ಟಣಕೆ ಪರಿಣಮಿಸಿ ಕಳುಹಿ |
ಮತ್ತೆ ದಂಡೇಳಲು ಮಾಘ ಮಾಸದ ಶುದ್ಧ | ಮೂರನೆಯ ಸೋಮವಾರದಲ್ಲಿ        || ೮೩ ||

ಭೇರಿಗಳ ನಾದವು ಭೂಮಿ ಭೋರಿಡಿವಂತೆ | ಕಹಳೆ ನಗಾರಿ ಕರ್ಣೆಗಳು |
ಸಾಗಲು ಕರಿ ತುರಗ ಬಾಜಾರ ಬಲ ಸಹಿತ | ಧೂಳು ಮೂಜಗವನು ಮುಸುಕೆ       || ೮೪ ||

ನಡೆದ ದಂಡಿಗೆ ಧರಿಣಿಯುಡಿದು ಕುಂಕುಮವಾಗಿ | ಕೆರೆ ಬಾವಿ ಜಲಗಳು ಬತ್ತಿ |
ಕಿರಣದ ಪ್ರಭೆ ಮುಸುಕಿ ಹಗಲು ಕಾವಳದಂತೆ | [ಅಡ]ಗಿತು ಲೋಕದ ಪ್ರಭೆಯು     || ೮೫ ||

ಒದ್ದಾಡಿ ಕೈಕಾಲು ಓಡಲಾರದೆ ಮೃಗವು | ಹಬ್ಬವಾಗಲು ತಿಂಬ ಜನಕೆ               || ೮೬ ||

ಒಂದೆರಡು ಮೂರು ನಾಲ್ಕೈದು ಪಯಣಕೆ ದಾಂಟಿ | ಬಂದಿಳಿಯೆ ಬಳ್ಳಾರಿ ಬುಡಕೆ |
ಮುಂದೆ ಜೋಡಿನವರು ಉತ್ರವಾಲೆಯ ತಂದು | ಕಂಪಿಲ[ಗೆ] ಬರವ ಹೇಳಿದರು     || ೮೭ ||

ರಾಜೇಂದ್ರ ಕಂಪಿಲ ಸಾರಿಸಿ ಪಟ್ಟಣವ | ಓರಂತೆ ಪುರವ ಶೃಂಗರಿಸಿ |
ಆರೆಂಟು ಸಾವಿರ ಬಲಗೂಡಿ ರಾಜೇಂದ್ರ | ಪ್ರಧಾನಿಯ ಒಡಗೊಂಡು ನಡೆಯೆ        || ೮೮ ||

ಕಂಡನು ಮಗ ಬರುವ ದಂಡಿನ ಒಡನೆಯೆ | ಮಂಡೆಯ ತೂಗಿ ನಲಿದಾಡಿ |
ಚಂದವಾಯಿತು ಮಂತ್ರಿ ಗುಂಡಿಗೆ ನ[ಡು]ಗುವುದು | ಭೂಮಂಡಲ ಹೇಗೆ ತಡೆದಿಹುದೊ      || ೮೯ ||

ನೋಡಯ್ಯ ಬೈಚಪ್ಪ ಕುಮಾರನ ಬಲವನು | ಗೀಜಗ ಗಿಡುಗನಾದಂತೆ |
ರೂಢಿಯ ದೊರೆಗಳು ಕೈಜೋಡಿಸಿ ಕಾದಿಹರು | ಸ್ವಾಮಿಯ ವರ ಪಿಂಡಿವಹುದು     || ೯೦ ||

ಸಾಕಯ್ಯ ಮಂತ್ರಿ ಈ ಲೋಕದ ಸ್ಥಿತಿ ಎನಗೆ | ಪುತ್ರರ ಸಾಹಸವ ಕಂಡೆ |
ಸತ್ತರೆ ಈ ಮೇಲೆ ಕೀರ್ತಿ ಲೋಕದಿ ನಡೆಯೆ | ಚಿತ್ತದಿ ರಾಯ ಹಿಗ್ಗಿದನು               || ೯೧ ||

ತಾ ಪಾಪಿಯಾಗಲು ತರಳರ ಫಲದಿಂದ | ಮಾತಾಡದಿರ್ದ ವೈರಿಗಳ |
ಮೇಕ ಗರ್ವವ ಮುರಿದು ನಮಗೆ ತಲೆವಾಗಿಸಿದ | ಕುಲದೀಪ ಶ[ತ]ರತ್ನ ಮಣಿಯು   || ೯೨ ||

ಪರಮ ಜಟ್ಟಂಗಿಯ ವರ ಪುತ್ರರಹುದಿವರು | ನರಜನ್ಮ ಫಲ ಸೋಂಕಿಗೆಮ್ಮಾ |
ಕಾರದೊಳ್ ನಿರ್ಮಿಸಿ ಧರೆಯನು ಮುರಿಯಲ್ಕೆ | ಹರ ಕಳುಹಿದ ಭೀಮನ ಪ್ರತಿಯ   || ೯೩ ||

ರಾಯ ಬರುವ ಸುದ್ಧಿ ಕುಮಾರರಿರ್ವರು ಕೇಳಿ | ಏರಿದ ತೇಜಿಯನಿಳಿದು + |
ಕಾಲು ನಡೆಯಲಿ ಬಂದು ಕಾಣಿಕೆಯನು ಸುರಿದು | ಭ ಭೂಮಿಗೆ ಸಾಷ್ಟಾಂಗವೆರಗಿ    || ೯೪ ||

ಪಾದಕ್ಕೆ ಅಪಿಕೀರ್ತಿ ಹೀನಾಯ ತರಲಿಲ್ಲ | ಮೀರಿದ ರಾಯ ದೊರೆಗಳನು |
ಕಾದು ನಿಮ್ಮಯ ಬಳಿಯ ಕೈಜೋಡಿಸಿ ನಿಂದಿರುವ | ತೇಜವ ಪಡೆ [ತಂದೆ]ಭೂಪ    || ೯೫ ||

ಪುತ್ರರ ಶಿರಗಳ ಗಲ್ಲವ ಪಿಡಿ[ಯೆ] | ಪೃಥ್ವಿಯ ದೊರೆಗಳು ಬಂದು |
ಕರಗಳ ಮುಗಿಯಲ್ಕೆ ಸಂತೋಷದಿಂದಲಿ | ಎತ್ತಿದ ಕರವ ಕಂಪಿಲನು                || ೯೬ ||

ಕ್ಷೇಮವೆ ಪರಲೋಕ ರಾಜೇಂದ್ರ ಭೂಪಾಲರು | ಪ್ರೇಮವೆ ರಾಜ್ಯಸ್ಥಿತಿಗತಿಯು |
ಕ್ಷೇಮವೆನಲಿ ಬಂದು ಬಾದುರ ಸಂಗಯ್ಯ | ನೀಲಕಂಠನು ಬಂದು ಎರಗೆ             || ೯೭ ||

ದಂಡು ಇಳಿಯಲು ಬಂದು ಕುಮ್ಮಟದ ಸುತ್ತ | ಒಂದು ಯೋಜನದ ಅಡ್ಡಗಲ |
ಬಂದ ರಾಯರಿಗೆಲ್ಲ ಪಡಿ ಬಿಡಾರ ಮಾಡಿ [ಸೆಂದು] | ರಾಜೇಂದ್ರ ಮಂತ್ರಿಗೆ ಪೇಳಿದರು        || ೯೮ ||

ರಾಯ ರಾಯರನೆಲ್ಲ ಸಾಗಿಸಿ ಡೇರ್ಯಕ್ಕೆ | ಕುಮಾರರ ಒಡಗೊಂಡು ಅರಸು |

ಭೋರೆಂಬ ವಾದ್ಯದ ಘೋಷದೊಳಗೆ ರಾಯ | ಊರ ಹೊಕ್ಕನು ಕುಮ್ಮಟವ         || ೯೯ ||

ನಗರದ ಲಾವಣ್ಯ ಚದುರೆಯರಾರತಿ ಮಾಡಿ | ತರತರದೊಳು ತಂದು ಬೆಳಗಿ |
ತರಳರಿವರು ಹೊನ್ನ ಆಭರಣವ ಕೊಡುತಲಿ | ನಡೆಯಲು ತಾಯ ದರುಶನಕೆ        || ೧೦೦ ||

ಏರಿದ ತುರಗಗಳನಿಳಿದು ತರಳರಿರ್ವರು ಪೋಗಿ | ಕಾಣಿಕೆ [ಯನು]ಸುರಿದು ಬೇಗ |
ಭೂಮಿಗೆ [ಪಣೆ]ನೀಡಿ ಎರಗಲು ತಾಯಿಗೆ | ಬಾಲರೇಳೆಂದು ಹರಸಿದಳು             || ೧೦೧ ||

ಗುರು ಶಂಭು ಜಟ್ಟಂಗಿ ವರಪುತ್ರರಿವರೆಂದು | ಪರಬಲವೈರಿದಲ್ಲಣರ |
ತರಳರಿರ್ವರ ಮಂಡೆ ಪಿಡಿದೆತ್ತಿ ಹರಿಯಮ್ಮ | ಬೆಳಗಿದಳು ದೃಷ್ಟಿ ಆರತಿಯ          || ೧೦೨ ||

ಅನಿತರೊಳಗೆ ಸೂರ್ಯ ಕಡೆಗಂಡು ಪ್ರೇಮದಿ | ಗಿರಿಜಾವಲ್ಲಭನ ದರುಶನಕೆ |
ತಿರುಗಿ ಪೂರ್ವಾಗ್ನಿಯನೇರಲು ರವಿ ಬಂದು | ಸದರಿಗೆ ಕುಳಿತ ಕಂಪಿಲನು           || ೧೦೩ ||

ರಾಮನೋಲಗ ಕೇಳಿ ಭೂಮಿಯ ದೊರೆಗಳು | ಮಂತ್ರಿ ವಾಲೈಸಿ ಕುಳಿತಿರಲು |
ದೇವೇಂದ್ರ ಭೋಗದೊಳಿರುತ ಕಂಪಿಲರಾಯ | ತಾನೊಂದಾಗ್ರಹಿಸಿದ ಮನದಿ      || ೧೦೪ ||

ನಿತ್ಯವಲ್ಲದ ಕಾಯ ನೆತ್ತಿಯೊಳೊಳೆಯುಂಟೆ | ಪುತ್ರರ ಮದುವೆ ಮಾಡಿಸುವಾ |
ಸತ್ಯವುಳ್ಳವ ಮಂತ್ರಿ ಸತಿಯರ ನೋಡಯ್ಯ | ಪೃಥ್ವಿರಾಯರು ಇರಲು ಮಾಳ್ಪೆ       || ೧೦೫ ||

ಪಂಚೈದು ಸ್ತ್ರೀಯರ ಭೂಕಾಂತ ರಾಮಗೆ ನೋಡು | ಮತ್ತೀಗ ಕಾಟಣ್ಣಗೆರಡು |
[ಪದ್ಮಿನಿ]ಯರ ನೋಡೊ ವಂಶಾಬ್ಧಿಯೊಳಗೊಂದು | ಇಂತು ವಾಲಗವ ಹರಸಿದನು || ೧೦೬ ||

ಬಂದನು ಬೈಚಪ್ಪ ಪಟ್ಟದ ರಾಣಿಗೆ | ಅರಸೆಂ[ದ] ವಾಕ್ಯವನುಸುರೆ |
ಚೆಂದವಾಯಿತು ಮಂತ್ರಿ ಕುರುಡ ಬಯಸುವುದೇನು | ಕುಟುಂಬದೊಳಗೆ ನೋಡು ಎನಲು   || ೧೦೭ ||

ವಾಯ ವರ್ಣವು ಚಿತ್ರ ಲಾವಣ್ಯ ಸ್ತ್ರೀಯರ | ನೋಡಯ್ಯ ಈ ಕ್ಷಣದೊಳಗೆ |
ತಾಯೆ ಕಂಡಿರೆ ನಿಮ್ಮ ಸೋದರ ಸೊಸೆಯೆರಡು | ಮೇಲೆ ಮೂರನು ನೋಡಿ ಬರುವೆ        || ೧೦೮ ||

ಮತ್ತೆ ಲೇಸಾಯ್ತು ಮುತ್ತಿನ ಮಣಿ ಎರಡು | ಮತ್ತೆ ನೋಡಯ್ಯ ಮೂವರನು |
ಚಿತ್ತದೊಳಿದ್ದಂತೆ ಕರೆಸುವೆ ನೋಡೆಂದು | ಹೊಕ್ಕನು ತನ್ನ ಮಂದಿರವ               || ೧೦೯ ||

ನೋಡಿದನು ನೂರೆಂಟರೊಳಗಾಗಿ ಅತಿರಂಭೆ | ವೀರಸಂಗಯ್ಯನ ತನುಜೆಯನು |
ಮೇಲೊಂದು ಜರೆಮಲೆಯ ಕುಮಾರನ ಮಗಳನ್ನು | ಸಾರಂಗಿ ಕನಕಯ್ಯನ ತನುಜೆ || ೧೧೦ ||

ಬಾಲೆಯರೈವರ ರಾಯಮಂತ್ರಿಯು ತಂದು | ತೋರಿದ ರಾಯ ರಾಣಿಯರಿಗೆ |
ಕ್ಷೀರದೊಳು ರಸವೊಳ್ಳೆ ಮಡುಪುಣ್ಣಿ ಬೆರೆದಂತೆ | ಸರಿರಸವೆಂದು ಒಪ್ಪಿದರು          || ೧೧೧ ||[3]

ಆಲಸ್ಯ ಮಾಡದೆ ಜೋಡಿಸು ಇನ್ನೆರಡು | ರಾಯ ಕಾಟಣ್ಣಗೆ ವರಸಮನ |
ತಾ ಒಂದ ಬೊ[ಲ್ಲ]ವ ಕಾವ ಗೊಲ್ಲರ ಹನುಮ | ರಾಯಣ್ಣನೊಳು ಎರಡು ತರಲು    || ೧೧೨ ||

ರಾಯ ರಾಮಯ್ಯನ ರಾಣಿಯರೈವರ ಪೆಸರು | ವೀರಾಯಿ ಚೆಲ್ವ ಲಿಂಗರಸಿ |
ವಾಣಿಯೊಳತಿರಂಭೆ [ಹಂ] ಪಾಜಿ ಸೌಭದ್ರೆ | ಜಾಣತ್ವದೊಳು ಚಂದ್ರಕಳೆಯ        || ೧೧೩ ||

ದೊರೆರಾಯ ಕಾಟಣ್ಣನ ಮಡದೆರಿಬ್ಬರ ಹೆಸರು | [ಇ] ಡಿಸಿದ ರಾಯ ಪ್ರತಿಯಾಗಿ |
ಉಡುರಾಜನಂ ಪೋಲ್ವ ಪ್ರೌಢೆಯು ರಂಗಾಯಿ | ನಡು ಸಿಂಹ [ಕು]ರಂಗನಯನೆ    || ೧೧೪ ||

[ನಾ] ಮಕರಣಗಳಾಗೆ ರಾಯ ದೊರೆಗಳಿಗೆಲ್ಲ | ತೋರಿಸಿ ಸರ್ವ ಮಾನ್ಯರಿಗೆ |
ಸ್ತ್ರೀಯರು ಅಜನಿಂದ ಮಾಲೆ ಪಡೆಯಲ್ಕಿಂಥ | ಸಾಹಸಿಗ[ರ] ಪಡೆದರೇನು           || ೧೧೫ ||

ನಾರಿಯಾಡಿದಳೊಂದು ಪ್ರಾಣವಲ್ಲಭನೊಳು | ಬಾಲರಿಗೆ ನಾರಿಯರ ರೂಪ |
ತೋರದೆ ಮದುವೆಯ ಮಾಡಲು ಅತಿಕಷ್ಟ | ನೋಡಿನ್ನು ಮಾರ್ತಂಡ ಭೂಪ         || ೧೧೬ ||

ಮಾತೆ ಪಿತರು ಒಪ್ಪಿ ಮರುಳ ತಂದರೆ ನಾರಿ | ಲೋಕದೊಳತಿಗ [ಳೆವ] ರುಂಟೆ |
ಸಾಕಿನ್ನು ರಾಜೇಂದ್ರ ಸತ್ಯಕಾಲದ ಮಾತ | ಈ ಕಲಿಗೆ ನೀವು ನಡೆಸುವರೆ            || ೧೧೭ ||

ಶ್ರೋಣಿತಪುರದೊಳು ಬಾಣಾಸುರನ ತನುಜೆ | ಕೂಡಳೆ ತಾ ಮೆಚ್ಚಿದವನ |
ಕೇಳಿದನೆ ಕಂದರ್ಪಸುತನು ಪಡೆದವರನು | ಸಂಯೋಗವಾಗದೆ ಮದುವೆಯಿಲ್ಲದೆ   || ೧೧೮ ||

ತಾಯಿಗಳು ತಂದು ವಿವಾಹಮಾಡಿದ ಸತಿಯನ್ನು | ಬೇರೆ ಬಿಟ್ಟವರ ಕೇಳರಸ |
ರಾಯ ಧರ್ಮರನುಜ ಪಾರ್ಥ ದ್ರೌಪದಿ ಮೆಚ್ಚಿ | ನಾಗಕನ್ನೆಯರನ್ನು ಬಿಡದೆ           || ೧೧೯ ||

ನಕ್ಕನು ರಾಜೇಂದ್ರ ರಾಣಿಯ ವಚನದೊಳ್ | ವ್ಯರ್ಥವಾಯಿತು ಎನ್ನ ಮಾತು |
ನಿಶ್ಚಯವಹುದೆಂದು ಸತಿಯರ ಲಾವಣ್ಯ | ಪುತ್ರರಿಗೆ ತೋರಿ ಪ್ರೀತಿಯಲಿ             || ೧೨೦ ||

ಸಾಗಿಸಿ ಮದುವೆಯ ಸಮಗ್ರವಾದ ಮೇಲೆ | ವಾಲೆಯ ಬರೆದು ದೊರೆಗಳಿಗೆ |
ಪುರವನು ಶೃಂಗರಿಸಿ ಬೀದಿ ಚಪ್ಪರ ಹಾಕಿ | ತೋರಣ ಮೇಲ್ಕಟ್ಟ ರಚಿಸಿ              || ೧೨೧ ||

ಬಾಲರಿಗೆ ಆಭರಣ ವಿಧಾನ ಭೂಷಣ ಮಾಡಿ | ಶೋಭನ ಮದವಳಿಗೆ ಶಾಸ್ತ್ರ |
ಕೋಮಾಲೆ ಮುತ್ತೈದೆಯರು ಹಸೆ ಶೃಂಗರಿಸಿ | ಮೊದಲಾಗಿ ಹಸೆಯೊಳ್ಕುಳ್ಳಿರಿಸಿ     || ೧೨೨ ||

ಮೊದಲಾಗೊ ಶಾಸ್ತ್ರಾದಿಗಳನರಿದು ಮಾಡಿ | ಶುಭದೊಳುದ ಕಂಕಣ ಧರಿಸಿ |
ಮೃಗನೇ [ತ್ರಂಗ]ನೆಯರು ಕುಂದಲಿಗೆಯನಿಟ್ಟು | ಒರಳಕ್ಕಿ ಒನಕೆಯ ಪಿಡಿಯೆ       || ೧೨೩ ||

ಒರಳಕ್ಕಿ ಪದ :

ಸುವ್ವಿಯೆಂದು ಪಾಡಿರೆ ಸುಗುಣಿ ಮುತ್ತೈದೆಯರು
ಯೌವನ ಮದದೊಳು ಒಲೆಯುತ |
ಸುವ್ವಿ ಬಾ ಸುವ್ವಿ                                                                      || ಪಲ್ಲ ||

ಚಂದನದ ಒನಕೆಗೆ ಗಂಧಾಕ್ಷತೆಯಿಟ್ಟು
ಸುಗುಣಗಂಧಿ ಮುತ್ತೈದೆಯರು ಹಿಡಿಕೊಳ್ಳಿ
ಶಂಭು ಜಟ್ಟಂಗೀಶ ದಯವಾಗೊ ನಿಮ್ಮಯ
ವರಪಿಂಡ ಪುತ್ರರ ಸಲಹೆಂದು || ಸುವ್ವಿ ಬಾ                                          || ೧೨೪ ||

ತಾವರೆ ಗಂಧಿಯರು ಕೋಮಾಲೆ ಪ್ರಾಯವು

ಬಾಳೆಯ ತೊಳಿಯಂತೆ ಬಳಕುತ |
ಮೂರು ಕಣ್ಣಯ್ಯನ ವರದೊಳು ಜನಿಸಿದ
ರಾಯ ರಾಮಯ್ಯಗೆ ಒರಳಕ್ಕಿ || ಸುವ್ವಿ ಬಾ                                           || ೧೨೫ ||

ನೀಲಕುಂತಳೆಯರು ಕೋಗಿಲೆಸ್ವರ ರಾಗ
ಬಾಗುತ ಬಂದೊನಿಕೆಯ ನೆಗೆವುತ
ಮೂರು ರಾಯರ ಗಂಡ ಭೇರುಂಢ ರಾಮಯಗೆ
ಶ್ರೀ ಗೌರಿವಲ್ಲಭ ದಯವಾಗೋ || ಸುವ್ವಿ ಬಾ                                         || ೧೨೬ ||

ಬಡನಡು ಬಳಕುತ ಮುಡಿಯ ಬೆನ್ನನೊಲೆಯುತ
ತೊಡೆ ತೋಳ ಮೊಲೆ ಭಾರವದರುತ
ಪರರಾಯರೆದೆ ಶೂಲ ಪಾರ್ಥ ರಾಮಯ್ಯಗೆ
ಉರಗಭೂಷಣನೆ ದಯವಾಗೊ || ಸುವ್ವಿ ಬಾ                                         || ೧೨೭ ||

ಕನ್ನೆಯರು ಕಡುಚೆಲ್ವ ಹೆಣ್ಣುಗಳು ನಾಲ್ವರು
ಸಣ್ಣ ರಾಜಾನ್ನದಕ್ಕಿ ತಳಿಸಲು |
ದಮ್ಮನೆ ದಣಿಯುತ ಸಣ್ಣ ಬೆವರಿಳಿಯುತ
ಗಮ್ಮನೆ [ನೀ]ಡಿ ನಮಗುಡುಗೊರೆಯ || ಸುವ್ವಿ ಬಾ                                  || ೧೨೮ ||

ಸಾಂಗತ್ಯವರ್ಣ :

[ತ]ರುಣಿ ಬಾ ಸಂ[ಗವ್ವ] ತರಲು ಶಾಸ್ತ್ರದ ನೀರ
ತರಳ ಕಂ[ದನು] ಹತ್ತೆ ಮಣಿಯ |
ಗುರುಪೂಜೆಗಳ ಮಾಡಿ ಸುರಗಿ ಶಾಸ್ತ್ರವ ಬಿಟ್ಟು
ಎದುರಗೊಂಡು ನೀರು ಮಿಂದು                                                      || ೧೨೮ ||

ಧರೆಯ [ತಿ]ಥಿ ಲಗ್ನವು ಕೂಡಿ ಬರಲು ಎರಡು
ಮುಹೂರ್ತ ಮಂಡಪದಿ ನಿಲ್ಲಿಸಲು |
ಮೇ [ಘ] ಮಾರ್ಗದಿ ಬಂದು ದೇವಗಣವೆಸೆಯಲು
ಶ್ರೀ ಗುರು ಹರಿ ಬ್ರಹ್ಮರೆಲ್ಲ                                                             || ೧೩೦ ||

ಗರುಡ ಗಂಧರ್ವ ಕಿನ್ನರರು ಕಿಂಪುರಷರು
ವರ ನಂದಿ ಷಣ್ಮುಖ ಶರಭ |
ಕರಿಮುಖನು ಪಾರ್ವತಿ [ಗಂಗಾ]ಂಬಿಕೆ ವಾಣಿ
ಜಯಲಕ್ಷ್ಮಿ ಶರಣ ತಿಂಥಿಣಿಯು                                                       || ೧೩೧ ||

ಗಿರಿಜೆ ಕೇಳಿದಳಾಗ ಗೀರ್ವಾಣಮೂರ್ತಿಯ
ರಾಮ ನರನೊ ಶರಣಗಣವೊ |
ಅವರೆಲ್ಲ ಬೆರೆದು ವಿವಾಹದ ಮಾಡಲು ಇವಗೆ
ನರಕವಿಲ್ಲದೆ ಪುರಕೆ ಬಹನೇ                                                          || ೧೩೨ ||

ಮುಕ್ತಾಂಗಿ ನೀ ಕೇಳು ಮುಂದಿವನು ಎಮ್ಮಯ
ಶಕ್ತಿಯೊ [ಳಿದ್ದಂ]ಥ ಪಿಂಡ |
ಪುಟ್ಟಿದನವನೊಂದು ಕಥೆಯ ಕಾರಣ [ಕಿಲ್ಲಿ]
ಶ್ರೇಷ್ಠಮುನೀಂದ್ರನ ಮ[ಗ]ನು                                                       || ೧೩೩ ||

ಇಂದುಮುಖಿಯೆ ಕೇಳೆ ಇವನ ಭೇದನಗಳ
ನಾರದ ಬಲ್ಲ ಪೂರ್ವ ನೆಲೆಯ |
ಮುಂದೆ ಪೇಳುವೆ ನಿನಗೆ ಮೂಲಸಂಗತಿ ಅಮೃತ
ಬಂದುದು ಧಾರೆಯ ಗಳಿಗೆ                                                           || ೧೩೪ ||

ಗಂಧರ್ವ ಯೋಗದಿ ಗಗನದೊಳ್ ನಡೆಯಲು
ಭುವನದಿ ಇವರು ತೆರೆವಿಡಿದು
ಬುಧರು ಮಂತ್ರವ ಪೇಳೆ ಜನರು ಸೇಸೆಯ ತಳೆದು
ತೆರೆ ತೆಗೆದು ಮುತ್ತ ಪೊಯಿಸಿ                                                        || ೧೩೫ ||

ಕ್ಷೀರಧಾರೆಯನೆರೆದು ಪಾದಕರಗಳ ತೊಳೆದು
ಮಾಲೆಗಳ ಧರಿಸಿ ಸತಿಪತಿಗೆ |
ಬೇಗ ಶುಕ್ರನ ತೋರಿ ಸೆರಗ ಗಂಟನೆ ಹೂಡಿ
ಸಾಗಿಸಿ ಮಂದಿರಕವರ                                                               || ೧೩೬ ||

ಕರೆದೊಯ್ದು ರತ್ನದ ಹಸೆಯೊಳು ಕುಳ್ಳಿರಿಸಿ
ತಳಿದರು ಮುತ್ತಿನಕ್ಕಿಯನು |
ಹಡೆದಮ್ಮ ಆರತಿ ಬೆಳಗೆ ಹರದೆ ಮುತ್ತೈದೆಯರು
ಡವಳ ರಾಗದಲಿ ಪೇಳಿದರು                                                          || ೧೩೭ ||

ಡವಳ ರಾಗ :

ಶ್ರೀ ಮಹಾಗೌರೀಶ ಶಂಭು ಜಟ್ಟಂಗಿಯ
ಕಾಮಸಂಹರನೆನಿಸಿದ ರಾಯ
ರಾಮಯ್ಯಗೆ ಕರುಣಿಸೊ ಶೋಬಾನೆ                                                 || ೧೩೮ ||

ಆದಿಯ ಹಂಪೆಯ ಸ್ಥಾನಕ್ಕೆ ಮೊದಲೀ
ಮೂರು ಲೋಕದ ದೇವನೊಲಿದು
ಹಾದಿ [ಯನು] ನಯನಕ್ಕೆ ತೋರಿ[ದೆ] ಕಾಟಯ್ಯಗೆ
ಶ್ರೀಗಿರಿಯ ಮಲ್ಲ ಕೃಪೆಯಾಗೊ || ಶೋ                                              || ೧೩೯ ||

ಹರಹರ ನಿಮ್ಮಯ ವರದೊಳು ಜನಿಸಿದ
ಅರಸು ಬಲ್ಲಾಳನ ಮುರಿದವಗೆ
ಧರಣಿಯೊಳ್ ಹರಿಶ್ಚಂದ್ರ ಪರಸತಿಯ ನೋಡನು
ಉರಗಭೂಷಣನೆ ದಯವಾಗೊ || ಶೋ                                              || ೧೪೦ ||

ಸುತ್ತಲ ರಾಯರಿಗೆ ಶತ್ರುವಾಗಿ ಬಾಳುವಗೆ
ಗುತ್ತಿದುರ್ಗದಿ ಹೊನ್ನ ತೆಗೆದವಗೆ |
ಅರ್ತಿಲಿ ಪಡೆದರು ಐವರು ತಪಸಿಲಿ
ರಾಣಿ ವಿಜಯವಾದ ಪುರುಷನ || ಶೋ                                               || ೧೪೧ ||

ಸಾಂಗತ್ಯ:

ನಾಗವಾಲೆಯ ಶಾಸ್ತ್ರವ ಮಾಡಿ ತೊಟ್ಟಿಲ ತೂಗಿ | ರಾಯ ರಾಯರಿಗೆಲ್ಲ ಓಕುಳಿಯ |
ಪೇಳುವರು ಸತಿಯರು ರೂಢಿ ದೊರೆಗಳು ಎಲ್ಲ | ರಾಯ ಕಂಪಿಲ ಹರಿಯಮ್ಮಗೆ      || ೧೪೨ ||

ಮದುವೆ ತೀರಲು ರಾಯ ಬಂಧು ದೊರೆಗಳಿಗೆಲ್ಲ | ಉಡುಗೊರೆ ಉಚಿತವ ಕೊಡಿಸಿ ಬೇಗ |
ಇರಿ ನೀವು ಸುಖದೊಳು ನಿಮ್ಮ ರಾಜ್ಯದಿ ಎಂದು | ದೊರೆ ರಾಮ ಬಂದವರ ಕಳುಹೆ  || ೧೪೩ ||

ಧರೆಗಧಿಕ ಹಂಪೆಯ ವರುಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನ ಮದುವೆಯಾಗಿ ಬೊಲ್ಲಗೆ ನಡೆವ | ಪಯಣಕೊದಗಲು ಆರು [>ಏಳು] ಸಂಧಿ  || ೧೪೪ ||[4]

[1] “ಡಿಳ್ಳಿಯಿಂದ ಬಾದುರಕಾನ ಬಂದ ಸಂಧಿ” ಎಂದು ಎರಡೂ ಪ್ರತಿಗಳಲ್ಲಿದೆ (ಸಂ).

[2] ಸಂಧಿ ೬ – ಪದ್ಯ ೧೦೧ ಪುನರುಕ್ತವಾಗಿದೆ (ಸಂ)

[3] + ರಾಮಯ್ಯನ ಮದುವೆ (ಮೂ)

[4] + ಅಂತು ಸಂಧಿ ೬ [>೭]ಕ್ಕಂ ಪದನು ೧೩೪೧ಕ್ಕಂ ಮಂಗಳ ಮಹಾಶ್ರೀ (ಮೂ).