[1]ಕುಂಜರ ವೈರಿಯ ಕಂದನ ದೆಸೆಯಿಂದ | ನೊಂದವನ ಮಗಳನಾತ್ಮಜನೆ |
ಕುಂಭಿನಿಯ ಪೊತ್ತವನ ಇಂಬಿಟ್ಟೆ [ಒಡ]ಲಿಗೆ | ಶುಂಡಿಲ ಬೆನವ ಕೊಡು ಮತಿಯ || ೧ ||
ಉರಗನ ವೈರಿಯ ವಾಹನನೇರಿದ | ತನುಜನ ಕೊಂದು ಬೂದಿಯನು |
ಧರಿಸಿದ ಧವಳಾಂಗ ಬೆವರೊಳು ಜನಿಸಿದ | ಶರಭ ಕೊಡೆನಗೆ ಸನ್ಮತಿಯ || ೨ ||
ಕಾಶಿ ರಾಮೇಶ್ವರಕೆ ಈಸು ವೆಗ್ಗಳವಾದ | ತ್ರಾಸಿನಲಿ ತೂಗಿ ನೋಡಿದರೆ |
ಲೇಸಾಗಿ ವರವಿತ್ತು ನಡೆಸು ಮುಂದಲ ಕೃತಿಯ | ಈಶನೆ ವಿರುಪಾಕ್ಷಲಿಂಗ || ೩ ||
ಅರುಣಾದ್ರಿ ಅಳಿದನ ಇಂದ್ರಾದ್ರಿ ತಲೆದೋರೆ | ಜನರೆದ್ದು ತಮ್ಮಯ ಕ್ರೀಯ |
ಹರಿಪೂಜೆ ಮಾಳ್ಪರು ಹರನ ಧ್ಯಾನದಿ ಕೆಲರು | ದಿನಕರನ ಭಜಿಪರು ಕೆಲರು || ೪ ||
ರಾಯನು ಜಟ್ಟಂಗಿನೃಪ ಸ್ನಾನವ ಮಾಡಿ | ಭೋಜನ ಮೃಷ್ಟಾನ್ನ ಸವಿದು |
ಸಾಗಲು ಸೌಭಾಗ್ಯ ದೇವೇಂದ್ರ ಸುಖದೊಳು | ಚಾವಡಿ ಸದರ ವಾಲಗಕದೆ || ೫ ||
ವಾಲಗ ಸಂಭ್ರಮದ ಕೇಳುತ್ತ ಗುರುರಾಯ | ಆಗ ಸಂಭ್ರಮದೊಳು ಪೊರಡೆ |
ಸಾಗಿ ಬರಲು ನೃಪ ತಾನೆದ್ದು ಕರ ಮುಗಿದು | ಮೇಲು ಪೀಠದಲಿ ಕುಳ್ಳಿರಿಸಿ || ೬ ||
ದಯಮಾಡಬಹುದೆನ್ನ ಗುರುರಾಯ ಪಿತನಲ್ಲಿ | ಪುರವ ಮುತ್ತಿರುವ ಮೇಲ್ಗತೆಯ |
ಧರಣಿಗುಬ್ಬಸವಾದ ದಂಡ ಪೇಳಿರಿ ಸ್ವಾಮಿ | ಮುಳುಗವನೊ ಉಳಿದು ಪೋಗುವನೊ || ೭ ||
ಲಾಲಿಸಿ ಕೇಳೈ ಕುಮಾರನೆ ಜಟ್ಟಂಗಿ | ರಾಮನ ವರವುಂಟು ಪಿತನೆ |
ಹಾಳು ಮಾಡುವ ದಂಡ ಹಡೆದಾತ ನಿನ್ನನು | ಮೇಲವನು ಪೊಗದಿಯ ತರುವ || ೮ ||
ನಡೆಸುವೆ ರಾಮನ ಕಡು ಧೈರ್ಯ ಕೃತಿಯನು | ದೃಢವುಳ್ಳ ಜನರು ಲಾಲಿಪುದು |
ಜಡಮತಿ ಮನುಜರು ಜರೆಯೆ ರಾಮನ ಸತ್ಯ | ನಡೆಯದೆ ಭೂಮಿಯಲಿ ಶಕ್ತಿ || ೯ ||
ಓದು ಎನ್ನಲು ಗರ್ವ ಮಾಡಲವಗೆ ಕರ್ಮ | ಕೇಳದೆ ವರ ಚಿತ್ತದೊಳಗೆ |
ಆಡುತಿರಲು ಅಡ್ಡ ಮಾತು ಪ್ರಸಂಗವ | ಶ್ವಾನಯೋನಿಯ ಜನ್ಮ ಬಿಡದು || ೧೦ ||
ಉಸಿರುವೆ ಮುಂದಲ ಕೃತಿಯ ಲಾಲಿಸಿ ಬಲ್ಲ | ರಸಿಕರು ಕುಶಲ [ಕೋ] ವಿದರು |
ವಿಷಕಂಠಧರನೊಲುಮೆ ಇರಲು ರಾಮ ಲಕ್ಷ್ಮಣ | ಹೊಸಬಲಕೆ ದೂರಾಗೊ ಬಗೆಯ || ೧೧ ||
ರಣಧೀರ ಬಲ್ಲಾಳರಾಯನ ಬಲ ತುರಗ | ಶರಧಿಯಂದದಿ ಬಂದು ಇಳಿಯೆ |
ಗುಲಗಂಜಿ ಭಾರಕೆ ಗುಂಡ ತ್ರಾಸಿಲಿ ಇಡುವ | ತೆರನಾಯಿಯಲ್ಲ ಈ ಕಾರ್ಯ || ೧೨ ||
ದಂಡಿನಾರ್ಭಟ [ವನು] ಕಂಡು ರಾಮನ ಮಂದಿ | ಬಂದು ಬಿನ್ನೈಸಿ ಪೇಳುವರು |
ಹಿಂದೆ ಶ್ರೋಣಿತಪುರಕೆ ಮುಕುಂದನು ನಡೆದಂತೆ | ಅಂದವಾಗಿದೆ ಭೂಪ ದಂಡು || ೧೩ ||
ಭಯಬೇಡಿ ಬಂದಂಥ ಮಳೆಯೆಲ್ಲ | ಲಯಗಾಲ ಮಾಳ್ಪ [ಭೈರವ] ನು |
ಜಯಲಕ್ಷ್ಮಿ ತೊಲಗಲು ನವಕ್ಷೋಹಿಣಿ ಕೌರವನ | ಲಯಗಾಲ ಐವರರೊಡನೆ || ೧೪ ||
ಸಂದೇಹಗೊಳಬೇಡಿ ಬಂದುದಕೆ ನಾನಿರುವೆ | ಶಂಭು ಇರುವನು ಎನ್ನ ಮೇಲೆ |
ಕುಂಭಿನಿಯೊಳಗಿವನು ಬಲವಂತ ಸುರಿತಾಳಗೆ | ಕಂಡು ನಡೆಯದೆ ಮಿಕ್ಕವನು || ೧೫ ||
ಓಡುವನು ಇನ್ಯಾಕೆ ನೀಗಿದೆವು ಕಾಲ್ದೊಡರ | ಕಾಳು ಬೇಳೆಂಬ ಕುರಿ ಮರಿಯ |
ನಾಳಿನ ದಿನದೊಳು ಹಾಳವಾಗದೆ ಭೂಮಿ | ನಾಡೆಲ್ಲ ಗುತ್ತಿಗೆ ಧುಮುಕಿ || ೧೬ ||
ತರಳ ಚೆನ್ನಿಗ ರಾಮ ಬಲಕೆ ಧೈರ್ಯವ ಕೊಟ್ಟು | ಕರೆಸಿದ ತನ್ನ ಮನ್ನೆಯರ |
ಸರಿ ಮಾಡೆ ಜಗಳದ ಪರುಟವಣೆ ಎಲ್ಲರು | ಬಿರಿದನ ಕಾಳೆಯ………. || ೧೭ ||
ಹೊಡೆಯಲು ಭೇರಿ ಭೋರ್ಮೊರೆದು…. | ………………… |
ಕಿಡಿ ಮಸುಗತಲೆದ್ದು ನಡೆಯೆ ಮುಂದಕೆ ರಾಮ | ಇಳಿದಿಹ ದಂಡಿಗೆ ಹೇಳಿ ಕಳುಹಿ || ೧೮ ||
ಹೆಸರಿನೊಳ್ ಕಡಿವಂಥ ರಣವೆ ಸಲ್ಲ ಬಿರಿದಾಂಕ | ಭೂಪ ರಾಮನು ಬರುವನೆಂದು |
ಲೇಸಾಗಿ ಶೃಂಗರಿಸಿ ಬರಹೇಳಿ ಕಾರ್ಯಕ್ಕೆ | ಆ ಕ್ಷಣ ಚರರು ತಿರುಗಿದರು || ೧೯ ||
ಬಂದ ರಾಮನು ಎಂದು ದಂಡು ಜಲ್ಲನೆ ಬೆದರಿ | ಶೃಂಗರಿಸಿ ತುರುಮನ್ನೆಯರು |
ಮುಂಗಾರ ಮಳೆ ಮೇಘ ದಂಡೆಯಲಿ ನಡೆವಂತೆ | ಬೆಂಕಿಯ ಕೆಂಡ ಸುರಿವಂತೆ || ೨೦ ||
ಇತ್ತರದೊಳು ಭೇರಿ ಕಿತ್ತು ತೋರುತ ಭೂಮಿಯ | ಕತ್ತಿ ಮಿಂಚುಗಳು ತಳತಳಿಸೆ |
ಕಚ್ಚಿ ಬೀರುವ ಕಾಳೆ ಕಾಕು ಬೊಬ್ಬೆಗಳಿಂದ | ಪೃಥ್ವಿ ತಲ್ಲಣಿಸಿ ಜಜ್ಝರಿಸೆ || ೨೧ ||
ರೂಢಿಗೀಶ್ವರ ಸ್ತುತಿ ಮಾಡಿ ಚೆನ್ನಿಗರಾಮ | ಕೊಂಡಾಡುತಿರಲು ಭಕ್ತಿಯಲಿ |
ನಾಡ ನಾಟಕ ಮಾಡಿ ಕುಣಿದು ಆಡಿಪ ದೇವ | ನೋಡಯ್ಯ ಬಾಳಕನ ಕಾರ್ಯ || ೨೨ ||
ಹರಹರ ಗುರು ಶಂಭೋ ವರದ ಜಟ್ಟಂಗಿಯ | ಗಿರಿಜಾವಲ್ಲಭನೆ ಸಲಹುವುದು |
ಕರುಣವಿರಲಿ ನಿಮ್ಮ ಚರಣಸೇವಕರೊಳು | ಹೆದರಿ ಓಡುವ ಪಿಂಡವಲ್ಲ || ೨೩ ||
ರಾಮನು ರಜತಾದ್ರಿ ಶ್ರೀ ಮಹಾದೇವನ | ಕೊಂಡಾಡಲು ಶ್ರುತಿಯಗೋಚ [ರನು] |
ನೋಡಲು ರಣವಾರ್ತೆಗೋವಿಂದನೊಡಗೂಡಿ | ಮೇಘ ಮಾರ್ಗದಿ ಬಂದು ನಿಲ್ಲೆ || ೨೪ ||
ಹರ ಬಂದು ನಿಲ್ಲಲು ಅಷ್ಟ ದಿಕ್ಪಾಲಕರು | ಗರುಡ ಗಂಧರ್ವ ಕಿನ್ನರರು |
ಹರಿಣಾಂಕ ರವಿ ಕೋಟಿ ಅಮರ ಅಸಂಖ್ಯಾತ | ಪ್ರಮಥವರೆಲ್ಲರು ಬಂದು ನೆರೆಯೆ || ೨೫ ||
ಜಗದ ನಾಟಿಕ ಬಂದು ಭಾಗದಿ ನಿಲ್ಲೆ | ತರಳ ರಾಮಗೆ ಚಲವೇರಿ |
ಒಡನೆ ಮೈಯೊಳು ರೋಮ ಶರಗಳಂದದಿ ತೋರೆ | ಬಿಡುಗಣ್ಣ ಶರಭ ರೂಪಾಗಿ || ೨೬ ||
ನಕ್ಕನು ದೇವೇಂದ್ರ ಎತ್ತಳ ಬಲವೀ[ರ] | ಲಕ್ಷವರೆಯ ಬಲದ ಮೇಲೆ |
ಹತ್ತೆಂಟು ಸಾವಿರ ಬಲ ಹೆಣ[ಗೆ] ಗೆಲು[ವುದು] | ಮೃತ್ಯುಂಜಯ ತಾನೆ ಬಲ್ಲ || ೨೭ ||
ಮೈಯಲ್ಲಿ ಕಣ್ಣೊಡೆದ ಮರುಳ ಇಂದ್ರನೆ ನಿನಗೆ | ತಿಳಿಯದೆ ಹರ ಬಂದ ನೆಲೆಯು |
ತರಳ ಮುರಿಯಲು ಹಾನಿ ತ [ನ]ಗೆ ಬಾಹುದು ಎಂದು | ಬಲದಿ ನಿಂದಿಹ ಶಿವನೆಂದ ನಾರದನು || ೨೮ ||
ಕೇಳಯ್ಯ ದೇವೇಂದ್ರ ಗೋವಿಂದ ಅಲ್ಲಿರುವ ಸಾಕ್ಷಿ | ಪಂಚೈವರ ನವಕ್ಷೋಹಿಣಿ |
ಹಾಳು ಮಾಡದೆ ಕೇಳು ಧೃತರಾಷ್ಟ್ರ ಕೌರವರ | ಪಿಳ್ಳಿಗೆ ಬಿಡದೆ ಎಳ್ಳನಿತು || ೨೯ ||
ಹರ ಸಾಕ್ಷತವಡೆಯೆ ತೃಣ ಬೆಟ್ಟವಾಗದೆ | ದೊರೆಯು ಬಡವನ ಮನ್ನಿಸಲು |
ಧರಣಿಯೊಳ್ ಧನ ಧಾನ್ಯ ತರನಾಗಿ ಪರಲೋಕ | ಗು [ರಿ] ತಾಗದಿಹನೆ ಫಲವಿರಲು || ೩೦ ||
[ಒಲಿ]ದನು ಮಯೂರನನು ವಾಹನವನು | ಏರಿದನಯ್ಯ ಮೈಯೊಳಗೆ |
ಫಲಸತ್ಯ ಈ ಮಾತು ಪರುಷ ಸೋಂಕಿದ ಲೋಹ | ತಡವೆ ಅಪರಂಜಿಯಾಗುವುದು || ೩೧ ||
ದೇವೇಂದ್ರಗುತ್ತರವ ನಾರದ ಪೇಳಲು | ಕೇಳಲು ಸುರಗಣ ಸಭೆಯು |
ಹುಡುಗನ ಗಜವೇನು ಕಡಿದಾಡಿಪ ಜಗವನ | ರೂಢಿಗೀಶನ ಮಹಿಮೆಯನು || ೩೨ ||
ಹರಗಣವಿರುತಿರಲು ಗಗನ ಮಾರ್ಗದಲತ್ತು | ಸುಗುಣರು ಕೇಳಿ ರಣವಾರ್ತೆ |
ಹಗಲು ಕತ್ತಲೆ ಕವಿದು ಹೊಗೆಯು ಬಾಣದ ಬತ್ತಿ | ಮಳ್ಗಿದ ಸೂರ್ಯನೆಂಬಂತೆ || ೩೩ ||
ಗಿರಿಗೆ ಕಾವಳ ಕವಿದ ತೆರದಿ ಮುತ್ತಲು ಬಂದು | ರಣಧೀರ ಬಲ್ಲಾಳ ಬಲವು |
ಸುರಿಯುತ ಸೋನೆಯ ಮಳೆಯ ಭರದೊಳು ಅಂಬು | ತುರಗವು [ತೂಳಿಸೆ] ನಭ ಮುಖವ || ೩೪ ||
ಮುತ್ತಲು ಕಳಿಸಿಯೆ ರೊಪ್ಪದೊಡ್ಡಿಯ ಕುರಿಗೆ | ಕಟ್ಟಿದ ತೆರದಿ ಬಂಧನದಿ |
ದಿಟ್ಟ ರಾಮನ ಮಂದಿ ತಟ್ಟಿ ತೊಡೆಗಳ ಬಡಿದು | ಇಕ್ಕಗೊಡದೆ ಹೆಜ್ಜೆ ಹೆಣಗಿ || ೩೫ ||
ಬಂದಿರೆ ಬಲ್ಲಾಳನ ಹೊಂದಿದ ಬಂಟರು | ಚೆಂದವೆ ನಿಮ್ಮ ಮನೆಯೊಳಗೆ |
ತಂ[ದಿ]ರೆ ತಲೆ ಇಂಡೆ ಕೂಳ ಕಾಗೆಗೆ ಚೆಲ್ಲಿ | ಹಿಂಡ ಕೂ[ಡಿರಿ] ನೀವು ಸಹಿತ || ೩೬ ||
ಹೊಳಕಗೆ ರಾಮನ ಮಂದಿ ಅಳುಕದೆ ಜವ ಮಾತ್ರ | ತಳ ತಳಿಸುತ ಕಾಂತಿಯೊಳಗೆ |
ತಿಳಿಯಲಿಲ್ಲವೆ ಬುದ್ಧಿ ನಿಮ್ಮರಸು ಬಲ್ಲಾಳಗೆ | ಕಳುಹಿದನೆ ಕೊರಳ ಕೊಯ್ಸಲಿಕೆ || ೩೭ ||
ನಿನ್ನೆಯ ದಿನದೊಳು ಹನ್ನೆರಡು ಸಾವಿರ ಮಂದಿ | ಮಣ್ಣಿಗೆ ಸಂದರು ಯಮಪುರಕೆ |
ಇನ್ನು ಸಾಲದೆಂದು ಯಮನೋಲೆ ಬರೆ[ದನೆ] | ಮುನ್ನಿಹುದೆ ಅವ ನಿಮಗೆ ಸ್ನೇಹ || ೩೮ ||
ಗೆದ್ದೆವೆನುತ ನಿನ್ನೆ ಕೊಬ್ಬಿಯಾಡಲು ಬೇಡ | ಒದ್ದೇವು ನೆಗೆದೆದೆ ಗುಂಡಿಗೆ |
ಬುದ್ಧಿ ತಿಳಿಯದೆ ನಿಮಗೆ ಈ ಬಾಲ ಹುಡುಗನ ನೆಚ್ಚಿ | ಮದ್ದಾನೆಯೊಳಗೆ ಕೆಣಕುವರೆ || ೩೯ ||
ಹುಷಾರಾಗಿ ಮಾತಾಡಿ ಧಣಿಗಳಿಂದ ಧಣಿಗಳಿಂದ ಹುಯ್ಯಲ | ಗೆಲಿದೆನೆಂಬುವ ಗರ್ವದೊಳಗೆ |
ಮದಗಜ ಮಲ್ಲಯ್ಯ ಮರಿಸಿಂಹ ದೇವರಸ | ತೊಡೆವರು ನಿಮ್ಮರಸನ ಲಿಪಿಯ || ೪೦ ||
ಕೊ[ಲಿ]ಸಿಕೊಳ್ಳದೆ ಆಗಲುಳಿದು ಪೋದಿರೆ ನಿಮ್ಮ | ಮಡದಿಯರ ಮುಖವ ನೋಡುವರೆ |
ಪಡಿ ತೀರಿ ಬಂದದ್ದು ದೃಢ ನಿಜ ಮಲ್ಲಯ್ಯ | ಕಡೆದಿಹನೆ ಹಾರುವ ಮೂಳ || ೪೧ ||
ಹೊಡೆ ಇವರ ಹೆಚ್ಚಾಗಿ ನುಡಿವ ಮಾತಿಲಿ ಗರ್ವ | ಪಡೆ ಮುರಿದು ಅಡರೆ ಆರ್ಭಟಿಸಿ |
ಕಡಿಕಡಿ ಎನುತಲಿ ಕಿತ್ತು ಬಲ್ಲೆಯ ಕತ್ತಿ | ತುಳಿಸಿದರು ಸಂಗಯ್ಯನೆಡೆಯ || ೪೨ ||
ವೀರ ಸಂಗಮನೆಡೆಯ ಹೊಗಲೇರಿ ಬಲ್ಲಾಳ | ರಾಯನ ಭಾವ ಮಲ್ಲಯ್ಯ |
ಮೂವತ್ತು ಸಾವಿರ ಕುದುರೆ ಬಲದೊಳಗೆ | ಸಾವಿಗಂಜದೆ ತುಳಕೊಂಡ || ೪೩ ||
ಎದೆಗಡದೆ ಸಂಗಯ್ಯ ಕೆಡಲಿಕ್ಕಿದನು ಒಂದು | ಗಳಿಗೆರಡು ಮತ್ತೆರಡು ಮಾತ್ರದಲಿ |
ಹದ ಮೀರಿ ಒಳ ಪೋಗಲು ಮೊರೆದು ಸಂಗಮನಾಥ | ತಿರುಗಿ [ಸಿ]ದ ಚೆನ್ನಾಗಿ ಬಲವ || ೪೪ ||
ಚೆನ್ನಾದ ಬಲದೊಳು ಬಾವಾಜಿ ಮಲ್ಲಯ್ಯನು ಏರಿ | ಮುನ್ನೂರು ತಲೆಗಳ ಹೊಡೆದು |
ಬ್ರಹ್ಮಲೋಕವು ಬಿಟ್ಟೆನೆನುತಲಾಗ | ಬೆನ್ನೊಡನೆ ಇರುವ ಲಕ್ಷ ಪೌಜು || ೪೫ ||
ವೀರ ಸಂಗಮರಾಯನುಳಿಯಲೆನುತ ಒಬ್ಬ | ಓಡಿಬಂದನು ರಾಮನೆಡೆಗೆ |
ಏನ ಹೇಳಲಿ ರಾಮಭೂಪ ಸಂಗಮನಾಥ | ಪೋಗುವ ಸಮಯ ಯಮಪುರಕೆ || ೪೬ ||
ಯಾವಲ್ಲಿ ಎನುತಲಿ ಕುವರರಿರ್ವರು ತಮ್ಮ | ವಾಹನ [ಮೀಟಿ ಚಬಕಿ] ಯನು |
ಮುರಾರ ಹೊಡೆಯಲು [ಮಂಕ] ವಾಹನದಂತೆ | ಏರ ಭೃಂಗ ಝೇಂಕಾರದಂತೆ || ೪೭ ||
ಬೆನ್ನಾಗಿ ಬರುತಿರ್ಪ ಬಲದೊಡನೆ ಏರಲು ಲಕ್ಷ | ಮಾನ್ಯರು ಮಾರ್ತಂಡ ತುರಗ |
ಕಾರ್ಮುಗಿಲು ಕವಿದಂತೆ ಬರುವ ಪೌಜಿಗೆ ರಾಮ | ಬ್ರಹ್ಮರಾಕ್ಷಸನಂತೆ ಪೊಗಲು || ೪೮ ||
ಪೊಕ್ಕರು ಜಾನಕಿಯ ಪುತ್ರರು ಬರುವಂತೆ | ಮುಕ್ಕಣ್ಣ ಸುತ ಶರಭನಂತೆ |
ಇಕ್ಕೆಲದೊಳು ಸವರಿ ಸಪ್ಪೆಯ [ನೆರೆ] ಕೊಂದು | ಹೊಕ್ಕಂತೆ ಕರ ಚಳಕದಲಿ || ೪೯ ||
ಕಬ್ಬು ಕದಳಿಯ ವನಕೆ ಕರಿ ನೂರು ಹಸಿದಿರ್ದು | ಬಿದ್ದಂತೆ ಬಾಚಿ ಸವರುತಲಿ |
ಉಗ್ರ ಕೋಪಗಳಿಂದ ಎತ್ತಿ ಹೊಡೆಯಲು ರಾಮ | ಇದ್ದಂತೆ ಶರೀರ ತುಂಡಾಗಿ || ೫೦ ||
ಪೂರ್ವಭಾಗ ಕಾಟ ವರುಣ ಭಾಗ ರಾಮ | ತಿರುಹುತ್ತ ತುರುಗೋಲುಗಳ |
ಹರಿಸಾಡಿ ಸವರಲು ಮರದ ನೆಲ್ಲಿಯ ಕಾಯಿ | ಉದಿರೆ ಕುಟ್ಟಿದ ಪರಿಯಾಗೆ || ೫೧ ||
ತಿರುಹುತ ಖಡ್ಗವ ಮುಂಬರಿದು [ಸೈನ್ಯದ] ಮೇಲೆ | ಕೊರೆಯುತ ಕಳಲೆಯಂದದಲಿ |
ಬಿರಿಸಿಂದ ಸೆಳೆಯಲu ಬಿಚ್ಚಿ ರಾಹುತ ತುರಗ | ಚತುರ ಭಾಗದಿ ಒರಗುವನು || ೫೨ ||
ಕರ ಮನಸು ದಣಿವಂತೆ ಹದಿನಾರು ಬೀದಿಯ ಕಡಿಯೆ | ಒರಗಲು ಹೆಣದ ಮೇಲ್ಹೆಣನು |
ಕಡಿಕೊಂಡು ಬರುತಿರ್ಪ ಮಲ್ಲ ಮಂತ್ರಿಯು ಕಂಡು | ಕಡಿಗೊಂಡ ಉರಗನ ತೆರದಿ || ೫೩ ||
ಬೆಂಬಲ ಒದರುವ ಭೇರುಂಡ[ನು] ಗಜ ಕಂಡು | ಕಂಡಿ ಕಾನನವ ಬೀಳ್ವಂತೆ |
ಬಿಂಬದೊಳಗೆ ದೇಹ [ಒಂದಾಗಿ] [ಬಾ]ಳ್ವವರು | ಬಂದರು ಕಲಿಪಾರ್ಥ ಭೀಮ || ೫೪ ||
ಬೆನ್ನಾಗೆ ಬಲ್ಲಾಳರಾಜೇಂದ್ರ ರಾಯನ ಮಂದಿ | ಹಿಮ್ಮರಳೆ ರಾಮನ ಮಂದಿ |
ಡೊಣ್ಣೆ ಬಾಣಿಯ ಮುದ್ದ ಎಮ್ಮೆಯ ಬಡಿವಂತೆ | ಹನ್ನೆರಡು ಬೀದಿಯ ಕಡಿದ || ೫೫ ||
ವೀರ ಸಂಗಮನಾಥ ಹೋಗಲೇರಿ ಕೋಟೆಯ | ಬಾಗಿಲ ಬಾಣ[ದಿ] ಕಡಿದು |
ಮಾರಿಯ ಮುಖದವರು ಮದಗಜ ಶಕ್ತಿಯರು | ನಾಯಿಗೆ ಕಡೆಯಾಗಿ ಒರಗೆ || ೫೬ ||
ಸಿಟ್ಟಿನೊಳ್ ಸಂಗಯ್ಯ ಕುಟ್ಟಲು ತಲೆ ಮುಂಡ | ಹ[ತ್ತ]ದ ತೆರದಿ ಕೊರೆಯುತಲಿ |
ಬಿಟ್ಟ ನಯನವು ಬಾಯಿ ಕಟ್ಟಿ ಮಿಸುಕದೆ ಇರ್ಪ | ನೆಟ್ಟ ಫಲ ಮರನಂತೆ ಕೆಲರು || ೫೭ ||
ಮಂತ್ರಿಯ ಮಗ ನೀಲಕಂಠರಾಯನು [ಕುಟ್ಟಿ] | ಎಂಟು ಬೀದಿಯ ಮೇಲೆ ಕಡಿಯೆ |
ಗುಂಟನೂರಮ್ಮಗೆ ಕುರಿಯನು ಕಡಿದಂತೆ | ಒಂಟಿ ಕತ್ತಿಲೆ ಸವರಿದನು || ೫೮ ||
ರಾಯ ರಾಮನ ಬಲ ರಣಧೀರ ಮನ್ನೆಯರೆಲ್ಲ | ಈ ಮೇರೆಯೊಳಗೆ ಸವರುವರು |
ಏರು [ವಡೆದು] ಹದಿನಾರು ಸಾವಿರ ತುರಗ | ಓಡಾಡುತಿರೆ ಗೋವಿನಂತೆ || ೫೯ ||
ರಾಯ ರಾಮನು ಮರಳಿ ಕರಿಯ ಪೌಜಿಗೆ ಹೊಕ್ಕು | ತಾರ ಕಡಿಯಲು ನೂರೆಂಟು |
ಮೀರಿದ ಬಲವಂತ ಮದ್ದಾನೆ ಮಲೆಯುತ | ಕೋಣನ ತೆರದಿ ಓಡಾಡಿ || ೬೦ ||
ಬಣ್ಣ ಬತ್ತಿಯ ಸುಡುವ ಜಾಣರೆಲ್ಲರ ಒಯ್ದು | ನೀರ ಹಳ್ಳಕೆ ಹಾಕಿ ಬಿಡಲು |
ಏನು ಮಾಡನು ಇವನು ಪ್ರಾಣ ಉಳಿಯದುಯೆಂದು | ರಾಮಗೆ ಬಾಣಂಬು ಮಳೆಯು || ೬೧ ||
ಏಳಲು ಸಮನರ್ಧ ಯಮನ ನಗರದ ದಾರಿ | ತಾವು ಇಲ್ಲದೆ ಇಟ್ಟಣಿಸಿ |
ಶ್ರೋಣಿತ ಪರಿಯಲು ಬಾಣತನಯನಕ್ಕೆ | ಪಾದ ಮುಳುಗಿದ ಹಳ್ಳ ತೆರದಿ || ೬೨ ||
ರಣಮಯವಾಗಲು ತಗಲಿದ ಪೌಜೆಲ್ಲ | ಗೊನೆವೊಡೆದ ಬಾಳೆಯ ತೆರದಿ |
ಒಂದೆಸೆಯೊಳಗಿರ್ದ ಮಂತ್ರಿಯು ಇದ ಕಂಡು | ಕಡೆಗಾಲ ಬಂತೀಗ ನಮಗೆ || ೬೩ ||
ಆಡಿದೆವು ಪೌರುಷನ ಕೂಳ ಕೊಬ್ಬಿನ ಮೇಲೆ | ಓಡಿದರೆ ಬಲ್ಲಾಳನೇನೆಂಬ |
ನ[ಮಗೆ] ಶೂಲವ ಕೆತ್ತಿ ಕೊಡನೆ ಆಹುತಿಯಲ್ಲಿ | ಹೋಗುವ ಪ್ರಾಣವನಿಲ್ಲಿ ಕೊಡುವ || ೬೪ ||
ಹೆಮ್ಮೆಯ ನುಡಿವಂ[ತೆ] ಬ್ರಹ್ಮ ಕೊಟ್ಟನು ಹಿಂದೆ | ಧರ್ಮರಾಯಗೆ ಮುನಿದ ಕೌರವನು |
ನಿರ್ಮಾಯವಾದಂಥ ತೆರ ನಮಗೆ ಬಂತೆಂದು | ಒಮ್ಮೆ ದೇವರಸ ಚಿಂತಿಪನು || ೬೫ ||
ಪಾಪಿಯ ಕೆಡಿಪರಾರು ಪುಣ್ಯಾತ್ಮಕ ಬದುಕಿಪರಾರು | ಭೂತಕಾರಂಗಳೆ ಸಾಕ್ಷಿ |
ಪಾಪಕ್ಕೆ ಹೊರಲಾದ ಯಲ್ಲಯಗೆ ರಕ್ಷಿಸಲು | ಹಾಕಿತ್ತು ವಿಧಿ ನಮಗೆ ಕಲ್ಲ || ೬೬ ||
ಬಲವನು ಲಯಮಾಡಿ [ಅಳಿದು] ಹೋಗಲುಯೆಂದು | ಇಳೆಯ ಕೆತ್ತಿಸುವ ಬಾಚಿಯಲಿ |
ಮಡದಿ ಮಕ್ಕಳ ಮುಂದೆ ನಗೆಗೇಡಾಗುದಕಿಲ್ಲ | ಮಡಿದು ಹೋಗುವುದೆ ಲೇಸುಂಟು || ೬೭ ||
ಇನ್ನೇಕೆ ಮಲ್ಲಯ್ಯ ಜೀವ ಮಡದಿಯ ಆಸೆ | ಬ್ರಹ್ಮಲಿಖಿತವು ತೀರಿ ಬಂತು |
ತಮ್ಮ ಮನದೊಳು ತಾವು ನಿಶ್ಚ[ಯಿಸಿ] ಕಾರ್ಯಕೆ | ಮುನ್ನೇಳ್ವ ದೆಸೆಯಿಂದಾಕ್ಷಣದಿ || ೬೮ ||
ಎರಡು ಪೌಜನೆ ಮಾಡಿ ಎಂಬತ್ತು ಸಾವಿರ ಬಲವು | ತೊರೆಯುಬ್ಬಿ ಭೋರ್ಮೊರುವಂತೆ |
ಸುರಿಯಲು ಸರಳಂಬು ಬಾಣ ಪೆರ್ಮಳೆಯಾಗಿ | ತೊರೆದು ಏರಿದರು ಜೀವವನು || ೬೯ ||
ಹೊಡೆವ ಭೇರಿಯ ಕಾಳೆ ಗುಡುಗಿನಾರ್ಭಟೆಯೊಳು | [ಹುಡಿಹುಂಡಿ] ಯಾಗಲು ಧರಣಿ |
ಹಿಡಿಗಲ್ಲು ನುಗ್ಗಾಗಿ ಗೆಂಟೆ ಶಣಬೆದ್ದು | ಪ್ರಭೆಯಡಗೆ ಡೊಳ್ಳಿನಾರ್ಭಟಕೆ || ೭೦ ||
ಮತ್ತೆ ಕೂಡಲು ರಣವು ಇತ್ತರದಿ ಸಮನಾಗಿ | ಕಿಚ್ಚು ಕಿಚ್ಚುಗಳ ಸುರಿಸುತಲಿ |
ಕತ್ತಿಗಳು ಕಣಕಟ್ಟು ಎನಲು ಕತ್ತಲೆಯೊಳು | ಎತ್ತ ನೋಡಲು ಮಿಂಚುವುಳವು || ೭೧ ||
ವೀರ ಸಂಗಮನಾಥ ಧಾರವಾಡಿಯ ಚಿಕ್ಕ | ಏರಗೊಡದೆ ಎಡಬಲನ |
ನೂರಾರು ಸರಳಂಬು ಮಾಡಿ ವಾಚಿಗೆರೆಯ | ಕೀಳದೆ ಹೊಡೆದಾಡುತಿಹರು || ೭೨ ||
[ಅ]ತ್ತಲು ರಣರಂಗ ಬೆಟ್ಟಕ್ಕೆ [ಅನಿಲ] ಬೇಗೆ | ಇಟ್ಟ ಗಾಳಿಯ ತೆರನಂತೆ |
ಹೊಕ್ಕು ಕಡಿದರು ಎನ್ನ ಹೊಳಕೆ ಬಲ್ಲಾಳನ | ಎಕ್ಕಟಿಗರು ಬಿಡಿಸಿಕೊಂಡು || ೭೩ ||
ದಕ್ಕಡಿತನದೊಳು ಮಲ್ಲ ರೋಷದಿ ಹೊಕ್ಕು | ಕೊಚ್ಚಿದ ಎರಡು ಬೀದಿಯನು |
ಸಂದು ಬೀಳಲು ನೋಡಿ ರಾಜೇಂದ್ರ ಬಲ್ಲಾಳನ | ಮಂದಿ ನೂಂಕಲು ಭೋರ್ಗರೆದು || ೭೪ ||
ಕಂಡರು ಕಲಿಪಾರ್ಥ ಪ್ರಚಂಡ ರಾಮನು ಕಾಟ | [ಕುಂಜರ] ಪದ್ಮ ಕಂಡಂತೆ |
ಮೇಘದಿ ಗುಡುಗು ಮಿಂಚೇರಿ ಗುಡುಗಿಳಿವಂತೆ | [ಮೂ] ಡಿಸಿ ಕೋಪ ಸಿಡಿಲಾಗಿ || ೭೫ ||
ಕಾಳಿಂಗಗೆರಗುವ [ಕಾಳೋರಗನೊಲು] ಬಂದು | ಏರಿದರು ಎರಡು ಭಾಗದಲಿ || ೭೬ ||
ಹೊಕ್ಕರು ಅತಿಭರದಿ ಮದವುಕ್ಕುವ ಕರಿ ಬಂದು | ಹೊಕ್ಕಂತೆ ಬಾಳೆಯ ವನವ |
[ಕಿತ್ತಿಳೆಯ] ತೆಗೆದಿಡುವ ಶಕ್ತಿ ಸಾಹಸದೊಳು | ಕೊಚ್ಚಿ ಕೊರೆವರು ಎರಡು ಕಡೆಯು || ೭೭ ||
ಲಾವಿಗೆ ಹಿಂಡಿಗೆ ಅಡಗ ಗಿಡುಗನ ಹೊಕ್ಕು | ಮೇ[ರೆ] ಯಿಲ್ಲದ ಕೊಲ್ವ ತೆರದಿ |
ಮೀರಿದ ಬಲವಂತ ವೀರಯೆಕ್ಕಟಿಗರು | ಆರುಸಾವಿರ ತೀರಿಸಲು || ೭೮ ||
ಭೇರಿಯ [ಛತ್ತರದ] ತುರಗ ವಜೀರರ | ಕಡಿಯಲು ಕಬ್ಬನರಿದಂತೆ |
[ಅಳಿದ ಇರಿದ] ತುರಗ ಸರಿ ಇರ್ವ ಪಾಲಾಗಿ | ಧರಣಿಯ ಮಣ್ಣ ಕಚ್ಚುವರು || ೭೯ ||
ಕಾಗೆಯ ಹಿಂಡಿನೊಳ್ ಖಗರಾಜ ಹೊಕ್ಕಂತೆ | [ತ]ರಿದಾ [ಗ] ಬಲ್ಲಾಳ ಪೌಜ |
ಮಾರಿಗೆ ಹೊಡೆದಂಥ ಕುರಿಗಳಂದದಿ ಕಡಿಯೆ | ತಾರ ಮಲಗಲು ಹತ್ತು ಬೀದಿ || ೮೦ ||
ಹೊಕ್ಕನು ಆಮೇಲೆ ಒಕ್ಕಲಿಗ ಮುದ್ದಣ್ಣ | ಹುಚ್ಚ ಕೋಣನು ರೊಚ್ಚಿಗೆದ್ದು |
ಹೊಕ್ಕು ಕದಳಿಯ ತೋಟ ಇಕ್ಕೆಲದಿ ಬಡಿವಂತೆ | ಎತ್ತಿ ಇಳುಹಲು ದೊಣ್ಣೆಯಲಿ || ೮೧ ||
ವೀರ ಸಂಗಮದೇವ ತಾನೊಂದು ಮೂಲೆಯ | ಭಾಗದೊಳಗೆ ಹೊಗಲೇರಿ |
ತೋಳ ಕುರಿಯೊಳು ಹೊಕ್ಕು ಸೀಳಿ ಈಡಾಡುವ | ಮೇಲೇರಿ ಕಡಿವ ಸಾವಿರವ || ೮೨ ||
ರಾಯ ರಾಮನೆ ಅರ್ಧ ಧೀರನು ಎಡಗೈಯ | ಮಾದಿಗ ಹಂಪನು ಪೊಕ್ಕು |
ಕಾಲ್ವಿಡಿದು ಒಗೆದನು ನೊಂದರು ಸಾವಿರ ಬಲ | ಮೂಗನರಿದ ಮುಸು[ಡಿ] ಸಹಿತ || ೮೩ ||
ಗಂಡುಗೊಡಲಿಯ ಸರ್ಜ ಬಂದು ಹೊಗಲೇರಿದ | ಹನ್ನೊಂದು ಸಾವಿರ ಬಲದೊಳಗೆ |
ತುಂಡೇಳೆ ಹೊಡೆವನೀ ಬಂದ ಹಂಪನುಯೆಂದು | ಬಂದು ಮುತ್ತಿದನು ಭೋರ್ಗರೆದು || ೮೪ ||
ಹತ್ತಿತು ರಣರಂಗ ಹಂಪನ ಎಡಬಲದಿ | ಮುತ್ತಿತ್ತು ಜೇನ್ನೋಣದಂತೆ |
ಸಿಕ್ಕಿದ ರಣಧೀರ ಹಂಪನೆನ್ನುತ ಬಂದು | ಹೊಕ್ಕನು ವೀರಸಂಗಯ್ಯ || ೮೫ ||
ಗಂಡುಗೊಡಲಿಯ ಸರ್ಜ ಭೇರುಂಡನಂದದಿ ಹೊಡೆದ | ಪ್ರಚಂಡ ರಾಮನ ಪೌಜಿನೊಳಗೆ |
ದಿಂಡನು ಅರಿದಂತೆ ಮೂರು ಬೀದಿಯ ಕಡಿಯೆ | ಹಿಂದಾಗೆ ಹಂಪ ಸಂಗಮ || ೮೬ ||
ವೀರನು ಬಲವಂತ ರಾಯ ಬಲ್ಲಾಳನು | ಮಾ[ವ]ನ ಮಗನು ಬಿರಿದಾಂಕ |
ತಾಯಿಗೆ ತಾನೊಬ್ಬ ತರಳ ಕೋವಿದ ರನ್ನ | ಹೊಗಲೇರಿದ ಹನುಮಂತ || ೮೭ ||
ಕಡಿಯೆನುತ ಕಾಕ್ಹೊಡೆದು ಮುಂದಕೆ ಮೆ[ಟ್ಟೆ] | ಮಡುಗಲು ಬಲವು ಜಜ್ಝರಿಸಿ |
ಹಿಡಿದೊಗೆಯುತ ಒಂಟೆಯ ಕುದುರೆ ಮಂದಿಯ | ಸಾಹಸದೆ ಬಡಿದ ಸಾವಿರವ || ೮೮ ||
ಹಂಪಗೆ ಹನುಮಗೆ ಹತ್ತಲು ಜಗಳವು | ಸೊ [ಕ್ಕಾ]ನೆ [ಹಿಂಸ]ಡು ಮಲೆವಂತೆ |
ಒಕ್ಕಲಿಗರ ಮುದ್ದ ಕೊಡಲಿ ಸರ್ಜಗೆ ಜಗಳ | ಹತ್ತಲು [ಹುಲಿವ್ಯಾ]ಘ್ರನಂತೆ || ೮೯ ||
ವೀರಸಂಗಮನಿಗೆ ಪ್ರಧಾನಿ ದೇವರಸಗೆ | ಕೂಡಿತ್ತು ಹತ್ತಿದ ರೋಷದಲಿ |
ಹೋರುತಿರಲು ಇವರು ಸೀಗೆ ಬಾಳೆಯ ತೆರದಿ | ರಾಮ ಕಾಟಣ್ಣ ಒಂದೆಸೆಯ || ೯೦ ||
ಹೊಡೆದರು ತಮ್ಮೆರಡು ಕರ ಮನಸು ದಣಿವಂತೆ | ಹರದಾರಿ ಅಡ್ಡಗಲ ಭೂಮಿ |
ರಣಮಯವಾಗಲು ನಮ್ಮ ಹಂಪನು ಮುದ್ದ | ಬಿರಿದಾಂಕ ಸಂಗಯ್ಯ [ಒ]ಳಗೆ || ೯೧ ||
ಅನಿತರೊಳಗೆ ಒಬ್ಬ ಚರನು ಹರಿವುದ ಕಂಡು | ಎರಗಿ ಬಿನ್ನವಿಸೆ |
ಬರಿದಿನ ಸಂಗಯ್ಯ ಭೀಮ ಶಕ್ತಿಯ ಹಂಪ | ಮುಳುಗುವರು ಮುದ್ದಣ್ಣ ಸಹಿತ || ೯೨ ||
ಯಾವಲ್ಲಿ ಎನುತಲಿ ರಾಯ ಕಾಟಣ್ಣನು | [ಭೇರುಂಡನುಗ್ರದಿ] ರಾಮ |
ಆಹತ ತಾಪದ ಸಿಂಹದಾರ್ಭಟೆಯಲ್ಲಿ | ಈಡಾಡುತಿರಲು ತಲೆಗಳನು || ೯೩ ||
ಕಾಟಣ್ಣ ಕಟ್ಟುಗ್ರಾಟೋಪದೊಳಗೆ ಪೊಕ್ಕು | ಮೇಕೆಯ ಶಿರವನರಿದಂತೆ |
[ತಾಕಿದ] ಮೂರಾರು ಬೀದಿಯ ಸವರುತ್ತ | ಕಾಕೆದ್ದು ಪೌಜನ್ನು ಹೊಡೆಯೆ || ೯೪ ||
ಸಿಟ್ಟಿನೊಳ್ ರಣರಾಮ ಕುಟ್ಟಲು ತಲೆ ಬುರುಡೆ | ಹತ್ತಿದ ತೆರದಿ ಶಿರವರಿದು |
ರೆಪ್ಪೆ ಮುಚ್ಚದೆ ಕಣ್ಣ ನೆಟ್ಟ ಕಲ್ಲಿನ ತೆರದಿ | ನಿಂದಿಪ್ಪ ಹೆಣ ಕೆಡೆಯದಂತೆ || ೯೫ ||
ಕಡಿಕಡಿಯೆನುತಲಿ ಸಿಡಿಲಾರ್ಭಟೆಯೊಳು | ಹೊಡೆಯಲು ಹನುಮನ ತಲೆಯ |
ಒಡೆಯ ಚೆನ್ನಿಗರಾಮ ನೀವಿಲ್ಲದಿರ್ದಡೆ ಎನ್ನ | ಬಿಡನೆಂದು ಹಂಪ ಜಾಡಿಸಿದ || ೯೬ ||
ಗಾಯವಡೆದ ವ್ಯಾಘ್ರ ಗೂಡಿನೊಳ್ಪೊಕ್ಕಂತೆ | ರಾಯ ಕಾಟಣ್ಣನು ಪೊಕ್ಕು |
ಮೀರಿದ ಬಲವಂತ ಕೊಡಲಿ ಸರ್ಜನ ತಲೆಯ | ಹಾರಿಸಿ ಕಂಡೆಯಲಿ ಕಡಿದ || ೯೭ ||
ಮುತ್ತಿದ ದಳವೆಲ್ಲ ಇತ್ತರಕೆ ಮಲಗಿತ್ತು | ಸೊಕ್ಕು ನಿದ್ರೆಯು ಬಂದ ತೆರದಿ |
ವ್ಯರ್ಥವಾಯಿತು ಎಂದು ಮಲ್ಲಮಂತ್ರಿಯು ಕಂಡು | ಸಿಕ್ಕದೆ ಕೆಡೆದೋಡುತಿರಲು || ೯೮ ||
ವೀರ ಸಂಗಯ್ಯನು ಬೆನ್ನ[ಟ್ಟಿ] ಬಾಣಿಯ ಮುದ್ದ | ಊರ ಬಾಗಿಲಕಟ್ಟಿ ಪಿಡಿಯೆ |
ಮಾದಿಗ ಹಂಪನು ಜೋಡಿಸಿ ಹಿಂಗೈಯ | ಸೇದೆ ಇಬ್ಬರನು ಪಿಡಿತರಲು || ೯೯ ||
ರಾಯ ರಾಮನೆ ರಣಶೂಲ ಮಾರ್ತಂಡನೆ | ಲಾಲಿಸು ರಾಮಭೂಪಾಲ |
ರಾಯ ಬಲ್ಲಾಳನ ಪ್ರಧಾನಿ ಮಲ್ಲನ ತಂದೆ | ಮೂಗನರಿವೆನು ಕೊಡು ವೀಳ್ಯೆ || ೧೦೦ ||
ನಕ್ಕನು ರಣವಿಜಯ ತಕ್ಕುದಲ್ಲವೊ ಹಂಪೆ | ಗೊತ್ತುಗಾರರ ಕೊಲ್ಲುವುದು |
ಸಿಕ್ಕಿದವನ ತಲೆಯ ಕೊಲ್ಲೆ ಮೆಚ್ಚನು ಶಿವನು | ಕೊಟ್ಟು ಪಾರದಿ ಪಾಳ್ಯ ಕಳುಹು || ೧೦೧ ||
ತಣ್ಣಗಾಗಲು ರಣವು ತಗ್ಗು ತೆವರು ಹಳ್ಳ | ಕೆಮ್ಮುಗಿಲಂತೆ ಕಾಣುವುದು |
ಧರ್ಮಕಾಳೆಯ ಪಿಡಿಸಿ ಧುರದೊಳು ಪಿಡಿದವರ | ಭಯ ಭೇಡಿ ಪೋಗಿರೆಂದೆನುತ || ೧೦೨ ||
ರಾಯ ರಾಮನು ತಿರುಗೆ ಬೇರೊಂದು ಹೊಸ ಪಾಳ್ಯ | ಮೂಡಲ ದಿಕ್ಕಿಗೆ ಇಳಿದು |
ರಾಜೇಂದ್ರ ಕಂಪಿಲನ ಆತ್ಮಜರು ಸದರಲಿ ಕುಂತು | ಶೋಧಿಸುತಂದವ [ರು]ರಣವ || ೧೦೩ ||
ನೀಲಕಂಠನೆ ಮಂತ್ರಿ ಲಯವಾದ ಮನ್ನೆಯ | ಲಾವಣಕರಿಸು ಡಿಸುವ |
ಸ್ವಾಮಿ ಒಳಿತು ಎಂದು ತಳವಾರಗೆ ನೇಮಿಸಲು | ಆಗ ಶೋಧಿಸಿ ತಲೆಯ ತಂದು || ೧೦೪ ||
ಬಲುಮೆ ಮನ್ನೆಯರೊಳು ಯಾರು ಬಿದ್ದರುಯೆಂದು | ಕಳೆಗುಂದಿ ರಾಮ ಕೇಳುವನು |
ಮಲೆವ ರಾಯರ ಗಂಡ ಲಾಲಿಸೆನುತ ಮಂತ್ರಿ | ದಳದಳ ನೋಡಿ ಪೇಳಿದನು || ೧೦೫ ||
ಭಾಪುರೆ ಬಲವಂತ ಬಳ್ಳಾರಿ ಲಿಂಗನು ಸತ್ತ | [ರಾ] ಚೂರ ತಮ್ಮನು ಬಿದ್ದ |
ಹಾ[ರು]ವ [ಚಿಕ್ಕಯ್ಯ] ಹರಕೂತೆಯ ಜಗಳ[ದ] | ಪ್ರೀತಿಯ ಮಲ್ಲಯ್ಯ ಬಿದ್ದ || ೧೦೬ ||
ದಾರವಾಡಿಯ ಚಿಕ್ಕ ಧರ್ಮಹುರಿಯ ಲಕ್ಕ | ಸೇರಿದರು ವೈಕುಂಠವಾಸ |
ನೂರಾಳ ಗುರಿಕಾರ ಹಳ್ಳಿಕಾರನು ಬಿದ್ದ | ಒಂದಕ್ಕೆ [ಆಳೊಂದು] ಬೀಳೆ || ೧೦೭ ||
ತಾಳಿ ಮನದೊಳು ಚಿಂತೆ ಅನು [ವಾಗಿದ್ದರು] ಬೀಳೆ | ತೀರಿತು ಮಿತಿಗಾಲ ಪ್ರಾಪ್ತಿ |
ಸಾಯದೆ ಉಳಿವಂಥ [ಜೀವುಳ್ಳ]ರಿಗೆ ಉಂ[ಟು] | ಊರ ಸಂತೆಗೆ ಹೋದ ತೆರದಿ || ೧೦೮ ||
ಸೋಲು ಗೆಲುವೆ ಇದಕೆ ಕಾಯಿಗೆ ಹಣ್ಣಾಗೆ | ತೀರಲು ತಂದಂಥ ಪಡೆಯು |
ಸೇರುವರಲ್ಲದೆ ಇರುವ ಜೀವನವಿಲ್ಲ | ಬೇಗದಿ ಅಗ್ನಿಯ ಕೊಡಿಸು || ೧೦೯ ||
ಸಾವಿರದ ಐನೂರು ಲಾವಣವ ಬರಸಿದ | ಗಾಯ [ಕಾ]ಯಗಳು ಮುನ್ನೂರು |
ರಾಯ ಕಂಪಿಲನೆಡೆಗೆ ಬರೆದು ಲೇಖನ ಕಳುಹಿ | ತಾನಿರಲು ರಾಮ ಸುಖದೊಳಗೆ || ೧೧೦ ||
ರಾಯ ರಾಮನ ಮಂದಿ ಶೃಂಗರವಾಗಿ ನಡೆತಂದು | ಬೊಪ್ಪ ಲಗ್ಗೆಯ ಪಾಲಿಸು ಶೂರ |
ಹಾಕುವೆವು ಹ[ಲ್ಲಯೆ] ಹಳೆಬೀಡ ಪಟ್ಟಣಕ್ಕೆ | ಅಭಯ ಪಾಲಿಸೆಂದು ಕರಮುಗಿಯೆ || ೧೧೧ ||
ಸಮಯ ಕಾಲವನರಿತು ಗೆಲಬೇಕು ವೈರಿಯ | ಮುಳುಗು ಮುಗ್ಗಿದ ಕಾಲದೊಳಗೆ |
ಸರಿಬಂದು ಗುಂಡಿಯ[ಲಿ] ಕೆಡೆದಾಗ ಜನ [ರೊಂ]ದು | ಇಡಬೇಕು ಕಲ್ಲೆಂಬ ಗಾದೆ || ೧೧೨ ||
ಕೊಡಬೇಕು ನಮಗವನು ತುರಗ ಆನೆಯ [ಲ]ಕ್ಷ | ನಡೆನುಡಿವ ಮಂತ್ರಿ ಮನ್ನೆಯರ |
ಬಡವ ಬಗ್ಗರ [ಕೂ]ಲಿಗೆ ನಡೆಸಯ್ಯ ಮಧ್ಯಾಹ್ನ | ದೊಳಗಾಗಿ ಅರಸ ತರುವೆವು || ೧೧೩ ||
ಇಂದಿಗೆ ಸೈರಿಸಿ ಮುಂಜಾನೆ ಕೊಡುವೆನು | ನೊಂದವರ ಬಹಳ ನೋಯಿಸಿದರೆ |
ಮುಂದುಂಟು ಯಮಬಾಧೆ ಕೊಡದಿರಲು ಕಪ್ಪವ | ಬೆಳಗು ಕಾಲದಿ ವೀಳ್ಯ ಕೊಡುವೆ || ೧೧೪ ||
ಮಂದಿ ಮಕ್ಕಳಿಗೆಲ್ಲ ತಮಂಧ ಬುದ್ಧಿಯ ಪೇಳಿ | ಇಂದವನುತ್ತರ ನೋಡುವೆನು |
ಚೆಂದದಿಂ ಮನ್ನಿಸಿ ಕಳುಹೆ ಚೆನ್ನಿಗರಾಯ ಆ | ನಂದದಿ ಪಾಳ್ಯೆಯದಿ ಇರಲು || ೧೧೫ ||
ಲಾಲಿಸಿ ಬಲ್ಲಂಥ ಜ್ಞಾನವುಳ್ಳವರೊಲಿದು | ಮೇಳೆ ಬಲ್ಲಾಳ ಪ್ರತಾಪ |
ಕೇಳಲು ರಣದೊಳು ಉಳಿದ ಮಂದಿಯ ಧರ್ಮ | ಕಹಳೆಯ ಸ್ವರವು ಕರ್ಣದಲಿ || ೧೧೬ ||
ಹಳ್ಳಕೊಳ್ಳವ ಬಿದ್ದು ಮುಳ್ಳು ಬೇಲಿಯಲಿರ್ದು | ಅಲ್ಲಿ ನೋಡುವರು ತಲೆಯೆತ್ತಿ |
ಬಲ್ಲವರು ಹತ್ತೆಂಟು ಹೆಣದೊಳಗೆ ಮಲಗಿರ್ದು | ಮೆಲ್ಲನೆ ಎದ್ದು ಸಾಗುವರು || ೧೧೭ ||
ಸಿಕ್ಕದೆ ಓಡಿದ ಹೊಕ್ಕ ಮಂದಿಯು ಬಂದು | ಬೆಟ್ಟ ಗುಡ್ಡವನೇರಿ ನೋಡಿ |
ಕಟ್ಟಿಗೆ ಆಯ್ವಂತ ಗೊಲ್ಲರ ತೆರದೊಳು | ಬೆಚ್ಚಿ ಬೆದರುವರು ರಣ ಕಂಡು || ೧೧೮ ||
ಗಿಡ ಮೆಳೆಗಳ ಬಿದ್ದು ಕೆಲರು ಬಲ್ಲಾಳನ | ವಾಲಗ ಸಾಕು ದಮ್ಮಯ್ಯ |
ಜೀವ ಇಂದಿಗೆ ಉಳಿದು ಹೋಗಿ ನಾಡಿನ ಮೇಲೆ | ಬೇಡಿ ಉಂಡರೆ ಹೀನಯವೇ || ೧೧೯ ||
ಏಳೂರ ತಿರಿಯಲು ಸೇರು ಹುಟ್ಟಿದ ಮೂಳ | ಮಾಡಬೇ[ಕೇನು] ಸಂಬಳವ |
ನೋಡಯ್ಯ ಈ ಕರ್ಮ ಜೇನಿಗೆ ಕಿಚ್ಚಿಟ್ಟ | [ತೆರನಾ] ಯಿತಯ್ಯ ಲಕ್ಷಜೀವ || ೧೨೦ ||
ಹರಹರ ಈ ಪಾಪ ಧರೆಯೊಳಗೆಲ್ಲುಂಟು | ಕುರಿಗಿಂದ ಕಡೆಯೆ ಈ ಜನ್ಮ |
ದುರಗಿಯ ಹೆಸರ್ಹೇಳಿ ಹರಕೆಯವರು ಕಡಿದ | ತೆರನಾಯಿತಲ್ಲ ಈ ಜಗಳ || ೧೨೧ ||
ತೋಳು ರಟ್ಟೆಗಳರಿದು [ಮೇಲೆ] ಮುಸುಡಿಯ [ಮೇಲೆ] | ಜೋರಿಡುತ ರಕ್ತಮಾಂಸಗಳನು |
ನೀರ ಕಾಣುತ ಕುಡಿದು ಗಾಯ ಸೊಕ್ಕಲು ಒರಗಿ | ಹೋದರು ಕಡೆ[ಗೆ]ಜಲದಲ್ಲಿ || ೧೨೨ ||
ಕೊರಗುತ ಸೊರಗುತ ಒರಗುತ ಬರುವರು | ಹರವಿ [ಗಡಿಗೊ] ಡೆದಂತೆ ರಕ್ತ |
ಸುರಿದು ಬೀದಯ ಒಳಗೆ ಅಡಗಿ ಮನೆಗಳ ಪೊಕ್ಕು | ಪ್ರಾಣಬಿಟ್ಟಾರು ಹಲಕೆಲರು || ೧೨೩ ||
ದಂಡೆಲ್ಲ ವಿಪರೀತ ಒಂದಾಗಿ ಬರಲೂರ | ರಂಡೆಯರ ಬೊಬ್ಬೆಯಾರ್ಭಟಿಸಿ |
ಕೆಂಡವ ತುಳಿವರೆ ಅಂಗಾಲ ಉರಿನೆತ್ತಿ | ಗೊಂಡಂತೆ ನಾರಿಯರು ಹೊರಳೆ || ೧೨೪ ||
ಕಟ್ಟದೆ ಮಂಡೆಯ ಬಿಚ್ಚಿದ ಕೂದಲು | ಕಟ್ಟಿಕೊಂಬುತ ಎದೆ ಬಾಯಿ |
ಕೆಟ್ಟೆ ಎಮ್ಮಯ ಗಂಡ ಸತ್ತನೆ ಯಮನೂರ | ಬಿಟ್ಟಿ ಹೋದನೆ ತಿರುಗದಂತೆ || ೧೨೫ ||
ಬೀಡು ಸಾಲಿನ ಒಳಗೆ ಕೇರಿ ಮನೆಗಳ ಸಂದಿ | ಊರೆಲ್ಲ ಕೋಳಾಹಳ ಎದ್ದು |
ಯಾರು ಉಳಿಯದೆ ಎಮ್ಮ ಭಾವ ಮೈದುನ ಸತ್ತ | ಆಡೊ ಮಕ್ಕಳ ಕೊರಳ ಸುತ್ತಿ || ೧೨೬ ||
ಹಸುಳೆಯರು ಫಲ[ವ]ಕ್ಷ ಮುಖವ ಕಾಣದೆ ಹೆಣ್ಣು | ಬಸವಳಿದು ಬಡಕೊಂಡು ಎದೆಯ |
ಕುಸುಮಬಾಣನ ತಲೆಯ ಕಾಣದೆ ಸತಿಯರು | ದೆಸೆಗೆಟ್ಟು ಸಾವಿರ ಬೊಬ್ಬೆ || ೧೨೭ ||
ಕೋಮಲ ಕಣ್ಣು ಕಂಠೀರವ ನಡುಮಧ್ಯ | ಬಾಳೆಯ ತಳಿರಂತೆ ವದನ |
ಬರಲಾಗಿ [ಒಂದೆಂಟು] ಮಾಸದ ಸತಿಯರು | ಸೂಸಲು ದುಃಖ ನಯನದಲಿ || ೧೨೮ ||
ಚಪಳೆಯರು ಚೆಂದುಟಿಯ [ಮಿನುಗಿ ವರ] ಪುರುಷನ | ರತಿಗಂಡು ಒಂದೆರಡು ಫಲ [ದ] |
ಕಕುಲಾತಿ [ತಳೆ] ದಂಥ ಕಾಂತೆಯರು ಮೂರೆರಡು | ದಶಸಾವಿರವೆಣ್ಣು ದುಃಖದಲಿ || ೧೨೯ ||
ಪತಿಯಳಿದು ಸಂತಾನ ಗತಿಗೊಂಡು[ತನ್ನಿರ್ವ] | ಸುತರುಳಿದ ರಂಡೆಯರ ಬೇಗೆ |
ಮೃತವಾದನಯ್ಯಯ್ಯೊ ಮ[ಗು]ವಿಗೆ ತಿಂಗಳು | ಸೊಸೆ ಮಗನ ಕೈಗೆ ವಾರ್ಯಾಗಿ || ೧೩೦ ||
[1] + ಬಲ್ಲಾಳನ ಮೂರನೆ ಸಂಧಿ (ಬಲ್ಲಾಳನ ಮೂರನೆ ಜಗಳ) ಶ್ರೀ ಗುರು ಚೆನ್ನಮಲ್ಲ ಶ್ರೀ ವಿರುಪಾಕ್ಷಲಿಂಗಾಯ ನಮಃ || (ಮೂ)
Leave A Comment