ಹೊರಳುತ ಹುಡಿಯೊಳು ಅರೆಬಾಳ ಬರೆದಳೆ | ಮುಂಡೆ ಕೆರೆಯನು ಒಡೆದಂತೆ |
ಹರಿದು ನಯನದ ಜಲವು ಭೂಮಿಯು ಕೆಸರೇಳೆ | ತರಳೆಯ[ರ] ಬೊಬ್ಬೆ ಈ ತೆರದಿ || ೧೩೧ ||

ಮಡದಿಯಲ್ಲಿನ ಕೈಯ ಮುಖದ ಮೇಲಣ ಮೀಸೆ | [ಒತ್ತಿ] ಬರುವ ಕೆಮ್ಮೀಸೆ |
ಬಿದಿಗೆ ಚಂದ್ರನ ರೂಪ ಸುಗುಣನಳಿದ ಮೇಲೆ | ಹೊರೆವುದೆ [ಹೀನ] ಹೊಟ್ಟೆಯನು   || ೧೩೨ ||

ಸತ್ತುದು ನಿಶ್ಚಯವೆ ಮತ್ತೊಮ್ಮೆ ಹೇಳಿರೊ | ಕುಕ್ಕುವೆ ಕಲ್ಲಿಗೆ ಬಳೆಯ |
ದತ್ತಗೇಡಿಯು ನಿ[ನ್ನ] [ಬೇಡೆ ನಾ] ಸಂಬಳವ | ಕತ್ತೆ ಸೂಳೆಯೆ ಹೋಗೆಂ[ದೆ]        || ೧೩೩ ||

ಸಂಬಳವ ಬಿಡಿ ಪಾಪಿ ಆರಂಬ ಮಾಡೆನಲು | ಕಂಡಿ ಬಗ್ಗದೆ ಕಡೆ ಮುಳಗಿ |
ಹೆಂಡತಿಗೆ ರಾಟಿಯು………. | ಗಂಡನೆ ಕಾಡೇಳು ಮಣ್ಣ                              || ೧೩೪ ||

ಸಾವ ಪ್ರಾಯವೆ ಅಕ್ಕ ಆರು ತಿಂಗಳು ಕಟ್ಟಿ | ನೀರಬಾವಿಗೆ ಹಾಕಿಬಿಡಲು |
ಹೋಗಬ[ಹುದೆ] ಜೀವ ಬೀಜ ಮೊದಲಿಗೆ ಒಂದು | ಮುಕ್ಕವಾಗದೆ ಮನೆ ಹಾಳು      || ೧೩೫ ||

[ಕೆಂಡ]ವೆ ಬಂದವರು ನಿರ್ಧರವ ಪೇಳಿರೊ | [ಹೊಂದಿ] ಕೊಂಬೆನು [ನನ್ನೋಪ] |
ಸಿದ್ಧವಾ [ದುದು] ಎಂದು ಒಬ್ಬ ನಾರಿಯು ಪೇಳೆ | ಬಿದ್ದಳು ಕೊಂಡ ಬೆಂಕಿಯನು      || ೧೩೬ ||

ಸಾಯಲೇತಕೆ ಅಕ್ಕ ಬಾಳಲಾರದ ಪಾಪಿ | ಹೋದರೆ ಅಂಜಿ ಹಯ ಪಿಡಿದು |
ವೇಳೆಗಳೆವೆನೆಂದು ಪಡಿ ತೀರೋವನ್ನಕ ಒಬ್ಬ | ನಾರಿ ಹೋದಳು ತನ್ನ ಮನೆಗೆ      || ೧೩೭ ||

ಪಾಪಿ ಪ್ರಧಾನನ ಮಾತ ಕೇಳಿ ಬಲ್ಲಾಳರಾಯ ರಣ | ಭೂಪ ರಾಮನ ಮೇಲೆ ಕಳುಹಿ \
ದೋತ್ರ ಹಿಂಡುವ ವಿಪ್ರ ಜಗಳದೆಗೆ[ದ] ಮೂರು | ಧಾತ್ರಿಯೊಳಗೆ ಕಾಣಲಿಲ್ಲ          || ೧೩೮ ||

ಎನ್ನ ಪುಣ್ಯವ ಕೇಳೆ ಮನ್ನೆ ಜಗಳದಿ ಮಗನು | ನಿರ್ಣಯವಾದ ಸುಡು [ಬಾಳು] |
ಮಣ್ಣ ಬಳೆಗಳು ಬೇಡವೆನ್ನುತ ಮುದಿರಂಡೆ | ಕಲ್ಲ ಹಾಕಿದಳು ಗಂಡನಿಗೆ              || ೧೩೯ ||

ಸಾಲ ಮುಂಡೆಯರಿವರು ಒಂದೆ ಆಗಲಿ ಎಂದು | ಹಾಳಾದ ಬ್ರಹ್ಮ ನಿರ್ಣಯವು |
ಕಾಲನ ಪುರವನು ಸಾನಂದಮುನಿ ಲಯಮಾಡಿ | ಬೇಡಿದನು ಹರನು ಯಮನೊಡನೆ        || ೧೪೦ ||

ಕಂಡವೆ ಕನಸಿನಲಿ ಗಂಡರ ರೂಪ[ವು] | [ನೊಂ] ದು ಬೈದನೆ ಒಂದು ದಿವಸ |
ಮಂಡೆ ಕೂದಲು [ಬಾಚಿ] ವಾಲಿ ದಂಡೆಯ ಮುಡಿವ | ಭಂಡಾ[ರ] ಬಯಲಾಯಿತೆಮಗೆ       || ೧೪೧ ||

ತಿಳಿಯಲರಿಯನೆ ಅಕ್ಕ ಅರಸು ಬಲ್ಲಾಳರಾಯ | ಮೊದಲೆ ಕಾಳಗದಿ ಶುಭ ನಷ್ಟ |
ಬದಲಾಗಿ ಕಳುಹಲು ತುರುಗಾಯ್ವ ಬಲ್ಲಗೆ | [ನ] ಡೆಯ [ದೆ] ಧರೆಯೊಳಗೆ ಹತ್ಯ     || ೧೪೨ ||

ಬಾಲೆಯರು ಈ ತೆರದಿ ಅಳಲಾಪದ ಪದ | ಕೇಳುತ ಬಲ್ಲಾಳರಾಯ |
ತಳಮಳಗೊಳುತಲಿ ತನ್ನ ಮನದೊಳು ಚಿಂತೆ | ಅರಗಿನಂದದಿ ಕ[ರಗು] ವನು      || ೧೪೩ ||

ಹೆಣ್ಣುಗಳ ಆರ್ಭಟೆಯು ತಣ್ಣಗಾಗಲು ಪೋಗಿ | [ಮು]ನ್ನವರು [ಮನೆಯ] ಸೇರುವರು |
ಇನ್ನೇನು ಗತಿ ಮುಂದೆ ರಾಮ ಪುರವನು ಮುತ್ತೆ | ಎನ್ನುತ ರಾಯ ಚಿಂತಿಸಿದ        || ೧೪೪ ||

ಬುದ್ಧಿ ತಿಳಿಯದೆ ಬಳಿಕ ಬಲ್ಲವ[ರ] ನುಡಿಗೇಳಿ | ಒಳ್ಳೆವನಾಗುವ ಮನುಜ |
ಯಲ್ಲರಸು ಪೇಳಿದ ಬಲ್ಲಂಥ ಕಾಲ್ಗತಿಯ | ಕಾಳ [ವ] ದೇವರಸ ಪೇಳಿದನು          || ೧೪೫ ||

ಹಿರಿಯರ ಮಾತುಗಳ ಕಳೆದು ನುಡಿದರೆ [ಅಂ]ದೆ | ವಿಧಿ ಬಂದು ಆತುಕೊಂಡಂತೆ |
ಚದುರ ಪ್ರಧಾನಿಯ ಮನೆಯ ಕಾವಲ ತೆಗೆಸಿ | ಕರೆತನ್ನಿರೆನಲು ಚರರೊಡನೆ         || ೧೪೬ ||

ಬಂದು ಊಳಿಗದವರು ಮಂದಿ ಕಾವಲ ತೆಗೆದು | ವಂದಿಸಿ ಮಂತ್ರಿಗೆರಗಿದರು |
ಬಂದದ್ದು ವಿಷಗಳಿಗೆ ಇಂದು ಎನ್ನುತ ರಾಯ | ಬರಲು ಪೇಳಿದರು ಬೇಗದಲಿ         || ೧೪೭ ||

ಆಗಲೆನ್ನುತ ರಾತ್ರಿ ಸಾಗಿ ಬರಲು ಭೂಪ | ರಾಯ ಬಲ್ಲಾಳನಿದ್ದೆಡೆಗೆ |
ಜೋಡಿಸಿ ಕರಮುಗಿದು ಮಂತ್ರಿ ಕೈಯನೆ ಪಿಡಿದು | ರಾಯ ಬಲ್ಲಾಳ ಕುಳ್ಳಿರಿಸಿ        || ೧೪೮ ||

ಮಂತ್ರಿಗಳರಸನೆ ಮಾಣಿಕ್ಯ ನವರತ್ನ | ಚಿಂತಾಮಣಿಯು ಜಾಣ್ಮೆಯಲಿ |
ಮುಂಚೆ ನಿನ್ನಯ ಮಾತ ಮೀರಿ ನಡೆಯಲು ಪುರಕೆ | ಕಂಟಕ ಬಂತಯ್ಯ ಮಂತ್ರಿ     || ೧೪೯ ||

ಆಡಬಹುದು ಭೂಪ ಅಂಜುವೆ ನಿಮ್ಮಡಿಗೆ | ಕೋಡಗ ಲೆಂಕೆಯ ಸುಡದೆ |
ರಾವಣನ ತಮ್ಮ ವಿಭೀಷಣ ಪೇಳಲು | ಕೂಡಿತೆ ಬುದ್ಧಿ ದಶಶಿರಗೆ                     || ೧೫೦ ||

ಕೆಡಬೇಡ ಸೀತೆಯ ಬಿಡುಯೆಂದು ನುಡಿಯಲು | ಬಡದಾಸ ಹರಿಗಿವನೊಳಗೆ |
ಪಿಡಿದು ನೂಕಿಸಿದಂತೆ ತೆರ ಗಾದೆ ಎನಗಾಗೆ | ಬದಲ ಪೇಳ್ವರೆ ಭಯ ಸ್ವಾಮಿ        || ೧೫೧ ||

ಸಿಟ್ಟು ಬೇಡೆಲೆ ಮಂತ್ರಿ ಪಟ್ಟದ ದೊರೆಗಳು | ಎತ್ತಿದವರ ಕೈಕೂಸು |
ಹಿತ್ತಾಳೆ ಕಿವಿ ಮೂಲ [ಶರೀರವು] ಅಪರಂಜಿ | ತತ್ವ ಸಾರದ ಮಾತು ಸುಳ್ಳೆ          || ೧೫೨ ||

ಅಂಬು ಅಲಗಿ [ನ ಮೊ] ನೆಗೆ ಮುಂದುವರಿ [ದ] ಚಾಡಿ | ಹಿಂದಣಾಗಮವ ಕೇಳ್ ಭೂಪ |
[ಕಡು] ಜಗಳ [ವ] ಹ [ಣ್ಣೆ] ಶಕುನಿ ಪಾಂಡವರಿ [ಗು] | ಕೌರವ [ಗು] ಒಂದು ತೆರನಾಗೆ        || ೧೫೨ ||

ಚಾಡಿಯಿಂದಲಿ ಕೆಟ್ಟ ಮೂಢ ಕಾರ್ತಿಕನು | ಆಡಿದಾಕ್ಷಣನ ಕೆಟ್ಟ ಗರ್ವ |
ಬೇಡಿ ವೈರಿಯ ಕೇಳಿ ಬಾಣಾಸುರನು ಕೆಟ್ಟ | ಹಿಂದಣ ಗಾದೆ ಕೇಳ್ ಭೂಪ            || ೧೫೩ ||

ಸಾಕಯ್ಯ ಎಲೆ ಮಂತ್ರಿ [ಪೋಕ] ನಾದೆನು ನಿನ್ನ | ಮಾತನು [ವಿಘಟ] ಮಾಡಿದೆನು |
ತಾಕಿದಲ್ಲದೆ ಪೆಟ್ಟು ತಲೆಯ [ಪೋಗದು] ಮಂತ್ರಿ | ಹಾಕಿದ ಬೆಂಕಿ ದೇವರಸ         || ೧೫೪ ||

ಆವ [ಪರಿಯ]ಲಿ ನಿನ್ನ ಕೊಲಬೇಕು ಎನುತಿರ್ದೆ | ಶಿವನೊಲುಮೆ ಬೇರೆ ಇರುತಿಹರು |
ಜೈಮಿನಿ ಕಥೆಯೊಳಗೆ ಚಂದ್ರಹಾಸಗೆ ಮುನಿದ | ಮಂತ್ರಿಯ ತೆರನಾಯಿತೆನಗೆ      || ೧೫೫ ||

ಪಾಪಿಯ ಕೊಲ್ವದು ಪಾಪವಲ್ಲ[ವು] ಮಂತ್ರಿ | ಧಾರ್ಮಿಕ ನರನು ಯೋಚಿಸಲು |
ದ್ವಾಪರಯುಗದೊಳು ಧರ್ಮರ ಕೆಡಿಸಲ್ಕೆ | ಯೋಚಿಸಿದವರಳಿದುದರಿಯಾ          || ೧೫೬ ||

ಹೇಳಬಹುದು ಭೂಪ ಲಾಗುತಪ್ಪಿನ ಮೇಲೆ | ಕಾಲು ಜಾರಿತು ಎಂಬ ಗಾದೆ |
ಹೋದ ದೇವರಸನು ಗೆದ್ದು ಬಂದರೆ ಅಂದು | ಪೀಳಿಗೆ ಸಂತಾನ ಬಿಡು [ವೆ]          || ೧೫೭ ||

ಮುಂಗೈಯ ಹುಣ್ಣಿಗೆ ಮುಕುರವೇತಕೆ ಮಂತ್ರಿ | ಕಿವಿಗೊಂಡ ಮಾತಿಗೆ ಸಾಕ್ಷಿಯುಂಟೆ |
ಬುದ್ಧಿ ಕೂಡಿತು ಇನ್ನು ಜನ್ಮವಿರಲು ಮಂತ್ರಿ | ಗಾಂಭೀರ್ಯ ಉಳಿ[ವಂ]ತೆ ಮಾಡು   || ೧೫೮ ||

ಅರಿಯಬಾರದು ಭೂಪ ಕರುವ ಕಾಯುವ ತರಳ | ಪುರವ ಮುತ್ತಿದ ಕಾಲಗತಿಯ |
ಗುರುಕೃಪೆ ಇವನೊಳು ಪರಿಪೂರ್ಣ ಇಹುದೆಂದು | ಭಯದೋರಿ ಸಯದಿ ನೂಕುವುದು       || ೧೫೯ ||

ಹತ್ತು ವರುಷದ ಬಾಲ ದಂಡೆತ್ತಿ ಬರಲಿಂದು | ಹೊತ್ತಿನ ಬಲವೆಂದು ತಿಳಿ [ವು]ದು |
ನಿತ್ಯವೆ ಈ ಕಾಯ ರೊಕ್ಕ ಇಂದಿಗೆ ಕೊ[ಡಲು] | ಶಕ್ತಿ [ಹೊಂ]ದಿದ ಮೇಲೆ ಬರದೆ     || ೧೬೦ ||

ಆಡಬಾರದು ರಾಯ ಬ್ರಾಹ್ಮಣರ ಕಡಿದಾಟ | ಸಮರಾಧನೆಯ [ಬ] ಡಿದಾಟ |
ತಿಥಿಮಿತಿಯ ಸಾಲದು ವಡೆ ತುಪ್ಪವಿಲ್ಲೆಂದು | ಹಳೆಗಾಳಗವಂತ ಸಿಟ್ಟಿ               || ೧೬೧ ||

ಬಾಯಲಾಡಿದ ಬಂಟ ಬಳ್ಳುಡುಗಿನ ನಾಯಿ | ಹೋಗುವುದೆ ಕಾನನದ ಬೇಂಟೆ |
ಭೇರಿಯ ನಾದಕ್ಕೆ ಕಾಯ ನಡುಗುವ ಮೂಳ | ಕೋಳ ಹಿಡಿವನೆ ರಣದೊಳಗೆ        || ೧೬೨ ||

ಅನಿತರೊಳಗೆ ಒಬ್ಬ ಚರನು ಕೊರಗುತ ಬಂ[ದು] | ಮುಗಿದನು ಕರವ ರಾಯನಿಗೆ |
ನುಡಿಯಲಾರೆನು ಭೂಪ ಗರಳಗುಂದಿತು ಜೀವ | ತಿಳಿಯೆ ಲಾಲಿಸಿ ರಣಮಯವ     || ೧೬೩ ||

ಹೇಳುವುದಿನ್ನೇನು ಕೇಳಿ ಮಾಡುವುದೇನು | ಆ[ತು] ಕೊಂಡನು ಬಕರಾಕ್ಷಸಂತೆ |
ಶ್ರೋಣಿತ ಹರಿಯಲು ಮೂರುಗಾವುದ ದಾರಿ | ತೋರುತ ಹೆಣಬುರುಡೆ ಸಹಿತ      || ೧೬೪ ||

ಸತ್ತವರಲ್ಲದೆ ಕ[ತ್ತಿ]ಗಳು ಮೆಯಿ[ವೆತ್ತು] | ಸಿಟ್ಟಿನೊಳಗೆ ಆಡುತಿಹವು |
ಭಾವಾಜಿ [ಮ]ಲ್ಲಯ್ಯ ಪ್ರಧಾನಿ ದೇವರಸ | ಹೊಯಿದುದ ಕಂಡೆ ಹೆಡಗಟ್ಟಿ            || ೧೬೫ ||

ತಿರುಗಲು ಮುಂದವರು ಮಿಕ್ಕವರ ಕಾಣೆ | ಸಾರಿಕೊಂಬರು ಉಳಿದಿಹರು             || ೧೬೬ ||

ಕೊಂದನು ಇಬ್ಬಗೆಯ ಗೋವಿಂದ ಎನ್ನುತ ರಾಮ | ಹಿಂದಕ್ಕೆ ನಡೆದ ಪಾಳೆಯಕೆ |
ಇಂದಿನಾಟವು ತಮ್ಮದೆಂದು ಭಾವಿಸಿಕೊಳ್ಳಿ | ನಾಳೆ ಮುಂಜಾನೆ ಹಲ್ಲೆ ಬಿಡುವಾ     || ೧೬೭ ||

ಹಾಡು ತೀರಿತಿ ರಾಯ ತಂತಿ ಹರಿಯಲು ಮಂತ್ರಿ | ಚಾವಡಿಗೆ ಸಾಲವ ಕೊಳ್ಳಿ |
ನಾಳಿನ ದಿನದೊಳು ನೀವಾರೊ ನಾವಾರೊ | ಊರು ಯಾರದೊ ಎಂದ ಚರನು     || ೧೬೮ ||

ರೊಕ್ಕ ಪಾಕಿಯ ಮೇಲೆ ಕಟ್ಟಕೊಂಡರೆ ಕಾಣೆ | ಈ ಸೃಷ್ಟಿ ಮುನಿಯಲು ತೋರದಿಡುವ |
ಹುಟ್ಟಿದರೆ ಆ ಬುದ್ಧಿ ಹೋಗಿ ಅವನೊಳು ಪೊಕ್ಕು | ಕೆಟ್ಟ ಅಡಿಗೆಯ ರುಚಿ ಮಾಡಿ       || ೧೬೯ ||

ಬಂಟನಾಡುವ ಮಾತ ಕೇಳಿ ಬಲ್ಲಾಳನು | ಅಂತರದೊಳು ಆತ್ಮ ಚರಿಸಿ |
ನಿಂತು ಕಾಣಲು ಗಳಿಗೆ ಬಲ ತುರಗ ಮೊದಲಿಲ್ಲ | ಚಿಂತೆಯ ಬಿಡಿಸೆನ್ನ ಮಂತ್ರಿ       || ೧೭೦ ||

ಹಿಂದೆ ಹೇಳಲು ಭೂಪ ಹಲ್ಲೆ ಕಳಿಸುವೆನೆಂದೆ | ಮುಂದೆ ಪೇಳ್ದರೆ ಬಂಡಿಗೆ ಬಂದೆ |
ಹಿಂದಣ ಮಾತೆಲ್ಲ ಬೆಂದು ಹೋಯಿತು ಮಂತ್ರಿ | ಬಂದ ಬೇನೆಗೆ ತೆರನೇನು         || ೧೭೧ ||

ಭಾಳ ಹೇಳಲು ತಮಗೆ ವೇಳೆಯಿಲ್ಲವು ಮಂತ್ರಿ | ಕೋಳಿ ಕೂಗಲು ಲೆಗ್ಗೆ ಬಿಡುವಾ |
ಊರು ಹೋಗಿಯೆ ಅಗುಸೆ ಬಾರಿಕ ಬಡಿಕೊಂಡ | ತೆರನಾಗಬಾರದು ಪೇಳು         || ೧೭೨ ||

ತನಗೆ ತಿಳಿದುದ ಪೇಳ್ವೆ ನಿಮಗೆ ಚಿತ್ತಕೆ ಹೇಗೊ | ಒಣಗಿ [ತ್ತೆ] ನೀರಿಂಗೆ ಕೆಸರು |
ಹಣ [ವಿರದೆ] ಆಗದು ಈ ಕಾರ್ಯ [ಭಾವಿಪೊಡೆ] ತಮ್ಮ ಪಾದಕ್ಕೆ ಹೇಗೆ ತಿಳಿವುದೋ         || ೧೭೩ ||

ಆದರೊಳ್ಳಿತು ರಾಯ ಹದಮೀರುವುದು ಕಾರ್ಯ | ಸಾಗಿಸಿಕೊಂಡು ರೊಕ್ಕವನು |
ಪಾದದಪ್ಪಣೆಯಾಗೆ ನಿಯೋಗತನಗಳ ಮಾಡಿ | ಹೋಗಿ ರಾಮನ ಕಂಡು ಬರುವೆ    || ೧೭೪ ||

ಹಾಗೆ ಆಗಲಿ ಮಂತ್ರಿ ಹೋಗಯ್ಯ ಅತಿ ಬೇಗ | ಸಾಗಿಸಿ ಕೊಡುವೆ ರೊಕ್ಕವನು |
ನೀಗದೆ ಬಾಲ ಕುದುರೆ ನಿಲ್ಲೊರೆ ನೆಳಲು ಪೋಗಿ | ಜೋಗ್ಯಾಗಿ ಮಾಡುವುದೇನು     || ೧೭೫ ||

ಕಟ್ಟಿದ ಮಂತ್ರಿಯು ಹೆಚ್ಚಿನುಡುಗೊರೆಯನು | [ಮತ್ತೊಳ್ಳೆ]ಕೈಯ ಕಾಣಿಕೆಯ |
ಹತ್ತಿದ ಪಲ್ಲಕ್ಕಿ ಹನ್ನೆರಡು ತೇಜಿಗಳನೆ | ಹೊಕ್ಕನು ರಾಮನ ದಂಡ                   || ೧೭೬ ||

ಪಗಡೆ ಸಾಲಿನ ಮೇಲೆ ಹೊಡೆದಿರುವ ಚಾವಡಿಯ | ಬಾಗಿಲ ಕಾಯ್ವ ಚರರು ಬಂದು |
ನುಡಿಯೆ ಕರಗಳ ಮುಗಿದು ರಾಯ ಬಲ್ಲಾಳನ | ಹಳಬ ಬಂದಿಹನೆ ಹೇಜಿಬನು       || ೧೭೭ ||

ಬರಲೆಂದು ಚರನಿಗೆ ದೊರೆ ರಾಮನುಸುರಲು | ಕರೆಯಲಾಕ್ಷಣ ಬರಲು |
ಎರಗಿ ಕಾಣಿಕೆಯಿಟ್ಟು ಎದ್ದು ಉಡುಗೊರೆ ಮಡಗಿ | ಕರ ಮುಗಿದು ಕೊಂಡಾಡಿದನು    || ೧೭೮ ||

ರಾಯರೊಳ್ ರಾಯನೆ ರಣವಿಜಯ ರಾಜೇಂದ್ರ | ಭೇರುಂಡ ಗಜಸಿಂಹ ವೈರಿ |
ಸ್ವಾಮಿ ನಿಮ್ಮಯ ಕ್ಷೇಮ ವಾರ್ತೆಯ ಕೇಳಿ ಬಲ್ಲಾಳ | ಪ್ರೇಮದಿ ಸ್ಥಾನಪತಿಗಳ ಕಳುಹಿದ      || ೧೭೯ ||

ಭೂಪರೊಳ್ ಭೂಪನೆ ಜಾತಿಯೊಳ್ ಕುಲರತ್ನ | ಕೇಶವನಾತ್ಮ [ಶೌರ್ಯ] ದಲಿ
ಭೂತೇಶನಣುಗನ ಶಕ್ತಿಸಾಹಸವುಳ್ಳ | ದೇಶಾಧಿಪತಿ ರಾಮಚಂದ್ರ                   || ೧೮೦ ||

ಧೀರನೆ ಅಸಹಾಯ ಶೂರನೆ ಶರಧಿಗಂ | ಭೀರನೆ ಕುಂತಿಧರ್ಮಜನೆ |
ಪಾಲಿಸೆಮ್ಮಪರಾಧವನು ಮನದೊಳು ಇಡದೆ | ಊರ ಮುತ್ತಿಗೆ ತೆಗೆಯಬಹುದು     || ೧೮೧ ||

ಮೆಚ್ಚಿದ ಮಂತ್ರಿಯ ದಸ್ತಿನ ಹೊಗಳಿಂಗೆ | ಸತ್ಕರಿಸಿ ಮಂತ್ರಿಯ ಕುಳ್ಳಿರಿಸಿ |
ಮತ್ತೆ ನಿಮ್ಮಯ ಅರಸ ಕ್ಷೇಮ ಪ್ರೇಮಗಳೇನು ? | ಪುತ್ರರಿರ್ವರು ಕೇ[ಳಿದರು]        || ೧೮೨ ||

ಏನಯ್ಯ ನೀ ಬಂದ ಸ್ಥಾನ ಪ್ರತಾಪವನು | ಪೇಳಿ ಕಳುಹಿದ ರಾಯಭೂಪ |
ಸ್ವಾಮಿ ನಿಮ್ಮಯ ಪಾದ ಕಂಡು ಬಾ[ಳ್ವೆ]ವು ಹಿಂದೆ | ರಾಯ ಮುಮ್ಮಡಿ ಕಾಲದಂತೆ || ೧೮೩ ||

ಯಾಕಯ್ಯ ಯಲ್ಲರಸ ಕೋಚೆ ಮಾತಿಗೆ ಬಂದೆ | ಹಾಕಿರಿ ಇನ್ನೊಂದು ತತಿ[ಯ] |
ಬೇಕೆನಲು ನಾ ಕೊಡುವೆ ಬಾಣ ಬತ್ತಿಯು ತುರುಗ | ಈ ಕ್ಷಣದೊಳು ಬಿಟ್ಟು ಕೊಡುವೆ || ೧೮೪ ||

ಧರ್ಮಪಾಲಕ ಕೇಳು ಸರ್ವಾಪರಾಧವ | ನಿರ್ವಹಿಸಿ ನಿಮ್ಮ ಹೃದಯದಲಿ |
ಎಮ್ಮ ರಕ್ಷಿಸಿ ಪೋಗೆ ಬ್ರಹ್ಮಾಂಡ ಇರುವನಕ | ಧರ್ಮಕೀರ್ತಿಯು ಹೋಗಲರಿದು     || ೧೮೫ ||

ಈವಾಗ ಇಂತಪ್ಪ ನಯಸರವಾಡುವೆ ಮಂತ್ರಿ | ಕಾಗದ ಬರೆದು ನಾ ಕಳುಹೆ |
ಶ್ವಾನಗೆ ಕಡೆಮಾಡಿ ಹೆಮ್ಮೇಲಿ ಬರಲೆಂದ | ತ್ರಾಣವೇನಾಯಿತೊ ಮಂತ್ರಿ            || ೧೮೬ ||

ಒಪ್ಪಿಕೊಳ್ಳಲಿಬೇಕು ತಪ್ಪು ಲಕ್ಷಗಳಿರಲು | ಸತ್ವದೊಳ್ ಹರಿಶ್ಚಂದ್ರ ರಾಯ |
ಮತ್ತೆ ಕಾಟಣ್ಣನು ಮಂತ್ರಿಯ ಮಗ ನೀಲ | ಕಂಡನೆರಗಿ ಪೇಳಲೊಡನೆ               || ೧೮೭ ||

ಹಾಗಾಗಲೋ ಮಂತ್ರಿ ಅಣ್ಣಾಜಿ ಒಪ್ಪಿದ ಬಳಿಕ | ಸಾಗುವೆ ದಂಡ ನಾಳಿನಲಿ |
ಬಹಳ ಕಾಲದ ಕಪ್ಪ ಬಂದರೆ ಅವರ | ಮೇಗಳ ಹಗೆ ನಮಗೇನು                      || ೧೮೮ ||

ಹತ್ತೆಂಟು ವರ್ಷದ ಕಪ್ಪ ದಂಡಿನ ವೆಚ್ಚ | ಹತ್ತು ಸಾವಿರ ಮಂದಿ ಕೊಟ್ಟು |
ಒಪ್ಪಿ ನಿಮ್ಮಯ ಅರಸು ಕೊಟ್ಟರೆ ಎಲೆ ಮಂತ್ರಿ | ಉದಯಕ್ಕೆ ನಾಳೆ ಸಾಗುವೆನು      || ೧೮೯ ||

ಮಂದಿ ಮಕ್ಕಳು ತುರಗ ಸಂದು ಹೋಯಿತು ಸ್ವಾಮಿ | ದಂಡಾಡಿ ರಾಜ್ಯ ಪಾಳಾಗಿ |
ಬಂದ ಕಂಟಕ ನೀವು ಕಂಡುದಾಯಿತು [ಎಡೆ] | ಗೊಂಡ ಮಾತಿಗೆ ನಡೆವೆನು         || ೧೯೦ ||

ಗರ್ವದೊಳಗೆ ಕೆಟ್ಟ ನಿಮ್ಮ ರಾಯನು ಮಂತ್ರಿ | ಎಮ್ಮ ತಪ್ಪನು ಒಮ್ಮೆ ತೋರು |
ನಿರ್ಣಯವ ಮಾಡುವೆನು ಎಮ್ಮಯ್ಯ ಬರಲೆಂದು | ಕೈಯ ತಡೆವೆ ದೈನ್ಯಕಾಗಿ       || ೧೯೧ ||

ತಾಯಿ ರಕ್ಷಣೆಯೊಳಗೆ ಬಾಳುವವು ಮಕ್ಕಳು | ಕಾಯಬೇಕೆಂದು ಚಿತ್ತದಲಿ |
ಪಾಲನು ಕೈಕೊಂಡು ಕುಕ್ಷಿಯಲಿ ರಕ್ಷಿಪುದು | ದೇವೇಂದ್ರ ಸಮಗಾತ್ರ ಭೂಪ          || ೧೯೨ ||

ಕಾಕ ಪೋಕರರಿಂದ ಹೀಗೆ ಬಂದುದು ಸ್ವಾಮಿ | ರಾಯನೊಳಗಾದದ್ದು ಅಲ್ಲ |
ತಾಯಿ ಮಕ್ಕಳಿಗುಂಟು ನ್ಯಾಯ ಬರಲು ಮತ್ತೆ | ಬಾಯೆಂದು ಕರೆದು ಮನ್ನಿಸಳೆ     || ೧೯೩ ||

ಆಗಲೊ ಎಲೆ ಮಂತ್ರಿ ನಿಮ್ಮರಸನ್ನ ಬರಹೇಳು | ಯಾವ ರೀತಿಯಲಿ ಪೇಳುವನು |
[ನಾಳೆ] ನಾವಿರ್ವರು ಕೂಡಿ ಮಾತಾಡುವ | ನೋಡುವ ಲೆಕ್ಕ ಹೆಚ್ಚು ಕಡಿಮೆ          || ೧೯೫ ||

ಬಂದೆನು ಎಂಬಂಥ ನಂಬಿಗೆ ಕಂಡರೆ | ಸಂದೇಹ ಬಿಟ್ಟು ಬರಹೇಳು |
ಕೊಂದವನ ಹಗೆ ಹಿತವು ಎಂದಿಗೆ ಬೇಡೆನಲು | ಒಂದಿವಸ ಬೇಡ ಲೆಕ್ಕದೊಳಗೆ       || ೧೯೬ ||

ಹದಿನೇಳು ವರುಷಕ್ಕೆ ನಿಲುವಾದ ರೊಕ್ಕದ | ತುದಿ ಮೊದಲು ಕೇಳು ಯಲ್ಲರಸ |
ಕಡತ ಬಲ್ಲುದು ನಿಮ್ಮ ದಶಕೆರಡುವರೆ ಲಕ್ಷ | ಕೊಡುವನಕ ಬಿಡೆನೆಂದ ರಾಮ        || ೧೯೭ ||

ಆಡಿ ತೋರೆಲೊ ಮಂತ್ರಿ ಹೇಳಿದ ವಿವರವ | ಜ್ಞಾನ ತಿಳಿದರೆ ಬಿಟ್ಟು ಬರಲಿ |
ನೋಡುವೆ ದಿನವಿಂದು ರಾತ್ರಿ ಬೆಳತನಕ | ಮಾಡುವೆ ಊರ ಮುಂಜಾನೆ ಹಲ್ಲಾ      || ೧೯೮ ||

ಬರಬಾರದಾಯಿತೊ ದೂರದಿ ಮಾರ್ತಂಡ | ಹೊರಡಬೇಕು ರಾಯ ಬರುವುದಕ ಭಯ |
[ಹಿರಿಮಾತೆ] ಹರಿಯಮ್ಮ ಪಡೆದಂಥ ಪಿತನಭಯ | ಒಡೆಯ ಜಟ್ಟಂಗೀಶ ನಂಬುಗೆಯ        || ೧೯೯ ||

ನಂಬುಗೆ ಅಭಯ ತಕ್ಕೊಂಡು ಯಲ್ಲರಸನು | ಭುವನೇಂದ್ರ ರಾಮಗೆ ಕೈಮುಗಿದು |
ಬಂದನು ಹರುಷದಿ ಒಂದೆ ಗಮನದಿ ಮಂತ್ರಿ | ರಾಜೇಂದ್ರ ಭೂಪಗೆ ಕೈಮುಗಿದು     || ೨೦೦ ||

ಹೊಂದಿತ್ತು ಸಂಧಾನ ಹದಿನೇಳು ವರುಷಕ್ಕೆ | ಮಂದಿಗೂಟವು ದಂಡಿನೆಚ್ಚ |
ಸಂದರೆ ಬೆಳಗಾಗಿ ದಂಡ ತೆಗೆವೆನು ಎಂದ | ವಿಳಂಬ [ಬೇ]ಡೆಂದು ಹೆಣಗಿದೆನು      || ೨೦೧ ||

ಯುಕ್ತಿ ಸಾಧನೆ ಮಾಡಿ ಹೊಕ್ಕು ಕಾರ್ಯವ ಗೆದ್ದೆ | ಕಟ್ಟದೆ ಮಂತ್ರಿ ಮನ್ನೆಯರ |
ಮತ್ತೊಂದನಾಡಿದ ನೋಡಿ ನಿಮ್ಮಯ ಭೆಟ್ಟಿ | ಕೊಟ್ಟರೆ ಸಾಗುವೆನೆಂದ               || ೨೦೨ ||

ಹೊಗಬಹುದೆ ಮಂತ್ರಿ ಕಾಣಬರ[ದೆ] ಕಪಟ | ಯಾವ ಹದನೋ ನಾನರಿಯೆ |
ಭೂನಾಥ ಲಾಲಿಸಬೇಕೆಂದವಗ್ರಹಿಸೆ ಕಾಲ | ಗಳಿಗೆಯಲಿ ಕೊಳ್ಳನೆ ಊರ            || ೨೦೩ ||

ಮಲೆತವರಲ್ಲದೆ ಮರೆಬಿದ್ದವರ ಕೆಡಿಸದ | ಬಿರಿದುಂಟು ಅವನ ಕಾಲೊಳಗೆ |
ಹೊಡೆಯಲಿಬೇಕೆಂಬ ಫಲವು ಮನದೊಳಗಿರಲು | ಇದು ಬೇಡಿದರೆ ಮುನ್ನ ಇದಿರೆ    || ೨೦೪ ||

ರಾಯ ಬಲ್ಲಾಳನು ಭೂಮಿ ಮಂಡಲಕಿಳಿದು | ಮಾಡುವುದೇನು ಹೀಗೆ ಬಂತು |
ಕಾದುವೆನೆಂಬಂಥ ತ್ರಾಣವಿಲ್ಲದ ಮೇಲೆ | ಹೋದರೆ ಹೀನ ಬಿಡದೆಂದ                || ೨೦೫ ||

ಮತ್ತೆ ಕೇಳಲೊ ರಾಜ ಮನದ ಚಿಂತೆಗಳೇಕೆ | ಕೊಟ್ಟನು ಬಲಗೈಯ ಅಭಯ |
ಪೆತ್ತವರು ಜಟ್ಟಂಗಿ [ಭಾಳ]ಲೋಚನನ ಭಜನೆಯ | ಆತ್ಮಕ್ಕೆ ಹೊಣೆಯೆಂದ ಮಂತ್ರಿ  || ೨೦೬ ||

ಬಂದದ್ದು ಬರಲೆಂದು ರಾಜೇಂದ್ರ ಬಲ್ಲಾಳ | ಊರ ಮುಂದಕೆ ಡೇರೆ ಹೊಡೆಯೆ |
ಒಂದೊಂದು ಪರಿ ಚಿತ್ರ ಹಜಾರ ಕಂಬಗಳಿಂದ | ಸಂಭ್ರಮದ ನೋಡುವರಳವೆ       || ೨೦೭ ||

ಪಟ್ಟದ ಆನೆಗೆ ಮುತ್ತಿನ ಅಹುದವು | ಉತ್ತಮ ಅಪರಂಜಿ ಕೆಲಸ |
ಹಸ್ತಿ ಶೃಂಗರ ಮಾಡಿ ಹನ್ನೆರಡು ಸಾವಿರ ಬಲದಿ | ಮತ್ತೆ ಹೊರಟನು ರಾಜೇಂದ್ರ     || ೨೦೮ ||

ಕಹಳೆ ಕರಣಿಯು ಭೇರಿ ಕುಣಿವ ನಾಟಕ ಸಾಲು | ಮೇಲೇರಿ ನಡೆಯೆ ಕುಂಜರದಿ |
ಧರೆಯ ಭೋರಿಡುತಂದೆ ಪುರವನು ಹೊರಡಲು | ಬಿರುದಿನ ಭಟರು ಹೊಗಳುತಲಿ   || ೨೦೯ ||

ಊಳಿಗ ಪರಿಚಾರ ಪ್ರಧಾನಿ ಪಂಡಿತರೊಡ | ನೇರಿ ನಡೆಯಲು ಕುಂಜರದಿ |
ದೊರೆಯು ರಾಮನ ಬಳಿಗೆ ಬರಲು ಊಳಿಗೆ ಕಳುಹೆ | ಮೆರೆವ ಹಜಾರದಿ ಕುಳಿತಿರಲು         || ೨೧೦ ||

ರಾಯ ರಾಮನ ಬಳಿಗೆ ಹೋಗಿ ಊಳಿಗದವರು | ರಣಧೀರ ಭೂಪಾಲ ಚಿತ್ತೈಸಿ |
ಕವಳವ ಕರಿಕೊಂಡ ಬೆಳೆದ ಹೆಣ್ಣಿನ ತೆರದಿ | ರಾಯ ಬಲ್ಲಾಳ ಬರಲೆಂದ              || ೨೧೧ ||

ಪೃಥಿವಿ ಪಾಲಕ ರಾಯ ಮತ್ತೆ ಬಾಲಕ ರಾಮ | ಕರೆಸಿದ ಶಕ್ತಿ ಸಾಹಸದ ಮನ್ನೆಯರ |
ಕಸ್ತುರಿ ಮುಖ ಪದ್ಮ ಕಣ್ಣ ಸಂಗಯ್ಯ | ಜೊತ್ತಾಗಿ ನೀಲಕಂಠನನು                    || ೨೧೨ ||

ಮುಂಜಗಳದ ಮುದ್ದ ಕಗ್ಗೊಲೆ ಹನುಮನ | ಜಗ್ಗದೆ ಕರಿಯ ಗೆದ್ದವನ |
ಉಜ್ಜನಿಯ ಮಲ್ಲಯ್ಯ ಊರು ಮೂರನು ಉಂಬ | ದೊಡ್ಡ ನಾಯಕ ಚನ್ನಣ್ಣ           || ೨೧೩ ||

ಮದಕರಿಗಳ ಎಂಟು ರಚಿಸಿ ಶೃಂಗರಮಾಡಿ | ಸಕಲಾತಿ ತೋಪು ಜೆಲ್ಲಿಗಳು |
ಮುಕುರವ ಪಣೆಗಿಟ್ಟು ಮುತ್ತು ರತ್ನವ ಕೆತ್ತಿಸಿ | ಅಪರಂಜಿ ಉದೆಯ ಹಾಕಿಸಿದ ಬಿರಿದು         || ೨೧೪ ||

ನೀರಮೇಲೆ ನಡೆವಂಥ ಮೂರು ಸಾವಿರ ತುರಗ | ವೀರ ಎಕ್ಕಟಿಗರು ನೂರಾರು |
ರಾಜೇಂದ್ರ ಪುತ್ರರು ತಾವು ಶೃಂಗರವಾಗಿ | ಏರಲು ಎರಡು ತೇಜಿಗಳು              || ೨೧೫ ||

ಹೊಡೆವ ಭೇರಿಯ ವಾದ್ಯ ನುಡಿವ ಬಿರಿದಿನ ಕಹಳೆ | ಪಿಡಿದ ಛತ್ರಗಳ ಚಾಮರವು |
ಪೊಡವಿರಾಯರಿಗೆಲ್ಲ ಗಂಡ ಭಾಪುರೆಯೆಂದು | ಬಿಡದೆ ಸಾರುವ ಭಟ್ಟರೊಡನೆ       || ೨೧೬ ||

ಕಕ್ಕಸ ಕಲಿ ರಾಮ ಕಿಚ್ಚಿನಾರ್ಭಟೆಯೊಳು | ನರ್ತನ ನಾಟಕರೊಳಗೆ |
ಅತ್ತವನು ಬರುತಿರೆ ಆ ನಗರದೊಳೊಪ್ಪುವ | ಉತ್ತಮ ಸ್ತ್ರೀಯರು ಸಿಂಗರಿಸಿ         || ೨೧೭ ||

ನೋಡುವ ಬನ್ನಿ ಅಕ್ಕ ಬಾಲನೆಂಬುವ ರಾಮನ | ಹಾಳು ಮಾಡಿದ ಲಕ್ಷ ಒರೆಯ |
ಪ್ರಾಯವಾಗಲು ಅವಗೆ ಭೂಮಿ ತಡೆಯದು ಮುನ್ನ | ಭೀಮ ಜನಿಸಿದನು ಕಲಿಯೊಳಗೆ        || ೨೧೮ ||

ಕೋಮಲೆಯರು ಬೇಗ ಶೃಂಗಾರವಾಗಿ ಆ | ಭರಣ ವಸ್ತ್ರಭೂಷಣವ |
ತಾ ಮೇಲು ನಾ ಮೇಲು ಎಂಬ ಸ್ತ್ರೀಯರ ಸೊಬಗ | ನಾವ ಕವಿ ಬಣ್ಣಿಸುವನು        || ೨೧೯ ||

ಕಡು ಕೆಂಪು ನುಡಿ ಗಿಳಿಯು ಸ್ವರ ರಾಗ ಕೋಗಿಲೆಯು | ನಡು ಸಿಂಹನಂತೆ ಸುಲಿಪಲ್ಲು |
ಕುಡಿತೆಗಂಗ[ಳವ]ರು ಕುಚದ ಭಾರಕೆ ನಡುವು | ತಡೆಯದೆನ್ನುತ ಡಾಬು ಧರಿಸಿ     || ೨೨೦ ||

ಚಪಳೆಯರು ಚೆಂದುಟಿ ಚಂಪಕ [ಮೂಗು] ಮೂಕಕಾಂತಿ | ಕುಚಭಾವ ಕಡು ಬೊಗರಿಗಳು |
ಮಕರಕೇತನ ಎನ್ನ ಮದದಿ [ತಾಗಿದನೆಂದು] | ಸತಿಯರೆಲ್ಲರು ನೋಡುತಿಹರು      || ೨೨೧ ||

ಹಳೆಯಬೀಡೊಳಗಿ‌ಪ್ಪ ಜನರು ಜಾತ್ರೆಯ ತೆರದಿ | ನೆರೆದು ನೋಡುವರು ನಯನದಲಿ |
ರೆಪ್ಪೆಗಳ ಹೊಯ್ಯದೆ ಎರಳೆಯ ತೆರದೊಳು | ಕರಗಿ ತರಳೆಯರು ಕಾಂಕ್ಷೆಯಲಿ      || ೨೨೨ ||

ಅಕ್ಕಯ್ಯ ನೀ ನೋಡೆ ಕೃಷ್ಣನ ಸುತ ಮುನ್ನ | ಸತ್ತನೆಂಬರು ಸಟೆಯೆನುತ |
ಬಚ್ಚಿಟ್ಟು ಮಡುಗಿರ್ದು ಭರ್ಗೋದೇವನು [ಇಂ]ದು | ಧರೆಗೆ ಬಿಟ್ಟ[ನು] ಎಂದೆನುತ    || ೨೨೩ ||

ಕಂಡೇನೇ ಅಕ್ಕಯ್ಯ ಅಪರಂಜಿಯಂದದಿ ಹೊಳೆವ | ತುಂಬಿಲ್ಲ ಹದಿನಾರು ವರುಷ |
ಚಂದ್ರಗೆ ಮಿಗಿಲಾಗಿ ಇನ್ನೇನ ತಾಯಿ ಪಡೆದಳು | ಸೌಂದರದೊಳಗೆ ಅತಿರಂಭೆ      || ೨೨೪ ||

ತಾವರೆಗಂಧಿಯರು ನೋಡಿ ರಾಮನ ರೂಪ | ತಾಳಲಾರದೆ ತಾಪಗೊಳುತ |
ನಾವಿರ್ದು ಫಲವೇನು ಕೂಡಿದ ಬಳಿಕಿವನ | ನೀಗುವುದು ಲೇಸು ಪ್ರಾಣವನು         || ೨೨೫ ||

ನೋಡಿದರೆ ಇಂತೊಮ್ಮೆ ಕೂಡಿದರೆ ಸುಖವುಂಟು | ಬೇಡಿಕೊಂಡರೆ ಬಾರದಿಹನೆ |
ರೂಢಿಯೊಳಿಂತಪ್ಪ ಧೀರನಾಗಲು ನಮ್ಮ | ಊರ ನಾರಿಯರ ಬಳೆ ಒಡೆದ           || ೨೨೬ ||

ನಾರಿಯರು ಇಂತಪ್ಪ ಆಲಾಪದೊಳಗಿರೆ | ಧೀರ ರಾಮನು ಸಾಗಿ ಬರಲು |
ಜೋಡಿಸಿ ಕರಮುಗಿದು ಬಲವೆರಡು ಸಾ[ಲಿ]ಗೆ | ಬೀದಿಗಟ್ಟಳೆಯ ಸರಿಯಾಗಿ         || ೨೨೭ ||

[ಹ]ಗಲ ಬತ್ತಿಯ ಬೆಳಕು [ಝಗಿಸೆ] ಮೋಹನವಾಗಿ | ನಗುತಲಿವರು ತೇಜಿ ಇಳಿದು |
ಬರುವ ಸುದ್ಧಿಯ ಕೇಳಿ ಬಲ್ಲಾಳರಾಯನು ಎದ್ದು | ನಡೆದು [ಬರಲು] [ತಾ] ಣದೆ [ಡೆ]ಗೆ        || ೨೨೮ ||

ಕ್ಷೇಮವೆ ಬಲ್ಲಾಳ ರಾಜೇಂದ್ರನೆನುತಲಿ | ತಾ[ನು] ರಾ[ಯ]ನ ಕರವ ಪಿಡಿಯೆ |
[ಕ್ಷೇ]ಮವೆ ಪರಿಪೂರ್ಣ ನೀವು ಕ್ಷೇಮವೆ ಎಂದು | ಕುವರರಿರ್ವರ ಕರ ಪಿಡಿದು         || ೨೨೯ ||

ಕ್ಷೇಮವೆ ರಣವಿಜಯ ಶೂರ ಕಂಪಿಲರಾಯ | ತಾಯಿ ಹರಿಯಮ್ಮ ಕ್ಷೇಮಹಳೆ |
ಪ್ರೇಮದೊಳಿಹ ಅರಸೆ ನಿಮ್ಮ ಕ್ಷೇಮದ ನಿತ್ಯ | ಕೇಳುವರಯ್ಯ ಪ್ರೀತಿಯಲಿ           || ೨೩೦ ||

ಒಬ್ಬರೊಬ್ಬರ ತಾವು ತಬ್ಬಿಕೊಳುತಲಿ ಅವರು | ಮುಂಭಾಗದೊಳು ನಡೆ ತಂದು |
ಗದ್ದುಗೆ ಸದರೊಳು ಕುಳಿತು ಸಮರಸವಾಗಿ | ಮುದ್ದು ಮಾತುಗಳನಾಡುತಲಿ        || ೨೩೧ ||

ಮುಳುಗಿ ಹೋಯಿತು ರಾ[ಮ]ಬಲ ತುರಗ ಮುಂತಾಗಿ | ತಿಳಿಯದೆ ಬುದ್ಧಿಯು ನಮಗೆ |
ಊರೆಲ್ಲ ಸೂರ್ಯಾಗಿ ಹೋದಾಗ ಅಗುಸೆಯ | ಮಾಡಿದ ತೆರನಾಯ್ತು ಕಥೆಯು      || ೨೩೨ ||

ಕ್ಷುದ್ರರ ನುಡಿಯಿಂದ ಈ ಬುದ್ಧಿ ಬಂದಿತು ನಿಮಗೆ | ಪ್ರಬುದ್ಧರಿಂದಲೆ ಹೀಗೆ ಬರದು |
ನಿರ್ಧರವು ಈ ಮಾತು ರಣವಿಜಯ ರಾಮಯ್ಯ | ಬುದ್ಧಿ ಕಲಿಸಿದನು ದೇವರಸ        || ೨೩೩ ||

ಯಾರು ಮಾಡಿದರೇನು ರಣಧೀರಪುತ್ರನೆ ಕೇಳು | ಸಾರಿದ ಎಲ್ಲ[ವ] ಮಂತ್ರಿ |
ಕಾಲಗತಿಗಳು ಬಿಡದು ಹೋದ ತುತ್ತಿಗೆ ರುಚಿಯೆ | ಮೇಲೇನು ಗತಿ ನಮಗೆ ಪೇಳು   || ೨೩೪ ||

ಸತ್ತವರು ಬರಲರಿದು ಪುತ್ರನೆ ನಮಗೊಂದು | ಕಟ್ಟಳೆ ಮಾಡಿ ಪೋಗುವುದು |
ಹತ್ತೇಳು ವರುಷದ [ಕಪ್ಪ] ದಂಡಿನ ವೆಚ್ಚ | ಇತ್ತರೆ ಮುಂಜಾನೆ ನಡೆವೆ                || ೨೩೫ ||

ಮಂದಿಮಕ್ಕಳು ಎಲ್ಲ ಸಂದುದ ನೀ ಬಲ್ಲೆ | ದಂಡಾಡಿ ಸೀ[ಮೆ]ಲ್ಲ ಪಾಳು |
ಇಂದಿಗೆ ಅರ್ಧವ ಕೊಡುವೆ ಮನ್ನಿಸಿ ಪೋಗೆಂ | ದೆನುತ ಬಲ್ಲಾಳ ಕೈಮುಗಿದು         || ೨೩೬ ||

ಆಗಲೈ ರಾಜೇಂದ್ರ ಹಿರಿಯರಲ್ಲವೆ ನೀವು | ಬಹಳ ಕಷ್ಟವ ಪೇಳಿದಲ್ಲೊ |
ಮೀರಬಾರದು ತಮ್ಮ ಮುಂದೆ ನೋಡುವೆ ನಾಳೆ | ಎಂದುದನೀ ಕಾಟ ಒಪ್ಪಿದನು    || ೨೩೭ ||

ಒಪ್ಪಿಕೊಳ್ಳಲು ಪಗುಡಿಯ ಬಲ್ಲಾಳನು | ಪುತ್ರರಿರ್ವರಿಗೆ ಉಡುಗೊರೆಯ |
ತಟ್ಟೆಯಲಿ ಮಡಗಿಸಿ ಸರ್ವಭೂಷಣಗಳ | ಒಪ್ಪಿಕೊಳ್ಳೆಂದೆರಡು ತುರಗ               || ೨೩೮ ||

ದೊರೆ ರಾಮ ತರಿಸಿದ ಪಲ ಬಗೆಯ ಭೂಷಣವ | ಹಿಡಿದ ತೇಜಿಯು ಮೂರು ಸಾವಿರವು |
ಬಿಡಿಸಿದ ಕರಿ ಘಂಟೆಯ ಹನ್ನೆರಡು ಅಹುದೆಯ ಮಾಡಿ | ಕೊಡಿಸಿದ ರಾಮ ಬಲ್ಲಾಳಗೆ || ೨೩೮ ||

ಕಪ್ಪಕಾಣಿಕೆ ಬಂದು ಒಪ್ಪಲು ರಾಮನಿಗೆ | ಕೇಡಾದ ರಾಹುತರ ಕಳೆದು |
ಕಟ್ಟಿದ ರಾಜ್ಯವ ಬಿಡುಯೆಂಬ ರಾಯನಿಗೆ | ದೃಷ್ಟವಾಗಿರು ರಾಯ ಸುಖದೊಳಗೆ      || ೨೪೦ ||

ಯಾತರ ಭರ ಬೇಡ ಭೂಪ ಬಲ್ಲಾಳ ರಾಯ | ಹೊಕ್ಕು ನಡೆದರೆ ಎಮ್ಮೊಳಗೆ |
[ಸಹಕಾ]ರದೊಳು ನಡೆ ಸುರಿತಾಳ ಬಂದರೆ ನಿನ್ನ | ಮಾತಿಗೆ ಪ್ರಾಣ ಕೊಡುವೆನು    || ೨೪೧ ||

ಸರಸದಲಿ ಅರಸನ ಊರಿಗೆ ಕಳುಹಿಸಿ | ತಿರುಗಿದ ರಾಮ ಪಾಳೆಯಕೆ |
ಮರುದಿವಸ ಬೆಳಗಾಗಿ ದೊರೆ ರಾಮ ಗ್ರಹಿಸಿದ | ಹೊಡೆಯಬೇಕೆಂದು ಗುತ್ತಿಯನು   || ೨೪೨ ||

ರಾಜೇಂದ್ರ ಕಂಪಿಲಗೆ ತಾನು ಲೇಖನ ಬರೆದು | ಆದ ಕಾರ್ಯಗಳ ಸ್ಥಿತಿಗತಿಯ |
ಸಾಗುವ ಪಯಣ ಸತ್ತ ಮಂದಿಯ ವಿವರ | ಹೇರಿ ರೊಕ್ಕವನು ಕಳುಹಿದನು           || ೨೪೩ ||

ಮತ್ತೊಂದು ಗ್ರಹಿಸಿದ ಸುತ್ತಲ ರಾಯರಿಗೆ | ಬಿರಿದಿಟ್ಟು ಕಾಗದ ಬರೆಸೆ |
ಕೊಟ್ಟರು ಕಪ್ಪವ ಎತ್ತಿ ಬರಲು ದಂಡ | ಉತ್ತರ ಊಳಿಗ ಕಳುಹಿ                       || ೨೪೪ ||

ಮೂಡಲ ಪಡುವಲ ಯಮನ ಮೂಲೆಯಲಿರ್ಪ | ಮಣಿಯದ ರಾಯ ದೊರೆಗಳಿಗೆ |
[ತೆ]ರಬೇಕು ಬಂಡಿ ರೊಕ್ಕ ಹಿರಿಯ ಬಲ್ಲಾಳನ | ತೆರ ಬೇಕಾದರೆ ಗರ್ವ ನಡೆಸಿ       || ೨೪೫ ||

ರಾಯ ದೊರೆಗಳಿಗೆಲ್ಲ ಹೋಗಿ ಕಾಗದ ಮುಟ್ಟೆ | ಓದುತ ತಲೆಯದೂಗುವರು |
ಏನಾಗಿ ಹೋಯಿತ್ತು ಪಾಶ್ಚಯೆ ಮಿಕ್ಕಿರ್ದ | ರಾಯ ಬಲ್ಲಾಳನ ಗರ್ವ                  || ೨೪೬ ||

ಹಳೆಯಬೀಡೆಂದರೆ ಯಮನ ನಗರಕ್ಕೆ ಹೆಚ್ಚು | ಬಲತುರಗ ಸವಲಕ್ಷ ಉಂಟು |
ದಿನದೊಳಗಳಿಯಲು ಮಲಹರನೆ ತಾ ಬಲ್ಲ | ಮರಳಿ ಜನಿಸಿದನೊ ಕಲಿ ಪಾರ್ಥ     || ೨೪೭ ||

ಬಲ್ಲಾಳನೆಂದರೆ ನಾವೆಲ್ಲರ ತುಳಿಕೊಂಡು | ಗಲ್ಲಾಗಿರ್ದನು ಜಗಕೆಲ್ಲ |
ಜೊಳ್ಳಾಗಿಯದ ಪೋಗೆ ನಮಗೆಲ್ಲಿ ಉಳಿಗಾಲ | ಸಲುವ ತೂಗುವುದೆ ಅತಿ ಲೇಸು    || ೨೪೮ ||

ವೇಳೆಯ ಬಂದಂತೆ ಕಾಲಕಳೆಯುತ ನಮ್ಮ | ಮರೆಯಾದಿಯ ಉಳುಹಿಕೊಂಬ |
ಹೋಗುವುದು ಅತಿ ಲೇಸು ಕಲಹಕ್ಕೆ ಹೊಯಿವನು | [ಮೂಳೆಯ] ಮುರಿದಡಗು ತನಕ        || ೨೪೯ ||

ನಿತ್ಯವಲ್ಲವು ಅವಗೆ ಬತ್ತಿ ಎಣ್ಣೆ[ಯ] ಕೊಟ್ಟು | ತುಂಬಿಟ್ಟ ತೈಲ ತೀರೋ ತನಕ |
ಹೊತ್ತ ನೂಕುವ ಚಿತ್ತರೆಲ್ಲರು ಗ್ರಹಿಸಿ | ಕಟ್ಟಲು ಉಡುಗೊರೆ ಉಲುಪೆ                 || ೨೫೦ ||

ಬಲಮೇಕೆ ಅವನೊಳು ನರರ ಪಡೆ ಉರಿಯಲ್ಕೆ | ಈತನೊಳು ಹರನು ನಿರ್ಮಿಸಿದ |
ಹೊರ ಪಯಣ ಇಳಿಯಲು ಧರಣಿರಾಯರು ತಮ್ಮ | ತುರಗ ಪವುಡಿಯ ಬಲದೊಡನೆ         || ೨೫೧ ||

[ಕೊಂ]ಕು ಮಲೆಯಳದುತ್ತುಂಗರಾಯನು ನಡೆಯೆ | ಅಂಗನೆ ರಾಜ್ಯ ಮಧುರೆಯ |
ಮುಂಗಾಯಿ ನಡೆದಳು ಮೂವತ್ತು ಸಾವಿರದೊಡನೆ | ಚಂದ್ರ ರಾಮನ ಬೆಟ್ಟಿಯನು   || ೨೫೨ ||

ಕೊಡಗು ಕೊಲ್ಲಾರ ಕಾಳಿಂಗ ಕಾಶ್ಮೀರ ದೇಶ | ಬೇಡಗಳ್ಳ ಬಿಕ್ಕ ಶೃಂಗಾರ |
ನಡೆದರು ಮುಂದೆ ದಂಡ ಕಡಲೆದ್ದು ಬರುವಂತೆ | ಪೊಡೆವ ಜಂಡೆಗಳು ಹದಿನೆಂಟು  || ೨೫೩ ||

ಪಾಗೊಂಡೆ ನಿಡುಗಲ್ಲು ಮೋಗಾಳ ಮಿಡಿಗೇಸಿ | ಮಾಗಡಿ ಮಲೆತ ಮದ್ಗಿರಿಯ |
ಸಾಗಲು ದಂಡೆದ್ದು ಮೇಘವು ನಡೆವಂತೆ | ಎಂಬತ್ತು ಸಾವಿರ ಬಲದೊಡನೆ           || ೨೫೪ ||

ಬಳ್ಳಾರಿ ನಿಡುಗಲ್ಲು ಗೊಲ್ಲರ ಬೂದ್ಯಾಳ | ಕಲ್ಹೊಳೆ ದಣ್ಣ ಕಂಗೊಂಡೆ |
ಎಲ್ಲರು ನಡೆದರು ಇಪ್ಪತ್ತು ಸಾವಿರದೊಡನೆ | ತಮ್ಮ [ಹೊನ್ನು]ಗಳು ಸಹವಾಗಿ      || ೨೫೫ ||

ಕಡಪೆಯು ಕರ್ನೂಲು ಗುಡಮುಂಡೆ ರಾಯದುರ್ಗ | ನೆಲೆಕೊಲಪೆ ಚಂಪಕಪುರವು |
ಕೆಲವಾಗಿ ನಡೆದರು ಸಲುವ ಭಕ್ಷವ ಹೇರಿ | ಬಲಗೂಡಿ [ಮೂಟೆ] ಮೂರು ದಶಕ      || ೨೫೬ ||

ನಡೆಯಲು ಕೆಳದಿಯ [ಮಲೆ]ನಾಡು ಮುಂತಾಗಿ | ಅಳವಡದ ತೊಡೆವಾಳ ಉಡುಗುತ್ತಿ |
ಮುರಬಿಲ್ಲು ಮಂದಿಯು………….. | ಹದಿನಾರು ಸಾವಿರದೊಡನೆ                    || ೨೫೭ ||

ಹಾವನೂರು ಹುಬ್ಬಳ್ಳಿ ಜೆರಿಮಲೆಯು ಕನಕಾದ್ರಿ | ರಾಯಪೀಠದ ಆನೆಗೊಂದಿ |
ಮೀರಿದ ಬಲವಂತ ಹಮ್ಮೀರರೆಲ್ಲರು ಬಂದು | ರಾಯ ರಾಮಗೆ ಕೈಮುಗಿದು          || ೨೫೮ ||

ನಾಲ್ಕು ಮೂಲೆಯಲಿರ್ಪ ಭೂಕಾಂತರೆಲ್ಲರು ಬಂದು | ಭೂಪ ರಾಮಗೆ ಕೈಮುಗಿದು |
ಬೇಕಾದ ಉಡುಗೊರೆ ಪವುದಿ ಹೊನ್ನನು ಸುರಿಯೆ | ……..ಕೋಟಿವರೆಯ            || ೨೫೯ ||

ಬಂದ ರಾಯರಿಗೆಲ್ಲ ಆನಂದದೊಳಗೆ ರಾಮ | ಅಂದು ಉಡುಗೊರೆಯ ಮಾಡಿದನು |
ಮುಂದ್ಯಾರು ಬರಲಿಲ್ಲವೆಂದು ಕೇಳಲು ಮಂತ್ರಿ | ಬಂದು ಇಲ್ಲವು ಗುತ್ತಿಯವನು      || ೧೬೦ ||

ಬಡವನೆ ಬರುವುದಕೆ ಬಲ್ಲಾಳಗತಿ ಮಿಕ್ಕ | ಕಲ್ಲ ಹರಿವಾಣ ಸುಡದಂಥ ಶೂರ |
ಉಳಿಯ ಗಾತ್ರಕೆ ಕಲ್ಲ ಹೊಡೆಸದಿರ್ದರೆ | ಚೆಲ್ವ ಕಂಪಿಲನ ಆತ್ಮಜನೆ                 || ೨೬೧ ||

ಬಂದಂಥ ರಾಯರ ದಂಡು ಪಾಳೆಯ ಇಳಿಯೆ | ಒಂದು ಗಾವುದ ತೆರಪಿಲ್ಲ |
ಜೆಂಜೆಯವು ಈಶಾನ್ಯ ಮೂಲೆಗೆ ಮೂರು | ಖಂಡದ ಮೇಲೆ ಇಪ್ಪತ್ತು                || ೨೬೨ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದಿ | ವರ[ವೀವ] ವಿರುಪಾಕ್ಷಲಿಂಗ |
ತರಳ ಚೆನ್ನಿಗರಾಮ ಮುರಿದು ಬಲ್ಲಾಳ[ನ] | [ನಡೆಯೆ] ಗುತ್ತಿಗೆ ಪಂಚ ಸಂಧಿ        || ೨೬೩ ||[1]

[1] + ಅಂತು ಸಂಧಿ ೫ಕಂ ಪದನು ೧೧೦೦ಕ್ಕಂ ಮಂಗಳ ಮಹಾಶ್ರೀ (ಮೂ)