ಶಂಖಿನಿ ಜಾತಿಗೆ ಸಮನಾಗಿ ಜನಿಸಿದಳು | ಎಂತಪ್ಪ ವಿಟರ ಜರೆಯುತಲಿ |
ಬಡನಡುವಿನ ಬಾಲೆ ಪಿಕಸ್ವರವು ವಾಕತ್ವ | ಮಲೆಯ ಕಾಳಿಂಗ [ಮಿಥುನದಿ]         || ೧೨೧ ||

ಅರಗಿಣಿ ಮುದದೊಳು ಸರಸಿಜ ಮುಖಪದ್ಮ | ಕರಿಯೊ ಕೇಸರಿಯೊ ಕೂಟದಲಿ |
ಕುಂಜರಗಮನತ್ವ ಚಂದ್ರನ ಕಳೆ ಕಾಂತಿ | ಅಂಗದ ಕೆಂಪೊ ಪುಲ್ಲಿಗೆಯೊ              || ೧೨೨ ||

ತುಂಬಿ ತುಳುಕುವ ಪ್ರಾಯವ ಕಂಡ ವಿಟಜನರು | ಹಿಂದೆ ಚರಿಸುವರು ಕಡೆಮೊದಲೆ |
ಅರಳುವ ಕಮಲದ ದಳದಂಥ ನಯನಗಳು | ಪುಣುಗಿನ ಮೃಗದ ವಾಸನೆಯು      || ೧೨೩ ||

[ಎಳೆ] ಯಂಚೆ ಗಮನತ್ವ ಕಳಸಕುಚಗಳ ಭಾವ | ಮನದೋರ್ವ ಕರಿಯ ಕುಂಭಗಳು |
ಮಾತಿನ [ಮು]ದದೊಳು ಮಾರುತನ ಸುಳಿಗಾಳಿ | ನೋಟದಿ ಹರಿಣನ ದೃಷ್ಟಿ        || ೧೨೪ ||

ಲೋಕಾಂ[ತರ]ದೊಳಗಿನ್ನು ನೆರೆಯಲಾಪವರುಂಟೆ | ನಾಲ್ಕು ಮೂಲೆಯನು ಬೆರಸುವಳು |
ವಿದ್ಯಾಸದಾನೆಗಳೀ ಈಶ್ವರಗಳವಲ್ಲ | ಮದ್ದು ಮಂತ್ರಗಳ ಜಾಲದಲಿ                 || ೧೨೫ ||

ಹೊದ್ದಿ ಚರಿತವೇಕೆ ನಾನಾದೇಶಂಗಳ | ಒಬ್ಬರ ಕಾಣೆ ತನಗೆಣೆಯ |
ನೆರಹಿದ ಲಾವಣ್ಯ ಧರೆಯೊಳು ಸರಿಗಾಣೆ | ಎರಳೆ ವ್ಯಾಘ್ರನ ವಿದ್ಯೆದೊಳಗೆ           || ೧೨೬ ||

ತಿರುಗುತ ಕಾಳಿಂಗ ಕೊಡಗು ಬಂಗಾಳದಿ | ಚೋಳ ಕರ್ನಾಟ ಮಾಳವದಿ |
ಕಾಂಬೋದಿ ಕೇರಳ ಹಿಂದುಸ್ತಾನವು ತೆಲುಗು | ಕೊಂಕ ಕೊಲ್ಲಾರ ಕನಗಟ್ಟ          || ೧೨೭ ||

ಮುಂದೆಲ್ಲ ರಾಜ್ಯವನು ಸಂಭ್ರಮದೊಳು ಚರಿಸಿ | ಬಂದಳು ಹಮ್ಮೀರಕಿಳಿದು |
ಹಮ್ಮೀರ ದೇಶದಿ ಕುಮ್ಮಟವಿರುವುದು | ನಿಮ್ಮಜ್ಜನಾಳುವನು ಮಗನೇ               || ೧೨೮ ||

ಮುಮ್ಮಡಿ ಸುತನಾಳ್ವ ಹನ್ನೊಂದು ಲಕ್ಷವು ರಾಜ್ಯ | ಧರ್ಮಧರ್ಮದಿ ಕಂಪಿಲನು |
ಅಂತಪ್ಪ ಕಾಲದಿ ಬಂತು ಡೊಂಬರ ಪಾಳ್ಯ | ಜಂತೂರಿಗಿಳಿದು ಕುಮ್ಮಟ [ಕೆ]        || ೧೨೯ ||

ಕಾಂತ ಕಂಪಿಲಭೂಪ ತ್ಯಾಗಿಯೆಂಬರು ರತ್ನಿ | ಮುಂಚೆ ಆಗುವಳು ಶೃಂಗರವ |
ವಾಲೆ ಮೂಗುತಿ ಕಂಠ ಮುತ್ತಿನ ಡಾಬು | ಪಗಡೆ ಗೆಜ್ಜೆ ಕಾಲಕಡಗ                    || ೧೩೦ ||

ವೀರಮಟ್ಟಿಕೆ ಹಸ್ತದೊರೆ ಕಡಗದ ಬಳೆಯು | ರ್ಯಾಗಟೆ ಜಡೆಯು ಕುಪ್ಪಿಗೆಯು |
ಉಂಗುರ ನಡುವಿಗೆ ಕುಂದಣದ ಡಾಬುಳೆ | ಮಂಜಿರ ಮುತ್ತಿನ ಬಲೆಯು             || ೧೩೧ ||

ಶೃಂಗಾರವಾಗಲು ರಂಭೆ ಮೇನಕೆಯರು | ಹಿಂದು ಎನಿಸುವರು ರೂಪಿಂಗೆ |
ನಾರಿ ಶೃಂಗರವಾಗೆ ನಕ್ಷತ್ರದೊಳಗೆ ಚಂದ್ರ | ಮೂಡಿದಂದಲಿ ತೋರುತಲಿ           || ೧೩೨ ||

ತೀರಲು ಲಾವಣ್ಯ ನಿಲವುಗನ್ನಡಿ ನೋಡಿ | ಮೇಲೆ ಚಿಂತಾಕ ತಾನಿಡಲು |
ರಾಯನೋಲಗವನು ಕೇಳುತ್ತ ರತ್ನಾಜಿ | ಸಾಗಲು ಸಂಭ್ರಮದೊಳಗೆ                || ೧೩೩ ||

ನೂರಾರು ಹೆಣ್ಗಳ ಒಡನೆ ಡೊಂಬರು ಕೂಡಿ | ಹೋಗಿ ಕರಮುಗಿಯೆ ರಾಯನಿಗೆ |
ರಾಜಾಧಿರಾಜನೆ ತ್ಯಾಗದಿ ಕರ್ಣನೆ | ನೋಡಬೇಕೆಮ್ಮ ವಿದ್ಯೆಗಳ                     || ೧೩೪ ||

ಮಹಾರಾಜ ನೋಡೆನುತ ಕರವ ಮುಗಿಯಲು ರತ್ನಿ | ನೋಡಿ ಬೆರಗ್ಹೊಡೆದ ನೃಪನಾಗ |
ಕಂಡನು ಕಮಲಾಕ್ಷಿ ಬಂದಂಥ ಲಾವಣ್ಯ | ರಂಭೆಯೆನಬಹುದು ಕಲಿಯುಗದಿ         || ೧೩೫ ||

ಉಂಗುಷ್ಟ ನಡುನೆತ್ತಿ ತುಂಬ ನಯನದಿ ನೋಡಿ | ಕಂದರ್ಪ ನೆಲೆಗೆ ಮೈಮರೆದ |
ಪುಲ್ಲಶರನ ತಾಪ ನಿಲ್ಲಿಸಿ ಮನದೊಳು | ಅಲ್ಲಿ ಕೇಳುವನು ಮಂತ್ರಿಯನು             || ೧೩೬ ||

ಎಲ್ಲ್ಯಾರು ಕಂಡುಂಟೆ ಈ ಸತಿ ರೂಪನೆ ಪೋಲ್ವ | ಹುಲ್ಲೆಗಣ್ಣಿನ ಬಾಲೆಯರನು |
ರತಿದೇವಿ ಪರಿಗಾಣೆ ರಾವಣನು ಕೊಂಡೊಯ್ದ | ಜಾನಕಿಯ ಪೋಲ್ವಳು ನೋಡಿದರೆ  || ೧೩೭ ||

ಅಸಮಾಕ್ಷ ಇನ್ನೆಂಥ ರೂಪ ಕಾಂತೆಗೆ ಇತ್ತ | ಶ್ರುತಿಮಾಡಲಳವೆ ವರ್ಣೆಯನು |
ಡೊಂಬರ ಕುಲದೊಳಗೆ ರಂಭೆ ಜನಿಸಲು ಚೋದ್ಯ | ಅಂಗನಿನ್ನೆಂತು ಪಡೆದಾಕೆ      || ೧೩೮ ||

ಇಂದಿವಳಾಡುವ ವಿದ್ಯೆ ಕುಶಲವೆಂತೊ | ಆಡೆಂದು ವೀಳ್ಯವ ಕೊಡಲು |
ಗಾನವ ಪಾಡುವಳು ಕೋಗಿಲೆ ಸ್ವರಗತಿ | ಮೂರು ಇಮ್ಮಡಿಯ ರಾಗದಲಿ            || ೧೩೯ ||

ಲಾಗ ಪುಟಗಳ ತೋರೆ ಲೆಗ್ಗೆ ಚೆಂಡಿನ ತೆರದಿ | ಭೂಮಿ ಖೇಚರವ ಸೋಂಕದಲೆ |
ತುರಗದ ಭರದೊಳು ನಡೆವಳು ಮಿಣಿಯೊಳು | ಎರಳೆ ವ್ಯಾಘ್ರ ರೂಪದೋರುವಳು  || ೧೪೦ ||

ಬೆದರಲು ಸಭೆಯೆಲ್ಲ ಗಿಳಿಯ ಗಿಡುಗನ ತೆರದಿ | ಕರ ದೂಡುವಳು ನೃಪಜನರ |
ಪಾಡುತ ಲಯ ಸ್ವರದ ತಾಳಗತಿಯಲಿ ದೃಷ್ಟಿ | ನೋಡಲು ವಿಟರು ಮರುಳಾಗಿ      || ೧೪೧ ||

ಕೂಡಿದ ಶು[ಕ್ಲ]ದೋರಿ ಕಾಮಬಿಂದುವು ಒಡೆದು | ನೋಡದೆ ಅವಳ ನಾಚುವರು |
ಅಂತ್ರದಿ ಪುವಗಳು ಮೇಲಂತ್ರ ಶಕ್ತಿಯವಾಗೆ | ಮಂತ್ರಮಾಯದ ಗಾರುಡವು         || ೧೪೨ ||

ಸುತ್ತ ನೋಳ್ಪರ ಕಣ್ಗೆ ಮಿಂಚು ಪೊಳೆವಂದದಲಿ | ಮುಂಚೆ ನಭದೊಳಗೆ ತೋರುವಳು |
ಅಣುವಿದ್ಯೆ ಶ್ರುಣುವಿದ್ಯೆ ಮಿಣಿಯಲಾಡುವ ವಿದ್ಯೆ | ಗಣೆಯನೇರುವ ಶ್ರುಣುವಿದ್ಯೆ      || ೧೪೩ ||

ಮಳೆಯ [ಬ] ರಸುವ ವಿದ್ಯೆ ಕಡ [ಲುಕ್ಕಿಸು]ವ ಮಂತ್ರ | ನಡೆದ ವಿದ್ಯೆಗಳು ಖೇಚರದಿ |
ನಾನಾ ವರ್ಣದ ವಿದ್ಯೆ ನೋಡುತಲಿ ನೃಪವರನು | ಧ್ಯಾನ ಮರೆದನು ನಿಮ್ಮಜ್ಜ       || ೧೪೪ ||

ಆನೆಗೆ ಮದವಿಳಿದ ತೆರನಾಗಿ ಮಂತ್ರಿಯ | ಕೂಡೆ ಮಾತಾಡುವ ಕೇ[ಳ್ಬೇಗ]ನೆ |
ಕಂಡೇನೈ ಬೈಚಪ್ಪ ಭೂಮಂಡಲದೊಳಗಿಂಥ | ಕನ್ನೆಯರೊಳಗೆ ಹೆಣ್ಣುಗಳು         || ೧೪೫ ||

ರಂಭೆಯುರ್ವಶಿಯುರುಂಟೆಂಬುದೆ ಹುಸಿಮಾತು | ಇಂದಿವಳ ನಿಜವೆನ್ನಬಹುದು |
ಚಿತ್ರದ ಪ್ರತುಮೆಯೊಳ್ಪುಟ್ಟುವ ಇವಳಂಥ | ತಪ್ಪದೆ ಎಳ್ಳನಿತು ಭಾವ                 || ೧೪೬ ||

ಸತ್ಯವುಳ್ಳವ ಮಂತ್ರಿ ಸನ್ಮತವೆ ಮನಸಿಂಗೆ | ಇಟ್ಟುಕೊಂಬೆನು ಎನ್ನೊಳಗೆ |
ಆಗಬಹುದು ಸ್ವಾಮಿ ಅರಸು ಕಟ್ಟಲು ಆರಾರ | ಸೋಲು ಗೆಲುವ ಕಾರ್ಯವೆನ್ನದೆ     || ೧೪೭ ||

ಸಾಗುವ ತೆರನಿಲ್ಲ ಕಥೆಯ ಈಕಿಲ್ಲದೆ | ದಾನದಿ ತಿಳಿದುಕೊಂಬೆನಲು |
ರಾಯರಿಗೆ ಬದಲಾರು ಬದಲಾಗಿ ಪೇಳಲು | ಸಿಟ್ಟು ಹನಿಗಾದಾರು ಭೂಪಾಲ         || ೧೪೮ ||

ಜಡೆದಲೆಯ ಯತಿಗಳು ಒಡನುಂಡು [ಕನ್ನೆಯ] ಪಡೆಯದೆ ಕೈಲಾಸಪದವ |
ಆದುದೆ ಇದು ಎನ್ನ ರಾಜಮದದೊಳು ಮಂತ್ರಿ | ದೇವ ಮಾನ್ಯವರೊಳಗಿರವೆ        || ೧೫೦ ||

ಭೀಮನು ಮನಸೋತು ದನುಜೆ ಹಿಡಿಂಬೆಯ | ಕೂಡಲಿಲ್ಲವೆ ಕ್ಷತ್ರಿಕುಲದಿ |
ಉಡುಗೊರೆ ವೀಳ್ಯವ ಕೊಡಿಸಿ ಡೊಂಬರ ಕಳುಹಿ | ಪ್ರೌಢ ರತ್ನಿಯ ರಾಜ ಕರೆದ      || ೧೫೧ ||

ಪೊಡವಿರಾಜ್ಯಕೆ ಮನೆಗೆ ಒಡೆಯಳಾಗಿರುಯೆಂದು | ಮಡಗಿಕೊಳ್ಳಲು ತಮ್ಮ ಬಳಿಯ |
ಹಿರಿಯರು ಬಲ್ಲಂಥ ಅರುಹುಳ್ಳ ಜ್ಞಾನಿಗಳು | ಹೊರಗೆ ಏಕಾಂತ ಮಾಡುವರು        || ೧೫೨ ||

ಕಡೆಗಾಲ ಈ ಪುರಕೆ ಸೀತೆ ಲಂಕೆಯ ಹೊಗಲು | ಅಳಿದ ರಾವಣ ಗಾದೆ ಇವಗೆ |
ಮಂತ್ರಿ ಬ್ರಾಹ್ಮರು ಕೂಡಿ ಏಕಾಂತವಾಡುವರು | ಕಂಟಕ ಬಿಡಿದೀಕೆ ಕಾಲಿಂದ        || ೧೫೩ ||

ಬಂಟನಾದ ವೀರ ಬಡನಾಯನು ಕಡಿದೆಂಬ | ತುಂಟ ಸೂಳೆಯನು ತರಬಹುದೆ |
ಪಟ್ಟಾಭಿಷೇಕರರು ಮುಟ್ಟರು ಪರಸ್ತ್ರೀಯ | ಶಕ್ತಿಯುಳ್ಳಡೆ ಸಲ್ವ ಜಾತಿಯಲಿ           || ೧೫೪ ||

ಹತ್ತೆಂಟು ತಂದಿನ್ನು ಮದುವೆಯಾಗಲು ಮೋಕ್ಷ | ಕೆಟ್ಟ ಸೂಳೆಯರ ಸೋಂಕಿತ ಸಲ್ಲ |

ಕೇಳಯ್ಯ ಮಂತ್ರಿಗಳ ಮೇಲಿಪ್ಪ ಬೈಚಪ್ಪ | ಪೇಳುವೆನಿದಕೊಂದು ಕಥೆಯ            || ೧೫೫ ||
ಮಾದಿಗ ಸತಿಯರು ಲಾವಣ್ಯವಾಗಿರೆ ಕಂಡು | ಕೂಡುವರೆ ಸೂರ್ಯಕುಲದೊಳಗೆ    || ೧೫೬ ||

ಅದು ಹೇಗೆ ಚಾಮರಸೆ ತಿಳುಹೆಲ್ಲ ಪೂರ್ವದ | ನಡೆವ ರಾಯರ ಕಥೆಯನ್ನು |
ದೃಢವಾಗಿ ಕೇಳ್ಮಗನೆ ನಿಮ್ಮಜ್ಜ ಮಾಡಿದಕೆ | ನಡೆವ ಪ್ರಸಂಗಮೂಲವನು            || ೧೫೬ ||

ಲಾಲಿಸಿ ಕೇಳರಸ ಭೂಪಾಲನೆ ಜಟ್ಟಂಗಿ | ರಾಯ ಪೇಳುವೆ ಚಾಮರಸ |
ಭಾನಾಬ್ದಿ ವಂಶದಲಿ ರಾಯ ತ್ರಿಶಂಕನು | ಹೀನ ಸತಿಯಳ ಒಡಗೂಡಿ                || ೧೫೭ ||

ಮಾನ್ಯರ ಮಾತೇನು ಮೂರು ಶಂಕಾಳ್ದವಗೆ | ತೋರದೆ ಹೀನ ಬುದ್ಧಿಗಳು |
ಊರ ಬಾರಿಕನ ಕುಮಾರಿ ಲಾವಣ್ಯಕೆ | ಹೊಲಗೇರಿಲಿ ಮನೆ ಮಾಡಿಸನೆ             || ೧೫೮ ||

ರಾಯ ತ್ರಿಶಂಕನು ನವಖಾಂಡ ಪೃಥ್ವಿಯನು | ಆಳುವನೊಂದು ಚಿತ್ರದಲಿ |
ಪೂರ್ವವೀ ಪಣೆಯೊಳು ಆದ ಲೇಖನ ಬಿಡದು | ಸೂರ್ಯಚಂದ್ರರಿಗೆ ಮುಂತಾಗಿ     || ೧೫೯ ||

ಮತ್ತೆ ಕೇಳ್ ಬೈಚಪ್ಪ ಇತ್ತ ತ್ರಿಶಂಕನು | ಮತ್ತೆ ವಾಲಗದಿ ಕುಳ್ಳಿರಲು |
ಚಕ್ರನಾದವ ತನ್ನ ಕುವರಿಯನೊಡಗೊಂಡು | ಇತ್ತಲಾಡುತಿರೆ ಬೀದಿಯಲಿ            || ೧೬೦ |

ನೋಡಿದ ನೃಪನವಳ ನಯನೇಂದ್ರಿ ದಣಿವಂತೆ | ಮೂಡಲು ಕುಚವು ಎದೆಯೊಳಗೆ |
ಯಾರಿಂಥ ಅತಿಚೆಲ್ವೆ ಜಂಭಾರಿ ಆದಗೆ | ಜಾತಿ ಪದ್ಮಿನಿಯೊ ಮೇನಕಿಯೊ            || ೧೬೧ ||

ಆಳಿದೆನು ಭೂಮಿಯನು ಮೂರು ಶಂಕೊರುಷವು | ನಾರಿಯ ಕಾಣೆ ಇಂಥವಳ |
ನೀರೆಯನೊಡಗೂಡಿ ಬೆಳಗಾಗಿ ಅಳಿದರೇನು | ಕೇಳುವನು ತಮ್ಮ ಮಂತ್ರಿಯ       || ೧೬೨ ||

ಹರನುರಿಗಣ್ಣೊಳು ಅಳಿದವನ ಗೆಲ್ವೊಡೆ | ಪರಶಿವಗಳವೆ ಇನ್ನೊಮ್ಮೆ |
ಸೈರಿಸಲಾರದೆ ಸ್ಮರಣ ಬಾಣದ ಲಗ್ಗೆ | ತರ [ಳೆ ಯಾ]ರೆಂದು ಕೇಳುವನು            || ೧೬೩ ||

ಊರಿಗೆ ಬಾರಿಕನ ಕುಮಾರಿಯೆಂಬರು ಭೂಪ | ಹೀನ ಜಾತಿಗಳು ಹೊರಕುಲದ |
ಆದರಾಗಲಿ ಮಂತ್ರಿ ಆ ನಾರಿಗೆ ಮನಸೋತೆ | ಆ ಕೇರಿಯೊಳರಮನೆ ರಚಿಸು        || ೧೬೪ ||

ರಾಯನಾಡುವ ನುಡಿಗೆ ಪ್ರಧಾನನು ಗಹಗಹಿಸಿ | ತೂಗಿ [ಯೆ] ತಲೆಯ ಮನದೊಳಗೆ |
ತೀರಿತು ಕಡೆಗಾಲ ಮೂರು ಶಂ[ಕವ]ನಾಳಿ | ಹೀನ ಸತಿಯಳನು ನೆರೆಯೆಂದು      || ೧೬೫ ||

ಲಾಲಿಸಬಹುದು ಭೂಪಾಲ ಬಿನ್ನಹವನ್ನು | ಕ್ಷೀಣಜಾತಿಯಳು ಸತಿಯಾಕೆ |
ಕಾಣದೆ ಮನವಿಟ್ಟಿ ಅನ್ಯ ಆಜ್ಞೆಗಳು | ಆಗಲೆ ಯಮನೊಳಗೆನಲು                     || ೧೬೬ ||

ಮರುಳ ಮಂತ್ರಿಯೆ ಕೇಳರಿಯ [ದಾ]ಡುವೆ ನೀನು | ಹಲವು ಜನ್ಮದಲಿ ಹೊಲೆಯಿಲ್ಲವೆ |
ಹೊಲೆಯರ ಮನೆಯೊಳಗಿರಲೊಂದು ರತ್ನವು | ದೊರೆಗಳಾದವರು ಧರಿಸರೆ        || ೧೬೭ ||

ಹೆಣ್ಣು ಹೊನ್ನಿಗೆ ರತ್ನ ಮಣ್ಣಿಗೆ ಕುಲವೇನು | ಸಣ್ಣ ಮಡಕೆಯಲಿ ಸೂತಕವೆ |
ಕಣ್ಣಿಟ್ಟ ಬಳಕಲಿ ಇನ್ನೇನು ಎಲೆ ಮಂತ್ರಿ | ಹಣ್ಣಿಂದತಾಯ್ತು ರತಿಕಲೆಯು              || ೧೬೮ ||

ದೊರೆಗಳಿಗೆ ಕುಲವೇನು ತಿರುಕಗೆ ಭಯವೇನು | ಪರಮಲಿಂಗಕೆ ಹೊಲೆ ಛಲವೆ |
ನವರತ್ನದೊಳಗೊಂದು ಸ್ತ್ರೀರತ್ನ ಮುಖ್ಯಳು | ಹರಳಯ್ಯನೊಳಗೆ ಹರನುಣನೆ       || ೧೬೯ ||

ದೊರೆತನದ ಮಾಳ್ಪ ನರಕವಲ್ಲದೆ ಮುಂದೆ | ಮರುಜನ್ಮವುಂಟೆ ಭವಭವದ |
ಧರಣಿಯೊಳ್ಬೆರೆದುಣನೆ ಜಾತಿಯೊಡೆಯರು ಡೊಂಬ | ತರಳೆ ಚೆನ್ನೆಯ [ಒ] ಡನಾರಿ || ೧೭೦ ||

ಪ್ರತಿ ಮಾತನಾಡದೆ ಮನೆಯ ಮಾಡಿಸು ಮಂತ್ರಿ | ರತಿನಾಥನಟ್ಟಳ ಘನವು |
ಸಕಲ ಜಾತಿಗಳೊಳು ಹಿರಿಯ ಕುಲದವರಾಗೆ | ಪ್ರತಿ ನೀರು ಹೊರಗವರ ಮನೆಯ  || ೧೭೨ ||

ಹರಳರ ಕೇರಿಯೊಳ್ [ಮನೆಮಾಡಿ] ಮಂತ್ರೀಶ | ತಿರುಗಿ ಬಂದರಸಗೆ ಎರಗೆ |
ಬೆರಸಿ ನೋಡುವೆನಿದಕೆ ಟವುಳಿ ಮಾತನುಯೆಂದು | ಭಯಭೀತಿಯೊಳಗೆ ಪೇಳುವನು || ೧೭೩ ||

ಬಂದಾಗ ಕರಮುಗಿದು ರಾಜೇಂದ್ರ ಬಿನ್ನಹ ಕೇಳೊ | ಅಂಜುವೆ ಅರುಹಲ್ಕೆ ಮನದಿ |
ನಂದಾದೀವಿಗೆ ಬೆಳಕು ಕಂಡರೆ ಕುಡಿರ್ದ | ಗಂಡಗೆ ಮರಣ ರೀತಿಯಲಿ               || ೧೭೪ ||

ಬೇಡ ದೀವಿಗೆ ಮಂತ್ರಿ ಮಾಡುವುದು ನೀನೇನು | ಸಾಗಿಸು ಸಕಲ ಭೂಷಣವ |
ನಾನೊಂದನೆಣಿಸಲು ತಾನೊಂದಾಯಿತುಯೆಂದು | ಸಾಗಲು ಮಂತ್ರಿ ಸತಿಯೆಡಗೆ  || ೧೭೫ ||

ರಾಯ ತ್ರಿಶಂಕನ ರಾಣಿ ಗೃಹಕೆ ಪೋಗಿ | ಜೋಡಿಸಿ ಕರಗಳ ಮುಗಿದು |
ಏನ ಹೇಳಲಿ ತಾಯಿ ಭೂಪಾಲ ಅಪಕೀರ್ತಿ | ಮೂಲೋಕದೊಳಗಿಲ್ಲವಮ್ಮ          || ೧೭೬ ||

ಹರಳನ ಮನೆಯೊಳಗೆ ನೆರೆ ಚೆಲ್ವೆ ಸ್ತ್ರೀಯಿರಲು | ಧರಣೀಶ ಭ್ರಮೆಗೊಂಡನಮ್ಮ |
ರಚಿಸೆನಲು ಗೃಹವನು ಮಾಡಿಸಿ ನಿಮ್ಮೆಡೆಗೆ | ಉಸುರಿದೆ ದಯಮಾಡಬಹುದು       || ೧೭೭ ||

ಬೀಳು ಮಾಡದೆ ತಾಯಿ ಸೇವಕನ ಬಿನ್ನಪವ | ಲಾಲಿಸಿ ಅವರ ಭಾವದಲಿ |
ಈ ರಾತ್ರಿ ದಯಮಾಡಿ ಆ ಗೃಹದೊಳಗಿರಲು | ಕಾಲನ ಭಯವಿಲ್ಲ ನೃಪಗೆ            || ೧೭೮ ||

ಲಿಖಿತದ ಬರಹವು ಅಪಕೀರ್ತಿ ಸಾಧನವು | ಮತಿಗೆಡಲು ನೃಪವರನೆ ಬುದ್ಧಿ |
ಸತಿಯರ ಭ್ರಮೆಯಿಡಲಿ ಸಲುವ ಜಾತಿಯ ಮೇಲೆ | ಕಿರಿ ಕುಲದೊಳಗಿಡಬಹುದೆ     || ೧೭೯ ||

ತೋರದೆ ಕುರುಹುಉ ನೀವ್ ಹೊಸ ನೀರೆಯಂದದಿ | ನಾಚು ಮುಗು [ಳಂ]ತಿರಬೇಕು ರಾತ್ರಿ |
ಆಗಲೈ ಎಲೆ ಮಂತ್ರಿ ಪ್ರವೀಣನಾ [ದವ] ನೀನು | ಜೋಡಿಸಿದೆ ಈ ಬಗೆಯ ತಂತ್ರ   || ೧೮೦ ||

ಒಪ್ಪಿಕೊಳುತಲಿ ನಾರಿ ಕೀರ್ತಿ ಪಡೆದೆಲೆ ಮಂತ್ರಿ | ಪೃಥ್ವಿಯೊಳುಂಟೆ ಪೋಲ್ವವರು |
ಇಟ್ಟ ಭೂಷಣದುಡಿಗೆ ಕಳೆದಿಟ್ಟು ಹೊರಕುಲದೊಳಗೆ | ಒಪ್ಪುವ ಸ್ತ್ರೀಯಾಗಿ ನಡೆಯೆ   || ೧೮೧ ||

ರಾಯನರ್ಧಾಂಗಿಯು ಹೋಗಿರಲು ಹೊಲಗೇರಿ | ಗೃಹದೊಳಗೆ ದಿನಕರನು |
ತಾಯ ಗರ್ಭವ ಸೇರೆ ರಾಯ ತ್ರಿಶಂಕನು | ಸಾಗಲು ಹರಿಸಿ ವಾಲಗವ               || ೧೮೨ ||

ಕೇಳೆನ್ನ ವರಮಂತ್ರಿ ಮಾಡಿದ ಕಳತ್ರಯದ | ರಾಣಿ ಕರ್ಣಕೆ ಮುಟ್ಟಲೆನುತ |
ಹೋಗಲಾಗ ತ್ರಿಶಂಕು ಹೊಲಗೇರಿ ಗೃಹದಿ | ಲಲನೆಯೊಳಗೆ ಸುಖವಡೆಯೆ          || ೧೮೩ ||

ತಿಳಿಯದೆ ಸತಿ ಕುರುಹ ನೆರೆಯಲು ಹೊಸಬಾಲೆ | ತೆರದೊಳು ಕಂಡು ಸುಖದೊಳಗೆ |
ಅಗಲಿದ ರತಿಯನು ಅಳಿದ ಮನ್ಮಥ ಕಂಡು ಕೊಡುವಂತೆ ಪಲ ಬಗೆಯ ಸುಖವ     || ೧೮೪ ||

ಘನವಾಗಿ ನೃಪನಿರಲು ಮನಸಿಜಾಂತಕನಲಿ | ನೆಲೆಗೊಂಡ ಸತಿಯ ಗರ್ಭದಲಿ |
ತಂದೆ ಮಾಡಿದ ಕರ್ಮ ಕಂದರ ಕಾಡದೆ ಬಿಂದು ನಿಲ್ಲಲು ಹೊಲಗೇರಿಯೊಳಗೆ        || ೧೮೫ ||

ಮುಂದಲ್ಲಿ ಜನಿಸಿದ ಹರಿಶ್ಚಂದ್ರರಾಯನ ಪಾಡು | ಇದರಿಂದಲಾದುದು ಬೈಚಪ್ಪ |
ಸತ್ಯದಿ ಹರಿಚಂದ್ರ ಸಮರ್ಥರಾಗಲು ಮಂತ್ರಿ | ಕೀರ್ತಿಪಡೆಯನೆ ಕಾರ್ಯಚರಿತೆ     || ೧೮೬ ||

ಕರ್ತುಹರನು ಮೆಚ್ಚೆ ಕೈಲಾಸ ಪದವನೆ ಕಂಡ | ಗೊತ್ತಹುದೆ ತ್ರಿಶಂಕನ ಮಾತು |
ಶಂಕು ಮೂರಾಳ್ದನ ಉಂಟೆ ಕಥೆ ಕಾರ್ಯಗಳು | ಕೆಟ್ಟ ಮನುಜನಿಗೆ ಕಡೆಯಾದ      || ೧೮೭ ||

ಬಿಟ್ಟನಾದಿಯ ಗುರುವ ಮ[ತ್ತೇಕಾಕಿ] ಯಾಗಿ | ಕೆಟ್ಟ ಹರಿಹರನ ಕಾಣದಲೆ |
ಅಷ್ಟು ಬಾಳಿದ ಮೇಲೆ ಬುದ್ಧಿ ಕೂಡದು ಅವಗೆ | ಭ್ರಷ್ಟ ಕಂಪಿಲನ ಮಾತೇನೊ         || ೧೮೮ ||

ಕೆಟ್ಟ ಬುದ್ಧಿಯ ‌ಗ್ರಹಿಸಿ ಕೆಡನೆ ರಾವಣ ಹಿಂದು | ಸತ್ಯದ ಕಥೆ ಪೇಳ್ದ ಚಾ[ಮ]ಣ್ಣ |
ರಾಯ ತ್ರಿಶಂಕುಗೆ ಆದ ಪಾಡನು ಕೇಳು | ಮಾನವರ ಮಾತೇನೊ ಮಂತ್ರಿ          || ೧೮೯ ||

ಆದಿ ಸೂಳೆಯ ತಂದ ರಾಯ ರತ್ನಿಯ ಮೂಲ | ನೋಡುವ ನಡೆವ ಕಾಲ್ಗತಿಯ |
ಚೆಂದದ ಪ್ರಸಂಗ ಎಂದಾಗ ಬೈಚಪ್ಪ | ಕೊಂಡಾಡಿ ಅವನು ಮಂತ್ರಿಯನು           || ೧೯೦ ||

ವಂದಿಸಿದನು ನಾನಾ ತಂತ್ರಭಾಗವ ಮಾಡಿ | ಕುಂದಾಗದಂತೆ ಯಮನೊಳಗೆ |
ಅರಸು ಮೆಚ್ಚಿದ ಬಂಟ ದೊರೆಯಲ್ಲವೆ ಲೋಕದಲಿ | ಪುರುಷಗೆ ಮೆಚ್ಚದ ಸತಿಯು     || ೧೯೧ ||

ಅರಿದು ಮಾಡಲು ಹಾದರ ಪರರ ಭೀತಿಗಳೇನು | ಬರಿದೆ ನಾವೆಲ್ಲರಾಡುವುದು |
[ಅನರ್ಥ] ನೋಡುವೆ ಮುಂದೆ | ಗೋಪ್ಯದೊಳವರು ಇರುತಿರಲು                    || ೧೯೨ ||

ಮತ್ತೊಂದು ಗ್ರಹಿಸಿದ ರಾಯ ಕಂಪಿಲ ಮನದಿ | ಯಾತ್ರೆ ಮಾಡುವ ರಾಮೇಶ್ವರನ |
ಎನ್ನ ಮಂತ್ರೀಶನೆ ನಾಳಿನ ದಿನದೊಳು | ದೇವಾಲಯಕೆ ಹೋಗಬೇಕು              || ೧೯೩ ||

ಸಾಗಿಸು ಬೇಕಾದ ಸೌರಣೆಯೆನ್ನಲು | ಮಂತ್ರೀ [ಶ] ಒಳಿತು ಬುದ್ಧಿ ಎನಲು |
ಕಬ್ಬು ಕಡಲೆ ಬೆಲ್ಲ ಉದ್ದು ತೆಂಗಿನಕಾಯಿ | ಸಿದ್ದಿಗೆ ಎಣ್ಣೆ ಕುಪ್ಪೆಗಳು                    || ೧೯೪ ||

ಸಜ್ಜಿಗೆ ಒಡೆಗೋದಿ ಸಕಲ ಸನ್ನಾಯವನು | ಬುದ್ಧಿಶಾಲಿಗಳೊಡನೆ ಕಳುಹಿ |
ಅಕ್ಕಿ ಸಕ್ಕರೆ ಜೇನುತುಪ್ಪ ರುಚಿಗಾಯನು | ಲೆಕ್ಕವಿಲ್ಲದೆ ಸಾಗೊ ಹಣ್ಣು                || ೧೯೫ ||

ಬತ್ತಿ ಬಾಣದ ಬಿರುಸು ಕರ್ಪೂರ ಸಾಂಬ್ರಾಣಿ | ಅಷ್ಟಭಾಗದ ಹೋಳೆಲೆಯು |
ಸಾಗಿಸಿ ಸಕಲವ ಬೇಕಾದ ಸೌರಣೆ | ಪಾಕ [ಮಾಡುವ] ಹಣ್ಣುಗಳು                   || ೧೯೬ ||

ಜ್ಯೋತಿರ್ಮಯನ ಗುಡಿ ರಚಿಸಿ ಶೃಂಗರ ಮಾಡಿ | ಭೂಪಗರುಹಲು ವರಮಂತ್ರಿ |
ತೋರಣ ಮೇಲ್ಕಟ್ಟು ಬೀದಿ ಶೃಂಗರಮಾಡಿ | ಭೇರಿ ಕಹಳೆಗಳೊದರುತಲಿ           || ೧೯೭ ||

ಕೂಡಲು ಬಲ ತುರಗ ಸಾರಿಸಿ ನಗರದೊಳ್ | ರಾಯ ಜಟ್ಟಂಗಿ ಯಾತ್ರೆಯನು |
ಮಂತ್ರಿ ಪ್ರಧಾನರು ಪಟ್ಟ [ಸ]ತಿ ಹಿರಿಯರು | ಸಕಲ ಜಾತಿಗಳು ಭೂಸುರರು         || ೧೯೮ ||

ಸತಿಯರು ಪಟ್ಟದರಾಣಿ ಒಡನೆ ಬಹ | ಸಖಿ ಜನದ ಜಾತ್ರೆ ಸಹವಾಗಿ |
ಪಗಲೊಡೆಯ ರಥವೇರಿ ಪ್ರಭೇಸೂಸಿ ಬರುವಂತೆ | ನಗರವ ಪೊರಡೆ ರಾಜೇಂದ್ರ    || ೧೯೯ ||

ಚತುರಂಗ ಬಲಗೂಡಿ ಬಂದು ವನದೊಳಗಿಳಿಯೆ | ಲಿಖಿತವಳಿಯಲು ಭಾಸ್ಕರನು |
ವರುಣಾದ್ರಿಯಲ್ಲಿ ಪೂರ್ವದ ಕಳೆ ಸೂಸೆ | ಹರಿಣಾಂಕಧರನು ಪೊಗಲೆ [ಣಿ]ಸಿ         || ೨೦೦ ||

ಮೆರವಣಿಗೆ ಉತ್ಸವ ಕರಡೆ ಪಾತ್ರಗಳಿಂದ | ಹರನ ಊಳಿಗನ ನಡೆಸುವರು |
ಅಷ್ಟಭೋಗದ ಪೂಜೆ ಕೊಟ್ಟನು ನೃಪ ಹರಗೆ | ಮೆಚ್ಚುವಂದದಿ ಸುರಗಣವು           || ೨೦೧ ||

ನಿತ್ಯದಲಿ ಅಳಿವ ತಾ ಪೂರ್ವದ ವೀರ ತಾವ | ಒಪ್ಪಿಸಿ ಹರನ ಊಳಿಗವ |
ಉದಯವಾಗಲು ರಾಯ ಬಿಜಗೈಸಿ ಸ್ವಾಮಿಯನು | ಪರಮಾನ್ನ ಭೋಜನ ಸವಿದು  || ೨೦೨ ||

ಜನಕನು ನಿಮ್ಮಯ್ಯ ಅಯ್ಯ ಮಾಡಿರುವಂಥ | ವನಕೆ ಬಿಜಯಂಗೆಯೈ ನೋಡಲ್ಕೆ |
ತಂದೆ ಹಾಕಿಸಿದಂಥ ಶೃಂಗಾರವನ ನೋಳ್ಪೆನೆಂದು | ನಡೆಯಲು ತಾನು ನೃಪವರನು        || ೨೦೩ ||

ಸಂಗಡ ಮಂತ್ರಿಗಳು ಸತಿಯರನೊಡಗೂಡಿ | ಬಂದನು ನಿರೊರುಕ್ಷ ನೋಡ |
ಗಂಧ ಚಂದನ ವೃಕ್ಷ ನಿಂಬೆ ನೇರಿಲು ದ್ರಾಕ್ಷೆ | ತೆಂಗು ಬಾಳೆಯು ಬೆಲ್ವತವು          || ೨೦೪ ||

ಅಂಬಟ್ಟ ಕಿರುನೆಲ್ಲಿ ಅಶ್ವಜಾಲದ ವೃಕ್ಷ | ಜಂಬುದ್ವೀಪಾಂತ್ರದ ದ್ರಾಕ್ಷಿ |
ನಾಗಸಂಪಗೆ ನಂದಿ ದಾಳಿಂಬ ನೂರೆಂಟು | ಬಾಲರ ಪಡೆದ ಪಲಸುಗಳು            || ೨೦೫ ||

ಬಾಲೆಯರ ಪಡೆಯದೆ ಮಾವನೆಂಬರು ಲೋಕ | ಆ ಕಾಲದಲಿ ಫಲದೋರೆ |
ಆ ವನದ ಶೃಂಗಾರ ಮಗನ ಹರುಷದಿ ನೋಡಿ | ಕೊಳನ ತೀರಕೆ ಬಂದು ಕುಳಿತು    || ೨೦೬ ||

ಪಲಬಗೆಯ ಪಣ್ಣ ಸವಿದು ಬಳಲಿಕೆಯನು | ಕಳೆಯುತಲಿ ರಾಯನಿರಲಿತ್ತ |
ವೃಕ್ಷದೊಳಿರುವಂಥ ಪಕ್ಷಿಜಾತಿಗಳೆಲ್ಲ | ಅಕ್ಕರೆಗೊಳುತ ಮರಿಗಳಿಗೆ                  || ೨೦೭ ||

ರೆಕ್ಕೆಯ ಪಸರಿಸಿ ಗುಟುಕ ಕೊಡುವುದ ನೋಡಿ | ಉಕ್ಕಲು ದುಃಖ ಹರಿಯಮ್ಮಗೆ |
ಪಕ್ಷಿ ಜೀವನಕುಂಟು ಮಕ್ಕಳ ಅಪೇಕ್ಷೆ | ಅಕ್ಕರದೊಳಗೆ ಸಲಹುವುದು                 || ೨೦೮ ||

ಇಂತೊಮ್ಮೆ ಗುಟುಕನು ಕಚ್ಚಿ ಮುದ್ದಾಡುವ | ಪಕ್ಷಿಗೆ ಕಡೆ ನಮ್ಮ ಜೀವ |
ಮಕ್ಕಳಿಲ್ಲದ ಮನೆಯು ಒಕ್ಕಲಿಲ್ಲದ ಗ್ರಾಮ | ಭಕ್ತಿಯಿಲ್ಲದನ ಶಿವಪೂಜೆ                || ೨೦೯ ||

ಮುಕ್ಕಣ್ಣನವತಾರ ಇಲ್ಲದ ಊರನು | ಹೊಕ್ಕರೆ ಫಲವೇನು ಕಾಂತ |
ಬಾಲರಾಡದ ಮನೆಯು ದೀವಿಗಿಲ್ಲದ ದೇವಾಲ್ಯ | ಹಾಲು ಹಯನಿಲ್ಲದ ಹಬ್ಬ          || ೨೧೦ ||

ಕಾಲೆರಡು ಇಂಗಿದ ಮನುಜನ ತೆರನಂತೆ | ನಾರಿಗೆ ದುಃಖ ಉಮ್ಮಳಿಸೆ |
ಅರಸುತನಗಳು ಯಾಕೆ ಆನೆ ತುರಗವ ಪಡೆದು | ಸರ್ವ ಭೋಗಗಳು ಇನ್ಯಾಕೆ       || ೨೧೧ ||

ತನುಜರನು ಪಡೆಯದ ಮನುಜರು ಊರಿಗೆ | ಸಮನಹುದೆ ನೂರೆಂಟು ಕುಲದಿ |
ಏನು ಪಡೆಯಲು ಹಾನಿ ಸಂತಾನ ಪಡೆಯದ ಬಳಿಕ | ಜೇನಿಟ್ಟು ಪರರು ತಿಂಬಂತೆ   || ೨೧೨ |

ನಾವಿದ್ದು ಫಲವೇನು ಸಂತಾನವಿಲ್ಲದ ಜೀವ | ಹಾಳೂರ ಹದ್ದಿನ ತೆರದಿ |
ಕ್ಷೋಣಿ ಚತುರಂಗ ಪ್ರಧಾನ ಮಾನ್ಯಗಳು ಇರಲು | ಹೇಳಬಲ್ಲರೆ ತಮ್ಮ ಹೆಸರ       || ೨೧೩ ||

ಆಲದ ಬಿಳಲಂತೆ ಕುಡಿ ಸಾಗಿಬಂದರೆ | ಪುಣ್ಯ ರಾಣಿಯ ಸುಖಕೆಣೆಯೆ |
ದುಃಖಸಲ್ಲದು ನಾರಿ ಮಕ್ಕಳನು ಪಡೆಯಲ್ಕೆ | ತನ್ನಿಚ್ಚೆಯೇ ಲೋಕದೊಳ್ಮರುಳೇ     || ೨೧೪ ||

ಮುಕ್ಕಣ್ಣ ಹರನೊಳು ಪಡೆಯದೆ ನಾವ್ ಬಂದು | ಇಲ್ಲ್ಯತ್ತರೇನು ಫಲ ಕಾಂತೆ |
ಸತಿಯೆ ಕೇಳೆಲೆ ನಾರಿ ಮತಿಗೆಟ್ಟು ಶೋಕಿಸುವೆ | ಸುತರ ಪಡೆಯಲು ಸುಮ್ಮನಹುದೆ || ೨೧೫ ||

ಸಿತಕಂಠನೊಳು ಮುನ್ನ ಪಡೆಯದೆ ನಾವ್ ಬಂದು | ವಿಕಳತೆಬಡುವರೆ ನಾರಿ |
ಮಕ್ಕಳಾದಡೆ ಏನು ಅಪಕೀರ್ತಿ ಸಾಧನವು | ಹೆತ್ತವರಿಗೆ ಬಿಡದ್ಹೀನ                   || ೨೧೬ ||

ಪೃಥ್ವಿಪಾಲಕರಿಗೆ ದತ್ತಪುತ್ರನು ಜನಿಸೆ | ಮರ್ತ್ಯವುಳ್ಳನಕ ಅಪಕೀರ್ತಿ |
ಹಿಂದಲಾಗಮ ತಿಳಿಯೆ ಚಂದ್ರನ ಮುಖದವಳೆ | ಒಂದೊರ್ವ ವಿರಾಟನ ಸುತನು    || ೨೧೭ ||

ಕೌರವನೊಡನೆ ಕಾಲಗಡೊಳಗೆ ಓಡೆ | ತಂದೆಗೆ ಬರದೆ ಅಪಕೀರ್ತಿ |
ಶೋಕವನು ಬಿಡು ನಾಡಿ ಈಶ್ವರನು ಸ್ತುರಿ ಮಾಳ್ಪ | ಲೇಸಾಗಿ ಪಡೆವೆ ಸಂತಾನವ   || ೨೧೮ ||

ಭಾಷೆ ರಾಣಿಗೆ ಇತ್ತು ಭವರೋಗ ಜಟ್ಟಿಂಗ | ರಾಮೇಶ ಗುಡಿದೆದ್ದು ನಡೆಯೆ |
ಬಾಲರ ಅಪೇಕ್ಷೆ ರಾಯಗೆ ತಲೆದೋರಿ | ಸಾಗಲು ಹರನ ಆಲಯಕೆ                   || ೨೧೯ ||

ಜೋಡೆರಡು ಕರ ಮುಗಿಯೆ ದೀರ್ಘ ಪ್ರಣತರಾಗಿ | ರಾಣಿ ರಾಜೇಂದ್ರ ಇರ್ವವರು |

ವ್ಯಾಲಪದ:

ಹರನೆ ಜಯತು ನಿಮ್ಮ ಘನವ ಸ್ಮರಿಸುವೆನು |
ಪಾಲಿಸೆನಗೆ ಗಿರಿಜಾರಮಣ ||

ಮರವೆ ಮನುಜನ ಹೊ[ಲ್ಲಗು]ಣಂಗಳ ನೋಡಸಲ್ಲದು |
ಹರಿಯ ಸುತನ ಹತವ ಮಾಡಿ ಧರಿಸಿದಭವ ಬೂದಿಯನ್ನು ||
ಧವಳವರ್ಣ ದಯಮಾಡೊ ರಾಮೇಶಲಿಂಗ ತ್ರಾಹಿದೇವ |
ಸಕಲಜೀವದಯಾಪರಿಯನ್ನು ನಂಬಿದವರ |
ಆವ ಮುಖದಿ ಸಲಹುತ್ತಿರ್ಪೆ ಶೂಲಧರನೆ |
ಭೂಮಿರಾಜ್ಯವನ್ನು ಪಡೆದೆ ಪಾದಕಮಲ ಪೂಜೆ ಮಾಡಿ |
ಜ್ಞಾನಗುಣದೊಂದು ಮರೆದೆ ಸಂತಾನಫಲವನು ||

ಇತ್ತೆ ಭೋಗ ಸಕಲಚಂದ್ರ ಅಮರಾಧೀಶ ಪದವಿಗಳನು
ದತ್ತಬುದ್ಧಿ ಮತಿಗಳಿಂದ ಮತ್ತೊಂದು ಮರೆದೆನು |
ಕೊಟ್ಟ ಭೋಗನುಣ್ಣುವುದಕ್ಕೆ ಪುತ್ರರಿಲ್ಲ ಪಾಲಿಸೆಂದು |
ಮುಕ್ತಿಧರನೆ ನಿಮ್ಮ ಭಜಿಪೆ ರಾಮೇಶಲಿಂಗ ||

ಬೇಡುವೆನು ಹರನೆ ನಿಮ್ಮ | ದಯಮಾಡದಿರಲು |
ಹರಣಗಳನು ನೀಡುವೆನು ಪಾದದೆಡೆಯ ಹಾಯ್ದು ಶೂಲವ |
ಊನವ್ಯಾಧಿ ತನುಜರೆನಗೆ ಬೇಡ ಹರನೆ |
ಜಗವನೊತ್ತಿ ಆಳುವಂಥ ಧೀರನೆನಗೆ ಪಾಲಿಸೆನಗೆ                                   |

ಅನಿತರೊಳಗೆ ಹರನು ದಯಕರಿಸಿ ಕೊರಳಿನ |
[ಹೆದೆ]ಪುಷ್ಪವನು ತೆಗೆದಿಡಲು | ಮನಸಿಗೆ ಸಂಶಯ ನಿರ್ಧರವು |
ಕಾಣದು ಗುರುವೆ ಅಭಯ ಪ್ರಸಾದ ಪಾಲಿಪುದು |
ತಿಗುಳಾಣ್ಯ ಮುಗುಳಾಣ್ಯ ತೆಲುಗಾಣ್ಯ ಚತುರ್ದಿಕ್ಕು |
ನವಖಾಂಡ ಇದಿರಿಲ್ಲವೆಂಬ | ಚದುರ ಪ್ರತಾಪಿಯ |
ಹೃದಯದಿ ಕೊಡಬೇಕು | ಅಧಮನಾಗಲು ಒಲ್ಲೆ ಹರನೆ |
ಸೋಮಧರನಿ [ಗೆ]ಶಾಂತಿ ಪುಟ್ಟಿ | ಕೋಮಳಾತ್ಮದಿ ಹಿಗ್ಗಿ ಬೇಡಿದ ವರವಿತ್ತು ಹರನು |
ಕಾಲಭೈರವನಂಥ ಕುಮಾರನಾಗಲಿಯೆಂದು ತ್ರಿಶೂಲದ ಪ್ರ [ಸಾ] ದವಿಡಲು |
ಗಂಧಪ್ರಸಾದವ ತಂದು ತಮ್ಮಡಿ ಕೊಡೆಯೆನಲು |
ಒಂದಾರು ಭುಜವಾಗೆ ನೃಪನು |
ಚಂದ್ರಧರನ ತಮ್ಮ ವಂಶವನುದ್ಧಾರವ ಮಾಳ್ಪ |
ಮಂಡೆಯ ಮೇಲಿಟ್ಟುಕೊಂಡ |
ಕದಳಿಯ ಫಲದಲ್ಲಿ ಹುದಗಿ ಪ್ರ [ಸಾ] ದವ |
ಮಡದಿ ಹರಿಯಮ್ಮಗೆ ಕೊಡಲು | ಕರುಣೆಯಾಗಿ ವರುಷದನೇ |
ಯಾಕೆ ತೋರಲು | ಬೆರಗಾದ ಮನಮೂರ್ಚೆಯೊಳಗೆ |
ಪುತ್ರ ಕೇಳೈ ನಿಮ್ಮ ಪಿತನ ಜನನತ್ವ ಹತ್ತಿತ್ತೆ |
ಕರ್ಣಶೋಭಿತವೊ ಇತ್ತನು | ಹರಶಂಭು ಜಟ್ಟಂಗಿ |
ರಾಮೇಶ್ವರನಾ ಶಕ್ತಿಯಾದಂಥ ವರಿಪಿಂಡ |
ಜನ್ಮ ಪಾವನ ಗುರುವೆ ಮುಗಿಸಿ ಇಂದಿಗೆ ವಚನ |
ಪಗಲೊಡೆಯ ತಾಯೊಡಲಗಂಡ |
ಮೃಗಧರನು ಹಂಪೆ ವಿರೂಪಾಕ್ಷನ ವರದೊಳು |
ಮುಗಿಯಲು ಪ್ರ [ಥ]ಮ ಏಕಸಂಧಿ[1]

[1] + ಸಮಾಪ್ತ ಮಂಗಳ ಮಹಾಶ್ರೀ (ಮೂ)