[1][ತ್ರಿಪದಿ]

ರಾಮನಾಥನ ಪ್ರೇಮದ ಚರಿತೆಯ
ತಾಮಸವಿಲ್ಲದೆ ಪೇಳುವೆ | ಭೂಮಿಪ[ನೆ]
ಒಲಿದು ಲಾಲಿಸು ಮುದದಿಂ ||

ಕಾಮಹರನೊಲವಿಂದ ಪಡೆದ ಕಾಳಗ ಗತಿಯ
ಪೇಳಲಳವೆ…. ಕಲ್ಕಿಯೊಳು ಕ[ಥೆ]ಯಂ ||

[2][ಸಾಂಗತ್ಯ][3]

ಶ್ರೀ ಗಿರಿಜಾ ಶಂಭು ಕುವರನೆ ಗಣಪತಿ | ಪ್ರೇಮದಿ ಸಾಗಿಸು ಕೃತಿಯ |
[ಆ]ಗಿಸು ಶ್ರುತಿಸಾರ ಜಿಹ್ವಾಗ್ರದೊಳು ನಿಂದು | ಪಾರ್ವತಿಯಣುಗ ಗಣೇಶ           || ೧ ||

ಸಾಸಿರ [ಹೆ] ಡೆಯನ [ಭೂಷಣ]ವನ್ನಿಟ್ಟು | ಮೂಷಕವಾಹನ ಪಿತನೆ |
ಪ್ರಾಸಡಿ ಬೀಳದೆ ನಿರ್ಮಲ ಮತಿಯಿತ್ತು | ಈಶ ಕೊಡೆನಗೆ ಸತ್ಕ್ರಪೆಯ                || ೨ ||

ಕಾಯವಿಲ್ಲದವನ [ಸರ್ಪನಯ್ಯನಾ]ರೂಢ | ನಾಗಿಹ ನಾನಾಮ[ಯ] ಜನ |
ಮಾಡಿ [ಯೆ] ನಯನದಿ ಬೂದಿ ಭಸಿತವನಿಟ್ಟ | ಏಣಾಂಕಧರನೆ ಕೊಡು ಮತಿಯ     || ೩ ||

ನರಮುಖವತಿಗಳೆದು ಕರಿಮುಖ ಧರಿಸಿದೆ | ಒಲಿದು ಮೂಷಕವನೇರಿದನೆ |
ವಿವಹವನೊಲ್ಲದೆ ಬಲಿದೆ ಶಾಸ್ತ್ರವನ[ನ]ಘ | ತಡಡೂರ ಬೆನವ ಕೊಡು ಮತಿಯ     || ೪ ||

ಭಾರತಿ[ಬ್ರಹ್ಮಾಣಿ] ಪಾಲಿಸು ಮತಿಯನು | ವೇದವಾಕ್ಯದೊಳು ಬಲ್ಲಿದಳೆ |
ಆಡಿಸು ನುಡಿ ಜಿಹ್ವೆ ತುದಿಯಾಗ್ರದೊಳು ನಿಂದು | ಹಾದಿವಿಡಿದಂತೆ ಬಲ್ಲವರು        || ೫ ||

ಪ್ರಳಯ ಕಾಲವ ಗದ್ದೆ ಭುವನದ ಹೆಪ್ಪಿಟ್ಟೆ | ಸಲಹುವೆ ಜಗವ ಸಂತವಿಸಿ |
ಗೆಲಿದೆ ಪಾಪವ ಕಲ್ಯಾಣದೊಳು ಬಂದು | ಬಸವರಾಜನ ಕೊಡು ಮತಿಯ            || ೬ ||

ಮರುಳಾಗಿ ದಕ್ಷನ…..ಹೋಮವನಿಡಲು | ಬೆವರೊಳು……ಜನಿಸಿ |
ನವಕೋಟಿ ಅಸುರರ ಸಂಹರಿಸಿ ಬ್ರಹ್ಮನ | ಶಿರ ಹೊಡೆದೀಶಗೆ ಶರಣು                || ೭ ||

ದೇವತೆ ಭಜನೆಯ ಮಾಡಿದೆ ಬಲ್ಲಂತ | ಕೊಂಡಾಡುವೆ ಕವಿಸ್ತೋಮವನು |
ಕಾಳಿದಾಸನು ಕನಕ ತಾಳಪದ ಚೆನ್ನ | ಮೇಲೆ ಪುರಂದರ ವಿಠಲ                     || ೮ ||

ಹರಕವಿ ಹಂಪೆಯ ಹರಿ ರಾಘವಾಂಕರ | ಕೆರೆಯ ಪದ್ಮರಸ ಕವಿಲಿಂಗ |
ಚರಣಾರವಿಂದಕ್ಕೆ ಎರಗಿ ವಂದನೆ ಮಾಡಿ | ಕಡಲ ವಿಸ್ತರವ ವರ್ಣಿಸುವೆ              || ೯ ||

ವರಕವಿಗಳನು ವಂದಿಸಿ ಮುಂದಲ | ನರಕವಿಗಳು ಕೀರ್ತಿಸುವೆ |
[ಒರೆವೆನು] ಕೃತಿಯನು ನುಡಿ ತಪ್ಪು ಕುಂಡಡೆ | ಜರಿದಾಡದೆನ್ನ ತಿದ್ದುವುದು           || ೧೦ ||

ಆದಡೆ ಅಪನಿಂದೆ ಓದುವ ನಿಪುಣರು | ಬೀಳಾಗಿ ಇರಲು ಅಕ್ಷರದಿ |
ಕೂಡಿಕೊಂಬುದು ನಿಮ್ಮವನೆಂದು ಕವಿವರ್ಣ | [ಕೊಡಲು ಒಳ್ಭಾವಿಸಿ] ನೆಲೆಯ       || ೧೧ ||

ಹಿಂದು ಮುಂದಲ ಕವಿಗೆ ವಂದಿಸಿ ಸಾಗರದ | ಶೃಂಗಾರ ಸಿರಿಯನು ಒರೆವೆ |
ಕುಂಬಿನಿಯೊಳ್ಪುರ ಮಧ್ಯ ಜಂಬುದ್ವೀಪಾಂತ್ರವು | ಸಂಭ್ರಮದಿ ಮೆರೆ [ಯೆ] ದೇಶಗಳು || ೧೨ ||

ಜಂಬುದ್ವೀಪದ ಸುತ್ತಲಿಂಬುಗೊಂಡಿಹ ಲವಣ | ವೆಂಬ ಸಾಗರದ ಕಡೆಮೊದಲ |
ಕಂಡವರತಿ ಚೋದ್ಯ ಕೌಮಾರಿ ಹೊರತಾಗಿ | ಮುಂದೆ ನರರಿಗೆ ಸಾಧನವೆ          || ೧೩ ||

ಮುತ್ತು ಶಂಖವು ಮಾಣಿಕ ರತ್ನ ವೈಢೂರ್ಯ | ಮೊತ್ತವು ಕಡಲ ಸ್ಥಾನದಲಿ |
ಮತ್ತೆ ಏಳನು ದಾಂಟಿ ಕಂಡೆವೆಂಬಾತನ | ಮೃತ್ಯುಂಜಯ ಎನ್ನಬಹುದು             || ೧೪ ||

ಮೇಘ ಪ್ರಪಂಚ ಸಾಗರದ ನೆಲೆಯ ಮೇಲೆ | ಬರುವಂಥ ಕಾಲಗತಿಯು |
ಯಾರಿಗೆ ತಿಳಿಯದು ಹರಿಯಜ ಮೊದಲು | ಕಾಣದೆ ಕಷ್ಟಪಡಲಿಲ್ಲವೆ                  || ೧೫ ||

ರಾಮಕೃತಿಯ ಸಾರ ಯಾರು ಮಾಡಿದರೆಂದು | ಆಡರೆ ಜನರು ಲೋಕದೊಳು |
ರೂಢಿಯೊಳ್ [ಕವಿ]ರತ್ನ ಹಂಪೆಯ ಚರಪತಿ | ಮಾಡಿದ ಮಹಲಿಂಗಸ್ವಾಮಿ          || ೧೬ ||

ರೇವಣಾಚಾರ್ಯರ ಮೂಲಾಗ್ರ ಶಿವಗಂಗೆ | ಮೇಲಣಗವಿಯ ಸ್ಥಾನಗಳು |
ರೂಢಿಯೊಳೀ ಕೃತಿ ಸ್ಥಿರಕಾಲ ನಡೆಯಲೆಂದು | ಮಾಡಿದ ವಿರೂಪಾಕ್ಷ ವರದಿ         || ೧೭ ||

ರಾಮನ ಕೃತಿಯೊಳು ಮೊದಲಾವುದೆಂದರೆ | ಚತುರಾಷ್ಟ್ರಕಧಿಕ ಹಮ್ಮೀರ |
ರತ್ನಮಾಣಿಕದಂತೆ ಮೆರೆವ ಕುಮ್ಮಟದುರ್ಗ | ಇಪ್ಪುದು ಕಿರಣ ಪ್ರಭೆಯಂತೆ           || ೧೮ ||

ಅಮರೇಂದ್ರ ನಗರಕ್ಕೆ ಮಿ[ಲಾಗಿ]ಗಿ ಎರಡನೆ | ಕನಕ ವೈಢೂರ್ಯ ತರುವ |
ದಿನಕರನ ತುಡುಕುವ [ಕೆ]ರೆಯ ಅಗಳಿನ ನೆಲೆಯು | ಗಜಕೂರ್ಮ ಬೆನ್ನ ತಟ್ಟುತಲಿ   || ೧೯ ||

ಮೂರು ಸುತ್ತಿನ ಕೋಟೆ ಗಾರೆಗೆತ್ತಿಗೆ ಕಟ್ಟು | ನೂರೆಂಟು ಫಿರಂಗಿ ತವಗ |
ಸೂರ್ಯಚಂದ್ರನು ಯಮರಾಜಗೆ ಭಯವೆನಿಸಿ | ರಾಜಸೇನಿತಗ…ರಿ ಮಠವು        || ೨೦ ||

ಸೋಮ ಸೂರ್ಯರ ವೀಧಿ ಕಾಮಿನಿಯರ ಕೇರಿ | ವಾಮಲೋಚನೆಯರ ಕೇರಿ |
ಮಾಣಿಕ ನವರತ್ನ ಪುಷ್ಯರಾಗವ ಕೆತ್ತೊ | ಜಾಣ ಪಂಚಾಳದ ಬೀದಿ                    || ೨೧ ||

ಹರ[ಪೂ]ಜೆ ಗುರುವರ ಹರಿಸ್ಮರಣೆಯ ಮಾಳ್ಪ | ಪರಮಭಕ್ತರ ಪುರದೊಳಗೆ
ಜಯಲಕ್ಷ್ಮಿ ವರದಿಂದ ಮೆರೆವುತಿರ್ಪುದು ನಗರ | ಎದೆಶೂಲವಾಗಿ ವೈರಿಗಳ          || ೨೨ ||

ಜಗಳ ಅರಿದೆನೆ ಇರ್ಪ ಪುರದೊಳು ನೆಲೆಗೊಂಡ | ಮೃಗಧರ ಪರಮೇಶಲಿಂಗ |
ಪುರದ ಜಟ್ಟಂಗಿ ರಾಮೇಶನ ಚರಿತೆಯ | ಪರಿಯ ಪೇಳಲು ಶೇಷಗರಿದು             || ೨೩ ||

ಹರನ ಆಲಯದ ಗುಡಿಯ ಬಾಗಿಲ ಮುಂದೆ | ಕರುಮಾಡ ನಂದಿಯಧ್ವಜವು |
ಮೆರೆವ ಗೋಮುಖದಿಂದ ಮಿಸುನಿ ಕಳಸದ ಪ್ರಭೆಯು | ಮುಸುಕುತಿರಲು ದಿನಕರನ || ೨೪ ||

ಧರೆಯ ಭಕ್ತರಿಗೊಲಿದು ಹರಶಂಭು ಜಟ್ಟಂಗಿ | ಪರುಮಧ್ಯದಲ್ಲಿ ನೆಲೆಗೊಂಡು |
ಹಿರಿದಲ್ಲ ರಜತಾದ್ರಿ ಅರಸಿ ಪಾರ್ವತಿ ಸಹ | ಸ್ಥಿರಗೊಂಡ ಪೂಜೆಯ ಫಲಕೆ            || ೨೫ ||

ಅಂತಪ್ಪ ಪುರವನನಂತ ಕಾಲದೊಳ್ ಪೊರೆವ ಭೂ | ಕಾಂತ ರಾಮೇಂದ್ರನ ತನುಜ |
ಪಂಥದಿಂ ಸಲಹುವ ಜಟ್ಟಂಗಿರಾಯನು ಭೂ | ಕಾಂತರಿಗೆ ತಲೆವಾಗದಂತೆ           || ೨೬ ||

ಆಳುವನರುವತ್ತು ಸಾವಿರ ಕರಿ ತುರಗ | ಕಾಲಾಳು ಲಕ್ಷೋಪ ಬಲದಿ |
ಭೂಮಿಯ ನೃಪರಿಗೆ ಬಾಗದೆ ತಲೆ [ಸಾರ್ಚಿ] | ಭೋಗಾಬ್ಧಿ ಸುಖದೊಳಗಿರಲು       || ೨೭ ||

ಧರಣಿಯ ಧೈರ್ಯಗಳು ರವಿಯ ಪರಾಕ್ರಮ | ಹಿಮಕರನ ಶಾಂತಿ ಸಾಗರದ |
ಗುಣಭಾವ ಚರಿತದಿ ತನ್ನ ರಾಜ್ಯವನಾಳ್ವ | ಮನಸಿಜ ಜನಕನ ತೆರದಿ                || ೨೮ ||

ರಾಯನು ಜಟ್ಟಂಗಿನೃಪಾಲನು ಸ್ತ್ರೀಯರ | ಲಾವಣ್ಯ ಪೇಳಲ್ಕೆ ಅರಿದು |
[ಕಾಮನಂಗನೆಗೆಣೆ] ಸೋಮಾಜಿ ಲಿಂಗಾಜಿ | ಕಾಮಸತಿಯರು ನೆಲಸಿಹರು          || ೨೯ ||

ಇರುತೊಂದು ದಿವಸದೊಳ್ ಅರಸು ಸದರಿಗೆ ಬರಲು | ಪರಿವಾರ ಭಟರ ರೋಷದಲಿ |
ವರಮಂತ್ರಿ ಕೇಣಿಕಾರರು ಪರದೊರೆಗಳ | ಸದರ ದೇವೇಂದ್ರ ಭೋಗದಲಿ           || ೩೦ ||

ನೆರೆದ ವಾಲಗ ಕೇಳಿ ಗುರುವಾದ ಪ್ರಭುದೇವ | ಹಿಡಿದೇರಲು ಪಲ್ಲಕ್ಕಿ ಬೇಗ |
ಬಿಜಯಂಗೆಯ್ಯಾಕ್ಷಣ ಕರಡೆ ಸಮ್ಮಾಳದಿ | ಒಡನೆ ಜಂಗಮದ ಸಂದೋಹ           || ೩೧ ||

ಜನ್ಮಪಾವನರೂಪ ಗುರುವ ಕಾಣುತ ನೃಪನು | ಬೆದರಿದನೆದ್ದು ಕರಮುಗಿದು |
ಎರಗಿ ಸಾಷ್ಟಾಂಗದ ಕರವಿಡಿಯೆ ಗುರುರಾಯ | ಹರಸುತ ಮಗನ ಹರುಷದಲಿ       || ೩೨ ||

ಬಿಜಗೊಳಿಸಿ ನೃಪವರನು ರತ್ನಪೀಠದ ಮೇಲೆ | ದರಹಸಿತ ವಾಲಗದಿ ಕುಳ್ಳಿರಿಸಿ |
ಎರಗುತ ನೃಪೇಂದ್ರ ಕಳೆಯಲ್ಕೆ ಆಲಸ್ಯ | ಒರೆಯಬೇಕೆನಗೆ ಆಗಮನ                || ೩೩ ||

ಭಾರತ ಜೈಮಿನಿಯ ಕಾಳಗವೆಂದು | ಪೇಳಬೇಕೆನಗೆ ಸದ್ಗುರುವೆ |
ಆದಿಯೊಳ್ನಡೆದಂಥ ಕಾರ್ಯ ಪ್ರಸಂಗವ | ಪೇಳಬೇಕೆನಗೆ ಬಾಲನಿಗೆ                 || ೩೪ ||

ತನುಜ ನೋಡು ನಿಮ್ಮ ಜನಕ ಮಾಡಿದ ಕಾರ್ಯ | [ತ] ಣಿಯಲೋದುವುದು ಈ ಧರಣಿ |
ಜೈಮಿನಿ ರಾಮಾಯಣ ಸಮ[ವು] ಭಾರತಕೆ | ಮಿಗಿಲಾಗಿ ಮಾಡಿ ಅಳಿದಿಹರು        || ೩೫ ||

ದಯಮಾಡಬಹುದೆನ್ನ ಗುರು ಪರಂಜ್ಯೋತಿಯೆ | ಒರೆಯಬಹುದು ಅರಿಯದವಗೆ |
ಮರಳಿ ವಂದನೆಗೈದು ಎರಗಲು ಸಾಷ್ಟಾಂಗ | ಒರೆವೆನು ಕೇಳು ನೃಪರಾಜ          || ೩೬ ||

ಕಾಮಗೇತಕಿ ಭೂಪಾಲ ಲಾಲಿಸು ನಿಮ್ಮ | ಏಳು ತಲೆಯಂತ್ರ ಎತ್ತುವೆನು |
ಪೂರ್ವದೊಳಾಳಿದ ವೀರಕಸ್ತುರಿ ನಾಯ್ಕ | ತೀರದು [ಹೊಗಳೆ] ವಾಗ್ನುಡಿಯು       || ೩೭ ||

ಇಬ್ಬರಾಳಿಕೆಯೊಳು ಹಬ್ಬಿ ಬೆಳೆದವರಲ್ಲ | ಹೆಬ್ಬುಲಿಯಾದ ಮುಮ್ಮಡಿಯು |
ರುದ್ರನ ಒಲುಮೆಯಲಿ ಬಂದು ಸೇರಲು ಚೆಂಡು | ದೊಡ್ಡವನಾ[ದನು] ಇಳೆಗೆ        || ೩೮ ||

ರಾಯ ಮುಮ್ಮಡಿನಾಯ್ಕ ಆಳಿದ ಪಟ್ಟ ಎರಡು | ಕಾಲ ವರ್ಷಗಳು ಒದಗಿದಡೆ |
ರಾಯ ಕಂಪಿಲಗೆ ನೇಮ ಮಾಡುತ ಪಟ್ಟವ | ಸೇರಲು ವೈಕುಂಠಗತಿಯ             || ೩೯ ||

ಲಾಲಿಸು ಜಟ್ಟಂಗಿರಾಯನೆ ನಿಮ್ಮಜ್ಜ | ನಾಳಿಕೆಯೊಳಗಾದ ಕಾರ್ಯ |
ಬಾಲರ ಫಲವಿಲ್ಲದೆ ಮಾರಿದೈವವ ಭಜಿಸೆ | ಆಮೇಲೆ ನಿಮ್ಮಯ್ಯ ಜನಿಸೆ             || ೪೦ ||

ರಾಜೀವ ಕಂಪಿಲ ರಾಣಿಸ್ತ್ರೀಯರ ನಾಮ | ಮೃಗಲೋಚನೆ ಹರಿಯಮ್ಮ |
ಭಾನು ಪ್ರಕಾಶನ ಕಮಲಾಜಿ ಈರ್ವರು ಭೂ | ದೇವಿಯಂದದಿ ಒಪ್ಪಿಹರು             || ೪೧ ||

ರಂಭೆಯುರ್ವಶಿಯರ ಮರೆಸುವ ಲಾವಣ್ಯ | ಅಂಬುಧಿಯೆನಿಪ ಗುಣಭಾವ |
ಗಂಗೆ ಪಾರ್ವತಿಯೋಳ್ ಪತಿವ್ರತ ಭಾವಗಳು | ಅಂಗಜನ ಸತಿಯ ಪತಿಭಕ್ತಿ         || ೪೨ ||

ಸಮರೂಪ ಸಮಭಾವ ಸಮರತಿಯ ಸುಖದೊಳಗೆ | ಇನಿರಸವು ಮದ್ದು ಬೆರೆದಂತೆ |
ಮದನ ಕಲೆ ಮೀರಿ ಫಲವಿಲ್ಲದೆ ಸಂತಾನ | ಫಲವ ಹಂಬಲಿಸಿ ಮನದೊಳಗೆ         || ೪೩ ||

ಬಾಲರ ಚಿಂತೆಗಳಿಂದಲಿ ಇರುತಿರೆ | ಅಜ್ಜ ಕೇಳಯ್ಯ ಕುಮ್ಮಟದ |
ಏಳಿಗೆ ಶೃಂಗಾರ ಪೇಳ್ವರೆ ಅಳವಲ್ಲ | ರಾಯ ಕಂಪಿಲನ ಅರಮನೆಯ                || ೪೪ ||

ರಾಜೇಂದ್ರ ಮನೆಯು ಮೂಜಗಕರಿದೆನೆ | ಗಾಜಿನುಪ್ಪರಿಗೆ ಹದಿನಾರು |
ಮೂರು ಸುತ್ತಿನ ಕೋಟೆ ಹದಿನಾರು ಲೋವೆಯ | ದ್ವಾರವಾದವು ಜಂತ್ರಗೆಲಸ      || ೪೫ ||

ಹತ್ತುವ ಹಜಾರಕ್ಕೆ ಮುತ್ತಿನ ಮೇಲ್ಕಟ್ಟು | ಇಟ್ಟಿ ಕಳಸಗಳು ಅಪರಂಜಿ |
ಪೃಥ್ವಿಪಾಲಕ ಬಂದು ಸದರಿಯೊಳ್ ಕುಳಿತರೆ | ಇತ್ತ ಪ್ರಧಾನರೆಡಬಲದಿ              || ೪೬ ||

ಅಮರಾಧಿಪತಿಯಂತೆ ಸದರನೇರಲು ನೃಪನು | ಎಡಬಲದಿ ಮಂತ್ರಿ ಮನ್ನೆಯರು |
ಕಡಲೇಳು ಸಾಗರ ಕೂಡಿದವು ತಾವೆಂಬ | ಪ್ರೌಢರು ಉಂಟು ವಾಲಗದಿ             || ೪೭ ||

ಹಂಸಗಾರರು ಕವಿಭೂಷಣರು ಪ್ರತುಮೆಯ | ಮಾತನಾಡಿಪರು ಹಾಸ್ಯದಲಿ |
ಬೀಸುವ ಸುಳಿಗಾಳಿ ಬಿಗಿದು ನಿಲ್ಲಿಸುವಂಥ ವಿ | ಲಾಸಿಗಳುಂಟು ವಾಲಗದಿ           || ೪೮ ||

ಪುರಕಾಯ್ವ [ತಳ]ತಂತ್ರ ಹರೆವಂತ ಪ್ರೌಢರು | ಹಿಡಿದಲಗುವರು ಭುಮಿಯನು |
ಧರಣಿಯ ಗಿರಿಗಳ ಅಣ್ಣೆಕಲ್ಲಾಡುವ | ಭುಜಬಲರುಂಟು ನೂರಾರು                    || ೪೯ ||

ಕರಿ ತುರಗ ಕಾಲಾಳು ಬರಮಾಡಿ ತುರಗವನು | ಧರಣೀಂದ್ರ ಪಾಲಕ ನಡೆಯೆ |
ತರಳೆಯರು ಪಟ್ಟದ ರಾಣಿಯರು ಮುಂತಾದ | ಸಡಗರದೊಳು ಪುರವ ಪೊರಡೆ     || ೫೦ ||

ಭೇರಿ ಕಾಳೆಗಳಿಂದ ಸಾರುವ ಭಟರಿಂದ | ಪರಿವಾರ ಚಾಮರ ಬಿರಿದು |
ಭೂಮಿಯನು [ಅ]ದರಿ ಚತುರಂಗದೊಳು ಬಂದು | ದೇವಾಲಯದ ಪೊಕ್ಕನಾಗ     || ೫೧ ||

ಲಿಂಗದ ಗುಡಿಯನು ಬಂದು ರಾನು ಪೊಗಲು | ಎರಗಿ ಸಾಷ್ಟಾಂಗದಿಂದ |
ಗಂಗೆಯ ಧರಿಸಿದೆ ಘನ ಮಹಿಮನೆಯೆಂದು | ….ಕರ ಮುಗಿಯೇ                     || ೫೨ ||

ಜಯ ಜಯ ಶಂಕರ ಜಗದ್ಗುರು ಗಿರಿಜೆಯ | ಮನಪ್ರಿಯ ರವಿಚಂದ್ರಧರನೆ |
ಜಯ ಜಯ [ಮಧುಸೂದ] ನಯನವ ಧರಿಸಿದ | ಹರ ಹಂಪೆ ವಿರುಪಾಕ್ಷಲಿಂಗ       || ೫೩ ||

ತ್ರಾಹಿ ಲೋಕವನು ಆಡಿಪ ಶಾಸ್ತ್ರಿಕ ತ್ರಾಹಿ | ಭುಜಗ ಧವಳಾಂಗ ತ್ರಾಹಿ |
ಭಜಕರ ಭಕ್ತ ತ್ರಾಹಿ ದಯಪಾಲಿಪ ತ್ರಾಹಿ | ನಿಮ್ಮಣುಗನ ಶ್ರುತಿ ಪಾಲಿಪುದು         || ೫೪ ||

[ತ್ರಿ]ಪುರೇಂದ್ರ ಒಡೆಯಗೆ ಅಪ್ಪಿ ಪೂಜೆಯ ಮಾಡಿ | ಘನವಾದ ಪರುಪಾಡ್ಯಗಳನು |
ಧರಣಿಪ ಭೂಸುರ ಸಮರಾಧನೆ ಮಾಡೆ | ಕಡೆಗಂಡ ರವಿಯು ತಾಯೊಡಲ          || ೫೫ ||

ದಿವರಾತ್ರಿ ಬೆಳ [ಗಿದ] ರ[ಜ] ತದ ವಾಹನ [ನ] [ಮಿ] ಗಲು ಬತ್ತಿ ಬಿರುಸು ಬಾಣಗಳು |
ಜಗದಿ ಮೋಹನವಾಗಿ ಉತ್ಸಹವಾ [ಗೆ] | ಪಗಲೊಡೆಯ ಮಿಗೆದೋರಿದನು          || ೫೬ ||

ಉದಯಕಾಲದಿ ರಾಯ ಹರನ ಪೂಜೆಯ ಮಾಡಿ | ಧರಿಸಿದ ನವಭಸಿತವನು |
ಪರಮಾನ್ನ ಭೋಜನ ಸವಿದು ಏಳಲು ನೃಪ | ಹರಗೆ ವಂದಿಸಿ ಕರಮುಗಿದು          || ೫೭ ||

ಹೊಡೆವ ತಂಬಟ ಭೋರಿಡುವ ಬಿರುದಿನಕಾಳೆ | ಬಡಬಾಗ್ನಿ ಬಿಸಿಲೊಳು ನಡೆಯೆ |
ಅಡವಿ ಮಾರ್ಗದಿ ಒಂದು ವನಸ್ಥಳವಿರೆ ಕಂಡು | [ಕ್ರ]ಮಿಸಿ ನಿಲ್ಲಲು ರಾಯ ಗಳಿಗೆ || ೫೮ ||

ರಾಯ ನಿಲ್ಲಲು ಕೇ[ಳಿ] ಬೇರೊಂದು [ಕಥೆಯೊಂದ] | ಲಾಲಿಸಿ ರಸಿಕ ಕೋವಿದರು |
ಪೂರ್ವದ ಫಲಬೀಡು ಕಾಡೊಳು ಜನಿಸಿದರೆ | ರಾಜನಾಗುವ ಭೋಗ [ವಿ]ರಲು      || ೫೯ ||

ಕಾಡಗೊಲ್ಲರ ದೊಡ್ಡಿ ಕೆಳಗೊಂದು ಇರುತಿರೆ | ನೂರಾರು ಒಕ್ಕಲು ಸುಖದಿ |
ಸಾವಿರ ಹದಿನೆಂಟು ಲಕ್ಷೋಪ ಕುರಿನ ಗೋವು | ಆಳುತ ಸಕಲ ಸಂಭ್ರಮದಿ          || ೬೦ ||

ಹಟ್ಟಿಯ ಗೊಲ್ಲರ ರೊಪ್ಪದೊಡ್ಡಿಯ ಹಾಕಿ | ಒಕ್ಕಲು ಸಿರಿ ಭಾಗ್ಯದೊಳಗೆ |
ಮಕ್ಕಳ ಫಲವಿಲ್ಲದೆ ಗೊಲ್ಲನ ಸತಿಗೆ | ಪೃಥ್ವಿದೇವರ ಹರಸಿಕೊಳುತ                   || ೬೧ ||

ಹಣವಿದ್ದು ಫಲವೇನು ತನುಜರ ಪಡೆಯದ | ….ಪಾಪಿ ಮೂಳರಿಗೆ |
ಮರದೊಳು ಹಾಲಿಲ್ಲದೆ ಬಿಳಿಲಂತೆಸಗಿದರೆ ಅದು | ಪುಣ್ಯನರಜೀವವಹು[ದೆ]         || ೬೨ ||

ಕಂಡವರಿಗೆ ಅವರು ಹಂಬಲಿಸಿ ಲೋಕದ | ದೈವಂಗಳಿಗೆ ಭಜನೆ ಮಾಡುತಲಿ |
ಮುಂದೆಮ್ಮ ಫಲಪ್ರಾಪ್ತಿಗೆ ಹೇಗೆ ಇರುವುದೆಂದು | ಕಂದುತಿರಲು ತಾವು ಕಲಿಗೆ       || ೬೩ ||

ಕೆಲವು ಕಾಲದ ಮೇಲೆ ಲಲನೆ ಗರ್ಭಿಣಿಯಾಗೆ | ನಲಿದು ಹಿಗ್ಗುತಲಿರ್ದು ಮನದಿ |
ಕುಲಗೋತ್ರದವರೆಲ್ಲ ಪಲ ಬಗೆ ಒಸಗೆ ಮಾಡಿ | ದಿನದಿನಕೆ ಹೆಚ್ಚುತ ಬರಲು          || ೬೪ ||

ಒಂದೆರಡು ಮೂರಾಗಿ ತುಂಬಿಬರಲು ಮಾಸ | ಸಂಧಿಸಿ ಆರೆಂಟು ಬರಲು |
ಇಂದೆನಗೆ ತುಂಬಿ ಬರಲು ಚೆಲ್ವ ಭೇರುಂಡ | ಉನ್ನಂತ ಗಂಡುಮಗನು              || ೬೫ ||

ಶಿಶುವನು ಕಾಣುತ್ತ ಸಿರಿಯಿಂದ ಗೊಲ್ಲರು | ಇದು ಚೋದ್ಯ ನಮ್ಮ ವಂಶದಲಿ |
ಮುಡುಬ ಮೂಳನೊ ಸಹಜನೊ ಬಾಲ ಜನಿಸಿರಲು | ತಿಳಿಯಬೇಕೆನುತಲಿ ಅವರು || ೬೬ ||

ಕರೆಯಿಸಿದರು ಬಲ್ಲ ಹಿರಿಯ ಶಾಸ್ತ್ರದವರ | ಜನನವ ನೋಡಿ ಬಾಲಕನ |
ಹೊಳವ ಮಾಡದೆ ಪೇಳಿ ಬಹುಕಾಲ ತಡೆದಾಕೆ | ಪಡೆದಾಳು ನರಹರಿ ಸುತನ       || ೬೭ ||

ನೋಡುವರವರಲ್ಲಿ ವಾರ ತಿಥಿಗಳ ಮೇಲೆ | ಕಾರಣಾಗಲು ನಾಮವಿಡಿದು |
ತೋರುವರವ ಲಗ್ನ ಮರಣ ತಂದೆಗೆ ಹೊಲ್ಲ | ಮೂಲ ನಕ್ಷತ್ರದ ಜನನ               || ೬೮ ||

ಕೆಟ್ಟ ಗಳಿಗೆಯಲಿ ಮುನ್ನ ಹುಟ್ಟಿದ ಶಿಶು | ಇಟ್ಟುಕೊಂಬುದು ಅತಿ ಕಷ್ಟ |
ಹೆತ್ತರೆ ಫಲವೇನು ದುಃಖ ಬಪ್ಪಿರಿ ಕಡೆಗೆ | ನಷ್ಟವಲ್ಲದೆ ಲಾಭವಿಲ್ಲ                     || ೬೯ ||

ಕಂಡುದ ನುಡಿದೆವು ಬಂದಾದ ಶಾಸ್ತ್ರದೊಳ್ | ಮಂದತ್ವದೊಳಗೆ ನೀ ಬಿಡದೆ |
ನೊಂದಿರಲ್ಲದೆ ಬಾಳ ಚಂದಗಾಣದು ನಿಮ್ಮ | ಬಾಂಧವ್ಯ ಜನಕೆ ಕೊಡಿಯೆನಲು      || ೭೦ ||

ಹೊಳವಾಗಿ ಪೇಳ್ದಡೆ ಬಿಡದೆಮ್ಮ ಕರ್ಮಗಳು | ಹಿಡಿದ ಪಂಚಾಂಗಕ್ಕೆ ಹೀನ |
ಕಡೆಗೆ ವರುಷ ಕಾಲ ಪಡೊವಿಗೆ ಗುರುತಾಗಿ | ದೊರೆಯಾಗಿ ಭಾಳಾಕ್ಷ ಕೊ[ಡಗು]    || ೭೧ ||

ಬಹುಕಾಲ ತುಂಬಿದ ಬಂಜೆಗೆ ಫಲವಾಗೆ | ಲಯಕಾಲ ಬಿಡದು ಪಡೆದರಿಗೆ |
ಕುಲಗೋತ್ರದೊಳಗಾರು ಒಲ್ಲೆನೆನಲು [ನಿಮ್ಮ] | ಮನೆದೇವರೆಡೆಗೆ ಹಾಕೆನಲು       || ೭೨ ||

ತನುವಿರಲು ಮಕ್ಕಳ ಪಡೆವುದು ಘನವೇನು | ಗೊನೆಯ ಬಾಳೆಯ ಹಣ್ಣ ತೆರದಿ |
ಮನೆಯನು ಲಯಮಾಳ್ಪ ಚೆಲುವ ಸಂತಾನದಿಂದ | ಪಡೆವುದೇನುಂಟು ಸದ್ಗತಿಯ  || ೭೩ ||

ಹೆತ್ತವರಾ ಮಾತ ಚಿತ್ತದೊಳ್ಕೇಳುತ | ದುಃಖದೊಳಗೆ ಆಳಿ ಮುಳುಗಿ!
ಹೊತ್ತಿರ್ದು ಹಗಲಿರುಳು [ಹತ್ತೆಂ]ಟು ಮಾಸವು | ಕಾಡಿಗಿಕ್ಕುವುದೆ ಕರ್ಮ ಶಿಶುಹತ್ಯೆ  || ೭೪ ||

ಮಕ್ಕಳಾದರೆ ಏನು ಪ್ರಾಪ್ತಿಯಿಲ್ಲದ ಬಳಿಕ | ಅರ್ಥವಿದ್ದೇನು ತಾನುಣುವುದೆ |
ಬೆಟ್ಟದೊಳ್ ಜೇನ್ಹುಟ್ಟು ಬ್ಯಾಡರ ಪಾಲಾದ | ವ್ಯರ್ಥವಾಯಿತು ಎಮ್ಮ ಬದುಕು       || ೭೫ ||

ಪಡೆಯದಿರಲು ನಾವು ಕಲ್ಲುಮರನಾಗಿರಬಹುದು | ಹಡೆದಂಗೆ ಗುಡಿಗೆ ಹಾಕುವುದು |
ಪುತ್ರರೊಳಗೆ ರೋಹಿಣಿಯಂಥ ಬಾಲನ | ಮತ್ತೇಕೆ ನಾವು ಹಾಕುವುದು               || ೭೬ ||

ಎಲ್ಲರು ಸಾಕೆನುತ ದುಃಖದಲಿ ಕೇಳಲು | ಒಲ್ಲೆವು ಎಮ್ಮ ತಿಂಬುವುದು |
ಹೊಲ್ಲದ ಮೂಳನ ಹೊರಗೆ[ಹಾಕುವುದು] ಗೋತ್ರ | ದಲ್ಲಿ ಒಬ್ಬರ ಕೆಡಿಸುವುದು       || ೭೭ ||

ನಮಗಂತು ಫಲವಿಲ್ಲ ನಿಮಗೇಕೆ ಭಯಭೀತಿ | ಮೃಡನೊಳು ನಾವು ಪಡೆದುದಿಲ್ಲ |
ಅಲರಂಬ ರೂಪನ ಸಾಕಿ ಬದುಕಲು ನಾವು | ನಯನದಿ ನೋಡಿ ಹಿಗ್ಗುವೆ[ವೆ?]         || ೭೮ ||

ಸಂತಾನಗೆಡುಕನ ಸಾಕಲ್ಕೆ ನಮಗಿನ್ನು | ಭ್ರಾಂತಿ ಲೋಕದಿ ಮಕ್ಕಳ್ಮಾರು |
ಎಂತು ಇಲ್ಲವು ಎಂದು ಎನುತವರು ಪೋಗಲು | ಮುಂಚೆ ತಂದರು ದೇವಾಲಯಕೆ  || ೭೯ ||

ಗೊಲ್ಲರ ಮನದೈವ ಬಿಲ್ಲ ಕಾಟಮಲಿಂಗ | ಅಲ್ಲಿ ಕಂಪಿಲನಿಪ್ಪ ವನದಿ |
ಹೊಲ್ಲದ ಶಿಶು ಬೇಡ ಸಲ್ಲಲಿ ನಿಮಗೆಂದು | ಅಲ್ಲಿ ಬಿಟ್ಟರು ಗುಡಿಯಲ್ಲಿ                  || ೮೦ ||

ಬಿಟ್ಟವರು ನಡೆಯಲು ಇತ್ತ ಕಂಪಿಲನೃಪಗೆ | ಮತ್ತೆ ದೋರಲು ಉದಕ ತೃಷೆಯು |
ಚಿತ್ತ ಗಮನದಿ ಹೋಗಿ ತರಲೆಂದು ಅಗ್ಗಣಿ | ಕಟ್ಟು ಮಾಡಿಸಲು ಊಳಿಗಕೆ            || ೮೧ ||

ಅರಸು ಪೇಳಲು ಚರರು ಪರಿದರು ದಿಕ್ಕಾಗಿ | ಹುಡುಕುತ ನಾಯ್ಕ ಮೂಲೆಯನು |
ತಡಕಿ ಕಾಣದೆ ಅವರು ವನದ ಕಿಗ್ಗಡಿಯೊಳು | ಗುಡಿಯಿರಲು ಕೊಳಸಹಿತ ಕಂಡು    || ೮೨ ||

ಕಂಡರು ಉದಕವ ಒಂದಾರು ಭುಜವಾಗಿ | ತುಂಬಿಕೊಂಡರು ತವಕದಲಿ |
ಬಂಧನ ಬಿಡಿಪರೆ ತಡವೇಕೆ ಎನುತಲಿ | ಪೊರಡಲು ತವಕದಿ ಚರರು                 || ೮೩ ||

ಬಾವಿಯಿಂದಲಿ ಹೊರಟು ದೇವಾಲಯ ಪೊಗಲು | ಬೋರಿಡುವ ಮೊಳಗು ಧ್ವನಿಗೇಳಿ |
ಅರಣ್ಯ ಗುಡಿಯೊಳು ಏನು ಚೋದ್ಯವು ಎಂದು | ರಾಯನಿರ್ದೆಡೆಯಾಗಿ [ಬ]ರಲು    || ೮೪ ||

ಏನು ಮಾಯವೊ ರೂಪನೆ ಕಂಡೆವಾಲಯದಿ | ಒಂದು ಬಾಲನಿರಲು ತಂದೆವೆನುತ |
ರಾಯ ನೋಳ್ಪುದು ಎಂದು ಮುಂದಕ್ಕೆ ಇರಿಸಲು | ಆ ಭೂಪ ನೋಡಿ ಬೆರಗ್ಹೊಡೆಯೆ || ೮೫ ||

ಹರಿಹರದೇವಿಯ ಕರೆದು ಉಲ್ಲಾಸದೊಳ್ | ತರಳನ ನೋಡೆನಲು ಹರಸಿ |
ಹರನೊಳಿದು ನಮಗಿತ್ತ ಕರ ಚೆಲ್ವ ಸಂತಾನ | ದೊರೆಗಳಾತ್ಮದಿ ಬರಲರಿದು         || ೮೬ ||

ಕಾಶಿ ರಾಮೇಶ್ವರ ಗೋಕರ್ಣ ಶ್ರೀಶೈಲ | ಯಾತ್ರೆಯ ಮಾಡಿ ತಪವಿಡಿದು |
ಬೇಕೆಂದು ಸಂತಾನ ಜಗದೀಶ ಸ್ತುತಿಮಾಡೆ | ಆತ್ಮದಿ ಬಾಲ ಸಿದ್ಧಿಸದು               || ೮೭ ||

ರಮಣನ ವಚನಕ್ಕೆ ಧರ್ಮಶಾಂತಿಯ ತಿದ್ದಿ | ಆಳೋಚನೆ ಪೇಳುತ್ತಿರಲು |
ಉರಗೇಂದ್ರ ಹರನೊಳು ಪಡೆಯದ ಪಾಪಿಗೆ | [ವರ ಶಿಶು] ಎಮಗೆದೋರುವುದೆ     || ೮೮ ||

ನಾವಾಗಿ ಬರಲೆಂದು ಹಾರೈಸಿ ಮಾಡಿದ | ದೇವನೆ ತಾನೊಲಿದಿತ್ತು |
ತನುಜರಿಲ್ಲದ ಸ್ಮರಣೆ ಹರನಿಗೆ ತಟ್ಟೆ | ದಯಮಾಡೆ ಕಾಡಾಲಯದಲಿ                || ೮೯ ||

ಕಕ್ಕೆಯು ಫಲವಾಗೆ ಒಪ್ಪುವುದೆ ಊಟಕ್ಕೆ | ಉಂ[ಬು]ತ ಸ್ವಾಯವಾಗಿರಲು |
ಮುಕ್ಕಣ್ಣಗೆರಗಲು ತನ್ನೊಡಲು ಪಡೆಯದ | ತನುಜ ಪಟ್ಟಕೆ ಸಲುವುದೆ ಭೂಪ        || ೯೦ ||

ಆವ ಜನ್ಮದ ಶಿಶುವೊ ಭೇದಗಾ[ಣ್ವುದು] ರಾಯ | ನೀರು ಬೆರೆವುದೆ ತೈಲದೊಳಗೆ |
ಹಾದಿಯ ಗುಡಿಯೊಳು ಏನು ಕಾರಣಯಿತ್ತು | ಹಾದರದೊಳಗೆ ಜನಿಸಿತ್ತೊ           || ೯೧ ||

ಸತಿಯ ಮಾತಿಗೆ ರಾಯ ಪ್ರತಿನುಡಿಯಿಲ್ಲದೆ | ನುಡಿವ ನಾಲಗೆ ಪಿಡಿದಂತೆ |
ಮಡದಿ ಕೇಳೆಲೆ ಕ[ಣ್ಣು ತಿ] ಳಿಯದಿರಲು ಒಂದು | ಸಲಹಿ ಸಾಕಲು ಧರ್ಮ ಬರದೆ    || ೯೨ ||

ಆದರಾಗಲಿ ಕುಲಭೇದ ವರ್ಮವ ತಿಳಿದು | ನೋಡಬಹುದು ಸಲಹುದಕೆ |
ಊರೆಂಟು ಎಡಬಲದಿ ಹಳ್ಳಿ ಮನೆಗಳ ತಿಳಿದು ವಿ | ಚಾರ ಮಾಡಲಿ ಬಹುದೆನಲು    || ೯೩ ||

ಹೊಲ್ಲದ ಶಿಶುವನು ಗುಡಿಯಲ್ಲಿ ಬಿಟ್ಟರು ಕಾಂತ | ಸಲುವ ನಾಣ್ಯಕೆ [ಊನ] ವುಂಟೆ |
ತಲೆ ಬುಡ ತಿಳಿಯದೆ ಸಲಹಿದರೆ ಸಾಕಿದ | ಮಗನೆಂದಾಡರೆ ಬಲ್ಲವರು               || ೯೪ ||

ರಾಣಿ ಆಡುವ ಮಾತು ಭೇದಗಾಣದೆ ಅರಸು | ಊಳಿಗ ಜನಕೆ ಪೇಳೆನಲು |
ನೋಡಿ ಎಡಬಲದೊಳು ಊರ ಒಕ್ಕಲು ಇರಲು | ವಿಚಾರಿಸಿ ಕೇಳಬೇಕೆನಲು         || ೯೫ ||

ಅರಸಿ[ಶ್ರೇಣಿಯನು] ಬಿಡಿಸಿಕೊಳ್ಳುವ ಚರರು | ಹುಡುಕಲು ನಾಲ್ಕು ದಿಕ್ಕಿನಲಿ |
ಅಡವಿಯೊಳಗೆ ಒಂದು ಕಾಡುಗೊಲ್ಲರ ದೊಡ್ಡಿ | ಸುಳುಹು ಕಾಣುತ ಹೋಗಿ ಮುತ್ತಿ    || ೯೬ ||

ಹಿಡಿ ಬಡಿ ಕೊಲ್ಲೆಂದುಗ್ಘಡಿಸಿ ಕಾರ್ಗವಿಯಲು | ಕಂದ ಸಿಕ್ಕಲು ನಿಮ್ಮ ಗುಡಿಯ |
ಮುಂದಲ ಸ್ಥಿತಿಗತಿಯೆಲ್ಲೆಂದು ಕರೆಸಿದ | ಕುಂದು ಯಾತಕೆ ನೀವು ಬನ್ನಿ              || ೯೮ ||

ಬಾಲನ ತೆರನ ಕೇ[ಳಲು]ತೆರನ [ಹೇ]ಳುವರೆ | ಜೀವ ಕೊಲ್ಲಲು ಪರಬಲವೆ |
ಓರಂತೆ ಗೊಲ್ಲರ ಒಡಗೊಂಡು ಬಂದರು | ರಾಯ ಭೂಪಾಲನಿದ್ದೆಡೆಗೆ                || ೯೯ ||

ಗೊಲ್ಲರು ಬೆದರುತ ಭಯದಲ್ಲಿ ಕರಮುಗಿಯೆ | ಅಲ್ಲಿ ಮಂತ್ರಿಗಳು ಕೇಳುವರು |
ಎಲ್ಲಿ ನಿಮ್ಮಯ ಗುಡಿ ಎಲ್ಲಿಯ ಶಿಶು ಬಾಲ | ನಿಲ್ಲದೆ ಒಳವ ಪೇಳೆಮಗೆ                || ೧೦೦ ||

ಸ್ವಾಮಿ ಎಮ್ಮ[ಯ]ವಂಶದಲಿ ಜನಿಸಿತು [ಕಂದ] | ತಾಯಿ ತಂದೆಗೆ ಮರಣವೆನಲು |
ಆರಾರು ಕೊಳ್ಳ[ರು] ನಮ್ಮ ತಿಂದಿತು ಎನಲು | ದೇವರ ಗುಡಿಗೆ ಹಾಕಿದೆವು           || ೧೦೧ ||

ಕೇಳಿದ ನೃಪ ನಗುತ ಮರುಳ ಗೊಲ್ಲರ ನುಡಿಗೆ | ಹಾಳು ಶಾಸ್ತ್ರವು ಸುಡಲಿ ನಿಮ್ಮ |
ಭಾನು ಪ್ರಕಾಶದ ಬಾಲನ ಕೊಲ್ಲಲ್ಕೆ | ಮೂದೇವಿ ಹಿಡಿದಳೆ ನಿಮಗೆ                   || ೧೦೨ ||

ಮರಣವೆನ್ನಲು ಹೆದರಿ ತನುಜನ ಕೊಲ್ಲುವರೆ | ಧರ್ಮವೆ ನಿಮಗೆ ಪೃಥ್ವಿಯಲಿ |
ಫಲವಿಲ್ಲ ಅವನಿಗೆ ವರುಷ [ತೊ]ರೆವುದೆ ಎಂದು | ಕರೆದು ಗೊಲ್ಲರನು ಮನ್ನಿಸಲು     || ೧೦೩ ||

ಕಾಡುಗೊಲ್ಲರ ಒಳಗೆ ತೋರುವ ಶಿಶುವಲ್ಲ | ಪೂರ್ವದ ಋಣವ ತೀರಿಸಿತು |
ಸೇರುವ ಸ್ಥಾನಗಳು ಬೇರಿರಲು ನಿಮಗೆಲ್ಲ | ತೋರಿತೆಂದನು ರಾಜೇಂದ್ರ            || ೧೦೪ ||

ಬಾಲನ ಜನನ ನಕ್ಷತ್ರ ಮೂಲ[ವ] ತಿಳಿದು | ಆಗ ಗೊಲ್ಲರ ಸಂತೈಸುತಲಿ |
ನೀಗಿ ದುಃಖವ ನಿಮ್ಮ ದೊರೆ ಬಾಲನಾದನು ಎಂದು | ಆಗ ಉಡುಗೊರೆಯಿತ್ತು ಕಳುಹೆ        || ೧೦೫ ||

ನೊಂದು ಬಳಲಿಕೆ ಬೇಡ ಕುಟುಂಬ ಎಮ್ಮದು ನಿಮ್ಮ | ಸಂದೇಹವಿಲ್ಲದೆ ಬಾಲೆನಲು |
ಹಿಂದಲ ಋಣಕಾಗೀ ಬಸುರಿಂದ ಜನಿಸಿತ್ತು ರಾ | ಜೇಂದ್ರನಾಗುವನು ಪೋಗೆನಲು   || ೧೦೬ ||

ತಿಳಿಸಿದ ನೃಪನಾಗ ಘನಶಾಸ್ತ್ರದವರನು | ನಮಗೀಗ ಶಿಶು ಸೇರಿದಂಥ |
ಶುಭಹಾನಿಯೆಂಬುದ ನೆರೆ ಸೋಸಿ ಪೇಳೆಂದು | ತಿಥಿ ವಾರ ಗುಣಿಸಿ ನೋಡುವುದು  || ೧೦೭ ||

ರೂಢಿಗುನ್ನತವಾದ ಭೂಪ ಲಾಲಿಸು ಮುಂದೆ | ಬಾಲನ ಸ್ಥಿತಿಗತಿಗಳಿಗೆ |
ವೀರನಾಗುವ ಶಕ್ತಿರಣಧೀರನೆನಿಸಿ ಪಂಥ | ಗಾರ ತಮ್ಮನ ಪಡೆಯುವನು            || ೧೦೮ ||

ಪುತ್ರನ ಫಲದಿಂದ ಮತ್ತೊಬ್ಬ ಜನಿಸುವ | ಪುಷ್ಪಬಾಣಗೆ ಸಮನೆನಿಸಿ |
ಕೊಟ್ಟೇವು ಬರಹವು ದೃಷ್ಟಗಳು ಈ ಹೊತ್ತು | ತಪ್ಪಲು [ಯಮನಾಜ್ಞೆ] ಭೂಪ         || ೧೦೯ ||

ಹರುಷವಾಗುತ ರಾಯ ಕರೆದು ಮಾನ್ಯ ಮಂತ್ರಿ | ಪರಿವಾರಕೊಪ್ಪೆ ಪೇಳೆನಲು |
ಹೊರಗೊಂದು ಒಳಗೊಂದು ಹೀನ ಸ್ವರ ಆಡಲಿ ಬೇಡ | ಕೊರತೆ ಕಂಡರೆ ಈಗ ಪೇಳಿ || ೧೧೦ ||

ರಾಯ ರಾಜೇಂದ್ರನೆ ಕೇಳುವುದಿನ್ನೇನು | ಬೀಜದ ನೆಲೆ ಕಾಣಬಂತು |
ಆಗಬಹುದು ಭಕ್ಷ ಕಾವಂದರಿವರಷ್ಲೇ | ಪಾಗೊಂಡನಾಳ್ವನು ಗೊಲ್ಲ                  || ೧೧೧ ||

ಸರ್ವರು ಜಯವೆನಲು….. | [ಮೋದ]ನೊಡ್ಡಲು ಹರುಷದಲಿ |
ರಾಯ ಕಾಟನು ಎಂಬ ನಾಮ ಬಾಲಗೆಯಿಟ್ಟು | ಸಾಗಲು ನೃಪನು ಬಲದೊಡನೆ     || ೧೧೨ ||

ಭಾನು ಇಳಿದು ತಾಯೊಡಲ ಸೇರುವಂದದಿ | ರಾಯ ಪೊಗಲಾಗ ಕುಮ್ಮಟವ |
ಬಸುರಿಡಿದು ಬಂದಂಥ ಶಿಶುವಿಗೆ ಮಿಗಿಲಾಗಿ | ಶಶಿಮುಖಿ ಸಾಕಿ ಸಲುಹಿದಳು        || ೧೧೩ ||

ಮಿಸುನಿಯ ಅರಳಲೆ ಮಾಗಾಯಿ ಗೆಜ್ಜೆಯ | ಧರಿಸಿ ಬಾಲಕನ ಆಡಿಪಳು |

ಮಕ್ಕಳಾಡುವ ಮನೆಯು ರಾಕ್ಷಸ ಪೊಳಲಹುದು | ದುಃಖನು ಮರೆದು ಹಲಕೆಲವ    || ೧೧೪ ||

ಹುಟ್ಟು ಬಂಜೆರ ಒಡಲು ಉರಿಯಬಾರದುಯೆಂದು | ದುಃಖ ಅಡಗಿಸಿದ ಹರನೊಲಿದು |
ಉಡುರಾಜ ತಲೆದೋರೆ ಶರಧಿ ನಲಿವಂದದಿ | ಇರಲತ್ತ ಹರಿಹರದೇವಿ               || ೧೧೫ ||

ಅಮರಾದ್ರಿಪತಿಯಂತೆ ಸದರ ವಾಲಗಗೊಳುತ | ದೊರೆಯಿರಲು ಕಂಪಿಲಭೂಪ |
ಎಡದೊಳು ಮಂತ್ರಿ ಬಲದೊಳು ಕರಣಿಕರು | ಪಿಡಿದಿಹರು ಕಾಳಂಜಿ ಕುಂಚ          || ೧೧೬ ||

ಮಡದೇರ ನೃತ್ಯ ಉಗ್ಘಡಿಸುವ ಪಾಠಕರು | ನುಡಿನುಡಿಗೆ ನಗಿಸುವ ಜನರು |
ಗೀತ ಗೀರ್ವಾದ್ಯ ಹಾಸ್ಯದ | ವೇಷವಂತರು ಪಲಬಗೆಯ                             || ೧೧೭ ||

ದೇಶಭಾಗದ ನೃಪರ ಒಡನೆ ವಾಲಗಗೊಳುತ | ಶೇಷಾದ್ರಿವಾಸನಾಗಿರಲು |
ಇರುವಂಥ ಕಾಲದೊಳು ಪರವೊಂದು ಕಥೆ ಬಂತು | ಒರೆದು ಕೇಳುವುದು ಬಲ್ಲವರು || ೧೧೮ ||

ನೆರೆ ಜಾಣ ವಿಟಜನಕೆ ಇನಿಗೋಲ ರುಚಿಯಂತೆ | ಬರುತಿದೆ ರತ್ನಿಪ್ರಸಂಗ |
ಡೊಂಬರ ಕುಲದೊಳಗೆ ರಂಭೆ ಊರ್ವಶಿ ಜನಿಸಿ | ಕಂದರ್ಪ ರತಿಗೆ ಮಿಗಿಲೆನಿಸಿ      || ೧೧೯ ||

ಬಂದಳೆ ದ್ರೌಪದಿ ಜಾನಕಿ ಸ [ತಿ]ಗೆಣೆ | ಎಂಬಂತೆ ಬಿರಿದ ಪೊಗಳಿಪಳು |
ಕೊಂಕಿದ ಕುರುಳ ಕೂ[ಡ]ದ ಹುಬ್ಬು ಸಿಂಗಾಡಿ | ಬಿಂಕದ ಮೊಲೆಯು ಬಿರಿ ಮುಗುಳು || ೧೨೦ ||

[1] + ಶ್ರೀ ಗಣಾಧಿಪತಾಯೇಂ ನಮಃ || ಶ್ರೀ ಶಾರದಾಂಬಾಯಂನ್ನಮಃ ಸಿದ್ಧರಾಮೇಶ್ವರನಾ ಪಾದವೇ ಗತಿ ಮತ್ತಿ || ರುಧಿರೋದ್ಗಾರಿ ಸಂ ಮಾರ್ಗಿಸಿರ ಬಹುಳ ೫ಲ್ಲು ಚೀಲಾನಹಳ್ಳಿ ಮರುಳಸಿದ್ಧಪ್ಪನ ಮಮ್ಮಗ ಮರಿದೇವರು ತಾನು ತನ್ನ ಪ್ರಿಯೋಕ್ತಿಯಿಂದಾ ಬರಕೊಟ್ಟಂತ್ತಾ ಕಾಟ್ಟನರೆ ದೊಡ ತ್ತಿಂಮಂಣಗೆ | ಬಾಲಕೊಮಾರರಾಮನ ಸಂಗತ್ಯ ಬರೆಉದಕೆ ಶುಭಮಸ್ತು | ನಿರ್ವಿಗ್ಞಾಮಸ್ತು | ಉದ್ದಿರಸ್ತು | ದನ ಕನಕಮಸ್ತು ಸ್ತ್ರಿರಸ್ತು || ಕಂದ || (ಮೂ)

[2] ಪದನು (ಮೂ)

[3] ಪದನು (ಮೂ)