ದೇವಿಶೆಟ್ಟಿಯ ಲಿಂಗ ಹೋದಪನೆಂದು | ರಾಯಗೆ ಸುದ್ಧಿಯ ಕೊಡಲು |
ನೋಡಯ್ಯ ರಾಜೇಂದ್ರ ನಾವಾಡಿದ ದೃಷ್ಟಗಳ | ತೋರಿತ್ತು ಮಾತು ಮಾತಿನಲಿ     || ೧೨೧ ||

ಸರಿಬಂತೆ ಇನ್ನಾರು ಕರಿಯ ಬುದ್ಧಿಯ ರಾಯ | ಹಿಡಿತರಿಸಿ ಹಲ್ಲ ತೆಗೆಸಯ್ಯ |
ನುಡಿಯಲು ಚರರೊಡನೆ ಸಿಡಿಲಂತೆ ಗರ್ಜಿಸಿ | ಹಿಡಿತನ್ನಿ ಎನಲು ನೃಪವರನು       || ೧೨೨ ||

ಅರಸು ಪೇಳಲು ಬೇಗ ಅರಿವಾಯ್ತು ಊಳಿಗ ಬಂದು | ಕಡೆ ಬಾಗಿಲ ಕಟ್ಟಿ ತಡೆಯೆ |
ಧರಣೀಶ ನಿನ್ನನು ಮನೆ ಮುಂದಿರಿಸಿಕೊಂಡು | ಎಡಗಟ್ಟಿನೊಳಗೆ ತರಲೆಂದ         || ೧೨೩ ||

ಮನೆಯ ಕೊಂಬರೆ ನೀನು ಮಡದಿ ಹಾದರ ಉಂಟೆ | ಬಡವನೆ ಲಿಂಗ ಕಟ್ಟುವರೆ |
ಹೊಡೆ ಇವರ ತಲೆಯೆಂದು ಒಡನೆ ಗರ್ಜಿಸಿ ಲಿಂಗ | ಹೆಡಕಟ್ಟ ಹಾಕಿ ಕಳುಹಿದನು     || ೧೨೪ ||

ಮೊರೆಯಿಡುತ ಚರರಾಗ ನೃಪನ ಸಮ್ಮುಖ ನಿಂದು | ಎಮಗಾಯಿತವನಾಜ್ಞೆ ಭೂಪ |
ಗುರುಮರಗುಟ್ಟಿರಲು ತಲೆಯ ಚೆಂಡಾಡುವ | ಕರೆಯಲ್ಕೆ ಈ ಪಾಟು ಬಂತು         || ೧೨೫ ||

ಕಾಲನಾರ್ಭಟದೊಳು ರಾಯನು ಉರಿದೆದ್ದು | ಪ್ರಧಾನಿ ಲಿಂಗರಸಿಗೆ ಪೇಳೆ |
ಬಲ ಸಹಿತ ಹೋಹನ ಹಿಡಿ ತಾರೋ ರಾಮುಗನ | ತಲೆಯನು ಹಿಡಿ ಚಂಡಾಡೋ    || ೧೨೬ ||

ಕರಿ ತುರಗ ಕಾಲಾಳು ಒದಗಿತ್ತು ನಿಮಿಷಕ್ಕೆ | ಹದಿನಾರು ಸಾವಿರ ಪೌಜ |
ಹಿಡಿಯೆನ್ನ ಲವುಡವ ಎನುತಲಿ ಲಿಂಗಣ್ಣ | ನಡೆಯಲು ಪೇಟೆಯ ದಾಟಿ                || ೧೨೭ ||

ಹೋಗಬೇಡವೊ ಲಿಂಗ ಎಂದು ಏರಲು ಬೆನ್ನೊಡನೆ | ಭೂಮಿ ಹೊಕ್ಕರು ಬಿಡೆವು ಎನುತ |
ಕಡಿ ಕಡಿ ಎನುತಾಗ ಮುಂಗಟ್ಟಿ ತಡೆದಾಗ | ನಡೆವುದೆಲ್ಲಿಗೆ ಲಿಂಗ ಎನಲು            || ೧೨೮ ||

ಯಾಕೆ ಪೋದೆಲೊ ಲಿಂಗ ಏನು ನಿನ್ನಯ ಕಷ್ಟ | ಮಾತಾಡೊ ಎಮ್ಮೊಳು ನಿಂದು |
ಭೀತಿಗೊಳ್ಳಲಿ ಬೇಡ ಭೂಪಾಲ ರಾಯಗೆ ಪೇಳಿ | ಮಾತ ತಿದ್ದುವೆವೊ ಕೊಲ್ಲದಂತೆ   || ೧೨೯ ||

ತಿದ್ದುವ ಹದನ ತಂದಿದ್ದರೆ ಪುಸಿಯಲ್ಲ | ಇದ್ದರೆ ಇನ್ನೆರಡು ಗಳಿಗೆ |
ಗೆದ್ದೇನು ಮೇಲ್ಹರಿದು ದೂರದಿ ಮಾತಾಡು | ದುಬ್ಬೊಡಲ ಹರಿಗಡಿಯೊ ಮಂತ್ರಿ      || ೧೩೦ ||

ಅರಿಯದವನೆ ನೀನು ಯಮರಾಜ ರುದ್ರನು | ದಂಡೆತ್ತಿ ಕಳುಹಲು ಮರಳಿ |
ಜಯಿಸಿ ಹೋಗುವರುಂಟೆ………. | ………….                                                  || ೧೩೧ ||

ಎಲೆಯ ಕೊನೆಗಳ ನೆಚ್ಚಿ ಬಲು ಮರನ ಬಿಡಲೇಕೆ | ಪಡಿ ತೀರಿತೇನೊ ಲಿಂಗಣ್ಣ       || ೧೩೨ ||

ಆಳಿದೊಡೆಯಗೆ ಎರಡ ಎಣಿಸಿ ಹೋಗಲು ಲಿಂಗ | ಭೂಮಿ ಮುನಿಯದೆ ಹೋದ ಬಳಿಯಾ |
ಹಾದಿ ಸೂಳೆಯ ನೆಚ್ಚಿ ಮನೆಯ ಹೆಂಡತಿ ಬಿಟ್ಟ | ಗಾದೆಯ ತೆರಬಂತು ಲಿಂಗ        || ೧೩೩ ||

ನಿಮ್ಮ ರಾಯನ ಮಾತ ನಿನ್ನೆ ತಿಳಿದೆನು ಮಂತ್ರಿ | ತನ್ನ ರಾಮಯ್ಯನ ಕರೆಯೆಂದು |
ನಿಮ್ಮ ಚಾಡಿಯ ಕೇಳಿ ಕೊಲ್ಲ [ಲೆ]ಣಿಸಿದ ಬಳಿಯ | ಇನ್ನು ಬರುವುದಕೆ ನಾ ಮರುಳೆ  || ೧೩೪ ||

ಬೇಡ ಮುಂದಕೆ ನಿನ್ನ ಸಾಗಗೊಡೆವೋ ಲಿಂಗ | ಹೇಳಿದೆವು ನಾವು ಕಂಡಷ್ಟು |
ಕೇಳಿ ಬಾರೆಲೋ ನಿನ್ನ ಪ್ರಾಣಕ್ಕೆ ನಾ ಹೊಣೆಯು | ಚೆಂಡಾಡೆವು ಈ ಮೇಲೆ ತಲೆಯ  || ೧೩೫ ||

ಕಡಿವೆನೆಂಬುವ ನಿನ್ನ ಬಗೆಯ ಬಲ್ಲೆನು ಬೇರೆ | ಸುಡು ನಿನ್ನ ಪೌರುಷವ ಮೂಳ |
ಕೆಡಬೇಡ ಮುಂದಕ್ಕೆ ಇಡು ನಿನ್ನ ಹೆಜ್ಜೆಯ | ಮಡಗುವೆ ತಿಳಿ ತಿರುಗಾಡದಂತೆ        || ೧೩೬ ||

ಕೆಟ್ಟ ಮಾತುಗಳಾಡಿ ಕೆಡಬೇಡ ಲಿಂಗರಸೆ | ಎಚ್ಚರ ತೆಕ್ಕೊ ಎದೆಯೊಳಗೆ |
ಜುಟ್ಟ ನೇವರಿಸುಂಡಾದುಂಬೊಡಲನೊಡೆಯದ ಮೇಲೆ | ಸೆಟ್ಟಿ ಲಿಂಗನು ಎನ್ನಬೇಡ || ೧೩೭ ||

ಮಾತಿನ ಧರಣಿಯಲಿ ನೂಕುವನು ಮುಂದಕ್ಕೆ | ಝೇಂಕರಿಸಿ ಮತ್ತೆ ಬಲ ತುರಗ |
ಮೇಕೆಯ ಹಿಂಡಿಗೆ ರೊಪ್ಪವ ಬಡಿದಂತ | ರೀತಿಯಾಗಲು ನಡೆವೆ ಲಿಂಗ              || ೧೩೮ ||

ಮುಂದಕ್ಕೆ ಬಿಡದಂತೆ ಬಂಧಿಸಿ ತರುಬಲು | ಕಂಡನು ಲಿಂಗ ಕೋಪದಲಿ |
ಮಂದಿಗಭಯವ ಕೊಟ್ಟು ಮದಗಜವೆದ್ದಂತೆ | ಚಂದ್ರಾಯುಧವ ತಾ ಕಿತ್ತ             || ೧೩೯ ||

ಸೆಟ್ಟಿ ಲಿಂಗನ ಮಂದಿ ಹೊಕ್ಕರು ಬಲವಂತ | ದಿಟ್ಟ ಉಳ್ಳವರು ತೊಡೆ ಬಡಿದು |
ಕಚ್ಚಲು ರಣರಂಗ ಕಾಲನಾರ್ಭಟದೊಳು | ಹೊಕ್ಕನು ಲಿಂಗ ಸವರುತಲಿ             || ೧೪೦ ||

ಗುಡುಗಿನಾರ್ಭಟದೊಳು ರಣಧೀರ ಲಿಂಗನ ಮಂದಿ | ಪ್ರಾಣದಾಸೆಗಳನು ತೊರೆದು |
ತೋಳನು ಕುರಿಹಿಂಡ ಖಾಲಿಮಾಡುವ ತೆರದಿ | ಮೂರಾರು ಬೀದಿಗಳ ಕಡಿದು       || ೧೪೧ ||

ಬೇಡ ನಿನ್ನಯ ಪಡೆಯು ತೀರಿ ಬಂದಿತು ಎಂದು | ಹೆಗಲೇರಿಸಿ ಲಿಂಗಣ್ಣ ಹೊಡೆಯೆ |
ಕಾಗೆಯ ಬಳಗಕ್ಕೆ ಕಲ್ಲನು ಹೊಡೆದಂತೆ | ಬಿಗಿಸಿ ಪೌಜನು ಹೊಡೆದನು               || ೧೪೨ ||

ಮಿಕ್ಕು ಹೋಗುವನವನು ಮೀನಾಂಕ ರಾಮನ ಎಡೆಗೆ | ಮುತ್ತಲು ಮರಳಿ ಭೋರ್ಗರೆದು |
ಉಕ್ಕಡವ ಕಾಯ್ವಂಥ ಚರನು ರಾಮನ ಬಳಿಗೆ | ಕೊಟ್ಟನು ಸುದ್ಧಿ ಪರಿದೋಡಿ        || ೧೪೩ ||

ಕಾಲಭೈರವ ರಾಯ ಏರಿದನು ತುರಗವನು | ವೀರಸಂಗಯ್ಯ ಕಾಟಣ್ಣ |
ಹರಿಸಿ ತುರಗವ ಗಿಡುಗನಾರ್ಭಟೆಯೊಳು | ಮೂರು ಬೀದಿಯಲಿ ಹೋಗಲೇರಿ        || ೧೪೪ ||

ಕಡಿಕಡಿ ಎನುತಲಿ ಸಿಡಿಲಿನಾರ್ಭಟದೊಳು | ಸವರಲು ಸಪ್ಪೆ ಕೊರೆದಂತೆ |
ತುರಗವ ರಾಹುತನು ಬಿರಿಸಿಂದ ಎಳೆಯಲು | ಹೋಗಲು ನಾಲ್ಕು ಹೋಳಾಗಿ       || ೧೪೫ ||

ವೀರಸಂಗಮರಾಯ ಹೊಗಲೇರಿದನು ಜೀಬಿಯ | ಬಾಗಿಲ ಕಟ್ಟಿ ಸವರುತಲಿ |
ತಾರು ಮಾರಿನ ಮೇಲೆ ಹೇರನುರುಳಿಸಿದಂತೆ | ತೋರಲು ಮಾಯದ ಬುರುಡೆ     || ೧೪೬ ||

ಬಿರಿದನು ಬಿಡಲೆಂದು ಮೊನೆಗಾರ ರಾಯರ ಮಂದಿ | ವಿಳರಾಸವಾಗಿ ವಿಪರೀತ |
ಉಳಿದವರು ಒಂದಾಗಿ ಹುತ್ತ ಹುಲ್ಲನೆ ಕಚ್ಚಿ | ಕರಮುಗಿದು ಕಾಯಬೇಕೆನಲು         || ೧೪೭ ||

ಮುತ್ತಿದ ದಂಡೆಲ್ಲ ಮಂಜೇರಿ ಹರಿದಂತೆ | ಸತ್ತುದು ಸರಿ ಮೂರು ಪಾಲು |
ರಕ್ತದ ಮಳೆ ಸುರಿದ ಅರ್ಥದಿ ತೋರ್ಪುದು | ಸುತ್ತೊಂದು ಬಾಣದ ಎಸೆಗೆ            || ೧೪೮ ||

ರಾಯ ರುದ್ರನ ದಂಡು ಸಾಯುಜ್ಯ ಸೇರಲು | ಊದಿಸಲು ಧರ್ಮಗಹಳೆಯನು |
ದೇವಿಸೆಟ್ಟಿಯ ಮಗನ ಕರೆದು ಕೈಯನೆ ಪಿಡಿದು | ಸಾಗಿದರು ತಮ್ಮ ಪಾಳೆಯಕೆ     || ೧೪೯ ||

ರಾಯ ರಾಮನು ಹೋಗಿ ಆನಂದದೊಳಗಿರಲು | ಪೇಳುವೆನು ರುದ್ರನ ದುಃಖ |
ಲಾಲಿಸಿ ಪ್ರೌಢರು ಮತ್ತೇನೆಂದು ಪೇಳುವೆ | ಓರ್ಗಲ್ಲ ಆರ್ಭಟೆಯ ಶಿವ ಬಲ್ಲ          || ೧೫೦ ||

ಹಳ್ಳ ಕೊಳ್ಳದಿ ಇರ್ದ ಜಳ್ಳು ಬಂಟರು ಎ‌ದ್ದು | ಕಳ್ಳರಂದದಲಿ ನೋಡುವರು |
ಅಲ್ಲೊಮ್ಮೆ ಸರಕೆನಲು ಆಕರಿಸಿ ಏಳುತಲವರು | ಇಲ್ಲಿ ಬಂತೆನುತ ಓಡುವರು        || ೧೫೧ ||

ಮೂಳ ಪ್ರಧಾನಿಯು ಬೂದಿ ಮೈಲೊಳು ಪೂಸಿ | ಜೋಗ ಸನ್ಯಾಸಿ ರೂಪಾಗಿ |
ಕಾರೆಯ ಮೆಳೆಲೊಳು ಅಡಗಿರ್ದು ನಡೆದನು | ಓರುಗಲ್ಲೆಂಬ ಪೇಟೆಯಲಿ             || ೧೫೨ ||

ಉಳಿದವರು ಒಂದರೆಯು ಬಳಲ್ವ ಗಾಯದ ಮಂದಿ | ಕೊರಗುತ ಸೊರಗಿ ಸೊಪ್ಪಾಗಿ |
ಧರಣಿಯೊಳಗೆ ತನ್ನ ಹಗೆಯವಗೆ ಬೇಡಯ್ಯ | ಹಿಡಿವುದು ಕತ್ತಿ ಕೋವಿಯನು          || ೧೫೩ ||

ಬೇಡೆಮಗೆ ಸಂಬಳ ಏಳೇಳು ಜನ್ಮದಿ | ಜೇನ ಹುಳುಗಳಿಗೆ ಬೇಗೆಯನು |
ತೋರಿದ ತೆರನಾಗಿ ಸಾಗುವದು ಯಮಪುರಕೆ | ಕೂಳು ಹುಟ್ಟದೆ ಕೂಲಿ ಮಾಡೆ      || ೧೫೪ ||

ಬಂದನು ಮತ್ತೊಬ್ಬ ಬಳಲು ಗಾಯದ ಮನುಜ | ವಂದಿಸಲು ರುದ್ರನಿಗೆ ಕರವ |
ಚೆಂದವಾಯಿತು ಸ್ವಾಮಿ ಚರಣಕಮಲವ ಕಾಬ | ಪುಣ್ಯಯೋಗದಿ ಉಳಿದು ಬಂದೆ    || ೧೫೫ ||

ಏನ ಹೇಳಲಿ ಹಗೆಯಾದ ಬಲವನು | ಮೀನಕೊಂದಂತೆ [ಬಲಿಯಾಗಿ] |
ತಾರ ಮಲಗಿತು ರಾಯ ಹದಿನಾರು ಸಾವಿರದೊಳು | ನೂರಾರು ಉಳಿದಿರಲು ಹೆಚ್ಚು         || ೧೫೬ ||

ಅನಿತರೊಳಗೆ ಬರಲು ಮಂತ್ರಿ ಲಿಂಗರಸನು | ಘನ ಋಷಿಯ ವೇಷವನು ಧರಿಸಿ |
ತರವ ಕಾಣದೆ ರಾಯ ಚರಣಕೆರಗುವೆನೆಂಬ | ಸಮಯಕ್ಕೆ ಮಂತ್ರಿ ಕೈಮುಗಿದ       || ೧೫೭ ||

ಯಾಕಯ್ಯ ಎಲೆ ಮಂತ್ರಿ ಸನ್ಯಾಸಿ ರೂಪನೆ ತೊಟ್ಟೆ | ಹಾಸ್ಯದೊಳಗೆ ರಾಯ ನಗಲು |
ಒಲಿದು ಲಾಲಿಸು ಭೂಪ ಉಳಿಯಗೊಡುವರೆ ಎನ್ನ | ತಲೆಯ ಕಾದಿತು ಬೂದಿ ಮುನ್ನ || ೧೫೮ ||

ಮೂಳ ಲಿಂಗ [ಗೆ] ಹೆದರಿ ಓಡಿ ಬಂದನು ಮಂತ್ರಿ | ಹದಿನಾರು ಸಾವಿರ ಬಲ ಒಯ್ದು |
ಹೋಳಿಗೆ ತುಪ್ಪಕ್ಕೆ ಅಧಿಕಾರರಲ್ಲದೆ ನೀವು | ಕಾಯ ಬ್ರಹ್ಮರಿಗೆ ಸಾಧನವೆ             || ೧೫೯ ||

ಬಣಜಿಗ ಮೂಳ[ನನು] ಮುರಿಯ ಬಲ್ಲೆನೆ ಭೂಪ | ತರುಬಿ ನಿಲ್ಲಿಸಿದೆ ಲಿಂಗನನು |
ಹಿಡಿವಂಥ ಸಮಯಕ್ಕೆ ಹುಡುಗ ರಾಮನು ಬಂದು | ಕಡಿದನು ಮೋಸಗತಿಯಲಿ      || ೧೬೦ ||

ಲಿಂಗನ ಕಡೆಯೆಂಬ ನಂಬಿಗೆಯ ತೊಟ್ಟಿರಲು | ಕಂಡ ಗಳಿಗೆಯಲಿ ತೀರಿಸುವೆ |
ತಂದು ಪಾದವ ತೋರ್ವ ಒಡಂಬಡಿಕೆ ಹೆಚ್ಚುತಲಿರಲು | ಹುಡುಗ ರಾಮನು ಮೋಸ ಮಾಡೆ  || ೧೬೧ ||

ಮೋಸ ಗತಿಗಳ ಮಾಡೆ ಮುರಿಯಬಲ್ಲನೆ ಅವಗೆ | ಮೀಸೆಗಳ ನಂಬಿಸುವೆ ನಿಮಗೆ |
ತಾಸಿನಲಿ ಹದಿನಾರು ತಲೆಯ ಪಾದಕೆ ತರುವೆ | ಪೊಕ್ಕು ರಾಮನ ಹಿಡಿತರುವೆ      || ೧೬೨ ||

ಬಲ ಸ್ವಲ್ಪವಾಗಲು ಕಡಿದನಲ್ಲದೆ ಮಂಗಳ | ದಳವ ಮತ್ತಷ್ಟನೊಯ್ದಿರಲು |
ಬಲೆಯ ಬೀಸಿದ ತೆರದಿ ತುಳಿದು ಕೊಲ್ಲುವೆ ದಂಡ | ಪಿಡಿತರುವೆ ಲಿಂಗ ರಾಮುಗನ  || ೧೬೩ ||

ಅಂಥವನಹುದೆಂದು ಅತಿ ಮೆಚ್ಚಿ ಮಂತ್ರಿಯನು | ಸಂತೈಸಿ ಬೂದಿಯನು ತೊಳೆಸಿ |
ದುಸ್ತಾನು ಉಡಗೊಟ್ಟು ಧೂಮವೇಳಲು ಅಗ್ನಿ | ಬಿದ್ದಂತೆ ಮನೆಗೆ ಕೋಪದಲಿ        || ೧೬೪ ||

ಆಗಲೈ ಎಲೆ ಮಂತ್ರಿ ರಾಮ ಲಿಂಗನ ತಂದು | ಕೀಳಿಸುವೆ ಹಲ್ಲ ಹದಿನಾರ |
ಮೂಳನ ಮಾತೇನು ಮತ್ತೊಂದು ಲೇಖನವ | ನೋಡುವ ಬರೆಸಿ ಅವನೆಡೆಗೆ        || ೧೬೫ ||

ಬರೆಯಲು ರಾಮನ ಎದೆ ಒಡೆದು ಸಾವಂತೆ | ಕೊಡುವೆ ಲಿಂಗನ ಮೂಲದೊಳಗೆ
ಹಿಡಿಕಟ್ಟಿ ಕೈಯೊಳು ಬುಡವ ಕೀಳುವೆ ನಿಮ್ಮ | ಕುಲವಂಶ ಜಾತಿ ಬಿಡದಂತೆ          || ೧೬೬ ||

ಲೇಖನದೊಳಗಿಂಥ ಕಾಕು ಯೋಚನೆ ಬರೆದು | ತಾ [ಕಟ್ಟ]ಕಡೆಯ ಕಾಗದವ |
ಲೋಕಾಧಿಪತಿ ರಾಯ ರುದ್ರ ಕಳುಹಿದ ದಿಟ್ಟ | ಮಾತ ಬಲ್ಲಂಥ ಮಂತ್ರಿಗಳ          || ೧೬೭ ||

ಸ್ಥಾನಪತಿಗಳು ಬೇಗ ಏರಲು ಪಲ್ಲಕ್ಕಿ | ಆ ತೇಜಿದಂತರಲಿ ಇಳಿದಂಥ |
ನೂರಾರು ತುರಗದಲಿ ಒಡನೆ ದಂಡನು ಹೊಕ್ಕು | ರಾಮನ ಕಂಡು ಕರಮುಗಿದು     || ೧೬೮ ||

ಇಟ್ಟು ಲೇಖನವನು ತಥ್ಯವ ನುಡಿದರು | ಕಪ್ಪೆಗೆ ಉರಗನ ಹಗೆಯೇ |
ಬಿಟ್ಟರೆ ಲಿಂಗನನು ಬುದಕುವೆ ನೀ ಪಡೆದ | ಲಿಖಿತ ತೀರಿತ್ತು ಬಿಡದಿರಲು              || ೧೬೯ ||

[ಹರಣಿ ವ್ಯಾಘ್ರನ] ಕೂಡೆ ಛಲಗೊಂಡು ಬದುಕುವುದೆ | ತಿಳಿಯದೆ ಬುದ್ಧಿ ತರಳನಿಗೆ |
ಹಿಡಿ ಕಡಿ ಕೈಯೊಳು ಮರೆಯಂತೆ | ಕುರುಹು ಕಾಣದೆ ಮರಣಗೊಂಬೆ                || ೧೭೦ ||

ತಟ್ಟವರ ಬಾಯಿಗಳ ಹೆಚ್ಚುತ್ತ ನಡೆಸುವರು | ಸಿಟ್ಟಿನೊಳಗೆ ಗರ್ಜಿಸಲು |
ಬಿಚ್ಚಿ ಕಾಗದ ನೋಡಿ ಕಿಚ್ಚಿನ ಕಾಲಾಗ್ನಿ | ನೇತ್ರದೊಳ್ ಕಿಡಿಯ ಸೂಸುತಲಿ           || ೧೭೧ ||

ಮೋಸಗಾರರ ಗಂಡ ಮಾತಾಡಿ ಹೋಹನ ಮಿಂಡ | ಓರುಗಲ್ಲವಗೆ ಎದೆಶೂಲ |
ಹಾಕಿದ ಬಿರಿದನು ಬಿಡಲೆಂ[ದ] ರುದ್ರನ ಗಂಡ | ನೂಕಿವರ ಬಾಯ್ಮೇಲೆ ಹೊಡೆದು    || ೧೭೨ ||

ನುಡಿಯಲಾಕ್ಷಣ ಚರರು ಶರಿವಿಡಿದು ದಂಡನು ನೂಕಿ | ಸುಡು ನಿನ್ನ ಪಲ್ಲಕ್ಕಿ ಓಡು |
ಪಡೆದಿಂದು ಪ್ರಾಣವನು ನೀ ನುಡಿವ ಮಾತಿನಲಿ ರಾಮ | ತಡೆದು ಸೈರಿಸಲು ಶಿವ ಬಲ್ಲ       || ೧೭೩ ||

ಬರಲಾಗ ಹೇಜೀಬರು ಕಿರಿ ಕಾಂತಿ ಮುಖದೊಳು | ರಾಯ ರುದ್ರಗೆ ಕರ ಮುಗಿದು |
ಸೋರುತ ಜಲಗಳ ಹೀನಾಯ ಅಪಕೀರ್ತಿ | ಏನ ಪೇಳಲು ತೀರದರಸೆ              || ೧೭೪ ||

ಆಡಿದನು ತನ್ನ ಬಾಳ ಗರ್ವದ ಮೇಲೆ | ಮಾಡಿಕೊಂಡರು ನಿಮ್ಮ ಸತಿಯ |
ಕೇಳಲಾರದೆ ನಾವು ಕರ್ಣ ಬೆರಳಲಿ ಮುಚ್ಚಿ | ಮೂಗನಂದದಿ ಬಂದೆವೆದ್ದು            || ೧೭೫ ||

ಸ್ಥಾನಪತಿಗಳ ಮಾತ ಕೇಳುತ್ತ ರಾಜೇಂದ್ರ | ಭೇರುಂಡನಂತೆ ಭೋರ್ಗರೆದ |
ಭೇರಿಯ ಹೊಡೆಯೆಂದು ಸಾರಿಸಲು ಪಟ್ಟಣಕೆ | ಕೂಡಿತು ಬಲ ತುರಗ ಬಂದು       || ೧೭೬ ||

ಕರೆಯೆಂದ ಬಲವಂತ ದೊರೆಗಳನು ಮಂತ್ರಿಯನು | ಗುರುತಾದ ವೀರ ಮನ್ನೆಯರ |
ಸದರಿನೊಳಗೆ ಕುಳಿತು ಶರಭನಂದದಿ ರಾಯ | ಪರಿವಾರಕಿತ್ತ ವೀಳೆಯವ           || ೧೭೭ ||

ಕರಿ ತುರಗ ಕಾಲಾಳು ಮೊರೆದು ಆರ್ಭಟಿಸುತ್ತ | ಕೊಡು ರಾಯ ಬೇಗದೊಳಭಯ |
ಹುಡುಗ ರಾಮನ ಕಡಿದು ತರುವೆವು ಲಿಂಗನ | ತೊಡೆಯ ತಟ್ಟುತಲಿ ರಾವುತರು     || ೧೭೮ ||

ರಾಯ ಮುಮ್ಮೋಜಿಗ ಪಾಂಡುವ ರಂಗರಸ | ಹೋಗೇಳಿ ಲಿಂಗರಸು ಸಹಿತ |
ಮೂರು ಮಂದಿಗೆ ಕೊಟ್ಟ ಸಮನಾಗಿ ಉಡುಗೊರೆಯ | ನೇಮಿಸಿ ಬಲವ ಕೈಯೊಳಗೆ || ೧೭೯ ||

ಹತ್ತು ಸಾವಿರ ತುರಗ ಮೂವತ್ತು ಸಾವಿರ ಮಂದಿ | ಸೊಕ್ಕಿದ ಕರಿಗಳೇಳೆಂಟು |
ಚಿಕ್ಕ ಪ್ರಾಯದ ಚದುರ ಮೂವರಿಗು ಧಣಿ ಮಾಡಿ | ಹೊಕ್ಕರೆ ಬಿಡಬೇಡಿ ಕುಮ್ಮಟವ  || ೧೮೦ ||

ನಾಯ ಮೂಳನ ಮಾತ ಭೂಮಿ ಗಾತ್ರವ ಮಾಡಿ | ಹೇಳುವರೆ ಈ ಬಗೆಯ ಭೂಪ |
ಕಾಲನ ಪಡೆದಂಥ ಸೂರ್ಯನ ಮೊರೆ ಬೀಳೆ | [ಓ]ಡಲೀಸದೆ ನಿಲಿಸಿ ತರುವೆ         || ೧೮೧ ||

ಆಡುವ ಪಂಥಗಳ ಕೇಳುತ ರಾಜೇಂದ್ರ | ಬಾಲನಿಗೆ ಪ್ರತಿಯೆಂಬೆ ನಿನ್ನ |
ಸಾಗಿ ಶಿಸ್ತಿಲಿ ಒಳ್ಳೆ ಕಾರ್ಯ ಲಗ್ನವ ನೋಡಿ | ಭೋರೆನುತ ನಡೆಯಲು ದಂಡ        || ೧೮೨ ||

ಭೇರಿನಾದಗಳಾಗೆ ಭೂಮಿ ಜರ್ಝರಿಪಂತೆ | ಸೂರ್ಯನೆ ಪ[ರಿ]ದು ಓಡ್ವಂತೆ |
ಓರುಗಲ್ಲನೆ ಹೊರಡೆ ಕಾಳ ಮೇಘದ ತೆರದಿ | ಮಾರಿ ಬಯಲಿಗೆ ಜಂಡೆ ಹೊಡೆಯೆ    || ೧೮೩ ||

ದಂಡ ಕಾಣುತ ಎದೆಗುಂದಿ ರಾಮನ ಮಂದಿ | ಬಂದು ಪೇಳ್ದರು ರಾಮನೊಡನೆ |
ಮುಂಗಾರು ಮಳೆ ಮೇಘ ಎಂಬ ರೀತಿಗೆ ತೋರೆ | ಬಂದಿಹರು ಧಣಿಗಳು ಮೂರು    || ೧೮೪ ||

ಬಂದರೆ ಬರಲೇಳಿ ಮುಂದನ ಮಗ ರಾಮ | ಅಂಜಿದರೆ ವೈರಿ ಪಾಲಿಪನೆ |
ಹೊಂದುವ ಸದ್ಗತಿಯ ಪ್ರಾಣಿರಲು ನಿಮ್ಮನು ಕೊಡೆನು | ತಾನಳಿವ ಕಾಲಕೆ ದಂಡು ಮುಗಿದೆ  || ೧೮೫ ||

ಬಿರಿದಿನ ಬಂಟರಿಗೆ ಈ ಬಗೆಯ ಧೈರ್ಯವ ಕೊಟ್ಟು | ಕರೆಸಲು ಅಣ್ಣ ಕಾಟಣನ |
ಬರಹೇಳು ಬಾದುರನ ಲಿಂಗಣ್ಣ ಸಂಗಯ್ಯ | ಗುರುತಾದ ಮಂತ್ರಿ ಮನ್ನೆಯರ         || ೧೮೬ ||

ಕಾಳಗಕೆ ಅನುಮಾಡಿ ಚಾಳು ರುದ್ರನ ಬಗೆಯ | ಕಾಗೆ ಬಳಗವು ಬಂದುದಂತೆ |
ಏರಲು ಶೃಂಗರಿಸಿ ಭೀಮಾರ್ಜುನರಂತೆ | ಏರಿತ್ತು ಪೌಜು ಮುಂಗಡೆಯ             || ೧೮೭ ||

ಹಿಡಿಯೆ ಬಿರಿದನ ಕಹಳೆ ಕಡಿಕಡಿ ಎನುತಲಿ | ತೊಡೆ ಹೊಡೆದು ಸಿಡಿಲಿನಾರ್ಭಟದಿ |
ಬೆದರಿ ರುದ್ರನ ದಂಡು ಬಂದ ರಾಮನು ಎಂದು | ಬಿಡಿಸಿಕೊಂಡು ತಮ ತಮಗೆ      || ೧೮೮ ||

ಕಚ್ಚಲು ರಣರಂಗ ಕೊನೆಯ ಮಂದಿಗೆ ಜಗಳ | ಉತ್ರವಾಡುತ ಹಾಸ್ಯರಸವ |
ಒತ್ತಿ ಮುಂದಕೆ ಬನ್ನಿ ಈ ಹೊತ್ತು ರಾಮನ ಮಂದಿ | ಇಕ್ಕೇವು ಗೋರಿ ಗುಮ್ಮಟವ     || ೧೮೯ ||

ನಾರಿ ಮೂಳ ಲಿಂಗನಾ ಹಿಡಕೊಡದೆ ನಿಮ್ಮಯ ರಾಮ | ಬುಡಕೆ ತಂದನು ಕೊಡಲಿಯನು |
ಬಡವ ಬಲ್ಲಿದನೊಳು ಸೆಣಸಿ ದವಡೆಯ ಪೆಟ್ಟ | ಬಡಿಸಿಕೊಂಡ್ಹೋಗುವ ತೆರನು       || ೧೯೦ ||

ಧಣಿಗಳಿಲ್ಲದೆ ಮೈಲಗೆಲಯಿದೆಯೆಂಬುತ | ಮೊನೆಗಾರರಾಗಿ ಬರಬೇಡಿ |
ಹನುಮನ ಸಾಹಸದ ಮುಮ್ಮೋಜಿರಾಯ | ತುಳಿಸುವರು ನಿಮ್ಮ ರಾಮುಗನ         || ೧೯೧ ||

ನೀವೆಲ್ಲಿ ಜನಿಸಿದ ತಾವೆಲ್ಲಿ ಮರಣಾವ | ಪೂರ್ವದ ಲಿಖಿತ ಪ್ರಾರಬ್ದಾ |
ರಾಯನು ಮುಮ್ಮೋಜಿ ಹೋಗಲೇರಿದ ಹನ್ನೆರಡು | ಸಾವಿರ ಕುದುರೆ ಬಲದಿ          || ೧೯೨ ||

ಕತ್ತಿಗಳು ಕೂಡಲು ಇತ್ತರದೊಳು ಭೇರಿ | ಮತ್ತೆ ಕಾಳೆಗಳು ನೇಪೂರಿ |
ಹಚ್ಚುವ ಪರಿಬಾಣ ಹೊಡೆವ ಸಿಂಗಾಡಿಯು | ಚಿತ್ತಿಯ ಮಳೆಯಂತೆ ಸೋರೆ          || ೧೯೩ ||

ಮೂರು ಭಾಗದ ಮೇಲೆ ಏರಲು ಮೂವರು | ರಾಯ ಮುಮ್ಮೋಜಿ ತುಳಸಿದನು |
ತಾಳಲಾರದೆ ಮತ್ತೆ ರಾಮನ ಬಲ ಮುರಿದು | ಬೆನ್ನಾಗಲು ಬೆದರಿದ ತೆರಕೆ           || ೧೯೪ ||

ಯಾರು ಈ ಪರಿಯೊಳು ಕಡಿವನು ಲಿಂಗಣ್ಣ | ರಣಧೀರನಹುದು ಕಾರ್ಯದೊಳಗೆ |
ಲಾಲಿಸು ರಣಭೂಪ ರುದ್ರನ ಬಲಭುಜದ | ಪಾಳೆಗಾರನು ಮುಮ್ಮೋಜಿ               || ೧೯೫ ||

ಹೊಕ್ಕು ಕಡಿವವನಾರು ಹತ್ತಿ ಬೆಳೆಯಿತು ರೋಗ | ಚಿಕ್ಕ ಪ್ರಾಯದ ಛಲಧೀರ |
ಕೆತ್ತಿಯೊಳ್ ರಣವಿಜಯ ಕಾಳಿಂಗದೇಶದ | ಕ್ಷತ್ರಿ ಕುಲದ ಪಾಂಡುರಂಗ              || ೧೯೬ ||

ಇವರು ಮಾಡುವ ಕಾರ್ಯ ಶಿವನಿಗೆ ಮೆಚ್ಚುವುದು | ಹಿಡಿದು ಹೊಂಚುವನಾರೊ ಹಳ್ಳ |
ಕೊಳ್ಳದಲಿ ಹಾರುವನು ನಿನ್ನೆ ಮುರಿದೋಡಿದ | ಕಳ್ಳ ಮೂಳ ಲಿಂಗರಸು             || ೧೯೭ ||

ನಕ್ಕನು ರಣವಿಜಯ ಪುತ್ರ ಚೆನ್ನಿಗರಾಮ | ಹತ್ತಿದ ಕುಂಜರವನಿಳಿದು |
ಉತ್ತಮದ ತುರಗವ ಕುಮಾರರಿರ್ವರು ಏರೆ | ಹೊಕ್ಕನು ಲಿಂಗ ಬಾದುರನು         || ೧೯೮ ||

ವೀರ ಸಂಗಮರಾಯ ಹೊಗಲೇರಿ ಮುಮ್ಮೋಜಿ | ರಾಯಗೆ ಇದಿರಾಗಿ ದಳವ |
ಏರಗೊಡದೆ ಒಂದು ಎಂಟು ಸಾವಿರ ಬಲವ | ನೀರ ಕುಡಿಸುತ ನಿಲ್ಲಿಸಿದರು          || ೧೯೯ ||

ಬಾದುರ ಬಲವಂತ ದೇವಿಸೆಟ್ಟಿಯ ಲಿಂಗ | ಧೀರ ಪಾಂಡುವಿಗೆ ಎದುರಾಗಿ |
ಮೀರಿ ಮುಂದಕೆ ಬರೆ ಪ್ರಾಣದೊಡೆವೆನು ಎಂದು | ಹದಿನಾರು ಸಾವಿರ ಪೌಜ ಕಡಿಯೆ         || ೨೦೦ ||

ಕಾಲಭೈರವನಂತೆ ಕನಕಗಿರಿ ನಾಯಕ | ಹಮ್ಮೀರ ಬಾಣಿಯ ಮುದ್ದ |
ಏರಗೊಡದೆ ಮಿಕ್ಕ ತುರುಗ ಕಾಲ್ಬಲವನು ಒಳ | ಸೇರಿ ಬಂದವರ ಸೆಳೆಯುತಲಿ     || ೨೦೧ ||

ಹತ್ತಲು ರಣರಂಗ ಕಿಚ್ಚಿನಾರ್ಭಟದೊಳು | ಮುಚ್ಚಲು ಧೂಳು ಮಂದುಲವ |
ಚಕ್ರವು ಸರಳಂಬು ಬತ್ತಿ ಬಾಣಗಳಿಂದ | ಕತ್ತಲೆಗವಿಯೆ ರಣಭೂಮಿ                  || ೨೦೨ ||

ಆರು ಸಾವಿರ ಕುದುರೆ ಹದಿನಾರು ಸಾವಿರ ಮಂದಿ | ಝೇರಿಸಿ ಸಂಗಯ್ಯ ಮುತ್ತೆ |
ರಾಯ ರಾಮನ ಭಾವ ವೀರ ಸಂಗಯ್ಯ ಕಡಿದ | ಮೂರೆರಡು ಬೀದಿಯ ಒಳಗೆ       || ೨೦೩ ||

ತಾವರೆ ಸಖನಾದ ಕೊಮಾರನ ಕೋಪದಲಿ | ಏರಲು ಮುಮ್ಮೋಜಿ ನೂಕಿ |
ಸೋರಿಸಿ ಅಂಬಿನ ಮಳೆ ಏಳು ಕಣುಗೆಡದೆ ನಿ | ಸ್ತ್ರಾಣದೊಳಗೆ ಕಾದುತಿರಲು        || ೨೦೪ ||

ಪರಿದೋಡಿ ಬಂದಾಗ ಚರನೊರ್ವ ಸುದ್ಧಿಯ ಕೊಡಲು | ಮುಳುಗಿದ ಸ್ವಾಮಿ ಸಂಗಯ್ಯ | ಸ
ನುಡಿಯು ಕರ್ಣಕೆ ಬೀಳೆ ಆರ್ಭಟಿಸಿ ಇರ್ವರು ಏಳೆ | ಸಿಡಿದೆರಗುವ ಸಿಡಿಲಂತೆ        || ೨೦೫ ||

ಹೊಕ್ಕರು ಇರ್ವರು ದಿಕ್ಕೆರಡು ಭಾಗದಲಿ | [ಕೊ]ಚ್ಚಿ ಕೊರೆಯುತ ಇಕ್ಕೆಲವ |
ಸೊಪ್ಪೆಯನರಿದಂತೆ ಸವರುತ ತುರಗವ | ನೊತ್ತುವರು ಬೀದಿಗೋಲುಗಳ           || ೨೦೬ ||

ಹಸಿದಿರ್ದ ಕರಿಗಳು ರಸದಾಳೆ ಕಬ್ಬಿನ | ಹಸನಾದ ಹೊಲಗದ್ದೆ ಹೊಕ್ಕು |
ಅಶನ ತುಂಬಲು ಮುಟ್ಟ ಗ್ರಾಸವನು ಕೊಂಬಂತೆ | ತೃಷೆಗಡಿದು ಕರ ಮನದಣಿಯೆ   || ೨೦೭ ||

ಅಗಡಿನಬ್ಬರದೊಳೆ ಭೋರ್ಮೊರೆದು ಇರ್ವರು ಏಳೆ | ಸದೆಯುತ ಆನೆಯಶ್ವಗಳ |
ಹದಿನಾರು ಬೀದಿಯ ಕಡಿದು ಮುಮ್ಮೋಜಿಯು | ಹಿಡಿದನ ಕೈಸೆರೆಯೊಳಗೆ            || ೨೦೮ ||

ಇತ್ತ ಮುಮ್ಮೋಜಿಯ ಕೊಟ್ಟು ಪಾರದ ಒಡನೆ | ಹತ್ತಲು ಪಾಂಡುರಂಗನಿಗೆ            || ೨೦೯ ||

ರಾಯ ಪಾಂಡುರಂಗ ಬಾದುರ ಲಿಂಗನ ಮುತ್ತಿ | ಝೇರಿಸಿ ಜೇನ್ನೊಣದಂತೆ |
ವೀರ ಸಂಗಯ್ಯ ಕಾಟ ಕುಮಾರರಾಮ ಹೋಗಿ | ಮೂರು ಬೀದಿಯ ತಾರ ಕಡಿಯೆ   || ೨೧೦ ||

ಕಡಿಯಲು ಕದಳಿಯ ವನದೊಳು ಕರಿಹೊಕ್ಕು | ಸದೆಬಡೆದು ಸದರಿ ಕುಳಿತಂತೆ |
ಬೆದರಲು ಜೊಳ್ಳೆದ್ದು ಬಾದುರ ಲಿಂಗನು ಏರಿ | ಹೊಡೆಯಲು ಮೂರಾರು ಬೀದಿ      || ೨೧೧ ||

ಬಿಡಿಸಿಕೊಂಡರು ಮತ್ತೆ ಗಡಣೆ ರಾಮನ ಮಂದಿ ಸುತ್ತ | ಬಳಸಿತು ಬಳೆಯ ಬಿಟ್ಟಂತೆ |
ಬೆದರೋಡು ಮಂದಿಯ ಶಿರವರಿದು ಕಟ್ಟಿಹಾಕಿ | ತುರಗ ಹಿಡಿವರು ಕಡಿಮೊದಲೆ      || ೨೧೨ ||

ರಾಮ ಕಾಟನು ಹೊಕ್ಕು ಪಾಂಡುರಂಗನ ಮೇಲೆ | ವೀರಸಂಗಯ್ಯ ಬಾದುರನು |
ನೂರಾರು ತಲೆ ಹೊಡೆದು ರಣಧೀರ ಪಾಂಡುರಂಗ | ಭೇರುಂಡನಂದದಿ ಹೆಣಗೆ      || ೨೧೩ ||

ಕತ್ತಿಯೊಳ್ ಕದನಪ್ರಚಂಡನಹುದು ಎಂದು | ಇತ್ತ ರಾಮಯ್ಯ ಸಾಗಿಬರಲು |
ಕ್ಷತ್ರಿಯ ಕುಲವಂಶ ಕೀರ್ತಿಮಾಳ್ಪವನಹುದು | ಮತ್ತೊರ್ವನಾದೆ ಬಿಡು ಛಲವ        || ೨೧೪ ||

ಬಾಲ ಪ್ರಾಯದ ತರಳ ಕೂಲಿ ಜಗಳಕೆ ಬಂದು | ಸಾಯೊಲೇತಕೆ ಕೈಯ ನಿಲಿಸು |
ಜೀವದ ಭಯ ಕೊಟ್ಟು ರಾಯ ರಾಮನು ಬೇಗ | ಬಾರೆನುತ ಕರಗಳ ಪಿಡಿಯೆ        || ೨೧೫ ||

ಬಾಣಿಯ ಮುದ್ದನು ಪ್ರಧಾನಿ ಲಿಂಗರಸನು | ಜೋಡಿಸಿದ ಮೂರು ಲೌಡಿಯನು |
ಮೇಗಣ ಕೆನೆ ಜುಟ್ಟು ನೆಗೆದು ಪಿಡಿದೆಳೆತಂದು | ರಾಯ ರಾಮನು ಇದ್ದ ಬಳಿಗೆ        || ೨೧೬ ||

ದಣಿಗಳಾದರು ಮೂರು ಕೈಸೆರೆಯ ಸೇರಲು | ಮಿಕ್ಕವರು ಗಿಡ ಮೆಳೆಯ ಬೀಳೆ |
ಹೆಣಗಳನೆಳಕೊಂಡು ಮಡಗಿ ಇಪ್ಪರು ಕೇಳಿ | ಜಲ[ವನು] ಹೊಕ್ಕು ಕರಮುಗಿಯೆ    || ೨೧೭ ||

ಶ್ರವಣನ ಪರಿಯಾಗಿ ಕೆಲರು ಬೆತ್ತಲೆ ನಿಂದು | ಕರಮುಗಿದು ಬುಡಕೆ ನಾನೊಬ್ಬ |
ಬಿಡಿ ನಿಮಗೆ ಬಹುಧರ್ಮ ಬಿಟ್ಟಿ ಬಂದವರೊಂದು | ದೈನ್ಯಬಡುವರು ಕಡೆಮೊದಲೆ    || ೨೧೮ ||

ರಣವೆಲ್ಲ ಕೆಸರೆದ್ದು ಸೆಣಸುವರಿಲ್ಲದೆ | ಹಿಡಿಸಿದ ಧರ್ಮ ಕಹಳೆಯನು |
ರಣವನು ಸೋಸುತ್ತ ಬರುವಾಗ ಒಬ್ಬನ | ಪಣೆಗೆ ನಾಮವ ಬರೆದು ಕಳುಹೆ           || ೨೧೯ ||

ರಾಯ ರುದ್ರಗೆ ಒಂದು ಕುಮಾರಗೆ ಎರಡೆಂದು | ಸಾರಿ ಪೇಳಲು ಭಯ ಬಿಡದೆ |
ಯಾರಾರು ತಮ್ಮೊಳಗೆ ಆಳಿದ ಮಂದಿಗೆ ಅಗ್ನಿ | ಮಾಡಿಸಿ ಪಾಳ್ಯಕೆ ನಡೆಯೆ          || ೨೨೦ ||

ಸತ್ತವರ ಮಕ್ಕಳಿಗೆ ಹೆಚ್ಚು ಸಂಬಳ ಮಾಡಿ | ತಮ್ಮಪ್ಪಾಜಿ ಬಳಿಗಾಗ ಬಂದು |
ಮತ್ತೇನು ಭಯವಿಲ್ಲ ಈ ಹೊತ್ತಿಗೆ ನಮಗೇನು | ರಕ್ತದ ಹಳ್ಳ ಹರಿಸಿದೆನು             || ೨೨೧ ||

ರಾಯ ಕಂಪಿಲನಾತ್ಮಕ ಪಾಳ್ಯದೊಳಿರುತಿರೆ | ಆನಂದ ಪರಿಪೂರ್ಣದೊಳಗೆ |
ಭೂಪರುದ್ರನ ಮಂದಿ ಉಳಿದವರು ಓಡುವ ಪ್ರ | ತಾಪವ ಕೇಳಿ ಬಲ್ಲವರು            || ೨೨೨ ||

ಸಾಕಿನ್ನು ಸಂಬಳ ಯಾಕೆ ಮಾಡಿದೆ ಶಿವನೆ | ಲೋಕದೊಳುಂಟೆ ಈ ಕರ್ಮ |
ಭೂತಗೆ ಕಡಿವಂಥ ಕುರಿ ಮೇಕೆಗೆ ಕಡೆಯಾಗಿ | ಹಾಕಿದನೆ ಬ್ರಹ್ಮ ನರಜನ್ಮ           || ೨೨೩ ||

ಕಾಂತ ರುದ್ರನ ನೋಡಿ ಕರುಮಾಡವನು ಹತ್ತಿ | ರಕ್ತದ ಮಳೆ ಸುರಿದಂತೆ |
ನೇತ್ರವು ಹೆಚ್ಚಲು ಎದೆ ಎರಡು ಪಾಲಾಗಿ | ಚಿತ್ತದೊಳಗೆ ಜ್ಞಾನ ಮರೆದ               || ೨೨೪ ||

ಸರಸ ಬೆರೆಸಿತು ಎಂಬ ತೆರಬಂತು ಎಲೆ ಮಂತ್ರಿ | ಎಮ್ಮ ಬಲವೆಲ್ಲ ಅಡಗಿತು ಶಿವನೆ |
ತೃಣವೆ ಪರ್ವತವಾಗಿ ಬಲವುಳ್ಳ ಕಾಲಕ್ಕೆ | ನರಿಯು ಹೆಬ್ಬಲಿಯಾದ ಗಾಥೆ            || ೨೨೫ ||

ಎಲ್ಲಿ ರಾಮನು ಇವ ಎಲ್ಲಿ ಜಗಳವು ಎಂದು | ಕಲ್ಯಾಣದೊಳಗೆ ಬಿಜ್ಜಳನು |
ಅಲ್ಲಿ ಮೈಲಿಗೆಯಿಂದ ವೀರ ಮಡಿವಳ ಕೊಂದ | ಇಲ್ಲಿಗೆ ತನಗಾಯಿತೆಂದ             || ೨೨೬ ||

ಧರೆಗಧಿಕ ಹಂಪೆಯ ವರಪುಣ್ಯಕ್ಷೇತ್ರದ | ಪುರಕಧಿಕ ವಿರೂಪಾಕ್ಷಲಿಂಗ |
ತರಳ ರಾಮನು ಎರಡು ಜಗಳ ರುದ್ರನ ಗೆಲಿದು | ಹೊರಡುವಲ್ಲಿಗೆಂಟು [ಗೊಂಬತ್ತು] ಸಂಧಿ  || ೨೨೭ ||[1]

[1] + ಅಂತು ಸಂಧಿ ೮(>೯) ಕ್ಕಂ ಪದನು ೧೮೧೫ಕ್ಕಂ ಮಂಗಳ ಮಹಾಶ್ರೀ (ಮೂ).