[1]ಶ್ರೀ ಗಿರಿಜೇ[ಶನೆ] ಭಾಗೀರಥಿಪ್ರಿಯ | ಭೋಗಿಭೂಷಣ ಭಾಳನೇತ್ರ |
ಆಗಮಕೊಡೆಯನೆ ಮೂಜಗ ಸಲಹುವ | ನಾಗಭೂಷಣ ನಗಚಾಪ                   || ೧ ||

ಅಜನ ಶಿರಗಳನರಿದು ಧರಿಸಿ ಕಪಾಲವ | ಜಗದ ಮಣಿಹವನು ನರಹರಿಗೆ |
ಮಿಗಿಲಾಗಿ ಕೊಟ್ಟು ಧರೆಯೊಳು ತಿರಿದುಂಡ | ರಜತಾದ್ರಿ ಒಡೆಯ ಕೊಡು ಮತಿಯ   || ೨ ||

ಹಿಮಗಿರಿ ರಾಜನ ಮಗಳ ಮೋಹಾಂಗನೆ | ತನುಜನೊಳಗೆ ಲಯವಾದ |
ಮಗಳ ಜೀವರೊಳಗಾದ ಕರಿಮುಖನ | ಪಡೆದವನೇ ಕೊಡು ಮತಿಯ               || ೩ ||

ಕಾಶಿ ರಾಮೇಶ್ವರಕೆ ಈಸು ವೆಗ್ಗಳವಾದ | ತ್ರಾಸಿಲಿ ತೂಗಿ ನೋಡಿದರೆ |
ಶ್ರೀಶೈಲ ಹಂಪೆಯು ವೀರನೆ ವಿರುಪಾಕ್ಷ | ಲೇಸ ಪಾಲಿಪುದು ಈ ಕೃತಿಯ            || ೪ ||

ಮುಂದಣ ಕೃತಿ ಕೇಳಿ ಮಂದಮಾಡದ ಜನರು | ಕಂಡರೆ ನಿಮಗೆ ಧರ್ಮಗಳು |
ಕೊಂದ ರಾಮ[ನು] ಮೋಸದಿಂದಲಿ ಎನಬೇಡಿ | ಮುಂದರಿತು ಪೇಳಿದೆನು ಬಿರಿದ   || ೫ ||

ನಂಬುಯೆಂದರೆ ಅಡಿವಿ ಮೃಗಗಳು ನಿಲುವವು | ಕೊಂದರೆ ಅವಗೆ ಕರ್ಮಗಳು |
ಹಿಂದೆ ಹಾಕಿದ ತನ್ನ ಬಿರುದನು ಬಿಡೆನೆನಲು | ಎಂದ ಬಳಿಕ ತಪ್ಪ ತೋರಿ            || ೬ ||

ಅಜಹರಿ ರುದ್ರನು ತ್ರಿಪುರ ಕಾರ್ಯಕೆ ಹೋಗಿ | ಗರುಡಾಹನೆ ಹೊಗಲಿಲವೆ |
ಪರಮ ಪತಿವ್ರತೆಯರ ತಪನಿಷ್ಠೆಯಳಿಯದ ಮುನ್ನ | ಒಳಗೆ ಮಾಡಿದರೆ ಆ ಪುರವ   || ೭ ||

ತಾಯಿ ಪೇಳಲು ತರಳ ಸಂಧಾನಕೆ ಬರಲೊಬ್ಬ | ಭೂರಮಣ ಬಭ್ರುವಾಹನನು |
ಹೀನ ನುಡಿಯಲು ಪಾರ್ಥ ಛಲವೇರಿ ಪಿತನೊಳು | ಹೊಡೆದ ಮಾನಹೀನವ ತೋರಿಯಿದ್ದಳಗೆ          || ೮ ||

ಆಡಿ ತೋರದೆ ಮನದಿ ಇಟ್ಟುಕೊಂಡರೆ ಹೀನ | ಭೀಮ ಕೀಚಕನ ಕೊಂದಂತೆ |
ನಾರಿವೇಷವ ತೊಟ್ಟು ಬೇರೆ ಕೊಲ್ಲುವನಲ್ಲ | ಸಾರಿದ ಬಿರಿದ ಬಿಡೆನೆಂದ              || ೯ ||

ಕೋಟಿ ಬಲದವನೂರ ಸಲ್ವದಿ ತಾ ಪೊಕ್ಕು | ಹಾಕಿದ ಬಿರಿದ ಹೊಗಳಿಸಲು |
ಭೂತೇಶನೊಲುಮೆಯ ವರಪಿಂಡವಾಗಲು ಹೊರಟ | ವೇಶಿಯಾಗಲು ಸಭೆ ಮಧ್ಯೆ ಜಯಿಸುವೆ         || ೧೦ ||

ನಡೆಸುವೆ ಕೃತಿಯನು ಸ್ಥಿತಿಯದನಾಡದೆ | ಗತಿಯನು ಕೇಳೋದಿದಲ್ಲಿ |
ಮತಿವಂತ ಪ್ರೌಢರು ಮನವೊಲಿದು ಲಾಲಿಸಿ | ಒರೆವೆನು ವೀರನ ಕೃತಿಯ           || ೧೧ ||

ಪೇಳುವೆನು ತಿಳಿದಷ್ಟು ಪದದೊಳು ತಪ್ಪಿರಲು | ಕೂಡಿಕೊಂಡು ತಿದ್ದಿ ಹೇಳುವುದು ಬಲ್ಲವರು |
ಮೂಢ ಮರುಳನೆಂದು ಆಡಿದರೆ ಆ ಕರ್ಮ | ಮೂಡುವುದು ನಿಮ್ಮ ಚಿತ್ತದಲಿ          || ೧೨ ||

ಕರ್ಮಧರ್ಮಗಳು ನಿಮ್ಮೆಡೆಗೆ ಒ‌ಪ್ಪಿಸಿ ಮುಂದೆ | ನಡೆಸುವೆ ರಾಮನ ಕಥೆಯ |
ಹಡೆದ ತಂದೆಯ ಕೂಡೆ ಕದನವೇತಕೆ ಪುತ್ರ | ನಡೆಯಲ್ಲವೆಂದ ರಾಜೇಂದ್ರ          || ೧೩ ||

ಕಷ್ಟವೇತಕೆ ಪುತ್ರ ಪೆತ್ತವರು ಬಯ್ಯಲು | ಇಟ್ಟಂಬಿನಂತೆ ಬರಬಹುದೆ |
ಮುಪ್ಪಿನ ಕಾಲದಲಿ ದುಃಖಕಿಟ್ಟು ಬರಲು ಮುಂದೆ | ಒಪ್ಪುವುದೆ ಸದ್ಗತಿ ಕೈವಲ್ಯ       || ೧೪ ||

ತಂದೆ ಮಗನಿಗೆ ಜಗಳ ಬಂದರೆ ಬಲ್ಲವ[ರು] | ಒಂದುಗೂ[ಡಿಸರೆ] ಜ್ಞಾ[ನಿ]ಗಳನು |
ಮುಂದಲ್ಲಿ ತಿಳಿದಂಥ ಪ್ರಧಾನರಿಲ್ಲದ ಮೇಲೆ | ಚಂದವಪ್ಪುದೆ ರಾಜಾಸ್ಥಾನವು        || ೧೫ ||

ಸರ್ವ ವಿವೇಕವ ತಿಳಿದ ಕಂಪಿಲನಿಗೆ | ಕೆಡು ಬುದ್ಧಿ ಅವಗೇಕೆ ಬರಲು |
ಕಡೆಗವನ ನೋಡುವ ಹಡೆದ ಜನನಿಯು ಗರ್ಭ | ಉರಿಯದೆ ನೀನೆದ್ದು ಬರಲು       || ೧೬ ||

ಬಾಲನೆ ಬರಸಲ್ಲ ಕಾಲ ತೆಗೆದು ಮುನ್ನ | ಆಡಲು ಹಡೆದವರೊಂದು |
ಬೇರಿಹರೆ ಮಕ್ಕಳು ಮಾಡುವರೆ ಪಟ್ಟವನು | ಜಾಣತನಗಳನೇನೆಂಬೆ                || ೧೭ ||

ಮಕ್ಕಳು ಎರಡಿರಲು ಸತ್ತರೆ ಮುನ್ನೊಬ್ಬ | ಒಕ್ಕಣ್ಣಿನೊಳಗೆ ಜೀವಿಪರು |
ಹುಟ್ಟುತಲೆ ಒಂದಾಗಿ ಎಡೆಬೇಂಟೆಯಲಿ ಹೋದಂಥ | ಅರ್ಥವಾಯ್ತು ಕಂಪಿಲಗೆ      || ೧೮ ||

ಜಾಣನಲ್ಲವು ಅರಸು ಗಾಣಕ್ಕೆ ಒಂದು | ಕಾಲನು ಮುರಿದಿಟ್ಟಾಗದೆ |
ಮೇಲೊಂದು ತರಲಿಕೆ ತ್ರಾಣಿಲ್ಲ ಕೈಗುಂದಿ | ಜೋಳಿಗೆಯ ಬಲಗೊಂಡ ತೆರನು       || ೧೯ ||

ಯಾರೆಂಬುದೇನು ಪ್ರಾರಬ್ಧದ ಫಲವಿದು | ಮಾಡದೆ ಕುಂತಿಯ ಸುತರ |
ಆರಣ್ಯವಾಸಕ್ಕೆ ತಾರದೆ ವಿಧಿ ಮುನ್ನ | ಮೀರಲಾಗದು ಪೂರ್ವಲಿಖಿತ                || ೨೦ ||

ನೋಡಿದ ರಾಜೇಂದ್ರ ರಾಯ ರಾಮನ ಮಂದಿ | ಸಾವಿರ ಖಂಡೆ ಕತ್ತಿಹುದು |
ಜೋಡಹುದು ಎನ್ನ ಪುತ್ರಗೆ ಈ ರಾಮ ಬಲದ | ಭಾಗದ ಭುಜವೆಂದ ಮನದಿ         || ೨೧ ||

ರಾಯ ರಾಮನೆ ಕೇಳು ಬೇಕಾದ ಭೂಮಿಯ ಕೊಡುವೆ | ತಾಯಿ ತಂದೆಗಳ ಮರೆಸುವೆನು |
ಯಾವ ಕಾರ್ಯಗಳನು ನಿನಗರುಹಿ ಮಾಡುವೆ ಎನ್ನ | ಕುಮಾರಗೆ ಹೆಚ್ಚಾಗಿ ಕಾಣ್ವೆ    || ೨೨ ||

ತರಿಸಿದನು ಉಡುಗೊರೆಯ ರತ್ನಭೂಷಣವನು | ಮಡಗಿಸಿ ಹೊನ್ನ ತಟ್ಟೆಯಲಿ |
ತರಳ ರಾಮಗೆ ಕೊಟ್ಟು ಒಡನಿಪ್ಪ ಮಾನ್ಯರಿಗೆ | ಕೊಡಿಸಿದ ರಾ[ಯ] ನುಡುಗೊರೆಯ || ೨೩ ||

ರುದ್ರರಾಯನು ಕರೆದು ಮುದ್ದುಲಿಂಗನ ಬೇಗ | ಶೀಘ್ರದಿ ರಾಮನ ಬಲಕೆ |
ಉಗ್ರಾಣಗಳನಿತ್ತು ಸಣ್ಣಕ್ಕಿ ಬೇಳೆಯು ಬೆಲ್ಲ | ಹೊರಗಿರ್ದ ದಂಡಿಗೆ ಪಡಿಯ ಹಾಕೊ   || ೨೪ ||

ಅಕ್ಕಿ ಸಕ್ಕರೆ ಜೇನುತುಪ್ಪ ಉಪ್ಪಿನಕಾಯಿ | ಲೆಕ್ಕವಿಲ್ಲದೆ ಹಾಕೊ ಹುರುಳಿ |
ತಪ್ಪದೆ ಸಾಗಿಸಿ ಲಿಂಗಣ್ಣ ಹೊಕ್ಕನು | ಕಾಟಣ್ಣನ ಹೊರದಂಡ                         || ೨೫ ||

ರಾಯ ರಾಮನ ಬಲಕೆ ಈ ಬಗೆಯ ಸನ್ನಹ ಮಾಡಿ | ಲಿಂಗಣ್ಣ ಹೇಳಿದ ಕಾಟಣ್ಣಗೆ |
ಆದ ವಿವರವೆಲ್ಲ ಸೇರಿತು ಕೈಗಂಟು | ಕಾರ್ಯವುಂಟು ಮುನ್ನ ಮಾಡೋದು          || ೨೬ ||

ರಾಯ ರಾಮನ ರುದ್ರರಾಯರಿರ್ವರು ಇಲ್ಲಿ | [ಆ]ಡುವರು ಸಮಬೆರಸಿ ವಚನ |
ಮೂಳ ರತ್ನಿಯ ಮೂಗ ಕೊಯ್ಯದೆ ಬಂ[ದೆ] | ಏನೆಂಬೆ ನಿನ್ನ[ನು] ಪುತ್ರ              || ೨೭ ||

ಕೇಳಿರೈ ಮಂತ್ರಿಗಳು ಬಾಲನುದಯ ಶಾಂತಿ | ಸಾಗರಕ್ಕೆ ಸಮವೆನ್ನಬಹುದು |
ಸೂಳೆಯ ಮಾತಿಗೆ ಮೆಲ್ನುಡಿಯ ಬೀರಲು ಪಿತನು | ಸೈರಿಪನೆ ಇನ್ನೊಬ್ಬನಾಗೆ       || ೨೮ ||

ರಾಯ ಭೂಪನೆ ಕೇಳು ರಾಯರೊಳಿದು ಸಹಜ | ಪೂರ್ವದ ಕಥೆಯ ಕೇಳರಿಯಾ |
ಆ[ಜ್ಞೆ]ಯ ಮಂತ್ರಿಕುಮಾರರಿಗೆ ಪಿತ ಮುನಿದು | ಮಾಡದೆ ದೇಶಾಂತ್ರವನು         || ೨೯ ||

ಹಿಂದೊಬ್ಬ ವಿಜಯೇಂದ್ರರಾಯನೀ ತೆರದೊಳು | ಕೊಂದುದಿಲ್ಲವೆ ತನ್ನ ಮಗನ |
ಕಂದನು ಜಯಸೇನ ಧರ್ಮಿಷ್ಟನಾಗಲು ಗೆದ್ದು | ಕೊಂಡದೊಳಳಿದು ಪುಟ್ಟುವುದು     || ೩೦ ||

ಹೇಳಬಹುದು ಮಂತ್ರಿ ಕೇಳಿ ಬಲ್ಲೆನು ನಾ ಮದನ | ಮೋಹಿನಿಯ ತಂದೆ ಜಯಸೇನ |
ನೋಡಲ ಅದಕಿದು ಜೋಡಿನ ಪ್ರತಿಯೆಂದು | ಗಹಗಹಿಸಿ ನಗಲು ರಾಜೇಂದ್ರ        || ೩೧ ||

ವಿಜಯರಾಯನ ಸುದ್ಧಿ ಈ ಮುದಿಯ ಕಂಪಿಲನೊಳು | ಒದಗಿತು ಅವಗೆ ಕಡೆಗಾಲ |
ಹೆಡತಲೆಯ ಮೃತ್ಯು ಹೆಣ್ಣು ರಂಡೆರ ಮೆಚ್ಚಿ | ಮಗನ ಬಿಡುವರೆ ಮರುಳ ಅರಸು      || ೩೨ ||

ಬಿಡು ಪುತ್ರ ಕಂಪಿಲನ ಅಡಿ ಆಸೆ ಬೇಡಿನ್ನು | ನಡೆಸುವೆ ಅವಗೆ ಮಿಗಿಲಾಗಿ |
ಕೊಡುವೆನು ನಂಬಿಗೆಯ ಹಡೆದ ಮಗನಿಗೆ ನಿನ್ನ | ಒಡನೆ ಹೆಚ್ಚಾಗಿ ಕಾಣುವೆನು       || ೩೩ ||

ಮುನಿದು ನೀ ಬರುವಾಗ ಬಲವನೇತಕೆ ತಂದೆ | ಕಳುಹಿ ಬಿ[ಡು] ಹೋ[ಗಲಿ] ಎನುತ |
ಮರಳಿ ಹೋದೆನು ಎಂಬ ಮಮಕಾರವುಳ್ಳೊಡೆ ಪೇಳು | ಬರೆದು ತಿದ್ದುವೆನವನ ಮನವ      || ೩೪ ||

ರಾಜೇಂದ್ರ ಲಾಲಿಸು ಕೈಯಾರೆ ಕಟ್ಟಿದ ಬಲವು | ಪ್ರಾಣವಳಿಯದೆ ತನ್ನ ಬಿಡರು |
ಸಾವಿರ ವರಹವ ಸಂಬಳವಾಗಿತ್ತ [ರೂ] ಪರರ | ವಾಲೈಸಿ ಕರವ ಮುಗಿ[ಯರು]    || ೩೫ ||

ಆಳುವುಳ್ಳೊ[ಡೆ] ಅರಸು ತಾಯಿವುಳ್ಳೊಡೆ ಸುಖವು | ಪ್ರಾಣ ಹಂಗ್ಹರಿದವಗೆ ಕಾರ್ಯ |
ವೀರ ವಿಕ್ರಮನಾಗೆ ತಾನೋರ್ವ ಬರಲು ಅರಸೇ | ವಿಚಾರ ಮಾಡುವರೆ ಅವನಿಯಲಿ         || ೩೬ ||

ಮಂದಿ ಮಾರ್ಬಲಗೂಡಿ ಕಾಣಿಸಿಕೊಳ್ಳಲು ದಯ | ಗೊಂಡು ನೀವೆನ್ನ ಕರೆಸಿದಿರಿ |
ಮುಂಡೆಯ ತೆರದೊಲು ಮತ್ತೊಬ್ಬ ಬಂದಿರಲು | ಗೊಂಬುವದೆ ಗಣನೆ ನೀ ಮೊದಲು || ೩೭ ||

ಬಂದುದು ವಿಷಗಳಿಗೆ ತಂದೆ ತನುಜಗ ಕದನ | ಹೊಂದದೆ ಮುನ್ನೊಂದು ಗಳಿಗೆ |
ಹಿಂದಕೆ ಕುಶಲವರು ಪಿತನ ದಂಡನೆ ಕೊಂದು | ಒಂದಾಗಲಿಲ್ಲವೆ ಕಡೆಗವರು        || ೩೮ ||

ಮುತ್ತು ಒಡೆಯದೆ ರಾಯ ಹತ್ತುವುದೆ ಬೆಸಗೆಯು | ಸತ್ತಾತ ಮರಳಿ ಜನಿಸುವನೆ |
ಮುಕ್ತಿಯಿಲ್ಲದೆ ರಾಯ ಹೆಪ್ಪೊಡೆದ ಕ್ಷೀರವು | ತಕ್ಕಂತೆ ಆಗುವುದುಂಟೆ                || ೩೯ ||

ಹೇಡಿ ಮಗನಾಗಲು ಹೋಗಬಲ್ಲನೆ ಮುನಿದು | ಕೋಡಿಮಿಗೆವರಿದ ಹರಿ ನೀರು |
ಕೂಡಬಲ್ಲುದೆ ಮತ್ತೆ ಕೆರೆಯ ಸ್ಥಾನಕೆ ರಾಯ | ಮೂಢರೆನ್ನರೆ ನಿಮ್ಮ ವಾಕ್ಯ           || ೪೦ ||

ಇಷ್ಟು ಬೇಸರವೇಕೆ ತಮ್ಮಿಚ್ಚೆಯಲಾಗದ ಹಣ್ಣು | ಒತ್ತಿ ಮಾಡಲು ರುಚಿಕರವೆ |
ಮುಪ್ಪಿನ ಕಾಲದಿ ಮಗನಲ್ಲಿ ಬಣ್ಣನು ಕಾಬ | ಪ್ರಾಪ್ತಿಯಿರಲಿಲ್ಲ ಕಂಪಿಲಗೆ               || ೪೧ ||

ಎಮ್ಮ ಬಾಲಗೆ ಇಮ್ಮಡಿಯಿಂದ ಕಾಣುವೆ ಮುನ್ನ | ಮರೆಸುವೆ ತಾಯಿ ತಂದೆಗಳ |
ನಿರ್ಣಯಗಳ ಮಾಡು ಹಿಂದಣ ಯೋಚನೆ ಎನ್ನ | ಕಂದಗೆ ನೀ ಹಿರಿಯನೆಂಬೆ         || ೪೨ ||

ಹೇಳಬಹುದು ಬುದ್ಧಿ ಹಿರಿಯರಲ್ಲವೆ ರಾಯ | ಬಾಲ್ಯದೊಳಿಟ್ಟಂಥ ಬಿರಿದ |
ಕೂಲಿ ಆಸೆಗೆ ಬೆದರಿ ಕಾಲ ಪೆಂಡೆಯ ತೆಗೆಯೆ | ಕೇಳಿ ತಡೆಯಲು ಮಾ ಕಷ್ಟ          || ೧೩ ||

ದೂರ ಶೋಧಿಸಿ ನೋಡಿ ಹೊಳೆದೊಡೆ ಸಲ್ಲದು ಮಾತು | ಸಾರಿದ ಸಕಲರು ತಿಳಿದ |
ಕ್ರೂರ ಕೊಂಡಿಗರಿಂದ ಜಾಡಿ ಕ್ಷುದ್ರತೆ ಜಗಳ | ಮಾಡಿಕೊಂಡರೆ ಮಣ್ಣ ಕೊಡುವೆ      || ೪೪ ||

ಮುಂದೊಮ್ಮೆ ತಿಳಿ ರಾಯ ಕಂದನ ನಿಜತರವ | ಹಿಂದಾಡೊ ಕೊಂಡೆ ಮಂತ್ರಿಗಳು |
ಹಾಗೀಗೆ ಎನಲವರ ಸೇರಿಸುವೆ ಯಮನೂರ | ಭೂಮಿ ಮುನಿಯಲು ಬಿರಿದ ಬಿಡೆನು || ೪೫ ||

ಬಿರಿದಿಗೆ ಬಾಳುವೆ ಶರೀರ ಇರುವನಕ | ಬರುವ ಮುಂದಣ ವೈರವ ಒರೆದೆ |
ಸರ್ವರಿಗು ಮನಹರುಷ ಹರಣ ಕಂಡರೆ ಎನ್ನ | ಇರಿಸಿಕೊಳ್ವುದು ಮೂರು ದಿವಸ     || ೪೬ ||

ಹಿಡಿದಂಥ ವ್ರತ ಛಲವ ಮತ್ತಾರು ಬಿಡರೆಂದು | ನುಡಿದನು ಒಬ್ಬ ನಿಜಮಂತ್ರಿ |
ಪ್ರಹುಡವತಿಯೆಂಬ ವೇಶಿ ಬಿಟ್ಟಳೆ ಹಿಂದೆ | ಗುರುಭಕ್ತ ರಾಜೇಂದ್ರ ಕರೆಯೆ             || ೪೭ ||

ಬಿರಿದನು ಬಿಡ ಅರಸೆ ದೊರೆ ರುದ್ರಭೂಪಾಲ | ಧರಣಿ ಭೂಪಾಲಕನು ಹರಿಶ್ಚಂದ್ರ |
ಸುಡುಗಾಡ ಕಾಯನೆ ಒಡೆಯನ ನೆಲ ಹಾಗ | ಮಾಡದಿಯಾ [ದರು] ಬಿಡಲಿಲ್ಲ       || ೪೮ ||

ನೃಪನಿಗೆ ಮಂತ್ರಿಯು ಉಚಿತ ಪೇಳಲು ಮನಸು | [ಸ್ವಚಿತ್ತ] ವಾಗಿಯೆ ಮೇಲೇಸು |
ಹೆಚ್ಚು ಕಡಿಮೆಯ ನಡೆಸೆ ಮೂರ್ತಿಗೊಂಡಲ್ಲಿಗೆ | ಮಸ್ತಕವ ತರುವರು ಉಂಟೇ       || ೪೯ ||

ಲೇಸು ಒಳ್ಳೆದು ಪುತ್ರ ನಡೆಯಿಂದು ಪಾಳೆಯಕೆ | ಮಾತನಾಡುವ ನಾಳೆ ದಿವಸ |
ಭೂಪಾಲ ಬಹು ಲೇಸು ಸೋಸಿ ಎಲ್ಲರ ಮಾತ | ಲೇಸು ಕಂಡರೆ ನೋಡುವಂತೆ     || ೫೦ ||

ಎಡಬಲದ ಮನ್ನೆಯರ ಮುಖನೋಡಿ ರಾಮನು ಏಲೆ | ಕಡಿಗರೆದು ಮಂದಿ ಕೈ ಮುಗಿಯೆ |
ಕಡಿಕಡಿ ಓರ್ಗಲ್ಲ ಲಯಕರ್ತ ಹೊರಡೆಂದು | ಹಿಡಿಯಲು ಬಿರಿದಿನ ಕಹಳೆ             || ೫೧ ||

ಕುಂಜರದ ಮೊತ್ತದಿ ಕಂಠೀರವನು ನಡೆವಂತೆ | ಬಂದು ಏರಿದ ಪಲ್ಲಕ್ಕಿಯನು |
ಗುಂಡಿಗೆ ಗೂಟವನು ಬಲಿವಂತೆ ಭಟರು | ಬಿರಿದನು ಕೊಂಡಾಡಿ ಹೊಗಳೆ            || ೫೨ ||

ದನುಜರ ಹೊಳಲ್ಹೊಕ್ಕ ದಿನಕರನು ಹೊರಟಂದು | ಭಲರೆ ಭೇರುಂಡ ಮಾರ್ತಂಡ | ಸ
[ಹಲ] ವಾಡಿ ಒಳಹೊಕ್ಕು ಆಳಿಕ್ಕಿ ಹೋಹರ ಗಂಡ | ಕಡೆಗೊಂಡ ನಾಡೋರ ಮಿಂಡ || ೫೩ ||

ಮಾರಿ ಮಲೆವರ ಗಂಡ ಮೊರೆ ಬಿದ್ದವನಿಗೆ | ಭೂಮಿ ಮುನಿಯಲು ಕೊಡದ ಬಿರಿದು |
ಬಲವಂತ ಸುರಿತಾಳ ಹಮ್ಮಿರಖಾನರ ಗಂಡ | ರಣವಿಜಯ ರಾಮಭೂಪಾಲ        || ೫೪ ||

ಚಪ್ಪನ್ನದೇಶದಿ ಕಪ್ಪವ ಕೊಡೆನೆಂಬು | ದಿಟ್ಟರಾಯರಿಗೆ ಎದೆ ಶೂಲ |
ಹೊಕ್ಕವನ ಬೆನ್ನಲು ಹರಮುನಿಯಲು ತಾ ಕೊಡನು | ಒಪ್ಪುವು [ದು]ಆ ಬಿರಿದು ತನಗೆ        || ೫೫ ||

ಕಡಿಯಲಾರದೆ ರಣವ ಕದ್ದು ಹೋಹರ ಗಂಡ | ಮಡದಿಯರ ಮುಖ ನೋಡಿ ಮನೆಯ |
ಬಡವರನು [ಅ]ಣಿ ಮಾಡಿ ಜುಣುಗು ರಾಯರ ಗಂಡ | ಮಡಗುವರ ಮಿಂಡ ಪ್ರಾಣವನು       || ೫೬ ||

ಮೂರು ರಾಯರ ಗಂಡ ಚಾಡಿ ಕೇಳ್ವರ ಮಿಂಡ | ಓರುಗಲ್ಲವಗೆ ಎದೆಶೂಲ |
ರಾಯ ರುದ್ರನ ಬಳಿಯ ಕಾಯ್ದು ಓಲೈಸುವ | ರಾಯರ ಗಂಡ ರಣರಾಮ            || ೫೭ ||

ಹೊಗಳುವ ಬಿರಿದನು ಠೆವಣಿಯರೆಲ್ಲರು ಕೇಳಿ | ಕಿಡಿಗರೆ [ಯೆ] ಕಾಲನಂದದಲಿ |
ಸಿಡಿಲಿನಾರ್ಭಟದೊಳು ರಾಯ ರುದ್ರನ ಮೀಸೆ | [ಕ] ಡಿದಾಡಿ ನಯನ ಕೆಂಪೇರೆ     || ೫೮ ||

ರುದ್ರನ ಕೋಪದ ಆಗ್ರತೆಗಳ ಕಂಡು | ಇದ್ದ ದೊರೆಗಳು ಮೊರೆದೆದ್ದು |
ರುದ್ರಗೆ ಎರಡನೆಯ ಉಗ್ರಕೋಪಿಗಳಾಗಿ ರಾಮನ | ಕೊಬ್ಬಿ ಮುರಿವೆವು ಕೊಡು ವೀಳ್ಯ        || ೫೯ ||

ಕೊಡು ರಾಯ ಬೆಸನೆಮಗೆ ಹೊಡೆದೇವು ಮೂಳನ | ನುಡಿಗೇಳಬಹುದೆ ಹೀನಾಯದ |
ಶ್ವಾನಬಲ್ಲುದೆ ಗಂಧ ದಿವ್ಯವಾಸನೆ ಫಲವ | ಚೆಂಡಾಡಿ ತರುವೆವು ತಲೆಯ           || ೬೦ ||

ಕೋತಿಯ ಪಿಡಿತಂದು ಪಾಕನ್ನ ನೀಡಿದರೆ | ಸಾಕಾಗಿ ಮರನೇರಿ ಹುಬ್ಬ |
ಹಾಕಿದ ತೆರಬಂತು ಹಲ್ಲ ಮುರಿವೆವು ರಾಯ | ನೀ ಪಾಲಿಸೆಮಗೆ ವೀಳ್ಯವನು         || ೬೧ ||

ಮುನಿದು ಬಂದನು ಎಂದು ನಿಮಗೆ ಶಾಂತಿಯ ಪೇಳಿ | ಘನವ ಮಾಡಲು ಗಂಡನಾದ |
ಹುಡುಗ ಮೂಳನು ಮುಂದೆ ಘನವ ಬಲ್ಲನೆ ತಮ್ಮ | ಕುಲರೀತಿ ಮಾರ್ಗವ ಬಿಡನು   || ೬೨ ||

ಧರೆಯ ರಾಯರಿಗೆಲ್ಲ ಗಂಡನೆಂಬವ ಖೂಳ | ಬರಬಹುದೆ ಮಡದಿಯರ ಕೆಳಗೆ |
ಹರಹರ ಶಿವಶಿವ ಎದೆಯ ಗರ್ವಗಳೆಂತು | ನರಿ ಸೊಕ್ಕಿ ಕರಿಗೆ ಬಗುಳ್ದಂತೆ           || ೬೩ ||

ಭೂಪ ರುದ್ರನೆ ನಿಮ್ಮ ಪ್ರತಾಪ ಹೇಳಲು ಹರನು | ಭೀತಿ ಬಡುವನು ಜಗವರಿಯೆ |
ಮೇಕೆ ಕಾಯುವ ಮೂಳ ಈ ಬಗೆಯಾಡುವುದ ಕೇಳಿ | ಯಾಕೆಮ್ಮ ಜನ್ಮ ಹೊರೆವುದು || ೬೪ ||

ಕಂಡನು ಎಮ್ಮಯ ರಂಡೆ ಬಾಳಿನ ಧೈರ್ಯ | ಗಂಡನು ಎಂದು ಹೊಗಳಿಸಿದನು |
ಹೆಂಡಿರಾದೆವು ನಾವು ಶಿವನೆಡೆಯ ಬಾಳಿದರೆ | ಕೊಂದೇನು ಕೊಡು ರಾಯ ವೀಳ್ಯ   || ೬೫ ||

ಬಡವನ ಸತಿಗಿಂತ ಬಲ್ಲಿದನ ಮನೆಯೊಳಗೆ | ಗೌಡಿಯಾಗಿರಲು ಉತ್ತಮವು |
ಪೊಡವಿ ರಾಯರಿಗೆಲ್ಲ ಬಲ್ಲಿದನೆನುತಾ[ನೆ] ನೀವು | ಮಡದಿಯಾದಿರಿ ಹುಡುಗನೆನಲು         || ೬೬ ||

ಉರಿದ ಕಿಚ್ಚಿಗೆ ಎಣ್ಣೆ ಎರೆದಂತೆ ರುದ್ರಗೆ | ಉರಿದೇಳೆ ವೃದ್ಧ ಮಂತ್ರಿ ನುಡಿದ |
ಕೊಡಸಲ್ಲ ನಂಬಿಗೆಯ ತಪ್ಪಬಾರದು ರಾಯ | ದೊರೆಗಳ ಮತಾಚಾರದೊಳಗೆ      || ೬೭ ||

ರಾಯರಿಗಿದುದಲ್ಲ ಆಡಿ ತಪ್ಪರುಯೆಂದು | ಜೀವಣ್ಣ ಮಂತ್ರಿ ಪೇಳಿದನು |
ಕೇಡಿಗೆ ಮೊದಲಿದು ಕೊಟ್ಟ ಭಾಷೆಗೆ ತಪ್ಪೆ | ಕಾವನು ನಡೆಯೆ ಕರಿಗಳನು             || ೬೮ ||

ಅಂಧಕನ ಕರವಿಡಿದು ಕಂಗಳನು ಪಡೆವಂತೆ | ಅಂದವಾದುದು ಎಲ್ಲರಿಗೆ |
ಮಂದವಾಗಿರ್ದವೆ ಈಗಡೆ ರಾಯನ ಕರ್ಣ ಬಿಡೆ | ಬಿರಿದನೆಂದು ಪೇಳ್ದನಾಗೆ         || ೬೯ ||

ಹಾವಿನ ಮರಿಗಳನು ಹಾಲೆರೆದು ಸಾಕಲು | ರಾಯ ಹೋಗಲರಿಯದು ಆ ವಿಷವು |
ದಾಯಾದಿ ಕಂಪಿಲನ ಕುಮಾರನೆಂಬುದ ತಿಳಿದು | ಯಾರೆಂದು ಕರೆದುದು ಇಂದು   || ೭೦ ||

ಆಡಿದ ಅವನೊಳಗೆ ಎಳ್ಳಷ್ಟು ತಪ್ಪಿಲ್ಲ | ದೂರ ತಿಳಿದು ನೋಡಿರೆಂದ |
ಯಾರಿಗೆ ತಿಳಿಯದು ಯಮನ ವಾಹನದಂತೆ | ತೀರಿತು ಅವನಿಗೆ ಬುದ್ಧಿ              || ೭೧ ||

ಮತ್ತೆ ಕೇಳೈ ಬುದ್ದಿವಂತ ಮಂತ್ರಿಯು ನೀನು | ಕೆಟ್ಟು ಬಂದನುಯೆಂದು ಮನ್ನಿಸಿದೆ |
ಕುಕ್ಕುಟ ಘನಮಾಡಿ ಪಲ್ಲಕ್ಕಿಯನೇರಿಸಲು | ತಿಪ್ಪೆವಾಸನೆಯ ಮರೆಯುವುದೆ        || ೭೨ ||

ಶ್ವಾನ ಬೊಗಳಲು ಬ್ರಹ್ಮಸ್ಥಾನ ಕೆಡುವುದೆ ಭೂಪ | ಸಾಗಿಸಿ ಬಿಡುವ ಹೋಗೆಂದು |
ಸಾಗರ ಸಮಗಾತ್ರ ಸ್ನೇಹಿತ ನಂಬಿಗೆ ಹೋಗೆ | ಮೂರು ಮೂರ್ತಿಗಳು ಮೆಚ್ಚುವರೆ   || ೭೩ ||

ಹಾಗೆ ಆಗಲಿ ಮಂತ್ರಿ ಸಾಗಿಸುವ ಮುಂದಕ್ಕೆ | ಪಾಲಿಸಿಕೊಂಡೆ ಧರ್ಮದಲಿ |
ಕೇಳುತಲಿ ಎಡಬಲದ ಪಾಳ್ಯಗಾರರು ಎದ್ದು | ಜಾಡಿ ಗೆದ್ದಿತು ನಮ್ಮದಿನ್ನು             || ೭೪ ||

ಧರಣಿಗೆ ಬಲವಂತ ಮೊನೆಗಾರನೆನುತಲಿ ನಿಮ್ಮ | ಬಳಿಯ ಕಾಯಲು ಬಾಲೆರಾಗಿ |
ನಗರೇನು ರಾಜೇಂದ್ರ ಮನೆಯ ಸತಿಯರು ಮುನ್ನ | ಈ ನುಡಿಯ ಕೇಳಿದರೆ ಹಾಸ್ಯದಲಿ      || ೭೫ ||

ಸಾಕರಸೆ ಚಾವಡಿಯು ನೀ ಪಾಲಿಸು ವೀಳ್ಯ | ಹಾಕಿದ ಬಿರಿದ ತೆಗೆಸುವೆವು |
ಭೀತಿಯಾಗಲು ನಿಮಗೆ ಬಿಡಿ ಎಮ್ಮ ಕಡೆಗವನ | ಸಾಗು ಮಾಡುವೆವು ಯಾಮಪುರಿಗೆ         || ೭೬ ||

ಯಾರು ಮಾಡಿದರಿದನು ದೇವಿಶೆಟ್ಟಿಯ ಲಿಂಗ | ಮಾಡಿ ನಮಗವನು ಸ್ತುತಿಯ |
ದಾರಿಯಲಿ ಹೋಗುವ ಮಾರಿಯ ಕರೆತಂದು | ಹೀನದ ನುಡಿಯ ಹೊಗಳಿಸಿದ       || ೭೭ ||

ತಿಳಿಯಬಾರದೆ ಭೂಪ ಹೊಳವು ತೋರದೆ ಲಿಂಗ | ಹೊಗಳಿ ಫಲವನು ಯಾದೆ ಇಷ್ಟು |
ಹಿಡಿತರಿಸಿ ಲಿಂಗನ ಪುಸಿ ಬರಲು ಎಮ್ಮಾತು | ಕೊಡುವೆವು ಅಪರಾಧ ನಿಮಗೆ        || ೭೮ ||

ವಿವರಗಾಣದೆ ರಾಯ ಯಮನಕೋಪಗಳಾಗಿ | ಕಿಡಿಸೂಸಿ ನಯನ ಕೆಂಪೊಡೆದು |
ಹಿಡಿ ತನ್ನಿ ಲಿಂಗನ ಹೆಡತಲೆಯೊಳು ಬೇಗ | ತೆಗೆಸುವೆ ನಾಲಗೆ ಪರಿದು              || ೭೯ ||

ಅರಸು ಪೇಳಲು ಒಡನೆ ಬಿಡಿಸಿಕೊಳ್ಳುತ ಚರರು | ಸಿಡಿಲಿನ ರವ ಗರ್ಜನೆಯಲಿ |
ನಡೆಯೊ ಬೇಗದಿ ಲಿಂಗ ಹೊಳಹು ಕಂಡಿತು ನಿನ್ನ | ಕರೆಯೆಂದ ರುದ್ರಭೂಪಾಲ      || ೮೦ ||

ಏಳುವ ಸಮಯಕ್ಕೆ ರಾಮ ಪಾಳ್ಯಕ್ಕೆ ಬರಲು | ಜೋಡಿಸಿ ಕರಗಳ ಮುಗಿದು |
ಗಾಢದಿ ಬರಲೆಂದು ಊಳಿಗವನಟ್ಟಿಹನು | ಹೋಗಿ ಬರುವೆನು ದಯವಿರಲಿ           || ೮೧ ||

ಬಂದಿತ್ತು ಜಗಳವು ಅಂಜಬೇಡವೊ ಲಿಂಗ | ಸಂದುಗೊಡದೆ ಮಾತನಾಡೊ |
[ಬಂದ]ರಾಮಗೆಯೆಂದು ಬಂಧನಗಳ ಮಾಡೆ | ತಿಂದೇನು ಅವನ ಶಿರವರಿದು       || ೮೨ ||

ಸಿಕ್ಕಿ ನರಳುವುದೇಕೆ ಕಡಿದೊಟ್ಟುವೆ ಬಂದವರ | ಮತ್ತೇನು ಅವನೆಡೆಯ ಮಾತು |
ಕುಟ್ಟುವೆ ನವಕೋಟಿ ದಂಡೆತ್ತಿ ಬರಲು ಮುನ್ನ | ಸುಟ್ಟು ಬಿಡುವೆನು ಈ ಪುರವ        || ೮೩ ||

ಹಾಗಲ್ಲ ರಾಣವಿಜಯ ಹೋಗಿ ಬರುವೆನು ತಪ್ಪ | ಕಾಣದೆ ಆಜ್ಞೆ ಮಾಡಿಪನೆ |
ಚಾಡಿಗರ ನುಡಿಗರಸು ಕೇಡ ಬಗೆಯೆ ರಕ್ತ | ಕೋಡಿಯ ತಿದ್ದಿ ನಾ ಬರುವೆ             || ೮೪ ||

ಒಂದು ಕನಸಿಗೆ ಬೆಳಗೆ ಕಾಣದೆ ರಾಯ | ಕುಂಜರವು ಮಳೆಗೆ ಬೆದರುವುದೆ |
ನಂಬಿಗೆಯನಿತ್ತರಸು ಕರೆಯೆಂದಡವನ ಕೊಟ್ಟಡೆ | ಯೀ ಬುರುಡೆ ಉಳಿಯಲು ಅರ್ಧ ಸುಡುವೆ          || ೮೫ ||

ಹೋಗಯ್ಯ ಲಿಂಗಣ್ಣ ಅವ ಮಾಡಿದ ಬಂಧನಕೆ | ಈ ಕಾಯವ ಕೊಡುವೆ ಕೊಳ್ಳಭಯ |
ಸಾಗಿದನತಿ ಬೇಗ ಆಗ ಮೌನದಿ ಲಿಂಗ | ರಾಯ ರುದ್ರಗೆ ಕರ ಮುಗಿಯೆ             || ೮೬ ||

ಕೆಂಡವನುಗುಳುತ ಕರೆತಂದು ರಾಮನ ಎಮ್ಮ | ಹೆಂಡಿರ ಮಾಡಿದೆಯೊ ಲಿಂಗ |
ತಂಡೇಳ ಹೊಡೆಸುವೆ ತುಂಡಮೂಳನ ಗರ್ವ ಬಡ | ಮಿಂಡಯೆನುತ ಹೊಗಳಿಸಿದ  || ೮೭ ||

ಬಿರಿದಂಕನಾದರೆ ಇರಬೇಕು ಮನದಲ್ಲಿ | ಬರಬಹುದೆ ಪರಹಿತರಿಗೆ |
ತಡೆದೆನು ಕೊಟ್ಟಂಥ ಅಭಯಕೋಸ್ಕರ ಮುಂದೆ | ನಡೆಯೆನ್ನು ನೀನು ಬಂದಲ್ಲಿ       || ೮೮ ||

ರಾಯ ಎನ್ನಲು ಲಿಂಗ ರೋಮ ಅಳುಕದೆ ಮನದಿ | ಆಡಿದನದಕೆ ಉತ್ರವನು |
ಹೇಳಲಿಲ್ಲವೆ ರಾಯ ಮೊದಲೆ ಬಿರುದಿನ ಸುದ್ದಿ | ಹಾಳಾಗಿರ್ದದೆ ಕರ್ಣಮೂಲ        || ೮೯ ||

ಚಾಡಿಯ ನುಡಿಗೇ[ಳಿ] ಬಾಣಾಸುರನು ಕೆಟ್ಟ | ಕೇಡುಂಟು ಇವರಿಂದ ನಿಮಗೆ |
ಆಡಲಿಲ್ಲವೆ ರಾಯ ಸಭೆಯೆಲ್ಲ ಕೇಳ್ವಂತೆ | ನಾಳಗೆ ಹೋಗಿತ್ತೆ ಇವರ                  || ೯೦ ||

ಬಲವಂತನಾಗಲು ಹೊಗಳಿಸಿದನಾ ಬೀರಿದ | ಬಡವ ಗಳಿಸಿಕೊಳ್ಳಬಲ್ಲನೆ |
ತಿಳಿದು ನೋಡೈ ಭೂಪ ಬೇಡವೆಂದರೆ ನಡಿ ಪೇಳೊ | ಸುಡು ಇವರ ಚಾಡಿಮಾತಗಳ        || ೯೧ ||

ಮುಂಗಾರ ಸಿಡಿಲಂತೆ ದೊರೆಗಳೆಲ್ಲರು ಎದ್ದು | ಕಂಡಿರೆ ರಾಯ ಉತ್ರವನು |
ಸಂದುಗೊಡದೆ ಅವನ ಮಾತು ಛಲವನೆ ಗೆಲಿಸಿ | ಕೊಂಡೆಯರ ಮಾಡಿದ ನಮ್ಮ     || ೯೨ ||

ಬಾಲೆಯರ ಆ[ರ]ತ್ವ ನೋಡುವ ನಯನದಿ | ಕಾಣಲಾಗದೆ ಬಲ್ಲವರು |
ಜೋಡು ಈರ್ವರ ಮಾತು ಒಂದಾದ ಕಾರಣ | ಕೊಂಡಾಡುವ ರಾಮನ ಘನವ      || ೯೩ ||

ರುದ್ರನಾಯನೆ ನಿಮಗೆ ಪ್ರಸಿದ್ಧ ಕಂಡುದೆ ವಾಕ್ಯ | ಎದ್ದರು ಮೊರೆದು ಗರ್ಜಿಸುತ |
ವಜ್ರಕಾಯವ ಪಡೆದ ಹನುಮನಿಗೆ ಘನ ಪೇಳೈ | ಸುದ್ಧಿ ಮರಸುವೆವೊ ಕೊಡು ವೀಳ್ಯ         || ೯೪ ||

ರಾಮನ ಎದೆಗರ್ವ ಹೋಗಾ[ಡುತಿ]ರ್ದರೆ | ಕೇಳೇವು ಲಿಂಗ ಪೇಳ್ವಂತೆ |
ಬಾಲನೆನ್ನುತ ಅವನ ತಾಯಿ ಪಡೆದಳು ಎಮ್ಮ | ಸ್ತ್ರೀಯರಿಗೆ ಕಡೆಮಾಡಿ ನುಡಿದ     || ೯೫ ||

ಉರಿದೇಳ್ವ ದೊರೆಗಳನು ಕರವಿಡಿಯ ರಾಜೇಂದ್ರ | ಸೈರಿಸಿ ನೀವೊಂದು ಗಳಿಗೆ |
ಹರುಷದಿ ನೀವೆಲ್ಲ ಕರೆಸೆನಲು ಬರಿಸಿದೆ | ಕೆಡಿಸಲು ಧರ್ಮ ತಮಗಲ್ಲ                 || ೯೬ ||

ಇರಬೇಡ ಎಮ್ಮಲ್ಲಿ ನಡೆಯೆಂದು ಹೇಳಿಸುವ | ಕಡೆಗಾಲ ಒದಗಿ ಮಥನಿಸಲು |
ಕೊಡುವೆನು ವೀಳ್ಯವ ಕೊಟ್ಟ ದೃಢ ನಂಬಿಕೆ | ಕಳೆದು ಮಾಡಲು [ಕಾರಣ]ವಿಲ್ಲ        || ೯೭ ||

ರಾಯರಿಗೀ ಬಗೆಯಾಚಾರ ಶಾಂತಿಯ ಪೇಳಿ | ದೇವಿಶೆಟ್ಟಿಯ ಮಗನೆ ಕೇಳು |
ಲಿಂಗ ನಿನ್ನಯ ತಪ್ಪನೊಂದು ಪಾಲಿಸಿಕೊಂಡ | ಮೇಲಾದ್ರು ಮುಂದರಿತು ನಡೆಯೊ || ೯೮ ||

ರಾಯ ಲಿಂಗನ ಮೇಲೆ ಕ್ರೋಧವ ತಾನಿಟ್ಟು | ಸಾಗಲಕೇನು ರಾಮಗಳ |
ಸಾಲ ಶೂಲವ ನಡೆಸಿ ಪೀಳಿಗೆಯ ಬಿಡದಂತೆ | ಮಾಡದಿರಲು ರುದ್ರನಹುದೆ          || ೯೯ |

ರಾಯರಿಗೆ ಬಾಯಾರು ದಾದೆಯರ ಮೊಲೆಯನುಂಡ | ಮಾಡುವುದಿನ್ನೇನು ಲವುಡ |
ತೀರಿತ್ತು ಓರ್ಗಲ್ಲ ಅನ್ನದ ಋಣವೆಂದಾಡಿ | ಮನದೊಳು ಲಿಂಗ ನಡೆದ                || ೧೦೦ ||

ಬಂದನು ಲಿಂಗಣ್ಣ ಭೇರುಂಡ ರಾಮನ ಬಳಿಗೆ | ಚಂದ್ರನೆಪವೊದಗಿದಂತೆ |
ವಂದಿಸಿ ಕರಮುಗಿದು ರಾಜೇಂದ್ರ ಲಾಲಿಸಬಹುದು | ರಂಡೆ ರುದ್ರನ ಬಿನ್ನಹವನು    || ೧೦೧ |

ಬಿರಿದುಗಳ ಬಿಟ್ಟರೆ ರಣಹೇಡಿ | ಕಡೆಗೆನ್ನ ಮಾಡಿದವನೆನಲು |
ಪಡೆಯೆಲ್ಲ ಮೊರೆದುದು ನುಡಿಯಲೆನಗೆ ಚಾಡಿ | ಮಡಗಿದ ವಿಷವ ಮನದೊಳಗೆ      || ೧೦೨ ||

ಬಿರಿದನು ಬಿಡಲೆಂಬ ನುಡಿ ಬೀಳೆ ಕರ್ಣದಿ | ಅಡರಲು ಕೋಪ ಸಿಡಿಲಂತೆ |
ತೊಡೆವೆನು ಲಿಖಿತವನು ನುಡಿದವನ ನಾಲಗೆಯ | ಹೆಡತಲೆಯೊಳು ಮುನ್ನ ತೆಗೆವೆ  || ೧೦೩ ||

ಹಾಕಿದ ಬಿರಿದನು ಹರನು ಪೇಳಲು ಬಿಡೆನು | [ಸ]ರಿ ನೃಪಗಂ[ಜಿ] ಬಿಡುವವನೆ |
ಅರುಹಲಿಲ್ಲವೆ ಮುಂದೆ ಬರುವ ಕಷ್ಟಗಳನ್ನು | ಕುರಿಕಾಯ್ದು ಬಿದ್ದರೆ ಎಲ್ಲ               || ೧೦೪ ||

ಮಾಡಿದ ಲಿಂಗೆಂಬ ಭೇದವಾರೊಳಗುಂಟು | ಬೇರ ತಿನ್ನದೆ ಬಿಡನು ನಿನ್ನ |
ಬಾರಯ್ಯ ಲಿಂಗಣ್ಣ ಕುಟ್ಟೆಂಬ ಪಾಳೆಯಕೆ ಕಳುಹೋ | ತೋರುವೆ ಬೆಳಗಾಗಿ ಜಗಳ  || ೧೦೫ ||

ಸುಳುಹುಗಾಣದ ರೀತಿ ಇರುಳು ದಂಡಿಗೆ ಕಳುಹು | ತಡಮಾಡೆ ಕೆಡುವುದು ಕಾರ್ಯ |
ಒದಗಿಲ್ಲಿ ತಾ ಬಂದ ಶುಭದ ಲಗ್ನದ ಫಲವು | ಬಲಿಗೊಡುವೆ ಭೂತಗಣಕೆಲ್ಲ           || ೧೦೬ ||

ನಾನಾಗಿ ಜಗಳವ ಮೊದಲಾಗಿ ಕೆಣಕಲು ಬೇಕು | ಒದಗಿತು ನಿನ್ನ ಮೂಲದಲಿ |
ಬೇಡಿದ ಬಯಕೆಯ ಅನಾಥಗೆ ಒಲಿದಿತ್ತ | ರಾಯ ಜಟ್ಟಂಗಿ ರಾಮೇಶ                 || ೧೦೭ ||

ಹೋಗಯ್ಯ ಲಿಂಗಣ್ಣ ರಾಯ ರುದ್ರನ ಬಳಿಗೆ | ಹೋಗುವೆನೇನೊ ತೃಣಕೆ |
ಆಡಿ ತಪ್ಪುವರೆಡೆಯ ಅರಗಳಿಗೆ ನಿಲ್ಲನು ಮರಳಿ | ನೀರ ಮುಟ್ಟನು ಎಂದು ಪೇಳೋ  || ೧೦೮ ||

ತಿರುಗಿ ಬಂದನು ಲಿಂಗ ದೊರೆ ರುದ್ರರಾಯನ ಬಳಿಗೆ | ಇರನೆಂದ ತರಳ ರಾಮಯ್ಯ |
ಹರುಷವಾಯಿತು ನಿಮ್ಮ ಇರ್ವರ ಮನಸಿಗೆ | ತಿರುಗಿದ ಲಿಂಗನರಮನೆಗೆ            || ೧೦೯ ||

ತಿಂಗಳಿಗೊಂದಿವರಸ ಒಂದಾಗಿ ನಡೆವವ | [ನಂ]ದದಿಂದಿಳಿಯೆ ತಾಯೊಡಲ |
ಮುಂದವರು ಹೇಮಾದ್ರಿ ಒಡೆಯನ ದರುಶನವಾಗೆ | ಲಿಂಗ ಪೇಳ್ದನು ಪಿತನೊಡನೆ  || ೧೧೦ ||

ಆದ ವಿವರಗಳನು ತಾಯಿ ತಂದೆಗೆ ಪೇಳೆ ನೀ | ಕಂಡ ಬುದ್ಧಿಯ ಮಾಡೆನಲು |
ಆಲಸ್ಯವಿಲ್ಲದೆ ಆಭರಣಗಳ ಸಾಗಿಸಲು | ಆಪ್ತಜನರೊಡನೆ                           || ೧೧೧ ||

ಮನೆಯ ಲಾಯದ ತುರಗ [ಗಳ]ನು ಶೃಂಗರಮಾಡಿ | ಹೊರಡಿಸಿದ ಮುನ್ನೂರು ತೇಜಿ |
ಬದುಕು ಭಾಗ್ಯವನೆಲ್ಲವ ಎತ್ತು ಒಂಟೆಗೆ ತುಂಬಿ | ಬಿಡದಂತೆ ತೃಣ ಬದುಕನೆಲ್ಲ       || ೧೧೨ ||

ಕಾಲ ಕಡಗ ಕಂಠಮಾಲೆ ಗೆಜ್ಜೆಗಳನು | ಧ್ವನಿಯ ಕಾಲ ವಿಚಾರಗಳ |
ತೊಡಿಸಿ ಸ್ತ್ರೀಯರಿಗೆಲ್ಲ…….. | ಬಾಲರೆಂಬಂತೆ ಕಳುಹಿದನು                          || ೧೧೩ ||

ತನ್ನಕೈರಾಜೀವ ಹಮ್ಮೀರ ಮಂದಿಯ ಕರೆದು | ನಿಮ್ಮ ಮಾತೇನೆಂದು ಕೇಳೆ |
ನಿರ್ಣಯ ನನದಂತು ಅನ್ನ ನೀರಿನ ಋಣವು | ಪುಣ್ಯ ದೊರೆಯಲು ರಾಮನೆಡೆಯ    || ೧೧೪ ||

ಕೇಳಯ್ಯ ಲಿಂಗಣ್ಣ ರಾಯ ರುದ್ರನ ಉಪ್ಪ | ನಾವಂತು ಉಂಡವರಲ್ಲ |
ಏಳಾರು ತಲೆಯಿಂದ ಸೇರಿದ ಬಲ ನಿಮ್ಮ | ಪೀಳಿಗೆ ಪುತ್ರ ಸಂತಾನ                 || ೧೧೫ ||

ತಾಯಿಗೆ ಋಣ ತೊಲಗೆ ತರಳಗೆ ಆಸೆಯೇನು | ತೀರಿತ್ತು ಎಮಗೆ ಈ ಕ್ಷಣವೆ |
ಮೂರು ಸಾವಿರ ಮಂದಿ ಕರಮುಗಿದು ನಿಮ್ಮಯ | ರೋಮ ಬಿದ್ದಲ್ಲಿ ಅಳಿವೆವು         || ೧೧೬ ||

[ಸಾ]ಗಿಸಿ ಬಂಟರ ಕುಟುಂಬ ದಂಡಿಗೆ ಲಿಂಗ | ತಾ ಹೊರಟೆಯೆಂಬ ಸಮಯದಲಿ |
ಮೂಡ ಕೆಂಪಡರಲು ರಣಧೀರ ರಾಮನು ತನ್ನ | ಊಳಿಗನೊಡನ್ಹೇಳಿ ಕಳುಹೆ        || ೧೧೭ ||

ಶೀಘ್ರದೊಳಗೆ ಬನ್ನು ರುದ್ರರಾಯಗೆ ಉಸುರಿ | ಕದ್ದು ಹೋದನೆಂದಾನು ಕಡೆಗೆ |
ಬದ್ಧವಿಲ್ಲ ದೊರೆಯಲ್ಲಿದಾವ ಕಳ್ಳೆಂದು | ಕ್ಷುದ್ರ ಕೇಳುವ ರಾಯನೆಡೆಯ               || ೧೧೮ ||

ಊಳಿಗ ಪರಿತಂದು ರಾಯ ರುದ್ರನ ಸದರ | ಪೇಳುತ್ತ ಕರಗಳ ಮುಗಿಯೆ |
ಭೇರುಂಡ ಗಜದೋರಿ ಸಾಗುವ ಅಡಿಗಳ | ಕೇಳುವರೆಡೆ ಇರೆನೆಂದ                  || ೧೧೯ ||

ಪೇಳುತಾಕ್ಷಣ ಸುದ್ಧಿ ಸಾಗಿ ಪೇಟೆಗೆ ಬಂದು | ಏಳಣ್ಣ ಲಿಂಗ ತಡೆವೇಕೆ |
ಕೇಳುತ ಮದ್ದಿನ ಚೀಲಗಳ ಮನೆಗೆಳೆದು | ಸಾಗುವವನ ತಾ ಕೋರಿ                 || ೧೨೦ ||

[1] + ರುದ್ರರಾಯನ ಭೇಟಿಗೆ ಕರಕೊಂಡು ಹೋದ ಸಂಧಿ | ಶ್ರೀ ವಿರುಪಾಕ್ಷಾಯ ನಮಃ, ಶ್ರೀ ಗುರುವೆ ಗತಿ ಮತಿ, ಶ್ರೀ ಗುರು ಬಸವಲಿಂಗಾಯ ನಮಃ (ಮೂ)