[1]ಶ್ರೀ ಗುರುವೆ ಸಚ್ಚಿತ್ತ ಈರೇಳು ಭುವನಕ್ಕೆ | ಆಧಾರ ಕರ್ತ ಅವಿರಳನೆ |
ಪಾಲಿಸು ವರಮತಿಯ ಪಂಚವಕ್ತೃದ ದೇವ | ಶ್ರೀ ಗೌರಿಗಂಗೆ ಪ್ರಿಯವರನೆ || ೧ ||
ಕುಂಜರ ವೈರಿಯ ಕರದೊಳು ನೊಂದಾನ | ಮಗಳ ಮೈಬಣ್ಣ ಅಂಜದೆ |
ಒಡಲಿಗೆ ಇಟ್ಟೆ ಒಡಲಿಗೆ ಉರಗ | ಶುಂಡಿಲ ಬೆನವ ಕೊಡು ಮತಿಯ || ೨ ||
ಕಂದರ್ಪ ಪಿತನ ತಂಗಿ ವಲ್ಲಭನಣ್ಣ | ತಂದೆಯ ಸಖನ ವೈರಿಯನು |
ಕೊಂದವನೆ ಕರಿಚರ್ಮನೆಂಬ ನಾಮವ ಪಡೆದ | ನಂದಿವಾಹನ ಕೊಡುಮತಿಯ || ೩ ||
ಹಾವಿನ ಹಗೆಯನು ಏರಿದವನ ಮಗನ | ಬೂದಿಯ ಮಾಡಿ ಭಸಿತವನು |
ಓಲಾಡಿ ಧರಿಸಿದೆ ಬೇಡಿಕೊಳ್ಳಲು ರತಿಯು | ಪ್ರಾಣವಿತ್ತವನೆ ಕೊಡು ಮತಿಯ || ೪ ||
ಕಾಶಿ ರಾಮೇಶ್ವರಕೆ ಈಸು ವೆಗ್ಗಳವಾದ | ಶ್ರೀ ಕೈಲಾಸ ಹಂಪೆಯಲಿ |
ಲೇಸಾಗಿ ನೆಲಸಿದ ಹರಶಂಭು ವಿರುಪಾಕ್ಷ | [ಉಸುರು] ಮನಕೆ ಮುಂಗತೆಯ || ೫ ||
ಲಾಲಿಸಿ ಮುಂಗತೆಯ ಧರ್ಮಜ್ಞಾನವುಳ್ಳವರು | ಆಡದೆ ಅಡ್ಡಮಾತುಗಳು |
ಓದಲು ಮತಿಹೀನ ಪರಧ್ಯಾನದಿಂ ಕೇಳೆ | ಶ್ವಾನಜನ್ಮದ ನರಕ ಬಿಡದು || ೬ ||
ಚಿತ್ತ [ದಿ] ಬೇಸತ್ತುದೆ ಪುಸ್ತಕವ ಕಟ್ಟೆನ್ನಿ | [ಹೊ]ತ್ತಿನ ಮದ ನಿದ್ರೆ ಬರಲು |
ವ್ಯರ್ಥ ಸಾಧನ ಮುಂದೆ ಮುಕ್ತಿ ದೊರೆಯದು ಗಿಳಿಯು | ಮೊತ್ತೋದಿ ಮಲವ ತಿಂದಂತೆ || ೭ ||
ಕೇಳಬೇಕೆನಲವರ್ಗೆ ಪೇಳುವುದು ಇನ್ನೊಮ್ಮೆ | ಬಾಲರಾಮನ ಸತ್ಯಕಥೆಯ |
ಪ್ರಾಣಕಾಂತೆಯರುಳಿದು ಪರಸತಿಯರು [ತನ್ನೇ] | ಕಾಂ[ತ] ಕಣ್ಮನದೊಳ [ಗಿರದ] || ೮ ||
ರಾಯ ಬಲ್ಲಾಳನಾ ಸ್ಥಾನಪತಿಗಳು ಪೋಗಿ | ಕ್ಷೀಣವಾದುದು ಕಂಡೆ ಮನುಜ |
ಬೇಗದಿಂದಲಿ ಹೋಗಿ ರಾಯ ಬಲ್ಲಾಳಗೆ | ಪೇಳುವದು ಜಲವನೊತ್ತುತಲಿ || ೯ ||
ರಾಯ ರಾಜೇಂದ್ರನೆ ಕೇಳಯ್ಯ ಕಿವಿ ತುಂಬ | ಕಾಗದವಿರಿಸಿ ಕರಮುಗಿದ |
ನೀರನಿಳುಹಿದ ಸಣ್ಣ ಪೋರನು ನಮ್ಮ | ಹೇಳಲಾರೆನು ಹೀನ ಸ್ವರವ || ೧೦ ||
ನೋಡರಸ ಲೇಖನವ ಪಾದಕ್ಕೆ ತಿಳಿವುದು | ಆಡಲಮ್ಮೆವು ಅವನಂತೆ |
ಕೋಡಗ ಕಪಿಮೂಳ ಮೂಡಿ ಮಳೆಯನು ನಿಮ್ಮ | ನಾಯ ಸಮಾನ ಮಾಡಿದನು || ೧೧ ||
ಹುಲಿಯ ಹೆಣ್ಣನು ಸಣ್ಣ ಮೊಲ ಬಂದು ಕೇಳುವ | ತೆರನಾಯಿತೆಂದು ಹೇಜೀಬರು |
ತರಳ ತಬ್ಬಲಿ ಮೂಳ ತಲೆಯ ಮೇಲಣ ಬಪ್ಪು | ಹರದಿಲ್ಲ ಹಲವ ಬೊಗಳುವನು || ೧೨ ||
ಆಡಿದವನ ತನ್ನ ಬಾಯಿಗೆ ತಿಳಿದಂತೆ | ಕೇಳಿದೆವು ಕಿವುಡರಂದದಲಿ |
ಆಡಿರಲು ಪ್ರತಿಮಾತ ಚೆಂಡಾಡಿಸುವ ತಲೆಯನ್ನು | ಮೂಕ [ರಾಗೆ]ದ್ದು ಮಿಕ್ಕು ಬಂದು || ೧೪ ||
ಸ್ಥಾನಪತಿಗಳ ಮಾತ ಕೇಳುತ ನೃಪನಾಗ | ಭೂಮಿಯ ಹೊಡೆದು ಗರ್ಜಿಸಿದ |
ಕೂರಂಬ ತಾಕಿದ ಕೇಸರಿಯಂತೆ ನಯನದಿ | ತೋರಲು ಕಿಡಿಸೂಸಿ || ೧೫ ||
ಹೊಡೆಯಲು ಭೇರಿಯ ಬಲ ಬರಲಿ ಚತುರಂಗ | ಸಿಡಿಲ ರೂಪಾಗಿ ನೃಪವರನು |
ಹುಡುಗ ಮೂಳನ ಹಿಡಿದು ಬಡಿಯುವೆ ಇಲಿಯನು | ಪಿಡಿದು ಮಾರ್ಜಾಲ ನುಂಗುವಂತೆ || ೧೬ ||
ಬಂಟನಾದರೆ ಈಗ ಬಡನಾಯಿ ಕಂಪಿಲನು | ಸೆಂಟಿದ ಪೋರನ ಕಳುಹಿ |
ಸುಂಟರಗಾಳಿಗೆ ತರಗೆಲೆ ನಿಲ್ಲುವುದುಂಟೆ | ಒಂಟಿ ರಟ್ಟೆಯ ಪಿಡಿದು ಬಡಿವೆ || ೧೭ ||
ಕೆಂಡಕಿರುವೆ ಮುತ್ತಿ ಹಿಂದಕೆ ತಿರುಗುವುದೆ | ಗಂಡಭೇರುಂಡನು ಕರಿಯ |
ಕಂಡರೆ ಬಿಡುವುದೆ ದಂಡು ಕೂಡಲಿಯೆಂದು | ಮುಂಗೈಯ ಕಡಿಕೊಳುವ ರಾಯ || ೧೮ ||
ರಣಗಾಳೆ ಸಾರಲು ಒದಗಿತು ಬಲ ತುರಗ | ಕೊಡು ನಮಗೆ ಭೂಪ ವೀಳ್ಯವನು |
ತೊಡೆ ಹೊಡೆದಾರುತ ಯಮದೂತರಂದದಿ | ಬಿಡುರಾಯ ತಡವೇಕೆ ಅಭಯ || ೧೯ ||
ಕೋಪಾಗ್ರದೊಳಗೇಳ್ವ ಭೂಪ ರಾಯನ ಕಂಡು | ನೀತಿಯ ಪೇಳ್ವನು ಮಂತ್ರಿ |
ಸಾಕಯ್ಯ ಸೈರಿಸು ಮಾತಿನ ಬಿಗುವ್ಯಾಕೆ | ಜ್ಯೋತಿ ಪ್ರಕಾಶವೆಲ್ಲಿಹುದೋ || ೨೦ ||
ಶಕ್ತಿ ಸಾಹಸದೊಳ್ ಮದಸೊಕ್ಕಿ ಪೋಗಲು ಸಲ್ಲ | ಲಕ್ಷ್ಮೀಯ ಒಲುಮೆಯೆಲ್ಲಿಹುದೊ |
ಹುಚ್ಚಾಗಿ ಅಳಿವನೆ ಹತ್ತು ತಲೆಯವ ಕಪಿಯು | ಸುಟ್ಟು ಬರದೆ ಲೆಂಕೆಪುರವ || ೨೧ ||
ನರಿಯ ಕೊಲ್ಲಲು ಒಂದು ಹುಲಿಯ ಸಾಹ[ಸ ಬೇಡ] ಗೆಲಬೇಕು ಕಾರ್ಯ ಸುಳುಹರಿದು |
ಮೊದಲಾಗಿ ಕಳುಹುದ ಬಲ ಕುದುರೆ ಮಂದಿಯ | ಹೊಡೆವನೊ ಮುರಿದು ಓಡುವನೊ || ೨೨ ||
ರಾಜೇಂದ್ರ ಬಲ್ಲಾಳ ಭೂಮಿಗೆ ಪೆಸರಂತೆ | ಬಾಲನೊಡನೆ ಕಾರ್ಯ ಸಲ್ಲ |
ಕಾಲಗತಿಗಳ ಮೂಲ ಯಾರಿಗೆ ತಿಳಿಯದು | ಹೋಗಿ ಮುರಿಯರಿಯಲು ಹೀನ ಬಿಡದು || ೨೩ ||
ಯುಕ್ತಿಯಲಿ ಗೆಲಿಬೇಕು ಶಕ್ತಿ ಕಾಣುವ ತನಕ | ಹೊತ್ತಿನ ಗುಣವ ಕಾಲ್ಗತಿಯ |
ರಕ್ಕಸರ ಹೊಳಲನು ನರನು ಮುತ್ತಲು ಜಗ[ದ] | ಸೂತ್ರಧಾರೆಯೆ ತಾನೆ ಬಲ್ಲ || ೨೪ ||
ಮೆಚ್ಚಿದ ನೃಪನಾಗ ಮಂತ್ರಿ ಯಲ್ಲರಸನ | ನಿಶ್ಚಯದ ಮಾತೆಂದು ಮನದಿ |
ತಟ್ಟನೆ ಕರೆಸಿದ ಮಂದಿ ತುರಗವ ರಾಯ | ದಿಟ್ಟವಾದಂಥ ಮನ್ನೆಯರ || ೨೫ ||
ಕರೆಸಿದ ದಳವಾಯಿ ಮುದ್ದನ ಮಗ ಧೀರ | ಮೊನೆಗಾರ ಸಿದ್ಧರಾಜಯನ |
ಹೊಡಿ ಹೋಗು ರಾಮನ ಹಿಡಿದು ಕೈಸೆರೆಯನು | ಕೊಡುವೆನು ಬೇಕಾದ ಬಲವ || ೨೬ ||
ಬುದ್ಧಿಯೆನುತಲಿ ಅಡ್ಡಬಿದ್ದು ಸಿದ್ಧರಾಜ | ತಬ್ಬಲಿಯ ಮಾತೇನು ಭೂಪ |
ಕದ್ದೋಡಿ ಯಮ [ನ ಮೊರೆ] ಬಿದ್ದರೆ ತಾರದಿರಲು | ಸಿದ್ಧರಾಜನೆ ಎನ್ನ ಬೇಡಿ || ೨೭ ||
ಕೊಡಿಸಿದ ಹೆಚ್ಚಿನ ಉಡುಗೊರೆ ಉತ್ಸಾಹ | ಕರಿ ತುರಗ ಕಾಲಾಳು ಬಲವ |
ಸರಿಮಾಡಿ ಜಗಳಕ್ಕೆ ಬಾಣ ಬತ್ತಿಯನೆರಡು | ಸವಲಕ್ಷದೊಳಗೆ ಹೇರಿಸಿದ || ೨೮ ||
ಜೇರಿಯ ಕಾಪಿನ ಮಂದಿ ಬಿರಿದಿನೆಕ್ಕಟಿಗರು | ಗುರಿಕಾರ ಬಿರಿದ ಬಾವುಲಿಯ |
ಹುದುರಿನೊಳಗೆ ನಿಂದು ಕರಗಳ ಮುಗಿಯಲು | ನಡೆಸಯ್ಯ ತಡವೇಕೆ ಮಾಳ್ಪೆ || ೨೯ ||
ಭೇರಿ ಕಾಳೆಯ ಸ್ವರವು ಭೋರೆನಿಸಿ ನಗರದಿ | ಊರ ಬಾಗಿಲ ತೆಗೆ ಎನಲು |
ಮೂಳನ ಭಯಕಂಜಿ ದ್ವಾರವನು ಮುಚ್ಚುವರೆ | ಕೀಳಿ [ರಿ] ಲಾಳಮುಂಡಿಗೆಯ || ೩೦ ||
ಹೋರಾಡಲು ಬಲ ತುರುಗ ಎಡದೆರನಿಲ್ಲದೆ | ಎದೆಗಳೊಡೆವಂತೆ ವೈರಿಗಳ |
ದಿಗಿಲು ಗುಟ್ಟುತ ಬಂದು ಇಳಿಯಲು [ಮಾಹರ್ನವಮಿ] | ಸದರ ವಾಲಗದ ಬಯಲೊಳಗೆ || ೩೧ ||
ಬಂದ ಪೌಜಿನ ಬಗೆಯ ತಂದು ರಾಮಗೆ ಪೇಳೆ | ಹಿಂದಕ್ಕೆ ತೆಗೆದು ಮುತ್ತಿಗೆಯ |
ಬರಮಾಡಿ ಬಲುಧೀರ ಮೊನೆಗಾರ ಮನ್ನೆಯರ | ಕೊಡಿಸಿದ ಬಾಣ ಬತ್ತಿಗಳ || ೩೨ ||
ಯಾವಲ್ಲಿ ಜಗಳದ ತಪವಡನೆ ಪಿಡಿದು | ರಾಯ ಕಟ್ಟಿಗೆ ನೇಮಿಸಲು |
ತಾನೊಂದು ಪೌಜಾಗಿ ರಾಯ ರಾಮನು ನಿಂತು | ಏರಲು ಪೌಜ ಜಗಳಕ್ಕೆ || ೩೩ ||
ಕಚ್ಚಲು ರಣ ಚೂಳಿ ಕತ್ತಿ ಭಲ್ಲೆಯ ಕಿತ್ತು | ಹೊಕ್ಕರು ತುರಗ ರಾವುತರು |
ಮುಕ್ಕಣ್ಣ ನೇಜಯ ಸುರಗಿ ಚಕ್ರಗಳಿಂದ | ಇಕ್ಕೆಲದೊಳಗೆ ಸಮರಸವು || ೩೫ ||
ಕೊಡುತಲಿ ಜಗಳವನು ಹಿಂದಗಿದು ರಾಮನ ತುರಗ | ಅಡವಿನ ಬಲದ ಮೇಲ್ಕೆಡಹಿ |
ಕಡುಕೊಂಡು ಬರಲಾಗ ಬಲ್ಲಾಳರಾಯನ ಪೌಜು | ಬಳಸಿ ಮುತ್ತಲು ರಾಮನ ಪೌಜ || ೩೬ ||
ರಾಯ ಬಲ್ಲಾಳನ ಮೂರು ಸಾವಿರ ಮಂದಿ | ಸೀಗೆಲಡಗಿದ ಬಾಳೆಯಾಗೆ |
ನೂರಾರು ಬಾಣಗಳ ಎ[ಚ್ಚು]ಬಾಣಿಯ ಮುದ್ದ | ಕೋಣನಂದದಿ ಹೊಕ್ಕು ಕಡಿದ || ೩೭ ||
ಹೊಡೆ ಇವರ ತಲೆಯನು ಎಡಗೈಯ ಹಂಪನೆ | ಹೊಕ್ಕು ಪಿಡಿದು ಕಾಲೊಗೆವುತಲಿ |
ಮುಳುಗಿತ್ತು ಪೌಜೆಮ್ಮ ದಳವಾಯಿ ಮುದ್ದನ | ತನುಜ ತುಳಿಸಿದ ಸಿದ್ಧರಾಮಯ್ಯ || ೩೮ ||
ಮುತ್ತಲು ಬಲ್ಲಾಳನ ಮೂವತ್ತು ಸಾವಿರ ಪೌಜು | ಸತ್ತ ಜೀವಿಗಳ ತುಳಕೊಂಡು |
ತಾಯಿ ಗರ್ಭನ ಹೊಗಲು ಬಿಟ್ಟು [ಬಿಡೆ]ವು ಎಂದು | ಹಾರುತ ತೊಡೆಯ ತಟ್ಟುವರು || ೩೯ ||
ಹುಡುಗನ ಮಾತಿಗೆ ಬರುವರೆ ಜಗಳಕ್ಕೆ | ಎಳೆತಂದು ಹಾಕಿತ್ತು ವಿಧಿಯು |
ಕಡಿವನು ಕಂಪಿಲನು ಹುಡುಗನೆಲ್ಲೆನುತಲಿ | ತುಳಿಸುತ್ತಿರಲು ಬೆನ್ನಮೇಲೆ || ೪೦ ||
ಜೇರಿಸಿ ಕವಿಲಯು ರಾಯನು ಸಿದ್ಧರಸ | ದಾರಿ ಬಿಡದಂತೆ [ಹೊ]ಣಕಿ [ರಿದು] |
ನೂರಾರು ತಲೆ ಹೊಡೆದು ನೂಕಲು ಮುಂದಕ್ಕೆ | ರಾಯ ರಾಮನ ಮಂದಿ ಮುರಿಯೆ || ೪೧ ||
ತೀರಿ ಬಂದಿರೆ ನಿಮ್ಮ ಊರ ಹೆಂಡಿರ ಬಿಟ್ಟು | ಖೂಳ ಬಲ್ಲಾಳನ ತಿಳಿಯದೆ |
ತೋಡಿ ಭೂಮಿಯ ಹೊಗಲು ಬಿಟ್ಟು ಮಡುಗುವೆಯೆಂದು | ಹಾರುತ ಬೆನ್ನಡಿ ಹೊಡೆಯೆ || ೪೨ ||
ತರಳನ ಮಾತಿಗೆ ಹರಿಣ ವ್ಯಾಘ್ರನ ಕಂಡು | ಹೆದರಿ ಓಡುವ ತೆರದಿ |
ಮುರಿದು ರಾಮನ ಮಂದಿ ತಿರುಗೆ ಹೆದರಬೇಡಿರೊ ಎಂದು | ಚದುರ [ರಣ್ಣ]ತಮ್ಮ ಸಿಡಿಲಿನಂತೆಯೇ || ೪೩ ||
ಹರಶಂಭು ಜಟ್ಟಂಗಿ ವರದ ರಾಮನ ನೆನೆದು | ಗಿರಿಜಾವಲ್ಲಭನೆ ಕಾಯೆಂದು |
ಸ್ಮರಿಸಲು ಸ್ತುತಿಮಾಡಿ ಸೋಮಧರನು ಬಂದು | ಬೆರೆದನು ಬಲದ ಭಾಗದಲಿ || ೪೪ |
ರೂಢಿಗೀಶನು ಬಂದು ಕೂಡಲು ಬಲದೊಳಗೆ | ರೋಮಗಳು ಸರಳಾಗಲಿರ್ವರಿಗೆ |
ವೀರಭದ್ರನು ದಕ್ಷಾಧ್ವರಕೆ ನಡೆಗೊಂಡಂ[ತೆ] | ತಿರುಗಿ ನಡೆಯೆ ಇರ್ವರು || ೪೫ ||
ಗರುಡನು ಉರಗಗೆ ಮೊರೆದು ಎರಗುವ ತೆರದಿ | ಗಿರಿಗೆ ಬಂದಡರ್ವಂತೆ ಸಿಡಿಲು |
ಎರಡು ಭಾಗದ ಮೇಲೆ ಅನುಜರಿರ್ವರು ಏರೆ | ಕೊರೆದು ಕೆಡವುತ ಕಣಿಕೆ ತೆರದಿ || ೪೬ ||
ಹೊಕ್ಕರು ಬಲದೊಳಗೆ ಮೃಗದೊಳಗೆ ಸಿಂಹದ | ಮರಿ ಬಂದು ಮುರಿದಿಡುವ ತೆರದಿ |
ಎತ್ತಿ ಹೊಡೆಯಲು ತುರಗ ಹತ್ತಿರುವ ರಕ್ತ [ದಿ] | ಬಿಚ್ಚಲು ನಾಲ್ಕು ಹೋಳಾಗಿ || ೪೭ ||
ತೃಷೆಯಾದ ಕರಿಗೊಂಡ ರಸದಾಳ ಹೊಲದೊ [ಳಗೆ] | ಕೊಸರಿ ಮುರಿವಂತೆ ಕೊಲ್ಲುವರು |
ಖುಶಿಯ ಕಳೆಯಲು ತಮ್ಮ ಹೊಸ ಹಸ್ತ ದಣಿಯಲು | ಎಸೆದಾಡುತಿರಲು ತಲೆ ಬುರುಡೆ || ೪೮ ||
ಹುಚ್ಚಕೋಣನ ತೆರದಿ ಎತ್ತಿ ಒಗೆಯುತ ಮುದ್ದ | ದೊಕ್ಕೆ ಸಮೆದ ಕರಿಯ ತೆರದಿ |
ಒತ್ತಿನೊಳಗೆ ಸಂಗಯ್ಯ ಕಟ್ಟಿ ಜೀಬಿಯ ಬಳಸಿ | ಲೆಕ್ಕವಿಲ್ಲದೆ ತುರುಗವಿಡಿಯೆ || ೪೯ ||
ಎಡಗೈಯ ಹಂಪನು ಕೊರೆಯು [ತಿರೆ] ಮೂಗನು | ಮುರಿದೋಡಿ ಅಗಳ ಬೀಳುವರ |
ಚರಣವ ಪಿಡಿದು ಒಗೆಯುತ ರಾಮರ ಜಟ್ಟಿ | ಹಿಡಿದನು ಕರಿಯ ಹನ್ನೆರಡ || ೫೦ ||
ರಣಮಯವಾಗಲು ನಯನಗಳು ಕಾಂಬ[ಷ್ಟು] | ಹೆಣದ ಮೇಲ್ಹೆಣ ಬಿದ್ದು ಉರುಳೆ |
ಪರಿಯಲು ಶ್ರೋಣಿತ ಹುರಿಮಂಜ ಗಿರಿಯೊಳು | ಗರೆದಂತೆ ಮುಂಗಾರ ಮಳೆಯು || ೫೧ ||
ದಳವೆಲ್ಲ ಬಯಲಾಗೆ ದಂಡಿಗೆ [ಮಗುಳ್ದರು] ಹಳ | ಬರ ಮಗ ಸಿದ್ಧರಾಜಯ್ಯ |
ತನಗೇನು ಗತಿಯೆಂದು ಇಳಿದು ಓಡಲು ಕಂಡು | ಹೆಡೆಗಟ್ಟಿನೊಳಗೆ ಪಿಡಿತರಲು || ೫೨ ||
ಕಂದ ರಾಮಯ್ಯನ ಮುಂದೆ ನಿಲ್ಲಿಸಿ ಹಂಪ | ದಂಡಿಗೆ [ಮಗುಳ್ದರೆ] ಇವನು |
[ಸೀಳುವೆ] ಮೂಗನು ಪ್ರತಿಪಾಲಿಸು ಭೂಪ | ಎಂಬುತ್ತ ಕರಗಳನು ಮುಗಿಯೆ || ೫೩ ||
ಕೊಲ್ಲಬಾರದು ಹಂಪ ಕೈಯೊಡನೆ ಹಿಡಿದವರ | ಒಳ್ಳೆಯ ಮಗನದರ ಮೇಲೆ |
ಕೊಲ್ಲದೆ ಕರೆದೊಯ್ಯೊ ದಂಡು ಪಾಳೆಯಕೆಂದ | ಅಲ್ಲಿಗೆ ಮುಗಿಯೆ ರಣವಾರ್ತೆ || ೫೪ ||
ರಣವೆಲ್ಲ ಕೆಸರೇಳೆ ಸೆಣಸುವರಿಲ್ಲದೆ | ಹಿಡಿಸಲು ಧರ್ಮಗಾಳೆಯನು |
ರಣವ [ಶೋಧಿ]ಸಿ ಕೊಟ್ಟು ಅಳಿದ ಮಂದಿಗೆ ಕಿಚ್ಚ | ಕೊಡಿ [ಸಿದನು] ರಾಮಭೂಪಾಲ || ೫೫ ||
ಸುಡಿ[ಸಿದ] ಮುನ್ನೂರು [ಅರೆ]ಗಾಯ ಏಳ್ನೂರು | ಬರೆದುಕೊಂಡರು ಲೆಕ್ಕವನು |
ಒಡನೆ ಸಾವಿರವಾಗೆ ಪರಬಲೇಂದ್ರಗೆ ಸುದ್ಧಿ | ಕೊಡಲಾಗ ಮಂತ್ರಿಯ ಮಗನು || ೫೬ ||
ಕಾಳಗವೆಂಬುದು ಕಡುಬು ಸಾಧನೆಯಲ್ಲ | ಮಾಡುವುದೇನು ಫಲ ತೀರೆ |
ನೋಡುವರಳವಲ್ಲ ರಾಯ ಬಲ್ಲಾಳನಾ | ಕಾರ ಮಲಗಿತು ಮಂದಿ ತುರಗ || ೫೭ ||
ರಾಯ ಕಂಪಿಲಭೂಪಕುಮಾರ ಪಾಳ್ಯಕೆ ನಡೆಯೆ | ರಾಯ ವಜೀರರೆಡಬಲದಿ |
ಸ್ನಾನ ಪಾನಗಳಾಗಿ ಷಡುರಸಾನ್ನವ ಸವಿದು | ಆನಂದ ಸುಖದೊಳಗಿರಲು || ೫೭ ||
ಮುತ್ತುವೆ ನಗರವ ಹೊತ್ತೇಳುತೆ ಮುಂಜಾನೆ | ಮತ್ತೆ ಸೋಸುತ್ತ ರಣವನು |
ಕಟ್ಟಿಗೆ ಚರರನು ಅ[ಟ್ಟೆ] ಕೊ[ಡಲು] ಸುದ್ಧಿ | ಕೊಟ್ಟು ಬರಲಾಗ ಚರರ್ಹೋಗಿ || ೫೯ ||
ರಣದೊಳು ಪಿಡಿದಿರ್ದ ಕೈಸೆರೆ ಮಂದಿಯ ತಂದು | ಒಡೆಯ ರಾಮೈಗೆ ತೋರಿದರೆ |
ಕಡು ಚೆಲ್ವ ಚಪಳನ ಪಿಡಿದು ಮೂಗಿಗೆ ಸುಣ್ಣ | ಎಳೆದು ಬಿಡಿಸಿದ ಧರ್ಮ ಸೆರೆಯ || ೬೦ ||
ರಾಯ ರಾಮನು ಇತ್ತ ಪ್ರೇಮದೊಳಿರಲಾಗಿ | ಕೇಳಿ[ರಿ] ಬಲ್ಲಾಳನ ಪ್ರತಾಪ |
ಹಾಳಾಗಿ ಬಲವೆಲ್ಲ ಹಳ್ಳ ಕೊಳ್ಳವ ಬಿದ್ದು | ಓಡುವ ಪರಿಯಲಾಪುದು || ೬೧ ||
ಒಚ್ಚೆ ಓಣಿಯ ಪಿಡಿದು ಬಿದ್ದು ತೆವಳುತ ತಲೆಯ | ಎದ್ದು ತೋರಲು ಬರುವುದೆನುತ |
ದಿಬ್ಬ ಸಿಕ್ಕಲು ಒಂದು ಮಗ್ಗಲು ಉರುಳುತ್ತ | ಬಿದ್ದರು ಕೆಲರೋಡಿ ಜಗಳ || ೬೨ ||
[ಸಾಯೆ]ಸಾಯದ ಮಂದಿ ಭೋರಿಡುವ ರಕ್ತದಿ | ಮಾರಿಗೊಂಡಡೆ ಎದ್ದು ಕೆಡೆದು |
ನೀರು ಕಾಣುತ ಕುಡಿದು ಕೆಳ ಚೀರಿ ಬಿಡುವರು | ಜೀವ ನೂರಾರು ಕಡೆ ಮೊದಲೆ || ೬೩ ||
ಕಂಡನು ಬಲ್ಲಾಳ ಚಂದ್ರಸಾಲೆಯನಡರಿ | ದಂಡೆಲ್ಲಿ ಅಡಗಿತೊ ಶಿವನೆ |
ನುಂಗಿತೆ ರಣಭೂಮಿ ರೂಢಿಯೊಳ್ ರಾಮನು | ಚಂದ್ರನಹುದು ಪ್ರತಿ ಭೀಮ || ೬೪ ||
ಚಂದ್ರವಾಯಿತು ಮಂತ್ರಿ ಮಂಡೆ ಬೋಳಿಸಿದಂತೆ | ಒಂದಾರೆ ಸುಳುಹಿಲ್ಲ ರಣದಿ |
ಬಿಂದಿಗೆಯನೊಡಕೊಂಡ ಬಾಲನ ತೆರನಾಗಿ | ಹಿಂದೆ ಕೊಂಬರೆ ಬಿಡಲಿಲ್ಲ || ೬೫ ||
ಎರಳೆಯ ಮರಿ ಬಂದು ವ್ಯಾಘ್ರವ ಕೊಂದಂತೆ | ತೆರನಾಯಿತಲ್ಲ ಧರೆಯೊಳಗೆ |
ಮೊಲ ನಾಯ ಕಡಿಯಿತ್ತಾ ಎಂಬರು ಧರೆಯೊಳು | ಸರಿಯೆಂಬುದಾಗಿ ತೋರುವುದು || ೬೬ ||
ಗೀಜಗ ಗಿಡುಗನೊಳ್ ಕಡಿದಾಡಿದ ತೆರ ಮಂತ್ರಿ | ಮೂಗಿನಲಿ ಬೆರಳಿಟ್ಟ ನೃಪನು |
ಗಾಜಿನ ಬಳೆತೊಟ್ಟ ಬಾಲೆರಿಗೆ ಕಡೆಮಾಡಿ | ಬೀಜಕೊಂದನು ಬಿಡಲಿಲ್ಲ || ೬೭ ||
ಹುಡುಗನೆಂಬರು ಮಂತ್ರಿ ಹೋಗಿ ಕಂಡವರೆಲ್ಲ | ಅಡಗಿಸಿದ ಕಲಿ ಪಾರ್ಥನಂತೆ |
ಮೃಡನ ಮೋಹದ ಕಂದ ದಕ್ಷಾಧ್ವರವ ಹೊಕ್ಕು | ಸುಡಬಡಿದ ತೆರ ಬಂತಿಲ್ಲಿ || ೬೮ ||
ಚಿತ್ತದಿ ಕರಗುತ್ತ ಮತ್ತೆ ಬಲ್ಲಾಳರಾಯ | ಮತ್ತೊಮ್ಮೆ ಹೊರಡೆ ಹ್ಯಾಗಾಗುವುದೊ |
ಶಕ್ತಿ ಮನದೊಳುಗುಂದಿ ತಾವರೆ ಎಲೆ ಉದಕ | ಇಪ್ಪಂತೆ ಇರಲು ಮನದೊಳಗೆ || ೬೯ ||
ರಾಯನ ಬಡಧೈರ್ಯ ಪ್ರಧಾನಗೆ ತೋರಲು | ಕೇಡಿಗೆ ಬೀಜ ದೇವರಸ |
ರೂಢಿಯೊಳ್ ಬಲ್ಲಾಲ ತ್ರಾಣಿಯೆಂಬರು ಲೋಕ | ಆನೆ ಹಸಿದಾಗದೆ ಬಂತು || ೭೦ ||
ಒಂದು ಜಗಳಕೆ ಹೊರಟು ರಂಡೆಯಾದನುಯೆಂದು | ಕುಂಡಿ ಬಡಕೊಳ್ಳೆ ಸರಿಯವರು |
ತಂದೆ ನೀನಪಕೀರ್ತಿ ನಿಮ್ಮಜ್ಜರು ತಲೆ ಬಾಳ್ದ | ಇಂದಿಗೆ ಮುಳುಗಿತ್ತು ನೃಪನೇ || ೭೧ ||
ಬಲ್ಲಾಳನೆಂದರೆ ಡಿಳ್ಳಿಗೆ ಹೆಸರಾದೆ | ಹುಲ್ಲು ಬಾಡನಿಗೆ ನೀ ಹೆದರೆ |
ಎಲ್ಲರು ನಗರರಸೆ ಡಿಳ್ಳಿಯ ಸುರಿತಾಳ | ಜೊಳ್ಳು ಹೋಗೆಂದು ಉಗಿಯನೇ || ೭೨ ||
ಕುದುರೆ ಮಂದಿಗೆ ಏನು ಕಡೆಯೇ ಪಟ್ಟಣದೊಳು | ಬದಲಾಗಿ ದಂಡ ಕೂಡಿಸುವಾ |
ಈ ದಿವಸ ಕಡೆಯಾಗೆ ಮುಳುಗಿದ ಬಲಕಂಜಿ | ಎದೆಗೆಡಲು ಬಿಡುವನೆ ರಾಮ || ೭೩ ||
ಧರಣಿಮಂಡಲಕೆಲ್ಲ ಹೆಸರೊಡೆದ ಬಲ್ಲಾಳ | ಶ್ವಾನ ಮೂಳನಿಗೆ ನೀ ಹೆದರೆ |
ಅಣಕವಾಡರೆ ನಿಮ್ಮ ಕೂಡಿದ ಸತಿಯರು | ತಿಳಕೊ[ಳ್ಳು] ರಾಯ ಮನದೊಳಗೆ || ೭೪ ||
ಮಂತ್ರಿ ದೇವರಸನ ಮಾತು ನಿಶ್ಚಯವಾಗಿ | ಭೂಪ ಬಲ್ಲಾಳಗೆ ತೋರೆ |
ಮಾತಿನ ಸುಳುವಹುದು ಮುಂದೆ ಬರುವುದನೀಗ | ಜ್ಯೋತಿಷ್ಯನಂತೆ ಪೇಳಿದನು || ೭೫ ||
ಪುಟುಮಾಡಲಗ್ನಿಯ ದಿಟವೆಂಬ ರೀತಿಗೆ | ರೋಷ[ವು]ಗವಿಸಲು ನೃಪಗೆ |
ತಟ್ಟನೆ ಕರೆಸಿದ ಬಾವಾಜಿ ಮಲ್ಲಯ್ಯನ | ಇಷ್ಟ ಭೂಷಣಗಳ ತೊಡಿಸಿ || ೭೬ ||
ತುರುಗಾಯ ಬಾಲಗೆ ಮುರಿದ ಬಲ್ಲಾಳನೆಂದು | ಧ[ರೆಯರಿಯೆ] ಬಿಡದ ಕೀರ್ತಿ |
ಕೊಡುವೆನು ಬಲ ತುರಗ ಒಡನೆರಡುಲಕ್ಷವನು | ಕಡಿಯವನ ಕುಲವಂಶ ಬಿಡದೆ || ೭೭ ||
ಕಟ್ಟು ಮಾಡುವ ತೆರಕೆ ಹೊಕ್ಕು ಕಾರ್ಯವ ಮಾಳ್ಪೆ | ಮಿಕ್ಕು ಮೀರಲು ಎನ್ನ ಕೈಲಿ |
ಮತ್ತೆ ಮಾಡುವುದೇನೊ ಮರಣವು ತಪ್ಪದು | ಮಡದಿ ಮಕ್ಕಳು ನಿಮ್ಮವಯ್ಯಾ || ೭೮ ||
ಕೇಳಿರೈ ಪ್ರಧಾನ ನೀ ಹೋಗಿ ಮಂತ್ರಿಗಳೆಲ್ಲ | ಬಾವಾಜಿ[ಯಾ]ಡೊ ವಾಕ್ಯಗಳ |
ಓಂ ಎಂಬ ಅಕ್ಷರದಿ [ಚೇಳ] ಸಯವಾಗಲು ಮುಂದೆ | ಕಾರ್ಯ ಗೆಲ್ಲುವುದೆ ಶುಭದೊಳಗೆ || ೭೯ ||
ರಾಯರೊಳ್ ರಾಯನೆ ರಣಧೀರ ಬಲ್ಲಾಳ | ಪೇಳೆನಲು ನಾನೊಂದು ನುಡಿವೆ |
ಕಾಣಕೊಡದು ಕಾರ್ಯ ಆಡುವುದು ಅತಿಕಷ್ಟ | ವಾದಕ್ಕೆ ಹೇಗೆ ತೋರುವುದೊ || ೮೦ ||
ಹೇಳಯ್ಯ ಯಲ್ಲರಸ ಹಳಬರ ಮಗ ನೀನು | ಏಳು ಮೂರೆರಡು ತಲೆಯಿಂದ |
ಕೂಡಿದ ಮನೆತನಕೆ ಹೀನಾಯ ಬರದಂತೆ | ಜಾರಿಸು ಬಂದ ಕಂಟಕವ || ೫೧ ||
ಆಡುವುದತಿ ಕಷ್ಟ ಜಾಡಿಗರಿರುವಲ್ಲಿ | ಕೋಡಿನ ಕೂರ ಕಿವಿಗುಂಟೆ |
ಕೇಳುವರು ದೊರೆಗಳು ಹಾಳು ಮಾಳ್ಪರ ಮಾತ | ಚಂಡಿಗಳು [ಹಿತರೆ] ದೊರೆತನಕೆ || ೮೨ ||
ರಾಯ ಲಾಲಿಸು ಬಿನ್ನಹ ರಾಮನೊಳಗೆ ಗೆದ್ದು | ಪಾದಕೆ ಕೀರ್ತಿ ತರಲಾಪರೆ |
[ಬ]ಡ ಕಿವಿಗಳೆ ಸಾಕು ಬದಲಾಗಿ ಮೂಗನು ಕೊಡದೆ | ಸಾಗಿಸುವ ರೊಕ್ಕವ ಕೊಟ್ಟು || ೮೩ ||
ಸಾಕಿವರ ಮಾತೇನು ಕಾರ್ಯ ಸಂಧಾನವ ಮಾಡುವ | ಸೋತವರ ತೆರದಿ ಸಾಗಿಸುವಾ |
ಪೋಟ ಪುಂಡರ ಮಾತು ಕೇಳಿ ನಡೆಯಲು ಅರ್ಥ | ಪ್ರಾಣಗೇಡಾಗಿ ಪೋಗುವುದು || ೮೪ ||
ಕೊಡುವ ಇಂದಿಗೆ ರೊಕ್ಕ [ತ]ರುವ ನಾಳಿಗೆ ಕಡಿದು | ಬುಡ ಸಹಿತ ಕುಮ್ಮಟದ ಬೇರ |
ಹಿಡಿಕೊಂಬ ಕೊಡೆಯನು ರವಿ ಬಂದ ಕಡೆಗರಸೆ | ಹುಡುಗ ಮೂಳಗೆ [ಹೀ]ಗೆ ಇರದು || ೮೫ ||
ರಾಮ ಸಣ್ಣವನೆಂದು ಪಾದಕ್ಕೆ ತಿಳಿವುದು | ಭೇದ ಕಾಣದೆ ಜನನ ಸ್ಥಲದ |
ದೇವ ಜಟ್ಟಂಗಿಯ ವರದೊಳಗೆ ಪುಟ್ಟಿದ ಸುದ್ಧಿ | ಕೇಳಲಿಲ್ಲವೆ ಕರ್ಣದಲಿ || ೮೬ ||
ಅನಿತರೊಳಗೆ ಓರ್ವ ಚರನು ಬಂದನು ಹರಿದು | ಕೊನೆ ಮೂಗು ಸುಣ್ಣದ ಬೊಟ್ಟ |
ಕನಲುತ ಕೈಕಾಲು ಚಳಿಜ್ವರವು ಬಂದಂತೆ | ಕುಣಿಯುತ ಕರ ಮುಗಿಯೆ ನೃಪಗೆ || ೮೭ ||
ಬಾಯೊಳು ತಡೆಯಿಲ್ಲ ಹೇಳುತಲಿ ಬೆದರುವನು | ಗ್ರಹವು ತೊಡಕಿದ ಮರುಳಂತೆ |
ನಾಲಗೆ ತೊದಲುತ್ತ ನಾಮದ ಕಡೆಯಿಂದ | ಜೀವ ಬಂದುದು ಪಾದದೆಡೆ[ಗೆ] || ೮೮ ||
ಹೆದರ ಬೇಡವು ಪೇಳು ಬಲವೇನಾಯಿತು ಭ್ರಷ್ಟ | ರಣಬೇಡಿ ಸುಡು ನಿನ್ನ ಮಾತ |
ಒಡನೆ ಗರ್ಜಿಸಿ ನುಡಿಯೆ ದೇವರ[ಸ] ಮಂತ್ರಿಯು ಬೇಗ | ಬರೆದೋದಿದಂತೆ ಪೇಳಿದನು || ೮೯ ||
ಹೋದ ದಂಡನು ಎಲ್ಲ ಆ[ತು] ಕೊಂಡನು ರಾಮ | ಮೀನ ಬಕರಾಜ ತಿಂದಂತೆ |
ಏನು ಹೇಳಲಿ ನೃಪನೆ ಮೂರು ಸಾವಿರ ಬಲವ | ಮಾದಿಗ ಹಂಪನು ಹೊಡೆದ || ೯೦ ||
ಲಾಲಿಸಿ ಬಲ್ಲಾಳರಾಜೇಂದ್ರ ಮಂತ್ರಿಗಳು | ರಾಮನೆಂಬವನು ನರನಲ್ಲ |
ಬಾಳೆಯ ವನದೊಳು ನೂರಾನೆ ಹೊಕ್ಕಂತೆ | ಬೀದಿಯಾಗೋದು ಅಂಬಿನೆಸೆಗೆ || ೯೧ ||
ಓರುಗಲ್ಲಮ್ಮಗೆ ಹದಿನಾರು ಸಾವಿರ ಕುರಿಯ | [ತಾ]ರು ಮಾ[ರಾಗಿ] ಕಡಿದಂತೆ |
ಗೇಣುದ್ದ ಕೆಸರೇಳೆ ಬಾಣ ದೆಸೆಯಲಿ ಭೂಮಿ ಮಲೆವ | ಜೋಳದ ಹರೆ ನೆಲಕೆ ಬಿದ್ದಂತೆ || ೯೨ ||
ಈ ಪರಿ ಹೇಳಲು ಬರುತಿದೆ ನಾಚಿಕೆ | ದೆಸೆಯೊಳು ರಾ[ಮುಗ] ಭೂಪ |
ಉಸುರುವರಳವಲ್ಲ ಮೂರೆರಡು ಸಾವಿರ ಬಲವ | ಹೆಸರನಡಗಿಸಿದ ಯಮನಂತೆ || ೯೩ ||
ಈರ್ವರು ಮಾಡಿದ ಕಾರ್ಯ ನೋಡುವ ರಾಯ | ಕಲಿ ಪಾರ್ಥ ಭೀಮರಂದದಲಿ |
ಕಡೆಗೆ ಹೊಕ್ಕರು ರಾಯ ಕುಮಾರರೀರ್ವರು ಬಂದು | ಕುರಿಗಳಂದದಿ ತಲೆಯರಿಯೆ || ೯೪ ||
ಯಾರಾರು ಬಿದ್ದರು ವಜೀರ ಮನ್ನೆಯರೊಳಗೆ | ರಾಯ ಕೇಳುವನು ಮನದೊಳಗೆ |
ಕೇಳಯ್ಯ ಬಲ್ಲಾಳ ಮೊನೆಗಾರ ಬೇಲೂರ ಚೆನ್ನ | ಚೂಳಲಿ ನೆಗೆದ ಯಮಪುರಕೆ || ೯೫ ||
ಮಲ್ಲಮಾದನು [ಚೂ]ಳೆಯಲ್ಲಿ ಹುಡುಗನು ಬಿದ್ದ | ಡೊಣೆಯಿಡಲು ಕೆಂಪನು ಅಳಿದ |
ಕಲ್ಲೂರ ಕನಕನು ನೆಲ್ಲೂರ ಹನುಮಂತ | ಬಳ್ಳಾರಿ ನಿರ್ವಾಣಿ ಬಿದ್ದ || ೯೬ ||
ಬಿದ್ದನು ಬಲವಂತ ಗದ್ದುವಳ್ಳಿಯ ರಂಗ | ಮದ್ದಾನೆ ಹಿಡಿದು ಮಲಗಿಸುವ |
[ಬಿ]ದ್ದನು ಬೆಳವಾಡಿ ಯಲ್ಲನಾಯಕ ನಿಮ್ಮ | ಸಿದ್ಧರಾಜನು ಕೈಸೆರೆಯ || ೯೭ ||
ಗಾಲಿಖಾನನು ಬಿದ್ದ ರಾಗೋಜಿಖಾನನು ಬಿದ್ದ | ಮೀರಖಾನನು ಗೋರಿ ಕಂಡ |
ತೀರಖಾನನು ಬಿದ್ದ ವರ್ಧಿಖಾನನು ಬಿದ್ದ | ಕೆಮ್ಮೋರೆ ತುರುಕರು ಒರಗೆ || ೯೮ ||
ನಿಮ್ಮಡಿಗೆ ಗುರುತಾದ ಹಮ್ಮೀರರನು ಪೇಳ್ದೆ | ಪುಳ್ಳೆ ಸಾವಕೆ ಲೆಕ್ಕ ಮಿತಿಯೊ |
ನೆಲ್ಲಿಯ ಮರ ಕೊನೆಗೆ ಕಲ್ಲಿಟ್ಟ ತೆರನಾಗಿ | ಉರುಳಿತ್ತು ರಾಯ [ಲಾ]ಲಿಪು[ದು] || ೯೯ ||
ರಾಯ ಲಾಲಿಸು ಕೇಳು ರಾಮನ ಕೊಳ್ಳೆಯೊಳು | ಯಾವ ದೈವಗಳು ನಿಲ್ಲುವುದು |
ತಾಯೇನ ಪಡೆದಳು ಭೀಮ ಪಾರ್ಥರ ತೆರದಿ | ದೇವರ ಬಲ[ವಂ]ತು ಉಂಟು || ೧೦೦ ||
ಬಲವೆಲ್ಲ ಪೋಗಿರಲು ಉಳಿಯಗೊಡುವನೆ ರಾಯ | ಕಳಲೆಯಂದದಿ ಕೊರೆದಿಡುವ |
ತಿಳಿದ ಮಂತ್ರಿಗಳಷ್ಟ ಯಲ್ಲ[ರ]ಸ ನಿಂದು ನಿಮ್ಮ | ಉಳುಹಿದ ಹೀನ ಮಾನಗಳ || ೧೦೧ ||
ಹಬ್ಬದ ಕುರಿಯಂತೆ ಹರಿಸ್ಯಾಡಿ ಕಡಿದರೆ ತಲೆ | ಬಿದ್ದರೆ ಮುಂಡ ಓಡುವುದು |
[ಸುದ್ದಿ]ಯ ಕೊಡುಯೆಂದು ಎನ್ನೊಬ್ಬನ ಬಿಟ್ಟರು ರಾಯ | ನಾ [ಪಟ್ಟ ಪಾಡ]ನೆ ಶಿವ ಬಲ್ಲ || ೧೦೨ ||
ಅಂತಹ ರಣದೊಳು ಎಂತು ನೀ ಉಳಿದೆಲೊ | ಚಿಂತೆಯಲಿ ರಾಯ ಕೇಳಿದನು |
ಪಂಥದ ಮಾತೇಕೆ ಸತ್ತ ಹೆಣ ಎಳಕೊಂಡು | ಮಿಕ್ಕೆ ರಾಜೇಂದ್ರ ಬುದ್ಧಿಯಲಿ || ೧೦೩ ||
ಅನಿತರೊಳಗೆ ರಾಮ ರಣವ ಸೋಸುತ ಬರೆ | ಇದು ವೇಳೆಯೆಂದು ಚರಣಕೆರಗೆ |
ಹೆದರಬೇಡವೊ ಎಂದು ಪಿಡಿದು ಕರದೊಳು ಜುಟ್ಟ | ತುದಿ ಮೂಗಿನೊಳಗಿಟ್ಟ ನಾಮ || ೧೦೪ ||
ತೋರು ನಿಮ್ಮೊಡೆಯಗೆ ಎನಲಾಗ ಹಣೆ ಸುಣ್ಣ | ಕಾದುದು [ಎನ್ನನು] ಭೂಪ
ಬಾಲನು ಎಂದೆಂಬ ಆಲಸ್ಯ ಮಾಡದೆ | ಸಾರಿದೆ ಹುಲ್ಲನು ಹಿಡಿದು || ೧೦೫ ||
ಚರನರೆ ನುಡಿಗೇಳಿ ಮರುಳ ದೇವರಸನು | ಹೊಡೆಯೆನಲು ಬಾಯ ನೂಕೆನಲು |
ರಣಹೇಡಿ ರಂಡೇದು ಕೆಡದಿರ್ದು ಎಲ್ಲಿದೊ | ಎದೆಗೆಡಿಸುವ ಇಲ್ಲಿ ಬಂದು || ೧೦೬ ||
ಸಾಕು ಹೋಗೆಲೊ ಮಂತ್ರಿ ನೂಕಯ್ಯ ಎಲ್ಲೊಡೆವ | ನೀ ಕಡಿವ ಮೊನೆಗಾರನಿರುವೆ |
ಭೂಪ ಬಲ್ಲಾಳನ ಬುಡಕೆ ಬೆಂಕಿಯನೆಳೆಯೆ | ಆಪ್ತ ಆರುವನೆಂದು ನಡೆದ || ೧೦೭ ||
ಕೇಳಿದ ರಾಯನ ಆಳುವ ಚರನ ವಾಕ್ಯ | ಆನೆಗೆ ಮದವಿಳಿದಂತೆ |
ಜಾಣ ಯಲ್ಲರಸನು ಹೇಳಿದ ತೆರದೊಳು | ಸಾಗಿಸು ಪವುದಿಯ ಕೊಟ್ಟು || ೧೦೮ ||
ಕಪ್ಪವ ಕೊಡಲಿಕ್ಕೆ ಒಪ್ಪೆ ಬಲ್ಲಾಳ ರಾಯ | ಮತ್ತೊಮ್ಮೆ ಕಂಡ ದೇವರಸ |
ಹುಟ್ಟಿಸಿ ಛಲ ಪಂಥ ಕಿಚ್ಚನು ಎಳೆವನು | ಆ[ಹು]ತಿಯಾಗಿ ರಾಯಗೆ || ೧೦೯ ||
ರಾಯ ಬಲ್ಲಾಳನೆ ಲಾಲಿಸು ಬಿನ್ನಹ | ಹೋಯಿತ್ತೆ ಎಲ್ಲ ಬಲವು |
ತಿಳಿಯಬಾರದೆ ಭೂಪ ಅವನಿಗಿ[ಟ್ಟನೆ] ನಾನು | ನಿಮಗಿಟ್ಟ ರಾಮ ಭೂಮೀಂದ್ರ || ೧೧೦ ||
ಮಂದಮತಿಗಳ ರಾಯ ಮುಂದೆ ನೋಡಿಸಿ ನೋಡು | ತಾನೆಂದ ಮಾತಿನ ನಿಜತರವ |
ಸುಂಡನು ಕರುಗಾಯ್ತು ಬಲ್ಲಾಳ ಮೂಳಗೆ ನಿಮ್ಮ |
ತುಂಡಮೂಲನ ಮಾತ ದೇವೇಂದ್ರಗೆ ಸಮಮಾಡಿ | ಒಂದಾಗಿ ರಾಮ ಗೆಲುವಂತೆ || ೧೧೧ ||[2]
ಬಾಳ ಬಾಳಿದ ಯಲ್ಲರಸ ಮೆಚ್ಚಿನ ಮಂತ್ರಿ | ಗಳಿಸಿಕೊಂಡಿರುವ ನಿಮ್ಮೊಡವೆ |
ಉಳುಹಿಕೊಳ್ಳಲು ರೊಕ್ಕ ಕೊಡಿಸಿ ನಿಮ್ಮೊಳು [ಪವು]ದಿ | ಒಳ ಬಿರಿದು ರಾಮಗೆ ಎ[ಮ್ಮೆ] || ೧೧೨ ||
ಕಪ್ಪ ಒಪ್ಪಿದ ಮೇಲೆ ಕಡೆಗೆ ಪಟ್ಟದ ರಾಣಿ | ಬಿಟ್ಟು ಏಳೆನೆ ಕೊಡಬೇಕು |
ಲಕ್ಷ ಕುದುರೆ ಮಂದಿ ಕಟ್ಟಿನ್ನು ಫಲವೇನು | ಮುಕ್ಕಗೆ ಹೆದರಿ ಹೊನ್ನ ಕೊಡಲು || ೧೧೩ ||
ಮಗ [ನೊ]ಯ್ವ ಕಪ್ಪವ ಬೆಳಗಾಗೆ ಅಪ್ಪನು ಬಂದು | ಬಿಡು ನಿನ್ನ ಭೂಮಿಯನೆಂಬ |
ಕೊಡಬೇಕು ತಲೆಯೊಳು ಹಡಲಿಗೆಯನು ಹೊತ್ತು | ತಿರಿದುಣ್ಣಬೇಕು ನಾಡೊಳಗೆ || ೧೧೪ ||
ನಿಜ ತರದ ಮಾತರಸೆ ನಿಮ್ಮ ಪಾದಕೆ ಹೇಗೊ | ಹುಸಿಯಾಗೆ ಎನಗಾಜ್ಞೆ ಮಾಡು |
ಮುಸುಕುನ ಮಾತಿದ ರಾಯ ನಿಜವೆಂದು ತಿಳಿದಾಗ | ಮೆಚ್ಚಿದ ತನ್ನ ಮಂತ್ರಿಯನು || ೧೧೫ ||
ಯಲ್ಲರಸನೆಂಬವನು ಜೊಳ್ಳ ಮಾಡುತಲಿರ್ದ | ಬಲ್ಲ ದೇವರಸನು ಕಾದ |
ಹುಲ್ಲು ಕೊಯ್ವನ ಮಾತ ಹನುಮ ಭೀಮನ ಮಾರಿ | ಒಳ್ಳೆವನಾಗಿರು ಎಮಗೆ || ೧೧೬ ||
ತಿಳಿದು ನೋಡಲು ರಾಯ ಸುಳುವವದು ಬರುವಂಥ | ಮುಳುಗಿಸುವನು ಉರನಾಮ |
ಒಳಗು ಬೀಳದೆ ಅವನು ಈ ಬಗೆಯ ಕೊಳ್ಳಲುಯೆಂದು | ಪಿಡಿದು ನಾಲಗೆಯ ಕೀಳಿಸುವ || ೧೧೭ ||
ಆಗಲಿ ಅದಕೇನು ಕೀಳಿಸುವೆ ಹಲ್ಲನು | ಮೂಳ ರಾಮುಗನ ಕಡಿದಟ್ಟಿ |
ಸಾಲು ಶೂಲವ ನಡೆಸಿ ಪೀಳಿಗೆಯೆಂದಂತೆ | ಕಾಲವ ಮನೆ ಕೂಡಿಸಿದ || ೧೧೮ ||
ಕಾವಲ ಮಾಡಿಸಿ ಆಗ ಮಂತ್ರಿಯ ಮನೆಯ | ಸುವರ್ಣ ರಾಯರ ಕಾರ್ಯ |
ಕೇಳುವ ಕರ್ಣಗಳು ಕೀಳಾದ ಹಿತ್ತಾಳೆ | ಬಾಲರಂದದಿ ಮನೆ ಬುದ್ಧಿ || ೧೧೯ ||
ಕಾಲನರ್ಭಟದೊಳು ರಾಯ ಬಲ್ಲಾಳನು | ಭೇರಿಯ ಹೊಡೆಸಿ ಕೋಪದಲಿ |
ಕೂಡಲು ಕರಿ ತುರಗ ಬೇಡಲು ಅಭಯವನು | ಹಾ ನೆಗವುತಲಿ ಬಂಟರು || ೧೨೦ ||
ನಾದವಾಗಲು ಭೇರಿ ಕೂಡಿತ್ತು ಎಂಬತ್ತು | ಸಾವಿರ ಕುದುರೆ ಕಾಲಾಳು |
ಮಾರಿಯ ಮುಖದವರು ಮಲ್ಲ ಸಾಧನದವರು | ಆನೆಯ ಪಿಡಿದು ನಿಲ್ಲಿಪರು || ೧೨೦ ||
ವಾದವಾಗಲು ಸುರಗಿಯು ಬುಡಕೊಂದನು ದ್ರುಂಬು | ಹಿಡಿಮೀಸೆ ವ್ಯಾಘ್ರನಂಥವರು |
ದಡಿಗ ದೈತ್ಯರನಾದಿ ಕೊಡು ವೀಳ್ಯವೆನುತಲಿ | ಒದಗಿತ್ತು ಎಂಟು ಸಾವಿರವು || ೧೨೧ ||
ಸಾಗಿ ಬರುವರು ದೊಡ್ಡ ಗ್ರಾಮ ಭಂಗಿಗೆ ಉಂಬ | ತೂರುತ ಮದ್ದಾನೆಯಂತೆ |
ಏಳಯ್ಯ ತಡವೇಕೆ ಹದಿನೇಳು ಸಾವಿರ ಮಂದಿ | ಮೂಳ ರಾಮನು ಎಮಗಿರಲು || ೧೨೨ ||
ಚಕ್ರವು ಕೊರೆದೀಟಿ ಮುಕ್ಕಣ್ಣ ನೇಜವು | ಬತ್ತಳ ಬಾಣಿಯ ದೊಣ್ಣೆ |
ಕುಪ್ಪಳಿಸಿ ಹಾರುವ ಕೂಡಲು ಕಾಲಾಳು | ಎಂಬತ್ತು ಸಾವಿರ ನೆರೆಯೆ || ೧೨೩ ||
ಕರಿದು ಕಂಪಿನ ಮೇಲೆ ಹದಿನಾರು ಸಾವಿರ ಮಂದಿ | ಬಿಳಿದು ಬೂದನು ಮೂರು ದಶಕ |
ಒಡನೆ ಶೃಂಗರವಾಗಿ ಹುದಿರಿನೊಳಿಳಿಯಲು | ತರ ಹೇಳೆ ಪಟ್ಟದ ತುರಗ || ೧೨೪ ||
ಎಂದನು ಬಲ್ಲಾಳ ರುದ್ರಕೋಪವ ತಾಳಿ | ಕ್ಷುದ್ರನು ಕಂಡ ದೇವರಸ |
ಬಿದ್ದು ಪಾದದ ಮೇಲೆ ಪಾಲಿಸೆನಗೆ ವೀಳ್ಯ | ಒದ್ದು ಪಿಡಿ ತರುವೆ ರಾಮುಗನ || ೧೨೫ ||
ನಾಯ ಪಿಡಿವನ ಮೇಲೆ ನೀವು ಹೋಗಲು ಸಲ್ಲ | ನಾವಿರುವುದೇಕೆ ನಿಮ್ಮೆಡೆಯ |
ಕಾಯ ಸಹಿತ ತರಲೋ ಕಡಿದು [ಮುಂಡವ] ತರಲೋ | ರಾಯ ಪಾಲಿಪುದೆನಗೆ ವೀಳ್ಯ || ೧೨೭ ||
ಅನಿತರೊಳಗೆ ನಿತ್ಯ ಅಳಿದು ಜನಿಸುವನ ಕಡಲ | ಜನನಿ ಗರ್ಭ[ದೊಳು] ಸಾರಿದನು |
ತಿಮಿರವಾಗಲು……. ರದಿ ಗೆಣೆಯ ಮೂಡಲು ದಿಕ್ಕ | ನಡರಲು ರಾತ್ರಿಯೆ ಪಗಲೆಸೆಯೇ || ೧೨೮ ||
ರಾಯ ಬಲ್ಲಾಳನು ವಾಲಗವನು ಹರಸಿ | …………………… ಪುರವ |
ಮೇಳ ತಾಳಗಳಿಂದ ಕಾಳೆ ಸಾರುವ ಖಡ್ಗಾ | ಯುಧವ ಪಿಡಿದು ತಿರುಗುವರು || ೧೨೯ ||
ನಾಗಲೋಕದೊಳಿಪ್ಪ ದೇವಪುರುಷರ ಬೆಳಗಿ | ತೋರಿ ಹೇಮಾದ್ರಿ ಸುತ್ತಿಸಿ |
ರಾಯ ಕಂಪಿಲನಾತ್ಮ ಕುಮಾರ ಮಾಡುವ ಕಾರ್ಯ | ರವಿ ನೋಡಬೇಕೆನುತಲಡರೆ || ೧೩೦ ||
ರಾಯ ಬಲ್ಲಾಳನು ಹಾನಿ ನೋಡೆನು ಎಂದು | ಸೋಮನು ಕಳೆಯಗುಂದಿದನು |
ಕೂಗಲು ಕುಕ್ಕುಟ ರಾಗದೋರಲು ಪಿಕ | ಆಗ ಚರಿಸುವ ಖಗ ಮೃಗವು || ೧೩೧ ||
ಭೃಂಗವು ಚರಿಸಾಡೆ ಪದ್ಮಗಳು ಮುಖ ಬಿಚ್ಚೆ | ಮಂದಮಾರುತನಾಗ ನಡೆಯೆ |
ಇಂದ್ರಗೋಪಗಳ್ಕೋಟಿ ಪಂಜನು ಪಿಡಿದಂತೆ | ಜನಂಗಳಿಗೆ ಮುಖವನೆ ತೋರೆ || ೧೩೨ ||
ಉದಯವಾಗಲು ರಾಯ ರಾಮ ಹರನ ನೆನೆದು | ಗುರುದೇವ ಮಾತೆಯ ಪಿತರ |
ಮನೆಸ್ವಾಮಿ ಜಟ್ಟಂಗಿ ರಾಮನೆ ನೆನೆದು | ಧರಿಸಿದ ರಾಮ ಭಸಿತವನು || ೧೩೩ ||
ಉಟ್ಟರು ಬಹು ಬಗೆಯ ವಸ್ತ್ರಾಭರಣಗಳ | ಮುತ್ತು ಮಾಣಿಕ ವಜ್ರಗಳನು |
ಮೃಷ್ಟಾನ್ನಭೋಜನವ ಪುತ್ರಿರೀರ್ವರು ಮಾಡಿ | ಕುಟ್ಟೆನಲು ಹ[ಲ್ಲೆಯ] ಭೇರಿ || ೧೩೪ ||
ಹಲ್ಲಾ ನಾದಗಳನು ಎಲ್ಲರು ಕೇಳಲು | ಮತ್ತಲ್ಲಿ ಶೃಂಗರವಾಗಿ ಬರಲು |
ಹುಲ್ಲೆಯ ಮರಿಯಂತೆ ಹಾರಿ ರಾಮನು ಮಂದಿ | ಏಳಯ್ಯ ಭೂಪ ಕೊಡು ವೀಳ್ಯ || ೧೩೫ ||
ಭೇರಿಗಳಾದವು ಭೂಮಿ ತಲ್ಲಣಿಪಂತೆ | ಭೋರಿಡಲು ರಣಗಾಳೆ ಬಿರಿದು |
ಏರಲು [ಕಾಳಗಕೆ] ಎಂಟು ಭಾಗದ ಮೇಲೆ | ಕಾಲಾಳು ತುರಗ ಭೋರ್ಮೊರೆದು || ೧೩೬ ||
ಸರಳಂಬು ಸವಲಕ್ಷ ಎರಡು ಕೋಟಿಯು ಬಾಣ | ಪುರಕೆ ಮುಂಗಾರು ಸುರಿದಂತೆ |
ಹೊಗಲೇರಿ ಕಾಟಣ್ಣ ಅಗಳು ಜೀಬಿಯ ಹಿಡಿದು | ನಡುಗಿಸಲು ಊರು ತಲ್ಲಣಿಸೆ || ೧೩೭ ||
ಬೊಬ್ಬೆಯರ್ಭಟದೊಳು ಮುದ್ದನು ಹೊಗಲೇರಿ | ನುಗ್ಗಲು ವರುಣ ಭಾಗದಲಿ |
[ವಕ್ರ] ಜೀಬಿಯ ಹಿಡಿದು ಬಿದ್ದು ಅ[ಲಗ]ನೆ ಹಿಡಿದು\ ಮಗ್ಗದ ಗೂಳ್ಯವನು ಸುಲಿಯೆ || ೧೩೮ ||
ಕೋಳಾಹಳದೊಳು ತಳಮಳಗೊಳಿಸುತ್ತು | ಮೊನೆಗಾರ ವೀರಸಂಗಯ್ಯ |
ತುಳಿಸಿದ ಮೂರಾರು ಸಾವಿರ ಬಲದೊಳಗೆ | ನಡುಗಿಸಿ ಹಳೆಯನ ಬೀಡ || ೧೩೯ ||
ಯಮನ ಭಾಗದಿ ರಾಮ ಎತ್ತಗೊಡದೆ ತಲೆಯ | ಹೊಗಲೇರಿ ಕೋಟೆ ಬುಡಕಾಗಿ |
ಎಳೆದು ಬಾಣವು ಬತ್ತಿ ಸುರಿದು ಅಂಬಿನ ಮಳೆಯ | ಹೊರ ಕೋಟೆ ಹಲ್ಲಾ ಮಾಡಿದರು || ೧೪೦ ||
ಚರರೋಡಿ ಬಂದಾಗ ಅರುಹಲು ನೃಪನಿಗೆ | ಮರಣದ ತೆರಬಂತು ಪುರಕೆ |
ಉರಿದೆದ್ದು ಬಲ್ಲಾಳ ಯಮನ ಗರ್ಜನೆಯಿಂದ | ಮೆರೆವ ಹಜಾರಕ್ಕೆ ಬರಲು || ೧೪೧ ||
ರಾಜೇಂದ್ರ ನೃಪ ಬಂದು ಚಾವಡಿಯನೇರಲು | ಕಾಲಾಳು ಕರಿ ತುರಗ ನಡೆಯೆ |
ಮೇಲಾದ ಮಂತ್ರಿಯು ದೇವರಸ ಕಟ್ಟಿಗರು | ರಾಯಗೆ ಕರಗಳ ಮುಗಿಯೆ || ೧೪೨ ||
ರಾಯ ನೋಡಿದ ತನ್ನ ಮೋಹ[ರ] ಗಡಣವ | ಯಾರು ನಿಲ್ಲುವುದು ಈ ಬಲಕೆ |
ಭಾವಜ ಮಲ್ಲಯಗೆ ದೇವರಸ ಮಂತ್ರಿಗೆ | [ನೇ]ಮಿಸಿ ಜಗಳ ಈರ್ವರಿಗೆ || ೧೪೩ ||
ಲಕ್ಷವರೆಯ ಬಲವ ಕೊಟ್ಟು ಇರ್ವರ ಕೈಯ | ಮುತ್ತಿನ ಚಾಮರ ಅಹುದೆ |
ಮುಕ್ಕ ರಾಮನ ಕಡಿದು ಮೀಸೆಯನುಳುಹೆಂದು | ಪುತ್ರಗೆ ಮಿಗಿಲಾಗಿ ಕಾಣೆ || ೧೪೪ ||
ನಾನಾ ತಂತ್ರಗಳಿಂದ ನೋಡಿ ಕಾರ್ಯವ ಮಾಡಿ | [ಸೈನಿಕರ] ಮರೆಯನು ಹಿಡಿದು |
ಮ[ಲೆವ ಹೆಬ್ಬು]ಲಿಯಾಗಿ ಇರುವ ರಾಮನುಯೆಂದು | ಜ್ಞಾನದೊಳ್ ಜಗಳ ಮಾಡುವುದು || ೧೪೫ ||
ಆನೆ ಆಡಿಗೆ ಮುರಿದು ಓಡಿ ಬರುವುದೆ ರಾಯ | ಬೇಡಗೆ ಅಂಜುವನೆ ಜಟ್ಟಿ |
ರೂಢಿಗೀಶನ ಬೆನ್ನು ಮರೆಹೊಗಲು ತಾರದಿರೆನೆ | ಶ್ವಾನ ಮುದ್ರೆಗಳ ಹಾಕಿಸೆಮಗೆ || ೧೪೬ ||
ಕೂಲಿ ದನಗಳ ಕಾಯ್ವ ಮೂಳ ಹುಡುಗನ ಮಾತ | ಹೇಳೋರೆ ರಾಯ ಈ ಬಗೆಯ |
ಕೋಳಿಯ ಪಿಡಿದಂತೆ ಕಾಲ್ವಿಡಿದು ಧಾತ್ರಿಗೆ ಬಡಿದು | ಆತು ಕೊಂಬೆನು ಅವನ ಬಲವ || ೧೪೭ ||
ದಿಟ್ಟಗಾರರು [ಏಳೆ] ಮೆಚ್ಚಿ ಬಲ್ಲಾಳರಾಯ | ಇಟ್ಟು ಆಭರಣವ ತೊಡಿಸಿ |
ಕುಟ್ಟಲು ರಣಭೇರಿ ಕುಂಜರ ಮುನ್ನೂರು | ದಟ್ಟೈಸಿ ಪುರವನು ಪೊರಡೆ || ೧೪೮ ||
ಕರಿಘಟೆ ಕಾಲಾಳು ನಡೆಯಲಾರ್ಭಟದೊಳು | ಹುಡಿಯಾಗೆ ಧರಣಿ ಜಜ್ಝರಿಸಿ |
ಹೊಡೆವ ಭೇರಿಯ ನಾದ ನುಡಿವ ತಾಳಗಳಿಂದ | ಗುಡುಗೇರಿದಂತೆ ಮುಂಗಾರು || ೧೪೯ ||
ಹನ್ನೆರಡು ನವಜ ಮುನ್ನೂರು ನವಗಾಳೆ | ಚೆನ್ನಗಾಳೆಯು ಕಡೆ ಮೊದಲೆ |
ಬ್ರಹ್ಮಾಂಡವದಿರ್ವಂತೆ ಬಂದು ಬಾಗಿಲ ತೆರೆಸಿ | [ಕಾ]ಮೇಘದಂದದಿ ಹೊರಡೆ || ೧೫೦ ||
ಹೊಡೆಯಲು ಜಂಡೆಯವ ಮರಡಿ ಮೂಡಲ ಗುಡ್ಡ | ಎಡ ಬಲ ದಂಡಲ್ಲಿ ಇಳಿಯೆ |
ಬಿದಿಗೆ ಚಂದ್ರನ ರೂಪ ರಾಮ ಮುತ್ತಿಗೆ ತೆಗೆದು | ಜಲದಗೆರೆಯ [ಎರಿ]ಗಿಳಿಯೆ || ೧೫೧ ||
ಕೇಳಯ್ಯ ಜಟ್ಟಂಗಿ ನೃಪನೆ ನಿಮ್ಮಯ್ಯನ | ಮೇಲಿನ್ನು ಬರುವಂಥ ದಂಡ |
ಮೂದೇವ ಬಲದೇವ ಮಿಗಿವುದಲ್ಲದೆ ತನ್ನ | ತೋಳ ಶಕ್ತಿಯಲವನುಳಿವ || ೧೫೨ ||
ಚೆಂದವಾಯಿತು ಸ್ವಾಮಿ ಚೆಲ್ವ ಪ್ರಸಂಗವ | ಇಂದು ಕೇಳಿದೆ ಕರ್ಣ ತುಂಬ |
ಅಂಬುಧಿ ಕಡೆಗಂಡ ಬಿಂಬದ ಫಲ ಪೋಗಿ | ಇಂದಿಗೆ ಹರಸಿ ವಾಲಗವ || ೧೫೩ ||
ಧರೆಗಧಿಕ ಹಂಪೆಯ ವರ ಪುಣ್ಯಕ್ಷೇತ್ರದ | ಪುರಹರನೆ ವಿರುಪಾಕ್ಷಲಿಂಗ |
ತರಳ ರಾಮನು ಒಂದು ರಣವ ಗೆಲಿದು ಮತ್ತೆ | ಎರಡು ಜಗಳಕೆ ನಾಲ್ಕು ಸಂಧಿ || ೧೫೪ ||[3]
[1] + ಬಲ್ಲಾಳನ ಯರಡನೆಯ ಸಂಧಿ. ಶ್ರೀ ಗುರು ಬಸವಲಿಂಗಾಯನ್ನಮಃ | ಹಂಪಿ ವಿರುಪಾಕ್ಷ ಸ್ವಾಮಿಯವರ ದಿವ್ಯಾಚರಣಾರವಿಂದಾನೇ ಗತಿ ಮತ್ತೀ || ನಿರ್ವಿಘ್ನ ಮಸ್ತು || ಬಲ್ಲಾಳನಾದೊಡ ಜಗಳಾದ ಸಂಧೀ || (ಮೂ)
[2] ಇಲ್ಲಿ ಎರಡು ಪದ್ಯಗಳು ಸೇರಿಕೊಂಡಂತಿದೆ (ಸಂ)
[3] + ಅಂತು ಸಂಧಿ ೪ಕ್ಕಂ ಪದನು ೬೮೩ಕ್ಕಂ ಮಂಗಳ ಮಹಾಶ್ರೀ. (ಮೂ)
Leave A Comment