[1]ಶ್ರೀಗುರು ಪ್ರಭುರಾಯ ಮಾಯನು ಗೆಲಿದಂಥ | ತಾವು ತಂಗಿಲ್ಲದ ಭಯವು |
ವೇದಪುರಾಣಕೆ ನಿಲುಕದ ಅಲ್ಲಮ | ರಾಯ ಕೊಡೆನಗೆ ಸನ್ಮತಿಯ                    || ೧ ||

ತಾವರೆ ಗೆಣೆಯನ ಭಾಳದೆ ಸೂಡಿ[ದ]ನೆ | ಹೂಡಿ ನರಬೊಂಬೆ ಸೂತ್ರಗಳ |
ಆಡಿಪ ಅಖಿಳ ಬ್ರಹ್ಮಾಂಡಲೋಕವನು | ದೇವ ಪಾಲಿಸು ಸನ್ಮತಿಯ                  || ೨ ||

ಮುಂದಣ ಶ್ರುತಿ ಎನಗೆ ತುಂಬಿಹದು ಹೃದಯನೊಳ್ | ಇಂಬುಗೊಂಡೆನ್ನ ಶಾರದೆಯೆ |
ಗಂಧದ ಮರದೊಳು ಶ್ರೀಗಂಧವು ಮರದಂತೆ | ಒಂದಿಸು ಕೃತಿಯ ನಡೆವಂತೆ       || ೩ ||

ತಾವರೆ ಗೆಣೆಯನು ತಾಯೊಡಲಗಂಡ ತಾ | ಏರಿದ ರಥವ ಪೂರ್ವದಲಿ |
ರಾಯನು ಜಟ್ಟಂಗಿಕುಮಾರನುದಯದಿ | ಸ್ನಾನಪಾನಗಳಾಗಿ ನಡೆಯೆ               || ೪ ||

ಕರಿ ತುರಗ ಬಲದೊಡನೆ ಸದರಿಗೆ ನಡೆಯಲು | ಚದುರ ಮಂತ್ರಿಗಳು ಮನ್ನೆಯರು |
ಗುರುರಾಯ ಹರಪೂಜೆ ಮಾಡಿ ವಂದನೆಗೆಯ್ಯೆ | ಪರಮಾನ್ನ ಸವಿದು [ಏಳಿದನು]    || ೫ ||

ಸದರಿಗೆ ಬರಲಾಗ ದೊರೆಬಾಲನಿದಿರೆದ್ದು | ಕರಮುಗಿದು ಸಾಷ್ಟಾಂಗವೆರಗಿ |
ಕರಹಸ್ತಲಾಗದೊಳ್ ಸದರಿಗೆ ಬಿಜಗೊಳಿಸಿ | ನಡೆಸಬೇಕೆನ್ನ ಕೃತಿ ಮುಂದೆ           || ೬ ||

ಬಾಲ ನಿಮ್ಮಯ್ಯನ ಲೀಲೆಯನೊರೆವೆನು | ಲಾಲಿಸು ಮಗನೆ ಪ್ರೀತಿಯಲಿ |
ಒಂದೆರಡು ಮಾಸಗಳು ಕಳೆದು ಹನ್ನೆರಡಾಗೆ | ತೋರುವ ಚಿನ್ನಭಿನ್ನಗಳ             || ೭ ||

ನಗುವನು ಕಿಲಿಕಿಲಿ ನಲಿವನು ನ[ವಿಲಂ]ತೆ | ಕುಣಿವ ಕಾಳಗಗತಿಯೊಳಗೆ |
ಘಲಿಘಲಿಯೆಂಬ ಕಾಲ್ಗೆಜ್ಜೆಗಳಿಂದ | ಪಲ ಬಗೆಯ ರತ್ನದೋರುವನು                  || ೮ ||

ಅಂಬೆಗಾಲಿಡುವನು ತುಂಬಿಯೆ ಮೆರೆಯುತ | ತಾಯೆಂದರೆ ಮುತ್ತನು ಕೊಡುತ |
ಚಂದ್ರನು ಮುಂಬರಿದು ವರುಣಾದ್ರಿ [ಲಿ] ಬೆಳೆವಂತೆ | ದಿನಕೊಂದು ಕಳೆಯದೋರುವನು     || ೯ ||

ಆಡುವನರಗಳಿಗೆ ಕಾಡುವ ಕೆಲವೊತ್ತು | ಗೋಡೆಕಂಬನ ಹಿಡಿದು ನಡೆವ |
ನಡೆವನು ತಪ್ಹೆಜ್ಜೆ ಪಿಡಿದರೆ ಕರವನು | ನುಡಿವನು ಕೊಡಲುಗೀರ್ಶ್ವಣವ               || ೧೦ ||

ತಾತಿಯ ಕೊಡುವನು ಮಾತಾಡೆ ಮೃದು ನುಡಿಯನು | ಪ್ರೀತಿಯ ಸಲಿಸಿ ಪಡೆದವರ |
ಭೂತೇಶನಣುಗನ ಕೋಪಾಗ್ನಿ ಬೀರಿ ತಾ | ರಾಪು ಮಾಡುವನು ರಚ್ಚೆಯಲಿ           || ೧೧ ||

ಕಾಡುವನು ಕೆಲವೊತ್ತು ಮಾಡಿ ರಚ್ಚೆಯ ಮಾಡಿ | ಜೋಲಿದೋರಿದರೆ ನಯನಕ್ಕೆ |
ಕ್ಷೀರ ಸಕ್ಕರೆ ಎರೆದು ದಾದಿಯರು ಕೂಗಲು | ಜೋಗುಳದ ಸ್ವರವ ಲಾಲಿಸುತ        || ೧೨ ||

ಜೋಗುಳ ಪದ:

ಜೋ ಜೋ ಎನ್ನಿರೆ ಬಾಲೆವೆಣ್ಣುಗಳು | ನಮ್ಮ
ದೇವ ಜಟ್ಟಂಗಿಯ ವರದ ರಾಮಯ್ಯಗೆ ಜೋ ಜೋ ||

ಬೆಳ್ಳಿಯ ತೊಟ್ಟಿಲಿಗೆ ಚಿನ್ನದ ಗೊಣಸು |
ಬಣ್ಣ ಬಳಿದು ದುಕೂಲಾಂಬರವ ಹಾಸಿ |
ಕಮ್ಮೆಣ್ಣೆ ಕಸ್ತುರಿಯನೊತ್ತಿ ನೀರೆರೆದು ಜೋ ಜೋ                                     || ೧೩ ||

ಅರಳೆಲೆ ಮಾಗಾಯಿ ಬೆರಲಿಗುಂಗುರವು |
ಹುಲಿಯುಗುರು ಅಪರಂಜಿ ಉಡಿದಾರ ಡಾಬು |
ಕಡಗ ಕಾಲಂದುಗೆ ಕುಂದಣದ ಗೆಜ್ಜೆ |
ಜಡೆಗೆಲ್ಲ ಬಿಳಿಮುತ್ತುಗಳನೆ ಧರಿಸಿ ಜೋ ಜೋ                                       || ೧೪ ||

ಬಾಲನ ಲಾವಣ್ಯ ಶ್ರೀನೀಲ ಹರಿಯು |
ಕುಮಾರಗೆ ಮಿಗಿಲಾದ ಶಕ್ತಿ ಸಾಹಸದಿ |
ದೇವೆಂದ್ರಸುತ ಪಾರ್ಥ ಮೂರು ಖಂಡವನು |
ಆಳುವ ವೈರಿಗೆ ತಲೆಬಾಗದಿಹ [ನು] ಜೋ ಜೋ                                     || ೧೫ ||

ಸಾಂಗತ್ಯ:

ವರುಷೊಂದು ಮಾಸಾಗಿ ಮಾಸೊಂದು ದಿನವಾಗಿ | ಹರಕೃಪೆಯೊಳಗೆ ಬೆಳೆಯುತಲಿ |
ಬಿದಿಗೆ ಚಂದ್ರನು ಬೆಳೆದೊಮ್ಮೆ ಬರುವಂತೆ | ನಡೆದಾಡುವರಮನೆ ಹೊರಟು         || ೧೬ ||

ಕಾಮನ ಕಲೆಯುಳ್ಳ ಕೋಮಲೆ ರತ್ನಿಯು | ಬಾಲನ ನೋಡಿ ಮುದ್ದಾಡಿ |
ಉರಿದ ಮನ್ಮಥನಿಲ್ಲಿ ಮರಳಿ ಜನಿಸಿದನೆಂದು | ನೆರೆಯಬಹುದೆ ಪ್ರಾಯ ಬರಲು     || ೧೭ |

ಲಾವಣ್ಯ ನೋಡಿದರೆ ಕಾಮದಲು ಸ್ತ್ರೀಯರಿಗೆ | ಕಾಮಹರನ ಬಾಧೆ ಘನವು |
ತಾಳಲಾರದೆ ತಾಪ ತರಳದ ಬಿಗಿದಪ್ಪಿ | ಮೋಹದಿ ಗಲ್ಲವ ಕಡಿದು                   || ೧೮ ||

ಆಡಿಸುವರು ಒಯ್ದು ಎಡಬಲದ ರಾಯರ | ಸ್ತ್ರೀಯರು ಪ್ರಿಯದಿ ತನುಜನ |
ರಾಯ ಕಂಪಿಲನೊಡನೆ ಪೋಗಿ ಸದರಿಗೆ ಕುಳಿತು | ನೋಡುವನು ವಾಲಗದ ಸುಳುಹ        || ೧೯ ||

ರಾಣಿ ಹರಿಹರದೇವಿ ರಾಯನೊಡನೆ ಪೇಳಿ | ಬಾಲರಿಗೆ ವಿದ್ಯೆ ಸಾಧನವ |
ಮಾಡಬೇಕೆಲೆ ರಾಯ ಮಕ್ಕಳು ಬರುವಂಥ | ಸಾಲೆಯೊಳ್ಗುರು ಪೂಜೆ ಮಾಡಿ        || ೨೦ ||

ಸಾಕಿದ ಮಗ ಮುದ್ದು ಕಾಟಣ್ಣ ರಾಮಯ್ಯ | ಹಾಕಲು ಗುರುವಿದ್ಯೆ ಮಠಕೆ |
ಓಂ ನಾಮ ಕಾಕುವ ಪಠಿಸಿ ಕಲಿತರು | ಬೇಕಾದ ಮಗ್ಗಿ ಗಣಿತಗಳ                    || ೨೧ ||

ಭೂಮಿ ಅಕ್ಷರವೆಲ್ಲ ಸಾಧಿಸಿ ಕಲಿತರು | ವಾಲಿ ಹಲಗೆಯಲಿ ಓದುವರು |
ಆದಿಯಲಿ ಆದಂಥ ವೇದ ಪುರಾಣಗಳ | ಭೇದ ಭೇದಗಳನೆ ತಿಳಿದು                  || ೨೨ ||

ಭಾರತ ರಾಮಾಯಣ ಚೋರತನ ಕಥೆ | ಕಾರ್ಯ ಕದನಗಳು ಜೈಮಿನಿಯು |
ಕೇಳುತ ಬಾಲರಿಗೆ ಜೀವ ಪಲ್ಲಟವಾಗೆ | ಮಾಡಬೇಕವರಂತೆ ನಾವು                  || ೨೩ ||

ಯಾವ ಕಾಲದ ಮಾತು ಭೂಮಿರಲು ನಡೆವುದು | ಕಾಯಳಿಯೆ ಕೀರ್ತಿ ಧರೆಯೊಳಗೆ |
ಭೂಮಿ ಪಾರ್ಥರ ತೆರ ದೀಕ್ಷೆ ತೊಡೆದು ಬಾಳ ನೃಪನು | ಶ್ವಾನ ಮ[ರೆ]ದಂತೆ ಬಾಳುವೆನು   || ೨೪ ||

ಬರುವ ಸಾಲೆಯ ಬಿಟ್ಟು ಗರುಡಿ ಸಾಧನದೊಳಗೆ | ಮುರಿಯುತ ಕಂಬದ ದಂಡೆಗಳ |
ತಿರುವರು ದಂಡನು ಕರಕೆರಡು ಮಣವಿನ | ಧನುರ್ವೇದಗಳನು ಸಾಧಿಸಲು         || ೨೫ ||

ಕಲಿವರು ತಮ್ಮೆರಡು ಕರಕೆ ಜೋಡಿಲವೆಂದು | ಬಿಡಲಿಯಂಬು[ಗ]ಳ ಸಾಧನವ |
ನವಖಂಡ ಭುವನದಿ ನಡೆವ ಮಾತುಗಳನು | ಕಲಿವರು ಪಲ ಬಗೆಯ ಭಾಷೆ         || ೨೬ ||

ಆರೆ ಪಾರಸಿ ಮಾತು ಅರವು ಕೊಂಕಣ ತೆಲುಗು | ಗೀರ್ವಾಣ ತುಳುವ ಮಲೆಯಾಳ |
ಭೂಮಿ ಬ್ರಹ್ಮಾಂಡದೊಳ್ನುಡಿದ ಮಾತುಗಳನು | ಸಾಧಿಸಿ ಕಲಿಯೆ ಸ್ವರಗಳ          || ೨೭ ||

ಎಳಗನ ಮೇಲೇರಿ ಪಳಗಿಸಿ ಇರ್ವರು | ಬಿಡುವರು ಬೀದಿಗೋಲುಗಳ |
ತಿರುಗುವ ಚಳಕತ್ವತನವ ರಾಯನು ನೋಡೆ | [ಗಿಡುಗನ]ಮೇಲೆ [ಪಳ]ಗಿಪರು     || ೨೮ ||

ಬಾಲ ಬುದ್ಧಿಯ ಕಳೆದು ಮತಿ ಸಲಿಸಾಗಲು | ನಿತ್ಯ ಸ್ವಾರಿ ಶಿಕಾರಿ ಮಾಡುವರು |
ಕಾಲಾಳು ಕರಿತುರಗದೊಡನೆ ಬಸವನ ಗಿರಿಯಲಾಗ | ಬೇಂಟೆಯನಾಡಿ ದಿನಚರಿಯ        || ೨೯ ||

ಇರುಳೊಂದು ದಿನದೊಳು ಗ್ರಹಿ ಮನದೊಳು ರಾಮ | ರಣರಂಗವಾದ ಭಾರತವ |
ಅವರಾಹವದೊಳು ಕಡಿದಾಡಿ ಮಡಿದರು | ಭುವನವಿರಲು ಶಾಶ್ವತವು               || ೩೦ ||

ಕಾಯಗಳು ಅಸ್ಥಿರವು ಯಾರಿಗೆ ನೆಲೆಯುಂಟು | ಮಾಡಿದ ಕೀರ್ತಿ ಅಪಕೀರ್ತಿ |
ರೂಢಿಯೊಳ್ ರಣಭೂಮಿ ಚಂದ್ರರಳ್ಳನಕ | ವೆಂದಾಡುವ ರಾಮ ಬಲದೊಳಗೆ        || ೩೧ ||

ಹಿರಿಯಾತ ನೀ ಕೇಳು ದೊರೆಗಳಾತ್ಮದಿ ಬಂದು | ಗುರುವು ಕೊಡುವನು ಬಾಳ್ವ ಮನುಜ |
ಕುರಿಯ ಜನ್ಮ ಕಷ್ಟ………. ತಾಳೆ | ಯಮನಿಗೆ ಗುರು ಕೀರ್ತಿ ಇಲ್ಲ                   || ೩೨ ||

ಇಡಬೇಕು ಈಶ್ವರ ಮುನಿಯಲು ಬಿಡದಂಥ | ಧರಣಿಪರ ಗಂಡೆಂಬ ಬಿರುದ |
ನಡೆಯಬೇಕದಾಜ್ಞೆಯೊಳಗೀಗ ಅಣ್ಣಾಜಿ | ನಡೆಯಲು ಚಂದ್ರಸಾಲಿಗೆ                 || ೩೩ ||

ಅಣ್ಣಾಜಿ ಲಾಲಿಸು ಅಪರಂಜಿ ಚಿನ್ನವೆ | ಎಮ್ಮಯ್ಯಗೆ ಯಾರು ಮಲೆತವರು |
ಇಮ್ಮೈಯ ದೊರೆಗಳ ಎದೆ ಗರ್ವ ಮುರಿಯದ ಮೇಲೆ | ಎಮ್ಮ ಪಡೆದವರಿಗೆ ಘನವೇನು      || ೩೪ ||

ಇಡಬೇಕು ಧರೆಯೊಳು ಇದಿರಾಗೊ ರಾಯರ ಗಂಡ | ಹುದುಗಿ ಬರಲವಗೆ ತಾ ಪಿಂಡ |
ಪೊಡವಿಗುನ್ನತವಾದ ಸುರಿತಾಳ ನೇಮಿಯ ಗಂಡ | ಧರಿಸಿದ ರಾಮ ಪೆಂಡೆಯವ   || ೩೫ ||

ಮೂರು ರಾಯರ ಗಂಡ ಮುಂಗುಲಿಯ ರಾಯನ ಮಿಂಡ | [ಒರಗಿ] ರಂಡೆ ಮನೆಯೊಳಗೆ |
ಬೇರೊಬ್ಬರ ದಣಿ ಮಾಡಿ ರಣಭೂಮಿಗೆ ಕಳುಹುನ | ಹೇಡಿರಾಯರ ಗಂಡ ರಾಮ     || ೩೬ ||

ಮಲೆ[ಯ] ರಾಯರ ಗಂಡ ತುಳುವ ರಾಯರ ಮಿಂಡ | ತಳುವೊ ರಾಯರಿಗೆ ಎದೆ ಶೂಲ |
ಬಲವಂತ ಓರ್ಗಲ್ಲ ಗಣಪತಿರಾಯನ ಮಿಂಡ | ಧರಿಸಿದ ರಾಮ ಗಂಟೆಯನು         || ೩೭ ||

ಮೋಸಗಾರರ ಗಂಡ ಮರೆಬಿದ್ದವರ ಕೊಡುವಂಥ | ಹೇಸಿದೊರೆಗಳ ಗಂಡ ರಾಮ |
ರಾತ್ರಿ ಜಗಳಕೆ ಹೊರಟು ರಣಗೆಲ್ಲುವರ ಗಂಡ | ರೇಕು ತುರಾಯ ಧರಿಸಿದನು        || ೩೮ ||

ಮಂದಿ ಜಗಳಕೆ ಬಿಟ್ಟು ಹಿಂದೆ ನಿಲ್ವರ ಗಂಡ | ಸಂಬಳ ಕೊಡದೆ ಬಂಟರಿಗೆ |
ಕುಂಬಳದ ಕಾಯಂತೆ ಕೂಡಿ ಒಡಲನೆ ಬೆಳೆಸಿ | ಖಂ[ಡೆ] ಮುರಿದೋಡುವರ ಮಿಂಡ || ೩೯ ||

ಹರಶಂಭು ಜಟ್ಟಂಗಿ ರಾಮಗೆತ್ತಿದ ಕರವ | ನರರಿಗೆ ಎತ್ತುವನಲ್ಲ |
ಹಿಡಿಸಿದ ರಣಗಾಳೆ ಹೊಗಳುವ ಭಟ್ಟರು | ಉಗ್ಘಡಿಸೆ ಎರಡು ಭಾಗದಲಿ              || ೪೦ ||

ಇಟ್ಟರಾಭರಣವ ಇರ್ವರು ಸಮನಾಗಿ | ಮುತ್ತು ಮಾಣಿಕ್ಯ ವಜ್ರಗಳ |
ಹೆತ್ತ ತಂದೆಯ ಬಳಿಗೆ ಅಪ್ಪಣೆ ಕೇಳಿ ನಿಮ್ಮಯ | ಎತ್ತಲು ದಂಡ್ವೈರಿ ಮೇಲೆ           || ೪೧ ||

ಕಾಳಗವೆಂಬೋದು ಕರ್ಮದ ಫಲ ತಮ್ಮ | ಮಾಡುವರು ಧರ್ಮಜ್ಞಾನಿಗಳು |
ಕೇಳಯ್ಯ ಅಣ್ಣಾಜಿ ಇದಕೆ ದೃಷ್ಟವ ಕೊಡುವೆ | ಮೂಲಕರ್ತನು ಶಿವನೊಳಗೆ           || ೪೨ ||

ಯುಗ ಮೂರರೊಳಗಾಗಿ ನಡೆಯವೆ ಕಾರ್ಯಗಳು | ಮೊದಲಾಗಿ ಹರನು ಮಾಡಿರುವ |
ತ್ರಿಪುರದ ದೈತ್ಯರ ಹತವ ಮಾಡಿದ ಹರಗೆ | ತ್ರಿಪುರಾಂತಕ ನಾಮ ಬಂದುದೆ         || ೪೩ ||

ಜಗದ ಕರ್ತನ ಮಾತು ಹಾಗಿರಲಿ ಈಚೆಗೆ | ಸುರರೊಳಗೆ ತೋರ್ವೆ ಕಾರ್ಯಗಳ |
ಇಡನೆ ಒರ್ವನು ದಾಳಿ ಶಿವ[ಪು]ರಕೆ ಚಾಮರನು | ಅದು ಬೇಡ ಇನ್ನು ತೋರುವೆನು || ೪೪ ||

ಮುಂದೊಮ್ಮೆ ತಿಳಿಯಣ್ಣ ಮುಕುಂದನು ದಂಡೆದ್ದು | ಕಂದನ ಮಗನ ಮಾವನ್ನ |
ಕುಂದುದಿಲ್ಲವೆ ಅಣ್ಣ ತಲೆಯರಿದು ಬಾಣನ | ಕೊಂದು ಪೋಗನೆ ಮೊಮ್ಮಗನ         || ೪೫ ||

ತ್ರೇತಾಯುಗದೊಳು ಸೀತೆ ರಾವಣನೊಯ್ಯೆ | ಆತ ಕುವರರಾಮ ಬಲಗೂಡಿ |
ಕೋಟಿರಾಕ್ಷಸನ ಮುನ್ನ ಕೊಲ್ಲದೆ ಸೆರೆ ಪೋದ | ಸೀತೆ ಬಂದಾಳೆ ಕೇಳಣ್ಣ             || ೪೬ ||

ಗರ್ವದ ಮದದೊಳು ಇಡನೆ ಅರಣಿ ಹೋಮ | ಬೆಮರೊಳು ಶರಭೇಂದ್ರ ಜನಿಸಿ |
ನವಕೋಟಿ ದಾನವರ ಸದೆದು ದಕ್ಷನ ಕೊಂದ | ಅದು ಕಾರ್ಯವೆಲ್ಲ ಪೇಳುವೆನು     || ೪೭ ||

ಭೀಮ ಪಾರ್ಥನು ಹಿಂದೆ ಮಾಡರೆ ಕಾರ್ಯಗಳ | ರಾಯ ಧೃತರಾಷ್ಟ್ರ ಕೌರವನ |
ಕ್ಷೋಹಿಣಿ ಹದಿನೆಂಟು ಬಲವ ಧರಣಿಗೆ ಕೆಡಹಿ | ನ್ಯಾಯ ತೀರಿತೆ ದಾಯಾದ ವರ್ಮ  || ೪೮ ||

ಆದಿಯಲಿ ನಡೆದವರ ಹಾದಿಯಲಿ ನಡೆವೆನೀ | ಡಾಡುವೆ ಎನ್ನ ತಲೆ[ಯನ್ನು] |
ತಾನೊಂದು ಹಾದಿಯ ಹಿಡಿದು ಹೋದರೆ ಹರನು | ಕಾಲಗೆ ಗುರಿಮಾಡದಿಹನೆ       || ೪೯ ||

ಕಾಳಗದ ಕಥೆಯನ್ನು ಕೇಳಲಾಗದು ಎಂಬ | ಜಾಣನು ಕೇಳಿ ಸಾಕ್ಷಿಯಾನು |
ಭಾರತ ಜೈಮಿನಿಯ ಓದಿ ಕೇಳಿದ ಬಳಿಕ | ಭೇದ ಮಾಡುವರೆ ಬಲ್ಲವರು             || ೫೦ ||

ಜಗಳವಿಲ್ಲದ ಕಾರ್ಯ ಜಾಣ [ನಲ್ಲ]ದ ಮಂತ್ರಿ | ಗುಣವಿಲ್ಲದಂಥ ಮನೆವಾರ್ತೆ |
ಸುಳಿಯಿದ್ದು ಫಲವೇನು ಸುಗುಣವಿಲ್ಲದ ಮೇಲೆ | ಜೋಗಿತಿಯಾದ ತೆರನಂತೆ        || ೫೧ ||

ನರಕೃತಿಯನು ಕೇಳಿ ಫಲವಿಲ್ಲವೆನಬೇಡ | ಹರನ ಮೂಲದಲಿ ಜನಿಸಿದರ |
ನರ ಕಾರ್ಯವಿಲ್ಲದೆ ಮರದೊಳು ಜನಿಸುವರಾರು | ಸುರಕೋಟಿ ಶರಣು ಸಂತತಿಯ || ೫೨ ||

ನರರಿಗೋಸ್ಕರ ಹರನು ಧರೆಯ ನಿರ್ಮಾಣ ಮಾಡೆ | ಧರೆಯಿಂದ ಸಕಲ ಜೀವವನು |
ಇದಿರೊಳಗಾದ ತಾ ನಡೆದ ಸತ್ಯಗಳಿಂದ | ಶರಣನಾಗುವನು ಕೇಳಣ್ಣ               || ೫೩ ||

ಸತ್ತವರ ಕಥೆಗಳನು ಕೇಳಲಾಗದು ಎಂಬ | ಶ್ರೇಷ್ಠವುಳ್ಳವರು ಉಳಿವರೇ |
ನಿತ್ಯಗಳ ಪಡೆದಿಲ್ಲಿ ಗರಿಸಿರಿಯು ಮುಂತಾಗಿ | ಇಪ್ಪವರಾರು ಇಳೆಯೊಳಗೆ           || ೫೪ ||

ಆನೆ ತನ್ನೊಳಗೆಚ್ಚುವಿರುವೆಗೆ ದೊಡ್ಡದಲ್ಲ | ಓದಿಗೆ ಹಿರಿದು ಕಿರಿದುಗಳೇ |
ನಾನಾ ವರ್ಣಂಗಳ ಕುಲಜಾತಿಯವರಿಗೆ | ಭೇದ ಮಾಡುವರೆ ಬಲ್ಲವರು             || ೫೫ ||

ಸರ್ವ ಜೀವಿಗಳೊಳು ಅಧಿಕವು ನರಜನ್ಮ | ಅಂತು ನಡೆಯಲು ಧರ್ಮಕರ್ಮ |
ಮರುಳಾಗಿ ದೇವೇಂದ್ರ ಪರಸತಿಗೆ ಮನವಿಡಲು | ಭಗವಾ[ಯಿತ] ವನ ಕಾ[ಯವು]  || ೫೬ ||

ಮುನ್ನವರು ಮೆಚ್ಚಲು ಮಾರಾರಿಗಳವಲ್ಲ | ಆಡಿಪ ತನು ಬೇರೆ ತನ್ನ |
ಮಾಡಿ ಸೂತ್ರದ ಬೊಂಬೆ ಆಡಿ ಕುಣಿಸುವ ಬಲ್ಲ | ರಾಮನ ಧರ್ಮ [ಕರ್ಮ]ಗಳ       || ೫೭ ||

ಲಾಲಿಸಿ ಮನಮುಟ್ಟಿ ಜ್ಞಾನ ಬಂದರೆ ನಿಮ[ಗನು] | ಮಾನ ಕಂಡರೆ ಬಿಜಮಾಡಿ |
ಕೇಳಯ್ಯ ಜಟ್ಟಂಗಿಕುಮಾರ ಜನ[ನದ] ಮೂಲ | ಸಾಗಿಸುವೆ ಮುಂದಲ ಕೃತಿಯ    || ೫೮ ||

ಪ್ರಾಣಹತ್ಯವ ಮಾಡುವುದು ಪಾಪ [ವೆನೆ] ತಮ್ಮ | ಏಳು ಸಾಗರವ ತಂದಿಟ್ಟ |
ಆಡುವನ ನಾಲಗೆಯನಿಕ್ಕಳದಿ ಪಿಡಿದಂತೆ | ನಾಡಿ ನಿಲಿಸಿವೆ ವಾದಿಗಳ               || ೫೯ ||

ಕರಿ ತುರಗ ಕಾಲಾಳು ಮೆರೆವುತ್ತೆ ಒಂದಾಗಿ | ನೆರೆಯಲು ರಾಜ ಬೀದಿಯಲಿ |
ದೊರೆ ತನುಜರಿರ್ವರು ಬರಲಾಗಿ ಶೃಂಗರಿಸಿ | ಮೆರೆವ ಮಾರ್ಬಲ ಚಾವಡಿಗೆ         || ೬೦ ||

ಒದರುವ ರಣಗಾಳೆ ಎದೆ ಬಿಚ್ಚಿ ಒಡೆವಂತೆ | ಹೊಡೆವ ಭೇರಿಗಳು ನಿಸ್ಸಾಳ |
ಪೊಡವಿ ರಾಯರಿಗೆಲ್ಲ ಗಂಡುಗೊಡಲಿ ರಾಮ | ನೆಂದು ಪೊಗಳಿ ಚರರುಗ್ಗಡಿಸೆ        || ೬೧ ||

ಶಶಿ ರವಿಯು ಒಂದಾಗಿ ಜೊತೆಗೂಡಿ ಬರುವಂತೆ | ಹಿತರೊಳು ಜಾನಕಿ ಸುತರು |
ಪಟ್ಟಣ ದಿಗಿಲೆನಿಸಿ ಬರುವ ತನುಜನರ ನೋಡಿ | ಬೆಚ್ಚಲು ಕಂಪಿಲನೆದೆಯು          || ೬೨ ||

ಮಕ್ಕಳು ಬರುವಂಥ ದಸ್ತು ಠೀವಿಗೆ ನೃಪನು | ಹೆಚ್ಚಲು ಮನದಿ ಮುಗುಳ್ನಗೆಯ |
ಹತ್ತೆಂಟು ಮಕ್ಕಳ ಹಡೆದಿನ್ನು ಫಲವೇನು | ಪುತ್ರರೆ ಸಾಕು ಇವರೆರಡು                || ೬೩ ||

ಚಿಪ್ಪಿಲಿ ಅಡಗಿರ್ದ ಸುಪ್ಪಾಣಿ ಮುತ್ತುಗಳೊ | ನೊಪ್ಪಿಲಿ [ಅ]ಡಗಿರ್ದ ಜಾಣೊ |
ಪೃಥ್ವಿಯೊಳಡಗಿರ್ದ ಅಪರಂಜಿ ಕುಂದಣವೊ | ಎತ್ತಿ ಮುಂಡಾಡಿ ಇರ್ವರನು          || ೬೪ ||

ಎಡಬಲದಿ ಇರ್ವರನು ತೊಡೆಯೊಳಗೆ ಕುಳ್ಳಿರಿಸಿ | ಪಿಡಿಯಲು ತನುಜರ ಗಲ್ಲ |
ನಡುಕಟ್ಟಿದ ಮಂದಿ ಹೊಡೆಯೆ ಭೇರಿಯ ನೀವು | ಬಂದ ಫಲವೇನೆಂದು ಕೇಳಿದನು   || ೬೫ ||

ರಾಜರೊಳು ರಾಜನೆ ರಾಜ ಮಾರ್ತಂಡನೆ | ತೇಜತ್ವದೊಳು ಕರ್ಣಭೂಪ |
ದೇವೇಂದ್ರ ಸಮಗಾತ್ರ ದೇಶ ಮಧ್ಯದಿ ನಿಮ್ಮ | ಹಿರಿದ ರಾಯರ ಪೇಳೆಮಗೆ          || ೬೬ ||

ಅಯ್ಯನೆ ಮೃಡತ್ವಜೀಯನೆ ಧರೆಯೊಳು | ಕಯ್ಯ ಮುಗಿಯದೆ ಕಾಣಿಕೆಯು |
ಈಯದ ದೊರೆಗಳನೇಮ್ಮಯ್ಯನೆ ಪೇ[ಳಯ್ಯ] | ಸೈಯೆನಲು ವಂಶಾಬ್ದಿ ಛಲವು     || ೬೭ ||

ಕಂದನಾಡುವ ನುಡಿಯ ತುಂಬ ಕರ್ಣದಿ ಕೇಳಿ | ಮಂಡೆಯನೊಲೆವುತ ಮನದಿ |
ಕಂಡಿಲ್ಲ ಹುಳಿ ಉಪ್ಪುಯೆಂಬ ಕಾರದ ರುಚಿಯ | ತಂದೆ ವೈರಿಯ [ಹೇ]ಳಾ [ವಿ]ಗ್ರಹಕೆ        || ೬೮ ||

ಹರನಿತ್ತ ಅರಳಿನ ಫಲದ ಪ್ರಾಣವೊ ಇದು | ವೈರತ್ವಗಳ ಕೇಳ್ವ ಛಲವು |
ನರಪಿಂಡವಾಗಲು ಬರಲರಿದು ಈ ಜ್ಞಾನ | ವರಪಿಂಡ ಅಹುದೆಂದು ಮನದಿ          || ೬೯ ||

ಕುಂಜರ ಗರ್ಭದಿ ಭೇರುಂಡ ಇಳಿದಂತೆ | ಚಂದ್ರಶೇಖರನ ಬೆವರೊಳಗೆ |
ಅಂದು ಶರಭನು ಜನಿಸಿ ಹೋಮವನು ಗೆಲಿದೆಂಬ | ಅಂದವಾಯಿತು ಇಂದು ನಡೆವ || ೭೦ ||

ಗುತ್ತಿಯನಾಳುವ ಕಸ್ತೂರಿ ಚಾಮಯ್ಯ | ಉಪಹತನು ಎನ್ನ ಕಡೆಗೆ |
ಮತ್ತೊಂದು ಕೇಳ್ಮಗನೆ ಮುಮ್ಮಡಿರಾಯಗವ | ತೆತ್ತು ಬರುತಿರ್ದ ಹಣವ             || ೭೧ ||

ಹಳೆಯಬೀಡನೆ ಆಳ್ವ ರಣಧೀರ ಬಲ್ಲಾಳ | ಕೆಲವು ರಾಜ್ಯವ ಕಟ್ಟಿಕೊಂಡು |
ಉಳಿಯಲೀಸನು ನಮ್ಮ ಬುಡಕವ ಕೊಡಲಿಯಾದ | ಮೆಳೆಯ ಗೊ‌ಲ್ಲನು ಕಡಿದಂತೆ  || ೭೨ ||

ಓರುಗಲ್ಲವನೀಗ ಕೋರು ಹಾಕಿದ ಬಲವ | ಆರು ತಿಂಗಳು ಮುತ್ತಿ ಊರ |
ಗೇರೆ ಬೇಲಿಯ ಮುಳ್ಳ ಕೀಳಲಾರದೆ ಬಂದೆ | ನೀಗ ಕೇಳೋ [ಬಾಗಿ] ಕದ್ದು           || ೭೩ ||

ಪುತ್ರ ಕೇಳೈ ನಿಮ್ಮ ಹೆತ್ತನ ಕಾಲಕವರು | ಕೊಟ್ಟು ಕಪ್ಪಗಳ ಕಾದಿಹರು |
ಇತ್ತೆನ್ನ ಆಳಿಕೆ ಆಳ [ರೊ]ಬ್ಬ ಮೊದಲಾಗಿ | ಸೊಪ್ಪು ಹಾಕರು ಎನ್ನ ಕಡೆಗೆ             || ೭೪ ||

ಎಡಬಲದೊಳಗಿರುವ ಬಡಪಾಳೆಗಾರರು ರೊಕ್ಕ | ಕೊಡದಂತೆ ಸುರಿತಾಳ ಎನಗೇ |
ಅದು ಹೋಗಿ ಕಡೆಗೆನ್ನ ಗ್ರಾಮದ ಬಿಡುಯೆಂದು | ಬರೆವ ಕಾಗದವು ಕಡೆಯಿಲ್ಲ        || ೭೫ ||

ಕಪ್ಪವನು ಕೊಡುಯೆಂದು ನಿತ್ಯ ಬಾಗಿಲ ತಟ್ಟಿ | ಮುತ್ತಿಕೊಂಬರು ಅರಮನೆಯ |
ದಿಟ್ಟಗಾರನು ಮಂತ್ರಿ ತಕ್ಕ ಮನ್ನಣೆ ಮಾ[ಡೆ] | ಹೊತ್ತ ನೂಕಿದೆನಿಂದಿನೊರೆಗೆ        || ೭೬ ||

ಕಂದ ಕೇಳಿರೊ ಎನ್ನ ಕಾಲಕ್ಕೆ ಇಷ್ಟು | ಭಂಗವಲ್ಲದೆ ಸುಖವ ಕಾಣೆ |
ಮುಂದೆ ನಿಮ್ಮಯ ಪುಣ್ಯ ಫಲದಿಂದ ಎನ್ನಯ | ಪಾಡು ಹಿಂಗಲು ಪುಣ್ಯಜೀವಿ         || ೭೭ ||

ಎಲ್ಲ ರಾಯರ ಮಾತು ಹಾಗಿರಲಿ ನೋಡುವ ಕಡೆಗೆ | ಬಲ್ಲಾಳನಟ್ಟುಳಿ ಘನವು |
ಹುಲ್ಲು ಜಾಲಿಯ ಬೆಳೆಸಿ ಹಳ್ಳಿ ಗಾಡಿ ಮನೆಯನು | ಕಲ್ಲು ಮುಳ್ಳೆರಡು ಬಿಟ್ಟಿಹನು      || ೭೮ ||

ರಾಯನಾಡಿದ ಮಾತ ಕೇಳಿ ಚೆನ್ನಿಗ ರಾಮ | ಗಾಯೊಡೆದ ವ್ಯಾಘ್ರನ ತೆರದಿ |
ರೋಮಾದಿ ರೋಮಗಳು ಏದಿನ ಮುಳ್ಳಾಗೆ | ಕಾಲಭೈರವನ ರೂಪಾದ             || ೭೯ ||

ತಂದೆಯಾಡಲು ತರಳ ಕಾಳಿಂಗ ರೂಪಾಗಿ | ಮುಂಗೈಯ ಕಡಿಯೆ ಕೋಪದಲಿ |
ಮುಂಗಾರ ಸಿಡಿಲಂತೆ ಹೃದಯದೊಳ್ ಕುದಿಯುತ್ತೆ | ರಾಜೇಂದ್ರ ಬೆಸನ ಕೊಡೆಮಗೆ || ೮೦ ||

ಭೂಪ ಹೇಳಲು ಬೇಡ ಸಾಕಯ್ಯ ಅಪಕೀರ್ತಿ | ನೀ ಪಾಲಿಸೆಮಗೆ ವೀಳ್ಯವನು |
ಈಶ್ವರನು ಹರಿಬ್ರಹ್ಮ ಹೊರತಾಗಿ ಮಿಕ್ಕವರ | ಲೋಕಕಾಣಿಸುವೆ ಯಮನೂರ       || ೮೧ ||

ಹೇಳಿಕೊಂಬುವರಲ್ಲ ಪಾಲಿಸೆಮಗ ವೀಳ್ಯ | ಬಹಳ ದಣಿಸಿರುವ ಬಲ್ಲಾಳನ |
[ಖಳೂನ ಎದೆಗರ್ವ] ಮುರಿದವಗೆ ಕೆರೆ [ಯೇಳ] | ನೀರ ಕುಡಿಸುವೆ ಸಾಕು ಎನಿಸಿ   || ೮೨ ||

ಊರನೆ ಬಿಡಲೆಂದ ಸುರಿತಾಳದ ರಾಜ್ಯ | ಬೂದಿ ಮಾಡುವೆನು ಭೂಪಾಲ |
ಊರ ಬಾಗಿಲ ಕದವ ಹಾಕಿಸುವೆ ನೀವಿರುವ | ಮೂಲೆಗೆ ಮಂಡೆ ಇಡದಂತೆ          || ೮೩ ||

ಬಾಲನಾಡುವ ಮಾತ ಕೇಳುತ ನೃಪವರನು | ತ್ರಾಣ ಸಾಲದು ತರಣ ರಣದಿ |
ಕಾಣದೆ ಮಲಗಿರುವ ಹುಲಿಯ ಎಬ್ಬಿಸಿದಂತೆ | ಮಾಡಿಕೊಳಲಿ ಬೇಡ ಮಗನೆ         || ೮೪ ||

ಛಲದಂಕ ರಣವಿಜಯ ವೈರಿರಾಯರ ಗಂಡ | ಸೈರಿಸಿ ಕಾರ್ಯ ಕಾಣ್ಬಹುದು |
ಬರುತಿದೆ ಜಗಳತ್ವ ಧರಿಸಿರುವ ಬಿರುದಿನಲಿ | ಹುಡಿಕೆ ನಾರಿ ಪೋಗಲುಯೊಕ್ಕೆ       || ೮೫ ||

ನಾವಾಗಿ ಮೊದಲಿನ್ನು ಬೇಗೆ ಹಾಕಿದ ಮೇಲೆ | ಆರಿಸಿಕೊಳ್ಳುವುದು ಕಷ್ಟ |
ಹೇ[ರು] ಕಡಲೆಯೊಳಗೆ ಹಿಡಿ ಕಡಲೆ ವಾದಿಸಿದಂತೆ | ಕಾದುವ ಪ್ರಾಣ ನಮಗುಂಟೆ   || ೮೬ ||

ಅಪ್ಪಾಜಿ ನಿಮ್ಮೊಳು ಬದಲುತ್ತರ ಯಾಕೆ | ಬೀಳಕ್ಷರ ಮಾತು ಬೇಡ |
ಕಿಚ್ಚಾಗಿ ಬರುತಿದೆ ಕಾಯಾತ್ಮ ರಾಜೇಂದ್ರ | ಪೆತ್ತಾತ ಎನಗೆ ಸೈರಿಸದೆ               || ೮೭ ||

ರಾಯ ಪಾಲಿಸಬಹುದು ಕೇಳೆಮ್ಮ ಕಡೆ ಉತ್ತರ | ನೀ ಬರೆದೆ ಪಣೆಯೊಳು ಲಿಪಿಯ ? |
ರಾಯ ಜಟ್ಟಂಗನೊಲವು ತಪ್ಪಿದ ಮೇಲೆ | ಕಾಯಲಾವರೆ ಹಡೆದವರು                || ೮೮ ||

ಮರಣ ತಪ್ಪದು ರಾಯ ಧರಣಿ ಜೀವನಕೆಲ್ಲ | ಭರಣಿಯೆ ಬಿಟ್ಟೊಡಲು ಆತ್ಮ |
ಇರುಳಾಂಕ ದೈತ್ಯನು ಮರಣವಿಲ್ಲವ ಪಡೆದು | ಉಗುರಿಂದಲಳಿದನಾ ಕ್ಷಣದಿ        || ೮೯ ||

ಕೊಡು ರಾಯ ಅಭಯವ ಬಡವಾಗಿ ನುಡಿಯದೆ | ಹರ ಬಂದು ಪೇಳಲು ನಿಲ್ಲೊಲ್ಲೆ |
ತಡೆಯಲೇತಕೆ ಮಾತ ಕುಡಿಯಲೊಲ್ಲದೆ ನೀರ | ತಡೆದರೆ ನಿಮಗೆ ಹರನಾಣೆ        || ೯೦ ||

ಬಾಲನ ಮಾತಿಗೆ ಹೇಳಲು ತಾವಿಲ್ಲದೆ | ರಾಯನು ಒಪ್ಪಿ ಮನದೊಳಗೆ |
ಕಾಲಾಳು ತುರಗವನು ಬೇಡಿದವರನಿತ್ತು | ರಾಂ ಲಕ್ಷ್ಮಣರಾಗಿ ಬಾಳಿ                 || ೯೧ ||

ಹರಸಿದ ನೃಪವರನ ಚರಣಕೊಂದನೆ ಮಾಡಿ | ನಡೆದರು ತಾಯರಮನೆಗೆ |
ತರಳರ ಮುಖವನು ಕಾಣುತ ಹರಿಯಮ್ಮ | ಹವಳದಾರತಿ ಎತ್ತಿ ಬೆಳಗಿ              || ೯೨ ||

ಬೆಳಗಿದ ಜನನಿಯ ಚರಣಕೊಂದಿಸಿ ಅವರು | ಕರಗಳ ಮುಗಿದು ಭಕ್ತಿಯಲಿ |
ತರಳರಿರ್ವರ ಎತ್ತಿ ಕರವಿಡಿದು ಎಡಬಲದ | ತೊಡೆಯೊಳಗವರ ಕುಳ್ಳಿರಿಸಿ           || ೯೩ ||

ಇಂದ್ರನ ಸುತನೆಂಬ ವಿಜಯಪಾರ್ಥನ ತಮ್ಮ | ಹಿಡಿಂಬನ ಗೆಲಿದ ನಳಭೀಮ |
ಹಿಂಗದ ಕೌರವನ ಕಾರ್ಯಕೆ ನಡೆದಂತೆ | ಅಂದು ತೋರ್ಪುದು ಬಂದ ಗಮನ       || ೯೪ ||

ಚಂದ್ರನ ಪೌರ್ಣಮಿ ದಿನದೊಳು ಮೂಡುವಂಥ | ಅಂದವಾಗಿದೆ ಮುಖಕಾಂತಿ |
ಶೃಂಗಾರವಾಗಿದೆ ಮಂದಿ ತುರಗ ಕಾರ್ಯ | ವೆಂಬ ಸೂಚನೆಯು ತೋರುವುದು     || ೯೫ ||

ಕಮಲಲೋಚನೆ ತಾಯಿ ಕಳವೇಕೆ ನಿಮ್ಮೊಡನೆ ಸಂ | ಗ್ರಾಮಕೆ ನಡೆವೆ ವೈರಿಗಳ |
ತಂದೆಗೆ ಮಾರ್ಮಲೆತ ಬಲ್ಲಾಳನೂರಿಗೆ ಮುತ್ತಿ | ತಿಂದು ತೇಗುವೆನವನ ಬುಡವ     || ೯೬ ||

ಇದಿರಾದ ರಾಯರ ಎ [ದೆ]ಗರ್ವ ಮುರಿದು | ಹೊಡೆಯಬೇಕಮ್ಮ ಗುತ್ತಿಯನು |
ಅದುಗಿ ಬಂದವಗೆನ್ನ ಶರೀರ ಬೇಡಲು ಇತ್ತ | ಕೊಡು ತಾಯಿ ಹರಸಿ ಅಪ್ಪಣೆಯ      || ೯೭ ||

ಬಾಲನಾಡುವ ಮಾತ ಕೇಳುತ್ತ ಹರಿಯಮ್ಮ | ಜೀವದೊಳತಿ ದುಃಖಗೊಳಲು |
ಯಾರು ಹೇಳಿದರಪ್ಪ ಪ್ರಾಣಕೊಲ್ಲುವ ಬುದ್ಧಿ | ತೀರಿತೆ ಮಿತಿಗಾಲ ನಿಮಗೆ            || ೯೮ ||

ಬಲ್ಲಾಳನೆಂಬವನು ಬಿಡವನೆ ಎಲೆ ಮಗನೆ | ಪನ್ನಂಗಧರನೊಲುಮೆ ಭಕ್ತ |
ಹೊನ್ನಿನ ಮಳೆಗರೆದ ಮುಕ್ಕಣ್ಣ ತಾ ಮೆ[ಚ್ಚೆ] | ಬಲ್ಲಿದ ಧನ ತುರಗ ಬಲದಿ            || ೯೯ ||

ಹುಚ್ಚೇನೋ ಎಲೆ ರಾಮ ಮುತ್ತಲು ಆ ಪುರವ | ಹೆಚ್ಚೆಂದು ತಿಳಿದೆಲ್ಲ ಪುರಕೆ |
ಮತ್ತ್ಹೋಗಿ ಈ ಸುದ್ದಿ ಮುಟ್ಟಲವರ ಕಿವಿಗೆ | ಎತ್ತರೆ ನಮ್ಮ ಸ್ಥಿತಗತಿ[ಯ]             || ೧೦೦ ||

ಗುತ್ತಿ ಎಂಬುದು ಕೇಳು ಪೃಥ್ವಿಗೆ ಅಸದಳವು | ಮುತ್ತಿ ಸಿಗದೆ ಮುಮ್ಮಡಿಯ |
ಕಪ್ಪ ತಂದರುಯೆಂದು ಹೇಳಿ ಕೇಳ್ವುದ ಬಲ್ಲೆ | ಇತ್ತ ತಂದವರ ನಾನರಿಯೆ            || ೧೦೧ ||

ಆರು ತಿಂಗಳು ಹೋಗಿ ರಾಯ ಮುತ್ತನೆ ನಿಮ್ಮ | ಓರುಗಲ್ಲೆಂಬ ಪಟ್ಟಣವ |
ಮೂರು ತಿಂಗಳ ಮೇಲೆ ರಾಯ ರುದ್ರಗೆ ಸುದ್ಧಿ | ನೀರ ಬಾಲೆಯರು ಪೇಳ್ದಂತೆ        || ೧೦೨ ||

ಓರಗಲ್ಲನೆ ಮುತ್ತಿ ನೋಡಬಹುದು ಡಿಳ್ಳಿಯರ | ಹವಣೇನೊ ಬಲ್ಲಾಳರಾಯ |
ಕಾಲನ ಪುರ ಹೊಕ್ಕು ಹ್ಯಾಗಾದರು ಬರಬಹುದು | ನಾಮ ಎತ್ತಲು ಬೇಡ ಬಲ್ಲಾಳನ  || ೧೦೩ ||

ಪುತ್ರ ರಾಯನ ಕೇಳೊ ಪಟ್ಟಣದ ವಿಸ್ತಾರ | ಲಕ್ಷ ಪಿರಂಗಿಯ ದ್ವಾರ |
ಕತ್ತಿ ಉಕ್ಕಡ ಬಿಚ್ಚಿ ಮೂವತ್ತು ಸಾವಿರ ಮಂದಿ | ಸುತ್ತಗಾವಲು ಹೊರಪಾರಿ           || ೧೦೪ ||

ಕಾಸಿ ಕೆಲಸಲದ ಕೋಟೆ ಸೀಸ ಎರಕದ ಗಚ್ಚು | ಸೂಸುತಿಹವು ತೆನೆ ಮೇಲೆ |
ಈಶ್ವರಗಳವಲ್ಲ ನರರ ಮಾತುಗಳೇನು | ಸಾಕು ಮಾಡಿದಳೆ ವಿಧಿ ನಿಮಗೆ           || ೧೦೫ ||

ಬಲವಂತನೊಳು ಪೋಗಿ ಮುರಿದು ಬಂದರೆ ರಾಮ | ಹಿರಿಯರ ಬೇರ ನಿಮ್ಮಯ್ಯನ |
ಇರುವ ರಾಜ್ಯವೆ ಪರ[ರಾಜ್ಯ] ನಮಗೇಕೊ | ನರಿಯು ಮುತ್ತಲು ಕರಿಗೆ ಭಯವೆ      || ೧೦೬ ||

ಜನನಿಯಾಡುವ ಮಾತ ಕೊನೆಗೆ ಲಾಲಿಸೆ ರಾಮ | ಕನಲಿತು ಕೋಪಾಗ್ನಿ ಮನದಿ |
ನರಿ ತಾನಹುದಮ್ಮ ಹಡೆದಾಕೆ ಎನುತಲಿ | ತಡೆಯಬೇಕಾದುದು ಕೋಪ             || ೧೦೭ ||

ಹರಿಣಲೋಚನೆ ಕೇಳು ಕಡೆಯ ಮಾತಿನ ಬಿನ್ನ | ಹಡೆದಾಕೆ ಹಣೆಯೊಳು ಬರೆದ್ಯಾ |
ಸುಡು ತಾಯಿ ನಿಮ್ಮಯ ಮಾತ ಕರ್ಣಕೆ ಬೀಳಲು | ದೊರೆಯಾಡಲಿಲ್ಲ ಈ ಬಗೆಯ   || ೧೦೮ ||

ಬಲ್ಲಾಳ ಕಲಿ ನೀವು ಹೇಳುವುದು ಸರಿ ತಾಯಿ | ಕೇಳಲಿಲ್ಲವೆ ಕುಶ ಲವರ ಕಥೆಯ |
ಆಳು [ವ] ಒಡೆಯನು ಮೇಲಿರಲು ಬೆನ್ನೊಳು | ಮೂಲ ಬಲ್ಲಾಳನ ಘನವೇನು       || ೧೦೯ ||

ಕಾಲಭೈರವ[ನೆಂದು] ಘನವಾಗಿ ಪೇಳು[ವೆ] ತಾಯಿ | ಬೇರು ಕೀಳದೆ ತಾನು ಬರಲು
ರಾಮ ಜಟ್ಟಂಗಿಯ ವರಪುತ್ರರೆಂದೆಂಬ | ತ [ಮ]ಗೆ ಶ್ವಾನ [ಕು] ಕಡೆಯೆಂದು ಕಾಣು || ೧೧೦ ||

ಮಕ್ಕಳ ಮಾತಿಗೆ ಒಪ್ಪಲು ಹರಿಯಮ್ಮ | ಮಿಕ್ಕಿವರು ಹೋಗದೆ ಬಿಡರು |
ಮತ್ತೊಗೆವ ನೇತ್ರ ತುಂಬಲು ನೋಡಿ | ಕೆಟ್ಟೋಡಿ ಬರುವಾಗ ಬಿಡುವ                || ೧೧೧ ||

ಹವಳ ಮುತ್ತಿನ ಆರತಿ ಬೆಳ[ಗೆ] ಸ್ತ್ರೀಯರು | ಪರಿಪರಿ ಪದಗಳ ಕಟ್ಟಿ |
ತರಳರಿಗೆ ಪಲ ಬಗೆಯ ಆಭರಣ ಭೂಷಿತವಿಟ್ಟು | ಬೆಳಗುವರು ಧವಳ ರಾಗದಲಿ     || ೧೧೨ ||

[1] + ಬಲ್ಲಾಳರಾಯನ ಮೇಲೆ ದಂಡ ನಡೆ[ದ] ಸಂಧಿ, ಶ್ರೀಗುರು ಬಸವಲಿಂಗಾಯ ನಮಃ | ಶ್ರೀ ಗಣಾಧಿಪತಾಯಂ ನಮಃ ಶುಭಮಸ್ತು. ಪದನು || (ಮೂ)