ಮಂಗಳಾರತಿ ಪದ:

ಮಂಗಳಂ ಜಟ್ಟಂಗಿ ರಾಮನೊರಪುತ್ರರಿಗೆ |
ಮಂಗಳಂ ಮಲೆತವರ ಮರ್ದಿಪರಿಗೆ |
ಮಂಗಳಂ ರಣವಿಜಯ ಕುಶಲ ಸಾಹಸದ |
ಮಂಗಳಂ ಮಾರ್ತಂಡ ಪ್ರಚಂಡರೀರ್ವರಿಗೆ |
ಜಯ ಮಂಗಳಂ ನಿತ್ಯ ಶುಭ ಮಂಗಳಂ                                              || ೧೧೩ ||

ಕದನ ಸಂಹರನಿಗೆ ಬಿದಿಗೆ ಚಂದ್ರನ ಪೋಲ್ವ |
ಇದಿರಾದ ವೈರಿಗಳ ಎದೆ ಶೂಲಗೆ |
ಹದಿನಾರು ವರುಷಕ್ಕೆ ಕದನ ಕಾರ್ಯಕೆ ನಡೆವ |
ಸದೆಬಡೆದು ಬಲ್ಲಾಳನ ಬರುವ ಧೀರರಿಗೆ |
ಜಯಮಂಗಳಂ ನಿತ್ಯ ಶುಭ ಮಂಗಳಂ                                              || ೧೧೪ ||

ಕನ್ನಡಿಯ ಮುಖದರ್ಗೆ ಕಾಮನಂ ಪೋಲ್ವರ್ಗೆ
ಪರಹೆಣ್ಣುಗಳ ಕಣ್ಣೆತ್ತಿ ನೋಡದವರ್ಗೆ |
ಚಿಣ್ಣ ಬಾಲತ್ವದಲಿ ಚದುರರಿರ್ವರು ಪೋಗಿ |
ಹೊಮ್ಮಿ ಗತಿಯ ಮೇಲೆ ಹೊನ್ನ ತೆಗೆವರಿಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ                                              || ೧೧೫ ||

ಛಪ್ಪನ್ನ ದೇಶದೊಳು ಕಪ್ಪವನು ತೆಗೆವರಿಗೆ |
ಕೀರ್ತಿಯುಳ್ಳವರಿಗೆ ಪಡೆದ ಜನಕರಿಗೆ |
ಮುಪ್ಪುರವ ಗೆಲಿದಂಥ ಮೂರು ನಯನದ ದೇವ |
ಪುತ್ರರಿಗೆ [ಸ್ವಯ] ವಾಗಿ ರಣಶಕ್ತಿ ಪಾಲಿಪುದು |
ಜಯ ಮಂಗಳಂ ನಿತ್ಯ ಶುಭ ಮಂಗಳಂ                                              || ೧೧೬ ||

ಬಾಲ ಪ್ರಾಯದೊಳು ರಣಭೂಮಿಗೆ ನಡೆವರಿಗೆ |
ರಾಯ ಜಟ್ಟಂಗೀಶನೊರಪುತ್ರರಿಗೆ |
ತಾಯಿ ಹರಿಹರದೇವಿ ಕಂಡು ಆರತಿ ಬೆಳಗಿ |
ಬಾಲರಿಗೆ ಶಾಸೆಯನು ಇಟ್ಟು ಹರಸಿದಳು |
ಜಯಮಂಗಳಂ ನಿತ್ಯ ಶುಭ ಮಂಗಳಂ                                              || ೧೧೭ ||

ಸಾಂಗತ್ಯ :

ಹರಿಸಿದ ತಾಯ ಸುಚರಣಕೊಂದನೆ ಮಾಡಿ | ಕರಗಳ ಮುಗಿದು ಬಾಲಕರು |
ಧುರವ ಜಯಿಸಿ ಬನ್ನಿ ಮಂಡೆ ಹೂ ಬಾಡದೆ | ಶರೀರವೊಂದಾಗಿ ಭೇರುಂಡನಂತೆ    || ೧೧೮ ||

ಪರಮಾನ್ನ ಭೋಜನವ ಸವಿದಾಗ ಇರ್ವರು | ಧರಿಸಲು ಪುಣುಗು ಕಸ್ತುರಿಯ |
ವರಮಾತೆ ಸುಖದೊಳು ಬೀಳ್ಕೊಡೆ ಇರ್ವರು | ಮೆರೆವ ಹಜಾರದಿ ಕುಳಿತು          || ೧೧೯ ||

ಕರೆಸಲು ಬಲ್ಲಂಥ ಪರಿವಾರ ಮಂತ್ರಿಯ | ಮಗ ನೀಲಕಂಠನೆಂಬವನ |
ಕರಿ ತುರಗ ಕಾಲಾಳು ಹದಿನಾರು ಸಾವಿರ ಮಂದಿ | ಇದಿರಿಗೆ ನೀಲೆ ಬಾಲಕರ       || ೧೨೦ ||

ಕರೆಸಿದ ಬಲವಂತ ಬರಿದಿನ ಮನ್ನೆಯರ | ದೊರೆತನಕೆ ಆಳಾಗಿ ಬಂದವರ |
ಧುರಧೀರ ಮಲ್ಲಯ್ಯ ಪೆನಗುಂಡೆ ನಾಗನು | ಎಡಗೈಯ ಹಂಪನು ಹನುಮ          || ೧೨೧ ||

ಭಾವನು ಸಂಗಯ್ಯ ಬಲವಂತ ಲಿಂಗಣ್ಣ | ಕಾಮಗೇತಿಯ ಚಿಕ್ಕನಾಯಕ |
ಭೀಮನ ಸಮತೂಕ ಬಿಜವಾಡಿ ರಂಗಣ್ಣ | ಹಾಗಿನ ಹನುಮಂತನಾಯಕ             || ೧೨೨ ||

ಕಲಿಯೊಳಗೆ ಕಾಡುವ ಜಗಲೂರ ಮರಜೆಟ್ಟಿ | ಹಗಲು ದೀವಟಿ ಸರ್ಜನಾಯಕ |
ಅಗಡು ಕೋಣನಂ[ತೆ] ತೆಗೆದಿಡುವ ಬಾಣಿಯ ಮುದ್ದ | ಬಡಗಿ ಗಂಗನ ಬಸವಯ್ಯ   || ೧೨೩ ||

ಭೇರಿನಾದಗಳನು ಮಾಡಿಸಿ ಕಂಪಿಲರಾಯ | ವಾರ ತಿಥಿ ಒಳ್ಳೆ ಘಳಿಗೆಯಲಿ |
ರಾವನು ಎಡಯಿಟ್ಟು ಗುರುವಾರ ಮುಂಜಾನೆ | ಸಾರಲು ಜಾಂಡೆ ಯಮನ ಮೂಲ್ಗೆ  || ೧೨೪ ||

ಬಾಣ ಬತ್ತಿಗಳನು ಆನೆ ಒಂಟೆಗೆ ಹೇರಿ | ಮೇಲಾದ ಸೌರಣೆ ಕಿತ್ತು |
ಹೇರಲು ಹನ್ನೆರಡು ಸ್ವಾಧೀನಕ್ಕೆ ಸಮನಾಗಿ | ಸಾಗಿಸಿ ರಾಯ ಕಂಪಿಲನು            || ೧೨೫ ||

ರಾಯ ಕುಮಾರನು ತಾವು ಶೃಂಗರವಾಗಿ | ಬೇಗ ಜಾನಕಿಯ ಸುತರಂತೆ |
[ಮೇಘ]ಕಾಳದ ಘೋಷ ಕಾಳೆ ಭೋರಿನ ಸ್ವರದಿ | ಮೇಲೆ ಉಗ್ಘಡಿಸುವ ಭಟರ      || ೧೨೬ ||

ರಾಯನು ಕಂಪಿಲ ಪ್ರಧಾನರು ಬೈಚಪ್ಪ | ಬಲ್ಲರು ಒಡಗೊಂಡು ನಡೆಯೆ |
ಮೇಲು ಮಾತನು ಬುದ್ಧಿ ಕುವರರಿರ್ವರಿಗರುಹಿ | ತಾವಲ್ಲಿ ಪುರಕೆ ನಡೆಯೆ            || ೧೨೭ ||

ಪಟ್ಟಣ ಹೊರಹೊರಟು ಬಿಟ್ಟು ದಂಡಿನ ಪಾಳ್ಯ | ಪೊಕ್ಕರಂದು ಹರನ ಆಲಯವ |
ಸಾಷ್ಟಾಂಗವೆರಗಿ ಪ್ರಣತರಾಗಿ ಜಟ್ಟಂಗಿ | ಮುಕ್ಕಣ್ಣನೆಂದು ಬೇಡುವರು               || ೧೨೮ ||

ಯಾಲ ಪದನು :

ಜಯ ಜಯ ಶಂಕರ ಭುವನ ಬ್ರಹ್ಮಾಂಡಗಳನು |
ಕುಣಿದು ಆಡಿಸುವ ಸ್ತುತಿಕ |
ಕುಂಜರದ ವೈರಿ ನಯನ |
ಮೂರುಳ್ಳದೇವಿ ನೀವರಿಸು ನಿಮ್ಮಯ ತನುಜರ ಬಿನ್ನಪವನು |
ತರಳರ ಬುದ್ಧಿಯಲಿ ನಡೆವೆವು |
ನಿಮ್ಮಯ ದೃಷ್ಟಿ ಇರಬೇಕು ಎರವ ಮಾಡದೆ                                          || ೧೨೯ ||

ಹೀನಾಯ ಅಪಕೀರ್ತಿ ಪಾದಕೆ ಬರುವುದು |
ನಾವು ಬೇರೆ ಹೆದರಿ ನಿಲ್ಲೆವು |
ಕಾಯಗಳಾಸೆ ಮಾಡ ಬುದ್ಧಿ ಕೊಟ್ಟಲ್ಲದೆ |
ಮಂಡೆಯ ಮೇಲೆ ನೀನಿರೆ ಗೆದ್ದು ಬರುವೆನು |
ಸಹಾಯವಾಗಲಿ ಬೇಕು | ಭವರೋಗ ಶಕ್ತಿಯನಿತ್ತು |
ದೇವ ಜಟ್ಟಂಗಿರಾಮೇಶ ಕೋಟಿ ಪ್ರಕಾಶ
ಬೇಗ ಅಭಯದ ಪಾಲಿಸೆಂದನು                                                      || ೧೩೦ ||

ಸಾಂಗತ್ಯ:

ಛಲದಂಕ ಪುತ್ರರ ಸ್ಮರಣೆ ಭಕ್ತಿಯ ಮೆಚ್ಚಿ | ಹರಸಿಡಲು ತ್ರಿಶೂಲದಭಯ |
ಧರಿಸಿ ಮಂಡೆಯ ಮೇಲೆ ಎರಗಿ ವಂದನೆಗೆಯ್ದು | ತಿರುಗಿದರವರು ಪಾಳೆಯಕೆ       || ೧೩೧ ||

ಎದ್ದಿತು ದಂಡೆಲ್ಲ ಯಮನ ಮೂಲೆಯ ಭಾಗ | ಜಜ್ಜರಿವಂತೆ ಭೇರಿಗಳು |
ಇದ್ದಂಥ ಎಡಬಲದ ಪಾಳೆಯಗಾರರ ಭೂಮಿ | ಪೋದುಗೊಡದೆ ದಂಡು ನಡೆಯೆ    || ೧೩೨ ||

ನಡೆಯಲು ದಂಡಾಗ ನದಿಗಿಳಿದು ಹಂಪೆಯ | ನಡೆಯಲು ಕಣ್ಣು ಕುಪ್ಪೆ ಬುಡಕೆ |
ಗುಡಿಗುಡಿಸಲಾರ್ಭಟಕೆ ಹೊಡೆವ ಭೇರಿಯ ಧ್ವನಿಗೆ | ನಡುಗಿ ಭೂಮಿಗಳು ಕಂಗೆಡಲು || ೧೩೩ ||

ಬಲವಾನ ಹೊಡೆಯಲು ಬಡವನು ತನ್ನಯ | ಕಡೆಯ ಬಾಗಿಲು ಕಾಯ್ದ ಇರುವ |
ಬುಡಕೆ ಕೊಡಲಿಯ ಹಾಕೆ ಕೊನೆಗೊಂಬು ತನ್ನಯ | ಹಿಡಿಗೆ ಬರದೇನೋ ಅಣ್ಣಯ್ಯ   || ೧೩೪ ||

ಒಂದೆರಡು ಮೂರು ನಾಲ್ಕೈದು ಪಯಣ ದಾಂಟಿ | ಬಂದಿಳಿಯೆ ಭೀಮಕೇರೆಗೆ |
ಮುಂಜಾನೆ ದೌಡೆದ್ದು ತುರಗ ಬಲ್ಲಾಳನ | ತಂದರು ಕೊನೆ ಸೀಮೆ ಕೊಳಾ           || ೧೩೫ ||

ಸಾಗಿಬರಲು ರಾಮ ನೀಲನೂರನು ದಾಂಟಿ | ಬೇಗಿಳಿದು ಯರಗಟ್ಟಿಯ ತೊರೆಗೆ |
ಭೂಮಿ ರಾಜ್ಯಗಳೊಡೆದು ತಾಯಿಗೆ ಮಗನಿಲ್ಲದೆ | ಓಡುವರು ಮಲೆನಾಡ ಬಿದ್ದು      || ೧೩೬ ||

ಒದಗಿ ಬಂತೆನುತ ಬಾಯ ಬಿಡುತಿರೆ ಲೋಕ | ಸೂಳೆಯರು ಹಾಸ್ಯ ಮಾಡುವರು |
ಇಡಲಮ್ಮ ಮುಖವನು ಪೊಡವಿಗೆ ಕರ್ತಾದ | ಸುರಿತಾಳ ಹೆಸರನು ಹಿಡಿದು         || ೧೩೮ ||

ಗಾದೆ ಹೇಳುವ ಗರತಿ ಏಳೆ ರಾಮನು ಬಂದ | ಯಾಳೆಕೈಯ್ದಾರೆ ಬಲ್ಲಾಳನ |
ಊರ ಮುಂದಿರುವ ದನ ಮುಂದೆ ಕುರಿಯನ್ನು | ಕೋಳಹಿಡಿದನು ಎಳೆ ಮಿಂಡ       || ೧೩೯ ||

ಬಲು ಮಾತು ಕಲಿತಾಳು ಹಲವು ವಿಟರೊಳಗಾಡಿ | ಸುಲಿದಾರೆಂಬುವರು ಕಡೂರ |
ತಡವು ಮಾಡಲು ಬೇಡ ಕುದುರೆಗೆ ಹುರಳಿ ಕೊಚ್ಚೊ | ತೆರ ಬರುವುದೇಳೆ ಓಡುವನಾ         || ೧೪೦ ||

ಗಡಿ ರಾಜ್ಯ ಒಡೆಯಲು ಕಡೆಗೊಂದು ಕಲ್ಲರೆ | ಗಿರಿಯ ಸೇರಲು ಕಣ್ಣುಗೆಟ್ಟು |
ಭಿಕ್ಷ ಭಂಡಾರವ ತಿರುಗಿ ನೋಡದೆ ಅವರು ಓಡಿ | ತೆರೆಯದೆ ನೆಲ ಬಾಯನೆನುತೆ   || ೧೪೧ ||

ಸೆಟ್ಟಿಗಳು ಸಕಾಲತಿ ಮುತ್ತು ಹವಳವ ಮಾರೊ | ಪಟ್ಟೆ ಪೀತಾಂಬರ ಜಲ್ಲಿಗಳು |
ಬಿಟ್ಟಲ್ಲಿ ನಡೆಯಲು ಬೇಲೂರ ಜಾಗರವ | ಹೊಕ್ಕಲ್ಲದೆ ಪ್ರಾಣುಳಿದೆನುತ              || ೧೪೨ ||

ಎದ್ದರು ಎದೆಗೆಟ್ಟು ಬಂದಳಿಕೆ ವೈಶ್ಯರು | ಅಗ್ನಿ [ಪಾಲಾಗಿ] ಬದುಕು ಪೋಗಿ |
ಬಿಡಲು ಮೊಸಲುಸೋಡಿನ್ನು ಮನಕೊಚ್ಚೆ | ಬಿದ್ದು ಓಡುವರು ಕೊಮ್ಮಟಿಗ            || ೧೪೩ ||

ಎಂದಿಗೆ ಅರಿಯೆವು ದಂಡೆಂಬ ಸುದ್ದಿಗಳ | ಬಂದುವೆ ಪ್ರಳಯಕಾಲ ನಮಗೆ |
ತುಂಬಿದ ಮನೆ ಬದುಕು ತುರು ಕರು ಪಾಲ್ಮಾಡಿ | ಕುಂಬಾರು ಕುರುಬರು ನಡೆಯೆ   || ೧೪೪ ||

ಏರಿಸಿದ ಮಡಕೆಯನಿಳುಹದೆ ಬಾಳಿದೆವು | ಮೂರಾರು ತಲೆಯಿಂದ ನಾವು |
ಖೋಡಿ ಮೂಳನು ರಾಮಗೆ ಕೊಟ್ಟು ಬಲ್ಲಾಳ ರೊಕ್ಕ | ಸಾಗಿಸಿ ಬಿಡಲರಿಯನಕ್ಕ      || ೧೪೫ ||

ನಾನಾ ಜಾತಿಯ ಗೂಳ್ಯ ಜ್ಞಾನಕ್ಕೆ ತಿಳಿದಂತೆ | ಓಡಲು ದಿಕ್ಕು ದಿಕ್ಕಾಗಿ |
ಆಡುವರು ಹೋದಲ್ಲಿ ದಾವು ಎಡೆಗಳ ಬಿಟ್ಟು | ಸೂರ್ಯಾದ ಬದುಕನೆ ನೆನೆದು       || ೧೪೬ ||

ಯಾರಿಗೆ ಹೇಳಲಿ ಎಮ್ಮವರು ಮಾಡಿದ ಬದುಕ | ನೂರಾರು ಖಂಡುಗ ದವಸ |
ಮಾರಗೊಡದೆ ಎಮ್ಮ ಮನೆಯಾತ ಕೆಡಿಸಿದ | ಮೂರು ಸೋರೆಗೆ ಹೊನ್ನು            || ೧೪೭ ||

ಬಿಡು ನಿನ್ನ ಕಾಳಿನ ಸಡಗರ ಸುಡಲಕ್ಕ | ಪಡಿ ಹೊನ್ನು ಬಿಟ್ಟೆ ಮೂರ್ಪಡಿಯ |
ಇರಿಸಿದ ಒಡವೆಯನು ಹಿಡಿಯಲಾರದೆ ಬಂದೆ | ಕಡೆ ಹೊಲಕೆ ಬರಲು ಕುದುರೆಗಳು  || ೧೪೮ ||

ಅರ್ಥ ಗಳಿಸಲು ಎತ್ತ ಕರ್ತರು ಬಾರದಕೆ | ಸರ್ಪ ದೈವವು ಕಾದೊ ತೆರದಿ |
ಬಚ್ಚಿಟ್ಟು ಇರಿಸಿರ್ದ ಬರುವ ಭಾವನೆ ಕೊಟ್ಟು | ಬಿಟ್ಟಿಹರವಾರೆಂದು ಬರಲು            || ೧೪೯ ||

ಹಣ ಹೊನ್ನ ಧನ ಧಾನ್ಯ ಸ್ಥಿರವಲ್ಲ ಕೇಳಕ್ಕ | ಇರುವಂತೆ ತನ್ನ ಕಣ್ಣ ಮುಂದೆ |
ಇಡುವುದು ಗೆದ್ದಲೆ ಹುತ್ತ ಸುಖಬಡುವುದು ಕಾಳಿಂಗ | ತೆರನಾಯಿತೆಮ್ಮ ಬದುಕು    || ೧೫೦ ||

ಅನ್ನಿರ್ದು ಉಣಲಿಲ್ಲ ಆಭರಣಿರ್ದು ತೊಡಲಿಲ್ಲ | ಬಣ್ಣ ಬಿಳಿದಿರ್ದು ಬಂಡಿಯಲಿ |
ಒಂದಿವಸ ಉಡಲಿಲ್ಲ ನುಣ್ಣಗಾದ ಮೇಲೆ | ಇನ್ನೇಕೆ ಅಳುವುದು ತಾಯಿ               || ೧೫೧ ||

ಹೊದೆವರೆ ಕಂಬಳಿಯ ಕುರಿಯ ತುಬುಟವ ಬೆಳೆದು | ಮರುಳೇನೆ ತಾಯಿ ಅಳುವುದಕೆ |
ಋಣವು ತೀರಿತು ಅಮ್ಮ ಒಡವೆ ಕರ್ತನು ಒಯ್ದ | ಬಡಕೊಳ್ಳೆ ಬರುವುದೇನಕ್ಕ        || ೧೫೨ ||

ನಾಡದೇಶವು ಗೂಳೆ ಹೀಗೆಂದು ಮೊರೆಯಿಡುತ | ಸೇರಿ ಗಿಡ ಮೆಳೆಯ ಸೇರುವರು |
ರಾಯ ರಾಮನ ದಂಡು ನಾಳೆ ಏಳಲಿ ಎಂದು | ಭೇರಿ ಹೊಡೆಯಲು ಬೆಳಗಿನಲಿ      || ೧೫೩ ||

ಯದವತ್ತಿ ಮಲ್ಲಗೆ ಮಾಡಿಸಿ ಪರುಪಾಡ್ಯ | ಕಾಣಿಕೆಯನಿಟ್ಟು ಕರಮುಗಿದು |
ಭೂಮಿ ಭೂಮಂಡಲ ನಡುಗುವಂದದಿ ಹೋಗಿ | ಕೋಳೂರ ಕೆರೆಗಾಗಿ ಇಳಿದ        || ೧೫೪ ||

ಹಳೆಯಬೀಡಿಗೆ ನಾಳೆ ಇಳಿದು ನಗರವ ಮುತ್ತುವ | ಬಗೆಯ ಮಾರ್ಬಲಕೆ ಹೇಳಿದನು |
ಹಿರಿಯರು ಮಂತ್ರಿಗಳು ಅರುಹುವರು ರಾಮಯಗೆ | ಸುಳುಹುಂಟು ಊರ ಮುತ್ತಲಿಕೆ         || ೧೫೫ ||

ಹೇಗೆಂದು ಎನುತ ಭೂಪಾಲ ರಾಮನು ಕೇಳೆ | ವಾಲೆಯ ಬರೆದನಲ್ಲಿಂದ |
ಬಾರದೆ ನಯ ನುಡಿಗೆ ತೋರಿದರೆ ಎ[ದೆ]ಗರ್ವ | ಮಾಡಬಹುದು ರಾಯಕಾರ್ಯ    || ೧೫೬ ||

ಜಾನಕಿಯ ಮನಪ್ರಿಯ ರಾವಣನ ಕೊಲುವಾಗ | ಮಾಡಿದರೆ ಮೂಗ ಕಾರ್ಯವನು |
ಪೇಳಿ ಅಂಗದನಿಂದ ಸ್ಥಾನಪತಿಗಳ ನಡೆಸಿ | ಮೀರಲು ಮಿತಿಯನು ತೊಡೆದ        || ೧೫೭ ||

ಒಳಿತಾಗಲಿ ಮಂತ್ರಿ ಬಲ್ಲ ತೆರಮಾಡೆನಲು | ಬಲ್ಲಿದ ಹೇಜೀಬರ ಕರೆಸಿ |
ಬಲ್ಮೆ ಸದನದೊಳು ಲೇಖನವ ಬರೆಯೆಂದು | ಅಲ್ಲಿ ಮಂತ್ರಿಯು ಪೇಳಿದನು          || ೧೫೮ ||

ಶ್ರೀಮತು ಸಚ್ಚಿತ ಭೋಗದಿ ದೇವೇಂದ್ರ | ರಾಮಭೂಪಾಲ ಕಂಪಿಲನು |
ಮಾಡುವ ವಿನಯಾರ್ಥ ಹಳೆಬೀಡ ಬಲ್ಲಾಳನಿಗೆ | ಸಾಗಿಸಿ ಬಿಡು ನಮ್ಮ ಹೊನ್ನ       || ೧೫೯ ||

ರಾಜೇಂದ್ರ ಕಂಪಿಲನ ಕುಮಾರರು ಬಂದಿವೆ ಕೋ | ಭೇರುಂಡ ರಾಮ ಕಾಟರಸ |
ಆಲಸ್ಯ ಮಾಡದೆ ಮೂರು ತಲೆಯೊಳಾದ | ಕಾಣಿಕೆ ಕಪ್ಪ ಕಳುಹುವುದು              || ೧೬೦ ||

ಮನದೊಳಗೆ ತರ್ಕವಿಸಿ ಕೊಡುವುದು ಘನ ನಿಮಗೆ | ನಡೆಸಲು ಬಲುಮೆ ಬಡಿಗೋಲು |
ಹಿಡಿಹುಲ್ಲ ಕರದೊಳು ಬುಡವ ಕೀಳೆ ನಿನ್ನ | ನಡೆಯೆ ವಂಶಾಬ್ದಿ ಕುಂದು               || ೧೬೧ ||

ಕಾಗದವನು ಬರೆದು ಪ್ರಧಾನಿಯ ಮಗ ಮಂತ್ರಿ | ಓದಲು ಆಗ ರಾಮೇಂದ್ರ |
ಕೇಳಿ ಮನದೊಳು ನಗುತ ಕೈಗೂಡಿ ಬರುವುದು ಕಾರ್ಯ | ಸಾಗಿಸಿ ಹೇಜೀಬರೊಡನೆ         || ೧೬೨ ||

ಜೋಡೆಯರ ಕಳುಹುತಲಿ ರಾಮನು ನಡೆದೆದ್ದು | ಹೋಗಿ ಬೆಳುವಾಡಿ ಕೆರೆಗಿಳಿಯೆ |
ಜೋಡೆಯರು ತವಕದಿ ಹಳೆಬೀಡ ಕಾಣುತ ಬರಲು | ಬಾಗಿಲ ಗೊಲ್ಲರು ತಡೆಯೆ     || ೧೬೩ ||

ತಡೆದ ಗೊಲ್ಲರ ಕೂಡೆ ಅರುಹಿ ಸೂಚನೆಗಳ | ಅರಸು ಬಲ್ಲಾಳಗೆ ಪೇಳೆನಲು |
ಪರಿದೋಡಿ ಬಂದಾಗ ಚರರು ಪೇಳಲು ರಾಯ | ಕರೆಯೆಂದು ಊಳಿಗದವರ ಕಳುಹೆ || ೧೬೪ ||

ಲೇಖ ಪತ್ರವ ತೆಗೆದು ಭೂಪಾಲನ ಮುಂದಿರಿಸಿ | ಭೂಪ ಕಳುಹಿದ್ದೆಂದು ಕರಮುಗಿದು |
ಮೂಕನಂದದಿ ನೋಡಿ ಕಾಲನ ರೂಪಾದ | ಕನಲಿ ಗರ್ಜಿಸುತಾಗ ಮನದಿ           || ೧೬೫ ||

ಕಾಳುರಗ ಭೋರಿಡುವ ತೆರನಾಗಿ ಕಣ್ಣೆರಡು | ಮೂಡುವ ರವಿಯ ರೂಪಾಗೆ |
ಜೋಡೆಯರ ನೋಡುತ್ತ ಸೀಳಿ ಕಾಗದವನು | ದೂಡಿದವರ ಬಾಯ ಮೇಲ್ಹೊಡೆದು   || ೧೬೬ ||

ಕೊಡುವೆನು ಹೊನ್ನನು ಮತ್ತಲ್ಲಿ ಇರಹೇಳಿ | ಹೊತ್ತುಣಿಕೆ ನಾಳೆ ಮುಂಜಾನೆ |
ಇಕ್ಕಿವೆ ಗೋರಿಯ ಇಂದ ಮೂಳ ಮೇಲೆ | ಮೊದಲಿವನಪ್ಪನ ಬೇರ ಕೀಳುವೆನು      || ೧೬೭ ||

ರಾಮನೆಂಬುವ ಯಾರು ಕೂಲಿ ಮೇಕೆಯ ಕಾಯ್ವ | ಮೂಳನ ಮಗನು ಬಂದಿಹನೆ |
ಮಾರಿ ಗುಡಿಯ ಹೊಕ್ಕು ಮರಳಿ ಹೋಹುದೆ ಕುರಿಯು | ದೂಡಿ ಹೇಜೀಬರ ಕತ್ಹಿಡಿದು         || ೧೬೮ ||

ಹೊಡೆ ರಾಯ ಬಂದಿರುವ ವೈರಿ ರಾಮನ ಮೇಲೆ | ಪೊಡವಿಯೊಳ್ ಸ್ಥಾನಪತಿಗಳನು |
ಹೊಡೆಯೆಂಬ ನುಡಿಯ ನಿನ್ನೊಳು ಕಂಡೆವು ಎಂದು | ನಡೆದಾರು ಕೇರಿ ಮುಖದೊಳಗೆ        || ೧೬೯ ||

ಜೋಡೆಯರು ಬರುತಾಗ ನೀರ ನಯನದಿ ಉಕ್ಕೆ | ರಾಯ ರಾಮಗೆ ಕರವ ಮುಗಿದು |
ಆಡಲು ಬಾಯಿಲ್ಲವನೆಂದ ಮಾತಿಗೆ ಕರ್ಣ | ಹೋದವರ ತೆರನಾಗಿ ಇರಲು           || ೧೭೦ ||

ಲೇಖಪತ್ರದ ಹರಿದು ಬರೆಸಿ ಕಾಲಡಿ ಹಾಕಿ | ನೂಕಿ ಹೊಡೆ ಇವರ ಬಾಯ್ಮೇಲೆ |
ಲೋಕದ ರಾಯರ ಗಂಡನೆನಿಸಿಕೊಂಬೆ | ಮೇಕೆ ಕಾಯ್ವವನ ಮಾಡಿ ಬಿಟ್ಟ           || ೧೭೧ ||

ಸ್ಥಾನಪತಿಗಳ ಮಾತ ಕೇಳುತ್ತ ರಾಮೇಂದ್ರ | ಕಾಲಭೈರವನ ರೂಪಾದ |
ಮಾಡಿದರವರೀಗ ಮಂತ್ರಿ ಪ್ರಧಾನರು | ಜೋಡೆಯರ ಕರೆದು ಮನ್ನಿಸಲು            || ೧೭೨ ||

ಉದಯ[ದಲಿ] ನುಡಿಯೆ ಸನ್ನೆಯ ಭೇರಿ ಕದನಕ್ಕೆ | ಯೆಂದು ಕಲಿಯಾಗಿ ನುಡಿದವು |
ತುರಗ ಜೋಡನು ಮಾಡಿ ನಡುವ ಕಟ್ಟುತ ಮಂದಿ | ಕಡಿಕಡಿಯೆನುತ ಏರುವರು     || ೧೭೩ ||

ಯಾವಲ್ಲಿ ಹದ ಇರುವ ಹಳ್ಳವ ಹಿಡಿದು | ಏರಿಸಿ ಬಾಣ ಬತ್ತಿಗಳ |
ಸೋರಿಸಿ ಮುಂಗಾರ ಆಣೆ ಕಲ್ಮಳೆಯಂತೆ | ತೋರಲೀಸವು ಒಳಗೆ ತಲೆಯ         || ೧೭೪ ||

ಗುಂಡಿನ ರವದೊಳು ಹೊಡೆವ ಭೇರಿಯ ನಾದ | ಧರಣಿ ಒದರ್ವಂತೆ ಕೋಳಾಹಳ |
ಹೊಡೆ ಬಡಿಯೆನುತಲಿ ಅಡರುವ ಬಲ ತುರಗ | ಹಿಡಿದರು ಪುಷ್ಪದ ಗಿರಿಯ           || ೧೭೫ ||

ರಾಯ ಪೌಜಿನ ಮೇಲೆ ಸಾಗಿಬರುವನು [ಕಾಟ] | ರಾಮಭೂಪಾಲ ಸಿಂಗರಸು |
ಧುರದೊಳಗೆ ಕಂಡರು ಊರಿನ ಬಲುಮೆಯ | ರಾವಣ ಲೆಂಕೆಯ ಪುರವೋ          || ೧೭೭ ||

ನೋಡಿದಾಗಲೆ ರಾಮ ಇಂದ್ರಪುರಕೆ ಮಿಗಿಲೆಂದು | ಕಾಣುತಲಿಹುದು ಈ ಪುರವು |
ರೂಢಿಯೊಳಪಕೀರ್ತಿ ಮುರಿದು ಓಡಲು ಮುತ್ತಿ | ಧ್ಯಾನ ಮಾಡುವರಾ ಮನದಿ       || ೧೭೮ ||

ನಗರ ತೋರುವುದಣ್ಣ ಹರಿದಾರಿಗಿ [ದು ದೂರ] | ಕರುವಾಡ ಉಂಟು ನೂರಾರು |
ಇರುವಂಥ ದೇವಾಲ್ಯ ಕಡೆಯಿಲ್ಲ ಮೊದಲಿಲ್ಲ | ಬಡವ ಎಮ್ಮಯ್ಯಗಿವ ಮಣಿಯ       || ೧೭೯ ||

ದೇವಾಲಯಗಳ ನೋಡೆ ತಾನಿಹುದು ಕೈಲಾಸ | ಹೇಮ ಬೆಳೆವುದೆ ಈ ಭೂಮಿ |
ಜೋಡಿಲ್ಲ ಈ ಪುರಕೆ ಜಂಬುದ್ವೀಪದ ಮೇಲೆ | ನಾ ಬಂದ ಫಲವು ಹ್ಯಾಗಿಹುದೋ    || ೧೮೦ ||

ರಾಯ ರಾಮನು ಮನದಿ ಧ್ಯಾನ ಮಾಡಲು ಪಲ್ಲಿ | ವಾಮಭಾಗದಿ ಲೇಸು ನುಡಿಯೆ |
ಮಾಡು ಕಾರ್ಯವ ತನುಜ ಮುರಿವ ಬಲ್ಲಳರಾಯ | ಭೂಮಿರಲು ಖ್ಯಾತಿಯನು ಪಡೆವೆ       || ೧೮೧ ||

ನಡೆಯಲು ಮನದೊಳು ನೃಪನೊಂದು ತನ್ನಯ | ಪಡೆದ ಒಡೆಯನ ಕೃಪೆಯಿಂದ |
ತಡೆಯಬಲ್ಲದೆ ಗೋಡೆ ತನ್ನ ಕರದೊಳಗಿವ | ಲಯವಾಗಲೆಂಬ ಫಲವಿರಲು          || ೧೮೨ ||

ನಗರವನು ಪರಿ ಬಳಸಿ ಯಮನ ಮೂಲೆಗೆ ಬಂದು | ಗಿರಿ ಎಡ ಬಳಸಿ ದಂಡಿಳಿಯೆ |
ಹೊಡೆಯಲು ನವಗಜ ಪಶುರಾಗದ ಗಿರಿಯ | ಒಡನೇರೆ ರಾಮ ವಾಲಕ್ಕೆ             || ೧೮೩ ||

ಪೂಜೆ ಪುಷ್ಟಗಳಿಂದ ಕಾಣಿಕೆ ಕರ ಮುಗಿದು | ಪಾಲಿಸು ಹರನೆ ಪ್ರಸಾದ |
ಕಾಮನ ಕೊಂದಾತ ಕಾಯಗೆಲ್ವುದು ಎಂದು | ಜಾರಲು ತ್ರಿಶೂಲದಭಯ             || ೧೮೪ ||

ಕರೆಸಿದ ಭುಜವುಳ್ಳ ಬಿರಿದಿನ ಮಾನ್ಯರ | ತೊಡೆಸಿದಾಭರಣ ದುಕೂಲವನು |
ದಿನ ಮೂರರೊಳಗಾಗಿ ಹೊರಕೋಟೆ ಕೋಳೆಂದು | ಸರಿಮಾಡಿ ಫಲವನಕ ಮುಖಕೆ || ೧೮೫ ||

ಬಂದನು ಕಾಟಣ್ಣ ಬಡಗಲ ಮೂಲೆಯ | ಕುಂಬಾರಹಳ್ಳಿಯ ಹಿಡಿದು |
ಸಂಕಯ್ಯ ಮೂಡಲ ಜಂಬಾರ ಮರಡಿಯ ಹಿಡಿದು | ಮುಂಗಾರ ಸಿಡಿಲಂತೆ ಬರುವ  || ೧೮೬ ||

ಒಕ್ಕಲಿಗರ ಮುದ್ಧ ಒಂಟಿಗತ್ತಿಯ ನಾಗ | ಹೊಕ್ಕರು ವರುಣಭಾಗದಲಿ |
ಮುತ್ತಲು ಜೇನ್ನೊಣದ ಮೊತ್ತಗಳು ಕವಿದಂತೆ | ಕಿಚ್ಚಿನ ಮಳೆಯಗರೆವುತಲಿ          || ೧೮೭ ||

ಯಮನ ಭಾಗದಿ ರಾಮ ಹಿಡಿದು ಶರಭನ ಗಡಿಯ | ಸುರಿವನು ಬಾಣದ ಮಳೆಯ |
ಕಡೆಗಂಡ ರವಿರಾಜ ಜನನಿ ಗರ್ಭಕೆ ಇಳಿದು | ಮರೆಗೊಂಡ ಹೇಮಾದ್ರಿ ಗಿರಿಯ      || ೧೮೮ ||

ಪುರದ ಕಾವಲ ಮಂದಿ ಐಶ್ವರ್ಯ ಪೇಳುವೆ ಮಗನೆ | ಬರಿ ಧೈರ್ಯದೊಳಗಡಣಿಕ್ಕೆಯ ಹಿಡಿದು |
ಉಕ್ಕಡಗಾಳ ಹನ್ನೆರಡು ಸಾವಿರ ಮಂದಿ | ರೇವೆಯ ಪೊಯ್ಯದೆ ಹೊರಪಾರಿ         || ೧೮೯ ||

ಬಿರಿದಿನ ಬಂಟರು ತರತರದೊಳು ನಿಂದು | ತೊಡೆ ಬಡಿದು ಕೇಕೆ ಹೊಡೆಯುತಲಿ |
ಪಡೆ ತೀರಿ ಬಂದನೆ ಹುಡುಗ ರಾಮನು ಎಂದು | ಮಗನೂರನೆಂಬುದನರಿಯಾ      || ೧೯೦ ||

ತಿಳಿಯಲರಿಯದೆ ಬಂದ ಎಳೆಯ ಪ್ರಾಯದ ಬಾಲ | ಹಡೆದವರು ಹೇಗೆಯ್ಯದಾಯದ್ಯೋ |
ಪುರದೊಳಗೆ ಬಲ್ಲಂಥ ಹಿರಿಯರಿಲ್ಲವೆ ಎಂದು | ಊರೊಳು ಹೊಗುವರೆ ಬಲ ಸಹಿತ   || ೧೯೧ ||

ಕಪ್ಪು ಕಾವಳ ನೋಡಿ ಬತ್ತಿ ಬಾಣವ ಸುರಿದು | ಸುತ್ತಲು ಜ್ಯೋತಿ ಜಗಂಜ್ಯೋತಿ |
ಇಕ್ಕಲು ಸ್ವರವನು ಕುಕ್ಕುಟ ಖಗ ಮೃಗ | ರೆಕ್ಕೆಯ ಮುರಿದು ಚರಿಸಾಡೆ               || ೧೯೨ ||

ಉದಯವಾಗಲು ರಾಮ ಹರನ ನೆನೆಯುತಲೆದ್ದು | ಧರಿಸಲು ನಾಮ ಭಸಿತವನು |
ತುರಗಮಂದಿಯು ಎದ್ದು ಶೃಂಗರವಾಗಿ ಮುತ್ತಲು | [ನೆಗೆದು] ಗಾಹುಗೊಳ್ಳೆ ಆ ನಗರ|| ೧೯೩ ||[1]

ಉತ್ತರ ದಿಕ್ಕಿಲಿ ಹತ್ತಿ ಕಾಟಣ ಲೆಗ್ಗೆ | ಬತ್ತಿ ಬಾಣಗಳ [ಎಸೆ] ಯುತಲಿ |
ಒತ್ತಿ ಮುಂದಕೆ ನೂಕಿ ಗೇರೆ ಬೇಲಿಯ ಹಿಡಿದು | [ಕಿಚ್ಚೆಳೆದು] ಕುರಿ ದನವ ಹೊಡೆದು  || ೧೯೪ ||

ಪೂರ್ವಭಾಗೆದ ಮೇಲೆ ಏರಿ ಸಂಗಮದೇವ | ಕೊಳ್ಳೆ ಹೊಡೆಯಲು ಆಳ್ವೇರಿ |
ಚೋರಗಂಡಿಯ ಕಿತ್ತು ಬಲ್ಲಾಳರಾಯನ ಮಂದಿ | ಕೂಡಲು ಜಗಳ ರಣರಂಗ        || ೧೯೫ ||

ಜಗಳ ಕಚ್ಚಲು ಹನುಮನಿರುವ ಬಾಗಿಲ ಮುಂದೆ | ಹಗಲು ಗಾವಳ ಕವಿಯಲು |
ಮುರಿಯಲು ಸಂಗಯ್ಯ ಯಮನ ಮೂಲೆಯ ರಾಮ | ತುಳಿಸಿದ ಜೀಬಿಯನ ಕಟ್ಟಿ    || ೧೯೬ ||

ಜಗಳ ಮಾಳ್ಪರು ಕೆಲರು ಅಗಳ ಬೀಳ್ವರು ಕೆಲರು | ಹೆದರಿ ಮೂರ್ಚೆಗಳಾಗೆ ಕೆಲರು |
ನಿಗಮಗೋಚರ ಬಲ್ಲ ಮೂರು ಸಾವಿರ ಬಂದಿ | ಯಮನೂರ ಕಂಡರು ಮಗನೆ       || ೧೯೭ ||

ಚೋರಗಂಡಿಲಿ ಹೊರ ಆರು ಸಾವಿರ ಮಂದಿ | ಈ ರಾಮನಿಗೆ ಇದಿರಾಗೆ |
ಚಾರಿಗೊನ್ನಾ ಮೇಲೆ ತಿರುಹಿ ತನ್ನಯ ತುರಗ | ತಾರಗಡಿಯನು ಈ ಕೆಲದಿ          || ೧೯೮ ||

ಹಿಡಿಗಲ್ಲು ಹೊಡೆಗಲ್ಲು ಸುಡುವ ಬಾಣದ ಬತ್ತಿ | ಕರೆವರು ರಾಮನ ಮೇಲೆ |
ಗುರುಕೃಪೆ ಬಲದೊಳು ಇರುವೆ ಸೋಂಕಿದ ತೆರದಿ | ಚರಿಸವೆ ಮೇಘಮಾರ್ಗದಲಿ    || ೧೯೯ ||

ಹುಚ್ಚು ಕೋಣನ ತೆರದಿ ಹೊಕ್ಕು ಬಾಣಿಯ ಮುದ್ದ | ಕೊಚ್ಚಿದನು ರಣ ಜೀಬಿಯಲಿ |
ಲಕ್ಷ ಕುರಿ ದನಗಳನು ಹಿಡಿದು ಜೀಬಿಯಲಿರ್ದ | ಒಕ್ಕಲ ಗೂಳ್ಯವನು ತೆಗೆಯೆ         || ೨೦೦ ||

ಕೋಟೆಯ ಪರಿ ಬಳಸಿ ಈ ರೀತಿ ಕೋಳಾಹಳ | ಸೊಕ ಮಾಡುವುದೆ ಕಡೆ ಮೊದಲು |
ಹಾಕಲು ನಗರಕ್ಕೆ ಹನ್ನೆರಡು ಸಾವಿರ ಬಾಣ | ಬಿತ್ತಿಗೊಳುವುದು ಜಜ್ಝರಿಸಿ             || ೨೦೧ ||

ಜೋ[ರು]ಮುತ್ತಲು ಊರ ಕೇರಿ ಬೊಬ್ಬೆಗಳೇಳೆ | ಸೂರ್ಯಗು ಸಮಯ ಬಂತೆಂದು |
ರಾಯ ಬಲ್ಲಾಳನಿಗೆ ದೂರ ಪೇಳ್ವರೆ ಓರ್ವ | ಓಡಿ ಬರಲಾಗ ನೃಪನೆಡೆಗೆ             || ೨೦೨ ||

ಪರಿದೋಡಿ ಬಂದಾಗ ಕರ ಮುಗಿದು ಪೇಳ್ವನು | ಹಿಡಿದರು ಅಗಳ ಭೂಪಾಲ |
ಕಿಡಿಗರೆದು ಕೋಪಾಗ್ನಿ ಒಡನೆ ರಾಯನು ಬಂದು | ಯಮನಂತೆ ಸದರನೇರಿದನು   || ೨೦೩ ||

ಕರೆಸಿದ ತನ್ನಯ ಮಂತ್ರಿ ಪ್ರಧಾನರ | ಬಿದಿರಿನ ಧೀರ ರಾಹುತರ |
ಯಮದೂತರಂದದಿ ಜರಿಯ ಕಾಪಿನ ಮಂದಿ | ಹರಿಗೆ ರಾವುತರು ಒದಗಿದರು       || ೨೦೪ ||

ಬಿಲ್ಲೆ ಸುನಂಗಿಯ ಬಿಲ್ಲು ಸಾಧನೆಯವರು | ನಿಲ್ಲದೆ ಬಂದು ಒದಗಿದರು |
ಹುಲ್ಲೆಯ ಮರಿಯಂತೆ ಹಾರುತ್ತ ಭಟರಾಗ | ಬಲ್ಲಾಳ ನೃಪಗೆ ಕೈಮುಗಿದು            || ೨೦೫ ||

ಸದರಿನೊಳಗೆ ಕುಳಿತು ಚದುರ ಬಲ್ಲಾಳರಾಯ | ಕರವಿಡಿದು ತನ್ನ ಮಂತ್ರಿಯನು
ಮುಳುಗುವ ತೆರ ಬಂತು ಮುದಿಯ ಕಂಪಿಲನಿಗೆ | ನಗುತ ಬಲ್ಲಾಳನಾಡುವನು      || ೨೦೬ ||

ತಿಳಿಯಲಿಲ್ಲವೆ ತನ್ನ ಬಗೆಯ ಬಾಲನ ಕಳುಹಿ | ಮೊಗವ ಕಾಣನೆ ಮಗನೆನುತ |
ಬಳೆಯ ತೊಟ್ಟನೆ ತಾನು ಈ ತರಳನೊಳ ಗೆದ್ದು | ತಿರುಗಬಲ್ಲನೆ ತನ್ನ ಪುರಕೆ        || ೨೦೭ ||

ಹೋಗಬೇಕೆನುತಿರ್ದೆ ನಾನಾಗಿ ಮೊದಲವನ | ಬೇರ ಕೀಳ್ವರೆ ಬುಡ ಸಹಿತ |
ಕಾಲಿಗೆ ತೊಡರ್ದಂತೆ ತಾ ಬೇಡಿ ಅರಸುವ ಮದ್ದು | ತಾನಾಗಿ ಎಳತಂತು ವಿಧಿಯು || ೨೦೮ ||

ಗಿಳಿಯು ಬೆಕ್ಕಿಗೆ ಸಿಕ್ಕಿ ಉಳಿದು ಹೋಗುವುದೆ ಮಂತ್ರಿ | ಯಮನೂರ ಸೇರಿದ ಮನುಜ |
ಮರಳುವ ತೆರನುಂಟೆ ಮರುಳ ಕಂಪಿಲ ಕೆಟ್ಟ | ಬಿಡುವಾಗ ಜೀವ ಮುಪ್ಪಿನಲಿ         || ೨೦೯ ||

ಬಡಪ್ರಾಣಿ ಎನುತಲಿ ತಡೆದು ಬಂದೆನುತ್ತರವ | ಹುಡುಗ ಮೂಳವನಿಗೆ ಜನಿಸಿ |
ತೊಡರಾದ ಬೇರಿಗೆ ಬಿಸಿನೀರ ಎರೆದಂತೆ | ಬಲಗಾರರೊಡನೆ ತಾ ಕೆಣಕಿ            || ೨೧೦ ||

ಎಷ್ಟು ಕಾಲಗಳಿಂದ ಎನಗುಂಟು ಕಂಪಿಲ | ಸುಟ್ಟು ಬೂದಿಯ ಮಾಡೊ ಛಲವು |
ಕಟ್ಟಿಕೊಳ್ಳಲು ರಾಜ್ಯ ಕಳ್ಳನಂದದಿ ಇರ್ದು | ಬಿಟ್ಟು ಪಾಲಿಸಿದೆ ಈ ವರೆಗೆ              || ೨೧೧ |

ಆಡುವ ಬಲ್ಲಾಳ ಬಾಯಿಗೆ ಬಂದಂತೆ | ಕೂಳಿನ ಸಿರಿಯ ಮದದೊಳಗೆ |
ಬಾಲನ ಬುದ್ಧಿಯ ಕಾಣದಿಲ್ಲಿಗೆ ಬಂದು | ವಾಲೆಯ ಬರಸೊಮ್ಮೆ ಪೇಳ್ವ               || ೨೧೨ ||

ಕರೆಸಿದ ನೃಪನಾಗ ಬರೆವ ಕರಣಿಕರನು | ಬರೆಯಲು ಬಲ್ಮೆ ಲೇಕನವ |
ಹುಡುಗನ ಮಾತೇನು ಪಡೆದವರ ಕರೆಸೆಂದು | ಹೊರಡುವ ಬಲ್ಲಾಳ ಭೂಪ          || ೨೧೩ ||

ಶ್ರೀಮತು ಸಚ್ಚಿತ ಆನಂದ ಪರಿಪೂರ್ಣ | ದೇವೇಂದ್ರ ಸಮಗಾತ್ರ ಬಲ್ಲಾಳ |
ಮಾಡುವ ವಿನಯಾರ್ಥ ಖೂಳರಾಮಗೆ ನಿಮ್ಮ | ಜಾಳು ಕಂಪಿಲನ ಕರೆಸೆಂದು       || ೨೧೪ ||

ಶುನಿಯೊಳು ಮದಗಜ ಕದನಕ್ಕೆ ನಡೆವುದೆ | ಇದಿರಹುದೆ ಇಲಿ ಮಾರ್ಜಾಲಕ್ಕೆ |
ಮಂ[ದಹ]ಕಂಪಿಲನ ಬಾಳು ಸುಡಲೀಗ | ಬರಹೇಳೊ ಹುಡುಗನ ಯಾಕೆ ಕೊಲಿಸುವೆ         || ೨೧೫ ||

ಹೀನಮಾನಗಳೆತ್ತಿ ಕಾಗದವ ಬರೆಯಲು | ಸ್ಥಾನಪತಿಗಳ ಕರಕಿತ್ತು |
ಹೋಗಿ ರಾಮನ ಬಳಿಗೆ ಮಾತಾಡಿ ಲೇಖನವಿತ್ತು | ಸಾರೀಗಳೆ ಕೊಡಿ ಕರದಿ         || ೨೧೬ ||

ರಾಯನಪ್ಪಣೆಯಾಗೆ ಸ್ಥಾನಪತಿಗಳು ನಡೆದು | ಕಾಗದ ಇರಿಸಿ ಕರ ಮುಗಿದು |
ಮಾರಿಯ ಹಗೆಗೊಂಡು ಕೋಣ ಬದುಕುವುದೆ | ನೀಗುವರೆ ನಿನ್ನ ತಲೆ ರಾಜ          || ೨೧೭ ||

ಬಾಯಿದೆರೆಯನು ಕೇಳಿ ಕಾಲಾಗ್ನಿ ಕೋಪದೊಳು | ಮೇಲೆ ಲೇಕನವ ನೋಡುತಲಿ |
ಸೀಳಿ ಕಾಗದ ರಾಮ ಸಿಂಹದ ಮರಿಯಾಗಿ | ದೂಡಿವರ ಬಾಯನು ಬಡಿದು           || ೨೧೮ ||

ಹೊಡೆಸುವೆ ಶಿರಗಳನು ಧುರದ ಒಳಗೆ ನೋಡಾ | ನುಡಿವ ಮಂತ್ರಿ ಹೇಜೀಬಿಕೆಯ |
ಕೆಡುಗಾಲ ಬಂದಿತೆ ಕಡದ್ರೋಹಿ ಬಲ್ಲಾಳಗೆ | ತರಳ ಮುರಿಯಲು ಪಿತ ಬರನೆ        || ೨೧೯ ||

ತರಳ ಪಿಡಿಯಲ ಕಾರ್ಯ ಮುರಿದೊಡೆ ಬಾರದೆ | ಗರ್ವದ ಮದವೆ ಬಲ್ಲಾಳಗೆ |
ಮರಿ ಹಾವು ಕಡಿಯಲು ಮೃತವನೆಯ್ಯರೆ ಬಂದು | ಹುಡುಗ ಮಿಂಡನ ಕಡಿದಟ್ಟೋ   || ೨೨೦ ||

ಮೊಲನ ಹಿಡಿಯದ ನಾಯಿ ಹೆಬ್ಬಲಿಯ ಕೊಲ್ಲುವುದೆ | ಸುಡು ನಿಮ್ಮ ನೃಪನ ಪೌರುಷನ |
ಹಡೆದವನು ಬರಲೆಂದು ನುಡಿದ ನಾಲಗೆ ಕರವ | ಅರಿಯದಿರಲು ರಾಮುಗನೆ        || ೨೨೧ ||

ಓತಿಗಂಜುವ ಬಂಟ ರಣಭೂತ ಕೊಲ್ವನೆ | ಕೋತುಗಂಜುವ ಮುದಿನಾಯಿ |
ಬೇಂಟೆಯ ತರುವುದೆ ಹೊರಡೊ ಜಗಳಕೆ ಮೂಳ | ಇದ ಬಲ್ಲನೆ ನಿನಗುಪ್ಪ          || ೨೨೨ ||

ಬರೆಸಿದ ಬದಲಾಗಿ ಛಲ ಬರುವ ಲೇಖನವ | [ಸಾರಿದ] ಜರಿದು ಕ್ಷೀಣದಲಿ |
ಶಿರಹಿಡಿದು ನೂಕಿಸಿ ಬಂದ ಹೆಜೀಬರನು | ಬಿಡಿಸಿದ ಊರ ಲೆಗ್ಗೆಯನು               || ೨೨೩ ||

ತಿಳಿದೆನೊ ಎಲೆ ಮಗನೆ ಮೊದಲ ಕಾಳಪಿತನ | ತರಳತ್ವದೊಳಗೆ ಛಲಪಂಥ |
ಗುರುರಾಯ ನಿಮ್ಮಯ ವರಪ್ರದ ಕೃತಿಯೊಳು | ಬರಬೇಕು ಜನಕ ತಾ ಗೆದ್ದು         || ೨೨೪ ||

ದಯಮಾಡಿ ಇಂದಿಗೆ ರವಿ ಕಡಲ ಸೇರಲು | ಮರೆಗೊಂಡು ಹೇಮಾದ್ರಿ ಗಿರಿಯ |
ಹರಸಿ ವಾಲಗವನು ನಡೆಯಲು ಜಟ್ಟಂಗಿ | ನೃಪನು ತನ್ನಯ ಅರಮನೆಗೆ            || ೨೨೫ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಧವಳಾಂಗ ವಿರುಪಾಕ್ಷಲಿಂಗ |
ತರಳ ರಾಮನು ಹೋಗಿ [ವೈರಿ] ಬಲ್ಲಾಳನ | ಪುರವ ಮುತ್ತಲು ಮೂರು ಸಂಧಿ      || ೨೨೬ ||[2]

[1] ೧೯೩, ೧೯೪, ೧೯೫ನೆಯ ಪದ್ಯಗಳ ನಾಲ್ಕು ಸಾಲು ಮಾತ್ರ ಲಿಪಿಸಲ್ಪಟ್ಟಿವೆ (ಸಂ)

[2] + ಅಂತು ಸಂಧಿ ೩ ಕ್ಕಂ ಪದನು ೭೧೦ ಕಂ ಮಂಗಳ ಮಹಾಶ್ರೀ