ಮುತ್ತಿದ ಪೌಜನು ಕೊಚ್ಚಿದ ರಣರಾಮ | ಸಿಕ್ಕಿದವರ ಬಯಲ ಮಾಡಿ |
ಶಕ್ತಿಲಿ ಕಾದುವ ಕಾಟಣ್ಣನ ನೋಡುತ | ಹೊಕ್ಕನು ರಣವಿಜಯ ರಾಮ                || ೧೩೧ ||

ರಾಯ ರಾಮನು ಬರಲು ಜಾರಿದ ತಿಮ್ಮರಸ | ಭೋರೆಂದು ಕೆರೆ ಒಡೆದಂತೆ |
ಏರಲು ಬೆನ್ನೊಡನೆ ದೇವಿಶೆಟ್ಟಿಯ ಲಿಂಗ | ಬಾದೂರ ಬಾಣಿಯ ಮುದ್ದ               || ೧೩೨ ||

ಹೊಮ್ಮಿರಿದು ಏರಲು ಅಗ್ರಗಣ್ಯ ರಾಯನ ಮಂದಿ | ಅಲ್ಲಿ ಒಲೆಯುತ ಶಿರಗಳನು |
ಹುಲ್ಲೆಯ ಹಿಂಡೊಡೆದು ಬೆದರಿದಂದದಿ ಓಡೆ | ತೇಜಿನೇರಲು ರಾಜಪುತ್ರ             || ೧೩೩ ||

ಸಿಡಿಲಿನ ಮರಿಯಂತೆ ಹೆಣತಿಂಬ ತೇಜಿಯು | ತುಳಿದು ಕೊಲ್ಲುತ ತಲೆ ಬುರುಡೆ |
ಸೆಳೆವನು ಹೊಳೆವ ಎಪ್ಪತುರಾಯನ ಕಂಡು | ಮುರಿಯಲು ರಾಯನ ಮಂದಿ        || ೧೩೪ ||

ಮುರಿದು ಬೆನ್ನಾಗಲು ಗರುಡನಂದದಿ ತೇಜಿ | ಎರಗುವುದು ಸು[ಳಿವ]ಕಂಡದಲಿ |
ಇದಿರಾಗಿ ನಿಲ್ಲಲು ದೊರೆ ಕಾಟ ಸಂಗಯ್ಯ | ಎದೆ ಕೊಟ್ಟು ಬರುವ ತೇಜಿಗೆ            || ೧೩೫ ||

ಎದೆಯಾಗಿ ನಿಲ್ಲಲು ಬಲ ನಿಲ್ಲೆ ಬೆನ್ನೊಡನೆ | ಜಗಳ ಕಚ್ಚಿತು ಮಸಗುತಲಿ |
ಕಿಡಿಕಿಡಿ ಸೂಸುತ್ತ ಬಾಣಬತ್ತಿಯ ಸರಳು | ಸುರಿಯಲು ಸೋನೆ ಮಳೆಯಾಗಿ         || ೧೩೬ ||

ಹಗಲು ಕಾವಳ ಕವಿದು ಜಗವೆಲ್ಲ ಪಂಜಡರೆ | ಹಗಲೊಡೆಯ ಪ್ರಭೆ ಮುಚ್ಚಿ ಅಡಗೆ |
ದಿಗಿಲುಗುಟ್ಟುತ ಭೂಮಿ ಹಿಡಿದು ಕುಂಕುಮವಾಗೆ | ನಡುಗಲು ಕೂರ್ಮ ಕುಂಜರವು  || ೧೩೭ ||

ಮುಂದನ ಹೆಜ್ಜೆಯ ಹಿಂದಕೆ ತೆಗೆಯದೆ | ಲಿಂಗಣ್ಣ ವೀರಸಂಗಯ್ಯ |
ಕುಂಜರವು ನಿಂದಂತೆ ಕಾಟಣ ಬಾಣಿಯ ಮುದ್ದ | ಚಂಡನಾಡುತ್ತ ತಲೆಗಳನು        || ೧೩೮ ||

ಯಾಕೆ ಕೆಟ್ಟಿರೊ ಎಂದು ಎಪ್ಪತ್ತು ರಾಯನ ಭಾವ | ನೂಕಿದ ತುರಗವನು ಚಂದ್ರಾಂಗ |
ಈಶ್ವರನ ಮೊರೆ ಬೀಳೆ ಬಿಡುವಾನೆ ಎಲೆ ಕಾಟ | ನೀ ತಕ್ಕೊ ಎದೆಯೊಳು ಧೈರ್ಯ   || ೧೩೯ ||

ಚಂದ್ರಾಂಗ ನಿನಗ್ಹೆದರಿ ಹಿಂದಕೆ ಹೆಜ್ಜೆಯಿಟ್ಟರೆ | ಮುಂಡೆಯ ಹೆಸರ ಇಡು ಎನಗೆ |
ಮುಂದಕ್ಕೆ ನಡೆ ನಿನ್ನ ಬುರುಡೆ ತೆಗೆಯದ ಮೇಲೆ | ಬಿರಿದಾಂಕ ಕಂಪಿಲನಾತ್ಮಜನೆ   || ೧೪೦ ||

ರೂಢಿಸಲು ಕೋಪಾಗ್ನಿ ರಾಯ ಚಂದ್ರಾಂಗನು | ಹಾರಿಸಿದ ತನ್ನ ತೇಜಿಯನು |
ಮೂರು ಬೀದಿಯ ಕಡಿದು ಮರಳ್ವ ಸಮಯದಿ ಲಿಂಗ | ಹಾರಿಸಿದ ತಲೆ ಬುರುಡೆ ನೆಗೆಯ      || ೧೪೧ ||

ಭಾವನು ಅಳಿಯಲು ಕುಮಾರ ಎಪ್ಪತುರಾಯ | ತಾರ ಕೆಂಡವನು ತುಳಿದಂತೆ |
ಏರಿದ ತುರಗವನು ಚಬುಕಿನಾಗ್ರವನಾಡೆ | ಮಾಮಾರಿಯಂದದಿ ಬರಲು             || ೧೪೨ ||

ಕಾಲೊಳು ತುಳಿಯುತ್ತ ಬಾಯೊಳು ಕಚ್ಚುತ್ತ | ಮೇಲವನು ಸೆಳೆದು ಕೊಚ್ಚುತಲಿ |
ಯಾವಲ್ಲಿ ಅನುಸಾರ ಠಾವರಿದು ನೂಕಿದರೆ | ಏರಿ ಒಡೆದಂತೆ ಓಡುವರು             || ೧೪೩ ||

ತೇಜಿಯ ಬಲವಿಂಗೆ ನಿಲ್ಲಲಾರದೆ ಕಾಟ | ಬೆನ್ನಾಗೆ ತಮ್ಮನಿರ್ದೆಡೆಗೆ |
ನಿಲ್ಲಿ ಓಡುವುದೇಕೆ ಹುಲ್ಲರಾಯನ ಮಗನ | ತೇಜಿ ಸಹವಾಗಿ ಪಿಡಿವೆನು               || ೧೪೪ ||

ಕಡಿಕೊಂಡು ಬರುವಂಥ ತರಳಗೆ ಇದಿರಾಗಿ | ಎದೆಗೆಡದೆ ರಾಮನು ನಿಂದು |
ಬಿಡು ನಿನ್ನ ಕಾರ್ಯವ ಸುಡಲಯ್ಯ ಎಲೆ ಪುತ್ರ | ಗಹನಮೂಳ್ಳೊಡೊ ಫಲವೇನು     || ೧೪೫ ||

ಕೋಡಗನ ಪರಿಯಲಿ ಮೇಲೆ ನೆಗೆದಾಡಲು | ರೋಮ ಬೆದರದು ಕೇಳಣ್ಣ |
ತ್ರಾಣವಿಲ್ಲದ ಬಳಿಕ ಕಾರ್ಯಕೇತಕೆ ಬಂದೆ | ರಾಯವಂಶದ ಮಾತಲ್ಲ                || ೧೪೬ ||

ಕ್ಷತ್ರಿಯ ಮತದವರು ನಿಂತಲ್ಲಿ ಹೆಣಗಲಿ ಬೇಕು | ಸತ್ತರೆ ಕೀರ್ತಿ ತಪ್ಪುವರೆ |
ಉತ್ರಕುಮಾರನಕೀರ್ತಿ ತೋರುವುದೆನಗೆ | ಕತ್ತಿ [ಯಾ]ಡಲು ತರಳ ನಿಲ್ಲು          || ೧೪೭ ||

ಲಕ್ಷಬಲದೊಳು ಬಂದು ಗೊತ್ತೇನೆಂದು ಕೇಳ್ವದೆ | ಹಕ್ಕಿಯ ತೆರದೆ ಹಾರಾಡೆ |
ಶಕ್ತಿಯುಂಟಾದರೆ ಬೆನ್ನೊಳ್ಬಾಳದೋರದೆ ಕತ್ತಿ | [ಯಾ]ಡಯ್ಯ ನಿಂತು ಕಾರ್ಯವನು || ೧೪೮ ||

ಯಾತರ ಮಾತಿದು ಜಾತಿವಂಶಕೆ ಹೀನ | ಭೂಕಾಂತೆ ಇರಲು ಬಿಡಲಹುದೆ |
ಪಾಪಿಯೆ ಛೀ ಹೋಗು ಹಡೆದರಿಗೆ ಹೀನಯೆನಲು | ಕೋಪವಡೆಯಲು ಆ ಸುತಗೆ     || ೧೪೯ ||

ಇನ್ನೊಮ್ಮೆ ನುಡಿಯಲು ಸಂಪನ್ನನ ಮಗ ರಾಮ | ಬ್ರಹ್ಮಲಿಖಿತವನು ತೀರಿಸುವೆ |
ನಿನ್ನೊಡನೆ ತಲೆವಾಗಿ ಬೆದರಿ ಹೋಗಲು ಎನಗೆ | ಹೆಣ್ಣುಗಳ ನಾಮವನು ಕರೆಸು     || ೧೫೦ ||

ಆಡಬೆಡವೊ ರಾಮ ಬಾಯಿ ಹಿಡಿಯದ ಮಾತ | ತೀರಿಸುವೆ ತಿಥಿ ಪುಣ್ಯಕಾಲ |
ರೂಢಿಸಲು ಕೋಪಾಗ್ನಿ ಏರುವ ತುರಗವನು | ಭೂಮಿ ಮಾರ್ಗದಿ ಇಳಿಸಿದನು        || ೧೫೧ ||

ಹೀನ ಕಳೆದೆನು ರಾಮ ತೋಡುವೆ ನಿನ್ನದೆಯನು | ಮೂರೈದು ಅಂಬಿನ ಒಳಗೆ |
ಆಡಿದ ಮಾತಿನ್ನು ಹುಸಿಯಾಗೆ ಕ್ಷತ್ರಿಯ | ರಾಯ ಪೀಳಿಗೆಯ ಸಂತತಿಯೆ             || ೧೫೨ ||

ಮೆಚ್ಚಹುದು ಈ ಮಾತು ಕ್ಷತ್ರಿಯ ಕುಲದೊಳಗೆ | ರತ್ನವೆನಿಸುವ ಶಿಖಾಮಣಿಯೆ |
ಇತ್ತರಕೆ ಬಲ ನಿಲ್ಲೆ ಬೆಪ್ಪಾಗಿ ನೋಡುತ್ತ | ಕಿತ್ತರು ಎದೆಯ ಅಂಬುಗಳ                || ೧೫೩ ||

ಗಣಪತಿರಾಯನ ಮೊಮ್ಮಗನು ಧನಪತಿ | ಕಿಡಿಯಿಂದೇರಿಸಿದ ಸರಳಗಳ |
ನೋಡಯ್ಯ ಕಂಪಿಲನ ಕುಮಾರ ಉಳಿಯಲುಯೆಂದು | ಸೇದಿದ ಕರ್ಣವರೆ ಮುಟ್ಟಿ   || ೧೫೪ ||

ಬಿರುಗಾಳಿಯಂದದಿ ಬರುವ ಸರಳನು ನೋಡಿ | ಹೊಡೆದನು ಹದಿನಾರು ತುಂಡ |
ದೊರೆ ಪುತ್ರನಹುದೆಂದು ನಗುತ ಚೆನ್ನಿಗರಾಮ | ಹೊಡೆವೆನು ನಾನೊಮ್ಮೆ ಸರಳ    || ೧೫೫ ||

ಕಲಿಯುಗದ ರಣರಾಮ ತೆಗೆದೈದು ಶರವನು | ಬಿಗಿದು ಏರಿಸಲು ಧನುವನು |

ತೆಗೆವೆ ನಿನ್ನಸುವನು ತರಳ ತಾಳೆಲೊ ಎಂದು | ಒಗೆದನು ನೃಪ ಶಕ್ತಿಯಲಿ           || ೧೫೬ ||

ಇಂತಪ್ಪ ಶರಗಳಿಗೆ ಎದೆ ಬೆಚ್ಚೆ ರುದ್ರನ | [ಪೌ]ತ್ರ ತರಿಗಡಿದ ಹತ್ತಾಗಿ |
ಶಕ್ತಿ ಸಾರವನೆಲ್ಲ ಕಂಡು ಚೆನ್ನಿಗರಾಮ | ಮತ್ತಿಡುವೆ ನೀ ಕಾಯ್ದುಕೊಳ್ಳೊ             || ೧೫೭ ||

ರಣಹೇಡಿ ಎನುತಲಿ ಜರಿದೆಲೊ ಎಲ ರಾಮ | ಮುರಿವೆನು ಎದೆಯ ಗರ್ವವನು |
ಬಲುಮೆಯ ಸರಳನು ತೆಗೆದು ಹತ್ತನು ಹೂಡಿ | ಒಗೆದನು ಗರುಡನಾರ್ಭಟದಿ        || ೧೫೮ ||

ತ್ರಾಣಗಾರನು ಅಹುದು ಆಡಿದ ಧರೆಯೊಳಗೆ | ಭೀಮನ ಶಕ್ತಿ ಇರುವಂಥ |
ಹಾರಿಸಿ ತುರಗವ ಹದಿನಾರು ತುಂಡಿಗೆ ಸರಳ | ಚೂರು ಮಾಡಿದನು ರಾಮುಗನು   || ೧೫೯ ||

ತಟ್ಟಿಕೊಂಡನು ಎದೆಯ ಸುಟ್ಟಿನೊಳಗೆ ಪುತ್ರ | ತೊಟ್ಟನು ಕೊಕ್ಕೆ ಸರಳಂಬ |
ಇಟ್ಟುಕೊಳ್ಳೆಲೊ ರಾಮ ತಾಯಿಗೆ ಮಗನೆಂದು | ಬಿಟ್ಟನು ಭೂಮಿ ಒದರ್ವಂತೆ       || ೧೬೦ ||

ಕತ್ತರಿ ಕಡಿಯಲ್ಕೆ ತಪ್ಪಿ ಒಂದು ಶರ | ನಟ್ಟಿತು ರಾಮನ ಎದೆಗೆ |
ಮೆಚ್ಚಿದ ಭಾನಾಬ್ಧಿಪುತ್ರನೀನಹುದೆಂದು | ಎಚ್ಚರವಿರಲಿ ನಾ ಹೊಡೆವೆ                 || ೧೬೧ ||

ನೋಡಿದ ಅಣ್ಣಾಜಿ ಬಾಲನ ಸಾಹಸವ | ಆಡಿ ದ ಮಾತು ಪುಸಿಯಲ್ಲ |
ರೂಢಿಸಲು ಅತ್ಯಂತ ಕೋಪವು ಲಿಂಗಗೆ ರೋಮ | ವೆಲ್ಲ ಏದಿನ ಮುಳ್ಳಾಗೆ           || ೧೬೨ ||

ಸಿಟ್ಟಿಲಿ ಹೂಡಿದ ಹತ್ತು ಸರಳಂಬನು | ತೀರಿಸುವೆ ಇದನ ಲಿಪಿಯನು |
ಅತಿ ಸಾಹ[ಸ]ದೊಳು ಧನುವ ಸೇದಿ ಬಿಡಲು ತೇಜಿ | ಕಚ್ಚಿತ್ತು ಭೂಮಿಗೆ ಹುದುಗಿ     || ೧೬೩ ||

ಯಮನ ಉಗ್ರದಿ ರಾಯ ಸರಳ ಸೇದಲು ರಾಮ | ನಾ ಧನುವ ಮುರಿಯುವೆನೆಂಬ
ರೋಷದಲಿ ಬಲವೆಲ್ಲ ಜಜ್ಜರಿಸಿ ಎದೆಯಲ್ಲಿ | ನಡುಗಲು ಚಳಿ ಬಂದ ತೆರದಿ            || ೧೬೫ ||

ಮೀನಿನ ಮರಿ ಮುನ್ನ ಅಂಜುವದೆ ಕಾಲ್ಹೊಳೆಗೆ | ಕಾವಳಕೆ ಗಿರಿಯು ಬೆದರುವುದೆ |
ಓಡಬಲ್ಲನೆ ರಾಯವಂಶದ ಪುತ್ರ | ಮೂರು ತುಂಡಿಗೆ ಸರಳ ಕೊರೆವ                 || ೧೬೫ ||

ಬರುವಂಥ ಸರಳನು ತರಿಗಡಿವೆನೆಂದು | ತುರಗ ಹಾರಿಸಲು ಕುಮಾರ |
ಹಿಡಿಯಲು ನೆಲವನು ಕಡಿಯಲು ಮುಂದಕ್ಕೆ | ಇಡೆದೆ ಹೆಜ್ಜೆಯನು ಮರನಾಗಿ        || ೧೬೬ ||

ಚೆಂಡಿ ಹೋರಲು ತೇಜಿ ಚಬಕ ಹೊಡೆಯಲು ನೂರ | ಗುಂಡಿನಂದದಿ ನೆಟ್ಟ ಕಾಲು |
ಕಂಡೆನೊ ಲಿಂಗಣ್ಣ ತಾಯಿ ಹಿಂದೆ ಹೇಳಿದ ಮಾತು | ಕಂಡುದೆ ಮನಕೆ ದೃಷ್ಟಗಳ    || ೧೬೭ ||

ಸಿರಿ ಕೊಲ್ವ ಕಾಲದಿ ನೇಣು ಮುನಿವುದು ಲಿಂಗ | ಒಲಿದ ಕಾಲದಿ ಲಕ್ಷ್ಮಿ ಮನೆಯ |
ಕಡೆಯ ಬಾಗಿಲು ಕಾಯ್ದು ಇರುವುದು ಸಹಜ | ನಡೆದನು ರಾಮ ಮೂರು ಹೆಜ್ಜೆ       || ೧೬೮ ||

ನಡೆಯಲು ರಣರಾಮ ಬೆದರುತ ಬಲ ಕುದುರೆ | ದೊರೆ ರುದ್ರರಾಮನ ಮಂದಿ |
ರಣರಂಗವಾಗಲು ರಾಮ ಕಾಟಣ್ಣನು | ಹೊಗಲೇರಿ ಕಡಿದೆರಡು ಬೀದಿ                || ೧೬೯ ||

ಎಪ್ಪತ್ತುರಾಯನು ಬಿಟ್ಟು ತೊಲಗದೆ ಒಳ್ಳೆ | ದಿಟ್ಟತನದಿ ಹೆಣಗುವನು |
ಮುಂಗಾರ ಸಿಡಿಲಂತೆ ರಾಮನು ಹೊಗಲೇರಿ | ದಿಂಡ ಕೊರೆವಂತೆ ಸವರುತಲಿ      || ೧೭೦ ||

ಕಡಿಕಡಿಯೆನುತಲಿ ಕಾಟಣ್ಣ ಹೋಗಲೇರಿ | ಎರಡು ಭಾಗದಲಿ ಸವರಿದರು |
ಒಂದೊಂದು ಕಡೆಯೊಳು ಲಿಂಗ ಬಾದುರ ಬಾಣಿಯ ಮುದ್ಧ | ಸಂಗಯ್ಯ ಹೊಗಲೇರಿ ಕಡಿಯೆ || ೧೭೧ ||

ಅಳಿಯಲು ಅರ್ಧವು ಉಳಿದವರು ಕರಮುಗಿದು | ಹೊಳವರಿದು ಮುಂದೆ ಜಾರುವರು |
ಬಳಸಿ ಮುತ್ತಲು ಬಂದು ರಾಯ ರುದ್ರನ ಸುತನ | ಕುರಿಯ ರೋಪವನು ಬಡಿದಂತೆ || ೧೭೨ ||

ಏರಿದ ತೇಜಿಯ ಇಳಿಯದೆ ಸವಳಂಬ | ಸುರಿಸುತ ನೂಕಿ ಬಂದೆರಗೆ |
ಮೂರೆಂಟು ಸಾವಿರ ಮೈಗಾವಲ ಬಂಟರು | ಪಾಚರಿಸಿ ಹೊಡೆದಾಡುತಿರಲು || ೧೭೩ ||

ಸಿಂಗಳ ದ್ವೀಪದ ರಂಗನಾಯಕನ ಮಂದಿ | ಬಂಧಿಸಿ ಜಗಳವಾಡುವರು |
ಹೊಂದಗೊಡದೆ ತಮ್ಮ ಒಡೆಯ ರುದ್ರನ ಸುತನ | ಮುಂದೆ ಕಡಿದಾಡಿ ಒರಗುವರು  || ೧೭೪ ||

ತಾರ ಮಲಗಲು ಅಲ್ಲಿ ಆಡು ಸಾವಿರ ಮಂದಿ | ಏರಿದ ರಂಗನಾಯಕನು |
ವೀರಸಂಗ್ಯಯನು ಓರೆ ಭಾಗದಿ ಬಂದು | ಹಾರಿಸಿ ತಲೆಯ ಕುಟ್ಟಿದನು               || ೧೭೫ ||

ಬಮ್ಮರಾಜನ ಪೇಟೆ ತಿಮ್ಮರಾಯನು ಹೊಕ್ಕು | ಹನ್ನೆರಡು ಬೀದಿ ಮುರಿಗಡಿದ |
ಬಾಣಿ ಮುದ್ದಗೆ ಚೆನ್ನರಾಮನು ಹೇಳಿ | ಒಮ್ಮೆ ಹಿಡಿಯಲು ಕೈಸೆರೆಯ                 || ೧೭೬ ||

ಕಡಿವನು ರಣಧೀರ ರಾಮ ರಣಮಯ ಮಾಡಲು | ಹೊಲ್ಲ ದೊರೆಗಳನು ಇವನು |
ಮರಳುವ ಸಮಯದಿ ಮಾದಿಗ ಹಂಪನು | ಕೊನೆ ಕಾಲ ಹಿಡಿದು ಕೆಡಹಿದನು         || ೧೭೭ ||

ಏಳಗೊಡದೆ ಒದಗಿ ಬಾಣಿಯ ಮುದ್ದನು | ಜಾಡಿಸಿ ಜುಟ್ಟನೆ ಹಿಡಿದು ||
ಪಾರದೊಡನೆ ಕೊಡಲು ರಾಯನ ಸುತನೊರ್ವ | ಮೇಲೆ ಹೆಣಗುವ ತ್ರಾಣ ಕೇಳಿ     || ೧೭೮ ||

ಮುತ್ತಲು ಎಪ್ಪತ್ತುರಾಯಗೆ ರಾಮನ ಮಂದಿ | ಹುಟ್ಟಿಗೆ ಜೇನು ಕವಿದಂತೆ |
ಶಕ್ತಿಹೀನನ ಮಾಡಿ ಸ್ವಾಮಿದ್ರೋಹಿಯು ಅಶ್ವ | ಇಕ್ಕದು ಪಾದವನು ತೆಗೆದು          || ೧೭೯ ||

ಎದೆ ಎರಡು ಅಂಬನು ಹೊಡೆಹೊಡೆದು ಬೆರಳೆಲ್ಲ | ಒಡೆದು ಜೋರಿಡಲು ರಕ್ತವನು |
ತುರುಗದ ಎಡಬಲದಿ ಉದುರಿದ ತಲೆಬುರುಡೆ | ಕುರಿಗಳಂದದಿ ಒರಗಿರಲು         || ೧೮೦ ||

ಅಂಬು ತೀರಲು ಬೇಗ ಚಂದ್ರಾಯುಧವ ಕಿತ್ತು | ಬಂದು ಒತ್ತುವರ ನೂಕುವನು |
ಕೊಂದನು ಬಲ ಬಹಳ ಕೊಡು ಅಪ್ಪಣೆಯೆನುತಲಿ | ಸಂಗಯ್ಯ ಬಾದುರ ಕೇಳೆ        || ೧೮೧ ||

ಮರುಳಾಟ ನಿಮಗೇನು ಒಳಗಾಗಗಬಲ್ಲನೆ ಅವನು | ಯಮನ ಕಾಣಿಸುವ ಗಳಿಗೆಯಲಿ |
ಹೊಳವರಿತು ಕೈಸೆರೆಯ ಹಿಡಿಯ ಬೇಕಲ್ಲದೆ | ಕೊಲಬಹುದೆ ರಣವಿಜಯನಾದವನ  || ೧೮೨ ||

ಕ್ಷತ್ರಿಯ ಕುಲದವರು ತಲೆಗೊಟ್ಟು ಸಾವಿರ ಬುರುಡೆ | ರಕ್ತದ ಹಳ್ಳ ಹರಿದ್ಹೋಗೆ |
ಯುಕ್ತಿಯಲಿ ಇಳಿಸುವೆನೆಂದು ಚೆನ್ನಿಗರಾಮ | ಮತ್ತವನ ಸನ್ನಿಧಿಗೆ ಬರಲು            || ೧೮೩ ||

ಯಾತಕ್ಕೆ ಹೆಣಗುವುದು ಎಪ್ಪತ್ತುರಾಯನೆ ಭೀಮ | ಪರಾಕ್ರಮಿಯಬಹುದು ರಣದೊಳಗೆ |
ಪಾಪಿ ತುರುಗವು ನಿನ್ನ ತೊಲಗು ಕಾಲವು ಬರಲು | ಅಪಕೀರ್ತಿ ಮಾಡಿತು ಧರೆಯೊಳಗೆ      || ೧೮೪ ||

ಜಗಳವು ಇನ್ನೇಕೆ ಬಲವೆಲ್ಲ ಲಯವಾಗೆ | ತಿಳಿಯದೆ ಸುಮ್ಮಗೆ ಬುದ್ದಿ |
ಹುಲಿ ಬಂದು ಬೋನೊಳಗೆ ಬಿದ್ದ ಹೆಣಗುವ ಗಾದೆ | ಹಗೆ ಜನ್ಮ ಈ ತುರಗ ನಿನಗೆ    || ೧೮೫ ||

ಹಿಂದಾದ ಕಥೆಗಳ ಕವಿಯಿಂದ ಕೇಳ್ದರಿಯಾ | ಧರಣೀಂದ್ರನಾದ ಶೂದ್ರಿಕನು |
ಬಂದಿದ್ದ ವಿಧಿವಾಸ ತುರಗವಾಗಿಯೆ ಜನಿಸಿ | ಕೊಂಡೊಯ್ಯೆ ನೀನರಿದೆ ಕಂಚಿಯಲಿ   || ೧೮೬ ||

ರಣವಿಜಯನಹುದಯ್ಯ ನವಖಂಡ ರಾಯರ ಒಳಗೆ | ಬಡವರಿಗೆ ಮುನ್ನ ಮುರಿವವನೆ |
ಬಿಡು ನಿನ್ನ ಛಲವೇಕೆ ಹೆಡತಲೆ ಮೃತ್ಯಾಗಿ | ಹಿಡಿಯಿತು ತೇಜಿ ನೆಲ ಚಂಡಿ           || ೧೮೭ ||

ತಡೆದೆನು ನಾ ಕೈಯ ನೀ ಹೊಡೆವ ಕಾರ್ಯಕೆ ಮೆಚ್ಚೆ | ಮನಸಿಡಲು ಬಿಡುವೆನೆ ಮರುಳರಸೆ |
ಪಡೆದವರ ಬುಡಕೊಬ್ಬ ಕೆಡಿಸಬಾರದು ಎಂದು | ಧೃಡದಿ ನಾ ಸೈರಿಸಿದೆ ಕೈಯ      || ೧೮೮ ||

ಹಡೆದವರ ಬಳಿಗೊಮ್ಮೆ ಕಳುಹಿಕೊಡುವೆನು ಪುತ್ರ | ಬಿಡು ನಿನ್ನ ಛಲಪಂಥ ಸುಡಲಿ |
ಹಡೆದಾಕೆ ಹರಿಯಮ್ಮ ಜಟ್ಟಂಗಿ ಸಾಕ್ಷಿಯ ಕೊಳ್ಳೊ | ಹರನಡಿಯ ತಪ್ಪಿದ ಹಾಗೆನಲು || ೧೮೯ ||

ರಾಯ ಕಂಪಿಲನಾತ್ಮಜ ಕೇಳಯ್ಯ ನೀ ಮುನ್ನ | ಹೀನಾಯ ಬಿಡದು ಧರೆಯೊಳಗೆ |
ನಾ ಬೇರೆ ನಿನಗಂಜಿ ಊರ ಹೊಗುವೆನೆ ಮರುಳೆ | ಹಾಳು ತುರಗದಿ ಹೀಗೆ ಬಂತು   || ೧೯೦ ||

ಕೊಡಲಾಗ ನಂಬಿಗೆಯ ತರಳ ಒಪ್ಪಿದ ಮುನ್ನ | ಹಿಡಿದ ಪಿರಂಗಿಯ ಕಡೆಗಿಡಲು |
ದೊರೆ ರಾಮ ಕಾಟಣ್ಣ ಹರುಷದಿಂದಲಿ ಕರ | ವಿಡಿದು ತುರಗ ಇಳಿಸಿದರು             || ೧೯೧ ||

ರಕ್ತದ ಕರಗಳನು ಅಕ್ಷದೊಳು ತೊಳಿಸಿ | ಉತ್ತಮದ ದೇವಾಂಗ ಹೊದಿಸಿ |
ಮುತ್ತಿನ ಪಲ್ಲಕ್ಕಿ ಕೊಟ್ಟು ರಾಯನ ಸತುಗೆ | ಮತ್ತೆ ಪಾಳೆಯಕೆ ಸಾಗಿಸಲು            || ೧೯೨ ||

ಭಾವಾಜಿ ಸಂಗಯ್ಯ ಬಾದುರಖಾನನ | ಮೈಗಾವಲ ಹಾಕಿ ಕಳುಹಿದನು |
ಏರುವ ತೇಜಿಯ ರಾಮನು ಹರುಷದಿ | ಪೂಜೆ ಮಾಡಿಸಲು ತೇಜಿಯನು             || ೧೯೩ ||

ಒಲಿವ ಸಾರಥಿ ಇರಲು ನಲಿದು ಮುಂದಕೆ ಸಾಗಲು | ಕಲಹ ಹೋಗಲು ಚೆಂಡಿ ಹೋರು |
ಮಲಹರನೆ ಗತಿಯೆಂದು ಸ್ಮರಿಸಿ ತೇಜಿಯ ಏರೆ | ಮನ ಹರುಷವಾಗಲು ತೇಜಿ      || ೧೯೪ ||

ಪೂರ್ವಜನ್ಮದ ಶಾಪ ಕೈಸೇರಿ ಬಂದಿತು ಮುನ್ನ | ಭೇರಿಯನು ಹೊಡೆಯೆಂದೆನುತ |
ಗೋವಿಂದನೇರುವ ಗರುಡನಾರ್ಭಟದೊಳು | ನಿಜಜ ಛಲಶಕ್ತಿ ಬಂತು               || ೧೯೫ ||

ಪಿಡಿದ ಭೂಮಿಯ ಬಿಟ್ಟು ನಡೆಯಲ್ಕೆ ನೆಲನೊದರೆ | ಅಡರಲು ಮೇಘಮಾರ್ಗದಲಿ |
ಹರಿಣನ ಹಿಮ್ಮೆಟ್ಟಿ ಮಾರುತಕೆ ಮುಂದರಿದು | ಎರಗಲು ಗರುಡನಾರ್ಭಟದಿ          || ೧೯೬ ||

ಹರಷವಾದನು ರಾಮ ವರಗುರುವಿನ ಕೃಪೆಯಿಂದ | ಬರೆದುದಲ್ಲದೆ ಬೇರೆ ಬದಲೆ |
ಮುರಿದೋಡು ಹಂದಿಯು ಬೆದರಿಸಲು ಹುಲ್ಲೆಯ | ಮರಿಯಂತೆ ಗಿಡಕೊಬ್ಬರಾಗೆ     || ೧೯೭ ||

ಹೋಗಗೊಡೆದೆ ರಾಮ ಊರ ಬಾಗಿಲ ಕಟ್ಟಿ | ಮಾಡಿರೆ ಜಗಳ ಹೂಡುವರೆ |
ಆಯದ ಕೈಬಿಟ್ಟು ತಾಯಿ ತಂದೆಗೆ ಒಬ್ಬ | ಮುಂದಾದ ಮಕ್ಕಳು ನಿಮ್ಮ ಹೆಸರು      || ೧೯೮ ||

ಕಡಿಯದೆ ಒಬ್ಬರ ಮುಗುಳು ನಗೆಯೊಳು ನಗುತ | ಹಿಡಿಸಿದ ಧರ್ಮ ಕಹಳೆಯನು |
ಉಳಿದೆವಿಂದಿಗೆ ಪ್ರಾಣ ಯಮರಾಜ ವಾಲೆಯ | ಕಳುಹಿದನು ಪುರ ತುಂಬಿತೆನುತ   || ೧೯೯ ||

ಗೆದ್ದೆವು ಮಾರಿಯ ಹಬ್ಬವ ಕುರಿ ಕಳದು | ಬಿದ್ದು ಓಡುವರು ಉಳಿದವರು |
ಬುದ್ಧಿಗಲಿಸಿದ ರಾಮ ಸತ್ತು ಬಂದೆವು ಮರಳಿ | ಹಿಡಿದೀ ವಾಲೆ ಕಾರ್ತಿಕೆಯ           || ೨೦೦ ||

ರಣವ ಶೋಧಿಸಿ ರಾಮ ಪ್ರಳಯ ಕಾಲದ ಭೀಮ | ಅಳಿದ ಮಂದಿಯ ಲೆಕ್ಕ ನೋಡಿ |
ಸುಡು ಸಾವು ಏಳ್ನೂರು ಗಾಯ ಒಂದು ಸಾವಿರ | ಸುಡಿಸಿದ ಅತ್ತವರ ಬೇಗ          || ೨೦೧ ||

ನೊಂದು ಕೊಳ್ಳುತ ರಾಮ ಸಂದವರ ಮಕ್ಕಳಿಗೆ | ಇಂದಿನ ಮೇಲೆ ಸಂಬಳವ |
ತಂದೆಯ ಬಳಿಗಿನ್ನು ವಾಲೆಯ ಕಳಿಸುತ್ತ | ಬಂದನು ತನ್ನ ಪಾಳೆಯಕೆ                || ೨೦೨ ||

ರಾಯ ರುದ್ರನ ಮಂದಿ ಗಾಯದೊಡನೆ ಪೋಗಲು | ಏಳೆಂಟು ಸಾವಿರ ಬಲವು |
ಮೋರೆಯ ತೋರದೆ ಓಡಿದೆಕ್ಕಟಿಗರು | ಗೂಬೆಯಂದದಿ ಮನೆಯ ಸೇರೆ             || ೨೦೩ ||

ಅದರೊಳಗೊಬ್ಬನು ದೊರೆಯ ಸದರಿಗೆ ಬರಲು | ಕರಮುಗಿದು ವಾರ್ತೆ ಪೇಳಿದನು |
ಅಳಿದವರ ಪೇಳುವರೆ ಎನಗೆ ಸಾಗದು ರಾಯ | ಉಳಿದವರು ನಾಲ್ಕೆಂಟು ಸಾವಿರವು         || ೨೦೪ ||

ದಂಡೆಲ್ಲ ಮುಳುಗಿದರೆ ಮತ್ತೊಂದು ನೋಡಬಹುದು | ಕಂದ ಸೇರಿದ ಕೈಸೆರೆಯ |
ಸಿಂಗಳದ್ವೀಪದ ರಂಗನಾಯಕನಳಿದು | ತಿಮ್ಮರಸು ಸೆರೆಹೋದ ಭೂಪ             || ೨೦೫ ||

ಬೊಲ್ಲನು ಕೈಸೆರೆಯ ಸೇರಿದನೆಂಬುದ ಕೇಳಿ | ರಾಯ ತಲ್ಲಣಿಸಿ ಶೋಕದಲಿ |
ಜೀವದೊಳ್ನುಡಿಯೆಲ್ಲ ಹಾರಿತು ಪರಮಾತ್ಮ | ಭೂಮಿ ಪಾತಾಳಕ್ಕೆ ಇಳಿಯೆ           || ೨೦೬ ||

ರಾಯ ರುದ್ರನು ಹೀಗೆ ಪ್ರಳಾಪದೊಳಿರುವಾಗ | ಗೋಳ ಲಾಲಿಪು[ದು] ಈ ಪುರದ |
ಸಾರಿ ಹೆಣ್ಣುಗಳೆಲ್ಲ ಕೇರಿ ಬೀದಿಯ ಒಳಗೆ | ಸಾರಿಸಿ ನೆಲನ ಗೋಳಿಡಲು              || ೨೦೭ ||

ಬಾಲೆಯರು ಚಿಕ್ಕ ಪ್ರಾಯದ ಲಲಿತೆಯರು | ಕಾಣದಿಹರು ಕಾಮ ಕಲೆಯ |
ನೂರಲ್ಲ ಆರಲ್ಲ ಹದಿನಾರು ಸಾವಿರ | ಹೆಣ್ಣುಗಳ ಗೋಳ ಶಿವ ಬಲ್ಲ                    || ೨೦೮ ||

ನಾರಿಯ ನಖ[ದಂತ] ದಾಳಿಂಬದ ಬೀಜವು | ತಾವರೆಯಲ ಬಿರಿ ಮೊಗ್ಗೆ ಕುಚವು |
ಗೋವಿಂದನಾತ್ಮಜನ ಭಾ[ವ] ಕಿಂಚದ ಗಂಡ | ಮೂರೆರಡು ದಶಕ ಗೋಳಿಡಲು     || ೨೦೯ ||

ಹೇಳಿ[ರೆ] ನಿಜವಾಗಿ ಲಯವಾದನೆ ಎನುತೆ | ತೊಟ್ಟಿರುವ ಬಳೆಗಳ ಒಡೆವೆ |
ಬಾಲರಿಗೆ ಗತಿಯೇನು ಕೂಡಿದ ಸತಿ ಮುಂದೆ | ಯಾವ ರೀತಿಯಲಿ ಬದುಕೆಂದ       || ೨೧೦ ||

ಹೊರಳುತ ಉರಳುತ ತಲೆ ಬಿಚ್ಚಿ ಕೆದರುತ | ಗಿರಿಜಾವಲ್ಲಭಗೆ ಮೊರೆಯಿಡುತ |
ಅರೆ ಬಾಳು ತನಗೆಂದು ವಿಧಿ ಮುಂಡೆ ಬರೆ[ದಂ]ತೆ | ಪುರುಷನ ತಾ ಕೂಡೆ ಮುಂದೆ  || ೨೧೧ ||

ಆಯಿತ್ತೆ ನಮಗಿಷ್ಟು ಭೋಗದ ಬಾಳೆಮ್ಮ | ತಲೆ ಬಾಚಿ ಹೂಮುಡಿದ ದಿನವು |
ಕಾಂತನು ಇರುವಾಗ ಕಳಸ ಕನ್ನಡಿಗೆಮ್ಮ | ಬಾರೆಂಬುವುದಿನ್ನು ಉಂಟೆ              || ೨೧೨ ||

ಸಾಯದೆ ಸ್ಥಿರಂಜೀವಿ ಕಾಲಪಡೆದವರಾರು | ಬದುಕಲಿಲ್ಲವು ಅರ್ಧ ಪ್ರಾಯ |
ಜೀವವ ಬಿಡಲಿಕ್ಕೆ ಗೃಹ ಅಡವಿ ಕಾಡಾಗೆ | ಕಾಡ ಹೆಣನಾಗಿ ಒರಗುವರೆ               || ೨೧೩ ||

ಅವ ಜಾಣನೇನಕ್ಕಯ್ಯ ರಾಯ ರುದ್ರನ ಜಗಳ | ಲಯವಾಗಿ ಬರಲು ಎರಡು ವೇಳೆ |
ಬಾಲನ ಕಳುಹದೆ ಬದಲಾಗಿ ಮೇಕೆಯ ಕಾಯ್ವ | ಮೂಢ ಮಾಡುವನೆ ಈ ಕಾರ್ಯ  || ೨೧೪ ||

ಅಳಲೇಕೆ ಅವನುಪ್ಪ ಕಡೆತನಕ ನಾ ಉಂಡು | ಕಡಿಯದಿರಲು ಮಿಂಡ ಬಿಡನು |
ಅರಸ ಕೇಳಲು ನಿಮ್ಮ ಕೊರೆಸ್ಯಾನು ಕಿವಿ ಮೂಗ | ಹಲವಾಡಿ ರಂಡೇರ ನಡೆ ಮನೆಗೆ         || ೨೧೫ ||

ನಗರದ ನಾರಿಯರು ಅಳಲಿ ಆರ್ಭಟಗೊಂಡು | ಬಳಲಿ ಮನೆಗಳನು ಸೇರಿದರು |
ತೈಲವು [ಸು]ರಿಯದ ಜ್ಯೋತಿಯಂದದಿ ಬಂದು | ಕುಳಿತನು ರುದ್ರ ಸದರಿಗೆ         || ೨೧೬ ||

ಬೇಗದಿ ಕರೆಯಿರೊ ಜೀವಣ್ಣ ಮಂತ್ರಿಯನು | ರಾಯ ಪೇಳಲು ಊಳಿಗಕ್ಕೆ |
ಹೋಗಿ ಪೇಳಲು ಮಂತ್ರಿ ವಾಯುಗಮನದಿ ಬಂದು | ರಾಯಗೆ ಕರ ಮುಗಿದು ಎರಗೆ || ೨೧೭ ||

ಬಾರಯ್ಯ ಮಂತ್ರಿಗಳರಸನೆ ನಿನ್ನಯ ಮಾತು | ವಾರಿಜೋದ್ಭವನ ಲಿಖಿತಗಳು |
ಹೂಡಿದರು ಕದನವ ಹೇಡಿ ದೊರೆಗಳು ಎನ್ನ | ಬಾಲಗೆ ಬಡಿಕಲ್ಲು ಬಂತು             || ೨೧೮ ||

ಕರಿತುರಗ ಮುಳುಗಿದರೆ ಜಯವಿಲಲವೆಂಬುವುದು | ತರಳ ಕೈಸೆರೆಯ ಹೋದಲ್ಲಿ |
ಬಿಡಲಾರದಪಕೀರ್ತಿ ರವಿ ಶಶಿ ಉಳ್ಳನಕ | ತಾನು ಮರೆಯಬಹುದೆ ಪ್ರಾಣವನು      || ೨೧೯ ||

ಆದಂಥ ಅಪಜಯದ ಕೇಡ ಮುರಿಯಲು ಸೀಳಿ | ಮಾಡಿಸ ಸುತನು ಕೋಪವನು |
ಮಾಡಿದ ಅಪರಾಧ ಪಾದದಿಂದಲೆ ಉಳಿದು | ಹಮ್ಮಿಡಿದ ಬ್ರಹ್ಮನು ಕೆಡಿಸಿ            || ೨೨೦ ||

ಹೋಗಯ್ಯ ಎಲೆ ಮಂತ್ರಿ ಹಲವಾಡಲು ಏನುಂಟು | ನೀ ಹೋಗಿ ರಾಮನ ಬಳಿಗೆ |
ಏನ ಬೇಡಲು ಕೊಟ್ಟು ಸಂತಾನವ ತರುವಂಥ | ದಿಟ್ಟತನವ ಮಾಡೆನಲು            || ೨೨೧ ||

ಪಾದದಪ್ಪಣೆಯಾಗೆ ಹೋಗಿ ಬರುವೆನು ಭೂಪ | ಸಾಗಿಸಲು ತಕ್ಕ ಉಡುಗೊರೆಯ |
ಕಾಣಿಕೆ ಉಲುಪೆಯ ದ್ವೀಪಾಂತ್ರ ವರಚೋದ್ಯ | ಸಾವಿರ ಸಂಖ್ಯೆ ಸಾಗಿಸಲು         || ೨೨೨ ||

ನಡೆಯಲು ಮಂತ್ರೀಶನಡರಿ ಪಲ್ಲಕ್ಕಿಯ | ಎಡಬಲದಿ ನೂರಾರು ಕುದುರೆ |
ತಡವ ಮಾಡದೆ ಬಂದು ರಾಯ ರಾಮನ ಕಂಡು | ಕಡೆ ಉಕ್ಕುಡದೊಳು ತಡೆಯೆ    || ೨೨೩ ||

ತಡೆದವರ ಒಡನೆ ನುಡಿದನಾಕ್ಷಣ ಮಂತ್ರಿ | ಕೊಡಿ ಸುದ್ಧಿ ಹೋಗಿ ರಾಮಯಗೆ |
ಚರರಾಗ ಕರಮುಗಿದು ವಿಸ್ತರ ಪೇಳಲು | ಬರಹೇಳಿ ಅಪ್ಪಣೆ ಕೊಡಲು                || ೨೨೪ ||

ಪ್ರಳಯಕಾಲದ ರಾಮ ಸದರ ಮಾಡಿಸಿ ಕುಳಿತ | ದೊರೆ ಸುತನು ಎಡದಲ್ಲಿಹನು |
ಬಲದೊಳು ಕಾಟಣ್ಣ ತಿಮ್ಮರಸು ಸಹವಾಗಿ | ನಡುಮಧ್ಯೆ ರಾಮನು ಒಪ್ಪೆ            || ೨೨೫ ||

ಕರಿ ತುರಗ ಕಾಲಾಳು ಕಾಯ್ದು ಓಲೈಸುತ | ಹೊಗಳುತ ಭಟ್ಟರು ಬಿರಿದುಗಳ |
ಇರುತಿರಲು ದೇವೇಂದ್ರ ಪದವಿಗೆ ಮಿಗಿಲಾಗಿ | ಎಡಬಲದಿ ಮನ್ನೆಯರು ನಿಂದು      || ೨೨೬ ||

ಅಂತಪ್ಪ ಸಮಯದಿ ಹೊಕ್ಕು ಜೀವಣ ಮಂತ್ರಿ | ಇಟ್ಟ ಕಾಣಿಕೆಯ ಕರಮುಗಿದು |
ಪೃಥ್ವಿರಾಯರ ಗಂಡ ಮಲೆತವರಿಗೆ ಮಿಂಡ | ಒಪ್ಪಿಕೊಳ್ಳೆನುತ ಕರ ಮುಗಿಯೆ        || ೨೨೭ ||

ರಾಮನೆ ರಣಧೀರ ಭೇರುಂಡನೆ ವಾರಿಧಿ | ಗುಣರಾಯನೆ ರಾಮಚಂದ್ರ |
ಪಾಲಿಸಬಹುದೆಮ್ಮ ಕುಮಾರನ ದಯಮಾಡಿ | ನಿಂ ಪಾದ ಕಂಡು ನೆನೆವೆವು         || ೨೨೮ ||

ಬಂದೀತು ಎಲೆ ಮಂತ್ರಿ ಅಂಬಿಗೆ ತೆಳುವಾಗಿ | ಮಂದರಗಿರಿಯ ಮಾಡಿದೆ |
ಒಂದೊಂದು ಛಲಪದವ ಹೇಳಿಕೊಂಡರೆ ಮಂತ್ರಿ | ಪಿಂಡ ನಡುಗುವುದು ತಲ್ಲಣಿಸಿ    || ೨೨೯ ||

ಸಿಕ್ಕಿದ ದೊರೆ ಗಮನ ಕೊಟ್ವೊರುಂಟೆನೊ ಮಂತ್ರಿ | ನಾ ಸಿಕ್ಕಲು ನೀವು ಬಿಡುವಿರೆ |
ಕೃಷ್ಣನ ಮೊಮ್ಮಗನ ಬಾಣನು ಸೆರೆವಿಡಿದು | ಬಿಟ್ಟನೆ ಹೆದರಿ ಎಲೆ ಮಂತ್ರಿ             || ೨೩೦ ||

ಮಾಡಿರೊ ಜಗಳವು ಸಾಲದಿರಲು ಮತ್ತೆ | ಬಾಣ ಬತ್ತಿಗಳ ಕೊಡುವೆನು |
ತ್ರಾಣವಿರಲು ನಾಳೆ ಮಾಡೇಳು ಕತ್ತಿಯು | ಸಾಲದೆಂದರೆ ಮಾಡಿ ಕೊಡುವೆ          || ೨೩೧ ||

ಹಿಂದುಳಿದ ಕಪ್ಪವು ದಂಡಿನ ವೆಚ್ಚಗಳು | ಬಂದ ಮಂದಿಗೆ [ಊಟ]ಗಳು |
ಕಂದನು ಬೇಕೆಂದು ರಾಜೇಂದ್ರ ಬಂದರೆ | ಅಂದಿಗೆ ನೋಡುವಾ ಮಂತ್ರಿ             || ೨೩೨ ||

ಕೇಳಯ್ಯ ಎಲೆ ಮಂತ್ರಿ ಆಡಿ ತಪ್ಪೊರ ಗಂಡ | ನೋಡುವೆ ದಿನ ಇಂದು ಬೆಳಗು |
ಬಾರದಿರಲು ಹೋದ ನಾಳೆ ಓರುಗಲ್ಲ | ಕೈಯ್ಯಲ್ಲಿ ಕಡ್ಡಿಯ ಕೊಳ್ಳೊ                  || ೨೩೩ ||

ಭಾಪುರೆ ರಣವಿಜಯ [ಪು]ರದಲ್ಲಿರುವರ ಕರೆ ತರುವೆ | ನೀ ಪಾಲಿಸೆನಗೆ ನಂಬಿಗೆಯ |
ಮಾತಾಪಿತರ ಅಭಯ ನೀ ಕೊಳ್ಳೊ ಮನೆದೈವ | ಜಟ್ಟಂಗಿ ಭೂತೇಶನಭಯ        || ೨೩೪ ||

ಕೊಡಲಾಗ ನಂಬಿಗೆಯ ದೃಢಚಿತ್ತದೊಳು ಮಂತ್ರಿ | ನಡೆಯಲು ಅಡಿಗೆರಗಿ ಪುರಕೆ |
ಒಡೆಯ ರಾಜೇಂದ್ರಗೆ ಕರ ಮುಗಿದು ಹೇಳುವನು | ನುಡಿದ ವಿವರವ ರಣರಾಮ      || ೨೩೫ ||

ಪುತ್ರನ ಬಿಡಲಿಕ್ಕೆ ಹೆತ್ತವರು ಬರಲೆಂದು | ಕೊಟ್ಟರು ನಂಬಿಗೆ ಅಭಯ |
ಹೆತ್ತಯ್ಯನ ಕಾಲದಿ ನಿಂದ ಪೌದಿಯ ವೆಚ್ಚ | ಮುಟ್ಟದಿರಲು ಪುರ ಮುತ್ತುವೆನು        || ೨೩೬ ||

ಕೊಡಬಹುದು ರೊಕ್ಕವ ಕೊಟ್ಟೆನಾದರು ನಾಳೆ | ತರಬಹುದು ಮನ ಮುರಿದ ಕಾಲ |
ತರಳಗೋಸ್ಕರ ನಾವು ಹೋದರೆ ಎಲೆ ಮಂತ್ರಿ | ಕೆಡು ಕಾರ್ಯವಾಗಲು ಕಷ್ಟ        || ೨೩೭ ||

ನಂಬಿಗೆಯಿತ್ತನು ಜಟ್ಟಂಗಿದೇವನ ಅಭಯ | ತಂದೆ ತಾಯಿಗಳ ಕದ ನೀಡಿ |
ಬಂದಳು ಅನಿತದಿ ರಾಯ ರುದ್ರನ ಮಡದಿ | ಗೋಳೆನ್ನುತ ಮಂತ್ರಿಯೆಡೆಗೆ           || ೨೩೮ ||

ಸುತನು ಶರೀರವು ಮಿಕ್ಕಿ ಹೋದ ಎಲೆ ಮಂತ್ರಿ | ಕುಟ್ಟಿಕೊಳ್ಳುತ ಎದೆ ಬಾಯ |
ದುಃಖ ಯಾತಕೆ ತಾಯಿ ಲೋಲಾಪಿಲಿ ಇಹನಮ್ಮ | ಒಪ್ಪಿರುವೊಂದು ಸಾವಿರೊಳಗೆ  || ೨೩೯ ||

ಏಳಯ್ಯ ಎಲೆ ಮಂತ್ರಿ ನಾ ಬರುವೆ ಮೊದಲಾಗಿ | ಪೋಗಿ ಕರೆತರುವ ಬಾಲಕನ |
ಕಾಣುತ್ತ ರಾಜೇಂದ್ರ ಪ್ರಾಣಕಾಂತೆಯ ದುಃಖ | ಹೊರಿಸಿಕೊಡುವ ಪೌದಿ ಹೊನ್ನುಗಳ || ೨೪೦ ||

ಮುತ್ತಿನ ಪಲ್ಲಕ್ಕಿ ಹತ್ತಿದ ರಾಜೇಂದ್ರ | ಹತ್ತೆಂಟು ಸಾವಿರ ಬಲದಿ |
ಸಾಗಲು ಚರರಾಗ ಬೇಗ ಸುದ್ದಿಯ ಕೊಡಲು | ರಾಮ ಶೃಂಗರಿಸಿ ವಾಲಗವ          || ೨೪೧ ||

ದೇವೇಂದ್ರ ಭೋಗದಿ ಇವರು ಇರುತಾಗ | ರಾಯ ರುದ್ರನು ದಂಡ ಪೊಗಲು |
ರಾಯನ ಸುತ ರಾಮ ಕರವಿಡಿದು ಕಾಟಣ್ಣ | ಕ್ಷೇಮವೆನ್ನುತ ಹಸ್ತ ಪಿಡಿಯೆ             || ೨೪೨ ||

ಆನಂದ ಪರಿಪೂರ್ಣ ಧೀರ ಚೆನ್ನಿಗರಾಮ | ಪ್ರೇಮವೆನ್ನುತ ರಾಯನ ಪಿಡಿದು |
ನಾಲ್ವರು ಸಮನಾಗಿ ಸದರಿನೊಳಗೆ ಕುಳಿತು | ಆಡುವರು ಪಲ ಬಗೆಯ ಮಾತ      || ೨೪೩ ||

ಉಡುಗೊರೆ ಉಲುಪೆಯ ಕೊಡತಕ್ಕ ಹೊನ್ನನು | ಸುರಿಸಿದ ಸದರಿನೊಳು ಅರಸ |
ರಣವಿಜಯಭೇರುಂಡ ರಾಯ ರಾಮನೆ ಎಮ್ಮ | ತನುಜನ ಪಾಲಿಸು ಹರಸು         || ೨೪೪ ||

ತಡೆದೆನು ನಾ ಕೈಯ್ಯ ತಾಯಿಗೊಬ್ಬನೆ ಎಂದು | ಕಡಿದನು ಕೊಲೆಯ ಬಹು ಬಲವ |
ಸೈರಿಸಿದೆ ತನ್ನಯ ರವರುದ್ರ ಶಾಂತಿಯ ಮಾಡಿ | ತನುಜನ ಪಾಲಿಸು ಹರಸು       || ೨೪೪ ||

ರಾಯ ಮುಮ್ಮೋಜಿಯ ಪಾಡುರಂಗಯ್ಯನ | ಮೂಳ ಮಂತ್ರಿಯು ಲಿಂಗರಸ |
ಓರಂತೆ ಎಲ್ಲರಿಗೆ ಉಡುಗೊರೆ ತೇಜಿ ಕೊಟ್ಟ | ರಾಯ ರುದ್ರಗೆ ಗೆಲುವಾಗಿ             || ೨೪೬ ||

ಇನ್ನೇನು ನುಡಿ ರಾಯ ಧರ್ಮಸೆರೆಗಳ ಬಿಟ್ಟೆ | ಎಮ್ಮೊಳಗೆ ಗರ್ವ ನಡೆಸದೆ |
ನಿನ್ನೊಳು ಇನ್ನೊಬ್ಬ ಎತ್ತೆಣಿಸಿ ಬರಲು ಪೇಳು | ಬ್ರಹ್ಮಲಿಖಿತವ ತೀರಿಸುವೆ            || ೨೪೭ ||

ಪುತ್ರನ ಸೆರೆ ಬಿಟ್ಟು ಕೀರ್ತಿಯ ಪಡಕೊಂಡೆ | ಹತ್ತುವ ತೇಜಿಯ ಕೊಡಿಸು |
ಪೆತ್ತ ಮಗನಿಗೆ ಮೂರು ಹೆಚ್ಚಾಗಿ ಸಲಹಿದೆ | ಸೆಟ್ಟಿ ಲಿಂಗಣ್ಣನ ಕಳುಹು                || ೨೪೮ ||

ಲಿಂಗ ತೇಜಿಯ ಸುದ್ದಿ ಇಂದಿಗೆ ಮರೆ ರಾಯ | ನಾ ಬಂದುದೇತಕೆ ನಿಮ್ಮ ಪುರಕೆ |
ತಂದೆ ಕಂಪಿಲ ಭೂಪ ಛಲವ ಮಾಡಲು ಕಲ್ಲು | ಬಂದು ಬಡೆಯಿತು ತೇಜಿಯಿಂದ    || ೨೪೯ ||

ತುರಗದ ಆಸೇಕೆ ಗೆಲಬಹುದು ಪುರಕಾಗಿ | ತನಗಿರಲೆಂದು ಪೇಳಿದನು |
ಬಲು ಮಾತನಾಡಿದರೆ ಬರಲೀಗ ನ[ಗರ] ದೊಳು | ನಡೆಯಯ್ಯ ರುದ್ರಭೂಪಾಲ    || ೨೫೦ ||

ಪ್ರೀತಿಗಳು ಇರಲೆಂದು ರಣಭೂಪ ಚೆನ್ನಿಗರಾಮ | ತಾ ಪೊಕ್ಕ ರುದ್ರಪಟ್ಟಣವ |
ಲೋಕಾಧಿಪತಿ ರಾಮ ಬಂದು ಗುಂಡಯ್ಯನ | ಕ್ಷೇತ್ರ ಎಲ್ಲೆಯಕೆ ಪಾಳ್ಯೆ ಇಳಿಯೆ      || ೨೫೧ ||

ಗುಂಡಬ್ರಹ್ಮಯ್ಯಗೆ ಘನ ಪರ್ವಗಳ ಮಾಡಿ | ಉಂಡು ದಣಿಯಲು ಓರುಗಲ್ಲು |
ಕಂಡನು ತಾಯೊಡಲ ರವಿಯು ಪೂರ್ವಾದ್ರಿಗೆ | ಬಂದು ಸೋಮನು ಮುಖದೋರೆ  || ೨೫೨ ||

ಉದಯವಾಗಲು ರಾಮ ನಡೆದನು ಅಲ್ಲಿಂದ | ಎಡಬಲದ ದೊರೆಗಳು ಬೆದರೆ |
ಕುದುರೆ ಮಂದಿಯು ಸಹ ಕಪ್ಪ ಕಾಣಿಕೆ ಹೇರಿ | ನಡೆಯೆ ಮುಂ ದಂಡು ರಾಮನಿಗೆ    || ೨೫೩ ||

ಏಳೆಂಟು ಪ[ಯ]ಣಕೆ ಹೋಗಿಳಿದ ಹಂಪೆಯ | ಭಾಗೀರಥಿ ಎಂಬ ಹೊಳೆಗೆ |
ಕೂಡಿತು ಅಲ್ಲಿಗೆ ಎಂಬತ್ತು ಸಾವಿರ ಕುದುರೆ | ಹದಿನಾರು ದಿವಸಕೆ ಗುತ್ತಿಗಿಳಿದು       || ೨೫೪ ||

ಚಾಮಯ್ಯನು ಭೆಟ್ಟಿಯಾಗೆ ಚೆನ್ನಿಗರಾಮ | ಸಾಗಿದ ಬಳ್ಳಾರಿಪುರಕೆ |
ಸೂರ್ಯ ಉದಯಕೆ ಎದ್ದು ಆನೆಗೊಂದಿಗೆ ಇಳಿಯೆ | ರಾಯ ಕಂಪಿಲ ಸುದ್ಧಿ ಕೇಳಿ     || ೨೫೫ ||

ಹೊರಡಲು ಮಗ ಬರುವ ಸಡಗರವ ನೋಡಲ್ಕೆ | ಒಡಗೊಂಡು ಮಂತ್ರಿ ಬೈಚಪ್ಪ |
ತೇಜಿ ಮಂದಿಯು ಕೂಡಿ ಬರಲಾಗ ಇದಿರಿಗೆ | ಚರರು ಹೇಳಿದರು ರಾಮನಿಗೆ         || ೨೫೬ ||

ಏರಿದ ತುರಗವನಿಳಿದು ಕಾಲ್ನಡಿಗೆಯೊಳು | ಕಾಣಿಕೆ ಇಟ್ಟು ಕರಮುಗಿದ |
ದೇವಿಸೆಟ್ಟಿಯ ಲಿಂಗ ಪಾಳೆಗಾರರು ಸಹ | ಓರಂತೆ ದಂಡು ಕರಮುಗಿದು            || ೨೫೭ ||

ರಾಯ ರಾಯರಿಗೆಲ್ಲ ಬೇಗ ಉಡುಗೊರೆ ಮಾಡಿ | ಸಾಗಿಸಿ ಅವರವರ ಪುರಕೆ |
ರಾಯ ತೇಜಿಯ ನೋಡಿ ಭೂಮಿ ನಿಲ್ಲದು ಇವಗೆ | ಏನಾಯಿತಂತ ಓರ್ಗಲ್ಲ          || ೨೫೮ ||

ಸಂಭ್ರಮದೊಳಗವರು ಬಂದು ನಗರವ ಪೊಗಲು | ಆನಂದದೊಳು ಬಾಳುತಿರಲು |
ಹಿಂದೆ ರಾಮನ ಜನನದ ಅಡಿಗೆ ಹಂಪೇಳ್ದ | ಬಂದುದು ಕಂಟಕ ಒದಗಿ               || ೨೫೯ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ಚೆನ್ನಿಗರಾಮ ತಂದ ತೇಜಿಯ ಮುಂದೆ | ನಡೆದ ಚೆಂಡಿಗೆ ನವಮ [>ದಶಮ] ಸಂಧಿ   || ೨೬೦ ||[1]

[1] + ಅಂತು ಸಂಧಿ ೯[>೧೦] ಕ್ಕಂ ಪದನು ೨೦೩೫ ಕ್ಕಂ ಮಂಗಳ ಮಹಾಶ್ರೀ (ಮೂ).