ಶ್ರೀ ಗುರುವೆ ವರಶಂಭು ಭಾಗೀರಥಿಯ ವರನೆ | ನಾಗಭೂಷಣ ನಂದೀಶ |
ಭೂಮಿ ಬ್ರಹ್ಮಾಂಡದ ಅಧಿಪತಿಯಾದಂಥ | ಶ್ರೀ ಗಿರಿಜೆವಲ್ಲಭ ಜಯತು || ೧ ||
ಹರಿ ನೇತ್ರ ಧರಿಸಲ್ಕೆ ಪರಮ ಪದವಿಯನಿತ್ತೆ | ತರಳ ಕೊಂದು ಗರ್ವಿಸಲು |
ಭಕ್ತಗೆ ನೀ ಒಲಿದೆ ಭೃತ್ಯ ಭಾವದೊಳಿರ್ದೆ | ಕತ್ತಿಗೆ ವೈರಿ ಕೇಳಿದರೆ || ೨ ||
ಚಕ್ರಧರನ ಕೈಲಿ ಭಕ್ತನಾಲಯ ಮಾಡಿಸಿ | ಸರ್ಪಭೂಷಣ ಕೊಡು ಮತಿಯ |
ಮೊರೆಯಿಡಲು ರತಿ ಬಂದು ಪುರುಷನ ಕರಕಿತ್ತೆ | ಕರಿಮುಖ ಪಿತನೆ ಕೊಡು ಮತಿಯ || ೩ ||
ಮುಂದಣ ಕೃತಿ ಕೇಳಿ ಮುದದಿಂದ ಸುಜನರು | ಆಲಸ್ಯ ಮಾಡದೆ ಮನದೊಳಗೆ |
ಚಂದ್ರರೂಪಿನ ರಾಮ ದೇವೇಂದ್ರ ಭೋಗದೊಳಿರಲು | ರಾಜ್ಯವನು ಆಳುತ್ತ ಸುಖದಿ || ೪ ||
ಮುಂದ ನೇಮಿಯ ಸುದ್ಧಿ ಕಡಿಗೇನಾದರು ಕೇಳಿ | ನುಡಿಯ ಬಲ್ಲಂಥ ಪ್ರೌಢರನು |
ಎರಡೆಂಟು ಮಾಸಕ್ಕೆ ಪುರಕೆ ಸೇರಲು ಡಿಳ್ಳಿ | ಅರಸು ಪಾಶ್ಚಯಗೆ ಪೇಳುವನು || ೫ ||
ಜೋಡಿನವರು ಬಂದು ಪೇಳುವರು ಪಾಶ್ಚಯೆ | ಕೇಳಯ್ಯ ಧರಣೀಂದ್ರ ಭೂಪ |
ಮೀರಿದ ಖಾನರು ಸೋದರ ಅಳಿಯನು ಸಹ | ಸೇರಿದರು ಯಮನ ಸಂಬಳವ || ೬ ||
ಪೇಳುವರಳವಲ್ಲ ರಾಮನ ಕಾರ್ಯವ | ಮೂರು ಲಕ್ಷದ ದಳದೊಳಗೆ |
ಗಾಯ ಸಾಯಗಳೆಲ್ಲ ಕೊಡುಕೊಂಡರೆ ರಾಮ | ಆಗ ಮಾತ್ರದಿ ಉಳಿದಿಹುದು || ೭ ||
ರಾಮನ ಮಡಗಿರ್ದು ಪ್ರಧಾನಿಯೆಂಬುವ ರಾಯ | ಜೋರು ಮುತ್ತಿಗೆಯನು ಕೊಡೆ |
ಸುಳುಹದೋರದೆ ಇರ್ದು ಏರುವ ಸಮಯದಿ | ತೆಗೆದು ಹೊರಡಿಸಲು ರಾಮುಗನು || ೮ ||
ಕಂದಕದ ಅಗಳಲಿ ಎಂಬತ್ತು ಸಾವಿರ | ಮಂದಿ ಸಂದುದು ನೆಲೆ ಕಾಣದಂತೆ |
ತುಂಬಲಿ ಹೊರಟಿದ್ದ ದಂಡ ಕೊಂದುದು ಸೀಳಿ | [ರುಂ]ಡ ಮುಂಡಗಳು ಚೆಲ್ಲಾಡಿ || ೯ ||
ಉಳಿದ ಖಾನರು ನೇಮಿ ಕಿರಿ ಮುಖದೊಳು ಬಂದು | ಎರಗಲು ಪಾಶ್ಚಯನಡಿಗೆ |
ನುಡಿಯಲು ಎದೆ ವಚನ ಇರುವ ಮಂತ್ರಿಯ ರಾಯ | ದರವೇಸಿ ಮುರಿದೇನೊ ನೇಮಿ || ೧೦ ||
ಬುದ್ಧಿ ಎನುತಲಿ ನೇಮಿ ದೀರ್ಘದಂಡ ನಮಸ್ಕಾರ ಮಾಡಿ | ಅಬದ್ಧವೆ ಲೋಕದ ಶಾಸ್ತ್ರ |
ಸುಳುಹುದೋರದೆ ಇರಲು ಬರೆದು ಕಳುಹಲು ಪಾದ | ಆಜ್ಞೆ ಮಾಡೆಂದು ಕಳುಹಿದಿರಿ || ೧೧ ||
ಸತ್ತನೆಂಬುವ ಸುದ್ಧಿ ತಲುಪಿಸಿ ಜಗಕೆಲ್ಲ | ಸಿಪ್ರದೊಳಗೆ ಮಡಗಿ |
ಯುಕ್ತಿಯುಳ್ಳವ ಮಂತ್ರಿ ಮುತ್ತಿಗೆ ಹಾಕೆಂದು | ಕೊಟ್ಟುಬಿಟ್ಟು ರಾಮನ ಕಾಣಿಸಿದನು || ೧೨ ||
ಶಾಬಾಸು ಬೈಚಪ್ಪ ಪ್ರಧಾನಿಗಳರಸೆ | ರಾಜೇಂದ್ರ ಸುರಿತಾಳ ಮೆಚ್ಚೆ |
ರೂಢಿಯೊಳಿಂತಪ್ಪ ಪ್ರಧಾನರು ನಮಗಿಲ್ಲ | ಭೂಮಿಯ ಸರ್ವ ಒಪ್ಪಿಸುವೆ || ೧೩ ||
ಬಲವೆಲ್ಲ ಮುಳುಗಿರಲು ಲೌಡಕು ಬಾಲೆಂಬ | ಹೊಡೆದು ಬಾದುರನ ತಂದಿರಲು |
ಪಡೆಯು ಗೊಲ್ವಡೆಯಾನ ಲಯಮಾಡಿ ಬಂದೆಲ್ಲ | ನುಡಿಯಲು ನಾಲಗೆ ಬಹುದೆ || ೧೪ ||
ರಾಮನೆಂದರೆ ರಾಯ ಭೂಮಿಗಳು ನಿಲ್ಲವು | ಆನೆಯೆಂಬುವ ರಾಯ ಆಡು |
ಗೋಡೆಯೆಂಬುವು ಕುರಿಯು…………. | ಮಾನ್ಯರು ನೊರಜಿಗೆ ಕಡೆಯೆ || ೧೫ ||
ರಾಮ ರಾಮನು ಎಂದು ಭೂಮಿ ಗಾತ್ರವ ಮಾಡೆ | ಕಾಯ ವಜ್ರವನು ಪಡೆದಿಹನೆ |
ಏನವನ ಘನ ಘನ………. | ಮಾಡಿ ಇರುವೆನೆ ಎಂತು ಎನಲು || ೧೬ ||
ಸಾಕಯ್ಯ ಬಿಡು ನೇಮಿ ನಾಚಿಕೆ ತೋರ್ವುದು | ಭೂಕಾಂತನೆನಿಪ ಸುರಿತಾಳ |
ನಾಕೆಂಟು ಸಾವಿರದ ಪಾಳೆಗಾರರ ಮೇಲೆ | ಸೋತನೆಂಬಪಕೀರ್ತಿ ಬಂತು || ೧೭ ||
ಆರು ಲಕ್ಷ ದಂಡ ಒಬ್ಬನೆ ಕಡಿವಾದ | ಸೀರೆಗಳಿದ್ದಂತೆ ನಿರುಗೆ |
ರಾಯರ ಪಿಂಡೆಂಬ ನಾಮ ಸಲುವುದು ಅವಗೆ | ಬಾದುರನ ಕೊಡಲಿಲ್ಲ ಧೀರ || ೧೮ ||
ಒಂದೆರಡು ಖಾನರು ಬಂದು ಕರಗಳ ಮುಗಿದು | ಕಂಡೆವು ನಿಮ್ಮ ಪಾದವನು |
ಕಳುಹೆಮ್ಮ ಸೈನ್ಯವ ಮಲೆತ ರಾಯರ ಮೇಲೆ | ಕಡು ಪಾಪಿ ಕುಮ್ಮಟಕೆ ಬೇಡ || ೧೯ ||
ಎಲ್ಲಿಗಾದರು ಕಳುಹು ಒಲ್ಲೆ ಎಂಬುವರಲ್ಲ | ಮಲ್ಲ ರಾಮನ ಮೇಲೆ ಬೇಡ |
ಅಲ್ಲಿ ಅಳಿವದು ಏನು ಇಲ್ಲಿಯೆ ಹೊಡಿಸಯ್ಯ | ಒಲ್ಲೆವು ಯಮನೂರ ಹಾದಿ || ೨೦ ||
ರಾಜೇಂದ್ರ ಸುರಿತಾಳ ಇವರಾಡುವ ವಚನ ಕೇಳಿ | ಧ್ಯಾನಿಸುತ ಮತ್ತವನು ಇರಲು |
ಬ್ಯಾರೊಂದು ಕಥೆ ಬಂತು ಲಾಲಿಸಿ ಬಲ್ಲವರು | ಹೋದಳೆನಬೇಡಿ ರತ್ನಿಯನು || ೨೧ ||
ಸತ್ತಳೆಂಬುವ ಮಾತು ಜಗವೆ ಕಂಡುದು ಸಹಜ | ಹುಟ್ಟುವಳು ಕೇಳಿ ಹೊಲೆರಂಡೆ |
ಚಿತ್ರಗುಪ್ತರು ಒಯ್ದು ಯಮನೆಡೆಗೆ ಒಪ್ಪಿಸಲು | ಅತ್ತ ಲೇಖನವ ನೋಡಿಸಿದ || ೨೨ ||
ಲಿಖಿಸಾರ ತೀರದೆ ಮೃತವನೈದಿದಳೀಕೆ | ಕಥೆಗಾಗಿ ಒಂದು ಛಲದಿಂದ |
ಸುತನನೆ ಕೊಲುವಂತೆ ಲಿಖಿತಯಿರುವುದು ಮುಂದೆ | ಹತವಾದೊ ಬಲುಹಾದ ಪ್ರಾಣ || ೨೩ ||
ರವಿತನಯನೆ ಕೇಳು ಬರಲಿಲ್ಲ ಸರಿಟವಣೆ | ಇರುವುದು ಹೀಗೆ ಮಾತ್ರದಲಿ |
ಉರುಳಿಗೆ ಶಿರಕೊಟ್ಟು ವೈರಕೋಸ್ಕರ ಬಂದು ಸರಿ ಮುಂದೆ ತಿಳಿದಂತೆ ಮಾಡು || ೨೪ ||
ಆದಾಯವಿಲ್ಲದೆ ಹಾದಿ ಮನುಜನು ಬೇಡ | ಸಾಗಿಸಿ ಶ್ರೇಷ್ಠಿ ನಾ ನಡೆಯೊ |
ಹೊಗಲಾಳವವನು ನೋಡಿ ಬ್ರಹ್ಮನು ಇವಳಿಗಿ | ಕಾಲವಾಸನದ ಲೇಖನವ || ೨೫ ||
ಸಂದಿಲ್ಲ ದಿನಮಾನ ಮುಂ[ದೊಂದು] ಜನ್ಮವು | [ಹೊಂ]ದದೆ ಹೋಗೆ ತೀರದೆನುತ |
ರಂಭೆಗೆ ರಾಮನ ಕೊಲ್ವ ಶಕ್ತಿಯನಿತ್ತು | ಮಾತಂಗಿಯ ಕುಲದಿ ಜನಿಸೆನಲು || ೨೬ ||
ಸತ್ತೇಳು ದಿನಕವಳೆ ಹುಟ್ಟುದು ಪುಸಿಯೆಂದು | ಧಾತ್ರಿಯೊಳಾಡರೆ ಜನರು |
ಸೃಷ್ಟಿಪ ಅಜ ನಿರ್ಮಾಣದೊಳಗೆ ಬಂದು | ಹುಟ್ಟಿದಳು ಡಿಳ್ಳಿಪುರದೊಳಗೆ || ೨೭ ||
ಹರಳರ ಕುಲದೊಳು ಜನಿಸಿದಳು ವರರೂಪ | ಧರೆಯೊಳು ಸರಿಯಿಲ್ಲವೆನಿಸಿ |
ರತ್ನಿ ರಂಭೆಗೆ ತ್ರಿಲೋಕ ಸರಿಬಾರದೆಂದೆನಿಸಿ | ಬೆಳೆದೊಂದು ರೂಪಾಗಿ ನಡೆಯೆ || ೨೮ ||
ಮಾತಂಗಿ ಮಗಳೆಂಬ ಪ್ರತಿನಾಮವನಿಟ್ಟು | ಮಾತಾಪಿತರು ಸಲಹುವರು |
ಮಾಸೊಂದು ದಿವಸಾಗಿ ವರುಷೊಂದು ಮಾಸಾಗಿ | ಲಲಿತಾಂಗಿಯಾಗಿ ಚರಿಸುವಳು || ೨೯ ||
ಎದೆಯ ಕುಪ್ಪಸಗಳ ಮೂಗುತಿಯ ಮುದದಿಂದ | ತಕ್ಕ ಸ್ನಾಮಾಶನ ಜೋಡು |
ತುರು[ಕ]ರ ರೂಪಿಗೆ ನೆರೆವೊಲ್ಲ ಸ್ತ್ರೀಯಳು ಆಗಿ | ಪಿಡಿದಳು ಹರಿಗೆ ಖಡ್ಗವನಾ || ೩೦ |
ತುಂಬಿ ಗುರುಳ್ಗಳು ಮಾತಂಗಿಯ ಲಾವಣ್ಯ | ಇಂಬಿನ ಜಡೆಯ ಸುಲಿಪಲ್ಲ |
ಬಿಂಬಾಧರವು ಕುಚವು ನಡುವು ಕಂಠಿಕೆ ಭಾವ | ಚಂದ್ರನ ಕಿರಣ ಕಳೆ ಕಾಂತಿ || ೩೧ ||
ಹೋದ ದಂಡನು ಎಲ್ಲ ಗೋರಿ ಮಾಡಿದ ರಾಮ | [ಲಾ]ಲಿಸು ಭೂಪಾಲ ಎನುತ |
ಮಾದಿಗರ ಕುಲರಂಭೆ ಮಾತಂಗಿ ಕರ ಮುಗಿಯೆ | ನೋಡಲು ಪಾಶ್ಚ ಬೆರಗಾದ || ೩೨ ||
ರಾಮನ ತಲೆ ತರುವೆ ಪಾಲಿಸು ವೀಳ್ಯವ | ಪಾದಕೆರಗಲು ಸುರಿತಾಳ |
ಹೋದ ಖಾನರನೆಲ್ಲ ಗೋರಿ ಮಾಡಿದ ಮಗಳೆ | ಬಾಲತ್ವವದು ಪುಸಿ ಮಾತು || ೩೩ ||
ಹೀನಾಯ ತರುವಂಥ ನಾರಿ ಅಲ್ಲವೊ ರಾಯ | ರಾಮನ ಮರಣ ಹೆಣ್ಣೊಳಗೆ |
ಕೇಳಲಿಲ್ಲವೊ ಸುದ್ದಿ [ಕೊಲೆಯೊಮ್ಮೆ] ಮರೆಮಾಡಿ | ಠವುಳಿ ಮಾಡಿದನು ಕಂಪಿಲನು || ೩೪ ||
ಇಟ್ಟಂಥ ಛಲಪದವ ಬಿಟ್ಟು ಬಾಳ್ವೆನೆ ರಾಯ | ಕೊಟ್ಟೆನುರುಳಿಗೆ ಪ್ರಾಣವನು |
ಸೃಷ್ಟಿಕರ್ತನು ಬ್ರಹ್ಮ ಕಾ[ಲದಿಂ]ದಲಿ ಬಂದು | ಪುಟ್ಟದೆ ನಿಮ್ಮಯ ಪುರದಿ || ೩೫ ||
ರಾಮನ ಕೊಲಿಸದೆ ರತ್ನಾಜಿಯು ಬಿಡಬಹು[ದೆ?] | ಹೀನಾಯ ಹೊರಬಹುದೆ ಬರಿವೆ |
ಹ್ಯಾಗಾಗೆ ಅಪಕೀರ್ತಿ ಸಾಧನಕೆ ಗುರಿಯಾದೆ | ಚಂಡಾಡುವೆ ಕೊಡು ರಾಯ ವೀಳ್ಯೆ || ೩೬ ||
ಮಾತಂಗಿ ಪೂರ್ವದ ಕಾಲ ಸೂಚನೆ ಪೇಳೆ | ಈಕೆಯ ವಿಧಿಯು ರಾಮನಿಗೆ |
ಆತ್ಮವನು…..ಯೊಳಗೆ ಬಂದು | ಕಲಹ ಗೋಚರವ ಪೇಳುವುದು || ೩೭ ||
ಬಾಲೆಯಿಂದಲಿ ಎನ್ನ ಹೋದ ಮೀಸೆಯು ಬಂದು | ಕೂಡ್ಯಾವು ಎಂದ ಸುರಿತಾಳ |
ಪ್ರಾಯ ಸಾಲದು ಮಗಳೆ ನೀ ಎನ್ನ ಮಗಳೆಂದು | ಮೂರಾರು ವರುಷ[ವ]ನೆ ಕಳಕೋ || ೩೮ ||
ಮಾತಂಗಿ ಈ ತೆರದಿ ಡಿಳ್ಳಿಯೊಳಿರುತಿರೆ | ಭೂಪ ರಾಮನ ಭೋಗ ಕೇಳಿ
ದೇವೇದ್ರಭೋಗದಲಿ ಭೂಮಿಯನಾಳ್ವನು | ಹಾಳು ರಾಜ್ಯವನು ರುಜುಮಾಡಿ || ೩೯ ||
ಸದರಿನೊಳಗೆ ಕುಳಿತು ದೊರೆ ಮಕ್ಕಳೀರ್ವರು | ಪ್ರಜೆ ಪರಿವಾರವ ಕರೆಸಿ |
ಉಡುಗೊರೆ ಉತ್ಸವ ಕೊಡಿಸಿ ಹೋಗಿದ್ದಂತೆ | ಗೌಡ ಒಕ್ಕಲನೆಲ್ಲ ಕರೆಸಿ || ೪೦ ||
ರಾಯನ ಮಾತೆನ್ನ ರಾಜ್ಯಕೆ ಕವುಳಿಟ್ಟು | ಮೂರೊರುಷ ದಂಡನು ತೊರೆದು |
ಆಮೇಲೆ ಮುತ್ತ್ಯೆನ ಕಾಲದ ರೊಕ್ಕವ | ನೀವಿತ್ತ ಸುಖದೊಳು ಬಾಳೆ || ೪೧ ||
ಎಂದಿಗೆ ಮೀಗಿಲಾಗಿ ಬಂದು ರಾಜ್ಯವ ತುಂಬಿ | ಚಂದ್ರನ ಶಾಂತಿ ಎಲ್ಲರಲು |
ಭಂಗಬಿಟ್ಟುರೆ ಹರಿಶ್ಚಂದ್ರನಂದದಿ ರಾಮ | ಬಂದು ಪಟ್ಟದಲಿ ಕುಳಿತಾಗ || ೪೨ ||
ದುಡ್ಡಿಗೆ ದುಡ್ಡಿತ್ತು ಬಡ್ಡಿಗೆ ಬೆಳೆದುದು | ಹಣವಿದ್ದವನ ಮನೆಗೆ |
ಹೊತ್ತು ದಬ್ಬೇಳು ರಾಯರ ಗಂಡನಾಳಿಕೆಯೊಳಗೆ | ಹೊತ್ತವು ಒಡವೆ ಏಕಮುಖದಿ || ೪೩ ||
ರಾಯ ರಾಮನ ರಾಜ್ಯ ಮೂರುವರೆ ಕೋಟಿಯು | ಹಾಲ್ಹಳ್ಳವಾಗಿ ತಮ್ಮನೆಯ |
ಮೋರ ಜಾತಿಗಳ ಹೇಳುವನಲ್ಲ ಹೊನ್ನೆಲೆಯಲಿ | ಹೊಕ್ಕಿ ತೂಗಾಡಿ || ೪೪ ||
ರಾಯ ರಾಮನ ಸದರ ಠೀವಿಯ ಪೇಳುವರೆ | ದೇವೇಂದ್ರನಂಥವ ರಾಮ |
ಕಾಲಾಳು ಕರಿ ತುರಗ ವಾಲೈಸಿ ಪರಿಚರರು | ಸಂಬಂಧಿಕರು ಇರುತಿಹರು || ೪೫ ||
ರಾಮ ಕಂಪಿಲ ತನ್ನ ಪ್ರಧಾನಿಯೊಡನೆ ನುಡಿವ | ಬಾಲರಾಳಿಕೆ ನೋಡಿದೆನು |
ಈ ಮೇಲೆ ನಾವೀಗ ಕೈವಲ್ಯ ಕಂಡರೆ ಲೇಸು | ಮರಿ ಬಾಲ[ರ್ಹು ಟ್ಟಿ] ದರೆ ಪ್ರತಿ ಲೇಸು || ೪೬ ||
ಅನಿತರೊಳಗೆ ಬಂದ ಗುರುವೆಂಬ ವರಮುನಿಯು | ಅರಮನೆಯ ಪೊಗಲು ಕಂಪಿಲನು |
ಕರ್ಮ ಹಿಂಗಿತು ಎಂದು ಸಾಷ್ಟಾಂಗವೆರಗಲು ರಾಯ | ಸ್ಥಿರಪಟ್ಟವಾಳೆಂದು ಹರಸಿ || ೪೭ ||
ಅಳಿದಾತ ಉಳಿಯಲು ಮಾಡಿದೆ ಮೃತಿ ಬಂದು | ಒದಗಿತ್ತು ಕಡೆಗಾಲ ಸುತಗೆ |
ಕಡುಪಾಪಿ ರತ್ನಾಜಿ ಡಿಳ್ಳಿಯೊಳಗೆ ಜನಿಸಿ | ಬರುವಳು ದಂಡೆತ್ತಿ ಮರಳಿ || ೪೮ ||
ತಿಳಿದೆನು ರಾಜೇಂದ್ರ ಅವಳ ಮೂಲದ ಬಗೆಯ | ನಿಜಕರವೆಂದು ತಿಳಿ ನೀನು |
ಬರುವಳು ಭವ ವೈರಿ ಮರಣ ತಪ್ಪದು ಸುತಗೆ | ನಡೆಯಲು ಮುನಿಯು ವಾಲಗಕೆ || ೪೯ ||
ರಾಮಭೂಪಾಲಗೆ ಪೇಳಲು ಚರರಾಗ | ಸ್ವಾಮಿ ಗುರುಮುನಿಯು ಬರುತಿಹರು |
ಭೇರುಂಡನಂದದಿ ಕುಮಾರರೀರ್ವರು ಎದ್ದು | ಪ್ರೇಮದಿ ಸಾಷ್ಟಾಂಗವೆರಗಿ || ೫೦ ||
ಶಿರಗಳ ಪಿಡಿದೆತ್ತಿ ಹರಸುತ ಗುರುಮುನಿಯು | ಇರುತಿರ್ಕು ಸ್ಥಿರರಾಜ್ಯವಾಳು || ೫೧ ||
ವರರತ್ನ ಗದ್ದುಗೆ ಪೀಠದಿ ಕುಳ್ಳಿರಿಸಿ | ಕರಗಳ ಮುಗಿದು ನಿಂದಿಹರು |
ಮಗನೆ ಲಾಲಿಸು ಮುಂದೆ ಸ್ಥಿರವಲ್ಲ ನರಕಾಯ | ನೆರೆಮನೆಗೆ ಹೋಗಿ ಕುಳಿತಂತೆ || ೫೨ ||
ಬರಲರಿದು ನೆರವಿಂಗೆ ಬಲ ಕುದುರೆ ಚತುರಂಗ | ಧರ್ಮ ಸಾಧನವೆ ನಿಜ ಸಾಕ್ಷಿ |
ಏಕಚಕ್ರವನಾಳೆ ಇರುವನಕ ಸಿರಿಭೋಗ | ಬರುವುದೆ ಬೆನ್ನೊಡನೆ ಕ್ಷಣವು || ೫೩ ||
ಹರಿಶ್ಚಂದ್ರ ಪಿತನಾಳ್ದ ಧರೆಯ ಭೋಗವ ಪೇಳ್ವೆ | ಉರಗಭೂಷಣಗೆ ಅಳವಲ್ಲ |
ಗೊತ್ತಿಗೆ ಬರಲಿಲ್ಲ ಸತ್ಯದಿ ನಡೆಯದೆ | ಕೀರ್ತಿ ಸಾರಗಳ ಗಳಿಸದೆ || ೫೪ ||
ಚಿಕ್ಕ ಮನುಜಗೆ ಮುನ್ನ ಕಡೆಯಾದ ಪುಣ್ಯದ | ಕ್ಷೇತ್ರಧರ್ಮಗಳ ಮಾಡದಲೆ |
ಮಾಡಯ್ಯ ಮಗ ರಾಮ ಭೂಮಿಯೊಳು ಕೆರೆಭಾವಿ | ಧಾನಧರ್ಮಕೆ ಬಾವಿಯನ್ನು || ೫೫ ||
ಮಾಡಿಹುದು ಮಠಮಾನ್ಯ ದೇವಾಲ್ಯ ಜಾತ್ರೆಯನು | ಸೂರ್ಯಚಂದ್ರರು ಇರುವನಕ |
ಇರು ಮಗನೆ ಸುಖದೊಳು ಬಿಡಬೇಡ ಧರ್ಮವ | ಕೊಡಬೇಡ ಬೆನ್ನ ಬಿದ್ದವರ || ೫೬ ||
ಕಡೆಯ ಕಾಳಗದೊಳು ಸದ್ಗತಿಯ ಹೊಂದುವೆ ಮಗನೆ | ಕಡಿಯದಿರು ಹೆಣ್ಣ ಜನ್ಮವನು |
ಸುಳುಹು ಬುದ್ಧಿಯ ಪೇಳಿ ನಡೆಯಲು ಗುರು ಮುನಿಯು | ಹೃದಯದಿ ನಡಲು ರಾಮನಿಗೆ || ೫೭ ||
ಕರೆದಾಗ ಮಂತ್ರಿಯ ಮಗ ನೀಲಕಂಠನ್ನ | ಉಡುಗೊರೆ ಉತ್ಸವ ಮಾಡಿದನು |
ಲಾಲಿಸು ನವರತ್ನ ನೀಲಕಂಠನೆ ಮಂತ್ರಿ | ರೂಢಿಯೊಳು ಕೆರೆಬಾವಿ ರಚಿಸು || ೫೮ ||
ದೇವಾಲ್ಯ ಮನೆಮಠ ಮಾಡಿಸು ನಾಲಾಸ್ಥಾಪ್ಯ | ಭೂಮಿಯುಳ್ಳನಕ ನಡೆವಂತೆ |
ಗುರುಪೂಜೆ ಹರಪೂಜೆ ಮಾಡಿನ್ನು ಸುಖದೊಳು | ಪರಿಹರಿಸುವುದು ಅಧರ್ಮ || ೫೯ ||
ಎಡೆ ಎಡೆಗೆ ಅರವಟಿಗೆ ಕೈವಲ್ಯ ಕ್ಷೇತ್ರಗಳ | ನಡೆಸಯ್ಯ ಎರಡು ಸಮನಾಗಿ |
ಬುದ್ಧಿ ಎನುತಲಿ ಮಂತ್ರಿ ಎದ್ದು ಕರಗಳ ಮುಗಿದು | ಇದ್ದಂತೆ ಮಾಳ್ಪೆ ಚಿತ್ತೈಸು || ೬೦ ||
ದಿನಕರನು ತನ್ನಯ ಗಣಿತ ಒಪ್ಪಿಕೆಯೆಂದು | ಇಳಿಯಲು ಜನನಿ ಗರ್ಭದಲಿ |
ವಾಲಗ ಹರಿಸಿ ಕುಮಾರರೀರ್ವರು ತಮ್ಮ | ರಾಜಮಂದಿರಕೆ ಸಾಗಿದರು || ೬೧ ||
ಷಡುರಸ್ನಾನವ ಸಲಿಸಿ ಸುಖನಿದ್ರೆ ಮಾಳ್ಪಾಗ | ಹರಬಂದು ಸುಳಿದ ಸ್ವಪ್ನದಲಿ |
ರಾಮನ ಲಯಗಾಲ ಸೇರಿ ಬಂದುದು ತುದಿಗೆ | ಅಳಿವನಳಿಯಲು ಶಂಭೂ || ೬೨ ||
ಸಾಗುವ ತೆರ ಮಾಳ್ಪ ಶ್ರೀ ಗೌರಿ ಪ್ರಾಣೇಶ | ತೋರಲು ರೂಪ ಸ್ವಪ್ವದಲಿ |
ಬಡವ ಜಂಗಮನಾಗಿ ಒಡಲು ಅಸ್ಥಿಯ ಸೇರಿ | ಪಿಡಿವರೆ ಪ್ರಾಣ ತೊರೆವಂತೆ || ೬೩ ||
[ಗುಜ್ಜು] ಗೂಡಿ ಶರೀರವ ಊದುವ ತನಿವಣ್ಣು | ಪಿಡಿದ ಕಪ್ಪರವು ತ್ರಿಶೂಲ |
ಉರಗನು ಮೈಯೆಲ್ಲ ಮರಿಯ ಬಟ್ಟೆ ಸಹವಾಗಿ | ನೂರಾರು ಹೊತ್ತು ಅಂಗದಲಿ || ೬೪ ||
ಧುರಧೀರ ರಾಮನ ತನುವ ಸೋಂಕುವ ತೋರೆ | ಬೆದರದೆ ರಾಮ ಕರಮುಗಿದು |
ಸಪ್ತೇಳು ಭೂಮಿಯ ರಕ್ಷಣ್ಯ ಕರ್ತನೆ | ಕೊಟ್ಟನೆ ಬಡ ಪ್ರಾಣ ಬ್ರಹ್ಮ || ೬೫ ||
ಕೊಚ್ಚಲು ಉಗುರೊಳು ವನಜಸಂಭವನ ಶಿರವ | ಕಚ್ಚಿ ಹಿರಿದ ಆವ ತರವು |
ಮಾಧವನ ಸುತನಾದ ಬಾಲನ ಮಾವಗೆ | ಮಾಡುವ ಭಕ್ತಿಗೆ ಒಲಿದು || ೬೬ ||
ದ್ವಾರಪಾಲಕನಾದ ಭವ ಬಡತನವೆಂದು | ರಾಮ ಕುವರನು ಸ್ವಪ್ನದಲಿ |
ಮಗನೆ ಮೆಚ್ಚಿದೆ ಕೊಳ್ಳು ಬುಡಕೊಂದು ಬೀಜವನು | ಒದಗಿತು ಕೈವಲ್ಯ ನಿನಗೆ || ೬೭ ||
ತರಳನ ಫಲವಾ[ದ] ಕರವ ಮಂಡೆಯೊಳಿಟ್ಟು | ಮರುಳುತಲೆ ಮತ್ತೊಂದು ವಾಕ್ಯ |
ಆರು ಮಾಸವ ಕಳೆದು ಮನವಾಗೆ ಮಠಗಳ | ನಾಮ ಇಡು ಜಟ್ಟಂಗಿ ಎನುತ || ೬೮ ||
ಆಮೇಲೆ ಮಾತಂಗಿ ಕಾರ್ಯಬಹುದು ನಿನಗೆ | ಮೃತಗಾಲದಿ ಬರುವೆವು ಎನಲು |
ಹರನು ಹರಶರಣರು ತೋರುವರು ಸ್ವಪ್ವದಲಿ | ರಾಣಿಗೆ ಫಲಸಾರವಿಟ್ಟು || ೬೯ ||
ಮಾಯವಾಗಲು ಮಂಜು ಹರಿದು ಸೂರ್ಯನು ಬಂದು | ಏರಿದ ರಥವ ಪೂರ್ವದಲಿ |
ಉದಯವಾಗಲು ಎದ್ದು ದೊರೆ ರಾಮ ತನ್ನಯ | ವ್ರತನೇಮವ ಕೈಕೊಂಡ || ೭೦ ||
ಧರಿಸಲು ಭೂಷಣ ಭೂಷಣಾದಿಗಳಾಗಿ | ಬರುವರು ಸದರ ಚಾವಡಿಗೆ |
ಪರಿವಾರ ಕರಿ ತುರಗ ಮಂತ್ರಿಗಳು ಬಿರಿದಾಂಕ | ರಾಹುತ ಮಾನ್ಯೆಯರು ಬರಲು || ೭೧ ||
ಮೆರೆಯುತ ಕಹಳೆಗಳು ಉಗ್ಗಡಿಸುವ ಭಟರಿಂದ | ಸರಿಯಿಲ್ಲವೆಂದು ಬರುತಿಹರು |
ಮುತ್ತಿನ ಪಲ್ಲಕ್ಕಿ ಪುತ್ರರಿರ್ವರು ಏರಿ | ಒತ್ತಿಲಿ ಮಂತ್ರಿಯ ಮಗಳು || ೭೨ ||
ಶುಕ್ರನ ಪ್ರಭೆಯಂತೆ ಬಂಟರು ಎಸೆಯುತ | ಹತ್ತಲು ರತ್ನದ ಸದರ |
ವಾಲಗದಿ ಕುಂತನು ದೇವೇಂದ್ರ ಭೋಗದಿ ರಾಮ | ರಾಜ್ಯಭಾರವನು ಪಾಲಿಸುತ || ೭೩ ||
ಮೇಲೊಂದು ಗ್ರಹಿಸದೆ ಪಾಳ್ಯಗಾರರಿಗೆಲ್ಲ | ತಾ ಮಾಡಿದ ಕನಿಕಷ್ಟವೇನು |
ಕೇಳಯ್ಯ ಕಾಟಣ್ಣ ಮೇಲೆ ಮಂತ್ರಿಯ ಮಗನೆ | ಬಾದೂರಖಾನ ಲಿಂಗಣ್ಣ || ೭೪ ||
ರಾಮ ಸತ್ತನು ಎಂದು ನೇಮಿಗೋಲೆಯ ಬರೆದ | ಮೂಳ ದೊರೆಗಳ ನಂಬಬಹುದೆ |
ಇತ್ತಲೆಯ ಹಾವಿನವರು ಕಿತ್ತು ಒಗೆಯದೆ ಬಿಟ್ಟು | ಇತ್ತವು ತನಗಾಗಿ ಒಡ್ಡು || ೭೫ ||
ಸತ್ತಿರಲು ನಾ ಮುನ್ನ ತಂದೆ ಕಂಪಿಲನನು | ಉಪ್ಪು ಕಂಡನು ತಿನಿಸುವರು |
ಒಡನುಂಡು ಕಡೆಯೊಳು ಕರದೊಳು ಕರವಿಡಿದು | ಇನ್ನಡದರೆ ದೋಷ ತನಗುಂಟೆ || ೭೬ ||
ನಡೆಯಣ್ಣ ಕಾಟಣ್ಣ ಕರಿ ತುರಗದೊಳು ಪೋಗಿ | ಪುಡಿಮಾಡು ಪಾಳ್ಯಗಾರರನು |
ಹೊಡೆಯಲು ರಣಭೇರಿ ಸಿಡಿಲಿನಾರ್ಭಟದೊಳು | ಕುದುರೆ ಕಾಲ್ವಲ ಬಂದು ಕೂಡೆ || ೭೭ ||
ಬಿರಿದಂಕರಾದ ಮಾನ್ಯರಿಗುಡುಗೊರೆ ಇತ್ತು | ನಡೆಯಲು ದಂಡು ಗುತ್ತಿ[ಳೆ]ಗೆ |
ಆರು ದಿವಸಕೆ ಹೋಗಿ ಏರಲು ಗುತ್ತಿಯ | ಝೇರ ಮುತ್ತಿಗೆಯ ಮಾಡಿದರು || ೭೮ ||
ಸುಟ್ಟು ಸೀಮೆಯನೆಲ್ಲ ಸೂರೆ ಮಾಡಿ ಕಾಟಣ್ಣನು | ಬಿಟ್ಟನು ದುರ್ಗ ಲೆಗ್ಗೆಯನು |
ಕುಟ್ಟಿ ಕೋಳಾಹಳ ಮಾಡಿ ಹತ್ತಿ ಬೇಡರು ಕಲ್ಲ | ಅಟ್ಟಿದರು ಮಾರು ಗುತ್ತಿಯನು || ೭೯ ||
ಕೆಟ್ಟೆವೆನುತಲಾಗ ಗುತ್ತಿ ಚಾಮಯ್ಯನು | ಅಟ್ಟಲು ಮಂತ್ರಿ ಹೇಜಿಬರ |
ರಾಯ ಕಾಟಣ್ಣಗೆ ಹೋಗಿ ಕರಗಳ ಮುಗಿದು | ಕಾಯಬಹುದು ಎಮ್ಮ ತಪ್ಪ || ೮೦ ||
ಭೂಮಿ ಚಂದ್ರುಳ್ಳನಕ ಮೀರಿ ನಡೆಯಲು ನಮ್ಮ | ವಾಲೆ ಬರೆಯಲು ತಮ್ಮ ನೆಡೆಗೆ |
ದೈನ್ಯಬಡಲು ಪವುದಿ ತೆಗೆದುಕೊಂಬುದು ಎಂದು | ಬರಲು ಲೇಖನ ಆಗ ಬರಲು || ೮೧ ||
ತೆಗೆದು ಮುತ್ತಿಗೆಯನು ಕರೆಯೆ ದೊರೆಗಳ ಮೇಲೆ | ನಡೆಯಲು ರೊಕ್ಕವನು ಹೇರಿಸುತ |
ಬಲ ಬಂದು ಕೂಡಲು ಕಡೆ ಮೊದಲಿಲ್ಲದೆ | ದೊರೆಗಳು ಹೊರಟು ಬಂದಾರು || ೮೨ ||
ನಡೆಯಲು ಮುಂ ದಂಡು ಡಿಳ್ಳಿಯ ಸೀಮೆಯ | ಸುಡುತ ಕಾಟಣ್ಣನು ಇರಲು
ಹರ ಬಂದು ಸ್ವಪ್ನದಿ ಅರುಹಿದ ಸಂತಾನ | ಕುರುಹುದೋರಲು ಸುಭದ್ರೆ || ೮೩ ||
ಮೂರು ನಾಲ್ಕೊ[ಸಗೆ] ಮಾಡಿಸಿ ಕಂಪಿಲನು | ತಾನು ಅತ್ಯಂತ ಸಂಭ್ರಮದಿ |
ರಂಭೆ ಸುಭದ್ರೆಗೆ ಹೊಂದಲು ಸಂತಾನ | ಒಂದೊಂದು ಬಗೆಯ ಒಸಗೆಯನು || ೮೪ ||
ಸಂಭ್ರಮದಿ ಹರಿಯಮ್ಮ ಸುತರ ಕಂಡೆನು ಎಂದು | ಅಂಬುಧಿಯಂದದಿ ಹಿಗ್ಗಿ |
ಮನದೊಳಿಗದ್ದಂತೆ ಹರನಿತ್ತ ಎನುತಲಿ | ಅರಸು ಕಂಪಿಲನು ಪ್ರಧಾನಿ || ೮೫ ||
ಒದಗಲು ನವಮಾಸ ವನಿತೆ ಸುಭದ್ರೆಗೆ | ಜನನದ ಸ್ಥಿತಿಯ ಲಾಲಿಪುದು |
ಆಷಾಢ ಮಾಸದ ಆದಿತ್ಯವಾರದ | ಸೂಸುವ ವ್ಯಾಳ್ಯ ದಿನಕರನು || ೮೬ ||
ಕೇಶವ ಸುತನಂತೆ ಕುಮಾರನ ಬೆಸಲಾಗಲು | ದಾಸಿಯರು ಕಂಪಿಲಗೆ ಪೇಳೆ |
ರೋಗಿ ಬಯಸುವ ಊಟ ವೈದ್ಯ ಹೇಳಿದ ಪಥ್ಯ | ಮಾಡಿದ ಶಿವ ಎನಗೆ ಪುಣ್ಯ || ೮೭ ||
ರಾಯ ಜಟಂಗಿಯು ಎಂಬ ನಾಮವನಿಟ್ಟು | ದಾನ ಧರ್ಮಗಳನು ಕೊಡಿಸಿ |
ಬಾಲನ ಸಲಹುತ ತಾಯಿ ಹರಿಹರದೇವಿ | [ಉ]ಬ್ಬಿ ಸುಖದೊಳಗಿರಲು || ೮೮ ||
ಆರೇಳು ಮಾಸವು ರಾಯ ಕಾಟನು ಹೋಗಿ | ಹಾಳು ಮಾಡಲು ಡಿಳ್ಳಿ ಸೀಮೆ |
ಕಟ್ಟಿಸಿ ಗೂಳ್ಯವ ಹತ್ತೆಂಟು ಗಾವುದ ದಾರಿ | ದಿಕ್ಕಿಲ್ಲದ ಕೇಳನು ಹೊಡೆಸಿ || ೮೯ ||
ಕಪ್ಪ ಕಾಣಿಕೆ ರೊಕ್ಕ ಕಡೆಮೊದಲಿಲ್ಲದೆ | ಹೊಕ್ಕು ಸಾಗುವುದು ಕುಮ್ಮಟಕೆ |
ಕಡೆ ಸೀಮೆ ಡಿಳ್ಳಿಯ ಎಡೆಗೆ ಗೂಳ್ಯವ ಕಟ್ಟಿ | ಕೆಡಿಸಿದ ಹೋಗಿ ನೇಮಿಯನು || ೯೦ ||
ಕಡುವುದು ತಾ ಹೋಗಿ ಅಡಗು ವ್ಯಾಳ್ಯೆವು ಬಂತು | ನಡೆಯಲು ದಿಕ್ಕು ದೇಶಾಗಿ |
ಬೂದಿ ಮುಚ್ಚಿದ ಕೆಂಡಗಳನು ಕೆದರಿದ ಗಾದೆ | ಮಾಡಿದೆ ನೇಮಿ ನೀ ಹೋಗಿ || ೯೧ ||
ಮೂರು ಲಕ್ಷದ ಪೌಜು ಗೋರಿ ಮಾಡಿದ ಹೋಗಿ | ಸೀಮೆಗೆ ಬಡಿಕಲ್ಲ ತಂದ |
ಬಡವನೆ ಡಿಳ್ಳಿಯ ಬುಡಕಾಗಿ ಕಾಟನು | ಲಗುವ ಕಂಡನು ನೇಮಿಯನು || ೯೨ |
ಕುರಿಗಳಂದದಿ ಹೋಗಿ ಮರಣವಾಗಲು ಕಂಡು | ತುಳಿಸಿದ ಮಿಂಡ ಬೆನ್ನೊಡನೆ |
ಇಬ್ಬರು ಕೆಡಲಿಲ್ಲ ಹಬ್ಬವು ಪ್ರಜೆಗಿನ್ನು | ಗುದ್ಯಾಡೆ ಸತಿಪತಿಯು ಕೂಡಿ || ೯೩ ||
ಬಿದ್ದ ಮಗುವಿನ ಪ್ರಾಣ ಹೋದ ಈಗಳು ಎಂದು | ಬಿದ್ದು ಓಡಲು ಬಾಯಿ ಬಿಡುತ |
ಕಾಗದ ಬರೆಯಲು ರಾಯ ಕಾಟಣ್ಣನು | ಸಾಗಲು ಹಿಂದಕ್ಕೆ ಬರಲು || ೯೪ ||
ನೋಡುವ ಅಲ್ಲಿಂದ ಬರಹೇಳಿ ಬರೆಯಲು | ಭೂಮಿ ಆರ್ಭಟಿಸುತ್ತ ತಿರುಗೆ |
ಎರಡು ಲಕ್ಷದ ದಂಡು ನಡೆಸುತ್ತ ಕಾಟಣ್ಣ | ಗಡಿಮನೆಯ ಮುಂತಾಗಿ ಬಡಿದ || ೯೫ ||
ನದಿ ಹೊಳೆ ಮುಂತಾಗಿ ಕಡಿದು ತಮ್ಮಯ ಸೀಮೆ | [ನ] ಡು ರಾಜ್ಯಕೆ ಬಂದು ಇಳಿಯೆ |
ಸಾಗಿ ಬರಲು ಅಣ್ಣ ರಾಯ ರಾಮನು ಹೊರಟು | ಮಹರ್ನಾಮಿ ಬಯಲಿಗೆ ಭೇಟಿ || ೯೬ ||
ರಾಯ ರಾಯರನೆಲ್ಲ ನೋಡಿ ಮೋರೆಯ ರಾಮ | ಜ್ಞಾನ ಹರಿಯಿಕೆ ಸತ್ತವನೆ |
ಬಂದ ದೊರೆಗಳನೆಲ್ಲ ಮುಖದಿಂದ ನೀರನು ಇಳುಹಿ | ನಂಬೋರೆ ನಕರ ಧರೆಯೊಳಗೆ || ೯೭ ||
ಸಂದರೆ ಬಂದೆಮ್ಮ ತಂದೆ ನುಡಿಸುವರುಂಟೆ | ತಾ ಬೇರೆಣಿಸಿದರೆ ಕಂಪಿಲನ |
ಬೇರ ಕೀಳುವೆನೆಂದು ಮಾಡಿದೆ ನಾ ಛಲಪದವ | ನೋಡಿ ಗ್ರಹಿಸಿದೆನು ಮತ್ತೊಂದು || ೯೮ ||
ಕಾಯಗಳು ಸ್ಥಿರವಲ್ಲ ಭೂಮಿ[ಗ]ಳು ಸ್ಥಿರವಹುದೆ | ಕೂಡಿದೆ ಧರ್ಮದೇವತೆಯ |
ಕಾಯಬಹುದು ತಪ್ಪ ಕೂಡಿದ್ದು ಕೆಡು ಬುದ್ಧಿ | ಬೇರೊಂದನೆಣಿಸಲು ನಿಮಗೆ || ೯೯ ||
ರೂಢಿಗಧಿಕವಾದ ಸುರಿತಾಳನೇ ಬರಲಿ | ಹೋಗೆವು ಕೂಟ ಭೇಟಿಗಳ |
ರಾಯ ದೊರೆಗಳಿಗೆಲ್ಲ ಆಗ ಉಡುಗೊರೆ ಮಾಡಿ | ಸಾಗಿಸಿ ಅವರವರ ಪುರಕೆ || ೧೦೦ ||
ರಾಮನು ತನ್ನಯ ಭೂಮಿಯನಾಳುತ್ತ | ಆನಂದ ಸುಖದೊಳಗಿರಲು |
ಧರಣಿಯೊಳು ಕೆರೆ ಬಾವಿ ಆದವೆನುತ ಮಂತ್ರಿ | ಮಗ ನೀಲಕಂಠನು ಉಸಿರೆ || ೧೦೧ ||
ಗಾವುದಕೆ ಮೂರೆರಡು ರಾಮನಾಥರು ಎಂಬ | ದೇವಾಲಯವ ನಿರ್ಮಿಸಿದೆ || ೧೦೨ ||
ಕೆರೆಗಳಾದವು ಸ್ವಾಮಿ ಶರಧಿಗೆ ಸಮನೆನಸಿ | ಉದುರದೆ ಮಳೆಯು ಮೂರು ವರುಷ |
ಸುಡುವದೇವುದು ಕಾವು ಹುಣಸೆಯ ಎಲೆಯಷ್ಟು | ರಚಿಸಿದೆ ಏಳ್ನೂರು ಕೆರೆಯ || ೧೦೩ ||
ಊರು ಊರಿಗೆ ಮಠವು ಮಾಡಿಸಿ ಶಿಲೆ ಮುದ್ರೆ | ಭೂಮಿ ಕೊಡುಗೆಗಳನು ಬಿಡಿಸಿ |
ದಾನಕ್ಕೆ ಅಗ್ರಾರ ಭೂಮಿ ಧಾರೆಯನೆರೆದು | ಮೇಲೆ ಶಾಸನಗಳ ಬರೆಸಿ || ೧೦೪ ||
ದೇವರ ಪೂಜೆಯ ನಿತ್ಯ ಕಟ್ಟಳೆ ನಡೆವ | ಸೂರ್ಯ ಚಂದ್ರರುಳ್ಳನಕ |
ಊರು ಉಂಬಳಿ ಬಿಡಿಸಿ ಹಿರಿದು ಕಿರಿದಿನ ಮೇಲೆ | ಕೆರೆ ಜಾತ್ರೆಗಳು ನಡೆವಂತೆ || ೧೦೫ ||
ಮನೆದೈವ ಜಟ್ಟಂಗಿ ರಾಮೇಶನ ಭೋಗವ | ನರರಿಗೆ ಪೇಳುವರಳವೆ |
ರಜತಾದ್ರಿ ಅಲ್ಲಲ್ಲಿ ಇರುತಿಹುದು ಕುಮ್ಮಟ | ದಾದಿ ಗಿರಿಜೇಶನೋಲಗವು || ೧೦೬ ||
ಹರಪೂಜೆ ಹ[ರ]ಭಜನೆ [ಪ]ಕ್ಷ ಕ್ರಿಯೆ ಭಕ್ತರು | ನಡೆಸುವರಲ್ಲದೆ ಮಿಕ್ಕುವರು |
ನುಡಿಯ ಕರ್ಮಗಳೆಂಬ ಸ್ಮರಣೆಯ ಕೇಳಲು | ಧರೆ ಬೇಡ ಹರಳರ ಕುಲದಿ || ೧೦೭ ||
ಸಿರಿಯಿಂದ ಸುಖದಿಂದ | ಸಮವೆನಿಸಿ ಕಲ್ಯಾಣಪುರಕೆ |
ಮರಣವೊ ರಾಮಗೆ ದುರುಳಾಗೆ ಈ ಭಕ್ತಿ | ದೊರೆಯದು ಬಲ್ಲವರು ಆಡೆ || ೧೦೮ ||
ಕೆಟ್ಟವಗೆ ಶುಭಗುಣವು ಹುಟ್ಟಲು ಲಯಕಾಲ | ನಿಷ್ಫಳವಾಗದು ಬುದ್ಧಿ |
ಹುಟ್ಟಿದ ಬಳಿಕವರ ನೆಚ್ಚ ಕಾಣವುದಿಲ್ಲ | ತಪ್ಪಾದ ಶಾಸ್ತ್ರವಿಧಾನ || ೧೦೯ ||
ಪುಣ್ಯಪುರುಷನು ಜನಿಸಿ ಪಾಪ ಹಿಂಗಿತು ಎಂದು | ಎನ್ನುತ್ತ ಆಡಿ ಹರಸುವರು |
ಧರ್ಮದೊಳಾಳಿದ ಮೂರಾರು ವರುಷಕ್ಕೆ | ಸನ್ನಿಧಿಯಾಗೆ ಲಿಖಿತವೂ || ೧೧೦ ||
ರಾಮನು ಇಂತಪ್ಪ ಭೋಗದಿ ಆಳುವನು | ಕೇಳುವನು ಡಿಳ್ಳಿಯ ಪಟ್ಟ |
ಗೋಳೆನುತ ಮೊರೆಯಿಡಲು ರಾಯ ಸುರಿತಾಳಗೆ | ಸೀಮೆ ರಾಜ್ಯದ ಪ್ರಭೆ ಬಂತು || ೧೧೧ ||
ರಾಮ ಸತ್ತನು ಎಂದು ನೇಮಿ ಕಳುಹಲು ನೀನು | ಕೇಡು ಬಂದುದು ನಿನ್ನ ಬುಡಕೆ |
ಹಾಳು ಮಾಡಿದ ರಾಜ್ಯ ಮೂಳು ಕಲ್ಲನೆ ಬಿಟ್ಟು | ಯಾವ ಕಾಲಕೆ ಏಳದಂತೆ || ೧೧೨ ||
ಹೆದರಬೇಡಿರೆ ಹೋಗಿ ಬುಡವ ಕೀಳುವೆನವನ | ಪ್ರಜೆಗೆಲ್ಲ ನಂಬಿಗೆ ಇತ್ತು |
ಕೇಳುತ್ತ ಮಾತಂಗಿ ಕರೆದು ಎನ್ನಯ ಮಗಳು | ಮುರಿಯ ಬೇಕಮ್ಮ ರಾಮುಗನ || ೧೧೩ ||
ಬಾಲೆ ಮಾತಂಗಿಯ ಕರವಿಡಿದು ಸುರಿತಾಳ | ಏನಮ್ಮ ಆಡಿದ ಮಾತು |
ಸೀಮೆಯೆಲ್ಲವ ಸುಟ್ಟು ಮೂಳ ರಾಮನ ಬಂದು ಮರಳಿ ಬಂದರೆ ಡಿಳ್ಳಿ ಬಿಡನು || ೧೧೪ ||
ಕೊಡು ಭೂಪ ವೀಳ್ಯವನು ಹೊರಡಿಸಿ ದಂಡನು | ತರುವೆನು ರಾಮನ ತಲೆಯ |
ಹರುಷವಾಗಲು ಪಾಶ್ಚ ಕರೆಸಲು ನೇಮಿಯ | ಒದಗೀತೆ ಯಮನೂರ ಬಿಟ್ಟಿ || ೧೧೫ ||
ವಾಲೆ ಬಂದಿದೆ ಬನ್ನಿ ನೇಮಿಖಾನರೆ ನಿಮಗೆ | ಕಾಲನ ಬಳಿಯಿಂದ ಸಿಡಿದು |
ಬೋರಿ ಮುಂಡೆಯು ಒಬ್ಬ ಮಾತಂಗಿ ಎಂಬವಳು ಬಂದು | ರಾಮನ ತರುವೆನೆಂಬುವಳು || ೧೧೬ ||
ಅರ್ಜುನಗಿಂತ ಮಿಗಿಲಾದ ಖಾನರು ಎಲ್ಲ | ಹಾರಿಹೋದರು ಗುಂಗ್ರದಂತೆ |
ಮಾದಿಗಿತ್ತಿಯು ಬಂದು ವಿಧಿಯಾಗಿ ಉಳಿದರಿಗೆಲ್ಲ | ಮಾಡುವದೇನೆಂದು ಬರಲು || ೧೧೭ ||
ಬಂದನು ಕಿರಿಮುಖದಿ ಹೆಂಡಿರು ಮೃತರಾದ | ಅಂದದಿ ಪಾಶ್ಚಾಯಗೆರಗೆ |
ಭಂಡ ನೇಮಿಯೆ ಹೇಗೊ ಬಾಲೆ ತರುವಳು ನಿಮ್ಮ | ಗಂಡನಾದವನ ತರುವಳು || ೧೧೮ ||
ಖಾನಖಾನರಿಗೆಲ್ಲ ವಾಲೆಯ ಕಳುಹಲು | ನಾಳೆ ಕುಮ್ಮಟವ ಕಡಿಯಲ್ಕೆ |
ಮೋರೆ ಮೇಗಳ ಗಾಯ ಮಾಜಿಲ್ಲ ಮತ್ಹೋಗಿ | ಸೇರುವೆ ಯಮನ ಸಂಬಳವ || ೧೧೯ ||
ಬರುವುದು ಸಾಕಿವನ ಬಳಿಯ ಚಾಕರಿದ್ದು ಮನೆ | ಕಳಕೋಬೇಕೆಂದು ಡಿಳ್ಳಿಯನು |
ಮಡದಿ ಮಕ್ಕಳ ಆಸೆ ತೊರೆಕೊಂಡು ಬಂದರು | ದಾಡಿಯ ಖಾನರು ಒಂದು ಲಕ್ಷ || ೧೨೦ ||
Leave A Comment