ಖಾನರ ಕೈವಿಡಿದು ಸುರಿತಾಳ ಎಲ್ಲಕು ಪೇ[ಳೆ] | ರಾಣಿ ಹೊಡೆವಳು ಭಯಬೇಡಿ |
ಆರು ಲಕ್ಷದ ಪೌಜು ಮರಗಯ ಮಾಡಿದ ರಾಮ | ಮೂಗು ಮುಂದಲೆ ಕೊಯ್ವನಿವಳ || ೧೨೧ ||

ಬಹಳ ಸಾಹಸಗಳ ಹೇಳಿಕೊಂಬಳು ತಂಗಿ | ನೋಡಿರಿ ಇವಳ ಶಕ್ತಿಯನು |
ನಾವಂತು ಬರುವುದಿಲ್ಲ ಮಾಯಿಯಲ್ಲವೆ ಇವಳು | ಯಾವ ತೆರದೊಳು ಉಳಿವಳು   || ೧೨೨ ||

ಸಾಗಿಸಿ ಸವಲಕ್ಷ ದಂಡ ಪಾಶ್ಚಯನು | ಹೋಗಮ್ಮ ಮಾತಂಗಿ ಮಗಳೆ |
ಯಾವ ತೆರದೊಳು ಎನ್ನ ಮೀಸೆಯ ಬರಮಾಡು | ನಾನಾಳೊ ರಾಜ್ಯವು ನಿನ್ನದಮ್ಮ || ೧೨೩ ||

ಎದ್ದಳು ಮಾತಂಗಿ ಎದೆಯ ತಟ್ಟುತ ಆಗ | ಬಿದ್ದಳು ಸುರಿತಾಳನಡಿಗೆ |
ಇದ್ದಂತೆ ಮನದೊಳು ಮಾಡದಿರಲು ನಿಮ್ಮ | ಪೈಚಾರ ಹಿಡವವಗೆ ಕೊಡಿಸುವೆನು   || ೧೨೪ ||

ಕ[ರ್ಕ]ಸ ಸಿಂಗಾಡಿ ಹೊಂಗಲಸರ ಮೈಜೋಡು | ತುರಗ ಏರಿದಳು ಜೀನವನು |
ಅಂಗಿ ಇಜಾರವ ಮುಂಡಾಸು ನೋಡಲ್ಕೆ | ಗಂಡೆಂದು ನಡೆಯೆ ಮಾತಂಗಿ          || ೧೨೫ ||

ಬರುವಳು ಮಾತಂಗಿ ಎರಡು ಲಕ್ಷದ ದಂಡ | ನಡೆದು ತಾ ನಿಂದಲ್ಲಿ ನಿಲದೆ |
ವೈರ್ಯಾದ ರಾಮನ ಶಿರನರಿಯದೆ ನಾ ಮತ್ತೆ | ಬಾರೆನೆಂದು ನಿರ್ಧರ ಮಾಡುತಲಿ || ೧೨೬ ||

ದಿನದಿನಕೆ ಬಂದಾಗ ಹಿರಿಯ ಹೊಳೆಯನು ದಾಂಟಿ | ಕರಿಯ ನದಿಗೆ ಬಂದು ಇಳಿಯೆ |
ದೊರೆ ನೇಮಿ ಬಳಿಯೊಂದು ಜೋಡಿನವರು ಹೋಗಿ | ಕರೆಯಲು ಪಾಳ್ಯಗಾರರನು  || ೧೨೭ ||

ಸಾಕೆಮಗೆ ಸುರಿತಾಳ ನಿಮ್ಮ ಘನಕಾರ್ಯ ಮಾಡಲಿನ್ನು | ಕಿತ್ತಿಕು ಬೇರುಗಳ ರಾಮ |
ನಾಚಿಕೆ ಬರುವುದು ನೆನೆಸಿಕೊಂಡರೆ ಬಂದು | ಪಾಪಾಸ ಎಲ್ಲ ತುಂಬುವರು          || ೧೨೮ ||

ವೀರ ಕುಮ್ಮಟದೊಳಗೆ ರಾಯ ಸುರಿತಾಳನ | ಜಾಂಡ್ಯಾಯೆಂದರೆ |
ಆಗ ಬಂದುದು ತಮಗೆ ಬೋಳಿಸಿದ ತಲೆ ಬುರುಡೆ | ಹೋಗೆಂದು ಜಾಡೇರ ಕಳುಹೆ  || ೧೨೯ ||

ಬಡವರ ಕೆಡಿಸುವುದು ತಮಗೆ ವಿರಹಿತವಲ್ಲ | ಉಳಿಗಾಲ ಮೊದಲೆ ನಮಗಿಲ್ಲ |
ಕಡೆಗೆ ನೋಡುವ ನಮ್ಮ ಬುರುಡೆ ಡಿಳ್ಳಿಗೆ ಹೋಗಲಿ | ನಡೆಸೆಂದ ನೇಮಿಯ ದಂಡ   || ೧೩೦ ||

ಆರು ತಿಂಗಳ ದಾರಿ ಮೂರು ತಿಂಗಳಿಗವನು | ಸೇರಲು ಕೊನೆ ಗಡಿಯ ಸೀಮೆ |
ಯಾವಾಗ ಕಾಣುವ ರಾಮನ ಕುಮ್ಮಟವ | ಮಾರಿಯಂದದಿ ಬರುತಿಹಳು            || ೧೩೧ ||

ರಾಯ ರಾಮನ ಬಳಿಗೆ ವಾಲೆ ಕಾಗದ ಬರೆದು | ಮಾದಿಗ ರಂಡೆ ಬರುತಿಹಳು
ಸಾಗಿಸಿ ಗಡಿಗಡಿಗೆ ಮದ್ದು ಬಾಣಗಳನು | ಹೊಡೆದಾಡಿ ಎನುತ ಬರುತಿಹಳು         || ೧೩೨ ||

ರಾಯ ರಾಮನ ಸೀಮೆ ಗೂಳ್ಯೆವು ಪಡೆಯಲು | ಗ್ರಾಮ ಗಡಿ ಮನೆಯನು ತುಂಬಿ |
ನೇಮಿ ಮಾತಂಗಿಯ ಒಡಗೊಂಡು ರಾಮನ ರಾಜ್ಯ | ಕೋಳು ಹಡೆಯಲು ದನ ಕುರಿಯು     || ೧೩೩ ||

ಮರಳಿ ಬಂದಿರೆ ಮತ್ತೆ ಮರೆದು ಹಿಂದಿನ ಪೆಟ್ಟ | ಹೊರಟು ಗಡಿ ಮನೆಯ ಮಂದಿಗಳು |
ಬಿಡದೆ ಗಂಡಿಯ ಥಟ್ಟು ಹೊಡೆವ ಕೋಳನು ತಿರುಹಿ | ಹಿಡಿದರು ತುರಗ ನೂರಾರು   || ೧೩೪ ||

ಬಂದಿರೆ [ಉ]ಳಿದವರ ಹಿಂಡಿ ಕೂಳನು ಹಾಕಿ | ಹೆಂಡಿರ ಬಳೆಯ ಕುಕ್ಕುವರು |
ಮುಂದಕ್ಕೆ ಇಡು ಹೆಜ್ಜೆ ಮಂಡೆ ಲಿಪಿಯನು ತೊಡೆದು | ಮುಂಡೇರ ಮಾಡೈ ಒಬ್ಬೊಬ್ಬರನು   || ೧೩೫ ||

ಮುಂಗಡೆಯ ಪೌಜನು ಹೊಡೆದು ಭಂಗಿತ ಮಾಡೆ | ಹಿಂದೆ ನೂಕಲು ರಾಯ ಪವುಜ |
ಚಂವರ್ಗೆ ಏನುತಲಿ ಇಮ್ಮರಳಿ ಬೇಡರು ತಮ್ಮ | ಹೊಂದಿ ಗಡಿ ಮಾನೆಯ ಕಾದಿರಲು         || ೧೩೬ ||

ಗಡಿದುರ್ಗವೆಂಬೋದು ಗೊಡವೆ ಹೋಗದೆ ನೇಮಿ | ನಡೆಯಲು ಕುಮ್ಮಟಕೆ ಪೌಜು |
ನಿಡಿಗಟ್ಟಿ ಕೆರಳುತ ಸಿಡಿಲ ಮರುಡೆಯ ಕಟ್ಟಿ | ಉಳಿಯಲು ಮಾತಂಗಿ ದಂಡು        || ೧೩೭ ||

ಕಳೆದೈದು ರಾತ್ರಿಯ ಬೆಳಗಾಗಿ ದಂಡೆದ್ದು | ಹೊಡೆವ ಭೇರಿಗಳು ಆರ್ಭಟಿಸಿ |
ಅಡರುವ ಮೇಘವು ಧರಣಿಗೆ ಕವಿದಂತೆ | ಅಡರಲು ನಾಲ್ಕು ಮುಖದೊಳಗೆ          || ೧೩೮ ||

ಬಂದಿರೆ ತುರುಕರು ಚಂದವೆ ತುರುಕರ | ಗಂಡ ರಾಮನ ವಾಲೆ ಬಂತು |
ಕಂಡ್ಯಾಕೆ ಬಲವಿಲದೆ ಉಸುರೆಂಬುವದೆನುತಲಿ | ತಂದಿರೆ ತಲೆಯ ಕಾಣಿಕೆಯ       || ೧೩೯ ||

ಕೆಡಬೇಡ ಎಲೆ ಲೌಡಿ ಮುರಿದೆವು ಎದೆಗರ್ವ | ನುಡಿ ಬಾಯಿ ಒಳ್ಳೆ ಮಾತುಗಳ |
ಹೊಡೆವಳು ಮಾತಂಗಿ ನಿಮ್ಮೊಡೆಯ ರಾಮನ ತಲೆಯ | ಇನ್ನು ನುಡಿಯಲು ಹಲ್ಲ ಮುರಿವೆ   || ೧೪೦ ||

ಬ್ರಹ್ಮಲಿಖಿ[ವ ತೊ] ಡೆವೆ ಹೆಣ್ಣ ಮೂಳಿಯ ನಂಬಿ | ಬಂದ ತುರುಕರು ಹೋಗಿ ಎನಲು |
ಹಾಗೆ ಮರಳಿದು ಆರ್ಭಟಿಸುತ್ತ ತುರುಕರು | ರೋಷ ಮಚ್ಚ[ರ] ವು ತಲೆಗಡರೆ        || ೧೪೧ ||

ಸಾಸಿರದ ಲಕ್ಷ ಬಾಣಂಗಳನು ಎಳೆದು | ಮೇಘನೊ[ಡೆದು] ನುಗ್ಗಿ ಬರುತಿರಲು |
ಮಾರುಮಾರೆನುತಲಿ ಜೇರಿಸಿ ಬರುತಿಹರು | ಗಾರೆ ಬೇಲಿಗಳನು ಹಿಡಿದು             || ೧೪೨ ||

ಏರಲು ಹೊಸತಾಗಿ ಬಂದ ಖಾನರು ನುಗ್ಗಿ | ಮೇಘನೊ[ಡೆದು] ಬರುತಿಹರು |
ಚತುರಂಗನಾಡುತ್ತ [ರಾಮ] ಕುಂತಿರಲು | [ಹ]ರಿದು ಬಂದನು ಒಬ್ಬ ಚರನು        || ೧೪೩ ||

ಕರ ಮುಗಿದು ಎನ್ನಯ ಬಡ ಬಿನ್ನ[ಹ] ಲಾಲಿಸು | ಭರಭಾರ ದಂಡು ಬಂದಿದೆಕೊ |
ದಂಡಿಗೆ ಧಣಿಗಾತಿ ಮಾತಂಗಿ ಎಂಬವಳಂತೆ | [ಹಾ] ಕ್ಯಾರೆ ಒಳ ಮುತ್ತಿಗೆಯ        || ೧೪೪ ||

ನೂಕಿರುವರು ಭೂಪ ಬಳಿಗೋಡೆಯ ಪುರಕೆ | ಹಾಕಿದರು ಬೆಂಕಿ ಹೊರ[ಬೇ] ಲಿ |
ಹೆಣ್ಣ ಬಾಲೆಯ ಮೇಲೆ ಹೆಸರೊಡೆದ [ಮೊನೆ]ಗಾರ | ಧರ್ಮವೆ [ಕೈಯ] ಮಾಡುವದು         || ೧೪೫ ||

ಅಣ್ಣಾಜಿ ಕಾಟಯ್ಯ ಮಾನ್ಯರನೊಡಗೂಡಿ | ಹೆಣ್ಣರಂಡೆಯನು ಬೆದರಿಸು |
ಹೊಡೆಯಲು ರಣಭೇರಿ ಹಿಡಿಯೆ ಬಿರುದಿನ ಕಹಳೆ | ನಡೆಯೆ ಕಾಟಣ್ಣ ಮಾನ್ಯಯರು  || ೧೪೬ ||

ನಗರದ ಬಾಗಿಲ ತೆಗೆಯಲು ರಣಭೂತ | ಬರುವದೆಂದು ಬೆದರಿದರು
ಮೊದಲ ಕಾಳಗದೊಳಗೆ ತಿಳಿದವರು ಹಿಂದಕ್ಕೆ | ಜುಣಗುತ ಫಣಿಗಳ ನೆವದಿ         || ೧೪೭ ||

ತುದಿ ತೋರ[ಲು] ಕಾಣದೆ ತುರುಕರು ಅಗಳಿನ | ಬುಡವ ಹಿಡಿದು ಹೆಣಗಿದರು |
ಕಡಿಕಡಿ ಎನುತ ಕಾಕೊಡ್ಹೆದು ಕಾಟಣ್ಣನು | ಸಿಡಿಲಿನಂತಾಗೆ ಸವರುವನು             || ೧೪೮ ||

ಒಡನೆ ಬಾದುರಖಾನ ಒಂಟಿ ಕತ್ತಿಯ ಹಂಪ | ತಿರಿತಿರಿಗಾಡಿ ಒಗೆವರು |
ಮೂಡಲ ಬಾಗಿಲ ಹಾರ್ಹೊಡೆದು ಅರಿದರಿವನು | ಮಾರಿಯಂದದ ಬಾಣಿ ಮುದ್ಧ     || ೧೪೯ ||

ತೀರುಗಾಲವು ತುಂಬಿ ಬಂದೀರೆ ಮರಮರಳಿ | ಹೋರುವನು ದೊಣ್ಣೆಯ ಮುದ್ದ |
ಕತ್ತಿ ಗುರಾಣಿಗಳ ಕಟ್ಟಿದರೆ ನುಗ್ಗಾಗಿ | ನೇತ್ರದಿ ತಲೆ ಮೂರು ಹೋಳು                || ೧೫೦ ||

[ಹ ತೇ]ರೆ ಲೌಡಿಯ ದೈತ್ಯ ಬರುವನು ಎಂದು | ಬಿಟ್ಟು ಓಡುವರು ಆಯುಧವ |
ಬಾಗಿ ಬಾಗಿಲ ತೆಗೆಸಿ ಹಮ್ಮೀರರೆಲ್ಲರು ಹೊರಟು | ತಾರಗಡಿಯಲು ಕಣ್ಣಬಿಟ್ಟು        || ೧೫೧ ||

ಊರ ಮುತ್ತಿಗೆ ಬಿಟ್ಟು ಹೋಗಿ ತಿಟ್ಟಿಗೆ ನಿಂದು | ಜಾ ಭಾಯಿ ಕುಮ್ಮಟ ಸುಡಲಿ |
ಮಾತಂಗಿ ದಂಡೆಲ್ಲ ಮುರಿದು ಹಿಂದಕೆ ಇಳಿಯೆ | ಹಾಕಲು ಜಾಂಡ್ಯ ಪೂರ್ವದಲಿ     || ೧೫೨ ||

ರಾತ್ರಿಗೆ ರಣವನು ನೋಡಬಾರದು ಎಂದು | ಮಾತೆ ಗರ್ಭಕೆ ಸೂರ್ಯ ನಡೆಯೆ |
ಮುತ್ತಿಗೆ ಎಂಬವನೆ ನೆಪ್ಪ ಕಾಣದೆ ಇರುವ | ಪುತ್ರನ ಬಲುಮೆಯಲಿ ಪಿತ ನನ್ನ        || ೧೫೩ ||

ಇತ್ತಲ ಗಲಗೆಂದು ಹತ್ತಿ ನೋಡಲು ದಂಡು | ನೇತ್ರ ಕಾಬ[ಳತೆ] ಇಳಿದಿಹುದು |
ಯಾವಲ್ಲಿ ಇರುವದೊ ಹಳದ ಡಿಳ್ಳಿಯೆನುತಲಿ | ಆಡಿಗೆ ಕಡೆಯೆನುತ ತುರಗಗಳು     || ೧೫೪ ||

ದೊರೆ ಭೂಪ ರಾಮೇಂದ್ರಗರುಹಿ ಕಾರ್ಯವ ಮಾಡಿ | ಅರುಹಿದ ರಾಯನು ಎಂದು |

ಬಿರಿದಿನೆಕ್ಕಟಿಗರು ಕರ ಮುಗಿದು ರಾಮಯಗೆ | ಅರಸೆಂದು ವಾಕ್ಯವನುಸುರೆ         || ೧೫೬ ||

ಹಿರಿಯರ್ಹೇಳಿದ ಮಾತು ತೆಗೆದು ಹಾಕುವರಲ್ಲ | ಇರುಳಿನ ಕಾರ್ಯ ತನಗಿಲ್ಲ |
[ಮೊ]ನೆಯ ರಾಯರ ಗಂಡ ಮುರಿದುವೋದರ ಮಿಂಡ | ಹಾಕಿದ ಬಿರುದೀಗ ಹೋತೇ        || ೧೫೭ ||

ಈಶ್ವರನು ಮರೆದನೆ ಪರಮೇಶ್ವರನು ಹೋದನೆ | ಪರಮಾತ್ಮ ಹೋದರೆ ಬಿಡೆನು |
ಈ ಮಾತು ಎನ್ನೊಳು ಹೇಳಬೇಡ | ಧರ್ಮದೇವತೆಯು ತೊಲಗುವಳು              || ೧೫೮ ||

ನಿಮ್ಮ ರಾಯನು ಹೇಳ್ದ ಕಟ್ಟಳೆಯಿಂದಲಿ ಪೋಗಿ | ಎನ್ನ ಕಾರ್ಯ ನಾಳೆ ಉದಯ |
ಹತ್ತು ಸಾವಿರ ದಂಡ ಜಾಣದಿ‌ಪ್ಪಯ ತೆಗೆದು | ಹೊಕ್ಕನು ಸಮರಾತ್ರಿಯೊಳಗೆ        || ೧೫೯ ||

ದಿಕ್ಕುದಿಕ್ಕಿಗೆ ಬಿಟ್ಟಿರುವ ಪವುಜಿಗೆ ಹೊಕ್ಕು | ಕುಟ್ಟಿ ಕೋಳಾಹಳ ಮಾಡಿದರೊ |
ಕಾಣರು ಹಗಲೆಲ್ಲ ಹೊಡೆದಾಡಿ ಮುತ್ತಿಗೆಯ | ಏರಿಸಿ ಎದ್ದ ಭಂಗಿಯನು               || ೧೬೦ ||

ತೂಗುತ್ತ ಮದನಿದ್ರೆ ಇರುವ ಸಮಯದಿ ಹೊಕ್ಕು | ಏಳಗೊಡದೆ ಕಡಿವುತ್ತಿರಲು |
ಜಾ ಅರೆ ಆ ಆರೆ ಯಾವಲ್ಲಿ ಓಡ್ಯಾರೆ | ತಾವೆಲ್ಲ ಕುಮ್ಮಟದುರ್ಗ                       || ೧೬೧ ||

ಗೌಡಾಯಿ ಸುಡುಮೊರೆ ಜೀನಲ್ಲ ಹಾಗಿಲ್ಲ | ಓಡಲು ದಿಕ್ಕುದಿಕ್ಕಾಗಿ |
ಚೋರ ರಾಮನು ಆಯೆ ಬೀಗಿರೆ ಊಟ ಸಾಬು | ರಾಣಿ ಮಾತಂಗೆಲ್ಲಿ ಕಡಿವ          || ೧೬೨ ||

ಖಾನರು ಹೀಗೆನುತ ಕಾಡುತ್ತ ಮರೆಯ ಬಿದ್ದು | ಡೇರ್ಯ ಗೂಡಾರಗಳ ಬಿಟ್ಟು |
ತಾವರೆ ಸಖ ಬಂದು ಏರಲು ರಥವನು | ಪಾರ ಎಕ್ಕಟಿಗರು ನಡೆಯೆ                 || ೧೬೩ ||

ನೋವಿಗೆ ಕಡೆಯಾಗಿ ತುರಗವ ಹೊಡಕೊಂಡು | ಊರ ಹೊಕ್ಕರು ಕುಮ್ಮಟವ |
ತಂದಂಥ ತುರಗವ ರಾಜೇಂದ್ರಗೆ ಒಪ್ಪಿಸಲು | ಒಂದಾರು ಭುಜವಾದ ರಾಯ        || ೧೬೪ ||

ಮಂದಿಗೆ ಅಭಯವ ಬಿರುದು ಬಾವಲಿ ಕೊಟ್ಟು | ಮುಂದೆ ನೋಡುವದೆಂದು ಕಾರ್ಯ |
ದಿನಕರನು ಪ್ರಭೆ ಸೂಸೆ ತುರುಕರು ಭಯಗೊಂಡು | ಹುಡುಕುತ್ತಿಹರು ತಾಯ ಗೂಡ || ೧೬೫ ||

ದಿಂಡಿರುಳಿ ಹೆಣಮಯ ಒಂದರೆ ಕೊರೆದವರ | ಕಂಡು ನೀರೆರೆದು ಬಾಯಿಗೆ |
ಇರುಳು ನೋಡಿದ ಬಾವಿ ಹಗಲೆ ಬಿದ್ದುದು ನ[ಮ್ಮ] | ಒಡೆಯ ಸುರಿತಾಳನ ಬುದ್ಧಿ    || ೧೬೬ ||

ನಗೆಗೀಡಾಗಲು ತನಗೆ ಪಡೆಯು ತಾರಿತು ನಮಗೆ | ಹಿಡಿತನ್ನಿ ಮಾತಂಗಿ ರಂಡಿ |
ಖಾನಖಾನರು ಎಲ್ಲ ಏಳಲು ಉರಿದೆದ್ದು | ಸೂಳೆಯು ಕೊಡ ನಮಗೆ ನೇಮಿ          || ೧೬೭ ||

ರಾಮಗೆ ಹಿಡಿಕೊಟ್ಟು ಮಾಡಿದಳು ಹೊಲತೆಂದು | ಹೋಗುವದು ಸಾವದು ಯಾಕೆ |
ನಿಲ್ಲಿ ಸೈರಿಸಿ ತಾವು ನಿಮಿಷಮಾತ್ರದಿ ನಡೆದು | ಮತ್ತಲ್ಲಿ ಮಾತಂಗಿಯ ಕರೆದು       || ೧೬೮ ||

ಅಲ್ಲಿ ಹಿಡಿದ ಪಂಥ ಎಲ್ಲಿ ಹೋಯಿತು ರಂಡೆ | ಕಳ್ಳ ಹೊಲತಿ ಕತ್ತೆ ಸೂಳೆ |
ಗಾಲಿಖಾನನು ಇವಳ ಮೂಗು ಮೊಲೆಯನು ಕೊಯ್ವೆ | ಚಾರಿದೀವೆನುತ ಉರಿದೇಳೆ || ೧೬೯ ||

ಹೇಡಿ ಎಮ್ಮನು ಮಾಡಿ ಕಾಣದರಸಿನ ಮುಂದೆ | ರಣಮಯವ ಮಾಡಿದ ಮಿಂಡ ಬಂದು |
ರಾಮನು ಬಂದಿರಲು ತಾರಿ ಹೋಗದ ಕಥೆಯ | ಆಳಿಗೆ ಈ ಬಗೆಯ ಕೇಡು           || ೧೭೦ ||

ರಾಯನಾರ್ಯಾಕಿಲ್ಲದೆ ಸೀಳಿಸುವೆ ಕೈಕಾಲು | ಕಾದೆನು ನೋಡೆಂದ ತಪ್ಪ |
ನೋಡಿ ಕಾರ್ಯವ ಮಾಡು ಮೂಗು ಮೊಲೆಗಳನರಿದು | ಹೀನಾಯ ಹೊರಬೇಡ ತಂಗಿ       || ೧೭೧ ||

ಈಗಲಾದುದು ಏನು ರಣಭೀಮ ಬಂದನೆ ನೋಡು | ಯೋಧನಂದದಲಿ ಕೊಂದಿಡುವೆ |
ಖಾನರ ಗರ್ಜನೆಯ ಕೇಳಿ ಮಾತಂಗಿಯು | ಭೂಮಿ ಪಾತಾಳಕೆ ಇಳಿದು              || ೧೭೨ ||

ಆಡಿದೆ ಪಂಥವ ಸುರಿತಾಳನೆಡೆಯೊಳು | ಹೀಗೆ ಬರುವುದೊ ನಾ ಕಾಣೆ |
ಕೀಳಾಗಿ ಖಾನರು ನುಡಿಯೆ ಮಾತಂಗಿಯು | ಓಡುವ ತೆರ ಗ್ರಹಿಸಿ ಮನದಿ           || ೧೭೩ ||

ತೋರುತಿರಲು ಜಲವು ಕಣ್ಣೊಳು ಸಮಯಕ್ಕೆ | ಕೂಡಿ ಬಂದಿತು ಒಳವಿನೋಲೆ |
ಕುಮ್ಮಟದೊಳಗಿರುವ ಕುಲಗೇಡಿ ತೆಲುಗರು ಎಲ್ಲ | ವಾಲೆ ಕಾಗದವನು ಬರೆದು      || ೧೭೪ ||

ನಿಲ್ಲು ಹೋಗಲು ಬೇಡ ಇಂದಿನೊಳಗೆ ಊರ | ನಿಮ್ಮ ವಶವನು ಮಾಡುವೆವು |
ಎದೆಗೆಡದೆ ಇಂದೊಮ್ಮೆ ಹಗಲು ಲೆಗ್ಗೆಯ ಬನ್ನಿ | ತೆಗೆದುಕೊಡುವೆವು ಬಾಗಿಲನು      || ೧೭೫ ||

ಉಣಲಿ ಬಂದನೆ ಅವನು ನೋಡ ಬಂದೆವೆ ನಾವು | ಜಿನಿಸಲಿಲ್ಲವೆ ಕಂಪಿಲಗೆ |
ತೆಲುಗರಸಿಯ ಮಗನು ಯಲ್ಲರಸನು | ಹಗೆಯ ರಾಮನ ಕೊಲುವೆನೆನುತ           || ೧೭೬ ||

ಕಡಿಕರ್ತ ಕುಮ್ಮಟಕೆ ತಾನೆ ಒಡೆಯನು ಎಮ್ಮ | ಹೊಲೆಯರ ಕಡೆಯಾಗಿ ಕಾಣ್ವ |
ನಡೆಯೆ ಕಾಡಿಗೆ ನಾವು ಕಾಡಗೊಲ್ಲವ ಸಾಕಿ | ನಡೆಸನೆ ಸಕಲ ಬೇಹದಲೆ            || ೧೭೭ ||

ಕಡಿಸಿದೆ ರತ್ನಾಜಿ ಹಡೆದವನ ಕೈಯೊಳಗೆ | ಮನವಿಂತು ಮಂತ್ರಿ ಕಡಿಸಿದನು |
ಬಾರಿ ಬಾರಿಗೆ ಬಂದು ಹೋಗಬೇಡವೊ ನೇಮಿ | ಊರ ಕೊಡುವುದು [ಎಮ್ಮ]ಭಾವ || ೧೭೮ ||

ಮೂಳ ರಾಮನ ಕಡಿದು ಮುಂದೆನಗೆ ಪಟ್ಟವ | ಮಾಡುವ ನಂಬಿಗೆ ಕಳುಹೋ |
[ಓಡುವ] ಮಾತಂಗಿ ಕ್ಷೀರಾಬ್ಧಿ ಉಕ್ಕುವ | ತೆರದಿ ಮನದೊಳು ಹರುಷ               || ೧೭೯ ||

ನೇಮಿಖಾನರಿಗೆಲ್ಲ ವಾಲೆ ತೋರಲು ನೋಡಿ | ಮೂಗಿನೊಳು ಕರವಿಡಲು ಎಲ್ಲ |
ನಂಬಿಗೆ ಬರೆಸಿದ ಸುರಿತಾಳನ ಬಿರಿದಿಟ್ಟು | ಈ ತಂದು ರಾಯನ ಕೊಟ್ಟವಗೆ          || ೧೮೦ ||

ಬಂದು ಪಟ್ಟವ ಮಾಡಿ ದಂಡ ಡಿಳ್ಳೀಗೆ ತೆಗೆವೆ | ರಾಜೇಂದ್ರ ಅಭಯೆಂದು ಬರೆಯೊ |
ನೇಮಿ ಕೇಳಿದನಾಗ ಮಾತಂಗಿ ನಾ ಬಂದ | ವ್ಯಾಳ್ಯವು ಒಳ್ಳೆಯದೆನುತ             || ೧೮೧ ||

ಯಾರಮ್ಮ ಯಲ್ಲರಸನೆಂಬ ಸುದ್ಧಿಯ ಬಂದು | [ಓ]ದೆ ಕೇಳಿದೆ ಕರ್ಣದೊಳಗೆ |
ಲಾಲಿಸಿ ಕೇಳಿನ್ನು ನೇಮಿಖಾನನು ಮತ್ತೆ | ಐದು ಮಂದಿಯು ಕಂಪಿಲಗೆ               || ೧೮೨ ||

ಯಾರ್ಯಾರು ಎನುತಲಿ ರಾಣಿ[ಯ] ಕೇಳಲು | ಹೇಳುವಳು ಕುಲಸಾರಿಗವಾಗಿ |
ಕಮಲಾಜಿ ಹರಿಯಮ್ಮ ಮೊದಲಾದ ಸತಿಯರು | ಎಡ ಮಧ್ಯ ಬಂದಿಹರೆರಡು        || ೧೮೩ ||

ಅದರಿಂದ ಆಚಿಕೆ ಮತ್ತೆ ಓರ್ವಳು ಕೇಳಿ | ನಗೆಗೆಡದಿರು ನೇಮಿ ಎನಲು |
ನಾಲ್ವರನಾಳುತ ರಾಯ ಕಂಪಿಲ ಮುದಿಯ | ಕಾದ ಕಾಲಕೆ ಒಬ್ಬ[ಳುಂ]ಟು          || ೧೮೪ ||

ಸೂಳೆಯೆಂಬರು ಲೋಕ ಭೇದಗಾಣದೆ ಹಿಂದೆ | ಆದಿ ಅವಳು ರತ್ನಾಜಿ ಬನ್ನಿ |
ಅವಳ ಮಗನು ಯಲ್ಲರಸನೆಂಬುವನೆಂದು | ಕಂಡೆಯ ನೇಮಿ [ಬರೆದುದನು]        || ೧೮೫ ||

ಎಂದಿಗೆ ಸಲ್ಲದು ಪಟ್ಟ ಅವನಿಗೆ ಎಂದು | ಛೀ ಎಂದು ನಕ್ಕರು ಎಲ್ಲ |
ಆಗಲಿ ಅದಕೇನು ನೋಡುವ ಅವನ ಮಾತ | ಮಾಡುವ ಊರ ಮುತ್ತಿಗೆಯ          || ೧೮೬ ||

ಭೇರಿ ನಾದವ ಮಾಡಿ ಊರ ಹ[ಲ್ಲೆ]ಗಳೆಂದು | ಏರಲು ಚತುರ್ಭಾಗದೊಳಗೆ |
ಕಡಿಕಡಿ ಎನುತಲಿ ಕತ್ತಿ ಭಲ್ಲೆವ ಕಿತ್ತು | ಹೊಕ್ಕರು ಬಿದ್ಹೆಣನ ತುಳಿದು                   || ೧೮೭ ||

ಮುತ್ತಿ ಜೇನೊಣದಂತೆ ಹ[ಚ್ಚಿ] ಕೋಟೆಯ ಬುಡಕೆ | ಹೊಕ್ಕರು ಪಿಳ್ಳಿ ಕೋಟೆಯನು |
ದೊರೆ ಚೆನ್ನರಾಮಗೆ ಗಣನೆಯಿಲ್ಲದೆ ಸುದ್ಧಿ | ಚದುರಂಗನಾಡುತಲಿದ್ದ                 || ೧೮೮ ||

ಹಾರಿ ನಿಲ್ಲುತ ಬಂದ ತರಳ ಮಂತ್ರಿಯ ಮಗನು | ಕರಮುಗಿದು ಹೊರಕೋಟೆ ಲೆಗ್ಗೆ |
ಎಂ[ದ]ನು ಏಕಾಂಗಿ ರುದ್ರನವತಾರದಿ | ಜಗ್ಗನೆ ಪಲ್ಲಕ್ಕಿ ಏರಿ                         || ೧೮೯ ||

ಶೀಘ್ರದೊಳಗೆ ಬರುವೆ ಶಿವನ ಆಲಯ ಹೊಕ್ಕು | ನುಗ್ಗುಮಾಡುವೆ ತುರಕರನು |
ರಾಯ ರಾಮನು ಎದ್ದು ನಡೆದ ಜಟ್ಟಂಗಿಯ | ದೇವರ ಆಲಯಕಾಗಿ                  || ೧೯೦ ||

ಭೂಮಿಗೆ ಮೈಯಿಕ್ಕಿ ದೀರ್ದಂಡ ನಮಸ್ಕರಿಸಿ | ಸ್ವಾಮಿಯ ಸ್ತುತಿ ಮಾಡಿದನು        || ೧೯೧ ||

ಹರಹರ ಗುರು ಶಂಭು ಪರಮ ಪಾವನಮೂರ್ತಿ | ಉರಗಭೂಷಣನೆ ಕೊಡು ಮತಿಯ |
ನಡೆಸುವೆ ಮಾತಂಗಿಯೊಡನೆ ಕಾರ್ಯಕೆ ಅಭಯ | ಕೊಡುಯೆಂದು ರಾಮನು ಎರಗಿ || ೧೯೨ ||

ಮೂರು ರಾಯರ ಗಂಡ ಜಟ್ಟಂಗಿಯ ವರಪಿಂಡ | ತೀರಿತು ಆಳಿಕೆ ನಿಮಗೆ |
ಸೇರುವೆ ಕೈವಲ್ಯ ಶಿವನ ಪಾದವ ನೆನೆದು | ವಾಮ ಭಾಗದ ಹೂವ ತೆಗೆದಿಡಲು      || ೧೯೩ ||

ಬದುಕಿದೆ ನಿಮ್ಮಯ ಕೃಪೆಯು ಆದುದು ಎಂದು | ಕಿರಣದ ಕಳೆ ಕಾಂತಿ ಸೂಸೆ |
ಅಂದಣದೊಳು ಕುಳಿತು ತಾಯಿ ಮನೆಗೆ ಬಂದು | ಪಾದಂಗಳಿಗೆ ಸಾಷ್ಟಾಂಗವೆರಗಿ  || ೧೯೪ ||

ಎರಗಿದ ಪುತ್ರನ ಪಿಡಿದೆತ್ತಿ ಹರಿಯಮ್ಮ | ಸ್ಥಿರಪಟ್ಟವಾಳೊ ರಾಜೇಂದ್ರ |
ಬರವೇನು [ಹೇ]ಳಪ್ಪ ಕಳೆಕಾಂತಿ ತೋರುವುದು | ಬಿಗಿಯಪ್ಪಿ ಮುಂಡಾಡಿ ಕೇಳೆ     || ೧೯೫ ||

ಕಡೆಯ ಕಾಳಗದೊಳು ಕಾಣಗೊಡದು ಕಾರ್ಯ | ಮದದಿ ಮಾತಂಗಿ ಹೆಣ್ಣೊಳಗೆ |
ನಡೆಯದು ಕತ್ತಿ ಕಡೆಗೆ ರಾಮನು ಸ್ತ್ರೀಯ | ಕಡಿಯನು ಹೀನಾಯ ಬಿಡದು            || ೧೯೬ ||

ನವಕ್ಷೋಣಿ ಬಲ ಬರಲು ಸಂಹರಿಸುವ ತ್ರಾಣ | ದಯಮಾಡಿ ಇರುವುದು ಎನಗೆ |
ಧರಯೊಳು ಸ್ತ್ರೀಹತ್ಯೆ ಬಹು ನರಕ ಎಂಬುದು | ಹೊಡೆವೆನೆಂದರೆ ಎತ್ತಿ ಬಿಡುವೆ       || ೧೯೭ ||

ನಡೆವ ಸೂಚನೆ ಪೇಳ್ವೆ ಭಯ ಬೇಡಿ ಮನದೊಳಗೆ | ಲಯ ಶುಭವ ಕಾಣಲು ಅರಿದು |
ಬಂದ ನೇಮಿಯ ದಂಡ ಕೊಂದು ಗೋರಿಯ ನಿಡುಪಿ | ರಂಡೆ ಕೊಲ್ಲಲು ಬಿರಿದೆನಗೆ   || ೧೯೮ ||

ಕರೆಸಿದಾಗಲೆ ರಾಮ ಪಡೆದ ರಾಜೇಂದ್ರನ | ಕರೆಸಿದ ಮಂತ್ರಿ ಮನ್ನೆಯರ |
ತರಳ ತನ್ನಯ ಪುತ್ರ ಜಟಂಗಿರಾಮಗೆ ಪಟ್ಟ | ಧರಿಸಲು ಸರ್ವ ಸಂಭ್ರಮವು          || ೧೯೯ ||

ರಾಯ ಮಂತ್ರಿಯು ತಿಳಿದ ಸಾವಿನ ಬಗೆಯನು | ಆಗ ಕರೆಸುತ ಮನದೊಳಗೆ |
ಮೂರೆರಡು ವರುಷದ ಬಾಲಗೆ ಸದರಿಟ್ಟು | ತಾನಿಳಿದು ಕರಮುಗಿದು ನಿಲ್ಲೆ           || ೨೦೦ ||

ರಾಹುತ [ರಾ]ಣುವೆ ಪ್ರಧಾನಿ ಪ್ರಜೆಗಳು ಸಹ | ಮಾಡಲು ದೀರ್ಘದಂಡವನು
ಏನಮಗೆ ಗತಿ ಮುಂದೆ ಆಗ ಮಂತ್ರಿಯು ಕೇಳೆ | ಬೋರಿಡಲು ಪಾದಗಳ ಪಿಡಿದ     || ೨೦೧ ||

ಹೆದರಬೇಡವೊ ಮಂತ್ರಿ ತರಿಗಡಿವೆ ದಂಡನು | ಬುಡಕೆ ನಿಲ್ಲಿಸಿದಾವೆ ಅವರ |
ತಡೆಯರು ಕಾರ್ಯಕ್ಕೆ ಇಡದೆ ಪಟ್ಟಕೆ ಧಣಿಯ | ಪಡೆದಿಹನೆ ವಜ್ರಕಾಯವನು         || ೨೦೨ ||

ಪುತ್ರನ ನುಡಿಯ ದೃಷ್ಟಾಂತ ವಚನವ ಕಂಡು | ಹತ್ತಲು ರಾಯಗೆ ದುಃಖ |
ಕಿತ್ತು ಸೂರ್ಯಾಡುತ್ತ ಗಲ್ಲಗಳ ಪಿಡಿದೆತ್ತಿ ಬಿಗಿಯಪ್ಪಿ | ಮತ್ತೆನಗೆ ಗತಿಯೇನು ಎನಲು || ೨೦೩ ||

ರಾಜೇಂದ್ರ ರಣಭೂಪ ಏನೀಗ ಬಂದಿಹುದು | ಹಾಳು ಮಾಡುವೆ ಬಂದ ದಂಡ |
ಬಾಲನ ಮುಂದಿಟ್ಟು ಸುಖದಿ ರಾಜ್ಯವನಾಳು ಕಾಯ ನಿಶ್ಚಿತವೆ ಧರೆಯೊಳಗೆ         || ೨೦೪ ||

ಅಕ್ಕ ತಂಗೆರ ಕರೆದು ಬಿಗಿಯಪ್ಪಿ ಗಲ್ಲವ ಪಿಡಿದು | [ಕೊ]ಟ್ಟ ದಣಿವಂತೆ ಬಂಗಾರ |
ದುಃಖ ಮಾಡಲಿ ಬೇಡಿ ಮಿಕ್ಕು ಮೀರಲು ಕಾರ್ಯ | ಸತ್ತರೆ ಸ್ವರ್ಗ ಸಲಿದಂತೆ         || ೨೦೫ ||

ಮುತ್ತೈದೆತನಗಳು ಹೆಚ್ಚಾಗಿ ಬಾಳಿನ್ನು | ಇಟ್ಟೋಲೆ ಸ್ಥಿರವಾಗಿ ಬಾಳಿ |
ಸತ್ತನೆಂಬುವ ಚಿಂತೆ ಇಟ್ಟುಕೊಳ್ಳಲಿ ಬೇಡ | ಲೋಕದ ವಾರ್ತೆ ಪೇಳುವೆನು          || ೨೦೬ ||

ರಾಯ ರಾಮನು ಕರೆಸಿ ರಾಣಿಯರೈವರ | ಬಾರೆನ್ನ ರಂಭೆ ಊರ್ವಸಿಯೆ |
ಬಾರೆನ್ನ ರತಿ ಭಾಗ್ಯದ ಸ್ತ್ರೀ ಲಕ್ಷ್ಮಿ[ಯೆ] | ಬಾರೆನ್ನ ಚಂದ್ರನ ಕಳೆಯೇ                  || ೨೦೭ ||

ಮಡದಿಯರೈವರ ತೋಳೆಡೆಯೊಳು ಕುಳ್ಳಿರಿಸಿ | ಪರಿವಾರ ಸಮೇತ ಮಧ್ಯದಲಿ |

ಪಿಡಿದು ಗಲ್ಲಗಳನು ಲಯಗಾಲ ಕೇಳಲು ನೀವು | ಬರಬೇಕು ಎನ್ನೊಡನೆ ಎನಲು     || ೨೦೮ ||

ಮಲೆವ ರಾಯರ ಗಂಡ ರಣವಿಜಯ ಕಲಿಪಾರ್ಥ | ಹಿಡಿ [ನ]ಮ್ಮ ಅಭಯ ಹಸ್ತವನು |
ಎದೆಗೆಡದೆ ವೈರಿಯ ಕಡಿ ನಾವು ಬರುವುದಕೆ | ಎರಡೆಂಟು ಬೇಡ ಬೆನ್ನೊಡನೆ        || ೨೦೯ ||

ಹರಸಿ ಸೇಸೆಯನ್ನಿಟ್ಟು ಲಯಮಾಡು ನೇಮಿಯ | ಅನಿತದಿ ಹರಸು ಸರಿಮಾಡೆ |
ಸೆರೆಯ ಕೊಟ್ಟುರೆ ನಿಮ್ಮ ಪರಸ್ತ್ರೀಯ ಭೋಗಕ್ಕೆ | ಅರುಹಲು ನಿಮ್ಮೆಡೆಯ ಮುಂದೆ   || ೨೧೦ ||

ಸತಿಯರ ವ್ರತಿನಿಷ್ಠೆ ಪತಿಗೆ ಇಮ್ಮಡಿಯೆಂದು | ನಗುತ ನಾರಿಯರ ಕಳುಹಿ
ಮತಿವಂತ ಮಂತ್ರಿಯ ಒಡನೆ ಹೇಳಿದ ರಾಮ | ಇಡು ಒಯ್ದು ಅರಸ ದುರ್ಗದಲಿ     || ೨೧೧ ||

ಹರಿಯಮ್ಮ ಕಮಲಾಜಿ ತರಳ ಮೊಮ್ಮಗನೊಯ್ದು | ಇ[ಡು] ನಿಮ್ಮ ಕುಟುಂಬ ಸಹಿತ |
ಇದಕೆ ದುಃಖವ ಮಾಡೆ ಕಡಿ ಮಗನೆ ದಂಡೆಂದು | ಹರಿಯಲೆ ಮಗನ ಬಿಗಿಯಪ್ಪಿ      || ೨೧೨ ||

ಪುತ್ರ ನೀನಳಿಯಲು ಧಾತ್ರಿಯು ಉಳ್ಳನಕ | ಕೀರ್ತಿ ಮೆರೆಯದೆ ಕಾವ್ಯದಲಿ |
ಬೆಚ್ಚದೆ ರಣದೊಳು ಸತ್ತರೆ ಕೈವಲ್ಯ | ವಪ್ಪುವುದು [ಈ]ವ ಗಣಪದವ                 || ೨೧೩ ||

ತಾಯೆ ಲಾಲಿಸಬಹುದು ಆನು ಕೊಂಬೆನು ದಂಡ | ಬೀಜಕ್ಕೆ ಬಿಡುಗೆ ಏಳ್ನೂರಾ |
ನಾಗಮ್ಮ ದುರ್ಗಮ್ಮ ಮೇಲೆ ಮೂರ್ತವ ಮಾಡಿ | ಕುಮಾರನ ಬಗೆಯ ನೋಡಮ್ಮ  || ೨೧೪ ||

ಇದ್ದ ತಾವಕೆ ಬಾಲೆಯರ ನಡೆಸಿ ದುರ್ಗಕೆ | ರಾಮ ಅರುಹಿದ ಮಂತ್ರಿಯೊಡನೆ |
ಕೊಡಬೇಡಿ ಬಾದುರಖಾನ ಕೈಸೆರೆ ಎನ್ನ | ಶರೀರ ನೀಗುವೆನು ಎಲೆ ಮಂತ್ರಿ         || ೨೧೫ ||

ವೀರ ಕಾಸೆಯ ಹಾಕಿ ಗೀರು ಗಂಧವ ತೊಡೆದು | ಆಭರಣ ಬಿರಿದನು ಧರಿಸಿ |
ಕ್ಷೀರಾನ್ನ ಸವಿದಿನ್ನು ಏಳುವ ಸಮಯದಿ ಕಾಟ | ಓಡಿ ಬಂದನು ಎಡವಿ ಮುಗ್ಗಿ         || ೨೧೬ ||

ಏನಯ್ಯ ಅಣ್ಣಾಜಿ ಬಹಳ ಭರದೊಳು ಬಂದೆ ನೀ | ನೀನಿರಲು ನಾನು ತಡೆದಿರ್ದೆ |
ಏನ ಹೇಳಲಿ ಕಾರ್ಯ ಒಳಗಾಗಿ ತೆಲುಗರ ಯಲ್ಲ | ಬಾಗಿಲ ತೆಗೆ[ದೆ]ಡೆಗೊಟ್ಟ        || ೨೧೭ ||

ಇದಕೆ ಬರುವರೆ ಅಣ್ಣ ಸುಡು ನಿನ್ನ ದಾರಿದ್ಯ್ರ | ಹೊಡೆಸದೆ ತೆಲುಗರ ತಲೆಯ |
ಸಿಡಿಲಿನಾರ್ಭಟದೊಳು ಏರಿ ತೇಜಿಯ ರಾಮ | ನಿಜವೇನೊ ಅಣ್ಣ ಈ ಮಾತು        || ೨೧೮ ||

ಬಿದ್ದವು ರಣಭೂಪ ಗಿಡ್ಡ ಯಲ್ಲರಸಗೆ | ದುರ್ಗವನು ಪಟ್ಟವ ಮಾಡಿ |
ಎದ್ದು ಓಡುವ ಭರಕೆ ವಾಲೆ ಕಳುಹಲು ಬಂದು ನುಗ್ಗುವರು ಒಳಸಂಚಿನಿಂದ          || ೨೧೯ ||

ವಾಯು ಗಮನದಿ ಬಂದು ಏರಲು ಹುಲಿಮುಖವ | ಬಾಗಿಲ ಹಾರ್ಹೊಡೆದು ಇರಲು |
ರೋಮ ರೋಮಗಳೆಲ್ಲ ಏದಿನ ಮುಳ್ಳಾಗಿ | ಭೇರಿ ಕಹಳೆಯನು ಹೊಡೆ ಎನಲು      || ೨೨೦ ||

ತರಿಸಿದ ತೆಲುಗರ ಜವಮಾತ್ರ ಉಳಿಯದೆ | ಕಡಿಸಿದ ರಣದುರ್ಗಿ ಮುಂದೆ |
ಹಿಡಿಸಿ ಯಲ್ಲರಸನ ಹೊಡೆದು ಕೇಳಲು ಬಿದ್ದ | ಎನುತ ನುಡಿಯಲು ತಲೆವಾಗಿ        || ೨೨೧ ||

ಹೊಡೆದು ಯಲ್ಲರಸ[ನ]ತಲೆಯ ನೇಮಿಗೆ ಕಳುಹಿ | ಬಿಡಬೇಡ ಹಿಡಿದವನ ಕೈಯ |
ಬಡವನ ಭಾಷೆಗೆಡಿಸಿ ಹೋಗಲು ಪುಣ್ಯ | ಸುಡುಗಾಡಿಗೆ ಪಟ್ಟವ ಮಾಡಿ               || ೨೨೨ ||

ಕಂಡೇನೇ ಮಾತಂಗಿ [ಚಂ]ಡನು ಯಲ್ಲರಸ | ಗಂಡೀದ ಕರ ನೆಚ್ಚಿದೆಮ್ಮೆ |
ಮುಂದೇನು ಗತಿ ನಮಗೆ ಮಾಡಿದ ಬದುಕ ಹೀಗಾಗೆ | ಬಂದೆಲ್ಲೆ ವಿಧಿಯಾಗಿ ನಮಗೆ  || ೨೨೩ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನ ಮುಂದೆ ಮರಣವಾಗುವ ಬಗೆಗೆ | ಒದಗಿತು ಹದಿನೆಂಟು [>ಹತ್ತೊಂಬತ್ತು] ಸಂಧಿ      || ೨೨೪ ||[1]

[1] + ಅಂತು ಸಂಧಿ ೧೮ಕ್ಕಂ [>೧೯ಕ್ಕಂ] ಪದನು ೧೯೯೮ ಮಂಗಳ ಮಹಾಶ್ರೀ (ಮೂ).