[1]ಶ್ರೀ ಗಿರಿಜೇ[ಶ] ಭಾಗೀರಥಿ ವಲ್ಲಭನೆ | ನಾಗಭೂಷಣ ನಂದೀಶ |
ಆಗಮಕೊಡೆಯನೆ ಮೂಜಗವ ರಕ್ಷಿಪನೆ | ಶ್ರೀಗಿರಿ ಮಲ್ಲ ಕೊಡು ಮತಿಯ            || ೧ ||

ಮಾವನ ಶಿರವಧಿಸಿ ಕಪಾಲವ ಧರಿಸಿದನೆ | ನಾಡ ಮಣಿಹವ ನರಹರಿಗೆ |
ಮಾಡಿ ಮನ್ಮಥಸುತನ ಮಾವನ ಮನೆಯ | ದ್ವಾರ [ಕಾಯ್ದ] ಕೊಡು ಮತಿಯ       || ೨ ||

ಕಾಶಿ ರಾಮೇಶ್ವರಕೆ ಈಸು ವೆಗ್ಗಳವಾದ ಶ್ರೀ | ಶೈಲ ವರ ಹಂಪೆ ವಿರುಪಾಕ್ಷ |
ಲೇಸಾಗಿ ಪಾಲಿಪುದು ಮುಂದಣ ಕೃತಿಯ | ಸೂಸುವುದೆನ್ನ ಹೃದಯಕ್ಕೆ               || ೩ ||

ಗಜಮುಖ ಗಣನಾಥ ಒಡಗೂಡು ಹೃದಯದಿ | ನಡೆಸೆನ್ನ ಮುಂದಕ್ಕೆ ಪದವ |
ನುಡಿಯುವ ಜಿಹ್ವೆಯ ಸ್ವರಕೆ ಶಾರದೆ ಬಂದು ಪ್ರತಿ | ಕೆಡದಂತೆ ಮತಿಯ ಪಾಲಿಪುದು         || ೪ ||

ವರನಲ್ಲವೊ ಚಿತ್ತ ಪರಜ್ಞಾನಮೂರ್ಖರಿಗೆ | ಪರಸ್ತ್ರೀಯ ಕಳ್ಳ ಸುಳ್ಳರಿಗೆ |
ಹರನಿತ್ತುದಲ್ಲದೆ ಧರೆ ನಾರಿಯರು ತನ್ನ | ಗುರು ತಾಯಿ ಎಂದು ಕಾಣ್ವರಿಗೆ           || ೫ ||

ಅಂತಪ್ಪನಾಗಲು ರಾಮನ ಬೆನ್ನಲೆ | ಕಂತು ಹರನು ಕಾದಿಹನು |
ವಂಚನೆ ಪರವಿಷಯ ಕರ್ಮಿಗಳ ಎಡಬಲನ ಲ | ಕ್ಷಾಂತ್ರ ಯೋಜನವನು ಪೊದ್ದವರೆ || ೬ ||

ಕೇಳಬಹುದು ಸತ್ಯ ಬಾಲರಾಮನ ಕೃತಿಯ | ಆಲಸ್ಯ ಮಾಡದೆ ಪ್ರೌಢರು |
ಮೂಢರಿಗೆ ಮುಂದರ್ಥ ಒಡೆದು ಪೇಳಲು ಕುರುಡಗೆ | ಪಟ ಪಿಡಿದಂತೆ ಕಾಣುವುದು  || ೭ ||

ಎತ್ತುವೆ ರಾಮನ ಸತ್ಯಸಾಗರ ಕಥೆಯ | ಚಿತ್ತ ಬೇಸರದೆ ಕೇಳುವುದು |
ಕತ್ತಿಗೆ ಹೊರತಾಗಿ ಕಳ್ಳನ ವಿಷಯ ಗ್ರಹಿಸದೆ | ಶಿವಶಕ್ತಿ ಆದವನ ಕೃತಿಯನು         || ೮ ||

ತಿಳಿಯದೆ ನುಡಿವನು ಮರುಳು ಮಾನವನು ಮೇಲೆ | ಗರುಡನಂದದಿ ಹೋ [ಹ]ನಲ್ಲ |
ದೊರೆಯದು ಹೊರಗಿರಲು ಇದಕುಂಟು ಕೃತಿ ದೃಷ್ಟ | ಜಯಲಕ್ಷ್ಮಿ ಒಲಿದ ಮನುಜರಿಗೆ         || ೯ ||

ಹರನೊಲಿದ ಕಾಲದಲಿ ಬರಡೆಲ್ಲ ಹಯನಕ್ಕು | ಧರಣಿಗೆ ಸೋತೊಮ್ಮೆ ಬರುವೆ |
ಹಿರಿಯ ಲಕ್ಷ್ಮಿಯು ಬಂದು ಹೆಗಲೇರೆ ರುದ್ರಗೆ | ಹಿಡಿಯದೆ ಆ ತೇಜಿ ನೆಲನ           || ೧೦ ||

ದೂರಲ ಮಾತೇಕೆ ಲಾಲಿಸಿ ಬಲ್ಲವರು | ಸೋಮಶೇಖರನ ರಾಣಿಯನು |
ಮೇಲೊಬ್ಬ ಕರೆದೊಯ್ಯೆ ತರುವುದಕೆ ನರಕಪಿಯ | ನೀರು ದೊರೆಯದೆ ಚಿತ್ರರಥಗೆ   || ೧೧ ||

ಶಾಲಿವಾಹನ ಮಣ್ಣೊಳ್ ಆನೆ ಕುದುರೆ ಮಾಡಿ | ನೂರಾರು ಲಕ್ಷ ಅಕ್ಷೋಣಿಯನು |
ಸಹಾಯವಾಗಲು ಹರನು ನವಕ್ಷೋಣಿ ವಿಕ್ರಮನು | ಪ್ರಾಣವಾಗದೆ ಮಣ್ಣ ಬೊಂಬೆ    || ೧೨ ||

ದೇವೇಂದ್ರನ ಬಿಳಿಯಾನೆ ಭೂಮಿಗೆ ಇಳಿಯದೆ | ಶ್ರೀ ಮಹಾದೇವನೊಳಗಿರಲು |
ಏರೋ ಬೊಲ್ಲನು ಎಮ್ಮ ಪ್ರಾರಬ್ಧ ತಮಗಿರಲು | ಸೇರದೆ ತನ್ನಿಂದ ತಾನೆ            || ೧೩ ||

ಆರಾರ ಲಿಖಿತದಿ ಪೂರ್ವದಿ ಪಡೆದಂಥ | ಹಾನಿ ಸುಖ ಕಷ್ಟ ತಪ್ಪುವುದೆ |
ಲಾಲಿಸ್ಕೆ ಮುಂದೊಮ್ಮೆ ನರರ ಮಾತುಗಳೇನು | ಕೇಳಿರೈ ರುದ್ರನ ಕೋಪ          || ೧೪ ||

ಗಣಪತಿರಾಯನ ಮಗ ರುದ್ರಭೂಪಾಲ | ಮೆರೆವ ಹಜಾರದಿ ಕುಳಿತು |
ಕರೆಸಿದ ತನ್ನಯ ಹಳೆಯ ಮಂತ್ರಿಯ ಬೇಗ | ಧರಣಿಪಾಲಕರ ಹರುಷದಲಿ           || ೧೫ ||

ಕರಿತುರಗ ಕಾಲಾಳು ಪರಿಚರರು ಪಾಠಕರು | ಸದರಿಗೆ ನಿಂತು ಕರಮುಗಿದು |
ಇರುವಂಥ ಸಮಯದಿ ರಾಯನ ವರಪುತ್ರ | ಮೊರೆವಾವೇಶದಿ ಸಾಗಿ ಬರಲು        || ೧೬ ||

ಧೀರನು ಎಪ್ಪತ್ತುರಾಯನು ಬರಲಾಗ | ಬೇರವನ ಮಂತ್ರಿ ಮನ್ನೆಯರು |
ಭೇರುಂಡನಂದದಿ ಹದಿನಾರು ಸಾವಿರದೊಳು | ರಾಯಗೆರಗಿ ಕರಮುಗಿದು          || ೧೭ ||

ರಾಯ ರುದ್ರನು ಪೇಳೆ ಜೀವಣ್ಣ ಮಂತ್ರಿಯ ಕೂಡೆ | ಹೀನಾಯ ಬಂತೆಮಗೆ ಮಂತ್ರಿ |
ನಾಯಿ ಹೋಗಿ ಹುಲಿಯಾಗಿ ಆನೆಯ ಗುಟುಕನು ಪೋವ | ಭೇರುಂಡನಂದದಿ ರಾಮ         || ೧೮ ||

ಹರನೊಳು ಕಾದಿದ ನರನ ಅಣ್ಣನ ಪಿತನ | ಹೊರುವ ವಾಹನದಂತೆ ನಾವು |
ಹೊರಗೆ ಹೋಗುವ ಮಾರಿಯ ಮನೆಗೆ ಕರಕೊಂಡಂತೆ | ತೆರ ನಮಗೆ ಕೊಡಲಾದ ಲಿಂಗ     || ೧೯ ||

ಲಿಂಗನ ಬಿಡು ಎಮಗೆ ಬಂದುದು ಹೀನಾಯ | ಪಾಂಡುರಂಗಯ್ಯ ಮುಮ್ಮೋಜಿ |
ಇಂದಿವನ ಕೈಸೆರೆಯ ಸೇರಲು ಧರೆ ಭೂಮಿ ರವಿ | ಚಂದ್ರರುಳ್ಳನಕ ಅಪಕೀರ್ತಿ      || ೨೦ ||

ಹಲವು ಚಿಂತೆಗಳನು ಗ್ರಹಿಸುವ ಸಮಯಕ್ಕೆ | ಕವಲು ನಾಮದ ಬಂಟ ಬರಲು |
ಕರ ಮುಗಿದು ಕೈಕಾಲು ನಡುಗುತ್ತ ರಾಜೇಂದ್ರ | ವಿವಿರಿಸಿ ಕಾರ್ಯದ ಸ್ಥಿತಿಯ        || ೨೧ ||

ಹೇಳುವರಳವಲ್ಲ ಜೀವ ಬೆಚ್ಚುಚುದರಸೆ | ಮಾರಿಗೆ ಹೊಡೆದ ಕುರಿಯಂತೆ |
ತಾರು ಮಾರಿನ ಮೇಲೆ ಹೆಣವನು ಒಗೆದಂತೆ | ಸಾಲು ಮಲಗಿತ್ತು ದಂಡೆಲ್ಲ          || ೨೨ ||

ಅಳಿದವರಲ್ಲದೆ ಉಳಿದವರು ಬಂದರೆಯು | ಕಳಲೆಯ ಕೊರೆದ ತೆರನಾಗಿ |
ಹರಿಯಲು ಹಳ್ಳದ ರಣರಕ್ತ ಭೂಮಿಯು | ಕೆಸರಾಗಿ ಹೋದುದು ಭೂಪ               || ೨೩ ||

ರಾಯನು ಮುಮ್ಮೋಜಿ ಪಾಂಡುರಂಗಯ್ಯನು | ಮಾಡಿದ ಒಳ್ಳೆ ಕಾರ್ಯವನು |
ಸೇರಿದರು ಕೈಸೆರೆಯ ಮಂತ್ರಿ ಲಿಂಗರಸನ | ಸೇರಿಸಿ ಹೆಡಗಟ್ಟಿನೊಳಗೆ              || ೨೪ ||

ಗುರಿಕಾರರನೆಲ್ಲ ಹೆಸರಿಗೆ ಬಿಡಲಿಲ್ಲ | ಸರದಾರರೆಲ್ಲ ಸಾಗಿದರು |
ಉರಿಕೊಂಡ ಜೇನಿನ ಹುಳಕಿಂತ ಕಡೆಯಾಗಿ | ಯಮನ ಕಂಡರು ತುರಗಮಂದಿ     || ೨೫ ||

ಲಿಖಿತ ಶರ ಗಚ್ಚ್ಯಾಗಿ ಶತಕದೊಳೈವರು | ಮುಖದೋರೆ ಕಾಣೆ ನಿಮ್ಮೆಡೆಗೆ |
ಭಸಿತ ಧರಿಸಿದ ನಯಕೆ ಕಾಣಿಸುವುದೆ ಅರಸೆ | ತಿಳಿಕೊಳ್ಳಿ ಇದರೊಳು ಅರ್ಥ        || ೨೬ ||

ಹರನ ವ್ರತದವ ನೀನು ಹರಿಯ ನಾಮವನಿಟ್ಟು | ಪರಿಯೇನು ಎನುತರಸ ಕೇಳೆ |
ಪರಬಲಾಂತಕ ಕೇಳು ಧರಿಸಿದ ರಣರಾಮ | ನಿಮಗೊಂದು ನಿಮ್ಮಗಗೆ ಎರಡು       || ೨೭ ||

ಚರನು ಆಡುವ ಮಾತ ಧುರಧೀರ ರುದ್ರನು ಕೇಳಿ | ಬರ ಸಿಡಿಲಂತೆ ಭೋರ್ಗರೆದು |
ಹುಲಿ ಬಡವನಾದರೆ ನರಿ ಬಂದು ನಂಟತ್ವ | ಕೊಡು ಹೆಣ್ಣನೆಂಬ ತೆರಬಂತು          || ೨೮ ||

ರಾಯ ರುದ್ರನು ಏಳೆ ಶರಭನಗ್ರದ ಒಳಗೆ | ಕಾಲನಂದದಿ ಕಿಡಿಸೂಸಿ |
ಕೂಡಲಿ ಚತುರಂಗ ಬಲವು ಭೇರಿಯ ಹೊಡೆಸೆ | ಜೀವಣ್ಣ ಮಂತ್ರಿ ಪೇಳಿದನು        || ೨೯ ||

ರಾಯ ಸೈರಿಸಬಹುದು ಕೇಳುವುದು ಜನಮಾತ | ಮೇಲೆ ನೀ ಹೋಗುವುದು ಬಲು ಕಷ್ಟ |
ನಾವೆಲ್ಲ ಇದ್ದೇನು ನೀವಿಂದು ಹೋಗುವುದು | ಮಾಡಿಸುವ ತಂತ್ರ ಯುಕ್ತಿಯಲಿ       || ೩೦ ||

ತಾನು ಮಾಡುವ ಕಾರ್ಯ ತಾನು ಮಾಡದೆ ಮಳೆಯು | ಆಗುವವೆ ಮಂತ್ರಿ ಧರೆಯೊಳಗೆ |
ಹೀನಾಯ ತಮಗೆಂದು ಎರಡು ಜಗಳವ ಮುರಿಯೆ | ಭೂಮಿ ಇರಲು ಅಪಕೀರ್ತಿ     || ೩೧ ||

ರಾಯನಾಡುವ ಮಾತ ಕೇಳಿ ಎಪ್ಪತ್ತು ರಾಜ | ಪಾಲಿಸೈ ಎನಗೆ ವೀಳ್ಯ |
ನಾಮವಿಟ್ಟನ ತಲೆಯ ಚೆಂಡಾಡದಿದ್ದರೆ ನಿಮ್ಮ | ಕುಮಾರನೆನ್ನಬಹುದೆ ರಣಹೇಡಿ    || ೩೨ ||

ಮುನ್ನ ಮೂವರ ಕಳುಹೆ ಮುವತ್ತು ಸಾವಿರ ಬಲವು | ಮಣ್ಣ ಕಂಡರು ಯಮನೂರ |
ಸಣ್ಣವನು ನೀ ಹೋಗಿ ಅಪ್ಪ ಹಾನಿಯಾಗಲು ಮೂಗು | ಒಮ್ಮೆಲೆ ಹೋದ ತೆರ ಬಂತು         || ೩೩ ||

ಸ್ವಾಮಿ ನಿಮ್ಮೊಳು ಉತ್ರ ಆಡಲಿಕೆ ಅಂಜುವೆನು | ಬೀಳು ಉತ್ರವನು ನೀನಾಡೆ |
ಪಾಳೆಗಾರನ ಮೇಲೆ ಮೂವರಿರಲು ಕ್ಷತ್ರಿ | ರಾಯ ಪೀಳಿಗೆಯ ಸಂತತಿಯೆ           || ೩೪ ||

ಹೇಳಿಕೊಂಬರೆ ರಾಯ ಕುನ್ನಿಯವನೆ ನಾನು | ಬಾಲನ ಸಾಹಸ ನೀವು |
ಕಾಣದಾದಿರೆ ತನ್ನ ವಾಹನಕೆ ನವಕ್ಷೋಣಿ | ತಾಳಲಾನುವುದೆ ರಾಜೇಂದ್ರ            || ೩೫ ||

ಹುಲಿಯ ಗರ್ಭದಿ ಹುಲ್ಲೆ ಮರಿ ಮುನ್ನ ಜನಿಸುವುದೆ | ಖಗರಾಜಗೆಣೆಯೆ ಕಾಗೆಗಳು |
ಹಗಲೊಡೆಯ ಬರುವಾಗ ತಿಮಿರ ನಿಲ್ಲುವುದುಂಟು | ಮಗನ ತೇಜಕೆ ರಾಮನಿದಿರೆ   || ೩೬ ||

ಪುತ್ರನ ಛಲಪದಕೆ ಮೆಚ್ಚಿ ರಾಜೇಂದ್ರನು | ಮತ್ತೆ ಭೇರಿಯನು ಹೊಡೆ ಎನಲು |
ಕಟ್ಟಿಗೆ ಚರರಾಗ ಕೇರಿ ಬೀದಿಯ ಮೇಲೆ | ಪುತ್ರ ಹೊರಡುವನು ಕೂಡೆನಲು           || ೩೭ ||

ಬಂದುದೆ ಬದಲೋಲೆ ಯಮನಿಂದ ಮಿಕ್ಕವರಿಗೆ | ತುಂಬಲಿಲ್ಲವೆ ಪಾಪಿಪುರವು |
ಮುಂಡೆಯಾದರು ನಿನ್ನೆ ಮೂವತ್ತು ಸಾವಿರವ | ಸಂಬಳವು ಸುಡಲಯ್ಯ ಎಮಗೆ     || ೩೮ ||

ಕಾಲಗೆಯಿಲು ರುದ್ರರಾಯಗೆ ಪೂರ್ವದ | ಸ್ನೇಹಗಳು ರಾಮ ಮೂವರಿಗೆ |
ಆಗದೆ ಇವ ಕಳೆವ ಸೇವಾಗದೆ ಕಡಿಯನು | ಹಾಗೆ ತೋರುವುದು ನೋಡಿದರೆ       || ೩೯ ||

ಮೊದಲ ಕಾಳಗದೊಳು ಗೆಲು ತೋರುದ ಬಳಿಕ | ಜಯಿಸುವುದೆ ನವಕ್ಷೋಣಿ ಬಳಿಕ |
ವಿಧಿವಾಸ ಒದಗಿತು ತರಳನೇರಲು ಬೊಲ್ಲ | ಕಳಕೊಂಬ ತೆರ ಕೂಡಿ ಬಂತು         || ೪೦ ||

ಕೆಲಬರು ತಲೆಬೇನೆ ಕಲೆಬರು ಚಳಿಜ್ವರ | ಕೆಲಬರು ಗಾಯ ಸಾಯದಲಿ |
ಅಳಿವನೆನ್ನುತ್ತ ಮಡದಿ ಜಲವನೊರಸುತಲಿಪ್ಪ | ಬಡಿದು ಹೊರಡಿಸಲು ಬಂಧನದಿ   || ೪೧ ||

ಬಂದರು ಪತಿಯಳಿದ ರಂಡೆಯ ತೆರದೊಳು | ಹಿಂಡ ಕೂಡಿಸಿ ತಮ್ಮನೆಂದ |
ಮುಂದಾಗಿ ನಡೆದಿರುವ ತಂದೆ ತಾಯಿಗಳೆಡೆಯ | ಇಂಬುಗೊಳಿಪ ಸ್ವರ್ಗ ಗತಿಯ   || ೪೨ ||

ಕಂಡವರು ಈ ಬಗೆಯ ನೊಂದುಕೊಳ್ಳುತ ಬರಲು | ಕಾಣದವರು ಶೌರ್ಯ ಕೇಳಿ |
ಹಾರುತ ಹರಣವ ಹಸನಾಗಿ ರಾಜೇಂದ್ರ | ರಾಮನ ಬಿಡಿಯೆಮ್ಮ ಕಡೆಗೆ              || ೪೩ ||

ಬಂದರು ಬಲವಂತ ಲಂಬೋಜಿಖಾನರು | ಎಂಬತ್ತು ಸಾವಿರ ತುರಗ |
ಕೊಂಬು ಸಾಳವ ಪಿಡಿದು ಕುಂಜರವ ಕಳುಹಿದರು | ಹನ್ನೆರಡು ಸಾವಿರ ಬಂಟರೆಡೆಗೆ || ೪೪ ||

ಶಕ್ತಿ ಸಾಹಸದೊಳು ಕಿತ್ತಿಡುವರು ಗಿರಿಗಳನು | ಕತ್ತಿ ಕೊಂಬುವರು ಒಂದೂರ |
ಮೆಟ್ಟಿ ತುಳಿವರು ಒಂದು ಸಾವಿರ ಬಲವ | ದಿಟ್ಟರೊರಗಿದರು ವಾಲಗಕೆ               || ೪೫ ||

ತೇಜಿಯ ತರಹೇಳಿ ರಾಯ ರುದ್ರನು ತಮ್ಮ | ಮಲ್ಲಯ್ಯ ಸಾಣಿಯೆಂಬವಗೆ |
ಜಲ್ಲನೆ ಹೊರಟರು ಸಾಣಿಗರು ಮುತ್ತು | ಬೊಲ್ಲನು ಇರುವ ಅರಮನೆಗೆ               || ೪೬ ||

ಜಂತ್ರದ ಕೆಲಸದ ಜಾಳಿಂದ್ರರ ಮನೆ | ಅಂತರಂತರದಿ ಕದಮುದ್ರೆ |
ಕಂತುಹರನೆ ಬಲ್ಲ ಕಾವಲ ಪರಿಠವಣೆ | ಮುಚ್ಚಲು ನೊಣ ಹೋಗದಂತೆ              || ೪೭ ||

ಲಾಳಮುಂಡಿಗೆ ಬೀಗ ಬಾಗಿಲ ತೆಗೆಯಲು | ತೇಜಿ ಹೂಂಕರಿಸಿ ಕಾಲ್ಕೆರೆ |
ಹಾಯೆಂದು ಗರ್ಜಿಸಿ ನೇವರಿಸಿ ಮೈಯನು | ಜೋಡ ತೊಡಿಸಿದರು ಬೆನ್ನ ತಟ್ಟಿ       || ೪೮ ||

ನವರತ್ನ ಖಚಿತದ ಬಿಗಿದಲ್ಲಿ ಅಪರಂಜಿ | ರವಿಕಿರಣ ಪ್ರಭೆ ಮುಚ್ಚುವಂತೆ |
ಅಳವಡಿಸಿ ಜೀನನು ಹೊಳೆವ ಕುಂದಣ ಜಲ್ಲಿ | ಬಿರಿಯ ಭಟರ ಟ[ವು]ಳಿಯ           || ೪೯ ||

ಮುತ್ತಿನ ಹಲ್ಲಣವು ರತ್ನದ ಎದೆ ಡಾಬು | ಇತ್ತರದ ಸಿಂಗಾಡಿ ಜೋಡು |
ಉತ್ತಮದ ತೇಜಿಯನು ಮತ್ತವರು ಶೃಂಗರಿಸಿ | ದೃಷ್ಟಿ ಆರತಿಯನು ಬೆಳಗಿ          || ೫೦ ||

ಕಣಬಾಗಲಿಕ್ಕೆ ತಕ್ಕ ಕಡಗ ಹೊಕ್ಕಳ ಗಂಟೆ | ಜಡೆಗೆ ಕುಂದಣದ ಕುಪ್ಪಿಗೆಯ |
ಕೊನೆಗೆ ಮುತ್ತಿನ ಕುಚ್ಚು ಕುಣಿವ ಪಾದಕೆ ಗೆಜ್ಜೆ | ಪಣೆಗೆ ಸೂಡಿದ ಬಾಸಿಂಗ            || ೫೧ ||

ಹಕ್ಕರಿಕೆ ಹಲ್ಲಣ ಇಕ್ಕಿದ ದೆಸೆ ಹಗ್ಗ | ಚಪ್ಪಳೆ ಗತಿಗಿನ್ನು ಕುಣಿಯೆ |
ಕುಪ್ಪಳಿಸಿ ಹಾರುವ ಕುದುರೆಯ ಕಾಲಿಗೆ | ಕಿತ್ತರು ಮೊಳೆಯ ಸಂಕೋಲೆ              || ೫೨ ||

ಕೀಲ ಕಡಿಯಲು ಆಕ್ಷಣವೇರಿ ಗಗನಕೆ ತುರಗ | ಮಾರಪಿತನ ವಾಹನ ವೇಗದಿ |
ಏರಗೊಡದೆ ಪಿಡಿದು ಎಡಬಲದಿ ತಂತಿಯ ಹಗ್ಗ | ಝೇರಿಸಿ ನಿಂದಲ್ಲಿ ತರುತಿಹರು    || ೫೩ ||

ಹೊರಟ ಗಳಿಗೆಲಿ ತುರಗ ತುಡುಕುತ್ತ ನಭವನು | ದಿಗಿಲಿಗೆ ನೆಲವು ಜಜ್ಝರಿಸಿ | ಸ
ಕೆಡೆದು ಮುಗ್ಗುತಲವರು ತಡವು ಮಾಡದೆ ತರಲು | ಪಿಡಿದ ಸಾಣಿಗರ ನೀರ್ಗುಡಿಸಿ   || ೫೪ ||

ಸಿಡಿಲಿನಾರ್ಭಟದೊಳು ಭೋರ್ಮೊರೆವ ತೇಜಿಯ ಕಂಡು | ಧರಣೀಂದ್ರನಡಿಗೆ ಒಪ್ಪಿಸಲು |
ಕೊಡಿಸಿದ ರಾಜೇಂದ್ರ ಉಡುಗೊರೆ ಉತ್ಸವ | ತುರಗವ ನೋಡಿ ಸಂತಸದಿ          || ೫೫ ||

ತುರಗದ ರಾಣಿಗೆ ಇದಿರುಂಟೆ ನವಕ್ಷೋಣಿ | ತುಳಿದು ಕೊಲ್ಲುವುದೆ ಧರಣೀಂದ್ರ |
ಪೂಜಿಸಲು ನೆಗೆದೊದೆಯೆ ಹೊಕ್ಕಳಗುಂಟೆ | ಹದಿನಾರು ತುಂಡು ಚೂರೇಳೆ         || ೫೬ ||

ಬಿರಿದಿನ ಗಂಟೆಯು ನೆಗೆದು ಬೀಳಲು ರಾಯ | ಕಿರಿ ಮುಖವಾದ ಛಲವಿಳಿದು |
ಅರುಹಿದನಲ್ಲೊಮ್ಮೆ ಜೀವಣ್ಣ ಮಂತ್ರಿಯು | ಶುಭ ಆಯಗಳ ಕಾಣಲರಿದು             || ೫೭ ||

ಕಾಣಕೂಡದು ರಾಯ ಪಾದಕ್ಕೆ ಹೇಗಹುದು | ತೋರುವುದಿಲ್ಲ ಜಯಪ್ರದವು |
ಹೋದ ಕಿವಿಗಳೆ ಸಾಕು ಬದಲಾಗಿ ಮೂಗನು | ಕೊಡುವು ತಪ್ಪದು ಕುದುರೆ ಶಕುನ   || ೫೮ ||

ಆಡಬಾರದ ಮಾತ ಹೇಗೆ ಬರುವುದು | ರಾವಣನ ತಮ್ಮ ಪೇಳಿದರೆ |
ಜೋಡುಗಾರನು ಎಂದು ಬಡದಾಸನೊದ್ದರೆ | ಎಂದ ಗಾದೆಯಾಯ್ತು ಮಂತ್ರಿ        || ೫೯ ||

ಮುರಿದೆರಡು ಜಗಳವು ಗೆಲವುದೋರದ ಮೇಲೆ | ಮಗನು ಹೋಗುವುದು ಕರಕಷ್ಟ |
ಕಳುಹು ಇಂದವಗೆ ಸರ್ವಮನ್ನಣೆ ಮಾಡಿ | ಹೊಡೆವ ನಮಗೊಂದು ದಿನ ಬರಲು     || ೬೦ ||

ಜೀವಣ ಮಂತ್ರಿಯ ಮಾತ ಕೇಳಿ ಎಪ್ಪತ್ತುರಾಯ | ಭೇರುಂಡನಂತೆ ಗದ್ದಲಿಸಿ | ಸ
ಮೂಳ ರಾಮನ ಮಾತ ಆಡಬೇಡವೊ ಮಂತ್ರಿ | ತಾಳಿಗೆ ಹಿರಿವೆನೆಂದೆನುತ         || ೬೧ ||

ಅಪ್ಪಾಜಿ ಇರಲಿಕ್ಕೆ ಪ್ರಾಣ ಮಿಕ್ಕದು ಮಂತ್ರಿ | ರಾಯನಿಲ್ಲದ ಬಳಿಯ ನೀನಾಡೆ |
ನಾಲಗೆ ಕೊರೆಸುವೆ ನಯನ ಕೋಪಗಳಾಗೆ | ರಾಯನು ಮಗನ ಸಂತಯಿಸೆ        || ೬೨ ||

ಮಂತ್ರಿಯಾಡುವ ಮಾತು ಅಸತ್ಯವಲ್ಲವೊ ಪುತ್ರ | ಇಂತು ಮಾಡುವರೆ ಕೇಣವನು |
ಸಂತಯಿಸು ಕೋಪವ ಸರ್ವರಾಯರು ಹಿಂದೆ | ಪಂಥವನಾಡಿ ಕೆಟ್ಟವರು             || ೬೩ ||

ಸಿಟ್ಟೇಕೆ ಮಂತ್ರಿಯು ತಪ್ಪು ನುಡಿಯಲು ಇಲ್ಲ | ಮತ್ತೊಮ್ಮೆ ಶಾಸ್ತ್ರಿಕರ ಕರೆಸಿ |
ದೃಷ್ಟವ ತಿಳಿವನು ಜಯತು ಶುಭಗಳ ಒಮ್ಮೆ | ಕಷ್ಟ ಕಂಡರೆ ತಿಥಿ ಪೇಳುವರು        || ೬೪ ||

ಕರೆಸಿದ ಬಲವಂತ ಹಿರಿಯ ಶಾಸ್ತ್ರಿಕರನು | ಪರಿಗಣಿಸಿ ನೋಡಿ ಶುಭಗಳನು |
ಪರಿಣಾಮ ಕಂಡರೆ ಹೊರಡುವಾ ಜಗಳಕ್ಕೆ | ಕೊರತೆ ಕಂಡರೆ ರೊಕ್ಕ ಕೊಡುವಾ     || ೬೫ ||

ವಾರ ತಿಥಿಗಳ ಮೇಲೆ ಶೋಧಿಸಿ ಪಂಚಾಂಗ | ಜಾರಿದ ಗಂಟೆಯ ಬಳಿಗೆ |
ರಾಜೇಂದ್ರ ಲಾಲಿಸು ತೀರಿತ್ತು ತಿಥಿ ಪುಣ್ಯ | ಕಾಲ ತುಂಬಲು ರಾಮನಿಗೆ              || ೬೬ ||

ಕುರುಡ ಬಯಸುವುದೇನು ನಯನ ದೃಷ್ಟಿಗಳನ್ನು | ಮನವಿಹುದು ರಾಮನ ಮೇಲೆ |
ಮನದ ಚಂಚಲ ಕಳೆದು ಮುಂದೆ ಭೇರಿಯ ಹೊಡೆಸಿ | ತುರಗವ ಮತ್ತೆ ಪೂಜಿಸಲು  || ೬೭ ||

ರಾಯ ರುದ್ರನ ಮಡದಿ ಸೋಮಲಾಂಬಿಕೆ ಬಂದು ಬೆಳಗಿದಳು ಮುತ್ತಿನಾರತಿಯ |
ಬಾಲಗೆ ಯಶವಾಗಿ ನಿಮ್ಮ ಕಾರ್ಯ ಗೆಲಿಸುವುದೆಂದು | ಪಾದಕೆರಗಿದಳು ತುರಗದ  || ೬೮ ||

ರಾಯನು ಎಪ್ಪತ್ತುರಾಜ ಶೃಂಗರವಾಗಿ | ತಾಯಿ ತಂದೆಗೆ ಒಮ್ಮೆ ಎರಗಿ |
ಏರಿದ ತುರಗವ ಎಡಬಲ ಚಾಮರ ಪಿಡಿಯೆ | ಭೇರಿ ಕಹಳೆಗಳು ಒದರುತಲಿ         || ೬೯ ||

ಬಾಗಿಲ ನಾಲ್ಕನು ಹಾರೊಡಿಸಿ ಹೊರಡಲು | ಕಾಲಾಳು ತುರಗ ಕರಿ ಘಟೆಯ |
ವಾರಿಧಿ ಕಡಲುಕ್ಕಿ ಮೇರೆದಪ್ಪಿನ ತೆರದಿ | ಏರಲು ಲಕ್ಷವರೆ ಪೌಜು                    || ೭೦ ||

ಕರಿಯಿಂದ ತುರಗದ ಭರದಿಂದ ಕಾಲಾಳ | ಮೆರೆದಿಂದ ಕೂರ್ಮನ ಎದೆಯು |
ಬಿರಿಯಲು ಕುಂಜರ ತಲೆದೂಗೆ ಧರಣಿಯು | ಒದರಲು ಶೇಷನು ಕುಣಿದು            || ೭೧ ||

ಬಂಟರು ಬಲವಂತ ಒಂಟಿ ಕತ್ತಿಯ ಹೊಡೆವ | ಪಂಥವಾಡುತ ತೊಡೆ ಬಡಿದು |
ಮುಂಚಾಗಿ ಕೊಡು ನಮಗೆ ಮೂಳ ರಾಯನ ತಲೆಯ | ಅಂತರ ಮಾರ್ಗದಿ ತರುವೆವು        || ೭೨ ||

ರಾಯ ರುದ್ರನ ಮಂದಿ ಹಾರುತ ಹರಿಣನ | ಮೀರಿ ಪೌರುಷವ ಆಡುತಲಿ |
ತೋರಯ್ಯ ರಾಮನ ತಲೆಯ ಜೆಂಡೆದ ತುದಿಗೆ | ಏರಿಸಿ ಲಿಂಗನ ತರುವೆವು          || ೭೩ ||

ಆದಿತ್ತು ಅರೆಗಳಿಗೆ ಜೀವ ಸೈರಿಸಿ ನಿಮ್ಮ | ಬಾಯಲಾಡಿದ ಮಾತು ಬಿಡದು |
ನಾವು ಈ ತೆರದೊಳು ಆಡಿ ಜಗಳಕೆ ಹೋಗಿ | ಬೇಲಿ ಹಳ್ಳವ ಹಿಡಿದು ಬಂದು         || ೭೪ ||

ಓರುಗಲ್ಲರಸಿನ ಕುಮಾರ ಎಪ್ಪತ್ತುರಾಜ | ಹೋಗಿಳಿಯೆ ಮಾರ್ನವಮಿ ಬಯಲ
ಮೇಗಳಾಗವು ಜೇರಪುರಕ್ಕೆ ಜೆಂಡೆವ ಹೊಡೆದು | ಪಾಳ್ಯಾವಿಳಿಯಲು ಹರದಾರಿ     || ೭೫ ||

ಕಂಡರು ಕಲಿಯುಗದ ಮಾರ್ತಂಡ ಭೀಮನ ಮಂದಿ | ಈ ದಂಡ ಕಾಣುತ ಎದೆ ಒಡೆಯೆ |
ಕೊಂದುದು ಕಡೆಯಿಲ್ಲ ಕಾಗೆ ಬಳಗದ ತೆರದಿ | ಬಂದೀತು ಈ ನಗರ ಸುಡಲಿ         || ೭೬ ||

ರಾಯ ರಾಮನ ಬಳಿಗೆ ಹೋಗಿ ಸುದ್ದಿಯ ಕೊಡಲು | ಭೂಮಿ ಹಿಡಿಯದು ಬಹುದಂಡ |
ಕಾಣಗೊಡದು ಸ್ವಾಮಿ ಪಾದಕೆ ತಿಳಿದಂತೆ | ನೋಡಬಹುದು ಹೊರಟು ನೀವು       || ೭೭ ||

ಭಯಬೇಡಿ ಬಂದುದನುಣಲೊಲ್ಲೆ ಎಂದರೆ ಹರನು | ಹೆಚ್ಚುವನೆ ಸ್ವರ್ಗದಲಿ |
ಮೃಡಮೂರ್ತಿ ತನ್ನಯ ಪಟ್ಟದ ಕಂಟಕವ | ಕಡಿದು ನೂಕುವನಂಜಬೇಡಿ             || ೭೮ ||

ಬಡವನೆ ಬಲವಂತ ಗಣಪತಿಯ ಮಗ ರುದ್ರ | ಗುರು ತೊಡೆದ ಕೈಲಾಸ ಪುರಕೆ |
ಬಲವೇನು ಕಡಿದವಗೆ ಲಯ ಮಾಳ್ಪ ಭೇರಿಯನು | ಹೊಡೆವೆನು ನೋಡಿ ನಯನದಲಿ         || ೭೯ ||

ರಾಯ ಕಂಪಿಲ ಸುತನು ಹೀಗೆನುತ ಧೈರ್ಯವ ಪೇಳಿ | ತಾನು ಶೃಂಗರಿಸಿ ಆಭರಣ |
ಏರಲು ತುರಗವ ಲಿಂಗ ಕಾಟಣ್ಣನು | ಏರಿತು ಪೌಜು ಒಡೆದು                         || ೮೦ ||

ರಾಯ ರುದ್ರನ ಸುಕುಮಾರ ಎಪ್ಪತಿರಾಯ | ತಾನು ಕರೆಸಿದನು ಮನ್ನೆಯರ |
ಕಾಲಾಳು ಕುದುರೆ ಪರಿವಾರ ವೀಳ್ಯವನಿತ್ತು | ಮಾಡಿ ಇದಿರಾಗಿ ಕಾರ್ಯವನು        || ೮೧ ||

ಕಡಿದವಗೆ ಕೊಟ್ಟೇನು ಇಡಿ ಗ್ರಾಮನೊಂದೊಂದು | ಪೊಡವಿ ಇರಲು ಶಿಲೆಯ ಹೊಡೆಸಿ |
ಹೊಡೆದಾಡಿ ಸತ್ತವನ ಮಡದಿ ಮಕ್ಕಳಿಗನ್ನ | ನಡೆಸಿ ಬರುವೆನು ಸಂಬಳವ           || ೮೨ ||

ಹುಡುಗ ರಾಮನ ಕಡಿದು ಮೊರೆ ಬಿದ್ದವನ ತಂದವಗೆ | ನಡೆಸುವೆ ಮಂತ್ರಿಪಟ್ಟವನು |
ಹಡೆದಾತ ರಾಯನಿಗೆ ಸಮನೆಂದು ಕಾಣುವೆನು | ಹಿಡಿಸಿದ ತರಳ ಕಹಳೆಯನು      || ೮೩ ||

ಹತ್ತು ಪೌಜನೆ ಮಾಡಿ ಲಕ್ಷವರೆಯ ದಂಡ | ಕೊಟ್ಟನು ಬಲವಂತರೊಡನೆ |
ಹತ್ತಲು ರಣರಂಗ ಹಗಲು ಕಾವಳ ಕವಿಯೆ | ಬತ್ತಿ ಬಾಣದ ಹೊಗೆ ಎದ್ದು              || ೮೪ ||

ನಡೆಯಲು ಮುಂಗಳ ಕಿಡಿಕಿಡಿ ಮಸಗುತ್ತ | ಕಡಿಕಡಿಯೆಂಬ ಆರ್ಭಟದಿ |
ಜಡೆಮಳೆಯಂದದಿ ಸುರಿವ ಅಂಬಿನ ಸರಳ | ಹಿಡಿಯಲು ಭೂಮಿ ಧೂಳೆದ್ದು          || ೮೫ ||

ರಣರಂಗಾರ್ಭಟಕೆ ಧರಣಿಯು ಜಜ್ಝರಿಸಿ | ಮುಳುಗಿದನು ಸೂರ್ಯನೆಂಬಂತೆ |
ಪ್ರಭೆ ಮುಚ್ಚಿ ಅಡಗಲು ಪರ್ವತ ಗಿರಿಗಳು | ಕವಿಯಲು ಮಂಜು ಕಾವಳವು            || ೮೬ ||

ರಾಯನು ರಣವಿಜಯ ಕಾಲಭೈರವ ಕಾಟ | ವೀರ ಸಂಗಮನು ಲಿಂಗಣ್ಣ |
ಜೋರಾಗಿ ನಾಲ್ವರು ಏರಿ ಕುಂಜರಗಳ | ನೋಡುವರು ರಣದ ಉತ್ಸವವ            || ೮೭ ||

ಲಿಂಗನು ಪೇಳಿದನು ರಾಜೇಂದ್ರ ರಾಮನ ಕೂಡೆ | ಬಂದಿಹನು ಎಪ್ಪತ್ತುರಾಯ |
ಮುಂದರಿತು ಕಾರ್ಯಗಳ ಮಾಡಯ್ಯ ರಣವಿಜಯ | ಹೆಣತಿಂಬ ತೇಜಿ ಬಂದಿದೆಕೋ || ೮೮ ||

ಹರಿಯ ವಾಹನದಂತೆ ಮೇಲ್ಮಸಗಿ ಬರುವುದು | ನರರ ತಿಂಬುವುದು ಪುಲಿಯಂತೆ |
ಗಿರಿಜೆಯ ರಮಣನ ವರದಿಂದ ಧರೆಗಿಳಿದು | ನಮಗೆ ಸೇರುವುದ ನಾ ಕಾಣೆ          || ೮೯ ||

ಧರೆಯೊಳು ಉರಿಹಸ್ತ ಪಡೆದವನು ಲಯವಾದ | ಇದು ಏನು ಉಗ್ರ ಮಾಡಿದೆಯೆ |
ಹನುಮನು ಮೊದಲಾಗಿ ರವಿಯ ಕಿರಣಕೆ ಎರಗಿ | ಅಳಿಯನೆ ಕಡಲೊಳು ಲಿಂಗ      || ೯೦ ||

ಸುತನಳಿಯೆ ಮಾರುತನು ಸುಳುಹದೋರದೆ ಅಡಗೆ | ಕ್ಷಿತಿಯು ಬ್ರಹ್ಮಾಂಡ ವಡಬಾಗ್ನಿ |
ಮತಿಗೆಡಲು ಸುರರೆಲ್ಲ ಮೂರು ಮೂರ್ತಿಗಳು | ಮಥನಿಸಿ ಕಡಲನು ಕಡೆಯೆ         || ೯೧ ||

ಪುಸಿಯಲ್ಲ ಈ ಮಾತು ಇದಕೆ ಸಾಕ್ಷಿಯು ಲಿಂಗ | ಸಕಲ ಜೀವನ ತಿಂದಂಥ |
ಮುಕ್ತಿಕಾಲ ಬಂತೆಂದು ತಂದು ಕೊಡಲು ಏಡಿ | ಶಿರ ಹೋಗೆ ನಯನವಿತ್ತೂದೆ        || ೯೨ ||

ತಾ ಮೊದಲು ಲೋಕದೊಳಾರಾರು ಪಡೆದವರು | ಏನಾದರೆಂಬುದನರಿಯಾ |
ಶ್ರೀ ಗುರು ತೊಲಗಲು ಬಾಣ ಕೆಟ್ಟುದನರಿಯಾ | ಸಾವಿರ ಹಸ್ತ ಪಡೆದವನು           || ೯೩ ||

ತರುಗದ ಭಯಭೀತಿ ಎನಗೆ ಪೇಳಲಿ ಬೇಡ | ಮೊದಲವಗೆ ಹೇಗೆ ಬಂತಣ್ಣ |
ಜನಿಸಿತೆ ಇವನೊಳಗೆ ದ್ವೀಪಾಂತ್ರದಿಂದಲಿ ಬಂತೆ | ಹರನೊಲುಮೆಯಿಂದ ಸೇರಿದುದೆ        || ೯೪ ||

ಬಂದ ವೃತ್ತಾಂತವ ಕೇಳು ಚೆನ್ನಿಗರಾಮ | ಹಿಂದೊಬ್ಬ ಚೇರಮರಾಯ |
ಶಂಭುಲೋಕದಿ ದಾಳಿಮಾಡುವ ಕಾಲದಲಿ | ನಾಕ ತುಂಬಲು ಅಶ್ವಮೇಧದಲಿ       || ೯೫ ||

ರುದ್ರಲೋಕದ ದಾಳಿ ಎದ್ದು ಪೋಗುವ ಸಮಯ | ನಡುಮಾರ್ಗದಿ ಮರಿ ಹಾಕಿದರೆ |
ಬಿದ್ದರೆ ಅವ ವಾಯುಮಾರ್ಗದಿ ತಂದು | ರಾಯ ಮುಂಗುಲಿ ಲಾಯಕ್ಕೆ ಇಡಲು       || ೯೬ ||

ತೇಜಿ ಗರ್ಭದಿ ಚೊಕ್ಕ ಕಲ್ಯಾಣಿ ಇಳಿಯಲು ತಂದು | ತೋರಲು ರಾಯ ಮುಂಗುಲಿಗೆ |
ತೂಗುತ ಶಿರವನು ಈ ತುರಗದ ಗುಣದಿಂದ | ಕಾರ್ಯ ತೋರಲು ಸ್ಥಿತಿಗತಿಗೆ       || ೯೭ ||

ಕರೆಸಿದ ಬಲವಂತ ಹಿರಿಯ ಶಾಸ್ತ್ರಿಕರನು | ತುರಗದ ಶುಭವ ನೋಡೆನಲು |
ಜನಿಸಿತು ರಾಯ ಹಾಳಿರಲು ಲಾಯಕೆ ಕೋಟಿ | ಎನಲು ಡಿಳ್ಳಿಯ ಪಾಶ್ಚಯಗೆ        || ೯೮ ||

ಇರಸಲ್ಲ ಎನಲವರು ಕಳುಹಲು ಸುರಿತಳಗೆ | ನೆರೆ ಜಾಣರೆಲ್ಲ ನೋಡಿದರು |
ನೃಪವರನೆ ಲಾಲಿಸು ಕರುಗಾಲ ತುರಗವು | ಹೊರಗಿಟ್ಟು ಕಾರ್ಯ ಮಾಡೆನಲು      || ೯೯ ||

ಭೂಪ ರಾಮನೆ ಕೇಳು ಆ ಕಾಲಕ್ಕೆ ರುದ್ರನು | ವ್ಯವಹಾರ ಮಾಡಿದ ತುರಗವನು |
ಲೋಕ ರಾಜ್ಯದಿ ಕೊಂಡ ಡಿಳ್ಳಿಗೆ ಬರಲಾಗ | ಈ ಕುದುರೆ ದೊರೆ ಮೆಚ್ಚಿದನು          || ೧೦೦ ||

ಹೇಳಿದರ್ಥ [ವನಿತ್ತು] ಚದುರರು ತರಲಾಗ | ರಾಯನು ತಾ ಬೆರಗಾದ |
ಯಾವಲ್ಲಿ ಜನಿಸಿತ್ತು ನವ ಚೊಕ್ಕ ಕಲ್ಯಾಣಿ | ಹೀನಗಾಣದೆ ಕೊಡರು ಇದನು          || ೧೦೧ ||

ಕರೆಸಿದ ತಮ್ಮೊಳು ಇರುವ ಶೋಧಕರನು | ಕುದುರೆ ಲಕ್ಷಣವ ನೋಡೆನಲು |
ಸುಳಿ ಸುದ್ದಿಗಳ ನೋಡಿ ಹೀನ ತುರಗವು ಕಡೆಗೆ | ಪರರಿಗೊಲಿವುದು ಸಿದ್ಧಾಂತ       || ೧೦೨ ||

ಪಾದಕ್ಕೆ ತಿಳಿದಂತೆ ನಾವು ಕಂಡುದ ಪೇಳ್ವೆ | ಮಾಡುವುದೆ ಲೇಸು ಎಂದ ಮಂತ್ರಿಯು |
ತಾ ಕಂಡ ಅನಿತದಿ ರಾಯನ ಸುತ ಬಂ[ದು] | ತೇಜಿಯ ನೋಡಿ ಒಪ್ಪಿದನು         || ೧೦೩ ||

ಎನ್ನ ನಾಮಕೆ ಇರಲಿ ನಿಮಗೇಕೆ ಸಂಕಲ್ಪ | ಎನುತಾಗ ಒಪ್ಪಿ ಏರಿದನು |
ತುಡುಕುತ ಮೇಘದ ಖ[ಗ] ಮನದಿ ಚಾರಿಸಲು | ಅದರ ಮೂಲಗಳು ಹೀಗೆನಲು    || ೧೦೪ ||

ಕುದುರೆಯ ಸ್ಥಿತಿಗತಿಯ ಚದುರ ರಾಮನು ಕೇಳಿ | ಈ ಕುದುರೆ ಘನವೇನು ಬಿಡುಯೆನಲು |
ಮದನಾರಿ ಕೃಪೆಯೊಳಗೆ ಪಡೆದಿರಲು ಪರರಿಗೆ | ಒಲಿವುದೆಂಬುವುದು ಅದು ಸಹಜ   || ೧೦೫ ||

ಏರಿದ ಅಹುದೆಯ ಇಳಿಯಲು ರಣರಾಮ | ಭಾವ ಸಂಗಯ್ಯ ಕಾಟಣ್ಣ ಏರಿದರು |
ಮೂಜಗಳ ಬಾಣಿಯ ಮುದ್ದನು ಲಿಂಗ | ಅಡಿಗೆ ವೇಗ ನಡೆವಂತೆ                     || ೧೦೬ ||

ಕೂಡಲು ರಣರಂಗ ಭೂಮಿಯು ತಲ್ಲಣಿಸಿ | ಮೇಘದಿ ಸುರಗಣವು ನೆರೆಯೆ |
ದೇವೇಂದ್ರ ಮೊದಲಾದ ಸುರರು ಅಷ್ಟದಿಕ್ಪಾಲರು | ನಾಗಕನ್ನೆಯರು ನಾಟ್ಯದಲಿ     || ೧೦೭ ||

ಸೂರ್ಯನು ರಥಗಳ ಕೀಲ ಸಡಿಲಿಸಿ ಮತ್ತೆ | ನೋಡಬೇಕೆಂದು ರಣ ವಾರ್ತೆ |
ಪೂರ್ವ ಭಾಗದಲಡರಿ ಮಧ್ಯಾಹ್ನ ಕಾಲದಿ ನಿಂದು | ಸಾಗುವ ರಣವ ನೋಡುತಲಿ    || ೧೦೮ ||

ನೋಡುವರೆ ನಮಗಿನ್ನು ಅನುಭವವಿಲ್ಲದ | ತರ ತೋರದಾಗಲು ಭಾನು ಬರಲು |
ಸೋಮನು ರುದ್ರನ ಕೇಡ ನೋಡುವೆನೆಂದು | ಸಾರಿದ ನಾಗಲೋಕವನು           || ೧೦೯ ||

ಆನೆ ಇರುವೆಗೆ ಜಗಳ ಹೂಡಿದ ಪರಿಯೆಂದು | ನೋಡಿ ನಗುತಿಹರು ಸುರಗಣರು |
ಭೂಮಿಯ ಹೊರಲರಿದು ಬಲದೊಡನೆ ಈ ರಾಮ | ಹದಿನಾರು ಸಾವಿರದಿ ಹೆಣಗುವನು       || ೧೧೦ ||

ಲಕ್ಷಾಂತ್ರ ಬಲದೊಡನೆ ಕತ್ತಿ ಗೆಲ್ವುದು ಕಷ್ಟ | ಒಟ್ಟಿಸು ತುಪಾಕಿಯ ರಾಮನೆಂದು |
ನಕ್ಕರೆ ಸುರಗಣವು ನಾರದನವರಿಗೆ | ಉತ್ರ ಪೇಳುವನು ಧರ್ಮವನು               || ೧೧೧ ||

ಚಕ್ರಧರನ ಕೇಳಿ ಸಾಕ್ಷಿಯಿಲ್ಲವೆ ಇದಕೆ | ಪಾರ್ಥ ಭೀಮನ ಕೈಯೊಳಗೆ |
ಮುಕುಂದ ಕೊಲ್ಲಿಸನೆ ಮೂರು ಕ್ಷೋಣಿಯ ಬಲವ | ಯುಕ್ತಿಯಲಿ ಇರ್ವರ ಒಡನೆ      || ೧೧೨ ||

ರಾಮನ ಬಲ ಜೊತೆಗೆ ಹೊಣೆಗಾರನಾಗಿ ಹರ | ಕಾದಿರುವ ಬಗೆಯ ಕಾಣದಿಹನೆ |
ಹಾನಿಯಾಗಲು ತಮಗೆ ಹೀನಾಯ ಬಿಡದೆಂದು | ಕಡಿದಾಡಿ ಮಡಿವ ಸಂಭ್ರಮದಿ     || ೧೧೪ ||

ಹೂಡಲು ಜಗಳವು ಭೇರಿ ಕಹಳೆಯ ನಾದ | ಭೂಮಿ ಮಂಡಲವ ತುಡುಕುತಲಿ |
ತೀರಲು ಲಿಖಿಸಾರ ರಾಮ ಬಂದನು ಎಂದು | ಏರಲು ರುದ್ರನ ಮಂದಿ               || ೧೧೫ ||

ಒಡೆಯನಿಲ್ಲದ ಜಗಳ ಗೆಲುವುದೆಂದೆನುತ ಬಹಳ | ಹದಮೀರಿ ಬರಬೇಡಿರೆಂಬೆ |
ತೊಡೆವನು ಲಿಪಿಯನು ನಿಮ್ಮರಸು ರಾಮುಗನನ್ನು | ನಮ್ಮೊಡೆಯನ ಸುತನು ಬಂದಿಹನು   || ೧೧೬ ||

ನರಿ ಮನುಜನ ಮತ್ತು ಮದಕರಿ ಏಕೋ ಮಾಡಿದರು | ನುಡಿದು ನಿಮ್ಮರಸಿನ ಬಲುಹ |
ಕರಿಯನು ಗುಟ್ಟು ಕೊಯ್ವ ಭೇರುಂಡಗೆ ವೈರಾದೆ | ಮರಿಸಿಂಹ ರಾಮ ಬಂದಿಹನೆ    || ೧೧೭ ||

ಕತ್ತೆಯ ಬಾಲವನು ಹತ್ತಿದ ಮೂಳನ | ಹತ್ತು ತಲೆಯವನಾಗಿ ಪೇಳುವಿರಿ |
ಮಸ್ತಕವಂತ ಮುಕುಂದನವತಾರದ | ಲಕ್ಕು ರಾಮುಗನು ಬಂದಿಹನು               || ೧೧೮ ||

ನೋಡಿವರು ಆಡುವ ಘನ ಮೋಡಿ ಬಿಂಕಗಳ | ಭೇರುಂಡನೆಂದು ಬಿಂಕಗಳ |
ರೂಢಿಸಿ ಕೋಪಾಗ್ನಿ ರುದ್ರನ ಬಲ ಮುನಿದು | ಏರಲು ಮುಂಗಯ್ಯ ಕಡಿದು           || ೧೧೯ ||

ತಡೆದಿರ್ದ ಮಳೆ ಬಂದು ಸುರಿವಂತೆ ಬಾಣಗಳು | ಸರಳಂಬು ಸವಲಕ್ಷದೊಳಗೆ |
ಹೊಡೆಯ[ಲು] ಇತ್ತರದಿ ಹೊಳಕೆ ರುದ್ರನ ಮಂದಿ | ಕಡಿದು ನುಗ್ಗಲು ಒಡ್ಡುಗಳ       || ೧೨೦ ||

ಬಾದುರಖಾನನು ದೇವಿಸೆಟ್ಟಿಯ ಲಿಂಗ | ವೀರಸಂಗಮನು ವಿರುಪಣ್ಣ |
ನೀರನು ನಿಲಿಸಿದ ಏರಿಯಂದದಿ ತಡೆದು | ಮೀರಿ ಬಂದವರ ನೂಕುವರು            || ೧೨೧ ||

ಹುಚ್ಚ ಕೋಣನ ತೆರದಿ ಹೊಕ್ಕು ಬಾಣಿಯ ಮುದ್ದ | ಮುಂದಿಕ್ಕಿ ಬಡಿವ ನೂರಾರ |
ಸೆಟ್ಟಿಯ ಮಗ ಲಿಂಗ ಸವರುತ ಒಳ [ಬಂದು] | ಒತ್ತಿ ಬಂದವರ ಇಕ್ಕುತಲಿ           || ೧೨೨ ||

ವೀರಸಂಗಮರಾಯ ಬಾದೂರ ನಾಲ್ವತ್ತು | ಸಾವಿರ ಪೌಜ ಕಡಿಕೊಂಡು |
ಹೋರುವ ಬಗೆಯನು ರಾಯ ರುದ್ರನು ಬಳಿಯ | ಪಾಳೆಗಾರರು ಕಂಡು ಏರೆ         || ೧೨೩ ||

ಸಿಂಗಳ ದ್ವೀಪದ ರಂಗನಾಯಕ ಮುನಿದು | ಬಂಗಾರದ ಪೇಟೆ ತುಂಬರಸು |
ಮುಂಗಾರ ಸಿಡಿಲಂತೆ ಬಂದು ಮುತ್ತಲು ಮೋಡ | ಅಂಗಾರತನಲೆದ್ದಂತೆ            || ೧೨೪ ||

ಮುತ್ತಿದ ಕುರಿಗಳಿಗೆ ರೊಪ್ಪವ ಬಡಿದಂತೆ | ಮಕ್ಷಕ ಇರುವೆ ಹೊಗದಂತೆ |
ಸಿಕ್ಕಲು ನಡುಮಧ್ಯ ಲಿಂಗನು ಸಂಗಯ್ಯ | ಮತ್ತೆ ಬಾದುರ ಬಾಣಿ ಮುದ್ದ              || ೧೨೫ ||

ಇರುಬಿನ ಗಜದಂತೆ ಹೆಣಗುವರು ಎಡಬಲನ | ಜೀವದಾಸೆಗಳನು ತೊರೆದು |
ಕವಿಯಲು ಕಾಗೆಯ ಬಳಗದಂದದಿ ರಂಗ | ತುಳಿಸುವ ತಿಮ್ಮ ನಾಯಕನು           || ೧೨೬ ||

ಪರಿದೋಡಿ ಬಂದೊರ್ವ ಚರನು ಸುದ್ದಿಯ ಕೊಡಲು | ಧುರಧೀರ ರಾಮ ಕಾಟಯಗೆ |
ಮುಳುಗಿದರು ಭಾವಾಜಿ ಲಿಂಗ ಬಾದುರ ಮುದ್ದ | ಘಳಿ ಏಳೆ ಮನ ಕಾಣುವರು       || ೧೨೭ ||

ಎಲ್ಲಿಹನು ಕಲಿ ಕಾಟ ಯಮನಾರ್ಭಟದೊಳು ಮ | ತ್ತೆಲ್ಲಿ ತುರಗವನು ನೂಕಿದನು |
ಕಲ್ಲಿಗೆ ಎರಗುವ ಸಿಡಿಲಿನಂದದಿ ರಾಮ ಮ | ತ್ತೆಲ್ಲಿ ಹೊಕ್ಕನು ರೋಷದಲಿ             || ೧೨೮ ||

ಕಡಿಕಡಿ ಎನುತಲಿ ಕೇಕ್ಹೊಡೆದು ಇರ್ವರು ಪೊಗಲು | ರಸದಾಳಿಯೊಳಗೆ ಮದಕರಿಯು |
ಹಸಿದಿರ್ದು ಕಾಂಬುವ ಗ್ರಾಸವನು ಕೊಂಬಂಥ | ಮೂಷಕನ ಬಡಿದಂತೆ ಕೊಲ್ಲೆ       || ೧೨೯ ||

ಲವಕುಶರ ತೆರದೊಳು ಹದಿನಾರು ಬೀದಿಯ ಕಡಿಯೆ | ಇದಿರಾದ ತಿಮ್ಮ ನಾಯಕನ |
ಹೊಡೆದಾಡಿ ಸಮರಂಗ ಜಗಳದಿ ಕಾಟಣ್ಣ | ಈರ್ವರು ಮೂರಾರು ಗಳಿಗೆ             || ೧೩೦ ||

[1] ರುದ್ರನ ಯರಡನೆ ಸಂಧಿ, ಶ್ರೀ ವಿರುಪಾಕ್ಷಲಿಂಗಾಯ ನಮಃ | ಪದನು(ಮೂ).