ಸತ್ತನೆನ್ನಿಸಿಕೊಂಡು ಹುಟ್ಟಿ ಜಗಳಕೆ ಬರಲು | ಬಿಟ್ಟರೆ ತುರಗ ಬಬ್ಬುರನೆ |
ಕೊಟ್ಟನು ಸರಳನು ಪೆಟಿಗೆ ಪಂಚೈ ತಾ ಸೇ | ದಿಟ್ಟನು ಮೂರು ಸಾವಿರವ || ೧೨೧ ||
ಏನೆಲವೊ ಎಲೆ ಮರುಳೆ ಕೇಳರಿಯ ಬಬ್ಬುರನ | ಸಾಹಸದ ಪರಮಶಕ್ತಿಯನು |
ಹೇಳುವದ ನಾ ಬಲ್ಲೆ ತುಂಬುರ ಸಹ | ರಾಮನ ಕರದಿ ಹತವೆನುತ || ೧೨೨ ||
ಮರೆಯದೆ ಗರ್ವ ತೋರುವ ಮತ್ತೊಂದು | ಸಾವಿರ ಸರಳ ಕೀಳಿಸಲು
ಪಾರ್ಯಾಗೆ ಪರಮೇಶ ದೂರ ತೊಲಗುವೆನೆಂದು | ಮೂರು ತುಂಡಾಗಿ ಸರಳುರಿವ || ೧೨೩ ||
ಬರುವ ಸರಳಿಗೆ ಎದೆಯ ತೊಲಗದೆ ರಣರಾಮ | ತರಿಗಡಿವ ಸಮಯದೇಳೆಂದು |
ಅರೆಶಕ್ತ ಆದಂಥ ಸರಳು ಅಂಗಕೆ ನೆಡಲು | ಜನಿಸಲು ಕನಲಿ ಕೋಪಾಗ್ನಿ || ೧೨೪ ||
ಶಕ್ತಿ ಸಾಹಸಗಳನು ಕಂಡೆ ತುಂಬುರ ನಿನ್ನ | ಹೆಚ್ಚೆಂದು ಈ ಖಾನರೊಳಗೆ |
ಅಕ್ಷಿ ಮೂರುಳ್ಳನ ಸುತನ ಉದರದಿ ಹೊಕ್ಕು | ಕುಟ್ಟಲು ಬುರುಡೆ ನೆಗೆವಂತೆ || ೧೨೫ ||
ತುಂಬರನಳಿಯಲು ಬಂದು ಬಾಣಿಯ ಮುದ್ದ | ಚಂಡಿಗೆ ಹೊಡೆಯೆ ಬಬ್ಬರನ |
ಕಂಡರು ಕಡಿಮೆಯ ಲಂಡಖಾನರು ಎಲ್ಲ | ಸಂದಿಗೊಂದಿಯನು ಹುಡುಕುವರು || ೧೨೬ ||
ತುಮುರ ಬಬ್ಬರನು ಲಯವಾಗೆ ಇವರೆಲ್ಲ | ಕಡಿ[ಯೆ] ಖಾನರು ತಲೆದೂಗಿ |
ಉಳಿದವರ ಮಾತೇನು ನೊಣಕಿಂತ ಕಡೆಯೆಂದು | ಬೆದರಾಡಿ ದಿಕ್ಕು ಪಾಲಾಗೆ || ೧೨೭ ||
ಕಲಿಯಾಗಿ ರಾಮನ ಬಲವೆಲ್ಲ ಹೊಗಲೇರಿ | ಕೊರೆವರು ಶಿರವ ತುಳಿತುಳಿದು |
ಕಡೆಯೊಳು ನಿಂತಿರ್ದ ನೇಮಿಖಾನನು ಕಂಡು | ಕೆಡೆದೋಡೆ ಒಂಟಿ ಕುದುರೆಯಲಿ || ೧೨೮ ||
ಮುರಿದೋಡಿ ಕೆರೆಭಾವಿ ಗಿಡ ಮೆಳೆಯ ಬೀಳಲು | ಬಿಡದೆ ಹರಿಸ್ಯಾಡಿ ಕಡಿದ ತುರಗವನು |
ಹೊಡೆವರು ಕುಮ್ಮಟಕೆ ಕರಿಗಿಂತ ಕಡೆಯಾಗಿ | ತರತರದ ಮೇಲೆ ಹಿಂಡುಗಳ || ೧೨೯ ||
ಗೂಡಾರ ಗುಮ್ಮಟ ಡೇರೆವು ಜಾಂಡೆವು | ಆದಡಿಗೆ ಬೆಂದ ರೊಟ್ಟಿಗಳ |
ನೋಡದೆ ಹಿಂದಿರುಗಿ ಭಂಡಾರ ಬೊಕ್ಕಸ | ಬಿಟ್ಟು ಓಡಿದರು ಹಲಕೆಲವು ಹೀಗೆ || ೧೩೦ ||
ಮುಂಗಾರ ಮಳೆ ಬಂದು ಕೆನ್ನೀರು ಹರಿವಂತೆ | ತೂರಿತೂರಿ ಹಳದಲಿ ರತ್ನ |
ಒಂದಾಗಿ ಒಡನಾಡಿ ಶರಧಿಯಂದದಿ ಹರಿಯೆ | ಮುಂಡ ತಲೆಗಳು ತೇಲುತಲಿ || ೧೩೧ ||
ಮುಸುಕಿದ ಮಂಜದು ಬಿಸಿಲೇರೆ ಹರಿದಂತೆ | ದೆಸೆದಿಕ್ಕು ಬಿದ್ದು ಉಳಿದವರು |
ಉಸುರಿಲ್ಲ ಬಾಯೊಳು ಬೆದರಿ ಬೆಚ್ಚುತ ಓಡೆ | ಬಿಸುಗಾಯ ರಕ್ತ ಜೋರಿಡುತ || ೧೩೨ ||
ಕಾಲ್ಹೋಗೆ ಕೊಳ್ಹರಿದು ಮೇಲೆರಡು ಕಿವಿ ಹೋಗಿ | ಮೂಗ್ಹರಿದು ಮುಸುಕೆ ಮೋರೆಗಳು
ಈ ಬಗೆಯ ಪ್ರತಾಪ ಹೇಳುವರಳವಲ್ಲ | ತಾರಾಗಲು ಮೂರು ಪೌಜು || ೧೩೩ ||
ಲಯವಾಗಿ ಹೋದವರು ಜಮೆಯಾಗಿ ಒಂದೆಡೆಯ | ತುಮ್ ಭೀ ಉಳಿದಿರೆ ಎನಲು |
ಅಮರೇ ಸಾಬುಳಿದೆವು ಎಂದು ಒಬ್ಬಿಗೆ ಒಬ್ಬ | ಕರಗಳ ಮುಗಿದು ಓಡುವರು || ೧೩೪ ||
ನಿಲಬೇಡಿ ಗುಂಪಾಗಿ ತಲೆಯ ಕಂಡರೆ ಬಿಡನು | ಹಿಡಿದಿಲ್ಲ ಧರ್ಮ ಕಳುಹೆಯನು |
ಕೆಡೆಹಾದು ಹೆದ್ದೊರೆಯ ಗಡಿಯ ದಾಂಟಿದ ಮೇಲೆ | ಹಡೆದ ತಿಂಬುವ ತಾಯಿ ಬರಲು || ೧೩೫ ||
ಹತ್ತಿ ಹಾರುತ [ಒ]ದರಿ ಬೆಚ್ಚಿ ಬೀಳುತ ಕಡೆಗೆ | ಕತ್ತಿಗಳ ಬಿಟ್ಟು ಓಡುವರು |
ಮತ್ತೊಬ್ಬ ತಮ್ಮವನು ಕಣ್ಣಿಟ್ಟು ಓಡುತ ಬರಲು | ಹೊಕ್ಕರು ಕೆರೆಹಳ್ಳ ಮಡುವ || ೧೩೬ ||
ಸಂಬಳವ ಮಾಳ್ಪುದಕೆ ಸನ್ಯಾಸಿ ಆಗಲುಬೇಕು | ಕುಂದೇನು ತಿರಿದುಣ್ಣ ಹೀನ |
ಮುಂದೇಳು ಜನ್ಮದಿ ಜನಿಸಿ ಬಂದಡೆ ಮುಲ್ಲ | ರಂಡೆ ಊರಿನ ಹಾದಿ ಬೇಡ || ೧೩೭ ||
ಜಾಣನಲ್ಲವು ನಮ್ಮ ರಾಯ ಸುರಿತಾಳನು | ಭೂಮಿಯೊಳು ಶಾಸ್ತ್ರ ಸುಳ್ಳಹುದೆ |
ಓಡಲು ಹುಂಜನು ಟಗರು ಮುರಿಯಲು ಕಂಡು | ಮೂಢಾತ್ಮನಾಗಿ ನಡೆಸುವನೆ || ೧೩೮ ||
ಜಗಳವಾಗಿರೆ ಹಿಂದೆ ಜಂಬೂದ್ವೀಪದ ಮೇಲೆ | ಕುರಿಗಿಂತ ಕಡೆಯೆ ನರಜನ್ಮ |
ಸುರಿತಾಳ ದಿನಕೊಂದು ಹಿಡಿಹೊನ್ನು ಕೊಟ್ಟರು ಬೇಡ | ಯಮನೂರ ಕುಮ್ಮಟದ ದಾರಿ || ೧೩೯ ||
ಕತ್ತಿಯ ಬೆಳಕಿನ್ನು ಕರದೊಳು ಸುಳುಹಾಯೆ | ಬೆಚ್ಚಿ ರಾಮನು ಬಂದನೆನುತ |
ಅತ್ತಿತ್ತ ಓಡಾಡಿ ದಣಿದು ಪಾಕೆಯ ಹೊಕ್ಕು | ಹೊಟ್ಟೆ ತುಂಬಲು ಕಡಿದ ಸಾವ || ೧೪೦ ||
ನೂರಾರು ಜನ ಹೋಗಿ ಪಾಕೆಗೆ ಬಗ್ಗಲು | ತೋರಲು ತಮ್ಮ ಪ್ರತಿರೂಪ |
ಜಾ ಹಾರೆ ರಾಮನು ಪಾಕೆ ಆಯಾ ಎಂದು | ಭೋರನೆ ಬೆದರಿ ಓಡುವರು || ೧೪೧ ||
ನೇಮಿಖಾನರು ಹೋಗಿ ಹೆದ್ದೊರೆಯ ತಿಟ್ಟಿಗೆ ನಿಲ್ಲೆ | ಹೋಗಿ ಕೂಡಲು ಒಂದು ಒರೆಯು |
ವೀರ ಚೆನ್ನಿಗ ರಾಮ ಧರ್ಮದ ಕಹಳೆಯ ಹಿಡಿಸೆ | ನೋಡುತ್ತ ರಣವ ತಿರುಗಿದರು || ೧೪೨ ||
ಇವನೊಳು ಕಳೆದುಳಿದೆ ಎರಡು ಕಂಟಕವೆಂದು | ನಡೆತರಲು ನೇಮಿ ಡಿಳ್ಳಿಗೆ |
ಧುರಧೀರ ಖಾನರ ದಂಡು ಕೊಂದನು ಸಾವ | ನಗೆಗೇಡಾದುದು ಲೋಕದೊಳಗೆ || ೧೪೩ ||
ಶೋಧಿಸಿ ಭೇರುಂಡ ರಣರಾಮ ರಣವನು | ಲಯವಾದ ಬಂಟರ ಸುಡಿಸಿ |
ಪಡೆಯು ಬಂದುದು ಒಂದು ಕೋಟಿ ಮರುಳಿನ ಹಿಂಡು | ದೊರೆ ರಾಮನನ್ನು ಪೊಗಳುತಲಿ || ೧೪೪ ||
ಹೊತ್ತು ಕವಿಯಲು ಮರಳು ಸುತ್ತ ಯೋಜನ ದಾರಿ | ಹಾಕೋರುಷ ಗ್ರಾಸವರ್ಜಿತವು |
ಕೊಟ್ಟರು ರಣವಿಜಯ ಪಾರ್ಥ ರಾಮೇಂದ್ರನು | ಕತ್ತಿಗೆ ಜಯ ಕೊಡಲಿ ಹರನು || ೧೪೫ ||
ತಂಡ ತಂಡದ ಭೂತ ಕೊಂಡಾಡಿ ಸವಿಸವಿದು | ಒಂದಕೊಂದೊಂದು ಕೊಡುತಿಹವು
ಉಂಡು ನೋಡೆಲೆ ಮಗನೆ ರುಚಿಯುಂಟು ಇದರೊಳು | ಕೆಡವನು ಸವಿಯಾದ ಅನ್ನ || ೧೪೬ ||
ಕೊಬ್ಬಿನ ನೆಣ ಮಾಂಸ ಕೊಳ್ಳೆನುತ ಶಿಶುಗಳ | ಹಲ್ಲ ತೆರೆದು ಹಾಕುವರು |
ಒಲ್ಲೆವು ಇವ ಕರ್ಮಿ ಧರ್ಮಜೀವನವಲ್ಲ | ಬಾಯಿ ನಾರುವುದೆಂದು ಉಗಿಯೆ || ೧೪೭ ||
ಉಪ್ಪಿದು ಸಪ್ಪಲ್ಲ ಬಾಯೊಳಿತು ನೋಡುತಲಿ | ಮತ್ತೊಂದು ಮರುಳ ತಾ ಕೊಡಲು |
ಸಿಟ್ಟಿನಿಂದಲಿ ಕೊಡಲು ಹುಟ್ಟಿದ ಮೊದಲಿವನು | ಭಿಕ್ಷೆ ನೀಡಿದ ಕರ್ಮಿ ಅಲ್ಲ || ೧೪೮ ||
ಕುಣಿಯುತ್ತ ಗತಿಗತಿಗೆ ನೆಗೆದು ಹಾರುತ ಮರುಳ | ದಣಿವುತ್ತ ಡರ್ರ ನೆ ತೇಗೆ |
ಕರಿಕಂಠನ ರಕ್ಷೆ ಸ್ಥಿರವಾಗಿ ರಾಮೇಂದ್ರ | ವರುಷಕೊಂದು ವ್ಯಾಳ್ಯೆ ಉಣಬಡಿಸಿ || ೧೪೯ ||
ಭೂತ ತಿಂತಿಣಿಗಳು ಈ ರೀತಿಯೊಳು ಹೊಗಳಲು | ಏಕಾಂಗಿ ರಾಮ ಬರುತಿಹನು |
ಹಾಕಿಸಿದ ದಂಡಿನ ಪಾಳೆದ ಸಾರಣೆಯ | ಲೋಕದ ಪ್ರಜೆಯೆಲ್ಲ ಹೊತ್ತು || ೧೫೦ ||
ನೋಡಿದ ಕಂಪಿಲರಾಯ ಕರುಮಾಡನೇರಿ | ನೋಡಿದ ದಂಡಿನ ಬಗೆಯ |
ಸೂರ್ಯನ ಸಖನಂತೆ ಕಳೆಯೇರಿ ಮಂತ್ರಿಯ ಕೂಡೆ | ಆಡುವ ವಿನಯ ವಚನದಲಿ || ೧೫೧ ||
ಬಾರೆನ್ನ ಮಂತ್ರಿಯೆ ನೀಲಪಚ್ಚೆಗೆ ಮಿಕ್ಕ | ಮೇಲೆ ನವರತ್ನ ಮಾಣಿಕವೆ |
ರಾಮರ ಬಲವೆಲ್ಲ ಲಯವಾ[ಗೆ] ಹನುಮಂತ | ಸಂಜೀವಿನಿ ತಂದ ತೆರನಾಯ್ತು || ೧೫೨ ||
ತ್ರಾಣವುಳ್ಳವನಹುದು ಧರಣಿಪ್ರಧಾನರಿಗೆ | ಮೇಲಿರು ಶಿಖದ ಮಣಿಯಂತೆ |
ರಾಯ ರಾಹುತನೆಂಬ ನಾಮ ಸಲುವದು ಇವಗೆ | ಜೀವ ಕೂಡಿತು ಎನ್ನ ಡಿಂಬ || ೧೫೩ ||
ಬಂದ ನೇಮಿಯ ದಂಡ ಬಯಲು ಮಾಡಿದ ಮಂತ್ರಿ | ಸಂಬಳ ಕೊಡೆ ಶಕ್ಯವಲ್ಲ |
ಕಂದ ರಾಮಯ್ಯಗೆ ಪ್ರತಿಯೆಂದು ಕಾಣಲುಬಹುದು | ಹಿಡಿಂಬನ ಮುರಿದ ಭೀಮನಹುದೊ || ೧೫೪ ||
ಅರಸು ನಾಯಾಗಲು ಮಂತ್ರಿ ಹೆಬ್ಬುಲಿಯೆಂದು | ಬರಿದೆ ನಗೆ ನಡೆಯರು ಲೋಕದಲಿ |
ಗಿರಿಯನು ತೃಣದೊಳು ಹಾರೊಡೆದು ಪುರವನು ಕಾಯ್ದೆ | ಎಣೆಯಾರು ನಿನಗೆ ಲೋಕದೊಳು || ೧೫೫ ||
ಎಷ್ಟು ಪೇಳಲಿ ಈಗ ಶ್ರೇಷ್ಠತರವಾದುದು | ಬಿಟ್ಟಿದ್ದೆ ಕೈಸಾರಿ ನಾನು |
ಸೃಷ್ಟಿ ಭಾರಗಳನು ಒಪ್ಪಿಸಿ ಮಂತ್ರಿಗೆ | ಕೊಟ್ಟ ಸೇರಕ್ಕಿಯೊಳಿರುವೆ ನಾನು || ೧೫೬ ||
ಕೊಡಬಾರದುಡುಗೊರೆಯ ಕೊಡಗಿ ಕಂಪಿಲರಾಯ | ಬರಹೇಳು ನಿನ್ನ ರಾಹುತನ |
ಮರಣಕಾಲದಿ ಬಂದು ಮಂಡೆ ಕಾದನ ಹೆಸರ | ಕರೆಯಬಹುದು ಕೋಟಿರಾಜ || ೧೫೭ ||
ಕತ್ತಿಯೊಳು ಕಲಿ ಪಾರ್ಥ ಶಕ್ತಿಯೊಳು ರಣಭೀಮ | ಇಟ್ಟುಕೊಂಬೆನು ಎನ್ನ ಬಳಿಯೆ |
ಪುತ್ರರಾಯಗೆ ಮುನ್ನ ಹೆಚ್ಚೆಂದು ನಾ ಕಂಡು | ಲಕ್ಷ ರಾಜ್ಯವ ಧಾರೆಯೆರೆವೆ || ೧೫೮ ||
ನೋಡುವೆ ಕರೆಸಯ್ಯ ಬಾಲೆಯರ ಮುತ್ತೈದೆ | ಓಲೆ ಬಳೆ ಮಣಿಯ ಕಾದವನ |
ಕಾಂತ ಸೈರಣೆ ಮಾಡು ಕರೆತರುವೆ ನಾ ಪೋಗಿ | ಮಂತ್ರಿ ನಡೆಯಲು ಕಾಲ್ನಡೆಯ || ೧೫೯ ||
ರಾಮ ರಾಹುತನೆಡೆಗೆ ಪ್ರಧಾನಿ ಹರುಷದಿ ಬಂದು | ಜೋಡಿಸಿ ಕರಗಳ ಮುಗಿದು |
ಕಾಯಲು ನವಕೋಟಿ ದೇಹಗಳ ರಕ್ಷಿಸಿದೆ | ಬಿಜೆ ಮಾಡಬಹುದು ದೊರೆಯಡಿಗೆ || ೧೬೦ ||
ಆದೀತು ಮಂತ್ರಿಗಳರಸೆ ಶಿರೋಮಣಿಯೆ | ಏರಯ್ಯ ನೀವು ಪಾಲಿಕೆಯ |
ವೀರ ಎಕ್ಕಟಿಗರು ವಾರುವ ಕರಿ ತುರಗ | ವಾಲಗ ಕೊಡುತ ರಾಮನಿಗೆ || ೧೬೧ ||
ಕಡಿಕಡಿಯೆನುತಲಿ ಸಿಡಿಲಿನಾರ್ಭಟದಿ | ಹೊಗಳುವ ಭಟರು ಭೇರಿಗಳು |
ಕುಣಿವ ಪಾತ್ರದ ಮೇಳ [ಪೊರ] ಜುಗಳು ಎಡೆಯೆಡೆಗೆ | ಬರುಪಾರ್ಥಿಗಳು ಎಡದೆರನೇ || ೧೬೨ ||
ನಳಿನಾಕ್ಷಿ ಬಾಲೆಯರು ಪಲಬಗೆಯ ಶೃಂಗಾರವಾಗಿ | ಹವಳ ಮುತ್ತಿನ ಆರತಿಯ |
ಬೆಳಗುವರು ಪ್ರಧಾನಿ ಹಣ ಹೊನ್ನುಗಳ ನೀಡಿ | ಎಡೆಯೆಡೆಗೆ ಕುರಿಕೋಣ ಹೊಡೆಸಿ || ೧೬೩ ||
ನೋಡುವರು ಬೆರಗಾಗಿ ಕಾಯ್ದೆ ಎಮ್ಮಯ ಪ್ರಾಣ | ಆದ ಮಕ್ಕಳು ನಿನ್ನ ಹೆಸರು |
ನೋಡಿರೆ ಈ ಕಾಯ ಮೂಡಿರುವ ಅಂಬುಗಳ | ಏದಿನ ಪರಿಯ ವಜ್ರಾಂಗಿ || ೧೬೪ ||
ಕಾಣದು ಮುಖಪದ್ಮ [ಮುಖ] ಭಾವ ನೋಡಿದರೆ | ರಾಮಭೂಪಾಲನಾಗಿಹುದು |
ಆದರಾದಿತು ಕೆಲವು ಅಲ್ಲಯೆಂಬರು ಕೆಲವು | ಸಹಜಯೆಂಬರು ಅರ್ಧ ಪುರವು || ೧೬೫ ||
ಮುತ್ತೈದೆತನಗಳ ಇತ್ತೆಮ್ಮ ಪಾಲೆಗಳ | ಶ್ರೇಷ್ಠ ರಾಯರ ಗಂಡಭೇರುಂಡ |
ದಿಟ್ಟ ಮಂತ್ರಿಯು ಇನ್ನು ಯಾವ ಬಗೆಯಲಿ ಮಡಗಿ | ಪಟ್ಟಣವ ಕಾದ ಕೈಯೊಡನೆ || ೧೬೬ ||
ದುಃಖ ಮಾಡಲಿ ಬ್ಯಾಡ ಅಕ್ಕ ತಂಗೆರು ಹೋಗಿ | ಹಸ್ತದಿಂದೆಲ್ಲಕ್ಕು ಅರುಹಿ |
ಪುತ್ರರಿರ್ವರು ತಮ್ಮ ತೇಜಿವಾಹನವಿಳಿದು | ಹತ್ತಲು ರಾಯನ ಸದರ || ೧೬೭ ||
ಕಾಣುತ್ತ ಪಿತನನು ಕರವ ಜೋಡಿಸಿ ಮುಗಿದು | ಭೂಪಗೆ ಇದಿರಾಗಿ ನಿಲ್ಲೆ |
ಧ್ಯಾನಿಸುವ ಮನದೊಳಗೆ ಕುಮಾರರಹುದೆಂದು | ದಿನಿಸ ನೋಡಲು ಅಲ್ಲೆಂದ || ೧೬೮ ||
ರಾಯರಾಹುತರೆ ಬನ್ನಿ ಪ್ರಾಣ ಕಾಯ್ದಿರಿ ಎನ್ನ | ಯಾವ ಸ್ಥಳದೊಳಗೆ ಮನೆಯವರು |
ಸೇರಕ್ಕಿ ಎನಗಿತ್ತು ಭೂಮಿ ನಿಮ್ಮದು ಇಲ್ಲಿ | ದಯಮಾಡಬಹು [ದೆ]ನಲು ರಾಯ || ೧೬೯ ||
ಬಾಲನ ಕೊಲಿಸಿದ ರಾ[ಜ] ಯೆಂಬರು ನಿನ್ನ | ಪರದಿ ಇದ್ದಲ್ಲಿ ಉಳಿವವರೆ |
ಆಡುವ ವಚನವ ಸ್ವರಭೇದ ತಿಳಿದು | ಕುಮಾರನಹುದೆನಲು ನಿಶ್ಚೈಸಿ || ೧೭೦ ||
ಪುತ್ರನ ಧ್ವನಿಗೇಳಿ ಉಕ್ಕುತ ಜಲಗಳನು | ತೊಟ್ಟಂಗಿ ಮೂರು ಪಾಲಾಗೆ |
ದಿಟ್ಟುಳ್ಳವ ಮಂತ್ರಿ ತಲೆಯ ಠವುಳಿಯ ತೆಗೆಸು | ಕೃಷ್ಣನ ಸುತನ ಮುಖ ನೋಳ್ಪೆ || ೧೭೧ ||
ತೊಟ್ಟ ವಜ್ರಾಂಗಿಯ ಇಟ್ಟಿ ಠೌಳಿಯ ತೆಗೆದು | ಕಟ್ಟಿದ ಕರಖಡ್ಗ ಪಿಡಿಸಿ |
ಉತ್ತಮದ ದೇವಾಂಗ ಈರ್ವರಿಗೆ ಅಳವಡಿಸಿ | ಕೊಟ್ಟ ಮಂತ್ರಿಯು ಪಿತನ ಕರಕೆ || ೧೭೨ ||
ಪಲಬಗೆಯ ದೃಷ್ಟಿಯ ನಿವಾಳಿಸಿ ದಾನಕೊಟ್ಟು | ಬಾಲರಿರ್ವರನು ಕರ ಪಿಡಿದು |
ಆನಂದ ಹರುಷದಿ ಗಲ್ಲವ ಪಿಡಿದು | ಪೇಳುವರಳವೆ ಆಶ್ಚರಿಯ || ೧೭೩ ||
ಕಾಲನು ಕರೆದೊಯ್ದು ಜೀವವನು ಕಳುಹಿದ | ಹಾವಿನ ಪರಿಯು ಕಳೆದಂತೆ |
ಹೋಗಿದ್ದ ನಯನಗಳು ಎಲ್ಲವು ಬಂದಂತೆ | ಕುಮಾರರ ನೋಡಿ ಹಿಗ್ಗಿದನು || ೧೭೪ ||
ಸೋಮನು ತಲೆದೋರೆ ಶರಧಿಯು ಸರಿದೇಳೆ | ಬಾಲನು ತಾಯ ಕಂಡಂತೆ |
ಕಾಮದ ಸ್ತ್ರೀಯಳಿಗೆ ಪ್ರಿಯನು ಮುಖದೋರೆ | ಭಾವದೊಳು ಬೆಚ್ಚಿ ಬೆದರುವಳು || ೧೭೫ ||
ಕಂದನ ಮನಸಿನ ನಿರ್ಧಾರವ ತಿಳಿಯದೆ | ಪಾಪಿ ಕೊಂದೆನು ರಂಡಿ ಮಾತಿನಲಿ |
ತಂದೆಗೆ ಮಿಗಿಲಾಗಿ ಪ್ರಧಾನಿ ಕೊಲ್ಲದೆ ಕಾದ | ಮುಂದೆನಗೆ ಬುದ್ಧಿಗಲಿಸಿದನು || ೧೭೬ ||
ಆರು ತಿಂಗಳು ನಿಮ್ಮ ಮುಖವ ಕಾಣದೆ ನಾನು | ಸ್ವಾನಂದದಿ ಬಸ[ವ]ಳಿದೆನು |
ಸೂಳೆ ಮುಂಡೆಯ ನೆಚ್ಚಿ ಹಾಳು ಮಾಡಿದೆ ಮನೆಯ | ಪ್ರಧಾನಿ ನೆಟ್ಟನು ಸಸಿ ಕೊನೆಯ || ೧೭೭ ||
ಕೊಂದಂತೆ ತಲೆಯನು ತಂದ ರಂಡೆಗೆ ತೋರುವ | ನಿಜವ[ನು] ನಾನು ಗ್ರಹಿಸಿದೆ |
ಕಿಚ್ಚ ಕಾಣಬಿಟ್ಟು ಪುಣ್ಯಸ್ತ್ರೀಯರು ಮಂತ್ರಿ | ಇಟ್ಟಿರಲು ಬ್ಯಾಡವೆಂಬವನೆ || ೧೭೮ ||
ಹುಟ್ಟದೆ ನಿಮ್ಮಯ ಪುತ್ರರು ಬಂದಂತೆ | ಅತ್ತೆ ಮಾವಗಳ ದಯವಿರಲು |
ಹತ್ತು ಸಾವಿರ ಹೊನ್ನ ಧರ್ಮಮಾಡಿ ಈ | ಹೊತ್ತು ಜನಿಸಿದ ಬಾಲನೆಂದು || ೧೭೯ ||
ರಾಯನು ಬಾಲರ [ಪ್ರಾಪ್ತಿ] ಯೊಳಗಿರಲು | ತಾಯಿ ಹರಿಯಮ್ಮ ಚಿಂತಿಪಳು |
ಭೇರುಂಡ ಧೈರ್ಯದ ಕುಮಾರರಿರಲು ನೇಮಿ | ಮಾಡ ಮುತ್ತಿಗೆಯ ಹೆಸರ್ಹಿಡಿಯ || ೧೮೦ ||
ಅನಿತರೊಳಗೆ ಒರ್ವ ನೆರೆಮನೆಯ ಸಖಿ ಬಂದು | ಕರಮುಗಿದು ಸ್ಥಿತಿಯ ಪೇಳುವಳು |
ಮರುಳೇನೆ ಅಮ್ಮಯ್ಯ ಕರೆಸುವರೆ ಕಲಿಪಾರ್ಥ | ಜನಿಸಿ ಓಡಿಸಿದ ಮುತ್ತಿಗೆಯ || ೧೮೧ ||
ಏನೇನು ಇನ್ನೊಮ್ಮೆ ಪೇಳ್ವುದು ಎಲ್ಲಿಯ | ತಾಯೆ ದುಃಖದಲಿ ನಾನಿರುತಿರ್ದೆ |
ಜಾಣನಲ್ಲವೆ ನಿಮ್ಮ ತಮ್ಮ ಮಂತ್ರಿಯು ಮಡಗಿ | ಉಳಿಗಾಲ ಬರಲು ತೆರತಂದ || ೧೮೨ ||
ಬಿದ್ದಾವೆ ಬೊಲ್ಲನ ಪ್ರಸಿದ್ಧದಿ ಕಂಡುದು | ನಿರ್ಧರವಮ್ಮ ನಿನ್ನಾಣೆ |
ಎದ್ದಳು ಹರಿಯಮ್ಮ ಎಳೆಗರುಳಿಗೆ ಮಗ ಬರುವ | ಆಗ್ರದಿ ಎಡವಿ ಮುಗ್ಗುತಲಿ || ೧೮೩ ||
ಅಂದಣವನೇರದೆ ಹಿಂದೊಬ್ಬರಿಲ್ಲದೆ | ಅಂಗಾಲು ಬೆವರುದರೊಳಗೆ |
ಕಂದನ ಮುಖನೋಡಿ ಹಿಂದೆ ಅಳಿಯಲಿ ಲೇಸು | ಮುಂಗುಡಿಯ ಗೌಲಿ ಅಂದದಲಿ || ೧೮೪ ||
ಕೇಳಿದ ಕಮಲಾಕ್ಷಿ ಬಾಲ ಜನಿಸಿದ ಸುದ್ಧಿ | ಕಾಲ ನಡೆಯಿಂದೋಡಿ ಬರಲು |
ಮಾಯಕ್ಕ ಲಿಂಗಮ್ಮ ಮಂಡೆಯ ಕಟ್ಟದೆ | ಸೋದರ ಬಾಲೆಯರು ಬರಲು || ೧೮೫ ||
ಪುರದೊಳಗೆಲ್ಲಲ್ಲಿ ಹರಿಯಲು ಸುದ್ದಿಗಳು | ಕೆರೆ ಒಡೆದಂತೆ ಬಾಲೆಯರು
ಬರುವರು ಕಡೆಯಿಲ್ಲ ಸದರ ಚಾವಡಿ ಬಳಿಯ | ಮಡೆದೇರು ಎಲ್ಲ ನೋಡುವರೆ || ೧೮೬ ||
ಜನಸಿ ಬರುವ ಸುದ್ದಿ ಅರುಹಲು ಊಳಿಗ ಬಂದು | ಮೆಲ್ಲನೆ ಹಜಾರವನಿಳಿದು |
ಮುಖವ ಕಾಣುತ ರಾಮ ಇರ್ವರಿಗೆ ಜಲವುಕ್ಕಿ | ಶರಣಾಗತರಾಗಿ ಎರಗಿದರು || ೧೮೭ ||
ತಾಯಿ [ಗೆ ಈ] ರ್ವ[ರು] ಪ್ರೇಮದಿ ನಮಸ್ಕರಿಸೆ | ಕುಮಾರನ ಪಿಡಿದೆತ್ತಿ ಹರಸಿ |
ಯಾಲ್ಲಿ ಇವರನು ಅಡಗಿಸಿದ್ದರು ಎಂದು | ಅಮ್ಮಾಜಿ ಮಕ್ಕಳನು ಬಿಗಿದಪ್ಪಿ || ೧೮೮ ||
ಬಂದೇನೋ ಚಂದ್ರನಿಗೆ ಪ್ರತಿಬಿಂಬ ಎನಿಸುವ ರಾಮ | ಕಂದರ್ಪರೂಪ ಕಾಟಯ್ಯ |
ಬಂದೀರೆ ಬಲವುಳ್ಳ ಮಿಂಡ ನೇಮಿಯು ಬರಲು | ರಂಡೆ ಕಂಪಿಲ ಕರೆಸಿದನೋ || ೧೮೯ ||
ಹೇಳದೆ ನೀವಾಗೆ ಹೋಗಬಹುದೆ ಎಮ್ಮ | [ನೋಡೊ] ನಯನಕೆ ಮಣ್ಣ ಹೊಯ್ದು |
ತಾಯೆ ನಿಮ್ಮಯ ಮಾತ ಮೀರಿ ನಡೆಯಲು ಎಮಗೆ | ಗುರುರಾಯ ತಂದ ಕಂಟಕವ || ೧೯೦ ||
ಆರು ತಿಂಗಳು ಮಟ ಯಾವಲ್ಲಿದ್ದಿರೊ | ಸುಳುಹು ಕಾಣಗೊಡದಂತೆ |
ಇರುವುದಕೆ ಬಾರ ಹನ್ನೊರಡೊರುಷ ಪಾಂಡವರ | ಸುತರಂತೆ ನಾವಿರ್ದೆವಮ್ಮ ಮರೆಯಾಗಿ || ೧೯೧ ||
ಅಕ್ಕನು ಮಾಯಕ್ಕ ತಂಗಿ ಲಿಂಗಮ್ಮನ | ದುಃಖವ ಜಗದೀಶ ಬಲ್ಲ |
ಉಕ್ಕುವ ಜಲವನು ತೊಡೆದು ಸಮ್ಮತ ಮಾಡಿ | ಪಟ್ಟೆ ಪೀತಾಂಬರ ಉಡಿಸಿ || ೧೯೨ ||
ಅಂಧಕನಿಗೆ ಕಣ್ಣು ಬಂದಂತೆ ಪುರಜನರು | ತುಂಬಲು ನಯನದಿ ಜಲವ |
ಬಂದ ಕಂಟಕವನು ಕಳೆದುಳಿದೆ ಅಳಬ್ಯಾಡಿ | ಮುಂದರ ಸಂತೈಸಿ ಕಳುಹೆ || ೧೯೩ ||
ಕರೆಸಿದಾಗಲೆ ಮಂತ್ರಿ ಸೊಸೆಯರನು ಬೇಗದಿ | ಹರಿಯಮ್ಮನ ಕರದೊಳು ಕೊಡಲು |
ಚರಣಕೆರಗಲು ಮತ್ತೆ ಅತ್ತೆ ಮಾವ ಭಾವ | ಪುರುಷ ಬಳೆಯ ಕಾಯ್ದಂಥ ಮಂತ್ರಿಗೆ || ೧೯೪ ||
ಮುತ್ತೈದೆತನವನು ಕೊಟ್ಟನು ಮಂತ್ರಿ | ಅತ್ತೆ ಮಗ[ನ] ಕಾಣಿಸಿದ |
ಮರ್ತ್ಯದೊಳಗೆ ಮಂತ್ರಿ ಕೀರ್ತಿಯ ಪಡಕೊಂ[ಡ] | ಚಂದ್ರಾರ್ಕರುಳ್ಳನಕ || ೧೯೫ ||
ಬಾರೆನ್ನ ಮಂತ್ರೀಶ ಕಾಯಗಳು ಸ್ಥಿರವಲ್ಲ | ಮಾಡಯ್ಯ ಪಟ್ಟ ಕುವರಗೆ |
ವಾಲೆ ಕಾಗದ ಬರೆದು ರಾಯರಾಯರಿಗೆಲ್ಲ ರಾಯ ರಾಮನ ಶೃಂಗರಿಸಿ || ೧೯೬ ||
ಶುಭಲಗ್ನ ಗಳಿಗೆಲಿ ಆಭರಣ ಭೂಷಿತ ಕೊಡಿಸಿ | ವರಪೀಠದೊಳಗೆ ಕುಳ್ಳಿರಿಸಿ |
ಕರಿ ತುರಗ ಕಾಲಾಳು ಭರದಿ ಶೃಂಗರಿಸಿ | ಸದರ ವಾಲಗದಲ್ಲಿ ನಿಂದು || ೧೯೭ ||
ದಾನಧರ್ಮವ ಮಾಡಿ ಭೂಮಿ ದಾನವ ಬಿಡಿಸಿ | ಗ್ರಾಮ ಗ್ರಾಮಕೆ ಲಿಂಗಮುದ್ರೆಗಳು |
ರಾಯನು ಸದರಿಗೆ ತಾನಾಗ ಕರ ಮುಗಿದು | ರಾಹುತ ಅಣ್ಣ ಸಹವಾಗೆ || ೧೯೮ ||
ಪ್ರಧಾನಿ ಮಗ ನೀಲಕಂಠರಾಯಗೆ ರಚಿಸಿ | ಮಂತ್ರಿಪಟ್ಟಣಗಳ ಮಾಡಿದನು |
ಸಂತೋಷದೊಳು ಬಾಳಿ ಭೂಮಿರಾಜ್ಯವನಾಳಿ | ಕಂತುಹರನ ಕೃಪೆಯೊಳಗೆ || ೧೯೯ ||
ಪಟ್ಟದಾನೆಯ ರಚಿಸಿ ಮುತ್ತು ಪವಳಗಳಿಂದ | ಉತ್ಸವ ಒಸಗೆ ಮಾಡೆ |
ಎತ್ತಿ ಸಾರುವ ಕಹಳೆ ಭೇರಿ ಆರ್ಭಟದೊಳು | ರತ್ನಿ ಕೇಳಿದಳು ಆಲಿಸುತ್ತ || ೨೦೦ ||
ಏನಮ್ಮ ಸಂಗಾಯಿ ಊರಿನ ಕೋಳಾಹಳ | ಕೋಳುಗೊಂಡರು ತುರುಕರು |
ಕೇಳೇ ಎಲೆ ಸಂಗಿ ಏನೆಂದು ತಿಳಿಯದು | ನೋಡಲು ಬೀದಿಗೆ ಬಂದು || ೨೦೧ ||
ಏನೆಂದು ಕೇಳಿದಳು ಎಲ್ಲರನು ಈ ವಾರ್ತೆ | ಹೇಳಿದರು ತಿರುಗುವ ಜನರು |
ವಾಯು ಗಮನದಿ ಬಂದು ವ್ಯಾಳೆ ಒದಗಿತು ಕಾಣೆ | ರಾಮ ಬಂದನು ಅಳಿದವನು || ೨೦೨ ||
ಏನ ಹೇಳಲಿ ತಾಯೆ ವ್ಯರ್ಥವಾದೆವು ನಾವು | ರಾಯ ಮಾಡಿದ ಭತ್ರಿ ನೋಡೆ |
ಬಾಲನ ಮಡಗಿಟ್ಟು ಬದಲು ತಲೆಯನು ತೋರಿ | ಮಾಯವಾಡಿದ ಮುದಿಯ ನಮಗೆ || ೨೦೩ ||
ಏನೇನು ಇನ್ನೊಮ್ಮೆ ಹೇಳೆಲೆ ಸಂಗಾಯಿತ | ಕಾಲನೊಳಗುಂಟೆ ದಯ ಧರ್ಮ |
ಬುಡಕೆ ಸೇರಿದ ಬಳಿಕ ಪಾಲಿನ ಬಿಡುವನೆ | ಹೇಳಿದವರ್ಯಾರೆ ಈ ಮಾತ || ೨೦೪ ||
ಕುರಿಯ ಜನ್ಮದ ರತ್ನಿ ತಿಳಿಯಬಾರನೆ ಹೇಳವ | ಎರವಿನ ತಲೆಯನು ತಂದು |
ಬಿಡಿಸೆನ್ನ ಮನಸಿನ ದುಃಖವ ಎನುತಲಿ | ಇನ್ನಿರಿಸಲ್ ಹೇಗೆ ಆಗುವದೊ || ೨೦೫ ||
ಏಳಲಾರದ ಮುದಿಯ ಏನು ಗಾರುಡ ಮಾಡಿ | ನೋಡಲು ಎನಗಾಪ್ತನಾಗಿ |
ನೋಡಬಹುದೆ ಮುಖವ ಛಲಗಾರ ಸತಿ ಏಳು | ಸರಳ ಹೂಡಿಕೊಂಡಳು ಕೊರಳ್ಗೆ || ೨೦೬ ||
ಸತ್ತರು ಮರುಳೊಮ್ಮೆ ಬಿಟ್ಟರೆ ರಾಮನ | ರತ್ನೆಲ್ಲ ನಾನವನ ಮಡದಿ |
ಗಟ್ಟ್ಯಾಗಿ ಕೊರಳಿಗೆ ಬಿಲುಕೊಂಡು ಸೇದಲು | ವಸ್ತು ಹೋಗಲು ಯಮಪುರಿಗೆ || ೨೦೭ ||
ಒಡತಿ ಸಾಯಲು ಕಂಡು ಹಡಪದ ಸಂಗಾಯಿ | ಸಿಡಿಲು ತಪ್ಪದು ಮುಂದೆ ಎನಗೆ |
ಇದಿರಾಗಿ ಮತ್ತೊಂದು ಬದಲು ಉರುಳನೆ ಮಾಡಿ | ಸಾಯಲು ಅವಳೊಡನೆ ಗೌಡಿ || ೨೦೮ ||
ಓಡಿ ಬಂದಳು ಒಬ್ಬ ಬೇರೆ ದಾಸಿಯು ಅರಸೇ | ರಾಣಿ ಅಳಿದಳು [ದಿ]ಟವಾಗಿ |
ಪರಿಹಾಸ್ಯವನು ಮಾಡಬೇಡಿ ಉರುಳಿಂದ | ಮೃತಾವಾದೊ ಒಡತಿ ಸಂಗಿಯು ಒಂದಾಗಿ || ೨೦೯ ||
ಹೋಗಲಿ ಹೊಲೆರಂಡೆ ಮೇಲ್ವರಿದು ಮುಂಚಿದಳು | ನಾನೊಂದ ಗ್ರಹಸಿದ್ದೆ ಮನದಿ |
ಮೂಳ ಕತ್ತೆಯ ಮೇಲೆ ಬೀದಿ ಮೆರವಣಿಗೆ ಮಾಡಿ | ಆನೆ ಕಾಲಿಂದ ಎಳಸುವರೆ || ೨೧೦ ||
ಕುಳುವಾಡಿ ಕೈಯಿಂದ ಎಳೆದು ಹಾಕಿಸು ಮಂತ್ರಿ | ಈ ಗಳಿಗೇಲಿ ಹೆಣ ಹೊಲತಿಯನು |
ಹಿರಿಯ ತಾನಗಳಲ್ಲಿ ಶ್ರುತಯೋನ ಕಾಬುದು | ತಳವಾರರಿಂದ ಹೂಳೆನಲು || ೨೧೧ ||
ರಾಯ ರಾಮನು ಕೇಳಿ ತಾಯಳಿದ ಸುದ್ಧಿ[ಯ] | ಏನಾಗಿ ಇದೆ ಕಠಿಣತ್ವ |
ಭೂಮಿರಾಯರ ಗಂಡ ಬಂದನೆಂಬುದ ಕೇಳಿ | ನೇಣಿಂದ ಮೃತವಾದೊ ಎನಲು || ೨೧೨ ||
ಹರಹರ ಪರಮೇಶ ತಮಗೇನು ಬಂದುದು | ಧರೆ ನಿಂದೆಯನು ಹೊತ್ತೆ ನಾನು |
ಕರ್ಣದಿ ಕೇಳಲು ಕರದಿ ಚರಣದಿ ಪಿಡಿದೊ | ಉಳುಹಿಕೊಂಬೆನು ಚಿಕ್ಕ ತಾಯ || ೨೧೩ ||
ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನು ದಂಡ ಕಡಿದು ಬಂದನು ರತ್ನಿ | ಅಳಿದಲ್ಲಿಗೆ ಹದಿನೇಳು [>ಹದಿನೆಂಟು] ಸಂಧಿ || ೨೧೪ ||[1]
[1] + ಅಂತು ಸಂಧಿ ೧೭ಕ್ಕಂ [>೧೮ಕ್ಕಂ] ಪದ ೩೭೭೧ ಮಂಗಳ ಮಹಾಶ್ರೀ (ಮೂ).
Leave A Comment