ನಿತ್ಯ ಈ ಬಗೆಯೊಳು ಪ್ರಳಾಪಿಸುವಳ ಕಳ್ಳೆ | ಮತ್ಯಾಕೆ ಎಂದು ನೀ ಕೇಳು |
ಮೆಚ್ಚಿಕೊಂಡಿರುವಳು ಮಂತ್ರಿಯ ಮಗನನು | ಸಿಕ್ಕದೆ ಸಮಯವೆಂದೆನುತ          || ೧೨೧ ||

ರಾಯ ವಿಜಯೇಂದ್ರ ತಾನೊಂದು ದಿನದೊಳು | ಹೋದನು ಬೇಂಟೆ ಸಂಭ್ರಮದಿ |
ಕೂಡಲು ಕುಮುದಿನಿಗೆ……………………… | ಹೊಳಲೊಳು ಗೃಹ ತಾ ಹೊಕ್ಕ       || ೧೨೨ ||

ರಾಯನು ಜಯಸೇನ ಹಜಾರದೊಳಗೆ ಕುಳಿತು | ವಾಲಗಗೊಡುವ ಸಂಭ್ರಮದಿ
ಸೇರದೆ ಸಖಿವೊಬ್ಬ ದಾಸಿಯು ಪರಿತಂದು | ಕುಮಾರನ ಕರ್ಣಕ್ಕೆ ಉಸಿರೆ            || ೧೨೩ ||

ಕೇಳಲು ಬಹು ಕರ್ಮ ಭವಗೆ ಬರದಂತೆ | ನಿರ್ಣಯ ಮಾಡಿಸುವೆ ಇರ್ವರನು
ಮೂರಾರು ಬಾಗಿಲ ದಾಂಟಿ ಬರಲು ಕರ್ಮ | ಜ್ಞಾನ ಕೂಡಲು ಪುತ್ರನಿಗೆ              || ೧೨೪ ||

ಹಸು ಹಾಲು ಕೊಡುತಿಹುದು ಶಿಶು ಕೃಪೆಬಡುವುದು | ಮುಸುಡಿ ಮೂಳಿಗೆ ಯಾಕೆ ಕರ್ಮ |
ಹೆಸರನ್ನ ಜಯಸೇನ ಹೊರಸಲ್ಲ ಕರ್ಮವನು | ಅಸದಳವವರಿಗೆ ತರುವೆ             || ೧೨೫ ||

ಕಂಡ ಗೌಡೆರು ಬಂದು ಮುಂದಕ್ಕೆ ಕುಮುದಿನಿಗೆ ಪೇಳೆ | ಕಂಡಿರ್ದ ಅಲ್ಲಿ ಯಮಪುರವ |
ಕಂಡಯ್ಯ ಇರಿಕೊಂಡ ಬಂದ ಕುಮಾರನು ದಯ | ಬಂದು ಮರಳಿದನು ಹಿಂದಕ್ಕೆ    || ೧೨೬ ||

ಕೆಟ್ಟೆ ಬೆಂದೆನು ಎಂದು ಕುಟ್ಟಿಕೊಳ್ಳುತ ಎದೆಯ | ಇಟ್ಟುಕೊಂಬೆನು ಕೊರಳಾಗುರುಳ |
ಸೃಷ್ಟಿಪಾಲಕ ಬಂದ ಹೊಕ್ಕು ಗಳಿಗೆಯನ್ನು | ಸುಟ್ಟರು ಎಣ್ಣೆ ಸೀಗೆಯಲಿ               || ೧೨೭ ||

ಅಳಿಯಬ್ಯಾಡೆಲೆ ನಿನ್ನ ಉಸುರೋದ ಬಳಿಯಲ್ಲಿ | ಕೊಡುವೆ ಪ್ರಾಣವ ಎನಲು ಮಂತ್ರಿ |
ಹಗೆಯಿಟ್ಟು ದೊರೆಮಗನ ಹಲವು ತಂತ್ರವ ಮಾಡಿ | ಯಮನ ಪಟ್ಟಣಕೆ ಸಾಗಿಸುವೆ  || ೧೨೮ ||

ಬಡವನ ಹಗೆಯೊಳು ನರರಿಗೆ ಉಳುವೇನೊ | ಹೆದರಬ್ಯಾಡೆಂದು ಎದೆ ಧೈರ್ಯ |
ದೊರೆ ಬರುವೆ ಸಮಯಕೆ ಗರಗಾಳಿ ಪಿ[ಡಿ]ದಂತೆ | ಹೊರಳಿದರೆ ಮಗನ ಕೊಲ್ಲುವನು         || ೧೨೯ ||

ವಿಜಯೇಂದ್ರರಾಯ ಬೇಂಟೆ ತೀರಿ ಊರಿಗೆ ಬರಲು | ಭೇರಿ ಕಹಳೆ ರಭಸದಲಿ |
ರಾಣಿಗೆ ಸರಿದೋರೊ ಗಾನವುಗಳೆಂದು | ಓಡಾಡುತಿರಲು ರಾಯನೆಡೆಗೆ             || ೧೩೦ ||

ಇರವೇನು ಪಾಪಿಷ್ಠೆ ಎನುತ ನದರುಗೆಡುತಲಿ ರಾಯ | ಒದಗಿ ಬರಲು ಅರಮನೆಗೆ |
ರಮಣನ ಕಾಣುತ್ತ ಹೊರಳುತಿರಲು ರಂಡೆ | ಅಳಿದಂತ ಸ್ವರವ ತಪ್ಪಿದಳು           || ೧೩೧ ||

ಕೃತಕವೆಂದರಿಯದೆ ಮತಿಗೇಡಿ ರಾಯನು | ಅತಿ ಅಳಿದಳೆಂದು ಮುಖವಡಿಯ |
ಅತಿದುಃಖಗೊಳುವಾಗ ಬಂದನು ಮಂತ್ರೀಶ | ಸನ್ಮತ ಪೇಳುವ ರಾಯನಿಗೆ         || ೧೩೨ ||

ನಾಯಳಿಯೆ ಶೋಕವ ಮಾಡಸಲ್ಲದು ರಾಯ | ಬಾರಳೆ ಬೇಕೆನಲು ಹೆಣ್ಣು |
ಏ ನನ್ನ ಇಂತಪ್ಪ ಪ್ರಾಣಪದಕವು ಹೋಗೆ | ನಾ ಬೇರೆ ಉಳಿಯೇನು ಇಲ್ಲಿ             || ೧೩೩ ||

ಬೇಡಯ್ಯ ಚಂದ್ರ ಪೋಗಿಲ್ಲ ಪರಮಾತ್ಮ | ಮಾಡೇನು ಮದ್ದು ಮಂತ್ರವನು |
ಕೇಳಿದಾ ಮಂತ್ರಿಯು ಕುಮುದಿನಿ ಕೇಳು | ಬೇಡಿದೊಸ್ತವ ತರಿಸಿ ಕೊಡುವೆ           || ೧೩೪ ||

ಎದ್ದಳು ರಣಮಾರಿ ದುರ್ಗಿಯಂದದಿ ಕುಳಿತು | ದೊಡ್ಡ ನಯನಗಳನು ತೆರೆದು |
ದೇವೇಂದ್ರ ಲೋಕದ ಪಾರಿಜಾತವ ಹೂವು | ಇತ್ತರೆ ಹೋಗುವೆ ಸಂದುದು ಗಹವು   || ೧೩೫ ||

ಅಳಿದಳೆನುತಲಿ ರಾಯ ಅಳುತಿರ್ದ ನೀ ಬೇಗ | ತರಿಯಯ್ಯ ಪಾರಿಜಾತವನು |
ಸುರಲೋಕದ ಹೂವನು ತಂದವಗೆ ನಾನಾಳ್ವ | ಧರಣಿಯೊಳರ್ಧವ ಕೊಡುವೆ       || ೧೩೬ ||

ಸುರಲೋಕ ಕಾಂಬರೆ ನಮಗೆ ಸಾಗದು ಎಂದು | ಪರಿವಾರವೆಲ್ಲ ಕರಮುಗಿಯೆ |
ಮರಳಿ ಪೇಳಿದ ಮಂತ್ರಿ ಮಗ ಹೊರತು ಮಿಕ್ಕವರು | ತರುವದಕೆ ಮೇಘವಾಹನವೆ  || ೧೩೭ ||

ರಾಯನು ಕರೆಸಿದ ಕುಮಾರನ ಬೇಗದಿ | ಬೇಡುವುದು ಪಾರಿಜಾತವನು |
ತಾಯಿತಂದೆಯ ಪ್ರಾಣ ಕಾಯಬೇಕೆಂದರೆ | ಹೋಗಬೇಕೆಂದನಾ ಪಿತನು            || ೧೩೮ ||

ಜನನಿಯ ಅನುವಿಂಗೆ ತನುವ [ನೀಯದ] ಮಗ | ನಿರ್ದು ಫಲವೇನೋ ಭೂಪ |
ಕರಮುಗಿದು ತರುವೆನು ದಿನವೇಳರೊಳಗಾಗಿ | ನಡೆಯಲು ಜಯಸೇನರಾಯ      || ೧೩೯ ||

ತಿಳಿದೇನೊ ಕರಬಲ ಮಾಡಿದ ಬುದ್ಧಿಯ ರಾಯ | ತರಳೆ ಮಾಡಿದ ಕಾಲಗತಿಯ |
ನರಲೋಕ ಯಾವಲ್ಲಿ ಸುರಲೋಕ ಕಂಡವರು | ಮರಳುವರೆ ಮರ್ತ್ಯವ ಜನರು      || ೧೪೦ ||

ಪಾರಿಜಾತದ ದೇವೇಂದ್ರಲೋಕದಿ ತರಲು | ಕೋಟಿ ರಾಕ್ಷಸರು ಆ ವನಕೆ |
ಹೊಲವನು ಹೋಗುವ ಮೇಲ್ಗೆಯ ಲಾಲಿಸು ಭೂಪ | ಕುಮಾರಗೆ ಬರುವ ಸಂಪದವ || ೧೪೧ ||

ರಾಯನು ಜಯಸೇನ ಏರಿದ ವಾಹನವ | ವಾಯುಗಮನದಿ ಬರುತಿರಲು |
ದಾರಿಯೊಳು ಮತ್ತೊಂದು ಮಂದಾಕಿನಿ ಪಟ್ಟಣವುಂಟು | ಹಾಳಾಗಿ ಸುವರ್ಣಮಯವು        || ೧೪೨ ||

ಲಯವಾದ ಕತೆ ಬೇರೆ ಮುನಿದು ಶಾಪದಿ ಒಬ್ಬ | ದನುಜನು ಜನಿಸಿ ಆ ಪುರವ |
ನರರನು ಸಂಹರಿಸಿ ಮದಸೂದರಾಯನ | ತನುಜೆಯ ಒಳಕೊಂಡಿಹನು            || ೧೪೩ ||

ಪುರವನು ಕಾಣುತ ಶಿರತೂಗಿ ಕುವರನು | ಹರವಿಹುದು ಹೊನ್ನ ಬೆಳ್ಳಿಗಳು |
ನರರ್ಯಾಕೆ ವರ್ಜಿತವು ಪರಿಯ ನೋಡುವೆನೆಂದು | ಒಳಹೋಗಲು ಸ್ತ್ರೀಯು ಶೋಕದಲಿ    || ೧೪೪ ||

ಕರುವಾಡದೊಳು ನಾರಿ ಸ್ವರದಿ ಕೋಗಿಲೆಯಂತೆ | ಹರನಿಗೆ ಮೊರೆಯಿಡುತಿರಲು |
ಪುರದ ಲಕ್ಷ್ಮಿಯು ಈಕೆ ಮರುಳು ಪಿಡಿಯೆ ಇಂದು | ಶಿರದೂಗಿ ನೋಡೆ ಗೃಹದೊಳಗೆ || ೧೪೫ ||

ಮದನಮೋಹಿನಿ ಕಂಡು ಬಿದಿಗೆ ಚಂದ್ರನ ಪೋಲ್ವ | ಜಯಸೇನರಾಯ ಕುವರನ |
ಮರೆದಳು ಶೋಕವ ಕಿ[ಟಿ]ಗೆ ಒತ್ತಿಗೆ ಬಂದು | ತರಳೆ ನೋಡಿದಳು ನಯನದಲಿ      || ೧೪೬ ||

ಹರಿಬ್ರಹ್ಮ ಹರನೋ ಈತ ಉರಿಗಣ್ಣನೊಳ್ಳಿದ | ತರಳ ಬಂದನೊ ಮನಸಿಜನೊ |
ನೆರೆ ನಾಚಿದಂತೆ ನೋಡುವ ನಾರಿಯ ಕಂಡು | ನುಡಿಸಿದ ಜಯಸೇನರಾಯ        || ೧೪೭ ||

ದುಃಖ ಯಾತಕೆ ಮಾಳ್ಪೆ ನೀ ವೃತ್ತಾಂತವಡೆ ಎನಗೆ | ಹೊತ್ತು ಹೋಯಿತು ಮುಂದೆ ಪಯಣ |
ಪಕ್ಷಿವಾಹನನಾತ್ಮ ಎತ್ತಿಕೊಂಡರು ಬೆಳಗು | ಮುಟ್ಟಿಕೊ ತುಸು ಮಾತ್ರ ಪೇಳ್ವೆ        || ೧೪೮ ||

ಮಧುಸೂಧನ ರಾಯನ ತನುಜೆಯು ನಾನು | ಮದನಮೋಹಿನಿಯೆಂದು ಪೆಸರು |
ದನುಜನ ಕಾಲಿಂದ ಲಯವಾಗಿ ಈ ಪುರವು | ಎನಗಾಗಿ ಕಾಯ್ದುಕೊಂಡಿಹನು        || ೧೪೯ ||

ರಕ್ಕಸನ ಕೈಯೊಳಗೆ ಸಿಕ್ಕುವಳಾ ವ್ರತಭಂಗ | ಕೆಟ್ಟುದು ಎನುತ ತೋರುವುದು |
ಸೃಷ್ಟಿ ಪಾಲಕ ಕೇಳೊ ಶ್ರೀ ಗೌರಿಯೊಪ್ಪಿದಳೆಂದು | ಗೊತ್ತು ಮಾಡಿದೆ ಆರು ವರುಷ   || ೧೫೦ ||

ಉಪಚಾರದಿಂದವನ ಆತ್ಮ ನೆಲೆಗಳ ಕೇಳೆ | ಪಿತ ಹೇಳಿದ ವಾಕ್ಯ ಕೈಗೂಡೆ |
ಹತ ಮಾಳ್ಪೆ ದನುಜನ ಇಂದರು ದಿವಸಕೆ ಬರುವೆ | ಕಡೆಹಾಯಲೆನ್ನಾಸೆ ಬೇಡ      || ೧೫೧ ||

ಗೆಲಬಹುದು ಕುಂತಿಯ ಹಿರಿಯ ಬಾಲನ ಪೋಲ್ವ | ಧರ್ಮಜನೆ ಎನ್ನ ಪುಣ್ಯದಲಿ |
ಗೆಲುಶ್ರಯವ ನಯನದಿ ಜಲ ತುಂಬಿ ಕಳುಹಲು | ಹೋಗೆನುತಾ ಅವಳು             || ೧೫೨ ||

ಒಂದೆರಡು ಪಯಣಕೆ ಬಂದನು ಜಯಸೇನ ದೇ | ವೇಂದ್ರನ [ವ]ನದ ಆಶ್ರಮಕೆ |
ಕಂಡ ಭಾಸ್ಕರರಾಯ ಹೆಂಗಳರಸೆರ ಕೂಡಿ | ಬಂದ ಜಲಕ್ರೀಡೆಯಾಡಲ್ಕೆ            || ೧೫೩ ||

ಕಾದಿರಲು ಆ ಸಮಯ ತನಗಾಗಬಲ್ಲದೆ | ಎಂದು ಹೋಗಿ ಎರಗಲು ಸಾಷ್ಟಾಂಗ |
ರಾಯ ಭಾಸ್ಕರ ಕಂಡು ಹೇಳಯ್ಯ ನೀ ಬಂದ | ಕಾರ್ಯ ಸ್ಥಿತಿಗಳನು ಪೇಳೆನಲು     || ೧೫೪ ||

ಪಾರಿಜಾತವು ಹೂವು ತಾಯಿ ತಂದೆಗೆ ಬೇಕಾಗೆ | ನಿಮ್ಮ ಪಾದದರುಶನಕೆ ನಾ ಬಂದೆ |
ಗಹಗಹಿಸಿ ನಗುತಲಿ ಪಾರಿಜಾತದ ಹೂವ | ಸಾಗುವ ಪರಿ ಹೇಗೆ ನಿನಗೆ              || ೧೫೫ ||

ಮರುಳ ಪುತ್ರನೆ ಕೇಳು ನಿನ್ನ ಬಿಡುವರೆ ದೈತ್ಯರು | ಪರಿಮಳ ಸೂಸೆ ಜೀವನವು |
ಧರಯೊಳಗೊಯ್ದುಂಟೆ ಶರೀರಕ್ಕೆ ಮುನಿದಿನ್ನು | ಕಳುಹಿರ ಬಗೆಬೇಡ ಹೋಗು        || ೧೫೬ ||

ಹೋಗೆನಲು ಜಯಸೇನರಾಯ ಕಿರಿಮುಖವಾಗೆ | ಶ್ರೀಯುತಿರ್ದ…..ನಮಸ್ಕರಿಸಿ |
ಪ್ರಾಣಕಾಂತನೆ ನಿಮಗೆ ಘನಬಹುದೆ ನಿಮಗಿನ್ನು | ಜಯಪಾಲನ ಬರಿದೆ ಕಳುಹಿದರೆ  || ೧೫೭ ||

ಯಾವಾಕ್ಷತು ಕರೆ ಮುನ್ನ ಕುಮಾರನ ಕಳುಹಿದರೆ | ನೀವಿಂತು ಇವನ ಸಾಗಿಸಲು |
ಪೇಳಿದ ಬಾಯೊಳು ಧೂಳು ಬೀಳದ ಸ್ವಾಮಿ | ಪಾದಕ್ಕೆ ಕೀರ್ತಿಯು ಬಹುದು         || ೧೫೮ ||

ಸತಿಯರ ಮಾತಿಗೆ ಅತಿಮೆಚ್ಚಿ ಭಾಸ್ಕರನು | ತರಿಸಿದ ಪಾರಿಜಾತವನು |
ಭರಣಿಯೊಳಗೆ ತುಂಬಿ ಬಾಯ ತೆಗೆಯಲು ಬೇಡ | ಪುರವ ಸೇರುವ ಪರಿಯಂತ್ರ     || ೧೫೯ ||

ಆಂ ಬುದ್ಧಿಯೆನ್ನುತ್ತ ಅಡ್ಡಬಿದ್ದನು ಜಯಸೇನ | ಇದ್ದನು ತನ್ನ ಪಥವಿಡಿದು |
ಮೋಡ ದನುಜಗೆ ಮುನ್ನ ಮದನ ಕಾಮಿನಿ ಮಾಳ್ಪ | ಸ್ವರ್ಗದುಪಚರಗಳ ಕೇಳೆ      || ೧೬೦ ||

ಒತ್ತುವ ಎಣ್ಣೆಯ ಎರೆವಳು ನೀರನು | ಕಸ್ತುರಿ ಪುಣಗು ಪೂಸುವಳು |
ಉತ್ತಮ ಭೂಷಣವ ಹೊದಿಸಿ ವೀಳ್ಯವ ಕೊಡಲು | ಚಿತ್ತದಿ ದನುಜ ಹಿಗ್ಗಿದನು          || ೧೬೧ ||

ಕಂಡರೆ ಸೇರದ ಕಾಮಿಗೆ ಕರೆಗೂಡಿ ಹಂಬಲಾಯಿತು ದನುಜನಿಗೆ |
ರಂಭೇ ನೋಡಲು ಎನ್ನ ವುತ ನೀರಿ ಬಂತೀಗ | ಒಂದುಗೂಡದೆ ಮೂರರೊಳಗೆ      || ೧೬೨ ||

ಹಗೆ ಬಾಳ ದನುಜರು ಮರಣಕಂಡರೆ ಮುಂದೆ | ತೆರ ನೀನು ನಾ ಬಾಳುವುದಕೆ |
ಜೀವರತ್ನದ ನೆಲೆಯ ಇರುವ ಸ್ಥಲವನು ಪೇಳೆ | ಇರುವೆನು ಯೋಕಾವದಲ್ಲಿ          || ೧೬೩ ||

ನಿಜವಹುದು ಎನುತಲಿ ಸರಿಗೂಡಿ ದನುಜನ | ಪರದೊಳು ನೀನಾಡಬೇಡ |
ಕರು ಮಾಡ ಮಧ್ಯದ ಕಳಸದೊಳಿರುವುದು | ತಾ ಮಲಗೆ ಗುರುತು ಇರುವುದು      || ೧೬೪ ||

ಮದನಮೋಹಿನಿಯೊಳು ನೆಲೆದೋರಿ ದನುಜನು | ನಡೆಯಲು ತನ್ನ ಹಾರಕ್ಕೆ |
ಈ ಕೇತಿ ರೂಪನ ಜಯಸೇನ ಬರಲು ಪೇಳೆ | ಜೀವರತ್ನದ ಕಳಸದೊಳಗೆ           || ೧೬೫ ||

ಅನಿತದಿ ಸೂರ್ಯನು ಕಡಲಿನ ಸ್ಥಾನಕೆ ನಡೆಯೆ | ದನುಜ ಸೇರಲು ಮನೆಯ |
ತನು ನಿದ್ರೆ ಮಾಳ್ಪಾಗ ಕಳಸ ತುಂಡಿಗೆ ಹೊಡೆದು | ತೆಗೆದನು ಜೀವರತ್ನವನು       || ೧೬೬ ||

ಮರಣವಾಗಲು ದೈತ್ಯ ಕರಕೊಂಡು ನಾರಿಯನು | ನಡೆಯಲು ತಮ್ಮ ಪಟ್ಟಣಕೆ |
ಹಡೆದ ತಂದೆಗೆ ಹೂವ ತಂದಿತ್ತು ಸ್ತ್ರೀಯನು ತೋರಿ | ಇರುತಿರಲು ಮದಿವಾಗಿ ಸುಖದಿ       || ೧೬೭ ||

ಕೇಳಯ್ಯ ಕಂಪಿಲಕುಮಾರನ ಸಾಹಸವ | ಮಾಡಿದ ಕುಹಕ ಕುಮುದಿನಿಯ |
ಹೇಳೆ ತನ್ನಯ ಪ್ರಧಾನಿಯೊಡನೆ ಮತ್ತೆ | ನೀಗಿಕೊಂಬೆನು ಪ್ರಾಣವನು               || ೧೬೮ ||

ದೇವೇಂದ್ರಲೋಕದ ಪಾರಿಜಾತವ ತಂದು | ಲಾವಣ್ಯ ಲಲಿತಾಂಗಿ ಸಹಿತ |
ಮೇಲನಗೆ ಉಳಿವುಂಟೆ ಜೀವಬಿಡುವೆನೆನಲು | ತಿಳಿದವಗೆ ಜೋಡಿಸುವೆ ನಾನೊಂದ || ೧೬೯ ||

ಹಿಂದಳ ಪರಿಯಾಗಿ ಮುಂದೆ ವೇಷವ ಮಾಡಿ | ಸಂದವರ ಸುರಧೇನು ಬೀಡು |
ದಿಂಡುರುಳು ಹೊರಳಲು ವಿಜೇಂದ್ರನು ಕಣುಗೆಟ್ಟು | ಮುಂದೇನು ಬೇಕೆನುತ ಪೇಳೆ  || ೧೭೦ ||

ಯಮನಲ್ಲಿ ಇರುತಿರ್ದ ಸರುಧೇನು ತಂದರೆ | ಉಳಿವುದು ಎನ್ನಯ ಪ್ರಾಣ |
ಕರೆಸಿದ ಜಯಸೇನರಾಯಗೆ ಪೇಳಲು | ತುರವೆನು ಮೂರು ದಿನದೊಳಗೆ            || ೧೭೧ ||

ಮದನಮೋಹಿನಿಯೊಡನೆ ಹದನವೆಲ್ಲವ ಪೇಳೆ | ಹಡೆದ ತಂದೆಯು ಹಗೆ ನಿನಗೆ |
ಹೊಗೆ ಕೊಂಡವ ಮಾಡಿ ಜನಜಾತ್ರೆ ಕಾಂಬಂತೆ | ಮಡಿಯಲು ಜಯಸೇನ ಹೋಗೆ   || ೧೭೨ ||

ಹರಜನರು ಪುರಜನರು ದೊರೆ ಪುತ್ರನಳಿದನೆಂದು | ಅಳಲುತ ತಮ್ಮ ಮನದೊಳಗೆ |
ಬರೆಯಲು ಲೇಖನವ ಮದನಮೋಹಿನಿ | ತಂದೇನಂದಾ ಕುಮುದಿನಿಯ             || ೧೭೩ ||

ಎರಡೆಂಬ ದಿವಸದಿ ದಿವರಾತ್ರಿಯೊಳಗೆ ಬಂದು | ಮಲುಹಣಿ ಮಾಂಸಗಳ ಕೋಡಿ |
ಮದನಮೋಹಿನಿಯಾಗ ಜೀವರತ್ನವನಿಡಲು | ಹೊರಡಲು ಜಯಸೇನರಾಯ        || ೧೭೪ ||

ಸುರಧೇನು ಕರಕಿತ್ತು ಬರೆದ ಲೇಖನವ | ಕೊಡು ನಿಮ್ಮ ಪಿತನಿಗೆ ಎನಲು |
ಸಡಗರದೊಳು ಬಂದು ಕುಮಾರನು ಕೊಡವಾಗ | ಬೆರಗಾದರಾಗ ಸಭೆಯೊಳಗೆ     || ೧೭೫ ||

ಓದಲು ಲೇಖನವ ಮಾವ ಅತ್ತೆಯ ಹೆಸರು | ನಾವು ಕ್ಷೇಮದಲಿರುತಿಹೆವು |
ನಾನು ಕಳುಹಿದೆನು ಕುಮಾರರೊಡನೆನ್ನಲು | ಮಂತ್ರಿಯು ಕುಮುದಿನಿಯು ಸಹಿತ   || ೧೭೬ |

ದಿನ ಮೂರರೊಳಗಾಗಿ ಕಳುಹಲು ಹಿಂದಕ್ಕೆ | ಕಳುಹಯ್ಯ ವಿಜಯರಾಜೇಂದ್ರ |
ಸೊಸೆಯು ಮಂತ್ರಿಯ ನೋಡಿ ಬಹುಕಾಲ ತುಂಬಿತು | ಇಂತಿದು ನಿಮಗೆ ಶರಣಾರ್ಥಿ         || ೧೭೭ ||

ಕೇಳುತ ಕುಮುದಿನಿ ಹೋಗಿ ಬರುವೆನು ಬೇಗ | ಜೋಡಿಗೆ ಮಂತ್ರಿ ಇರುತಿಹನೆ |
ರಾಯ ವಿಜಯೇಂದ್ರನು ತನುಜ ಬಾ ಎನುತಲಿ | ಬೇಡೆನಲು ಕುಮಾರನ ಪಿತನು    || ೧೭೮ ||

ಅಷ್ಟರಲಿ ಬಂದವರು ಸತ್ಯ ಹೋಗುವ ಮಾತು | ಉತ್ತರವ ಕೊಡುವ ಹೀಗೆನುತ |
ಮತ್ತೊಮ್ಮೆ ಕರೆದೊಯ್ಯಲೆ ಬಿಟ್ಟುಕೋ ಆ ಮಾತ | ಹೊಕ್ಕು ಬರಲು ಇವರು ಹೋಗಿ  || ೧೭೯ ||

ಕೆಂಡಕೊಂಡವ ಮಾಡಿ ಮುಂದೆ ಕುಮುದಿನಿ ಮಂತ್ರಿ | ಮಿಂದುಟ್ಟು ಮಡಿಯೊಳು ಹೊಗಲು |
ಕಂಡರು ಯಮಲೋಕ ಕತ್ತೆಸೂಳೆಯು ಕೆಟ್ಟು | ಚೆಂದವ ನೋಡೊ ಕಂಪಿಲನೆ        || ೧೮೦ ||

ನಾರಿಯರ ಮನ ಚಿತ್ತ ಹೀಂಗೆ ಇರುವುದು ಸ್ವಾಮಿ | ರಾಮನೊಳಗೆ ಆಗಲರಿದು |
ಹೀಗಲ್ಲ ಎಲೆ ಮಂತ್ರಿ [ನಾಡ] ಮಾತು ಸುಡಲಿ | ಹೋಗಿ ನೋಡವಳ ಕುಚಕಾಯ    || ೧೮೧ ||

ಕೋಣನ ಮುಂದೊಮ್ಮೆ ವೀಣೆ ಸ್ವರ[ವ]ನು ಮಾಡೆ | ಪೇಳೆಂದ ಗಾದೆ ಆ ಕ್ಷಣಕೆ |
ಓದಿದ ಗಿಳಿ ತನ್ನ ಅಮೇದ್ಯವ ತಿನುವಂತೆ | ಆಡಿ ಮಂತ್ರಿಯು ಮನದೊಳಗೆ          || ೧೮೨ ||

ಇನ್ನೇನು ಪೇಳಯ್ಯ ನಿನ್ನ ಆತ್ಮದ ಭಾವ | ಎನ್ನ ಮಾತುಗಳು ಕಿವಿ ಹೊಗದು |
ಕಳ್ಳೆಯರ ನಡೆವಳಿಯ ಕ[ಥೆ] ಮೂಲದಿ ಪೇಳೆ | ನಿನ್ನ ಬುದ್ಧಿಗಳು ಮರೆದಿಲ್ಲ          || ೧೮೩ ||

ಭೇದವ ತಿಳಿಯದೆ ಆಡುವೆ ಎಲೆ ಮಂತ್ರಿ | ಹೋಗುವ ಒಳಮನೆತನ |
ನೋಡವಳ ಇರತಿಯ ಪ್ರವೀಣನಲ್ಲವೆಯೆಂದು | ಜೋಡಿನೊಳವರು ಐತರಲು       || ೧೮೪ ||

ಬಾರೆನ್ನ ಬೈಚಪ್ಪ ಸೋದರ ಬಳಗವೆ | ಸೇರುವೆ ಸ್ವರ್ಗದ ಪದವ |
ನೀನೆಲ್ಲ ಇದ್ದು ನಾ ಸಾಯಲ್ಕೆ ತೆರಬಂತು | ಹೋಗಿನ್ನು ಪತಿವ್ರತ ಭಾವ              || ೧೮೫ ||

ನೋಡಯ್ಯ ಮಂತ್ರಿ ಅಣ್ಣಾಜಿಯವಲ್ಲವೆ ನೀನು | ಮಾಡಿರುವ ಕುಚದ ಗಾಯವನು |
ಈಡೆ ರಾಮಗೆ ನಾನು ಇಲಿಯು ಬೆಕ್ಕಿಗೆ ಸಿಕ್ಕಿ | ನೋಡೋರು ಫಲವಿತ್ತ ನಿಮ್ಮ        || ೧೮೬ ||

ನರ ಮನುಜ ಎನುತಿರ್ದೆ ಕರ ಚೆಲ್ವ ಭಾವಿರಲು | ಅರಿಯದೆ ನಾ ಮರುಳರಂಡಿ |
ತೆಗೆದಪ್ಪಿ ತಬ್ಬಲು ಹುದುಗಿ ಹಲ್ಲಿಯ ತೆರದಿ | ಮರನಾದೆ ಸ್ಮರಣೆಯ ಮರೆದು        || ೧೮೭ ||

ತೋರಲೆ ಎಲೆ ಮಂತ್ರಿ ಸೀರೆ ಸೆರಗನು ತೆಗದು | ಸಾಲದು ನಿನಗೆ ನಿಜಕರವು |
ಆಗಲೊ ಈಗಲೊ ಕಳಲೇರಿ ಬರುತಿದೆ ಜೀವ | ಮೋರೆ ನೋಡದೆ ಅಳಿಯಲೇನೊ   || ೧೮೮ ||

ಕಂಡದು ಇದು ತಾಯಿ ಕಳವಿನ ಠೌಳಿಯ | ಪುಸಿಯೆಂಬರೆ ಶಿಶು ಬಾಲ ಮೊದಲು |
ಮುಂದೇನು ಅವನಿಗೆ ಮಾಡೊ ಆಜ್ಞೆಯ ಪೇಳಿ | ಗಂಡ ಹೆಂಡಿರು ಸರಿಗೂಡಿ         || ೧೮೯ ||

ದೃಷ್ಟ ಕಂಡೆಯೊ ಮಂತ್ರಿ ಬೆಪ್ಪು ಮಾಡಿದೆ ಎನ್ನ | ಮುಕ್ಕು ಮೂಳಗಳ ಕಥೆ ಹೇಳಿ |
ತಪ್ಪೇನೊ ಇದು ಮಂತ್ರಿ ಅಪರಾಧ ಆಜ್ಞೆಯ ಮಾಡಿ | ಹುಚ್ಚು ಜಾಣ ಕೈಲಿ ಕೇಳ್ವೆ     || ೧೯೦ ||

ತಪ್ಪಿ ನಡೆಯಲು ಮಂತ್ರಿ ಪೃಥ್ವಿಯೊಳಪರಾಧ | ಒಪ್ಪೀತೆ ಈ ಕರ್ಮ ನಿನಗೆ |
ಹೆತ್ತ ತಂದೆಯ ಸತಿಯ ತಕ್ಕೈಸಿದ ಮೂಳನ | ಕುಟ್ಟಿ ಹಾಕಯ್ಯ ತಲೆಯನು          || ೧೯೧ ||

ಚೆಂದವಾಯಿತು ಎಂದು ಚದುರ ಮಂತ್ರಿಯು ತನ್ನ | ಮಂಡೆಯ ತೂಗಿ ಮನದೊಳಗೆ |
ಹಿಂದಿವನಾ ಗುರು ಮುನಿಯು ಬಂದು ಹೇಳಿದ ಮಾತು | ಕಂಡಿರಿತಾಯಿತು ಲಿಖಿತವನು      || ೧೯೨ ||

ಮಗನ ಕೊಲ್ಲಲು ತಾಯಿ ಮಾತೆಲ್ಲಿ ನಡೆವುದು | ಅಡಗೂದೆ ಶಶಿ ಸೂರ್ಯರುಳ್ಳನಕ |
ಕಡೆಗೆ ತಿಳಿವುದು ಬುದ್ಧಿ ಗಗನ ಮುಟ್ಟಲಿ ದುಃಖ | ಅಳಿದವನು ಬೇರೆ ತಿರುಗುವನೇ    || ೧೯೩ ||

ಕಂದ ಬೇಡವೊ ಮಂತ್ರಿ ನಿಂದೆಗಳ ಹೊರಬಹುದೆ | ಹಿಂದಣಾಗಮವ ಕೇಳಿಲ್ಲವೆ |
ಒಂದು ಯೋಗ್ಯದ ತುರಗ ಬಂದು ಸೇರಲು ಪಾರ್ಥ | ಕೊಂದು ಕಳೆವ ನೃಪರೆಲ್ಲ     || ೧೯೪ ||

ಕುದುರೆಯ ಪಣೆಯೊಳು ಬರೆದ ಲೇಖನಗಳ | ನಡೆಯೋನೆ ಕದನ ಕಾಳಗಕೆ |
ಪೊಡವಿಗೆ ಗುರುತಾದ [ಚಂಪಕ]ಪುರಕಾಗಿ | ನಡದೂದು ಆ ಅಶ್ವ                    || ೧೯೫ ||

[ಚಂಪಕ]ಪುರದ ಭೂಕಾಂತ ಹಂಸಧ್ವಜನು | ಇಂತು ವರ್ಣಿಪರು ಸಾಹಸವ |
ಸಂತಾನ ಈರ್ವರು ಭೂಕಾಂತ ಕೇಳಿವನೆಂಬ | ಬಳಿಕವರು ಅಶ್ವನ ನಡೆಯೇ        || ೧೯೬ ||

ಬರೆದ ಲೇಖನ ಓದಿ ತುರಗವ ಕಟ್ಟಿಸಲು | ಹೊರಗಿಳಿಯೆ ಪಾರ್ಥವ ಬಲವು |
ಹೊಡೆಯಲು ರಣಭೇರಿ ದನುಜೇಂದ್ರ ಹಂಸಧ್ವಜವು | ಬಿಡಲಿನ್ನು ಹೊರಪಾಳ್ಯ ದಂಡ || ೧೯೭ ||

ಸಾರಲು ಪುರದೊಳು ರಣಭೂಪನಿಂದಿಳಿದ | ಮರಳಿ ಕಾದ ಕೆಲದಲಿ ನೂಕಿಸುವೆ |
ಶ್ರೋಣಿತಕುಳಿಯದೆ ವೀರ ಎಕ್ಕಟಿಗರು | ಕಾದಲವರ ಭೂಮಿಯಲಿ                   || ೧೯೮ ||

ಕಂಡನು ಸುಧನ್ವ ಪೊರಮಡುವ ಸಮಯದಲಿ ಅಂಗನೆ ತಡೆದು ನಿಲ್ಲಿಸಲು |
ಮುಂದೆಮಗೆ ಋತು ಸಮಯ ಕಂಡವರಾರು ಅಪಜಯವ | ಕಂಡಿಲ್ಲ ಫಲಸಾರ ತನಗೆ        || ೧೯೯ ||

ತರಳೆ ನೀ ಪೇಳುವುದು ಚೆಲುವ ಮಾತುಗಳಹುದು | ತನಗಿದು ಸಮಯ ಕಾಲಲ್ಲಿ |
ಹೊರಗ್ಹೋಗಿ ಪಿತನಿಹನು ಹಿಂದುಳಿದವರ ಕೆಲದಲಿ | ಮುಳುಗಿತೇನೆನುತ ಸಾರಿಹನು         || ೨೦೦ ||

ಕಾಂತನೆ ಕಾತರದ ಪ್ರಿಯವ ಸ್ತ್ರೀಯರ ಭ್ರಮೆಯ | ನಿಸ್ಕರಿಸಿ ಹೋಗಲು ಕಾರ್ಯ |
ನೀಕಾರ ಬಂದಪುದೆ ಅನೇಕ ತೆರದೊಳು ಪೇಳೆ | ಆಕೆ ಭೋಗದಿ ಸಂಗ್ರಹಿಸಿ          || ೨೦೧ ||

ರಣಭೂಮಿಯನು ಕೇಳಿ ಹಂಸಧ್ವಜನು ತನ್ನ | ಉಳಿದಿಲ್ಲವೆನುತ ನಗರದಲಿ |
ನುಡಿದನು ಅಲ್ಲೊರ್ವ ಸುಧನ್ವಯ ಇಲ್ಲೆನಲು | ಪಿಡಿತನ್ನಿರೆನಲು ಆರ್ಭಟಿಸಿ           || ೨೦೨ ||

ಯಮನ ದೂತನ ತೆರದಿ ಚರರಾಗ ಪರಿತಂದು | ಪಿಡಿದು ಹೆಡಗೂಡಿನೊಳು ತರಲು |
ಸಿಡಿಲಂತೆ ನೃಪನು ಏನೆಲವೊ ಎನ್ನಾಜ್ಞೆ | ತೃಣವಾಯ್ತೊ ಎನುತ ಕನಲಿ              || ೨೦೩ ||

ಕೇಳಲು ತನ್ನಯ ಪ್ರಧಾನಿಕರನೆಲ್ಲ | ಮಾಡುವೆ ಆಜ್ಞೆ ಉಸುರೆನಲು |
ಮಗನುಳಿಯೆ ಮಡಗುವುದು ಬಡವರ ಹಾಕಿಸಲು | ಮೃಡ ಮೆಚ್ಚನದಕೆ ನಿಮ್ಮೆಸಲು  || ೨೦೪ ||

ಖೂಳನ ಮಾತನು ಕಾದ ಎಣ್ಣೆಗೆ ಇವನ | ಹೋಗಿ ನೂಕೆನಲು ಆ ದನುಜ |
ಕಾಯ್ವ ತೈಲದಿ ಕಂಡು ಚರರು ಹಾಕಲು ಹರಿಯು | ಕಾಯ್ದನು ಕೇಳೊ ಬೈಚಪ್ಪ      || ೨೦೫ ||

ಮಗ ಮಾಡಿದ ಹಾದರವ ಮಡಗಿ ಮತ್ತೊಬ್ಬನು | ಬಡವ ಮಾಡಲು ಕೊಲ್ಲಬೇಕೊ |
ಗಿರಿಜೆ ರಮಣನು ಮೆಚ್ಚ ಹೊಡೆ ಮಂತ್ರಿ ತಲೆಯೆಂದು | ನುಡಿಯಲು ಭೂಪ ವಾಕ್ಯದಲಿ        || ೨೦೬ ||

ಸತ್ಯವಾಡಲು ನಾನು ಕತ್ತೆ ಬುದ್ಧಿಗೆ ನಡೆವ | ಲಿಖಿತದ ಫಲವೆಂದ ಮಂತ್ರಿ |
ಅಪರಾಧವಿರ್ದಡೆ ಅಳಿವ ರಾಮನು ಧರ್ಮ | ಪಥವಿರಲು ಸುಧನ್ವನಂತುಳಿವ        || ೨೦೮ ||

ಕೊಂದ ಮಗನನೆಂದು ನೊಂದುಕೊಳ್ಳವಿ ಕಡೆಗೆ | ಇಂದಿನ ಸಿಟ್ಟು ನಾಳಿರದು |
ಕಂದ ನಿನ್ನಯ ಬಸುರ ಪುಟ್ಟಲಿಲ್ಲವೊ ಅಭಯ | ನಂಬಿಕೆ ಕೊಳ್ಳೊ ಬಲದ ಹಸ್ತ        || ೨೦೯ ||

ತಲೆಯನು ಹೊಡೆಯೆಂದು ವೀಳ್ಯ ಅಪ್ಪಣೆಯಿತ್ತು | ತಿರುಹಿದ ಕಪಿಯಂತೆ ಮುಖವ |
ಅಳಿಯನು ಎಂದೆನುತ ತಜುಬಿಜಿಯ ಮಾಡಲು | ನಿನ್ನ ತೆಗಸುವೆ ಹಡಿಯ ಶೂಲದಲಿ         || ೨೧೦ || ಇ

ಆಡುವ ಕಡಕಿಡಲೆ ನೋಡಿದ ಮಂತ್ರಿಯು | ಏರಿತು ತಲೆ ಮದವು ಇವಗೆ |
ತಾವರೆ ಸಖ ಭಾನು ಕಳೆಗುಂದಿದ ತೆರದಿ | ಪ್ರಧಾನಿ ಬಂದನು ತನ್ನ ಮನೆಗೆ         || ೨೧೧ ||

ಬರುವಂಥ ಸಮಯದಿ ಮನದೊಳು ಗ್ರಹಿಸಿದ | ಹಲವು ಯುಕ್ತಿಯ ತಂತ್ರವನು |
ಇಡಬೇಕು ಮತ್ತೊಂದು ನೆಲಮಾಳಿಗೆಯೊಳು ಮಡಗಿ | ಕುರುಹಾಗೆ ಕಳ್ಳ ರಾಮನೊಯಿವಾ   || ೨೧೨ ||

ಪುತ್ರ ರಾಮನು ಮತ್ತೆ ಸತ್ತನೆಂಬುವ ಸುದ್ಧಿ | ಹುಟ್ಟದೆ ಡಿಳ್ಳಿ ಪಟ್ಟಣದಿ |
ಮುತ್ತನೆ ದಂಡನು ಸುರಿತಾಳ ಬರಲು ಇಲ್ಲಿ | ಅಟ್ಟುವರುಂಟೆ ಜಗಳದಲಿ             || ೨೧೩ ||

ಪಟ್ಟಣ ಸಲುವನ ಮಡಗಿರಲು ಕಾರ್ಯಗಳುಂಟು | ಮುತ್ತದೆ ತನಗುಳಿಯೆ ಪುರವು |
ಸೃಷ್ಟಿಗೆ ಅಳಿದಂತೆ ತಂದು ತಲೆಯನು ತೋರಿ | ಹುಟ್ಟಿದನೆನಿಸಿ ತೋರುವೆನು       || ೨೧೪ || ಇ

ಅನಿತರೊಳಗೆ ಸೂರ್ಯ ನಡೆಯಲು ಋಣಸಾರ | ಕಡಲ ಸ್ನಾನವನು ಮಾಡುವರೆ |
ಚದುರ ಮಂತ್ರಿಯು ತನ್ನ ಮನೆಯೊಳಗಿರುತಿರೆ | ಕಳವಳಿಸುತ ಮನದೊಳಗೆ       || ೨೧೫ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷ ಲಿಂಗ |
ತರಳ ರಾಮನ ಮಡಗಿ ಕಳ್ಳ ರಾಮನ ತರುವ | ಹೊಳವಿಗೆ ಹದಿಮೂರು [> ಹದಿನಾಲ್ಕು] ಸಂಧಿ       || ೨೧೬ ||[1]

[1] + ಅಂತು ಸಂಧಿ ೧೩[>೧೪]ಕ್ಕೆ ಪದನು ೨೯೬೪ಕ್ಕೆ ಮಂಗಳ ಮಹಾಶ್ರೀ ಶ್ರೀ ಶ್ರೀ.(ಮೂ)