[1]ಶ್ರೀ ಗಿರಿಜೆ ಅರಸನೆ ಭಾಗೀರಥೀಶನೆ | ಮೂಜಗವ ಪೊರೆದು ರಕ್ಷಿಪನೆ |
ವಾಸವ ಹರಿಯಜರು ಪಾದ ಶಿಖೆ ಕಾಣದ | ದೇವ ಕೊಡೆನಗೆ ಸನ್ಮತಿಯ             || ೧ ||

ಕಿವಿಯೆರಡು ಇಲ್ಲದೆ ನಯನದಿ ಕೇಳುವನ | ಆಭರಣ ಮಾಡಿ ಧರಿಸಿದನೆ |
ಹೊದೆಯಲ್ಕೆ ಇಲ್ಲದೆ ಗಜಚರ್ಮ ಪೊದ್ದಂಥ | ಅಭವ ಕೊಡನಗೆ ಸುಮತಿಯ          || ೨ ||

ಕರವಿರ್ದು ಮೂಗಿನೊಳ್ ತೆಗೆದು ಸವಿಯನುಂಬ | ವರಚಿಗ್ರಾಸದರು ಭೋಜನಕೆ |
ಸತಿಯರು ಇನವಲ್ಲದೆ ಸಲಹುತ ಕುಕ್ಷಿಯ ಮೂಷಕದೊಡೆಯ ಕೊಡುಮತಿಯ       || ೩ || *

ವಾಣಿಯೆ ಸುಗುಣ ಪ್ರವೀಣೆಯೆ ವಿದ್ಯೆಗೆ | ಭಾರತಿಯೆ ಬಂದು ಒಡಗೂಡು |
ತೋರಿದ ಮತಿಯೊಳು ಕೊಂಡಾಡುವೆ ರಾಮನ | ಕಾವ್ಯ ಕಥೆಯ ಸಾಗಿಸುವೆ        || ೪ ||

ಕಾಶಿ ಕೈಲಾಸಕ್ಕೆ ವಿಶೇಷವೆನಿಸುವ ಹಂಪೆ | ಗಿರಿಜೇಶ ವಿರುಪಾಕ್ಷಲಿಂಗ |
ಲೇಸನು ಕರುಣಿಸು ಪ್ರಾಸ ಬೀಳದ ಹಾಗೆ | ನಾಲ್ಕು ರಾಷ್ಟ್ರಕದಿ ನಡೆವಂತೆ           || ೫ ||

ರಾಮನ ಕೃತಿಯನು ಪೇಳ್ವೆನು ಲಾಲಿಸಿ | ಆಡದೆ ಕಲಹ ಮಾತುಗಳ |
ಮೋಹ [ನಿರಾಸಕ್ತ] ರಾಗಿ ಕೇಳದೆ ಬಲ್ಲವರು | ಪೇಳುವುದು ಮೂಢ ಮೂರ್ಖರಿಗೆ    || ೬ ||

ಚೆಂಡನಾಡಲು ರಾಮ ಕಂದನೇನೆ ಮನೆಯೊಂದು ಮುಂದುಗಾಣನೆ ಜನರು ನುಡಿಯೆ |
ಪಾಂಡವರ ಪುತ್ರರಿಗೆ ವನವಾಸ ತಂದವರಾರು | ವೊಂದರೆ ಅರಗಿನ ಮನೆಯ      || ೭ ||

ಪ್ರಾರಂಭ ಫಲವನು ಆರು ಮೀರುವರಳವೆ | ಯೋಗೇಂದ್ರನಾಗಲು ಬಿಡದು |
ಮೂರು ಮೂರ್ತಿಗೆ ಉಂಟು ಹಾನಿ ಅಪರಾಧಗಳು | ವಾಣಿಪತಿಯ ಶಿರಮುರಿ[ಯ]ದೆ         || ೮ ||

ಹಾನಿಯನರಿಯನೆ ಹಲವು ಜೀವರಾಶಿ | ಮಾಡುತನು ತನ್ನ ಕೇಡ                    || ೯ ||

ರಾಮನು ಚೆಂಡಾಡಿ [ಕೆಡೆ] ದನೆಂಬುವರು | ಭೇದವ ತಿಳಿಯದ ಲೋಕ |
ಮಾದೇವ ಮುಂತಾಗಿ ಮನೆಮನೆ ತಿರಿದುಂಡ | ಪಾಡೇನು ನರರ ಪಾಟುಗಳು       || ೧೦ ||

ಜಾನಕಿಯ ಕಾಲಿಂದ ರಾವಣನಳಿದನೆಂದು | ಆಡುವ ಜನ ವಾಕ್ಯವೆ[ಲ್ಲ]
ಬೇರವರ ಕಥೆಯಿಂದ [ರಾಮ ರಾವಣ] ಕೊಂದು | ನ್ಯಾಯ ತೀರಿತು ಲಂಕೆಯೊಳಗೆ || ೧೧ ||

ರಾಮಗೆ ವಿಧಿವಾಸ ಈಗ ಆದುದು ಅಲ್ಲ | ಪೂರ್ವದ ಹಗೆ ಜನ್ಮ ರತ್ನಿ |
ನಾಯಕಿ ಬಂದಿವನ ಕಾಡುವ ಪರಿಯೆಂದು | ನೋಡುವರು ಬಲ್ಲ ಜ್ಞಾನಿಗಳು          || ೧೨ ||

ಅಳಿದವನು ಇಂದ್ರಗೆ ನಡೆಯೆ ಕುಕ್ಕುಟವೆಂದು | ತಿರುವಿಡಿದು ರವಿ ಪ್ರಕಾಶ
ತರಳೆ ರತ್ನಿಯು ಎದ್ದು ತಡವರಿಸಿ ಎಡಬಲವ | ಮಾರ ರೂಪನೆ ಹೋದೆಯೆನುತ    || ೧೩ ||

ಮಾರಿಯಾಕಾರಕ್ಕೆ ಸೀರೆ ಇಲ್ಲದೆ ಕುಳಿತು | ತೀರಲಿಲ್ಲವು ತನ್ನ ಮೋಹ |
ಮಾರನ್ಹೋದನು ಓಡಿ ತೋರಿ ಬಯಲಾದಂತೆ | ಹೋದನೆ ಚೆನ್ನಿಗ ರಾಮ           || ೧೪ ||

ಸಿಕ್ಕಿದ ಸೆರಗನು ಒತ್ತಿಕೊಳ್ಳಲು ಬಿಗಿದು | ಬಿಟ್ಟುದು ತನ ಮಾತು ಹೊದ್ದು |
ಕುತ್ತಿಗೆ ಕೊರೆಯೆಂದು ಬಿಗಿ ಅಪ್ಪಿಕೊಳ್ಳದೆ | ಬೇಗ ಕುತ್ತಿಗೆಯನ್ನು ಬುದ್ಧಿ                || ೧೫ ||

ಹರನೊಳು ಪಡೆಯದೆ ದೊರೆಯಬಲ್ಲನೆ ತನಗೆ | ಮರುಳಾಟವಾಡುತ ಬೊಗಳುತಲಿ |
ನೆರೆ ನೋಂಪಿ ಪಾರ್ವತಿಯ ತಪಸಿರದೆ ಬಯಸಿದರೆ | ಕಡು ಪಾಪಿಗವನು ಸಿಕ್ಕುವನೆ || ೧೬ ||

ಮಿಕ್ಕು ಮಾತಿಗೆ ಇನ್ನು ದುಃಖಮಾಡಲು ಸಲ್ಲ | ನಕ್ಕಾರು ಎನ್ನ ಸರಿಯವರು |
ಸಿಕ್ಕದೆ ಹೋದವನ ಶಿರವ ತರಿಸದ ಮೇಲೆ | ಹೊತ್ತ ಮೊಲೆಗಳ ಮೆಕ್ಕೆ ಕಾಯಿ        || ೧೭ ||

ಕಾಮನ ತಾಪವ ತಾಳಲಾರೆನೆ ಸಂಗಿ | ಹೇಳಿಕೊಂಡಳು ದೈನ್ಯ ಬಿಟ್ಟು |
ಸೇರದೆ ಗಂಡಗೆ ಬೇರೆ ಮನಗಳು ಬಿಡಲು | ಕಾಲಿಲೊದ್ದಂತಾಯ್ತು ಬದುಕು          || ೧೮ ||

ಇನ್ನವನ ಬಿಡಲಿಕ್ಕೆ ಹೆಣ್ಣುತನಕೆ ಹೀನ | ತನ್ನ ಶಿಕ್ಷಿಸುವ ಪಿತಗ್ಹೇಳಿ |
ಹಣ್ಣ ಮುದಿಯನು ಅರಮನೆಯ ಹೊಗುವುದರೊಳಗೆ | ಹಣ್ಣಬೇಕೆನ್ನ ಕಾರ್ಯವನು    || ೧೯ ||

ಇನ್ನೇಕೆ ಬಿಡುವುದಕೆ ರಾಮನ ಅತಿ ಆಸೆ | ಕೊ[ಲ್ಲು]ವ ಬುದ್ಧಿಯ ಗ್ರಹಿಸು |
ಕಳ್ಳ ದುಃಖವ ಮಾಡಿ ಕಂಪಿಲಗೆ ಛಲ ಬರುವಂತೆ | ಬಣ್ಣಗೆಡಿಸಬೇಕು ಭಾವಗಳ      || ೨೦ ||

ನಾನಾ ಟೌಳಿಯ ಮಾಡಿ ಪ್ರಾಣ ಕೊಲ್ಲದೆ ಬಿಡೆನು | ಮೇಲಿಹುದು ಬಡಿಗಲ್ಲು ತನಗೆ |
ತಾ ಮುಂದುವರಿಯಲು ತೀರುವುದು ಹಗೆತನ | ನಾ ಗರತಿ ಭಾರ ತಪ್ಪುವುದು       || ೨೧ ||

ಇಟ್ಟ ಆಭರಣವ ಕಿತ್ತಳು ಮುರಿದಿನ್ನು | ಇಟ್ಟಳು [ಮಂಚ]ದೆಡ ಬಲಕೆ |
ಪಟ್ಟೆಯ ಸೀರೆಯ ಜಾಗಿಸಿ ತಾ ಹರಿದು | ತೊಟ್ಟ ರವಿಕೆಯ ಪುಡಿಮಾಡಿ              || ೨೨ ||

ಪೊಗರುವ ಕುಚಗಳನು ಉಗುರಿಂದ ಸೀಳಿದಳು ಸುಗುಣ ವಿಟಬಂದು ನೆರೆದಂತೆ |
ಕದಪು ಗಲ್ಲವ ತುಟಿಯ ಕಡಕೊಂಡು ಮಂಡೆಯ | ಕೆದರಿ ಕಿತ್ತಳು ಕೇಶಗಳ           || ೨೩ ||

ಮನ್ಮಥ ಬಂದು ಕಂದಿದ ತೆರದೊಳು | ಕರಗಿಸಿ ಕಳೆಯ ಕಾಂತಿಯನು |
ಹರಣ ನೀಗುವಳಂತೆ ಕೊರಗುತ ಮಂಚದಲಿ | ಒರಗಿದಳು ಉರಿಮಾರಿಯಾಗಿ      || ೨೪ ||

ರಾಯನ ಬಳಿಯಿಂದ ಆಳು ಬಂದರೆ ಸಂಗಿ | ಹೇಳಮ್ಮ ಹರುಷವಿಲ್ಲೆಂದು |
ರಾಯ ಕಂಪಿಲಭೂಪ[ನ] ಬೇಂಟೆ ಸಂಭ್ರಮವ | ಲಾಲಿಸಿ ಬಲ್ಲ ಜ್ಞಾನಿಗಳು           || ೨೫ ||

ಬೆಟ್ಟವನೇರಿ ಬೆಟ್ಟದಿ ಕಂಪಿಲ [ರಾಯ] | ಬಿಟ್ಟನು ಮೊಲಕೆ ನಾಯಿಗಳ |
ಅಟ್ಟಲು ಮೊಲನೆದ್ದು ನಾಯಿ ಮುರಿದೋಡಲು | ಮತ್ತೆ ಕಂಪಿಲನು ಬೆರಗಾದ         || ೨೬ ||

ಕೇಡಿಗೆ ಮೊದ[ಲಿದು] ಹಾಳು ಬೇಟೆಗೆ ಬಂ[ದೆ] | ಏನೆಂದು ಶಿವ ತಾನೆ ಬಲ್ಲ |
ನಾರಿಗೆ ತೋರ್ವುದೊ ತನಗೆ ತೋರ್ವುದೊ ರತ್ನಿ | ಪ್ರಾಣವಳಿದಳೊ ನಾನು ತಡೆಯೆ         || ೨೭ ||

ಬಾರಗೊಡದೆ ಶೋಕದಿ ನಳಿನಾಕ್ಷಿ ಪೇಳಿದಳು | ಬಲುಮೆ ಸಾಧನದಿ ನಾ ಬಂದೆ |
ದಿನ ಎರಡು ಅಪ್ಪಣೆಯ ಕರೆಕರೆಯಿಂದಲಿ ಇತ್ತೆ | ಮರೆದೆನು ಮಂದಮತಿಯೊಳಗೆ    || ೨೮ ||

ಸಾಯದೆ ಉಳಿಯಳು ಕೋಣನಾದೆನು ನಾನು | ಪ್ರಾಣಮಿಕ್ಕಿ ಮೋ[ಹಿ]ತ[ಕೆ] |
ಹೇಳಿದ ಅಪರಾಧ ಕೊಟ್ಟು ದೈನ್ಯಗಳಿಂದ | ಪಾಲಿಸೆನುತ ಪೇಳುವೆನು               || ೨೯ ||

ಗಡ ಮುಗಿಸಿದ ಬೇಂಟೆ ರಾಣಿರತ್ನಿಯ ನೆನೆದು | ಜೀವಂತ ಮೃಗವನ್ನು ಹಿಡಿಸಿ |
ಪ್ರಾಣದ ಕಾಂತೆಗೆ ಕೈಗಾಣಿಕೆ ಕೊಟ್ಟು | ಮಾನಿನಿಯ ಮುನಿಸ ತಿಳುಹುವೆನು         || ೩೦ ||

ಕಸ್ತುರಿಯ ಮೃಗಗಳು ಕಡವೆ ಕೋರಂಗಿಯ | ಉತ್ತಮದ ಪುಣಗಿನ ಬೆಕ್ಕು |
ನೆಟ್ಟನೆ ಇವನೊಯ್ದು ಮುಂದಿಟ್ಟು ಎನ್ನಯ | ತಪ್ಪನೊಪ್ಪಿಕೊ ಎನುತ ಪೇಳುವೆನು    || ೩೧ ||

ಕರಿ ತುರಗ ಕಾಲಾಳು ಮೆರೆದು ಆರ್ಭಟಿಸುತ್ತ | ತಿರುಗಿದ ತನ್ನ ಪಟ್ಟಣಕೆ |
ಗಡಿ ರಾಜ್ಯ ಸೀಮೆಗಳ ದಾಂಟಿನ್ನು ನಡೆದನು | ಮುಂದಕೆ ನಡೆದ ಹ[ರುಷ]ದಲಿ      || ೩೨ ||

ಹೊಡೆವ ತಂಬಟೆ ಭೇರಿ ಭೋರಿಡುವ ಬಿರಿದಿನ ಕಹಳೆ | ಅಡಿಗಡಿಗೆ ಸಾರುವ ಭಟರು |
ಪಡುವಣಾದ್ರಿಯ ಸೂರ್ಯ ತಾಯೊಡಲಿಗೆ ಇಳಿವಂತೆ | ಒಡನೆ ಹೊಕ್ಕನು ತನ್ನ ಪುರವ       || ೩೩ ||

ಬಂದು ಹಜಾರದ ಮುಂದೆ ನಿಂದನು ರಾಯ | ಮಂದಿ ಮಾರ್ಬಲವ ನೋಡಿದನು |
ಇಂದು ಬೇಂಟೆಯನಾಡಿ ಬಳಲಿ ಬಂದಿರಿ ಪೋಗಿ | ಎಂದು ಎಲ್ಲರ ಕಳುಹಿದನು       || ೩೪ ||

ಹೋಗಯ್ಯ ಬೈಚಪ್ಪ ಬಾದುರಖಾನ ಬಳಲಿದಿರಿ | ಹೋಗಿರೈ ಸರುವ ಮನ್ನೆಯರು |
ಉಡುಗೊರೆ ವೀಳ್ಯವ ಕೊಡಿಸಿ ರಾಜೇಂದ್ರನು | ಅಹುದೆ ಕುಂಜರವನು ಇಳಿಯೆ       || ೩೫ ||

ರಾಯಗೆ ರತ್ನಿಯ ಪ್ರಳಾಪವು ಘನವಾಗಿ | ಸಾಗಿದ ದೊಡ್ಡರಮನೆಗೆ |
ರಾಣಿ ಹರಿಹರದೇವಿ ಕಮಲಾಜಿ ಇರ್ವರು | ಮಾಣಿಕದಾರತಿಗಳ ತರಲು             || ೩೬ ||

ಭೋಗ ವಿಷಯಕೆ ತಂದ ಆರತಿ ತಿಮ್ಮರಸಿ | ಪಳದಾರತಿಯನು ಬೆಳಗೆ |
ಉಡುಗೊರೆ ಬಂಗಾರ ತರತರದಿ ಒರೆದಿತ್ತು | ಗಿಳಿಹಂಸೆ ಯಾಕೆ ಬರಲಿಲ್ಲ            || ೩೭ ||

ರಾಣಿಯರೊಳಗೆಲ್ಲ ಕಾಣದೆ ತನ್ನಯ | ಪ್ರಾಣಪದಕವ ರತ್ನಿಯನು |
ಏಣಾಂಕಧರ ಬಲ್ಲ ಯಾವ ಮೂಲದ ಸಿಟ್ಟೊ | ತಾನು ತಡೆದ ದುಗುಡದ ಸಿಟ್ಟೊ      || ೩೮ ||

ಚಂದ್ರನ ಕಳೆಯುಳ್ಳ ರಂಭೆ ಯಾತಕೆ ತಡೆದಳು | ಅಂಗದಿ ಕುದಿದು ಕರಗುವನು |
ಸಂಗಿಯ ಕೇಳಲು ಕೊರಡಾಗಿ ಇರುವಳು | ಚಂಡ ಮನ್ಮಥನ ಬಾಧೆಯಲಿ           || ೩೯ ||

ಕಾಯ್ದು ಇರು[ವ]ಳು ನಿಮ್ಮ ಕಾಬನಕ ಜೀವನವ | ಮರೆಯಾಗಿಹಳು ಮತ್ಸರದಿ |
ಹೋಗಿ ನೋಡಲು ರಾಯ ಪಾದಕ್ಕೆ ತಿಳಿವುದು | ಬೇಡಿದ ಉತಿಯ ಕೊಡದಿರಲು     || ೪೦ ||

ತೊರೆದುಕೊಂಬಳು ಪ್ರಾಣ ಉಳಿಯ ಬಲ್ಲೆ[ಮೆ] ನಾನು | ಎದೆಗೆಟ್ಟು ರಾಯ ಅಡಿಯಿಡಲು |
ಯಮನ ಭಾಗದಿ ಪಲ್ಲಿ ನುಡಿಯೆ ಮಗನನು ಕೊಲ್ವ | ತೆರಬಾರು ಬೆಂದು ಕಲಹವನು || ೪೧ ||

ಪತಿಯಳಿದ ಸತಿಯಂತೆ ರಸಗುಂದಿ ರಾಜೇಂದ್ರ | ತವಕದಿ ಪೊಗಲು ಅರಮನೆಯ |
ಯುವತಿ ನಾಯಕಿ ಇರುವ ಸಜ್ಜೆಗೃಹಕೆ ಪೊಗಲು | ಹೊಸ ಪರಿಯಾಗಿ ಎಸೆದಿರಲು    || ೪೨ ||

ಕಂಡನು ಕಮಲಾಕ್ಷಿಯ ಕಡಗ ವಾಲೆಯು ಬಂದಿ | ತುಂಡು ತುಂಡಾಗಿ ಬಿದ್ದಿಹುದ |
ತೊಂಡನೂರೊಳು ದೈತ್ಯ ಕರಿಯ ಬಂಟನ ಕೊಂದ | ಅಂಗಕ್ಕೆ ಮಿಗಿಲಾಗಿ ಇರಲು   || ೪೩ ||

ಮುತ್ತಿನ ಸರವರಿದು ಇತ್ತರದೊಳು ಚೆಲ್ಲೆ | ಹಸ್ತ ಕಡಗ ಹವಳ ಸರವು
ಕಿತ್ತ ಮಂಡೆಯ ಕೇಶ ಕುರಿಯ ಬೋಳಿಸಿದಂತೆ | ಸುತ್ತಲು ರಾಯನೆದೆಗೆಟ್ಟ           || ೪೪ ||

ರಾಯನ ಕಾಣುತ್ತ ಏಳುವಳು ಕೈಯೂರಿ | ಬೀಳುವಳು ತ್ರಾಣವಿಲ್ಲೆನುತ |
ಏನಾದೆ ಸಂಗಾಯಿ ತೋಳನಾದರು ಪಿಡಿಯೆ | [ಸ್ವಾ]ರಿ ಬಂದಿಹುದು ಸನ್ನಿಧಿಗೆ      || ೪೫ ||

ಮಡದಿಯ ಕಾಣುತ್ತ ಒಡಲೊಳು ಕಿಚ್ಚೆದ್ದು | ಸುರಿಸುತ ಕಣ್ಣೊಳು ಜಲವ |
ಬರುವುದೆನುತ ಹೀಗೆ ತಿಳಿಯದೆ ಹೋದೆನು ಕೊಡಲೇನೆ ನಾರಿ ಅಪರಾಧವ         || ೪೬ ||

ನಾರಿ ನೀನಳಿಯಲು ತಾ ಬೇರೆ ಉಳಿಯುವೆನೆ | ಜೋಡಿನೊಳಗೆ ಸಾಗಿ ಬರುವೆ |
ಕೋಗಿಲೆ ಸ್ವರದವಳೆ ಬಾಯಿದೆರೆದು ನುಡಿಯೆ | ರೋಗವೆ ? ಮುನಿಸಿನ ಬಗೆಯೆ?     || ೪೭ ||

ಕಾಣ ಬಂದುದು ಕೇಡ ಹೊಸಬೇಂಟೆಯ ಸ್ಥಳದಿ | ನಾಯಿ ಮೊಲದನ ದಾಟಲು ಸುಖವೆ |
ಯಾರಿಗೆ ತೋರುವುದೆಂದು ಕೋಣಬುದ್ಧಿಯ ತಾನು ಬೀಳಲು ಮುಖವಡಿಯಲರಸು || ೪೮ ||

ಅಳಲೇಕೆ ರಾಜೇಂದ್ರ ಮರುಳಯೆನ್ನರೆ ನಿಮ್ಮ | ಸೊರಗುತ ರತ್ನಿ ಕರವಿಡಿದು |
ಕಡೆಯ ಲೋಕದಿ ಹೆಣ್ಣು ಪಾದಗಳಿರಲು | ಹಳೆ ಜೋಡು ಪೋಗೆ ಹೊಸದಿರದೆ        || ೪೯ ||

ಅಳಿವಳು ನಿಶ್ಚಯಿಸಿ ತನಗೆ ಗತಿ ಮುಂದೆ | ಹೊರಳುತ ರಾಯ ಶೋಕದಲಿ |
ಕುಜಜಾತಿ ಸ್ತ್ರೀಯರ ತೊರೆದು ಬಿಟ್ಟೆನು ಮುನ್ನ | ಗುಣ ಭಾವ ರೂಪ ಚೆಲ್ವಿಕೆಯ      || ೫೦ ||

ಉತ್ತಮದ ತೇಜಿಗೆ ಕತ್ತೆಗಳು ಸರಿಯಹುದೆ | ರತ್ನಕೆ ಮುತ್ತು ಜೋಡೆ |
ಕಸ್ತುರಿಯ ಮೃಗಕಿನ್ನು ಮಾರ್ಜಾಲ ಸರಿಯಹುದೆ | ಮತ್ತೊಬ್ಬಳು ಮುಖವ ನೋಡುವೆನೆ      || ೫೧ ||

ನೋಡಿದಳು ರಮಣನ ಅವನ ತಾಪವನೆಲ್ಲ | ಮೇಲೆನ್ನ ಕಾರ್ಯ ಸಾಗುವುದು |
ತೋಳ ಪಿಡಿಯೆಲೆ ಸಂಗಿ ಗೋಡೆ ಒತ್ತಿಲಿ ಕುಳಿತು | ಹೇಳಿ ಅಳಿವೆನು [ನ]ನ್ನ ತಾಪ   || ೫೨ ||

ಎದ್ದು ಕುಳಿತಿರೆ ರಾಯ ಅರ್ಧ ಪ್ರಾಣವು ಬರಲು | ಮುದ್ದಿಸಿ ಗಲ್ಲವ ಪಿಡಿದ |
ಅಗ್ರದ ರೋಗವೊ ಸವತಿಯರ ಕದನವೊ | ಸುದ್ದಿ ಪೇಳೆ ಮನಗಾಣಿಸುವೆ            || ೫೩ ||

ಬಂದ ಮೂಲವ ಪೇಳು ಚಂಡಿಕೆಯ ಹೊಡೆಸುವೆನು ಮಂದಿ ಪಿಡಿಸುವೆ ನಿನ್ನ ಬ[ಳಿಯೆ] |
ನಂಬಿಗೆ ಕೊಡು ಇದಕೆ ಕೊಂದೆನೆಂಬುದು ದಿಟ | ಗಂಡಹುದು ಪ್ರಾಣವ ತೊರೆವೆ      || ೫೪ ||

ಹಿಡಿ ಅಭಯವ ಲೋಲು ಪಡೆದವನಾಗಲು | ಹೊಡೆವನು ತುಂಡೇಳು ತಲೆಯ |
ದೃಢ ಸಿದ್ಧ ಈ ಮಾತು ತಪ್ಪಿದರೆ ಹರನಡಿಗೆ | ಹೊರ[ಗೆಂ]ದು ಭಾವಿಸೆ ನಾರಿ         || ೫೫ ||

ಮತ್ತೇಕೆ ಹಣೆಯೊಳು ಬಿದ್ದವೇತಕೆ ವಾಲೆ | ಮುದ್ದುಮೋಹನ ಮಾಲೆ ಚೆಲ್ವೆ |
ಗದ್ದದ ಕಲೆಯೇನು ವಿಟಗಾರ ಪುರುಷನು | ಗುದ್ದಾಡಿದಂತೆ ತೋರುವುದು            || ೫೬ ||

ಹೇಳುವುದಿನ್ನೇನು ಬೇರ ಬಲ್ಲವರೊಡನೆ | ಕಾಣದೆ ಬಲ್ಲರಿಗೆ [ನೆ]ಲೆಯು |
ಮೇಗಯ್ಯ ಹುಣ್ಣಿಗೆ ನೋಡುವರೆ ಕನ್ನಡಿಯ | ನೀವಾಡಿದ ಮಾತು ನಿಜಕರವು         || ೫೭ ||

ಒಡೆದರೆ ಮನೆಹಾಳು ಮಡಗಿದರೆ ಯಮ ಬಾಧೆ | ನುಡಿಯದಿರಲು ತಾನು ಕಳ್ಳಿ |
ಕ[ಡೆಗೇ]ನ ಮಾಡುವುದು ಕಂದನ ಮೇಲೊಂದು | ಮುದುಕನ ಕೂಡುವುದು ಸುಡಲಿ || ೫೮ ||

ಮಗನ ಜೀವಕೆ ಮುಂಡೆ ಹಗೆಯಾದೊ ಎನುತಲಿ | ಉಗಿವರು ಸರಿಯ ಸವತಿಯರು
ರಮಣನ ಹಿತವೇನು ಮಗನ ಕೊಲ್ಲಲಿ ಎಂದು | ನಗೆ ಸರಸ ಮಾಡೆ ನಾಚಿಕೆಯು     || ೫೯ ||

ಹೇಳಲು ನೀ ಮಾಡೆ ಕಾರ್ಯಶಕ್ತಿಗಳೇನು | ಭೂಮಿಯೊಳಿದಿರುಂಟೆ ಅವಗೆ |
ಬಾಳುವ ಫಲಪ್ರಾಪ್ತಿ ತನಗೆ ಇಲ್ಲದ ಮೇಲೆ | ಹೇಳೇಕೆ ತಲೆದೂರು ಇರಲಿ             || ೬೦ ||

ಯಾವಾಗ ತಲೆ ಬುರುಡೆ ಇಳಿಸುವೆ ಗಳಿಗೆಯಲಿ | ಪಡೆದ ಕೋಟಲೆಯ ಶಿವಬಲ್ಲ |
ಯಮನಿಗೆ ನಾ ಗುರಿಯು ಅಳಿದುಕೊಂಬೆನು ಪ್ರಾಣ | ಸ್ಥಿರ ಪಟ್ಟ ನೀವಾಳಿಯೆನಲು   || ೬೧ ||

ಬೇಟೆಗೆ ಬಾರದೆ ಆಟವ ಕೈಕೊಂಡು | ನೋಟಕೆ ಚೆಂಡನಾಡಿದನು |
ಲೋಕ ಮೆಚ್ಚುವ ತೆರಕೆ ಚೆಂಡ ಮನೆಗೆ ಇಟ್ಟು | ಈ ಮಾಟವ ಮಾಡಿದ ಮಗನು      || ೬೨ ||

ತಂದೆ ಮಗನಿಗೆ ನೀನು ಹೆಂಡಿರಾಗೆನುತಲಿ | ಮುಂಡೆ ಬರೆದಳು ಹಣೆಯೊಳಗೆ |
ಮಿಂಡ ಪ್ರಾಯದ ಹೆಣ್ಣ ಮುದಿಯ ಮೂಳಗೆ ಕೊಟ್ಟು | ಕಂದನಿಗೆ ಸೆರಗ್ಹಾಸು ಎನುತ  || ೬೩ ||

ಕಳೆಕೊಂಬೆ ಪ್ರಾಣವ ಸುಳುಹುದೋರದೆ ನಿಮಗೆ | ಗ್ರಹಿಸಿ ಮನದೊಳಗೊಂದ |
ಬಲು ದುಃಖ ಮಾಡುವರು ಬಂಡಾಟ ಎಲ್ಲವ ಪೇಳೆ | ಅಳಿಯಬೇಕೆಂದು ನಾ ತಡೆದೆ  || ೬೪ ||

ನಗುವ ಸವತೆರ ಮುಂದೆ ಎಡಹಿದ ತೆರನಾಯ್ತು | ಹೊರೆವೆ ಪ್ರಾಣವನು ಹೊಲೆ ಬಾಳು |
ಶಕ್ತಿ ಸಾಲದ ಮೇಲೆ ತರಳಗೆ ಇತ್ತೆನ್ನ | ಇರಬೇಡ ಎಂದರೆ ಸುಖದಿ                   || ೬೫ ||

ಚಿಕ್ಕಂದು ಮೊದಲಾಗಿತೇಕೆ ಬಾಳಿದೆ ನಿಮ್ಮ | ಮತ್ತೊಂದು ಬುದ್ಧಿ ಕಂಡುಂಟೆ |
ಕೆಟ್ಟಿತ್ತು ಇಂದಿಗೆ ಎನ್ನ ಪತಿವ್ರತೆ ನಿಷ್ಠೆ | ಸತ್ತ ಮುದಿಯವ ಮೀಸೆ ಸುಡಲಿ             || ೬೬ ||

ಎಂದು ಬಾರದ ಮಗ ಬಂದನೆನ್ನುತ ನಾನು | ಸಂಭ್ರಮದಿ ಹೆಚ್ಚಿ ಹಿಗ್ಗಿದೆನು
ಗಂಧ ಕಸ್ತುರಿ ಪುಣುಗು ಮುಂದಿಟ್ಟು ಪೂಸೆನಲು | ಕಂಡೆನ್ನ ರೂಪ ಕಾಮಿಸಿದ         || ೬೭ ||

ತಾಯಲ್ಲವೇ ಎಲೆ ಪಾಪಿ ಬೇಡವೆಂದರೆ ನಾನು | ರಾಯ ಭೀಮನಂದದಿ ಬಾಚಿ ತಬ್ಬಿ |
ತೀರುವುದೇನರಸೆ ಬಾಲೆಯರ ಕೈಯೊಳಗೆ | ಮಾನಾಭಿಮಾನವ ಕೊಂಡ           || ೬೮ ||

ನೆರೆ ಪಾಪಿ ಪೋಗೆನಲು ಕರವೆರಡ ಪಿಡಿಕೊಂಡು | ಮುಗುಳು ಮೊಲೆಗಳನು ಪಿಡಿದೊತ್ತಿ |
ಒದರಿಟ್ಟ ತೆರದೊಳು ಉಗುರಿಂದ ಒತ್ತಿದರೆ | ರತುನವೆ ಚೆಲ್ಲಾಡಿ ಹೊಯ್ತು           || ೬೯ ||

ರಾಯನ ಸತಿಯಿಂದ ಹೇಗೆ ತೋರಲಿ ಮುಖವ | ಜೋಗಿ ಮುದಿಯನ ಬಾಳು ಸುಡಲಿ |
ಮಾಡುವುದಿನ್ನೇನು ಮೆಚ್ಚಿ ಬಂದವಳೆಂದು | ತೀರಿಸಿದ ಅವನ ಶಾಸ್ತ್ರವನು           || ೭೦ ||

ಮಂಡೆ ಕೂದಲ ನೋಡೊ ರಂಡೆ ಬಾಳಿನ ಮುದಿಯ | ಗಂಡಿಗೆ ಹೆಣ್ಣು ಈ [ಡಹು]ದೆ |
ಚಂದವಾಯಿತು ರಾಯ ಸಂತಾರ ತಗ್ಗಿದ ಬಳಿಕ | ಕಂದಗೆ ಕೊಡುವ ಮನಸುಂಟೆ    || ೭೧ ||

ಕೀಚಕನು ದ್ರೌಪದಿಯ ಮೋಸದಿಂದಲಿ ಪಿಡಿಯೆ | ಬಾಣಸಿಗ ಭೀಮನಿಗುಸುರೆ |
ರೋಷದಿಂದಲಿ ಪೋಗಿ ಸ್ತ್ರೀವೇಷದೊಳಗೆ ಕೊಂದ | ರಣಹೇಸಿಗಳುಂಟೆ ನಿನ್ನಂಥ    || ೭೨ ||

ಹೇಳಲು ಈ ಬಗೆಯ ಮೋರೆಯಲಿ ಸಿಟ್ಟಿಲ್ಲ | ನೀಗಲೆ [ನ]ನ್ನ ಪ್ರಾಣವನು |
ಮೂಡಲಿಲ್ಲವೆ ಮೀಸೆ ಮುಖದೊಳು ರಂಡೆಯರ | ಬಾ [ಳನು]ನಾ ಮಾಡಿದೆನು      || ೭೩ ||

ಕೂಡಿದ ಸತಿಯ [ಳ]ಊರೆಲ್ಲ ಪಿಡಿವಾಗ | ಸಾಯಬಾರದೆ ಮೂಗೆನಲು
ಮಾಡುವುದು ದೊರೆತನ ಮಡದಿಯ [ರು] ಕ [ಳ್ಳಿ] | ನಕ್ಕಾಡರೆ ನಿನ್ನ ಸಮದವರು    || ೭೪ ||

ಹೇಳಲಾರೆನೊ ಪಾಪಿ ಜೀವೆಲ್ಲ ಸೊರಗಿತ್ತು | ರಾಮನೊಳಗೆ ಹೆಣಗಾಡಿ
ಕಾಣದಿರ್ದರೆ ನಿಜವು ನೀನೋಡು ಕುಚಗಳನು ಮೇಲು ಮುಸುಕನು ಹಾರ್ಹೊಡೆದು || ೭೫ ||

ಕುಂಭಕುಚಗಳ ತೋರೆ ತಿಂಗಳ [ಮ] ರೆಯಂತೆ | ಕಂಗೊಳಿಸುತ್ತಿರಲು ನಿಜವಹುದು |
ಸಂಗಿಯ ಕೇಳಿದಕೆ ಸಟೆದಿಟವು ಎಂಬುವದ | ಅಂದಿ ಹೊರೆಯದು ಈ ಬಾಳು        || ೭೬ ||

ಹುಸಿಯ ಸಟೆಗಳ ಪೇಳಿ ಸುಳಿಯ ಮುರಿವೆನು ಇದಕೆ | ಗುರುತಿದೆ ಚೆಂಡು ಮಂಚದಲಿ
ಕೊಡು ಸಂಗಿ ಕೈಯೊಳಗೆ ಅರಷ್ಠವಾಗಲು ಮನಕೆ | ಕೊರತೆ ಕಂಡಿಟ್ಟಳು ಬೇಗ       || ೭೭ ||

ಕಂದನ ಕೊಂದರೆ ಭೂಮಂಡಲದಿ ಅಪಿಕೀರ್ತಿ | ಇಂದೆನ್ನ ನೀ ಕೊಲ್ಲು ರಾಯ |
ರಂಡೆ ನಾನಳಿಯಲು ನಾಲ್ವರು ನಿನಗುಂಟು | ಹೇಗಿರಲಿ ಗರತಿಯೆಂದೆನುತ         || ೭೮ ||

ರಾಮನ ಮುಖ ನೋಡಿ ನಾನು ಬಾಳುವಳಲ್ಲ | ಮೇಲವನ ಕೊಂದು ತಲೆ ಬರಲು
ಪ್ರಾಣ ಉಳಿದರೆ ಕಾಣೆ ಸಾರಿದೆ ಕಡೆ ಮಾತು | [ಸಾ] ಯುವೆನು ಎರಡು ಗಳಿಗೆಯಲಿ || ೭೯ ||

ಸಾಯಬೇಡವೆ ನಿನ್ನ ಜೀವಕೆ ಬಾಲನ | ಆಹುತಿಯ ಕೊಡುವೆ ನಿಮಿಷದಲಿ |
ಕಾಲಾಗ್ನಿ ಕೋಪದಿ ರಾಯನೇಳಲು ರತ್ನಿ | ಏರಿಸಿದೊ ಛಲವದೀಕ್ಷಣದಿ               || ೮೦ ||

ಊರು ಸೂರ್ಹೋಗಲು ಅಗಸೆ ಹಾಕಿದ ಗಾದೆ | ತೀರಿ ಹೋಯಿತು ಕೆಲಸ ನಿನ್ನೆ |
[ತಾ]ಯ ತಬ್ಬಿದ ಮೂಳ ತಂದೆ ಕೊಳ್ಳದೆ ಬಿಡನು | ಸಾಯುವೇತಕೆ ಎನಗಾಗಿ       || ೮೧ ||

ಮಗನು ಮಾಡಿದ ಕರ್ಮ ಜನರು ಕಾಣದು ರಾಯ | ಭುವನ ಕಾಣದು ತಲೆಯ ಹೊಡೆಸಿ |
ಹೊರಬೇಡ ಅಪಕೀರ್ತಿ ವರ ಸೂಳೆ ತಾನಷ್ಟೆ | ತರಳಗೆ ಮಾಡೆ ತಣ್ಣಗಿಹುದು        || ೮೨ ||

ಅಪಕೀರ್ತಿ ಹೊರಬೇಡ ಅವನಿಗೆನ್ನನು ಕೊಟ್ಟು | ಸುಖದೊಳು ಮಗನ ನೋಡರಸೆ |
ಶಕ್ತಿಗುಂದಿದ ಹೆಣ್ಣ ಮುದಿಯ ಮು‌ಪ್ಪಿನ ಕಾಲ | ಸತ್ತರೆ ಮುಂಡೆಯಾಗುವೆನು          || ೮೩ ||

ನಾರಿಯಾಡುವ ಮಾತ ಕೇಳಿ ಕಂಪಿಲರಾಯ | ಕಾಲನಾರ್ಭಟದೊಳು ಪೊರಡೆ |
ಏರಲು ತಲೆ ಮರುಳು ಎದ್ದನು ಗರ್ಜಿಸಿ | ಮಾರಿಯಂದದಿ ಪೊರಟು ಬರಲು          || ೮೪ ||

ಬಂದು ಸದರಿನ ಮೇಲೆ ಕುಂಡಿ ಊರದೆ ಕುಳಿತು | ಹೆಂಡಿರು ಅಳಿದವರ ತೆರದಿ |
ಭಂಡಾರಿ ಬುಕ್ಕನ ಕರೆದು ಬೇಗದಿ ಹೋಗಿ | ಬರಹೇಳೊ ಮಂತ್ರಿಯ ಬೇಗ           || ೮೫ ||

ಪರಿದೋಡಿ ಬಂದನು ಪ್ರಧಾನಿಯ ಬಳಿಗಾಗಿ | ಬರಲೆಂದ ಅರಸ ಬೇಗದಲಿ |
ಅದು ಏನೊ ಇಂತಪ್ಪ ತುರುತದವರ ಅಗ್ರ | ಅಳಿದಲ್ಲಿ ಮನೆಯನು ಹೊಕ್ಕೆ           || ೮೬ ||

ತಿಳಿಯಬಾರದು ಸ್ವಾಮಿ ತರವಾಗಿ ಕಾಣುವುದು | ಒಡೆಯ ಎನಲು ಎನಗೆ ಭೀತಿಗಳನು |
ಆಡುವುದೆ ಆನೆಗಳು ಹುರಳಿಯ ಗಿಡದೊಳು | ನುಡಿಯಣ್ಣ ನಿನಗೆ ತಿಳಿದುದನು       || ೮೭ ||

ರಾಯ ರಾಮನು ಚಂಡನಾಡಿದೆಂಬೊರು ನಿನ್ನೆ | ಹೋಗಿ ಬಿತ್ತಂತೆ ಅರಮನೆಗೆ |
ಕೇಳುವರೆ ಕಂದರ್ಪ ರಾಯ ರಾಮನು ಹೊಡೆಮರಳಿ | ಗಾದ ವಿವರವನು ತಿಳಿದಿಲ್ಲ   || ೮೮ ||

ಮುಂಡೆ ರತ್ನಿಯ ಮೂಲವೆಂಬುವುದು ತನಗುಂಟು | ಕಂಡಿವನ ರೂಪ ಸೈರಿಸದೆ |
ಬಂಡಾಟ ಮಾಡದೆ ಬಿಡುವ ಜಾತಿಯು ಅಲ್ಲ | ಬಂದರೆ ನಿಮಗೆ ಕಾಬುವದು          || ೮೯ ||

ಆದರಾದಿತು ದುಃಖ ಕುಲಗೇಡಿ ರಂಡೆಯು ಹಿಂದೆ ಸೇರಿದಾಗಲೆ ಗುರು ಮುನಿಯು |
ಪೇಳಿದ ವಾಕ್ಯವು ಕೂಡಿಬಂದುದು ಕಥೆಯು ತೂಗಿದ ಶಿರವ ಚಿಂತಿಸುತ             || ೯೦ ||

ರಾಮನ ನಿಜಸತ್ಯ ಕಾಣಲಾರದೆ ರತ್ನಿ | ಲಾವಣ್ಯಕವಳು ಮನಸೋತು |
ನಾನಾ ವಿವರವ ಮಾಡಿ ದೊರೆ ಕಂಪಿಲರಾಯಗೆ | ಚಾಡಿಯ ಹೇಳಿದಳು ರತ್ನಿ        || ೯೧ ||

ಮಂದಮತಿರಾಯಗೆ ಎಲ್ಲ ಮಾತನು ಹಣ್ಣಿ | ತಂದಳು ಕಂದಗೆ ಕೊಲೆಯ |
ಹಿಂದವಳ ತಂದಾಗ ನಾವೆಲ್ಲರಾಡಿದ ಮಾತು | ಕಂಡಂತಾಯಿತು ಕೈಯೊಡನೆ      || ೯೨ ||

ಆದರಾಗಲಿ ಇನ್ನು ಶೋಧಿಸು ಗುಣಧರ್ಮ | ಭೂದೇವಿ ರಾಮ ಸತ್ಯದಲಿ |
ತೋರುವುದು ತಮಗೆಲ್ಲ ಈರ್ವರ ಮನಚಿತ್ತ | ಏಣಾಂಕಧರನೆ ತಾ ಬಲ್ಲ              || ೯೩ ||

ಬಂದನು ಭಯಭಕ್ತಿಯಿಂದಲಿ ಮಂತ್ರಿಯು | ವಂದಿಸಿ ರಾಯಗೆ ಕರವ |
ಮುಂದೇನು ದಯಮಾಡಿ ಭೂಮೀಂದ್ರನೆನುತಲಿ ಮಂತ್ರಿ | ವಂದಿಸಿ ಕೇಳೆ ವಿನಯದಲಿ       || ೯೪ ||

ಹೇಳಲಾರೆನು ಮಂತ್ರಿ ಹೀನಾಯದ ಅಪಕೀರ್ತಿ | ಭೂಮಿಯೊಳ್ ನಡೆಯದ ಕರ್ಮ |
ತೋರಿತ್ತು ಕುರುಹೆನಗೆ ಬೇಟೆಯಾಡುವ ಸಮಯದಿ | ರಾಣಿ ರತ್ನಿಯ ಸೂಚನೆಯು  || ೯೫ ||

ಕೇಳುಂಟೆ ಕರ್ಣದಿ ನೋಡುಂಟೆ ಯಾವಲ್ಲಿ | ತಾಯಿಗಳ ಸುತರು ಮೋಹಿಪುದ |
ನಾವು ಬೇಟೆಗೆ ಹೋದ ಭೇದವನೆ ನೋಡಿ | ಪಾರ ಮಾಡುವುದು ರತ್ನಿಯನು        || ೯೬ ||

ಬೇಟೆಗೆ ಬಾರದೆ ಯಾಕೆ ಉಳಿದೀ ರಾಮ | ರತ್ನಿಯ ಮೇಲೆ ದೃಷ್ಟಿಯನು |
ಲೋಕವು ಅರಿವಂತೆ ಚೆಂಡಾಡಿದ ನೆವದೊಳು | ಮಾತ ಮುಗಿಸಿದ ರತ್ನಿಯರು      || ೯೭ ||

ಹರಹರ ಎನುತಲಿ ಕರಮುಗಿದು ಮಂತ್ರಿ | ಶಿರದೂಗಿ ಕರ್ಣವನು ಮುಚ್ಚಿ |
ಗಿರಿಜೆಯ ರಮಣನೆ ಬಲ್ಲ ಎನಗೆ ಪೇಳುವುದೇನು | ತಿಳಿದಂತೆ ಪಾದ ಚಿತ್ತದಲಿ       || ೯೮ ||

ಹಿರಿಯನಲ್ಲವೆ ಮಂತ್ರಿ ತಿಳಿದಿನ್ನು ನೀ ಪೇಳು | ವಿನಯಳ ನೋಡು ಮನವಿಕ್ಕುವೆನೆ |
ಹೊಳವೊಂದು ಕಾಣದೆ ಮಲವ ತಿಂಬನು ತಾನು | ಟೌಳಿ ಪೇಳಿದಳು ಅರಸನಿಗೆ     || ೯೯ ||

ರಾಮನ ಸತ್ಯವ ಭೂಮಿ ಬಲ್ಲುದು ಮುಂದೆ | ಆಯ ನೋಡರಸೆ ಜ್ಞಾನದಲಿ
ಮೂಗನ ತಲೆ ಹೆಣ್ಣು ಮಾಡಿಲ್ಲ ಬಲ್ಲಾಳ | ಜಾಲಿ ಬೆಳೆಸಿದರವನು ಈ ಕುರುಹ ಕಂಡು || ೧೦೦ ||

ಹೇಳಬಹುದು ಉತ್ರ ಸೋದರಳಿಯನ ಮಾತ | ಬೀಳು ಮಾಡದೆ ಬಂದನೆಂಬೆ |
ನಾರಿಯರ ಮನವನು ಮೂದೇವ[ರು] ತಿಳಿಯ[ರು] | ಭೂಮಿಯೊಳು ವಿಜಯ ಕೆಟ್ಟಂತೆ      || ೧೦೧ ||

ಹಿಂದೊಬ್ಬ ಚಂದ್ರಾಯನ ಕಥೆ ಸಾರ | ಬಂದಂತೆ ಇರುವುದೀ ಮೂಲ |
ತುಂಡ ಸೂಳೆಯ ಮಾತ ಅರಸು ತಿಳಿಯದೆ ಮುನ್ನ | ಕಂದನ ಜೀವ ಕೊಲಿಸುವನು  || ೧೦೨ ||

ಕಾಣದೆ ಕಳವನು ಬಾಲಗೆ ಮುನಿವನೆ | ಜಾಣ ಮಂತ್ರಿಯೆನುತ ನೀ ನುಡಿಯೆ
ಹೇಳಯ್ಯ ವಿಜಯೇಂದ್ರ ರಾಯನಂದದಿ ಎನ್ನ | ಮಡದಿಯ ವಂಚವಿದ್ದಂತೆ           || ೧೦೩ ||

ತಿಗುಳಾಣ್ಯದೇಶದಿ ಪುರವಿಹುದು ಚಂಪಕ | ನಗರದ ನೃಪನು ವಿಜಯೇಂದ್ರ |
ಸುದತಿಯೊಬ್ಬಳು ಅವಗೆ ಸೂಳೆಯೊಬ್ಬಳುವುಂಟು | ಅಗಲದೆ ಬಾಳುವನರಗಳಿಗೆ    || ೧೦೪ ||

ಪಟ್ಟದ ಸತಿಗೊರ್ವ ಪುತ್ರನು ಜಯಸೇನ | ಲಕ್ಷ್ಮೀಯ ವರತನಯನಂತೆ |
ಶಕ್ತಿ ಸಾಹಸದೊಳು ಪೃಥ್ವಿಲಿ ಸರಿಕಾಣೆ | ಸತ್ಯದಿ ಸದ್ಗುಣ ಸ್ಥಿತಿಯ                     || ೧೦೫ ||

ಇಂತೊಂದು ದಿವಸದಿ ತರಳನು ಜಯಸೇನ | ತುರಗ ಮಾರ್ಬಲದೊಳು ಹೊರಟು |
ಗಿರಿಯು ಗಂಹರದೊಳು ಬೇಟೆಯಾಡುತ ಬಂದು | ಕಾಡ[ಲಿ] ಮುನಿವರನಾಶ್ರಮದಿ  || ೧೦೬ ||

ಅನಿತರೊಳಗೆ ಒಂದು ಹರಿಣ ರಾಯನ ಮುಂದೆ | [ಹ] ರಿಯಲು ತುರಗ ಮೀಟಿದನು |
ಹಿಡಿಯೊಳಗಾದಂತೆ ಪರಿದುದು ಸಿಕ್ಕದೆ | ಹೊಡೆಯಲು ನಾಲ್ಕು ಯೋಜನದಿ        || ೧೦೭ ||

ಕಡಿದ ಗಾಯದಿ ಬಂದ ಕಂಸಿಕ ಮುನಿಯೊಡೆದು | ಮೃಗ ಹೋಗಿ ಅಸುವನು ಬಿಡಲು |
ಕನಲುತ ಮುನಿವರನು ಕಾಲನಂದದಿ ಇರಲು | ಜಯಸೇನ ನೋಡಿ ತಲ್ಲಣಿಸಿ        || ೧೦೮ ||

ಅಳಿವ ಕಾಲವು ಬಂತು ತಿಳಿಯದೆ ಮದ ಬುದ್ಧಿ | ಎಳೆತಂತು ವಿಧಿ[ವಶ]ವಾಗಿ |
ಅಳುಕಲು ವಾಣಿಯ ಪತಿಯ ಬರಹವು ಬಿಡದು | ದೃಢವ ನಿಶ್ಚಯಿಸಿ ಧೈರ್ಯದಲಿ    || ೧೦೯ ||

ತಪ್ಪಿದ ಕಾರ್ಯಕ್ಕೆ ತಲೆ ಮುಂದೆ ಅಪರಾಧ | ಇತ್ತಲಿ ಇನ್ನೇನು ಭಯವು
ಹತ್ತಿದ ತುರಗವನೊಪ್ಪಿಸಿ ಕೀರ್ತಿಸುತ | ಸಾಷ್ಟಾಂಗದಿಂದಲಿ ಎರಗಿ                  || ೧೧೦ ||

ಕರುಣಿಸಬಹುದೆನ್ನ ಶರಧಿಗಂಭೀರವುಳ್ಳ | ಉರಗಭೂಷಣ ಯತಿವರನೆ |
ಅರಿಯದೆ ಮಾಡಿದೆ ಶಿರ ನಿಮಗ ಅಪರಾಧ | ಸರ್ವದ್ರೋಹಿಗಳ ನೋಡುವೆನು       || ೧೧೧ ||

ಕಂಸಿಕಮುನಿಗಾಗ ಘನಶಾಂತಿ ನುಡಿ | ಛಲವೆಲ್ಲ ಸೈರಣೆಯ ಪುರುಷ |
ಕರವಿಡಲಲು ಮಸ್ತಕದಿ ಕಂದ ಏಳೇನಲಾಗ | ಭಕ್ತಿಯೊಳು ಎದ್ದು ನಿಲ್ಲೆ                || ೧೧೨ ||

ಗರ್ವದಿ ನಡೆದಿರಲು ಹಿಡಿ ಶಾಪವೆಂಬುವೆ | ಫಲಪ್ರಾಪ್ತಿ ಇದು ಎಂತು ಕಾಣೊ |
ಹರಿಣನ ಕೊಲಬಹುದೆ ಹಸುಮಗ ಮೆಚ್ಚಿದೆ | ತುರಗವ ಮೀರಿ ಪೋಗೆನಲು           || ೧೧೩ ||

ಪಾದಕೊಪ್ಪಿಸಿ ತುರಗ ಏರಲು ಮೂಲೋಕ | ಬಾಧಕ ಬಿಡದೆನಗೆ ಗುರುವೆ
ಕಾಳನೆಡೆಯೊಳು ಪೋಪ ಪಾಲಿಸಿದೆ ಪರಮಾತ್ಮ | ಸೋಧರ್ಮಿಯೆಂದು ಮೆಚ್ಚಿದನು || ೧೧೪ ||

[ಜಯಸೇನ] ರಾಯನ ತಳತಂತ್ರ ಮಾರ್ಬಲವು | ಹುಡುಕಿ ಅರಣ್ಯ ಬೇಸತ್ತು |
ಪುರಕೆ ಹೋಗಲು ಆದ ವಿವರ ಪಿತನಿಗೆ ಹೇಳೆ | ಘನ ಶೋಕದೊಳಗಿರುತಿಹನು      || ೧೧೫ ||

ರಾಯಕುಮಾರನ ಹಾಗೆ ಕಳುಹಲು ತಮಗೆ | ಯೋಗ್ಯವಲ್ಲೆಂದು ಮುನಿವರನು |
ಮೇಘ ಮಾರ್ಗದಿ ನಡೆವ ಮಂತ್ರ ತುರಗವ ರಚಿಸಿ | ಪೋಗೆನಲು ಮುನಿಯು ಪ್ರೀತಿಯಲಿ     || ೧೧೬ ||

ಮೇಘದಿ ನಡೆವ ವಾಹನವೇರಿ ಜಯಸೇನ | ಸಾಗಲು ತನ್ನಯ ಪುರಕೆ |
ತಾಯಿತಂದೆಗಳೆಲ್ಲ ಇರುವಂಥ ಸಮಯದೊಳ್ | ಮೇಘಮಾರ್ಗದಿ ಬಂದು ಇಳಿಯೆ || ೧೧೭ ||

ಬಾಲನ ಕಾಣುತ್ತ ತಾಯಿ ತಂದೆಗಳೆಲ್ಲ | ಹೋದ ನಯನಗಳು ಬಂದಂತೆ |
ತಾವೆಲ್ಲ ಸುಖದೊಳಗಿರಲು ವಿಜಯೇಂದ್ರ | ರಾಯಪೋದನು ಬೇಂಟೆಯನು         || ೧೧೮ ||

ಹುಲಿಯ ಬಣ್ಣಕೆ ಕಂಕನರಿಯು | ಮೈಯೆಲ್ಲ ಸುಟ್ಟಂತೆ |
ಪಡೆದರಿಗೆ ಪಡೆದ ಹರೆಗಳು | ತನಗೆ ಕಡೆ ನಿಮ್ಮ ಬಾಳು                              || ೧೧೯ ||

ಉದರದಿ ಜನಿಸಿದ ತರಳ ಬೇಂಟೆಯ ಹೋದ | ತರಬಹುದು ಮೇಘವಾಹನವ |
ಧರಣಿಗೆ ಗುರುತಾದೆ ನರಿ ಬಾಳಿ ಅಳಿದಂತೆ | ನೋಡುವೆ ನಿಮ್ಮ ಸಾಹಸವ          || ೧೨೦ ||[2]

[1] + ಕಂಪಿಲ್ಲ ಬೇಂಟೆ (ಮೂ)

[2] ‘ಅ’ ಪ್ರತಿ ಇಲ್ಲಿಗೆ ನಿಂತಿದೆ. ಇಲ್ಲಿಂದ ಮುಂದೆ ‘ಬ’ ಪ್ರತಿಯಿಂದ ಪಠ್ಯವನ್ನು ಸ್ವೀಕರಿಸಲಾಗಿದೆ (ಸಂ)