[1]ಶ್ರೀ ಗಿರಿಜೆಯ ಶಂಭು ಭಾಗೀರಥೀಶನೆ | ನಾಗಭೂಷಣ ನಂದಿಕೇಶ |
ಆಗಮದೊಡೆಯನೆ ಮೂಜಗವ ರಕ್ಷಿಪನೆ | ಪಾಡುವೆ ನಿಮ್ಮ ಮಹಿಮೆಯನು || ೧ ||
ಉರುಗಶಯನ ನಾಭಿಕಮಲದಿ ಜನಿಸಿದ[ನ] | [ಶಿರವನು] ಧರಿಸಿ ಧರೆಯೊಳಗೆ |
ತಿರಿದುಂಡೆ ನವಕೋ[ಟಿ] ಸುರಮುನಿಗೆ ನಿಲುಕದ[ನ] | ಪರಮ ನಿರಂಜನ ಕೊಡು ಮತಿಗೆ || ೨ ||
ಅಂಗಾಲಲ್ಲದೆ ನುಂಗುವೆನ ಬೆನ್ನ ಮಾರುತನ | ಆಹಾರವ ಮೇಲೈದನಾ ಸುತನ |
ಸೋದನೆಯ ಮಾಡಿದನ ರಾಣಿಯ ಪಿತಗವನ ಮಾಡಿದರೆ ಸುತನಿಂದ | ಲಯಮಾಡಿದ ದೇವ ಕೊಡು ಮತಿ || ೩ ||
ಕುಕ್ಷಿಯೊಳಧಿಪತಿ[ಯ] ಮಸ್ತಕವ ಬದಲಾಂತು | ಅಕ್ಷಿ ಮೂರುಳ್ಳನ ವರಪುತ್ರ |
ರಕ್ಷಿಪುದು ಮುಂದೆಮಗೆ ರಸಸಾರ ಮತಿಯನು | ಅರ್ಥಪ್ರಾಸಿಗೆ ಸಮನಾಗಿ || ೪ ||
ಕವಿಗಳ ಜಿಹ್ವಾಗ್ರ ಕೊನೆಯೊಳು ಇರುತಿರ್ಪ | ಕಮಲಜನ ರಾಣಿ ಕಟ್ಟಾಣಿ
ಯಶವಾಗಿ ಮುಂದಣ ತರಳರಾಮನ ಉಳುಹಿ ನಡ | ಸಮ್ಮ ಮುಂದೀ ಕೃತಿಯ || ೫ ||
ಕಾಶಿ ರಾಮೇಶ್ವರಕೆ ಈಸು ವೆಗ್ಗಳವಾದ | ಶ್ರೀಶೈಲ ವರಕ್ಷೇತ್ರ ಹಂಪೆ |
ಈಶನೆ ಪರಮಪ್ರಕಾಶನೆ ಕೃತಿಯನು | ಪ್ರಾಸು ಬೀಳದ ಹಾಗೆ ನಡಸು || ೬ ||
ಕೇಳುವುದು ಪರ ವಿಷಯ ನಾಯಿ ಮಾಂಸವು ಎಂಬ | ಕಾಣುವ ವ್ರತನಿಷ್ಠ ಜ್ಞಾನಿಗಳು |
ಓದಲು ಫಲವಿಹುದು ಕೇಳಲು ಗತಿ ಮುಂದೆ | ರಾಮನಂದದಿ ನಡೆವವಗೆ || ೭ ||
ನಡೆಸುವೆ ಮುಂದಣ ಕೃತಿಯ ಲಾಲಿಸಿ ನಿಮ್ಮ | ಪ್ರೌಢ ಚಿತ್ತಗಳೊಂದುಗೂಡಿ |
ಮಕರಬುದ್ಧಿಗಳಿಂದ ಮಾತ ನುಡಿಯಾಡಲು | ಗತಿಯೇನು ತಿಳಿದು ಪೋದಲ್ಲಿ || ೮ ||
ಸತ್ಯದಿ ನಡೆವವರ ಸ್ಮರಣೆ ಕರ್ಣಕೆ ಬೀಳೆ | ಹತ್ತದೆ ತಮಗೆ ಕಿಂಚಿತವು |
ಭಕ್ತಿಯಿಲ್ಲದ ಶ್ವೇತ ಊರ್ವಶಿಯ ಬೋಧನೆ ಕೇಳೆ | ಹತ್ತನೆ ಶಿವಲೋಕ ಪದವ || ೯ ||
ತಿಂಗಳಿಗೊಂದಿವಸೊಂದಾಗಿ ಚರಿಸುವನು | ಕಂಡನು ಬಿದಿಗೆ ತದಿಗೆಯಲಿ |
ತುಂಬಿದ ಪೌರ್ಣಮಿ ದಿವದಿವದೋರೆ | ಇಂದ್ರಭಾಗದೊಳು ರಾಜಿಸುತ || ೧೦ ||
ಸೋಮನ ಕಳೆಯೊಳು ರಾಜಮಂತ್ರಿಯು ಬಂದ | ರಾಮ ರಾಯನ ಅರಮನೆಗೆ |
ಆಳು ಮಂದಿಯನೆಲ್ಲ ಅಂತ್ರದಿಂದಲಿ ಇಟ್ಟು | ಕುಮಾರನ ಬಳಿಗಾಗ ನಡೆದ || ೧೧ ||
ಪುತ್ರನ ಕಾಣುತ ಸಾಷ್ಟಾಂಗವೆರಗಲು | ಎತ್ತಿ ರಾಮನು ಕರವಿಡಿಯೆ |
ಮತ್ತೇನು ಕಾರ್ಯವು ಇಷ್ಟೊತ್ತು ಬರುವುದಕೆ | ರತ್ನಿ ಮಾಯೆಗಳೆಂದ ಮನದಿ || ೧೨ ||
ಚಂದವಾಯಿ[ತೆ] ಬೇಂಟೆ ರಾಜೇಂದ್ರನು ಬಂದರೆ | ಹೊಂದದೊ ಇರೆ ಪ್ರಾಪ್ತಿ ತಮಗೆ |
ಬಂದರೆ ಕ್ಷೇಮದಿ ಪರಿಣಾಮ ಕ್ಷಿತಿಯೊಳು | ಮಂಡಿಸಿವೆನಲು ಪ್ರತಿಯಿಲ್ಲ || ೧೩ ||
ಬೇಂಟೆಯ ಸುಡು ನಮ್ಮ ಕಲಾಪದೋರಿತು | ಸ್ವಾಮಿ ತಾಕಿತು ಮೊಲ ನಾಯಿ ಮೇಲೆ |
ಸಾಕ್ಷಿಗಳಲ್ಲವೆ ಶಕುನಶಾಸ್ತ್ರಗಳಿವು | ಕಲಾಪದೋರಲು ಕುಮ್ಮಟದಿ || ೧೪ ||
ಹಾಳು ರಂಡೆಯ ಮನೆಗೆ ಹೋಗುವರೇ ಪುತ್ರ | ಹಾಳು ಚೆಂಡಾಟವು ಸುಡಲಿ
ಹಾಳು ಮಂದಿಯರೊಡನೆ ಕೇಳಿಸಿಕೊಡದಿರಲು | ರಾಯ ಬಂದಾಗ ಹೊಗದಿಹುದೆ || ೧೫ ||
ಕತ್ತೆ ಸೂಳೆಯುಯೆಂದು ಕಡೆಗು ಬಲ್ಲೆನು ನಾನು | ಇಟ್ಟಳು ಅಪಕೀರ್ತಿ ನಿಮಗೆ |
ಹೊಕ್ಕರೆ ಹೋಗಲಿ ಹೊಲಸು ರಂಡೆಯ ಮೋಡಿ | ಸಿಕ್ಕವರೆ ಮೂಳಿಯ ಬಲೆಗೆ || ೧೬ ||
ಪರನಾರಿ ಸೋದರ ಬಿರಿದೆಲ್ಲಿ ಹೋಯಿತು | ಹರನ ವರವೇನಾಯಿತು ಭೂಪ |
ಇರಲಿಲ್ಲ ಮತ್ತಾರು ಪುರದೊಳು ರತ್ನಿಯ | ತಲೆಯ ಮೆಟ್ಟಿದ ಸತಿಯರುಗಳು || ೧೭ ||
ಸಿಟ್ಟು ಬರುವುದು ಮಂತ್ರಿ ಸರಸವನಾಡು | ಏಕಾ[ತು] ಈ ಕರ್ಮ ನುಡಿಯ |
ಮುಚ್ಚಿ ಆಡಲಿ ಬೇಡ ಅಪ್ಪಾಜಿ ಹೊಳಮಾತು | ತಪ್ಪದೆ ಹೇಳಿದ ಮಂತ್ರಿ || ೧೮ ||
ರಾಯನಾಡಿದ ಮಾತ ಹೇಳುವರೆ ಭಯವೇನೊ | ದೇವರಿಗೆ ಹೇಗೆ ತೋರುವುದೊ |
ಸಾರಂಗಧರನಂತೆ ಮಾಡೆಂದು ಅಭಯವ | ಹೇಳಿರುವದೆ ಸರಿಯಷ್ಟೇ || ೧೯ ||
ಇನ್ಯಾಕೆ ಎಲೆ ಮಂತ್ರಿ ಅಮ್ಮಾಜಿ ಹೀಗೆನಲು ಎನ್ನಾಸೆಗಳು ಸುಡಲಿ |
ಬಯಲು ಕತ್ತಲಿದು ಬಡಧೈರ್ಯನಿಗೆ | ಕೊಳ್ಳಯ್ಯ ಬಲಗೈ ಭಾಷೆಯನು || ೨೦ ||
ನೀನೇಕೆ ಬರಬೇಕು ತಾಯಿ ಸೇರದವನು | ಆಳಿಲ್ಲವೇನೋ ಕಂಪಿಲಗೆ |
ಓರಂತೆ ಸದೆಬಡಿದು ರಾಯನ ಮುಂಗಡೆಯೆ | ನೀಗುವೆ ತನ್ನಯ ತನುವ || ೨೧ ||
ಕೇಳಿ[ದ]ನು ತನ್ನಯ ಸೂಳೆ ಮುಂಡೆಯ ಚಾಡಿ | ಬಾಲನ ಸತ್ಯ ತಿಳಿದಿಲ್ಲವೆ |
ಕೋಳಿಯ ಬಡಿದಂತೆ ಕಾಲ್ಹಿಡಿದು ಬ[ಡಿ]ವೆನು ಮಂತ್ರಿ | ಹೀನಾಯ ಬಿಡದು ಧರೆಯೊಳಗೆ || ೨೨ ||
ಕಾಲನಾರ್ಭಟವಾಗೆ ಕಂಡಾಗ ಮಂತ್ರಿಯು | ಜೀವದೊಳಗೆ ಬೆಚ್ಚಿ ಬೆದರುತಲಿ
ಆವಾಗ ರಾಮಗೆ ಧರ್ಮದೇವತೆ ಬಂದು | ಕೂಡಿದ ಪುತ್ರನಾತ್ಮದಲಿ || ೨೩ ||
ನೀನೇಕೆ ಬೆದರುವೆ ಚದುರ ಮಂತ್ರಿಯೆ ನಿಮ್ಮ | ದೊರೆ ಪೇಳಿದ್ಹಾಗೆ ಮಾಡೆನಲು |
ನರಕದ ಸೂಳೆ[ಯ] ನುಡಿಗೇಳ್ವ ಮಾತಿಂಗೆ | ಬರುತಿದೆ ಎನಗೆ ಮಂತ್ರಿ ಸಿಟ್ಟು || ೨೪ ||
ಧರೆಯ ನಾರಿಯರೆಲ್ಲ ಮುಂದವನು ಕಡೆಯೆಲ್ಲಿ | ಮುದಿಯಗೆ ಹೆದರಬೇಕಾಯ್ತು |
ಹಡೆದಾಕೆ ಒಬ್ಬಳ ನೋಡಿ ತಡೆದೆನು ಮಂತ್ರಿ | ಕೊಡುವೆನು ದೃಢವಾಗಿ ತಲೆಯ || ೨೫ ||
ಜಗವೆ ಬಲ್ಲದು ಸ್ವಾಮಿ ಕೊಲುವಾತನಹುದೆಂದು | ತೃಣಕಿಂತ ಕಡಿ ನರಜೀವ |
ಎಲುವಿಲ್ಲದ ನಾಲಗೆ ಹಲವಂ[ದ] ನುಡಿಯದೆ | ಕಳವಿರಲು ಪಿತನ ಕೊಂದೆಂದು || ೨೬ ||
ದೃಢವಿರಲು ತನ್ನಯ ತಲೆಗೊಡುವ ಹರ ವೆಚ್ಚ | ಕೊಡದಿಹನೆ ಎಂದು ಆಡುವರು |
ಸರಿ ಮಂತ್ರಿ ಈ ಮಾತು ಶತ ವರುಷ ತುಂಬಿತು | ಮುನ್ನವೆ ಹೊಡಕೊಳ್ಳೊ ತಲೆಯ || ೨೭ ||
ಕಂಪಿಲರಾಯನ ಪಂಥ ಗೆಲಿದರೆ ಸಾಕು ಭೂ | ಕಾಂತಲಿ ಸ್ಥಿರವುಂಟೆ ಕಾಯ |
ಸಂತೆನ್ನ ಲಿಖಿತವು ತಂದೆ ಕರೆಯೊಳು ಅಳಿಯೆ | ಹೊಂದುವುದು ಸದ್ಗತಿಯ ಫಲವು || ೨೮ ||
ನಂಬಲಾರದೆ ಮಂತ್ರಿ ಭಯಗೊಂಡು ದೂರದಿ ಇರುವೆ | ನಂಬುಗೆ ಕೇಳ್ವೆ ಬಲಗೈಯ |
ಚಂದ್ರಾಯುಧ ಪಿಡಿಯೆ ಕಳವೆಂಬುದು ತನಗಿಲ್ಲ | ಪಿತನೆಂದ ಆಜ್ಞೆಯ ಮಾಡಿಕೊಳ್ಳೊ || ೨೯ ||
ಸತ್ಯಪುರುಷನ ಮಾತು ಸತ್ತರೆ ಅಡಗದು | ಪೃಥ್ವಿಯುಳ್ಳನಕ ನಿಶ್ಚಿತವು
ಚಿತ್ರಾಂಗಿ ಕೊಲ್ಲಳೆ ತಪ್ಪಿಲದ ಸಾರಂಗ | ಪುತ್ರನ ವಾಕ್ಯ ಪೊಲ್ಲಪುದೇ || ೩೦ ||
ಆಯುಧವ ಕೊಡಲಾಗಿ ನೋಡಿದ ಮಂತ್ರಿಯು | ಹೋಗಿಲ್ಲ ಕರ್ಮಕೆ ಇವನು |
ಹಾದರಗಿತ್ತಿಗೆ ಒಳಗಾಗದಿರಲು ಇಷ್ಟು | ಮೂಲವನು ತಂದು ಹಣ್ಣಿದಳು || ೩೧ ||
ಆರನೆಂಬುವುದೇನು ಪೂರ್ವದ ಫಲವಿದು | ಹೇಳಿದ ಗುರು ವಾಕ್ಯ ಹುಸಿಯೇ |
ಕೇಡಿರಲು ಇವನೊಳಗೆ ಕೊಡುವವನೆ ಪಿರಂಗಿಯ | ಕಾರಗಡಿವನು ಲಕ್ಷ ಬಲವ || ೩೨ ||
ತಪ್ಪನು ಪರಸತಿಗೆ ಕಟಕಿಯ ಮಾತೇನು | ಒಪ್ಪದಿರಲು ಕಂಡ ಹದನ
ಮುಪ್ಪಿನ ಕಾಲಕೆ ಮುದಿಯಗೆ ಶ್ವಾನ | ಬುದ್ಧಿ ಹುಟ್ಟಿತು ಕಂಪಿಲಗೆ || ೩೩ ||
ಪುತ್ರ ರಾಮಗೆ ಹೋಗಿ ಮತ್ತೆ ಕರಗಳ ಮುಗಿದು | ಒತ್ತಿನೊಳಗೆ ಕುಳಿತು ಪ್ರಧಾನಿ |
ಸತ್ಯದೊಳು ಹರಿಶ್ಚಂದ್ರ ವಾಕ್ಯ ಪೇಲುವೆ ನಿಮಗೆ | ಚಿತ್ತಕ್ಕೆ ಹೇಗೆ ತೋರುವುದು || ೩೪ ||
ಹೇಳಯ್ಯ ಪ್ರಧಾನಿ ಹಿರಿಯರಲ್ಲವೆ ನೀವು | ಕೇಳದಿರಲು ತಾನು ಮರವೇ
ಜಾಣ ಮಂತ್ರಿಯ ಮಾತ ಮೀರಿನ್ನು ನಡೆವವಗೆ | ಬಹಳ ಕೇಡುಂಟು ಧರೆಯೊಳಗೆ || ೩೫ ||
ಇದಕೊಂದು ಕಥೆಯುಂಟು ಹೃದಯದಿ ಲಾಲಿಸಿ | ಮದನವತಿಯೆಂಬ ಪಟ್ಟಣದಿ |
ಸೊಗಸಾಗಿ ಆಳುವಂಥ ಚಕ್ರವರ್ತಿಗೆ | ಭಾನುಮತಿಯೆಂಬ ಸ್ತ್ರೀ ಮದುವೆ || ೩೬ ||
ಹಗಲಿರುಳು ಆಕೆಯ ಅಗಲಿ ಜೀವಿಸಲಾರ | ಸದರಿನೊಳು ಕುಳಿತು ಸಮನಾಗಿ |
ಇರುತಿರಲಾತನ ವರಮಂತ್ರಿ ಪೇಳಿದ | ದೊರೆ ರಾಣಿ ಬರಸಲ್ಲ ಹೀಗೆ || ೩೭ ||
ಹೇಗೆ ಮಾಡಲಿ ಮಂತ್ರಿ ಕಾಣದೆ ಅರಗಳಿಗೆ | ಜೀವಿಸಲಾರೆ ನಾನವಳ |
ಭೂಮಿಕಾಂತನೆ ಕೇಳೊ ಈಕೆ ಲಾವಣ್ಯಕೆ | ಕಾಗದೊಳು ಬರೆಸಿಕೊಡುವೆ || ೩೮ ||
ಹಾಗೆ ಮಾಡೈ ಮಂತ್ರಿ ನೋಡಿನ್ನು ತಾ ಮರೆತು | ಜೀವ ಕುಳ್ಳಿರುವೆ ಸದರಿನಲಿ |
ಜಾಣ ಚಿತ್ರಕನಿಗೆ ಪೇಳಲಾಕ್ಷಣದೊಳು | ಭಾವಕ್ಕೆ ಮಿಗಿಲಾಗಿ ಬರೆಯೊ || ೩೯ ||
ಬರೆವಂಥ ಸಮಯದಿ ಕರದಿ ಕಪ್ಪಿನ ಕಡ್ಡಿ | ಉದುರಿ ಬೀಳಲು ಒಳದೊಡೆಗೆ |
ಒರೆಸುವ ಸಮಯದಿ ವರರುಚಿಯು ಬಂದಾಗ | ಇರುವುದಾಕೆಗೆ ಬೇಡವೆನಲು || ೪೦ ||
ಹರುಷದಿ ಕೊಡಲಾಗ ರಾಯ ಭಾವಕೆ ಮೆಚ್ಚಿ | ಒಳದೊಡೆಯ ಮಚ್ಚೆ[ಯ] ಕಂಡ |
ಪುರುಷ ಬಲ್ಲವೆ ಹೊರತು ಬರೆದಾತ ಬಲ್ಲನೆ | ಹಿಡಿತರಿಸಿ ಕೇಳವನನೆಂದ || ೪೧ ||
ಬರೆವಾಗ ಲೆಕ್ಕಣಿಕೆ ಕೈಜಾರಿ ಬೀಳಲು | ನಿಲಿಸಿದ ವರರುಚಿಯು ಉಂಟೆನುತ |
ಭಾನುಮತಿ ವರರುಚಿಗೆ ಸ್ನೇಹಗಳು ಅಹುದೆಂದು | ಬೇಕಾದವನು ಪಿಡಿದು ಕೊಲ್ಲೆನಲು || ೪೨ ||
ದೇವಾ[ಈ] ವರರುಚಿಯು ಅಲ್ಲ [ವು] ಕರನು ಅಲ್ಲ | ರಾಯಗೆ ಮಂತ್ರಿ ಬರಲು ಹೇಳೆ |
ಕೇಳ[ದೆ] ಆ ಮಾತ ತಳವಾರನ ಕರಕಿತ್ತು | ಪ್ರಾಣವ ತೆಗೆಯೆಂದು ಪೇಳೆ || ೪೩ ||
ತಳವಾರನೊಳು ಉಸುರೆ ಪ್ರಧಾನನು | ಬಹುಕಾರ್ಯವುಂಟು ಮಡಗೆನಲು |
ಇಡಲಾಗ ಮತ್ತೊಂದು ದಿವಸದಿ ರಾಯನೆ | ತರಳ ಮೃಗ ಬೇಟೆಗೆ ಹೋದ || ೪೪ ||
ಚತುರಂಗ ಬಲದೊಳು ಬೇಟೆಯಾಡುವ ಸಮಯ | ದೊರೆ ಸುತಗೆ ಹರಿಣನು ಸುಳಿಯೆ |
…………………………………. | ಹರಿಣನ ಎಡಬಿಡದೆ ನಡೆದ || ೪೫ ||
ಕಡಲ ಸಾರಲು ಸೂರ್ಯ ಗಾಹುಡಿಸಲು ಕತ್ತಲೆ ಕು[ವರ] ಭಯ ಹುಟ್ಟಿ ವೃಕ್ಷ ಅಡರಿದನು |
ಕುರಿಗೊಂಡು ಕರಡಿಗೆ ವೈರಿ ವಾಹನಗಳಾಗಿ | ಮರದ ಮೇಲಿರಲು ಆ ಜಾಂಬ || ೪೬ ||
ಅನಿತದಿ ವ್ಯಾಘ್ರನು ಬರಲು ಕಂಡು ಮರನ | ಅಡರುತ ಕಂಡ ಕರಡಿಯನು
ತನುವಳಿವ ಕಾಲವು ತನಗಾಯ್ತು ಲಯಕಾಲ | ಕುವರ ಚಿಂತಿಸೆ ಜಾಂಬ ಬಾರೆನುತ || ೪೭ ||
ಕಡಿವೆನು ನಿನ್ನನು ತನಗೊಂದು ಗ್ರಹಿಸಿದೆ | ಹಿಡಿಯೆನಲು ನಂಬಿಗೆ ಕರಡಿ
ದೊರೆಯ ಮಗನು ನಿದ್ರೆ ಎಲೆಯ ಮುಚ್ಚಲು ನೋಡಿ ಮಲಗೆನಲು || ೪೮ ||
ಹುಲಿ ಬಂದ ಎಲೆ ಕರಡಿ ಮನುಜನ ಸ್ನೇಹಗಳೇನೊ | ಪಿಡಿದು ನೂಕುವನ ಭಕ್ಷಿಸುವೆ |
ಅನುದಿನ ಈರ್ವರು ವನದೊಳು ಬಾಳುವ | ವೈರ ತೀರದೊ ಇದರೊಳಗೆ || ೪೯ ||
ನಂಬಿದವನ ಕೆಡಿಸೆ ಶಂಭು ಮೆಚ್ಚನು ಎಂದು ಕರಡಿ ನುಡಿಯಲು [ಹುಲಿ] ಪೋಗೆ |
ದೊರೆ ಮಗ [ನೊಳು] ಕರಡಿವನ ನೋಡುವರೆ | ಮಲಗುವ ಇವನಡಿಯೊಳಗೆ || ೫೦ ||
ಹುಲಿ ಬಂದ ಎಲೆ ಮನುಜ ಬೆಳಗಾಗಿ ತಿಂಬುವದು | [ಒದೆ]ದು ನೂಕೆನಲು ಕರಡಿಯನು |
ಬಡಿದು ಹಾಕುವೆನೆನಲು ಉದಯಕ್ಕೆ ನೀ ಪೋಗು | ಅಹುದೆನುತ ಮೆಲ್ಲನೆ ನೂಕೆ || ೫೧ ||
ದಿಗಿಲನೆ ತಾನೆದ್ದು ಪಿಡಿ ಶಾಪ ಮರನೊಳು | [ಸಸೇಮಿರಾ] ಎನುತಲಿ ತಿರುಗೆ |
ಬೆಳಗಾಗಲವ ತಾನು [ತಳರಿ ] ಪೋಗಿ | ಬಲ ಕುದುರೆ ಹುಡುಕುತ ಬರಲು || ೫೨ ||
ರಾಯನ ಕುವರನ ಕಾಣುತ್ತ ಕರಕೊಂಡು | ಹೋಗಲು ತಮ್ಮಯ ಪುರಕೆ |
ಯಾರಾರು ಕೇಳಿದರು [ಸಸೇಮಿರಾ] ನೆಂಬುವ ಶಬ್ದ | ಆಡನು ಬದಲು ವಾಕ್ಯವನು || ೫೩ ||
ರಾಯ ಚಿಂತಿಸಲಾಗಿ ಯಾರು ಬಿಡಿಸಲಾಗಿ ಅರ್ಥ | ಭೂಮಿಯ ಕೊಡುವೆ ನಾನವಗೆ |
ದೇವವತರಿಸಿಯಡಿ ಬಿಡುವದಲ್ಲದೆ ಮತ್ತೆ | ಯಾರೊಡನೆ ತೀರದು ಎನಲು || ೫೪ ||
ಕೊಲುವರೆ ತಳವಾರ ಮಾಡಬಾರದೆಯೆಂದು ನುಡಿಯಲು ರಾಯ ದುಃಖದಲಿ |
ತೆಗೆದವನ ಕರೆತಂದು ದೊರೆಯ ಮಗನ ತೋರೆ | ಮೂರು [ಗ್ರಂಥ]ದಲಿ ಬಿಡಿಸಿದನು || ೫೫ ||
ವರರುಚಿಯಿಂದಲ್ಲಿ ಅರಸನ ಸುತನಳಿದ | ಧುರಧೀರ ರಾಮ ನೋಡೆನಲು
ಮಡಗುವೆ ಅವನಂತೆ ಮುದಿಯ ಕಂಪಿಲನ | ಭ್ರಮೆ ತಾರೊ ತನಕ ಪೇಳೆನಲು || ೫೬ ||
ಮಡಗಲು ವರರುಚಿಯ ಘನ ಬಾರದೆ ಮಂತ್ರಿಗೆ | ಉಳಿಯನೆ ರಾಯನ ಸುತನು |
ಬರುವುದೆ ಬೆನ್ನೊಳು ಅರಿಯ ಲೆಗ್ಗೆಯ ಸುದ್ಧಿ | ಬಾರನೆ ಸುರಿತಾಳ ದಂಡೆತ್ತಿ || ೫೭ ||
ಅಳಿಯನು ಎನುತಲಿ ಹಿತಗೊಳಿಸಿ ಪೇಳುವನಲ್ಲ | ಉಳಿಹಿಕೊಂಬರೆ ಮಾನವನು |
ಮನವೊಪ್ಪಿ ಚಿತ್ತದೊಳು ರಾಮ ಒಪ್ಪಿದರೆ | ಮಡಗುವೆನು ತಿಳಿದ ಬುದ್ಧಿಯಲಿ || ೫೮ ||
ಆಗಲೈ ಎಲೆ ಮಂತ್ರಿ ಸಾವಿಗಂಜುವನಲ್ಲ | ನೀ ಪೇಳುವ ನುಡಿಯ ಒಳಗಹೆನು |
ತಾನುಳಿಯೆ ನಿನ್ನಯ ಬೇರ ಕಿತ್ತದೆ ಬಿಡನು | ಆ ದ್ರೋಹವು ಎನ್ನ ಬಾಧಿಸದೆ || ೫೯ ||
ಮಾಡುವೆ ಅದಕೆಂದೆ ಮೂರ್ತ ಈಗಳಾನು | ಪಾಲಿಸು ವರ ಮಾಸಕೆಂದ |
ವಾಯು ಗಮನದಿ ಬಂದು ಪ್ರಧಾನಿ ನೆಲಮಾಳಿಗೆ | ಬೀಗಮುದ್ರೆಯ ತೆಗೆದನು || ೬೦ ||
ಅಟವಿಯಲು ಮಡಗುವೆ ರಾಮನಾಥನ | ತಾ ವಿವೇಕದಲಿ ನೋಡಿದನು |
ದೇವ ಜಟ್ಟಂಗಿಯ ರಾಮೇಶನ ಗುಡಿಯೊಳು | ತಾವ ಮಾಡಿದನು ರಾಮನಿಗೆ || ೬೧ ||
ಹುಲು ಅಡಗ ನೆಲಮಾಳಿಗೆ ತೋಡಿಸಿ | ಕಲಿ ರಾಮನ ಸತ್ಕರಿಸಿ
ಕಲ್ಲು ಮನದ ರಾಮ ತುರುಕ ನೇಮಿಯ ಗಂಡ | ನೆಲಮಾಳಿಗೆಯೊಳಿರಲೆಂದು || ೬೨ ||
ಆರು ತಿಂಗಳು ಗ್ರಾಸ ನೀರು ಎಣ್ಣೆಯು ಸಹ | ಬೇಳೆ ಬೆಲ್ಲ ಉಪ್ಪು ಮೆಣಸು
ಹಾಲು ಮಜ್ಜಿಗೆ ಘೃತವು ಅಕ್ಕಿ ಸಕ್ಕರೆ ತುಂಬಿ | ತೂಗು ಮಂಚಗಳ ಉಯ್ಯಾಲೆ || ೬೩ ||
ಕಾಯ ತಮ್ಮನ ತಂದು ಮಡಗಿ ಜೋಡಿಗೆ ಮತ್ತೆ | ನಾಲ್ವರ ಕರದೊಳಗಟ್ಟಿ |
ಲಿಂಗ ಕಾತಣ್ಣ ಕೌಳಿಯ ನಾಗ ಲಿಂಗಣ್ಣ | ಲಿಂಗಯ್ಯ ಮುಮ್ಮಡಿ ಎನಿಪ || ೬೪ ||
ಭಾವಜರೂಪನ ಮಡಗಿ ಬೈಚಪ್ಪ | ನೋವ ತಾಳಿದ ಮನದೊಳಗೆ |
ಆವ ಕಾಲಕೆ ತುರುಕರ ದಂಡು ಬರುವುದೊ | ಕೋವಿದ ರಾಮನ ತೆಗೆವೆ || ೬೫ ||
ಕೂಗಲು ಆರ್ಭಟಿಸಿ ಗವಿಯ ಬಾಗಿಲ ಮುಂದೆ | ಜ್ಞಾನವಾಗಲು ನಿದ್ರೆ ಹರಿದು |
ತಾರ ಕಡಿಯೆನು ಎಂದು ಹಿಡಿದು ಕಂಡೆಯ ಹೊರಡೆ | ಮಂತ್ರಿಯ ಧ್ವನಿಗೇಳಿ ನಿಂತನು [ಕಳ್ಳ]ರಾಮ || ೬೬ ||[2]
ಕುಂತು ಈರ್ವರು ಏಕಾಂತ ಮಾಡುತ ಪೇಳೆ ಭೂ | ಕಾಂತ ರಾಮಗೆ ಬಂದ ಸ್ಥಿತಿಯ |
ರಾಯನಿಲ್ಲದ ಮನೆಯ ರಾಮ ಚೆಂಡನು ಆಡೆ | ಹೋಗಿ ಬೀಳಲು ರತ್ನಿ ಮನೆಗೆ |
ಕೇಳುವರೆ ಹೋದಲ್ಲಿ ನಾನಾ ಗಾರುಡವ ಮಾಡಿ | ದ್ರೋಹಿ ಪಿಡಿಯಲು ಒಲ್ಲೆನೆನಲು || ೬೭ ||[3]
ಸತ್ಯವುಳ್ಳವ ರಾಮ ಮುಟ್ಟನು ಪರಸತಿಯ | ಮರ್ತ್ಯಬಲ್ಲುದು ನೀನು ಬಲ್ಲೆ |
ಸಿಕ್ಕದೆ ಬರುವನು ತೊತ್ತು ಗಂಡಿಗೆ ಹೇಳಿ | ಮುಟ್ಟಿಕೊಂಡೆನುತ ಠೌಳಿಯನು || ೬೮ ||
ಹಲವಾಡಿಯ ಮಾತನು ನೆಲೆಯೆಂದ ಕಂಪಿಲ | ಕೊಲುಯೆಂ[ದು] ಎನ್ನ [ಕಳಿಸಿದ] |
ಮಡಗಿದೆ ಕುಮ್ಮಟವನುಳುಹಿ ತೋರುವೆ ತಾನು | ಕೊಡಬೇಕು ನಿನ್ನಯ ತಲೆಯ || ೬೯ ||
ರಾಮನಿರಲು ರಾಜ್ಯ ಭೂಮಿಯನುಳುಹುವ | ನಾ ಸಾವ ಶಂಕೆ ನಾವಿರಲು |
ಏನುಂಟು ಕಳ ರಾಮ ತಲೆಗೊಡಲು ನಿನ್ನ | ಪ್ರಾಣಕ್ಕೆ ಬೆಲೆಯೆ ಲೋಕದಲಿ || ೭೦ ||
ಪರಹಿತಕೆ ತಲೆಗೊಡಲು ಗುರುಪಾದ ಕಂಡೆಲ್ಲ | ಶರಣರಲ್ಲದೆ ನರಕವುಂಟೆ |
ಬರಲೊರ್ವ ಜಂಗಮವು ಮಗನ ಬೇಡಲು ಕೊಂದು | ಉಣಿಸಲು ಹರನೊಲಿದ ಧರೆಯ || ೭೧ ||
ಪರಹಿತಕೆ ಶೂಲದ ಮರನೇರಿ ಗುಂಡಯ್ಯ | ರಜತಾದ್ರಿ ಕಂಡುದನರಿಯಾ |
ಬಲುಮೆ ಸಾಧನದೊಳಗೆ ಕೊಲಬೇಕೆಂದು ಬಂದವನಲ್ಲ | ನಿನಗಿಲ್ಲಿ ಸದ್ಗತಿಯುಂಟು || ೭೨ ||
ಹರಹರ ಎನುತಾಗ ಕಳರಾಮ ಕರ್ಣವ | ಬೆರಳಿಂದ ಮುಚ್ಚೆ ಶಿರದೂಗೆ |
ಪರನಾರಿ ಸೋದರ ಹರಿಚಂದ್ರ ರಾಮಯಗೆ | ಬರಬೇಕೆ ಇಂಥಪಕೀರ್ತಿ || ೭೩ ||
ಮುದಿಮೂಳ ತನ್ನಯ ಒಡೆಯನ ಕೊಲಬೇಕೆ | ಕೊಡುವೆನು ತನ್ನ ಪ್ರಾಣವನು |
ಪೊಡವಿಯೊಳಗೆ ಕಾಯ ಸ್ಥಿರವಾಗಿ ಪಡೆದಿಹುದೆ | ದೃಢದೊಳು ತಲೆಗೊಡುವೆ ಮಂತ್ರಿ || ೭೪ ||
ಸತಿಯ ರತಿಗಲೆಗಿನ್ನು ಒಡಗಾರ ಸತಿಯಾಕೆ | ಪಿತನ ಮೀರುವ ಪುತ್ರ ಶತ್ರು |
ಹತಗಾಲ ಬಂದಾಗ ಒಡೆಯಗೆ ತಲೆಗೊಡದ | ಬಂಟಗೆ ನರಕ ತಪ್ಪುವುದೆ || ೭೫ ||
ಬಲುಮೆ ಮಾಡುವದೇಕೆ ಬಲ್ಲವಗೆ ಮೇಲವನು | ಕೊಡಬೇಕು ಎಂಬ ದೃಢವಿರಲು |
ಪಿಡಿದು ಕೊಂದರೆ ನಮ್ಮ ಒಡೆಯ ರಾಮಗೆ ಕೊಂದು | ತಮಗೆ ನರಕದ ಪುಳುಗೊಂಡ || ೭೬ ||
ನಿತ್ಯವಿಲ್ಲದ ಕಾಯ ನರಜನ್ಮ ಸಾಕೆನಗೆ | ಮುಕ್ತಿಗೇರುವ ಇಂದಿನೊಳಗೆ |
ಹೊಕ್ಕು ಗಂಗೆಯ ಮುಳುಗಿ ಹರನ ಸ್ಮರಣಿಲಿ ಬಂದು | ಉತ್ತರ ಮುಖವಾಗಿ ಕುಳಿತ || ೭೭ ||
ಹರಹರ ಶಂಕರ ವರದ ಜಟ್ಟಂಗಿಯ | ಸ್ಮರಣೀಲಿ ಮನವಿಕ್ಕಲಾಗ |
ಕರಿಕಂಠ ಒಡೆಯಗೆ ಅರಿವಾಗೆ ಪುಷ್ಪಕವ | ಕಳುಹಲು ಅವನ ತರಹೇಳೆ || ೭೮ ||
[ಮೇಘ ಗಮನದಿ] ಬಂದು ದೇವದುಂದುಭಿ ನಿಲ್ಲೆ | ರಾಮನ ಸ್ಮರಣೆ ನಿಲ್ಲಲಾಗ |
ಕಾಣುತ್ತ ಮಂತ್ರಿಯು ಖಡ್ಗದ ಝಳಪಿಸಿ | ತಾ ಹೊಡೆಯಲು ಮಂಡೆಯ ಪಿಡಿದ || ೭೯ ||
ಅವನ ಹೊಂದಿರುವ ನಾಲ್ವರು ಕಳ್ಳರನು ಪಿಡಿದು | ಬೇಗದಿ ಶಿರಗಳನು ತಂದು
ನಾ[ಕ]ಲೋಕಕೆ ಸುರರು ಒಯ್ದು ಕಳ ರಾಮನ | ಶ್ರೀ ಗುರುವಿನಡಿಯ ಕಾಣಿಸಲು || ೮೦ ||
ಗಿರಿಜೆಯ ಕೇಳ್ದಳು ಗೀರ್ವಾಣಮೂರ್ತಿಯ | ಫಲವೇನು ಈಗಾದ ಸ್ಥಿತಿಯು |
ರಮಣಿ ಕೇಳೆಲೆ ಹಿಂದೆ ಕುರುಹ ತೋರಿದೆವಲ್ಲೆ | ತರಳೆ ಪಿಡಿಯಲು ಜರೆದು ಬರನೆ || ೮೧ ||
ಒಲಿಯಲು ನಾರಿ ಒಲೆಯದಿದ್ದರೆ ಮಾರಿ | ಎನುವುದು ಸಹಜ ಪಾರ್ವತಿಯೆ ||
ಕಡೆಗವಳು ಮಾಡಿದ ಕಲಾಪವಿಧಿ ಬಂದು | ಬಡಿದುದು ಬಡವನ ತಲೆಗೆ || ೮೨ ||
ರಮಣಗೆ ಆಡಲಿಡೆ ಒಳಗಾಗಿ ಉಸುರಾಳಿ | ಕೊಲವೆಂದ ತನ್ನ ಬಾಲಕನ |
ಮಡಗಿ ಮಂತ್ರಿಯು ಅವನ ಕುರುಹಾಗೆ | ತಲೆಯ ವರ ತಾಗಿ ಇವ ಅವಗೆ || ೮೩ ||
ಅವನೆಲ್ಲಿ ಇವನೆಲ್ಲಿ ಠವುಳಿ ಎನ್ನಲು ಗಿರಿಜೆ | ಅವನ ಶಾಪದಲಿ ಇವನಾದ |
ಫಲಸಾರವಿಲ್ಲದೆ ಜಟ್ಟಂಗಿಯ | ಭಜನೆ ಮಾಡಿದರು ಕೇಳಗಜೆ || ೮೪ ||
ಹರ ಮೆಚ್ಚಿ ಕೊಡಲಾಗ ಅಭಯದ ಪುಷ್ಪವನು | ಕದಳಿ ಫದಲೊಳು ಸೇವಿಸಲು
ಶೂಲದ ಪುಷ್ಪವ ತಂದು ತಮ್ಮಡದಿಗೆ ಕೊಟ್ಟ | ಜನಿಸಿದ ಅರ್ಧ ರೂಪ ಇವಗೆ || ೮೫ ||
ನಗರದಿ ಕಳವನು ಹಗಲಿರುಳು ಮಾಡಲು ಇವನು | ಪಿಡಿದು ಬಂಧಿಸಿದಾ ಸ್ವಪವನು
ಸಿಡಿದೋಡಿ ಬಂದೊಬ್ಬ ಮೊಗವೀಯೊಳಿರುತಿರಲು | ತಿಳಿದೇನೆ ಭೇದವ ಸತಿಯೆ || ೮೬ ||
ರಾಮನ ಮಡಗಿ ಪ್ರಧಾನರು ಉಳಯಲ್ಕೆ | ಉಪಾಯ ಕಾಣದೆ ಬಿರಿದಿವನ ಕೇಳೆ |
ಪ್ರೀತಿಯಿಂದಲಿ ಕೊಟ್ಟ ಪರಹಿತಕೆ ಪ್ರಾಣವ | ಸೇರಿದ ಕೈವಲ್ಯ ಗತಿಯ || ೮೭ ||
ಅವಗೆ ಇವನಿಗಬ್ಯಾಂತ್ರ ಬಹು ಹೆಚ್ಚು ಕಡಿಮೆದ್ದು | ಗಿರಿಜೆ ಪಾರ್ವತಿಯು ಮೆಚ್ಚಿದಳು
ಪರಹಿತಕೆ ತಲೆಗೊಡಲು ಹರ ನಿಮಗೆ…………. | ಸುರಿಯಲು ಪುಷ್ಪದ ಮಳೆಯು || ೮೮ ||
ತಲೆಗಳ ಶೃಂಗಾರ ಪಲಬಗೆಯ ಮಾಡಿಸಿ | ಮಂತ್ರಿ ಕೆಲಸ ಪನ್ನೆಗಳನು ತಿದ್ದಿ |
ತಿಲಕ ಕಸ್ತುರಿ ಇಟ್ಟ ಸಿದ್ಧನಾಮವ ಕೊನೆಗೆ | ಜಡೆಯ ಹಣ್ಣಿಸಿ ಜುಟ್ಟುಗಳ || ೮೯ ||
ಕಳ್ಳ ರಾಮನ ತಲೆಯ ಬೆಳ್ಳಿ ತಟ್ಟೆಲಿ ಇಟ್ಟು | ಒಳ್ಳೆಯ ವಸ್ತ್ರದಿ ಮುಚ್ಚಿ |
ತಾಳಾನೆ ಉದಯಕೆ ತರಲಾಗ ತಲೆಗಳ | ಕಣ್ಣೊಳು ಜಲವ ಸೂಸುತಲಿ || ೯೦ ||
ಸದರಿಗೆ ಬರಲಾಗ ದೊರೆಯು ಕಂಪಿಲರಾಯ | ಅನಿತದಿ ಮಂತ್ರಿ ಕರ ಮುಗಿದು |
ಉಳಿತ ನಯನದಲಿ ಕೆರೆಕೋಡಿ ಬಿದ್ದಂತೆ | ತರಳನ ತಲೆ ಕೊಳ್ಳೊ ಭೂಪಾ || ೯೧ ||
ಸತಿಯ ಭಂಗವ ಮಾಡಿದ ಸುತನ ತಲೆಯ ಕೊಳ್ಳೊ ಮತಿಗೇಡಿ ಕಾಟನ ಶಿರವಿಡಿಯೊ |
ಜೊತೆಗಾರ ಲಿಂಗನ ನಾಗನ ತಲೆಯಿದು | ಸುಖಕರದ ಹನುಮನ ತಲೆಯು || ೯೨ ||
ಕೊಳ್ಳೊ ಕೊಳ್ಳೆನಲು ಎಲ್ಲರನೇತಕೆ ಕೊಂದೆ ಸಲ್ಲದು ಮಂತ್ರಿ ಇದು ನಿನಗೆ |
ಬಲ್ಲಿದ ಮಗನಳಿದ ಬೀಳುವ ಮರನನು | ನಿಮ್ಮೊಳಗಾಯಿತೆ ದೊರೆಪಟ್ಟ || ೯೩ ||
ಮರುಳು ಏರಲು ರಾಯಯ ಮರ ನೀರ ಕುಡಿವವಳ | ಒಡನಾಡೆ ಮದವೆದೆ ಬಂತು
ಬಿಡು ನಾಯಿ ಮಾತಿನ್ನು ಸುಡು ರಾಯನಿವರಿಂದ | ನಡೆದ ಅಪರಾಧವ ಕೇಳೋ || ೯೪ ||
ಕಾಣದೆ ಕಳತ್ರಯವ ಕುಮಾರನ ಕೊಲ್ಲಿಸಿದೆ | ಕೇಣನೆ ನಿಮಗಿಂದ ಹಿಂಡಿ |
ದೇವರಾಜ್ಞೆಯವಿದ ಮಾನಪಡಿಯಲು | ಮೂರು ಮಲೆತವರು ಇವರೊಳಗೆ || ೯೫ ||
ಧರ್ಮ ಮಾತುಗಳಿಂದ ಕೈ ಹಿಡಿದು ಪೇಳಿದ | ರಾಯ ಕಡಿಗಾರುನೂರು ಜನವ |
ಪಿಡಿಯಲು ತ್ರಾಣಿಲ್ಲ ಕಡಿಗೊಂದು ನಿನಗಾಗಿ | ಹೊಡೆಸಿದೆ ಬಾಣ ಸರಲೊಳಗೆ || ೯೬ ||
ಧರಣೀಂದ್ರ ನಿಮ್ಮಯ ಚರಣಕಂಜುವೆ ಹೊರತು ಮಳದೊಳಗುಂಟೆ ರಾಮುಗನು |
ತಿಳಿದಿಲ್ಲ ರಾಜೇಂದ್ರ………………….ನಾಲ್ವರು | ಕಳುಹಿದ ರತ್ನಿಯ ಮನೆಗೆ || ೯೭ ||
ಬಿಡು ಅವರ ಮಾತುಗಳ ಹಿಡಿ ನಿನ್ನ ಹಗೆಯಾದ | ಮಗ ಮುದ್ದು ಚೆನ್ನಿಗರಾಮನ ಶಿರವ |
ತೆಗೆದಿಡಲು ಮುಸುಕನು ಚಂದ್ರಮುಖವನು ಕಂಡು | ಬೊಂಡುತ ಬೀಳಲು ಸದರ ಕೆಳಗೆ || ೯೮ ||
ಬಾಲನ ತಲೆಯನ್ನು ಕಾಣುತ್ತ ಕರಿಗಳಿಗೆ | ಮಾಡಿದಂತಾದ ಉದಸಿಯು |
ಗಾಯೊಡೆದ ಮದದಂತೆ[ಬೇ]ವುತ ಒಡಲೊಳಗೆ | ಈಡಾಡುತಲು ಜಲ ಉದಕ || ೯೯ ||
ಸರಳೇರಿದಂದದಿ ಕುದಿವುತ್ತ ರಾಜೇಂದ್ರ | ಉರಿವ ಗಾಯದಿ ನೊಂದಂತೆ |
ಉರಿವ ಅಗ್ನಿಗೆ ಎಣ್ಣೆ ಸುರಿದಂತೆ ಕಂಪಿಲನು | ಹೊರಳುತ್ತ ಹುಡಿಯ ಮಣ್ಣೊಳಗೆ || ೧೦೦ ||
ಕೊಲಬಹುದೆ ಎಲೆ ಮಂತ್ರಿ ಕಡು ಜಾಣ ನೀನಿನ್ನು ಕಳುಹದೆ ಬರಲು ಅಪ್ಪಣೆಯ |
ತಂಡವು ಮಾಡದೆ ಕೈಯ ಹಗೆಯಾಯ್ತು ರಾಮನು | ಕಳೆಯಬೇಕೆಂಬ ದುಃಖದಲಿ || ೧೦೧ ||
ಮೂರು ಅಪ್ಪಣೆಯನು ಕಾಯಲಿ ಬೇಕು ಮಂತ್ರಿಗಳು | ಭಾಗೀರಥಿಯು ಮೂರು ವ್ಯಾಳೆ |
ತೋರದೆ ಮೂರು ವ್ಯಾಳೆ ಮ್ಯಾಲಕ್ಕೆ ಒಳಕೊಳ್ಳೊ | ಮದನಂಗೆ ಚೆಲ್ವ ಬಾಲಕನು || ೧೦೨ ||
ಕೊಲ್ಲೆಂದ ಮಾತಿಗೆ ಕೊಲ್ವರೆ ಬೈಚಪ್ಪ | ನಿಲ್ಲಲಾರದೆ ಕಾಲ ಗಳಿಗೆ |
ಬಲ್ಲವರು ಅದಕೊಂದು ತಂತ್ರಭಾಗವ ಮಾಡಿ | ನಿಲ್ಲಿಸಿ ನೃಪನನೆಚ್ಚರಿಸಿ || ೧೦೩ ||
ನಂಬುವರೆ ರಾಯರ ಮಾತನು ಗೆಲುಹದಕೆ | ಕುಂಭ ಕುಚದ ಹಾಲನುಂಡು |
ಕೊಂದವನ ತಲೆಯನು ತಾರದಿರಲು ಎನ್ನ | ಅಂಗವ ಕೊರೆವ ಲೇಸಿಂದೆ || ೧೦೪ ||
ಸೋದರ ಅಳಿಯನು ಎಂದು ಕಾಯ್ದುದುಂಟಾದರೆ | ಸೂಲಕ ತೆಗೆಸು ಲೇಸಿಂದೆ |
ಮೂರು ಅಭಯವ ಕೊಟ್ಟು ಮುಖವನು ತಿರುಹಿದೆ | ಕೋಡಗ ಕೊನೆಗೆ ನೆಗೆವಂತೆ || ೧೦೫ ||
ಸುರಿಗೆಯ ಜಡಿದೆತ್ತಿ ಹೊಡೆದಾಗ ರಾಮನು | ತನಗೇನು ಬುದ್ಧಿಯ ಪೇಳಿದನು |
ಇಡಬೇಡ ಮನದೊಳು ನುಡಿಯೆನಗೆ ಬೈಚಪ್ಪ | ಇರಿಕೊಂಡು ಸಾವೆನೀಕ್ಷಣದಿ || ೧೦೬ ||
ತಂದೆ ರಾಜೇಂದ್ರ ಸ್ಥಿರಪಟ್ಟವಾಳಲಿಯೆಂದ | ಬಂಧು ಬಳಗವು ಸುಖದೊಳಗೆ |
ಮಂದಗವನೆ ಹರಿಯಮ್ಮ ಇಟ್ಟೋಲೆ | ಕುಂದದೆ ಸ್ಥಿರವೆಂದ ರಾಮ || ೧೦೭ ||
ಸಾವಾಗ ಸಂಜೀವ ಯಾರಾರ ನೆನೆದನು | ಕೊಂದನೆ ಹಳೆಯ ಮರನಾಗಿ
ದಾಯಾದಿ ಸುರಿತಾಳ ಬಂದರಿನ್ನು | ಊರಿಗೆ ತ್ವರ ನೀನು ಎಂದ || ೧೦೮ ||
ಹೆಸರಲ್ಲ ಅಡಗಿತೆ ದೆಸೆವುಳ್ಳ ರಾಮನ ವಿಜಯ ಕೊಟ್ಟನು ಮುಪ್ಪಿನಲಿ |
ಅಸುರರ ತೆರದೊಳು ಸುರಿತಾಳ ಖಾನರು ಬರಲು | ಪಿತನಿಗೆ ಗತಿಯೇನು ಎಂದ || ೧೦೯ ||
ದುಃಖ ಸಲ್ಲದು ರಾಯ ನಕ್ಕಾರು ಕೇಳ್ದವರು | ಗಟ್ಟಿಯಾಗಿ ಇರ ಹೇಳು ರತ್ನಿಯನು |
ಹತ್ತೆಂಟು ಮಿಂಡರಿಗೆ ಉಂಬಾಕಿ ಆಡುವಳು | ಪಟ್ಟಕ್ಕೆ ಸಲುವಂಥ ಮಗನ || ೧೧೦ ||
[ತ]ಡಿ ರಾಯ ಅಳಲ್ಯಾಕೆ ಹಿಡಿ ನಿನ್ನ ಪುತ್ರನ | ಬಿರುದು ಬಾವಲಿ ಒಡವೆಯ |
ತೆಗೆದಿಡಲು ಕಂಡಾಗ ಅಡರಿತು ದುಃಖವು ಒಡಕೊಂಬ ತಲೆ ಮಂಡೆ ರಾಯ || ೧೧೧ ||
ಮಾತು ಮುಗಿಯಿತು ರಾಯ ಯಾತಕ್ಕೆ ಬರಿ ದುಃಖ | ಪಾತಕ ದ್ರೋಹಿ ಮೂಳನಿಗೆ |
ಆತಗೆ ಮಿಗಿಲಾಗಿ ರತ್ನಾಜಿ ಇರುವಳು | ಯಾತರ ಭಯ ನಿನಗೆ ಭೂಪ || ೧೧೨ ||
ಅತ್ತರೆ ಬರಲರಿಯ ಬೆಟ್ಟದ ತುದಿಗಡರಿ ಕೈ | ಬಿಟ್ಟು ಬೀಳ್ವವ ಬಾರರಿಯ |
ದುಃಖಗಳು ಬಿಡದರಸೆ ತಲೆಯಿಲ್ಲ ಇರುವವಳ | ನೀ ಕ್ಷೇಮ ಮಾಳ್ಪೆ ಪೇಳೆನಲು || ೧೧೩ ||
ಕರೆಸಯ್ಯ ಎಲೆ ಮತ್ರಿ ತರಳೆ ರತ್ನಾಜಿಯ | ಹದಿಯಲಿ ಅವಳ ಭ್ರಮೆ ಈಗ |
ಚರರಾಗ ಪರಿತಂದು ಬಿಜಮಾಡೆ ರಣದುರ್ಗಿ | ಮಗನ [ತಲೆ] ಬಂದುದೆ ಮುಖ ನೋಡೆ || ೧೧೪ ||
ತಂದಾರೆ ತೆಲೆಯೆಂಬ ಸ್ವರವು ಕರ್ಣಕೆ ಬೀಳೆ | ಒಂದಾರು ಭುಜವಾದೊ ರತ್ನಿ |
ಗಂಡಹುದು ಕಂಪಿಲ ರಂಡೆ ಬಾಳೆನುತಿರ್ದ | ಸಂಗಿಯನೊಡಗೊಂಡು ನಡೆಯೆ || ೧೧೫ ||
ಅಡಿ ಇಡಲು ಕಾಲಿಲ್ಲ ಪಿಡಿಯೆ ಸಂಗಿ ಕದನ | ನಿಜವೋ ಸಟೆಯೊ ನೋಡಿ ಬರುವ |
ವಿಗಡ ವೇಷವ ತಾಳಿ ಜನರು ಮೆಚ್ಚುವ ತೆರದಿ | ಉದುರುತ ನಯನದಿ ಉದಕ || ೧೧೬ ||
ನಿಲ್ಲುವಳು ಅಡಿಗಡಿಗೆ ಮೆಲ್ಲನೆ ನಡೆವುತ | ತಲೆ ಕಂಡು ಮುಸುಕ ಜಾರಿಸಿದೊ |
ಗಲ್ಲದ ಮೇಲೊಂದು ಬೆರಳಿಟ್ಟು ಕೈಚಾಚಿ | ಚೆಲ್ವ ಮಂತ್ರಿಯನು ಕೇಳಿದಳು || ೧೧೭ ||
ಕಾಮನ ಬಾಧೆಗೆ ಗುರಿಮಾಡಿ ಹೋದಂಥ | ರಾಮನ ತಲೆ ಹೌದೆನಲು
ಹೋದವೆ ಕಣ್ಣಿಂದು ಹುಣ್ಣಿಮೆ ಚಂದ್ರನು | ಮೂಡಿದಂದದಿ ತೋರುವುದು || ೧೧೮ ||
ಕಂಡಳು ಮುಖವನು ಹಿಂದಕ್ಕೆ ಮುಖವಾಗಿ | ಮಂಡೆಯ ಪಿಡಿದು ನಸುನಗುತ |
ಬಂದುದೆ ವಿಧಿ ನಿನಗೆ ಬಾಳುವರೆ ಫಲವಿದೆ | ನೊಂದೇನೋ ಎನ ಮಾತ ಮೀರಿ || ೧೧೯ ||
ಪಿಡಿಕೊಂ[ಡು] ತಲೆಯನು ಕರವೆರಡ ಭುಜತುಂಬ | ನಡೆದಳೊ ತನ್ನ ಅರಮನೆಗೆ |
ತೊಳೆದಾಗ ಮುಖವನು ಬದಲಾಗಿ ಶೃಂಗರಿಸಿ | ಕರುಹಿನ [ರೇಖೆ] ನೋಡಿದಳೋ || ೧೨೦ ||
[1] + ಶ್ರೀ ವಿರೂಪಾಕ್ಷಲಿಂಗಾಯನಮಃ (ಮೂ)
[2] ಹಸ್ತಪ್ರತಿಕಾರನ ಅನವಧಾನದಿಂದ ಬಹುಶಃ ಮೂಲದ ೩ ಪದ್ಯಗಳು ಇಲ್ಲಿ ಎರಡು ಪದ್ಯ (೬೬, ೬೭)ಗಳಾಗಿ ಲಿಖಿಸಲ್ಪಟ್ಟಿವೆ (ಸಂ)
[3] ಹಸ್ತಪ್ರತಿಕಾರನ ಅನವಧಾನದಿಂದ ಬಹುಶಃ ಮೂಲದ ೩ ಪದ್ಯಗಳು ಇಲ್ಲಿ ಎರಡು ಪದ್ಯ (೬೬, ೬೭)ಗಳಾಗಿ ಲಿಖಿಸಲ್ಪಟ್ಟಿವೆ (ಸಂ)
Leave A Comment