ಗಲ್ಲದ ರೇಖೆಲ್ಲೆ ಸಲ್ಲ ನಾಯ್ಕನ ಸಂಗಿ | ಕಲ್ಲಾಂತೆ ಕುಮಾರ ನೋಡಿ |
ಎಲ್ಲಿವನ ಮಡಗಿಟ್ಟು ಎರವಿನ ಶಿರತಂದು | ಇಲೆನ್ನ ಭ್ರಮೆಯು ಬಿಡಿಸಿದನೆ            || ೧೨೧ ||

ಭ್ರಾಂತು ಹಿಡಿಯಿತೆ ರತ್ನಿ ಬದಲು ಮಂಡೆಗಳೆಂದು | ಎಂತು ನೀ ಕಂಡೆ ಪೇಳೆನಗೆ |
ಮಚ್ಛೆ ಇಲ್ಲೆಂದೆ ನುಡಿಯೇನು ಚಿಕ್ಕಂದು | ಕಚ್ಚಲು ಕಾತರಕೆ ಗಲ್ಲ                      || ೧೨೨ ||

ಮೂಳಿಯೆನ್ನರೆ ನಿನ್ನ ಕೇಳಿದರೆ ಹೊರಗ್ಯಾರು | ಬಾಲನೊಳಗಾದಂಥ ಕಲಮು |
ಮಾಯವೆ ಮದಪ್ರಾಯವಾದ ಕಾಲಕೆ ಸಂತೆ | ಸೂಳೆಯೆನ್ನನೆ ರಾಜೇಂದ್ರ           || ೧೨೩ ||

ಕಳ್ಳ ಕಳ್ಳಿಗೆ ನೆಂಟು ಕಡಲೆ ಬೆಲ್ಲಕೆ ಜೋಡು | ಬೆಳ್ಳುಳ್ಳಿ ಜೋಡು ಒಗ್ರಣಿಗೆ |
ಸುಳ್ಳು ಬದ್ಧವ ಮಾಡಿ ಸಂಗಿ ಹೇಳಲು ಆಗ | ಒಳ್ಳೆದೆಂದಳು ಹಲವಾಡಿ               || ೧೨೪ ||

ಮುಖದೊಳು ಮುಖವಿಟ್ಟು ಮುತ್ತನು ಕೊಡುವಳು | ಬಿಗಿದೊತ್ತುವಳು ಕಕ್ಕಶ ಕುಚಕೆ |
ನುಡಿಯಲಿಲ್ಲವೆ ನಿನ್ನ ತಲೆಯ ಹೊಡೆಸುವೆನೆಂದು | ಒಲಿದರೆ ಈ ಪಾಡು ಬರದು     || ೧೨೫ ||

ನಿನ್ನಯ ಬುದ್ಧಿಯಲಿ ನೀನೆ ಅಳಿದೆಯೊ ರಾಮ | ಎನ್ನಯ ತಾಪಗಳ ನೀ ತೋರೊ |
ದಮ್ಮಯ್ಯ ಎಂದರೆ ಕೈಹಿಡಿದು ತಿರಿವಿಟ್ಟೆ | ಹೆಣ್ಣುಗಳ ಹಗೆಯೊಳು ಉಳಿದ್ಯಾ          || ೧೨೬ ||

ನೀರ ಮೀವೆನು ಸಂಗಿ ರಾಂನ ತಲೆಯನು ಈಗೆನ್ನ ಒಳದೊಡೆಯಲಿಟ್ಟು |
ಕೇಳಿದೆ ಬೈಚಪ್ಪ ಮೂಳಿ ಹೋಗೆನುತಲಿ | ತಾನಾಗ ಕಿಚ್ಚ ಕಾಣಿಸಿದ                  || ೧೨೭ ||

ರಾಮನ ಕೋಳಾಹಳದೊಳಗೆ ಅಡಗಿತೆ | ಭೂಮಿ ಬ್ರಹ್ಮಾಡ ಕುಮ್ಮಟದಿ |
ರಾಯಗೆ ರತ್ನಿಗೆ ಸಂತೋಷವಾಯಿತೆಂದು | ದೇವ ಮಂತ್ರಿಯು ನಡೆದ ಅರಮನೆಗೆ  || ೧೨೮ ||

ಹರಿಯಲು ಸುದ್ದಿಯು ನೆರೆಮನೆ ಮುಮ್ಮನೆ | ಹರದರಂಗಡಿ ಬೀದಿಯೊಳಗೆ |
ದುರುಳೆ ಮುಂಡೆಯು ರತ್ನಿ ತರಳ ರಾಮನ ಕೊಂದು | ಪುರವೆಲ್ಲ ಬೊಬ್ಬಿಟ್ಟು ಮೊರೆಯೆ        || ೧೨೯ ||

ಇತ್ತ ಕೇಳಿದಳಾಗ ಸತ್ತ ಸುದ್ಧಿಯ ರಾಮ | ಹೆತ್ತವಳು ಹರಿಹರದೇವಿ |
ಬೆಟ್ಟಕೆ ಬೇಗೆಯು ಹತ್ತಿದಂತುರಿದಳು | ಕುಟ್ಟಿಕೊಳ್ಳುತ ಬಂದಳಾಗ                   || ೧೩೦ ||

ಏನ ಮಾಡಿದ ತಪ್ಪ ಎನ್ನಯ ಮಗ ಮಂತ್ರಿ ಹೇಳದೆ ಎನಗೆ ಕೊಲ್ಲುವರೆ |
ಸೂಳೆಯ ಚಾಡಿಗೆ ಸುತನ ಕೊಂದನೆ ಮನೆಯ | ಹಾಳು ಮಾಡಿದನೆನಲಾಗ         || ೧೩೧ ||

ತೋರದೆ ಇರುಳೆನಗೆ ಹಾಳಾದ ಸ್ವಪ್ನವ ಕಂಡೆ | ಯಾರಿಗಾಯಿತೆ ಎನುತಿದ್ದೆ
ಏರುವ ತೇಜಿಯನು ತೊಡರಿ ಬೀಳ್ವುದ ಕಂಡೆ | ತೋರಿತು ಭೀಮ ಬಾಲನಿಗೆ        || ೧೩೨ ||

ಕೊಂದುದು ನಿಜವೇನೊ ಕುಹಕದ ಮಾತುಗಳೇನೊ | ಕಂಡ ಸ್ಥಿತಿಯ ಪೇಳೊ ಮಂತ್ರಿ |
ಮುಂಡೆಯ ಗಂಡನ ಮುಂದಲೆಗಳ ಪಿಡಿಕೊಂಡು | ಬೀಳುವೆ ಕೊಂಡ ಬಳಿಯ        || ೧೩೩ ||

ನಿಜವೆಂದು ಕೊಂದದ್ದು ಅವನೆಡದಲಾವನ ಪೇಳೊ | ಧರೆ ಹೊರದ ಭೂಕಾಂತೆ ಕಾಯ |
ಕೊಡುವಾಗ ಚೆಂಡನು ಇರಲಿಲ್ಲವೆ ಈ ದುಃಖ | ಹೊಡೆಯದೆ ದವಡೆಯ ಮೇಲೆ       || ೧೩೪ ||

ನಾ ಮೊದಲು ಕಂಡಿಲ್ಲ ನೀ ತೆಗೆದು ಕೊಡುವಾಗ | ಆಡೆಂದು ಮಗನ ಪುಗಲಾಸಿ
ಭೂಮಿ ಕೆಡಿಸಿದ ಚೆಂಡು ಸೇರಲಾಕೆಯ ಮನೆಯ ನಾನು ಕಂಡೆನೆ ನೀನರಿಯಾ      || ೧೩೫ ||

ಬೇಡುವರೆ ನಿನ್ನಯ ಬಾಲ ಹೋದನಂತೆ | ನೋಡಿ ಸೈರಿಸದೆ ರತ್ನಾಜಿ |
ಕೂಡಿದನೆನುತಲಿ ದೂರಿದಳು ರಾಯನಿಗೆ | ಯಾರ ಸ್ವಂತಳು ನೀ ಪೇಳು            || ೧೩೬ ||

ನಿಜವೊ ಸಟೆಯೊ ಕಾಣೆ ಹೊಡೆದಿನ್ನು ತಲೆಯ ತಂದೆ | ಈ ನಿನ್ನ ಮಾತೇನು ಕಾಣೆ |
ಮಾಡಬಹುದು ಆಜ್ಞೆ ರಾಯನೊಳು ತಪ್ಪಿಲ್ಲ | ಹೋಗಮ್ಮ ಅಳಲೇಕೆ ಇಲ್ಲಿ             || ೧೩೭ ||

ಕಂದ ರಾಮನೆ ನಿನ್ನ ಕೊಂದು ಹಿಂಡಿಯ ಕೂಳ | ತಿಂದನೆ ನಿಮ್ಮಯ್ಯನೆನುತ |
ಮಂಡೆಯನೊಡಕೊಂಡು ಮಣ್ಣೆತ್ತಿ ಹೊಯ್ಕೊಳುತ | ಬಂದಳು ಕಂಪಿಲನಿದ್ದೆಡೆಗೆ      || ೧೩೮ ||

[ಕಂಡೆನು] ತೊಂಡನೂರ ರಕ್ಕಸಿ ಕರಿಬಂಟನ | ತಿಂದು ತೇಗಿದಳು ಆ ನಾರಿ |
ನಾನಾ ತಂತ್ರವ ಮಾಡಿ ಬಾಲನ ಕೊಂದಡವ | ಬೀಳುವೆ ಕಿಚ್ಚನು ಅಲ್ಲಿ               || ೧೩೯ ||

ಕೊಲಬಹುದೆ ಬಾಲನ ಹಲವು ಮಿಂಡರ ಸೂಳೆ | ಹೇಳಿದರೆ ಹೀಗೆ ಕೊಲುವರೆ |
ತರಗನ ಸತಿಯನು ಚಿ‌ಕ್ಕಯ್ಯನು ಒಲಿಯದಿರಲು | ಮತ್ತಲ್ಲಿ ಕೊಲ್ಲಿಸಲಿಲ್ಲವೆ           || ೧೪೦ ||

ಚೋರನ ಹೆಜ್ಜೆಯ ತಳವಾರ ಬಲ್ಲನು ಮಿಕ್ಕ | ಊರನಾಳ್ವನಿಗೆ ಗೋಚರವೆ |
ನಾರಿಯ ಕುಟಿಲತ್ವ ಸೀರೆನುಟ್ಟುವಳೆ ಬಲ್ಲರೆ | ಆಳುವ ಮೂಳಗೆ ಅರಿವೇ             || ೧೪೧ ||

ಕೆಟ್ಟರೆ ಸೂಳೆಯ ಎತ್ತಿ ಮುಂದಲೆ ಕೊರೆದು | ಬಿಟ್ಟಿಲ್ಲವೆ ಹಲ[ವು] ಜನರು |
ಸುಟ್ಟಿರೆ ನಿನ್ನಂತೆ ಸೂಳೆಗೆ ಕಿಚ್ಚನು ಹಾಕಿ ಬಿಟ್ಟರೆ ಗತಿಯೇನೊ ಮುದಿಯಾ           || ೧೪೨ ||

ರಾಯ ರಾಯರ ಗೆದ್ದ ಭೀಮನ ಸಮಶಕ್ತಿ | ಏನಾಗಿ ಹೋಯಿತೊ ಮಗನೆ |
ಸೂಳೆ ಮಿಂಡನ ತರಹ ಕಾಲು ಕರಗಳ ಮುಗಿದು | ಸಾಯುವರೆ ಸರಿ ರಾತ್ರಿಯೊಳಗೆ || ೧೪೩ ||

ಸತ್ತರೆ ನಾ ಬೇರೆ ದುಃಖ ಮಾಡುವಳಲ್ಲ | ಕಡಿದಾತಲುಪರದವರ ಅಹುದೆಂಬೆ |
ಹೊಟ್ಟೆ ಹೊರೆವ ಮೂಳ ಬೈಚಪ್ಪನಿಗೆ | ಹತ್ತದೆ ಕಿಚ್ಚಿನ ಉಬ್ಬ                         || ೧೪೪ ||

ರಾಣಿಯ ಒಡಲುರಿಯ ಕಾಣುತ್ತ ಕಂಪಿಲನು | ಭೋರಿಡುತ ಬಿದ್ದು ಉರುಳಿದನು
ಶ್ವಾನಗೆ ಕಡೆಯಾದೆ ಸೂಳೆ ಮಾತಿಗೆ ಬಂದು ಕೊಂದು | ಸೀಳಿಕೊಳಲೆ ಬಗೆದು ಒಡಲು       || ೧೪೫ ||

ಅಳಿದನೆಂಬುವ ಸುದ್ಧಿ ಕಡೆಗೆ ಕೇಳಿದರಾಗ | ರಾಮನ ತಂಗಿ ಲಿಂಗಮ್ಮ |
ಕಮಲಾಜಿ ಕಿರಿತಾಯಿ ಬಂದು ಬಿದಿಗಳೊಳಗೆ | ಹೊರಳಿದಳು ಹುಡಿಯ ಹೊಯ್ಕೊಂಡು       || ೧೪೬ ||

ಅಕ್ಕನು ಮಾಯಕ್ಕ ತಂಗಿ ಸಿಂಗಮ್ಮ[ರ] | ದುಃಖವ ಜಗದೀಶ್ವರ ಬಲ್ಲ |
ಬಿಚ್ಚಿದ ದಂಡೆಯ ಕಟ್ಟದೆ ಅಲ್ಲಿಂದ | ಕುಟ್ಟಿಕೊಳ್ಳುತ ಎದೆ ಮಂಡೆ                     || ೧೪೭ ||

ಅಳಿ[ದ]ನೆ ಒಡಹುಟ್ಟಿ ಹರನ ತನುಜನ ಹೋಲ್ವ | ಧರಣಿ ರಾಯರಿಗೆ ಎದೆಶೂಲ |
ನೆರೆ ಪಾಪಿ ನಮ್ಮಂಥ ಕರ್ಮದ [ಬಾ]ಲೇ | ರಿರಬಹುದೆ ಧರೆಯೊಳಗಿನ್ನಾ            || ೧೪೮ ||

ಇಟ್ಟರು ನೆಲನ ಸಾರಿಸಿ ಎಕ್ಕೆಗೂಳವು | ಹುಟ್ಟಿಲಿ ಕುಮ್ಮಟದೊಳಗೆ |
ದಿಟ್ಟ ರಾಮಯ್ಯಗೆ ಮುನಿವವರ ಮಕ್ಕಳಿಗೆ ಒಡ | ಹುಟ್ಟಳಿಯಲಿ ನಮ್ಮಂತೆ           || ೧೪೯ ||

ಅಂಬಲಿಗಾಗಿ ಅಮೃತವ ಚೆಲ್ಲಿದೆ | ಡೊಂಬಿತಿಗಾಗಿ ಅಣ್ಣಯನ |
ತಿಂಬೋರೆ ಅಪ್ಪಾಜಿ ಮಿಂಡರ[ಗಳ್ಳಿ]ಯ | ದೊಂದಿಯ ಕಟ್ಟಿ ನುಡಿಸರೆ                || ೧೫೦ ||

ಎಕ್ಕೆಯ ಗಿಡಕಾಗಿ ಕಲ್ಪವೃಕ್ಷವ ಕಡಿವರೆ | ತೊತ್ತು ಮುಂಡೆಯ ಮಾತ ಕೇಳಿ |
ಚಕ್ರಧರನ ಸುತನ ಮರೆಸಿಪ್ಪ ಚೆನ್ನನ ಕೊಂದೆ | ದಿಕ್ಕಾರು ಮುದಿಯ ಮನೆತನಕೆ     || ೧೫೧ ||

ಸುರಿವ ನಯನದಿ ನೀರು ಹರಿವ ಹಳ್ಳದ ತೆರದಿ | ಕೆಂಪೊಡೆಯೆ ಚೆಂದುಟಿ ಮುಖವು
ಮರನಾಗಿ ಬೀಳುತ ತಂಗಿ ಲಿಂಗಮ್ಮನು | ಹಡೆದ ತಂದೆಯ ಮುಂಗಡೆಯು          || ೧೫೨ ||

ಇಟ್ಟ ಆಭರಣಗಳು ಸುತ್ತಲು ಚೆಲ್ಲಾಡಿ ಮುತ್ತು ಮಾಣಿಕ ಹಸ್ತ ಕಡಗ |
ಹುಟ್ಟಿದಳೆ ಮಾರ್ಯಾಗಿ ರತ್ನಿ ಮುಂಡೆಯು ಎಂದು ಹತ್ತಿಹುದೆ ಮುದಿಯಗೆ ಮರುಳು || ೧೫೩ ||

ಅಣ್ಣ ನಮ್ಮಣ್ಣನ ನೋಡುವ ನಯನದಲಿ | ಸುಣ್ಣವನಿಟ್ಟ ಕಂಪಿಲನು |
ಹೆಣ್ಣು ಮಕ್ಕಳ ನೋಡಿ ಕಣ್ಣರ್ತಿಲಿ ಕಳುಹುವ | ನಮ್ಮಣ್ಣನು ತಿಂದ್ಯಾ ರತ್ನಾಜಿ         || ೧೫೪ ||

ಬಾರಣ್ಣ ಎನುತಲಿ ಯಾರ ಕರೆ[ವೆ]ನು ನಾನು | ಬಾಯಾಗ ಹುಗ್ಗಿಯ ಹೊಯ್ದು |
ನಾಳೆ ದೀವಳಿಗೆ ಕರೆತರುವನೆನುತಲಿರ್ದೆವು | ಇನ್ನೆಂದಿಗೆ ಕಂಡೇವು ನಾವು          || ೧೫೫ ||

ಶೂಲದ ಹಬ್ಬಕ್ಕೆ ಯಾರು ಕರೆವರು ನಮ್ಮ | ಮೊಲೆ ನೂಲ್ಹುಣ್ಣಿವೆಗೆ ಕರೆಯಾ |
ತಾಯಿ ಮಾತಿಲ್ಲದೆ ತಂಗಿಯ ಕರೆತರುವ | ಹಾಳಾಯಿತೆನ್ನ ತವರೂರು              || ೧೫೬ ||

ಆರಿನ್ನು ಮಾಡುವ ಶಿವಪೂಜೆ ಅರಿದೆವು | ಬೇಗೆ ಇಟ್ಟವೊ ಬೆಟ್ಟಕ್ಕೆ |
ಧಾರುಣಿ ಏಕಾಗಿ ಕಡಿತೊಲಿ ಉಳಿದೆವೊ | ತೀರಿತೆ ಎಮ್ಮ ಐಶ್ವರ್ಯ                 || ೧೫೭ ||

ಬೇಟೆಯನಾಡುತ ಬಿಟ್ಟೆವು ಮಂಡೆಯ | ಕಟ್ಟುವ ಕೆರೆ ಕಲ್ಯಾಣಿ |
ಕೆಡಿಸಿದೆವು ಹೊಕ್ಕೆವು ಕೆರಹುಗಾಲಿಂದಲಿ ಗುಡಿಯನ್ನು | ತಪ್ಪಿದ ಒಡಹುಟ್ಟಿ ತಮ್ಮಗೆ  || ೧೫೮ ||

ಬಂದರು ರಾಮನ ಸತಿಯರು ಐವರು | ಕಿರಣದ ಪ್ರಭೆ ಸೂಸುವಂತೆ |
ಮೊರೆಯಿಡುತ ಮನ್ಮಥನು [ಉ]ರಿದಾಗ ರತಿದೇವಿ ಹರನೆಡೆಗೆ ಹೋದಂತೆ ಶೋಕದಲಿ      || ೧೫೯ ||

ಮಾವನೆ ಮತಿಗೇಡಿ ಕುಮಾರನ ಕೊಲುವೆ | ಸೂಳೆಯ ಒಲುಮೆ ತಲೆಗೇರಿ |
ಹಾಳು ಮಾಡಿ[ದೆ] ಮನೆಯ ನಾವಿದ್ದು ಫಲವೇನು | ಮಾಡಿಸಿಕೊಡೆಮಗೆ ಕೊಂಡವನು        || ೧೬೦ ||

ಕನಕಾಲಾಪದ ಕಾಣದ ಬಾಲೆಯರು | ಗೋಳಿಡಲು ಕೋಗಿಲೆ ಸ್ವರದಿ
ನೋಡುತ ಕಂಪಿಲ ಭೂಮಿಗೆ ಮುಸುಕಿಟ್ಟು | ರೂಢಿಸಿ ಇಮ್ಮಡಿ ದುಃಖ                || ೧೬೧ ||

ತಣ್ಣಗಾಯಿತೆ ಮಾವ ತರಳೇರರೈಗು ನಿಮಗೆ | ಉಣ್ಣುವದು ಕ್ಷೀರಾನ್ನ ಒಲಿದು |
ಹಣ್ಣಿದೊ ಹತಕಾತಿ ಹಲವು ಮಿಂಡರ ಸೂಳೆ | ನಿನ್ನ ತನುಜನ ಸತ್ಯ ಅರಿಯಾ        || ೧೬೨ ||

ಹೆತ್ತ ಮಗನ ಮಾವ ಕುತ್ತಿಗೆ ಅರಿಯಲ್ಕೆ | ದೈತ್ಯನಂದದಿ ಜನಿಸಿದೆಯಾ |
ತೊತ್ತಿನ ಮೋರೆಯ ಕಣ್ಣೆತ್ತಿ ನೋಡದ | ಪುತ್ರ ಹರಿಶ್ಚಂದ್ರ ಸತ್ಯದಲಿ                  || ೧೬೩ ||

ಹಾದರಗಿತ್ತಿಗೆ ಒಳಗಾಗದಿರಲು ಇವನು | ಮಾಡಿದಳೆಂಬುದನರಿಯಾ |
ಸಾರಂಗಧರನು ಚಿತ್ರಾಂಗಿಯ ಕೂಡಿದನೆ | ಕಾಲನರಿವರೆ ಬೆಪ್ಪ ಮಾವ              || ೧೬೪ ||

ನುಂಗಿದ ತುತ್ತಿಗೆ ರುಚಿಯಾಕೆ ಮಾಮಾಜಿ | ಗಂಡನೆ ಪ್ರಾಣದೊಲ್ಲಭನು೮ |
ಗಂಡರ ಗಂಡ ಉದ್ದಂಡ ರಾಮನ ಬಿಟ್ಟು | ರಂಡೆಯ ಬಾಳು ಬಾಳುವರೆ              || ೧೬೬ ||

ಸೊಸೆಯರಾಡುವ ಮಾತ ಕೇಳಿ ಕಂಪಿಲರಾಯ | ಬಿಸಿಗೆ ಕಬ್ಬಿಣದಂತೆ ಕರಗಿ |
ಮಿಷಗೊಂಡು ಸಾಯಲೆ ವಿಪರೀತ ಧರೆಯೊಳು | ಶಶಿಸೂರ್ಯರುಳ್ಳನಕ ಬಿಡದು    || ೧೬೭ ||

ಶೋಕವ ಮಾಡುತ ರಾಯ ಸೊಸೆಯರಿಗೆ ಪೇಳಿಸಿ | ರಸಿಕ ಮಂತ್ರಿಯ ಬಳಿಗೆ ಹೋಗಿ |
ಹಸು ಬಾಲ ನಾನಾದೆ ಸತಿಯ ಮಾತನು ಕೇಳಿ | ವಿಷಕೊಟ್ಟ್ಯೊ ರಂಡೆ ಮುಪ್ಪಿನಲಿ   || ೧೬೮ |

ಕಲಿಯಾಗಿ ರಾಮನ ಲಲನೆಯರೈವರು | ಹರಿದರು ಮಂತ್ರಿಯಡಿಗೆ |
ಕಳುಹೆಮ್ಮ ಕಾಂತನ ಅಲರಂಬ ಬಾಣ [ನ] ಅಗಲಿ | ಇರುವರಲ್ಲವೊ ಕಿಚ್ಚ ಬೇಗ     || ೧೬೯ ||

ತಿಳಿದು ನೋಡಲು ಮಂತ್ರಿ ಮನಧ್ಯಾನದೊಳು ತನ್ನ | ಕೊಲದೆ ಕಾದಿರುವೆ ರಾಮುಗನ |
ಅಳಿಯಬೇಡೆಂದರೆ ಬಳೆಯ ತೆಗೆಯಬೇಕು | ಮರಳಿ ಕೂಡಲು ಮುಂಡೆ ರಾಹು      || ೧೭೦ ||

ಕಿಚ್ಚನು ಕೊಡಲವರ ಉತ್ತಮ ನೆಲಮಾಳಿಗೆ | ಒತ್ತಿಲಿ ಕೊಂಡವ ಮಾಡಿ |
ಕತ್ತ[ಲೆ] ತೆರದೊಳು ಒಳಗಿಟ್ಟು ಜನಕೆಲ್ಲ | ಸತ್ತರೆನ್ನಿಸಿ ಬಿಡು ಯುಕ್ತಿಯಲಿ             || ೧೭೧ ||

ಅಳಿಯಲೇತಕೆ ತಾಯಿ ಹೊರೆಯಿರೆ ಪ್ರಾಣವ | ದೂರೆಯಿರುವ ಮಾವಾಜಿ ನಿಮ್ಮ |
ಕಿರಿಯತ್ತೆ ರತ್ನಮ್ಮ ಇರುವಳು ಭಯವೇನು | ಜನಮೆಚ್ಚುವಂತೆ ಕೇಳಿದನು           || ೧೭೨ ||

ಸಾಕಯ್ಯ ಮಂತ್ರೀಶ ನಿಮ್ಮುತ್ರದೊಳಗೆ ಜನಿಸಿ | ರಣಭೂಪಗೆ ಕರವ ನೋಡಿದೆವು |
ಹಾಕಿದ ಹರಿಕಲ್ಲ ಇನ್ಯಾಕೆ ಲೋಕದ ಬಾಳು | ಆತನ ಅಡಿಗೆ ಹೋಗುವೆವೊ           || ೧೭೩ ||

ಒಳ್ಳೇದ ಇರಿ ನೀವು ತಿರುಗಿ ಬರುವೆನು ಬೇಗ | ರಾಯ ಕಂಪಿಲಗೆ ಅರುಹಿ |
ವಾಯುಗಮನದಿ ಬಂದು ರಾಯನಿಗೆ ಕರಮುಗಿದು | ಪೇಳಿದ ನರತಂತ್ರದೊಳಗೆ    || ೧೭೪ ||

ರಾಯ ರಾಜೇಂದ್ರನೆ ಕೇಳೆನ್ನ ಬಿನ್ನಪವ | ಬಾಲರಾಮನ ಸತಿಯರು |
ಕೇಳುವರು ಕಿಚ್ಚನ್ನು ಏನಿದಕೆ ಸ್ಥಿತಿಗತಿಯು | ಪೇಳೆಮಗೆ ಬುದ್ಧಿಗಲಿಸೆಮಗೆ            || ೧೭೫ ||

ಮಾರನ ಮರೆಸುವ ಕುಮಾರನು ಲಯವಾದ | ನಾರಿಯರ ಅತಿ ಆಸೆಯೇನು |
ಶೋಕವಲ್ಲದೆ ನಿತ್ಯ ಅರೆಸುಖವಿಲ್ಲ ರಾಜೇಂದ್ರ | ನೂಕುವುದು ಲೇಸು ಅವನೊಡನೆ   || ೧೭೬ ||

ಚೆಲ್ವ ಬಾಲೆ ನೋಡಿ ತರಬೇಕಲ್ಲದೆ | ಬರಲರಿಯನಳಿದಾತ ಮರಳಿ |
ಇರುವ ಪ್ರಾಯಗಳೆಷ್ಟು ಹಾನಿ ಹೀರು ಬರಲು | ಹೊರಬೇಕು ತುಂಬ ಅಪಕೀರ್ತಿ      || ೧೭೭ ||

ಆಡಿದೆ ನಿಮ್ಮೊಳಗೆ ತೋರಿದ ಬುದ್ಧಿ | ದೇವರ ಚಿತ್ತ ಹ್ಯಾಗಿಹುದೊ
ಏನು ಹೇಳಲಿ ಮಂತ್ರಿ ಕಳೆದು ನಿನ್ನಯ ಮಾತ | ಮೂಳ ಶ್ವಾನಗೆ ಕಡೆಯಾದೆ       || ೧೭೮ ||

ಮನಬಂದ ರೀತಿಗೆ ಮಾಡಿಸೊ ಪ್ರಧಾನಿ | ಘನ ಇರುವ ರೀತಿ ಇದರೊಳಗೆ |
ಮೊದಲೆ ನಿನ್ನಯ ಮಾತ ಕಳೆಯದೆ ನಡೆದಿರಲು | ಮಗನುಳಿದ ಈಗ ಮಣ್ಣ ತಿಂದೆ   || ೧೭೯ ||

ನೃಪನ ಒಪ್ಪಿಸಿ ಮಂತ್ರಿ ಅತಿ ಬೇಗದೊಳು ಬಂದು | ಸತಿಯರೆ ಬನ್ನಿ ರಾಮಯನ |
ಪತಿಯೊಡನೆ ನಡೆವಂಥ ಕಿಚ್ಚಹುದು ನಾ ಕೊಡುವೆ | ನೃಪನ ಮಾತೇನು ಅಗ್ನಿಯನು || ೧೮೦ ||

ಕೋಟಿ ಸೂರ್ಯನ ಪೋಲ್ವ ಕಾಂತ ತೊಲಗಿದ ಮೇಲೆ | ಜಾತಿ ಸತಿಯರು ಇರಸಲ್ಲ |
ಇತರ ಸುಖಭೋಗ ಇರುವನಕ ಅರೆ ಬಾಳು | ಹಾಕುವುದು ದೊರೆತನ ಲಕ್ಷಣವು     || ೧೮೧ ||

ಪಡೆದವನೆ ಎಲೆ ತಂದೆ ನಿನ್ನೊಡಲೊಳಗೆ ಜನಿಸಿ | ಹೊರೆವಲ್ಲವೊ ಭಂಡ ಬಾಳ |
ದೃಢವಾಗಿ ನಡೆವೆವೊ ಕಮಲಾಕ್ಷನ ಮಗನ | ಪೋಲ್ವನ ಬಿಟ್ಟು ಇರುವವರೆ           || ೧೮೨ ||

ಮೆಚ್ಚಿದನು ಮಂತ್ರಿಯು ಪತಿವ್ರತ ಭಾವ ಇವರೊಳಗೆ | ಹೊಕ್ಕಾರು ಕೊಂಡ ನಿಜವೆಂದು |
ದಟ್ಟಿಚಲ್ಲಣ ಉಟ್ಟು ಶೃಂಗಾರವಾಗಿ ಬರಲೆಂದು | ಪುತ್ರಿ ಬಾಲೆಯರನು ಕಳುಹೆ       || ೧೮೩ ||

ರಂಭೆಗೆ ಸಾಟಿ ರತಿದೇವಿಗಿಮ್ಮಡಿಯಾದ ಬೆಳ | ದಿಂಗಳ ಪೋಲ್ವ ನಾರಿಯರು |
ಶೃಂಗಾರವಾಗಲು ಉಂಗುಷ್ಠ ತುದಿ ಮುತ್ತು | ರಂಗು ಮಾಣಿಕ್ಯ ರತ್ನದಲಿ             || ೧೮೪ ||

ತೊಟ್ಟು ಚಲ್ಲಣ ದಟ್ಟಿ ಬಿಗಿದುಟ್ಟಿ ಹಳದಿಯ ಸೀರೆ | ಕಟ್ಟಿದ ಮಲಕು ಕಾಣಿಗಳು |
ಕಿತ್ತ ಕಠಾರಿ ಕೈಯೊಳು ಬಾಕು ಗಜನಿಂಬೆ | ಉತ್ತಮ ಚಂದ್ರಾಯುಧವ ಪಿಡಿದು       || ೧೮೫ ||

ಎಡಗಯ್ಯ ದರ್ಪಣ ಮುಡಿದ ಹೂವಿನ ಮಾಲೆ | ಹೊಡೆದು ಬೊಬ್ಬೆಗಳು ಪುರದೊಳಗೀ |
ಗೆಡೆಯೆಡೆಗೆ ಬಾಗಿನವ ಮುತ್ತೈದೆಯರು ಕೊಡುತಲಿ | ಬರುವಾಗ ನಗರ ಗೊಳೋ ಎನುತ    || ೨೮೬ ||

ಹಿರಿಯರು ಕಿರಿಯರು ತರಳರು ಪರಿವ್ರತ | ತರುಣಿಯರು ಬಾಲ ಕಾಂತೆಯರು |
ಎಡದೆರನಿಲ್ಲದೆ ಇಡುವರು ಹಣ ಹೊನ್ನು | ನಡೆವರು ಕೋಟಿ ಯಾತ್ರೆಯಲಿ           || ೧೮೭ ||

ಹರಿಹರ ದೇವಿಯ ಅರಮನೆಯನು ಹೊಕ್ಕು | ಶರಣೆನುತ ಒಡನೆ ಎರಗಿದನು |
ತರಳೆಯರ ಕಾಣುತ್ತ ಭೋರಿಡಲಾಗ ಅತ್ತೆಗೆ | ವರ ಶಾಂತಿಗಳ ಪೇಳುತಿಹರು       || ೧೮೮ ||

ದುಃಖವ್ಯಾತಕೆಯಮ್ಮ ಕಾಂತನೆಡೆಗೆ ಪೋ[ಗೆ] | ನೀವತ್ತರೆ ನಮಗೆ ಗತಿಯುಂಟೆ |
ಹತ್ತೇಳು ಜನ್ಮದಿ ಸೊಸೆಯರಾಗಿ ಬರುವೆವು ನಿಮ್ಮ | ಪುತ್ರನ ಬಿಡದೆ ನಾವಿನ್ನು       || ೧೮೯ ||

ಎಳೆಯ ಬಾಲೆರ ನೋಡಿ ಕರಗೂದಲ್ಲದೆ ನೀವು | ಹರೆಯವು ನಾವು ಅಪಹಾನಿ |
ಬರೆದ ಲಿಖಿತವ ಯಾರು ತಿಳಿದಿಲ್ಲ ಶೋಕವ | ಮರೆದೆಮ್ಮ ನೀವು ಕಳುಹುವುದು      || ೧೯೦ ||

ಮುತ್ತಿನ ಬಾಗಿನವ ಮಡಿಲಲ್ಲವರು ತುಂಬಿ | ಕಚ್ಚಿ ಗಲ್ಲಗಳ ಮುಂಡಾಡಿ |
ಪುತ್ರ ರಾಮಯ್ಯನ ಪುಣ್ಯ ಸತಿಯರಾಗಿ | ಸತ್ಯಲೋಕದಿ ಬಾಳಿಯೆನಲು              || ೧೯೧ ||

ಅತ್ತೆಯ ಚರಣಕ್ಕೆ ಮತ್ತೊಮ್ಮೆ ಅಡಿಗೆರಗಿ | ಕಿಚ್ಚಿನ ಮಾಸ್ತಿಯರು ಹೊರಡೆ |
ಒತ್ತಿಲಿ ಹರಿಯಮ್ಮ ಕಮಲಾಜಿ ಪರಿವಾರ | ಹೊಕ್ಕರು [ಮಾ]ವಾಜಿ ಸದರ            || ೧೯೨ ||

ವೀರಮಾತೆಯರಾಗ ಕಾಣುತ್ತ ಕಂಪಿಲನ | ಪಾದಕ್ಕೆ ಎರಗಿ ಐವರು |
ಆನಂದ ಸುಖದೊಳು ಸ್ಥಿರರಾಜ್ಯ ಬಾಳರಸ | ರಾಣಿ ರತ್ನಿಯ ಸುಖದೊಳಗೆ          || ೧೯೩ ||

ಕೋಮಲೆ ಕಾಂತೆಯರ ಕಾಣುತ್ತ ಕಂಪಿಲಗೆ | ಏರಲು ಬಡಬಾಗ್ನಿ ಶೋಕ |
ಬೀಳುವ ಇವರೊಡನೆ ಕೊಂಡ ಮನದೊಳು ಗ್ರಹಿಸಿ | ಭೂನಾಥ ಹೊರಡೆ ಸೊಸೆಯರೊಡನೆ || ೧೯೪ ||

ತಾಳಮೇಳದ ಘೋಷದಲಿ ಕಹಳೆ ಭೇರಿಗಳಿಂದ | ಭೂಮಿಯ ಭೇದಿಸುತ ಬರಲು |
ತೋರಣ ಮೇಲ್ಕಟ್ಟು ಎಡೆಯೆಡೆಗೆ ಕುರುಚುಗಳು | ಸಾಲು ಸೂರ್ಯ ವರುಣದಲಿ     || ೧೯೫ ||

ಇತ್ತ ನೆಲಮಾಳಿಗೆ ಒತ್ತಿಲಿ ಮಂತ್ರಿಯು | ಮತ್ತೆ ಕೊಂಡನು ಮಾಡಿಸಿದ |
ಲೆಕ್ಕವಿಲ್ಲದೆ ಶ್ರೀಗಂಧದ ಕೊರಡಿಂದ | ಒಟ್ಟಿಸಿ ಕೊಂಡ ಮಾಡಿರಲು                   || ೧೯೬ ||

ರಾಯ ಬರುವುದ ಕಂಡು ಪ್ರಧಾನಿ ಬೈಚಪ್ಪನು | ಕಾರ್ಯ ನಿಲ್ಲುವುದು ಇವನಿಂದ |
ಬೇಗದಿ ಕರಮುಗಿದು ರಾಮನರಸಿ | ಬೀಳುವ ಕೊಂಡ ಬಳಿಯ                       || ೧೯೭ ||

ನೋಡಲಾಗದು ರಾಯರು ಗದ್ದುಗೆಯ ಸಾಗಿ ಮಲೆ | ನಿಮ್ಮೆಡೆಗೆ ಹೆಚ್ಚು ಹೋಗೆನುತ |
ಹಿಂದಕ್ಕೆ ರಾಣಿಸಹಿತ ಕಳುಹಿಸಲು | ಸಾಲು ದೀವಟಿಗೆ ಹಿಡಿಸಿದನು                   || ೧೯೮ ||

ಕೊಂಡವಂ ಬಳಸಿ ಶೃಂಗಾರ ಚಪ್ಪರ ಹಾಕಿ | ಪವಳ ಮುತ್ತಗಳ ಮೇಲ್ಕಟ್ಟು |
ಚೆಲುವಾಗಿ ತೋರಣ ಝಲ್ಲಿ ಪರದಿ ಸುತ್ತಲು ಬಿಡಿಸಿ | ಚೋದ್ಯವೆನಿಸಿ ಭೂಮಿಯಲಿ   || ೧೯೯ ||

ಕೊಂಡವ ಏರಿ ಬಳಸಿ ಬಂದು ಐವರು | ಕೊಂಡವ ಕಾಣುತ್ತ ಹಿಗ್ಗಿ |
ಕೊಂಡಾಡಿ ಮಂತ್ರಿ[ಯೆ] ಕೊಟ್ಟೆಮಗೆ ಸದ್ಗತಿಯ | ಬಂಧುಬಳಗದಿ ಸುಖಬಾಳು      || ೨೦೦ ||

ಹಾಳಾಗಿ ಕುಮ್ಮಟ ಹುಟ್ಟಲಿ ಗಿಡ ಮೆಳೆಯು | ರಾಮನ ಸತಿಯರಂದದಲಿ |
ವಾಲಿಗಳಿಳಿಯಲಿ ನಮ್ಮಂತೆ ಕೊಂಡವ | ಬೀಳಲಿ ಎಂದು ಹಾರೈಸಿದರು             || ೨೦೧ ||

ಮೆಟ್ಟಿ ಬಂದರು ನಿಂದು ಸ್ವಾತಿ ಕಲ್ಲಿನ ಮೇಲೆ | ಪಟ್ಟಣವ ಸೃಷ್ಟಿಸಿ ನೋಡಿ |
ಬಟ್ಟಲೊಳೆಣ್ಣೆಯ ತಂದಿತ್ತರೆ ಬೈಚಪ್ಪ | ಮತ್ತೆ ಐವರು ನೋಡಿ ನೆರಳು                || ೨೦೨ ||

ತೈಲದೊಳಗೆ ತಮ್ಮ ಇನಿಯ ಕಾಣುವುದಿಲ್ಲ | ಹರಿಹರನೆ ಬಲ್ಲ ಈ ಮಾಯ |
ಮರಣ ಕಾಣುವುದಿಲ್ಲ ಮಡಗಿರು[ವಿರಿ] ಏನು | ಮಂತ್ರಿ ಅರುಹು [ಎ]ಮಗೆ            || ೨೦೩ ||

ಹಾಳು ಮಾಡುವರಿವರು ಮಾಡಿದ ತಂತ್ರವನು | ದೂರುವರು ಪುರಜನರು ಕೇಳ್ವಂತೆ |
ಕೊಡುವೆ ಸೈರಿಸಿ ಮಾರಸನ್ನಿಭನೆಂದು | ಹೇಳಿದ ಕರ್ಣಕೆ ಮಂತ್ರಿ                    || ೨೦೪ ||

ಕೊಂಡವರು ಕಾಣುತ್ತ ಮನಮೆಚ್ಚಿ ರಂಡೆಯರ | ಗಂಡ ಹೇಳೆಂದು ಆಡುವರು |
ಹಿಂದಕ್ಕೆ ತಿರುಗಿದರೆ ಪುರಕಿನ್ನು ಮರಳವು | ಮುಂಡೆಯರ ಹಿಡಿದು ನೂಕಿಸುವೆ       || ೨೦೫ ||

ಜನರಿಗೆ ಹೀಗೆಂದು ಅರುಹುತ್ತ ಎಲ್ಲರನು | ತಡೆಸಿದ ಸರಳ ಎಸಗೆಯಲಿ |
ಹಿಡಿಸಿದ ತೆರೆಯನು ಕೊಂಡದವಂ ಬಳಸಿ | ತನ್ನೊಡ ಬಳಸಿ ಒಬ್ಬೊಬ್ಬರಿಗೆ          || ೨೦೬ ||

ಸುಳುಹು ಕಾಣದ ರೀತಿ ತೆಗೆಸಿ ನೆಲಮಾಳಗೆ | ಬಲಿದಿರ್ದ ಬೀಗ ಮುದ್ರೆಯನು |
ತೆಗೆದಾಗ ಸತಿಯರ ಕಳಿಸಿ ವಿವರವ ಪೇಳಿ | ತಿರುಗಿದ ಕರಮುಗಿದು ಮಂತ್ರಿ         || ೨೦೭ ||

ಎಂದಿನ ಪರಿಯಂತೆ ಬಂಧಿಸಿ ಬಾಗಿಲನೆ | ನಿಂದನು ತೆರೆಯೊಳು ಮಂತ್ರಿ |
ಕೊಂಡಕೆ ಹಾಕಿಸಲು ಕುರಿ ಕೋಳಿ ನೂರೆಂಟು | ಮಂಡಲಕೆ ಹೊಡೆದೇಳೆ ಸೊಡರು  || ೨೦೮ ||

ಹಿಡಿಹಿಡಿದು ಹಾಕುವದು ಹೊಡೆವರು ಬೊಬ್ಬೆಗಳು | ಕೆಡೆವುತ ಎಣ್ಣೆ ತುಪ್ಪಗಳ |
ಅಡರಲು ಉರಿ ಮೇಘ ಸೊಡರು ಪುರವನು ಮುಚ್ಚೆ | ಪೊಡವಿಯ ಜನರು ಗೊಳೋ ಎನಲು  || ೨೦೯ ||

ಸಂದರು ಶರಣೆಯರು ಗಂಡನ ಸನ್ನಿಧಿಗೆ | ಹಂದಿಯಂತಿರಲಿ ರತ್ನಿ ಮುಂದೆ |
ಚಂದ್ರಧರನ ಪಾದಾಂಬುಜವ ಕಂಡು ಅವರು | ಬಂಧಬಡದೆ ನರಕದಲಿ              || ೨೧೦ ||

ಮರೆದನು ಜಯಲಕ್ಷ್ಮಿ ನಾವಿಂತು ಇರುವುದು | ಹೊದು…..ಇದರೊಳಗೆ |
ತರಳನ ಕೊಂದವಗೆ ಪ್ರಜೆ ಬೇರೆ ಇದಿರುಂಟೆ | ತಿಳಿದವಗಿದು ಸ್ಥಳವಲ್ಲ               || ೨೧೧ ||

ಭೀಮಗೆ ಹೆಚ್ಚಾದ ಕುಮಾರ ರಾಮನ ಕೊಂದ | ಭೂಮಿಯೊಳಿದಿರೆ ರತ್ನಿಗೆ |
ಊರನೆ ಸುಡು ಸಾಕು ಯಾರ್ಯಾರ ಕೊನೆ ಬುಡಕೆ | ನೀರನಿಡುವಳೊ ಮೂಳೆ ಸುಳ್ಹೇಳಿ     || ೨೧೨ ||

ಆಡಿಕೊಳ್ಳುತ ಜನರು ಬಾಯಿಗೆ ತಿಳಿದಂತೆ | ಹೋದರು ತಮ್ಮ ಮನೆಗೆ |
ಕಾಳಿಂಗ ತನ್ನಯ ಸಂತಾನವ ತಿಂದಂತೆ | ರಾಮನ ತಿಂದ ಕಂಪಿಲನು              || ೨೧೩ ||

ಮೂರು ತಾಸುಳಿಯದೆ ಮರದಂತೆ ಪುರವಿರಲು | ಮಾಗಿಯ ಕೋಗಿಲೆಯ ಸ್ವರದಿ |
ರಾಯ ಕಂಪಿಲ ರತ್ನಾಜಿ ಇರುವಳು | ತಾವರೆ ಸಖನ ಕಂಡಂತೆ                      || ೨೧೪ ||

ಧರೆಗಧಿಕ ಹಂಪೆಯ ವರ ಪುಣ್ಯಕ್ಷೇತ್ರದ | ಕರುಣಿಸು ವರ ವಿರುಪಾಕ್ಷ |
ತರಳ ರಾಮನ ಮಡಗಿ ಸುರಿತಾಳನು ದಂಡೆತ್ತಿ | ಬರುವುದಕೆ ಹದಿನಾಲ್ಕು [>ಹದಿನೈದು] ಸಂಧಿ       || ೨೧೫ ||[1]

[1] + ಅಂತು ಸಂಧಿ ೧೪ [<೧೫] ಕ್ಕೆ ಪದವು ೩.೧೭೯ ಮಂಗಳಮಹಾಶ್ರೀ ಶ್ರೀ. (ಮೂ)