ಆಗಲಿ ಅದಕೇನು ಹೋಗಿ ನೋಡುವ ಕಾರ್ಯ | ಆಡುವ ವಚನಗಳ ಕೇಳಿ |
ಗೂಡಿನ ಗಿಳಿಗರುಹಿ ರಾಮ ಮುಂದಕೆ ಬರಲು | ಗಾಡಿಕಾತಿಯು ಸಂಗಿ ಕಂಡು        || ೧೨೧ ||

ಕಂದರ್ಪರೂಪನ ಸುಳುಹು ಕಾಣುತ ಸಂಗಿ | ಬಂದಳು ರತ್ನಿ ಬಳಿಗೋಡಿ
ಹಂಬಲ ಬಿಡು ಪಾಪಿ ಬಂದನಾಗಲೆ ಏಳು | ಮುಂದೆ ಕಾಣಿಸಿಕೊಂಬೆ ಪೋಗಿ         || ೧೨೨ ||

ನಿಜವೇನೆ ಸಂಗಾಯಿ ನೀಲವರ್ಣನ ಸುತನು | ಬರುವುದು ನಿಶ್ಚಯದಿ ಎನಗೆ |
ಬಳಲಿದ ಪೈರಿಗೆ ಜಲವೃಷ್ಟಿ ಸುರಿದಂತೆ | ಕಳೆಯೇರೆ ಪದ್ಮದ [ಲರಂ]ತೆ              || ೧೨೩ ||

ಕಾಣದವಳಂದದಿ [ಚಾ]ಲಕಿಯು ಸಂಗಿ | ಬಾಲರಾಮಗೆ ಇದಿರ ಬರಲು |
ಹೆದರುವಳು ಪರಿಯಾಗಿ ಎರಗಿ ಸಾಷ್ಟಾಂಗವ | ಕರಮುಗಿಯೆ ರಾಮ ಗದ್ದಲಿಸಿ       || ೧೨೪ ||

ಕೆಚ್ಚನೆ ಎದೆಯೊಳು ತೊತ್ತು ಮುಂಡೆಯೆ ಸಂಗಿ | ಒಡಹುಟ್ಟಿದಣ್ಣಯ್ಯ ಬರಲು |
ಕೊಟ್ಟು ಕಳುಹದೆ ಚೆಂಡ ತನ್ನ ಬರಿಸಿದ ಭಾಗ್ಯ ಮತ್ತೆ ಕೊರೆಸುವೆ ಮೊಲೆ ಮೂಗ     || ೧೨೫ ||

ಸಿಡಿಲಂತೆ ಗರ್ಜಿಸಲು ನಡುಗಿ ಹಡಪದ ಸಂಗಿ | ಅಡಗಲು ಆತ್ಮದ ಉಸಿರು |
ಸಿದ್ಧವು ಬಂದುದು ಅಮ್ಮಾಜಿ ಆಡಿದ | ಸುದ್ದಿಯ ನಾ ಕಂಡುದಿಲ್ಲ                      || ೧೨೬ ||

ಅಮ್ಮನವರ ಕೇಳಿ ಧರ್ಮರೂಪನೆ ಪೋಗಿ | ಎಮ್ಮ ಕೈಯೊಳು ತೀರುವುದೇನು |
ಮುನ್ನ ಹೇಳಿದ ಮಾತ ನಿರ್ಣಯ ಮಾಡುವರೊಡನೆ | ಕೊಡು ಎನ್ನುವ ಶಕ್ತಿ [ನ]ಮಗುಂಟೆ    || ೧೨೭ ||

ಅಡರಿದ ಕೋಪವನು ಒಡನೆ ಶಾಂತಿಯ ಮಾಡಿ | ನಡೆಯಲು ರಾಮ ರಣಭೀಮ |
ತರಳೆ ರತ್ನಿಯ ಕಂಡಳು ಕಿರಣಪ್ರಭೆ ಬಂದು | ಸುಳಿದಂತೆ ನಯನ ತಳತಳಸೆ       || ೧೨೮ ||

ನೋಡಿದಳು ಮನಭ್ರಮೆಯು ತೀರುವಂದದಿ ರತ್ನಿ | ಕಾಮಬಾಣದಲಿ ಕಳವಳಿಸಿ |
ಗಾಯೊಡೆದ ಮೃಗದಂತೆ ಬಾಲೆ ಮೂರ್ಚೆಗಳಾಗಿ | ನೋಡಲಾದಳು ಮರಳಿ ಮುಖವ        || ೧೨೯ ||

ಮನಸಿಜನ ತಾಪದಿ ಜಿನುಗುತಿರುವಳ ಕಂಡು | ಅನುಮಾನ ನಿಜ ಸತ್ಯರಾಮ |
ಜನಿಸಿ ಹರಿಯಮ್ಮಗೆ ವನಿತೆ ಇಮ್ಮಡಿಯೆಂದು | ಚರಣ ಪಿಡಿದು ಭಕ್ತಿಯಲಿ            || ೧೩೦ ||

ಅನಿತರೊಳಗೆ ರತ್ನಿ ತಿಳಿಯೆ ಮೂರ್ಚೆಯ ತಾಪ | ಶಿರವ ಪಿಡಿದು ಹರಸುವಳು
ಉರಗನ ಒಯ್ಯುವ ವಾಹನವೇರಿದನ | ತರಳ ಪೋಲ್ವನೆ ನೀ ಏಳು                 || ೧೩೧ ||

ಚಂದ್ರನ ಕಂಡಲ್ಲಿ ಅಂಬುಧಿ ನಲಿವಂತೆ | ಬಿಂದು ನಾಯಿರಲು ಕಂಡ ತೆರದಿ |
ರಂಭೆ ರತ್ನಿಯು ಅಷ್ಟ ಸಂಭ್ರಮದೊಳು ತಂದು ಗಂಧಕಸ್ತೂರಿಯು ಪುನುಗ           || ೧೩೨ ||

ಉಡುಗೊರೆಯ ವೀಳ್ಯವನು ಪರಿಮಳವ ಮೊದಲಾಗಿ | ಮಡಗಿ ಮುಂದಿಟ್ಟು ಕರಮುಗಿದು |
ನಂದನೆ ಧರಿಸೆಂದು ಅಂಗನೆ ನುಡಿಯಲು | ಕಂದರ್ಪ ರಾಮನಿಂತೆಂದ              || ೧೩೩ ||

ಜನನಿ ನಿಮ್ಮಯ ಉದರದಿ ಜನಿಸಿದ | ತೆರಳಗೆ ಕಡಿಮೆಯಾಗಿಹುದೆ |
ನಿಮ್ಮ ದಯದಿ ಪಡೆದೆ ಬಯಲ ಭ್ರಮೆಗಳು ಯಾಕೆ | ದಯಮಾಡಿ ಇರುವೆ ದ[ಣಿ]ವಂತೆ       || ೧೩೪ ||

ಪಟ್ಟಶೇಖರನಾದ ಪುತ್ರನು ಮನೆಹೊ[ಗೆ] | ಕೊಟ್ಟುದರುಂಟೆ ಬರಿ ಚೆಂಡ |
ಸಿಟ್ಟು ಮಾಡಳೆ ಅಕ್ಕ ಚಿಕ್ಕಮ್ಮನ ಮನೆಯೊಳು | ಬಟ್ಟೆಗೆ ಗತಿಯಿಲ್ಲವೆಂದು           || ೧೩೫ ||

ರಾಜಮನ್ನಣೆ ಮಾಳ್ಪ ತರವಹುದು ಧರೆಯೊಳಗೆ | ತಾಯಿ ಮಕ್ಕಳನು ಘನಮಾಡೆ |
ಭೂಮಿಯೊಳ್ ಪೂಜಿತ ಪು[ಷ್ಪ]ಬಾಣನ ರೂಪ | ತಾಯಿಗೆ ನಲಿವ ಆತ್ಮದಲಿ         || ೧೩೬ ||

ಕಂದರು ಎಂದೆಂಬ ಭಾವ ತಾಯೊಳು ಉಂಟು | ಒಂದಾರು ಭುಜವಾದ ರಾಮ
ಮುಂದುಗಾಣದೆ ಜನರು ಮನಬಂದ ರೀತಿಗೆ ನುಡಿದು | ಯಮಗೊಂಡಕೆ ಗುರಿಯಾಗಿಹರು   || ೧೩೭ ||

ಬಾಯೊಳು ಬಾಲರೆಂದು ಪ್ರಿಯದಿ ಕಾಣುವಳು | ದೇಹದಿ ಕರಗಿ ಕಾತರದಿ
ಯಮಗೆ ಎದೆಗೆಡುವ ಮಾರನಟ್ಟುಳಿ ಮುರಿದು | ಪೊಗರುವ ಕುಚವ ಮುಚ್ಚುವಳು    || ೧೩೮ ||

ನೋಡಲು ದೃಷ್ಟಿಯ ಪಾವಿಗೆ ಗರುಡನ | ಘೂಳಿ ಬಿದ್ದಂತೆ ಕಡೆ ದೃಷ್ಟಿ |
ಏನಿವಗೆ ಗತಿಯನ್ನು ಕಾಮ ಕೇಳಿಗೆ ಕರೆವ | ಉಪಾಯವೇನೆಂದು ಜ್ಞಾಪಿಸುತ        || ೧೩೯ ||

ಬಾಗಿಲಂತಸ್ತಿನವ ಬಿಟ್ಟು ಏಕಾಂತ ಸ್ಥಾನಕೆ ಒಯ್ದು | ಪ್ರೀತಿ ಲಲ್ಲೆಗಳ ಪುಟ್ಟಿಸದೆ
ವಶವಾದವು ಕೈಗೆ ರತಿಕ್ರೀಡೆಯನು ಕಂಡರಿದ | ಬಸಿರ ಬಿಡದಂಥ ವಿಟನು           || ೧೪೦ ||

ಹೊರಗಣ ಬರಿನೋಟ ತನ್ನೊಳಗಣ ಕೂಟ | ಮನಗ್ರಹಿಕೆ ತನು ಸುಖವಿಲ್ಲ |
ನಯನೀತಿಯೊಳಗಿವನ ಕಳುಹುವ ಚೆಂಡಿರುವ | ಸ್ಥಳಕೆ ಹೋಗದೆ ತನಗೊಲಿಯ    || ೧೪೧ ||

ತಾಯ ನೋಂಪಿ[ಗೆ] ಬೇಗ ದೇವೇಂದ್ರನಾನೆಯ ತಂದ | ಭೀಮನನುಜ ನರ ಪಾರ್ಥ |
ಏನಪ್ಪ ನೀ ಬಂದ ಕಾರ್ಯಸ್ಥಿತಿಯನು ಪೇಳು | ಸಾಗಿಸಿಕೊಡುವೆ ಪೋಗೆನುತ       || ೧೪೨ ||

ತಾಯೆ ಲಾಲಿಸಬಹುದು ಕುಮಾರನ ಬಿನ್ನಪವನು | ನಾನು ಮಾನ್ಯರ ಕೂಡಿಕೊಂಡು |
ಆನಂದ ಅರ್ತಿಯಲಿ ಚೆಂಡವಾಡುತಲಿರ್ದೆ | ಸೇರಿತು ಅರಮನೆಗೆ ಬಂದು            || ೧೪೩ ||

ಭೇರುಂಡ ಕಾಟಯನ ಬೆನ್ನೊಡನೆ ಕಳುಹಲು ನೀವು | ಕುವರ ನಾ ಬರಲೆಂದು ಪೇಳೆ |
ಕೇಳುತ್ತ ಜನನಿಯಯ ಪಾದ ಕಾಬಡೆ ಬಂದೆ | ದಯಮಾಡಿ ವೇಳೆಯಾಯಿತ್ತು       || ೧೪೪ ||

ಕಾಟಗೆ ಎಳ್ಳನಿತು ವಿವೇಕವಿಲ್ಲವೊ ಪುತ್ರ | ಮಾತಿನೊಳೆನ್ನ ಗರ್ಜಿಸಿದ |
ಕೋಪಿಸಿ ಕಳುಹಿದೆ ಕುಲದೀಪ ನಿನ್ನನು | ನೋಳ್ಪ ಪ್ರೀತಿಯ ಬಗೆ ಎಮ್ಮ ಪುತ್ರ       || ೧೪೫ ||

ಮತ್ತೆ ಒಳ್ಳೆಯ ತಾಯಿ ಪುತ್ರನ ಮೇಲೆ | ದೃಷ್ಟಿಯಿರಲು ಕೃತಾರ್ಥರಾದೆವು |
ಪ್ರಜ್ಷಲಿಸಿ ಹೊತ್ತು ಹೋಯಿತು ಕಂದ ಪಿತ ಮಲಗೊ | ಪಟ್ಟೆ ಮಂಚದಲಿಟ್ಟಿಹೆನೊ     || ೧೪೬ ||

ತೆಗೆದುಕೊಂಡು ಹೋಗೆನಲು ಹದಿನಾರು ಭುಜವಾದ | ನಡೆದನು ಸಜ್ಜೆಯ ಮನೆಗೆ
ಕರಿಗಜವು ಇರುಬಿನ ಬಲೆಗೆ ಸೇರಿತು ಎಂದು | ನಡೆದಳು ಬೆನ್ನೊಡನೆ ರತ್ನಿ          || ೧೪೭ ||

ಪುತ್ರರಾಮನು ಪೋಗೆ ಹೊಕ್ಕಳು ರತ್ನಿಯು | ಮುಚ್ಚಿಕೊಳುತ ಕದ ಅಗಣಿಯನು |
ಸತ್ಯ ಪುರುಷನು ರಾಮ ತಿರುಗಿ ನೋಡಲು ಬರುವ | ರಕ್ಕಸಿ ತೆರದ ರತ್ನಿಯನು      || ೧೪೮ ||

ಮುಂದಕ್ಕೆ ನಡೆಯಲು ಚೆಂಡ ಧರ್ಮಗಳೆಲ್ಲ | ಪಿಂದಕ್ಕೆ ತಿರುಗೆ ಉತ್ತಮವು |
ಚಂದ್ರ ಪ್ರತಿಗೆ ರಾಹು ಬಂದು ತುಡುಕುವ ತೆರದಿ | ಮುಂಜೆರಗ ಪಿಡಿದಳು ರಾಮುಗನ         || ೧೪೯ ||

ಹಿಡಿಯಲೇತಕೆ ಮಗನ ಬಿಡಿ ತಾಯೆ ಬಾಯೊಳು | ನುಡಿಯಮ್ಮ ಪೇಳುವುದಿರಲು |
ಹಡೆದಮ್ಮ ನಿಮ್ಮಡಿ ಜನನಿಯಲ್ಲವೆ ನೀವು | ದೂರೆಡೆಯ ನಿಂತು ಮಾತಾಡು         || ೧೫೦ ||

ಅಮ್ಮಯ್ಯ ಅಭವನ ಪುಣ್ಯಾಂಗನೆ ಸಮನೆ | ನಿನ್ನೊಳಗಿಹ ಪ್ರೀತಿಯ ಪೇಳು |
ಕರ್ಮದ ಸ್ವರಗಳ ಕರ್ಣನಾತ್ಮದಿ ಕೇಳೆ | ಧರ್ಮಸ್ಥಿತಿಯಾಗಿ ನಡೆಸುವೆನು           || ೧೫೧ ||

ಅತಿ ಮಾತ ಬೇಡವೆ ನೀನು ಚಿಕ್ಕಮ್ಮ | ರೂಪಾದರೆ ನಿನ್ನ ಶಿಶುವು |
ರೂಪಿನಿಂದಲೆ ಪಾತಕಕೆ ಗುರಿಯಾದೀಯ | ಕೋಪವ ಬಿಡು ಎನ್ನ ತಾಯೆ            || ೧೫೩ ||

ಹರಿಯಮ್ಮ ಬೇರಲ್ಲ ಚಿಕ್ಕಮ್ಮ ನೀವೀಗ | ಹಿರಿಯರು ನೀವು ಉತ್ತಮರು
ಸಿರಿಯುಳ್ಳ ರೂಪಾದರೆ ನಿನ್ನ ಮನಸಿಗೆ | ಸರಸಬೇಡವೆ ಚಿಕ್ಕಮ್ಮ                    || ೧೫೪ ||

ಚಿಕ್ಕಂದು ಮೊದಲು ನನಗೆ ತಕ್ಕಂಥ ಹೆಣ್ಣನು | ಸೊಕ್ಕಿ ಕಂಪಿಲ ನಗೆ ತಂದ |
ಚಿಕ್ಕಮ್ಮನಲ್ಲವೊ ನಿನಗೆ ಸೋದರ | ಅತ್ತೆಯ ಮಗಳು ಕಾಣಯ್ಯ                     || ೧೫೫ ||

ಮಕ್ಕಳ ಬಯಸುವರೆ ಪೃಥ್ವಿಮಧ್ಯದಿ ಉಂಟೆ | ಕತ್ತೆಗಾರ್ದಭನ ಕುಲದೊಳಗೆ |
ಹುಟ್ಟುವುದೆ ಶಶಿಸೂರ್ಯ ಭೂಕಾಂತ ಮುಳುಗದೆ | ತಾಯಿ ಕೆಟ್ಟ ಮಾತ ನುಡಿಯಲು         || ೧೫೬ ||

ಆಡಬೇಡಮ್ಮಯ್ಯ ಅವಧೂತ ಮಾತುಗಳ | ಕಾಲ ಕೋಪಾಗ್ನಿ ರೂಢಿಸಲು |
ಕೇಳವು ಕಿವಿಯೆನ್ನ ತಾಯಿಗೆ ಸಮನೆಂಬ | ಭಾವ ಎನ್ನೊಳಗುಂಟು ರಂಡೆ            || ೧೫೭ ||

ಆಸೆಬಟ್ಟವಳನು ನಿರಾಶೆ ಮಾಡಲು ಬೇಡ | ಶ್ವಾನ ಮುಖದಿ ಬಂದವಳಲ್ಲ |
ಮುನಿಸು ಬೇಡವೊ ಮುಂದುಗೆಟ್ಟೆನು ವಿರಹದಲಿ | ಮನಸಿಜನ ರೂಪ ನೀ ಕಾಯೊ   || ೧೫೮ ||

ತಂದೆಯೇರುವ ಅಂದಣ ಪಲ್ಲಕ್ಕಿಯ | ಕಂದರೇರುವರು ಧರೆಯೊಳಗೆ |
ಕುಂದು ಕೊರತೆ ಇಲ್ಲ ಇದಕೆ ಚೆನ್ನಿಗರಾಮ | ಒಂದಾಗಿ ಕೂಡುವ ನಡೆಯೊ           || ೧೫೯ ||

ಅಪ್ಪನ ರಾಣಿ ಚಿಕ್ಕಮ್ಮನಲ್ಲವೆ ತಾಯಿ ಒಪ್ಪುವರೆ ನೀವು ಪಾಪಗಳಿಗೆ |
ಛಪ್ಪನ್ನ ದೇಶದ ಹೆಮ್ಮಕ್ಕಳು ತಮ್ಮ | ಮಕ್ಕಳ ತಾವೆ ಕೂಡುವರೆ                     || ೧೬೦ ||

ತುಪ್ಪ ಸಕ್ಕರೆ ಮಧುರಸ ಉಂಬ ಬಾಯಿಗೆ | ಹಿಪ್ಪೆಗೂಳದು ಸೊಗಸುವುದೆ |
ಮುಪ್ಪಿನ ಗಂಡಗೆ ಒಪ್ಪುವುದೆ ಯೌವನ | ಪುಷ್ಟಬಾಣಗೆ ಸರಿಯುಂಟೆ                 || ೧೬೧ ||

ಪೊಡವಿಯೊಳಗೆ ಗೋವಿನ ಜನ್ಮ ಉತ್ತಮ | ನಡೆವಂತೆ ತಾವೆ ವರ್ತನೆಯು |
ಒಡಹುಟ್ಟಿದವರೆಂದು ಕೂಡದಿಹುದೆ ಕೇಳು ಕಡುಗಲಿ ಚೆನ್ನಿಗ ರಾಮ                  || ೧೬೨ ||

ಭೋಗದ ಸತಿಯರ್ಗೆ ವಾವೆ ವರ್ತನೆಯಿಲ್ಲ | ಸಾಗರದಿ ಪರಿ ನೀರು ಕೇಳು |
ಬಾಗಿಲೊಳಗೆ ತಿರುಗಾಡರೆ ಜನರೆಲ್ಲ | ಹೀಗೆ ನೋಡಿಕೊ ಚೆನ್ನರಾಮ                 || ೧೬೩ ||

ಪರನಾರಿ ಸೋದರ ಬಿರಿದುಂಟು ಕಾಲೊಳು | ಕರ್ಮದ ನುಡಿಯಾಡಬೇಡ |
ನವಕೋಟಿ ಮಾರ್ಬಲಕೆ ಎದೆಗೊಡುವ ಛಲವುಂಟು | ಪರಸತಿಗೆ ಭಯಕಾಂತ ನಾನು         || ೧೬೪ ||

ಬ್ರಹ್ಮಮಾಲೆಯ ಪಿಡಿದು ಬಂದ ಸತಿಯರು ಹೊರತು | ವರ ಚೆನ್ನೆಯಾಗೆ ಧರೆಯೊಳಗೆ |
ಪನ್ನಂಗಧರನಾಣೆ ಪುಸಿಯನಾಡುವನಲ್ಲ | ಹಡೆದಮ್ಮಗೆ ಸಮನೆಂಬೆ ತಾಯೆ         || ೧೬೫ ||

ಸುಡು ರಾಮ ನೀತಿಯ ಕಡು ಚೆಲ್ವನಾಯಕಿ ಬಂದು | ಒಡಬಡಿಸಿ ದೈನ್ಯ ಹೊರಳಿದರೆ |
ಒಲ್ಲೆನೆಂಬುವ ಬುದ್ಧಿ ನಿನ್ನಲ್ಲಿ ಕಂಡೆನು ರಾಮ | ಕಲ್ಲಾಗಿ ಕರಗಿ ಹರಿವವದು            || ೧೬೬ ||

ಮಾತಿನಿಂದಲಿ ಪೇಳೆ ಮಣಿಯನು ಇವ ತನಗೆ | ಕಾತರ ಬರುವಂತೆ ಕಲೆಯು |
ನೇತ್ರಕೆ ಕಾಣಿಸದೆ ಕೂಟಕ್ಕೆ ಮನವಿಡನು | ಪೀತಾಂಬರ ಸೀರೆಗಳನು ಕಳೆಯೆ       || ೧೬೭ ||

ಉಟ್ಟ ಸೀರೆಗಳನು ಕಳೆದಿಡಲು ಕುಚಗಳ | ರವಿಕೆ ಹದಮೀರಿತೆನಲಾಗ |
ಹರನ ರಾಣಿಯ ಸಮ ಹರಿಯಮ್ಮಗೆ ಮಿಗಿಲೆಂದು | ಅಡರಲು ರಾಮನ ಕೋಪಾಗ್ನಿ   || ೧೬೮ ||

ಕರ್ಮದ ಮೂಳಿಯ ಗುಣಧರ್ಮ ನೋಡುವುದೇನು | ತಡೆ[ದ]ನು ಕರವ ತಾಯೆನುತ |
ಸಿಡಿಲಿನ ಮರಿಯಂತೆ ಕೋಪಡರಿ ಚೆನ್ನಿಗರಾಮ | ಒಗೆದನು ಕೊನೆ ರಟ್ಟೆ ಹಿಡಿದು     || ೧೬೯ ||

ತೆಗೆದಿಟ್ಟ ಭರವಿಗೆ ಹದಿನಾರು ಮಾರಿಲಿ ಬಿದ್ದು | ಹೊಡೆದಂತೆ ಗ್ರಹವು ಮೂರ್ಚೆಗಳು |
ಮರುಳಾಗಿ ಎಚ್ಚತ್ತು ಮಾರಿಯಂದದಿ ಕುಳಿತು | ನುಡಿವಳು ರಾಮ ಕೇಳೆನುತ        || ೧೭೦ ||

ಸತ್ಯವಲ್ಲವೊ ರಾಮ ಸತಿಯರಿಗೊಲಿಯದೆ | ಕೆಟ್ಹೋದನರಿ ಆ ಪಾರ್ಥ |
ದೃಷ್ಟಿ ಇಡಲು ಹಿಂದೆ ದೇವೇಂದ್ರನ ಸತಿಯಿಂದ | ತೊಟ್ಟನು ಬಳೆಯ ಶಾಪದಲಿ      || ೧೭೧ ||

ಕೊಂದು ಹೋಗೆಲೊ ರಾಮ ತುಂಬಿತು ವಿಧಿ ನಿನಗೆ | ಹಿಂದಣ ಗಮನ ಕೇಳರಿಯಾ |
ಗಂಡನಿಲ್ಲದ ಮನೆಗೆ ಬಂದ ತಪ್ಪಿಲಿ ನಿನಗೆ | ಸಾರಂಗಧರನ ತೆರ ಮಾಳ್ಪೆ            || ೧೭೨ ||

ಬಾಲೆಯರ ಕಲಹದಿ ಮುನಿಯಾಗಲುಳಿವನೆ | ಕೇಳಲಿಲ್ಲವೆ ಕಲ್ಯಾಣಪುರದಿ |
ಚೋರ ಚಿಕ್ಕಯ್ಯನ ತಳವಾರನ ಸತಿ ಭ್ರಮಿಸಿ | ಜಾರಿಹೋದಲ್ಲಿ ತಲೆಯನರಿಸಿದಳು || ೧೭೩ ||

ಹೆಣ್ಣುಗಳ ಹಗೆಯೊಳು ದಾನವರು ಕೆಟ್ಟರು | ಕೇಳು ಮುನ್ನ ರಾಮನ ಸತಿಯಿಂದ |
ಮಣ್ಣ ಕೂಡಿದ ರಾಮ ಉತ್ರಕುಮಾರತಿಯ | ಅಣ್ಣನ ಮಾವ ಭೀಮನಲಿ              || ೧೭೪ ||

ಮೂರು ಶಂಕುವನಾಳ್ವನ ಕುಮಾರನ ಕೇಳ್ದರಿಯಾ | ಮುನಿರಾಯ ನಿರ್ಮಿಸಿದಂಥ ಸತಿಯ |
ತಾವೊಲ್ಲೆ ಪರಸತಿಯ ದ್ರೋಹವೆನ್ನಲು ನಮಗೆ | ಸುಡುಗಾಡ ಕಾದುದನು ನೀನರಿಯಾ       || ೧೭೫ ||

ಹೆಣ್ಣಿನ ಕಾಮತ್ವಕೊಲ್ಲ [ದ] ಮುನಿವರಗೆ | ತೊನ್ನು ಆದುದನು ಕೇಳ್ದರಿಯಾ |
ನುಸುಳುವೆ ಮನದೊಳು ಚೆಲ್ವ ಲಾಲಿಸಿ ಕೇಳೊ | ನಿನ್ನಂತೆ ಹಿಂದೊಬ್ಬ ಮುನಿಯು   || ೧೭೬ ||

ಯೋಗದ ಮದವಿಡಿದು ಯತಿಯಾಗಿ ವರ ಶೌರ್ಯ | ಲಾವಣ್ಯ ಮದ ಪ್ರಾಯದೊಳಗೆ |
ಭೂಮಿ ಬ್ರಹ್ಮಾಂಡವು ಚರಿಸುತ ಸೂರ್ಯಾಂಗ | ಗ್ರಾಮ ವನಾಂತರಕೆ ಬರಲು      || ೧೭೭ ||

ನಗರದ ನೃಪ ಸಡಗರದೊಳು ಬಂದು ಮುನಿವರಗೆ | ಎರಗಲು ಸಾಷ್ಟಾಂಗದೊಳಗೆ |
ಬಿಜಮಾಡಬಹುದೆನ್ನ ಪುರಕೆ ನಿನ್ನಯ ಪುತ್ರ | ಬಡ ಮಗನ ಬಿನ್ನಹ ಕೈಕೊಂಡು       || ೧೭೮ ||

ಒಪ್ಪಿಕೊಳ್ಳಲು ಮುನಿಯು ಅಷ್ಟಭೋಗದಿ ಹೋಗಿ | ಹೊಕ್ಕ ರಾಜೇಂದ್ರನರಮನೆಯ |
ಮುತ್ತಿನ ಪೀಠದಿ ಮುನಿ ಮುಹೂರ್ತವ ಮಾಡೆ | ತಕ್ಕ ಉಪಚಾರಗಳ ಮಾಡಿ        || ೧೭೯ ||

ರಾಯನ ರಾಣಿಯರು ಜೋಡಿಲಿರ್ವರು ಬಂದು | ಪಾದಕೆರಗಲು ಹರಸಿದನು |
ಭೂಮಿ ರಾಜ್ಯವ ಪಡೆದೆ ಅನುಭವ ಕರ್ತರು ಇಲ್ಲ | ದೇವ ಮುನಿವರನೆ ಸಂತತಿ[ಯು]        || ೧೮೦ ||

ಕೊ[ಟ್ಟಾ]ನು ಬ್ರಹ್ಮಾಂಡ ಸೃಷ್ಟಿ ಪರಶಿವ ಒಲಿದು | ನೇತ್ರ ಪಾವಕನು ಪರಮೇಶ |
ಮಸ್ತಕದಿ ಕರವಿ[ಟ್ಟ]ಅಸ್ತಮಾನಕೆ ಬರಲು | ರಾತ್ರಿಯಲಿ ಹೊರಗೆಮ್ಮಸ್ಥಳವು          || ೧೮೧ ||

ನವಕೋಟಿ ಪಂಜಿನ ಬೆಳಕಿನೊಳಗೆ ಪೋಗಿ | ಕಡೆಗಂಡ ಹೇಮಾದ್ರಿ ಗಿರಿಯ |
ಮೃಡರೂಪ ಸೂರ್ಯಾಂಗ ಮುನಿವರನು ತಾ ಬಂದು | ಒರಗೊಂಡ ಶಕ್ತಿಗೃಹದಲ್ಲಿ   || ೧೮೨ ||

ಇರುವಲ್ಲಿ ಕಿರಯಾಕೆ ಹಿರಿಯಕ್ಕ ಮುನಿರವನು | ಮನ್ಮಥಗೆ ಪ್ರತಿ [ಯಹನು] |
ಭ್ರಮೆ ಬಿಡದು ಆತನ ದಯವಿಡಲು ನಾ ಪೋಗಿ | ಬರುವನು ನಿಮಿಷ ಮಾತ್ರದಲಿ     || ೧೮೩ ||

ನಗರದ ಬಂಧತ್ವ ಯಮನ ಕಾವಲು ತಂಗಿ | ಮಿಗುವ ತ್ರಾಣಿಹುದೆ ನಿನ್ನಲ್ಲಿ |
ಅಭಯವಾಗಲು ನೀನು ಅಂತ್ರಮಾರ್ಗದಿ ನಡೆವೆ | ಅರಸಿಲ್ಲ ಈ ರಾತ್ರಿಯೊಳಗೆ      || ೧೮೪ ||

ಅನುಜೆ ಪೋಗಲಿ ಸುಖ ಗೆಲಿದು ಬಂದರೆ ಸಾಕು | ನಾ ಮುನಿವಳಲ್ಲವೆ ಅಡ್ಡಲಾಗಿ |
ನಡೆದಳು ಬಂಧತ್ವದಗಳು ಕೋಟೆಯ ದಾಟಿ | ಮುನಿಯಿರುವ ಗೃಹಕೆ ಬರಲು        || ೧೮೫ ||

ನಾನಾ ವಿನಯತ್ವದಲಿ ಮುನಿವರೆ ಬೋಧಿಸಲು | ಆಗದೆನುತ ಚೆಂಡಿಸಲು |
ನಾಗರ ಮರಿ ಕಡಿದು ಬರಿ ಭಯದ ತೆರಬಂತು | ಹೋಗುವರೆ ಮುನಿಯೆನ್ನ ಕಳುಹು || ೧೮೬ ||

ಪಾಪ ಹರಿದುದು ಎನ್ನ ಪಿಶಾಚಿ ಬಿಟ್ಟಿತುಯೆಂದು | ಆಕೆಯ ಒಡನೆ ಮುನಿ ಬರಲು |
ಕೋಟೆಯ ನೆಗೆವೆ ನಾ ದಾಂಟಿ ಪೋಗುವೆನೆನಲು | ಆತುಕೊಳ್ಳಲು ಶಿವಕವಳ       || ೧೮೭ ||

ಅತ್ಯಂತ ಪ್ರೀತಿಯನಿಟ್ಟು ಬಂದಳು ಮನೆಯ | ಹತ್ತೇರು ಸಮಯದಿ ಬಿರಿದ |
ತೊಟ್ಟು ಬೇಸರವಾಗೆ ಹತ್ತದೆ ಮೈತೊನ್ನು | ಧರ್ಮಾಂತ್ರದ ನುಡಿ ಕೇಳು ರಾಮಾ    || ೧೮೮ ||

ಸೂರ್ಯಂಗಮುನಿಗಾದ ಭವರೋಗ ಕಂಡೇನೋ | ರಾಮ ಕೇಳೆನ್ನ ಮಾತ ವಿನಕರಿಸಿ |
ಮೈಲಿವಗೆ ಹರಿದಂಥ ಕಷ್ಟ ವಿಧಿಯ ಕೇಳು | ಬಹಳಾಶ್ರಮ ಬಿಟ್ಟು ಬಹುದ             || ೧೮೯ ||

ಆಮೇಲೆ ಮತ್ತೊಂದು ಗ್ರಹಿಸಿ ತೊನ್ನನು ರೂವಿನ | ವೇದವ್ಯಾಸನ ಬಳಿಗೆ ನಡೆಯೆ |
ಆದ ವಿವರವ ಪೇಳಿ ಪಾದಕೆರಗಲು ಮುನಿಯು | ಧ್ಯಾನಿಸಿ ಪೇಳಿ ನುಡಿವವನು       || ೧೯೦ ||

ತಾನಾಗಿ ಬಂದುದನು ಹೋಗೆನಲು ಬಲು ಕರ್ಮ | ಕಾಲಹಾನಿಗೆ ಗುರಿ ಬಿಡದು |
ತೀರದು ನಮ್ಮಿಂದ ಈ ಮೇಲೆ ಆಕೆಯ ನೆರೆಯೊ | ಸುವರ್ಣತ್ವವು ಬಹುದೆನಲು      || ೧೯೧ ||

ಬಂದನು ಸೂರ್ಯಾಂಗ ಉತ್ತುಂಗನ ಪುರಕಾಗ | ರಂಭೆಯನೊಡಂಬಡಿಸಿ ಕರೆಯೆ |
ಎಂದಿನನ್ವಯ ಬಂದುದು ಎಲೆ ರಾಮ | ನೊಂದೆಯೋ ಇದರಿಂದ ಕಡೆಗೆ             || ೧೯೨ ||

ಧರೆಯ ನಾರಿಯರ್ಗೆಲ್ಲ ವೈರಾಗಿ ಬಾಳುವೆ | ಕರಿಗೆ ಭೇರುಂಡನಿದ್ದಂತೆ |
ಹೊರಬೇಡ ಅಪಕೀರ್ತಿ ಕಿರಿತಾಯ ಕೈಮೈಯ | ಪಿಡಿದನೆನಿಸಿ ತಲೆ ತರಿಸುವೆನು    || ೧೯೩ ||

ನಾಯಿ ಕೂಗಲು ತಲೆಯ ತೋರುವನೆ ದಿನಕರನು | ತಾಮ್ರಚೂಡನು ಸ್ವರವಿಡದೆ |
ನೀರು ನಿಲ್ಲದೆ ಕೆಸರೆ ನಿಜಭಕ್ತಿ ಇರುವಲ್ಲಿ | ಕಾಯನೆ ಹರ ಸಹಾಯವಾಗಿ              || ೧೯೪ ||

ಕರ್ಮಕ್ಕೆ ಗುರಿಯಲ್ಲ ಧರ್ಮದೇವತೆ ಬಲ್ಲ | ನಿರ್ಮಾಣವಿರಲು ವಿಧಿಯಿಂದ |
ಅನ್ಯಾಯ ಮಾಡದೆ ಅಳಿಯೆನು ಆ ಬರದಿರಲು | ಮುನ್ನ ಕಾಯನೆ ಗಿರಿಜೇಶ         || ೧೯೫ ||

ಸಪ್ತೇಳು ಲೋಕವ ಕುಕ್ಷಿಯೊಳಿಟ್ಟು | ರಕ್ಷಣಕರ್ತ ನಂದೀಶ |
ಮರ್ತ್ಯಲೋಕದಿ ಮಾಳ್ಪ ಗರ್ವದ ವಾರ್ತೆ | ಇತ್ತಲಾರೈದು ಬರುವಾಗ               || ೧೯೬ ||

ರಾಮನ ನಿಜಭಾವ ಕಾಣುತ್ತ ಧವಳಾಂಗ | ಏರಿದ ವೃಷಭವ ಪಿಡಿಯೆ |
ಮೂಗಿನೊಳು ಬೆರಳಿಟ್ಟು ತೂಗಲು ಶಿರಮುಂಡ | ಗಿರಿಜೆ ನುಡಿದಳು ಭ್ರಮೆ ಬಂದು   || ೧೯೭ || ಇ

ಹಾಸ್ಯ ಹಾಸ್ಯಗಳೇಕೆ ಚಿರಂತರ ಮಾರ್ಗ | ಗೋಚರದುದೋ ಪೂರ್ವಲೀಲೆ |
ಮೂಷಕವಾಹನ ಪಿತನೆ ಪೇಳಿರಿಯೆಂದು | ಮಂದಾಕಿನಿ ಅಗಜೆ ಕೇಳಿದಳು           || ೧೯೮ ||

ಮರೆದೇನೆ ಪಾರ್ವತಿ ಭುವನಾಲಯದಿ ಇವನ | ನರನ ಸುರನೆಂದು ಕೇಳಿದುದ |
ಮುಂದಲ ಸ್ಥಿತಿಗತಿಯ ತೋರುವೆ ನಾನೆನಲು | ತುಂಬ ಲಾಲಿಸು ಕರ್ಣದೊಳಗೆ     || ೧೯೯ ||

ನಿನ್ನ ಮಾಯವ ಗೆಲಲು ನಮ್ಮಗೆ ಅಸದಳವು | ಅಲ್ಲಮಪ್ರಭು ತಾನೆ ಬಲ್ಲ |
ಮುನ್ನೂರ ಅರುವತ್ತು ಸುರಮುನಿ ನರಜೀವಿ | ಯನ್ನೊಪ್ಪಿ ಬರಲು ಬಿಡಲುಂಟೆ       || ೨೦೦ ||

ನವಮೋಹ ಯೌವನದ ಕಳೆಗಾತಿ ಸತಿಬಂದು ಸಾಂಗೋಪಾಂಗದಲಿ ಒಡಂಬಡಿಸೆ |
ಶಿವ ಮೊದಲು ಹರಿ ಬ್ರಹ್ಮ ಒಲಿಯದಿರುವರೆ ಕೇಳು | ತರಳ ರಾಮನ ನಿಷ್ಠೆ ಫಲವ    || ೨೦೧ ||

ಅಲ್ಲಯ್ಯ ನಿನ್ನನು ಒಲ್ಲದೆ ನಡೆವಂತೆ | ಇಲ್ಲೀಗ ಇವನೊದೆದು ನಡೆದ |
ಎಲ್ಲರು ತಲೆದೂಗೆ ಹರಿಯಜ ಪ್ರಮಥರು | ನಲ್ಲೆ ಪಾರ್ವತಿಯು ಮೆಚ್ಚಿದಳು           || ೨೦೨ ||

ಸಲ್ಲದೀ ಮರ್ತ್ಯ ಕೈವಲ್ಯಕೆಯ್ಯಲು ಬೇಕು | ವಲ್ಲಭಗೆ ಅಗಜೆ ಪೇಳಿದಳು |
ವಲ್ಲಭೆ ಲಾಲಿಸು ತೀರಿಲ್ಲವು ಲಿಪಿ ಮುಂದೆ | ಡಿಳ್ಳಿ ಕಾರ್ಯಗಳ ಛಲ ಪದವ           || ೨೦೩ ||

ಹರನ ವರದೊಳು ಬಂದು ಜನಿಸಿ ಮರ್ತ್ಯಕೆ ಬರಲು ಕಳೆದನು ಮೊದಲ ಕಂಟಕವ |
ಪಡೆ ಮೂರು ಕ್ಷೋಣಿಯ ಸದೆ ಬಡೆದು ಸತಿಯಿಂದ | ತನುವಳಿದು [ನ]ಮ್ಮ ಕಾಬವನು        || ೨೦೪ ||

ರಾಮನ ನಿಜಸತ್ಯ ರಾಣಿಯೊಡನೆ ಪೇಳಿ ಪ್ರೇಮದಿ ರಶ ಶಕ್ತಿಯಿತ್ತು |
ಮೂರು ನಯನದ ದೇವ ಸಾಗಲು ರಜತಾದ್ರಿ | ರಾಮ ಹೊರಡುವನರಮನೆಯ     || ೨೦೫ ||

ಕರ್ಮವ ಮೊದಲ ಕಂಟಕವನು ಕಡೆಯ | ಬಾಗಿಲ ದಾಂಟಿ ಬರಲು |
ನಗೆ ಕಾಂತಿ ಲಾವಣ್ಯ ಬಗೆಗುಂದಿ ಬರುವನ ಕಂಡು | ಬೆದರಿದ ಕಾಟ ತನ್ನೊಳಗೆ      || ೨೦೬ ||

ತರದೆ ಚೆಂಡನು ರಣಧೀರ ಬರಿದೆ ಬರಲು | ಕೇಳುವರೆಲ್ಲ ಮನ್ನೆಯರು |
ಭೀಮ ಮಾರ್ತಂಡನೇ ನೀ ಉಸುರು ರತ್ನಿಯ | ಮೂಗನರಿದೀಗ ತರುವೆವು         || ೨೦೭ ||

ಪೇಳುವದಿನ್ನೇನು ಮೂಗ ಕನಸನು ಕಂಡ | ಗಾದೆಯಾದುದು ತಮ್ಮ ಬದುಕು |
ಮೇಘವಾಡಿದ ಮಳೆಯು ಆಗದೆ ಪೋಗುವುದೆ | ಮೂಜಗವೆಲ್ಲ ಕಂಡಿತಷ್ಟೇ          || ೨೦೮ ||

ಹೋದ ಕಾರ್ಯದ ಸುದ್ಧಿ ನಾಳೆ ಕಾಬಿರಿ ನೀವು | ರಾಯನೂರಿಗೆ ಬಂದ ಬೆಳಗೆ |
ಹೋಗಿ ಇಂದಿಗೆ ನಿಮ್ಮ ಗ್ರಾಮ ಸೀಮೆಗೆಯೆಂದು | ಮಾಡಿ ಉಡುಗೊರೆಯ ಕಳುಹಿದನು       || ೨೦೯ ||

ಬರಿಮಾತು ಎನಬೇಡಿ ಉಳಿವೆ ಕಂಟಕವೆಲ್ಲ | ಹರಿದುದ ಲೋಕದಾಟ |
ಕಿರಿಯ ಜನನಿಯಿಂದ ಯಮನ ಪಟ್ಟಣದೊಳು | ಸ್ಥಳವೆಂದು ಎನಗೆ ತೋರುವುದು   || ೨೧೦ ||

ಏನು ಬರಲು ಸ್ವಾಮಿ ಕಾಣಬಹುದು ಭೂಪ | ನೀ ಕಂಗೆಡದೆ ಎದೆಯೊಳಗೆ |
ರಾಯ ಜಟ್ಟಂಗಿಯ ಸ್ವಾಮಿ ಕಾಯ್ವನು ಎನ್ನ | ದೇವಿಯಿದ್ದಳು ಎನ್ನ ಮೇಲೆ           || ೨೧೧ ||

ನಡೆ[ಯೆ]ಡೆಯು ಇರುವನಕ ಮೃಡಬೇರೆ ಕೊಲ್ಲನು | ಧೃಡವ ಬಲ್ಲಳು ಧರ್ಮದೇವತೆಯು |
ಕುಡಿವೆನು ಕಡಲೇಳನೊಡೆವೆನು ನಭ ಮುನಿಯೆ | ಕವಿಯಲು [ತ]ಳತ್ರಯ ನಿಲ್ಲುವುದೆ        || ೨೧೨ ||

ಬಂದ ಪರಿವಾರಕೆ ಗಂಧವೀಳ್ಯವ ಕೊಡಿಸಿ | ಸಂಭ್ರಮದಿಂದವರ ಕಳುಹಿ |
ಸಂಗಯ್ಯ ಭಾವಾಜಿ ಲಿಂಗಣ್ಣ ಕಾಟಣ್ಣ | ಒಂದಾಗಿ ನಡೆಯೆ ಅರಮನೆಗೆ               || ೨೧೩ ||

ಹೊಡೆವ ತಂಬಟೆ ಭೇರಿ ಕುಡುಮು ವಾದ್ಯಗಳಿಂದ | ಸಿಡಿಲಂತೆ ಭೋರಿಡುವ ಕಹಳೆಗಳು |
ತುರಗ ಮಂದಿಗೆ ಎಲ್ಲ ಕರೆದು ವೀಳ್ಯೆವ ಕೊಟ್ಟು | ಚತುರಂಗ ಮಾರ್ಬಲದಿ ಬರಲು   || ೨೧೪ ||

ಮಂತ್ರಿಯ ಮಗ ನೀಲಕಂಠಗ ಕರೆವಾಗ | ಪಂಥದ ಲಿಂಗ ಸಂಗಯ್ಯ |
ಸಂತೋಷದೊಳು ಪೋಗಿ ಮನ್ನೆಯರು ನೀವು ಭೂ | ಕಾಂತೆ ಮುನಿಯಲು ನಿಮ್ಮ ಕೊಡೆವು  || ೨೧೫ ||

ರಾಮ ಲಕ್ಷ್ಮಣರಂತೆ ತಾವಾಗಲಿರ್ವರು | ಪೋಗಲು ತಮ್ಮ ಅರಮನೆಗೆ |
ಜಾವ ನಾಲ್ಕಾಗಲು ಭಾನು ಬ್ರಹ್ಮಾಂಡಕ್ಕೆ | ಕಾವಳ ತೋರಿನ್ನು ನಡೆಯೆ             || ೨೧೬ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನು ಚೆಂಡು ತರದೆ ರತ್ನಿಯ ಮನೆಯ | ಹೊರಟು ಬಂದಲ್ಲಿಗೆ ದ್ವಾದಶ [>ತ್ರಿಯೋದಶ] ಸಂಧಿ       || ೨೧೭ ||[1]

[1] + ಅಂತು ಸಂಧಿ ೧೨ [>೧೩]ಕ್ಕಂ [ಪದನು] ೨೭೭೫ಕ್ಕಂ ಮಂಗಳ ಮಹಾಶ್ರೀ ಶ್ರೀ (ಮೂ).