ವಿವರವನು ಪಾದಕೆ ಬರೆಸಿದೆವು ಮಾಡೆನಲು | ತಾ ಬೇರೆ ಹೆದರೆ |
ಹೀನಾಯ ಅಪಕೀರ್ತಿ ಪಾದಕಲ್ಲದೆ ಶ್ವಾನ | ಮೂಳ ನೋಡದೆ ಮುರಿದಾನೆಂದು     || ೧೦೧ ||

ಛಲಪಂಥವಾಡಿದ ಮೊನೆಗಾರ ಕಾಣರು | ಎಲ್ಲ ಇಳಿದರು ಭೂಮಿಗೆ ರಾಯ |
ಬೊಗಳಲಮ್ಮನ ನಾಯ ಬೇಂಟೆಯ ಕರೆದೊಯ್ಯೆ | ಹುಲಿಯ ಕಾಣಲು ನಿಲ್ಲುವುದೆ    || ೧೦೨ ||

ಹೆಂಬೇಡಿ ನೇಮಿಗೆ ಹೆಸರೊಂದು ಕೆಡಿಸಿತು | ಹಂದಿಯಂದದಿ ಒಡಲ ಬೆಳೆಸಿ |
ದಂಡೆದ್ದ ಪಾಶ್ಚಾಯ ಬೆದರಿ ಓಡಿದನೆಂದು | ನಿಂದೆ ಬಿಡದು ಧರೆಯೊಳಗೆ             || ೧೦೩ ||

ನಡೆ ಮುಂದೆ ದಂಡನು ಹೊಡೆಸುವೆ ತಂದೇಳೆ | ಸುಡು ನಿಮ್ಮ ಖಾನರ ಜನ್ಮ |
ಬರೆದು ಲೇಖನವನು ಬದಲು ಊಳಿಗ ಬಂದು | ಹೊಡೆದು ಎಬ್ಬಿಸು ಬೇಗ ದಂಡು    || ೧೦೪ |

ಖಾನ ಖಾನರನೆಲ್ಲ ನೀರ ಮುಖದಿಂದಿಳಿಸಿ | ಹೀನ ಸ್ವರದ ಕಾಗದ ಕಳುಹಿ |
ಕಾಗದವನು ಓದಿ ಹೇಳಲು ಎಲ್ಲರು | ಛಲಪಂಥ ರೂಢಿಸಿ ಕೋಪಾಗ್ನಿ                 || ೧೦೫ ||

ಹೊಡೆಯಲು ಗಜಭೇರಿ ಗುಡುಗಿ ಆರ್ಭಟದೊಳು | ನಡೆಯಲು ದಂಡು [ಅಬ್ಬರಿ]ಸಿ |
ವಡಬಾರ್ಪೂದ ತೆರದಿ ಕಡೆಗಂಡ ದಾಳಿಯೊ | ಸುಡುತ ಭೂಮಿಗಳ ನಡೆಯೆ         || ೧೦೬ ||

ಕಡೆ ಮೊದಲಿಲ್ಲದೆ ನಡೆದ ದಂಡಿನ ಸೊಬಗ | ಒಡೆಯ ಬಲ್ಲನು ಲೋಕನಾಳ್ವ |
ಭಯಗಳು ಇನ್ನಿಲ್ಲ ಮನಬಂದಲ್ಲಿಳಿಯುತ | ಮದುವೆ ಮುಂಜಿಗಳ ಮಾಡುತಲಿ       || ೧೦೭ ||

ದಂಡಿನೊಳು ಇರುತಿರ್ಪ ಪ್ರಚಂಡ ಸೂಳೆದು ಕೇಳಿ | ಅಂದಣ ಪಲ್ಲಕ್ಕಿ ತುರಗ |
ರಂಭೆಯ ಘನವೇನು ರತಿದೇವಿ ಹಿರಿದೇನು | ಎಂದರು ಉಂಗುಷ್ಠ ಹೊರಳುವರೆ     || ೧೦೮ ||

ಕೋಗಿಲೆ ರಾಗದ ಕೋಮಲದ ವೇಶಿಯರು | ಮೇಳದ ಹೆಣ್ಣು ಏಳ್ನೂರು |
ಸೋಗೆಯ ನವಿಲಂತೆ ಮೇಲೆನಿಪ ಕಸಬೆಯರು | ಪಾಚ್ಛಾ ಇಳಿಯಲು ಹರಿದಾರಿಟ || ೧೦೯ ||

ಪಿಡಿನಡುವು ಚಂದ್ರನ ಮಿಗಿಲೆನಿಪ ಕಳೆನೀತಿ | ಕರುವಿಟ್ಟು ಎರೆದಂಥ ಭಾವ |
ಮುಗುಳು ಮೊಲೆಗಳ ತೊಟ್ಟು ಸುಗುಣರ ಎದೆ ಸೋಂಕೆ | ಉಗಿವ ತೆರದೊಳು ಬೆನ್ನೊಳಗೆ   || ೧೧೦ ||

ರಾಮಗೆಟು ನಾವಾರೆ ತಲೆಯಕ್ಕ | ಕಾನರು ಶಿರಗಳು ಸುಡಲಿ |
ತೋರದೆ ತನ್ನಯ ಸುಖಸಾರವ ರಾಮ | ಶ್ವಾನದ ಮಾಡಿ ಕರೆದೊಯ್ಯೆ              || ೧೧೧ ||

ಹೆಣ್ಣು ಗೆಲಿದವನಾರು ಅಲ್ಲಮಪ್ರಭು ಹೊರತು | ಹರಿಬ್ರಹ್ಮ ರುದ್ರರು ಗೆಯಿವವರೆ |
ಬಿಲ್ಲಮರಾಯರನು ಗುರು ಲೇಸು ಕಾಂಕ್ಷೆಯನು | ನಲ್ಲಳೆ ಕೇಳರಿಯೆನಲ್ಲಿ             || ೧೧೨ ||

ಗಿರಿವಾಸದೊಳಗೊಂದು ಗವಿಯ ಸ್ಥಾನದೊಳಿರಲು | ಮುನಿಯಲ್ಲಿ ತಪಸಮಾಡುತಿರಲಿ |
ದಿನಕೊಮ್ಮೆ ರಾಯನ ದರುಶನವಾಗದೆ | ಕೊಳಲಿಲ್ಲ ಆಹಾರ ಉದಕ || ೧೧೩ ||

ಇರುತಲು ಈ ತೆರದಿ ದಿನಚರಿಯಲಾರಭ್ಯ | ಇರಲಾಗ ಡೊಂಬರು ಪುರಕೆ |
ಮಾಡುವ ಶಿವಪೂಜೆ ಮಧ್ಯಾಹ್ನ ಮೂರ್ಹೊತ್ತು | ಆಮೇಲೆ ಗುರುವಿನ ಎಡೆಗೆ         || ೧೧೪ ||

ಹರಿದಾರಿ ಹೋಗಿನ್ನು ಗುರುವಿನ ಉಪದೇಶ | ಕೈಕೊಂಡು ಬರಲು ದಿನಕರನು |
ಕಡಲಸ್ಥಾನಕ್ಕೆ ನಡೆವ ಕಾಯ್ದು ಡೊಂಬರ ಚೆನ್ನಿ | ಇದಕೇನು ಗತಿಯೆಂದು ಚಿಂತಿಪಳು         || ೧೧೫ ||

ಇಷ್ಟೆಲ್ಲವು ಕಾಯೆ ವ್ಯರ್ಥವಲ್ಲದೆ ನಮಗೆ | ಪೃಥ್ವಿದೊರೆಯನು ಕಾಣಲರಿದು |
ಇಂಥವನ ಗುರುವನು ಕತ್ತೆ ಕಾಯ್ಸಿದ ಮೇಲೆ | ಇತ್ತ ಡೊಂಬರ ಚೆನ್ನಿ ಅಲ್ಲ            || ೧೧೬ ||

ಇಟ್ಟಳಾಭರಣವನು ಉಂಗುಷ್ಠದಿ ನಡು ನೆತ್ತಿ | ಮುತ್ತು ಮಾಣಿಕ ರತ್ನಗಳ |
ಹೊತ್ತು ರಾತ್ರಿ ನಡೆದಳು ಬಿದ್ದು ಸಾವುತಲಿವಳು | ಬೆಟ್ಟದೊಳಿರುವ ಗವಿಗಾಗಿ         || ೧೧೭ ||

ಮಾಡುವ ಜಾತೊಡೆಯ ಉಗ್ರ ತಪಸನು ನೋಡಿ | ಹೂಡಿದೊ ತನ್ನ ವಿದ್ಯೆಗಳ |
ಆಡುವ ರಚನೆಯೂ ಮೋಡಿಯಿಂದಲಿಯೆ ನವ | ನಾರಿಯ ನೋಡೆ ಮುನಿನರನ     || ೧೧೮ ||

ಯೋಗದ ಜಪತಪ ಹಾರಿಹೋದವೆ ಅಕ್ಕ | ರಾಮನ ಘನವೇನು ಬಿಡು ಎನಲು |
ಬ್ಯಾಡೆನಗೆ ಜಪತಪವು ಕೇಳಿರೆ ಬಿಟ್ಟಿದನು | ಜಾತೊಡೆಯ ಹೋಗನೆ ಚೆನ್ನಿಯೊಡನೆ  || ೧೧೯ ||

ಭೂಮಿ ಸಾಹಸವಿರಲು ಬಾಲೆಯರಗಲುವುದು | ಯೋಗೀಂದ್ರನಾಗೆ ಮುನಿವರನು |
ಕೇಳಿರೈ ಖಾನರು ರಾಮನಿರಲು ನಿಮಗೆ | ಮಣಿಯದಿರಲು ಎಮಗಿರಲಿ               || ೧೨೦ ||

ಸೂಳೆರಾಡುವ ಮಾತು ಕೇಳಿ ಖಾನರು ನೇಮಿ | ಛೇ! ನಮ್ಮ ಬಾಳುಗಳು ಸುಡಲಿ |
ಬಾಳು ರಂಡೆರಿಗಿನ್ನು ಕಡೆಯಾಗಿ ಹೋದೆವು ಎಂದು | ತೋರಲು ಎಲ್ಲರಿಗೆ ಛಲವು   || ೧೨೧ ||

ಈಗ ಆಡಿದ ಮಾತ ಇನ್ನಾಡಬೇಡೆಲೆ ಲೌಡಿ | ಹೋಗಿ ಮುಟ್ಟಲು ಪಾಶ್ಚಯಗೆ |
ಛೇ! ಎಂದು ಏರಲು ದಕ್ಷಿಣದ ಮೂಲೆಗೆ | ಭೂಮಿ ದೊರೆಗಳು ಎದುರು ಬರಲು       || ೧೨೨ ||

ರಾಯ ರಾಮನ ಕಾಯ್ದು ವಾಲೈಸುವ ದೊರೆಗಳ | ನೇಮಿ ಕಂಡು ಕರ ಮುಗಿದು |
ಏನಿರೈ ದೊರೆಗಳು ರಾಮನಳಿದುದು ನಿಜವೆ | ತೋರುತಿಹುದು ನಿಜಕರವು          || ೧೨೩ ||

ಛಂದವಾದುದು ಕೇಳು ಮಂದಿ ಪಾಶ್ಚಯ ನಿಮ್ಮ | ಕುಂದಿ ಬಿಡುವುದು ತಲ್ಲಣಿಸಿ |
ಇಂದಿಗೆ ತಿಂಗಳು ಕಂಡನು ಯಮನೂರು | ಹೊಂದಿದ ಮುದಿಮೂಳ ಮನೆಯ       || ೧೨೪ ||

ದಂಡ್ಯಾಕೆ ಈ ಬಗೆಯ ರಂಡೆ ಕಂಪಿಲನಿಗೆ | ಒಂದು ದಿನ ಬ್ಯಾಡ ತುಂಬೆನಗೆ |
ನಿಂದು ನೋಡೈ ನೀನು ನಿಮಿಷ ಮಾತ್ರಕೆ ಪುರವ | ತಂದು ಇಡುವೆ ನಿಮ್ಮ ಬಳಿಗೆ    || ೧೨೫ ||

ದಾರಿ ಕಾವೆವೆ ನಿಮ್ಮ ಬೇರ ಕೀಳ್ವೆವು ಅವನ | ಪಾಶ್ಚಗೆ ಹೆದರಿ ತಡದೇವು |
ರೂಢಿಯ ನೃಪರಾಡೊ ಬೀರ ಬಿಂಕವ ಕಂಡು | ಖಾನರು ಎದ್ದು ಕಲಿಯಾಗಿ           || ೧೨೬ ||

ಮುನ್ನೂರು ಗಾವುದವ ಮೂರು ತಿಂಗಳೊಳಗೆ | ವಾರುಧಿ ಭೀಮರತಿಗಿಳಿಯೆ |
ಯಾವಲ್ಲಿ ರಾಮನ ಸೀಮೆ ಹೊಲಬನೆ ಕಂಡು | ಹೊಕ್ಕು ಹಿಡಿಯಲು ದನ ಕುರಿಯ    || ೧೨೭ ||

ಭೀಮ ರಾಮನು ಅಳಿಯೆ ನೇಮಿ ಮೂಳನು ಬಂದ | ಓಡುವ ಫಲಬಂತೆ ತಮಗೆ |
ಸಾಯಬಹುದೆ ಮುನ್ನ ಧರಣಿಪಾಲರ ಮಿಂಡ | ನಮ ಗೋಳು ತಟ್ಟಲು ಕಂಪಿಲಗೆ    || ೧೨೮ ||

ಏಳು ಗೂಳ್ಯವು ಭೂಮಿ ಭೂಮಿಗಳು ತಲ್ಲಣಿಸೆ | ಇವರಿಪ್ಪ ಪುರವನು ಬಿಡುವ |
ಜೀವೊಂದು ಉಳಿದರೆ ಸಂಪಾದಿಸಬಹುದೆಂದು | ನಾಡ ರಾಜ್ಯಗಳೆಲ್ಲ ನಡೆಯೆ       || ೧೨೯ ||

ವಾಣಿಜರು ವೈಶ್ಯರು ಜೋಗಿಗಳು ಕೊಂಕಣರು | ನಾನಾವರ್ಣದ ಜಾತಿಗಳು |
ಏನು ಬಂದುದೆ ನಮಗೆ ಕಾಲನ ಸುತನನುಜ | ಭೀಮ ರಾಮಳಿಯಲು ಗೂಳ್ಯ        || ೧೩೦ ||

ಕಾಡ ಹಾಳೆಯ ಸೊಪ್ಪ [ಓ] ಡಿಲಿ ಹುರಿತಿಂಬ | ಬ್ಯಾಡ ನಾಯ್ಕರ ಗೂಳ್ಯೆ ನಡೆಯೆ |
ನಾಯಿ ಹಕ್ಕಿಯ ಗೂಡ ಕೋವಿ ಈಟಿಯ ಹೊತ್ತು | ಭಯ ಬಿದ್ದು ಕೆಡೆದು ಓಡುವರು   || ೧೩೧ ||

ನೇಮಿಖಾನನ ದಂಡು ಬರುವಂಥ ರಭಸಕ್ಕೆ | ರಾಮನ ಸೀಮೆಯ ಒಳಗೆ |
ಹೆಬ್ಬಲೆ ಕಾವಲೆ ಮರವಲೆ ಕೈಯ್ಯಲ್ಲಿ | ಗುಬ್ಬಿಯ ಹಕ್ಕಿಯ ಬಲೆಯ                    || ೧೩೨ ||

ಅಡಿಗಲ್ಲು ತಿದಿಮುಟ್ಟ ಹಿಡಿವಾಯಿ ಕುಳಚಾನ | ಹೊಡೆವ ಚಮ್ಮಟಿಗೆ ಸುತ್ತಿಗೆಯ |
ಜಡಿವ ಮೊಳೆಗಳು ಗುಜ್ಜ ಕಡೆವ ಬೈರಿಗೆ ಹೊತ್ತು | ನಡೆಯಲು ಕಮ್ಮಾರ ಗೂಳ್ಯೆ     || ೧೩೩ ||

ಕೊಡತಿಗಳು ಕೈಬಾಚಿ ತೆಳುವಾಯಿ ಚೀರ್ನದ | ನಯನಾರ ಮಾಡಿ ಕೈಬಾಚಿ |
ಕಡಿವ ಕೆಲಸದ ಮಟ್ಟು ಹರಿವ ಗರಗಸ ಹೊತ್ತು | ಕಡೆಗೆ ಪಂಚಾಳರು ನಡೆಯೆ        || ೧೩೪ ||

ನಾಲ್ಕು ದೇಶವ ಹೊಕ್ಕು ವ್ಯಾಪಾರ ಮಾಡುವ | ಬೇಕಾದ ದಿನಿಸ ತರುವರಿಗೆ |
ಹಾಕಿದ ಕನ್ನಡಿ ಹಸುಬೆ ಚೀಲವ ಹೊತ್ತು | ದೇಶದವರ ಗೂಳ್ಯೆ ನಡೆಯೆ               || ೧೩೫ ||

ಹಲಗೆ ಹಲವು ಕುಂಟೆ ಎಳೆವ ಕುಂಚಿಗೆ ಉಳಿ | ಮಗ್ಗದ ಅಚ್ಚು ಬಡಿಗೋಲು |
ಎದ್ದರು ಮೊದಲಾಗಿ ಬುದ್ಧಿಯೆಂಬುದ ಕೇಳಿ | ಮಗ್ಗದವರು ಗೂಳ್ಯೆ ನಡೆಯೆ           || ೧೩೬ ||

ಕುರಿಯ ಹಿಂಡನು ಮುಂದೆ ಕರೆವುತ ಗೊಲ್ಲರು | ಮರಿಗಳ ಹೊತ್ತು ತಲೆ ತುಂಬಿ |
ಮರಿಕಾಷ್ಠ ನಡೆಮುಂದೆ ಹೆದಕಲ್ಲ ಹಳೆಗೆರವು | ಬರುತಿದೆಂಬರು ನೇಮಿಯ           || ೧೩೭ ||

ಅಚ್ಚೇರು ಅರೆಪಾವು ಒಚ್ಚೆ ಸೇರಿಕೆ ಚಿಟ್ಟೆ | ಪೂರ್ವವು ದುಡ್ಡಿನ ಸೊಲಿಗೆ |
ಹೊತ್ತು ಎಣ್ಣೆಯ ಬುರುಡೆ ದಿಕ್ಕುದೇಶವ ಬಿಟ್ಟು | ಮತ್ತೆ ಗಾಣಿಗರು ಓಡುವರು         || ೧೩೮ ||

ರಾಟಿ ಕದರನು ಹಂಜಿ ಊಟದ ಹರಿವಾಣ | ಸಕಲಾಪುಗೂಡೆ ಬತ್ತಿಗಳು |
ಕೋಟಲೆಯ ಕಾಣದ ಕುಡಿಕೆ ರೊಕ್ಕವ ಹೊತ್ತು | ರಾಟಿ ಮಂಡೆರ ಗೂಳ್ಯೆ ನಡೆಯೆ     || ೧೩೯ ||

ಲಕ್ಷದಾಜವನೆಲ್ಲ ಇಟ್ಟು ಒಡಲೊಳು ತಮ್ಮ | ಉಟಿಗೆ ಕೊಡಮ್ಮ ಬಳವು |
ಕೋಟಲೆಯ ಕಾಣದೆ ಸುಖದ ಭೋಜನವುಂಡು | ಜಾತಿ ಬ್ರಹ್ಮರು ಗೂಳ್ಯೆ ನಡೆಯೆ   || ೧೪೦ ||

ಕಾನಮ್ಮ ಕೂನಮ್ಮ ತಾವರೆ ಲಿಂಗಮ್ಮ | ನೇಮಿ ದಂಡಿದು ಬಹುದಂತೆ |
ದಾರು ಮುಟ್ಟಿರೆ ಕಾಣೆ ಶ್ಯಾನುಭಾಗರ ಸತಿಯು | ವಾರ್ಯಾಗಿ ಎಂದು ಓಡುವರು    || ೧೪೧ ||

ಶಂಖು ಜಾಗಟೆ ಝಲ್ಲಿ ಕಂಕುಲೊಳು ಭವನಾಶಿ | ಲೆಂಕ ಹನುಮನ ತಾಳಿ ಶಿರದಿ |
ವೆಂಕಟೇಶ್ವರ ಬಲ್ಲ ಯಮನ ಕಾಟಗಳನು | ರಾಂಗ ಕಾಯೆನುತ ಓಡುವರು          || ೧೪೨ ||

ಮನೆಯ ಬದುಕನು ಎಲ್ಲ ಮೂಳ ಕತ್ತೆಗೆ ತುಂಬಿ | ಚವುಳು ಬಾನಿಯನು ತಾ ಹೊತ್ತು |
ಒಡಿಯವನು ಮಡಿ ಮನೆಗೆ ಗುರುತ ತಾ ತೆಗೆದಿಡುವಂಥ | ಅಗಸರ ಗೂಳ್ಯೆವು ನಡೆಯೆ       || ೧೪೩ ||

ಜಂಗು ಜೋಳಿಗೆ ಬಿಟ್ಟು ಉಲಿರಿಗೆ ಮಾಲಿಕೆ ಜಪದ | ದಂಡದ ಕೋಲು ಬಲಗೈಯ್ಯ |
ಸಂಗಮೇಶ್ವರ ಬಲ್ಲ ಸಾವುದೆ ಸುಖವೆಂದು ಜಂಗಮದ ಗೂಳ್ಯೆವು ನಡೆಯೆ           || ೧೪೪ ||

ಕುರುಬರ ವಿಪರೀತ ಬೀರಯ್ಯ ತಾ ಬಲ್ಲ | ಹರನೆಯಿದ ಕಂಬಳಿ ತುಬುಟಿ |
ಸುಡು ನಮ್ಮ ಬಾಳನು ಹೊಡ ಕುರಿಯ ಕೋಳಿಯ ಇಂಥ | ಪಡಿಪಾಠ ಕಂಡವರಿಲ್ಲ   || ೧೪೫ ||

ನಾಡ ಸೂಳೆಯರೆಲ್ಲ ನೋಡಾ ತಾ ಒಬ್ಬನ | ಕೂಡದೆ ಕೆಟ್ಟೆವೆಂದೆನುತ |
[ಮಿಂ]ಚಾಗಿ ಇರುವಾಗ ಊರೆಲ್ಲ ನಂಟರು | ಆಗ ಮಾತಾಡುವರೆಲ್ಲ                  || ೧೪೬ ||

ಪೋದೇಮಿ ಲೇದಯ್ಯ ಪಡಾಯ ಭೂಮಂತಾ | ನೇಮಿ ವಂಚಮಿಂದ ಕೊಡಕೂ |
ನಾಡೆಲ್ಲ ಬಂಡಾಗಿ ಅಭಿಮಾನ ಉಳಿಬೇಕೆನುತವು | ಪಡಾಯ ಬಡುಕಂತ ಪೋಗಿ    || ೧೪೭ ||

ವೇದದ ಪೆಟ್ಟಿಗೆ ಓದುವ ಪುರಾಣ | [ನೋಡು]ವ ಪಂಚಾಂಗ ಸುಡಲಿ |
ಜೋಡಿಸಿಕೊಂಬೋಣ ಜೀವ ಉಳಿದರೆ ನಮ್ಮಯ | ಗ್ರಾಮ ಮನೆಗಳ ಸೇರಿದಲ್ಲಿ     || ೧೪೮ ||

ಬಂಡಿ ಬಲಗೋಲನ್ನು ತುಂಬಿನ್ನು ಮನೆ ಬದುಕ | ಹಿಂಡು ಎಮ್ಮೆಗಳನು ಹೊಡೆದು |
ಹೆಂಡರು ತಲೆ ತುಂಬ ಹಂಡಿಗೂಡೆಯ ಹೊತ್ತು | ಹಿಂದೆ ಸಾಗಲು ಗೌಡ ಪ್ರಜೆಯು   || ೧೪೯ ||

ಮಾಡದ ಮನೆ ಬದುಕು ಕೋಣ ಕೊಂಕಿಗೆ ತುಂಬಿ | ಸಾಗಲು ಅನ್ನ ಚೊಕ್ಕಡಿಗೆ |
ಬೀರು ಹಲ್ಲಿನ ಮಲೆಯೋಳೆ ಬಂದನು ನೇಮಿ | ಮೇಲು ಸಕ್ಕರೆ ಗೂಳ್ಯೆ ನಡೆಯೆ      || ೧೫೦ ||

ತೆಲುಗರು ತಿಗುಳರು ಎಡಗಯ್ಯ ಹರಳರು | ಬಡವರು ಭಾಗ್ಯ ಕೊಂಕಣರು |
ಗಿಡ ಮೆಳೆಯನು ಬಿದ್ದು ಅಡವಿಗೊಬ್ಬರು ಆಗಿ | ಕೆಡೆದೋಡಿ ಮಲೆದೇಶ ಬಿದ್ದು         || ೧೫೧ ||

ಓಡಲು ಗೂಳೆವು ಕಾಡು ಕಮ್ಮರಿ ಬಿದ್ದು | ಜೀವೆಲ್ಲಿ ಉಳಿವುದೆ ತಮಗೆ |
ತೀರಿತೆ ಗಳಿಸಿದ ದನ ಕೂಡೆ ಆನೆ | ಸೇರಿತೆ ಖಾನರ ಕೈಯ್ಯ                         || ೧೫೨ ||

ಹಟ್ಟಿ ಕಣಜ ಹಗೆಯಾದ ರಸವ ಬಿಟ್ಟು | ಹೊತ್ತೇವೊ ಗೂಡೆ ತಲೆ ತುಂಬ |
ನಿತ್ಯವು ತಮಗೆಂದು ಭಿಕ್ಷ ನೀಡದೆ ಗಳಿಸಿ | ಕೊಟ್ಟರು ಬರುವಾ ಭಾವನಿಗೆ            || ೧೫೩ ||

ಭೂಮಿ ಚಂದ್ರುಳ್ಳನಕ ಕಾಯಗಳು ಸ್ಥಿರವೆಂದು | ನಾವು ಉಣ್ಣದೆ ಗಳಿಸಿದೆವು |
ಹಾಲು ಬೆಣ್ಣೆಯ ಮಾರಿ ಹಳೆಯ ನಾಣ್ಯವನಕ್ಕ | ಮೂರು ಪಡಿ ಆಗೋವು ಅಳದಾರೆ  || ೧೫೪ ||

ನಿತ್ಯವೆಂಬುತ ನಾವು ಉಪ್ಪು [ಸ] ದಪ್ಪೆಯನುಂಡು | ತುತ್ತಿಗೆ ತುತ್ತು ಅರೆಮಾಡಿ |
ಬೆಟ್ಟಕ್ಕೆ ಜೇನಿಟ್ಟು ವ್ಯಾಧನು ತಿಂದಂತೆ | ಅರ್ಥವ ಗಳಿಸಿನ್ನು ಹಾಳು                  || ೧೫೫ || ಕೊಟ್ಟೇವೆ ಮನ [ವಾರೆ] ಮನಮುಟ್ಟಿದ ಧರ್ಮಕೆ ನಾವು | ಇಕ್ಕಿ ಎರೆದೇವೆ ಪರಹಿತಕೆ |
ಸತ್ತರೆ ಸ್ವರ್ಗದ ಫಲಪ್ರಾಪ್ತಿ ದೊರೆವುದ ಕಾಣೆ | ಕುಟ್ಟಿಕೊಂಬರು ಬರಿ ಬಾಯ         || ೧೫೬ ||

ಕಡಲುಕ್ಕಿ ಬರುವಂತೆ ನಡೆಯಲು ರಾಮನ ಪಡೆ | ರಾಜ್ಯವೆಲ್ಲ ಭೋರೆನುತ |
ತುರಕರ ದಂಡೆಲ್ಲ ಹಿರಿಯ ಶರಧಿಯ ದಾಂಟಿ | ಕಪ್ಪತರ[ಳ್ಳಿ]ಗೆ ಬಂದು ಇಳಿಯೆ      || ೧೫೭ ||

ಬಂದೆವು ರಾಮನ ಹೊಂದಿ ರಾಜ್ಯ[ದ] ಬುಡಕೆ | ಕಂಡ ಬಟ್ಟೆಯಲಿ ಹೋಗಬೇಡಿ |
ಕಂಡಿಲ್ಲ ನೆಲೆಯಾಗಿ ಸಂದ ಮಾತಿನ ನಿಜವ ಹೀ | ಗೆಂದು ಹೇಳಿಸಿದ ಎಲ್ಲರಿಗೆ        || ೧೫೮ ||

ಖಾನರ ಗಡಣೆಯನು ಪೇಳುವರೆ ಅಳವಲ್ಲ | ತೂಗುತ ಮದದ ಜಯದೊಳಗೆ |
ಅಚ್ಛಾರೇ ಮರಗಯಾ ರಾಮ ಲವಡವ ತಿಂದ | ಏರಲು ದೌಡಿನ ತುರಗ              || ೧೫೯ ||

ಏರಲು ಎಂಬತ್ತು ಸಾವಿರ ತುರಗವು | ರಾಮನ ರಾಜ್ಯಕ್ಕೆ ದಾಳಿ |
ಯಾವಲ್ಲಿ ಗೂಳ್ಯವು ತಾವು ಹೆಚ್ಚಲು ಹೋಗಿ | ಕೊಳ್ಳೆ ಹೊಡೆಯಲು ಒಂದು ಕೋಟೆ  || ೧೬೦ ||

ಗಡಿಯ ಕಾವಲು ಮಂದಿ ಕಣಿವೆ ಕಂಡಿಯ ಹಿಡಿದು | ತಡೆಯಲು ಬರುವಂಥ ಕೇಳಿ |
ಕಡಿ ಕಡಿಯೆನುತಲಿ ಇತ್ತ ರಾಜ್ಯ………..ಕಟ್ಟಿ | ಹೊಡೆಯಲು ನೂರಾರು ಕುದುರೆ     || ೧೬೧ ||

ರಾಮ ಅಳಿದನು ಎಂಬ ಪ್ರೇಮದಿಂ ಬಂದರೆ | ಆ[ತು]ಕೊಂಬೆವು ಇಕ್ಕಿ ಹೆಜ್ಜೆ |
ಲಾಯದ ಮಲ್ಲಣ್ಣ ಲಡಗನಂದದಿ ಹೊಕ್ಕ | ಸಾವಿರ ಕುದುರೆಯ ಹಿಡಿದ               || ೧೬೨ ||

ಕಾಣದೆ ತುರುಕರು ಹಾದಿಯ ಹೊಲಬನು | ಕಾ [ನನಕ್ಕೆ] ಬಿದ್ದು ಕಣ್ಗೆಟ್ಟು |
ಯಾವಲ್ಲಿ ತಲೆದೋರೆ ಎಸೆವ ಪೆಟಲು ಅಂಬು | ಕೋಳಬಟ್ಟರು ಹೋಗಗೊಡದು     || ೧೬೩ ||

ನೇಮಿ ಹೇಳಿದ ಮಾತ ಕೇಳದೆ ಬರಲೆಮಗೆ | ಗೋರಿಯಾದೆವು ಗಿಡಕೊಬ್ಬ |
ಏರಿದ ತುರಗವ ಬಿಟ್ಟು ಕಾಲೆಡೆಯೊಳು | ಕಾನನವ ಬಿದ್ದು ಕೆಲವೋಡಿ                || ೧೬೪ ||

ಸತ್ತ ರಾಮನು ಎಂದು ಕೊಟ್ಟು ರವುಡೆರ ಸುದ್ದಿ | ಎತ್ಹ್ಯಾಕಿ ಮೂಗ ಕೊಯ್ಬೇಕು |
ಹತ್ತು ಸಾವಿರ ಕುದುರೆ ಹಿಡಿದರು ಕೊನೆಗಡಿಯ | ನುಚ್ಚು ಮಾಡರು ಅವನಿಲದೆ       || ೧೬೫ ||

ತಂದ ಕೋಳನು ಎಲ್ಲ ಕೊಂಬು ಜವಗಳ ಬಿಡದೆ ಹ | ನ್ನೊಂದು ಸಾವಿರ ಕುದುರೆ ಹಿಡಿದು |
ಇಂದಿಗೆ ಮೋಸ ಉಳಿದುದು ಇಷ್ಟೆ ಸಾಕೆನುತಲಿ | ತಂದು ಒಪ್ಪಿಸಲು ಕುಮ್ಮಟಕೆ     || ೧೬೬ ||

ಗೋಡೆಯ ಕಳಕೊಂಡು ಗಾಯೊಡೆದು ಹತವಾಗಿ | ಹೋದರೆ ಭಾಗ್ಯ ಉಳಿಯುವುದು |
ನೇಮಿ ಖಾನರೆಲ್ಲ ಹೇಳಿ ಸುದ್ಧಿಯನವರು | ಬೇಟಚೋದಲ್ಲಿ ತೋರೆನಲು             || ೧೬೭ ||

ಸತ್ತವರ ಮನೆಯಲ್ಲಿ ಕೆಟ್ಟವರು ಯಾರೆನಲು | ಹೊಕ್ಕವನೆ ಕೆಟ್ಟ ಯಮನೂರ |
ಹತ್ತೋ ತುರಗವು ಹೋಗಿ ಹಲ್ಲಗಿರಿವ ಬಟೆ | ತಪ್ಪೋದೆ ಮುಂದೆ ಎಲ್ಲರಿಗೆ            || ೧೬೮ ||

ಕಂಡಿಲ್ಲ ಕುಮ್ಮಟವ ಹನ್ನೊಂದು ಸಾವಿರ ಲಯವು | ಹೊಂದಿ ಸೇರುವರೊಳಗಾಗಿ
ತಿಂಬರು ಅರ್ಧಾಯ ಗಡಿಯ ಬ್ಯಾಡರುಯೆಂದು | ನೊಂದವರು ಮೊರೆಯಿಡಲು ನೇಮಿ       || ೧೬೯ ||

ಹೀಗಲ್ಲ ಹೋಗುವುದು ರಾಜಸ್ಥಾನದ ಬಗೆಯು | ಆತುಕೊಂಬರು ಬಕನಂತೆ |
ಮೂರಾರು ಲಕ್ಷದ ಪೌಜು ಒಡೆಯದೆ ಪೋಗಿ | ಕಾಣಬೇಕಿನ್ನು ಕುಮ್ಮಟವ            || ೧೭೦ ||

ವಾರುಧಿ ಕಡಲುಕ್ಕಿ ಮೇರೆದಪ್ಪಿನ ತೆರದಿ | ಏರಲು ದಂಡು ಕುಮ್ಮಟಕೆ |
ಚೋರಗಂಡಿಯ ಕಾದಿರ್ದ ಬ್ಯಾಡರು | ಊರ ಹೊಕ್ಕರು ಕುಮ್ಮಟವ                  || ೧೭೧ ||

ಹಿಂದು ಮುಂದುಳಿಯದೆ ದಂಡೊಂದು ಫೌಜಾಗಿ | ಬಂದು ಇಳಿಯಲು ಎದುರಿಗೆ |
ಕೆಂಧೂಳಿ ಮುಸುಕಲು ಮಂಡಲವು ಚೆದರಿ | ಕಂಡನು ರವಿಯು ಪಶ್ಚಿಮವ            || ೧೭೨ ||

ದಿವರಾತ್ರಿ ಬೆಳತನಕ ಹುಬುಗಣ್ಣ ಹಾಕುತ್ತ | ಭಯ ಬಹಳ ಬಡುತಲಿ ದಂಡು |
ಕೋಳಾಹಳ ಮಾಡುತ್ತ……..ಕಾವಲ ತುರಗ | ದನಿದೋರೆ ಚರಣಾಯುಧನು        || ೧೭೩ ||

ದಿನಕರನು ಪೂರ್ವಾದ್ರಿ ತಲೆದೋರೆ ಖಾನರು | ಕಳೆದೆವು ಇರುಳೊಂದೆ ಯುಗವ |
ಇಳಿವನು ಈ ದಿನ ಒಳಗಾಗಿ ಕುಮ್ಮಟದ | ಬಳಿಗೊಂದು ಯೋಜನ ಸುತ್ತ            || ೧೭೪ ||

ರಾಜೇಂದ್ರ ಕುಮ್ಮಟದ ಹೊರ ಸಾರಿ ಉಕ್ಕಡದವರು | ಪೇಳುವರು ರಾಯ ಕಂಪಿಲಗೆ |
ಮೂದೇವಿ ಹಿಡಿದಂತೆ ನೀನ್ಯಾಕೆ ಕುಂತಿರುವೆ | ಭೂಮಿ ಹಿಡಿಯದ ದಂಡು ಬಂತು    || ೧೭೫ ||

ರಾಯ ಕಂಪಿಲ ಕೇಳೊ ಆರು ಲಕ್ಷವು ದಂಡು | ಭೂಮಿಯು ಎಂತು ತಡೆದಿಹುದೊ |
ನೋಡುವರಳವಲ್ಲ ಗಾವುದ ದಾರಿ | ಹಾರಲಾರವು ಹದ್ದು ಕಾಗೆ                       || ೧೭೬ ||

ಜಾಂಡೆವು ಎಪ್ಪತ್ತು ನೇಮಿದು ಹೊರತಾಗಿ | ಶೌರ್ಯವ ಹೇಳುವರಳವಲ್ಲ |
ದೇವೇಂದ್ರ ಕಡೆಯೆನಿಸಿ ನೇಮಿಯ ಸದರಿನ ವಾಲಗವನಾರು ಬಣ್ಣಿಪರೊ            || ೧೭೭ ||

ನೇಮಿಯ ಡೇರ್ಯವ ಭಾವವ ವರ್ಣಿಪಡೆ | ಸೋಮಶೇಖರಗೆ ಅಗಮ್ಯ |
ಮಾರಸುತನ ಪೆತ್ತ ತಾಯೆಲ್ಲಿ ಇರುತಿಹಳು | ಸಾವಿರದ ಮೇಲೆ ಹೊನ್ನ ಕಳಸ        || ೧೭೮ ||

ಹಸಿರು ಕೆಂಪು ಹಳದಿ ಎಸೆವ ಬಿಳಿದಿನ ಹಲವು | ಮಿಸುನಿ ಅಲತೆಯ ಹೂವಿನಲಿ |
ಎಸೆಯಲು ಎಪ್ಪತ್ತು……………………. | ಬಿಸಗಣ್ಣು ಫಲವಾಗಿಹುದು                 || ೧೭೯ ||

ಕಡಿವರು ಮೊದಲಿಲ್ಲ ಎಡೆ ಎಡೆಗೆ ನಿಂದಿಲ್ಲ | ನಯನದಿ ನೋಡುವರುಂಟೆ |
ಮಡದಿ ರತ್ನಮ್ಮನು ಹೊಡೆದರೆ ನಾ ಕಾಣೆ | ಹರಿಹರನೊಳು ತೀರದೆಂದ             || ೧೮೦ ||

ದಂಡೆಲ್ಲ ಕೇಳರಸೆ ಗಂಡಾಂತ್ರ ಬಂದುದು ಈಗ ಭೂ | ಮಂಡಲ ಇದ್ದಂತೆ ತಮಗೆ |
ಡೊಂಬ ಮೂಳಿಯ ಸೇರಿ ಪ್ರಚಂಡ ರಾಮನ ಕೊಂದೊ | ಮುಂ[ಡೆ] ಮಾಡರೆ ನಮ್ಮ ಸತಿಯ || ೧೮೧ ||

ಪೌಲಸ್ತ್ಯ ಬ್ರಹ್ಮನ ತಲೆಯ ವೈರಿಯ ಬಂಟ | ಹನುಮನ ಹೋಲ್ವ ರಾಮಿರಲು |
ಸುಳಿಯಬಲ್ಲನೆ ನೇಮಿ ಸೂಳೆ ಮಾತಿಗೆ ಕೊಂದು | ನಗರಕ್ಕೆ ಬಡಿಗಲ್ಲ ತಂದಿ         || ೧೮೨ ||

ಚಕ್ರಧರನ ಸುತನ ಸುಟ್ಟುರುಹಿ ಬೂದಿಯ | ನಿಟ್ಟವನ ಬೆವರಿಂದಲಾದ |
ಹುಟ್ಟಿದ ಶರಭನ ಶಕ್ತಿ ಪೋಲುವನಿರಲು ತಲೆ | ಇಕ್ಕುವನೆ ಈ ಕಡೆಗೆ ನೇಮಿ          || ೧೮೩ ||

ಬ್ಯಾಡರಾಡುವ ಮಾತ ಕೇಳಿ ಕಂಪಿಲರಾಯ | ಭೂಮಿಪಾತಾಳಕ್ಕೆ ಇಳಿದು |
ಶ್ವಾನಬುದ್ಧಿಗೆ ಕಡೆಯಾಗಿ ಮಗನ ಕೊಂದೆ | ಪ್ರವೀಣ ಮಂತ್ರಿಯ ಕರೆಯೆನಲು        || ೧೮೪ ||

ಚರರಾಗ ಪೋಗಲು ಪ್ರಧಾನಿ ಭೋರನೆ ಬಂದು | ಕರ ಮುಗಿದು ಭೂಪಾಲ ಪೇಳೆನಲು |
ಕಿರಿಮುಖದೊಳು ಲಯ ಹದನಿದು ತಾ | ಮರಣದ ತೆರ ಬಂತು ನನಗೆ               || ೧೮೫ ||

ಬಾರದೆ ರೋಗವು ಹೋಗುವುದೆ ಈ ಕಾಯ | ಜಾಲಿಯ ಕೊರಡಾಗಿ ಇದ್ದ |
ರಾಮಗೆ ಬಂದಂಥ ಮಾಯದ ಮರಣಗಳ | ಮಾಡುವರ್ಯಾರೊ ಮುಪ್ಪಿನಲಿ        || ೧೮೬ ||

ಭೇರಿಯ ನಾದಕ್ಕೆ ಕಾಲುಗೆಡುವರೆ ಭೂಪ | ನೋಡಿಲ್ಲ ದಂಡಿನ ಮೋರೆ |
ಹೇಳುವ ಅನುತನುವ ಕೇಳದಿದ್ದರೆ ಕತ್ತಿ | ಮಾಡುವಾ ಇದಕ್ಯಾಕೆ ಭಯವು            || ೧೮೭ ||

ಯಾರಯ್ಯ ಕಡಿವವರು ಕುಮಾರನ ನಾ ತಿಂದು | ಕೋಡಗ ಕಪಿಯಾಗಿ ಕುಂತೆ |
ಮಾರಿಯೆಂದರಿಯದೆ ಮಗನ ಕೊಲ್ವರೆ ಬಂದು | ಸೇರಿದೊ ತಲೆ ಹಿಡುಕಿ ರತ್ನಿ        || ೧೮೮ ||

ಮಾರೆಮ್ಮ ಇರಲೆಮಗೆ ಏನು ಭಯಗಳು ಉಂಟೆ | ಹಾಳು ಮಾಡಲು ಅರುಹಿಸಿ |
ಹೇಳಿ ಕಳುಹುವನ ನೆರೆಯ ನೇಮಿಯ ಬಳಿಗೆ | ಹೋಗಿ ಹೆಮ್ಮಾರಿ ಬಿಡಲೆನುತ       || ೧೮೯ ||

ಮಾರ್ಜಾಲಗೆ ಸರಸಗಳು ಮೂಷಕಕೆ ಪರಮಾತ್ಮ | ಹೋಗದೆಂಬುವ ಗಾದೆ ಬಂತು |
ನಗೆ ನುಡಿಯ ಮಾತಿಲಿ ಮೂಗರಿಯ ಬೇಡವೊ ಮಂತ್ರಿ | ಕೊಡಬೇಡ ಅವರಿಗೆ ಎನ್ನ || ೧೯೦ ||

ಬರುವ ದಂಡಿಗೆ ರಾಯ ಎದೆಯೊಡೆದು ತಲ್ಲಣಿಸಲು | ಈ ದಂಡಿಗೆ ಇನ್ನು ಬಲವಿಲ್ಲ |
ಹೆದರಬೇಡೆನುತಲಿ ಕಡಿ ಬಡಿ ಹೊಡಿಯೆಂಬ ಚಿಲ್ಲಾ | ಮಾಡುವರಸೆ ನೋಡುವನು   || ೧೯೧ ||

ಎತ್ತು ಹರಿದ ಮೇಲೆ ಗೋಣಿ ಹರಿದ ಗಾದೆ | ರತ್ನಾಜಿ ನಗಳೆ ಕೇಳಿದರೆ |
ಪುತ್ರನ ಕೊಲುವಾಗ ಹುಟ್ಟದೆ ಈ ಬುದ್ಧಿ | ಎದೆಗೆಟ್ಟರೆ ನಾ ಮಾಡುವದೇನು           || ೧೯೨ ||

ವೈರಿ ಬಂದೆಡೆಯೊಳು ಧೈರ್ಯ ಮಾಡಲು ರಾಯ | ಸೇವಕರು ಹೆದರಬೇಡೆನುತ |
ಮಗನಳಿದ ಬೆಳದಾಗಿ ಪವುದಿ ಕೊ[ಳ್ಳ]ನು ಎಂದು | ನಗರೇನು ರಾಯ ಸರಿಯವರು || ೧೯೩ ||

ಹುಚ್ಚೇನೊ ಎಲೆ ಮಂತ್ರಿ ಹುಲಿಯ ಬಣ್ಣಕೆ ನರಿಯು | ಸುಟ್ಟುಕೊಂಡರೆ ಬರುವುದೇ |
ಪುತ್ರನ ಸಹ ಶಕ್ತಿ ಪಾಂಡುರಾಯಗೆ ಇತ್ತೆ | ಎತ್ತಣ ಮಾತೆಂದು ನುಡಿವೆ               || ೧೯೪ ||

ಎನ್ನ ತ್ರಾಣವ ನೀನು ಬಲ್ಲೆಯಲ್ಲದೆ ಮಂತ್ರಿ | ನಿನ್ನ ಧೈರ್ಯದಲಿ ನಾನಿರುವೆ |
ಎನ್ನ….ಪ್ರಾಣ ಬಿಡುವಂತೆ ನೀ ಮಾಡೆ | ಚನ್ನಿಗ ರಾಮಗೆ ಮಿಗಿಲು                    || ೧೯೫ ||

ರಾಮನ ಸಮಶಕ್ತಿ ಪ್ರಧಾನ ವಿನಯದಿ ನೋಡಿ | ಸ್ವಾಮಿ ಅರಮನೆಗೆ ಬಿಜಮಾಡಿ |
ನೋಡುವೆ ನಾಕ ಮುಖದ ತ್ರಾಣ ಪ್ರಾಣವ ಮಾಡಿ | ಹದಮೀರಲು ಕಾರ್ಯ ತಿದ್ದುವೆನು       || ೧೯೬ ||

ಹರ ಶಿವನು ಎನ ಬ್ಯಾಡ ಮರಣವಾದವನನು | ತಿಳಿದಂತೆ ಮಾಡು ಬುದ್ಧಿಯಲಿ |
ನಡೆಯಲು ರಾಜೇಂದ್ರ ಪರಿವಾರ ಮಂತ್ರಿಯ ಕರೆಸಿ | ಕೊಡಿಸಿದನುಡುಗೊರೆ ವೀಳ್ಯ || ೧೯೭ ||

ಹುಶಾರಾಗಿ ಇರಿ ನೀವು ನಿಮ್ಮ ಕಾಲಮೇಲೆ | ಅಗಳು ತುಂಬುವ ಅರ್ಥ ದಂಡ |
ಮಿತಿಮೀರಿ ಬಂದರೆ ಪವುದಿ ವಾಸವ ಕೊಟ್ಟು | ಅಭಿಮಾನ ಉಳಿಸುವೆ ಕಡೆಗೆ        || ೧೯೮ ||

ಹರಿಮುರಿಯ ಕಟ್ಟೆಗಳ ರುಜುವು ಮಾಡಿ ಫಿರಂಗಿ ತೊಳಸಿ ಕುರಕೋಣಗಳ ಕಡಿಸಿ |
ಮೊನೆಗಾರ ಮನ್ನೆಯರ ಗುರಿಕಾರರಿಗೆ ಕೊಟ್ಟ | ತರತರವರಿದು ಹಾಕಿದನು          || ೧೯೯ ||

ನಗರವ ಕಲಿಮಾಡಿ ಅಗಳು ಆಲರಿದವ | ಅಮರಾವತಿಗೆ ಮಿಗಿಲೆನಿಸಿ |
ಜಗಳನು ದಿನಕರನಂದದ ಲೋಕದೊಳಿಪ್ಪ | ಸುರರಿಗೆ ಬೆಳಗಾದ ತೋರುವರೆ      || ೨೦೦ ||

ಪುರದ ಕಾಲವ ಕೇಳಿ ಪಗಲೆನಿಸಿ ಪಟ್ಟಣವು | ಹಗಲು ಬತ್ತಿಗಳುಡಿಯರಿಗೆ |
ಇದು ತಮಗೆ ಕಂಗಳಿಗೆ ವೀರ ಕುಮ್ಮಟವಾಗೆ | ಅಳಿದವ ಮರಳಿ ಜನಿಸುವನು        || ೨೦೧ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷ ಲಿಂಗ |
ತರಳ ರಾಮನ ತೆಗೆದು…………………… | ದಂಡ ಕಡಿವಲ್ಲಿಗೆ ಸಂಧಿ                 || ೨೦೨ ||[1]

[1] + ಅಂತು ಸಂಧಿ ೧೫ಕ್ಕಂ [>೧೬ಕ್ಕಂ] ಪದವು ೩೩೮೦ಕ್ಕಂ ಮಂಗಳ ಮಹಾಶ್ರೀ (ಮೂ)