[1]ಶ್ರೀ ಗಿರಿಜೆಯ ಶಂಭು ಭಾಗೀರಥೀಶನೆ | ನಾಗಭೂಷಣ ನಂದಿಕೇಶ |
ಭೂಮಿ ಬ್ರಹ್ಮಾಂಡಕ್ಕೆ ಆಧಾರ ಕರ್ತನೆ | ಯೋಗಿಜನಂಗಳ ಒಡೆಯ                 || ೧ ||

ಕೊಟ್ಟಣದ ಬತ್ತವ ಕುಟ್ಟದೆ ಶರಣರು | ಒಕ್ಕಲು ನಡೆಯೆ ಕಲ್ಯಾಣಕೆ |
ಮೂಟೆ ಗಂಟನು ಹೊತ್ತು ಬಳಲ್ದ ಸೊನ್ನಲಿಪುರ | ಕಪಿಲಮಲ್ಲ ಕೊಡು ಮತಿಯ       || ೨ ||

ಮುಂದಣ ಶ್ರುತಿ ಕೇಳಿ ಮಂದಮಾಡದೆ ಜನರು | ಕಂದ ರಾಮಯ್ಯನ ಕೃತಿಯ
ಸಂದವರ ಮಾತುಗಳು ಮುಂದಿನ್ನು ಅಡಗದೆ | ಒಂದಾರು ಗಾವುದ ಎಸೆಯೆ         || ೩ ||

ಸತ್ತ ರಾಮನು ಎಂದು ದಿಕ್ಕು ದೇಶಕೆ ಸುದ್ದಿ | ಹತ್ತೆಂಟು ಗಾವುದ ಹರಿಯೆ |
ದೊರೆಯು ಕಂಪಿಲರಾಯ ಕೊಂದನೆಂಬುವ ಸುದ್ದಿ | ಹರಡಿತು ಮೂರು ಲೋಕದೊಳು        || ೪ ||

ಅರಿ[ಭಯಂ]ಕರನು ಪ್ರಚಂಡ ಚವುಪಟಮಲ್ಲ | ಧುರಧೀರ ರಾಮ ಸತ್ತುದಕೆ |
ಕನಲಿ ದುಃಖವ ಮಾಡುತ ಊರ ಪ್ರಜೆಯೆಲ್ಲ | ಅನುದಿನದಲಿ ಇರುತಿಹರು            || ೫ ||

ಅಳಿದ ರಾಮನು ಎಂದು ದೊರೆಗಳೆಲ್ಲರು ಕೇಳಿ | ಹರಿಯಿತು ಎಮ್ಮ ರೋಗ |
ಬರುವನು ಡಿಳ್ಳಿಯ ಸುರಿತಾಳ ದಂಡೆತ್ತಿ | ಹಿರಿವ ಬೇರನು ಕುಮ್ಮಟದ               || ೬ ||

ಪಾಳೆಗಾರರು ಎಲ್ಲ ಕೂಡಿ ಮಾತಾಡುತ್ತ | ತೀರಿತೆ ಕಂಪಿಲನ ಭೋಗ |
ಏಳಿಗಿನ್ನೆಲ್ಲಿಯದು ಬಹಳ ಬೆಳೆದವರಿಗೆ | ಲಯವಾಗೊ ಕಾಲ ಬಂತು                 || ೭ ||

ಮೂರು ದಿನದ ಬಾಳ್ವೆಗೆ ಭೂಮಿ ರಾಯರನೆಲ್ಲ | ಆಳಿನಂದದಿ ಕಾಯಿಸಿದ |
ಹೋದನು ಇನ್ನೇಕೆ ಮೂಳ ಕಂಪಿಲ ಕೆಟ್ಟ | ಕಾಗದ ಬರೆ ಸುರಿತಾಳಗೆ                || ೮ ||

ತರತರದೊಳು ಬರುವ ಉಲುಪೆ ಕಾಗದ ನೋಡಿ | ಸುರಿತಾಳ ಬೆರಗಾಗಿ ಇರುವ |
ಮರಗಯಾನೆಂಬರು ಮೂಲ[ಕ]ತಿಳಿಯದು | ತಲೆದೂಗಿ ಇದು ಚೋದ್ಯ ತಮಗೆ     || ೯ ||

ಪ್ರಳಯಕಾಲದ ರಾಮನಳಿದನೆಂಬುವ ಸುದ್ಧಿ | ತಿಳಿಯದು ಭೇದವ ನೆಲೆಯು |
ಹೊಳವಾಗಿ ಇರುವುದು ನೆಲೆಗಳ ತಿಳಿಯದು | ಕರೆಸೆನಲು ತನ್ನ ಮಂತ್ರಿಯನು      || ೧೦ ||

ಮುತ್ತು ಮಾಣಿಕ ರತ್ನ ಕೆತ್ತಿದ ಸದರನು | ಹತ್ತಿದ ಪಾಶ್ಚಾಯ ಬರೀದ |
ಹಸ್ತಿ ತುರಗವು ಹಸಾದವೆನುತಲಿ | ಇತ್ತರು ದೇವೇಂದ್ರ ಭೋಗ                      || ೧೧ ||

ಹೊರಮಾತು ಹೊರಟಿತು ಬರಹೇಳಿ ನೇಮಿಯ | ಉಸಿರಲು ಪರಿಚರರೊಡನೆ |
ವಸುಧೀಶ ರಾಜೇಂದ್ರ ವಾಯುಗಮನದಿ ಬಂದು | ಕುಳಿತರು ರಾಜೇಂದ್ರ ಸದರಿಗೆ   || ೧೨ ||

ಬರಲಾಗ ಮಂತ್ರಿಯು ಹರಿಣಗಮನದಲಿ | ಕರ ಮುಗಿದು ಪಾಶ್ಚಯಗೆರಗಿ |
ಸದರಿನ ಮುಂಗಡೆ ನಿಂದು ಕೇಳಿದನಾಗ | ದಯಮಾಡಿ ರಾಯನ ಸೂಚನೆಯ       || ೧೩ ||

ಪರಿಚೋದ್ಯವಾದಂಥ ಸ್ವರವ ಕೇಳಿದೆ ಮಂತ್ರಿ | ಗರಿ ಮುರಿದು ಬಿತ್ತು ಎಂಬುವರು |
ಮರೆಮಾತು ಇನ್ನೇಕೆ ನಿಜ ಸಟೆಯೆ ಕುಮ್ಮಟದ | ಅರಸು ರಾಮನು ಸತ್ತನಂತೆ       || ೧೪ ||

ಕೇಳುತ ನೇಮಿಯು ಬಾಯ ವೀಳ್ಯವನುಗಿದು | ತೂಗುತ ತಲೆಯ ಮನದೊಳಗೆ |
ಭೀಮನು ಸಾಹಸದಿ ಗೋಲಂದನ ತನುಜನೆ | ಲಾವಣ್ಯ ಬಿಂಕದಲಿ                  || ೧೫ ||

ಬಾಲನು ಹಸಮಗ ಏಳೆಂಟು ವರುಷದ | ಯಾವ ಹದನೊ ಕಾಣಲರಿಯೆ |
ರಾಯರೊಳಿದು ಸಹಜ ಸಂದ ವಿಘ್ನವ ಕಂಡು | ಭೂಮಿಯೊಳಗೆ ಅರಸುವುದು        || ೧೬ ||

ಕಂಡು ಬಂದವರಾರು ಸ್ಥಳದಿಂದ ಬಂದಿರೆ ಸುದ್ಧಿ | ತುಂಡು ದೊರೆಗಳು ಬರೆದ ಲಿಖಿಯೊ |
ಮಂಡಲಪತಿಗಳ ಗಂಡನೆನಿಸಿಕೊಂಬ ಅದರಿಂದ | ಹರಿಸಿಹರೊ ಈ ಕೌತುಕ         || ೧೭ ||

ಅಷ್ಟ ದಿಕ್ಕಿನ ಒಳಗೆ ಕುಟ್ಟಿ ಹೊಯ್ಸಿ | ನೆತ್ತಿಯೊಳು ಮೊಳೆಯು ಬಲಿದಿಹುದೆ |
ಸತ್ತವನೊ ಹಗೆ ಮಾತೊ ಸಟೆಯ ಅರುಹದೆ ಮಂತ್ರಿ | ಕೋಟೆಗಾರರ ವಾಲೆ ನೋಡೊ       || ೧೮ ||

ಹಾಸ್ಯವಲ್ಲದೆ ವಾಲೆ ಲೇಸುಗಾಣದೆ ಭೂಪ | ದೋಷ ಕಳೆಯಲ್ಕೆ ಮಾಡಿಹರೊ |
ಈ ಸುದ್ಧಿ ಅವನೊಳಗೆ ಹೊಂದಿದ ನರ ನಂಬಿ | ಲೇಸು ಬರುವುದೆನಲು ನಡೆಯೊ     || ೧೯ ||

ತಿಳಿದು ನೋಡುವ ಭೂಪ ಬೆಳಗೊಂಡೆ ಕನಸಿಗಿ | ಬರುವುದು ಭೂಪ ನೆಲೆಯಾಗಿ |
ಮಲಗಿರುವ ಸಿಂಹವ ಮೈದಡವಲು ಮುಂದೆಮ್ಮ | ಬೇರ ಕೀಳದೆ ರಾಮ ಬಿಡನು     || ೨೦ ||

ಬೆನವನಂದದಿ ನೀನು ಒಡಲ ಬೆಳೆಸಿದೆ ಮಂತ್ರಿ | ಸರಿಪಾಲು ಒಡವೆಯ ಗಳಿಸಿ |
ಪರಕಾರ್ಯವೆಂದರೆ ಚಳಿಜ್ವರ ಬರುವುದು | ಹೆಣ ಮೋರೆ ಮೀಸೆ ಸುಡು ನಿನ್ನ        || ೨೧ ||

ಕೇಳಿದನಾಡುವ ರಣಹೇಡಿ ಮಾತಿನ ಭೇದವ | ಕಾಣದೆ ಕಾಗದವ ಬರೆಯುವರೆ |
ಸೀಳಲು ತನ್ನಯ ಸಿಟ್ಟು ಹೋಗದು ಎಂದು | ಭೂನಾಥ ಗರ್ಜಿಸಿ ನುಡಿದ             || ೨೨ ||

ಕೋಪ ಎನ್ನೊಳಗೇಕೆ ಪ್ರತಾಪ ಅಳಿದ ಸುದ್ಧಿ | ಕ್ಷಣಮಾತ್ರದೊಳಗೆ ತರಿಸುವೆನು |
ಹತ್ತುವನವ ಗಜವ ಹನ್ನೆರಡು ದಿವಸದ ಮೇಲೆ | ನಾ ಕಳುಹಿ ಒಳಸಂಚ ತರುವೆ      || ೨೩ ||

[ಆಗ] ಕರೆಸಿದನಲ್ಲಿ ಜಾಣ ಪ್ರವೀಣರ | ಜೋಗಿ ವೇಷಗಳನು ಧರಿಸಿ |
ಬೇಗದಿಂದಲಿ ಅವರು ಡಿಳ್ಳಿಯ ಕಡೆಗಂಡು | ಸಾಗಿ ಬರುವರು ಕುಮ್ಮಟಕೆ            || ೨೪ ||

ನಿಲ್ಲದೆ ನಿಂದಲ್ಲಿ ಬಂದರು ದಿನದಿನಕೆ | ತಿಂಗಳಾದರೊಂದು ಪಕ್ಷ |
ಮುಂದಿನ್ನು ತುಳಿದರು ಕುಮ್ಮಟದ ಕೊನೆರಾಜ್ಯ | ಬಂದು ಹೊಕ್ಕರು ತಿಳುಹುತಲಿ    || ೨೫ ||

ಕೇಳುವರಲ್ಲಲ್ಲಿ ಕಾಣದವರಂದದಿ | ಬಾಲನೊ ರಣವಿಜಯ ಪಾಲ |
ಎಲ್ಲ ತಿಳಿದರೆ ಒಂದೆ ನಿರ್ಧರವಾಗದೆ | ತಾವಾಗಿ ಹೊಕ್ಕರು ಕುಮ್ಮಟವ              || ೨೬ ||

ಬೇಡುವರು ಭಿಕ್ಷವ ನೋಡುವರು ಜಾತಿಗೆ | ಜೋಗಿಗಳೆಂದುಕೊಂಬುವರು |
ಕೇಳುವರು ಮನೆಮನೆಯ ಬಾಲೆಯರ ಕೇಳುವರು | ಪೇಳುವರು ರಾಮನ ಸ್ಥಿತಿಯ  || ೨೭ ||

ಏನಾಗಿ ಅಳಿದನು ಬಾಲನು ಅನುಮಾನ | ಯಾವ ಕಾಲಕೆ ಹುಟ್ಟಿ ಬೆಳೆವ |
ಸಾಯ್ವ ಪ್ರಾಯವೊ ಶಿವನೆ ಭೇರುಂಡನಂಥವನು | ತಾಯಿ ತಂದೆ ಎಂತು ಸೇರುವರು       || ೨೮ ||

ತಂದೆಯ ಮೋರೆಯು ನಿಂದು ಉರಿಯಲಿ ಜೋಗಿ | ತಂದಿಹರು ಒಬ್ಬ ರಂಡೆಯನು |
ಕಂದನ ಭ್ರಮಿಸಲು ಒಲ್ಲೆಂದರೆ ಚಾಡಿಯ | ಗಂಡಗೆ ಹೇಳಿ ಕೊಲ್ಲಿಸಿದೊ               || ೨೯ ||

ಸತ್ತುದು ಸರಿ ಜೋಗಿ ನಿಸ್ತ್ರೀಯರೈವರು | ಹೊಕ್ಕಾರು ಅಗ್ನಿ ಕುಂಡವನು |
ಪಟ್ಟಣಜನರೆಲ್ಲ ಕಂಡ ಕಾರ್ಯವು ಎಂದು | ದಿಟ ಹೇಳಿದರು ಬಾಲೆಯರು             || ೩೦ || ಇ

ಗಟ್ಟಿ ಸುದ್ಧಿಯ ಕೇಳಿ ಬಿಟ್ಟರು ಕುಮ್ಮಟವ | ತಿರುಗಿದರು ಡಿಳ್ಳಿಯಪುರಕೆ |
ಹೊಕ್ಕಾರು ಪಟ್ಟಣದ ರಾಯಗೆ ಹೇಳಿದರು | ಈ ಹೊತ್ತ ತೆಗಸಯ್ಯ ದಂಡೆಲ್ಲ          || ೩೧ ||

ಯಾಕೆ ಅಳಿದನೆಂಬ ಮಾತ ವರ್ಣಿಸಿ ನೀವು | ರಾಮನು ಹೊಕ್ಕ ರತ್ನಿಯು ಪಿಡಿಯೆ |
ಛೀ ಕರ್ಮಿ ಎನುತಲಿ ಬಂದರೆ ರಂಡೆ | ಭೂಪಗೆ ಹೇಳಿ ಕೊಲ್ಲಿಸಿದೊ                   || ೩೨ ||

ಮಂದಿ ಕುದುರೆ ಕೂಡಿ ಬಂದು ಪ್ರಧಾನನು ಕೊಂದು ತಲೆ ತರಲು ನಿಜಕರವು |
ಹೆಂಡರೈವರು ಹೋಗಿ ಕೊಂಡ ಮುಳಿಗದರೆಂದು | ಹೇಳಿ ಕೇಳಿದ ಮಾತು ಸರಿಯಾ || ೩೫ ||

ರಾಮ ಅಳಿದನು ಎಂದು ಕೂಗೋರು ಸ್ವಾಮಿ | ಬಾಲರು ಬಲ್ಲ ಹಿರಿಯರು |
ಮೇಲಾದ ಅಪಜಯವು ನಾವು ಕಂಡವರಲ್ಲ | ಹೇಳಿ ಕೇಳಿದ ಮಾತು ಸರಿಯಾ       || ೩೪ ||

ಇಳಿಯಿತು ಈಗ ಎನ್ನ ಎದೆಯ ಮೇಲಿನ ಗುಂಡು | ಕಳೆಯಿತು ಕಾಲ ಮುಳ್ಳುಗಳ |
ಮನೆಹೇಡಿ ಎಲೆ ಮಂತ್ರಿ ನಿನಗೆ ನಿರ್ಧರವೇನು | ನಡೆಸಯ್ಯ ಈ ಮೇಲೆ ದಂಡ       || ೩೫ ||

ಮಣ್ಣ ಮಡಕೆಯ ಮೆಚ್ಚಿ ದೊಣ್ಣೆಯಲಿ ಹಗೆಗೊಂಡೆ | ತನ್ನಯ ಮೂಗನು [ಕೊ]ರೆವೆ |
ಹಣ್ಣು ಮುದಿಯನ ಕೊಂದು ಕುಮ್ಮಟಕೆ ಠಾಣ್ಯವ ಹಾಕಿ | ಮುನ್ನ ಬಾದುರನ ಹಿಡಿತಾರೊ      || ೩೬ ||

ಸಾಧಿಸುವ ಸರ್ಪನ ಹುತ್ತಕೆ ಶಿರವಿತ್ತು | ತಾ ಮಲಗಿದಂತಾಯಿತು ಮಂತ್ರಿ |
ಕಾದಿರವು ಈ ಸಮಯ ಕೂಡಬಲ್ಲುದೆ ನೇಮಿ | ವಜೀರ ಖಾನರನು ಕರೆಸೆನಲು       || ೩೭ ||

ಬರೆದು ಕಾಗದ ಕಳುಹು ಅಮರಂಗಿ ಧೀರರು | ಬರುವಂತೆ ಸಕಲರು ಎಲ್ಲ |
ತೊರಗಲ್ಲು ಬಾದಾಮಿ ಊರಿವ ಮುಂಜುವ | ಬರಲಾಗ ಧುರಧೀರ ಬಲ್ಲಿ ರಾಚೂರ   || ೩೮ ||

ಖಾನಖಾನರಿಗೆಲ್ಲ ವಾಲೆ ಕಾಗದ ಬರೆದು | ರಾಮ ಮೃತವಾದ ಕುಮ್ಮಟದ |
ನೋಡಿಕೊಳ್ಳುತ ಎಲ್ಲ ಮೂಗಿನಲಿ ಬೆರಳಿಟ್ಟು | ಸಾಯಬಹುದೆ ಇಷ್ಟರೊಳಗೆ         || ೩೯ ||

ಹಣೆಬರದಾಸೆಯು ಎಡದ ಕಂಟಕ ಬಂದುದೊ | ನಿಜದೋರದೆಮಗೆ ಈ ಮಾತು |
ಹದಕೊಮ್ಮೆ ಮಾಡಿದ ಕುಟಿಲ ಕಾಣುದುದೆಂದು | ಅಮರಂಗಿಖಾನ ಆಡುವನು        || ೪೦ ||

ಆದರಾಯಿತು ಮುನ್ನ ಯಾರಿಗೆ ಸ್ಥಿರವುಂಟು | ತೀರಲು ತಂದಂಥ ಪಡಿಯು |
ಕಾಯಾಗೆ ಹಣ್ಣಾಗೆ ಸೋಲು ಗೆಲುಹುದಾದ | ಮೀರಿ ಬಾಳುವರೆ ಲೋಕದಲಿ          || ೪೧ ||

ನೆಲೆಯ ತಿಳಿಯದೆ ಮುನ್ನ ಸುರಿತಾಳ ಬರೆಯನು ಎಂದು | ಹೊರಡಲು ಹೊರಪಾಳ್ಯವೆಲ್ಲ |
ಅರುವತ್ತು ಸಾವಿರ ತುರಗದಿ ಅಮರಂಗಿ | ನಡೆಯಲು ತುಮರೋಜಖಾನ           || ೪೨ ||

ಒಡನೆ ನಡೆಯಲು ಒಬ್ಬ ಪಡೆಯ ಪಂಡಿತಖಾನ | ಬಲ ತುರಗ ಹತ್ತು ಸಾವಿರ |
ಕರೆ ಕರೆ ಕಾಲಾಳ ಗುಜ್ಜಳ ಗೌಳ ಪಾಂಡವರಿಗೆ | ಬರೆದು ಕಾಗದವ ಕಳುಹಿದರು      || ೪೩ ||

ಒಂದಾಗಿ ಖಾನರೆಲ್ಲರು ಕೂಡಿ ನಡೆಯಿತು | ಎಂಟು ಸಾವಿರ ವೀರ ಪಡೆಯು | ಸ
ಕಾಣಲು ಕ[ಪ್ಪೆ]ಯ ಆನವದಿರ ಖಾನನು ನಡೆದ | ಹನ್ನೊಂದು ಸಾವಿರ ತುರಗದಲಿ  || ೪೪ ||

ಹತ್ತು ಸಾವಿರ ಕುದುರೆ ತುಕ್ಕೋಜಿಖಾನನು | ಒತ್ತಿಲಿ ಬಿಬ್ಬರಖಾನ |
ಬತ್ತಿದ ಮೋರೆ ರಸದುಲ್ಲಖಾನನು | ಒತ್ತಿಯೊಳು ಕೋಪರ್ದಿಖಾನ                    || ೪೫ ||

ಖಾನರಿಗೆ ಬಲವಂತ ಕಮದುಮ್ಮ ಖಾನನು ಹೊರಟ | ಹದಿನಾರು ಸಾವಿರ ತುರಗದಲಿ |
ನೋಡುವರಳವಲ್ಲ ಖಾನರ ಪಡೆಬಂದು | ಕೂಡಿತು ಮೂರುವರೆ ಲಕ್ಷ                || ೪೬ ||

ಚೂರು ಕಬಾಯಗಳ ಬಿಸಿಗಣ್ಣ ಖಾನರು ಬಂದು | ಹೊಸೆದುಕೊಳ್ಳುತ ಮೀಸೆಗಳನು |
ಸುರಿತಾಳ ಕೊಡು ಎಮಗೆ ವೀಳ್ಯವ ಕುಮ್ಮಟದ ಬೇರು | ಕಿತ್ತು ಎಸೆವೆವು ಡಿಳ್ಳಿಯಪುರಕೆ      || ೪೭ ||

ಏಳಯ್ಯ ಸುರಿತಾಳ ಗಾಳಕೆಂಜಡವ್ಯಾಕೆ | ವೀಳ್ಯವ ಕೊಡು ಮಗ ನಮಗೆ |
ಕಿತ್ತೆವೊ ಹೊಸಮಲೆಯ ಕಲ್ಲನೆ ಪುಡಿಮಾಡಿ | ಬೂದಿ ಮಾಡೇವು ಕುಮ್ಮಟವ         || ೪೮ ||

ಖಾನರಾಡುವ ಮಾತ ಕೇಳಿ ಸುರಿತಾಳನು | ಗಹಗಹಿಸಿ ನಗುತ ಮನದೊಳಗೆ |
ಬಾದುರನ ತಂದರೆ ನೀವೆನ್ನ ಬಂಧುಗಳು | ನಾ ಬೇರೆ ಹೇಳುವದೇನು               || ೪೯ ||

ಉಡುಗೊರೆಯ ಕೊಡಲಾಗ ವಜೀರ ಖಾನರಿಗೆಲ್ಲ | ಸಂಬಳವ ಕೊಟ್ಟ ಬಲಕೆಲ್ಲ |
ಜೇಂಡೆವ ಹೊಡೆಯಲು ಯಮನ ಮೂಲಿಗೆ ಬೇಗ | ಮಂಡಲ ಪುರದಂತೆ ಇಳಿಯೆ    || ೫೦ ||

ದಂಡಿನ ಸಾಮಗ್ರಿ ಬಂಡಿಯದೊಯ್ವವು | ಬಂಗಿಯ ಹೇರೊಂದು ಲಕ್ಷ |
[ಕಂ]ಬಾರ [ಬೈ] ರೂಪ ಕುದುರೆ ಗೂಟವು ಹಗ್ಗ | ಕಾಲಂಬು ಲಕ್ಷಣ ಒಂಟೆಗಳಿಗೆ     || ೫೧ ||

ಆಹಾರಗಳ ಕೊಂಡು ಖಾನರು ತಮ್ಮಯ | ಆನೆಯ ಮೇಲೆ ಹೇರುವರು
ಗೋದಿ ರೋಟ್ಟಿಯು ತುಪ್ಪ ಕಲಿಸಿ ವಂದಿಗೆ ತುಂಬಿ | ಮೂರಾರು ಸಾವಿರ ಹೊರಡೆ   || ೫೨ ||

ಗಂಗಾ ಸಾರಾಯವನು ತುಂಬಿ ಕೊಟ್ಟಿಗೆ ಎತ್ತು | ಇಂಗು ಜೀರಿಗೆ ಮೊದಲಾಗಿ |
ಅಂಬು ಸಿಂಗಾಡಿಯ ಆನೆ ಮೇಲಕೆ ತುಂಬಿ | ಕಡೆಯಿಲ್ಲವೆಂಬಂತೆ ತುಂಬಿ            || ೫೩ ||

ಅಕ್ಕಿ ಸಕ್ಕರೆ ಜೇನುತು‌ಪ್ಪ ಉಪ್ಪಿನಕಾಯಿ | ಪತ್ರೆ ಲವಂಗ ಹಿಪ್ಪಲಿಯು |
ಸುಂಟಿ ಬಂಗಿಯ ರೊಟ್ಟಿ ಮದಕಿಕ್ಕೊ ಮಾರಾಟ ಮಗ್ಗ | ಇಟ್ಟಿಯ ಕೊರಡು ಎಲೆ ಸುಣ್ಣ         || ೫೪ ||

ನಿಂಬಿನ ಬೀಜವು ನಾನಾ ವರ್ಣದ ಕವಳ | ತುಂಬಲು ಉರುಳಿ ಮುಂತಾಗಿ |
ಒಂದಿಲ್ಲೆನಿಸದೆ ಹುಲಿಹಾಲು ಮೊಳಗಿನ್ನು | ಚೆಂದ ರೊಟ್ಟಿಗಳ ಜಾಕಾರಿ               || ೫೫ ||

ಜರಿಯ ಕಾಪಿನ ಕುದುರೆ ಅರುವತ್ತು ಸಾವಿರ | ಸರಿಯಾಗಿ ಸುರಿತಾಳ ನಡೆಯೆ |
ಎರಡು ಕಲ್ಪವಡೆದ ತುರಗ ಖಾನರು ಎಸೆಯೆ | ಎರಡು ಲಕ್ಷದ ಎಂಟು ದಶಕ         || ೫೬ ||

ಜೀವ ಒಂದಕೆ ನಡೆವ ಖಾನರ ದಂಡಿಳಿಯೆ | ಭೂಮಿ ಬ್ರಹ್ಮಾಂಡ ಒದರ್ವಂತೆ |
ನೇಮಿ ಸಹಿತ ಹೊರಡೆ ಸುರಿತಾಳ ಪಲ್ಲಕಿಯ | ಏರಿ ದೇವೇಂದ್ರ ಭೋಗದಲಿ         || ೫೭ ||

ಹೊರಪಾಳ್ಯ ಸದರಿನೊಳು ಸುರಿತಾಳ ಮಂಡಿಸಿ | ಕರೆಸಲು ವಜೀರ ಖಾನರು |
ಎಲ್ಲರ ಕರವಿಡಿದು ನೇಮಿ ಕರದೊಳು ಇತ್ತು | ಬರಮಾಡಿ ಎನ್ನ ಮೀಸೆಯನು         || ೫೮ ||

ಭೀಮಗೆ ಸಮನಾದ ರಾಮನು ಲಯವಾದ | ಬಾರಾ ಹನ್ನೆರಡಾಗೆ ಮುತ್ತಿ |
ಮೂರು ಲಕ್ಷದ ಪೌಜು ಮುಳುಗಲು ಬಲನೆಂಬೆ | ಬಾದುರನ ಕೈಸೆರೆಯ ಹಿಡಿತನ್ನಿ   || ೫೯ ||

ಆದುಲಪಾಶ್ಚಯ[ನ]ಬೀಳು ನುಡಿಗಳ ಕೇಳಿ | ಖಾನರು ಕಡು ರೋಷದೊಳಗೆ |
ಚಾನಾಬು ಡಿಳ್ಳಿಗೆ ಮೊಘ ಮಾರ್ಗದಿ ಬರಲು | ಸಾರುವೆಯ ಕಟ್ಟಿ ಕಡಿದೇವು          || ೬೦ ||

ಹೇಳ ಬೇಡಿಷ್ಟೊಂದ ಬಹಳ ಬರುವುದು ನಿಷ್ಠ | ಏಳೊಂದಿನಕವನ ಪುರವನು |
ಬೂದಿಮಾಡಿದ ಸುದ್ದಿ ಪಾದಕ್ಕೆ ಬರೆದೇನು | ಸೂಳೇರ ಕೂಡೆಮ್ಮ ಹೊಡೆಸು          || ೬೧ ||

ಬಾಯಲ್ಲಿ ಆಡಿ ಪಂಥ ಕಾಯದೆ ಹಿಂದಾಗೆ | ಖಾನರೆನ್ನಲಿ ಬೇಡ ನಮ್ಮ |
ತೇಜಿಯ ಹಿಡಿವ ಗುಲಾಮಗೆ ಕಡೆಗಾಣು | ರಾಮ ಶಿರವು ತರದೆ ಬಿಡೆವೊ            || ೬೨ ||

ಆಡುವ ಛಲ ಪಂಥ ಕೇಳುತ್ತ ಸುರಿತಾಳ | ಮುಗುಳು ನಗೆಯಲಿ ನಗುತ ಅಂಥ |
ಸಾವಿರ ಜನಕೋಟಿ ಇಡಲು ಫಲವೇನು | ನೇಮಿ ತಾನೆಂದು ಭಾವಿಪುದು            || ೬೩ ||

ಹತ್ತು ಬಾರಿಗೆ ನಿಮಗೆ ಹೆಚ್ಚಾಗಿ ನಡೆವೆನು | ಚಿತ್ತೈಸಿ ಡಿಳ್ಳಿಗೆ ನೀವು |
ಮತ್ತೊಮ್ಮೆ ವೀಳ್ಯವ ಇತ್ತು ಖಾನರಿಗೆಲ್ಲ | ಹೊಕ್ಕನು ನೃಪನು ನಗರವನು            || ೬೪ ||

ವಾರ ನಕ್ಷತ್ರವ ನೋಡಿ ಖಾನರು ಬೇಗ | ರಣಭೇರಿಯು ಸನ್ನೆ ಮಾಡಿಸಲು |
ಸಾಗಲು ದಂಡೆದ್ದು ಭೂಮಿ ಭೋರ್ಗರಿಸಲು | ಕಾವಳಗವಿಯಲು ಧರಣಿ              || ೬೫ ||

ಗಿಡಮುಳ್ಳು ಸೆಣಬೆದ್ದು ಕೆರೆಬಾವಿ ಜಲಬತ್ತಿ | ಕದಡಲಿ ನದಿ ಹಳ್ಳ ಬಸಿದು |
ಹಿಡಿಗಲ್ಲು ನುಗ್ಗಾಗಿ ಪೊಡವಿಯುಬ್ಬರಿದ ಹಾಗೆ | …………………………. || ೬೬ ||

ನಡೆವ ದಂಡಿನ ಭರಕೆ ಪೆಡೆ ಬಾಗಿ ಕೂರ್ಮನ | ಎದೆ ಬಿರಿದು ಕರಿಯು ಘೀಳಿಡಲು |
ಹರ ಬಲ್ಲ ರಾಮೊರ್ವ ಅಳಿದನೆಂಬುದ ಕೇಳಿ | ಬರುವ ದಂಡಿನ ಖಾನರ ಭರವ       || ೬೭ ||

ಹಿಂದಿನ ದಂಡಿಗೆ ಮುಂದಿನ ಪಾಳ್ಯಕೆ | ಒಂದೆರಡು ಯೋಜನೆ ಇಳಿಯೆ |
ಮುಂದಲ ತುರಗಕ್ಕೆ ಪಾಣಿ ಅಚ್ಚದ ಹುಲ್ಲು | ಹಿಂದಣ ತುರಗಕ್ಕೆ ಲದ್ದಿ                  || ೬೮ ||

ವಿಪರೀತಮಯವಾಗಿ ನೇಮಿಖಾನರ ದಂಡು ನಡೆಯಲು ನೂರಾರು ಪಯಣ |
ಯಮನ ನದಿಯ ದಾಂಟಿ ತೊರಗಲ್ಲ ನಿಧಿಗಿಳಿದು | ಹದಿನೈದು ಪಯಣವ ಕಳೆದು    || ೬೯ ||

ಧರಣಿಯು ಮೊರೆದಂತೆ ಬರುವ ದಂಡಿನ ಮುಂದೆ | ಅಪಶಕುನ ತೋರುವುದ ಕೇಳಿ |
ಮದಮುಖವ ಖಾನರಿಗೆ ವಿಧಿವಾಸ ಕಡೆಯದು | ಒದಗೂ ಸೂಚನೆಯು ಕೇಳಿ        || ೭೦ ||

ಕಾಗೆ ಹದ್ದುಗಳಾಡೆ ಏಳು ಲಕ್ಷದ ಮೇಲೆ | ತೀರಿತು ಛಲ ನಿಮ್ಮದೆನುತ |
ಸೇರರು ಹಿಮ್ಮರಳಿ ಮನೆಯಾಗಿದೆ ಯಮಪುರದಿ | ಸೇರುವರು ಒಂದಿನದೊಳಗೆ    || ೭೧ ||

ಹೋರು ಮಾಡಿದ ಖೂಳ ದಕ್ಷ ಕೋಟಿಯ ಕೂಡಿ | ಕಾಳದೈತರ ಕೂಡಿಕೊಂಡು |
ರೂಢೀಶನೊರ ಪುತ್ರ ಗರಭನಂದದಿ ರಾಮ | ನೀಗುವ ಲಕ್ಷ ಜೀವರನು               || ೭೨ ||

ಕೌರವ ನವಕ್ಷೋಣಿ ಐವರೊಳು ಹತವೆಂದು ವನಜಸಂಭವನ ಅಂಕಿತವು |
ನರ ರಾಮನ ಕರದೊಳು ಲಯ ಮೂರು ಲಕ್ಷೆಂದು ಯಮನ ಭಾಗದ ಪಲ್ಲಿ ನುಡಿಯೆ  || ೭೩ ||

ಜಾನಕಿಯ ಪ್ರಿಯನಿಂದ ರಾವಣನ ನವಕೋಟಿ | ಹಾನಿಯಾದಂತೆ ದೈತ್ಯರು |
ಖಾನ ತನುವೆಲ್ಲ ರಾಮನೊಳು ಹತವೆಂದು | ಕೂಗಲು ಬಳ್ಳ ಇಂದ್ರದೊಳಗೆ          || ೭೪ ||

ಯಮನ ವಾಹನದಂತೆ ಮದಮುಖದ ಖಾನರು | ದಂಡ ನಡೆಸಬೇಕೆನಲು |
ಆ ನೇಮಿ ಮೊದಲಿವರು ಕಂಡಿಲ್ಲ ರಾಮನ ಸುದ್ಧಿ | ಇದಕೊಂದು ದೃಷ್ಟಗಳ ನೋಳ್ಪ  || ೭೫ ||

ಕರೆಸಿದ ಖಾನರ ಸದರಿಗೆ ನೇಮಿಯು ಹರುಷದಿಂದೆಲ್ಲ ಕುಳ್ಳಿರಿಸಿ |
ಸನುಮಾನ ಬಿಡುವಿರೊ ಹೊರಡೆದ್ದು ನುಡಿವಿರೊ | ತನಗೆ ತಿಳಿದದನೊಂದ ಪೇಳೆ   || ೭೬ ||

ಆಡಯ್ಯ ಎಲೆ ಮಂತ್ರಿ ರಾಮನ ಕೊಂದುಂಟು | ಪ್ರಾಣ ಮಿಕ್ಕುಳಿದು ಬಂದವನು
ಭೇದಿಸುವುದು ಕೆಳಗೆ ರಾಮನ ಕುಮ್ಮಟದ | ಹಾದಿ ಎಂದರೆ ಪೇಳು ಎನಗೆ           || ೭೭ ||

ಗಹಗಹಿಸಿ ನಗುವರು ಖಾನರು ಕರ ಹೊಡೆದು | ಮೂಳ ರಾಮನ ಘನವೇನು |
ರಾವಣನ ಸಾಹಸದಿ ತರಿಸಿದ ಜಾನಕಿಯ | ಪ್ರಾಣಕಾಂತಗೆ ಮಿಕ್ಕವನೆ               || ೭೮ ||

ತಿಳಿದಿಲ್ಲ ನರ ಚಂದ ಜನಸ್ಥಾನದ ಬಗೆಯ | ಹರನಿಂದ ಪಡೆದು ಬಂದಿಹನು |
ಅಳಿದಿಹನೊ ಇಲ್ಲವೊ ಸುಳಿವ ನೋಡುವ ಬನ್ನಿ | ಟಗರು ಹುಂಜಗಳನು ತರಿಸಿ       || ೭೯ ||

ತರಿಸೆಂದು ಖಾನರು ಸನುಮತಬಡಲಾಗ | ಹಿಡಿತನ್ನಿ ಎನಲು ಚರರೊಡನೆ |
ಮದಪ್ರಾಯವಾದಂಥ ಜಗಳದ ಟಗರಿಗೆ | ಇಡಿಸಿದರು ಸುರಿತಾಳನ ಹೆಸರು         || ೮೦ ||

ತರಿಸಲು ಮತ್ತೊಂದು ಎಡವಿ ಬೀಳುವ ಕುರಿಯ | ಕರೆಸಲು ರಾಮನ ಹೆಸರ |
ಅದಕಿದು ಜೋಡೆಂದು ನಗುತ ಖಾನರು ಆಗ | ಟಗರನು ಕಾಳಗಕೆ ನಿಲಿಸಿದರು      || ೮೧ ||

ಆಂತಿದ ಕಾಳಗಕೆ ಎರಡು ಟಗರನು ನೂಕೆ | ಜಗ್ಗಿಸಿ ಹಿಂದಕೆ ಪಿಡಿದು |
ಬೊಬ್ಬೆ ಆರ್ಭಟದೊಳು ಭೋರ್ಗರೆದು ಟಗರನು ನೂಕೆ | ನಗುತಿರ್ದ ಖಾನರು ಬೆರಗಾಗಿ      || ೮೨ ||

ನಾಲ್ಕು ಸನ್ನೆಯ ಮೇಲೆ ಹೂಂಕರಿಸಿ ರಾಮನ ಟಗರು | ಹಾಕಿತು ಎದೆ ಮುರಿವಂತೆ |
ಕೋಪ ಬಂದಿತು ತಮ್ಮ ಭೂಪನಳಿವನು ಎಂದು | ಆ ಟಗರಿ ಆ ಕಡೆಗೆ ಎಳೆದೆಯೋ  || ೮೩ ||

ಏನು ಚೋದ್ಯವೊ ಕಾಣೆ ಏಳೂರದ ಬಕರಿ | ಕೋಣನಂದದ ಟಗರ ಕೊಂದು |
ಖಾನರ ಕಳೆ ಕಾಂತಿ ಸಾವು ಮೋರೆಗಳಾಗಿ | ಮಾತಾಡುವ ನೂರರು ನಿರದಿಹರು    || ೮೪ ||

ನೂರಾರು ಕೋಳಿಯ ಈಡಾಡಿದ ಹುಂಜನ | ರಾಯ ಸುರಿತಾಳನೆಂದು |
ಕಾಳಗನರಿಯದ ಕೊಚ್ಚೆ ಹುಂಜನ ತಂದು | ರಾಮನ ಹೆಸರ ಕರೆಸಿದರು             || ೮೫ ||

ಸಾಣೆಯ ಹಿಡಿಸಿ ತಿದ್ದಿದ ಚೂರಿ | ಸುರಿತಾಳನ ಹುಂಜಕ್ಕೆ ಕಟ್ಟಿ |
ಮಸೆಯದ ಮೊಂಡಾದ ಕಿಲುಬು ಚೂರಿಯ ತಂದು | ರಾಮನೆಂಬುವದಕೆ ಕಟ್ಟಿ       || ೮೬ ||

ಹುಂಜ ಎರಡನು ರಾಯರು ಬಂಧಿಸಿ ಬಿಡಲಾಗ | ಮಂಡೆಯ ಕೂದಲು ಕೆದರಿ |
ಒಂದೆರಡು ಸನ್ನೆಯ ಮುಂದಲೆಯನಿತ್ತಾಡಿ | ಲಂಗಿಸಿ ಹರಿವಾದವು ತಲೆ             || ೮೭ ||

ಏರಲು ರಾಮನ ನಾಮದ ಹುಂಜಿಗೆ | ರೋಮ ರೋಮಗಳು ಸರಳಾಗೆ |
ಹಾರಲು ಬಂದರೆ ಜಾಡಿಸಿ ಎದೆ ಕೊಟ್ಟು | ಸೀಳುವಂದದಿ ಒಡೆದು ಕೆಡಹೆ             || ೮೮ ||

ಕೋಳಿಯ ಕಾಳಗವ ಖಾನರೆಲ್ಲರು ನೋಡಿ | ಆನೆಯ ಮದವಿಳಿದ ತೆರದಿ |
ಧ್ಯಾನಿಸುತ ಮನದೊಳು ಪ್ರಾಣನಕ ಪೋಗಿನ್ನು | ರಾಣಿಸುತರೊಳಗೆ ಸಂಚರಿತೆ     || ೮೯ ||

ಮರುಳುವ ಬಗೆಯಲ್ಲಿ ಇಟ್ಟುದಾಕ್ಷಣ ನೋಡೆ | ಇರುವನು ರಾಮನೆಂಬುವರು |
ಬರಬಾರದಾಗಿತ್ತೆ ಸುರಿತಾಲನೆಡೆಯೊಳು | ಘನ ಪಂಥವಾಡಿದೆವೆನುತ              || ೯೦ ||

ಮೌನದಿ ಇರುವಂಥ ಖಾನರ ಮುಖ ನೋಡಿ | ನೇಮಿಗೆಲ್ಲ ಕುಡಿಸಿದನು |
ಹೋಗಿಲ್ಲ ರಾಮನ ಕಾಣದೆ ಕಾಯವ ತಾ | ಭೇದಿಸಿದೆ ನಿಮಗೆಲ್ಲ ಕೆಳಗೆ               || ೯೧ ||

ಕುಣಿಯಲರಿಯದಂತೆ ತೋರದವನ ಕಂಡು | ಬೆದರಿದರೆ ನಾವೆಲ್ಲ ಟಗರು |
ಮುರಿದ ಬಗೆಯನು ನೋಡಿ ತವಸಿಗಳಾದವರು | ತಡೆವುದು ದಿಟವೆ ಅವನಿರಲು    || ೯೨ ||

ಟಗರ ಹುಂಜನು ಮುರಿದ ಬಗೆಯ ನೋಡೈ ನೇಮಿ | ನಗೆಗೀಡಾಗದೆ ಬ್ಯಾರೆ ಬಿಡದು |
ಗಿರಿಜೆಯ ರಮಣನ ವರಕೃಪೆ ಅವಗುಂಟು | ಮರಣವಾದುದು ಹೇಗೆ ಕಾಯ         || ೯೩ ||

ಪೇಳಯ್ಯ ಇದಕೆಂದು ಏನು ಕಷ್ಟವ ಮಾಳ್ಪ | ಪ್ರಧಾನಿಗಳರಸ ಗಂಭೀರ |
ಹೋಗುವದೆ ಘಣ ನಮ್ಮ ಮಾನಾಭಿಮಾನವನು | ಕಾಣುವ ತೆರ ನಮ್ಮ ಕೀರ್ತಿ      || ೯೪ ||

ಆಗಲೆ ಇದ ನೀವು ತೋರಿರಲು ಸುರಿತಾಳ | ನೋಡವ ಮನಕೆ ಸಂತೈಸಿ |
ಈಗ ಬರೆಸಲು ನಾವು ಹೇಡಿಗಳು ಎಂದೆಂಬ | ಮೋರೆಯ ನೀರನಿಳಿಸುವನು        || ೯೫ ||

ಹೆದರ ಹೋಗಲು ಭಾವಿ ಮುಂದೆ ಹೋಗಲು ಡೊಗರು | ತಂದ ಕಂಟಕ ಮೊದಲು ನಮಗೆ |
ಸಂದೇಹಗೊಳಬ್ಯಾಡಿ ಬರೆಸಿ ನೋಡುವೆ ಜಿತ್ತಿ | ರಾಜೇಂದ್ರ ಸುರಿತಾಳ ತಿಳಿವಂತೆ  || ೯೬ ||

ಬರೆಯಲು ಕಾಗದವನು ಸುರಿತಾಳನ ಬಿರುದಿಟ್ಟು | ತೋರಿದ ನತದೃಷ್ಟನೋಲೆಯ |
ನಾನಾವ ನರದ ಮೇಲೆ ಹಲವು ಜಿತ್ತಿಯ ಮಾಡಿ | ಜೋಡೆರಿಗಿತ್ತು ಹೋಗೆನಲು      || ೯೭ ||

ಬಂದಾಗ ಜೋಡೇರು ತಂದು ಕಾಗದವಿತ್ತು | ರಾಜೇಂದ್ರಗೆ ಕರಗಳ ಮುಗಿಯೆ |
ಕಾಗದವನು ಒಡೆದು ನೋಡುತ ಸುರಿತಾಳ | ರೂಢಿಸಲು ಗಂಭೀರ ಟಗರ           || ೯೯ ||

ಅಳಿದು ಇಲ್ಲವು ರಾಮ ಮಡಗಿನ್ನು ಲೋಕದಿ | ಹರಿವಂತೆ ಮಾಡಿ ಸುದ್ಧಿಗಳ |
ಬರಮಾಡಿ ಕರಸೆಮ್ಮ ಕುರಿಗಳನರಿವಂತೆ | ಕೊರೆಯಬೇಕೆಂದು ಮಾಡಿದರು         || ೧೦೦ ||

[1] + ಗುರುಬಸವಲಿಂಗಾಯ ನಮಃ (ಮೂ)