ಶ್ರೀ ಗುರುವರ ಶಂಭು ಭಾಗೀರಥೀಶನೆ | ನಾಗಭೂಷಣ ನಂದಿಕೇಶ |
ಭೂಮಿ ಬ್ರಹ್ಮಾಂಡಕ್ಕೆ ಆಧಾರ ಕರ್ತನೆ | ಶ್ರೀ ಗೌರಿ [ಗಂಗೆ] ವಲ್ಲಭನೆ                 || ೧ ||

ಕಾಯವೆ ಮೂರು ಕಾಲಾರು ಮಸ್ತಕ ನವ | ಬಾಯಿ ಒಂಬತ್ತು ಬಾಲವೆರಡು |
ಕರಗಳು ನಾಲ್ಕು ಕಂಗಳೆನಲು ಹದಿನೆಂಟು | ಆನೆ ಮುಖದವನೆ ಕೊಡು ಮತಿಯ    || ೨ ||

ಕಮಲಜಪಿತ ತನುಜನ ಕೊಂದವನೆ | [ಇನಿ]ಯಳು ರತಿ ಮೊರೆಯಿಡಲು |
ಮನಸಿಜನ ಲೋಕಕ್ಕೆ…………… | ಕನಕಾದ್ರಿವಾಸ ಕೊಡು ಮತಿಯ                 || ೩ ||

ಲಾಲಿಸಿ ಭಕ್ತಿಯಲಿ ಜ್ಞಾನವುಳ್ಳವರೊಲಿದು | ಬಾಲರಾಮನ ಚರಿತೆಯನು |
ಹಾಲೊಳಮೃತ ಜನಿಸಿ ಮೇಲಾದ ತೆರದೊಳು | ಕೇಳುವರ ಕರ್ಣಕಿಂಪಹುದು        || ೪ ||

ಕರ್ಮಕ್ಕೆ ಒಳಗಾಗಿ ನೆಲಮನೆಯ ಸೇರಿದನಲ್ಲ | ಧರ್ಮವ ಗ್ರಹಿಸಿ ಇದ್ದವನ |
ವೈರಿ ಸುರಿತಾಳನ ಲಯಮಾಡುವ ತೆರಕೆ | ಹರನು ಮಾಡಿದನು ಕಂಟಕವ          || ೫ ||

ಸತ್ಯದಿ ನಡೆದವಗೆ ಹತ್ತುವದೆ ಕರ್ಮವು | ವಾಕ್ಯ ಕರ್ಣದಿ ಕೇಳಿದವಗೆ |
ಮುಟ್ಟುವುದು ಮತ್ತಲ್ಲಿ ಫಲ……ಮನೆಯೊಳು | ಲಕ್ಷಕ್ಕೆ ಬೆಲ್ಲವಾಗದಿಹುದೆ             || ೬ ||

ನಡೆಸುವೆ ಮುಂದಣ ಕೃತಿಯ ಲಾಲಿಸಿ ಸೂರ್ಯ | ರಥವೇರಿ ಮುಖವ ತೋರ್ಪಂತೆ |
ಅಸುವಳಿದ ಖಾನರು ಏಳೆ ನೇಮಿಯು ಬಂದು | ಕುಳಿತನು ಸದರ ವಾಲಗಕೆ         || ೭ ||

ಖಾನರು ನವದೇಶ ಪಾಳೇಗಾರರು ಬಂದು | ನೇಮಿಗೆ ಕರಗಳ ಮುಗಿದು |
ವಾಲಗ ನೋಡಲು ದೇವೇಂದ್ರ ಭೋಗಕ್ಕೆ | ಮೂರು ಇಮ್ಮಡಿಯಾಗಿ ಇರಲು        || ೮ ||

ಕೇಳಿರೈ ಎಲ್ಲರು ಹೋಗಿ ಮುತ್ತಲು ಪುರವ | ಕಾಗದ ಬರೆದು ನೋಡುವನು |
ಮೂಗ ಕಾರ್ಯಗಳನು ಮಾಡಬಾರದು…… | ಪೇಳಲು ನೇಮಿ ಎಲ್ಲರಿಗೆ              || ೯ ||

ಕಾನರೆಲ್ಲರು ಮರೆದು ಏಳುವ ಸಮಯದಿ | ಕೋಳಿ ಕೇಳಿ ಸಾಂಬಾರವ ಮಾಡುವರೆ ?
ಊರ ಕಾಣುವ ಮುನ್ನ ಎದೆಗೆಟ್ಟು ಎಲೆ ನೇಮಿ | ಪಾಲಿಸೈ ಸುರಿತಾಳ ಲಗ್ಗೆ           || ೧೦ ||

ರಾಮನು ಉಂಟಿಲ್ಲವೊ ಭೇದ ತಿಳಿಹಿಸು ನಿನ್ನ | ಜಾಣತನದ ಯುಕ್ತಿಯೆಲ್ಲಿ |
ಲಹರಿ ಮನದೊಳು ಕಾಣರು ನಿಮಗಿನ್ನು | ಹಾಸ್ಯೆಗೆ ಹೀನಾಗೆ ತಮಗೆ                || ೧೧ ||

ಬರೆದರೋಲೆಗಳೆಮಗೆ ಕೊರತೆ ಬಂದುದು ತಾನು | ಹರುಷದಿಂದಲಿ ಬರೆಸಿದನು |
ನೆರೆ ಜಾ[ಡಿನ] ವರ ಒಡನೆ ಕಳುಹಲು ಬಂದು | ಕಡೆಬಾಗಿಲ ಹೊರಗೆ ತಡೆವೆ        || ೧೨ ||

ಪೇಳಿ ನಿಮ್ಮರಸಿಗೆ ಜಾಡಿನವರ ಸುದ್ಧಿ | ಕಾಗದ ಬಂದಿದೆಯೆನುತ |
ರಾಮ ಮಂತ್ರಿಗೆ ಬಂದು ಪೇಳಲು ಚರರಾಗ | ಪೇಳಿದ ಬರಲೆಂದು ಮಂತ್ರಿ           || ೧೩ ||

ಹೊಕ್ಕರು [ಜಾ]ಡೆಯರು ಬೆಚ್ಚುತ ಎದೆಯೊಳ | ದೈತ್ಯರ ಹೊಳಲು ಇದು ಎನುತ |
ಇಟ್ಟ ಕಾಗದವನು ಮಂತ್ರಿಗೆ ಕರ ಮುಗಿದು | ಬಿಚ್ಚಿ ನೋಡದನು ಲೇಖನವ           || ೧೪ ||

ಕೆಡಬೇಡ ಕಂಪಿಲ ಮುದಿಯಾದ ಕಾಲದಿ | ಕೊಡು ನಮ್ಮ ಬಾದುರನ ಹಿಡಿದು |
ಪೊಡವಿರಾಯರನೆಲ್ಲ ಮನೆ ಮುರಿದು ರೊಕ್ಕವ ಕೊಟ್ಟು | ಉಳುಹಿಕೋ ನಿಮ್ಮ ಪುರವನು     || ೧೫ ||

ಊರ ಮುತ್ತಿದ ಬಳಿಕ ಬೇರ ಕೀಳುವೆ ನಿಮ್ಮ | ಹೋಗರೆಂಬರು ನೀ ತಿಳಿದು |
ನೋಡುತ ಪೃಥಿವಿ ಕಾಲಾಗ್ನಿ ಕಿಚ್ಚಾಗಿ | ರೋಡಿಸಿ ಯಮನ ಆಜ್ಞೆಗಳು                || ೧೬ ||

[ಜಾಡೆಯ]ವರ ಮಾತೇನು ಗುಡಿಗುಡಿಸಿ ಮಂತ್ರಿಯು | ಹಿಡಿದು ನೂಕಿವರ ನಗರವನು |
ಕೊಡುವುದಕೆ ಬಾದುರ ನಿಮ್ಮೊಡೆಯನಾ ಬರಹೇಳಿ | ನಡೆಯೆಂದು ದೂಡಿಸಲು ಹೊರಗೆ      || ೧೭ ||

ಹೋದ [ಜಾ]ಡೆರು ಬಂದು ನೇಮಿಗೆ ಕರ ಮುಗಿದು | ಹೇಳುವರು ಜಲವ ಸೂಸುತಲಿ |
ಹೋದ ತಪ್ಪಿಗೆ ಎಮಗಾದುದು ಅಪರಾಧ | ಜೋಡಿಸಲು ಶಿರಕೆಂಟು ಗುದ್ದ           || ೧೮ ||

ಮಾತಿನ ಬಿಂಕ[ದ] ಮೂಲವ ಶಿವಬಲ್ಲ | ಸಾಕಯ್ಯ ನಿಮ್ಮ ಮನದ ಗಾತ್ರ |
ನೂಕಿಸಿ ಬಿಡಿಸಿದ ಪ್ರಧಾನ ಕಂಪಿಲನೆಡೆಗೆ | ಕಳುಹಿದಿರಿ ನಮ್ಮ ಬಗೆಯ               || ೧೯ ||

ಏನಯ್ಯ ಎಲೆ ನೇಮಿ ನಾವು ಹೇಳಿದ ಮಾತಿಗೆ | ತಾರಸ ಸರಿ ಬಂತೆ ನಿಮಗೆ |
ಭೂಮಿ ಆರ್ಭಟಿಸುತ್ತ ಎದ್ದ ಹಮ್ಮಿರಖಾನ | ಪಾಲಿಸು ನಮಗೆ ವೀಳ್ಯಯವ            || ೨೦ ||

ಮತ್ತ ಹಮ್ಮಿರಖಾನ ಲಕ್ಷ ಪೌಜಿಗೆ ನೀನು | ಕತ್ರಿಗೆ ಹೊರಡಲಿ ಅವರು |
ಮುತ್ತಿಕೊಳ್ಳೆವು ನಾವು ಮೂರು ಲಕ್ಷದಿ ಬಂದು | ಕೊಚ್ಚುವೆ ಊರ ಒಗೆದಂತೆ         || ೨೧ ||

ಸುಳಿವ ಕಾಣದೆ ಮುತ್ತಿ ಅಳಿಯ ಸಲ್ಲದು ಬನ್ನಿ | ಬಿಡು ನಿನ್ನ ಪೌಜನು ಲಗ್ಗೆ |
ಹೊರಡುವ ರಾಪುರಲು ಕೊಡುವರೆ ಸುದ್ದಿಯ | ಇರದೆ ಊಳಿಗದ ಆರ್ಭಟದಿ          || ೨೨ ||

ಸುದ್ದಿ ಕೊಡುವರೆ ನಿಮಗೆ ಬಣ್ಣವನೆ ನಾನು | ಯುದ್ಧ ಹಮ್ಮೀರ ಯಮನಂತೆ |
ವಜ್ರಾಂಗಿ ತುರಗವು ಒಂಬತ್ತು ಸಾವಿರದೇಳು | ಆರ್ಭಟಿಸಿ ನಡೆವರು ಕುಮ್ಮಟಕೆ     || ೨೩ ||

ಹೊಡೆವ ಭೇರಿಗಳಿಂದ ಹಿಡಿವ ಕಹಳೆಯ ಸ್ವರದಿ | ಒದರ್ವಂತೆ ಭೂಮಿ ಜರ್ಝರಿಸಿ |
ಕಡಿಕಡಿ ಎನುತಲಿ ಕವಿದು ಖಾನರ ಪೌಜು | ಅಡರುವ[ದು] ನಾಲ್ಕು ಭಾಗದಲಿ       || ೨೪ ||

ಸುಡುವ ಬಾಣವು ಬತ್ತಿ ಭೋರಿಡುವ ಅಂಬಿನ ಮಳೆಯು | ಸುರಿವುತ್ತ ಖಾನರು ಹೊರಗೆ |
ಕೊಡು ಲೌಡಿ ಕೋಟಿಯ ಬಿಡುವ ಹಮ್ಮೀರನೆ | ಬುಡಮೇಲು ಮಾಡುವೆ ಊರ        || ೨೫ ||

ಬುಡಮೇಲು ಮಾಡುವ ಕಡು ಸಮರ್ಥರು ಅಹುದು | ಇಡು ನಿಮ್ಮ ಹೆಜ್ಜೆಯ ಮುಂದೆ |
ತೊಡೆವೆವು ಲಿಪಿಗಳನು ನೊಣಕಿಂತ ಕಡೆಮಾಡಿ | ನಡೆಸೇವು ಯಮನ ಪಟ್ಟಣಕೆ    || ೨೬ ||

ನಕರಿ ಮಾಡುವೆ ಲೌಡಿ ಮುಖಕೆ ತಾ ಕಡಿಸುವೆವು | ತುಕಡಿ ಮಾಡುವೆ ನಿಮ್ಮ ಹುಡೆಯ |
ತಾಪಹ…. ತಲೆಯ ಕೆದರುತ ಬಂದು | ಮುಖಮಾಡೆ ನೂಕಿ ಆರ್ಭಟಿಸಿ              || ೨೭ ||

ಕತ್ತಿ ಬಲ್ಲೆಹಗಳನು ಕಿತ್ತರು ಖಾನರು | ಹೊಕ್ಕರು ಹೊರಪಾರ ಬೇಲಿ |
ಮತ್ತವರ ಕರೆಯುತ ಲಕ್ಷಬಾಣದ ಸರಳ | ಕುತ್ತಿಗೆ ಕೊರೆದೇವು ನಿಲ್ಲಿ                  || ೨೮ ||

ಹೇಳಿ ಬಂದಿರೆ ನಿಮ್ಮ ಕೂಡಿದ ಹೆಂಡಿರಿಗೆ | ಮಾಡಿ ಹಿಂಡಿಯ ಕೂಳನೆಂದು |
ಬ್ಯಾಡರ ಹುಡುಗರ ಕೈನೋಡಿ ಎನುತಾಗ | ಚಾರ ಜಿಡ್ಡಿಯ ಕಿತ್ತು ಏರೆ                || ೨೯ ||

ಹೊಕ್ಕನು ಬಲವಂತ ಒಕ್ಕಲಿಗರ ಮುದ್ದ | ಭುಕ್ಕರಿ ಕೊಮಾರ ನಂದಯ್ಯ |
ಕೊಚ್ಚುತ ಹೋದರು ಕಂಬನು ಕೊರೆದಂತೆ | ಹತ್ತೆಂಟು ಬೀದಿಯ ಬಿಡಿಸಿ              || ೩೦ ||

ಯಮನ ಭಾಗದ ಜಿಡ್ಡಿ ತೆರೆಸಿ ಹೊ‌ಕ್ಕನು ಒಬ್ಬ | ಎಡಗಯ್ಯ ಹಂಪ ರೋಷದಲಿ |
ತುರುಕರ ಜುಲವಿಡಿದು ಕೆಡಹಿ ಎದೆಯನು ಮೆಟ್ಟಿ | ಅರಿದಾನು ನೂರಾರು ಶಿರವ     || ೩೧ ||

ಮಂತ್ರಿಯ ಮಗ ನೀಲಕಂಠನು ಹೊರಹೊರಟು | ಇಕ್ಕೆಲದೊಳಗೆ ಸವರುವನು |
ಲೆಂಕೆಯ ಹನುಮನು ನೀರ ಜಿಡ್ಡಿಯ ಮುಂದೆ | ಅಂಕದಾಳಿಗೆ ಸಾವಿರವ ಹೊಡೆದ    || ೩೨ ||

ನಗರದ ಪರಿ ಬಳಸಿ ಹೆಣಮಯವಾಗಲು | ಬೆದರಲು ತುರುಕರ ಬಲವು
ಬಿಡು [ಭಾ]ಯಿ ನಿಮ್ಮಯ ಗೊಡವೆ ಹೋಗೆವು ನಮ್ಮ | ಹುಡುಗ ಬುದ್ಧಿಯನು ನೋಡುವೆನು   || ೩೩ ||

ಹೊಡೆ ಇವ[ನ] ಕೋಟೆಯ ಕೊಡುಯೆನುತ ಬಂದ[ನು] | ಎದೆಗೆಡಲು ಅರೆ [ಅ]ಲ್ಲಾ ಎನುತ |
ಕಡೆ ಮೊದಲಿಲ್ಲದೆ ಕೋಟೆಯ ಎಡೆಬಳಸಿ | ಮಲಗಲು ಹತ್ತು ಸಾವಿರವು              || ೩೪ ||

ಹೊರಕೋಟೆ ಅಗಳಿಗೆ ಚೆದುರ ಸಂಗಯ್ಯ ಹೊಕ್ಕು | ಕುರಿಗಳ ಕಡಿವಂತೆ ಕಡಿಯೆ |
ನಡಿ ಜಾವೋ ಊಟೋ ಭಾಯಿ ರಾಮ ಬಿದ್ದನು ಎಂದು | ಬೆದರಿ ಓಡಿದರು ಹಲಕೆಲವು        || ೩೫ ||

ಕಂದಕದ ಅಗಳಿನೊಳು ಒಂದೆರಡು ಸಾವಿರ ಬೀಳೆ | ಅಂಬಿನಲಿ ಇತ್ತು ಕಲ್ಲೊಳಗೆ |
ಎಂದಿಗೆ ಬರೆವಿನ್ನು ಬಿಡು ಭಾಯಿ ಮನೆತನಕೆ | ಮುಂದೆ ಗತಿಯಿಲ್ಲ ತಾನಳಿಯೆ       || ೩೬ ||

ಇಡಬ್ಯಾಡ ಮಾಡಿದ ಲವುಡೇರೊಬ್ಬರುಂಟು | ಬರೆದು ಕಾಗದವನೆ ಕಳುಹಿದರು |
ಆಳಿದ ರಾಮನು ಎಂ[ಬ] ಪಾಳೇಗಾರರ ಮಾತು | ಸುರಿತಾಳ ಕೇಳಿ ಕಳುಹಿದನು   || ೩೭ ||

ಇದಿರಾಗಿ ಕಂಡವನ ಹೊಡೆಯಲು ಕರ್ಮಿಲ್ಲ | ಕೈಮುಗಿದವರ ಕೊಂದರೆ ಬಿಡದು |
ಸುಡು ನಮ್ಮ ನೇಮಿಯ ಹುಡುಗ ಬುದ್ಧಿಯ ಮುಂದೆ | ನಗೆಗೀಡಾಗದೆ ಹೋಗಲರಿಯ         || ೩೮ ||

ಕಾದರೆ ಕೈಯನು ಆರ ಮಕ್ಕಳು ನಿಮ್ಮ | ರಾಮಭೂಪಾಲನ ಹೆಸರು |
ಗಹಗಹಿಸಿ ನಗುತಾಗ ವೀರ ಸಂಗಮರಾಯ | ಸಾರಿಸಿದ ಧರ್ಮ ಕಹಳೆಯ          || ೩೯ ||

ಕಿವಿಯೊಳು ಕೇಳುತ್ತ ಧರ್ಮಕಹಳೆಯ ಸ್ವರವ | ಕೈ ನಿಲಿಸಿ ಕಡಿವ ಮಾನ್ಯೆಯರು |
ಮೋಚಿಗಾಲೊಂದೆಸೆಯು ಗಾಯೊಡೆದ ತುರುಕರು ಎಲ್ಲ | ಎಳೆದಾಡಿಕೊಂಡು ಹೋಗುವರು  || ೪೦ ||

ಹಮ್ಮನಾಡುತ ಬಂದು ಹಮ್ಮೀರಖಾನನು ಕಂಡು | ತನ್ನಯ ಬಲವಳಿದ ಕೇಡ |
ಖಿನ್ನನಾಗುತ ಮುಖವ ಹಿಂದುಳಿ ಪೌಜನು | ಕುಂದುರಹಳ್ಳಕ್ಕೆ ಇಳಿಯೆ               || ೪೧ ||

ಅನಿತದಿ ದಿನಕರನು ಕಡಲಸ್ಥಾನಕೆ ಇಳಿಯೆ | ಹೊಡೆಸಿದ ಬ್ಯಾಂಟೆ ಹಮ್ಮೀರ |
ಬರೆಸಿದ ಕಾಗದವ ನೇಮಿಖಾನರಿಗೆಲ್ಲ | ಕೆಡೆದುರು ತನ್ನ ಬಲವೆಂದು                 || ೪೨ ||

ಸುರಿತಾಳ ಹಮ್ಮೀರ ಇರುಳು ಕಾಳಗೆ ನೋಳ್ಪ | ಕಿರಣ ತಾರೆಗಳು ಮೂಡಿದವು |
ದೊರೆಯು ಕಂಪಿಲರಾಯ ಹಜಾರಕ್ಕೆ ಬಂದಾನು | …………………. || ೪೩ ||

ತಾವರೆ ಎಲೆಯೊಳು ನೀರಿನಂದದಿ ಕುಳಿತು | ಆಡುವ ಮಂತ್ರಿಯ ಒಡನೆ |
ದಾಳಿಯ ಕುದುರೆಯಲಿ ಬೇರೆ ಬೇಲಿಯ ಸುಡಲಿ | ನೇಮಿ ಬಂದರೆ ಉಳಿಯುವನೆ    || ೪೪ ||

ಧಣಿ ಬರದೆ ದಂಡನು ಹೊಡೆದನು ಪುರವನು | ಎದೆಗೆಡಿಸಿ ತಲ್ಲಣಿಪ ತೆರದಿ |
ಪಡೆಸಹಿತ ಬಂದವನು ಜನಕೊಂದು ಕಲ್ಲಿಡಲು | ಸದರ ತುಂಬದೆ ಎನ್ನ ಮಂತ್ರಿ      || ೪೫ ||

ಬಾಲರಾಮನ ಕೊಂದು ಕೂಲಿಯ ಹೆಣಗಿದೆ | ಸೂಳೆ ಮುಂಡೆಯ ಮಾತ ಕೇಳಿ |
ಭಯವನು ಬಿಡು ನೀನು ರಾಯ ಕಂಪಿಲ ಧೀರ | ನಿಜಗಲಿಗಳಾದ ಶ್ರವದಂತೆ         || ೪೬ ||

ಕೆಟ್ಟೆನೆನುತಲಿ ರಾಯ ಅತ್ತರೆ ಬರುವನೆ | ಎತ್ಹ್ಯಾಕಿ ತಲೆಯನು ಹೊಡೆಸಿ |
ಇಷ್ಟ್ಯಾಕೆ ಭಯಬಡುವೆ ಇನಿಯಳಿರುವಳು | ರತ್ನಿ ಪಟ್ಟಣ ಮುಳುಗೊ ಕಾಲದಲಿ      || ೪೭ ||

ಆಡಬೇಡವೊ ಮಂತ್ರಿ ನಾಯಿ ಮುಂಡೆಯ ಮಾತ | ಹೇಳಿ ಕೊಲಬ್ಯಾಡ ಮಾತಿನಲಿ |
ಪ್ರಾಣ ಉಳಿದರೆ ಈಗ ಹಮ್ಮೀರನ ಕೈಯೊಳಗೆ | ಸೀಳಿಸುವೆ ಚತುರ್ಭಾಗಕವಳ      || ೪೮ ||

ಕೊಲ್ಲೆನುತ ಕೊಡಲು ಎಲ್ಲಾರೆ ಮಡಗಿದ್ದು | ಇಲ್ಲೀಗ ಎನಗೆ ತೋರಿದರೆ |
ಎಲ್ಲರು ಉಳಿದೆವು ಕಳ್ಳರಂಡೆಯ ಪಿಡಿದು | ಕಲ್ಲಗಾಣದಲಲಿ ಅರೆಸುವೆನು            || ೪೯ ||

ಅರಸುಗಳು ನಾಯಾಗೆ ಮಂತ್ರಿ ಹೆಬ್ಬುಲಿಯೆಂದು | ಬರಿದೆ ಆದುದೆ ಲೋಕದಲಿ |
ಇರಿಸಿರ್ದು ಬೆಳಗಾಗಿ ಮುಖತೋರಿ ಜೀ ಎನಲು | ಅಹುದೆಂಬೆ ಮಂತ್ರಿ ಕುಲತಿಲಕ   || ೫೦ ||

ಸಾಕಯ್ಯ ಹಿಂದಲೆ ಮಾತಾಡಿ ಫಲವಿಲ್ಲ | ನೂಕುವಾ ಬಂದ ಭಾರವನು |
ಯಾಕಿಲ್ಲಿ ನೀ ಬಂದೆ ಎಲ್ಲರನು ಎದೆಗೆಡಿಸಿ | ಸಾಕಯ್ಯ ಮನೆಗೆ ಬಿಜಮಾಡಿ           || ೫೧ ||

ರಾಯನ ಸಾಗಿಸಿ ಪ್ರಧಾನಿ ಬೈಚಪ್ಪನು | ರಾಯ ಮಾನ್ಯರ ಬೇಗ ಕರೆಸಿ |
ಮಾಡಬೇಕೀ ರಾತ್ರಿ ರಾಜಕಾರ್ಯವ ಒದ್ದು | ಓಡಿಸಬೇಕು ಹಮ್ಮೀರನ                || ೫೨ ||

ದಯಮಾಡಿ ನನ ತನಗೆ ತೊಡೆಯ ತಟ್ಟುತ ಅವರು | ಆನಂದದಿ ವಾಲಗದೊಳಗೆ |
ಕೊಡಲಿಯ ಹನುಮಣ್ಣದ ಪೇಗುಂಡೆ ನಾಗಯ್ಯ | ಹಿಡಿದರು ವೀಳ್ಯವನಾಗ            || ೫೩ ||

ಮನಗಂಡ ಮಂದಿಯ ಹದಿನಾರು ಸಾವಿರ ಬಲವ | ಚದುರರಿರ್ವರು ಆತುಕೊಂಡು |
ನಡೆಯಲು ಕೆಳಜಿಡ್ಡಿ ಕಿತ್ತು ಕತ್ತಲೆಯೊಳು | ಇಳಿದಾರು ಪಾಳ್ಯದ ಬುಡಕೆ              || ೫೪ ||

ಗುಡಾರವ ಆರೊಯ್ದು ಎದೆಯ ಮೇಲೆ ಹೂಡಿ | ಕಠಾರಿಯಿಂದಿರಿದು ರೂಢಿಯೊಳಗೆ |
ಕಡು ಧೈರ್ಯದಿಂದಲಿ ಆಗ……………….. | ಏರಿ ಬಂದರು ಕಂಪಿಲನವರು          || ೫೫ ||

ಕಾಡು ಕಟ್ಟಿಗೆ ಬಿದಿರು ಎದೆಯ ಮೇಲೆ | ………………..ದಿರಿಯುತಲಿ |
ಕಡಿದು ಶಿರವ ಈಡಾಡುತಲಿರ್ದರು | ದಿಟ್ಟ ಕಂಪಿಲರಾಯನವರು                    || ೫೬ ||

ಹಿಡಿದೆಳೆದು ಮುಂದಲೆಯ ಕಠಾರಿಲಿ ಹೊಯ್ದರು | ………..ತಲೆಯನಾಕ್ಷಣದಿ |
ತೋಳು ತೊಡೆಯ ಮೆಟ್ಟಿ ಕೊರಳು ಕೊಯ್ದುಕೊಂಡು | ಕೋಳಾಹಳದಿ ಬೊಬ್ಬಿಡುತ || ೫೭ ||

ಕತ್ತಲೆಯೊಳು ಮುಂದುಗಾಣದೆ ತುರುಕರು | ಎತ್ತಿ ಶಿರಗಳ ಚಂಡಾಡಿ |
ನಿದ್ರೆಯ ಸೊಕ್ಕನು ಮುರಿದರು ಖಾನರು | ಕಡ್ಡಾಯಿಸದೆ ಕಡಿಯುತಲಿ               || ೫೮ ||

ಸಾಲಾಗಿ ಕಟ್ಟಿದ ಆನೆಯ ಸಾಲನು | ಬೀಳಲಿರಿದು ಕೆಡಹಿದರು |
ಕಾಲಾಳು ಕಡಿದು ಹೊಗಲಿರಿದು ಬೇಗದಿ | ಮೇಲಾಳು ಇರಿದು ಕೆಡಹಿದರು           || ೫೯ ||

ಭಂಗಿಯ ತಿಂದು ಮೈಮರೆದರು ತುರುಕರು | ಗುಂಡಿಗೆ ತಿವಿತಿದಾಡಿ |
ದಿಂಡುರುಳಿದ ಹಾಗೆ ಬಿದ್ದ ಖಾನರ ತಲೆಯ | ಚೆಂಡಾಡಿದರು ಕಂಪಿಲನವರು         || ೬೦ ||

ತಮ್ಮೊಳು ತಾವು ಮಾತಾಡಿಕೊಳ್ಳುತಲಾಗ | ವಾಯದಲಿ ತಿರುಗಿದರು |
ಖಾನರ ದಂಡೆಲ್ಲ ಓಡಲು ಬಯಲಾಗಿ | ತೋರಲು ಬೆಳಗು ಇಂದ್ರನಲಿ               || ೬೧ ||

ರವಿ ಮೂಡೆ ಪೂರ್ವದಿ ಹಿಡಿದು ಮನ್ನೆಯರಾಗ | ತುರುಗ ಹದಿನಾರು ಸಾವಿರವ |
ಹಿಡಿದ ಕಹಳೆಯ ಪೋಗಿ ಪುರವ ಹೊಕ್ಕರು ತಂದು | ತುರಗವ ದೊರೆಗೆ ಒಪ್ಪಿಸಲು   || ೬೨ ||

ಬಂಟರ ಸಂತಯಿಸಿ ಮಂತ್ರಿ ಬೈಚಪ್ಪನು | ಕೊಟ್ಟನು ತೇಜ ಭೋಗವನು |
ಮುಂಡೆಯರಂದದಿ ಮುಖಮುಖವ ನೋಡುತ್ತ | ಬಂದುದಕೆ ಬಹು ಚೆಂದವಾಯ್ತು   || ೬೩ ||

ಗಿಡಕೊಬ್ಬರಾದವರು ಜಮೆಯಾಗಿ ಒಂದೆಡೆದು | ನಡೆಯಲು ನೇಮಿಯ ಬಳಿಗೆ |
ಕಿರಿಮುಖದಿ ಹಮ್ಮೀರ ಸರಿಯಖಾನರ ಒಳಗೆ | ನಗೆಗೆಡೆದೆವುಯೆಂದು ಬರಲು        || ೬೪ ||

ನೇಮಿಗೆ ಕರ ಮುಗಿದು ಹೋಗಿ ಹಮ್ಮೀರಖಾನ | ಯೋಕಾದಳಲಿ ಕಾರ್ಯಸ್ಥಿತಿಯ |
ಏರಿದಾಲಿಗದಂತೆ ಎದೆಗೆಡಿಸಿ ಕೋಟೆಯ | ಜೇಬಿ ಬಾಕಲ ತನಕ ಕಡಿದೆ              || ೬೫ ||

ಅಲ್ಲದ ಸಮಯಕ್ಕೆ ಹೊರಟು ಲವುಡೇರು ಬಂದು | ಹುರುಡಿಸಲು ಹೆಣದ ವಾಲೆನವ |
ಹನ್ನೆರಡು ಸಾವಿರವ ಕಳೆದು ಹರಿದಕೆ ನಡೆಯೆ | ಇರುಳು ಕಡಿದರು ವಿಪರೀತ        || ೬೬ ||

ಕಳವಿನೊಳು ಬರುವಂಥ ಸುಳುವ ತಿಳಿದರೆ ಅವರ | ಯಮನ ಕಾಣಿಸುವೆ ಇನ್ಯಾಕೋ |
ನುಡಿಯಲು ಬಲವಿಲ್ಲ ರಣಹೇಡಿ ಹೋಗೆಂದು | ಸರಿಯುವರು ನಗುವ ಬಗೆಯಾಯ್ತು  || ೬೭ ||

ಅಂತವನು ನಿಜವೆಂದು ಸಂತೈಸಿ ನೇಮಿಯು | ಚಿಂತೆ ಬೇಡೆಂದು ಹಮ್ಮೀರನ |
ಪಂಥವ ಮುರಿವೆನು ಕಂಪಿಲನ ತಲೆ ಹೊಡಿಸಿ | ಮುಂಚೆ ಬ್ಯಾಡರನು ಹರಸುವೆ ನಾ || ೬೮ ||

ಕಾಲನ ತೆರದೊಳು……..ಅತಿ ಕೋಪ | ಭೇರಿ ನಾದವನು ಮಾಡಿಸಿದ |
ಧುರಧೀರ ಹಮ್ಮೀರ ತನಗೊಂದು ಬ್ಯಾಡಯ್ಯ | ಮುರಿದವನು ನಾನು ನೀನಲ್ಲ        || ೬೯ ||

ಹೊಡೆಯಲು ರಣಭೇರಿ ಸಿಡಿಲಿನಾರ್ಭಟದೊಳು | ಕಲಕುವಂತೆ ದಂಡೇಳೆ |
ಕರಗಳ ಕಡಕೊಂಡು ಉದುರುವುದು ಸರಿಯದೆ | ಕವಿಯಲು ಮೇಘ ಮುಸುಕುವಂತೆ         || ೭೦ ||

ಕಬ್ಬಕ್ಕಿ ಮುಸುಕಿದ ಅಬ್ಬರದೊಳು ಬಂದು | ಮಬ್ಬುಗವಿಯಲು ಕುಮ್ಮಟಕೆ |
ಜಗ್ಗದೆ ಬೈಚಪ್ಪ ಜಾಡಿಸುತ ಎಡಬಲವ | ಹೊಂದಗೊಡದೆ ಹರದಾರಿ                 || ೭೧ ||

ನೋಡಿದರು ನಗರದ ಮೋಡಿಯನು ತಲೆದೂಗಿ | ವೀರ ಕುಮ್ಮಟವೆನ್ನಬಹುದು |
ಬ್ಯಾರಿಲ್ಲಿ ಗೋರಿಯು ನಮಗೆ ಸಹಜವೆಂದು | ನಾರಿಯರ ಆಸೆ ಇನ್ಯಾಕೋ           || ೭೨ ||

ನಗರದ ಏರಿ ಬಳಸಿ ಹರದಾರಿ ಅಡ್ಡಗಲ | ವಾರುವಿಗಿಲ್ಲದೆ ದಾರಿಗಿಳಿಯೆ |
ಕರೆಸಿದ ನೇಮಿಯ ತುರುಕರ ಬಲವನು | ಸುರಿತಾಳ ಲಗ್ಗೆ ಹುಲ್ಲೆನಲು                || ೭೩ ||

ಏರಲು ನಾಲ್ಕು ಮುಖದಿ ವಜೀರ | ಖಾನರು ದೇಶ ಪಾಳ್ಯಗಾರರು |
ಕಾಲ ಜನರುಗಳ ಏರಿಸುತ ಎಡಗೈಯ | ಬಾಯಿ ವೆಗ್ಗಳ ಮಾಡುತಲೆ                || ೭೪ ||

ಕತ್ತಿ ಬಲ್ಲೆಹ ಹಿತ್ತು ಹೊಕ್ಕರು ತುರುಕರು | ಲಕ್ಷಬಾಣ ಸೆಳೆಯುತಲಿ |
ನೆತ್ತಿ ಚುಂಗನು ಕೆದರಿ ನೆಗೆದು ಹಾರುತ ಬಂದು ಮುತ್ತುವರು ಕಿರಿಯಿಂಡಿನೊಳಗೆ    || ೭೫ ||

ಅರೆ ಬಾಡಬೇಕೆಂದು ಕಾಲಿ ತಡವದೆ ಗೌಡೆ | ಕೆಡಬೇಡಿ ಮೀಸಿ ಮಣ್ಮಾಡುವೆವು |
ಹೊಡೆವ ತ್ರಾಣಗಳುಂಟೆ ನೇಮಿ ಬಲವನು ನೋಡಿ | ಪೇಚ್ಯಾರ ಇಡಲು ತುಂಬುವುದು        || ೭೬ ||

ಕಾಲ ಕೋಟಲು ಬನ್ನಿ ಜೇರಿಸಿದರಿಗೆ ಸಾಗಿತವ | ಮಾಡಿಸಿ ಗೋರಿ ಸ್ಥಳವ |
ಲಾಹಾರಿ ಮದದೊಳು ತೂಗುತ ಬರಲವರು | ಹಾರಿ ಬೀಳ್ವಂತೆ ಹೊಡೆವವರು       || ೭೭ ||

ಕುಮ್ಮಟವನು ನಂಬಿ ಸುಮ್ಮನೆ ಕೆಡಬೇಡಿ | ನಮ್ಮ ಬಾದುರಖಾನ ಕೊಡು ಲವುಡಿ |
ಇಮ್ಮಡಿ ಈ ಪಾಶ್ಚಾಗೆ ನೇಮಿಖಾನನು ಬಂದ | ಸುಮ್ಮನೆ ಕಳುಹಿ ಕೆಡಬೇಡಿ         || ೭೮ ||

ಬಾದುರನ ಕೊಟ್ಟೇವು ಸಾಗಿ ಮುಂದಕೆ ಬನ್ನಿ | ಕೇಳು ಬಾಯಿಗೆ ಒಂದು ಗುಂಡ |
ಏನಾರೆ ಎನುತಲಿ ಇದಿರಾಗಿ ಬರಲಾಗ | ಚಂಬಾರು ವಂದದಿ ಕಲ್ಲಿಡಲು              || ೭೯ ||

ಮಂಜು ಮುಸುಕಲು ಬೆದರಿ ಅಂಜುವದೇನು ಕುಲಗಿರಿ | ಹುಂಜನು ಹೇಂಟೆಗಂಜುವದೆ |
ಹೆಂಬೇಡಿ ನೇಮಿಯ ಬೇರ ಬಲ್ಲೆವು ಹಿಂದೆ | ಗಂಗೆಯ ಹೊಕ್ಕ ಧೀರನೊ              || ೮೦ ||

ಕತ್ತಲೆಗೆ ಬೆದರುವವೆ ಕರಿ ಸಿಂಹ ಶಾರ್ದೂಲ | ಮುದಿಗತ್ತೆಗಂಜುವವೆ ವ್ಯಾಘ್ರಗಳು
ಎತ್ತ ಮುಂದಕೆ ಚೆಲ್ಲಿ ಮೂಳ ನೇಮಿಯ ಬಲದಿ | ತಿಕ್ಕೇವು ಬ್ರಹ್ಮಲಿಖಿತವನು          || ೮೧ ||

ಹೀನಮಾನದ ನುಡಿಯ ಕೇಳುತ ಖಾನರು | ತುಮಾರೆ ಚೋರಕು ಬೇದು |
ಕೀಳುತ್ತ ಸೂರೆಗಳ ರಕ್ತ ಒರೆಯಗಳ | ಏರುವರು ನಾಲ್ಕು ಭಾಗದಲಿ                  || ೮೨ ||

ಅಡರಲು ಲಗ್ಗೆಯ ಭೂಮೆಲ್ಲ ಜರ್ಝರಿಸಿ | ಹೊಡೆವರು ಬಾಣಂಬು ಲಕ್ಷ |
ಕಡಿಕಡಿಯೆನುತಲಿ ಮುಖವ ನೋಡದೆ ನುಗ್ಗಿ | ಹಿಡಿದರು ಅಗಳು ಸಾರೆಯನು        || ೮೩ ||

ಜೋಡುಸತ್ತಿಗೆ ಹಿಡಿಸಿ ಪ್ರಧಾನಿ ಬೈಚಪ್ಪನು | ಪೌಜೇರಿದ ಮುಖಕೆ ಅವರವರು |
ನೂರಾರು ಮುಖಮಾಡಿ ಕಳ್ದ ಭವಾನಿಯ | ಸುರಿಸುವ ಬೆಂಕಿಯ ಮಳೆಯ           || ೮೪ ||

ಹರಡಿದರು ಕಲಿಗಳು ಕಲಿಗೊಂಡಂಬರವ | ಕುರಿಗೆ ತೋಳನು ನುಗ್ಗು ತೆರದಿ |
ಬರುವ ಖಾನರ ನೋಡಿ ಹೊಡೆಯಲು ಬೀಳುತ | ಅರೆ ಅಲ್ಲಾ ಖುದಾ ಎನುತಿರಲು   || ೮೫ ||

ಅಲ್ಲಾ ಮುಲ್ಲನುಯೆಂಬ ಅಕ್ಷರವು ನಾಲ್ಕು ಮುಖದಲಿ | ಅಲ್ಲಲ್ಲಿ ನೋಡಿ ಈ ತೆರದಿ |
ಹುಳ್ಳಿಯ ಹುರಿದಂತೆ ಬಾಣ ಪೆಟಲು ಅಂಬು | ಉರುಡಾನ ತರಲು ತುರುಕರನು     || ೮೬ ||

ಅಗಳ ಹಾರಿದರು ಕೋಟೆ ನೆಗೆದು ಹೊಕ್ಕರೆಂದು | ತೆಗೆಸಿ ಸಂಗಯ್ಯ ಜಿಡ್ಡಿಯನು |
ಪರದೇಶ ಹರೆಯೆಂದು ಇತ್ತರದಿನವರು | ಹೋಗಲು ಧರಣಿ ಬಿಡದಂತೆ               || ೮೭ ||

ಯಮನ ಜಿಡ್ಡಿಯ ಕಿತ್ತು ಎಡಗೈ ಹಂಪನು ಹೊಗಲು | ಬಡಿವನು ಕೈಕಾಲು ಪಿಡಿದು |
ಇದಿರಾಗಿ ನಿಂತವರು ಎದೆಯೆದೆಯನು ಮೆಟ್ಟಿ | ಕೊರೆವರು ಕತ್ತಿಯೊಳೆ ಶಿರವ        || ೮೮ ||

ಬಾಣಿ ಮುದ್ದನು ಹನುಮ ಪೂರ್ವ ಜಿಡ್ಡಿಯ ಹೊರಟು | ಹೋರಿದರೆ ತಲೆಯ ಚಿಪ್ಪುಗಳು
ಮೂರು ಪಾಲುಗಳಾಗೆ ಮಾರಿ ಕೋಣನು ಎಂದು | ಓಡುವರು ಖಾನರು ಬೆದರಿ      || ೮೯ ||

ಹಾಕುವ ಇಡಿಗಲ್ಲು ಸುರಿವ ಅಂಬಿಲ ಮಳಲು | ಒರೆದ್ಹಾಕುವ ಕೆಳಗೆ ಮಂಡೆಯನು | ಸ
ಏಕೊದಾರನೆ ಬಲ್ಲ ಅಗಳ ತುಂಬಿದ ಹೆಣನ | ಸಾಕೆಂದು ಕುಮ್ಮಟವು ಓಡೆ           || ೯೦ ||

ರಣಮಯವಾಗಲು ಎಡಬಳಸಿ ಕುಮ್ಮಟದ | ಕಡಿವ ಬಾಣವ ಎಸಗೆಯಲಿ |
ಹುರಿಗಾಳು ಕೆಡೆದಂತೆ ತಲೆ ಬುರುಡೆ ಬಿದ್ದವು | ಹದಿನೆಂಟು ಸಾವಿರ ಶಿರವು          || ೯೧ ||

ಅಗಳ ಹೊಕ್ಕುವರೊಳಗೆ ಹಿಮ್ಮರಳಲಿಲ್ಲವೊ ಒಬ್ಬ | ನೆಲನುಂಗಿತೇ ಶಿವ ಬಲ್ಲ |
ಬೆದರವು ಪೌಜೆಲ್ಲ ತೆಗೆದು ತಿರುಗಿ | ಹಿಡಿಯವು ಧರ್ಮ ಕಹಳೆಗಳು                   || ೯೨ ||

…………………………….. | ಎತ್ತವು ಕುಮ್ಮಟದ ಹೆಸರ |
ಬೆತ್ತಲೆ ಹರಿದಾಡಿ ಕಚ್ಚಿ ಹುಲ್ಲನೆ ಕಟ್ಟು | ಕತ್ತಿಗಳ ಬಿಸುಟು ಓಡುವರು                  || ೯೩ ||

ಹೇಳಬಹುದಾ ಇದನು ವೀರ ಕುಮ್ಮಟವೆಂದು | ನೋಡಿರೈ ಖಾನರಹುದೆಂದು |
ಆಡಿದಿರಿ ಛಲ ಮಾತ ಸುರಿತಾಳನ ಎಡೆಯಲ್ಲಿ | ನೇಮಿ ಎಲ್ಲರನು ಹಂಗಿಸಿದ         || ೯೪ ||

ಬೇರ ಕೀಳುವನೊಬ್ಬ ಬೆಂಕಿ ಹಾಕುವನೊಬ್ಬ | ಬೂದಿ ಮಾಡುವನೆಂಬರೆಲ್ಲ |
ಪಾಳೆಗಾರರು ಅಷ್ಟೆ ಪೂರಾ ಯಮಗೆ ಬರೆದು | ಗಾಣ ಹಾಕಿಸುತೆಲ್ಲರನು             || ೯೫ ||

ಯಮನ ಸೇರಿತು ತನ್ನ ಬಲವೈದು ದಾಳವು | ಬಗೆಗುಂದಿ ನೇಮಿ ಮನದೊಳಗೆ |
ತೆಗೆದು ಹಿಂದಕೆ ಬಿಡಲು ಇರುವೆ [ಯ] ತೆರದೊಳು | ಕಂಡಿರೆನುತ ನೇಮಿ ಹೆದರಿ    || ೯೬ ||

ರಾಮನ ಹೆಸರಾಳೆ ಭೂಮಿ ಕಲಿಯಾಗದು | ಸಾಯದೆ ಉಳಿದು ಇರುತಿಹನು |
ಗಾಯ ಸಾಯದ ಮಂದಿ ನೋಡಿಸಿ ನೇಮಿಯ | ಆರೈಕೆಯೊಳಗೆ ಉಪಚರಿಸೆ        || ೯೭ ||

ಇತ್ತ ಕಂಪಿಲರಾಯ ಉಪ್ಪರಿಗೆಯ ಹತ್ತಿ | ನೇತ್ರ ತುಂಬಲು ದಂಡನೋಡಿ |
ದೃಷ್ಟಿ ತಳಕೆಳಗಾಗಿ ಹೊಟ್ಟೆ ಗಲ್ಲವ ಬಡಿದು | ಕೆಟ್ಟೆನೆನುತಲಿ ತಲೆದೂಗೆ               || ೯೮ ||

ಯಾವ ಧರೆ ಉಳಿವುದು ಹಾಳು ದಂಡನು ಸುಡಲಿ | ನಾನಂತು ನಾಳೆ ಹೋರುವೆನು |
ಜೀವಳಿದ ಶ್ರವದಂತೆ ರಾಯ ಮೆಲ್ಲನೆ ಬಂದು | ವಾಲಗ ಸಭೆಯೊಳು ಕುಂತ         || ೯೯ ||

ರಾಯ ಕಂಪಿಲ ಇರಲು ಕುಮಾರನ ಚಿಂತೆಯಲಿ | ನೇಮಿ ಬಳಿಯಿಂದೋಲೆ ಬರೆದು |
ನೇಮಿಯ ಬಳಿಯಿಂದ ಸ್ಥಾನಪತಿಗಳು ಬರುವ | ಬಾಗಿಲವರು ಸುದ್ದಿಕೊಡಲು        || ೧೦೦ ||

ರಾಯನ ಬಳಿಯಿಂದ ಊಳಿಗ ಪರಿತಂದು | ರಾಯನೆಡೆಗೆ ಕರೆದೊಯ್ಯೆ |
ಸ್ಥಾನಪತಿಗಳು ಬಂದು ರಾಯಗೆ ಕರಮುಗಿದು | ಯಾವ ಬುದ್ಧಿಯು ನಿಮ್ಮ ಘನವ    || ೧೦೧ ||

ರಾಯ ಪಾಶ್ಚಯನ ಪ್ರಧಾನಿ ನೇಮಿಯ ಬರವು | ಕಾರ್ಯ ಮಾಡುವುದು ಕಡೆಗಾಲ |
ಕರಿಯೊಳು ನರಿ ಸೆಣಸಿ ಬದುಕುವುದೆ ನೀನರಿಯಾ | ಗರುಡನೊಳು ಉರಗದ ಹಗೆಯೇನು   || ೧೦೨ ||

ಪರಬಲ ವೈರದ ಮನಸಿರಲು ತೆಗೆದೊಯ್ಯೆ | ಕಡಿಸಯ್ಯ ನೇಮಿ ಬೇಡುವನು |
ಮಣ್ಣ ಗೋಡೆಯ ನಂಬಿ ಬಲ್ಮೆ ತೋರಬೇಡ | ತಿನ್ನೋರು ಒಂದು ಘಳಿಗೆಯಲಿ       || ೧೦೩ ||

ಮುನ್ನ ತಿಳಿದು ನೋಡು ಮುಕುಂದನೊಳು ಸೆಣಸಿ | ನಿರ್ನಾಮವಾದನು ಬಾಣ |
ಬಾಳ ತೊಲಗಿದ ಮೇಲೆ ಕಾದಾರು ಬಲವುಂಟು | ಹೇಳಯ್ಯ ಹೊರಜಗಳ ಮಾಡು   || ೧೦೪ ||

ಸಾಲದಿರ್ದರೆ ಧೈರ್ಯ ಬಾದುರನ ಹಿಡಿಕೊಟ್ಟು | ಈ ನಮ್ಮ ಪವುದಿಯ ಹೊನ್ನ |
ಆರು ಲಕ್ಷದ ಪೌಜು ಏರುವುದು ಬೆಳಗಾಗಿ | ಸಾರಿಸಿರ್ದರು ಲೆಗ್ಗೆ ಎನುತ             || ೧೦೫ ||

ಹೇಳಿಕೊಂಡೆವು ನಿಮ್ಮ ಮಾತಿಗೆ ಸ್ವಯಗೂಡಿ | ಹೇಳರಸ ಮನದ ಭೇದವನು |
ಬಾದುರನ ಕೊಡೆ ನೇಮಿ ರೋದನ ಹರಿವುದು | ಸಾಲ ಬಡ್ಡಿಯ ಕೊಡು ರೊಕ್ಕ       || ೧೦೬ ||

ಸಾಗಿಸಿ ಕೊಟ್ಟರೆ ನೀ ಎನ್ನ ಸಂತೈಸಿ | ಬಾಳಯ್ಯ ಸುಖರಾಜ್ಯನಾಳಿ |
ಹೇಜಿಬರ ನುಡಿಗಳ ಕೇಳುತ್ತ ಕಂಪಿಲ | ಭೂಮಿ ಮಂಡಲಕಿನ್ನು ಇಳಿದ                || ೧೦೭ ||

ಬಾದುರನ ಕೊಡುವುದಕೆ ತಾನೊಪ್ಪಿ ಮನದೊಳಗೆ | ತೀರುವುದು ಕ್ಷಣ ಮಾತಿನೊಳಗೆ |
ಛಲದಂಕ ರಣರಾಮ ತೊಲಗಿದ ಎನ್ನೊಳಗೆ | ಉಳುಹಿಕೊಳ್ಳಲು ತ್ರಾಣವಿಲ್ಲ         || ೧೦೮ ||

ಅ[ಗ್ರ]ಣಿ ನೇಮಿಯ ಬಳಿಗೆ ಇದಕೆ ಒಪ್ಪಿದನೆಂದು | ಅಭಯ ನಂಬಿಗೆಯು ಬರುವಂತೆ |
ಖಾನನ ಕೊಡುವುದಕೆ ಹೇಡಿ ಕಂಪಿಲನೊ [ಪ್ಪೆ] | ತಳವಾರ ಬಮ್ಮನೋಡಿ ಬಂದ    || ೧೦೯ ||

ಸ್ವಾಮಿ ಲಾಲಿಸು ಮಂತ್ರಿ ಹೇಡಿ ಕಂಪಿಲರಾಯ | ಬಾದುರನ ಪಿಡಿದು ಒಪ್ಪಿಸುವ |
ಯಾರಿಗೆ ಕೊಡುವನು ತೋರಿ ಪೇಳೆನಲು ಬಮ್ಮ | ಕಾಲಾಗ್ನಿ ಕೋಪದ ಮಂತ್ರಿ      || ೧೧೦ ||

ನೇಮಿಯ ಬಳಿಯ ಹೆಜೀಬರು ಬಂದರಸನ | ಕಾಲಗೆಡಿಸಿದರು ಭಯದೋರಿ |
ಕಾಲನ ಗತಿಗೊಂಡು ಪ್ರಧಾನಿ ಬೇಗನೆ ಬಂದು | ರಾಯಗೆ ಕರಗಳ ಮುಗಿದು         || ೧೧೧ ||

ವಾರೆಹದರದೊಳು ಇವರ ನೋಡುತ ಮಂತ್ರಿಯು | ಸಾವಿನಂದದಿ ವಿಷವ ಮೆಟ್ಟಿ ತಾ |
ರಾಯನುಸುರಿದನಾಗ ಪ್ರಧಾನಿಯೊಡನೆ ಇವರು | ನೇಮಿಯ ಬಗೆಯ ಹೇಜಿಬರು   || ೧೧೨ ||

ಬಾದುರನ ಕೊಡುವಂಥ ಸಾಲ ಬಡ್ಡಿಯ ರೊಕ್ಕ | ಸಾಗಿಸಿ ಎನುತ ಕೇಳುವರು |
ಒಪ್ಪಿದೆ ಕಾಣಯ್ಯ ಸತ್ಯ ವಚನಗಳೆಂದು | ಚಿತ್ತಕೆ ನಿನಗೆ ಸಮ್ಮತವೆ                   || ೧೧೩ ||

ಉಕ್ಕುತ ಕಾಲಾಗ್ನಿ ಊರು ಉಳಿದರೆ ಸಾಕೆಂದು | ಒಪ್ಪಿದೆನೆಂದು ಆಡಿದನು |
ಕುರುಡ ಬಯಸುವದೇನು ನಯನೇಂದ್ರಿಯಗಳಷ್ಟೆ | ಉಳುಹಿದೆಯಲ್ಲ ಅಭಿಮಾನ   || ೧೧೪ ||

ಮೊರೆಯ ಬಿದ್ದನ ಕೊಡಲು ಮಾತೆಲ್ಲಿ ಹೋದುದು ಸ್ವಾಮಿ | ಮಡದಿ ಇತ್ತುದಕೆ ಮಿಗಿಲಲ್ಲವೆ |
ಬೆನ್ನ ಬಿದ್ದನ ಕೊಡಲು ಕೊಡುವೆ ರೊಕ್ಕವ ಪೋಗಿ | ಎನ್ನಲು ಮಂತ್ರಿ ಅವರೊಡನೆ    || ೧೧೫ ||

ಏಳಿನ್ನು ಘನದೊಳಗೆ ತೋರುವುದು ಅತಿಕೋಪ | ದೂಡಿಸು ಲೆಗ್ಗೆಯನು ಹೊಡಿಸಿ |
ಕರೆದವರು ಸಮ್ಮಾನ ಮಂತ್ರಿಯು ನೀ ಮುನ್ನ | ಬೆನ್ನ ಗಾಯಗಳು ಮಾಜಿಲ್ಲ          || ೧೧೬ ||

ಬಾದುರನ ಕೊಡುವುದಕೆ ಸುರಿತಾಳನು ಬರಬೇಕು | ಮೂಳ ನೇಮಿಗೆ ಮುನ್ನ ಕೊಡೆನು |
ಹೊಡೆಯಲ್ಕೆ ಪಾಶ್ಚಯ ಬಡವನೆ ಎಲೆ ಮಂತ್ರಿ | ಸುಡು ನಿನ್ನ ಮಾತಿನ ಗರ್ವ        || ೧೧೭ ||

ಸುಡುವೆವು ಕುಮ್ಮಟವ ಕೊಡುವೆ ಲಿಖಿತವ ನಿನ್ನ | ನುಡಿದ ನಾಲಗೆಯ ತೆಗೆಯುವೆವು |
ನಾಲಗೆಯ ತೆಗೆಯಲಿಕೆ ನೇಮಿಯ ಹೆಂಡಿರ | ಹಾದರವುಂಟೆ ನೂಕಿಸುವೆ            || ೧೧೮ ||

ಬಾಯಿ ಬೆನ್ನನು ಹೊಡೆಸಿ ನೂಕಿಸಿ ಹೊರಗವರ | ಮಾಡಿ ಕಾರ್ಯವ ಎದೆಯ ಕೊಡುವೆ |
ಸ್ಥಾನಪತಿಗಳು ಬಂದು ನೇಮಿಗೆ ಕರಮುಗಿಯೆ | ಹೇಳಲಾರೆವು ಹೀನ ಸ್ವರವು        || ೧೧೯ ||

ರಾಣಿಯರ ಅಭಿಮಾನ ಸ್ಥಾನಕ್ಕೆ ಹಾಕಿದ | ಪ್ರಧಾನಿ ಆಡಿದ ಹೀನದಲಿ |
ರಾಯ ನೇಮಿಯ ಸತಿಯ ಆಳುವೆನೆಂದಲ್ಲಿ | ಜೋಡೆಯರು ಕಷ್ಟ ಕೇಳುವರೆ         || ೧೨೦ ||

ಸಾವಿರ ಚಿತ್ರವ ಮಸಿಯು ನುಂಗಿದ ಗಾದೆ | ನೋಡಯ್ಯಯ ಬೆನ್ನ ಗಾಯವನು |
ಇಂದ್ರನ ವಾಹನಕೆ ಬಂದಂತೆ ಮದವೇರಿ | ತ್ರಿಯಂಬಕ ಸುತನ ಕೋಪದಲಿ         || ೧೨೧ ||

ಮುಂದುವರಿಯಲು ಸಿಟ್ಟು ಭೇರಿಯ ಹೊಡೆಯೆಂದು | ಹಲ್ಲೆಂದು ಸಾರಿಸಿದ ನೇಮಿ |
ಮಾ[ಡ] ಲೆಗ್ಗೆಗಳೆಂಬ ವಾರ್ತೆ ಎಲ್ಲರು ಕೇಳಿ | ನುಗ್ಗಲು ನಾಲ್ಕು ಮುಖದ ಪೌಜ      || ೧೨೨ ||

ಆಕಾಶ ಭೂಮಿ ಏಕವಾಗಿಯೆ ಧೂಳು | ಅನೇಕ ಬೊಬ್ಬೆಗಳ ಮಾಡುವರು |
ಎಳೆಯಲು ಸವಾಲಕ್ಷ ಬಾಣ ಅಂಬಿನ ಮಳೆಯ | ಕರೆಯಲು ನಗರ ಮರುಳ್ವಂತೆ     || ೧೨೩ ||

ಆಗಳಾ ಲೆಗ್ಗೆಯ ಹಿಡಿದು ತೊರೆದು ಜೀವವ | ನುಗ್ಗಿ ದುಮುಕಿದರು ಏಳ್ಕೋಟೆಯನು |
ಎದೆಗೆಡದೆ ಬೈಚಪ್ಪ ಹೊಡೆಯೆನುತ ಬಂಟರಿಗೆ | ಕೊಡುವ ಧೈರ್ಯಗಳ ಕಲಿಮಾಡಿ  || ೧೨೪ ||

ಹೂಡುವ ಪೆಟಲು ಬಾಣ ಸುತ್ತಿ ಈ ಪರಿಯೊಳಗೆ | ಉರಿಯುತೆ ಪೆಣ ತುರುಕರನು |
ಖಾನರ ಕೋಳಾಹಳ ಬಾಣ ಸರಳ ನೋಡಿ | ರಾಯ ಕಂಪಿಲ ತಲ್ಲಣಿಸೆ              || ೧೨೫ ||

ಬಾಯೊಳು ದ್ರವಗುಂದಿ ದೇಹದಿ ನಡಗುತ | ಶಾಂತಿಯಿಂದೆನ್ನ ಸ್ಥಿತಿಯು |
ತಾವರೆ ಎಲೆ ಉದಕ ನೀರು ತಲ್ಲಣಗೊಂಡು | ಭೋರಿಡಲು ಪುರವು ಜರ್ಝರಿಸಿ      || ೧೨೬ ||

ರಾಯ ಕಂಪಿಲ ಕಂಡು ತೀರಲು ಎದೆಗೆಟ್ಟು | ಬೇಗ ಕರೆಯೆನಲು ಮಂತ್ರಿಯನು |
ಪೇಳಲು ಚರರಾಗ ರಾಯನ ಪ್ರತಾಪ | ಹೇಳಿದ ಮಂತ್ರಿ ಎಲ್ಲರಿಗೆ                    || ೧೨೭ ||

ಹೋಗಿ ಬರುವನಕ ಊರು ನಿಮ್ಮದು ಜೋಕೆ | ಆಮೇಲೆ ನೇಮಿ ಓಡುವನು |
ಎಂದೋಡಿ ಬಂದನು ಸದರಿಂಗೆ ರಾಯಂಗೆ | ಕರಮುಗಿದು ದಯಮಾಡಿ ಎಂದ      || ೧೨೮ ||

ಬಿಡು ಮಂತ್ರಿ ಇನ್ಯಾಕೆ ಅಗಳ ಸೇರಿದ ಬಳಿಕ | ಮಡಗಯ್ಯ ಎನ್ನ ವಂದನೆಯು |
ಹೇಳುವರೆ ಬಾಯಿಲ್ಲ ಕೇಳೆನ್ನ ಮಂತ್ರೀಶ | ಯೊಂದಸಂತೆ ಹೊರಕೋಟೆ             || ೧೨೯ ||

ರಾಯ ರಾಮನ ಕೊಂದು ಖಾನರ ಕೈಲಳಿದ | ಪೂರ್ವದ ಫಲಸರವಿತ್ತು |
ಸತ್ತ ರಾಮನುಯೆಂದು ಅತ್ತರೆ ತೀರದು | ರತ್ನಿಯ ಕರೆಸಯ್ಯ ಭೂಪ                  || ೧೩೦ ||

ಮುತ್ತಿಗೆ ತೆಗಿಸ್ಯಾಳು ಪುತ್ರನ ಕೊಂದವಳು | ಕತ್ತೆ ಸೂಳಿಗೆ ಪೇಳಿ ನೋಡು |
ನಾಡಸೂಳೆಯ ಮಾತ ಆಡಿ ಹಂಗಿಸಬೇಡ | ಜೋಡಿಗೆ ಕಡೆಯಾಗೆ ಮಂತ್ರಿ          || ೧೩೧ ||

ಸಾವಿರ ಮಾತೇಕೆ ಪ್ರಾಣವ ಕಳಕೊಂಬೆ | ಖಾನರ ಕೈಗೆ ಸಿಕ್ಕಿದಂತೆ
ಭೀಮನ ಕೊಂದವಳಿಗೆ ನೇಮಿಯು ಇದಿರುಂಟೆ | ಓಡಿಸಳೆ ಒಂಟಿ ಕುದುರೆಯಲಿ     || ೧೩೨ ||

ಮೂಳಿಯ ಮಾತಿಗೆ ಬಾಲನ ಕೊಲುವಾಗ | ಕೂಡಲಿಲ್ಲವೆ ಈ ಬುದ್ಧಿ |
ಯಾಕಯ್ಯ ಬೈಚಪ್ಪ ಕಾಕು ಮಾಡಲಿ ಬೇಡ | ಇಡಿಸಯ್ಯ ಮೂಗಿಗೆ ಸುಣ್ಣ             || ೧೩೩ ||

ಭೂಪ ರಾಮನ ಕೊಂದು ಬ[ಯ]ಲಿಗೆ ಬಾಯ್ಬಿಡುವ | ಪ್ರಾಪ್ತಿಯ ತಾ ಮಾಡಿಕೊಂಡಿ |
ಕಪ್ಪವ ಕೊಡುವುದಕೆ ಒಪ್ಪಿದೆ ಎಲೆ ಮಂತ್ರಿ | ಮೊರೆಹೊಕ್ಕ ಬಾದುರನ ಹಿಡಿಕೊಟ್ಟು   || ೧೩೪ ||

ಮುತ್ತಿಗೆಯ ತೆಗೆಸಲೆ ಇಕ್ಕಿದೆ ಬೆಂಕಿಯ | ಪಟ್ಟದ ದೊರೆಯು ನೀನಾದೆ |
ಕಡಿವ ತ್ರಾಣಿಲ್ಲದೆ ಮಡದಿ ಬೇಡಲು ಕೊಟ್ಟು | ಉಳುಹಿಕೊಂಬರೆ ಹಾಯಗೊಡದೆ     || ೧೩೫ ||

ಕಡಿಸಬೇಕೆಂಬ ಛಲವ ತೊಟ್ಟವ ನೀನು | ಬಿಡು ಬಲ ಮಾಡಿಕೊಳ್ಳಯ್ಯ |
ಮಾತಿಗೆ ಬಂದವರ ಭಂಗಿತವ ಮಾಡಿಸಿ ಬಿಟ್ಟೆ | ಮಾತಿಗೆ ಗು[ರಿ]ಯು ತಾನಾದೆ     || ೧೩೬ ||

ಸಾಕಯ್ಯ ದೊರೆತನ ಸಾವೆನು ವಿಷ ಕುಡಿದು | ಭೂಪತಿಯಾಗಿ ನೀನಾಳು |
ನುಡಿವ ನಿಷ್ಠುರವ ಪ್ರೌಢ ಮಂತ್ರಿಯು ಕೇಳಿ | ಸಯಸ್ವರವ ಮಾಡಬೇಕೆನುತ         || ೧೩೭ ||

ಭೂಪನೆ ಲಾಲಿಸು ಭಯಬೇಡ ಕಡಿವಂಥ | ಬಿರಿದಂಕರಿಲ್ಲವೊ ಧರೆಯೊಳಗೆ |
ರಾಜೇಂದ್ರ ಲಾಲಿಸು ನೀ ಕಾಳಗೆಡಲುಬೇಡ | ನಾನು ಒಬ್ಬನ ಕರೆಸುವೆ ನಾ          || ೧೩೮ ||

ಬೇಡಿದ ಸಂಬಳವ ಕೊಡುವ ನಿರ್ಧರ ಪೇಳು | ರಾಮಗೆ ಮಿಗಿಲಾದರ ತರುವೆ |
ಕರೆಸುವೆನೆನಲಾಗ ಕಲಿಯಾಗಿ ಕಂಪಿಲನು | ಜಗದೊಳಗುಂಟೆ ಅಂಥವನು          || ೧೩೯ ||

ಮರಣ ಕಾಲದಿ ಬಂದು ಬವರವ ಗೆಲಿದವಗೆ | ಇರುವ ರಾಜ್ಯದಿ ಅರ್ಧ ಕೊಡುವೆ |
ಕೊಡುವ ದಾತನು ಇಲ್ಲ ಕಡಿವ ಬಂಟಗೆ ಏನು | ಧರಣಿಯ ಮೇಲೆ ಕಡೆಯುಂಟೆ       || ೧೪೦ ||

ಗಿಡದೊಳು ಮರುಜೆವಣಿ ತೆರನಾಗಿ ಅಡಗಿಹರು | ಕರೆಸೆನಲು ಈಗ ಕರೆಸುವೆನು |
ಕರೆಸುವೆ ನಿಮ್ಮೊಳು ನಿಜ ಕರವು ಉಂಟಾಗೆ | ಪರದೇಶದಿಂದ ರಾಹುತನ           || ೧೪೧ ||

ದೊರೆ ನೇಮಿ ದಂಡನು ಹೆದ್ದೊರೆಯ ದಾಂಟಿಸಿ ಬರಲು | ಸರಿ ಮಾಡು ಅವನ ಸಂಬಳವ |
ಅವನೆ ನನ್ನಯ ಮಗನು ಅವನೆ ಎನ್ನಯ ತಂದೆ | ಅವ ಎನ್ನ ವಂಶಾಬ್ಧಿ ತಿಲಕ        || ೧೪೨ ||

ಅವನೀಗ ಹರಿಹರದೇವಿ ಗರ್ಭದಿ ಬಂದ | ಅವನೀಗ ರಾಮನು ಎಂಬೆ |
ಕರೆ[ಸುವೆ] ಪ್ರಧಾನಿ ಕೊಟ್ಟೆ ನಂಬುಗೆ ಮುನ್ನ | ತೆಗೆದಿಡಲು ಬಣ್ಣ ತಿಂಬುವೆಯ        || ೧೪೩ ||

ಬರುವುದೆಂದಿಗೊ ಕಾಣೆ ಹೋದ ಬಳಿಕವು ಊರ | ಫಲವೇನು ಮಂತ್ರೀಶ ಬಂದು |
ಕರೆಸಲೆ ರಾಜೇಂದ್ರ ಗಳಿಗೆ ಮೂರರ ಒಳಗೆ | ಬಿಜಮಾಡಿ ಸೆಜ್ಜೆಯ ಗೃಹಕೆ            || ೧೪೪ ||

ಹರಿದು ಬಂದನು ಮಂತ್ರಿ ಸುಳುಹುಗಾಣದ ರೀತಿ | ನೆಲಮನೆಯ ಬೀಗ ಒಡೆದನು |
ಕದಗಳ ತಟ್ಟಿನ್ನು ಕರೆಯಲು ಮಂತ್ರಿಯು | ಸ್ವರವ ಕೇಳಿದನು ಕಾಟಣ್ಣ                || ೧೪೫ ||

ವರ ಮಂತ್ರಿ ಬಂದಹನೆನುತ ರಾಮಗೆ ಪೇಳೆ | ಹರುಷದೊಳಗೆ ಎದ್ದು ಬರಲು |
ಬಂದೆನೊ ಮಂತ್ರೀಶ ಚೆಂದವೆ ಸ್ಥಿತಿಗತಿಯು | ರಾಜೇಂದ್ರ ಕ್ಷೇಮದೊಳಿಹನೆ         || ೧೪೬ ||

ಕ್ಷೇಮವ ಸುಡು ಪುತ್ರ ಪ್ರಾಣಳಿವ ಕಾಲವು ಬಂತು | ನೇಮಿಯ ಬಲದಂದು ಮುತ್ತೆ |
ಪುರ ಮುಳುಗು ಕಾಲವು ಬಂತು ಭೂಪ | ನೆಂತು ಅದಳು ಜೀಬಿಯನು               || ೧೪೭ ||

ರಾಮನು ಮುಖ ಅಡಿಯ ಸೇರಿದನು ಅರಮನೆಯ | ಕಾಯಬೇಕೆಂದು ಪ್ರಾಣಗಳ |
ಕಂದನ ಕೊಂದಾಳೆ ಕಡಿಯಲಾರಳೆ ದಂಡವ | ಒಡನೆ ಕರಕೊಂಡು ಗಂಡನ         || ೧೪೮ ||

ರಂಡೆ ನೋಡಲು ಬೇಡ ಹಡೆದಾಕೆ ಬೆಳಗಾಗಿ | ಹನ್ನೊಂದನು ಮರೆದು ದಯಮಾಡಿ |
ಬಾಳೊಂದು ಪೇಳುವೆ ವ್ಯಾಳ್ಯವು ತನಗಿಲ್ಲ | ಬಾದುರನ ಹಿಡಿಕೊಡುವನರಸು        || ೧೪೯ ||

ಪಾದಕೆ ಹೀನಾಯ ಭೂಮಿಯಿರಲು ಬಿಡೆನು | ಖಾನರ ದಂಡೆಲ್ಲ ನೋಡಿ ಬಂದೆನೆನುತ |
ಮೊರೆಯ ಬಿದ್ದ ಕೊಡಲು ಯಮನ ಭಾಗಕೆ ತನಗೆ | ತೆಗೆಯೆನಲು ಲಾಳ [ಗುಂ]ಡಿಗೆಯ       || ೧೫೦ ||

ಸಿಡಿಲಂತೆ ಘುಡುಘುಡಿಸಿ ಶಿರವನರಿವೆನು ನೇಮಿ | ಮರೆದನೆ ಪ್ರಾಣ ಕಾಯ್ದವನ |
ಕಮಲಜನ ಪಿತನ ತನುಜ ರೂಪನು ಪೊರಡೆ | ಎರಗಿದ ಮಂತ್ರಿ ರಾಮನಿಗೆ         || ೧೫೧ ||

ಧುರಧೀರ ಕಾಟಯ್ಯ ಕರವ ಗಲ್ಲವ ಪಿಡಿದು | ಹರುಷದಿ ಲಿಂಗ ನಾಗಯನು |
ರಾಮನ ಸರಿಯರು ಪ್ರಧಾನಿಗೆ ನಮಸ್ಕರಿಸೆ | ಪ್ರೇಮದಿ ಪಿಡಿದೆತ್ತಿ ಹರಸಿ             || ೧೫೨ ||

ಓರಂತೆ ಎಲ್ಲರ ಒಡಗೊಂಡು ತನ್ನಯ | ರಾಜಮಂದಿರಕೆ ಕರೆದೊಯ್ದು |
ಸ್ನಾನಪಾವನ ಮಾಡಿ ಷಡುರಸಾನ್ನವ ಸವಿದು | ಆಭರಣ ಭೂಷಣಗಳ ಧರಿಸಿ       || ೧೫೩ ||

ಕಾಲ ಪೆಂಡೆವು ಕಡಗ ವೀರಕಂಕಣ ಮುದ್ರೆ | ಸ್ಥಾನ ಸ್ಥಾನಕೆ ಧರಿಸಿದನು |
ತರಿಸಿದ ತನ್ನಯ ತೇಜಿಯವನು ನೋಡಿ | ಮತ್ತೆ ಮೈದಡವಿ ನೇವರಿಸಿ              || ೧೫೪ ||

ಒಡೆಯನ ಕುರುಹರಿತು ಕುಣಿಯುತ್ತ ತರದೊಳು | ಕುಡಿಯಲು ನೀರ ಕಳವಳನು |
ತೇಜಿ ಶೃಂಗರವಾಗಿ ರಾಯ ರಾಮನ [ನೋಡೆ] | ರಾಣೆರಾರತಿಗಳ ಬೆಳಗೆ           || ೧೫೫ ||

ನೇಮಿಖಾನರ ಬಲವ ರಣಭೂಮಿಗಾಹುತಿ ಮಾಡಿ | ಭಾ[ವೆ] ರಮಣಗೆ ಶ್ಯಾಸೆ ಇಡಲು |
ಕುರುಹ ಕಾಣದ ತೆರಕೆ ತೊಡಿಸಿ ವಜ್ರಾಂಗಿಯ | ಹೊರಡಲೈವರು ತೇಜಿ ಏರಿ        || ೧೫೬ ||

ಬರಲಾಗ ಪುರಜನರು ಬೆರಗಾಗಿ ಕೇಳಲು | ಇವರಾರು ಎನುತ ಮಂತ್ರಿಯನು |
ಎಲ್ಲಿಂದ ಬಂದನು ಹೊಸ ರಾಹುತನೆಂದು | ಎಲ್ಲರು ಕೇಳೆ ಮಂತ್ರಿಯನು             || ೧೫೭ ||

ಕಲ್ಯಾಣಪುರದಿಂದ ಕರೆಸಿದೆ ಎನುತಲಿ | ಮತ್ತಲ್ಲಿ ನಡೆದರು ಬೀದಿಯಲಿ |
ಆರು ತಿಂಗಳು ಹುಲ್ಲು ನೀರನು ತೊರೆದಿರ್ದು | ಏರುವ ಒಡೆಯನಿಲ್ಲದಲೆ             || ೧೫೮ ||

ಏರಿತು ಶಕ್ತಿಯು ಇಮ್ಮಡಿಯಾಗಿ | ಹಾರಲು ಹುಲ್ಲೆಯಂದದಲಿ |
ಮೂಡಣ ದಿಕ್ಕಿನ ಬಾಗಿಲ ಹುಲಿಮುಖದ | ಮೇಲಣ ಶಶಿಮಾಮಿ ನಡೆಯೆ             || ೧೫೯ ||

ನೋಡುತ್ತ ನಿಲ್ಲಲು ಪ್ರಧಾನಿ ಬೇಗದಿ ಬಂದು | ರಾಯ ಕಂಪಿಲನು ಇದ್ದೆಡೆಗೆ |
ತಂದೆನು ಎಲೆ ಭೂಪ ಎಂದ ಮಾತಿಗೆ ನೋಡು | ಹಿಂದಾಗನೆಂಬುದನರಿಯಾ       || ೧೬೦ ||

ಮುಂದವರು ಎಲ್ಲೆಂದು ರಾಯ ಕೇಳಲು ದಂಡ | ಕೊಂದಲ್ಲದೆ ತಾ ಬರೆನೆಂದ |
ರಾಯ ರಾಮಗೆ ಮಿಕ್ಕ ಧೀರನೆಂಬುವ ಸುದ್ಧಿ | ಕೇಳಿಬಲ್ಲನು ಬಹುದಿವಸ              || ೧೬೧ ||

ಹೇಳಿ ಕಳುಹಲು ಮುನ್ನ ವಾಯು ಗಮನದಿ ಬಂದ | ಪ್ರಾರಬ್ಧ ಹ್ಯಾಗಿಹುದೊ ನಮ್ಮ |
ರಾಮನ ಪೋಲ್ವರು ಭೂಮಿ ಮಂಡಲಕುಂಟೆ | ಭೀಮನಲ್ಲವೆ ಕಲಿಯುಗಕೆ            || ೧೬೨ ||

ತಾಮಸ ಮಾಳ್ಪನೆ ದಂಡನು ಕಾಣಲು | ಮಂತ್ರಿ ಒರೆವ ಸಿಡಿ ಹೊಡೆದಂತೆ |
ಹೆಸರ್ವಡೆದ ರಾಹುತನು ಹಸುಮಗನಾದರು | ಪುಸಿಯುಬಾರವು ರಣದೊಳಗೆ       || ೧೬೩ ||

ದಶರಥ ಮಗನ್ಯೂರಿಯ ನಗರನು ಸುಟ್ಟಂತೆ | ಪ್ರತಿ ಹನುಮನೆಂದು ಕರೆಸಿರುವೆ |
ಆವ ದೇಶದೊಳಿರ್ದ ರಾಯಮಂತ್ರಿಯೊ ನೀನು | ಹೇಳಿದಾಕ್ಷಣ ಬರುವುದಕೆ         || ೧೬೪ ||

ಆವ ಕಾಲದೊಳಿವನ ಬೇಹ ಮೂಲವ ಪಡೆದೆ | ರಾಯ ಕೇಳಿದನು ನಸುನಗುತ |
ಪೇಳುವೆ ಬಂದಿರುವ ಬಾಧಕ ಕಳೆದಾಗ | ವ್ಯಾಳ್ಯ ವಿವರವ ಮಾಡುವುದೆ             || ೧೬೫ ||

ಹೋಗಿ ಬರುವೆನು ರಾಯ [ಸಾ]ರಂಗ ಸ್ವಾರಿಯನೆಂದು | ಸಾರಿದ ಮಂತ್ರಿ ಸದರಿಂಗೆ |
ಬಾದುರಖಾನನ ಕರ್ಣದೊಳಗೆ ಹೇಳಿ | ಬಾಗಿಲ ತೆಗೆದು ಜಗಳಕೆ                    || ೧೬೬ ||

ಪ್ರಾಣವ ಕಾಯ್ದುಕೋ ಭೀಮನಿರಲು ತನಗೆ | ಏನು ಭಯವೆಂದು ಏರಿದನು |
ಬಾದುರನ ಬೆನ್ನೊಡನೆ ಹದಿನಾರು ಸಾವಿರ ಮಂದಿ | ಏರಿದರು ಕಾಕ್ಹೊಡೆಯುತಲಿ   || ೧೬೭ ||

ರಾಮ ಬಂದನು ಎಂದು ಬೆದರಿ ತುರುಕರ ಪೌಜು | ಏರಲು ಸರಳ [ನೆರೆ] ತೆಗೆದು |
ಹೊಕ್ಕು ಬಾದುರಖಾನ ಕುಟ್ಟುತ ಒಂದೆರಡು | ಹೆಚ್ಚಿಸಿ ತರಿದನು ಕೊರಳ             || ೧೬೮ ||

ನಂಪ ಕಂಡರು ಬೇಗ ಬಾದುರಖಾನಂದು | ಭೋರನೆ ಹಿಂದಕ್ಕೆ ತೆಗೆದ |
ಬಿಡದಿರಿ ಬಾದುರನ ಹಿಡಿಯೆಂದು ಕೈಸೆರೆಯ | ಹೊಡೆಯಲು ಪಕ್ಷ ಪೌಜು            || ೧೭೦ ||

ಒಡನೆ ಬಾಗಿಲ ದಾಂಟಿ ಬಿಡಿಕೊಂಡು ಕರಗಳನು | ಹಿಡಿ ನನ್ನ ಲವುಡಿ ನೀನೆನುತ |
ಹೊಕ್ಕರು ಖಾನರು ಹೂಂಕರಿಸಿ ಆರ್ಭಟಿಸುತ್ತ | ಮುತ್ತಲು ಮುನಿದು ಪಲ್ಲಣವ        || ೧೭೧ ||

ಕುಟ್ಟಿ ಕೋಲಾಹಳ ಮಾಡೆ ಕಹಳೆ ಭೇರಿಗಳಿಂದ | ಕಿತ್ರನ ಮಳೆಯ ಕರೆಸುತಲಿ |
ಖಾನ ವಜೀರರು ತಾವಲ್ಲದೆ ಮುಖವಾಗಿ | ಬೆರಗಾದ ತುರಗ ರಾಹುತರು            || ೧೭೨ ||

ವಾರಂತೆ ಮುಖವಾಗೆ ಜೇನ್ನೊಣ ಕಡಿದಂತೆ | ನೋಡುವನು ರಾಮ ನಗುತ |
ವಸ್ತಿರೆ ಮಾಮಯ್ಯ ಲೆಸ್ತಿ ಅಡಗಲುಗಿ ನಲ್ಲಮ್ಮ | ನೀವು ಮಾಡಿ ಬಂದಿರೆ ಗೋರಿಸ್ಥಳವ         || ೧೭೩ ||

ಮಿಸುಕಿಲಿ ಮಾಡೇವು ಬಕರಿಗಳ ಕರಿದಂತೆ | ಮುಸಲಮಾನರು ಏರಿದರು |
ತೂಗುತ ತಲೆಗಳ ನೀಡುತ ಜರ್ಝರಿಯ | ಏನೆಂಬೆ ಕೊಟ್ಟೆಕೊಡು ಬಿಡುವೆ          || ೧೭೪ ||

ಬಿಚ್ಚಿಖಾನನು ಬರಲು ಹದಿನಾರು ಸಾವಿರದೊಳು | ಮೀರಿ ಮದಕರಿಯ ಅಹುದೆಯಲಿ |
ಭೀಮಖಾನರು ಕೊಳ್ಳೆ ಮೊದಲಾಗಿ ಸಲ್ಲಾಮು | ನಾವು ಮಾಡಿ ಬಂದಿರೆ ಗೋರಿ ಸ್ಥಳವ        || ೧೭೫ ||

ಜಾವಿಗೆ ಪೆಟ್ಟಲು ಮೂಡಿ ಎದೆಯೊಳು ಗುಂಡು | ಅಲ್ಲಾ ಖುದಾಯೆಂದು ಒರಗಿದರು |
ಕಾಲನ ಗಗನಕ್ಕೆ ಜಜ್ಜಾರೆ ಜಾಯೆಂದು | ದದ್ಧುರಖಾನ ಹೊಗಲೇರಿ                   || ೧೭೬ ||

ಕೋಡಾರೆ ಎನುತಲಿ ಮುಖವ ನೋಡದೆ ಸುಗಿದ | ಮುರಾರು ಸಾವಿರ ಬಲದಿ |
ಕೊಡು ಲವುಡಿ ಕೊಯ ಕಡಿಕಡಿ ಮಾಡುವುದ್ಯಾಕೆ | ತುಟಿ ಸಹಿತ ಮೂಗ ಕೊರೆವೆನು  || ೧೭೭ ||

ಉಳಿದರಲು ಕೊರೆವಂತೆ ಒಡೆಯ ಲೆಂಕೆಯ ಹನುಮ | ಒಡಲೊಳು ಮೂಡಿ ತಾಟಿಯೊ       || ೧೭೮ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನು ಬಂದು ರಣವ ಕಡಿವಲ್ಲಿಗೆ | ಮುಗಿದುದು ಹದಿನಾರು [>ಹದಿನೇಳು] ಸಂಧಿ   || ೧೭೯ ||[1]

[1] + ಅಂತು ಸಂಧಿ ೧೬ಕ್ಕಂ [>೧೭ಕ್ಕಂ] ಪದನು ೩೫೫೭ಕ್ಕಂ ಮಂಗಳ ಮಹಾಶ್ರೀ (ಮೂ)