[1]ಶ್ರೀ ಗುರು ಹರ ಶಂಭು ಭಾಗೀರಥೀಶನೆ | ನಾಗಭೂಷಣನೆ ನಗಚಾಪ |
ಭೂಮಿ ಬ್ರಹ್ಮಾಂಡಗಳಿಗೆ ಆಧಾರ ಕರ್ತನೆ | [ವೃಷಭ] ವಾಹನ ಕೊಡು ಮತಿಯ || ೧ ||
ಮತಿಯನು ಪಾಲಿಸು ಮೊರದಗಲ ಕರ್ಣ[ನೆ] | ಸುಖದೋ [ರು] ಕರಿಮುಖದವನೆ |
ಅಖಿಳ ಬ್ರಹ್ಮಾಂಡಕ್ಕೆ ಅಧಿಕಾರಿ ವಿದ್ಯದ | ಗಣಪತಿಯೆ ಕೊಡು ಎನಗೆ ಮತಿಯ || ೨ ||
ಬಾಯೊಳು ಇರುವಾಕೆ ನಿಜವೆ ಅಕ್ಷರದ | ರಾಣಿಯೆ ವನಜಸಂಭವಗೆ |
[ಸತಿಯಾಗಿ] ಬಂದೆನ್ನ ಜಿಹ್ವೆ ಭಾಗದಿ ನಿಂದು | ಸಾಗಿಸು ಮುಂದಣ ಕೃತಿಯ || ೩ ||
ಕಾಶಿ ಕೈಲಾಸಕ್ಕೆ [ಲೇಸು] ವೆನಿಸುವ ಹಂಪೆ | ಗೌರೀಶ ವಿರುಪಾಕ್ಷಲಿಂಗ |
ಲೇಸನು ಕರುಣಿಸು ಪ್ರಾಸ ಬೀಳದ ತೆರದಿ | ರಾಮನ ಕೃತಿಯ ಪೇಳುವೆನು || ೪ ||
ಸತ್ಯರಾಮನ ಕೃತಿಯ ಲಾಲಿಸಿ ಕೇಳಿ[ರಿ] | ಉತ್ತಮರು ಭಕ್ತಿಜ್ಞಾನಿಗಳು |
ತಪ್ಪಲ್ಲ ತರಳನು ಸತ್ಯಕ್ಕೆ ನಡೆದಾನು | ಕತ್ತಲೆ ಬೆಳಕೆಂದು ತಿಳಿದು || ೫ ||
ಹಾಲನು ಕುಡಿ[ಸನು] ಮೂ [ಳ] ಎನ್ನಲಿ ಬೇಡ | ಹೀನಗಾಣಲು ನಿಮ್ಮ ಮನಕೆ |
ದ್ರೋಹಿಯ ವಚನಾರ್ಥ ಕೇಳಿ ಫಲವಿಲ್ಲೆಂದು | [ಆ]ಡಲು ನಿಂದೆ ತನಗೇನು || ೬ ||
ಸತ್ಯದಲಿ ನಡೆದವ[ರು] ಪೃಥ್ವಿಯೊಳ್ ಶರಣ[ರು] | ಹುಟ್ಟಬಾ[ಹರು] ಪ್ರತಿಯಾಗಿ |
ಲಕ್ಷ ಉಳಿ ಕೊಡತಿಯ ಪೆಟ್ಟು ನಿರ್ವಹಿಸದೆ | ಸೃಷ್ಟಿಯೊಳ್ ಲಿಂಗವೆನಿಸುವುದೆ || ೭ ||
ಹರನಾಗೆ ಹರಿಯಾಗೆ ಪರಬ್ರಹ್ಮ ಋಷಿಯಾಗೆ | ಧರೆಯಾ[ಗ] ನರಕ ಭಯ ಪಡೆದು |
ಪರ[ಸತಿ]ಯ ತನ್ನಯ ಹೃದಯದಲ್ಲಿ[ಯೆ] ನೆರೆಯೆ | ಸ್ಮರಣೆ ಕೇಳಲು ಫಲವುಂ[ಟೆ] || ೮ ||
ಬಾಯೊಳು ಬ್ರಹ್ಮತ್ವ ನಡೆಯೊಳು ನೀಚನ | ನುಡುಗೇಳಿ ಎಡಬಲ ಸುಳಿಯೆ |
ತೊಡರದೆ ಭವಕರ್ಮ ತ್ರಿಶಂಕು ಹೊತಿಗೆ ಮೆಚ್ಚಿ | ಸುಡಗಾಡ ಕಾಯ್ದು ಅಭವ ಕಂಡ || ೯ ||
ಕೀರ್ತಿಗಳು ಅಪಕೀರ್ತಿ ಭೂಮಿಯಲಿ ಸ್ಥಿರತರವು | ಹೊದರ ಮಾತು ತನಗೇಕೆ |
ಆಡಿದ ಚೆಂಡ್ಹೋಗಿ ಅರಮನೆಯ ಸೇರಲು | ಚೆನ್ನಿಗ ರಾಮ ಚಿಂತೆ ಮಾಡುತಲಿ || ೧೦ ||
ತಾಯಿ ಹೇಳಿದ ಮಾತು ತಲೆಯ ತಾಕಿತು ಅಣ್ಣ | ಮಾಯದ ವಿಧಿಯಂಥ ಚೆಂಡು |
ಹೋಗಿ ಬಾ ಅಣ್ಣಯ್ಯ ತಾಯಿ ರತ್ನಿಯ ಮನೆಗೆ | ಕೇಳಯ್ಯ ಚೆಂಡ ದೈನ್ಯದಲಿ || ೧೧ ||
ಹೋಗಲು ತನಗೇನು ಅನುಮಾನ ಬಡುವೆನೆ ತಮ್ಮ ರಾಯನಿಲ್ಲದ ಅರಮನೆಯು |
ಬಾಲೆಯರ ಮನಚಿತ್ತ ಕಾಣದು ಹೋಳವ | ಆವ ಕಡೆಗಾಡುವಳೊ ಕಡೆ ಮಾತ || ೧೨ ||
ಅರಸಿರಲು ಚೆಂಡಲ್ಲಿ ಬೀಳ್ವ ಸಮಯದಿ ಪೋಗಿ | ಘಳಿಲಸೆ ತರುವೆ ನಿಲ್ಲುವೆನೆ |
ಕುಲವಲ್ಲ ಅದರೊಳು ಕಲೆಗಾತಿ ಭುವನದ | ಹಲವರೆಂಜಲನು ತಿಂದವಳು || ೧೩ ||
ವಿಭೂತಿ ಧರಿಸಿದ ಮೂಲವೇತಕೆ ತರುವೆ | ಬಾಲರೆಂಬುದ ಅರಿಯವದಳೆ |
ಮಾಡಿದ ಫಲಪದವ ಯಾರು [ಉಂ]ಬರು ಅಣ್ಣ | ವಿಚಾರಕರ್ತನೆ ಅದಕೆ ಬೇರೆ || ೧೪ ||
ತಾಯೊಡನೆ ಅನ್ಯಾಯ ನಾವು ಹುಡಕಲು ಸಲ್ಲ | ಭಾವಿಸದೆ ಸತ್ಯಭಾವೆಂದು |
ನೀ ಹೋಗಿ ಕರಮುಗಿದು ಪ್ರಿಯದಿಂದಲಿ ಕೇಳು | ದಯಮಾಡಿ ನೀ ತರಲಿ ಬೇಕು || ೧೫ ||
ಅನುಜರಿರ್ವರು ಆಡುವ ನುಡಿಯ ವಚನವ | ನಾಡ ಮನ್ನೆಯರೆಲ್ಲ ಕೇಳಿ |
ಏನು ಒಳಗಣ ಗಾತ್ರ ಪಾಲಿಸೆಮಗೆ ವೀಳ್ಯ | ಬಾಯ ಮೇಲ್ಹೊಡೆದು ತರುವೆವು || ೧೬ ||
ಸತಿಯ ಮಾತಿಗೆ ರಾಯ ಮಥನಿಸಿ ಬರುವನ | ಹೊಸಮಲೆ ಕುಂಭಿನಿಯಲ್ಲಿ |
ಮತಿಭ್ರಮೆ ತಿಳಿವನ ಮಡ[ಗಿ]ನ್ನು ಸೆರೆಯೊಳಗೆ | ಹೊಸಪಟ್ಟ ನಿಮಗೆ ಮಾಡುವೆವು || ೧೭ ||
ಸ್ನೇಹಿತರ ನುಡಿಗೇಳಿ ಕರ್ಣದಿ ರಾಮಯ್ಯ | ಗಹಗಹಿಸಿ ನಗಲು ಶಿವಯೆನುತ |
ಯಾವಲ್ಲಿ ಈ ಕರ್ಮ ತಾ[ನು] ಕಳೆಯಲಿಬಹುದು | ಮೂ [ಲ]ಕರ್ತನ ಕೊಂದರುಂಟೆ || ೧೮ ||
ಲಾಲಿಸಿ ಎಲ್ಲವರು ಪೇಳುವೆ ಧರ್ಮವಾಕ್ಯ | ಮೀರಿದರೆ ಹಾಗೆ ಮಾಡುವುದು |
ಹಾಲ ಕುಡಿಸಲು ಕಷ್ಟ ರೋಗವು ಬಂದಲ್ಲಿ | ಸ್ನೇಹದಿ ವಿಷವ ಮೆಲ್ಲಿಸರೆ || ೧೯ ||
ತೃಣ ಮಾತ ಪರ್ವತಕೆ ಸಮನೇಕೆ ಮಾಡುವಾ | ನವತಂತ್ರಮಾಡಿ ತರಿಸುವೆನು |
ಕಳುಹುವೆನು ಅಣ್ಣಯನ ತಿಳಿವುದಕೆ ಈ ಭೇದ | ಕೊಡುವಳೊ ಕಲಹ ಮಾಡುವಳೊ || ೨೦ ||
ರಾಯ ರಾಮನು ಹೀಗೆ ಉಪಾಯ ತಂತ್ರಗಳನು | ಪೇಳುತಿರುವನು ಎಲ್ಲರಿಗೆ |
ಗಾಡಿಕಾತಿಯು ರತ್ನಿ ತಾ ಬರಲು ಅಂಗಳಕೆ | ಉರುಳಾಡುವ ಚೆಂಡ ಕಂಡು || ೨೧ ||
ಕಂಡಳು ಕಾತರದಿ ರಂಭೆ ಪ್ರಿಯನ [ಚೆಂಡ] | ಸಂಭ್ರಮದ ಶರಧಿಗೆ [ಚಂದ್ರ] |
ಬಂದಂಥ ಒಲವಾಗಿ ಬಾಚಿ ತಬ್ಬಿ [ದಳ್ ತನ್ನ ] | ಕುಂಭಕುಚದ ನಡು ಮಧ್ಯೆ || ೨೨ ||
ಬೇಡಿದ ಹರಕೆಯ ದಯಮಾಡಿದ ಹರ ಶಂಭು | ಶ್ರೀ ಗೌರಿಪ್ರಾಣದೊಲ್ಲಭನು |
ತಾವರೆ ಸಖ ಬರಲು ಬಾಯ ಬಿಡುವಂದದಿ | ಮುಂದಾಡುತ ಚೆಂಡ ಮೋಹಿಪಳು || ೨೩ ||
ಬಾಡಿದ ವೃಕ್ಷಕ್ಕೆ ಮಳೆಗಾಲವಾದುದು ದೇವ | ಸತ್ಕೃಪೆಯು ತನಗೆಂ[ದಳು] ರತ್ನಿ |
ಜೀವಳಿದ ಕಾಲದಿ ಮರುಜೆವಣಿ ದೊರೆತಂತೆ | ಪ್ರಿಯಗಾರನ ಚೆಂಡು ಬಂತು || ೨೪ ||
ಸಾಯಬೇಕೆನುತಿರ್ದೆ ತಾಯೆ ಕೇಳೆಲೆ ಸಂಗಿ | [ಆ]ದೇವರಿಗೆ ದಯೆ ಬಂತು |
ಪ್ರಾಣ ಅಳಿವಳುಯೆಂದು ರಾಮನ ಮನಹೊಕ್ಕು | ಮುಂದಾಗಿ ಕಳುಹಿದನು ಚೆಂಡ || ೨೫ ||
ತಂದಳು ಚೆಂಡನ್ನು ಹರುಷ ಶಾಂತಿಗಳಾಗಿ | ಹರ [ಹರ] ಸೆಜ್ಜೆ ಗೃಹದಲ್ಲಿ |
ಹರುಷದಿ ಮಂಚವ ರಚಿಸಿ ಹಾಸಿಗೆ ಮಾಡಿ | ಇರಿಸಿ ಪೂಜಿಸಲು ಪರಿಪರಿಯ || ೨೬ |
ಬಾರನೆ ಸಂಗಾಯಿ ಈ ಮೇಲೆ ಚೆಂಡೆನ್ನ | ಸೇರಲು ತಾರಮ್ಮ ಎನುತ |
ಆಳಿಗೆ ಕಡೆಯೇನೆ ಹೋಗೆನಲು ಇಲ್ಲಿಗೆ | ತಾರಾದೇನೆ ತರತರದಿ || ೨೭ ||
ಜಾಲ ಮಾತುಗಳನು ಆಡಬೇಡವೆ ಸಂಗಿ | ಆಳು ಬರಲವನಾ ಎದೆಯೇಟು |
ತಾರಮ್ಮ ಚೆಂಡನೆಂದರೆ ನಾಲಗೆಯ ತೆಗೆಸುವೆ | ಸೀಳಿ ಹೆಡತಲೆಯ ನೆತ್ತಿಯಲಿ || ೨೮ ||
ಅರಸಿಲ್ಲದ ಮನೆಗೆ ಬರಲವನ ಈ ಕ್ಷಣವೆ | ಪಣೆಯ ಲಿಖಿತವ ತೊಡೆಸುವೆನು |
ವಿನಯ ರಾಮನು ಬಂದು [ಮು]ಖದೋ [ರೆ] ಒಯ್ಯಲು | ಕಾಣ ಬರಿದೆ ಕೇಳಲು ಕಾಣೆನೆಂಬೆ || ೨೯ ||
ಬಹದೃಷ್ಟಿಲ್ಲದೆ ಕಳುಹಿ ಕೊಡುವೆನೆ ಚೆಂಡ | ಜನರ ಮೆಚ್ಚಲು ಹೊದಾದೆನಿಸಿ |
ತರುವೆನು ಎನುತಲಿ ಗೆಣೆರೊಡನೆ ಪೇಳೆ | ಬರುವುದಕೆ ಹದನ ಮಾಡಿಹನು || ೩೦ ||
ಆಡುವಳು ತನ್ನಯ ಬಾಯಿಗೆ ತಿಳಿದಂತೆ | ನಾಯಿ ಕೂಗುವ ರೀತಿಯಲಿ |
ದ್ರೋಹಿಯ ಮಾತನು ಲಾಲಿಸಿ ಚೆಂಡಿಗಿ | ವೀರ ಕಾಟಣ್ಣ ಬರುತಿರಲು || ೩೧ ||
ಹೇಳುವ ಮನ್ನಣೆಯ ರಾಮ ಕಾಟಗೆ ಬುದ್ಧಿ | ಹೋಗಯ್ಯ ಚೆಂಡ ತರುವುದಕೆ |
ಸಾಗಲಿಲ್ಲವೊ ಆಟ ಸಮನಾಗಿ ಅರ್ಧವು | ಕಾಲಗತಿಯೊ ಭೂಮಿ ಲಕ್ಷಣವೊ || ೩೨ ||
ಹೋಗುತಲೆ ಹುರುಗೆಜ್ಜೆ ಚೋರರು ಕರಿವಿಟ್ಟ | ಗಾದೆಯಾದುದು ಕಾಟಣ್ಣ |
ದೂರೆಮಗೆ ಬಿಡಲಿಲ್ಲ ಆಡಿದರು ಚೆಂಡೆಂಬ | ಹೊಡೆದಾಡದೆ ಸಮರಸದೊಳಗೆ || ೩೩ ||
ನಗೆಗೇಡಾಯಿತು ಕಾಣೊ ಸುಗುಣ ಚೆನ್ನಿಗ ರಾಮ | ಹಗೆ ಮುಂಡೆ ಮನೆಗೆ ಚೆಂಡ್ಹೋಗಿ |
ಕುಲಹೀನ ರಂಡೆಯ ಕೈಯೊಡ್ಡಿ ಬೇಡುವ ಹಗರಣವ | ತಂ[ದಿತ್ತೊ] ವಿಧಿಯೆಮಗೆ || ೩೪ ||
ಬಂದಂಥ ಪಡಿಪಾಟನುಂಡು ತೀರುವುದಣ್ಣ | ಒಲ್ಲೆಂದರೆ ಬಿಡದು ಲಿಖಿತಗಳು |
[ಪಾಂಡುವಿನ] ತನುಜರು ನೊಂದುದ ಅರಿಯೇನೊ ಅಣ್ಣ | ಐವರಿಗಿಂದ ನಾವ್ ದೊಡ್ಡವರೆ || ೩೫ ||
ತಂದ ಕಂಟಕವನು ಮುಂದೆ ಪರಿಹರಿಸನೆ | ಬಂದು ಕಾಯನೆ ಬೆನ್ನ ಮೇಲೆ |
ಶಿವನು ನಮ್ಮೊಡೆಯ ಅಂಜಲು ಬರುತಿರ್ಪ | ಬಂಧನ ತಪ್ಪುವುದೆ ಪಡೆದು || ೩೬ ||
ಹೋಗಿ ಬರುವೆನು ಚೆಲ್ವ ರಾಮಭೂಪನೆ ಕೇಳು | ಆಡುವ ಫಲಗಳ ಕಡೆಗೆ |
ತಾನೆದ್ದು ಕೈಮುಗಿದು ರಾಯ ಕಾಟಣ್ಣನು | ಸಾಗಿದ ರತ್ನಿಯ ಮನೆಗೆ || ೩೭ ||
ಅರಮನೆಯ ಹೋಗಲು ಕಡೆಯ ಬಾಗಿಲ ದಾಟಿ | ನಡುವಣ ತೊಟ್ಟಿಗೆ ಬರಲು |
ಹಡಪದ ಸಂಗಾಯಿ ಕಂಡು ಕರಗಳ ಮುಗಿದು | ಬಿಜಮಾಡಿಯೆನಲು ಪ್ರೀತಿಯಲಿ || ೩೮ ||
ಸಂಗಾಯಿ ಕೇಳು ಅರಮನೆಗೆ ಸೇರಿತು ಚೆಂಡು | ತಂದು ಕೊಡಮ್ಮ ಹೋಗುವೆನು |
ಕಂ[ಡುದಿ]ಲ್ಲವೊ ಸ್ವಾಮಿ ಕಣ್ಣಿಲಿ ಅಮ್ಮಾಜಿ | [ಗೊ]ಮ್ಮೆ ಕೇಳ್ ಇದನು ನಿಜ ಸಟೆಗೆ || ೩೯ ||
ತಾಯೆ ಲಾಲಿಸಿ ಕೇಳು ಹಿರಿಯ ಕುಮಾರನು | ಕೇಳುತ್ತ ಬಂದಹನ ಚೆಂಡ |
ಭೇದಗಳ ತಿಳಯದೆ ಆಡ ಬಂದೆವ ನಾವು | ಕೇಡಿಗಳ ಮಾಡುವರೆ ಅಮ್ಮಾ || ೪೦ ||
ಕಂಡರೆ ನಿಮ್ಮೆಡೆಗೆ ತಂದು ಕೊಡಿದಿರುವೆ ತೃಣ | ಚೆಂಡ ತನ್ನೊಳಗೆ ಮಡಗುವರೆ |
ಕಂಡಿಲ್ಲ ನೀವೆನ್ನ ಕಳ್ಳಿಯೆಂಬುವ ಭೇದ | ಏನೆಂಬ ಮಾತುಗಳ ಶಿವ ಬಲ್ಲ || ೪೧ ||
ಚೆಂಡು ಬಿದ್ದಿದೆಯೆಂದು ಬಂದವನಿವನಾರೆ | ಗಂಡಸಿಲ್ಲದ ಅರಮನೆಗೆ |
ಕಂಡವರು ಬರುವರೆ ಗುಂಡಿಗೆ ಎದೆ ಎಷ್ಟು | ನಾ ಕಂದನೆನುತ ಕರ ಮುಗಿಯೆ || ೪೨ ||
ಗಂಡ ಮುಪ್ಪಾಗಲು ಕಂಡವರು ಮನೆ ಹೊಕ್ಕು | [ಹೊಂದಿಕೆ ಸ್ನೇಹ] ಮಾಡುವರೆ |
ಮಂಡಲದಿ ಇದು ಸಹಜ ಮಗನಾಗೆ ಮತ್ತೊಬ್ಬ | ಚೆಂಡಿನ ನೆವದಿ ಬರಬಹುದೆ || ೪೩ ||
ನೋಡಿರೆಲವೊ ಬಂದ ಗಾರುಡದ ಹೊಳ [ಹ]ನು | ಬೇರಬಲ್ಲವಳ ಹಾದರವ |
ಲೋಕದ ಜನಕೆಲ್ಲ ಚೆಂಡು ಹೋದುದು ಎಂದು | ಒಳಮಾತಿಗೆ ನಿನ್ನ ಕಳುಹಿದನೆ || ೪೫ ||
ಆಡುವ ಅಪಸತ್ಯ ಚಾಂಡಾಲ ನುಡಿಗಳ ಕೇಳಿ | ರೂಢಿಸಿತು ಕೋಪ ಕಾಟನಿಗೆ |
ಸೂಳೆಯರಮನೆಯೊಳಗೆ ನೀರ ಹೊರುವ ರಂಡೆ | ನೋಡಿ ಮಾತಾಡೆ [ನೆ]ದರಾಗಿ || ೪೬ ||
ಆಡುವರೆ ಈ ಮಾತ ಅಮಾದಿ ಸಿದ್ಧಿಪನ | ಈ ಭೂಮಿಯೊಳು ಹರಿಶ್ಚಂದ್ರರಾಯ |
ತಾಯೆಂದು ಭಾವಿಸುವ ಪರನಾರಿಯೆಂಬವಗೆ | ಮೂಗನರಿವೆನು ಇನ್ನಾಡೆ || ೪೭ ||
ಅಪ್ಪಾಜಿಯಿಂದಲು ಮತ್ತೇನು ಬರಲು ಕಾಣೆ | ಎತ್ತ್ಹಾಕಿ ಮೊಲೆ ಮೂಗನರಿವೆ |
ಕತ್ತೆಯ ಮೇಲಿವಳ ಹತ್ತಿಸಿ ಪುರದೊಳಗೆ | [ಛಿದ್ರ]ವೀಗಳೆ ಮಾಡಿಸುವೆ || ೪೮ ||
ಕೋಪದಿ ಗರ್ಜಿಸುವ ರಾಯ ಕಾಟನ ಕಂಡು | ತಾ ಬೆದರಿ ರತ್ನಿ ಕಂಗೆಡಲು |
ರಾಯನೂರೊಳಗಿಲ್ಲ ಇವರೇನ ಮಾಡಿದರೆನ್ನ | ತೀರುವುದು ಕಥೆಯು ತನಗೆಂದು || ೪೯ ||
ತನ್ನಯ ಬುದ್ಧಿಗಳು ಇನ್ನಾವ ಜಾಣ್ವಿಕೆ | ಮನ್ನಿಸದೆ ಅವ ಬರನು |
ಉನ್ಮಾದ ಕಿಚ್ಚಿಗೆ ತಣ್ಣೀರನೆರೆದಂತೆ | ಒಮ್ಮೆ ಮನ್ನಿಪಳು ಕಾಟಯನ || ೫೦ ||
ಬಾರಯ್ಯ ಮದಗಜ ಭೀಮ ಕಾಟಯ್ಯನೆ | ಬಾರೆನ್ನ ಭಾಗ್ಯದ ನಿಧಿಯೆ |
ಮಾಡುವರೆ ಕೋಪದ ನಾ ನುಡಿದ ನುಡಿ ನಿನಗೆ | ಕ್ರೋಧಗೊಂಡವೆ ಮನದೊಳಗೆ || ೫೧ ||
ಮಗನೆ ನೀನಾಗಲು ತಡೆದೆನಲ್ಲದೆ ಕರವ | ಹರನೇಕೆ ಹರಿ ಮುನ್ನ ಬರಲು
ಸಿಗಿಸಿ ತೋರಣ ಕಟ್ಟ ಅರಿಕೆ ಮಾಡುವೆ ಜಗಕೆ | ಪರನೊಬ್ಬ ಪೊಕ್ಕು ಮರಳುವನೆ || ೫೨ ||
ರಾಯನಿರಲು ಮಗನೆ ಊರೆಲ್ಲ ಒಂದ್ಹೊಗಲು | ಸೋದರರೆಂಬೆ ಮನದೊಳಗೆ |
ತಾನೊಬ್ಬಳಿರುವಾಗ ಯಮರಾಜ ತನ್ನ ಮನೆಯ | ಹೋಗಿ ನೋಡಲು ಪಡೆಯೆ ತೀರಿ || ೫೩ ||
ಎನ್ನಯ ಸತ್ಯವ ಪರಬ್ರಹ್ಮ ಬಲ್ಲನು ಮಗನೆ | ನಿಮ್ಮಯ್ಯ ಬಲ್ಲನು ಎನ್ನ ದೃಢವ |
ಎನ್ನ ಚಿಂತೆಯಲಾನು ಆಳಿ ಮುಳುಗುತಲಿರುವೆ | ನಿಮ್ಮ ತಂದೆಯ ದಾರಿ ನೋಡಿ || ೫೪ ||
ಮೂರನೆಯ ದಿನ ತುಂಬಿ ಪೋದುದು ಮಗನೆ | ಏನು ಕಾರಣಕೆ ತಡೆದಿಹರು |
ವಾರಿಜಗಂಧಿಯು ನೀರ ನಯನದಿ ತಂದು | ಏನಪ್ಪ ನೀ ಬಂದ ಕಾರ್ಯ || ೫೫ ||
ಮಾಯಾ ಜಲದ ಕೂಡೆ ನಾನಾ ವಿದ್ಯವು ಆಡೆ | ಬಹಳ ಮಾತೇಕೆ ಅವಳೊಡನೆ |
ಜಾಣತನದ ಮೇಲೆ ಕೇಳಿ ಹೋಗಲಿ ಬೇಕು | ತಾಯೆ ಕೇಳೆನ್ನ ಬಿನ್ನಪವ || ೫೬ ||
ಆಡುತಿದ್ದೆವು ಚೆಂಡು ಅರಮನೆಗೆ ಸೇರಿತ್ತು | ಬಂದು ಆಡುವರೆಲ್ಲ ನಿಂದಿಹರು |
ಯಾರನಾದರು ಕಳುಹೆ ನಿಮಗೆ ಬೇಸರುಯೆಂದು | ತಮ್ಮಾಜಿ ಕಳುಹಲು [ನಾ]ಬಂದೆ || ೫೭ ||
ಆಡುವಳು ಅರಗಿಳಿಯು ಬಾಯನು ತೆರೆವಂತೆ | ಸ್ನೇಹಾರ್ಥವಾಗಿ ಬಾಲನಿಗೆ |
ಹೋದುದು ನಿಜವೇನೊ ಸಹಜವಾಗಿಯೆ ಮಗನೆ | ಹಾಸ್ಯದ ಮಾತು ಎನುತಿರ್ದೆ || ೫೮ ||
ಮಗನೆ ಕೇಳೈ ಕಾಟ ಗಜನಿಂಬೆ ಗಿಡದಡಿಯ | ಸೋಸಿ ನೋಡುವ ಹತ್ತಿ ಕೆರೆಯ |
ಏನು ಮಾಡಲಿ ಶಿವನೆ ಎಮ್ಮ್ವೆಶ್ಯ ಕಡೆಗಾಲ | ಬರುವುದಕೆ ತಲೆಗಿಹುದೊ || ೫೯ ||
ಚೆಂಡು ಪೋದ ಲಿಖಿತ ಭೂಮಂಡಲಕೆ ಪೆಸರೊಡೆದು | ಕಂಡ ವೈರಿಗಳು ತಲೆದೂಗೆ |
ಬಂದುದೆಮ್ಮಯ ಭಾಗ್ಯ ಬಲ್ಲ ಹಿರಿಯರು ತಮಗೆ | ಹಿಂದಣ ಪಡಿಪಾಟ ಬಂತೆ || ೬೦ ||
ಅಳುವಳು ಅಗ್ಘಣಿಯ ತ[ರು]ವಳು ನಯನದಿ | ಮುರಿವಳು ಬೆರಳ ಲಟಿಕೆಯನು |
ಕರೆ ಕರೆಬಡುವಳು ಅರಸಿನ ದುಃಖಕ್ಕೆ | ಇದು ಘನವೆಂದು ಮರಗಿದಳು || ೬೧ ||
ಆಡುವಳು ಹಲವಂಗ ನೋಡಿದನು ಕಾಟಣ್ಣ | ಮಾಯವೊ ಮತ್ತೆ ನಿಜಕರವೊ
ಭೂದೇವಿ ಬಲ್ಲಳು ಇವಳಾಡು ವಚನವ | ಕಾಣದು ಟವಳಿ ಹರನಿಗೆ || ೬೨ ||
ಬಾರಪ್ಪ ಕಾಟಣ್ಣ ರೋಗದಿ ನರಳುವಗೆ | ಚೇಳು ಮುಟ್ಟಿ[ದ]ತೆರ ಬಂತು |
ಹೋಗಿ ನೋಡೂನೇಳು ಹರಮೌಳಿ ಶೃಂಗರದ | ಜಾಜಿ ಮಲ್ಲಿಗೆ ವನದೊಳಗೆ || ೬೩ ||
ಹೊಕ್ಕಳು ತೋಟವ ತೊತ್ತು ಸಂಗಿಯು ಸಹ | ಪುತ್ರ ಕಾಟಯನ ಕರವಿಡಿದು |
ಸಿಕ್ಕಿದರೆ ಚೆಂಡೆಮಗೆ ಜಟ್ಟಂಗಿ ರಾಮೇಶ್ವರಗೆ | ಉಪ್ಪರಿಗೆಯನು ಕಟ್ಟಿಸುವೆ || ೬೪ ||
ಹುಡುಕುವಳು ಚೆಂಡನು ಬೆಳೆದಿರುವ ಮಲ್ಲಿಗೆಯ | ವನಗಳನು ಎತ್ತಿ ತರಗೆಲೆಯ |
ಬಗೆ ಮಾಡಿ ಹುಡುಕುತ ಬಳಲುತ ಮರುಗದ | ಮಡಿಯೊಳಗಿಲ್ಲೆಂದು ನೋಡಿ || ೬೫ ||
ಕಾಟನ ಮನಸು ಕರಗುವಂದದಿ ಹುಡುಕಿ | ನೋಟಕ್ಕೆ ಚೆಂಡ ನೋಡಿದಳು |
ಲೋಕದೊಳಪಕೀರ್ತಿ ಚೆಂಡ ಮಡಗಿದಳೆಂಬ | ಮಾತ ಹೊತ್ತೆನು ಧರಣಿಯಲಿ || ೬೬ ||
ಎಲ್ಲಿ ಹೋಯಿತು ಕಾಣೆ ಇಲ್ಲಿಗೆ ದಣಿದೆನು | ಮಲ್ಲಿಕಾರ್ಜುನ ಶಿವ ಬಲ್ಲ |
ಎಲ್ಲಿರಲು ಇನ್ನೊಮ್ಮೆ ಹುಡುಕಿ ಮಡಗುವೆ ಪೋಗಿ | ಚೆಲ್ವ ರಾಮನ ಬರಹೇಳು || ೬೭ ||
ವಾಸನೆಯ ಪರಿಮಳದ ನಾಸಿಕವು ತಿಳಿವವೊಲು | ಗೋಚರಿಸೆ ಕಾಟಗೆ ಸುಳುಹು |
ಈಕೆಯ ಬಳಿಯೊಳು ಚೆಂಡು ಸೇರಿತೆಂದು | ಯಾಕಮ್ಮ ಈ ಠವುಳಿ ನಿಮಗೆ || ೬೮ ||
ಆಡುವರೆ ಸರಸಗಳ ಕುಮಾರರೊಡನೆ ನೀವು | ಪಾಲಿಸೆಮಗೆ ಚಂಡ ತಾಯಿ |
ಬಾಲರಾಮನ ಮಾತ ಇಡಲಮ್ಮ ಮನಸಿಗೆ | ಭೂಪ ಹರಿಕಾರ ಅವರಿಲ್ಲ || ೬೯ ||
ಹುಡುಗನ ಮಾತೇನು ಕೊಡು ತಾಯೆ ನಿಮ್ಮೊಡನೆ | ಭಯಭಕ್ತಿ ನುಡಿ ಆಡಲರಿಯ |
ಹಡೆದಾಕೆ ಹರಿಯಮ್ಮ ಕಡೆ ಎಮಗೆ ತೃಣಕಿಂತ | ಘನವ ಬಲ್ಲನೆ ರಣಗೋಪಾಲ || ೭೦ ||
ಪಡೆದವರು ಮಕ್ಕಳು ಬಡಿಯಲು ಬಯ್ಯಲು | ಹಡೆದವರು ಕ್ರೋಧ ಮಡುಗುವರೆ |
ಕೊಡುವೆನು ನಾ ಚಂಡ ಕಂದರ್ಪ ರೂಪನ ನೋಡಿ | ಹುಡುಕಿಸುವೆ ಯಾವಲ್ಲಿ ಇರಲು || ೭೧ ||
ನಾನಾ ಜಾಲಗಳನು ಹೇಳಬೇಡವೆ ತಾಯಿ | ಮೇಲೆ ದುರುಳನು ನಾಚುವನು
ಕಾಡರೆ ಕಂದಗಳ ಆಡೊ ವಿದ್ಯೆವ ಕೆಡಿಸಿ | ಬೇಡಿಕೊಂಬೆನು ಕೊಡು ತಾಯೆ || ೭೨ ||
ಮಾವನ ಮಗಳೇನೊ ನಾಚುವರೆ | ನೋಡಿರೆ ಇವನ ಗಾರುಡವ |
ತಾಯಿ ರಮಣಗೆ ಬಂದ ತಂಗಿಯೆಂಬವರೆಲ್ಲ | ತಾಯಿಗಳಿಲ್ಲವೆ ನಿಮ್ಮ ಕುಲದೊಳಗೆ || ೭೩ ||
ತಾಯಿ ಮಕ್ಕಳಿಗುಂಟೆ ನ್ಯಾಯ ನಾಚಿಕೆ ಇವನ | ಭೇದವ ಮಾಡೊ ಬಗೆಯನು
ತಾನರಿಯೆ ಕರ್ಮ ಅನ್ಯಾಯ ನಿಮ್ಮೊಳಗಿರಲು | ಕಾಲನ ಬಲಕೆ ಗುರು ನೀವು || ೭೪ ||
ನೆವದೊಳು ಭವದೊಳು ಮಗನ ನೋಡುವೆನೆಂಬ | ಭ್ರಮೆ ತೊಡಕಿ ಪೋಗಿ ಕಳುಹೆನಲು |
ಇಡಬಹುದೆ ನಯನವ ತರಳ ಸೂರ್ಯಗೆ ಮೆಚ್ಚಿ | ವಿಧಿಲಿಳಿತವು ಇದು ತಮಗೆ || ೭೫ ||
ಕಳ್ಳ ದುಃಖವ ಮಾಡಿ ಕಾಂತ ಮುದಿಯನ ಕೂಡೆ | ಎಲ್ಲರಿಗೆ ಇದು ಎತ್ತಲಿ ಸಾರ |
ಒಳಿತಾಯಿತು ಕಾಟ ಇನ್ನೆಲ್ಲಿ ಪುತ್ರರು ತನಗೆ | ಇಲ್ಲವೊ ಚೆಂಡು ನೀ ಹೋಗು || ೭೬ ||
ಕೊಟ್ಟರೆ ನಾ ಬೇರೆ ಸತ್ಯವಂತಳೆ ನಿಮಗೆ | ಕೆಟ್ಟವಳೆಂಬುದು ಬಿಡದು |
ತೊಟ್ಟಕಾರನು ಚೆಂಡ ಇಟ್ಟವನು ಬಾರದೆ | ಕೊಟ್ಟೇನೆ ಹೋಗೋ ಕಾಟಣ್ಣ || ೭೭ ||
ತಮ್ಮ ರಾಮಗೆ ತಾನು ಇಮ್ಮಡಿ ಅಲ್ಲವೆ | ಹರಿಯಮ್ಮನೊಳಗೆ ಭೇದವಿಲ್ಲ |
ಸುಮ್ಮನೆ ಕೊಡು ತಾಯಿ ಸೂಳಿಕೆ ನಿನಗೇಕೆ ಎಮ್ಮಯ್ಯ | ಎನ್ನೊಳಗುಂಟೆ ಕಡೆಗಣ್ಣು || ೭೮ ||
ಯಾರ ಮುತ್ತಿನ ಚೆಂಡ ಯಾರೊಡನೆ ನಾ ಕೊಡಲೊ | ಸೇರದು ದಾಯಾದ ಜನ್ಮ |
ಬೇರ ಬಲ್ಲೆನು ಕೇಳೋ ಕಾಡಗೊಲ್ಲರ ವಂಶ | ಭೋಗವಲ್ಲದೆ ಪಟ್ಟ ಸಲ್ಲ || ೭೯ ||
ಹಾಲಿಗೆ ಹುಳಿಯೆರೆದ ಮೂಳಿ ನೋಡುವುದೇನು | ಸೀಳದೆ ನಾಲಗೆಯ ಪಿಡಿದು
ರೂಢಿಸಲು ಕೋಪಾಗ್ನಿ ಜ್ಞಾನ ಮನದೊಳು ಗ್ರಹಿಸಿ ವೇಳೆ [ಯ] ಲ್ಲವು ಈಗ ತನಗೆ || ೮೦ ||
ಜಡೆಮುಡಿ[ಯೆ] ಡೆಯೊಳು ಜಗಳ ಒರ್ವಗೆ ಸಲ್ಲ | ಹೊಳವಾಡಿ ತಲೆಗೆ ತರುವವರು |
ಒಡೆದ ತವಿಯ ಬಲು ಮೆಚ್ಚೆ ಬಾಳುವೆ | ನಡೆಸುವುದೆ ಏಳಿಗೆ ಕಡೆಗೆ || ೮೧ ||
ಕಳ್ಳ ಸೂಳೆಯ ಕೂಡೆ ಬಲುಮಾತು ತರವಲ್ಲ | ಹೆಣಗಾಡಿದಷ್ಟೆ ವಾದಿಯಲಿ
ಕೊಡುವುದೊಳಿತು ತಾಯಿ ಕಡೆಗಿದರ ಮೂಲದಲಿ | ಕೆಡು ಬುದ್ಧಿಯೆನುತಲಿ ಹೇಳೆ || ೮೨ ||
ಆಗಲಿ ಎಲೆ ಕಾಟ ಒಲ್ಲೆನೆಂದರೆ ಬಿಡದು | ಆನೆಯ ಹೊಡೆದು ಔಡಲವ |
ಏರಲು ಉಳಿವನೆ ಕುಮಾರನ ಬರಹೇಳೊ | ಮುಖ ನೋಡಿ ಚೆಂಡ ಕೊಡುವೆನು || ೮೩ ||
ಚೆಂಡನು ನಿನ್ನಯ ಮಂಡೆಗೆ ಬಡಕೊಳ್ಳು | ಚಂದರೂಪನ ನೋಡೊ ಪ್ರೀತಿ |
ಸಂದೇಹ ನಮಗೇಕೆ ಬಂದ ಗಳಿಗೆಲಿ ಕೊಡುವೆ | ತುಂಬುವುದು ಹನ್ನೆರಡನೆಯ ವರುಷ || ೮೪ ||
ಪಾಪಿ ನಿನ್ನಯ ಮಾತು ಹಾಕು ಬೆಂಕಿಗೆ ಎಂದು | ತಾ ತಿಳಿದು ಕಾಟನು ನಡೆದ
ಚಿಂತೆ ಮನದೊಳು ತುಂಬಿ ಶೀಘ್ರದಿ ಹೊರಡಲು ಪಂಚಬಾಣನು ರಾಮನೆಡೆಗೆ || ೮೫ ||
ಚಂದವಾಯಿತು ತಮ್ಮ ಚೆಂಡಿನಾಟವು ಸುಡಲಿ | ಬಂದುದು ವಿಧಿಗಾಲ ನಮಗೆ |
ಮಿಂಡರಗಳ್ಳಿಯ ಬಾಯ ನುಡಿ ಕೇಳಿದೆನಪ್ಪ | ಹಲಂಗದ ಮಾತನಾಡಿದಳು || ೮೬ ||
ಇರುಳು ನೋಡಿದ ಬಾವಿ ಹಗಲು ಬಿದ್ದರು ಎಂಬ | ತೆರನಾದುದೆಮ್ಮ ತಲೆಯೊಳಗೆ |
ಪಡೆದಾಕೆ ಜನನಿಯು ಒಡೆದು ಹೇಳಿದ ಲಿಖಿತ | ಮೀರಿ ಕಲ್ಲ ಹಾಯಿದೆವೊ || ೮೭ ||
ಒಂಟಿ ಸೀನನು ಮೀರಿ ಆಡಬಂದರೆ ತಮ್ಮ | ಸಂಕಟ ಬೆನ್ನೊಡನೆ ಬಂತು |
ಮಂಟೆಯಾಯಿತು ತಮ್ಮ ಚೆಂಡಿನಾಟವು ಸುಡಲಿ | ಉಂಟು ತೋರಿತು ಅಪಶಕುನ || ೮೮ ||
ಹಸ್ತ ಪಾದವ ಪಿಡಿದು ಭೃತ್ಯನಂದದಿ ಕೇಳೆ | ಕತ್ತೆ ಸೂಳೆಯು ಕೊಡಳು |
ಕಿಚ್ಚಡರಿ ಕಾಟಗೆ ನೇತ್ರದಿ ಜಲವೂರೆ | ಇಟ್ಟನು ಮೊರೆಗೊಳ್ಳೆನುತ || ೮೯ ||
ದುಃಖವೇತಕೆ ಅಣ್ಣ ಮತ್ತೆ ಏನೆಂದಳು ಬಹಳ | ಹೆಚ್ಚು ಕಡಿಮೆಯ ವಚನಗಳ
ಸತ್ಯದಿ ನುಡಿ ಅವಳ ಎತ್ತಿ ಮೂಗನು ಕೊರೆಸಿ | ಉಪ್ಪು ಕಾರಗಳ ತುಂಬಿಸುವೆ || ೯೦ ||
ಹಳೆಗಾಸ ಹಡೆಯದ ಕುಲಗೇಡಿಯೆಂದು ಪೇಳೊ ಇಳಿಯ ಕೆತ್ತಿಸುವೆ ಬಾಚಿಯಲಿ |
ಅಳಬೇಡ ಚೆಂಡಲ್ಲಿ ಇರುವ ಬಳಿಯನು ಪೇಳೊ | ಬಡಿದು ತರುವೆನು ಬಾಯ ಮೇಲೆ || ೯೧ ||
ಮಡಗಿ ಇರುವಳೊ ಚೆಂಡ ಹುಡುಗ ಮಿಂಡರ ಸೂಳೆ | ಪರವೆಂದು ಎನ್ನ ಆಡಿದಳು |
ಮಗ ನೀನು ಬಾರದೆ ಕೊಡೆನೆಂದಳು ಚೆಂಡನು | ಆಕೆಯ ಬಗೆಯ ಹರಬಲ್ಲ || ೯೨ ||
ಚಿಂತೆ ಬೇಡಣ್ಣಯ್ಯ ಭೇದಂತ್ರ ಮಾಡಲು ತಾಯಿ | ನಮ್ಮಂತರಂಗವು ಚೆನ್ನಹುದೆ |
ಸಂತಯಿಸಿ ಅಣ್ಣನ ಸನುಮತ ಸ್ಥಿತಿಯ ಪೇಳೆ | ಹೊರಟನು ರಾಮ ಚೆಂಡಿಗೆ || ೯೩ ||
ತರುವೆ ಚೆಂಡನು ಎಂದು ದೊರೆ ರಾಮ ಹೊರಡಲು | ಪ್ರಧಾನಿಯ ಮಗನು ತಾ ಕಂಡ |
ಹೊರಬೇಡ ನಿಂದೆಯ ಅರಸಿಲ್ಲ ಮನೆಯೊಳಗೆ | ತರುಣಿಯರ ನಂಬುವುದು ಕಷ್ಟ || ೯೪ ||
ನೀಲಕಂಠನೆ ನಿನಗೆ ಏರಿಹುದೆ ಭ್ರಮೆ ಮರುಳು | ಬೇಡವೆ ತಾಯಡಿಗೆ ಪೋಗೊ |
ದಾಯಾದಿ ಪರ[ಸ]ತಿಯೆ ತಂದೆಗೆ ಬಂದಳು | ಆಡುವರೆ ಅನ್ಯಾಯ ನುಡಿಯ || ೯೫ ||
ಹಿಂದೆ ಸಾರಂಗನ ಪ್ರಾರಬ್ಧವ ಕೇಳ್ದರಿಯಿರೆ | ಬಂದ ಅಪಕೀರ್ತಿ ಧರೆಯೊಳಗೆ |
ರಂಭೆ ಊರ್ವಸಿಯರು ಪಾರ್ಥಗೆ ದೃಷ್ಟಿಯನಿಟ್ಟು | ಶಿಖಂಡಿಯಾದುದು ಅದೆ ಮೂಲ || ೯೬ ||
[ವೇದ] ನಾಲ್ಕನು ಬಲ್ಲ ಪ್ರವೀಣ ಪುರುಷರ ಕೂಡೆ | ವಾದಿಸಿದಂತೆ ಅಲ್ಪ ವಿದ್ಯೆ |
ಪೇಳುವೆ ನಾನೊಂದ ಜಾಲ ಸ್ತ್ರೀಯರ ಮನೆಗೆ | ನ್ಯಾಯದೊಳಗಲ್ಲ ಪೋಗುವುದು || ೯೭ ||
ತರಬಹುದು ಚೆಂಡನು ಅರಸು ಊರಿಗೆ ಬರಲಿ ತೃಷಿಯೇನು ಅದರಿಂದ ಲಿಂಗ |
ತಂದರೆಂಬರು ಸ್ವಾಮಿ ನೂರೊಂದು ತಲೆಗಂಡವರು | ಕಂಡರೆ ನಿಮ್ಮ ಲಾವಣ್ಯ || ೯೮ ||
ಹನ್ನೆರಡು ಬಣ್ಣದ ಹೊನ್ನೆಲ್ಲಿ ಹೂಳಿದಡೆ | ಬಣ್ಣ [ಗೆ]ಡುವುದೆ ಎಲೆ ಮಂತ್ರಿ |
ಒಳ್ಳೆಯ ಪತಿವ್ರತೆಯು ಸೂಳೆಗೇರಿಯೊಳಿರಲು | ತನ್ನ ವ್ರತಗೆಟ್ಟು ಬಾಳುವಳೆ || ೯೯ ||
[ಹಸಿವೆಯ] ಹಂಗಿಹುದೆ ಅಶನವರ್ಜಿತ ಋಷಿಗೆ | ಹಸಿಗೆ ಅಡರುವುದೆ ಕಾಳಗಿಚ್ಚು |
ಸರಸ ಸಲ್ಲಾಪದ ಪರಿಹಾಸ್ಯವಾಡದೆ ಹೆಣ್ಣ | ಮನಸಿಹುದೆ ಪುರುಷರಿಗೊಲಿವುದಕೆ || ೧೦೦ ||
ಹೊಂದಿಗಿಲ್ಲದ ಮಾತ ತಂದೆಯೊಡನೆ ಪೇಳೆ | ಛೀಯೆಂದು ನಾಲಗೆಯ ಸೀಳಿಸ[ನೆ]
ಕಂಡು ಆಡಲು ಕಷ್ಟ ಕಾಣದೆ ನುಡಿದವಗೆ | ಹಂದಿಯ ಜನ್ಮ ಭವಭವದಿ || ೧೦೧ ||
ಸಹಜ ಮಾರ್ಗದಿ ನೆಲೆಯು ಹೇಳಬಹುದೇ ಬುದ್ಧಿ ಪ್ರವೀಣ ಮಂತ್ರಿಯೆ ನೀಲಕಂಠ |
ಮೀನಮರಿಗೆ ಈಜನಾರು ಕಲಿಸುವರುಂಟೆ | ಭೇದಗಾಣದೆ ಆಡಸಲ್ಲ || ೧೦೨ ||
ತಾಯ ಸೇರಿದ ಚೆಂಡ ತರದೆ ಹೆದರಿದರೆಂದು | ಆಡರೆ ಜನರು ಮನ್ನೆಯರು |
ಕೂಡಿದ ಜನಸ್ತೋಮ ಹೋದ ಬಳಿಕ ನಾವು ಆಡಲು ತಂದು ಫಲವೇನು || ೧೦೩ ||
ಸರ್ವ ತಿಳಿದವರಿಗೆ ಮುನ್ನ ಪೇಳುವುದೇನು | ನಿಮ್ಮನಸು ಪಾದ ತಿಳಿದಂತೆ
ಬ್ರಹ್ಮನ ಬರಹಗಳ ಹ್ಯಾಂಗಿನ್ನು ತಿಳಿವವರು | ಹೋಗೆನುತ ಕರಗಳ ಮುಗಿಯೆ || ೧೦೪ ||
ತೊಟ್ಟ ಭೂಷಣ ತೆಗೆದಿಟ್ಟು ಕಂಪಿಲನಾತ್ಮಜ | ಇಟ್ಟನು ಲೋಕವಾರ್ತೆಯಲಿ |
ಕಪ್ಪಿನ ಅರಿವೆಯಲಿ ರತ್ನಮಡುಗಲು ತನ್ನ | ಹುಟ್ಟು ಗುಣವ ಮರೆಯುವುದೆ || ೧೦೫ ||
ಪರನಾರಿ ಸೋದರನೆಂಬ ಬಿರಿದನು ಧರಿಸಿ | ಅರುಹಿದ ತನ್ನ ಗೆಳೆಯರಿಗೆ |
ಇರುತಿರಿ ನಿಮಿಷಕ್ಕೆ ತರುವೆ ಚೆಂಡನು ಬೇಗ | ಹರಿಣಲೋಚನೆಯ ಮನೆಗ್ಹೋಗಿ || ೧೦೬ ||
ಗಿರಿಜಾವಲ್ಲಭ ಎನ್ನ ಧರೆಗೇಕೆ ನಿರ್ಮಿಸಿದೆ | ವರ ಶೌರ್ಯ ಭರಗಳನಿತ್ತು |
ಶರೀರವಳಿಯಲು ತನ್ನ ಸತ್ಯ ಬಿಡುವವನಲ್ಲ | ಹೊರಗಣ ಅಪರಾಧ ನಿಮಗೆ || ೧೦೭ ||
ಸತ್ಯಪುರುಷನು ರಾಮ ಸಾಗಲು ಬೆನ್ನೊಡನೆ | ಹತ್ತಲು ಧರ್ಮದೇವತೆಯು |
ಲಿಖಿತವ ಬರೆದಾಕೆ ಪುಸಿಯೆನುತಲಿ ಮುಂದೆ | ಎಸಗುತ ಜಯಲಕ್ಷ್ಮಿಯೊಡನೆ || ೧೦೮ ||
ರಾಯ ರಾಮನು ಬರಲು ರಾಜೇಂದ್ರ ಕಂಪಿಲನ | ರಾಣಿ ಇರುತಿರ್ಪ ಅರಮನೆಗೆ |
ಕಾಣುತ್ತ ಗೊಲ್ಲರು ಕರಮುಗಿದು ನಿಂದಿರಲು ತಾಯ ದರುಶನಕೆಂದು ನಡೆಯೆ || ೧೦೯ ||
ಮೂರಾರು ಬಾಗಿಲ ಬೇಗದಿಂದಲಿ ದಾಂಟಿ | ಗಾಜಿನುಪ್ಪರಿಗೆ ಬಾಗಿಲಿಗೆ |
ಸಾಗಿ ಬರಲು ರಾಮ ಗೂಡಿನ ಗಿಳಿಗಳು | ಇವನಾರೊ ಹೊಗುವ ನಿಲ್ಲೆನುತ || ೧೧೦ ||
ಗಿಳಿಗಳಾಗಲು ನಿಮ್ಮ ಜನ್ಮ ಉಳಿಯಿತು ಪೋಗಿ | ತಡೆಯಲು ಇನ್ನೊಬ್ಬ ಮನುಜ |
ನಡೆಸುವೆ ಯಮಪುರಕೆ ಹಳೆಬೀಡಿನೊಳು ಹೋಗಿ | ಕೈಗಾಣಿಕೆ ತಂದ ರಣರಾಮ || ೧೧೧ ||
ಆದರೊಳಿತು ಸ್ವಾಮಿ ಕೇಳಿ ಹೊಗಲಾಗದು ನಿಲ್ಲಿ | ರಾಯನಿಲ್ಲದ ಅರಮನೆಗೆ |
ಯಾವಾಗ ಬರದವನು ಈಗೇನು ಕಾರ್ಯಕೆ ಬಂದೆ | ತಾವ್ಯಾರಿಗಿಲ್ಲಿ ಕಾದಿಹುದು || ೧೧೨ ||
ಅರಸು ಇಲ್ಲದ ಮೇಲೆ ಬರುವುದೇತಕೆ ಇಲ್ಲಿ | ಕರೆಸಿಕೊಂಡಳೆ ಕಳ್ಳ ರತ್ನಿ |
ಪರನಾರಿ ಸೋದರ ಬಿರಿದ ಸಾರಿಸಿಕೊಂಬೆ | ನೆರೆ ದ್ರೋಹಿ ಮನೆಗೇಕೆ ಬಂದೆ || ೧೧೩ ||
ಅರಗಿಳಿಯ ವ[ಚ]ನ ಒಲವನೆಲ್ಲವ ಪೇಳೆ | ದಯಭರಿತನಾಗುತ್ತ ಬಂದ |
ಲಾಲಿಸಿ ವಿವರವ ಚೆಲ್ವ ಗಿಳಿಗಳು ಎಲ್ಲ | ಮರುಳ ಬುದ್ಧಿಯಲಿ ಚಂಡನಾಡಿದೆನು || ೧೧೪ ||
ಹೊಕ್ಕನೆ ಇಲ್ಲೊಬ್ಬ ರಾಕ್ಷಸರ ಪೊಳಲಿಗೆ | ಪುತ್ರನಾಗಲು ಕಂಪಿಲಗೆ |
ಅರ್ತಿಯಲಿ ಚೆಂಡಾಡೆ ಪೊಕ್ಕುದು ಅರಮನೆಗೆ | ಚಿಕ್ಕಮ್ಮನನು ಕೇಳ ಬಂದೆ || ೧೧೫ ||
ಚಿಕ್ಕಮ್ಮನ ಮಾರಿಗೆ ಕಿಚ್ಚನು ಹಾಕಯ್ಯ | ಸುಟ್ಟು ಹೋಗಲಿ ನಿನ್ನ ಚೆಂಡು |
ರತ್ನಿಯ ಮನದೊಳು ಭ್ರಮೆ ಪುಟ್ಟಿ ನಿನ್ನ ಬಯಸಿ ಹೊತ್ತಳು ಹರಕೆ ದೈವಗಳ || ೧೧೬ ||
ಟೌಳಿ ಎನ್ನಲು ಬೇಡ ಗೌ[ಡಿ]ಸಂಗಿಯ ಒಡನೆ | ನುಡಿಯುತಿರಲು ನಾವು ಕೇಳಿ |
ಒರೆದೆವು ನಿನ್ನೊಳು ಒಲಿವ ಪುರುಷನು ಅಲ್ಲ | ತಿರುಗಯ್ಯ ಚಂಡ ಸುಡಲಿ || ೧೧೭ ||
ಕೇಳರಿಯಾ ರಂಡೆಯ ಮೂಲ ಗತಿಗಳನೆಲ್ಲ | ಹೇಳಲಿಲ್ಲವೆ ಹರಿಯಮ್ಮ |
ನಾಳೆಗೆ ಬಾ ಹೋಗು ರಾಯ ಬರಲು ನಿನಗೆ | ಯಾವ ಭಯಗಳು ಮುನ್ನಿಲ್ಲ || ೧೧೮ ||
ಗಿಳಿಗಳ ಮಾತೆಂದು ಮನದಿ ಗರ್ವವು ಬೇಡ | ಹಿಡಿಕಟ್ಟಕರದೊಳು ಮುನ್ನ |
ಅನುಗ್ರಹಿಸಿ ಕೇಳಿದ ಮನದಿ ಚೆನ್ನಿಗರಾಮ | ಇದು ಸಹಜವಾದೀತೆ ಮಾತು || ೧೧೯ ||
ಮಕ್ಕಳ ಬಯಸುವರೆ ಹತ್ತಿಹುದು ತಲೆಮೂರು | ನಕ್ಕಾನು ಶಿವ ಬಲ್ಲಯೆನುತ |
ನಿಶ್ಚಯವೆನಬಹುದೆ ನೀಟಾದ ಸ್ತ್ರೀಯರಿಗೆ ಅ | ಗತ್ಯದ ನಿಂದೆ ಹೊರಿಸುವರು || ೧೨೦ ||
[1] + ಶ್ರೀ ಗುರು ಬಸವಲಿಂಗಾಯ ನಮಃ (ಮೂ)
Leave A Comment