[1]ಶ್ರೀ ಗಿರಿಜೇಶನೆ ಭಾಗೀರಥೀಶನೆ | ಭೋಗಿಭೂಷಣ ಭಾಳನೇತ್ರ |
ಆಗಮಕೊಡೆಯನೆ ಮೂಜಗವ ರಕ್ಷಪನೆ | ನಾಗಭೂಷಣ ನಂದೀಶ                   || ೧ ||

ಚಕ್ರಧರನ ಸುತನ ಶಿಕ್ಷಿಸಿ ಭಸಿತವನು | ಮತ್ತೆ ಸರ್ವಾಂಗದೊಳು ಧರಿಸಿ |
ಭಕ್ತರ ಭಾವಕ್ಕೆ ಮೆಚ್ಚಿ ಬಾಗಿಲ ಕಾಯ್ದ | ಭಿಕ್ಷುಕದೇವ ಕೊಡುಮತಿಯ                 || ೨ ||

ಕಾಶಿರಾಮೇಶ್ವರ ಶ್ರೀಶೈಲ ಗೋಕರ್ಣ | [ಕೀ]ಸು ವೆಗ್ಗಳವಾದ ಹಂಪೆ |
ಪ್ರಾಸು ಬೀಳದ ತೆರ ಪಾಲಿಸು ಕೃತಿ ಪರ | ಮೇಶ್ವರ ವಿರುಪಾಕ್ಷಲಿಂಗ                || ೩ ||

ನಡೆಸುವೆ ಗಣನಾಥ ಒಡಗೂಡು ಮತಿಯಿತ್ತು | ಕಡಬು ಕಜ್ಜಾಯದ ಭೋಗಿ |
ಮೊದಲ ಮೂಜೆಯ ಕರ್ತ ಮೂಷಕವಾಹನ | ತಗಡೂರ ಬೆನವ ಕೊಡು ಮತಿಯ    || ೪ ||

ಬರಬೇಕು ಅಕ್ಷರದ ಮೊದಲು ದೇವಕ[ರ್ತೆ] | ನುಡಿ ಜಿಹ್ವೆಯಲಿ ಶಾರದೆ [ಯೆ] |
ನುಡಿ ತಪ್ಪು ಕರ ತಪ್ಪು ಪ್ರಾಸು [ಬಿ]ದ್ದರೆ ಮುಂದೆ | ನೆರೆ ಜಾಣರುಗಳು ತಿದ್ದುವುದು    || ೫ ||

ಹಲವಂಗ ಮನ ಚಿತ್ತ ಹಳಿಯ ಬೇಡೆನ್ನನು | ತಿಳಿದಂತೆ ಮುಂದೆ ಒರೆವೆನು |
ಅಳಿದವರ ಕಥೆಯೆಂಬ ಆಲಸ್ಯ ಮಾ[ಡ]ದೆ ರಾ[ಮ] | ಹರನಿಂದ ಜನಿಸಿದ ಪಿಂಡ    || ೬ ||

ಪೇಳುವೆನು ಪರಚಿತ್ತವಾಗದೆ ಕೇಳಿ | ಶ್ವಾನನಂದದಿ ಮನಸು ಹರಿಯೆ |
ಹೇಳಲು ಫಲವಿಲ್ಲ ಕೇಳಲು ಗತಿ ನಷ್ಟ | ಶ್ವಾನಗೆ ಕ್ಷೀರವೆರೆದಂತೆ                     || ೭ ||

ರಾಮನು ಚೆಂಡಾಡಿ ತಾನು ಕೆಟ್ಟನು ಎಂದು | ಆಡುವರು ಮೂಢರಾದವರು |
ಕೇಳಿದರೆ ಕಷ್ಟವಾ ಭೂಮಿಪ ಹರಿಶ್ಚಂದ್ರ | ಚೆಂಡು ಲೆಗ್ಗೆಗಳ ಮಾಡದರಾರು           || ೮ ||

ವಿಧಿವಾಸ ಬಿಡಲರಿದು ಮೃಡನಿಗೆ ಮುಂತಾಗಿ | ತಿರಿದು ಉಣ್ಣನೆ ಮನೆ ಮನೆಯ |
ಸತ್ತು ಹೋದಳೆ ಸೀತೆ ಶ್ರೀರಾಮನನು ಬಿಟ್ಟು | ಇವನು ಮಾಡಿದ ಪ್ರಾಪ್ತಿಯೇನು      || ೯ ||

ಹರಿಹರ ಮುಂತಾಗಿ ಅಲ್ಲಾಡಿಹುದು ವಿಧಿವಾಸ | ನರಜನ್ಮದ ಪಾಡಿನ್ನೇನು |
ಧರಣಯೊಳು ಜನಿಸಿದ ನರಜೀ[ವೆ]ಲ್ಲರಿಗುಂಟು | ರವಿ ಶಶಿ ಗ್ರಹ ಕಂಟಕವು          || ೧೦ ||

ಕಂಟಕ ಬಂದಡೆಯು ಕೊಲ್ಲಲಾಪುದೆ ಕೇಳಿ | ಬೇಕಾದಡೆ ಹರಿಶ್ಚಂದ್ರ ಭೂಪತಿಗೆ |
ಸತ್ಯವಿರಲು ಅವಗೆ ಯಶವಾಗಿ ಶಿವಬಂದು | ಗೊತ್ತ ಸೇರಿಸದೆ ಬಿಡನು               || ೧೧ ||

ಕಂಡಿರೆ ದೃಷ್ಟವನು ಮುಂದೊಮ್ಮೆ ಲಾಲಿಪುದು | ಮಂದಮತಿ ರಾಯ ಕಂಪಿಲನು |

ಅಂಗನೆಯಾದಂಥ ರತ್ನಿಯ ಮನ್ನಣೆ | ಮುಂದೆ ಬೇಂಟೆಯ ಸೊಬಗ ಕೇಳಿ           || ೧೨ ||

ರಾಯನು ಮೈದಡವಿ ಅಭಿಮಾನವೆಲ್ಲವ | ನೊಕ್ಕಗದೆಯ ಮಾಡಿಕೊಂಡಿರುವ |
ಪಾದರಕ್ಷೆಗೆ ಇನ್ನು ಕಡೆಗಾಣ್ವ ಸತಿ ಮುಂದೆ | ಮೇಲೆ ಮಡಗಲು ಮಾಣಿಪಳೆ          || ೧೩ ||

ನಾರಿ ರನ್ನಳೆ ಬಾರೆ ಮೋಹನಾಂಗಿಯೆ ಬಾರೆ | ಪ್ರಾಣಪದಕವೆ ರತ್ನಾಜಿ |
ವಾರಿಜಮುಖಿ ಮೃಗನಯನೆ ಮದನನ ತೇಜಿ | ಬಾರೆಂದು ತೊಡೆಯೊಳ್ ಕುಳ್ಳಿರಿಸಿ || ೧೪ ||

ಸರಸ ಸಲ್ಲಾಪದ ಸವಿನುಡಿ ಸಮರಸದೊಳ್ | ಗಲ್ಲವ ಪಿಡಿದು ಅರುಹಲು |
ಬೇಡವು ನಾ ಬರುವೆನು ನಾಳಿಗೆ ನೀ | ಬೇಡಿದ ಮೃಗವ ತರುವೆನು                  || ೧೫ ||

ಬಾಲೆ ಕೇಳೆಲೆ ನಿನ್ನ ಪ್ರಾಣಕಾಂತನ ಬಿನ್ನಹ | ಬಹಳ ದಿನಬಂತು ಬ್ಯಾಟ್ಯಾಡಿ |
ಹೋಗಿ ಭರ್ರನೆ ಹೋಗಿ ಹೊಸಮಲೆ ಗಿರಿಯೊಳಗೆ | ಕೈಕಾಣಿಕೆ ತರುವೆ ಹೊಂಮೃಗವ         || ೧೬ ||

ಬಾಲೆಯರ ಜಾಲಗಳು ಮೂದೇವರಿಗೆ ತಿಳಿಯದು | ತೋಡುವಳು ಜಲನೇತ್ರದಲಿ |
ಕಾಣದೆ ಇರಲಾರೆ ಕಾಂತ ನಿನ್ನರಗಳಿಗೆ | ಹೋಗಿ ವಾಲಗದಿ ಕುಳ್ಳಿರಲು              || ೧೭ ||

ಜಾಣನೆ ನವಪಂಚ ಬಾಣನೆ ಎಂಥ | ಪ್ರಾಣಕಾಂತೆಯನು ನೀನಗಲಿ |
ಹೋಹೆನೆಂಬುದು ಎನ್ನ ಪ್ರಾರಬ್ಧ ಫಲವಿದು | ಬೇಡೆಂದರೆ ತಾ ಖೋಡಿ ರಂಡಿ         || ೧೮ ||

ಅರಮನೆಯತ್ತವರ ಅಡ್ಡಾಡಗೊಡಬೇಡೆಂದು | ಸರಿಯ ಸವತಿಯರು ನಗುವಂತ |
ನರೆ ಬಂದ ಮುದಿಯನ ಮರಳು ಮಾಡಿದಳೆಂದು | ಹೊರಲೇನೋ ಅರಸ ಈ ದೂರ         || ೧೯ ||

ತರಳೆಯೊರ್ವಳ ಬಿಟ್ಟ ರಮಣ ನೀ ಬರುವನಕ | ಉಳಿವುದೆ ಎನ್ನಯ ಪ್ರಾಣ |
ನಯನ ದೃಷ್ಟಿಯ ತೆಗೆದು ಪರರ ನೋಡದ ಸತಿಯ | ನಗಲಿ ಹೋಗಲು ನಿಮಗೆಣೆಯೊ       || ೨೦ ||

ಕೋಟಿ ಚಂದ್ರನ ಕಳೆಯ ರೂಪಿನ ಸತಿ ಕೇಳು | ಪ್ರಾಣಾತ್ಮ ನಿನ್ನೊಳಗಿರುತಿಹುದು |
ಶೋಕವ ಬಿಡು ನಾಡಿ ಈ ರಾತ್ರಿಯ ದಯಮಾಡೆ | ಬೇಸರ ಕಳೆದು ನಾ ಬರುವೆ     || ೨೧ ||

ಬಡನಡುವಿನ ಬಾಲೆ ತಡೆಯ ಬಲ್ಲೆನೆ ನಿನ್ನ | ಮುಖವ ಕಾಣದೆ ಮರುದಿವಸ |
ಶುಭದೊಳು ನೀ ಪೋಗೆನಲು ತಾ ನಡೆದ ಕಾರ್ಯದ | ಲೇಸು ಪಿಡಿದನು ಗಲ್ಲ ಬಿಂಬಗಳ      || ೨೨ ||

[ವೃತ್ತ] ಕುಚದ ಮೇಲೆ ನೀ ಚಿತ್ತ ಸೈರಿಸು ಎಂದು | ಮುತ್ತ ಕೊಟ್ಟನು ಗಲ್ಲ ಪಿಡಿದು |
ಚಿತ್ತೈಸು ರಾಜೇಂದ್ರ ತನ್ನ ನೇತ್ರಗಳ ಪೊರೆದಂತೆ | ತಪ್ಪದೆ ಬನ್ನಿ ನಾಳೆನಲು         || ೨೩ ||

ಬಾರೆನ್ನ ಭಾಗ್ಯದ [ಮಾ]ಲೆಯೆ ಕೋಕಿಲ ಗಾನೆ | [ಸೈರಿ]ಸು ಎರಡು ರಾತ್ರಿಯ[ನು] |
ಮೇಲೆ ಹೆಚ್ಚಾಗಿಯು ತಡೆದರೆ ಮುಖ ನೋಡದೆ | ಅಭಿಮಾನವ ಕಳೆವೆ ಸಭೆಯೊಳಗೆ || ೨೪ ||

ಒಪ್ಪಿತೆ ಮನಸಿನ್ನು ಚಿತ್ರದ ಪ್ರತಿಬೊಂಬೆ | ಉತ್ತಮದ ಗಿಳಿಯು [ಪಂ]ಜರದ |
ತೊತ್ತು ದಾಸಿಯರೊಡನೆ ಲೆತ್ತ ಪಗಡೆಯಾಡಿ | ಹೊತ್ತವು ಕಳೆ ಎರಡು ದಿವಸ        || ೨೫ ||

ನಾರಿಯ ಸಂತೈಸಿ ರಾಯ ಶೃಂಗರವಾಗಿ | ಆ ಮಂದಿರವನು ಪೊರಡೆ |
ಸಾರಲು ರಣ ಕಹಳೆ ಪರಿವಾರ ಭೋರೆನೆ ಬಂದು | ವಾಲಗದ ಚಾವಡಿಗೆ ಕುಳಿತ     || ೨೭ ||

ಹಡಪ ಕಾಳಂಜಿಯು ಪಿಡಿವ ಚಾಮರ ಗಿಂಡಿ | ಎಡೆ ಎಡೆಗೆ ನಿಂದು ವಾಲೈಸೆ |
ಎರಡನೆ ದೇವೇಂದ್ರ ಹೊ[ಗಳಿ]ಕೊಳ್ಳುತ ರಾಯ | ನುಡಿದ ಮಂತ್ರೀಶನೊಡನೆ      || ೨೮ ||

[ಕೇಳ]ಯ್ಯ ಬೈಚಪ್ಪ ಬಹಳ ಕಾಲದಿ ನಾವು | ಹೋಗಿಲ್ಲ ಬೇಂಟೆ ಹೊಸಮಲೆಗೆ |
ಬೇಗದಿ ಕರೆಸಯ್ಯ ಬಲವು ಬೇ[ಹಿ]ನ ಮಂದಿ | ಚರಿಸಾಡಬಹುದೆರಡು ರಾತ್ರಿ         || ೨೯ ||

ಕರೆಸಯ್ಯ ಬಾದುರಖಾನ ನಾಗರಸನ | ವೀರ ಮಾನ್ಯರ ಹಲಬರನು |
ರಾಜೇಂದ್ರ ರಾಮಯ್ಯಗೆ ಊಳಿಗವನು ಕಳುಹಿ | ಪೇಳಿ ವಾರ್ತೆಯನು ಕರೆತನ್ನಿ      || ೩೦ ||

ಬಾದುರಖಾನನು ನಾಗರಸ ಮೊನೆಗಾರರು | ಧೀರ ಮನ್ನೆಯರು ಶೃಂಗರಿಸಿ |
ಸುಳುಹು ಹೆಜ್ಜೆಯ ತೆಗೆದು ಎಳೆದು ಮೃಗವನ ಕೊಲ್ವ | ಹಳೆಯ ಪೈಕದ ಮಂದಿ ಒದಗೆ       || ೩೧ ||

ಪ್ರಳಯಕಾಲದ ರಾಮನರಮನೆಗೆ ಊಳಿಗ ಬಂದು | ಕರಮುಗಿದು ಕಾರ್ಯವನು ಪೇಳೆ |
ಬರಹೇಳಿದನು ನಿಮ್ಮ ಧರಣಿ ಕಂಪಿಲಭೂಪ | ಹೊರಡು ಬೇಂಟೆ[ಗೆ] ಹೊರ ಪಯಣ || ೩೨ ||

ಗಹಗಹಿಸಿ ನಕ್ಕನು ರಣಧೀರ ಚೆನ್ನಿಗರಾಮ | ಪ್ರಾಯವೆ ತಮಗೆ ಬೇಂಟ್ಯಾಡೆ |
ಕಾಮ ತಾ ಯೌವನಗೆ ಸ್ತ್ರೀಯರ ಭ್ರಮೆ ಚಿತ್ತ | [ಮಂದಿ]ಯಾದ ಕಾಲದಿ ಬೇಂಟೆ ಬೇಹರೆ      || ೩೩ ||

ಸಾವಾಗ ಶನಿ ಬಂದು ಕಾಡುವ ತೆರ ಕಾಣೊ | ರಾಯಗೆ ಭ್ರಮೆ ಹುಚ್ಚು ಮರಳು |
ನೋಡಯ್ಯ ಕಾಟಣ್ಣ ಮೊದಲಿಗೆ ಹೊರಟಾರು | ಹೋಗಲು ನಾವೆ ಕರೆದಿಹೆವೆ         || ೩೪ ||

ಕೋಡಗವು ಮುದಿ ಆಗೆ ಹಬ್ಬೋದ ಬಿಡುವುದೆ | ಹಾದರ ಕಲಿತ ಮಾಯಜಾ[ಲೆ] |
ಮೂಗು ಮುಂದಲೆಗೊರೆದರೆ ಹೇಸಳು ತಮ್ಮ | ಹೋಗಿ ಬರುವನು ಏಳಪ್ಪ           || ೩೫ ||

ಅಣ್ಣಾಜಿಗೀ ಮಾತು ಬ್ರಹ್ಮಾಂಡಕ್ಕೆ ಸರಿಯಬಹುದು | ಕಣ್ಣಿಲ್ಲದವಗೆ ಕನ್ನಡಿಯು |
ಪುಣ್ಯ ಜವ್ವನನಾಗಿ ಪುತ್ರರ ಸಹವಾಸವ | ಒಮ್ಮೆ ನೋಡುತ ವೀರ ಬರದೆ            || ೩೬ ||

ಕರೆಸಿದ ಬಿರುದಿನ ಎಕ್ಕಟಿಗಾರರ | ಹರುಷದಿ ವೀರಸಂಗಯ್ಯನ ಕರೆಸಿ |
ಕರೆಸಿದ ಲಿಂಗನ ಹಮ್ಮೀರ ಖಾನರ ಎಲ್ಲ | ಶೃಂಗಾರವಾಗಿ ಮಾರ್ಬಲವು             || ೩೭ ||

ರಾಮ ಲಕ್ಷ್ಮಣರಂತೆ ತಾವು ಶೃಂಗರವಾಗಿ | ಏರಿದರು ತುರಗ ಓರಂತೆ |
ಅರ್ತಿಲಿ ಬರುವಾಗ ಅವಶಕುನದೋರುವುದ ಕೇಳಿ | ಸತ್ಯಸಾಗರರು ಮನ ಒಲಿದು  || ೩೮ ||

ವಾಯಸ ಕಟ್ಟಿತು ಓರ್ವ ಬ್ರಾಹ್ಮಣ ಇದಿರಾದ | ಪೂರ್ವದಿ ಪಲ್ಲಿ ಸ್ವರವಿಡಿದು |
ವಾಮಭಾಗದಿ ಗರುಡ ಬಲನಾಗಿ ನಡೆಯಲು ನೋಡಿ | ಹಾನಿಹುದು ಹೋದ ಕಾರ್ಯಗಳು   || ೩೯ ||

ಏನು ಕಾರಣವೆಂದು ರಾಮ ಮನದೊಳು ಕರಗಿ | ಹಾನಿ ಯಾರಿಗೆ ತೋರುವುದೊ |
ಹೇಳಿರೊ ರಾಯಗೆ ಆದಂಥ ಅಪಶಕುನ | ಬರಹೇಳು ಎಂದರೆ ಸಾಗಿ ಬರುವೆ         || ೪೦ ||

ಚರರು ಆ ನುಡಿತಂದು ಅರಸಿನೊಡನೆ ಪೇಳೆ | ಗರುಡಪಲ್ಲಿಯ ವಾರ್ತೆಗಳು |
ಮೀರಿ ಬರಲು ವಾಯಸ ಕಟ್ಟಿತ್ತು | ಶಕುನವಲ್ಲೆಂದು ತಿರುಗಿದನು                     || ೪೧ ||

ಅವಶಕುನವಾದಲ್ಲಿ ಬರಸಲ್ಲ ಪಯಣವಿದು | ಇರಲವರು ಪುರದೊಳು ಸುಖದಿ | ಸ
ಹೊಡೆಯಲು ರಣಭೇರಿ ನಡೆಯೆ ಕಂಪಿಲರಾಯ | ದಿಗಿಲು ಆರ್ಭಟಿಸಿ ಪಟ್ಟಣವ       || ೪೨ ||

ರಾಯನು ಕಂಪಿಲ ಹೋಗಿ ಹೊಸಮಲೆಯೊಳು | ಕಾನಾಂತರಕೆ ದೊರೆ ಹೋಗಲು |
ಏನಯ್ಯ ಕಾಟಣ್ಣ ತಾ ಹೊರಟು ಬಂದುದು | ದಿಗಿಲು ಆರ್ಭಟಿಸಿ ಪಟ್ಟಣವ             || ೪೨ ||

ರಾಯನು ಕಂಪಿಲ ಹೋಗಿ ಹೊಸಮಲೆಯೊಳು | ಕಾನಾಂತರಕೆ ದೊರೆ ಹೋಗಲು |
ಏನಯ್ಯ ಕಾಟಣ್ಣ ತಾ ಹೊರಟು ಬಂದುದು | ಕೂಡಿದವರಿಗೆ ನಗೆಪಾಟ                || ೪೩ ||

ಪೇಳಿದೆ ಮನೆಯೊಳು ಉಳಿದಿರಲು ಘನ ನಮಗೆ | ನಡೆದರು ಲೇಸು ಪಿತನೊಡನೆ |
ಮರನೇರಿ ಕೈ ಬಿಟ್ಟಿ ತೆರನಾಗಿ ಬಂದು | ನಡುಬೀದಿಯೊಳು ನಿಂದ ಬಗೆಯ           || ೪೪ ||

ಬರಬಾರದಣ್ಣಾಜಿ ಬಹಳ ಪೌರುಷದೊಳು | ಹಿರಿಯಬಾರದು ಬಾಣವನು |
ಮರಳಿ ಹಾಕುವರೆ ಛಲದಂಕರಾದವರು | ನದಿಗಳಿಗೆ ಸ್ವಾಮಿ ಹೋಗುವನು          || ೪೫ ||

ಮತ್ತೆ ಒಳ್ಳಿತು ಭೂಪ ಚಿತ್ತೈಸು ಈ ಮಾತ | ಅಸತ್ಯವೆಂಬವರಾರು ಇಲ್ಲ |
ಜಕ್ಕನೆ ತೇಜಿಯನೇರಿ ನಡೆಯಲು ರಾಮ | ಎಪ್ಪತ್ತು ಮನ್ನೆಯರು ಎಡಬಲದಿ         || ೪೬ ||

ಹೊರಡಲು ಕುಮ್ಮಟ [ದ]ಹರಿದಾರಿ ಬಯಲಿಗೆ ಬಂದು | ತೇಜಿಗೋಲುಗಳ ಮಾಡಿದರು |
ಶರೀರವು ಬೆಮರೊಡೆದು ಮಾತಂಗಿ ಹಂಪೆಯ | ನದಿಗೆ ಬಂದರು ಹರುಷದಲಿ       || ೪೭ ||

ಕಂಡನು ಗಂಗೆಯೊಳ್ ತುಂಬಿದ ಹರಿಗೋಲ | ಚೆಂದವಾಯಿತ್ತು ಅಣ್ಣಾಜಿ |
ಮುಂದೀಗಾನಿದನೊಮ್ಮೆ ಆಡಿನೋಡುವೆನೆಂದು | ಅಂದಿಳಿದ ತೇಜಿಯನಲ್ಲಿ          || ೪೮ ||

ಊರೊಳಗಿರುವಂಥ ಹರಿಗೋಲು ದೋಣಿಯ ತಂದು | ನೂರಾರು ತರಿಸಿ ಹಾಕಿಸಿದ |
ಭಾಗೀರಥಿಯ ಪೂಜೆ ಪುಷ್ಪಕದಿ ಮಾಡಿ | ಏರಿದನು ಬೇಗ ದೋಣಿಯನು             || ೪೯ ||

ವೀರ ಮನ್ನೆಯರೆಲ್ಲ ಏರಿದರು ತ[ಮ]ಗೊಮ್ಮೆ | ಬೇಕಾದ ದೋಣಿ ಹರಿಗೋಲ |
ನೀರನು ತುಂಬಿದ ಕಾರಂಜಿ ಕೊಳವೆಯ | ವೀರ ಮನ್ನೆಯರೆಲ್ಲ ಚೆಲ್ಲಿ                  || ೫೦ ||

ಹರಿಗೋಲು ನೂಕುವ ತುರಗದ ಭರವಿಂಗೆ | ಮುರಿದೋಡುತಿರಲು ಮನ್ನೆಯರು |
ಪರಿಬಳಸಿ ನೀರನು ಮಳೆಗಾಲದಂತೆ ಸುರಿದು | ಮರಳಿ ಓಡುವ ಸಿಕ್ಕದಂತೆ         || ೫೧ ||

ಕಂಡನು ರಾಮನ ದಿಂಡೆಯ ತನಗಳ | ಕೊಂಡು ಮುಳುಗುವ ಇವ ನಮ್ಮ |
ಕಂಡಲ್ಲಿ ಇಳಿದಿಳಿದು ಕಡೆಗೋಡುವರ ಕಂಡು | [ಶಿ] ಖಂಡಿಗಳೆನುತ ತಾನಿಳಿದ      || ೫೨ ||

ಇಳಿಯಲು ಹರಿಗೋಲು ಬಳಿಕ ಸ್ನಾನವ ಮಾಡಿ | ಬರಲು ಭೂಷಣವನೆ ತೊಡಲು |
ನಡೆದ ತೇಜಿಯನೇರಿ ನಡೆಯಲು ಪುರಕಾಗಿ | ಸಡಗರದೊಳು ಸಂಭ್ರಮದಿ          || ೫೩ ||

ಬಾಲರು ನೂರಾರು ಕೂಡಿ ಲೆಗ್ಗೆಯ ಹೂಡಿ | ಹೊಡೆದಾಡುವ ಸೊಗಸ ತಾ ನೋಡಿ |
ಧೀರರಿಗೆ ದಿಟ್ಟತ್ವ ವಜೀರರಿಗೆ ತಕ್ಕಂಥ | ಕಡಿದಾಡುವ ಪಂಥವುಂಟು                 || ೫೪ ||

ಏರಿದ ತೇಜಿಯನಿಳಿದು ಆ ಕ್ಷಣದೊಳು | ಬಾರಯ್ಯ ಮನ್ನೆಯರು ನಿಲ್ಲಿ |
ಆಡುವ ಇವರಂತೆ ಜೋಡಿಗೆ ಸಮನಾಗಿ | ಹೊಡೆದಾಡಿ ನೋಡುವನರಗಳಿಗೆ        || ೫೫ ||

ಚೆಂದವಾಯಿತು ಕಾಣೋ ಬಿರಿದಿನ ಚೆನ್ನಿಗರಾಮ | ದಂಡ ಕಡಿದವನೆ ಲಕ್ಷಾಂತ್ರ |
ತುಂಡು ಹುಡುಗರಾಡುವ ಚೆಂಡಾಣೆ ವೈರಿಗಳು | ಕುಂಡೀಲಿ ನಗರೇನು ತಮ್ಮ       || ೫೬ ||

ನಾಡಾಡಿ ಮಕ್ಕಳು ಆಡುವುದು ಚೆಂಡನು | ರಾಯ ಸುತರು ಆಡಸಲ್ಲ |
ಕೂಡಿದ ಸತಿಯರು ನಗರೇನು ಮನೆಯೊಳಗೆ | ಆಡಲು ಹಳೆ ಅರಿವೆ ಚಂಡ          || ೫೭ ||

ಸತಿಯರು ನಗಲಿಕ್ಕೆ ಸುತರಾ ಬಲ್ಲವೆ | ಮತಿಗೆಟ್ಟು ನುಡಿವೆ ಕಾಟಣ್ಣ |
ತಪಯೋಗವಳಿವ ಮನ್ಮಥನ ಯೌವನವುಂಟೆ | ಸಕಲರಲ್ಲದೆ ಮದಪ್ರಾಯವುಂಟೆ   || ೫೮ ||

ಮದುವೆಯಾಗದ ಸುತನು ಅಳಿಯ ಋಣಭಾರದಿ | ಜನವಾಕ್ಯ ಧರೆಯ ಶಾಸ್ತ್ರಗಳು |
ಅದರಿಂದ ಅಣ್ಣಾಜಿ ಅರಸು ಬಾಲೆರ ತಂದು | ವಿವಾಹ ಮಾಡಿದ ಬಗೆಯರಿಯಾ      || ೫೯ ||

ಹೇಳಿದನಣ್ಣಗೆ ನಾಲಗೆಯ ಪಿಡಿದಂತೆ | ಬದಲಾಡಲು ಉತ್ರ ಠಾವಿಲ್ಲ |
ಬೇಡಯ್ಯ ಚೆಂಡು ಆಡುವ ಪ್ರೀತಿರಲು | ಬೇರಿಹುದು ಮುತ್ತಿನ ಚೆಂಡು                || ೬೦ ||

ಮುತ್ತಯ್ಯ ಮುಮ್ಮಡಿ ಪೆತ್ತಯ್ಯನಾಡಿದ | ಹಿಂದಿನ ಮುತ್ತಿನ ಚಂಡಿದೆ ತಮ್ಮ |
ಹೆತ್ತಮ್ಮ ಹರಿಹರದೇವಿಯ ಬಳಿಯಲ್ಲು | ಸಿಕ್ಕಿದರೆ ತಂದು ನೀನಾಡೊ                || ೬೧ ||

ಮುತ್ತಿನ ಚೆಂಡೆಂಬ ವಾಕ್ಯ ಕರ್ಣದಿ ಬೀಳೆ | ಹತ್ತು ಭುಜವಾದ ಮನದೊಳಗೆ |
ಹೆತ್ತಮ್ಮ ನೊಳಗಿರಲು ಶಕ್ತಿಯಾತಕೊ ಅಣ್ಣ | ಹಸ್ತ ಪಾದವ ಪಿಡಿದು ತರುವೆ          || ೬೨ ||

ತಾಯೊಡನೆ ತರುವುದಕೆ ನ್ಯಾಯವೇತಕೊ ಅಣ್ಣ | ಏರಿದ ತೇಜಿ ತವಕದಲಿ |
ತಾವರೆಸಖ ಬಂದು ತಾಯೊಡಲ ಹೊಗುವಂಥ | ಠಾವಿಲಿ ಕುಮ್ಮಟವ ಹೊಗಲು     || ೬೩ ||

ಹೊತ್ತು ಹುಟ್ಟುವ[ವ] ಸಾಗೆ ಪಶ್ಚಿಮದ ಕಡಲಿಗೆ | ಮತ್ತೆ ಸ್ನಾನವನು ಮಾಡುವರೆ |
ಮರ್ತ್ಯಲೋಕವು ಮುನ್ನ ಕತ್ತಲಾಗವನು | ಮೃಗಪಕ್ಷಿಗಳು ಬಹುವಾಗಿರಲು           || ೬೪ ||

ರಾಯ ರಾಮನು ತ[ನ್ನ] ಪರಿವಾರಕೆ ವೀಳ್ಯವ | ಕೊಟ್ಟು ಸಾಗಿದ [ನು] ಅರ್ತಿಲರಮನೆಗೆ |
ಸ್ನಾನ ಪಾನಗಳಾಗಿ ಸವಿದು ಮೃಷ್ಟಾನ್ನವ | ಭಾನು ಯಾವಾಗ ಮೂಡುವನೊ       || ೬೫ ||

ಹೇಮಾದ್ರಿ ಗಿರಿಯನು ಸೂರ್ಯನು ಪರಿಬಳಸಿ | ಸಾಗಿ ಪೂರ್ವದ ಕಡಲಿಂಗೆ |
ಏರಲು ರಥಕೀಗ ಭೂಮಿಗೇರಲು | ಚೂಡ ತೋರಿದ ಮೂಜಗಕ್ಕೆ                     || ೬೬ ||

ಉದಯವಾಗಲು ಎದ್ದು ದೊರೆ ರಾಮ ತನ್ನಯ | ಕ್ರೀಯದಾಗಮವ ತೀರಿಸಿದ |
ತವಕದಿ ಸವಿದು ಪರಮಾನ್ನ ಭೋಜನವ | ಧರಿಸಿದ ವಸ್ತು ಆಭರಣ                  || ೬೭ ||

ಶೃಂಗಾರವಾಗುವುದ ಮಡದಿ ಅಂಗನೆ ಕಂಡು | ತಮ್ಮತ್ತೆಗೆ ಸುದ್ದಿಯ ಕೊಡಲು |
ಮತ್ಯಾವ ಕಾರ್ಯವೊ ಗೊತ್ತು ತಿಳಿಯದು ನಿಮ್ಮ | ಪುತ್ರನ ಕಳೆ ಕಾಂತಿ ಸಿರಿಯು    || ೬೮ ||

ಪ್ರಾಣ ಸ್ನೇಹಿತನಾದ ಪ್ರಧಾನಿಯ ಮಗ ಬಂದ | ದೇವಿಸೆಟ್ಟಿಯ ಲಿಂಗಣ್ಣ |
ಕಾದಿಹರು ಭಾವಾಜಿ ಕಾಟಯ್ಯ ನೇಮಿಸಲು | ದೂರಲ ಮನ್ನೆಯರ ಕರಸೆಂದು       || ೬೯ ||

ಸೊಸೆಯರಾಡುವ ಮಾತ ಹರುಷದಿಂದಲಿ ಕೇಳಿ | ಕರಗುತ ತಾಯಿ ಮನದೊಳಗೆ |
ಯಾರು ಪೇಳಿದರೆಂದು ಬಿಡುವ ಬಾಲಕನಲ್ಲ | ಇದಕೇನ ಮಾಡಲಿಯೆಂದು           || ೭೦ ||

ಅಣ್ಣಗರುಹಿದ ಅಗ್ರಗಣ್ಯ ಚೆನ್ನಿಗರಾಯ | ಮನ್ನೆರಿಗೆ ಉತ್ರವಾಲೆಯನು |
ಬ್ರಹ್ಮಾಂಡದೊಳಗುಳ್ಳ ಪುಣ್ಯಪುರುಷರ ನೋಡ ಬಾ | ರೆಂದೆನುತ ಬರುವಂಥ ಜನರು        || ೭೧ ||

ಅಡಿಗೆಯಾಗದ ಮುನ್ನ ಎಲೆಯನು ಹಾಸಿದ | ತೆರಬಂತು ಕಾಣೋ ತಮ್ಮ |
ಕೊಡುವಳು ಚೆಂಡನು ಕಾಣೆನೆಂಬಳು ಕಡೆಗೆ | ಹುಡುಗಾಟವಾಗಲು ಹೀನ            || ೭೨ ||

ಯಾಕಣ್ಣ ಬಲು ಜೊಳ್ಳು ಮಾತುಗಳಾಡುವೆ | ಮಾತೆ ಕೊಡದಿರೆ ಮರಳಿ ಬರೆನು
[ಸೇಕಕ]ನ ಪ್ರೀತಿಲಿ ಚರಣ ಹಿಡಿದು ಕೇಳ್ವೆ | [ಸೇವಕ] ತೋರಲು ಪ್ರಾಣ ಬಿಡುವೆ     || ೭೩ ||

ತರುವುದಕೆ ಹುಸಿಬೇಡ ಬರೆಸಯ್ಯ ಲೇಖನವ | ಕರೆಸಯ್ಯ ವೀರ ವಿಕ್ರಮರ |
ಹೊರಡಲು ರಣವಿಜಯ ಕಿರಣದ ಪ್ರಭೆಯಂತೆ | ನುಡಿಯಲು ಬಿರಿದಿನ ಕಹಳೆ        || ೭೪ ||

ಕಹಳೆಯ ಸ್ವರವನು ಪರಿವಾರವೆಲ್ಲವು ಕೇಳಿ | ರಣಭೀಮ ಹೊರಡುವನೆಂದೆಲ್ಲ |
ಕಾಲಾಳು ಕರಿತುರಗ ಗುರಿಕಾರ ವಜೀರರು | ಬೀದಿ ಬೀದಿಗಳು ತಟ್ಟೈಸೆ              || ೭೫ ||

ಇತ್ತಲು ಕಾಟಣ್ಣ ಸುತ್ತಲ ರಾಯರಿಗೆ | ಉತ್ರ ಊಳಿಗ ಬರೆದು ಕಳುಹಿ |
ಚಿತ್ತಗಮನದಿ ಬನ್ನಿ ಮೂರನೆ ವಾಯಿದಿಗೆ | ಮುತ್ತಿನ ಚೆಂಡಾಡೊದೆಂದು             || ೭೬ ||

ಕಾಗದವ ಬರೆದು ಹದಿನಾರು ಮೂಲೆಗೆ ಕೊಟ್ಟ | ಸಾಗಿದ ತಮ್ಮನ ಬಳಿಗೆ |
ಮುತ್ತಿನ ಪಾಗು ಬಿಗಿದು ಚಿಮ್ಮುರಿ ಸುತ್ತಿ | ಒತ್ತಿಟ್ಟ ಸಣ್ಣ ನಾಮವನು                  || ೭೭ ||

ನಿಲುವುಗನ್ನಡಿ ಹಿಡಿದು ನೋಡಿದ ರಾಮಯ್ಯ | ಬಳಿಕಿಟ್ಟ ಊಳಿ ಪದಕವನು |
ಭೂಮಿಯಾರ್ಭಟಿಸುತ್ತ ಬರಲು ಚೆನ್ನಿಗರಾಮ | ಪಲ್ಲಕ್ಕಿ ಇಳಿದು ಒಳಹೋಗಲು       || ೭೮ ||

ಬಾಲರ ಕಾಣುತ್ತ ಭಾನು ತನ್ನಯ ಸಖನು ಮೂಡಲು ತಾವರೆಯಂತೆ |
ಬಾಯನು ಬಿಡುತಿರ್ಪ ಲಾವಣ್ಯದೊಳಗಿರಲು | ಹೋಗಿ ಸಾಷ್ಟಾಂಗವ ಎರಗಿ         || ೭೯ ||

ಚಂದ್ರನ ಪ್ರಭೆ ಕಂಡು ಅಂಬುಧಿ ನಲಿವಂತೆ | ಸಂಭ್ರಮದೊಳು ಬಾಲಕ[ನ] |
ಮುಮ್ಮುಡಿ ಮುಖ ಗಲ್ಲವಿಡಿದು ಎಡಬಲದೊಳು | ರಂಭೆ ತೊಡೆಯೊಳು ಕುಳ್ಳಿರಿಸಿ    || ೮೦ ||

ಹೊಳೆವ ಕನ್ನಡಿಯಾಗಿ ಬಲ ತುರಗ ಶೃಂಗರಿಸಿ | ಪರುಟವಣೆಯಾಗಿ ಬಂದಿಹುದು |
ಮಲೆತರ ಎದೆಗರ್ವ ತೊಲಗಿಸದೆ ಇನ್ಯಾರು | ವೈರಿಯ ಮೇಲೆ ಈ ಗಮನ          || ೮೧ ||

ಕಾರ್ಯ ಕಾಳಗವಿಲ್ಲ ಕಂದರ ಬಿನ್ನಪದ | ಕೇಳೆನಲು ಪೇಳಲು ಬಹುದು |
ಬಾಯಿವೊಡೆಯ[ದು] ಮಾತು ಬರಲರಿದು ದಯ | ಮಾಡೆನೆಂದರೆ ಉಸುರುವೆನು   || ೮೨ ||

ಕೊಡುವೆನು ತನ್ನೊಳಗೆ ಇರುವ ಒಡವೆಯ ಬಾಲ | ನಿಮಗಲ್ಲದೊಸ್ತು ಇನ್ನೇಕೆ |
ಕೆಡಲೇನೊ ಹಣಹೊನ್ನ ಕೊಳಗವನು ಅಳೆತರಲೆ | ಇನ್ನೈದು ಹೆಣ್ಣ ತರಲೇನೊ      || ೮೩ ||

ಹಣ ಹೊನ್ನು ಹೆಣ್ಣಿಗೆ ನಿಮಗೆ ಬರುವೆನೆ ತಾಯೆ | ಬಡ ಬಿನ್ನವುಂಟು ಸೇವಕನ |
ಬಡ ಮಾತ ಭ್ರಮೆ ಹತ್ತಿ ಕಳೆಯಲ್ಕೆ ಬೇಸರ | ತರುವೆ ನಿಮಿಷ ಮಾತ್ರದಲಿ            || ೮೪ ||

ಕಾರ್ಯಭಾರವು ಎಲ್ಲ ಆರು ತಿಂಗಳು ಮೊದಲು | ನೀರಾಟಮಾಡಿ ನೋಡಿದೆನು |
ತೀರಲಿಲ್ಲವು ತಾಯೆ ಹಾಳಾದ ಬೇಸರವು | ಆಡಿದರು ಚದುರಂಗ ಪಗಡೆ             || ೮೪ ||

ಲೆತ್ತ ಪಗಡೆಯನಾಡಿ ಮತ್ತೆ ಬೇಸರವಾಯ್ತು | ಹೊತ್ತು ಹೋಗದು ಮನೆಯಲ್ಲಿ ಕುಳಿತು |
ಮತ್ತೊಂದು ವಿದ್ಯೆವ ನೋಡಿ ಒಪ್ಪಿದೆವಮ್ಮ | ನೀ ನೋಡಿ ಒಪ್ಪಿ ಕೊಡಮ್ಮ            || ೮೫ ||

ಮೂರಾರು ತಲೆ[ಯಿಂ]ದ ಮೂಲೆಯೊಳಿರಲೇಕೆ | ಯಜಮಾನರು ಪಡೆದಂಥ ಚೆಂಡು |
ಆಡಿ ನೋಡುವ ಅಮ್ಮ ಲಯವಾಗಬಾರದುಯೆಂದು | ಉದ್ಧಾರ ಮಾಡಿದುದು ಚೆಂಡು ತಾಯೆ || ೮೬ ||

ಚೆಂಡಿನ ನುಡಿ ಬಂದು ಕರ್ಣಕ್ಕೆ ಬೀಳಲು | ಬಿಲ್ಲುಕೊಂಡಂತೆ ಎದೆಯೊಳು |
ದೆಸೆಯು ಹೊಂದದೆ ಜೀವ ಡಿಂಬ ಸ್ಮರಣೆ ಮರೆತು | [ಕುಂದಲು] ಮಿಕ್ಕಿದ ಕಳೆ ಕಾಂತಿ        || ೮೭ ||

ಕರಗುತ ಪಡೆದ ಜನನಿ ಉರಿಗೆ ಬೆಣ್ಣೆಯಿಟ್ಟ | ತೆರದೊಳು ಹರಿಣಲೋಚನೆಯು |
ಮುರಿಯುತ್ತ ಕೈಬೆರಳ ಮುಂದೊಂದು ಹಾನಿಯ ಪೇಳೆ | ಮುರಿದಾಡಿ ನೋಡುವೆನೆನುತ               || ೮೮ ||

ಯಾರು ಹೇಳಿದರಪ್ಪ ಚೆಂಡಿನ ಸುದ್ಧಿಯ | ಇದರ ಮೋರೆಯನು ನಾನರಿಯೆ |
ಸೇರದವರು ನಿನ್ನ ಪ್ರಾಣ ಕೊಲ್ವ[ರು] ಮುನಿದು | ಈ ಕಾರಣ ಎನಗೆ ತೋರುವುದು  || ೮೯ ||

ಕೇಳಿ ಕಂಡವರಾರು ಹೇಳಿದವರ ಮಾತು ಸುಡಲಿ | ತೋರಬಾರೆಂದು ಪಿಡಿತರದೆ |
ತಾಯಿ ಮಗನಿಗೆ ಜಗಳ ನ್ಯಾಯ ಮಾಡರೆ ನಿನಗೆ | ಆಡಿ ಪೇಳಿದರೆ ಹಿತವಾಗಿ        || ೯೦ ||

ಚೆಂಡಾರು ಬಲ್ಲರು ನಾ ಕಣ್ಣೀಲಿ ಕಂಡಿಲ್ಲ | ಇಂದು ಕೇಳಿದೆ ನಿನ್ನ ಸ್ವರದಿ |
ಕಂಡುದುಂಟಾಗಲು ಚಿಕ್ಕಂದಿಲಿ ತಾ ಕೊಟ್ಟು | ಆಡಿಂದೆ ನೋಡುವೆ ನಯನದಲಿ     || ೯೧ ||

ಕೇಳದೆ ಕೊಡುವರೆ ತಾಯಿ ಮಕ್ಕಳಿಗೊಮ್ಮೆ | ಬೇರಾಡದೆ ಹಾಳನೆರೆ[ಯುವ]ರೆ |
ಬೇಡಿದ ಕ್ಷಣದೊಳು ಚಂಡ ಕೊಡುವರೆ ಮುತ್ತ | ಜೋಡಿಸಿ ಬಿಗಿದಿರುವ ಚಂಡ         || ೯೨ ||

ಪುಣುಗು ಇರಲು ಮೂಗಿನ ಸೆಲೆ ಗಿನ್ನು ಒಡೆಯದೆ | ಅಡಗುವುದೆ ಆನೆ ಹುಲ್ಲೊಳಗೆ |
ಮಡಗಿರುವ ಸ್ಥಾನದ ನೆಲೆಯ ಬಲ್ಲವರೊಳು ಹೊಳವಾಡೆ ತಾಯೆ ನಡಿಯುವುದೆ     || ೯೩ ||

ಬಾರಮ್ಮ ಹಾದಿಗೆ ಪಾದ ಸೇವಕನೊಳು | ಆಡದೆ ಹುಸಿ ಸುಳ್ಳು ಹೇಳ[ದೆ] |
ನಾಳೆ ಅರಸು ಬರುವನಕ ಪ್ರಾಣ ಯಾರಿಗೆ ನೆಲೆಯು | ನೀರ ಗುಳ್ಳೆಯು ನರಜನ್ಮ    || ೯೪ ||

ಬಾಲನ ನುಡಿಗಿನ್ನು ನಾಲಗೆಯ ಪಿಡಿದಂತೆ | ಠಾವಿಲ್ಲ ಬದಲನಾಡುವರೆ |
ಸ್ತ್ರೀಮಾತು ಗಂಭೀರ ಮಾಡದಿರಲು ಸಿಟ್ಟು | ತೋರಲು ಎದ್ದು ಸಾಗುವನು           || ೯೫ ||

ಉತ್ತಮದ ಚಂಡಲ್ಲ ಪುತ್ರ ಲಾಲಿಸು ಕೇಳು | ಕಷ್ಟ ಕೊಡುವುದು ಮುಟ್ಟಿದವರ |
ಎಷ್ಟು ಹೇಳಲಿ ಮಗನೆ ನಿಮ್ಮಜ್ಜಯ್ಯನು ಆಡೆ | ಕೊಟ್ಟುದು ಕರಕೆ ಜೋಳಿಗೆಯ        || ೯೬ ||

ಹುಟ್ಟಿದ ಸ್ಥಾನವ ಗತಿ ನಷ್ಟ ಎಲ್ಲರ ಮಾಡಿ | ಮತ್ತೆ ಸೇರಿತು ನಿಮ್ಮೊಳಗೆ |
ಮುತ್ತಜ್ಜ ಕೆಟ್ಟಂಥ ಕೇಡ ಮುಮ್ಮಡಿ ಕಂಡು | ಕೊಠಡಿಗೆ ಹಾಕಿ ಇಟ್ಟಹರು               || ೯೭ ||

ಹುಟ್ಟಿದ ನೆಲೆಯವನು ಅಪ್ಪಣೆ ಕೊಡಬಹುದು | ಚಿತ್ತಕ್ಕೆ ತಿಳಿದಷ್ಟು ತಾಯೆ |
ಸತ್ಯದ ಹರಿಶ್ಚಂದ್ರ ರಾಯನ ಕೆಡಿಸಲ್ಕೆ | ಪುಟ್ಟಿಹುದು ಪುತ್ರ ಕೇಳೆನಲು                || ೯೮ ||

ನೃಪನು ಬೇಂಟೆಗೆ ಪೋಗೆ ಮುನಿಯಿಂದ ಜನಿಸಲ್ಲಿ | ಬಿನುಗು ಸೂಕರವಾಗಿ ಸುಳಿಯೆ |
ಧನುವನು ಪಿಡಿಕೊಂಡು ಹರಿಶ್ಚಂದ್ರ ತಾ ಎಸೆಯಲು | ಕುಲಗೇಡಿ ಸ್ತ್ರೀಯರು ಬರಲು || ೯೯ ||

ನಾನಾ ವಿದ್ಯೆಂಗಳನು ತೋರೆ ನೃಪವರ ಮೆಚ್ಚಿ | ಬೇಡೆನಲು ಸಕಲ ಸಂಭ್ರಮದ |
ಮಾನಾಭಿಮಾನವ ಕೇಳಲ್ಕೆ ಕೋಪಿಸಿ | ಛೀಯೆಂದು ಬಡಿದು ನೂಕಿಸಲು             || ೧೦೦ ||

ತನುಜೆಯರ ಮೊರೆಯನು ಮುನಿನಾಥ ಕೇಳುತ್ತ | ಕನಲಿ ಕಾಳ್ಗಿಚ್ಚಿನೊಳಗೆ |
ಹಿಡಿಯಲು ಶಾಪವ [ಮಡಿಲೊಡ್ಡಿ] ಹರಿಶ್ಚಂದ್ರ | ಸುಡುಗಾಡ ಕಾಯ್ದನು ಮೂಲ       || ೧೦೧ ||

ಅದರಿಂದಲಾಚೆಗೆ ನಡೆದ ಸ್ಥಾನವ ಕೇಳು | ನಯನ ಪಡೆದವನ ಮೈಯೊಳಗೆ |
ಬಳಿಯೊಳು ಇರುತಿರ್ದ ಹಾಲ್ಮುಕ್ಷಿಯ | ದಿನದಿನಕೆ ಬಂದು ಕಾಡುವುದು              || ೧೦೨ ||

ನೇತ್ರವಿಲ್ಲದ ಮುನಿಯು ಮತ್ತೊಂದು ದೇವಾಲ್ಯ | ಪ್ರತಿಷ್ಠೆಯಾಗಿ ನಿಲ್ಲಿಸಿದ |
ಭುಕ್ತವ ತರುವಾಗ ಚಂಡಾಲ ಕಾಗೆಯು ಆಗಿ | ಕೃತ್ಯವ ಕೆಡಿಸಿ ಹೋಗುವುದು         || ೧೦೩ ||

ಸೀತೆಯು ಮತ್ತೊಂದು ಕಲಾಪದೊಳಗೆ ಜನಿಸೆ | ಮುನಿನಾಥರ ಸೇರೆ ಸಲಹುವನು |
ಜ್ಯೋತಿಯ ಪ್ರಭೆಯಂತೆ ರೂಪ ಯೌವನವಾಗೆ | ಲೋಕದ ಒಳಗೆ ಸಾರಿಸಲು       || ೧೦೪ ||

[ನೇ]ರಿದ ಕಾಗೆಯನಾರು ಕೊಂದವರಿಗೆ ಈ | ನಾರಿಯ ಕೊಡುವೆ ಧರ್ಮಾರ್ಥ |
ಕೂಡಿತು ಶತಕೋಟಿ ಭೂಮಿ ತೂಕದ ಧನುವು | ಏಳದೆ ಮಕುಟವರ್ಧ[ರಿಗೆ]         || ೧೦೫ ||

[ಭಾ]ರಾಗಿ ಇರುವಾಗ ಈ ರಾಮಲಕ್ಷ್ಮಣ ಬಂದು | ನೋಡಿದರು ಬಾಲಕಿಯ ಇರವ |
ವ್ಯಾಳವ ಪಿಡಿದಲ್ಲಿ ವಾಲೆ ಅಂ[ಬ]ಕೆ ಬರೆದು | ದೇವಲೋಕವ ಹೊಕ್ಕರು ಬಿಡದೆ      || ೧೦೬ ||

ಅನುಜನು ಧನುವನು ತುದಿ ಪಾದದಿಂದಲಿ ತುಳಿಯೆ | ಒದರಲು ಭೂಮಿ ತಲ್ಲಣಿಸಿ |
ಕಿಡಿಗ[ಣ್ಣಿ]ನಭವನ ಮೊರೆ ಬೀಳೆ ಗುರುತೆಂದು | ಗರಿ ಬರಬೇಕೆಂದು ಇಡಲು          || ೧೦೭ ||

ತಲ್ಲಣಿಸಿ ದೇವೇಂದ್ರ ಬಲ್ಲಿದರಹುದೆಂದು | ಅಲ್ಲಿ ಲೇಖನವನು ನೋಡಿ |
ಇಲ್ಲಿಂದ ಈಚೆಗೆ ಬ[ರೆ]ದೊಂದು ಗರಿಗಿತ್ತು | [ಸ] ರಳಿಲಿ ಕೊಟ್ಟು ಕಳುಹಿದನು         || ೧೦೮ ||

ಬಾಲನೆ ಲಾಲಿಸು ಜಾನಕಿಯ ಶ್ರೀರಾಮ | ಮಾಲೆಯ ಧರಿಸಿ ಕರೆದೊಯ್ದ |
ಆ ಮೂಲ ಬಿಡಲಿಲ್ಲ ರಾವಣನ ತಂಗಿಯಾಗಿ | ಗ್ರಾಮ ಲೆಂಕೆಯಲಿ ಪುಟ್ಟಿತು           || ೧೦೯ ||

ಆರಣ್ಯ ವಾಸದಲಿ ಸಾಲೆ ಪರ್ಣವ ಕಟ್ಟಿ | ರಘುರಾಮರು ವನವಾಸ |
ಮಾಡುವ ಸಮಯದಿ ಹೊಂಮೃಗವಾಗಿ | ಸುಳಿಯೆ ರಾಮರಿದ್ದೆಡೆಗೆ                  || ೧೧೦ ||

ಕೂಡಿದವರ ಬೆನ್ನಟ್ಟೆ ಕೊಂಡೊಯ್ದು ಸೀತೆಯ ಹಾಳುಮಾಡಿತ್ತು ಲೆಂಕೆಪುರವ |
ತೀರಲು ಅಲ್ಲಿಂದ ಮಾರಿಯಾಗಿ ಎಮ್ಮ ಬುಡಕೆ | ಸೇರಿತ್ತು ಕಾಣಪ್ಪ ರಾಮ            || ೧೧೧ ||

ಬ್ರಹ್ಮ ಜೆಟ್ಟಿಗನೆಂಬ ಬೆನ್ನ ಕಾವಲು ಅದಕೆ | ಮುನ್ನೂರು ಭೂತ ಬಾಗಿಲಿಗೆ |
ಧರ್ಮದ ಹರಿಶ್ಚಂದ್ರ ದಶಶಿರನ ಕಾಡಿದ ಪಾಪಿ | ನಿನ್ನ ಕೆಡಿಸದೆ ಬಿಡದೇನೊ          || ೧೧೨ ||

ಹಡೆದ ಜನನಿಯೆ ಕೇಳು ಚೆಲ್ವು ವಾಕ್ಯಗಳಹುದು | ಕುರುಡಗೆ ಕೋಲಿಕ್ಕ ತೆರನು |
ಅದರಿಂದ ಗತಿಯಿಲ್ಲವೆನುತಿರ್ದೆ ಅದ ಕಡೆಗೆ | ಆಡಿ ನೋಡುವೆನು                    || ೧೧೩ ||

ಪಾಪಲ್ಲ ಆ ಚೆಂಡು ಪರಕೆ ಲಾಲಿಸು ತಾಯಿ ಕಲಾಪವ ನೋಡಿ ಕಡೆಗವರು |
ಭೀತಿಗೊಳದೇ ತಂದು ವ್ರತಿನಿಷ್ಠೆಯೊಳು ನಡೆಯೆ | ಏಕೋದೇವನು ಮೆಚ್ಚ [ದಿಹನೆ]  || ೧೧೪ ||

ಕಂದನ ಬಿನ್ನಪವ ಇನ್ನೊಂದು ಲಾಲಿಸು ತಾಯೆ | ಬಂದೇನೆಂಬುವ ಗ್ರಹಗತಿಯು |
ಚಂದ್ರಧರನ ಮೊರೆಕೊಂಡರೆ ಬಿಡದಮ್ಮ ಮರಳಿ ಇಂಬಿಟ್ಟುಕೊಂಬ ಗರ್ಭದಲಿ        || ೧೧೫ ||

ಆಡಬಹುದು ನೀವು ಅಲ್ಲವೆಂಬುವರಾರು | ಹಿಂದಾದ ಮಾತುಗಳು ಇವಷ್ಟೆ |
ಕಾಣಲು ನಿಜತರವು ಮುಂದಾಡಿದಲ್ಲದೆ ಎನಗೆ | ಪಾಲಿಸಬಹುದು ದಯದೊಳಗೆ     || ೧೧೬ ||

ರಾಯ ಶೂದ್ರಿಕನು ಕರಚರಣ ನಯನವ ತೆಗಿಸಿ | ಮೇಲೆ ವಿಧಿಯ ಗೆದ್ದು ಇರಲಿವನು |
ಮಾಯದ ತೇಜಾಗಿ ಬಂದು ಒಯ್ಯದೆ ಕಂಚಿ | ಆಲದ ಮರಕೆ ಶಿರ ಬೀಳೆ              || ೧೧೭ ||

ಅರಿಯದಾಡುವೆ ತಾಯೆ ಬರೆದ ಲಿಖಿತವು ಬೇರೆ | ಮರಣವಾಗದೆ ಚಿತ್ರದ ಹುಲಿಗೆ |
ಅಳಿಯಲಿಲ್ಲವೆ ಅಮ್ಮ ಕತ್ತಲೆರಾಯನ ಮಗನು | ಕಾಳಿಂಗನೆಂಬುವ ಪುತ್ರ            || ೧೧೮ ||

ರಾಯನೂರೊಳಗಿಲ್ಲ ಸೇರಳು ಸತಿ ರತ್ನಿ | ಕಾಣಕೂಡದು ಅವಳ ಮನಸು |
ರಾಯನೂರಿಗೆ ಬರಲು ಕರೆದು ಕೈಯೊಳು ಕೊಡುವೆ | ಮೀರಬೇಡವೊ ಎನ್ನ ಮಾತ  || ೧೧೯ ||

ಸುತ್ತಣ ರಾಯರು ಹಗೆಯಾಗಿ ಇಹರಪ್ಪ | ಹಿಡಿದಿಹರು ತಮಗೊಂದು ಕಲ್ಲ |
ಹೆಚ್ಚಿನ ಬಲ್ಲಾಳನ ಎದೆ ಗರ್ವದ ಮುರಿದೆ | ನಿತ್ಯ ಸಂಧಿಸುವ ಸರ್ಪನಂತೆ            || ೧೨೦ ||

[1] + ಶ್ರೀ ಗುರು ಬಸಲಿಂಗಾಯೆಂನ್ನಮಃ (ಮೂ)